ಸಿನಿಮಾ ಮಾಧ್ಯಮವನ್ನು ಸಶಕ್ತವಾಗಿ ದುಡಿಸಿಕೊಳ್ಳುವವರು ದೃಶ್ಯ ಬಿಂಬಗಳ ಜೊತೆಗೇ, ಶಾಬ್ದಿಕ ರೂಪದ ಬಿಂಬಗಳನ್ನೂ ಸೃಷ್ಟಿಮಾಡುತ್ತಿರುತ್ತಾರೆ. ಸಂಕಲನ ತಂತ್ರದ ಮೂಲಕವೂ ಬಿಂಬವನ್ನು ಸಂಶ್ಲೇಷಿಸುತ್ತಿರುತ್ತಾರೆ. ವಾಸ್ತು, ವೇಷಭೂಷ, ಸೂಕ್ತ ನಟ ನಟಿಯರ ಬಳಕೆ, ಇತ್ಯಾದಿ ಅಂಶಗಳು ಪರಿಣಾಮಕಾರಿಯಾದ ಬಿಂಬ ನಿರ್ಮಾಣಕ್ಕೆ ಎಷ್ಟು ಅಗತ್ಯವೋ ಸಮಯದ ನಿರ್ವಹಣೆಯಲ್ಲಿ ಕೈಗೋಲಾಗಿ ಬರುವ ಸಂಗೀತ, ಚಿತ್ರದ ಲಯ, ತಂತ್ರ ಸೌಷ್ಠವಗಳೂ ಬಿಂಬ ನಿರ್ಮಾಣದಲ್ಲಿ ಅಷ್ಟೇ ಮುಖ್ಯ ಪಾತ್ರ ವಹಿಸುತ್ತಿರುತ್ತವೆ.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ನಾಳೆ ಬಿಡುಗಡೆಯಾಗಲಿದ್ದು, ಈ ಕೃತಿಗೆ ಅವರು ಬರೆದ ಮಾತುಗಳು ಹಾಗೂ ಘಟಶ್ರಾದ್ಧ ಚಲನಚಿತ್ರದ ಕುರಿತ ಮಾತುಕತೆಯ ಆಯ್ದ ಭಾಗ ನಿಮ್ಮ ಓದಿಗೆ
ಸಿನಿಮಾ ಎನ್ನುವುದು ಬಿಂಬಗಳ ಭಾಷೆ ಎನ್ನುವುದು ಸರ್ವ ವೇದ್ಯ. ನಾವು ನೋಡಿದ ಸಿನಿಮಾ ಅನುಭವವಾಗಿ ತಲುಪಿ ನಂತರ ಅರ್ಥವಾಗಿ ದಕ್ಕುವಲ್ಲಿ ಬಿಂಬಗಳು ನಿರ್ವಹಿಸುವ ಪಾತ್ರ ಮಹತ್ವದ್ದು. ಕೆಲವು ಸಿನಿಮಾ ವ್ಯಾಖ್ಯಾನಕಾರರು ಹಾಗೂ ಕೃತಿಕಾರರು ಪರಿಭಾವಿಸುವಂತೆ ಬಿಂಬ ಮೂಡುವುದು ತೆರೆಯ ಮೇಲಲ್ಲ, ನೋಡುಗರ ಮನದ ಪಟಲದ ಮೇಲೆ ಎಂಬ ಆ್ಯಂಡ್ಯೂ ಟ್ರ್ಯೂಡರ್‌ನ ಮಾತು ಎಷ್ಟು ಸಮಂಜಸ. ತೆರೆಯ ಮೇಲೆ ಕಾಣಿಸುವುದು ದೃಶ್ಯ ಬಿಂಬಗಳು. ಸಿನಿಮಾ ಮಾಧ್ಯಮವನ್ನು ಸಶಕ್ತವಾಗಿ ದುಡಿಸಿಕೊಳ್ಳುವವರು ದೃಶ್ಯ ಬಿಂಬಗಳ ಜೊತೆಗೇ, ಶಾಬ್ದಿಕ ರೂಪದ ಬಿಂಬಗಳನ್ನೂ ಸೃಷ್ಟಿಮಾಡುತ್ತಿರುತ್ತಾರೆ. ಸಂಕಲನ ತಂತ್ರದ ಮೂಲಕವೂ ಬಿಂಬವನ್ನು ಸಂಶ್ಲೇಷಿಸುತ್ತಿರುತ್ತಾರೆ. ವಾಸ್ತು, ವೇಷಭೂಷ, ಸೂಕ್ತ ನಟ ನಟಿಯರ ಬಳಕೆ, ಇತ್ಯಾದಿ ಅಂಶಗಳು ಪರಿಣಾಮಕಾರಿಯಾದ ಬಿಂಬ ನಿರ್ಮಾಣಕ್ಕೆ ಎಷ್ಟು ಅಗತ್ಯವೋ ಸಮಯದ ನಿರ್ವಹಣೆಯಲ್ಲಿ ಕೈಗೋಲಾಗಿ ಬರುವ ಸಂಗೀತ, ಚಿತ್ರದ ಲಯ, ತಂತ್ರ ಸೌಷ್ಠವಗಳೂ ಬಿಂಬ ನಿರ್ಮಾಣದಲ್ಲಿ ಅಷ್ಟೇ ಮುಖ್ಯ ಪಾತ್ರ ವಹಿಸುತ್ತಿರುತ್ತವೆ. ಮೊದಲನೆಯ ಅಂಶಗಳು ಮೂರ್ತವಾಗಿ ತೆರೆಯ ಮೇಲಿನ ಪರಿಸರ ಕಟ್ಟಿಕೊಡುತ್ತಿದ್ದರೆ ಎರಡನೆಯ ಅಂಶಗಳು ಅಮೂರ್ತವಾಗಿ ಅದೇ ಕೆಲಸ ಮಾಡುತ್ತಿರುತ್ತವೆ. ಅವು ಕಟ್ಟಿ ಕೊಡುವ ಅನುಭವವು ಆನಂತರ ಸಹೃದಯರ ಮನದಾಳಕ್ಕಿಳಿದು ಅರ್ಥವಾಗಿ ಮೂಡಿ ಸಿನಿಮಾದ ರಾಜಕೀಯ, ಸೈದ್ಧಾಂತಿಕ, ತಾತ್ವಿಕ ನೆಲೆಗಟ್ಟುಗಳನ್ನು ಸಬಲಗೊಳಿಸುತ್ತವೆ. ಕಥಾನಕವನ್ನು ನಿರಚನ ಮಾಡುವುದರ ಮೂಲಕ ಸಿನಿಮಾದ ದರ್ಶನವನ್ನು ಗ್ರಹಿಸುವುದು ಒಂದು ಪರಿಯಾದರೆ, ಕತೆಯನ್ನು ಕಟ್ಟಲು ಬಳಸುವ ಬಿಂಬಗಳ ನಿರಚನೆ ಮಾಡಿ ಆ ಮೂಲಕ ಸಿನಿಮಾ ಕಟ್ಟುವ ಕತೆಯ ಒಳಹೊರಗನ್ನೆಲ್ಲಾ ವಿಶ್ಲೇಷಿಸಿ, ಅದರ ದರ್ಶನವನ್ನು ಗ್ರಹಿಸುವುದು ಇನ್ನೊಂದು ಪರಿ. ಗುರಿ ಒಂದೇ ಆದರೂ ಮಾರ್ಗ ಭಿನ್ನ.
2013ರಲ್ಲಿ ಫಿಲ್ಮ್ ಡಿವಿಷನ್‌ನವರು ಭಾರತದ ಮುಖ್ಯ ನಿರ್ದೇಶಕರೊಲ್ಲೊಬ್ಬರಾದ ಅಡೂರ್ ಗೋಪಾಲಕೃಷ್ಣನ್ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡಲು ಉದ್ದೇಶಿಸಿ ಅಡೂರ್ ಅವರನ್ನು ಸಂಪರ್ಕಿಸಿದಾಗ, ಅಡೂರ್ ಅವರು ನನಗೆ ಫೋನ್ ಮಾಡಿ `ನೀನು ನಿರ್ದೇಶಿಸುತ್ತೀಯಾದರೆ ನಾನು ಒಪ್ಪಿಗೆ ಕೊಡುತ್ತೇನೆ’ ಎಂದರು. ಸಾಕ್ಷ್ಯ ಚಿತ್ರಗಳು ನನ್ನ ಕ್ಷೇತ್ರವಲ್ಲದಿದ್ದರೂ ಸಂತೋಷದಿಂದ ಒಪ್ಪಿಕೊಂಡೆ. ಆ ವೇಳೆಗೆ ಅಡೂರ್ ಅವರ ಜೀವನಯಾನದ ಬಗ್ಗೆ, ಅವರ ಚಿತ್ರಗಳ ಬಗ್ಗೆ, ಅವರ ಸಂದರ್ಶನಗಳನ್ನು ಆಧರಿಸಿ ಹತ್ತಾರು ಸಾಕ್ಷ್ಯಚಿತ್ರಗಳು ತಯಾರಾಗಿದ್ದವು. ಆ ಅಂಶಗಳು ಪುನರಾವರ್ತನೆಯಾಗದಂತೆ ಭಿನ್ನವಾದ ನಿರೂಪಣೆಗಾಗಿ ಯೋಚಿಸುತ್ತಿದ್ದಾಗ, ಅವರ ನುಡಿಗಟ್ಟುಗಳ ಮೀಮಾಂಸೆ ಮತ್ತು ಅವು ವ್ಯಕ್ತಪಡಿಸುವ ರಾಜಕೀಯ ಪ್ರಜ್ಞೆ ಕುರಿತು ಸಿನಿಮಾ ಮಾಡಿದರೆ ಹೇಗಿರಬಹುದು ಎನ್ನಿಸಿತು. ಏಕೆಂದರೆ ಭಾರತೀಯ ಸಿನಿಮಾ ನಿರ್ದೇಶಕರ ಪೈಕಿ ಸಿನಿಮಾ ಶೈಲಿಯ ಬಗ್ಗೆ ಅಪರಿಮಿತ ಹಿಡಿತವಿರುವ ಕೈ ಬೆರಳೆಣಿಕೆಯ ನಿರ್ದೇಶಕರುಗಳಲ್ಲಿ ಅವರು ಮುಖ್ಯರು. ಅವರ ಚಿತ್ರಗಳಲ್ಲಿ ತಂತ್ರ ಹಾಗೂ ನುಡಿಗಟ್ಟುಗಳೂ ಅವರ ದರ್ಶನದ ಭಾಗವಾಗಿರುತ್ತವೆ. ಆ ಬಿಂಬಗಳನ್ನು ವ್ಯಾಖ್ಯಾನಿಸುವ ಸಾಕ್ಷ್ಯ ಚಿತ್ರವೇ `ಇಮೇಜಸ್ ಅ್ಯಂಡ್ ರಿಫ್ಲೆಕ್ಷನ್ಸ್.’ ಬಿಂಬ ಅವರದು, ಪ್ರತಿಸ್ಪಂದನೆ ನನ್ನದು. ಆ ಚಿತ್ರಕ್ಕೆ ವಸ್ತು ವಿಷಯಗಳ ಸಂಶೋಧನೆಗೆ ನೆರವಾದವರು ಕನ್ನಡದ ಖ್ಯಾತ ಸಾಹಿತಿ ಹಾಗೂ ನನ್ನ `ಕನಸೆಂಬೋ ಕುದುರೆಯನೇರಿ’ ಚಿತ್ರದ ಸಹಚಿತ್ರ ಕಥಾ ಲೇಖಕರಾಗಿ ರಾಷ್ಟç ಪ್ರಶಸ್ತಿಯ ಮನ್ನಣೆಯನ್ನೂ ಪಡೆದ ಸಾಹಿತಿ ಗೋಪಾಲಕೃಷ್ಣ ಪೈ. ಕೇವಲ ಕತೆಯನ್ನು, ವ್ಯಕ್ತ ಮೇಲ್ಪದರವನ್ನು ಅವಲಂಬಿಸದೆ ಕೃತಿಯ ಸಂವಿಧಾನದ ಮೂಲಕ ಕರ್ತೃವಿನ ಮಿಡಿತಗಳನ್ನು, ವಿಶ್ವದೃಷ್ಟಿಯನ್ನು ಗ್ರಹಿಸುವ ಈ ಕ್ರಮ ಅವರಿಗೂ ಇಷ್ಟವಾಯಿತು. ಇದು ಜಾಗತಿಕ ಸಿನಿಮಾ ವಿಶ್ಲೇಷಣೆಯಲ್ಲಿ ಅನುಸರಿಸುವ ಒಂದು ಕ್ರಮ.
ನಾನು ಪುಣೆಯ ಫಿಲ್ಮ್ ಮತ್ತು ಟಿವಿ ಸಂಸ್ಥೆಯಲ್ಲಿ ಓದುತ್ತಿರುವಾಗ ಅಲ್ಲಿನ ಗ್ರಂಥಾಲಯದಲ್ಲಿ ಸಿನಿಮಾ ಕುರಿತ ಸಾವಿರಾರು ಪುಸ್ತಕಗಳಿದ್ದವು. ಸಂಸ್ಥೆಯ ಪಕ್ಕದಲ್ಲೇ ಇದ್ದ ರಾಷ್ಟ್ರೀಯ ಚಲನಚಿತ್ರ ಭಂಡಾರದಲ್ಲಿ(National Film Archieves ) ಯೂ ಸಾವಿರಾರು ಪುಸ್ತಕಗಳಿದ್ದವು. ಆ ಗ್ರಂಥಾಲಯಗಳಲ್ಲಿ ನನ್ನನ್ನು ಬಹುವಾಗಿ ಆಕರ್ಷಿಸಿದ್ದು Film makers on Film making, Directors on Directing ಎಂಬಿತ್ಯಾದಿ ಸಿನಿಮಾ ಸಾಹಿತ್ಯದ ಸರಣಿಗಳು. ಈ ಸರಣಿಗಳಲ್ಲಿ ಚಿತ್ರ ಜಗತ್ತಿನ ಅನೇಕ ಮುಖ್ಯ ನಿರ್ದೇಶಕರು ತಮ್ಮ ಸಿನಿಮಾಗಳಲ್ಲಿ ಬಳಸಿದ ಬಿಂಬಗಳ ತಾತ್ವಿಕ ಮತ್ತು ತಾಂತ್ರಿಕ ಸ್ವರೂಪಗಳನ್ನು ನಿರಚನೆ ಮಾಡುತ್ತಾರೆ. ಅವು ನಿರ್ದೇಶಕರ ಉದ್ದೇಶ ಮತ್ತು ಪರಿಪ್ರೇಕ್ಷ್ಯವನ್ನು ಪರಿಚಯಿಸುತ್ತವೆ. ಆದರೆ ಚಿತ್ರಗಳಲ್ಲಿ ಅವು ಯಶಸ್ವಿಯಾಗಿ ಬಳಕೆ ಆಗಿದೆಯೋ ಅಥವಾ ಅಯಶಸ್ವಿಯೋ ಎಂದು ಮೌಲ್ಯ ನಿರ್ಣಯವನ್ನು ಸ್ವತಃ ಆ ನಿರ್ದೇಶಕರುಗಳು ಮಾಡುವ ಗೋಜಿಗೆ ಹೋಗುವುದಿಲ್ಲ. ಅದನ್ನು ಓದುಗರ ವಿವೇಚನೆಗೆ ಬಿಡುತ್ತಾರೆ. ಇಷ್ಟೇ ಪ್ರಭಾವ ಬೀರಿದ ಇನ್ನೊಂದು ಮಾದರಿಯ ಪುಸ್ತಕಗಳೆಂದರೆ ಸಿನಿಮಾ ಲೋಕದ ಖ್ಯಾತ ವಿಮರ್ಶಕರು ಮತ್ತು ಮೀಮಾಂಸಕಾರರು ಸಿನಿಮಾ ಕೃತಿಗಳನ್ನು ನಿರಚನೆ ಮಾಡಿ, ಅವುಗಳಲ್ಲಿ ಅರ್ಥ ಮತ್ತು ಅವುಗಳಲ್ಲಿ ಅಡಕವಾದ ರಾಜಕೀಯ ಒಳನೋಟಗಳನ್ನು ವಿಶ್ಲೇಷಿಸಿದ ಸಿನಿಮಾ ಸಾಹಿತ್ಯ ಸರಣಿ. ಸಿನಿಮಾ ತಂತ್ರಗಳು ಕೇವಲ ಕತೆ ಸಾದರ ಪಡಿಸುವ ಸಾಧನವಲ್ಲ, ಅವೇ ಒಂದು `ಹೇಳಿಕೆ’ ಎಂದು ತೋರಿಸಿಕೊಟ್ಟ ಈ ಪುಸ್ತಕ ಸರಣಿಗಳು ನನ್ನ ಸಿನಿಮಾ ಅಭಿರುಚಿಯನ್ನು ಬೆಳೆಸುವುದರಲ್ಲಿ ಮಹತ್ವದ ಪಾತ್ರ ವಹಿಸಿವೆ. ಯೂರೋಪ್, ಅಮೇರಿಕಾ, ಜಪಾನ್ ದೇಶದ ಚಿತ್ರಗಳನ್ನು, ಅಲ್ಲಿಯ ನಿರ್ದೇಶಕರುಗಳ ಶೈಲಿಯನ್ನು ಈ ನಿಟ್ಟಿನಲ್ಲಿ ವ್ಯಾಖ್ಯಾನಿಸುವ ಬರಹಗಳು ಸಿನಿಮಾ ಸಾಹಿತ್ಯದಲ್ಲಿ ಹೇರಳವಾಗಿ ಲಭ್ಯವಿದ್ದರೂ ಭಾರತೀಯ ಸಿನಿಮಾ ಸಾಹಿತ್ಯದಲ್ಲಿ ಅವುಗಳ ಕೊರತೆ ಇದೆ ಎಂಬ ನನ್ನ ಅನಿಸಿಕೆಯನ್ನು ಗೋಪಾಲಕೃಷ್ಣ ಪೈಗಳೊಂದಿಗೆ ಹಂಚಿಕೊಂಡಿದ್ದೆ. `ಇಮೇಜಸ್ ಅ್ಯಂಡ್ ರಿಫ್ಲೆಕ್ಷನ್ಸ್’ ಅಂತಹ ಒಂದು ಪ್ರಯತ್ನ. ಇಂತಹ ಬರಹಗಳು, ಚಿತ್ರಗಳು ಉಳಿದ ಭಾರತೀಯ ನಿರ್ದೇಶಕರ ಸಿನಿಮಾ ಕೃಷಿಯ ಬಗ್ಗೆಯೂ ಬಂದಿದ್ದರೆ ನಮ್ಮ ಸಿನಿಮಾ ವ್ಯವಸಾಯಿಗಳಿಗೆ ಅನುಕೂಲವಾಗುತ್ತಿತ್ತು ಎನ್ನುವ ನನ್ನ ಹಂಬಲಕ್ಕೆ ನೀರೆರೆದು ಬೆಳೆಸಿದ ಪೈಗಳು ಈ ಕೃತಿಯ ಹಿಂದಿನ ಪ್ರೇರಣೆಯಾಗಿದ್ದಾರೆ. ನನ್ನ ಚಿತ್ರಗಳನ್ನು ಕುರಿತ ಇಂತಹ ಪುಸ್ತಕದ ಅಗತ್ಯವಿದೆ ಎಂಬ ಯೋಚನೆಯನ್ನು ಮುಂದಿಟ್ಟವರೂ ಅವರೇ. ಅದರ ಅಗತ್ಯ ಇದೆಯೇ ಎಂದು ಸುಮಾರು 2-3 ವರ್ಷಗಳ ಕಾಲ ಅನುಮಾನಿಸಿ, ನಂತರ ಬರೆಯಲು ಕೂತೆವು. ನನ್ನೆಲ್ಲಾ ಸಿನಿಮಾಗಳನ್ನೂ ಹಲವು ಬಾರಿ ಒಟ್ಟಿಗೇ ನೋಡಿ ಅದರ ದೃಶ್ಯಸಂವಿಧಾನ ಕುರಿತು ಮತ್ತೆ ಮತ್ತೆ ಚರ್ಚಿಸಿ ಬರಹದ ರೂಪಕ್ಕೆ ಇಳಿಸಲು ಸುಮಾರು 8 ತಿಂಗಳಷ್ಟು ಕಾಲವನ್ನು ನಾವು ವ್ಯಯ ಮಾಡಬೇಕಾಯಿತು.
ದಶಕಗಳ ಹಿಂದೆ ಡಾ. ವಿಜಯಾ ಅವರು ತಾವು ಸಂಪಾದಿಸುತ್ತಿದ್ದ ‘ಸಂಕುಲ’ ಪತ್ರಿಕೆಯಲ್ಲಿ ಇಂತಹ ಪ್ರಯತ್ನಕ್ಕೆ ನಾಂದಿ ಹಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಕಾರ್ಯೋನ್ಮುಖರಾಗಿದ್ದ ಕೆಲವು ಮುಖ್ಯ ಸಿನಿಮಾ ಛಾಯಾಗ್ರಾಹಕರನ್ನು ಸಂದರ್ಶಿಸಿ ಅವರ ತಂತ್ರಗಾರಿಕೆಯ ಹಿಂದಿನ ತಾತ್ವಿಕ ನಿಲುವನ್ನು ಅರಿಯುವ ಪ್ರಯತ್ನ ಅದಾಗಿತ್ತು. ಛಾಯಾಗ್ರಾಹಕ ರಾಮಚಂದ್ರ ಐತಾಳ್ ಹಾಗೂ ನಾನು ಆ ಪ್ರಯತ್ನಕ್ಕೆ ಕೈ ಜೋಡಿಸಿದ್ದೆವು. ಇದೇ ರೀತಿಯ ಪ್ರಯತ್ನ ಉಳಿದ ತಂತ್ರಜ್ಞರ ಬಗ್ಗೆಯೂ ಮಾಡುವ ಆಲೋಚನೆ ಅವರಿಗಿತ್ತು. ಹಾಗಾಗಿದ್ದಲ್ಲಿ ಸಿನಿಮಾದ ತಂತ್ರಗಾರಿಕೆಯನ್ನು ದರ್ಶನದ ಭಾಗವಾಗಿ ನೋಡುವ ಒಂದು ಪರಂಪರೆ ಕನ್ನಡ ಸಿನಿ ಪತ್ರಿಕೋದ್ಯಮದಲ್ಲಿ ಬೆಳೆಯುತ್ತಿತ್ತೇನೋ! ಆ ಪತ್ರಿಕೆ ನಿಂತು ಹೋಗಿದ್ದರಿಂದ ಅವರ ಆ ಪ್ರಯತ್ನಕ್ಕೆ ಕಡಿವಾಣ ಬಿತ್ತು.
ಕನ್ನಡದಲ್ಲಿ ಸಿನಿಮಾ ವ್ಯವಸಾಯಿಗಳ ಬಗ್ಗೆ ಅನೇಕ ಪುಸ್ತಕಗಳು ಬಂದಿದ್ದರೂ, ಸಿನಿಮಾ ಕಲೆಯ ಬಗ್ಗೆ, ಅದು ಕಟ್ಟಿಕೊಡುವ ಸಾಮಾಜಿಕ, ಸಾಂಸ್ಕೃತಿಕ ಒಳನೋಟಗಳ ಬಗ್ಗೆ ಬಂದ ಪುಸ್ತಕಗಳು ವಿರಳ. ಅದರಲ್ಲೂ ಸಿನಿಮಾ ವ್ಯಾಕರಣದ ಹಿಂದಿರುವ ತಾತ್ವಿಕತೆಯ ಬಗ್ಗೆ ಬಂದ ಪುಸ್ತಕಗಳು ಬೆರಳೆಣಿಕೆಯಷ್ಟು. ಈ ಕಾರಣದಿಂದ ಕನ್ನಡದಲ್ಲಿ ಸಿನಿಮಾ ಪಾರಿಭಾಷಿಕ ಶಬ್ದಕೋಶ ರೂಪುಗೊಂಡಿಲ್ಲ. ಈ ಪುಸ್ತಕ ಬರೆಯುವಾಗ ನಾವು ಎದುರಿಸಿದ ಮುಖ್ಯ ಸಮಸ್ಯೆ ಅದು. ಹಾಗಾಗಿ ಕೆಲವು ಶಬ್ದಗಳನ್ನು ನಾವೇ ಟಂಕಿಸಿದ್ದೇವೆ. ಉದಾಹರಣೆಗೆ ಬಿಂಬ ಸಂಶ್ಲೇಷಣೆ, ಚಿತ್ರ ಸಂವಿಧಾನ, ಕನಿಷ್ಠತಾ ಶೈಲಿ, ತಂತ್ರ ಸೌಷ್ಠವ. ಅಂತಹ ಶಬ್ದಗಳನ್ನು ಟಂಕಿಸಬೇಕಾದಾಗಲೆಲ್ಲಾ ಯಾವ ಅರ್ಥದಲ್ಲಿ ಅವನ್ನು ಬಳಸುತ್ತಿದ್ದೇವೆ ಎಂಬುದನ್ನೂ ಆಯಾ ಲೇಖನಗಳಲ್ಲೇ ವಿವರಿಸಿದ್ದೇವೆ. ಇಲ್ಲಿ ನಾವು ಬಳಸಿದ ಒಂದು ಶಬ್ದದ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿದೆ. ಅದೇ ರಾಜಕೀಯತೆ. ರಾಜಕೀಯ ಎನ್ನುವುದು ಸೂಕ್ತವಾದ ಶಬ್ದವಾದರೂ ಇವತ್ತು ಆ ಶಬ್ದವನ್ನು ಬಲ ಪಂಥೀಯ, ಎಡಪಂಥೀಯ ಎನ್ನುವ ಸೀಮಿತ ಅರ್ಥದಲ್ಲೇ ಸ್ವೀಕರಿಸುವ ಅಪಾಯ ಉಂಟಾಗಿದೆ. ಆದರೆ ಸೈದ್ಧಾಂತಿಕ ರಾಜಕಾರಣದ ಆಚೆಗಿರುವ ಕ್ರಿಯೆಗಳಲ್ಲೂ ಹಲವು ರೀತಿಯ ಶಕ್ತಿ ರಾಜಕಾರಣದ ಸ್ವರೂಪ ವ್ಯಕ್ತವಾಗುತ್ತಿರುತ್ತದೆ. ನಮ್ಮ ಪ್ರತಿಯೊಂದು ಕ್ರಿಯೆಯಲ್ಲೂ-ಅದು ಕೂರುವ ಕ್ರಿಯೆ, ಕಾಫಿ ಕುಡಿಯುವ ಕ್ರಿಯೆ ಇತ್ಯಾದಿ ಸಹಜ ಎಂದು ಭಾವಿಸುವ ಕ್ರಿಯೆಗಳಲ್ಲೂ ಒಂದು ರಾಜಕೀಯ ಹೇಳಿಕೆ ಇರುತ್ತದೆ. ಅದರಲ್ಲೂ ಬಿಂಬಗಳೇ ಪ್ರಧಾನ ಪಾತ್ರವಹಿಸುವ ಸಿನಿಮಾದಲ್ಲಿ ಆ ಅಂಶಗಳು ಮುಖ್ಯವಾಗುತ್ತವೆ. ಕಾಫಿ ಕುಡಿಯುವಂತಹ ಸರ್ವೇ ಸಾಧಾರಣವಾದ ಕ್ರಿಯೆಯನ್ನು ತೋರಿಸುವಾಗ, ಬಳಸುವ ಲೋಟ, ಕುಡಿಯುವ ಕ್ರಮ ಎಲ್ಲವೂ ಸಮುದಾಯದಲ್ಲಿ ಅಂತರ್ಗತವಾಗಿ ಇರುವ ತರತಮ ಸಂಬಂಧವನ್ನು ಸೂಚಿಸುತ್ತಿರುತ್ತದೆ. ಹಾಗಾಗಿ ಆ ಕ್ರಿಯೆಗಳ ಹಿಂದಿನ ರಾಜಕೀಯ ಗುಣ ಒಂದು ಉಪ ಪಠ್ಯವನ್ನು ಹೇಳುತ್ತಿರುತ್ತವೆ. ಇದನ್ನು ಸೂಚಿಸಲು ಒಂದು ಸೂಕ್ತ ಪದ ಬೇಕಿತ್ತು. ಹಾಗಾಗಿ ರಾಜಕೀಯ ಎನ್ನುವ ಬದಲು ರಾಜಕೀಯತೆ ಎಂದೇ ಬಳಸಿದ್ದೇವೆ.
ಇಲ್ಲಿಯ ಲೇಖನಗಳಲ್ಲಿ ಕೆಲವು ಕಲಾಕಾರರನ್ನು, ಕೆಲವು ಶೈಲಿಗಳನ್ನು ಕುರಿತೂ ಉಲ್ಲೇಖಿಸಿದ್ದೇವೆ. ಅವನ್ನು ಪುಸ್ತಕದಲ್ಲಿ ವಿವರಿಸುವ ಉದ್ಧಟತನ ತೋರಿಸಿಲ್ಲ. ಇವತ್ತಿನ ಮಾಹಿತಿ ಸ್ಫೋಟದ ಕಾಲದಲ್ಲಿ ಅಂತಹ ಮಾಹಿತಿ ಬೇಕಾದಾಗ ಓದುಗರು ಗೂಗಲ್, ವಿಕಿಪೀಡಿಯಾ ಮೊದಲಾದ ಸಾಮಾಜಿಕ ಜಾಲತಾಣಗಳ ನೆರವು ಪಡೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಅಂಶವೇ. ಹಾಗಾಗಿ ನಮ್ಮ ಚಿತ್ರ ಚರ್ಚೆಗೆ ಅಗತ್ಯವಿರುವ ಅಂಶಗಳಿಗೆ ಮಾತ್ರ ನಮ್ಮನ್ನು ಸೀಮಿತಗೊಳಿಸಿಕೊಂಡಿದ್ದೇವೆ.
ಈ ಪುಸ್ತಕವನ್ನು ನನ್ನ ಚಿತ್ರಯಾನದಲ್ಲಿ ಮಹತ್ತರ ಪ್ರಭಾವ ಬೀರಿದ ಮೂವರಿಗೆ ಅರ್ಪಿಸಿದ್ದೇನೆ. ಪ್ರೊ.ಸತೀಶ್ ಬಹಾದೂರ್ ಅವರು ಸಿನಿಮಾದ ಸಂವಿಧಾನದ ಬಗ್ಗೆ, ನೀರದ್ ಮಹಾಪಾತ್ರ ಅವರು ಸಿನಿಮಾ ನೀಡುವ ದರ್ಶನದ ಬಗ್ಗೆ, ಎಸ್.ರಾಮಚಂದ್ರ ಐತಾಳರು ಸಿನಿಮಾ ಕೃತಿಗಳಲ್ಲಿ ರಸೋತ್ಪತ್ತಿ ಆಗುವ ಕ್ರಮದ ಬಗ್ಗೆ ನನ್ನ ಅರಿವನ್ನು ಹೆಚ್ಚಿಸುವಲ್ಲಿ ಗಮನೀಯ ಪಾತ್ರ ವಹಿಸಿದ್ದಾರೆ.
ಪ್ರೊ.ಸತೀಶ್ ಬಹಾದೂರ್ ಅವರು ಪುಣೆಯ ಫಿಲ್ಮ್ಇನ್‌ಸ್ಟಿಟ್ಯೂಟ್‌ನಲ್ಲಿ ನನಗೆ ಅಧ್ಯಾಪಕರಾಗಿದ್ದರು. ಅವರು ಕಲಿಸುತ್ತಿದ್ದ ವಿಷಯಕ್ಕೆ Film Appreciation ಎಂದು ಕರೆಯಲಾಗುತ್ತಿತ್ತಾದರೂ ಅದನ್ನು Film Analysis ಎಂದು ಕರೆಯುವುದೇ ಸೂಕ್ತವಾಗಿತ್ತು. ಜಾಗತಿಕ ಹಾಗೂ ಭಾರತೀಯ ಚಿತ್ರಗಳಲ್ಲಿ ಶ್ರೇಷ್ಠವಾದವುಗಳನ್ನು ಆಯ್ದು ಅವುಗಳ ಸಂರಚನೆಯನ್ನು ಬಿಡಿಸಿಟ್ಟು, ಅನುಭವ ಹೇಗೆ ದಟ್ಟೈಸುತ್ತದೆ ಎಂದು ತಿಳಿಸಿ ಹೇಳುತ್ತಿದ್ದರವರು. ಜಪಾನ್ ದೇಶದ ಅಕಿರಾ ಕುರೋಸಾವಾನ `ರಾಶೋಮನ್’ ಚಿತ್ರದ ರಾಶೋಮನ್ ಗೇಟ್ ದೃಶ್ಯಗಳಲ್ಲಿ ತ್ರಿಕೋನ ಸಂಯೋಜನೆ ಹಾಗೂ ಮರ ಕಡಿಯುವವನ ನಿವೇದನೆಯಲ್ಲಿ ಚಲನೆ-ಇವೇ ಮುಖ್ಯಧಾತುವಾಗಿ ಅನುಭವವನ್ನು ಹರಳುಗಟ್ಟಿಸುತ್ತದೆ ಎನ್ನುವುದನ್ನು ಸೋದಾಹರಣವಾಗಿ ಮೂರು ತಿಂಗಳ ಕಾಲ ಶಾಟ್ ಬೈ ಶಾಟ್ ವಿಶ್ಲೇಷಿಸಿ ನಮಗೆ ಪರಿಚಯಿಸಿದವರು ಅವರು. ತಂತ್ರವೂ ಅಭಿವ್ಯಕ್ತಿಯ ಮುಖ್ಯ ಸಾಧನ ಎಂದು ನನಗೆ ಸ್ಪಷ್ಟವಾಗಿದ್ದು ಅಂತಹ ವಿಶ್ಲೇಷಣೆಗಳ ಮೂಲಕ. ಕಥಾವಸ್ತುವನ್ನು ವಿಶ್ಲೇಷಿಸುವವರು ಹಲವಾರು ಜನ ನಮಗೆ ಸಿಗುತ್ತಾರೆ. ಆದರೆ ಈ ರೀತಿಯಲ್ಲಿ ಸಿನಿಮಾದ ನುಡಿಗಟ್ಟುಗಳನ್ನು ವಿಶ್ಲೇಷಿಸುವವರು ಅಪರೂಪ. ಸಿನಿಮಾ ಮಾಧ್ಯಮದಲ್ಲಿ ಕೆಲಸ ಮಾಡುವವರಿಗಂತೂ ಅವರು ರೂಪಿಸಿದ ಈ ಅಧ್ಯಾಪನದ ಮಾದರಿ ಬಹಳ ಉಪಯುಕ್ತ.
1984ರಲ್ಲಿ `ಮಾಯಾ ಮಿರಿಗ’ ಎನ್ನುವ ಒರಿಯಾ ಸಿನಿಮಾದ ಮೂಲಕ ಸಿನಿಮಾ ಜಗತ್ತಿನ ಗಮನ ಸೆಳೆದ ನಿರ್ದೇಶಕ ನೀರದ ಮಹಾಪಾತ್ರಾ ಅವರು ನಮಗೆ ಸಿನಿಮಾ ಮೀಮಾಂಸೆಯ ಪಾಠ ಮಾಡುತ್ತಿದ್ದವರು. ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲೇ ತರಬೇತು ಪಡೆದು, ನಂತರ ಅಲ್ಲೇ ಅತಿಥಿ ಉಪನ್ಯಾಸಕರಾಗಿ ಸೇರಿಕೊಂಡ ಅವರು ಕಲಿಸಿದ ಸಿನಿಮಾ ಥಿಯರಿಗಳು ನಮಗಿದ್ದ ಸಿನಿಮಾದ ಕಲ್ಪನೆಗೆ ತಾತ್ವಿಕ ನೆಲೆಗಟ್ಟನ್ನು ಕಟ್ಟಿಕೊಟ್ಟವು. ಸಿನಿಮಾ ಕುರಿತ ಅವರ ಆಳವಾದ ಜ್ಞಾನ ಎಲ್ಲರ ಮೆಚ್ಚಿಗೆ ಗಳಿಸಿತ್ತು. ವಿಷಯ ಯಾವುದೇ ಇರಲಿ, ಅದರ ಪೂರ್ವಾಪರವನ್ನು ತಿಳಿಸಿ ವಿಷಯವನ್ನು Holistic ಆಗಿ ನೋಡಲು ಹಚ್ಚುತ್ತಿದ್ದ ಅವರ ಬೋಧನಕ್ರಮ ನನ್ನ ಅರಿವನ್ನು ವಿಸ್ತಾರಗೊಳಿಸಿದ್ದನ್ನು ಅಲ್ಲಗಳೆಯುವಂತಿಲ್ಲ. ಇಂಥ ಉತ್ತಮ ಅಧ್ಯಾಪಕನ ಹುದ್ದೆಯನ್ನು ಖಾಯಂಗೊಳಿಸದ ಇನ್‌ಸ್ಟಿಟ್ಯೂಟ್‌ನ ಆಡಳಿತ ಮಂಡಳಿ ದೊಡ್ಡ ತಪ್ಪು ಮಾಡಿತು ಎಂದೇ ನನ್ನ ಭಾವನೆ. ನಂತರದ ವರ್ಷಗಳಲ್ಲಿ ಆ ಸಂಸ್ಥೆಯಲ್ಲಿ ಓದಲು ಬಂದ ವಿದ್ಯಾರ್ಥಿಗಳು ಮಹಾಪಾತ್ರ ಅವರ ಜ್ಞಾನದ ಉಪಯೋಗ ಪಡೆಯುವ ಅವಕಾಶದಿಂದ ವಂಚಿತರಾದರು ಎಂದೇ ನನ್ನ ಭಾವನೆ. ಈ ಇಬ್ಬರು ಅಧ್ಯಾಪಕರಿಗೆ ನಾನು ಮೆಚ್ಚಿನ ಶಿಷ್ಯನೂ ಆಗಿದ್ದೆ. ನನ್ನ ಸಿನಿಮಾ ಅಭಿರುಚಿಯನ್ನು ಬೆಳೆಸುವಲ್ಲಿ ಅವರ ಮಾರ್ಗದರ್ಶನ ಇದೆ.
ಎಸ್.ರಾಮಚಂದ್ರ ಐತಾಳ್ ನನ್ನ 8 ಕಥಾ ಚಿತ್ರ ಹಾಗೂ ಕೆಲವು ಸಾಕ್ಷ್ಯಚಿತ್ರಗಳ ಛಾಯಾಗ್ರಾಹಕರು. ದೃಶ್ಯಸೌಂದರ್ಯ, ಸೌಷ್ಠವಕ್ಕಿಂತ ಸತ್ಯಕ್ಕೇ ಹೆಚ್ಚು ಮಹತ್ವ ಕೊಡುತ್ತಿದ್ದ ಅವರ ವಿಷುಯಲ್ ಫಿಲಾಸಫಿಯನ್ನು ನಾನು ಬಹಳವಾಗಿ ಮೆಚ್ಚುತ್ತಿದ್ದೆ. ಅವರು ಸೆರೆ ಹಿಡಿಯುತ್ತಿದ್ದ ಯಾವುದೇ ಅಲಂಕಾರವಿಲ್ಲದ ನಿರಾಭರಣ ಬಿಂಬಗಳಲ್ಲಿರುತ್ತಿದ್ದ ಜೀವಂತಿಕೆ ಸ್ತುತ್ಯರ್ಹ. ಅವರ ಛಾಯಾಗ್ರಹಣವಿರುತ್ತಿದ್ದ ಚಿತ್ರಗಳು ಆತ್ಮೀಯ, ಸಂಭವನೀಯ ಎನ್ನಿಸಲು ಅವರು ಬಿಂಬಗಳಿಗೆ ತರುತ್ತಿದ್ದ ಪಾರದರ್ಶಕ ಗುಣವೂ ಕಾರಣವಾಗಿತ್ತು. ಸಿನಿಮಾ ತಂತ್ರಗಳನ್ನು ಮಣಿಸಿ, ಅನುಭವದ ವಾಹಕವಾಗುವಂತೆ ಮಾಡಬಲ್ಲ ವಿಶೇಷ ಗುಣ ಅವರಲ್ಲಿತ್ತು. ನಮ್ಮಿಬ್ಬರ ನಡುವಿನ ವಿಷಯಗಳ ವಿನಿಮಯ ನಮ್ಮಿಬ್ಬರ ಸಿನಿಮಾ ಕಾರ್ಯ ಕೌಶಲ್ಯವನ್ನೂ ಬೆಳೆಸಿತು.
-ಗಿರೀಶ ಕಾಸರವಳ್ಳಿ
*****
ಘಟಶ್ರಾದ್ಧ (ಆಯ್ದ ಭಾಗ)
ಪೈ: ‘ಘಟಶ್ರಾದ್ಧ’ ನಿಮ್ಮ ಮೊದಲ ಪೂರ್ಣ ಪ್ರಮಾಣದ ಕಥಾಚಿತ್ರ. ಬಿಡುಗಡೆಯಾಗಿ ನಾಲ್ಕು ದಶಕಗಳೇ ಸಂದರೂ ಇವತ್ತಿಗೂ ಸಿನಿಮಾಸಕ್ತರನ್ನು ಆಕರ್ಷಿಸುವ, ಭಾರತೀಯ ಚಲನಚಿತ್ರಗಳಲ್ಲೇ ಮುಖ್ಯವಾದ ಕ್ಲಾಸಿಕ್. ಅದರ ಬಗ್ಗೆ ನೂರಾರು ಕಡೆ ಸಂವಾದಗಳು, ಸೆಮಿನಾರ್‌ಗಳು ನಡೆದಿವೆ. ಆದರೂ ಈ ಸಂದರ್ಭದಲ್ಲಿ ನಾವು ಸಂವಾದವನ್ನು ಆರಂಭಿಸುವ ಮೊದಲು ಪೀಠಿಕೆಯಾಗಿ ಈ ಕಥೆಯನ್ನೇ ನಿಮ್ಮ ಮೊದಲ ಚಿತ್ರಕ್ಕೆ ವಸ್ತುವಾಗಿ ಆರಿಸಿಕೊಂಡಿದ್ದರ ಕಾರಣ ಹೇಳಿ.
ಗಿರೀಶ್: ಅನಂತ ಮೂರ್ತಿಯವರ ‘ಘಟಶ್ರಾದ್ಧ’ ಕತೆ ಓದಿ ಮೆಚ್ಚಿದಾಗ ನನ್ನಲ್ಲಿ ಸಾಹಿತ್ಯದ ಅಭಿರುಚಿ ಇನ್ನೂ ಆಳವಾಗಿ ಬೇರು ಬಿಟ್ಟಿರಲಿಲ್ಲ. ಆಗೆಲ್ಲಾ ಕತೆ ಕಾದಂಬರಿಗಳಿಂದ ನಾನು ನಿರೀಕ್ಷಿಸುತ್ತಿದ್ದ ಮನ ಕರಗಿಸುವ ಕಥಾಹಂದರವು ಘಟಶ್ರಾದ್ಧದಲ್ಲೂ ಇದ್ದದ್ದು ನನ್ನನ್ನು ಸೆಳೆಯಲು ಮುಖ್ಯ ಕಾರಣವಾಗಿತ್ತು. ಕೇಶ ಮುಂಡನ ಮಾಡಿಸಿಕೊಂಡು, ಕೆಂಪು ಸೀರೆ ಉಟ್ಟುಕೊಂಡಿರುತ್ತಿದ್ದ ಹೆಂಗಸರನ್ನು ನನ್ನ ಬಾಲ್ಯದಲ್ಲಿ ನಮ್ಮ ಹಾಗೂ ಸಂಬಂಧಿಕರ ಮನೆಗಳಲ್ಲಿ ನೋಡಿದ್ದೆ. ಅವರ ಕಥೆಗಳನ್ನು ಕೇಳಿ, ಅವರ ಬಗ್ಗೆ ಅನುಕಂಪ ಇಟ್ಟುಕೊಂಡಿದ್ದ ನನಗೆ ಘಟಶ್ರಾದ್ಧ ಮೆಚ್ಚಿಗೆ ಆಗಲು ಈ ರೀತಿಯ ಸಾಹಿತ್ಯೇತರ ಕಾರಣವೂ ಇತ್ತು.
ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಓದುತ್ತಿರುವಾಗ ಜಾಗತಿಕ ಸಿನಿಮಾ ಕ್ಷೇತ್ರದ ಶ್ರೇಷ್ಠ ಸಿನಿಮಾಗಳನ್ನು ಅಭ್ಯಸಿಸಬೇಕಾಗಿ ಬಂತು. ಕಥಾಹಂದರವು (plot) ಕೇವಲ ಒಂದು ಸಾಧನ, ಅದನ್ನು ಬಳಸಿಕೊಂಡು ಕರ್ತೃವು ಒಂದು ವ್ಯಾಖ್ಯೆ/ ದರ್ಶನ ನೀಡುತ್ತಿರುತ್ತಾನೆ. ಅದು ಆ ಕೃತಿಯ ರಾಜಕೀಯತೆ. ಅದನ್ನು ನಿರಚನ (de code) ಮಾಡುವುದು ಹೇಗೆ ಎಂದು ಇನ್‌ಸ್ಟಿಟ್ಯೂಟ್‌ನ ಮೇಷ್ಟ್ರುಗಳು ತಿಳಿಸಿದಾಗಲೇ, ವಿಜ್ಞಾನದ ಅದರಲ್ಲೂ ಔಷಧ ಶಾಸ್ತ್ರದ ವಿದ್ಯಾರ್ಥಿಯಾಗಿದ್ದ ನನಗೆ ಸಿನಿಮಾ, ಸಾಹಿತ್ಯ ಮೊದಲಾದವುಗಳನ್ನು ಅರ್ಥ ಮಾಡಿಕೊಳ್ಳುವ ಬಗೆ ಹೇಗೆಂಬುದು ಅರ್ಥವಾದದ್ದು. ಆ ತನಕ ‘ಘಟಶ್ರಾದ್ಧ’ ಕತೆಗೆ ಭಾವುಕವಾಗಷ್ಟೇ ಪ್ರತಿಕ್ರಿಯಿಸಿದ್ದ ನನಗೆ ಆ ನಂತರವೇ ಅದರ ಕಥಾಸಂವಿಧಾನ, ದರ್ಶನ ಶಕ್ತಿ, ಸಾಮಾಜಿಕ, ರಾಜಕೀಯ ಒಳನೋಟಗಳ ಮಹತ್ವ ಅರಿವಾದದ್ದು.
ನಾನು ಸಾಹಿತ್ಯ ಕೃತಿಯೊಂದನ್ನು ಸಿನಿಮಾಕ್ಕೆ ಅಳವಡಿಸಿಕೊಳ್ಳಲು ಆಯ್ಕೆ ಮಾಡುವಾಗ ನಿರೀಕ್ಷಿಸುವುದು ಕಥಾಹಂದರಕ್ಕೆ ಕವಲಾಗುತ್ತಾ ಬೆಳೆಯುವ ಸಾಧ್ಯತೆ ಇದೆಯೇ ಎಂದು. ಘಟಶ್ರಾದ್ಧದ ಕಥಾಹಂದರದಲ್ಲೂ ಹಲವು ಅರ್ಥಸಾಧ್ಯತೆಗಳಿರುವ ಅನೇಕ ಎಳೆಗಳನ್ನು ಕಂಡೆ. ಪ್ರಧಾನ ಪಾತ್ರಗಳಾದ ನಾಣಿ ಮತ್ತು ಯಮುನಕ್ಕ ಒಂದೇ ಸಮಸ್ಯೆಯ ಪ್ರತಿಬಿಂಬಗಳಂತಿರುವ ಎರಡು ಪಾತ್ರಗಳು. ಇಬ್ಬರೂ ಸಮಾನ ಸಂಕಟಗ್ರಸ್ತರು. ಯಮುನಕ್ಕ ಕಠೋರ ಸಂಪ್ರದಾಯಗಳ ಸಾಂಸ್ಥಿಕ ನೆಲೆಯಲ್ಲಿ ಬಂದಿಯಾಗಿದ್ದರೆ, ನಾಣಿ ವೈಯಕ್ತಿಕ ನೆಲೆಯಲ್ಲಿ ಬಂದಿಯಾಗಿದ್ದಾನೆ. ನಾಣಿ ಯಮುನಕ್ಕನಲ್ಲಿ ತಾಯಿಯನ್ನು ಕಾಣುತ್ತಾನೆ. ಯಮುನಕ್ಕ ನಾಣಿಯಲ್ಲಿ ಮಗನನ್ನು ಕಾಣುತ್ತಾಳೆ. ಕತೆಯ ಮೊದಲ ಭಾಗದಲ್ಲಿ ವೇದಾಧ್ಯಯನಕ್ಕೆ ಬಂದ ಹುಡುಗರು ನಾಣಿಯನ್ನು ಗೋಳು ಹೊಯ್ದುಕೊಳ್ಳುವಾಗ ಯಮುನಕ್ಕ ರಕ್ಷಕಳಾಗುತ್ತಾಳೆ. ಚಿತ್ರದ ದ್ವಿತೀಯಾರ್ಧದಲ್ಲಿ ಊರವರು ಜಾತಿಯಿಂದ ಯಮುನಕ್ಕನನ್ನು ಹೊರಹಾಕಿದಾಗ, ಅವಳ ಬೆಂಬಲಕ್ಕೆ ನಿಲ್ಲುವುದು ನಾಣಿ.
ಸಿನಿಮಾ ವ್ಯಾಕರಣದ ಹಿಂದಿರುವ ತಾತ್ವಿಕತೆಯ ಬಗ್ಗೆ ಬಂದ ಪುಸ್ತಕಗಳು ಬೆರಳೆಣಿಕೆಯಷ್ಟು. ಈ ಕಾರಣದಿಂದ ಕನ್ನಡದಲ್ಲಿ ಸಿನಿಮಾ ಪಾರಿಭಾಷಿಕ ಶಬ್ದಕೋಶ ರೂಪುಗೊಂಡಿಲ್ಲ. ಈ ಪುಸ್ತಕ ಬರೆಯುವಾಗ ನಾವು ಎದುರಿಸಿದ ಮುಖ್ಯ ಸಮಸ್ಯೆ ಅದು. ಹಾಗಾಗಿ ಕೆಲವು ಶಬ್ದಗಳನ್ನು ನಾವೇ ಟಂಕಿಸಿದ್ದೇವೆ. ಉದಾಹರಣೆಗೆ ಬಿಂಬ ಸಂಶ್ಲೇಷಣೆ, ಚಿತ್ರ ಸಂವಿಧಾನ, ಕನಿಷ್ಠತಾ ಶೈಲಿ, ತಂತ್ರ ಸೌಷ್ಠವ.
ಯಮುನಕ್ಕನ ಪಾತ್ರದ ಚಲನೆ ಅಧೋಮುಖಿಯಾದರೆ ಬಾಲ್ಯಾವಸ್ಥೆಯಿಂದ ಒಮ್ಮೆಲೇ ಪ್ರೌಢನಾಗುವ ನಾಣಿಯ ಪಾತ್ರದಲ್ಲಿ ಅನೈಸರ್ಗಿಕವಾದ ಊರ್ಧ್ವಮುಖಿ ಚಲನೆ. ಅನೈಸರ್ಗಿಕ ಎಂದು ಏಕೆ ಹೇಳುತ್ತಿದ್ದೇನೆಂದರೆ ಒತ್ತಡದಿಂದ ಪ್ರೌಢ ಆಗುವುದಕ್ಕೂ, ತನ್ನ ಅರಿವಿನಿಂದಲೇ ಸಹಜವಾಗಿ ಪ್ರೌಢ ಆಗುವುದಕ್ಕೂ ವ್ಯತ್ಯಾಸ ಇದೆಯಲ್ಲವೇ? ನಾಣಿಯದು ಒತ್ತಡದಿಂದ ಪ್ರೌಢನಾದ ವಿಷಾದಕರ ಬೆಳವಣಿಗೆ. ಈ ರೀತಿ ಕತೆ ಬೆಳೆಯುತ್ತಾ ಹೋದಂತೆ ದ್ವಿದಳ ವೈರುದ್ಧ್ಯದಲ್ಲಿ ಹಲವು ಕವಲುಗಳಾಗುತ್ತಾ ಸಾಗುತ್ತದೆ.
ಕತೆಯಲ್ಲಿ ಹಲವು ರೀತಿಯ ಸಂಬಂಧಗಳಿವೆ. ಪ್ರಧಾನವಾದದ್ದು ಯಮುನಕ್ಕ ಮಾಸ್ತರರ ನಡುವಿನ ಸಂಬಂಧ. ಆ ಸಮಾಜದ ದೃಷ್ಟಿಯಲ್ಲಿ ಅದೊಂದು ಅನೈತಿಕ ಸಂಬಂಧ. ಶಾಸ್ತ್ರಿ ನಾಣಿಯೊಡನೆ ಇಟ್ಟುಕೊಳ್ಳ ಬಯಸುವ ಸಂಬಂಧವೂ ಅನೈಸರ್ಗಿಕ ಸಂಬಂಧವೇ. ಉಡುಪರ ಮರುಮದುವೆಯ ಪ್ರಸ್ತಾಪವೂ ಅನೈತಿಕವೇ. ಆದರೆ ಸಮಾಜದ ಒಪ್ಪಿಗೆ ಇದೆ. ನಾಣಿ ಮತ್ತು ಕಟೀರನ ನಡುವಿರುವ ಅಸ್ಪೃಶ್ಯತೆಯಲ್ಲಿರುವ ಅಸಮಾನ ಸಂಬಂಧ. ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಸಮಾಜದ ಒಪ್ಪಿಗೆ ಇಲ್ಲ. ಯಮುನಕ್ಕ ಮತ್ತು ಗೋದಕ್ಕನ ನಡುವೆ ಇರುವುದು ಈರ್ಷ್ಯೆಯ ಸಂಬಂಧ. ಇಬ್ಬರೂ ವಿಧವೆಯರಾದರೂ ಸಮಾಜದ ಕಟ್ಟು ಕಟ್ಟಳೆಗಳನ್ನು ದಾಟಲೆತ್ನಿಸಿದ ಯಮುನಕ್ಕನ ಬಗ್ಗೆ ಗೋದಕ್ಕನಿಗೆ ಅಸೂಯೆ. ಒಂದೇ ಸ್ಥಿತಿಯ ಹಲವು ಮುಖಗಳು ಮತ್ತು ಅವುಗಳ ಮುಖಾಮುಖಿ ತರುವ ದುರಂತಗಳ ಕೊಲಾಜ್ ಈ ಕತೆಯಲ್ಲಿದೆ.
ಇಲ್ಲಿ ಕತೆ ಹೇಳುವ ಧಾವಂತ ಇಲ್ಲ. ಕತೆಯೂ ಹೊಸ ಹೊಸ ಘಟನೆಗಳನ್ನು ಹೆಣೆಯುವ ಮೂಲಕ ಬೆಳೆಯುತ್ತಿಲ್ಲ. ಬೆಳೆಯುತ್ತಿರುವುದು ಪಾತ್ರಗಳ ನಡುವಿನ ಸಂಬಂಧ. ಸಂರಚನೆಯ ದೃಷ್ಟಿಯಿಂದ ಇಲ್ಲಿ ಹೊಸತನ ಇದೆ. ಈ ಕತೆಯ ಶಿಲ್ಪ ಎಷ್ಟು ಸಿನಿಮಾತ್ಮಕವಾಗಿದೆ ಎಂದರೆ ಯಾರೇ ಅಳವಡಿಸಿದ್ದರೂ ಇದೊಂದು ಗಮನಾರ್ಹ ಸಿನಿಮಾ ಆಗಿಯೇ ಆಗುತ್ತಿತ್ತು.
*****
ಪೈ: ಚಿತ್ರದ ಸಂಗೀತ ಸಂಯೋಜನೆಯಲ್ಲಿ ಬೇರೆ ಬೇರೆ ತೆರನ ವಾದ್ಯಗಳನ್ನು ಬೇರೆ ಬೇರೆ ಕಡೆಯಲ್ಲಿ ಬಳಸಲಾಗಿದೆ. ಆಗ ಹೇಳಿದಿರಲ್ಲ, ಚಂಡೆಯನ್ನು ಬಳಸಿದ್ದಾರೆ ಎಂದು. ಇದು ಚಿತ್ರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ.
ಗಿರೀಶ್: ಈ ಚಿತ್ರದ ಸಂಗೀತ ನಿರ್ದೇಶಕರಾದ ಬಿ.ವಿ. ಕಾರಂತರಿಗೆ ಈ ಚಿತ್ರದ ಸಂಗೀತಕ್ಕೆ ತಾವು ರೂಪಿಸಿದ ವಿನ್ಯಾಸದ ಬಗ್ಗೆ ಸ್ಪಷ್ಟತೆ ಇತ್ತು. ಅದನ್ನು ಅವರು ವಿವರಿಸಿದ್ದು ಹೀಗೆ. “ಚಿತ್ರದಲ್ಲಿ ಉಡುಪರು ಋಜುತ್ವದ, ಸಂಪ್ರದಾಯದ ಪ್ರತಿರೂಪವಾಗಿದ್ದಾರೆ. ವೀಣೆಯ ನಾದಕ್ಕೆ ಅದನ್ನು ಉದ್ದೀಪಿಸುವ ಗುಣವಿರುವುದರಿಂದ ಉಡುಪರಿಗೆ ಹಿನ್ನೆಲೆಯಾಗಿ ವೀಣೆಯನ್ನು ಬಳಸುತ್ತೇನೆ. ಸಂಪ್ರದಾಯದ ಸೆರೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಯಮುನಕ್ಕಳ ಅಸಹಾಯಕತೆಗೆ ನೋಡುಗ ಸ್ಪಂದಿಸಬೇಕು. ಹಾಗಾಗಿ ಪಿಟೀಲನ್ನು ಬಳಸುತ್ತೇನೆ. ಕೊಳಲಿನ ದನಿಯು ನಾಣಿಯ ಚಿಮ್ಮುವ ಜೀವನೋತ್ಸಾಹವನ್ನು ಅನುರಣಿಸುತ್ತದೆ. ಶಾಸ್ತ್ರಿ ಮತ್ತು ಗಣೇಶರಿಗೆ ಮೋರ್ಚಿಂಗ್ ಬಳಸುತ್ತೇನೆ. ಅದು ಅವರಲ್ಲಿರುವ ಕಿಲಾಡಿತನವನ್ನು ಸಮರ್ಥವಾಗಿ ಬಿಂಬಿಸುತ್ತದೆ. ಹಾವಿಗೆ ಮುಖವೀಣೆ ಬಳಸಲು ಯೋಚಿಸಿದ್ದೇನೆ. ಯಾಕೆಂದರೆ ಅದರ ನಾದದಲ್ಲಿ ಹಾವಿನ ಲಯವಿದೆ. ಸ್ಕೂಲ್ ಮಾಸ್ಟರ್‌ಗೆ ಚಂಡೆ ಬಳಸುತ್ತೇನೆ. (ದಕ್ಷಿಣ ಕನ್ನಡದವರಾದ ಕಾರಂತರಿಗೆ ಯಕ್ಷಗಾನದಲ್ಲಿ ಪಾತ್ರದ ಪ್ರವೇಶಕ್ಕೆ ಚಂಡೆ ಬಳಸುವುದು ನೆನಪಾಗಿರಬಹುದು). ಈ ರೀತಿಯಲ್ಲಿ ಸಂಗೀತದ ವಿನ್ಯಾಸ ಮಾಡಿಕೊಂಡಿದ್ದೇನೆ. ನಿಮಗೆ ಬಳಸಿದ ಧಾಟಿ (Tune) ಇಷ್ಟವಾಗದಿದ್ದರೆ ಬದಲಿಸೋಣ. ಆದರೆ ವಾದ್ಯಗಳ ವಿನ್ಯಾಸವನ್ನು ಮಾತ್ರ ಬದಲಿಸುವುದು ಬೇಡ” ಎಂದರು. ಮಂಗಳಾರತಿಯಿಂದ ಚಿತ್ರ ಆರಂಭವಾಗುತ್ತದೆ. ಆದ್ದರಿಂದ ಚಿತ್ರದ ಶೀರ್ಷಿಕೆಯಲ್ಲಿ ಮಂಗಳಾರತಿ ಶಬ್ದವನ್ನೇ ಸಂಗೀತವಾಗಿ ಬಳಸಿದ್ದರು. ಈ ರೀತಿಯಲ್ಲಿ ಕೇವಲ ನಾದಮಾಧುರ್ಯಕ್ಕಾಗಿ, ಅದು ಮನಸ್ಸಿಗೆ ತರುವ ಮುದಕ್ಕಾಗಿ ಮಾತ್ರ ಸಂಗೀತವನ್ನು ಸಂಯೋಜಿಸದೇ ಕಥಾವಸ್ತುವಿನ ಆಶಯವನ್ನು ಬಿಂಬಿಸುವಂತೆ ಕಾರಂತರು ರೂಪಿಸಿದ್ದು ನನಗೆ ಸಂತೋಷ ನೀಡಿತು. ಈ ಚಿತ್ರದ ಸಂಗೀತಕ್ಕಾಗಿ ಬಿ.ವಿ.ಕಾರಂತರಿಗೆ ರಾಷ್ಟ್ರ ಪ್ರಶಸ್ತಿಯೂ ಬಂತು. ಆನಂತರದ ನನ್ನ ಕೆಲವು ಚಿತ್ರಗಳಿಗೆ ಸಂಗೀತ ನೀಡಿದ ಐಸಾಕ್ ಥಾಮಸ್ ಅವರೂ ಈ ರೀತಿಯಲ್ಲಿಯೇ ಸಂಗೀತವನ್ನು ವಿನ್ಯಾಸ ಮಾಡುತ್ತಿದ್ದುದನ್ನು ನೋಡಿದೆ.
*****
ಪೈ: ಅನಂತಮೂರ್ತಿಯವರ ಕತೆಯಲ್ಲಿ ಶಾಲೆಯ ಪ್ರಸ್ತಾಪ ಬರುವುದಿಲ್ಲ. ನೀವು ಆಧುನಿಕತೆ ಸೂಚಿಸುವ ಶಾಲೆಯನ್ನು ತಂದಿದ್ದೀರಿ.
ಗಿರೀಶ್: ಸರ್ಕಾರಿ ಶಾಲೆ ಮೂಲಪಠ್ಯದಲ್ಲಿ ಪ್ರತ್ಯೇಕ ದೃಶ್ಯವಾಗಿ ಇಲ್ಲ. ಯಮುನಕ್ಕಳ ಸಂಬಂಧ ಇದ್ದದ್ದು ಶಾಲಾಮಾಸ್ತರರ ಜೊತೆ ಎಂದಷ್ಟೇ ಇತ್ತು. ನಾನು ವೇದಪಾಠಶಾಲೆಗೆ ಕೌಂಟರ್ ಪಾಯಿಂಟ್ ಆಗಿರುವ ಇನ್ನೊಂದು ಶಿಕ್ಷಣ ಪದ್ಧತಿ ಸಾರ್ವಜನಿಕ ಶಿಕ್ಷಣ ಪದ್ಧತಿ ಇರುವ ಸರ್ಕಾರಿ ಶಾಲೆಯನ್ನು ಅಡಕಮಾಡಿದೆ. ಒಂದು ಸಮುದಾಯದಲ್ಲಿ ಉಸಿರು ಕಟ್ಟಿಸುವ ವಾತಾವರಣ ಮಾತ್ರ ಇತ್ತು ಎನ್ನುವ ಹೇಳಿಕೆ ಸರಿಯಲ್ಲ. ಅಲ್ಲಿ ಹಲವು ಅವಕಾಶಗಳಿದ್ದವು. ಆದರೆ ಸಮಸ್ಯೆ ಇರುವುದು ತಪ್ಪು ಆಯ್ಕೆಯಲ್ಲಿ ಎಂದು ನನಗೆ ಹೇಳುವುದಿತ್ತು. ನಾಣಿ ವೇದ ಪಾಠಶಾಲೆಯ ಓದಿನಲ್ಲಿ ಚುರುಕಾಗಿಲ್ಲ, ಆದರೆ ಸರ್ಕಾರಿ ಪಾಠಶಾಲೆಯ ಮಾಸ್ತರರು ಹೇಳುವ ಶಬ್ದವನ್ನು ಸ್ಪಷ್ಟವಾಗಿ ಉಚ್ಚರಿಸಬಲ್ಲ. ಅಂದರೆ ಯಾವ ಶಿಕ್ಷಣ ಕ್ರಮ ಅವನ ಸಾಮರ್ಥ್ಯಕ್ಕೆ ಸಹಜವಾಗಿ ದಕ್ಕುತ್ತದೋ ಅದನ್ನು ನೀಡದೆ ಅವನಿಗೆ ತೊಡಕಾಗುತ್ತಿರುವ ಶಿಕ್ಷಣದಲ್ಲಿ ಅವನ ವ್ಯಕ್ತಿತ್ವವನ್ನು ರೂಪಿಸುವ ಪ್ರಯತ್ನ ನಡೆದಿದೆ. ಇಂಥ ಪ್ರಯತ್ನಗಳು ನಾಣಿಯಂತೆ ಅನೇಕರ ಜೀವನದಲ್ಲೂ ನಡೆಯುತ್ತಿದ್ದು, ಅದು ಅವರ ಬೆಳವಣಿಗೆಗೆ, ಸಹಜ ಸ್ಪಂದನೆಗೆ ಮಾರಕವಾಗುತ್ತಿದೆ. ಅನಂತಮೂರ್ತಿಯವರ ಮೆಚ್ಚಿಗೆಗೆ ಪಾತ್ರವಾದ ಸಿನಿಮಾಕ್ಕಾಗಿ ಮಾಡಿಕೊಂಡ ಬದಲಾವಣೆಗಳಲ್ಲಿ ಇದೂ ಒಂದು.
ಇಲ್ಲಿಗೆ ಅಪ್ರಸ್ತುತ ಎಂದರೂ ಸ್ಕೂಲಿನ ದೃಶ್ಯ ಹೊಳೆದಿದ್ದರ ಬಗ್ಗೆ ಒಂದು ಮಾತು ಹೇಳಿ ಬಿಡುತ್ತೇನೆ. ನನ್ನ ಬಾಲ್ಯದಲ್ಲಿ ನಮ್ಮ ಊರಿನಲ್ಲಿ ಶಾಲೆ ಇರಲಿಲ್ಲ. ನಮ್ಮ ತಂದೆಯವರೂ ಸೇರಿದಂತೆ ಗ್ರಾಮದ ಹಿರಿಯರ ಪ್ರಯತ್ನದಿಂದ ಶಾಲೆ ಸ್ಯಾಂಕ್ಷನ್ ಆಯಿತು. ಹೇಮರೆಡ್ಡಿ ಎಂಬ ಮೇಷ್ಟ್ರೂ ಬಂದರು. ಆದರೆ ಕಟ್ಟಡ ಇರಲಿಲ್ಲ. ನಮ್ಮ ಮನೆಯ ಒಂದು ಭಾಗವಾಗಿದ್ದ ಕಟ್ಟಡದಲ್ಲೇ ಶಾಲೆ ಶುರುವಾಯಿತು. ಒಬ್ಬರೇ ಮಾಸ್ತರರು ಒಂದರಿಂದ ನಾಲ್ಕನೆಯ ತರಗತಿಯವರಿಗೆ ಪಾಠ ಮಾಡಬೇಕಿತ್ತು. ಆಗ ಅವರು ಒಂದೊಂದು ತರಗತಿಗೆ ಒಂದೊಂದು ಪಾಠದ ಕೆಲಸ ಹಚ್ಚಿ, ಇದ್ದ 12-15 ವಿದ್ಯಾರ್ಥಿ/ನಿಯರನ್ನೂ ಓದಿನಲ್ಲಿ ಮಗ್ನರಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಆ ದೃಶ್ಯ ಹುಟ್ಟಿದ್ದು ಆ ನೆನಪಿನಿಂದ. ಆ ಹೇಮರೆಡ್ಡಿ ಮೇಷ್ಟ್ರಿಗೆ ನನ್ನ ಅರ್ಪಣೆ ಈ ದೃಶ್ಯ.
(ಕೃತಿ: ಬಿಂಬ ಬಿಂಬನ (ಕಾಸರವಳ್ಳಿ ಚಿತ್ರಗಳ ಸಂಕಥನ), ಲೇಖಕರು: ಗಿರೀಶ್ ಕಾಸರವಳ್ಳಿ, ಗೋಪಾಲಕೃಷ್ಣ ಪೈ, ಪ್ರಕಾಶಕರು: ವೀರಲೋಕ ಬುಕ್ಸ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ