ಆ ಹೆಂಗಸು ನನ್ನತ್ತ ಎರಡು ಮೂರು ಬಾರಿ ನೋಡಿತು. ಅವಳ ಕಣ್ಣಲ್ಲಿದ್ದ ನೀರೆಲ್ಲ ತೀರಿ ಹೋಗಿದ್ದವೇನೊ! ಸ್ಮಶಾನದ ಮೂಲೆಯಲ್ಲಿ ಶವದತ್ತ ನೋಡುತ್ತಲೇ ಕೂತು ಕೂಸಿಗೆ ಎದೆ ಕಚ್ಚಿಸಿದ್ದಳು. ಆ ಕೂಸಿನ ಹೆಜ್ಜೆಗಳಿನ್ನೂ ಮೂಡಿಯೇ ಇಲ್ಲಾ… ಅವನು ನಡೆ ನಡತೆ ನುಡಿಗಳ ಮುಗಿಸಿದ್ದ. ಆ ಹೆಂಗಸಿನ ಹೆಜ್ಜೆಗಳು ಬಾಕಿ ಇದ್ದವು. ಸ್ಮಶಾನ ಬಿಟ್ಟು ಬೇಗ ಮನೆಗೆ ತೆರಳಲು ಮುಂದಾಗಿದ್ದರು. ಸ್ಮಶಾಸನದಲ್ಲಿ ಸಂಸಾರವೇ! ಆಕೆಯೂ ಆ ಜನರ ಜೊತೆ ಎದ್ದು ಹೊರಟಳು ಏನೂ ಆಗಿಯೇ ಇಲ್ಲ ಎಂಬಂತೆ.
ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 38ನೇ ಕಂತು
ಅದು ಊರ ಹೊರ ವಲಯ. ಅಪರಿಚಿತ ಹಳ್ಳಿದಾರಿ. ಗೊತ್ತಿಲ್ಲದ ನೆಲೆಗಳಲ್ಲಿ ಅಲೆದಾಡುವುದು ಎಂದರೆ ಮಜವೊ ಮಜ. ನಿಶೆಯಲ್ಲಿ ನಿರಾಳವಾಗಿದ್ದೆ. ಮೈಸೂರ ತೊರೆದಿದ್ದೆ. ರತಿಗಂಗೋತ್ರಿ ರಗಳೆಯಾಗಿತ್ತು. ಹಳೆಯ ಮೊಪೆಡ್‌ಗೆ ಪೆಟ್ರೋಲ್ ಕುಡಿಸಿ ಕಿಕ್ ಆಗಿ ಕಿಕ್ ಮಾಡಿ ಸುತ್ತಲು ಹೊರಟೆ ಎಂದರೆ ಹಿಂತಿರುಗಿ ಬರುತ್ತೇನೆ ಎಂಬ ಖಾತ್ರಿ ನನಗೇ ಇರಲಿಲ್ಲ. ಅರೆಹುಚ್ಚನಂತಿದ್ದೆ. ಎಷ್ಟೊಂದು ವಿಖ್ಯಾತ ಹೆಸರು! ಯಾವುದೆ ಬಾರ್ ಅಂಡ್ ರೆಸ್ಟೋರೆಂಟಲ್ಲಿ ಸರ್ವೀಸ್ ಮಾಡುವ ಹಲವರಿಗೂ ನನ್ನ ಹೆಸರು ಗೊತ್ತಿರುತ್ತಿತ್ತು. ಅದು ಲಂಕೇಶ್ ಪತ್ರಿಕೆಯ ಮಹಿಮೆ. ದುಡ್ಡಿಗೆ ಬರವಿಲ್ಲ. ಚಿಂದಿ ಉಡಾಯಿಸಿದಂತೆ ಹಣವ ಖರ್ಚು ಮಾಡುತ್ತಿದ್ದೆ. ಅಷ್ಟೊಂದು ಆಸರೆಯ ಮಿತ್ರರಿದ್ದರು. ಜೇಬಿಗೆ ಅವರೆ ದುಡ್ಡು ತುರುಕಿ ʻಒಳ್ಳೆದಿನ ಬರುತ್ತವೆ ಚಿಂತೆ ಮರೆ; ಕಡಿಮೆ ಕುಡಿʼ ಎಂದು ವಿಶ್ವಾಸ ತುಂಬುತಿದ್ದರು. ಅದಾಗ ಎಂ.ಪಿ. ಪ್ರಕಾಶರು ಎರಡು ಮೂರು ಸಲ ಪತ್ರ ಬರೆದು ವಿಧಾನಸೌಧದ ತನ್ನ ಕಚೇರಿಗೆ ಬಾ ಎಂದಿದ್ದರು. ರಾಜಕಾರಣಿಗಳು ಎಂದರೆ ನನಗೆ ಯಾವತ್ತಿದ್ದರೂ ವಿಪರೀತ ನಿರ್ಲಕ್ಷ್ಯ. ಹೋಗಿರಲಿಲ್ಲ. ಆಗವರು ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದರು. ಅವರ ಧೀಮಂತಿಕೆಯ ಅರಿವಿರಲಿಲ್ಲ.
ಯಾವುದೊ ಒಂದು ಕುಗ್ರಾಮದ ದಾರಿ. ಸುತ್ತ ಹೊಲ ಮಾಳ. ಗುಡ್ಡಗಳು. ಹಳ್ಳ ಕೊರಕಲು ಹಾದಿ. ಗಾಡಿ ಪಂಚರಾದರೆ ಅದನ್ನು ಅಲ್ಲೆ ಎಸೆದು ಬರುವಷ್ಟು ಸಿದ್ದನಿದ್ದೆ. ನನ್ನ ಮೊಪೆಡ್‌ಗೂ ನನಗೂ ತಕ್ಕ ಜೋಡಿಯಾಗಿತ್ತು. ಬೆಟ್ಟಗುಡ್ಡಗಳನ್ನೆ ಏರುತ್ತಿದ್ದೆ ಅದರ ಮೂಲಕ. ಸ್ಟ್ಯಾಂಡ್ ಹಾಕಿ ಮರದ ಕೆಳಗೆ ನಿಲ್ಲಿಸಿ ವಿರಮಿಸಿ ಎದ್ದಾಗ ಆ ನನ್ನ ಮೊಪೆಡ್ ಮರುಭೂಮಿಯ ಕತ್ತೆಯಂತೆಯೊ ಇಥಿಯೋಪಿಯಾದ ಹೇಸರಗತ್ತೆಯಂತೆಯೊ ಬಹಳ ಬಡಕಲಾಗಿ ಕಾಣುತ್ತಿತ್ತು. ನಾನೊ ಅಮಲಲ್ಲಿ ಅದೇ ಗಾಡಿಯನ್ನು ಆನೆ ಎಂದು ಭಾವಿಸಿ ಆನೆ ಅಂಬಾರಿ ಮೆರವಣಿಗೆಯಲ್ಲಿ ತನ್ನ ರಾಜ್ಯದ ಜನತೆ ಸುಖ ಸಂತೋಷದಿಂ ಸಡಗರ ಸಂಭ್ರಮದಿಂ ನಿಶ್ಚಿಂತೆಯಿಂದಿರುವರೇಂ.. ಎಂದು ಪರಿಶೀಲಿಸುತ್ತ ನಡೆವಂತೆ ನಿಧಾನವಾಗಿ ವಿಪರೀತ ಹೊಗೆ ಬಿಟ್ಟುಕೊಂಡು; ಲಡಾಸ್ ಆದ ಸೈಲೆನ್ಸರ್‌ನತ್ತ ಗಮನ ನೀಡದೆ; ಅದು ಎಬ್ಬಿಸುವ ಸದ್ದಿನ ಅಲೆಗಳಿಗೆ ಕುಣಿವಂತೆ ಕುಲುಕು ದಾರಿಯಲ್ಲಿ ಸದ್ಯ ಬೀಳದೆ ಹೇಗೊ ಸಾಗುತ್ತಿದ್ದೆ. ಖಂಡಿತ ಅದು ಅಮಲಿನಿಂದಾಗಿದ್ದ ಚಾಣಾಕ್ಷ ರಮಣೀಯ ಸಾಹಸವೇ ಹೊರತು ನನ್ನ ಸಹಜ ವ್ಯಕ್ತಿತ್ವದ ನಡತೆ ಆಗಿರಲಿಲ್ಲ. ನನ್ನ ಕೀರ್ತಿಯೇ ನನ್ನ ಕತ್ತೆಯ ಬಾಲವಾಗಿತ್ತು. ಅದರ ಬಗ್ಗೆ ಎಳ್ಳಷ್ಟು ಗಮನ ಇರಲಿಲ್ಲ. ಯಾವುದಾವುದೊ ಚಹರೆಗಳನ್ನು ಅಂಟಿಸಿಕೊಳ್ಳುತ್ತಿದ್ದೆ. ಯಾರಾದರು ಕೇಳಿದರೆ ಕುರಿ ವ್ಯಾಪಾರಿ ಎನ್ನುತ್ತಿದ್ದೆ. ಹಳ್ಳಿಗಳಲ್ಲಿ ಬಡ ಹೆಂಗಸರು ಒಂದೆರಡು ಕುರಿಗಳ ಮೇಯಿಸಿಕೊಂಡು ಕಷ್ಟ ಕಾಲಕ್ಕೆ ಕುರಿ ಮಾರಿಕೊಳ್ಳಲು ಮುಂದಾಗಿರುತ್ತಾರೆ. ಅಂತಹ ಮುಗ್ದ ಹೆಂಗಸರ ಬಳಿ ನಾಟಕೀಯ ವ್ಯಾಪಾರ ಮಾಡಿ ನೂರು ರೂ ಅಡ್ವಾನ್ಸ್ ಕೊಟ್ಟು ಕುರಿಕಾಲು ಕಟ್ಟಿ ಚೀಲಕ್ಕೆ ಹಾಕಿ ಹೊರಟರು ಎಂದರೆ; ಅದನ್ನು ಕಡಿದು ಮಾರಿ; ತಿಂದವರು ಮೂಳೆಗಳ ಅರಗಿಸಿಕೊಂಡು ಎಷ್ಟೋ ದಿನ ಉರುಳಿದ ನಂತರವೇ… ‘ಅರೇ ಅಕ್ಕಾ ವ್ಯಾಪಾರ ಲುಕ್ಸಾನ್ ಆಯ್ತು’ ಎಂದು ಏನೊ ಸುಳ್ಳು ಹೇಳಿ ಬಹಳ ಕಡಿಮೆ ದುಡ್ಡು ಕೊಟ್ಟು ಕೈತೊಳೆದುಕೊಳ್ಳುವ ವ್ಯಾಪಾರಿಗಳ ಕಂಡಿದ್ದೆ. ಆ ಹಳ್ಳಿ ಜನ ಎಷ್ಟು ಒಳ್ಳೆಯ ಮುಗ್ದರು! ‘ಅಯ್ಯೋ ಪಾಪ… ಹೋಗ್ಲಿ ಬುಡಪ್ಪ… ಮೂರ್ಕಾಸಾದ್ರು ಕೊಟ್ಟಲ್ಲಾ’ ಎಂದು ಅಂಥವರ ಕ್ಷಮಿಸುತ್ತಿದ್ದರು. ನಾನು ಯಾವ ಕುರಿ ವ್ಯಾಪಾರ ಮಾಡದಿದ್ದರೂ ಅಂತಹ ಒಂದು ಟೋಪಿ ಕಸುಬನ್ನು ಹೇಳಿಕೊಂಡು ಫಜೀತಿಗೆ ಸಿಲುಕಿದ್ದೆ. ಅದನ್ನೆಲ್ಲ ಹೇಳಲಾರೆ… ನಾನು ಗುರುತು ಮರೆಸಲು ಹಾಕಿಕೊಂಡಿದ್ದ ಟೋಪಿಯು ನನ್ನನ್ನು ಒಬ್ಬ ಸಾಬಿ ಎಂದು ಬಿಂಬಿಸಿತ್ತು. ಅರೇ; ಸಾಬಿ ಅಂದ್ರೆ ಅನ್ಲೀ… ಸ್ಟ್ಯಾಂಡರ್ಡಾಗಿಯೆ ಇದೆಯಲ್ಲಾ… ಎಸ್ಸಿ ಅನ್ನೋದಿಕ್ಕಿಂತ ಇದು ಲಾಭ ಅಲ್ಲವೇ ಎಂದು ಸಾಬಿಯಂತೆ ನಟಿಸಲು ಬರದೆ ಸಿಕ್ಕಿಹಾಕಿಕೊಂಡು; ಇವನ್ಯಾರೊ ಕಳ್ಳ ಇರಬೇಕೆಂದು ನಾಲ್ಕೇಟು ತಿಂದು ತಪ್ಪಿಸಿಕೊಂಡು ಬಂದಿದ್ದೆ.
ಅಂತಹ ಬಡಪಾಯಿ ಊರುಗಳ ಹಾದಿಗಳಲ್ಲಿ ಸವೆದು ಹೋದ ಹೆಜ್ಜೆಗಳು ಎಷ್ಟೋ. ನನ್ನ ಗಾಡಿ ಟಯರ್‌ಗಳು ಸವೆದು ನುಣ್ಣಗಾಗಿಬಿಟ್ಟಿದ್ದವು. ಆ ಜನರ ಮಣ್ಣಿನ ಬರಿಗಾಲ ಪಾದಗಳ ಗುರುತಿನ ಮೆಲೆ ನನ್ನ ಸವೆದ ಚಕ್ರಗಳ ಗುರುತು ಬೆರೆತು… ಸುಮ್ಮನೆ ಆ ದಾರಿ ಕ್ರಮಿಸುವ ರೀತಿಯನ್ನೆ ದಿಟ್ಟಿಸಿ ನೋಡುತ್ತ ಹಾದಿ ಬದಿಯಲ್ಲಿ ಕೂತುಬಿಡುತ್ತಿದ್ದೆ. ಅಹಾ! ಅದು ಎಷ್ಟೊಂದು ಚೆಂದ… ನಡೆದು ಹೋದವರು ಯಾರೊ… ಗೊತ್ತಿಲ್ಲ! ಆದರೆ ಮನುಷ್ಯರ ಸ್ಪಷ್ಟ ಹೆಜ್ಜೆಗಳು. ಎಷ್ಟು ಕಾಲದವೋ… ಎಲ್ಲೆಲ್ಲಿಂದ ಸಾಗಿ ಬಂದು ಆಕಾಶದ ಇನ್ನೊಂದು ಮರೆಯಲ್ಲಿ ಚಹರೆ ಮೂಡಿಸಿ ಹೊರಟು ಹೋದವೊ… ಆದಿ ಮಾನವನ ಮೊದಲ ದಿನಗಳ ಹೆಜ್ಜೆಗಳನ್ನು ಕಂಡು ಹಿಡಿದಿದ್ದಾರೆ ಪಳೆಯುಳಿಕೆಗಳಲ್ಲಿ. ‘ಮುಂದೆ ದೊಡ್ಡ ಹೆಜ್ಜೆಯ ಗಂಡಸು… ಅವನ ಹಿಂದೆ ತುಂಬಿದ ಬಸುರಿ ಹೆಂಗಸಿನ ಹೆಜ್ಜೆ… ಜೊತೆಗೆ ಒಂದು ಬಾಲಕನ ಹೆಜ್ಜೆ ಇರಬೇಕೂ… ಆಗತಾನೆ ಲಾವಾ ಹರಿದು… ದೂರದಲ್ಲಿ ಬೂದಿ ಉದುರಿ… ಆ ಬೂದಿ ಮೇಲೆ ಆ ಪುಟ್ಟ ಕುಟುಂಬ ಸುರಕ್ಷಿತ ನೆಲೆಯತ್ತ ದಾಪುಗಾಲಿಟ್ಟು ಹೊರಟಿದೆ.’ ವಾತಾವರಣದ ತತ್‌ಕ್ಷಣದ ಬದಲಾವಣೆಯಿಂದ ತುಂತುರು ಮಳೆ ಉದುರಿದೆ. ಆ ಹೆಜ್ಜೆಗಳ ಮೇಲೆ ಆ ಹನಿ ನೀರು ನಿಂತಿದೆ. ಬೂದಿ ನೀರ ಕುಡಿದು ಒಣಗಿ ಕಲ್ಲಿನಂತಾಗಿ ಆ ಆದಿ ಕುಟುಂಬದ ಹೆಜ್ಜೆಗಳು ಕಾಲಾಂತರದಲ್ಲಿ ಮುಚ್ಚಿಟ್ಟುಕೊಂಡಿವೆ! ಈಗಲೂ ಆ ಹೆಜ್ಜೆಗಳಿವೆ. ದೊಡ್ಡೆಜ್ಜೆಗಳು ಎನ್ನುತ್ತಾರಲ್ಲವೆ ಸಂಶೋಧಕರು ಅವನ್ನು… ಯಾವೂರೊ ಏನೊ… ಈ ಊರ ಕಾಲುದಾರಿಯ ಹೆಜ್ಜೆಗಳ ಗುರುತುಗಳನ್ನು ಗಾಳಿ ಬೀಸಿಯೇ ಗುಡಿಸಿ ಅಳಿಸಿಬಿಡುತ್ತದೆ… ನಾಳೆ ನನ್ನ ಅಸ್ತಿತ್ವವೂ ಅಷ್ಟೆಯೇ… ಸಾಗುವ ದಾರಿಗೆ ಸಾವೇ ಇಲ್ಲ. ಅದು ಚಲಿಸುವುದಿಲ್ಲವೇ… ಸಾಗುತ್ತದೆ; ಆದರೆ ಹೆಜ್ಜೆಗಳು ಕಾಣುವುದಿಲ್ಲ. ನಮ್ಮ ಹೆಜ್ಜೆಯಲ್ಲೆ ಕಾಲವೂ ನಡೆದು ಬಂದಿರುತ್ತದೆ. ಅಂದರೆ; ಇದೇನು ವಿಚಿತ್ರ ಎಂದು ಕಾಲುದಾರಿಯ ಹೆಜ್ಜೆಗಳ ಎಣಿಸುತ್ತಿದ್ದೆ.
ಏನೊ ಗೋಳಿನ ಸದ್ದು! ಹೆಜ್ಜೆಗಳಿಗೆ ದುಃಖವೇ… ನನ್ನೊಡನೆ ತೋಡಿಕೊಳ್ಳುತ್ತಿವೆಯೇ ಅನಾದಿ ಪಾಡೇ… ತಮಟೆ ನಗಾರಿ ಸದ್ದು ಅಪ್ಪಳಿಸಿತು. ಗಮನಿಸಿದೆ. ಒಂದು ಶವದ ಮೆರವಣಿಗೆ ಸುತ್ತ ನೋಡಿದೆ. ಅಲ್ಲೊಂದು ಸ್ಮಶಾನವಿತ್ತು. ಗುಂಪು ಮರಗಳು. ಶವ ಹೊತ್ತವರ ಹೆಜ್ಜೆಗಳು ಭಾರವಾಗಿದ್ದವು. ಕೆಲವರು ಕಾಲೆಳೆಯುತ್ತ ಬರುತ್ತಿದ್ದರು. ಸತ್ತವನು ಗಣ್ಯನಾಗಿರಲಿಲ್ಲ. ಸಾಧಾರಣ ಮನುಷ್ಯ. ಯಾರೊ ಕೆಲವರು ದೂರುವಂತೆ ಹಳಿಯುತ್ತ; ನಡುನೀರಲ್ಲಿ ಕೈ ಬಿಟ್ಟು ಮೋಸ ಮಾಡಿ ಹೋದ ಎಂದು ಹಳಿಯುತ್ತ ದುಃಖದ ಮಾತಾಡುತ್ತಿದ್ದರು. ಸತ್ತು ಹೆಣವಾದಾಗಲೂ ಮನುಷ್ಯ ತೆಗಳಿಸಿಕೊಳ್ಳಬೇಕೇ? ಲಯವಾಗುವ ಕೊನೆ ಗಳಿಗೆಯಲ್ಲಾದರೂ ಒಂದು ಹೊಗಳಿಕೆಯ ಮಾತಾದರೂ ಬೇಡವೇ! ಸ್ಮಶಾನಕ್ಕೆ ಬಂದರು. ನನ್ನ ಕತ್ತೆ ಮೊಪೆಡ್ ಅತ್ತ ನಿಂತಿತ್ತು. ಅವರ ಹಿಂಬಾಲಿಸಿದ್ದೆ. ದುಃಖಿಗಳ ನಡುವೆ ನನಗೂ ಅಳು ಬಂದುಬಿಟ್ಟಿತು. ತಮಟೆ ನಗಾರಿಗಳ ವಿದಾಯದ ಸದ್ದಿಗೇ ಅಂತಹ ಭಾವನೆ ಇರಬೇಕು. ಕೆಲವೇ ಜನ. ಹೆಣದ ಜೊತೆಯಲ್ಲೆ ಸೌದೆ ಬಂಡಿಗಳೆರಡು ಬಂದಿದ್ದವು. ಎಲ್ಲ ಜೋಡಿಸಿದರು. ಹೆಣವ ಎತ್ತಿ ಇಟ್ಟರು. ಅವನ ಹೆಂಡತಿಯ ಕಂಕುಳಲ್ಲಿ ಕೂಸಿತ್ತು. ಅಳುತ್ತಿತ್ತು. ಮಕ್ಕಳ ದುಃಖ ಸಾವಿನ ಹಂಗಿಲ್ಲದ್ದು ಅಲ್ಲವೇ? ಬದುಕಿ ಉಳಿಯುವ ತೆವಳಾಟದ ಅಳು ಇರಬೇಕು ಎನಿಸಿತು. ಯಾರೊ ಕಣ್ಣಲ್ಲೆ ಮಾತಾಡಿಸಿದರು. ನನ್ನ ಒದ್ದೆಯಾದ ಕಣ್ಣುಗಳು ಈತ ಈ ಸಾವಿನ ಸಂಬಂಧಿ ಎಂದು ತಿಳಿಸಿತ್ತು. ಹಾsss ಏನೆಂದುಕೊಂಡೇ… ನಾನು ಸಾವಿನ ಸಂಬಂಧಿಯೇ… ಹೌದು. ಸಾವು ಯಾವತ್ತೂ ನಮ್ಮ ಕಿಸೆಯಲ್ಲೇ ಇಲ್ಲವೇ? ನಾಲಿಗೆಯ ತುದಿಯಲ್ಲೇ ಇರುತ್ತದಲ್ಲಾ… ಅದನ್ನು ಹುಡುಕುವ ಅಗತ್ಯ ಏನಿದೆ? ಸಾವು ನಿನ್ನನ್ನು ಇನ್ನೆಲ್ಲಿಗೊ ಕರೆದೊಯ್ಯುವ ಕೊನೆಗಾಲದ ಒಂಟಿ ಬಾಳಿನ ಪಯಣದ ಸಂಗಾತಿ! ಹುಟ್ಟು ನಿನ್ನನ್ನು ಅಕಸ್ಮಾತ್ ಇಲ್ಲಿಗೆ ತಾತ್ಕಾಲಿಕವಾಗಿ ಕರೆತಂದು ಬಿಸಾಡಿ ಹೊರಟು ಹೋಯಿತು… ಅದಕ್ಕೇ ಕೊನೆಗೆ ನಿನ್ನ ಇಲ್ಲಿಗೆ ತಂದು ಬೆಂಕಿಗೆ ಎಸೆದು ಬಿಡುವುದು… ಸಾವು ಹಾಗೆ ಬಿಸಾಡದು. ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಸಾವಿಗೆ ಅಲ್ಲ ಹೆದರಬೇಕಾದದ್ದು… ಹುಟ್ಟಿದ್ದಕ್ಕೆ ಹೆದರಬೇಕು. ಹುಟ್ಟಿನಿಂದಲೇ ಎಲ್ಲ ಕಷ್ಟಗಳು ಆರಂಭ ಆಗುತ್ತವೆ ತಾನೆ? ಎಷ್ಟೊಂದು ನರಕವ ಉಂಡೆ… ಕಂಡೆ… ನೊಂದೆ… ನರಳಿದೆ… ಆಡಬಾರದ ನಾಟಕವನೆಲ್ಲ ಆಡಿದೆ. ಸಾವಿನ ಆಟವೇ ಬೇರೆ… ನಾನೇ ನನಗೆ ಸಾಕ್ಷ್ಯ ಅಲ್ಲವೇ… ನಾನೀಗ ಸತ್ತಿದ್ದೇನೆ ಅಲ್ಲವೇ… ಆ ಶವಕ್ಕೂ ನನ್ನ ಮನಕ್ಕೂ ಸಂಬಂಧ ಬಹಳ ದೂರ ಇಲ್ಲ. ಬೇಕಾದರೆ ನಾನು ಆ ಹೆಣದ ಜೊತೆ ಮಾತನಾಡಬಹುದು ಎಂದುಕೊಂಡೆ.
ಆ ಹೆಂಗಸು ನನ್ನತ್ತ ಎರಡು ಮೂರು ಬಾರಿ ನೋಡಿತು. ಅವಳ ಕಣ್ಣಲ್ಲಿದ್ದ ನೀರೆಲ್ಲ ತೀರಿ ಹೋಗಿದ್ದವೇನೊ! ಸ್ಮಶಾನದ ಮೂಲೆಯಲ್ಲಿ ಶವದತ್ತ ನೋಡುತ್ತಲೇ ಕೂತು ಕೂಸಿಗೆ ಎದೆ ಕಚ್ಚಿಸಿದ್ದಳು. ಆ ಕೂಸಿನ ಹೆಜ್ಜೆಗಳಿನ್ನೂ ಮೂಡಿಯೇ ಇಲ್ಲಾ… ಅವನು ನಡೆ ನಡತೆ ನುಡಿಗಳ ಮುಗಿಸಿದ್ದ. ಆ ಹೆಂಗಸಿನ ಹೆಜ್ಜೆಗಳು ಬಾಕಿ ಇದ್ದವು. ಸ್ಮಶಾನ ಬಿಟ್ಟು ಬೇಗ ಮನೆಗೆ ತೆರಳಲು ಮುಂದಾಗಿದ್ದರು. ಸ್ಮಶಾಸನದಲ್ಲಿ ಸಂಸಾರವೇ! ಆಕೆಯೂ ಆ ಜನರ ಜೊತೆ ಎದ್ದು ಹೊರಟಳು ಏನೂ ಆಗಿಯೇ ಇಲ್ಲ ಎಂಬಂತೆ. ಅವಳ ಕೈಯಲ್ಲಿದ್ದ ಕೂಸು ಉರಿಯುತ್ತಿದ್ದ ಚಿತೆಯನ್ನು ಬೆರಗಿನಿಂದ ದಿಟ್ಟಿಸುತ್ತಿತ್ತು. ಅದರ ದಿವ್ಯ ಕಣ್ಣುಗಳಲ್ಲಿ ತಂದೆಯ ಚಿತೆಯ ಉರಿ ಸಿರಿಯೆ? ಏನದರ ಅರ್ಥ? ಮಗುವಿನ ಭಾವ ಚಿತ್ತದಲ್ಲಿ ಆ ಚಿತೆಯ ಚಿತ್ರಕ್ಕೆ ಎಷ್ಟು ಕಾಲದ ನೆನಪು… ಎಲ್ಲರೂ ಹೊರಟೇ ಹೋದರು. ಹೊತ್ತು ಇಳಿಯಲು ಸಮಯವಿತ್ತು. ಬಿರುಸಾಗಿ ಚಿತೆ ಹೊತ್ತಿಕೊಂಡಿತ್ತು. ಗಾಳಿ ಬೀಸುತ್ತಿತ್ತು. ನನ್ನ ಕತ್ತೆ ಮೊಪೆಡ್ ಬಳಿ ಬಂದು ಕೂತೆ. ಸ್ಮಶಾನ ವೈರಾಗ್ಯದಲ್ಲಿ ಮನುಷ್ಯ ಮೆತ್ತಗಾಗುತ್ತಾನಲ್ಲಾ… ಅಂತಹ ಶಕ್ತಿ ಇದೆ ಮಸಣಗಳಿಗೆ. ಉರಿವ ಚಿತೆಯ ಸದ್ದು ಅಲ್ಲೆಲ್ಲ ವ್ಯಾಪಿಸಿತ್ತು. ತಟ್ಟನೆ ಗಾಳಿ ನಿಂತಿತ್ತು. ಬಟಾಬಯಲು ಬಟ್ಟೆ ಬದಲಾಯಿಸಿಕೊಳ್ಳುವಂತೆ ಕತ್ತಲ ನೀರವತೆಗಾಗಿ ಕಾಯುತಿತ್ತು. ಹೆಪ್ಪಾದಂತೆ ಮೋಡ ಕವಿದಿದ್ದವು. ನಿಶೆ ಇಳಿದಿತ್ತು. ಗಾಡಿಯಲ್ಲಿ ಎಣ್ಣೆ ಯಾವಾಗಲು ಸ್ಟಾಕ್ ಇರುತ್ತಿತ್ತು. ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಬೆರೆಸಿದ ವಿಸ್ಕಿ ಇರುತ್ತಿತ್ತು. ತೆಗೆದು ಕುಡಿದೆ. ಕತ್ತೆ ಮೊಪೆಡ್ ನಕ್ಕಂತಾಯಿತು. ತಲೆಗೆ ಏರಿತ್ತು.
ಚಿತೆಯ ಹತ್ತಿರವೇ ಹೋಗಿದ್ದೆ. ಅದರ ಸುತ್ತ ಐದಾರು ಸಲ ಸುತ್ತಿದೆ. ಉರಿವ ಚಿತೆಯ ವಾಸನೆಯೇ ವಿಚಿತ್ರ. ಅದು ತನಗೆ ತಾನೇ ದೇಹದ ಕೊಬ್ಬಿನಿಂದ ಚರಚರನೆ ಉರಿಯುತ್ತ ಕನಿಯುತ್ತ ತಾನೇ ಬೆಂಕಿ ಆಗಿಬಿಟ್ಟಿರುತ್ತದೆ. ಅದನ್ನು ದಿಟ್ಟಿಸಿ ನೋಡಲು ಎಲ್ಲರಿಗೂ ಸಾಧ್ಯವಿಲ್ಲಾ… ಕೇಡು ಎನಿಸುವ ಭಯ ಮೂಡುತ್ತದೆ ನಿಜ! ಹಾಗಾದರೆ ಸಿಡಿಲಿಗೆ ತುತ್ತಾಗಿ ಉರಿವ ಮರವ ಕಂಡಾಗ ಅದೊಂದು ವಿಸ್ಮಯ ಆನಂದ ಅಲ್ಲವೇ? ಒಂದು ದಿನ ಸಾವಿನ ಸಿಡಿಲು ಚಟೀರ್ ಎಂದು ಒಂದೇ ಸಲಕ್ಕೆ ಹೊಡೆದು ಬಿಟ್ಟರೆ… ಎಲ್ಲವೂ ಉರಿಯುತ್ತಿದ್ದರೆ… ಛೀ; ಏನೇನೊ ಲಹರಿ ಎಂದು ಮತ್ತೆ ಮೊಪೆಡ್ ಬಳಿ ಬಂದು ಬಾಟಲಿ ಎತ್ತಿದೆ. ಕತ್ತಲಾಗುತಿತ್ತು. ಚಿತೆಯತ್ತ ಏನದು ನೆರಳೇ? ಯಾರೊ ನಿಂತಿದ್ದಾರೆಯೇ; ಹೌದಲ್ಲವೇ… ಹೆಂಗಸು! ಹತ್ತಿರ ಹೋದೆ. ದುರುಗುಟ್ಟಿ ಚಿತೆಯನ್ನೆ ನೋಡುತ್ತಿದ್ದಳು. ಕೊರಳ ಕರಿಮಣಿ ಸರವ ತಾಳಿ ಸಹಿತ ಕಿತ್ತು ಚಿತೆಗೆ ಎಸೆದಳು. ಹಿಂತಿರುಗಿದಳು. ಅಲ್ಲೆ ನಿಂತಿದ್ದೆ. ನೋಡಿದಳು. ನೀನ್ಯಾರೂ… ನೀನಿವನ ಗೆಳೆಯನೇ… ಸಾವೇ… ಎಂದು ಕೇಳಿದಳು… ಬೆಚ್ಚಿದೆ. ಸಾವಿನ ದೇವತೆಯಂತೆ ಅವಳೇ ನನಗೆ ಕಂಡಿದ್ದಳು. ನಿನ್ನ ಕೂಸನ್ನು ಎಲ್ಲಿ ಬಿಟ್ಟು ಬಂದೆ ಎಂದು ಕೇಳಿದೆ. ಉತ್ತರಿಸಲಿಲ್ಲ. ಬರಬರನೆ ಹೊರಟಳು.
ಕಲ್ಪನೆಯಲ್ಲು ಇಂತಾದ್ದು ನಡೆಯದು. ಅಂತಾದ್ದರಲ್ಲಿ ಇದೇನಿದು ಈಗ ಮಾಯದಂತೆ ಘಟಿಸಿದ್ದು… ನನ್ನ ಪಾತ್ರ ಇಲ್ಲಿ ಏನು? ನೀನವನ ಸಾವೇ ಎಂದರೂ ಒಂತರ ಸಂಬಂಧವೇ ತಾನೆ? ಒಟ್ಟಿಗೆ ಹುಟ್ಟಿ ಬಂದವರೆಲ್ಲ ಸಾಯುತ್ತಾರೆ. ಎಲ್ಲ ಮನುಷ್ಯರೂ ಅಳಿಯುತ್ತಾರೆ. ಆದರೆ ಅಳಿವ ಮೊದಲು ಎಷ್ಟೆಲ್ಲ ಮೆರೆದಾಡುವರಲ್ಲಾ… ಈ ಪಾಪಿ ಚಿತೆಯ ಲೆಕ್ಕ ನನಗೆ ಗೊತ್ತಿಲ್ಲ. ನೀನು ಕಟ್ಟಿದ್ದ ತಾಳಿಯ ನೀನೇ ತೆಗೆದುಕೊಂಡು ಹೋಗು ಎಂದು ಬಿಸಾಡಿದಳಲ್ಲಾ… ಅಷ್ಟರಲ್ಲೇ ಅವನ ವಿಧಿಯ ಗ್ರಹಿಸಬಹುದಲ್ಲವೇ… ಸಂಬಂಧವನ್ನು ಹಾಗೆ ವಾಪಸ್ಸು ಕೊಡಬಹುದೇ? ಅದೂ ಸಾವಿನ ಜೊತೆ? ನಮ್ಮ ಸಂಬಂಧಗಳ ಸಾವು ಎಲ್ಲಿ ತನಕ ಕೊಂಡೊಯ್ಯುತ್ತದೆ? ಹುಟ್ಟಿಗೆ ಹೆದರಬೇಕು ಎಂದುಕೊಂಡೆ ಅಲ್ಲವೇ… ಹಾಗಾದರೆ ಹುಟ್ಟಿಗೆ ಮೊದಲು ಎಲ್ಲಿದ್ದೆ ಹೇಗಿದ್ದೆ ಯಾವ ಮೂಲೆಯಲ್ಲಿದ್ದೆ… ಗಾಳಿಯ ಯಾವ ಅಣು ಕ್ಷಣದಲ್ಲಿ ಅಡಗಿದ್ದೆ? ನಾನು ಹುಟ್ಟಿದರಿಂದಲ್ಲವೇ ಈ ಪಂಚಭೂತಗಳ ಕಿಂಚಿತ್ ಅರಿವಾದರೂ ತನಗೆ ಬಂದದ್ದು… ಹುಟ್ಟು ಸಾವು ದ್ವಂದ್ವವೇ? ಅಲ್ಲವೇ… ಹಾಗಾದರೆ ಏನು? ಅಂತಹ ಅರಿವಿನ ಆ ಗಂಗೋತ್ರಿಯಲ್ಲಿ ಅಷ್ಟೊಂದು ಹೇಸಿಗೆ ತುಂಬಿದೆಯಲ್ಲಾ… ಛೀ ಅದರ ವಿಚಾರವೇ ಬೇಡ. ಬಿಟ್ಟು ಬಂದೆನು. ಈಗ ಈ ಹೆಂಗಸು ತಾಳಿಯ ಕಿತ್ತೆಸೆದು ಚಿತೆಗೆ ಎಸೆದಂತೆಯೆ ಅದರ ಸುಖದುಃಖಗಳ ಬಿಟ್ಟು ಬಂದೆನಲ್ಲಾ… ನನಗೆ ಸ್ವರ್ಗವೂ ಇಲ್ಲಾ ನರಕವೂ ಇಲ್ಲ. ನನ್ನ ಸಮಾಧಾನಕ್ಕೆ ನಾನೇ ಕಟ್ಟಿಕೊಳ್ಳುತ್ತಿರುವ ನನ್ನದೇ ಚಿತೆಯ ಕಥೆಯೇ ಇದೂ… ಮತ್ತೇನು? ಕತ್ತಲಾಯಿತು. ಆ ಮರದಡಿ ಒಬ್ಬನೆ ಕೂರಲು ಭಯವಾಯಿತು. ಚಿತೆಯ ಬೆಳಕಿನ ಮುಂದೆ ಕೂರುವ ಎನಿಸಿತು. ಕೂತೆ. ಬದುಕ ನೆನೆದೆ. ಹೆಣದ ಹೊಗೆ. ವಿಕಾರಗಳ ನೆನಪು. ಮತ್ತೊಂದು ಬಾಟಲಿಯಲ್ಲಿದ್ದ ವಿಸ್ಕಿಯ ಚಿತೆಗೆ ಒಂದಿಷ್ಟು ಸುರಿದೆ.
ನಕ್ಕಂತೆ ಸದ್ದಾಯಿತು. ಏನೊ ನೆರಳು ಹರಿದಂತೆ ಭ್ರಮೆ. ಉರಿ ತಗ್ಗಿತ್ತು. ಮುಂಡ ಉರಿಯುತಿತ್ತು. ನಿಶೆಯ ಮೇಲೆ ನಿಶೆ ಏರಿ ಕೂತಿತ್ತು. ಬೂದಿಯಾಗುತ್ತಿದ್ದವನ ಹೆಣದ ರೂಪವ ನೋಡಿದ್ದೆ. ಪ್ರಜ್ಞೆಯೇ ಮಸುಕಾಗಿತ್ತು. ಅಷ್ಟೊಂದು ಸಂಕಟ. ಯಕಶ್ಚಿತ್ ಹುಳುಗಳ ಕಾಟವ ತಾಳಲಾರದೆ ಬೀದಿಗೆ ಬಿದ್ದು ಹೀಗೆ ಕುಡುಕನಾಗಿ ಚಿತೆಯ ಮುಂದೆ ಕೂತು ವಿಶ್ವದ ಅತೀತತೆಯಲ್ಲಿ ಮನುಷ್ಯನ ಹೆಜ್ಜೆಗಳ ರೀತಿ ನೀತಿಯ ಸಂಬಂಧಗಳನ್ನು ಹುಡುಕುತ್ತ ವಾಲಾಡುತ್ತ ಹೆಣದ ಜೊತೆ ಹೆಣವೇ ಆಗಿ ಚಿತೆಯ ಜೊತೆ ಮಾತನಾಡಬೇಕಾದ ಅಂತಹ ತಪ್ಪನ್ನು ನಾನೇನು ಮಾಡಿದ್ದೆ… ಜಾರಿಬಿದ್ದ ಗುರುತು ಚಲನೆಯಲ್ಲ, ಚಹರೆಯಲ್ಲ. ಶವಗಳ ಜೊತೆ ಅತೀತ ಸಂಪರ್ಕ ಸಾಧ್ಯವಂತೆ. ದೊಡ್ಡದೊಂದು ಕೊಳ್ಳಿಯಿಂದ ಬಹುಪಾಲು ಬೆಂದು ಹೋಗಿದ್ದ ಚಿತೆಯ ಮಗ್ಗುಲು ಬದಲಿಸುವಂತೆ ತಿವಿದು ತಳ್ಳಿದೆ. ಅಹಾ! ಏನಾಶ್ಚರ್ಯ… ಅದರ ಬೆನ್ನು ಕಂಡಿತು. ನೀಲಿ ಬೆಂಕಿ ಮುಚ್ಚಿಕೊಂಡಿತು. ಕ್ಷಣ ಕಣ್ಣು ಮುಚ್ಚಿದೆ. ಬೆವೆತಿದ್ದೆ. ಇನ್ನೇನೊ ಉರಿದು ಹೋಗುತ್ತದೆ… ಮುಂಗೋಳಿ ಹೊತ್ತಿಗೆ ಬೂದಿಯಾಗುತ್ತದೆ. ಇದರ ಜೊತೆ ನಾನೊಬ್ಬನೇ ಮಾತಾಡಲು ಸಾಧ್ಯ ಇಲ್ಲವೇ… ಚಿತೆಯ ಪರಕಾಯ ಪ್ರವೇಶ ನನ್ನಿಂದಾಗದೇ ಎಂದುಕೊಂಡು… ಕೇಳಿದೆ!
ನಿನ್ನ ಸಾವಿಗೆ ನಾನು ಹೇಗೆ ಬಂದೆ… ನಿನ್ನ ಚಿತೆಯಲ್ಲಿ ನಾನೇನ ಕಂಡೆ? ನೀನು ನನ್ನ ನೋಡುತ್ತಿರುವೆಯಾ… ನನ್ನಂತೆಯೆ ನೀನೂ ಕುಡುಕನೇ… ನೀನೇನಾಗಿದ್ದೆ… ನಿನ್ನ ಹೆಂಡತಿಗೆ ಹಿಂಸೆ ಕೊಟ್ಟಿದ್ದೆಯಾ… ನೀನೀಗ ಬೂದಿಯಾಗುತ್ತಿರುವೆ… ಆ ಅನುಭವ ಹೇಗಿದೆ? ನನಗೊಂದಿಷ್ಟು ಹೇಳು… ಕಾಯದ ಸುಖ ದೊಡ್ಡದೊ, ಶರೀರದ ನೋವು ಉನ್ನತವಾದದ್ದೋ… ನಿನ್ನ ಸಾವು ನಿನ್ನ ಜೊತೆಗೇ ಕಾದುಕೊಂಡಿದೆಯೇ… ಎಲ್ಲಿಗೆ ಹೋಯಿತು ನಿನ್ನ ಆತ್ಮ… ಮಾತಾಡು! ಮನುಷ್ಯರ ಭಾಷೆ ಬಿಟ್ಟು ಬೇರೆ ಭಾಷೆ ಇದೆಯಂತಲ್ಲಾ… ಸತ್ತವರ ಭಾಷೆ. ಅದನ್ನು ನನಗೂ ಕಲಿಸಿಕೊಡು. ನನ್ನ ತಾಯಿಯ ಜೊತೆ ಮಾತನಾಡಬೇಕು… ಆದಿ ಆದಿ ಅನಾದಿಗಳ ಜೊತೆ ಏನೇನೊ ಕೇಳಬೇಕು…
ದೊಡ್ಡೆಜ್ಜೆಗಳು ಎನ್ನುತ್ತಾರಲ್ಲವೆ ಸಂಶೋಧಕರು ಅವನ್ನು… ಯಾವೂರೊ ಏನೊ… ಈ ಊರ ಕಾಲುದಾರಿಯ ಹೆಜ್ಜೆಗಳ ಗುರುತುಗಳನ್ನು ಗಾಳಿ ಬೀಸಿಯೇ ಗುಡಿಸಿ ಅಳಿಸಿಬಿಡುತ್ತದೆ… ನಾಳೆ ನನ್ನ ಅಸ್ತಿತ್ವವೂ ಅಷ್ಟೆಯೇ… ಸಾಗುವ ದಾರಿಗೆ ಸಾವೇ ಇಲ್ಲ. ಅದು ಚಲಿಸುವುದಿಲ್ಲವೇ… ಸಾಗುತ್ತದೆ; ಆದರೆ ಹೆಜ್ಜೆಗಳು ಕಾಣುವುದಿಲ್ಲ. ನಮ್ಮ ಹೆಜ್ಜೆಯಲ್ಲೆ ಕಾಲವೂ ನಡೆದು ಬಂದಿರುತ್ತದೆ.
ಹಾಂsss ಏನದು; ಏನು ಏನು ಅನೀರ್ವಚನೀಯವೇ… ಹಾಗೆಂದರೆ? ಹುಟ್ಟು ಸಾವು ಎರಡೂ ನಿಜ ಅಲ್ಲವೆ? ಹಾಗಾದರೆ ಮನುಷ್ಯರ ಈ ಕ್ಷುದ್ರತೆಗಳೆಲ್ಲ ಯಾಕೆ? ಮಾನವ ವಿಕಾಸಕ್ಕೆ ಅವೆಲ್ಲ ಉಪಾದಿಯೇ… ಏನೆಂದೇ ಈ ಉಸಿರಾಟ ಒಂದು ನಾದ ಲೀಲೆಯೇ… ಸ್ವರ ಲಯ ಯಾಕೆ ಒಂದು ದಿನ ಉಸಿರುಗಟ್ಟುವುದು… ಏನಿದೀ ಮಾಯೆ? ಸಾವಿಗೆ ನೋವೇ ಇಲ್ಲವಂತೆ! ಅದೊಂದು ಬೆಳಕಂತೆ… ಬೆಳಕನ್ನು ಉಸಿರಾಡಲು ಶರೀರದ ಅವಶ್ಯಕತೆಯೇ ಇಲ್ಲವೇ… ದಾಹಗಳಿಲ್ಲ, ತೃಷೆ ವಿಷಯಗಳಿಲ್ಲ ಎಂದರೆ ಮಿಲನ ಎಲ್ಲಿಂದ ಬಂತು… ಈ ಆಕಾಶದಲ್ಲಿ ವಿಲೀನವಾಗುವ ಬಿಂದು ಬಿಂಬ ದಿಂಬ ಯಾವುದು? ಸತ್ತವರ ಭಾಷೆಯಲ್ಲು ವೈರುಧ್ಯಗಳೇ… ಹುಸಿಯೇ… ಅಪರಿಮಿತ ಆತ್ಮವಿಶ್ವಾಸ ಇದೆ ಎಂದಿದ್ದಾರಲ್ಲಾ… ಅದು ಇಡೀಯಾಗಿದೆಯೇ… ಹೇಗಾಯಿತು ಅಖಂಡತೆ… ಹೇಳು ಶವವೇ ಪರಿಪೂರ್ಣತೆಯನ್ನು ಭಾವಿಸಬಹುದೇ…’
‘ಇಲ್ಲ… ಅದು ಇಲ್ಲ. ಇದ್ದಂತೆ ಇದೆ. ಅದರತ್ತ ಸಾಗಿದೆ. ಕಂಡಂತೆ ಕಂಡಿದೆ ಕಾಣದಂತೆ ಮಾಯವಾಗಿದೆ… ಅದೊಂದು ಕನ್ನಡಿ. ಕಂಡಂತೆಯೇ ಕಾಣದೆಯೂ ಮಾಯವಾಗುವ ಮಾಯಾಗನ್ನಡಿ ಪರಿಪೂರ್ಣತೆ. ಕಾಣುತ್ತದೆ ನಿಜ… ಕನ್ನಡಿಯ ಒಳ ರೂಪವ ಹಿಡಿಯಲು ಉಂಟೇ…’
‘ಈ ಮಾತು ನಿನ್ನವೇ… ನೀನಾಡಿದೆಯಾ ಹೆಣವೇ… ನಿನ್ನ ರೂಪ ಬೂದಿಯಾದಾಗ ಮೊದಲಿದ್ದ ಆ ರೂಪ ಎಲ್ಲಿ ಅವಿತುಕೊಂಡಿತು.’
‘ಈ ಆಕಾಶವೆ ಒಂದು ಕನ್ನಡಿ… ಆ ತಾರೆಗಳೆಲ್ಲ ನಿಜ ಎಂದರೆ ನಿಜ; ಚಲನೆ ಎಂದರೆ ಚಲನೆ. ಆದರೆ ಅವು ನಮ್ಮ ಚಲನೆಯ ಆಚೆ ಪಥದವು’
‘ಆ ಪಥವ ಹಿಡಿಯುವುದು ಹೇಗೆ?’
‘ಒಂದು ಸೊನ್ನೆಯಾಗಬೇಕು; ಇಲ್ಲವೇ ಲೆಕ್ಕವಾಗಬೇಕು. ಅಗಣಿತದಲ್ಲಿ ಗಣಿತವಾಗಬೇಕು. ಪರಿಗಣಿತವಿಲ್ಲದೆ ಲೆಕ್ಕವಾಗದು. ಮಹಾಗಣದಲ್ಲಿ ಅಣು ಕಣವಾಗಬೇಕು’
‘ಅದು ಹೇಗೆ ಸಾಧ್ಯ… ಯಾರಾದರೂ ಬೊಗಳೆ ಎಂದಾರು…’
‘ನಾಯಿ ಬೊಗಳುತ್ತದೆ ಯಾಕೆ? ಅದರ ಭಾಷೆಯೆ ಒಂದು ಲೆಕ್ಕ. ಆ ಲೆಕ್ಕ ತಿಳಿಯದಿದ್ದರೆ ನಿನಗೆ ಉತ್ತರಾಂಕ ಸಿಗುವುದಿಲ್ಲ.’
‘ಉತ್ತರ ಅಂಕ ಎಂದರೇನು’
‘ಎಣಿಕೆಯೆ ಉತ್ತರಾಂಕ. ಅದೇ ಗಣನೆ. ಅದೇ ಚಲನೆ. ಈಗ ತಾನೆ ಈ ಆಕಾಶ ವಿಕಾಸವಾಗುತ್ತಿದೆ. ಅದು ತನಗೆ ಬೇಕಾದಂತೆ ಎಲ್ಲವನ್ನು ಕ್ಷಣ ಕ್ಷಣವು ಎಣಿಸಿ ಗಣಿಸಿ ಪರಿಗಣಿಸಿ ಗುಣಿಸಿ ಬಾಗಿಸಿ ಕಳೆದು ಪ್ರಮಾಣವನ್ನು ಕಂಡುಕೊಳ್ಳುತ್ತಿದೆ.’
‘ನೀನು ಹೇಳಿದ ಈ ಯಾವ ಲೆಕ್ಕಗಳೂ ನನಗೆ ತಿಳಿಯಲಿಲ್ಲ.’
‘ಹೋಗಿ ಗಡಿಯಾರವನ್ನೇ ಕೇಳು… ಕಾಲದ ಲೆಕ್ಕವ ಗುಣಿಸಿ ಹೇಳುತ್ತದೆ. ಮಾನವ ಹುಟ್ಟಿ ಇಂದಿಲ್ಲಿಗೆ ಎಷ್ಟು ಕ್ಷಣಿಕ ಕ್ಷಣವಾದವು ಎಂದು ಹೇಳುತ್ತದೆ. ಗೋಡೆ ಗಡಿಯಾರವನ್ನಲ್ಲ ನಾನು ಹೇಳಿದ್ದು… ನಿನ್ನ ತಲೆಯ ಒಳಗೊಂದು ಆಕಾಶ ಕಾಯಗಳ ಅಗಣಿತ ಗಡಿಯಾರವಿದೆ. ಅದರ ಜೊತೆಯೇ ಬದುಕಿರುತ್ತೇವೆ. ಅದೇ ನಮ್ಮ ಅರಿವಿಗೆ ಎಟುಕಿರುವುದಿಲ್ಲ. ಕನ್ನಡಿಯೊಳಗಿನ ಗಡಿಯಾರ ಇದ್ದಂತೆ. ಅದು ಬೇರೆ. ಅದು ಎಲ್ಲವನ್ನು ಉಲ್ಟಾಪಲ್ಟಾ ಮಾಡಿ ಕಾಲ ನಿರ್ಣಯವ ತಮಾಷೆ ಮಾಡುತ್ತಿರುತ್ತದೆ. ನೀನು ಸತ್ತ ದಿನದಿಂದ ಹಿಂದೆ ಹಿಂದೆ ಹಿಂದಕ್ಕೆ ದಿನವಹಿ ಲೆಕ್ಕವ ತಪ್ಪಿಸದಂತೆ ಹುಟ್ಟಿನತ್ತ ಸಾಗಿ ಬಂದು ಕಾಲವ ಗುಣಿಸು… ಆಗ ಈ ವಿಶ್ವದಲ್ಲಿ ನಿನ್ನ ಗಣತಿ ಏನೆಂಬುದು ತಿಳಿಯುತ್ತದೆ. ಅದಕ್ಕಾಗಿ ಕಲ್ಪಿತ ದೇವರ ಮಗ್ಗಿ ಪುಸ್ತಕದ ಅವಶ್ಯಕತೆ ಇಲ್ಲ. ಈ ಎಲ್ಲ ಮಗ್ಗಿಲೆಕ್ಕಗಳೂ ತಪ್ಪಾಗಿರಬಹುದು… ಸಾವಿನಾಚೆಯ ಕಾಗುಣಿತ, ಮಗ್ಗಿ, ವ್ಯಾಕರಣ, ನೀತಿ ಸಂಹಿತೆ ಗೊತ್ತೆ ನಿನಗೇ… ಇಹದಲ್ಲಿ ಇಷ್ಟೆಲ್ಲ ಲೆಕ್ಕ ತಪ್ಪು ಮಾಡುವುದರಿಂದಲೇ ಭ್ರಷ್ಟಗಣಿತ ಮನುಷ್ಯರನ್ನು ಆಳುತ್ತಿರುವುದು…’
‘ಏನೂ ತಿಳಿಯಲಿಲ್ಲ… ಶೂನ್ಯ ಎಂದರೆ ಹೀಗೆಯೇ… ಈ ಆಕಾಶ ತಾನೊಂದು ಗತಿ ಕಾಣಲು ನಮ್ಮನ್ನೆಲ್ಲ ಬೇರೆ ಬೇರೆ ಗತಿಗಳಿಗೆ ಒಡ್ಡುತ್ತಿದೆಯೇ… ಅಷ್ಟೆಲ್ಲ ವಿಜ್ಞಾನಿಗಳು ಮೆದುಳಿನ ನರಮಂಡಲ ವ್ಯವಸ್ಥೆಯ ಕೋಶಗಳನೆಲ್ಲ ತಡಕಿದ್ದಾರೆ… ವಿವರಿಸಿದ್ದಾರೆ. ಅವರು ಕೂಡ ಅಂತಿಮ ಎನ್ನುವುದು ಇಲ್ಲವೇ ಇಲ್ಲ… ಇದೆಲ್ಲ ಕೇವಲ ಆರಂಭ ಎನ್ನುತ್ತಾರೆ! ‘ಜಸ್ಟ್ ಎ ಬಿಗಿನಿಂಗ್ ವಿತ್ ನಥಿಂಗ್…’ ಶೂನ್ಯದಿಂದ ಆವರಣವೇ… ಅನಂತರ ಅನಂತ ಆವರಣವೇ… ಮನುಷ್ಯನಿಗೆ ಇಷ್ಟೆಲ್ಲ ಪ್ರಜ್ಞೆ ಯಾಕೆ ಬೇಕಾಗಿತ್ತು. ಅಗತ್ಯ ಇರಲಿಲ್ಲ. ಆದರೂ ಈ ಲೋಕದಲ್ಲಿ ಮಾನವ ಒಂದು ಪ್ರಾಯೋಗಿಕ ಅಣುಜೀವಿಯೇ… ಏನಿದರ ರಹಸ್ಯ… ವಂಶವಾಹಿ ಸರಪಳಿಯಲ್ಲಿ ಇವೆಲ್ಲ ಯಾಕೆ ಉಳಿದು ಬಂದವು… ಇದರ ಅವಸಾನ ಯಾವತ್ತು…’
‘ಸಾವಿಗೂ ಅದು ತಿಳಿಯದು; ಹುಟ್ಟಿಗೂ ಅದು ಗೊತ್ತಾಗದು’
‘ಒಗಟಾಗಿ ಹೇಳುವುದು ಮೋಸ ಅಲ್ಲವೇ’
‘ಸಾವಿನಾಚೆಯ ಭಾಷೆಯೇ ಹೀಗೆ. ಅದಕ್ಕೆ ನ್ಯಾಯ ಅನ್ಯಾಯ ಉಪಕಾರ ಅಪಕಾರ ಹಿಂಸೆ ಅಹಿಂಸೆ ಧರ್ಮ ಕರ್ಮ ಜಾತಿ ಜನಾಂಗ ಏನೂ ತಿಳಿಯದು’
‘ಅರೇ; ಹುಚ್ಚು ಚಿತೆಯೇ ನೀನು. ಇವುಗಳ ಅನಾಚಾರಗಳನ್ನೆ ತಾನೆ ತಿಳಿಯಲು ಮನುಷ್ಯ ಭಾಷೆ ಕಂಡುಕೊಂಡದ್ದೂ… ಭಾಷೆಯ ಮೂಲ ತತ್ವವನ್ನೆ ಹುಸಿ ಮಾಡುವೆಯಾ’
‘ಹೌದು! ನಿನ್ನ ಭಾಷೆ ನಿಮ್ಮ ಮನದ ಕನ್ನಡಿ ಮಾತ್ರ. ಕಂಡಂತೆ ಕಾಣುತ್ತದೆ; ತಿಳಿದಂತೆ ಭಾಸವಾಗುತ್ತದೆ. ಅರಿವಿನಂತೆ ನಡೆಸುತ್ತದೆ. ಅವೆಲ್ಲ ಮಾನವ ಭ್ರಮೆಗಳು. ಸತ್ಯ ಎನ್ನುವುದೇ ಒಂದು ಮಹಾ ಸುಳ್ಳು ಲೆಕ್ಕ. ಯಾವ ಮಾತಿಗೂ ಸ್ವತಂತ್ರ ಅಸ್ತಿತ್ವ ಇಲ್ಲ ಅರ್ಥ ಇಲ್ಲ… ಬರಿದೇ ಭ್ರಮೆಯ ರವಾನೆ… ಊಹೆಯ ಸಂವಹನ… ನಿಮ್ಮ ಮೂಲ ವಿಷಯಗಳಿಗೂ… ಅಂದರೆ ಅಸ್ತಿತ್ವದ ಹೋರಾಟಗಳಿಗೂ ನಿಮ್ಮ ಮಾತುಗಳಿಗೂ ಖಚಿತ ತರ್ಕ ಇಲ್ಲ. ಇದೆ ಎಂದು ನಾವೆ ನಿರ್ಧರಿಸಿಕೊಂಡಿದ್ದೇವೆ… ನಮ್ಮ ಲೆಕ್ಕವೆ ಸರಿ ಎಂದು ಪರಿಗಣಿಸುವ ಪೈಪೋಟಿಯಲ್ಲಿ ಒಪ್ಪಂದಗಳಲ್ಲಿ ನಡತೆಗಳಲ್ಲಿ ಮನುಷ್ಯ ತಪ್ಪುಗಳನ್ನೇ ಹೆಚ್ಚು ಕೌಶಲ್ಯ ಪೂರ್ಣವಾಗಿ ಹುಡುಕಿ ಪಡೆಯುತ್ತ ಬಂದಿದ್ದಾನೆ.’
‘ಇದರಿಂದ ಅಗಣಿತ ಆಕಾಶದ ಲೆಕ್ಕವೂ ತಪ್ಪಿದಂತಲ್ಲವೇ… ಇದು ಯಾರ ಹೊಣೆ… ನಿನ್ನ ಜೀವಾತ್ಮ ನನ್ನಾದರೂ ಕೇಳು! ಇಷ್ಟೆಲ್ಲ ಲೆಕ್ಕ ಮಾಡಿದ ಆತ್ಮಕ್ಕೆ ಬರೀ ಸೊನ್ನೆಯಷ್ಟೇ ಗೊತ್ತೇ… ಅದರಾಚೆ ಏನೂ ಇಲ್ಲವೇ…’
‘ನಾನೀಗ ತಾನೆ ಜೀವ ಬಿಟ್ಟವನು. ನೀನು ಜೀವ ಬಿಟ್ಟವರಿಗಿಂತಲೂ ಮಿಗಿಲಾಗಿ ಪ್ರಶ್ನೆ ಮಾಡುತ್ತಿರುವೆ. ಇಲ್ಲಿ ಏನೊ ಕಾಣುತ್ತದೆ. ಆವಿಯಾದಂತೆ ಕರಗುತ್ತಿರುತ್ತದೆ. ವಿವರಿಸಲಾರೆ ಈ ಲೋಕವನ್ನು. ಬಿಟ್ಟು ಬಿಡು ನನ್ನ. ಇನ್ನೇನೊ ಕರಕಲಾಗುವ ದೇಹ ಬೂದಿಯಾಗಿ ಅಳಿಯುತ್ತದೆ… ಬೇಗ ಸಾಯಬೇಡ ಹೋಗು ನಿನಗೂ ಹೆಂಡತಿ ಮಕ್ಕಳಿರಬಹುದು…’
ಇದೇನಿದು; ಇಷ್ಟೆಯೇ… ಅಷ್ಟು ದಪ್ಪ ಇದ್ದ ದೇಹ ಉರಿದು ಈಗ ಕೇವಲ ಒಂದು ಬೊಗಸೆಯಷ್ಟು ಬೂದಿ ಆಯಿತಲ್ಲಾ… ಒಂದು ಹೆಮ್ಮರದ ಬೂದಿಯೂ ಒಂದಿಷ್ಟೇ… ನೀರಿಗೆ ಸುರಿದರೆ… ಅದರ ಕಣ ಕಣವು ಕರಗಿ ಮಾಯವಾಗುತ್ತದೆ. ಅಂದರೆ ಅಸ್ತಿತ್ವಕ್ಕೆ ಅರ್ಥ ಇಲ್ಲ. ಸ್ಥಿತಿಗಳಿವೆ. ರೂಪಗಳಿವೆ. ಸಾಂದರ್ಭಿಕ ರಚನೆ, ಚಲನೆ ಆಲೋಚನೆಗಳಿವೆ. ಅಂತಿಮವಾಗಿ ಅವು ಸ್ವತಂತ್ರ ಅಲ್ಲ. ಅವುಗಳ ಅಸ್ತಿತ್ವ ಯಾತಕ್ಕಾಗಿ ರೂಪುಗೊಂಡು ಹೀಗೆ ಲಯವಾಯಿತು… ಈ ಅಖಂಡ ಜೀವ ಜಾಲಕ್ಕೆ ಅರ್ಥದಿಂದ ಪ್ರಯೋಜನ ಇಲ್ಲ. ಅದರಿಂದಲೆ ಮುಕ್ತಿ ಎಂಬುದು ಕೂಡ ಒಂದು ಸುಳ್ಳು ಮುಕ್ತಿಗಾಗಿ ಯಾವುದೂ ಹುಟ್ಟುವುದಿಲ್ಲ. ಕರ್ಮ ಫಲದಿಂದ ಏನೂ ಸಿಗುವುದಿಲ್ಲ. ಹಾಗಾದರೆ ಯಾವುದರಿಂದಲೂ ಏನೂ ಅರ್ಥ ಲಾಭ ಮುಕ್ತಿ ಇಲ್ಲವೇ… ಯೋಚಿಸಬೇಕು ಅನಂತ. ಕ್ಷಣದಿಂದಲೆ ಅನಂತ. ಅನಂತದಿಂದಲೆ ಕ್ಷಣ. ಅವೆರಡೂ ಕೂಡ ಪ್ರಜ್ಞೆಯಲ್ಲಿ ಬಂದು ಹೋಗುತ್ತವೆ; ಆದರೆ ಅವು ನಮ್ಮನ್ನು ಅಖಂಡವಾಗಿಸುವುದಿಲ್ಲ. ತನ್ನ ಸ್ಥಿತಿ ವಿಕಾಸಕ್ಕಾಗಿ ಈ ಆಕಾಶ ಇಷ್ಟೆಲ್ಲ ಜೀವ ರಾಶಿಗಳನ್ನು ತಾನೆ ಸೃಷ್ಠಿ ಮಾಡಿಕೊಂಡಿದೆ. ತಾನೇ ತಿನ್ನುತ್ತ ಬಂದಿದೆ. ತಾನೇ ಬೆಳೆಸುತ್ತ ತಾನೂ ಬೆಳೆಯುತ್ತಿದೆ. ಈ ಸೃಷ್ಟಿ; ಈ ನಿಸರ್ಗ ಈ ಬೆಳಕು ಈ ಕತ್ತಲೆಗಳು ತಮ್ಮನ್ನು ತಾವೇ ತಿಂದು ಜೀರ್ಣಿಸಿಕೊಳ್ಳುತ್ತಲೆ ಬಂದಿವೆ. ಒಬ್ಬನ ತಲೆಯ ಹೊಡೆದು ಮತ್ತೊಬ್ಬ ಬದುಕುವಂತೆ! ಸದಾ ಸತ್ಯವನ್ನೆ ಹೇಳುವೆ ಎಂದು ದೇವರನ್ನೆ ಕೊಂದು ಮೆಲ್ಲುತ್ತ ಬಂದಿರುವ ಬುದ್ಧಿವಂತರ ಹಾಗೆಯೇ ಇದೆ ಈ ನಿಸರ್ಗ ನಿಯಮ. ಅದಕ್ಕೂ ನಮಗೂ ಅವಿನಾಭಾವ ಸಂಬಂಧ ಇದೆ.
ನನಗೆ ನಾನೆ ಕೇಳಿಕೊಂಡೆ… ಹಾಗಾದರೆ ಈ ಅನಂತ ಖಗೋಳವೊ ನಿಸರ್ಗವೊ ಬಹಳ ಕ್ರೂರಿಯೇ… ಹಿಂಸೆ ಸೃಷ್ಟಿಯ ಒಂದು ಬೇಸಿಕ್ ಎಲಿಮೆಂಟೇ… ಆದಿ ಆದಿ ಕಾಲದ ಮಾನವ ನರಭಕ್ಷಕನಾಗಿದ್ದ. ಬದುಕಿ ಉಳಿಯಲು ತಿನ್ನುತ್ತೇವೆ ಎಂದು ಹೇಳಿದ್ದಾರೆ. ಹೀಗೆ ಭಕ್ಷಕನಾಗಲು ಬದುಕಿ ಉಳಿಯಲು ಹೋರಾಡಬೇಕೇ… ಬದುಕಿ ಉಳಿಯಲು ಏನೆಲ್ಲ ಹಿಂಸೆ ಮಾಡಿದರೂ ಅವನು ಕೊನೆಗೂ ಉಳಿಯುವುದೇ ಇಲ್ಲವಲ್ಲಾ… ಯಸ್; ಮೇಬಿ ಯಸ್; ಇಲ್ಲವೇ, ಆ್ಯಬ್ಸಲ್ಯೂಟ್ಲಿ ಯಸ್ ವಿತ್ ಹೋಪ್ಸ್… ನಾನು ಸರಿಯಾದ ಇಂಗ್ಲೀಷ್ ವಾಕ್ಯ ಬರೆದೆನೆ? ಬರೆಯಲಿಲ್ಲ. ತಪ್ಪು. ಭಾಷೆ ತಪ್ಪು ವಿಚಾರಗಳಿಗೇ ಹೆಚ್ಚಿನ ಶಬ್ದ ಸಂಪತ್ತನ್ನು ನೀಡಿಬಿಟ್ಟಿದೆ. ಸುಳ್ಳು ಎಲ್ಲಿ ಯಾವ ಭಾಷೆಯಲ್ಲಿ ಅಪಾರ ಪ್ರಮಾಣದಲ್ಲಿ ತುಂಬಿದೆಯೊ ಅದು ಬಲಿಷ್ಟವಾಗಿ ಸತ್ಯವನ್ನು ದಮನಗೊಳಿಸುತ್ತದೆ. ಚರಿತ್ರೆಯ ಪ್ರಯೋಗಾಲಯದಲ್ಲಿ ಇಂತಹ ಸಂಗತಿಗಳು ನಿತ್ಯ ಘಟಿಸುತ್ತಲೇ ಬಂದಿವೆ. ಮುಂದೆ ಸುಳ್ಳುಗಳೇ ಜಗತ್ತಿನ ದೇವರುಗಳನ್ನು ಆಳುವುದು. ಸತ್ಯ ಆಗಬಹುದು ಹೋಗಬಹುದು! ಅದೊಂದು ಸಾಪೇಕ್ಷ ಸಂಗತಿಯಾಗಿ ಒಂದು ಪಳೆಯುಳಿಕೆಯಂತೆ ಜೊತೆಯಲ್ಲೆ ಇರಬಹುದು. ನಮ್ಮ ಡಿಎನ್‌ಎ ಸರಪಳಿಯಲ್ಲಿ ಘೋರವಾದ ಸಂಗತಿಗಳನ್ನೆಲ್ಲ ಲಕ್ಷಾಂತರ ವರ್ಷಗಳಿಂದ ನಿವಾಳಿಸಿ ಸಂಭಾಳಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ಅವನ್ನು ನಾಜೂಕು ಮಾಡಿ ಹೊರ ಬಿಡುತ್ತಲೇ ಇರುತ್ತೇವಲ್ಲಾ…
ಎಲ್ಲಿಂದ ಎಲ್ಲಿಗೆ ಬಂದಿದ್ದೇವೆ… ಹೊತ್ತು ನಮಗೆ ಮೀರಿತೆಂದರೆ ಆಕಾಶಕ್ಕೆ ಹೊತ್ತಾಯಿತು ಎಂದಲ್ಲ. ನಾಳೆ ವಿಚಾರ ಮಾಡುವ ಎಂದು ಎದ್ದೆ. ಗಾಡಿಯ ಕಿಕ್ ಮಾಡಿದೆ. ಅದು ಮುನಿದಿತ್ತು. ಕಿಕ್ ಮಾಡಿ ಸುಸ್ತಾದೆ. ತಳ್ಳಿಕೊಂಡು ಬಂದೆ. ರಸ್ತೆ ಸಿಕ್ಕಿತ್ತು. ಯಾರೊ ವಿಚಾರಿಸಿದರು. ತಟಕ್ಕನೆ ಕಿಕ್ ಮಾಡುವಷ್ಟು ಬಲ ಇರಲಿಲ್ಲ. ತೂರಾಡುತಿದ್ದೆ. ಕಿಕ್ ಮಾಡಿದರು. ವರ್ರೋ ಎಂದು ಎಕ್ಸ್‌ಲೇಟರ್ ಏರಿಸಿದರು. ಸದ್ದೋ ಸದ್ದು. ಸೈಲೆನ್ಸರ್ ಕಿತ್ತು ಬಿದ್ದು ಹೋಗಿತ್ತು. ಕರ್ಕಶ ರಾಕ್ಷಸ ಸದ್ದು ಮೊರೆಯಿತು. ಲೆಕ್ಕಿಸಲಿಲ್ಲ. ಊರ ನಾಯಿಗಳೆಲ್ಲ ಘೋರವಾದ ಮಾನವ ವಿಕಾರ ಇದು ಎಂದು ಮೂಲೆ ಮೂಲೆಯಿಂದ ಬೊಗಳುತ್ತ ಬಂದವು. ಈ ಸದ್ದಿನ ದುರಂತ ಏನು? ಈ ಪ್ರಾಣಿಗಳಿಗೆ ಈ ಕೆಟ್ಟ ಯಂತ್ರದ ಭಾಷೆಯ ತಂತ್ರಜ್ಞಾನ ಗೊತ್ತಿದೆಯೇ… ಇಡೀ ಊರ ಮಾಳವೆಲ್ಲ ನನ್ನ ಕತ್ತೆ ಮೊಪೆಡ್‌ನ ಸೈಲೆನ್ಸರ್ ರಹಿತ ಸದ್ದಿನಿಂದ ಬೆಚ್ಚಿತ್ತು. ಏರಿ ಎಳೆಯಲಾರದು. ವಿಪರೀತ ನಿಧಾನ ವೇಗ. ಸದ್ದೋ ಗುಡುಗುಡಿಗಿನಂತೆ. ಈ ಗಾಡಿಯನ್ನು ಇಲ್ಲೇ ಬಿಸಾಡಿಬಿಡಲೇ ಎನಿಸಿತು. ನಿಲ್ಲಿಸಿದರೆ ಮತ್ತೆ ಎಲ್ಲಿ ಸ್ಟಾರ್ಟ್ ಆಗುವುದಿಲ್ಲವೊ ಎಂದು ನುಗ್ಗಿಸಿದೆ. ಮನೆಗೆ ಬಂದಾಗ ಎಷ್ಟು ಹೊತ್ತಾಗಿರಬಹುದು. ನಾನಾಗ ವಾಚು ಕಟ್ಟುತ್ತಿರಲಿಲ್ಲ. ಗಡಿಯಾರ ಕಂಡರೆ ಆಗುತ್ತಿರಲಿಲ್ಲ. ನಾನು ಕನ್ನಡಿ ನೋಡಿಕೊಳ್ಳುವುದ ಬಿಟ್ಟು ಬಹಳ ದಿನಗಳಾಗಿದ್ದವು. ಗಡ್ಡ ಬಿಟ್ಟಿದ್ದೆ. ಸಮಯ ಎಷ್ಟಾಗಿದೆ ಎಂದು ತಿಳಿಯಲು ಆಕಾಶ ನೋಡುತಿದ್ದೆ. ಬಾಗಿಲು ಬಡಿವ ಮುನ್ನ ಹತ್ತು ಸಲ ಯೋಚಿಸಿದೆ. ಸುಖ ನಿದ್ದೆಯ ಕಾಲ. ಕೋಳಿ ಕೂಗುವ ಹೊತ್ತು. ಬೆಚ್ಚಗೆ ಮಗುವ ಕಿಬ್ಬೊಟ್ಟೆಗೆ ಹಾಕಿಕೊಂಡು ಮಲಗಿರುತ್ತಾಳೆ. ಎಬ್ಬಿಸಬಾರದು ಎಂದು ಟೆರೇಸಿಗೆ ಹೋಗಿ ಮೂಲೆ ಸೇರಿ ಒರಗಿದೆ. ಮಾಯದ ನಿದ್ದೆ ಅಗುತಿಕೊಂಡಿತ್ತು.
ಅದಾಗಲೆ ಬಿಸಿಲು ಏರಿತ್ತು. ಕೂಸಿನ ಬಟ್ಟೆಗಳ ತೊಳೆದು ಟೆರೇಸಲ್ಲಿ ಒಣ ಹಾಕಲು ಬಂದಿದ್ದ ಹೆಂಡತಿ ಮುದುರಿ ಕೂತೇ ನಿದ್ದೆ ಮಾಡುತ್ತಿದ್ದ ನನ್ನ ಕಂಡು ದಂಗಾಗಿದ್ದಳು. ಎಬ್ಬಿಸಿ ಒಳ ಕರೆದೊಯ್ದು ಬಿಸಿ ನೀರು ಸ್ನಾನ ಮಾಡು ಎಂದಳು. ಒಂದೂವರೆ ವರ್ಷದ ಮಗಳು ಬೆಳಕು ತರಾವರಿ ಆಟದ ಸಾಮಾನುಗಳ ಜೊತೆ ಆಡುತ್ತ ಹಜಾ಼ರದಲ್ಲಿದ್ದಳು. ಸ್ನಾನ ಮಾಡಿ ಬಂದು ಮಗುವ ಎತ್ತಿಕೊಂಡು ಹೊಟ್ಟೆ ಮೇಲೆ ಕೂರಿಸಿಕೊಂಡು ಮುದ್ದು ಮಾಡಿದೆ. ಕತ್ತೆ ಮೊಪೆಡ್ ಅರಚಿ ಕರೆದಂತಾಯಿತು. ‘ಪಾಪೂ… ಅಮ್ಮನ ಮಡಿಲೇ ಸರೀ… ಅಪ್ಪ ಸರಿ ಇಲ್ಲಾ… ಆಟ ಆಡ್ತಿರೂ ನನ್ನ ಕತ್ತೆ ಮೊಪೆಡ್ ರಿಪೇರಿ ಮಾಡಿಸಬೇಕೂ… ಆ ಮೇಲೆ ಬರ್ತೀನಿ’ ಎಂದು ಮಗುವ ಹೆಂಡತಿ ಕೈಗೆ ಕೊಟ್ಟು ಹೊರ ಬಂದು; ಮನೆ ಮುಂದೆ ಕಿಕ್ ಮಾಡದೆ ಮರೆಗೆ ಎಳೆದು ತಂದು ಕಿಕ್ ಮಾಡಿದ ಕೂಡಲೆ ಅಲ್ಲೇ ಹತ್ತಿರದಲ್ಲಿದ್ದ ಸ್ಲಂಡಾಗ್‌ಗಳೆಲ್ಲ ನನ್ನತ್ತ ಬೊಗಳುತ್ತ ನುಗ್ಗಿ ಬಂದವು. ರೈಜ಼್ ಮಾಡಿದೆ. ನಾಯಿಗಳು ದಿಕ್ಕಾಪಾಲಾದವು. ಹಿರಿಯ ಹಾದಿ ಹೋಕರು ಶಪಿಸುತ್ತಿದ್ದರು. ಕಿವುಡಾಗುವಂತಹ ಸದ್ದು. ಸದ್ಯ ತಂದು ರಿಪೇರಿ ವಾಲನ ಮುಂದೆ ಕೆಡವಿದೆ. ಏನೂ ಹೇಳಲೆ ಬೇಕಿರಲಿಲ್ಲ. ಆ ಮೊಪೆಡೆಗೆ ಹತ್ತಾರು ಸಮಸ್ಯೆಗಳಿದ್ದವು. ಅವನು ಒಂದು ಕಾಲದ ನನ್ನ ವಿದ್ಯಾರ್ಥಿ. ಕಾಸು ಕರಿಮಣಿ ಕೊಡಬೇಕಿರಲಿಲ್ಲ. ಅಭಿಮಾನಿ. ಸಂಜೆ ಬನ್ನಿ ರೆಡಿ ಮಾಡಿರುವೆ ಎಂದ. ಬಾರ್ ಒಳಕ್ಕೆ ಹೋದೆ. ಸಂಜೆಗೆ ಮುಂಚೆಯೆ ಬಂದು ಕುಡಿದೆನಲ್ಲಾ ಎಂಬ ಗಿಲ್ಟಿನಿಂದ ಮತ್ತೆ ಎರಡು ಪೆಗ್ ಹಾಕಿದೆ. ಎಲ್ಲಾ ತರದ ಬ್ರಾಂಡ್‌ಗಳ ಕುಡಿಯುತಿದ್ದೆ. ಅವತ್ತು ಒಲ್ಡ್ ಮಾಂಕ್ ರಮ್ ಹೀರಿದ್ದೆ. ಆ ಚಿತೆಯೇ ಹೊತ್ತಿಕೊಂಡಂತಾಗಿತ್ತು. ಅದೊಂದು ಗಲ್ಲಿ ಗಟಾರದ ಬೀದಿಯ ಒಳಗಿನ ಬಾರ್. ಕೆಳಮಟ್ಟದ ಕುಡುಕರೇ ತುಂಬಿದ್ದರು. ನೀರು ಬೆರೆಸಿಕೊಳ್ಳದೆ ಕುಡಿವವರೂ ಇದ್ದರು. ವಿಪರೀತ ಬೀಡಿ ಸಿಗರೇಟು ಹೊಗೆಯ ಕಮಟು ವಾಸನೆ. ಕಿಟಕಿಯೇ ಇಲ್ಲದ ಕೊಠಡಿ ಉಸಿರುಗಟ್ಟಿಸುವ ವಾತಾವರಣ. ಗ್ಯಾಸ್ ಛೆಂಬರಿನ ಕೊಠಡಿಯಲ್ಲಿ ಸಿಲುಕಿದಂತೆ ಭ್ರಮೆ. ಮಂದ ಬೆಳಕನ್ನು ಹೊಗೆ ಧೂಳು ಮಸಿ ಮುಚ್ಚಿಕೊಂಡಿದ್ದವು.
ಅಂತಹ ಸ್ಥಿತಿಯಲ್ಲಿ ಆ ಚಿತೆಯಾಗಿದ್ದವನು ಎದ್ದು ಬಂದು ಕೂತಂತೆ ಭಾಸವಾಗಿ; ಛೀ; ಅಷ್ಟು ಹತ್ತಿರದಿಂದ ನೋಡಬಾರದಿತ್ತು ಎಂದುಕೊಂಡು ಹೊರಬಂದೆ. ಮಾರುಕಟ್ಟೆಯ ಬೀದಿ. ಅಲ್ಲೆಲ್ಲ ರೌಡಿಗಳದೇ ದರ್ಬಾರು. ಅಲ್ಲಲ್ಲಿ ವೇಶ್ಯೆಯರು ನಿಂತಿದ್ದರು. ಯಾರೊ ಗರ್ವದಿಂದ ಕರೆದರು. ಹಿಂತಿರುಗಿ ನೋಡಿದೆ. ‘ಏನೋ ಲೇಯ್… ಬೀದಿ ನಾಯಾದಾ’ ಎಂದ. ದಿಟ್ಟಿಸಿದೆ. ‘ಗಂಗೋತ್ರಿ ಅಲ್ಲ ಮಗನೇ; ಇದು ನಮ್ಮೂರು… ನಿನ್ನಂತವರು ಇಲ್ಲಿ ಕಾಲಿಡುವಂತಿಲ್ಲ’ ಎನ್ನುತ್ತ ಹತ್ತಿರ ಬಂದು ಎದೆಯ ಮೇಲೆ ಜೋರಾಗಿ ಕೈ ಒತ್ತಿ ತಳ್ಳಿದ. ಒಂದು ಕಾಲಕ್ಕೆ ಗಂಗೋತ್ರಿಯ ಹೋರಾಟದ ದಿನಗಳಲ್ಲಿ ರೂಮಿಗೆ ಕೂಡಿ ಹಾಕಿ ಹೊಡೆಯಲು ಮುಂದಾಗಿದ್ದವರಲ್ಲಿ ಆತ ಒಬ್ಬ ಪ್ರಮುಖನಾಗಿದ್ದ. ನನ್ನ ಎದೆ ಮೇಲೆ ಬೂಟುಗಾಲಿಟ್ಟಿದ್ದವನು. ಸ್ವತಃ ನಾನೇ ಒಂದು ಉರಿಯುತ್ತ ಅಡ್ಡಾಡುತ್ತಿರುವ ಚಿತೆಯಂತಿದ್ದೆ. ನೆತ್ತಿಗೇರಿತ್ತು ನಿಶೆ. ನನ್ನೊಳಗೂ ಒಬ್ಬ ಪಾತಕಿ ಇದ್ದ. ಅವನನ್ನು ಸರಪಳಿಯಲ್ಲಿ ಬಂಧಿಸಿ ಸುಪ್ತ ಪ್ರಜ್ಞೆಯ ಜೈಲಿಗೆ ಅಟ್ಟಿಬಿಟ್ಟಿದ್ದೆ. ಬಾ ಎಂದರೆ ಒಂದೇ ಕ್ಷಣಕ್ಕೆ ಮನದ ಸರಳುಗಳ ಮುರಿದು ನುಗ್ಗಿ ಬಂದುಬಿಡುತ್ತಿದ್ದ. ಬಹಳ ಸೂಕ್ಷ್ಮ ಕಾಲದಲ್ಲಿದ್ದೆ. ತಿವಿದುಬಿಡಲು ಹೆಚ್ಚಿನ ಬಲ ಬೇಕಿರಲಿಲ್ಲ. ಯಾವ ಕೊಂಪೆಯಲ್ಲಿ ಯಾರು ಇರಿದು ಉರುಳಿಸುವರೊ ಎಂಬ ಎಚ್ಚರಿಕೆ ಇತ್ತು. ಹಾಗಾಗಿಯೇ ಬಟನ್ ನೈಫ್ ಸದಾ ಜೇಬಲ್ಲಿ ಸಿದ್ಧವಾಗಿರುತ್ತಿತ್ತು. ನಕ್ಸಲನಾಗಿದ್ದರೇ ಚೆಂದವಿರುತ್ತಿತ್ತೇನೊ; ಬೀದಿಯ ರಂಪಾಟದಲ್ಲಿ ಕುಡಿದು ಕ್ಷುಲಕ ಕಾರಣಕ್ಕೆ ಕೊಂದೊ ಕೊಲ್ಲಿಸಿಕೊಳ್ಳುವುದು ತಪ್ಪುತ್ತಿತ್ತು ಎಂದು ಅವನಿಗೆ ಎಚ್ಚರಿಕೆ ಕೊಡುವಂತೆ ಹರಿತವಾದ ಚಾಕುವ ತೆರೆದು ತೋರಿದೆ. ‘ವೋಹೋಹೊ… ಚುಚ್ಚಲಾ… ದಮ್ಮಿದ್ದದ್ಲಾ… ಬಾಲಾ’ ಎಂದು ನುಗ್ಗಿ ಬಂದ. ಹಿಂದಕೆ ಜಂಪ್ ಮಾಡಿ ಕೂತುಕೊಂಡೇ ಅವನ ಕಾಲ ಬುಡದತ್ತ ನುಗ್ಗಿ ಕ್ಷಣ ಮಾತ್ರದಲ್ಲಿ ಅವನ ಕಿಬ್ಬೊಟ್ಟೆಗೆ ತಿವಿದಂತೆ ಚಾಕು ಇಟ್ಟಿದ್ದೆ. ಅವನು ಊಹೆ ಕೂಡ ಮಾಡಿರಲಿಲ್ಲ. ‘ಬಿಡೊ ಬಿಡೋ ತಮಾಸೆ ಮಾಡ್ದೆಕನಾ… ಸೀರಿಯಸ್ಸು ಅಂತಾ ಹಾಕ್ಬುಟ್ಟಿಯೇ’ ಎಂದು ವಿನಂತಿಸಿದ. ಅಷ್ಟು ಸುಲಭವಾಗಿ ಬಿಟ್ಟಿರಲಿಲ್ಲ. ಎಡಗೈಯಲ್ಲಿ ಅವನ ವೃಷಣಗಳ ಬಿಗಿದು ಹಿಡಿದು ಹಿಚುಕಿದ ಕೂಡಲೆ ಅರ್ಧಜೀವ ಹೋದಂತೆ ಅರಚಿದ್ದ. ತತ್; ಅಲ್ಲೂ ಗಲ್ಲಿ ನಾಯಿಗಳು ಅವನ ಆರ್ತ ಸದ್ದಿಗೆ ಬೆದರಿ ಬೊಗಳುತ್ತ ಬಂದು ಪರಿಸ್ಥಿತಿಯ ನೋಡಿ ಇದು ನಮ್ಮ ಸಮಸ್ಯೆ ಅಲ್ಲ ಎಂದು ಕತ್ತಲತ್ತ ಹೊರಟು ಹೋದವು. ಕಿತ್ತುಕೊಂಡು ಓಡುವಂತಿರಲಿಲ್ಲ. ಅಮುಕಿದಂತೆಲ್ಲ ‘ಲವ್ವೋ… ಯಾರರ ಬಿಡಿಸ್ರೊ’ ಎಂದು ಉಸಿರೆಳೆದುಕೊಳ್ಳುತ್ತಿದ್ದ. ಅವರಿವರೆಲ್ಲ ನೆರೆದರು. ‘ಬಿಡಪ್ಪಾ…ʼ ಎಂದು ಉಪಾಯ ಮಾಡಿದರು. ಎಚ್ಚರಿಸಿದೆ. ‘ತಿಳ್ಕೋ… ನಾನು ಉರೀತಿರೊ ಹೆಣಾ… ನಾನು ನಿನ್ನ ಮುಟ್ಟಿದ್ರೆ ನೀನು ಸುಟ್ಟೋಯ್ತಿಯೆ. ವೋಗೋಕೇ ಬಂದಿರೋನು! ಆದ್ರೆ ವೋಗು ಮುಂಚೆ ನಿನ್ನಂತೆವುರ ಮಟ್ಟ ಮಾಡ್ಬುಟ್ಟು ವಯ್ತಿನಿ. ನನ್ನ ತಂಟೆಗೆ ಮತ್ತೆಂದಾದ್ರು ಬಂದೋ… ಆಮೇಕೆ ಏನಾಯ್ತು ಅಂತ ನಿನ್ಗೆ ಗೊತ್ತಾಗುದಿಲ್ಲಾ’ ಎಂದು ಹೇಳಿ ಬಿಟ್ಟು ಕಳುಹಿಸಿದ್ದೆ.
ಮನೆಗೆ ಬಂದಿದ್ದೆ. ಮಳೆಯಲ್ಲಿ ತೋಯ್ದುಹೋಗಿದ್ದೆ. ಬಟ್ಟೆ ಬದಲಿಸಿ ಕೂತೆ. ಹೆಂಡತಿ ಊಟವಿಟ್ಟಳು. ‘ಹೀಗೆ ಕುಡಿದು ಬರಬೇಡಿʼ ಎಂದು ಹೇಳಿ ಹೇಳಿ ಸಾಕಾಗಿದ್ದಳು. ಮಗು ಮಲಗಿತ್ತು. ಊಟ ಮುಗಿಸಿ ಹರಟೆಗೆ ಕೂತೆ. ಆಸಕ್ತಿ ಇರಲಿಲ್ಲ ಹೆಂಡತಿಗೆ. ‘ಇವತ್ತು ಅಕಸ್ಮಾತ್ ಬದ್ಕಿ ಬಂದಿವಿನಿ… ಅವನೊಬ್ಬ ರೌಡಿ ಮಚ್ಚ ಬೀಸಿದ್ದ. ತಪ್ಪಿಸಿಕೊಂಡು ಬಂದೆʼ ಎಂದಿದ್ದೆ. ಗಾಬರಿಯಾದಳು. ‘ಎಲ್ಲೂ ಹೊರಗೆ ಹೋಗಬೇಡಿ. ಊರಿಂದ ಎಲ್ಲ ತರಿಸ್ತೀನಿ. ಮಾಡಿ ಹಾಕ್ತೀನಿ. ಉಂಡ್ಕಂಡು ತಿನ್ಕಂಡು ಓದ್ಕಂಡು ಬರ್ಕಂಡು ಮನೆಲೇ ಇರಿ. ಏನಾರ ಆಗೋದ್ರೆ ನನುಗೆ ಯಾರಿದ್ದಾರು… ಈ ಮಗುವ ಏನ್ಮಾಡೋದು… ಪ್ಲೀಸ್ ಕುಡಿಯೋದ ಬಿಟ್ಟು ಬಿಡಿ. ಮೈಸೂರ್ಗೆ ಹೋಗೋಣ. ಅಲ್ಲೆ ಏನಾರ ದಾರಿ ಹುಡ್ಕೋಣ’ ಎಂದು ಕೋರಿದ್ದಳು. ‘ಆಗ್ಲಿ; ಪ್ರಯತ್ನ ಮಾಡ್ತೀನಿ ಎಂದು ಟಿ.ವಿ.ಮುಂದೆ ಕೂತು ಹಾಗೇ ಹೊತ್ತು ಸಾಗಿ ಚೇರಲ್ಲೇ ಒರಗಿ ನಿದ್ದೆ ಮಾಡುತಿದ್ದೆ. ಎಬ್ಬಿಸಿ ಕರೆದೊಯ್ದು ಮಲಗಿಸಿಕೊಂಡಳು. ನಮ್ಮಿಬ್ಬರ ಮಧ್ಯೆ ಮಗು ಮಲಗಿತ್ತು. ಚಿಂತೆಯ ಚಿತೆ ಉರಿಯುತ್ತಿತ್ತು. ಮುದ್ದಿಸುವ ಆಸೆಯೆ ಇರಲಿಲ್ಲ. ದುತ್ತೆಂದು ಉರಿಯುತ್ತಿದ್ದ ಚಿತೆ ನನ್ನ ಜೊತೆಯೆ ಮಲಗಲು ಬಂದಂತಾಯಿತು. ದಡಕ್ಕನೆ ಎದ್ದೆ. ಹಾಲ್‌ನಲ್ಲಿ ದಿವಾನ್‌ಕಾಟಲ್ಲೆ ಮಲಗುವೆ ಎಂದು ಹೊರಬಂದೆ. ಪುಸ್ತಕಗಳ ಮರೆಯಲ್ಲಿ ಬಾಟಲಿತ್ತು. ಸದ್ದಾಗದಂತೆ ಗ್ಲಾಸಿಗೆ ಸುರಿವಿಕೊಂಡು ನೀರು ಬೆರೆಸಿ ಗಟಗಟನೆ ಕುಡಿದು ಹಾಗೇ ಒರಗಿದೆ. ನಿದ್ದೆಯೊ ಅರೆ ಸಾವೊ ಯಾವಾಗ ಬಂದಿತ್ತೊ ಗೊತ್ತಾಗಲಿಲ್ಲ.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.