ಕಲೆ ಎಂಬುದು ನಿಸರ್ಗದ ಒಂದು ಅನುಪಮ ಅಭಿವ್ಯಕ್ತಿ. ಕಲೆಯ ಚಂದ್ರಚಾಪದ ಮುಖ್ಯ ಬಣ್ಣವೆಂದರೆ ಅದು ಸಾಹಿತ್ಯ. ಇದು ಓದು-ಬರಹಗಳ ಮಧುಚಂದ್ರ!! ಬರವಣಿಗೆ ಎನ್ನುವುದು ಖಾಲಿ ಹಾಳೆಯ ಮೇಲೆ ಬಿಡಿಸಿರುವ ಸುಂದರ ರಂಗೋಲಿ. ಆ ರಂಗೋಲಿಯೋ ಅನನ್ಯ ಭಾವನೆಗಳ ಕಾರವಾನ್. ಆ ಕಾರವಾನ್ ನ ಪ್ರವೇಶಿಸಿ ಓದುವುದೆಂದರೆ ಅದೊಂದು ರೀತಿಯ ಮಾಗಿದ ಕಾಯುವಿಕೆ. ಈ ಕಾಯುವಿಕೆ, ಕನವರಿಕೆ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಸದಾ ಚಲಿಸುತ್ತಿರುತ್ತದೆ, ಚಲಿಸುತ್ತಿರಬೇಕು.
ಶ್ರೀದೇವಿ ಕೆರೆಮನೆಯವರ ಗಝಲ್‌ ವಿಶ್ಲೇಷಣೆಗಳ ಸಂಕಲನ “ತೀರದ ಧ್ಯಾನ” ಕೃತಿಗೆ ಡಾ. ಮಲ್ಲಿನಾಥ ಶಿ. ತಳವಾರ ಅವರು ಬರೆದ ಮುನ್ನುಡಿ

“ಇಳಿ ಹೊತ್ತಿನಲ್ಲಿ ನಾನು ಖಾಲಿ ಕೈಲಿ ಮನೆಗೆ ಹೋಗುತ್ತೇನೆ
ಮಕ್ಕಳ ಮುಗ್ಧ ನಗು ನೋಡಿ ನಾನು ಸತ್ತು ಹೋಗುತ್ತೇನೆ”
-ರಾಜೇಶ್ ರೆಡ್ಡಿ

ಮೂಗನಾಗಿದ್ದ ಮಾನವನು ತನ್ನ ಅವಿರತ ಪ್ರಯತ್ನದಿಂದ ಮಾತಾಡುವುದನ್ನು ಕಲಿತ ನಂತರ ಅದೆಷ್ಟೋ ಸಂವತ್ಸರಗಳ ತರುವಾಯ ಬರೆಯುವುದನ್ನು ರೂಢಿಸಿಕೊಂಡ. ಆ ಬರಹವೆ ಸಾಹಿತ್ಯದ ಸಸಿ ನೆಡಲು ಕಾರಣವಾಯಿತು. ತನ್ನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು, ಇನ್ನಿತರರ ಭಾವದಲೆಗಳಲ್ಲಿ ಮಿಂದೇಳಲು ಸಾಧನವಾಯಿತು. ಸಾಹಿತ್ಯದ ಹರವು ವಿಶಾಲವಾದಾಗ ನಮ್ಮ ಅನುಕೂಲಕ್ಕಾಗಿ ವಿಷಯ, ರೂಪ, ಲಕ್ಷಣ… ಮುಂತಾದವುಗಳ ಆಧಾರದ ಮೇಲೆ ಅದರಲ್ಲಿ ಹಲವು ಪ್ರಕಾರಗಳನ್ನು ಮಾಡಿಕೊಂಡಿರುವುದು ಇವಾಗ ಒಂದು ಇತಿಹಾಸ!! ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿರುವ, ಬರುತ್ತಿರುವ ಸಾಹಿತ್ಯದ ರೂಪವೆಂದರೆ ಅದೂ ‘ಅಂಕಣ ಬರಹ’. ಇದೊಂದು ವಿಶಿಷ್ಟ ಬಗೆಯ ಪತ್ರಿಕಾ ಸಾಹಿತ್ಯವಾಗಿದ್ದು ಜನಮಾನಸವನ್ನು ಸೂರೆಗೊಂಡಿದೆ. ಯಾವುದಾದರು ಒಂದು ಪತ್ರಿಕೆಯಲ್ಲಿ ನಿಯತವಾಗಿ ಬರೆಯುವ ನಿರ್ದಿಷ್ಟ ಲೇಖನವೆ “ಅಂಕಣ ಬರಹ”. ಕನ್ನಡದಲ್ಲಿ ಅಂಕಣ ಹಾಗೂ ಅಂಕಣ ಸಾಹಿತ್ಯದ ಪರಿಕಲ್ಪನೆ ಮೂಡಿದ್ದು ಪಾಶ್ಚಾತ್ಯ ಪತ್ರಿಕೋದ್ಯಮದಿಂದ. ಆಂಗ್ಲ ಭಾಷೆಯ ‘ಕಾಲಂ’ ಎಂಬ ಪದ ಹಾಗೂ ಪರಿಕಲ್ಪನೆಗೆ ಸಂವಾದಿಯಾಗಿ ನಮ್ಮ ಕನ್ನಡದಲ್ಲಿ ‘ಅಂಕಣ’ ಎಂಬ ಪದ ಬಳಕೆಯಾಗುತ್ತಿದೆ. ಯಾವುದೇ ಒಂದು ವಿಷಯವನ್ನು ಕುರಿತು ಒಂದು ನಿರ್ದಿಷ್ಟ ಪತ್ರಿಕೆ, ನಿಯತಕಾಲಿಕೆ, ವೆಬ್ ಪೇಜ್, ಆನ್ಲೈನ್ ಪತ್ರಿಕೆಗಳಿಗೆ ಔಚಿತ್ಯಪೂರ್ಣ ತಮ್ಮ ವೈಯಕ್ತಿಕ ಚಿಂತನೆಯನ್ನು ಸೇರಿಸಿ ನಿಯತವಾಗಿ, ನಿರಂತರವಾಗಿ ಬರೆಯುವವರೆ ಅಂಕಣಕಾರರು. ಈ ಅಂಕಣ ಬರಹಗಳು ಸಹೃದಯ ಓದುಗರಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸುತ್ತಿವೆ!!

(ಶ್ರೀದೇವಿ ಕೆರೆಮನೆ)

ಅರ್ವಾಚೀನ ಕನ್ನಡ ಸಾರಸ್ವತ ಲೋಕದ ಆರಂಭಿಕ ಹೆಜ್ಜೆ ಗುರುತುಗಳನ್ನು ಅವಲೋಕಿಸಿದಾಗ ಅವುಗಳ ಮೇಲೆ ಪಾಶ್ಚಾತ್ಯ ಸಾಹಿತ್ಯ, ಸಂಸ್ಕೃತಿಯ ದಟ್ಟವಾದ ಪ್ರಭಾವವನ್ನು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಸಾಹಿತ್ಯದ ಇತಿಹಾಸವನ್ನೊಮ್ಮೆ ಗಮನಿಸಿದಾಗ ಅಲ್ಲಿ ಅಂಕಣ ಬರಹಕ್ಕೆ ಒಂದು ಸುದೀರ್ಘವಾದ ಪರಂಪರೆಯೇ ಇದೆ. ಬೆಂಜಮಿನ್ ಜೇಮ್ಸ್, ಜಾನ್ ಡಿಕಿನ್‍ಸನ್ಸ್ ಪೆನ್ಸಿಲ್‌ವೆನಿಯ ಕ್ರಾನಿಕಲ್, ಅಲೆಕ್ಸಾಂಡರ್ ಹ್ಯಾಮಿಲ್ಟನ್, ಜೆಮ್ಸ್ ಮ್ಯಾಡಿಸನ್, ಜಾನ್ ಡೇ… ಮೊದಲಾದ ಚಿಂತಕರು, ಲೇಖಕರು ಅಂಕಣ ಸಾಹಿತ್ಯದಲ್ಲಿ ತಮ್ಮದೆಯಾದ ಒಂದು ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಸಹೃದಯ ಓದುಗರು ಪತ್ರಿಕಾ ಸಂಪಾದಕೀಯದ ಜೊತೆಗೆ ಅಂಕಣ ಬರಹಗಳನ್ನೂ ಬಯಸುತ್ತಿದ್ದರು. ಕಾರಣ, ಕೆಲವೊಮ್ಮೆ ಅಂಕಣ ಬರಹಗಳು ಜನಸಾಮಾನ್ಯರ ಅಭಿಪ್ರಾಯಗಳಿಗೆ ಧ್ವನಿಯಾಗಿರುತ್ತಿದ್ದವು, ಜೊತೆಗೆ ಅವರ ಸಂಘಟನೆಗೆ ಸಾಧನವಾಗುತ್ತಿದ್ದವು. ಹೀಗೆ ಬೆಳೆದ ಅಂಕಣ ಬರಹ ಪತ್ರಿಕೋದ್ಯಮದಲ್ಲಿ ಒಂದು ಚಿರಸ್ಥಾನವನ್ನು ಪಡೆಯಿತಲ್ಲದೆ ಅದಕ್ಕೆ ಒಂದು ಪರಂಪರೆಯೂ ಸೃಷ್ಟಿಯಾಯಿತು. ಅದರ ಪ್ರಭಾವ, ಪ್ರೇರಣೆಯಿಂದ ಕನ್ನಡದಲ್ಲಿಯೂ ‘ಅಂಕಣ ಬರಹಗಳು’ ಆರಂಭವಾದವು.

ಸ್ವದೇಶಾಭಿಮಾನಿ, ಅಂತರಂಗ, ದೇಶಬಂಧು, ಛಾಯಾ, ಪ್ರಜಾಮತ, ಪ್ರಜಾವಾಣಿ, ಕನ್ನಡ ಪ್ರಭ, ಕರ್ಮವೀರ, ವಿಶ್ವಕರ್ನಾಟಕ, ಪ್ರಪಂಚ… ಮುಂತಾದ ಪತ್ರಿಕೆಗಳು ಅಂಕಣ ಬರಹಗಳಿಗೆ ವೇದಿಕೆಯನ್ನು ನೀಡಿದವಲ್ಲದೆ ಅಂಕಣ ಬರಹಕ್ಕೆ ಒಂದು ವಿನೂತನ ಆಯಾಮವನ್ನೂ ಕೊಟ್ಟವು. ಸಿದ್ಧವನಹಳ್ಳಿ ಕೃಷ್ಣಶರ್ಮ, ನಿರಂಜನ, ಎಚ್ಚೆಸ್ಕೆ, ಹಾ.ಮಾ. ನಾಯಕ, ಕು.ಶಿ. ಹರಿದಾಸಭಟ್ಟ, ಪಾ.ವೆಂ. ಆಚಾರ್ಯ, ತಿ.ತಾ. ಶರ್ಮ, ಎನ್ಕೆ, ಎಂ.ವಿ. ಕಾಮತ್, ಕಲ್ಲೆ ಶಿವೋತ್ತಮರಾವ್, ಕೀರ್ತಿನಾಥ ಕುರ್ತಕೋಟಿ, ಟಿ.ಎಸ್. ರಾಮ ಚಂದ್ರರಾವ್, ಬಿ.ವಿ. ವೈಕುಂಠರಾಜು, ಪಿ. ಲಂಕೇಶ್, ವೈಎನ್ಕೆ, ಜಿ. ವೆಂಕಟಸುಬ್ಬಯ್ಯ, ಸಿ.ವಿ. ರಾಜಗೋಪಾಲ ಬಿ.ಎ. ವಿವೇಕ ರೈ, ಎಸ್.ಎನ್. ಹೆಗಡೆ, ಸೋಮಶೇಖರ ಇಮ್ರಾಪುರ, ಲಿಂಗದೇವರು ಹಳೆಮನೆ… ಮೊದಲಾದವರ ಅಂಕಣ ಬರಹಗಳು ವಿಶಿಷ್ಟವಾಗಿದ್ದು, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿವೆ.

ಅಂಕಣ ಬರಹದ ಒಂದು ವೈಶಿಷ್ಟ್ಯವೆಂದರೆ ಸಾಮಾನ್ಯ ಓದುಗರಿಂದ ಹಿಡಿದು ವಿದ್ವಾಂಸರ ತನಕ ಎಲ್ಲರನ್ನೂ ಆಕರ್ಷಿಸುವ ಗುಣ. ಸಹೃದಯ ಓದುಗರಲ್ಲಿ ಸಾಹಿತ್ಯ ಅಭಿರುಚಿ ಮೂಡಿಸುವ ಕಾರ್ಯವನ್ನು ಅಂಕಣ ಬರಹಗಳು ಸದ್ದಿಲ್ಲದೆ ಮಾಡುತ್ತಿವೆ. ಅಂಕಣ ಬರೆಹಗಳು ಆತ್ಮಕೇಂದ್ರಿತವೆ, ಸಮಾಜ ಸಾಹಿತ್ಯ ಸಂಸ್ಕೃತಿ ಕೇಂದ್ರಿತವೆ ಎಂಬ ಜಿಜ್ಞಾಸೆಯೂ ನಮ್ಮ ಮಧ್ಯೆ ಇದೆ. ಸಾಮಾನ್ಯವಾಗಿ ಅಂಕಣ ಬರಹದಲ್ಲಿ ಲೇಖಕರಿಂದ ಬಳಸಲ್ಪಡುವ ‘ನಾನು’ ಎಂಬ ಪ್ರತ್ಯಯವು ಆತ್ಮಕೇಂದ್ರಿತ ಅಥವಾ ಅಹಮಿಕೆಯನ್ನು ಸೂಚಿಸುವ ಪದವಾಗಿ ಉಳಿಯದೆ ಬರಹಕ್ಕೆ ಸಂವಾದ ಸ್ವರೂಪವನ್ನು ನೀಡುತ್ತ ಜನಮಾನಸದಲ್ಲಿ ಬೇರೂರುವಂತೆ ಮಾಡುತ್ತದೆ. “ಅಂಕಣ ಬರಹಕ್ಕೆ ಸಮಕಾಲೀನ ಸಮಾಜದ ಯಾವ ಮುಖವಾದರೂ ವಸ್ತುವಾಗಬಹುದು” ಎಂಬ ಪ್ರಸಿದ್ಧ ಅಂಕಣಕಾರರಾದ ಹಾ.ಮಾ. ನಾಯಕ ಅವರ ಅಭಿಪ್ರಾಯ ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕನ್ನಡದಲ್ಲಿ ಹೆಚ್ಚು ನಿಯತಕಾಲಿಕೆಗಳಿಗೆ ದೀರ್ಘ ಕಾಲ ಸಾಹಿತ್ಯಕ ಅಂಕಣ ಬರೆದವರಲ್ಲಿ ಹಾ.ಮಾ. ನಾಯಕ ಮತ್ತು ಎಚ್ಚೆಸ್ಕೆ ಅವರು ಪ್ರಮುಖರು. ಎಚ್ಚೆಸ್ಕೆ ಅವರ ಅಂಕಣ ಬರಹ ಸಾಹಿತ್ಯಕ್ಕಷ್ಟೇ ಸೀಮಿತವಾಗಿರದೆ ಆರ್ಥಿಕ ವಿಚಾರ, ವ್ಯಕ್ತಿ ವಿಷಯ, ರಾಜಕೀಯ ಮುಂತಾದ ವಿಷಯಗಳತ್ತವೂ ವಾಲುತಿತ್ತು. ಎಚ್ಚೆಸ್ಕೆ ಅವರು ದೇಶಬಂಧು, ವಿಶ್ವಕರ್ನಾಟಕ, ಛಾಯಾ, ಕನ್ನಡನುಡಿ, ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಐದಾರು ದಶಕಗಳ ಕಾಲ ಅಂಕಣ ವ್ಯವಸಾಯದಲ್ಲಿ ನಿರತರಾಗಿ ಕೃಷಿ ಮಾಡಿದ್ದಾರೆ. ವಾರದಿಂದ ವಾರಕ್ಕೆ, ವಾರದ ವ್ಯಕ್ತಿ, ವ್ಯಕ್ತಿ, ವಿಷಯ, ಆರ್ಥಿಕ ನೋಟ, ದುರ್ಬೀನು ತರಂಗ…. ಮುಂತಾದವುಗಳು ಇವರ ಅಂಕಣ ಶೀರ್ಷಿಕೆಗಳು ಹೆಚ್ಚಿನ ಖ್ಯಾತಿಯನ್ನು ಗಳಿಸಿವೆ. ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನೇ ಅಂಕಣದ ಧ್ಯೇಯ ಹಾಗೂ ಮೂಲವಸ್ತುವನ್ನಾಗಿಸಿಕೊಂಡು ಬಹು ಕಾಲ ಅಂಕಣ ಕೃಷಿಯನ್ನು ಹಾ.ಮಾ. ನಾಯಕರವರು ಮಾಡಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಅಂಕಣವೂ ಒಂದು ಸಾಹಿತ್ಯ ಪ್ರಕಾರ ಎಂದು ಸಾಧಿಸಿ ಅದಕ್ಕೊಂದು ಅನನ್ಯ ಸಿದ್ಧಿಯನ್ನು ದೊರಕಿಸಿಕೊಟ್ಟರು.

ಇವರು 1951ರಲ್ಲಿ ‘ನಂದಿನಿ’ ಎಂಬ ಪತ್ರಿಕೆಗೆ ‘ಪೂರ್ಣಿಮೆಗೆ ಪತ್ರಗಳು’ ಎಂಬ ಶೀರ್ಷಿಕೆಯಲ್ಲಿ ಅಂಕಣ ಬರಹವನ್ನು ಆರಂಭಿಸಿದರು. ಅನಂತರ ‘ನಾ ಕಂಡ ಸಾಹಿತಿಗಳು’ ಎಂಬ ಅಂಕಣವನ್ನು ಬರೆದರು. ‘ಕನ್ನಡ ಪ್ರಭ’ದಲ್ಲಿ 1967 ರಿಂದ ‘ಸಾಹಿತ್ಯ ಸಲ್ಲಾಪ’ ಎಂಬ ಅಂಕಣ ಬರೆಯಲಾರಂಭಿಸಿದರು. ಅನಂತರದಲ್ಲಿ ಇವರಿಂದ ಹತ್ತು ಹಲವಾರು ಸಾಹಿತ್ಯಿಕ ಅಂಕಣಗಳು ಮೂಡಿ ಅಂಕಣ ಬರಹವನ್ನು ಶ್ರೀಮಂತಗೊಳಿಸಿವೆ. ಇವರು ಐದು ದಶಕಗಳ ಕಾಲ ನಿರಂತರವಾಗಿ ಒಂದಲ್ಲ ಒಂದು ಸಾಹಿತ್ಯಿಕ ಅಂಕಣವನ್ನು ಬರೆದಿದ್ದಾರೆ. ನಿರಂಜನರು ಆರಂಭಿಸಿದ ‘ಸಾಹಿತ್ಯಿಕ ಅಂಕಣ’ ಬರಹಗಳಿಗೆ ಸಾರ್ವಕಾಲಿಕತೆಯ ರೂಪಕೊಟ್ಟು ಅಂಕಣ ಬರಹವನ್ನು ಕೀರ್ತಿಶಿಖರಕ್ಕೆ ಏರಿಸಿ, ಅಂಕಣ ಬರಹಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನವನ್ನು ಕಲ್ಪಿಸಿಕೊಟ್ಟರು. ಈ ನೆಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಅಂಕಣಕಾರರೆಂಬ ಖ್ಯಾತಿಗೂ ಇವರು ಪಾತ್ರರಾಗಿದ್ದಾರೆ.

ಸಾಮಾನ್ಯವಾಗಿ ಹೆಚ್ಚಿನ ಅಂಕಣ ಬರಹಗಳು ಸಮಕಾಲೀನ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಕುರಿತಿರುತ್ತವೆ. ಇದರೊಂದಿಗೆ ವಿಜ್ಞಾನ, ಸಂಗೀತ, ಕಲೆ, ಶಿಕ್ಷಣ, ವೈದ್ಯಕೀಯ, ಕ್ರೀಡೆ ಮುಂತಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಣಗಳೂ ಲಭ್ಯ ಇವೆ. ಇತ್ತೀಚೆಗೆ ಸಾಹಿತ್ಯಿಕ ಪ್ರಸ್ತಾಪವುಳ್ಳ ಹಲವು ಅಂಕಣಗಳು ಕನ್ನಡದಲ್ಲಿ ಮೂಡಿಬರುತ್ತಿವೆ. ಇಂತಹ ಸಾಹಿತ್ಯ ವಿಚಾರ ಪ್ರಧಾನವಾದ ಅಂಕಣಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿ, ಕೃತಿ, ಸಾಹಿತ್ಯ ಪ್ರಕಾರಗಳು, ಸಂಸ್ಕೃತಿ, ಶಿಕ್ಷಣ, ವೈಚಾರಿಕತೆ ಹಾಗೂ ಕಲೆಗಳನ್ನು ಕುರಿತ ಚಿಂತನೆಯನ್ನು ಕಾಣುತ್ತೇವೆ. ಅವುಗಳೊಂದಿಗೆ ಲಘು ಹರಟೆಗಳೂ, ಹಾಸ್ಯ, ವಿಡಂಬನೆಗಳು ಅಂಕಣ ಬರಹದಲ್ಲಿ ಸ್ಥಾನಪಡೆದಿವೆ. ಅಂಕಣ ಬರಹವು ಕಲೆ ಮತ್ತು ಶಾಸ್ತ್ರೀಯ ಆಯಾಮವನ್ನು ಹೊಂದಿದ್ದು, ವಿವಿಧ ವಿಷಯಗಳ ಅಂತರ್ ಶಿಸ್ತೀಯ ಅಧ್ಯಯನವನ್ನು ಬಯಸುತ್ತದೆ. ಈ ಬಗೆಯ ಕನ್ನಡ ಅಂಕಣ ಬರಹಗಾರಲ್ಲಿ ನಿರಂಜನರೇ ಆದ್ಯರು. ಜಿ.ಪಿ.ರಾಜರತ್ನಂ ಅವರ ‘ವಿಚಾರ ಸರಣಿ’, ವಿ.ಎಂ.ಇನಾಂದಾರರ ‘ಸಾಹಿತ್ಯ ವಿಹಾರ,’ ಕು.ಶಿ. ಹರಿದಾಸಭಟ್ಟರ ‘ಲೋಕಾಭಿರಾಮ,’…. ಮುಂತಾದವುಗಳು ಪ್ರಮುಖ ಸಾಹಿತ್ಯಿಕ ಅಂಕಣಗಳಾಗಿದ್ದವು. ಅಂಕಣ ಬರಹಗಳು ಹೆಚ್ಚು ಓದುಗರ ವಲಯವನ್ನು ಸೃಷ್ಟಿಸಿಕೊಂಡ ನಂತರ ಅವುಗಳು ಕೃತಿರೂಪಗಳನ್ನೂ ಪಡೆಯಲಾರಂಭಿಸಿದವು.

ನಿರಂಜನರ ಅಂಕಣ (1972), ರಾಜಧಾನಿಯಿಂದ (1972) ಇಂಥ ಕೃತಿಗಳು ಪರಂಪರೆಗೆ ಮೂಲವಾಗಿ, ನಾಂದಿ ಹಾಡಿದವು. ಹಾಮಾನಾ ಅವರ ಸಾಹಿತ್ಯ ಸಲ್ಲಾಪ, ಸಂಪ್ರತಿ ಮುಂತಾದ ಹತ್ತೊಂಬತ್ತು ಅಂಕಣ ಗ್ರಂಥಗಳು, ಎಚ್ಚೆಸ್ಕೆ ಅವರ ಬೆಳಕು ಚೆಲ್ಲಿದ ಬದುಕು (1998), ಮಾನ್ಯರು-ಸಾಮಾನ್ಯರು (1999), ಗಗನಚುಕ್ಕಿ-ಭರಚುಕ್ಕಿ (2000), ಹೊನ್ನಾರು ಕಟ್ಟಿದವರು ಹೊನ್ನಬಿತ್ತಿಬೆಳೆದವರು (2004); ಕು.ಶಿ.ಹರಿದಾಸಭಟ್ಟರ ಲೋಕಾಭಿರಾಮ ಸಂಪುಟಗಳು…. ಹೆಸರಿಸಲೆಬೇಕಾದ ಪ್ರಮುಖ ಅಂಕಣ ಗ್ರಂಥಗಳು.

ಸಹೃದಯ ಓದುಗರು ಪತ್ರಿಕಾ ಸಂಪಾದಕೀಯದ ಜೊತೆಗೆ ಅಂಕಣ ಬರಹಗಳನ್ನೂ ಬಯಸುತ್ತಿದ್ದರು. ಕಾರಣ, ಕೆಲವೊಮ್ಮೆ ಅಂಕಣ ಬರಹಗಳು ಜನಸಾಮಾನ್ಯರ ಅಭಿಪ್ರಾಯಗಳಿಗೆ ಧ್ವನಿಯಾಗಿರುತ್ತಿದ್ದವು, ಜೊತೆಗೆ ಅವರ ಸಂಘಟನೆಗೆ ಸಾಧನವಾಗುತ್ತಿದ್ದವು. ಹೀಗೆ ಬೆಳೆದ ಅಂಕಣ ಬರಹ ಪತ್ರಿಕೋದ್ಯಮದಲ್ಲಿ ಒಂದು ಚಿರಸ್ಥಾನವನ್ನು ಪಡೆಯಿತಲ್ಲದೆ ಅದಕ್ಕೆ ಒಂದು ಪರಂಪರೆಯೂ ಸೃಷ್ಟಿಯಾಯಿತು.

ಇಂದು ಕನ್ನಡ ಅಂಕಣ ಸಾಹಿತ್ಯ ವೈವಿಧ್ಯಪೂರ್ಣವಾಗಿ ಬೆಳೆದಿದೆ. ಬೆಳೆಯುತ್ತಿದೆ. ಕೆಲವು ಪತ್ರಿಕೆಗಳು ನಿತ್ಯ ಅಂಕಣವನ್ನೂ ಪ್ರಕಟಿಸುತ್ತಿವೆ. ಇದು ಅಂಕಣ ಬರೆಹದ ಜನಪ್ರಿಯತೆಗೆ ಸಾಕ್ಷಿ. ಪ್ರಸ್ತುತ ಕನ್ನಡ ಪತ್ರಿಕೋದ್ಯಮದಲ್ಲಿ ಈಗ ಅಂಕಣ ಬರಹ ಇಲ್ಲದ ಒಂದೇ ಒಂದು ಪತ್ರಿಕೆಯೂ ಇಲ್ಲವೆಂದರೆ ಅತಿಶಯೋಕ್ತಿಯಾಗದು. ಈ ಪರಂಪರೆಯಲ್ಲಿ ಕಥೆಗಾರ್ತಿ, ಕವಯಿತ್ರಿ, ಗಜಲ್ ಗೋ, ಸಂಪನ್ಮೂಲ ವ್ಯಕ್ತಿ ಹಾಗೂ ಅಂಕಣ ಬರಹಗಾರರಾದ ಶ್ರೀಮತಿ ಶ್ರೀದೇವಿ ಕೆರೆಮನೆಯವರು ಹಲವು ಅಂಕಣ ಬರಹಗಳ ಕೃತಿಗಳನ್ನು ಪ್ರಕಟಿಸಿದ್ದು, ಪ್ರಸ್ತುತವಾಗಿ ಗಜಲ್ ಗಳ ವಿಶ್ಲೇಷಣೆ ಒಳಗೊಂಡ “ತೀರದ ಧ್ಯಾನ” ಕೃತಿಯೊಂದಿಗೆ ಮತ್ತೆ ಬರುತ್ತಿದ್ದಾರೆ.

ಕಲೆ ಎಂಬುದು ನಿಸರ್ಗದ ಒಂದು ಅನುಪಮ ಅಭಿವ್ಯಕ್ತಿ. ಕಲೆಯ ಚಂದ್ರಚಾಪದ ಮುಖ್ಯ ಬಣ್ಣವೆಂದರೆ ಅದು ಸಾಹಿತ್ಯ. ಇದು ಓದು-ಬರಹಗಳ ಮಧುಚಂದ್ರ!! ಬರವಣಿಗೆ ಎನ್ನುವುದು ಖಾಲಿ ಹಾಳೆಯ ಮೇಲೆ ಬಿಡಿಸಿರುವ ಸುಂದರ ರಂಗೋಲಿ. ಆ ರಂಗೋಲಿಯೋ ಅನನ್ಯ ಭಾವನೆಗಳ ಕಾರವಾನ್. ಆ ಕಾರವಾನ್ ನ ಪ್ರವೇಶಿಸಿ ಓದುವುದೆಂದರೆ ಅದೊಂದು ರೀತಿಯ ಮಾಗಿದ ಕಾಯುವಿಕೆ. ಈ ಕಾಯುವಿಕೆ, ಕನವರಿಕೆ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಸದಾ ಚಲಿಸುತ್ತಿರುತ್ತದೆ, ಚಲಿಸುತ್ತಿರಬೇಕು. ಆಗ ಮಾತ್ರ ಸಹೃದಯ ಓದುಗ ಒಂದು ಸಾಲನ್ನು ಓದಿ, ಮುಂದಿನ ಸಾಲಿಗಾಗಿ ಕಾಯುತ್ತಾನೆ. ಆ ಕಾಯುವಿಕೆಯಲ್ಲಿಯೆ ಓದು ಪರಿಪೂರ್ಣವೆನಿಸುವುದು. ಕಾಯದೆ ಓದಿದರೆ ಸಾಹಿತ್ಯದ ರಸಗ್ರಹಣ ಸಾಧ್ಯವಿಲ್ಲ. ಈ ದಿಸೆಯಲ್ಲಿ ಸದಾ ಅಧ್ಯಯನ, ಅಧ್ಯಾಪನದಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಶ್ರೀದೇವಿ ಕೆರೆಮನೆ ಅವರು ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಭಾವನೆಗಳನ್ನು ಹೆಣೆದು ಪೋಣಿಸಿದ್ದಾರೆ, ಅದೂ ಹಲವು ಚೆಂದದ ಹೂಗುಚ್ಛಗಳ ರೂಪದಲ್ಲಿ. ಶ್ರೀಯುತರು ಕಾವ್ಯ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಹಾಗೂ ಅಂಕಣ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಾಹಿತ್ಯ ಪ್ರೇಮಿಗಳಿಗೆ ಚಿರಪರಿಚಿತರಾಗಿದ್ದಾರೆ.

ಇವರ ಸಾಹಿತ್ಯ ಕೃಷಿಯನ್ನು ಗಮನಿಸಿ ಹಲವಾರು ಸರಕಾರ-ಸರಕಾರೇತರ ಸಂಘ-ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ, ಪ್ರಶಸ್ತಿ ನೀಡಿ ಸಂಭ್ರಮಿಸಿವೆ. ಇಂದು ಹಲವು ದಿನಪತ್ರಿಕೆಗಳ ಅಂಕಣ ಬರಹಗಳೊಂದಿಗೆ ಹಲವಾರು ಆನ್ಲೈನ್ ಪತ್ರಿಕೆಗಳಲ್ಲಿಯೂ ಅಂಕಣ ಬರಹಗಳು ಮೂಡಿಬರುತ್ತಿವೆ. ಅವುಗಳಲ್ಲಿ ಕೆಂಡಸಂಪಿಗೆ, ಅವಧಿ, ಸಂಗಾತಿ, ನೀವ್ಸ್ ರೂಮ್ -೯, ಪಂಜು, e-ಸುದ್ಧಿ,…. ಪ್ರಮುಖವಾಗಿವೆ. ಉತ್ತಮ ಗಜಲ್ ಗೋ ಆದ ಶ್ರೀಮತಿ ಶ್ರೀದೇವಿ ಕೆರೆಮನೆ ಅವರು ಕನ್ನಡದ ಕೆಲ ಆಯ್ದ ಗಜಲ್ ಗಳ ಕುರಿತು ಪ್ರತಿ ರವಿವಾರದಂದು ‘ನೀವ್ಸ್ ರೂಮ್ -೯’ ಗೆ ಬರೆಯುತಿದ್ದ ಅಂಕಣಗಳ ಪುಸ್ತಕ ರೂಪವೇ ಈ “ತೀರದ ಧ್ಯಾನ”. ಗಜಲ್ ಪ್ರೇಮಿಗಳು ಈ ಅಂಕಣ ಬರಹಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು ಎಂಬುದು ಶ್ರೀಯುತರ ಬರವಣಿಗೆಯ ಸತ್ವವನ್ನು ಸಾರುತ್ತದೆ. ಇವರು ತಮ್ಮ ಬರವಣಿಗೆಗೆ ಸಾಣೆ ಹಿಡಿದು ಓದುಗರ ಹೃದಯದಲ್ಲಿ ಅಕ್ಷರಗಳನ್ನು ಬಿತ್ತಿ ಸಾಹಿತ್ಯದ ಫಸಲನ್ನು ಬೆಳೆಸಿದ್ದಾರೆ. ತಮಗೆ ದೊರೆತ ಗಜಲ್ ಸಂಕಲನಗಳಲ್ಲಿಯ ಗಜಲ್ ಒಂದರ ಮುಖಾಂತರ ಅನುಸಂಧಾನಗೈದಿದ್ದಾರೆ. ಸಾಹಿತ್ಯ ಸಂದರ್ಭದಲ್ಲಿ ಇವರ ಈ ಅಂಕಣ ಬರಹಗಳು ಶುದ್ಧ ಛಾಯಾಚಿತ್ರದಂತೆ ಕಂಗೊಳಿಸುತ್ತಿವೆ. ಇಲ್ಲಿಯ ಬರಹದಲ್ಲಿ ಗಜಲ್ ನ ಕೋಮಲತೆ ಇದ್ದು, ಸಹೃದಯ ಓದುಗರ ಮನವನ್ನು ಅಪಹರಿಸುವಲ್ಲಿ ಯಶಸ್ವಿಯಾಗುತ್ತಾರೆ.

ಗಜಲ್ ಎಂದರೆ ಕಂಬನಿಯ ಲವಣಾಂಶದಲ್ಲಿ ಸಿದ್ಧಗೊಂಡ ರುಚಿಕರವಾದ ಅಡುಗೆ. ಇದು ಮನವನ್ನು ತಣಿಸುವುದರ ಜೊತೆಗೆ ಹೃದಯ ಸದಾ ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೆ. ಇಲ್ಲೇನಿದ್ದರೂ ಹೃದಯ ಬಡಿತದ್ದೆ ಪಾರುಪತ್ಯ. ಈ ಕಾರಣಕ್ಕಾಗಿಯೇ ಗಜಲ್ ಅನ್ನು ಹೃದಯವಂತರ ಕಾವ್ಯ ಎನ್ನಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಜಲ್ ನ ಮಾದಕತೆ ಸವಿಯದ, ಸವಿಯಲು ಬಯಸದ ಬರಹಗಾರರು, ರಸಿಕರು; ಸಾಹಿತಿಗಳು ಇಲ್ಲವೆಂದರೂ ನಡೆದೀತು!! ಈ ಹಿನ್ನೆಲೆಯಲ್ಲಿ ಗಜಲ್ ಎಂದರೆ ಮತ್ತಿನ ಸೋಪಾನವೆ ಸರಿ. ‘ತೀರದ ಧ್ಯಾನ’ವು 39 ಗಜಲ್ ಗಳ 40 ಅಂಕಣಗಳನ್ನು ಹೊಂದಿದೆ. ಇಲ್ಲಿಯ ಪ್ರತಿ ಅಂಕಣಗಳು ಗಜಲ್ ಕೇಂದ್ರೀಕೃತವಾಗಿದ್ದು, ವ್ಯಕ್ತಿ ಪೂಜೆಗಿಂತ ವ್ಯಕ್ತಿತ್ವ, ವಿಚಾರಗಳು ಮುಖ್ಯ ಎಂಬುದನ್ನು ಸಾಕ್ಷಿಕರಿಸುತ್ತಿವೆ. ಪ್ರೀತಿ, ಪ್ರೇಮ, ಪ್ರಣಯ, ವಿರಹ, ಸರಸ, ಸಲ್ಲಾಪ, ಅಧ್ಯಾತ್ಮ, ಸ್ತ್ರೀ ಸಂವೇದನೆ, ದಲಿತ ಸಂವೇದನೆ, ಭಾವ ಸಂವೇದನೆ, ಬಂಧ ಸಂವೇದನೆ, ಸಾಮಾಜಿಕ ವ್ಯವಸ್ಥೆ, ಬಡತನ-ಸಿರಿತನ, ಧರ್ಮ, ರಾಜಕೀಯ, ವಿಡಂಬನೆ… ಮುಂತಾದ ಕಾಮನಬಿಲ್ಲನ್ನು ಮೀರಿಸುವ ವಸ್ತು ವಿಷಯಗಳಿಂದ ಈ ಕೃತಿ ಮುಪ್ಪರಿಗೊಂಡಿದೆ. ಅಂಕಣಕಾರರು ಇಲ್ಲಿ ಗಜಲ್ ಗೋ ಅವರ ಸಾಹಿತ್ಯದ ಹಿನ್ನೆಲೆಯ ಕುರಿತು ತಲೆ ಕೆಡಿಸಿಕೊಳ್ಳದೆ, ತಾವು ಆಯ್ದುಕೊಂಡ ಗಜಲ್ ಅನ್ನು ಹಲವು ಆಯಾಮಗಳ ನೆಲೆಯಲ್ಲಿ ಪರಿಚಯಿಸಿದ್ದಾರೆ, ವಿವರಿಸಿದ್ದಾರೆ, ಚರ್ಚಿಸಿದ್ದಾರೆ, ವಿಶ್ಲೇಷಿಸಿದ್ದಾರೆ; ಕೆಲವೆಡೆ ವಿಮರ್ಶಿಸಿದ್ದಾರೆ!! ಗಜಲ್ ನ ವಿಷಯವನ್ನು ಅಲಂಕಾರದ ಪರಿಧಿಯಲ್ಲಿ ಅದೂ ಲಾಕ್ಷಣಿಕರ ವ್ಯಾಖ್ಯಾನವನ್ನು ಉಪಯೋಗಿಸಿಕೊಂಡು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಕಟ್ಟಿಕೊಡುವ ಯತ್ನ ಮಾಡಿದ್ದಾರೆ. ವಿಷಯಕ್ಕೆ ಅನುಗುಣವಾಗಿ ಜಾನಪದ, ವಚನ, ದರ್ಶನ, ಆಂಗ್ಲ ಸಾಹಿತ್ಯ… ಮುಂತಾದ ಇತರ ವಿಷಯಗಳ ಕುಲುಮೆಯಲ್ಲಿ ಗಜಲ್ ಅನ್ನು ನೋಡುವ ಪ್ರಯತ್ನ ಅವರ ಓದಿನ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಅದಕ್ಕೆ ಪೂರಕವಾಗಿ ಎಂಬಂತೆ ಪ್ರತಿ ಗಜಲ್ ಬರಹಕ್ಕೂ ಒಂದೊಂದು ಸೂಕ್ತ ಶೀರ್ಷಿಕೆ ನೀಡಿ ಓದುಗರ ಚಿತ್ತವನ್ನು ಸೆಳೆಯುತ್ತಾರೆ. ಆ ಶೀರ್ಷಿಕೆಗಳಿಗೆ ತಕ್ಕಂತೆ ಕೆಲವೆಡೆ ಉತ್ತಮ ಪ್ರವೇಶಿಕೆಯನ್ನು ಹಾಗೂ ಪೂರ್ಣತೆಯ ಮುಕ್ತಾಯವನ್ನೂ ಒದಗಿಸಿದ್ದಾರೆ, ಅದೂ ವಿವಿಧ ಪರಿಕರಗಳೊಂದಿಗೆ.

ಈ ದಿಸೆಯಲ್ಲಿ ಸ್ನೇಹಲತಾ ಗೌನಳ್ಳಿಯವರ ಗಜಲ್ ಕುರಿತು ಬರೆದ “ರಾತ್ರಿಯ ಒಡಲಲ್ಲಿ ಕೂಡಿಟ್ಟ ಕನಸುಗಳು” ಲೇಖನವು ತುಂಬಾ ಆಪ್ತವಾಗಿ ಓದುಗರನ್ನು ಸ್ವಾಗತಿಸುತ್ತದೆ. ಇದರಲ್ಲಿ ಇರುಳಿನ ಕುರಿತು ಹಗಲಿಗೂ ಮತ್ಸರವಾಗುವಂತೆ ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಜೀವ ಸಂಕುಲದ ನೋವಿಗೆ ಮುಲಾಮು ಹಚ್ಚುವ ರಾತ್ರಿಯು ಎಲ್ಲರಿಗೂ ಅಪ್ಯಾಯಮಾನ ಎನಿಸುತ್ತದೆ. ಅಶೋಕ ಮಿಜಾಜ್ ರವರ ಹಿಂದಿ ಗಜಲ್ ನ ಕನ್ನಡ ಅವತರಣಿಕೆಯು ಇದರಲ್ಲಿರುವುದು ಒಂದು ವಿಶೇಷವೆನಿಸುತ್ತದೆ! ಕೆಲವೊಮ್ಮೆ ಬಿಡಿ ಗಜಲ್ ನ ಓದು, ಓದುಗರನ್ನು ಇಡೀ ಗಜಲ್ ಸಂಕಲನದತ್ತ ಹೊರಳಿಸಬಹುದು, ಹೊರಳಿಸಲಿ ಎಂಬ ಸದುದ್ದೇಶದಿಂದ ತಾವು ಆರಿಸಿಕೊಂಡ ಗಜಲ್ ನ ಮೂಲ ಆಕರವನ್ನು ಇಲ್ಲಿ ಒದಗಿಸಿದ್ದಾರೆ. ಈ ದಿಸೆಯಲ್ಲಿ ನಾವು “ತೀರದ ಧ್ಯಾನ” ವನ್ನು ಒಳಹೊಕ್ಕು ನೋಡಿದಾಗ ಅಲ್ಲಿಯ ಬರಹದ ಆತ್ಮೀಯತೆ ಮನಸ್ಸಿಗೆ ಮುದ ನೀಡುತ್ತದೆ.

ಗಜಲ್ ಮುಕ್ತ ಛಂದಸ್ಸಿನ ಎತ್ತಿಕೊಂಡವರ ಕೂಸಲ್ಲ. ಅದಕ್ಕೆ ಅದರದೇ ಆದ ಛಂದೋಬದ್ಧ ನಿಯಮಗಳಿವೆ, ಹೃದಯದೊಂದಿಗೆ ಪಿಸುಗುಟ್ಟುವ ಲಾಲಿತ್ಯವಿದೆ. ಗಜಲ್ ಗೆ ತನ್ನದೇಯಾದ ಒಂದು ವಿಶೇಷ ಛಂದಸ್ಸಿದೆ. ಚೌಕಟ್ಟಿನ ನೆಲೆಯಲ್ಲಿಯೆ ಗಜಲ್ ಆಸ್ವಾದಿಸುವುದೂ ಒಂದು ಕಲೆ. ಹಲವು ವರುಷಗಳಿಂದ ಗಜಲ್ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಕೆರೆಮನೆ ಅವರು ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಈ ಗಜಲ್ ನ ಮೂಲಭೂತ ಸ್ವರೂಪ, ಲಕ್ಷಣಗಳ ಕುರಿತು ಜ್ಞಾನವನ್ನು, ಪ್ರೀತಿಯನ್ನು ಹೊಂದಿದ್ದು ತಾವು ಆಯ್ದುಕೊಂಡ ಪ್ರತಿ ಗಜಲ್ ನ ರದೀಫ್, ಕಾಫಿಯಾ; ವಿಶೇಷವಾಗಿ ಕಾಫಿಯಾ ಹೊಂದಿರುವ, ಹೊಂದಿರಬೇಕಾದ ಪ್ರಮುಖ ಗುಣ-ವಿಶೇಷಣಗಳ ಕುರಿತು ಅಂದರೆ ರವಿ, ರವೀಶ್, ಏಕ ಅಲಾಮತ್, ಬಹು ಅಲಾಮತ್, ರೌಫ್, ಕೈದ್, ತಶೀಶ್…. ಕುರಿತು ಅನುಲಕ್ಷಿಸಿದ್ದಾರೆ. ಸಾಂದರ್ಭಿಕವಾಗಿ ಗಜಲ್ ನ ಪಾರಿಭಾಷಿಕ ಪದಗಳನ್ನು ಬಳಸಿದ್ದಾರೆ. ಒಂದು ಗಜಲ್ ಗೆ ಭಾವ ಎಷ್ಟು ಅಗತ್ಯವೋ ಅದರ ಜೊತೆಗೆ ರೂಪು-ರೇಷೆಗಳು ಕೂಡ ಅಷ್ಟೇ ಅಗತ್ಯ ಮತ್ತು ಅನಿವಾರ್ಯ ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಇವುಗಳೊಂದಿಗೆ ರದೀಫ್ ನ ಪ್ರಕಾರಗಳಾದ ಚೋಟಿ ರದೀಫ್, ಮಜಲುನ್ ರದೀಫ್ ಮತ್ತು ಗಜಲ್ ನ ಪ್ರಕಾರಗಳ ಕುರಿತೂ ಓದುಗರ ಗಮನವನ್ನು ಸೆಳೆಯುತ್ತಾರೆ.

(ಡಾ. ಮಲ್ಲಿನಾಥ ಶಿ. ತಳವಾರ)

ಬೆಹರ್ ಆಧಾರಿತ ಗಜಲ್ ಗಳು ಸಂಗೀತ ಲೋಕದಲ್ಲಿ ಬಹುಕಾಲ ಉಳಿಯುತ್ತವೆ. ಬೆ-ಬೆಹರ್ ಗಜಲ್ ಗಳು ಸಂಕಲನಗಳಲ್ಲಿಯೇ ಬಂಧಿಯಾಗುತ್ತವೆ. ಇದರ ಕುರಿತು ಅಲ್ಲಲ್ಲಿ ಮಾತ್ರೆಯಾಧಾರಿತ ಗಣಗಳ ಉಲ್ಲೇಖದೊಂದಿಗೆ ಈ ಹೊತ್ತಿಗೆಗೆ ಶಾಸ್ತ್ರೀಯ ಅಧ್ಯಯನದ ಲೇಪನವನ್ನು ಅಂಟಿಸಿದ್ದಾರೆ. ಈ ಕಿತಾಬ್ ಗೆ ಕಿತಾಬ್ ದಂತಿರುವ ಮತ್ತೊಂದು ಅಂಶವೆಂದರೆ ಗಜಲ್ ನೋಡುವ, ಓದುವ ದೃಷ್ಟಿಕೋನ. ಎಲೆ ಮರೆಯ ಕಾಯಿಯಂತೆ ನಮ್ಮ ಮಧ್ಯೆಯಿರುವ ಭಾವನಾತ್ಮಕ ಗಜಲ್ ಗೋ ಎಂದರೆ ಶ್ರೀ ಸಂಗು ಹುಂಡೇಕಾರ. ಇವರ ಗಜಲ್ ವೊಂದನ್ನು ಎರಡು ವಿಭಿನ್ನ ಶೇಡ್ ನಲ್ಲಿ ಅರ್ಥೈಸಿರುವುದು ಪ್ರಾಯೋಗಿಕ ನೆಲೆಯಲ್ಲಿ ಗಮನ ಸೆಳೆಯುತ್ತದೆ.

“ಅವನು ಮೋಸ ಮಾಡಿದನೆಂದರೆ ಏನೋ ಕಾರಣವಿದ್ದೀತು
ನೋಡಿ ನೋಡದಂತಿದ್ದನೆಂದರೆ ಏನೋ ಕಾರಣವಿದ್ದೀತು”

ಎನ್ನುವ ಈ ಷೇರ್ ನಲ್ಲಿ ಪ್ರೀತಿಯ ಒಂದು ಮುಖ ಕಂಡರೆ, ಮತ್ತೊಂದೆಡೆ ಗೆಳೆತನದ ಭಾವ ಕಾಡುತ್ತದೆ. ಇವೆರಡರ ಜೊತೆಯಲ್ಲಿ ವಿರಹದ, ವಿಷಾದದ ನಡುವೆಯೂ ಸಕಾರಾತ್ಮಕ ಧೋರಣೆಯ ಭಾವ ಮೊಳಕೆಯೊಡೆಯುವ ಬಗೆಯನ್ನು ಸೊಗಸಾಗಿ ರೂಪಿಸಿದ್ದಾರೆ. ಈ ಎರಡು ನೆಲೆಗಳಲ್ಲಿ ಗಜಲ್ ನ ಆಂತರ್ಯದೊಳಗೆ ಓದುಗರನ್ನು ಕರೆದೊಯ್ಯುವಲ್ಲಿ ಗಜಲ್ ಗೋ ಅವರು ಪ್ರಯತ್ನಿಸಿದ್ದಾರೆ.

“ತೀರದ ಧ್ಯಾನ”ವು ಹಲವು ಒಳನೋಟಗಳ ಕ್ರೋಢಿಕರಣವಾಗಿದೆ. ಗಜಲ್ ಹೇಗೆ ಓದಿ ಅರ್ಥೈಸಿಕೊಳ್ಳಬಹುದು ಎಂಬುದರ ಜೊತೆಗೆ ಒಂದು ಸಶಕ್ತ ಗಜಲ್ ಹೇಗಿರಬೇಕು, ಹೇಗಿದ್ದರೆ ಚಂದ ಎಂಬುದರ ಮೇಲೂ ಬೆಳಕು ಚೆಲ್ಲುತ್ತದೆ. ಭಾವ ಮುನ್ನೆಲೆಗೆ ಬಂದು ಲಕ್ಷಣಗಳು ಹಿನ್ನೆಲೆಗೆ ಸರಿದರೆ ಅದು ಗಜಲ್ ರೂಪದಿಂದ ದೂರ ಸರಿಯುವ ಅಪಾಯವಿರುತ್ತದೆ. ಹಾಗೆಂದ ಮಾತ್ರಕ್ಕೆ ಬರಿ ಸ್ವರೂಪ-ಲಕ್ಷಣಕ್ಕೆ ಜೋತು ಬಿದ್ದರೆ ಜೀವವಿರದ ಹಿಟ್ಟಿನ ಹುಂಜ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇವೆರಡರ ಹದವಾದ ಮಿಶ್ರಣದಿಂದ ರಚನೆಯಾದ ಗಜಲ್ ಗಳು ಗಜಲ್ ಸಮಾದಲ್ಲಿ ಪ್ರಜ್ವಲಿಸುತ್ತವೆ. ಕೆಲವು ಪ್ರವೇಶಿಕೆಯ ಹಾಗೂ ಅಶಅರ್ ವಿವರಣೆಯ ಏರಿಳಿತಗಳ ಮಧ್ಯೆಯೂ “ತೀರದ ಧ್ಯಾನ” ಅಂಕಣ ಬರಹಗಳ ಮಾಲೆಯು ಓದುಗರನ್ನು ಓದಿಸಿಕೊಂಡು ಹೋಗುತ್ತದೆ. ಜೀವ ಸಂವೇದನೆಯ ಬರಹಗಾರರಾದ ಶ್ರೀಮತಿ ಶ್ರೀದೇವಿ ಕೆರೆಮನೆ ಅವರ ವಿಚಾರಧಾರೆಯು ಮುಸಲಧಾರೆಯಂತೆ ಸಾರಸ್ವತ ಲೋಕದಲ್ಲಿ ಸುರಿಯಲಿ ಎಂದು ಶುಭ ಕೋರುತ್ತೇನೆ.

“ನಿಮ್ಮ ನೆನಪುಗಳ ಬೆಳಕು ನಮ್ಮೊಂದಿಗೆ ಇರಲಿ
ಯಾವ ಬೀದಿಯಲ್ಲಿ ಬದುಕಿನ ಸಂಜೆಯಾಗುತ್ತೋ ಗೊತ್ತಿಲ್ಲ”
-ಬಸೀರ್ ಬದ್ರ

(ಕೃತಿ: ತೀರದ ಧ್ಯಾನ (ಗಝಲ್‌ ವಿಶ್ಲೇಷಣೆ), ಲೇಖಕರು: ಶ್ರೀದೇವಿ ಕೆರೆಮನೆ, ಪ್ರಕಾಶಕರು: ರೂಪ ಪ್ರಕಾಶನ, ಪುಟಗಳು: 172, ಬೆಲೆ:175/-)