ಮೈಗೆ ಲೈಫ಼್ ಬಾಯ್ ಸೋಪು. ಮಕಕ್ಕೆ ಮೈಸೂರು ಸ್ಯಾಂಡಲ್ ಸೋಪು. ಮನೆ ಮಂದೀಗೆಲ್ಲಾ ಒಂದೆ ಸೋಪು. ಅದ್ಯಾಕೋ ಗೊತ್ತಿಲ್ಲಪ್ಪ ಮೈಸೂರು ಸ್ಯಾಂಡ್ಲು ಮಕಕ್ಕೆ ಮಾತ್ರ. ಮೈಗೆಲ್ಲ ಲೈಫ್ ಬಾಯಿ. ಮಕ ಬೆಳ್ಳಕಾದ್ರೆ ಸಾಕು ಅಂತ್ಲೋ ಏನೋ! ನಾನು ಚಿಕ್ಕೋಳಾಗಿದ್ದಾಗಿಂದ ಮದ್ವೆ ಆಗಾತಂಕ ಅದೇ ಎರ್ಡು ಸೋಪುಗಳ ರೂಡಿ ಬಂದಿತ್ತು. ಹಲ್ಲಿಗೆ ನಂಜನಗೂಡು ಹಲ್ಲಿನಪುಡಿ. ಒಂದೇ ಕಿತ ಹಲ್ಲುಜ್ಜೋದು. ರಾತ್ರಿ ಉಜ್ಜೋ ಇಸ್ಯವೇ ಗೊತ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಮನೆ-ಮನೆಯ ಜನಗಳ ಕುರಿತ ಬರಹ ಇಲ್ಲಿದೆ
ನಮ್ದು ಸ್ವಲ್ಪ ದೊಡ್ಡ ಮನೇನೆ ಇತ್ತು. ಮನೆ ತುಂಬಾ ಮಕ್ಕಳು ಅಂತಾ ತಾತಾ ಮನೆಯ ಹಿಂಭಾಗ ಹಾಗೂ ಬದಿಯನ್ನು ವಿಸ್ತರಿಸಿಕೊಂಡಿದ್ದರು. ಮನೆಯ ತಲಬಾಗಿಲ ಮುಂದೆ ಐವತ್ತರವತ್ತು ಜನ ಕೂತ್ಕಣಾಕಾಗೋವಷ್ಟು ದೊಡ್ಡ ಅಂಗಳ ಇತ್ತು. ತಾತನ ಕಾಲದಲ್ಲಿ ಅದು ಸೆಗಣಿ ನೆಲ. ಅಪ್ಪ ಅಲ್ಲಿ ಬಿಳೀ ಬಂಡೆಕಲ್ಲು ಹಾಕ್ಸಿದ್ರು. ಕುಂತ್ಕಣಾಕೆ ಚೆಂದಾಕಿತ್ತಲ್ಲ, ರಾತ್ರೆ ಊಟ ಮುಗ್ಸಿ ಎಂಟು ಎಂಟೂವರೆನಾಗೆ ಹೆಂಗುಸ್ರು, ಗಂಡುಸ್ರು ಸೇರ್ತಿದ್ರು. ರಾತ್ರೆ ಒಂಬತ್ತೂವರೆಗಂಟ ಹರಟೆ ನಡೀತಿತ್ತು. ಊರ ಸುದ್ದಿ, ರಾಜಕೀಯ, ದೇಶುದ್ ಸುದ್ದಿ, ಬೆಳಿಗ್ಗೇನಾಗೆ ಪೇಪರ್ನಾಗೆ ಬಂದ ಸುದ್ದೀನ ಅಪ್ಪ ಯೋಳ್ತಿದ್ರೆ, ಅದುರ್ ಮ್ಯಾಗೆ ಮಾತುಕತೆ ನಡೀತಿತ್ತು. ತಲಬಾಗಿಲ್ ಬಲ್ಗಡೀಕ್ಕೆ ಆಳೆತ್ತರದ ತುಳಸೀಕಟ್ಟೆ ಇತ್ತು. ಅದುರ್ ಮಗ್ಗುಲಾಗೆ ಅಂಗೇ ಅದುಕ್ಕೆ ಅಂಟಿಕೊಂಡಂಗೆ ಸುರು ಆಗಿ ಕಲ್ ಚಪ್ಪಡೀ ಹಾಸಿನ ನ್ಯಾರದವರೆಗೆ ಕಟ್ಟೆ ಕಟ್ಟಿಸಿದ್ರು. ಅದುರ್ ಮ್ಯಾಗೆ ಅಪ್ಪ ಕುಂತ್ಕಂತಿದ್ರು.
ಕಣಜ
ಮನೆ ಮಗ್ಗುಲಿಗೆ ಮಾಡಿಮನೆ ಇತ್ತು. ಅದುಕ್ಕೆ ಆಚಿಂದಾನೂ ಬಾಗ್ಲಿತ್ತು. ಆಳುಕಾಳು ಬರಾಕೆ ದವಸ ದಾನ್ಯ ತರಾಕೆ ಮಾತ್ರ ಅದುನ್ನ ತೆಗೀತಿದ್ದಿದ್ದು. ಇಲ್ದೆ ಹೋದ್ರೆ ನಮ್ಮನೆ ನಡೂನಿಂದಾನೆ ಇನ್ನೊಂದು ಬಾಗ್ಲು ಇತ್ತು. ಅಲ್ಲಿಂದಾನೆ ಓಡಾಡ್ತಿದ್ವಿ. ಅದ್ರಾಗೆ ದೊಡ್ಡ ಪಡಸಾಲೆ ಇತ್ತು. ಅದ್ರ ಮುಂದೆ ಒಂದು ದೊಡ್ಡ ರೂಮು. ಆ ರೂಮ್ನಾಗೆ ನೆಲದೊಳಗೆ ಕಣಜ ಮಾಡ್ಸಿದ್ರು. ಕಣಜಕ್ಕೇಮ್ತಾನೆ ಆ ಮನೆ ತಕಂಡಿದ್ದು. ಸುಮಾರು ಒಂದಿಪ್ಪತ್ತು ಕಿಂಟಾಲು (ಕ್ವಿಂಟಾಲ್) ಇಡುಸ್ತಿತ್ತು. ರಾಗಿ, ಬತ್ತ ಪಲ್ಲಗಳ್ನ ತಂದು ಇಲ್ಲೇ ಹಾಕ್ತಿದ್ರು. ಅದ್ರೊಳೀಕ್ಕೆ ಒಬ್ಬಾಳು ಇಳಿಯಾವಷ್ಟು ಜಾಗವಿತ್ತು. ಅದುಕ್ಕೆ ಕಿಟಕೀ ಜಾಲರೀ ತರ ರೆಕ್ಕೆ ಮಾಡ್ಸಿದ್ರು. ದವಸ ತುಂಬಾ ಮುಂಚೆ ಚೆಂದಾಕಿ ಸಾಂಬ್ರಾಣಿ ಹೊಗೆ ಹಾಕಿ ಆಮ್ಯಾಗೆ ತುಂಬ್ತಿದ್ರು. ಮೂರ್ ನಾಕು ತಿಂಗಳುತಕ ಕೆಡತಾಲೇ ಇರ್ಲಿಲ್ಲ. ಸೀಜನ್(ಸೀಸನ್)ಬರಾತಂಕ, ಒಂದೊಂದು ಕಿತ ಒಳ್ಳೆ ರೈಟು ಬರ್ಲಿಲ್ಲಾಂದ್ರೆ ಐದಾರು ತಿಂಗಳೂ ಮಡುಗ್ತಿದ್ರು. ಗಾಳಿ ಆಡ್ತಿರ್ಲಿಲ್ಲ. ಆದ್ರೂ ಸುತ ಕೆಡ್ತಿರ್ನಿಲ್ಲ. ಹೊಸ ರಾಗಿ ಬಂದ ಮ್ಯಾಗೆ ಹಳೆ ರಾಗಿ ಮಾರ್ತಿದ್ದಿದ್ದು. ಕಣಜ ತುಂಬಾವಾಗ ಮ್ಯಾಗ್ಲಿಂದ ಕುಮುರುಸ್ತಿದ್ರು.(ಸುರೀತಿದ್ರು) ಈಚಿಕ್ ತೆಗ್ಯಾವಾಗ ಒಂದಾಳು ಎರಡಾಳು ಒಳೀಕ್ ಇಳ್ದು ಚೀಲ್ದಾಗೆ ತುಂಬಿ ತುಂಬಿ ಮ್ಯಾಕೆ ಅಂದುಸ್ ಕೊಡ್ತಿದ್ರು. (ಅಂದಿಸಿಕೊಡುತ್ತಿದ್ದರು).
ಆಲೆಮನೆ ಕಾಲ್ದಾಗೆ ರಾಶಿ ರಾಶಿ ಬೆಲ್ಲ ತಂದು ಅಲ್ಲೇ ಪಡಸಾಲೇನಾಗೆ ಚಾಪೆ ಹಾಸಿ, ಹುಲ್ಲು ಹಾಸಿ, ಸುರೀತಿದ್ರು. ಪಡಸಾಲೇನಾಗೆ ಮ್ಯಾಕೆ ಹತ್ತೋ ಮೆಟ್ಲು ಇದ್ವು. ಅಲ್ಲೊಂದು ದೊಡ್ಡ ರೂಮಿತ್ತು. ಅದ್ಕೂ ಮುಂಚೆ ಊರ್ನಾಗೆ ಗೌಡ್ರ ಮನ್ಯಾಗೆ ಮಾತ್ರ ಮಾಡಿ ಇತ್ತು. ಆ ರೂಮು ಯಾಕೆಂದ್ರೆ ನಮ್ಮನೆ ಗವಾಕ್ಷಿ ಮುಚ್ಚಾಕೆ ಅಲ್ಲಿಂದ್ಲೇ ಹೋಗ್ಬೇಕಿತ್ತು. ಅದ್ಕೇ ಮಾಡಿ ಕಟ್ಸಿ, ರೂಮು ಕಟ್ಸಿದ್ರು. ಮಳೆ ಬಂದ್ರೆ ಅಲ್ಲಿಂದ್ಲೇ ಓಡೋಗಿ ಗವಾಕ್ಷಿ ಮುಚ್ತಿದ್ವಿ. ಬ್ಯಾಸಿಗೆ ಕಾಲ್ದಾಗೆ ಅಲ್ಲೇ ಹಪ್ಪಳ, ಸಂಡಿಗೆ ಒಣಗಿಕ್ಕುತಿದ್ವಿ. ಬ್ಯಾಸಿಗೆ ಕಾಲ್ದಾಗೆ ರೂಮಿನ್ ಕದ ತೆಗ್ದು ಮನಿಕ್ಕಂಡ್ರೆ ಗಾಳಿ ಸುಯ್ ಅಂತ ಬೀಸ್ತಿತ್ತು.
ಗವಾಕ್ಷಿ ಸರ್ಕಸ್ಸು
ಆವಾಗೆಲ್ಲಾ ಮನೆಗಳಾಗೆ ಕಿಟಕಿ ಇರ್ತಿರಲಿಲ್ಲ. ಗವಾಕ್ಷಿಗ್ಳಾಗಿಂದಲೇ ಒಳ್ಳೆ ಗಾಳಿ ಬೆಳಕು ಬರ್ತಿತ್ತು. ನಮ್ಮನೇಲಿ ಪಡಸಾಲೆಗೊಂದು, ಅಡಿಗೆ ಮನೇಗೊಂದು, ಬಚ್ಚಲಿಗೊಂದು, ನಡುಮನೇಗೊಂದು ಗವಾಕ್ಷಿ ಇದ್ವು. ರೂಮುಗ್ಳಾಗೆ ಕಿಟಕಿ ಇದ್ವು. ಮೇಸ್ತ್ರಿಗೋಳು ಒನೊಂದು ಸತಿ ಕಿಟಕಿ ಇದ್ದರೂ ಮರ್ತು ರೂಡಿಯಾಗಿರೋ ಗವಾಕ್ಷಿ ಇಕ್ಕೇ ಬಿಡ್ತಿದ್ರು. ಈ ಗವಾಕ್ಷಿ ಕಾಟ ಏನಪ್ಪಾಂದ್ರೆ, ಮಳೆಗಾಲ್ದಾಗೆ ನಮ್ಗೆ ಒಳ್ಳೆ ಸರ್ಕಸ್ಸು. ಹನಿ ಬಿದ್ದರೆ ಓಡೋಗಿ ಗವಾಕ್ಷಿ ಮುಚ್ಚೋದು. ಗವ್ವಂತ ಕತ್ಲೆ ಮುಚ್ಕಣಾದು. ಮಳೆ ನಿಲ್ಲೂತ್ಲೆ ತಿರ್ಗಾ ಓಡೋಗಿ ಗವಾಕ್ಷಿ ತೆಗೆಯೋದು.
ಪಡಸಾಲೇ ಒಳೀಕ್ಕೆ ಬಂದ ತಕ್ಷಣ ಎದೂರ್ಗೆ ಗೋಡೆ ತುಂಬಾ ಮೂರಡಿ ದೊಡ್ದಿರೋ ರಾಮ ಸೀತಾ ಲಕ್ಷ್ಮಣ ಆಂಜನೇಯ, ವೆಂಕಟ್ರಣಸಾಮಿ, ಪಾರ್ವತಿ ಪರಮೇಶ್ವರ ದ್ಯಾವ್ರ ಫೋಟೋಗಳು, ನಮ್ಮಜ್ಜಿ ತಾತನ ಫೋಟೋಗ್ಳು ಇದ್ವು.
ಇಲಿ ಏರದ ಗುಡಾಣಗಳು
ಬಲಕ್ಕೆ ಮೂರು ರೂಮಿದ್ವು. ಒಂದು ಅಂಗಡಿ ರೂಮು. ತಾತನ ಕಾಲದಲ್ಲಿ ಚಿಲ್ಲರೆ ಅಂಗಡಿ ಇತ್ತು. ಅಂಗಡಿ ತೆಗುದ್ ಮ್ಯಾಲೆ ಅದು ಅಜ್ಜಿ ರೂಮು. ಮಗ್ಗುಲಾಗೆ ಬೀರು ರೂಮು. ಅದುಕ್ಕೆ ಗುಡಾಣದ ರೂಮೂಂತಾನೂ ಕರೀತಿದ್ವಿ. ಅಲ್ಲಿ ಒಂದು ಬೀರು, ಒಂದೆರೆಡು ಟ್ರಂಕು, ಮೂರಡಿ ನಾಕಡಿ ದೊಡ್ಡ ಗುಡಾಣಗಳು, ಅದ್ರ ಮ್ಯಾಗೆ ದೊಡ್ಡ ಅರವಿಗಳು, ಮ್ಯಾಲೊಂದು ಚಿಕ್ಕ ಅರವಿ ಇರ್ತಿತ್ತು. ಗುಡಾಣಗಳು ಖಾಲೀನೇ ಇರ್ತಿದ್ವು. ಅದ್ರ ಮ್ಯಾಗಿನ್ ದೊಡ್ಡ ಅರವೀಗಳಾಗೆ ಮನೇಗೆ ಉಪಯೋಗ್ಸೋ ರಾಗಿ ಬತ್ತ ಜೋಳ ತುಂಬಿರ್ತಿತ್ತು. ಮ್ಯಾಗುಳ್ ಅರವೀಗಳಾಗೆ ದಪ್ಪಗೆ ಚೆಂದಾಕಿರೋ ಕಾಳುಗಳ್ನ ಬೀಜವಾಗಿ ಮುಂದ್ಲ ಕಿತ ಬಿತ್ತನೆ ಮಾಡಾಕೆ ಅಂತ ಬಚ್ಚಿಡ್ತಿದ್ರು. ದವಸದ ಅರವಿಗಳ್ನ ಕೆಳೀಕ್ಕಿಕ್ಕಿದ್ರೆ ಇಲಿಗಿಲಿ ಕಾಟ. ಅವು ಏರ್ಲಾರ್ದಂಗೆ ದೊಡ್ಡ ಗುಡಾಣಗಳ ಮ್ಯಾಲೆ ಅರವಿಗಳ್ನ ಇಡ್ತಿದ್ದು. ಈ ಅರವೀಗಳಾಗೆ, ಗುಡಾಣದಾಗೆ ಇಟ್ರೆ ಏಸು ದಿನಾ ಆದ್ರೂವೇ ದಾನ್ಯ ಕೆಟ್ಟೊಗಾಕಿಲ್ಲ.
ಆ ರೂಮಿನ್ ಮಗ್ಗುಲಿಂದೆ ಅಪ್ಪನ ರೂಮು. ಅಲ್ಲಿ ಒಂದು ಗೂಡಿತ್ತು. ಅದ್ರಲ್ಲಿ ಕತೆ ಪುಸ್ತಕಗಳನ್ನು ಇಡ್ತಿದ್ವಿ. ಟೇಬಲ್ ಇತ್ತು. ಅದ್ರ ಮ್ಯಾಗೂ ಕತೆಪುಸ್ತಕ ಇರ್ತಿದ್ವು.
ಮಜ್ಜಿಗೆ ಕಡಿಯೋ ಕರಿ ಕಂಬ
ಪಡಸಾಲೇನಾಗೆ ಎರಡು ಕಂಬ ಇದ್ವು. ಅವು ಕಪ್ಪಗೆ ಮಿಂಚ್ತಿದ್ವು. ಜಾಲಿ ಮರದ ದಿಮ್ಮಿಗಳನ್ನು ಆರು ತಿಂಗಳು ನೀರಾಗೆ ನೆನೆಸಿಕ್ಕುದ್ರೆ ಒಳ್ಳೆ ತೇಗಿನ ಮರುದ್ ತರ ಆಗ್ತಿತ್ತು. ಅಂತಾವು ಇವು. ಒಂದೂವರೆ ಅಡಿ ದಪ್ಪಗಿದ್ವು. ನಾವು ಮಕ್ಕಳು ಕಂಬಗಳ ಸುತ್ತಾ ಸುತ್ತುತಿದ್ವು. ಅದ್ರಾಗೆ ಒಂದು ಕಂಬಕ್ಕೆ ಹಗ್ಗ ಕಟ್ಟಿ ದೊಡ್ಡ ಕೊಳದಪ್ಪಲೇಲಿ, ಎತ್ತರದ ಮಜ್ಜಿಗೆ ಗುತ್ತಿ ಹಾಕಿ ದಿನಾ ಮಜ್ಜಿಗೆ ಕಡೀತಿದ್ದ ನಮ್ಮ ರಾಮಪ್ಪ. ದಿನಾ ಮಜ್ಜಿಗೆ ಕೇಳ್ಕೊಂಡು ಸೊಲ್ಪ ಜನ ಬರ್ತಿದ್ರು. ಬಾಣಂತೀರ್ಗೆ, ಬಸಿರೀರ್ಗೆ, ಮಕ್ಕುಳ್ಗೆ ಔಷ್ದೀಗೆ ಬೆಣ್ಣೆ ತುಪ್ಪಕ್ಕೆ ಬರ್ತಿದ್ರು.
ಬೆಣ್ಣೇಗೇಂತ ಇಸ್ಕೂಲ್ಗೆ ಹುಡೀಕ್ಕಂಡು ಬಂದೌಳೆ
ನಮ್ಮನೇಲಿ ಹೊರಗಾದ್ರೆ ಮೂರು ದಿನ ಮೂಲೇಲಿ ಕೂರ್ಬೇಕಿತ್ತು. ಒಂದ್ಸಲ ಇಂಗೇ ಯಾರೋ ಸಣ್ಣ ಮಗೀಗೆ ಬೆಣ್ಣೆ ಕೇಳ್ಕಂಡು ಬಂದೌರೆ. ನಮ್ಮಮ್ಮ ಮೂಲೇಲಿ ಕುಂತಿದ್ರು. ಇಸ್ಕೂಲ್ಗೋಗಿ ಸುಮಕ್ಕನ್ನ ಕರ್ಕಂಡು ಬಾ ಅಂತ ಯೋಳ್ ಕಳ್ಸೌರೆ. ಎಡವುದ್ರೆ ಸಿಕ್ತಿತ್ತಲ್ಲ ಅದುಕ್ಕೆ. ಆವಮ್ಮ ಬಂದು ಇಸ್ಕೂಲ್ ನಾಗೆ ಮೇಷ್ಟ್ರ ತಾವ ವಸಿ ಸುಮಕ್ಕನ್ನ ಕಳ್ಸಿ ಸಾ, ಮಗೀಗೆ ಬೆಣ್ಣೆ ಇಸ್ಕಾಬೇಕು. ಅಕ್ಕ ಹೊರ್ಗೆ ಕುಂತವ್ರೆ ಅಂತಾ ಕೇಳೇ ಬಿಟ್ಲು. ಥೋ.. ಹುಡುಗ್ರೆಲ್ಲಾ ಮುಸಿಮುಸಿ ನಗಾಕೆ ಸುರು ಹಚ್ಕಂಡ್ರು. ಮೇಷ್ಟ್ರು ಕಿಸುಕ್ ಅನ್ನುತ್ಲೇ ಹೋಗಮ್ಮ ಅಂದ್ರು. ನಾನು ತಲೆ ಬಗ್ಸಿ ಬಂದೋಳು ನಮ್ಮಮ್ಮುನ್ ಮೇಲೆ ಎಗರಾಡ್ದೆ. ಇನ್ನೊಂದು ಸತಿ ಇಸ್ಕೂಲ್ಗೆಲ್ಲಾ ಯೋಳ್ ಕಳ್ಸೀರೆ ನಾನು ಬರಾಕಿಲ್ಲ ಅಂದೆ. ಪಾಪ ಸಣ್ ಮಗೀಗೆ ಬೆಣ್ಣೆ ಕೊಡಾಕೆ ಇಂಗಾಡಿದ್ರೆ ದ್ಯಾವ್ರಿಗೆ ಕೋಪಾ ಬರಲ್ವೇನೇ ಅಂದ್ರಾ, ಗಪ್ ಚುಪ್ಪಾಗಿ ವಾಪಸ್ ಇಸ್ಕೂಲ್ಗೋದೆ.
ಜಂತೆ ಮನೆ
ಜಂತೆ ಮನೆ ನಮ್ದು. ಅಡೀಕ್ಕೆ ಧೂಲದ ಅಡ್ಡಿ ಹಾಕಿ, ತೀರು ಇಕ್ಕಿ, ಮ್ಯಾಲೆ ಕರಿ ಬಂಡೆ ಇಕ್ಕಿರ್ತಿದ್ರು. ಮಣ್ಣು, ಗಾರೆ ಹಾಕಿ ಮುಚ್ಚುತಿದ್ರು. ಕಿಟಕಿ ಬಾಗ್ಲು ಚೌಕಟ್ಟುಗಳು ಬೇವಿಂದು. ರೆಕ್ಕೆಗಳು ಹಲಸಿಂದು. ಎಡಕ್ಕೆ ಮಧ್ಯೆ ಓಣಿ ಇತ್ತು. ಬಲಗಡೆ ಪಕ್ಕ ಒಂದು ಶೆಲ್ಪು ಇತ್ತು. ಅದ್ರ ಮ್ಯಾಲೆ ಟೇಪ್ರಿಕಾರ್ಡರು. ಒಂದು ರಾಶಿ ಕ್ಯಾಸೆಟ್ಟುಗಳು. ಮಾಸ್ಟರ್ ಹಿರಣ್ಣಯ್ಯನವರವ್ವು ಎಲ್ಲಾ ನಾಟಕಗಳು ಇದ್ವು. ದಿನಾ ಸಂಜೆ ತಿರ್ ತಿರ್ಗಾ ಅವುನ್ನೇ ಕೇಳೋದು. ಗುರುರಾಜುಲು ನಾಯ್ಡು ಅವುರ್ದು ಹರಿಕತೇಗಳು ಇದ್ವು. ಎಡಗಡೆ ಪಕ್ಕ ಹಳೆ ರೂಮಿತ್ತು. ಅದು ಬಾಣಂತೀರ ರೂಮಂತೆ. ನಮ್ಮಜ್ಜೀಗೆ ಎಂಟು ಜನಾ ಹೆಣ್ಣುಮಕ್ಕಳು. ಯಾವಾಗ್ಲೂ ಆ ರೂಮು ಕಾಲೀನೇ ಇರ್ತಿರ್ಲಿಲ್ಲವಂತೆ. ಆಮೇಲೆ ಹಳೆ ಸಾಮಾನೆಲ್ಲಾ ಅಲ್ಲೇ ಜಾಗ ಮಾಡ್ಕೊಂಡಿದ್ವು. ಇಡೀ ಮನೇಗೆ ನೆಲುಕ್ಕೆ ಕಪ್ಪು ಕಡಪಾ ಬಂಡೆ ಹಾಕ್ಸಿದ್ವು.
ನಡೂ ಇದ್ದ ಓಣೀಗಾಸಿ ಒಳೀಕ್ಕೋದ್ರೆ ಬಲುಕ್ಕೆ ಅಡಿಗೆ ಮನೆ. ಅಲ್ಲೇ ಒಂದು ಮೂಲೇನಾಗೆ ದ್ಯಾವ್ರ ಜಗಲಿ. ಅಲ್ಲೇ ಒಂದು ಗೂಡೊಳ್ಗೆ ದ್ಯಾವ್ರು. ಅಡಿಗೆ ಮನ್ಯಾಗೆ ಸೀಮೆಣ್ಣೆ ಸ್ಟೋವು ಇತ್ತು. ಅಡಿಗೆ ಅದ್ರಾಗೆ ಮಾಡ್ತಿದ್ದು. ಮೊದ್ಲು ಕಟ್ಟಿಗೇದು ಕೋಡೊಲೆ ಇತ್ತಂತೆ. ಅಲ್ಲೇ ಒಂದು ನೆಲುವು ಇತ್ತು. ಅಲ್ಲಿ ಮಜ್ಜಿಗೆ ಮೊಸರು ಇಡ್ತಿದ್ರು. ಅಡಿಗೆ ಮನೆ ಪಕ್ಕದಲ್ಲೇ ಸಾಮಾನು ಇಡಾಕೆ ಒಂದು ಸಣ್ಣ ರೂಮಿತ್ತು. ಅದುಕ್ಕೆ ನಡುಮನೆ ಅಂತಿದ್ರು. ಅಲ್ಲೇ ತಿಂಡಿ ಪಂಡಿ ಎಲ್ಲ ಇದ್ದಾಗ ಡಬ್ಬದಲ್ಲಿ ಮುಚ್ಚಿಕ್ಕಿರ್ತಿದ್ರು. ಅಡಿಗೆ ಮನೆಯಿಂದ ಆಚೆ ಓಣೀಲಿ ಒಂದು ಕರೆಂಟ್ ಸ್ಟೋವು ಇತ್ತು. ಅದ್ರಾಗೆ ಬರೀ ಕಾಫೀ ಟೀ ಅಷ್ಟೇ ಮಾಡ್ತಿದ್ದು. ಕುಕ್ಕರ್‌ನಲ್ಲಿ ಅನ್ನ. ಇನ್ನೆಲ್ಲಾ ಸೀಮೆಣ್ಣೆದ್ರಲ್ಲೆ. ಆ ಸ್ಟೋವಿದ್ದ ಜಾಗದಲ್ಲೇ ಎಡೀಕ್ಕೆ ಬಚ್ಚಲುಮನೆ. ಅಲ್ಲೊಂದು ದೊಡ್ಡ ಹಂಡೆ ಜೊತೀಗೆ ಒಂದು ನೂರು ಬಿಂದಿಗೆ ಹಿಡ್ಸಾದೊಂದು ತೊಟ್ಟಿ ಇತ್ತು. ಬಚ್ಚಲ ಒಂದು ಮಗ್ಗುಲಾಗೆ ಅಟ್ಟ. ಅದ್ರಲ್ಲಿ ತೆಂಗಿನಮಟ್ಟೆ. ಅದ್ರ ಕೆಳಗೆ ಹುಣಿಸೆಹೊಟ್ಟು, ಸೌದೆಗಳು ಇದ್ವು. ಒಂದು ಕಟ್ಟೆ ಮೇಲೆ ಹರಳೆಣ್ಣೆ, ಸೀಗೆಪುಡಿ, ಅಂಟ್ವಾಳದ ಪುಡಿ, ಚೌಳುಮಣ್ಣು, ತೆಂಗಿನ ನಾರು ಇರ್ತಿದ್ವು. ತಲೆಗೂ ಸೀಗೆಪುಡಿ. ಪಾತ್ರೆ ಜಿಡ್ಡಿಗೂ ಸೀಗೆಪುಡಿ. ಕೈ ಜಿಡ್ಡಾದ್ರೂ ಅದೇಯಾ ರಾಮಬಾಣ. ಚೌಳು ಮಣ್ಣು, ತೆಂಗಿನ ನಾರು ಪಾತ್ರೆ ಬೆಳಗಾಕೆ. ನಾಗಮ್ಮನೋ, ಕಮಲಮ್ಮನೋ, ಹನುಮಕ್ಕನೋ ಪಾತ್ರೆ ಬೆಳಗಾಕೆ ಬರ್ತಿದ್ರು. ಬೆಳಗ್ಗೇನಾಗಾದ್ರೆ ಬಚ್ಚಲಿನಾಗೆ ಬೆಳಗಿಕ್ಕುತ್ತಿದ್ರು. ರಾತ್ರೆ ಆದ್ರೆ ಜನಾ ಸೇರಿ ಮಾತುಕತೆ ಆಡ್ತಿದ್ರಲ್ಲ, ಮನೆ ಮುಂದಿನ್ ಅಂಗಳದಾಗೆ, ಅಲ್ಲೇ ಕೊನೇಲಿ ಕುಂತು ಮಾತಾಡ್ತಾ, ಪಾತ್ರೆ ಹರಡಿಕ್ಕೊಂಡು, ಅಲ್ಲೇ ಬೀದಿಲಿರೋ ಮಣ್ಣು ತಕ್ಕಂಡು ಗಸಗಸ ತಿಕ್ಕಿ, ಇನ್ನಾ ಹೋಗದಿದ್ರೆ, ರಂಗೋಲಿ ಪುಡಿ ಹಾಕಿ ತಿಕ್ಕುತಿದ್ರು.
ಮೈಗೆ ಲೈಫ಼್ ಬಾಯ್ ಸೋಪು. ಮಕಕ್ಕೆ ಮೈಸೂರು ಸ್ಯಾಂಡಲ್ ಸೋಪು. ಮನೆ ಮಂದೀಗೆಲ್ಲಾ ಒಂದೆ ಸೋಪು. ಅದ್ಯಾಕೋ ಗೊತ್ತಿಲ್ಲಪ್ಪ ಮೈಸೂರು ಸ್ಯಾಂಡ್ಲು ಮಕಕ್ಕೆ ಮಾತ್ರ. ಮೈಗೆಲ್ಲ ಲೈಫ್ ಬಾಯಿ. ಮಕ ಬೆಳ್ಳಕಾದ್ರೆ ಸಾಕು ಅಂತ್ಲೋ ಏನೋ! ನಾನು ಚಿಕ್ಕೋಳಾಗಿದ್ದಾಗಿಂದ ಮದ್ವೆ ಆಗಾತಂಕ ಅದೇ ಎರ್ಡು ಸೋಪುಗಳ ರೂಡಿ ಬಂದಿತ್ತು. ಹಲ್ಲಿಗೆ ನಂಜನಗೂಡು ಹಲ್ಲಿನಪುಡಿ. ಒಂದೇ ಕಿತ ಹಲ್ಲುಜ್ಜೋದು. ರಾತ್ರಿ ಉಜ್ಜೋ ಇಸ್ಯವೇ ಗೊತ್ತಿರ್ಲಿಲ್ಲ. ಆ ಹಲ್ಲು ಪುಡೀನಾಗೆ ಉಪ್ಪಿರ್ಲಿಲ್ಲ, ಮಸಾಲೆ ಇರಲಿಲ್ಲ. ಅದ್ಕೇಯಾ ಹಲ್ಲುಗಳಾಗೆ ಕಬ್ಬಿನಜಲ್ಲೆ ಕಡಿದು ಜಗಿಯೋಕೆ ಆಗ್ತಿತ್ತು! ಹಲ್ಲುಗಳೇ ನಮಗೆ ಚಾಕು ತರ ಇದ್ವು. ಈಗ ಉಪ್ಪು ಗಿಪ್ಪು ಇರೋ ತರಾವರಿ ಪೇಸ್ಟುಗ್ಳು ಬಂದು, ಎರಡೂ ಮೂರೂ ಸತಿ ಉಜ್ಜಿ ಹಲ್ಲುಗ್ಳು ಸವೆದೋಗವೆ. ಸೀಬೇ ಹಣ್ಣಿಗೂ ಚಾಕೂನೆ ಬೇಕಾಗದೆ.
ನೀರೊಲೆ ನಂಟು
ಸಂಜೀ ಆದ್ರೆ ರಾಮಪ್ಪ ನೀರೊಲೆಗೆ ಹೊಟ್ಟು ತುಂಬಿ, ತೆಂಗಿನ್ ಮಟ್ಟೆ ತುರುಕ್ತಿದ್ದ. ನಾವೂ ಮೆಲ್ಲಕೆ ಹೋಗೋದು. ಕೈಯಲ್ಲಿ ಹಲಸಿನ ಬೀಜ, ಈರುಳ್ಳಿ, ಕಡಲೆಕಾಯಿ, ಜೋಳ, ಬುಡ್ಡ ಕಡಲೆ, ಹುಣಿಸೆ ಬೀಜ ಏನೊ ಒಂದು ಬಚ್ಚಿಟ್ಕೊಂಡು ಹೋಗಿ, ಒಲೆ ಒಳೀಕ್ಕೆ ಹಾಕಿ ಸುಟ್ಟುಕೊಡು ಅನ್ನೋದು. ಆಯಪ್ಪ ಅಯ್ಯ, ನಿಂಗೇನ್ ಬ್ಯಾರೆ ಬದುಕಿಲ್ವೇನಮ್ಮಣ್ಣಿ ಸುಮ್ಕೆ ನನ್ ಪ್ರಾಣ ತಿಂತೀಯ ಅಂಬ್ತ ಬೈತಾ ಸುಟ್ಟುಕೊಡೋದು. ನಾನೂ ಸಾಯಾ ಮಾಡ್ತೀನಿ ಅಂತ ಊದುಕೊಳಪಿ ತಕಂಡು ಊದಿ, ಕಣ್ಣೆಲ್ಲಾ ಕೆಂಪಾಗಿ, ಮೂಗು ಸೊರಬರ ಆದ್ರೆ, ಲಂಗದಲ್ಲೇ ಕಣ್ಣೂ ಮೂಗೂ ಒರೆಸ್ಕೊಂಡು, ಬೂದಿ ಉಬುರಿ, ಸುಟ್ಟಿರೋ ತಿಂಡಿ ತಿನ್ನೋದು. ರಾಮಪ್ಪಂಗೂ ಸೊಲ್ಪ ಕೊಟ್ಟು ಅಲ್ಲಿಂದ ಜಾಗ ಕಾಲಿ ಮಾಡೋದು.
ಹಳೆಮನೆ
ಅಂಗಡಿ ರೂಮಿನ ಮಗ್ಗಲಾಗೆ ಒಂದು ಹಳೆಮನೆ ಇತ್ತು. ದನುಗಳ್ನ ಕಟ್ಟಾಕೆ ಜಾಗ ಬೇಕಿತ್ತು ಅಂತ ಅದುನ್ನ ತಾತ ತಕಂಡಿದ್ರು. ಅಲ್ಲಿ ಒಂದು ಹಸಾ, ಒಂದು ಎಮ್ಮೆ, ಹೊಲಾ ಉಳಾಕೆ ಒಂದು ಜೊತೆ ಎತ್ತು ಇದ್ವು. ಆ ಮನೆ ಮುಂದೆ ಸ್ಯಾನೆ ಜಾಗಾ ಖಾಲಿ ಇತ್ತು. ಅಲ್ಲಿ ನಮ್ಮಪ್ಪ ಒಂದು ಬಾವಿ ತೋಡ್ಸೀರು. ಮೂವತ್ತೈದು ಅಡಿ ಇತ್ತು. ಅದುಕ್ಕೆ ಒಂದು ಮೋಟರು ಕೂಡಿಸಿ, ಪೈಪು ಕನೆಕ್ಸನ್ ಮಾಡ್ಸಿದ್ರು. ಆವಾಗೆಲ್ಲಾ ಬೋರ್ ಇರಲಿಲ್ಲ. ಆ ಪೈಪ್ನ ಮಾಡಿ ಮ್ಯಾಗ್ಳಿಂದ ಎಳ್ಕೊಂಡು ಬಂದು ಬಚ್ಚಲಮನೆ ಗವಾಕ್ಷಿ ದಸೀಲಿ ತೂರಿಸಿ ಸೀದಾ ತೊಟ್ಟೀಗೆ ನೀರು ಬೀಳಂಗೆ ಮಾಡ್ಸಿದ್ರು. ಇಡೀ ಊರ್ನಾಗೆ ನಮ್ದೇ ಮೊದಲ ಮನೆ, ಪಂಪ್ ಸೆಟ್ ಜೋಡ್ಸಿ, ನೀರು ಬರ್ಸಿದ್ದು. ಆಗ ನಮ್ಮಣ್ಣಯ್ಯಂಗೆ ಎರ್ಡು ವರ್ಸವಂತೆ. ನಮ್ಮಜ್ಜೀ ತಾವ ಅಜ್ಜೀ ಪಂಪು ಅಂದ್ರೆ ಏನು.. ಪೈಪಲ್ಲಿ ನೀರು ಅದೆಂಗೆ ಬರ್ತವೆ. ಯಾಕೆ ಹಾಕ್ಸಿದ್ದು ಅಂತೆಲ್ಲಾ ಕ್ಯೋಳಿದ್ಕೆ ನಮ್ಮಜ್ಜಿ, ನೀನು ಮದ್ವೆ ಆದ್ಮೇಲೆ ನಿನ್ನೆಂಡ್ತಿಗೆ ಬಾವೀಗ್ಳಾಗಿಂದ ನೀರು ಸೇದಾಕೆ ಕಷ್ಟ ಆಯ್ತದೆ ಅಂತ ನಿಮ್ಮಪ್ಪ ಪೈಪಿಂದ ನೀರು ಬರಾಂಗೆ ಮಾಡವ್ರಪ್ಪ ಅಂತ ತಮಾಷಿ ಮಾಡ್ತಿದ್ರಂತೆ. ಆದ್ರೆ ಅದುನ್ನ ಸೂಕ್ಸ್ಮವಾಗಿ ನಮ್ಮಮ್ಮಂಗೆ ಯೋಳ್ತಿದ್ದುದ್ದು!!
ಹಲಾಲಗುಂಡಿ
ಇನ್ನಾ ನಮ್ಮ ಮಾಡಿ ಮನೆ ಸ್ವಲ್ಪ ಎತ್ತರದಾಗಿತ್ತು. ಅದ್ರ ಮುಂದೆ ಸ್ಟೇಜಿನ ತರ ಇತ್ತು. ಅದ್ರ ಮುಂದಿಂದೆ ಊರಾಗಳ ಘನವಾದ ಬಯಲು. ಊರ್ನಾಗೆ ಬಯಲುನಾಟಕವೋ, ಕಣ್ಣುಕಟ್ಟೊ ಏನಾದ್ರೂವೆ ಅಲ್ಲೇ ಸ್ಟೇಜು. ಜಾತ್ರೆ ಪಾತ್ರೆ ಎಲ್ಲಾ ಅಲ್ಲೆ. ನಾವೆಲ್ಲಾ ಕೆಳಗಿನ ಬಯಲ್ನಾಗೆ ಕುಂತು ನೋಡ್ತಿದ್ವಿ. ಬಾಬಯ್ಯನ ಹಬ್ಬದಾಗೆ ಕೊಂಡಹಾಯಾಕೆ ಹಲಾಲಗುಂಡಿ ಅಂತ ತೋಡ್ತಿದ್ರು. ಎರಡಡಿ ಗುಂಡಿ. ಅದ್ರಾಗೆ ಇಜ್ಜಿಲಾಕಿ ಕೆಂಡ ಮಾಡಿ ತುಳೀತಿದ್ರು.
ಬಸ್ಸುಗಳೆ ನಮ್ಮ ಗಡಿಯಾರ
ನಮ್ಮ ಮನ್ಯಾಗೇನೂ ಊರಲ್ಲಿ ಯಾರ ಮನ್ಯಾಗೂ ಗಡಿಯಾರಾ ನೋಡಾ ಬಾಬತ್ತೇ ಇರಲಿಲ್ಲ. ಮನೆಗ್ಳಾಗೆ ಗಡಿಯಾರುದ್ ಗುರುತೂ ಇರಲಿಲ್ಲ. ಬಸ್ಸುಗಳೆ ನಮಗೆ ಟೇಮು ಯೋಳ್ತಿದ್ವು. ಗೋಪಾಲಕೃಷ್ಣ ಬಸ್ಸು ಬೆಳಿಗ್ಗೆ ಒಂಬತ್ತುಕ್ಕೆ ಬರ್ತಿತ್ತು. ಆಗ ನಾಷ್ಟಾ ಟೇಮು. ಹತ್ತು ಗಂಟೆಗೆ ರಿಲಯನ್ಸು, ರಂಗನಾಥ ಒಂದೈದು ನಿಮಿಷ ಹಿಂದೂಮುಂದು ಬರ್ತಿದ್ವು. ಬ್ಯಾಗ್ ತಗ್ಲಾಕ್ಕೊಂಡು ಇಸ್ಕೂಲಿಗೆ ಓಡೋದು. ಮಧ್ಯಾಹ್ನ ಒಂದೂವರೆಗೆ ಶಂಕರಾ ಬಸ್ಸು. ಆಗ ಊಟದ ಟೇಮು. ರಾತ್ರಿ ಎಂಟು ಗಂಟೆಗೆ ಗೋಪಾಲಕೃಷ್ಣ ತಿರ್ಗಾ ಬರ್ತಿತ್ತು. ಅದೇ ಪಸ್ಟ್ ಬಸ್ಸು. ಅದೇ ಲಾಸ್ಟ್ ಬಸ್ಸು. ಊಟ ಮಾಡಾಕೆ ಆ ಬಸ್ಸು ಬರ್ಲಿ ಅಂತ ಕಾಯ್ತಿದ್ವಿ. ಯಾರಾರೂ ನಂಟರು ಬಂದ್ರೆ, ನಂಟರು ಅಂದ್ರೆ ಇಲ್ಲಿ ನಮ್ಮ ಬಳಗದೋರೂಂತಲ್ಲ. ಕಾಳೇನಳ್ಳಿ, ವೀರನಾಗೇನ ಹಳ್ಳಿಗ್ಳ ನಮ್ಮ ಜನ ಈ ಬಸ್ಸಿಗೇನಾರಾ ಬಂದ್ರೆ ಅಷ್ಟೊತ್ತಿನಾಗೆ ಊರಿಗೋಗಾಕೆ ಆಗ್ತಿರ್ಲಿಲ್ಲ. ನಡ್ಕೊಂಡು ಓಯ್ಬೇಕಿತ್ತು. ರಾತ್ರಿ ನಮ್ಮನೇಲೆ ಊಟ ಮಾಡಿ, ಮಲಗಿದ್ದು, ಬೆಳಿಗ್ಗೆ ಎದ್ದು ಹೋಗ್ತಿದ್ರು. ಆಗೆಲ್ಲಾ ಬಸ್ ಗಳಾಗೆ ಕಂಡಕ್ಟ್ರು, ಡ್ರೈವರ್ರು ಇಸ್ಕೂಲ್ ಹುಡುಗ್ರನ್ನ ಕಂಡ್ರೆ ನಿಲ್ಸಿ, ಪುಗ್ಸಟ್ಟೆ ಕರ್ಕೋ ಓಯ್ತಿದ್ರು. ಪಾಪ ಮಕ್ಳು ಬಿಸ್ಲಾಗೆ ನಡೀಬೇಕೂಂತ ಪ್ರೀತಿ ತೋರ್ಸೋರು.
ಹಾರ್ಮೋನಿಯಂ ಬಾರ್ಸಿದ್ದು
ಹಾರ್ಮನಿ ಅಂತಿದ್ವಿ. ಅದ್ಯಾಕೋ ನಮ್ಮಿಂದ ಹಾರ್ಕೊಂಡೇ ಹೋಯ್ತು. ನಮ್ಮಪ್ಪನ ರೂಮಿನಲ್ಲಿ ಅಟ್ಟದ ಮೇಲೆ ಒಂದು ಹಾರ್ಮೋನಿಯಂ ಇತ್ತು. ನಮ್ಮತ್ತೆಯಂದಿರಿಗೆ ಕಲಿಸೋಕೆ ಅಪ್ಪ ತಂದಿದ್ದು. ಅವ್ರೆಲ್ಲಾ ಮದ್ವೆ ಆಗಿ ಹೋಗಾಯ್ತಲ್ಲ, ಅದು ಅಟ್ಟ ಸೇರಿತ್ತು. ಇದ್ಕಿದ್ದಂಗೆ ಅಪ್ಪಂಗೆ ನಂಗೂ ನಮ್ಮಕ್ಕಂಗೂ ಕಲಿಸ್ಬೇಕು ಅಂತ ಅನ್ನಿಸ್ತು. ನಮ್ ಗಾಚಾರ ಸರೀಗಿರ್ಲಿಲ್ಲ ಅನ್ನುಸ್ತೈತೆ. ಆ ಮೇಷ್ಟ್ರೋ ಕೊಡಿಗೇನಹಳ್ಳಿಯಿಂದ ಬರ್ತಿದ್ರು. ಕಣ್ಣು ಕಾಣುಸ್ತಿರ್ಲಿಲ್ಲ. ಕಿರುಚ್ಕೊಂಡು ಹೇಳ್ಕೊಡ್ತಿದ್ರು. ಸರಿಗಮಪ ನನ್ ಗಂಟ್ಲಾಗೆ ಸರಿಯಾಗಿ ಬರಲೇ ಇಲ್ಲ. ಅವ್ರು ಮ್ಯಾಕೆತ್ತೋಕೆ ಯೋಳಿದ್ರೆ ಆಕಾಶಕ್ಕೇ ನೆಗೀತಿತ್ತು. ಕೆಳೀಕ್ ಇಳ್ಸೋಕೆ ಯೋಳಿದ್ರೆ ಪಾತಾಳಕ್ಕೆ ಹೊಂಟೋಯ್ತಿತ್ತು. ಅದ್ ಬರಲ್ಲ. ಆ ಮೇಷ್ಟ್ರು ಬಿಡಾಕಿಲ್ಲಾ. ನಮ್ ರಾಗಾಲಾಪಕ್ಕೆ ಊರಾಗಿನ್ ನಾಯಿಗ್ಳೂ ಗೋಳಾಡ್ತಿದ್ವು. ನಂಗಂತೂ ಈ ತಾಪತ್ರಯಕ್ಕೆ ಬೋ ರೇಗ್ ಹತ್ತೋಯ್ತು. ಸರ್ಯಾಗಿ ಅವ್ರು ಬರೋ ಟೇಮಿಗೆ ಆಡಾಕೆ ಹೋಗ್ತಿದ್ದೆ. ರಾಮಪ್ಪ ಊರೆಲ್ಲಾ ಹುಡುಕಿದ್ರೂ ಕಾಣ್ತಿರಲಿಲ್ಲ. ಆ ಊರಲ್ಲಿ ನಾನು ಬಚ್ಚಿಟ್ಟುಕೊಣಾ ಜಾಗಗ್ಳು ಸ್ಯಾನೆ ಇದ್ವು. ನಾಗಮ್ಮನ ಹಟ್ಟಿ, ಈಶ್ವರಮ್ಮನ ಮನೆ, ಜಕ್ಕೇನಹಳ್ಳಿಯವರ ಮನೆ ಇಂಗೇ ಮಸ್ತ್ವಿದ್ವು. ನಮ್ಮಪ್ಪಂಗೂ ರೋಸೋಗಿ ಹಾರ್ಮೋನಿಯಂ ಪೆಟ್ಟಿಗೇನಾ ಇಸ್ಕೂಲ್‌ಗೆ ದಾನ ಮಾಡಿದ್ರು. ಅದು ಆಚೆ ಹೋದ್ ಮೇಲೆ ನಮ್ಗೂ ನೆಮ್ದಿ ಆಯ್ತು.
ಕೇರಂ ಬಂದದ್ದು
ನಮ್ಮೂರ್ನಾಗೆ ನಮ್ಮನೇಲೆ ಮೊದ್ಲು ಅಪ್ಪ ಕೇರಂ ತಂದ್ರು. ಚೈನೀಸ್ ಚಕ್ಕರ್ ತಂದ್ರು. ಬ್ಯಾಂಕ್ ಆಟ ತಂದಿದ್ರು. ಅವೆಲ್ಲಾ ಬಂದ ಮೇಲೆ ಊರಾಗಿನ್ ಹೈಕ್ಳೆಲ್ಲಾ ನಮ್ಮನೇಲಿ ಸೇರೋರು. ಆಡೋರು ನಾಕು ಮಂದಿ ಆದ್ರೆ ನೋಡೋರು ಎಂಟು ಮಂದಿ. ನಮ್ಕಿನ್ನ ದೊಡ್ಡೋರು ಬರ್ತಿದ್ರಾ, ನಮ್ಮಣ್ಣ ನಮ್ಮಕ್ಕ ಸೇರ್ಕೊಂಡು ಆಡ್ತಿದ್ರು. ನನ್ನ ಚಿಕ್ಕೋಳು ಅಂತಾ ನೋಡೋಕೆ ಮಾತ್ರ ಬಿಡೋರು. ಅವ್ರೆಲ್ಲಾ ಆಡಿ ಬ್ಯಾಸ್ರಾಗಿ ಎದ್ದೋದ್ ಮೇಲೆ ನಮ್ಮ ಸರದಿ. ನಾನೂ ನನ್ ಗೆಳತೀರು ಆಡ್ತಿದ್ವಿ. ನಾವೆಲ್ಲಾ ದೊಡ್ಡೋರಾದ ಮೇಲೆ ಕೇರಂ ಬೋರ್ಡ್‌ನ ಅಪ್ಪ ಇಸ್ಕೂಲ್ಗೆ ಕೊಟ್ಟುಬಿಟ್ಟರು. ಅಪ್ಪ ಇಂತ ಹೊಸ ಆಟಗಳ್ನ, ಕತೆ ಪುಸ್ತಕಗಳ್ನ, ಕ್ಯಾಸೆಟ್ಟುಗಳ್ನ ತರೋದು ನಂಗೆ ಆವಾಗ್ಲಿಂದ್ಲೂನೆ ಹೊರಗಿನ್ ಜಗತ್ತಿಗೆ ತೆರ್ಕೊಳ್ಳೋಕೆ ದಾರಿ ಮಾಡ್ತು. ಪೇಪರ್ ತರ್ಸೋದು ಮಾತ್ರವಲ್ಲ, ನಾನೂ ಓದ್ಲೇ ಬೇಕಿತ್ತು. ಆಮೇಲೆ ಅಷ್ಟು ಚಿಕ್ಕ ವಯಸ್ಸಿನಲ್ಲೇ ರಾಜಕೀಯದ ವಿಸ್ಯಾನೂ ನಂಜೊತೆ ಮಾತಾಡ್ತಿದ್ರು. ಈಗೇನಾದ್ರೂ ನಾನು ಸ್ಟೇಜ್ ಮ್ಯಾಗೆ ಮಾತಾಡ್ತೀನಿ ಅಂದ್ರೆ, ಅದ್ಕೆ ಅಪ್ಪ ಹಾಕಿದ ಬೀಜಾನೆ ಕಾರಣ.
ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.