ಕಾಲಿನ್ ಸಲ್ಲಿವನ್(ಮ್ಯಾಟ್‌ ಡಾಮನ್) ಎಂಬ ಯುವ ಕ್ರಿಮಿನಲ್ ಪೊಲೀಸ್ ಇಲಾಖೆಯ ಒಳಗೆ ನುಸುಳಿಕೊಂಡು ಅಲ್ಲಿನ ಎಲ್ಲ ವಿದ್ಯಮಾನಗಳನ್ನು ಗ್ಯಾಂಗ್‌ ಲೀಡರ್‌ ಗೆ ರವಾನಿಸುವ ಕೆಲಸ ನಿರ್ವಹಿಸಬೇಕಾಗಿರುತ್ತದೆ. ಇದು ಕಥನದ ಪ್ರಾರಂಭಿಕ ಭಾಗವಾದರೆ ಚಿತ್ರ ಮುಂದುವರಿದಂತೆ ಅವರು ಕ್ರಮವಾಗಿ ತಮ್ಮ ತಮ್ಮ ನಿಯೋಜಿತ ಕೆಲಸಗಳಲ್ಲಿ ಮಾಡುವ ಕ್ರಿಯೆ ಮುಖ್ಯವಾದದ್ದು. ಇದರಲ್ಲಿ ನಿರತರಾದಾಗ ಬಿಲ್ಲಿ ಕಾಸ್ಟಿಗನ್‌ ಮತ್ತು ಕಾಲಿನ್‌ ಸಲ್ಲಿವನ್‌ ಅವರುಗಳ ಅಂತರಂಗದಲ್ಲಿ ಸಂಭವಿಸುವ ಸಂಘರ್ಷದ ಪದರುಗಳನ್ನು ಪ್ರಕಟಿಸುವುದೇ ನಿರ್ದೇಶಕನ ಉದ್ದೇಶ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಅಮೆರಿಕದ ʻದ ಡಿಪಾರ್ಟೆಡ್ʼ ಸಿನಿಮಾದ ವಿಶ್ಲೇಷಣೆ

ಸೃಷ್ಟಿಕ್ರಿಯೆಯ ಸ್ವರೂಪವೇ ವಿಶಿಷ್ವ. ಸೃಷ್ಟಿಕ್ರಿಯೆಗೆ ಪ್ರಚೋದನೆ, ಪ್ರೇರಣೆಗೆ ಯಾವ ರೀತಿಯ ನಿರ್ಬಂಧವೂ ಇಲ್ಲ. ಸ್ವಂತ ಅನುಭವ, ಪ್ರತಿಭೆಗಳಿಂದ ಸೃಷ್ಟಿಕ್ರಿಯೆಯಲ್ಲಿ ನಿರತರಾಗುವುದು ಎಷ್ಟು ಸಹಜವೋ ಅಷ್ಟೇ ಸಹಜ ಬೇರೊಂದು ಕೃತಿಯಿಂದ ಪ್ರೇರಣೆ, ಸ್ಫೂರ್ತಿ ಪಡೆದು ಸ್ವಂತ ಸೃಷ್ಟಿ ಕ್ರಿಯೆಯ ನಿರ್ಮಾಣದಲ್ಲಿ ತೊಡಗುವುದು ಕೂಡ. ಹೀಗೆ ಗಮನಾರ್ಹ ಕೃತಿಯಿಂದ ಇನ್ನೊಬ್ಬರು, ಮತ್ತೊಬ್ಬರು ಪ್ರಭಾವಿತರಾಗುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪರಿಪಾಠ. ಇದಕ್ಕೆ ನಮ್ಮ ಮಹಾಭಾರತ, ರಾಮಾಯಣ ಇತ್ಯಾದಿ ಮಹಾನ್‌ ಕೃತಿಗಳಂತೆಯೇ ಶೇಕ್ಸ್‌ಪಿಯರ್‌ನ ನಾಟಕಗಳಾಗಲಿ, ಟಾಲ್ಸ್‌ ಟಾಯ್, ಮಾರ್ಕೆಜ್ ಮುಂತಾದವರ ಕೃತಿಗಳಾಗಲಿ ಪ್ರಪಂಚದ ಹಲವಾರು ಪ್ರತಿಭಾನ್ವಿತರಿಗೆ ಪ್ರೇರಣೆ ಒದಗಿಸಿದೆ. ಅನಂತರ ಅವರು ತಮ್ಮದೇ ಸೃಷ್ಟಿಕ್ರಿಯೆಯಲ್ಲಿ ತೊಡಗುವಂತೆ ಮಾಡಿರುವುದು ಸಾಮಾನ್ಯವೇ.

(ಮಾರ್ಟಿನ್)

ಇಂಥ ಕೃತಿಗಳ ಸ್ವರೂಪ ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತಿರುವುದು ಕೂಡ ಸಾಮಾನ್ಯ ಹಾಗೂ ಸಹಜವೇ. ಮಹಾನ್ ಕೃತಿಗಳಲ್ಲಿ ಮಾನವನ ಮೂಲ ಗುಣಗಳು ವ್ಯಕ್ತಿಯೊಬ್ಬನ ಜೀವನದ ರೀತಿಯನ್ನೇ ಬದಲಿಸುವ ಮನುಷ್ಯ ಸಹಜ ವರ್ತನೆಗಳು ವಿಚಿತ್ರ ಪರಿಣಾಮಗಳನ್ನು ಉಂಟುಮಾಡುವುದನ್ನು ಕಾಣಲು ಸಾಧ್ಯವಾಗುತ್ತದೆ. ಅಲ್ಲದೆ ಮನುಷ್ಯರ ಜೀವನ, ಅವರ ಮನಸ್ಸಿನ ಹೊರಳುಗಳು, ಪ್ರಜ್ಞೆಯ ವಿಸ್ತಾರ, ವರ್ತನೆಯ ವಿವಧ ಆಕಾರಗಳ ಮುಂತಾದವುಗಳಲ್ಲದೆ ಅವು ಮೂಡಿಸುವ ಅರಿವು, ತಿಳಿವಳಿಕೆಗೆ ಸಂಬಂಧಪಟ್ಟ ವಿವರಗಳು ದೊರಕುವುದನ್ನು ಕಂಡಿದ್ದೇವೆ. ಹೀಗೆ ಉಂಟಾಗುವ ಪ್ರಕ್ರಿಯೆ ಕೇವಲ ಸಾಹಿತ್ಯಕ್ಕೆ ಅಲ್ಲದೆ ಇತರ ಕಲಾಪ್ರಕಾರಗಳಿಗೂ ವಿಸ್ತಾರಗೊಂಡಿದೆ.

ಪ್ರಸ್ತುತ ಸಿನಿಮಾಗೆ ಸಂಬಂಧಪಟ್ಟ ಹಾಗೆ ಮಾರ್ಟಿನ್ 2002 ರಲ್ಲಿ ನಿರ್ಮಿತವಾದ ಚೀನಾದ ಹಾಂಕಾಂಗ್‌ನಲ್ಲಿ ಜರುಗಿದ ಪ್ರಸಂಗವನ್ನು ಆಧರಿಸಿ ಅಲೆನ್‌ ಮಾಕ್‌ ಮತ್ತು ಆಂಡ್ರ್ಯೂ ಲಾವ್ರ ನಿರ್ಮಿಸಿದ ʻಇನ್ಫೆರ್ನಲ್ ಅಫೇರ್‌ʼ ಚಿತ್ರದ ಮೂಲ ಕಥನದ ಚೌಕಟ್ಟನ್ನು ಉಳಿಸಿಕೊಂಡು, ಉಳಿದಂತೆ ತನ್ನದೇ ಆದ ರೀತಿಯಲ್ಲಿ 2006ರಲ್ಲಿ ಮಾರ್ಟಿನ್‌ ಸ್ಕೋರ್ಸೆಸಿ ʻದಿ ಡಿಪಾರ್ಟೆಡ್‌ʼ ಚಿತ್ರವನ್ನು ನಿರ್ಮಿಸಿದ್ದಾನೆ. ಇದರಲ್ಲಿ ಕ್ರೈಮ್‌ ಕಥನವೊಂದರಲ್ಲಿ ಕಾಣಲು ಸಿಗುವ ಘಟನೆಗಳ ಮಹಾಪೂರ ಹಾಗು ಅದನ್ನು ಅವಲಂಬಿಸಿದ ಇತರ ಅನಿವಾರ್ಯ ಪ್ರಸಂಗಗಳು ಇರುವುವಾದರೂ ನಿರ್ದೇಶಕನ ಪ್ರಮುಖ ಆಶಯ, ಮನುಷ್ಯನ ಅಂತರಂಗದಲ್ಲಿ ಉಂಟಾಗುವ ಅಪರಾಧಿ ಪ್ರಜ್ಞೆ, ನಿಷ್ಠೆ, ಆಂತರಿಕ ತವಕ, ತಳಮಳ, ಇವುಗಳನ್ನು ಪ್ರಸ್ತುತಪಡಿಸುವುದು.

ಮಾರ್ಟಿನ್ಸ್ ಸ್ಕೋರ್ಸೆಸಿ ಅನೇಕ ಬಗೆಯ ಚಿತ್ರಗಳನ್ನು ನಿರ್ಮಿಸಿದ್ದಾನೆ. ʻನ್ಯೂಯಾರ್ಕ್, ನ್ಯೂಯಾರ್ಕ್ʼ ಎಂಬ ಸಂಗೀತಮಯ ಚಿತ್ರ, ಅತಿವಾಸ್ತವದ ಶೈಲಿಯ ಬಳಕೆಯ ಹಾಸ್ಯಚಿತ್ರ, ʻಆಫ್ಟರ್ ಅವರ್ಸ್ʼ, ಅಣಕು ಚಿತ್ರ ʻಕಿಂಗ್ ಆಫ್ ಕಾಮಿಡಿʼ ಅಲ್ಲದೆ ಅನೇಕ ಖ್ಯಾತಿಗಳಿಸಿದ ಚಿತ್ರಗಳನ್ನು ನಿರ್ಮಿಸಿದ್ದಾನೆ. ಅವನಿಗೆ ಗ್ಯಾಂಗ್ಸ್ಟರ್ ಚಿತ್ರಗಳ ನಿರ್ಮಾಣ ಹೊಸದೇನಲ್ಲ. ʻಮೀನ್ ಸ್ಟ್ರೇಟ್ಸ್‌,ʼ, ʻಕ್ಯಾಸಿನೋʼ, ʻಗುಡ್ ಫೆಲ್ಲಾಸ್‌ʼ, ʻಟ್ಯಾಕ್ಸಿ ಡ್ರೈವರ್‌ʼ ಹೀಗೆ ಇನ್ನೂ ಹಲವು.

ʻದ ಡಿಪಾರ್ಟೆಡ್‌ʼ ಚಿತ್ರ ಸೌತ್ ಬಾಸ್ಟನ್ ನಲ್ಲಿ ನೆಲೆಯೂರಿರುವ ಐರಿಶ್ ಅಮೇರಿಕನ್ ಕ್ರೈಮ್‌ ಗ್ಯಾಂಗನ್ನು ಸಂಪೂರ್ಣ ನಾಶಮಾಡುವ ಉದ್ದೇಶಯುಳ್ಳದ್ದಾಗಿದೆ. ಈ ವಿಶೇಷವಾದ ಕಾರ್ಯವನ್ನು ಯುವ ಪೊಲೀಸ್ ಬಿಲ್ಲಿ ಕಾಸ್ಟಿಗನ್(ಲಿಯೊನಾರ್ಡೋ ಡಿಕ್ಯಾಪ್ರಿಯೋ)ಗೆ ವಹಿಸಲಾಗುತ್ತದೆ. ಅವನನ್ನು ಈ ಕೆಲಸಕ್ಕೆ ನಿಯೋಜಿಸುವ ಪೊಲೀಸ್‌ ಅಧಿಕಾರಿ ಕ್ಯಾಪ್ಟನ್‌ ಕ್ವೀನನ್‌ (ಮಾರ್ಟಿನ್‌ ಶೀನ್) ಕಾಸ್ಟಿಗನ್‌ ನ ಕಾರ್ಯ ಕ್ಷಮತೆ ಮತ್ತು ಪೊಲೀಸ್‌ ಇಲಾಖೆಯ ಬಗ್ಗೆ ಅವನಿಗಿರುವ ನಿಷ್ಠೆಯನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ನಿರ್ವಹಿಸುತ್ತಾನೆ. ಇಂಥದೊಂದು ಅಪರೂಪವೆನಿಸುವ, ಜೀವಕ್ಕೆ ಅಪಾಯ ಒದಗುವಂಥ ಮತ್ತು ಅಂಥವನ್ನು ಯಶಸ್ವಿಯಾಗಿ ಎದುರಿಸಬಲ್ಲನೆಂಬ ನಂಬಿಕೆ ಇರುವಂಥವನನ್ನು ಆರಿಸಿಕೊಳ್ಳಲು ಅವನ ಅನುಭವ ನೆರವಾಗುತ್ತದೆ. ಬಿಲ್ಲಿ ಕಾಸ್ಟಿಗನ್‌ಗೆ ಗ್ಯಾಂಗ್‌ ಲೀಡರ್‌ ಫ್ಯಾಂಕ್‌ ಕಾಸ್ಟಿಲೋನ‌ (ಜಾಕ್‌ ನಿಖಲ್ಸನ್) ನ ವಿಶ್ವಾಸ ಗಳಿಸಿ ಅವನು ಯೋಜಿಸುವ ವಿವಿಧ ಪ್ಲಾನ್‌ ಮತ್ತು ಅದು ಕಾರ್ಯ ರೂಪಕ್ಕೆ ಬರಲು ತೆಗೆದುಕೊಳ್ಳುವ ಸಕಲ ಮುಂಜಾಗ್ರತೆಯ ಕ್ರಮ, ಹಾಗೂ ವಿಧಾನ ಇತ್ಯಾದಿಗಳ ಬಗ್ಗೆ ಮುಂಚಿತವಾಗಿ ಪೊಲೀಸ್ ಸಂಸ್ಥೆಗೆ ಸೂಚನೆ ನೋಡುವ ಕೆಲಸವನ್ನು ವಹಿಸುತ್ತಾರೆ. ಬಿಲ್ಲಿ ಕಾಸ್ಟಿಗನ್‌ ಪೊಲೀಸ್‌ ಇಲಾಖೆಯಲ್ಲಿದ್ದರೂ ಅತಿರೇಕದ ಸಮಯಗಳನ್ನು ಹೊರತುಪಡಿಸಿದರೆ ದರ್ಪವನ್ನು ನಿಗ್ರಹಿಸಲು ಸಮರ್ಥನಾಗಿರುತ್ತಾನೆ. ಕುತೂಹಲವೆಂದರೆ ಈ ಬಿಲ್ಲಿ ಕಾಸ್ಟಿಗನ್‌ ಕ್ರೈಮ್‌ ಹಿನ್ನೆಲೆಯಿಂದ ಬಂದವನು. ಸಾಕಷ್ಟು ಒರಟಾಗಿ ಮತ್ತು ದರ್ಪದಿಂದ ಅಬ್ಬರಿಸುವ, ಚೂಪುಗಣ್ಣುಗಳಿಂದ ಎದುರಿಗಿದ್ದವರನ್ನು ಪರೀಕ್ಷಿಸುವಂತೆ ನೋಡುವ ಗ್ಯಾಂಗ್‌ ಮುಖ್ಯಸ್ಥ ಫ್ರಾಂಕ್‌ ಕ್ಕಾಸ್ಟಿಲೋನನ ವಿಶ್ವಾಸವನ್ನು ಬಹಳ ಬೇಗನೆ ಗಳಿಸುತ್ತಾನೆ. ಅದಕ್ಕೆ ಅವನು ಕ್ಷಿಪ್ರ ಗತಿಯಲ್ಲಿ, ಕ್ಯಾಸ್ಟಿಲೋನ ಸಾಮೀಪ್ಯದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಅವನ ಸ್ವಭಾವ, ವರ್ತಿಸುವ ಬಗೆಯನ್ನು ಬೇಗನೆ ಅರಿತುಕೊಳ್ಳುತ್ತಾನೆ. ಅವನ ಸಿಟ್ಟು, ಸೆಡವು, ರೋಷ ಉಕ್ಕೇರಲು ಕಾರಣಗಳು ಮತ್ತು ಅವು ವ್ಯಕ್ತವಾಗುವ ಬಗೆ, ಅವನ ಕಾರ್ಯವಿಧಾನದ ಸೂಕ್ಷ್ಮಗಳು, ಅವನಿಗೆ ಮೆಚ್ಚುಗೆಯಾಗುವ ವಿಧಾನಗಳು ಮುಂತಾದವನ್ನು ತ್ವರಿತವಾಗಿ ಗ್ರಹಿಸುತ್ತಾನೆ. ಇವೆಲ್ಲ ಕೆಲಸಗಳನ್ನು ಅವನು ತನ್ನ ವ್ಯಕ್ತಿತ್ವದ ಇನ್ನೊಂದು ರೂಪವೆನ್ನುವಂತೆ, ಸ್ವಲ್ಪವೂ ಗ್ಯಾಂಗ್‌ ಲೀಡರ್‌ ಕಾಸ್ಟಿನೋಗೆ ಅನುಮಾನಿಸಲು ಆಸ್ಪದ ಕೊಡದೆ ನಿರ್ವಹಿಸುತ್ತಾನೆ.

ಗಮನಾರ್ಹ ಕೃತಿಯಿಂದ ಇನ್ನೊಬ್ಬರು, ಮತ್ತೊಬ್ಬರು ಪ್ರಭಾವಿತರಾಗುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪರಿಪಾಠ. ಇದಕ್ಕೆ ನಮ್ಮ ಮಹಾಭಾರತ, ರಾಮಾಯಣ ಇತ್ಯಾದಿ ಮಹಾನ್‌ ಕೃತಿಗಳಂತೆಯೇ ಶೇಕ್ಸ್‌ಪಿಯರ್‌ನ ನಾಟಕಗಳಾಗಲಿ, ಟಾಲ್ಸ್‌ ಟಾಯ್, ಮಾರ್ಕೆಜ್ ಮುಂತಾದವರ ಕೃತಿಗಳಾಗಲಿ ಪ್ರಪಂಚದ ಹಲವಾರು ಪ್ರತಿಭಾನ್ವಿತರಿಗೆ ಪ್ರೇರಣೆ ಒದಗಿಸಿದೆ.

ಹೀಗೆ ಮಾಡುವ ಪ್ರತಿ ಸಂದರ್ಭದಲ್ಲಿ ಅವನದು ಪರೀಕ್ಷಾ ದೃಷ್ಟಿಕೋನದಿಂದ ತನ್ನಿಂದ ಬೇರೆಯೇ ವ್ಯಕ್ತಿಯಾಗಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಉಂಟಾಗುತ್ತದೆ. ಏಕಾಂತ ಕ್ಷಣಗಳಲ್ಲಿ ತಾನು ರೂಢಿಸಿಕೊಳ್ಳಬೇಕಾದ ದ್ವಂದ್ವ ವ್ಯಕ್ತಿತ್ವ ಉಂಟುಮಾಡುವ ತಳಮಳ, ಹಿಂಸೆ ಕೆಲವೊಮ್ಮೆ ದಿಢೀರನೆ ಗೋಚರಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಗ್ಯಾಂಗ್ ಲೀಡರ್‌ ಕಾಸ್ಟಿಲೋ‌ನದು ವಿಶೇಷ. ಯೋಜನೆಗೆ ತೆಗೆದುಕೊಂಡ ಕೆಲಸವೇನಾದರೂ ಸರಿಯೆ ಯಾವಾಗಲೂ ಸ್ವಚ್ಛಂದ ಲಹರಿಯ ಮನೋನೆಲೆ.

ಇದು ಒಂದು ಬಗೆಯಾದರೆ ಕಾಲಿನ್ ಸಲ್ಲಿವನ್(ಮ್ಯಾಟ್‌ ಡಾಮನ್) ಎಂಬ ಯುವ ಕ್ರಿಮಿನಲ್ ಪೊಲೀಸ್ ಇಲಾಖೆಯ ಒಳಗೆ ನುಸುಳಿಕೊಂಡು ಅಲ್ಲಿನ ಎಲ್ಲ ವಿದ್ಯಮಾನಗಳನ್ನು ಗ್ಯಾಂಗ್‌ ಲೀಡರ್‌ ಗೆ ರವಾನಿಸುವ ಕೆಲಸ ನಿರ್ವಹಿಸಬೇಕಾಗಿರುತ್ತದೆ. ಇದು ಕಥನದ ಪ್ರಾರಂಭಿಕ ಭಾಗವಾದರೆ ಚಿತ್ರ ಮುಂದುವರಿದಂತೆ ಅವರು ಕ್ರಮವಾಗಿ ತಮ್ಮ ತಮ್ಮ ನಿಯೋಜಿತ ಕೆಲಸಗಳಲ್ಲಿ ಮಾಡುವ ಕ್ರಿಯೆ ಮುಖ್ಯವಾದದ್ದು. ಇದರಲ್ಲಿ ನಿರತರಾದಾಗ ಬಿಲ್ಲಿ ಕಾಸ್ಟಿಗನ್‌ ಮತ್ತು ಕಾಲಿನ್‌ ಸಲ್ಲಿವನ್‌ ಅವರುಗಳ ಅಂತರಂಗದಲ್ಲಿ ಸಂಭವಿಸುವ ಸಂಘರ್ಷದ ಪದರುಗಳನ್ನು ಪ್ರಕಟಿಸುವುದೇ ನಿರ್ದೇಶಕನ ಉದ್ದೇಶ. ಚಿತ್ರದಲ್ಲಿ ಇಂಥದನ್ನು ಪ್ರಕಟಿಸುವ ಏಕಾಂತ ಕ್ಷಣಗಳಲ್ಲಿ ಪಾತ್ರಗಳ ಅಭಿನಯ ಪರಿಣಾಮ ಬೀರುತ್ತದೆ. ಅವರಿಬ್ಬರಿಗೂ ತಮ್ಮ ತಮ್ಮ ಕೆಲಸಗಳಲ್ಲಿ ತಾವು ಮುಖವಾಡ ಧರಿಸಿ ವರ್ತಿಸುತ್ತಿದ್ದೇವೆ ಎಂಬುದರ ಅರಿವಿರುತ್ತದೆ. ಅವರಿಬ್ಬರೂ ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವುದರಿಂದ ಎರಡೂ ಕಡೆಯವರಿಗೆ ಉದ್ದೇಶಿತ ಕಾರ್ಯಕ್ರಮಗಳು ಕೈಗೂಡುವುದಿಲ್ಲ. ಹೀಗೆ ಮುಂದುವರಿಯುವ ಪ್ರಕ್ರಿಯೆಯಲ್ಲಿಯೇ ಗ್ಯಾಂಗ್ಸ್ಟರ್ ಮುಖ್ಯಸ್ಥ ಕಾಸ್ಟಿಲೋಗೆ ಮತ್ತು ಪೊಲೀಸ್ ಕ್ಯಾಪ್ಟನ್‌ ಕ್ವೀನನ್‌ ತಮ್ಮ ಯೋಜನೆಗಳೆಲ್ಲ ಮಣ್ಣುಗೂಡುತ್ತಿರುವುದರ ಚಿಂತೆ ಉಂಟಾಗುತ್ತದೆ. ಸಹಜವಾಗಿಯೇ ಅದಕ್ಕೆ ಕಾರಣಗಳನ್ನು ಹುಡುಕುವುದರಲ್ಲಿ ತೊಡಗುತ್ತಾರೆ.

ತಮ್ಮ ತಮ್ಮ ರೀತಿಯಲ್ಲಿ ಮುಂದುವರೆಯುತ್ತಿರುವ ಬಿಲ್ಲಿ ಕಾಸ್ಟಿಗನ್ ಹಾಗೂ‌ ಕಾಲಿನ್ ಸುಲ್ಲಿವನ್ ಇಬ್ಬರಿಗೂ ತಾವು ಮಾಡುತ್ತಿರುವ ಸದ್ಯದ ಕೆಲಸದ ಕಾರಣ ಒಂದಿಲ್ಲೊಂದು ದಿನ ವಿಪರೀತ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎನ್ನುವುದರ ಅರಿವಿರುತ್ತದೆ. ಬಿಲ್ಲಿ ಕಾಸ್ಟಿಗನ್‌ಗೆ ತನ್ನ ಇಲಾಖೆಗೆ ನಿಷ್ಠನಾಗಿರುವುದು ಸಮಾಧಾನಕರವಾಗಿದ್ದರೂ ಫ್ರಾಂಕ್‌ ಕ್ಯಾಸ್ಟಿಲೋನ ತನ್ನಲ್ಲಿಟ್ಟ ವಿಶ್ವಾಸಕ್ಕೆ ದ್ರೋಹ ಬಗೆಯುತ್ತಿರುವುದರ ಕಾರಣ ಅಪರಾಧಿ ಪ್ರಜ್ಞೆ ಕಾಡಿದರೆ ಕಾಲಿನ್‌ ಸಲ್ಲಿವನ್‌ಗೆ ಕ್ಯಾಸ್ಟಿಲೋನಾನಿಗೆ ನಿಷ್ಠನಾಗಿದ್ದರೂ ವಿಶ್ವಾಸವಿಟ್ಟ ಇಡೀ ಪೋಲೀಸ್‌ ಇಲಾಖೆಗೆ ದ್ರೋಹ ಬಗೆಯುತ್ತಿರುವ ಅಪರಾಧಿ ಪ್ರಜ್ಙೆ ಕಾಡುತ್ತದೆ. ಈ ವಿಷಯಗಳು ಅವರ ಮನಸ್ಸಿನಲ್ಲಿ ಮೂಡಿದಾಗ ಸಹಜವಾಗಿಯೇ ಮಾನಸಿಕ ಹಿಂಸೆಗೆ ಗುರಿಯಾಗುತ್ತಾರೆ. ʻದ ಡಿಪಾರ್ಟೆಡ್‌ʼ ನಲ್ಲಿ ʻಇನ್ಫೆರ್ನಲ್ ಅಫೇರ್ʼ ಚಿತ್ರದಲ್ಲಿ ಇಲ್ಲದಿರುವ ಪಾತ್ರವೊಂದನ್ನು ನಿರ್ದೇಶಕ ಸೃಷ್ಟಿ ಮಾಡಿದ್ದಾರೆ.

ಅದೆಂದರೆ ಪೊಲೀಸ್ ಇಲಾಖೆಯಲ್ಲಿ ಮೆಡೊಲಿನ್‌ (ವೆರಾ ಫಾರ್ಮಿಗಾ) ಎಂಬ ಸೈಕಾಲಜಿಸ್ಟ್ ಪಾತ್ರ. ಅವಳಿಗೆ ಕಾಲಿನ್ ಸಲ್ಲಿವನ್ ಮತ್ತು ಬಿಲ್ಲಿ ಕ್ಯಾಸ್ಟಿಗನ್‌ನ್ ಇಬ್ಬರ ಪರಿಚಯವಿರುತ್ತದೆ. ಅಲ್ಲದೆ ಅವರ ಕಾರ್ಯದ ಆಳಗಲ ವರ್ತನೆಗಳ ವಿಸ್ತಾರ ಮುಂತಾದವುಗಳನ್ನು ಅರಿತಿರುತ್ತಾಳೆ. ಹೀಗಾಗಿ ಅವಳ ಮಾನಸಿಕ ಪರಿಸ್ಥಿತಿ ಇವರಿಬ್ಬರಿಗಿಂತಲೂ ಹೆಚ್ಚು ತಳಮಳ ಮತ್ತು ಗೊಂದಲದಿಂದ ಕೂಡಿದ್ದು. ತಾನು ಕೆಲಸ ಮಾಡುತ್ತಿರುವ ಪೊಲೀಸ್‌ ಇಲಾಖೆಯ ಕೆಲಸಕ್ಕಿಂತ ತಾನಿರಿಸಿಕೊಂಡಿರುವ ಅವರಿಬ್ಬರ ಜೊತೆ ಸ್ನೇಹ, ಸಂಬಂಧಗಳ ಬಗ್ಗೆ ಹೆಚ್ಚಿನ ನಿಷ್ಠೆ ಇರುತ್ತದೆ. ತನ್ನಲ್ಲಿ ವಿಶ್ವಾಸವಿಟ್ಟ ಅವರಿಬ್ಬರ ವಿಷಯಗಳನ್ನು ಪರಸ್ಪರ ಅರಿವಿಗೆ ಬಾರದಂತೆ ಗೌಪ್ಯವಾಗಿರಿಸಿಕೊಂಡಿರುತ್ತಾಳೆ. ಹಾಗೆಯೇ ಇನ್ನೊಂದು ಮಗ್ಗುಲಲ್ಲಿ ತಾನು ಮಾಡಬೇಕಾದ ಕೆಲಸ ಮತ್ತು ಮಾಡುತ್ತಿರುವ ವಿಧಾನ ಇವುಗಳಲ್ಲಿರುವ ಕಂದಕವನ್ನು ಅರಿತಿರುತ್ತಾಳೆ. ಹೀಗಾಗಿ ಸದಾ ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡವಳಂತೆ ಕಾಣಿಸುತ್ತ, ಯುಕ್ತ ಮಾರ್ಗದಲ್ಲಿ ನಿರ್ವಹಿಸಲು ಸಾಧ್ಯ ಆಗದಿರುವುದರ ಸಮಸ್ಯೆ ಅವಳನ್ನು ಕಾಡುತ್ತದೆ.

ಇಂಥ ಪರಿಸ್ಥಿತಿಯಲ್ಲಿರುವ ಅವಳಿಗೆ ಸುಲಭದ ಮಾರ್ಗವಿಲ್ಲ. ಹಾಗೆಯೇ ಅದನ್ನು ಹುಟ್ಟು ಹಾಕಿಕೊಂಡಿರುವ ರೀತಿಯಿಂದ ಅವಳಿಗೆ ಬಿಡುಗಡೆಯಿಲ್ಲ. ಇವೆಲ್ಲದರ ನಡುವೆ ಅವಳು ಗರ್ಭವತಿಯಾಗಿರುತ್ತಾಳೆ ಕೂಡ. ಅವಳು ಈ ವಿಷಯವನ್ನು ಪ್ರಿಯಕರನೊಂದಿಗೆ ಚರ್ಚಿಸುತ್ತ, ಎಕ್ಸ್‌ ರೇ ತೋರಿಸಿ ಗಂಡು ಮಗುವೆಂದು ಗೆಲುವಿನಿಂದ ತಿಳಿಸುತ್ತಾಳೆ. ಹೀಗೆ ಚಿತ್ರದಲ್ಲಿ ಮನುಷ್ಯ ಪ್ರಕೃತಿಯ ವಿವಿಧ ಬಗೆಗಳನ್ನು, ಅವರಿರುವ ಸ್ಥಿತಿಗೆ ಅನುಸಾರವಾಗಿ ನಿರ್ವಹಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಸ್ಥಿತಿಯನ್ನು ತೆರೆದಿಡುತ್ತದೆ.

ಚಿತ್ರದಲ್ಲಿ ಕಾಸ್ಟಿಲೋನ ವ್ಯವಸ್ಥಿಸುವ ದೌರ್ಜನ್ಯ, ಲೂಟಿ, ಕೊಲೆ, ಹೊಡೆದಾಟ, ಒಬ್ಬರನ್ನು ಮತ್ತೊಬ್ಬರು ಅಟ್ಟಿಸಿಕೊಂಡು ಹೋಗುವುದಾಗಲಿ, ಮರೆಯಲ್ಲಿ ನಿಂತು ಗುಂಡಿನ ಮಳೆ ಸುರಿಸುವುದಾಗಲಿ, ಸಾರ್ವಜನಿಕರ ಆಕ್ರಂದನ ಇತ್ಯಾದಿ ಮುಂತಾದವುಗಳು ವಿರಳ. ಅದರಂತೆಯೇ ಪೊಲೀಸ್‌ ಇಲಾಖೆಯವರದೂ ಕೂಡ. ಅವೆಲ್ಲವೂ ತೆರೆಯ ಹಿಂದೆ ನಡೆಯುತ್ತಿವೆ ಎಂದು ಭಾವಿಸಬೇಕಾದ ಅಗತ್ಯವನ್ನು ಕಾಣುತ್ತೇವೆ. ಅಲ್ಲದೆ ಪೊಲೀಸ್‌ ಇಲಾಖೆಯಲ್ಲಾಗಲಿ, ಗ್ಯಾಂಗ್ ಸ್ಟರ್ ಗುಂಪಿನೊಳಗಾಗಲಿ ಚರ್ಚೆಯಾಗುವುದು ಕಡಿಮೆ. ಆದರೆ ತಮ್ಮ ಯೋಜಿತ ಕಾರ್ಯಕ್ರಮಗಳು ಅಲ್ಲಲ್ಲಿಯೇ ನಶಿಸಿಹೋಗುವುದು ಹೆಚ್ಚಾದಾಗ ಆ ಬಗ್ಗೆ ಪರಿಶೋಧನೆ ಎನ್ನುವ ರೀತಿಯಲ್ಲಿ ಕ್ರಮಗಳು ಜರುಗುತ್ತವೆ. ಆಗಲೇ ಪೊಲೀಸ್‌ ಇಲಾಖೆಯ ಪ್ರಮುಖರಿಗೆ ಮತ್ತು ಗ್ಯಾಂಗ್‌ ಲೀಡರ್‌ ಕ್ಯಾಸ್ಟಿಲೋಗೆ ತಮ್ಮಲ್ಲಿಯೇ ಒಬ್ಬ ತಮ್ಮ ವಿರುದ್ಧವಾಗಿ ಕೆಲಸ ಮಾಡುತ್ತಿರುವುದಾಗಿ ಮತ್ತು ತಮ್ಮ ಗುಟ್ಟುಗಳು ಎದುರು ಕಡೆಯವರಿಗೆ ತಲುಪುತ್ತಿದೆ ಎಂಬ ಗುಮಾನಿ ಎರಡೂ ಕಡೆಯವರಿಗೆ ಪ್ರಬಲವಾಗುತ್ತದೆ.

ಒಟ್ಟಾರೆ ಸಂದರ್ಭ ಈ ತಿರುವು ತೆಗೆದುಕೊಂಡ ತರುವಾಯ ಅಲ್ಲಿಯ ತನಕ ಮುಖವಾಡಗಳನ್ನು ಧರಿಸಿದ ಬಿಲ್ಲಿ ಕಾಸ್ಟಿಗನ್‌ ಮತ್ತು ಕಾಲಿನ್‌ ಸಲ್ಲಿವನ್‌ ಬೇರೆ ದಾರಿಯಿಲ್ಲದೆ ಅವುಗಳನ್ನು ಕಳಚಲೇ ಬೇಕಾಗುತ್ತದೆ. ಚಿತ್ರದ ಮೊದಲ ಭಾಗದಲ್ಲಿದ್ದಂತೆಯೇ ಅಂತಿಮ ಭಾಗದಲ್ಲಿ ತ್ವರಿತ ಗತಿಯಲ್ಲಿ ಘಟನೆಗಳು ಜರುಗುತ್ತವೆ. ಎರಡೂ ಕಡೆಯಲ್ಲಿ ಅನುಮಾನಕ್ಕೆ ಪ್ರಧಾನ ಪಟ್ಟ. ಇವೆಲ್ಲವು ಕೂಡಿ ನಮ್ಮ ನಿರೀಕ್ಷೆಗೆ ತಕ್ಕಂತೆ ಒಬ್ಬೊಬ್ಬರೇ ಹತರಾಗುತ್ತಾರೆ. ಈ ಸಾಲಿನಲ್ಲಿ ಕ್ಯಾಪ್ಟನ್ ಕ್ವಿನನ್‌ ಮೊದಲು ಹತನಾಗುವುದು ಕೊಂಚ ಅನಿರೀಕ್ಷಿತವೆನಿಸುತ್ತದೆ. ಇವೆಲ್ಲವುಗಳ ನಡುವೆ ಉಳಿದುಕೊಳ್ಳುವುದೆಂದರೆ ಎರಡೂ ಕಡೆಯವರ ಗುಟ್ಟನ್ನು ಅರಿತಿದ್ದ ಮೆಡೊಲಿನ್‌ ಮಾತ್ರ.

ಚಿತ್ರದ ಆಶಯವನ್ನು ಪೂರೈಸುವುದರಲ್ಲಿ ನಿರ್ದೇಶಕ ಹಾಗೂ ನಟವರ್ಗದವರು ಶ್ರಮಿಸಿದ್ದಾರೆ.. ಅವರಷ್ಟೇ ಚಿತ್ರದ ಯಶಸ್ಸಿಗೆ ಛಾಯಗ್ರಾಹಕ (ಮ್ಯಖೇಲ್‌ ಬಲ್ಲಾಸ್) ಮತ್ತು ಸಂಕಲನಕಾರ(ಥೆಲ್ಮಾ ಮತ್ತು ಸ್ಕೂನ್‌ ಮೇಕರ್) ತಮ್ಮ ಕೊಡುಗೆಯನ್ನು ಕೊಟ್ಟಿರುವುದನ್ನು ಮೆಚ್ಚಲೇಬೇಕು.