ಇದನ್ನು ಕೇಳಿದ ಆಟೋದವನಿಗೆ ಇನ್ನೂ ಗಾಬರಿಯಾಯಿತು. ಯಾಕೆಂದರೆ ನಿನ್ನೆ ರಾತ್ರಿ ಮೂವರು ಚಿನ್ನದ ಅದಿರನ್ನು ಕಳ್ಳತನ ಮಾಡಲು ಇಳಿದುಕೊಂಡ ಹಳೆ ಗಣಿಗಳಿರುವುದು ಮಾರಿಕುಪ್ಪಮ್ ಮತ್ತು ಬಿಸಾನತ್ತಮ್ ಮಧ್ಯೆ ಇರುವ ಪ್ರದೇಶದಲ್ಲಿ. ಆಟೋದವನು ತನ್ನ ಮೂವರೂ ಗೆಳೆಯರಿಗೆ ಯಾವುದೇ ಅಪಾಯ ಆಗಬಾರದು ಎಂಬುದಾಗಿ ಮತ್ತೆಮತ್ತೆ ಉದ್ದಂಡಮ್ಮಾಳ್ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡ. ತನಗೆ ಏನು ಮಾಡಬೇಕೊ ಅರ್ಥವಾಗದೆ ಚಡಪಡಿಸುತ್ತ ಸರಾಯಿ ಅಂಗಡಿ ತಲುಪಿದ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೈದನೆಯ ಕಂತು ನಿಮ್ಮ ಓದಿಗೆ
ಬೆಳಿಗ್ಗೆ ಅದೇ ಕಾಂಪೌಂಡಿನ ಒಂದು ಶೆಡ್ ಒಳಗೆ ಒಂದು ಕಡೆ ದೋಸೆಗೆ ಹಿಟ್ಟು ರುಬ್ಬುವಂತೆ ಅದಿರು ಕಲ್ಲುಗಳನ್ನು ಒಂದು ಯಂತ್ರ ಗರ.. ಗರ.. ಎಂದು ಸದ್ದು ಮಾಡುತ್ತಾ ರುಬ್ಬುತ್ತಿದೆ. ಚೆನ್ನಾಗಿ ನುಣ್ಣಗೆ ರುಬ್ಬಿದ ಮೇಲೆ ಆ ಕಲ್ಲಿನ ಪುಡಿಯನ್ನು ಬಾಚಿಕೊಂಡು ಇನ್ನೊಂದು ಯಂತ್ರಕ್ಕೆ ಹಾಕಿ ಸ್ವಿಚ್ ಆನ್ ಮಾಡಲಾಯಿತು. ಆ ಯಂತ್ರ ಆ ನುಣ್ಣನೆ ಪುಡಿಯನ್ನ ಇನ್ನಷ್ಟು ಮತ್ತಷ್ಟು ನುಣ್ಣಗೆ ಧೂಳಾಗುವಂತೆ ಮಾಡಿತು. ಈಗ ಆ ಧೂಳನ್ನು ಬಾಯಿಂದ ಪೂಃ ಎಂದರೆ ಸಾಕು ಗಾಳಿಗೆ ಹಾರಿಹೋಗುವಷ್ಟು ಧೂಳಾಗಿತ್ತು. ರುಬ್ಬುತ್ತಿದ್ದ ಯುವಕ ಆ ಧೂಳನ್ನು ತಟ್ಟೆಯಲ್ಲಿ ಸಂಗ್ರಹಿಸಿಕೊಂಡು ಹೊರಕ್ಕೆ ತಂದ.
ಈಗ ಇನ್ನಿಬ್ಬರು ಯುವಕರು ಬೆಳಗಿನ ಬಿಸಿಲಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಒಬ್ಬ ಯುವಕ ಒಂದು ಉಕ್ಕಿನ ಬಾಣಲೆಯಲ್ಲಿ ಅರ್ಧ ಕೆಜಿಯಷ್ಟು ಧೂಳನ್ನು ತೆಗೆದು ಹಾಕಿಕೊಂಡು ಕುಕ್ಕರುಕಾಲಿನಲ್ಲಿ ಕಲ್ಲಿನ ಮೇಲೆ ಕುಳಿತುಕೊಂಡ. ನಿಂತಿದ್ದ ಯುವಕ ಬಾಣಲೆಯ ಮೂಲೆಯಲ್ಲಿ ನೀರನ್ನು ಸಣ್ಣದಾಗಿ ಸುರಿಯುತ್ತಿದ್ದರೆ ಬಾಣಲೆ ಹಿಡಿದುಕೊಂಡಿರುವವನು ಬಾಣಲೆಯಲ್ಲಿರುವ ಮಣ್ಣಿನ ಧೂಳನ್ನು ಒಂದು ಕಡೆಗೆ ಬಾಗಿಸಿ ಜಾಲಿಸುತ್ತಾ ಹೋದ. ನೀರು ಮತ್ತು ಮಣ್ಣು-ಧೂಳು ನಿಧಾನವಾಗಿ ಕೆಳಕ್ಕೆ ಬೀಳುತ್ತಾಹೋಗುತ್ತಿತ್ತು.
ಇದೇ ಪ್ರಕ್ರಿಯೆ ಹತ್ತಾರು ನಿಮಿಷಗಳು ಸಾಗಿದ ಮೇಲೆ ಬಾಣಲೆ ಎತ್ತರ ಇರುವ ಕಡೆ ಮಣ್ಣಿನ ಗಸಿಯ ಮಧ್ಯೆ ಚಿನ್ನದ ಕಣಗಳು ಪಳಪಳನೆ ಬೆಳಕಿನಲ್ಲಿ ಹೊಳೆಯುತ್ತಿದ್ದವು. ಚಿನ್ನದ ಸಾಂದ್ರತೆ ಕಲ್ಲಿನ ಧೂಳಿಗಿಂತ ಹೆಚ್ಚಿರುವುದರಿಂದ ಅದು ಬಾಣಲೆಯಲ್ಲಿ ಮಣ್ಣು ಧೂಳಿನ ಹಿಂದೆ ನಿಂತುಕೊಳ್ಳುತ್ತಿತ್ತು. ಯುವಕ ಜಾಲಿಸುವುದನ್ನು ಬಿಟ್ಟು ಬಾಣಲೆಯಲ್ಲಿರುವ ನೀರನ್ನೆಲ್ಲ ಕೆಳಕ್ಕೆ ಸುರಿಸಿ ಹೊಳೆಯುವ ಚಿನ್ನದ ಕಣಗಳುಳ್ಳ ಗಸಿಯನ್ನು ಬ್ರಶ್‌ನಿಂದ ಸಣ್ಣ ಬೋಗುಣಿಗೆ ಹಾಕಿಕೊಂಡ. ಅದೆಲ್ಲ ಆದ ಮೇಲೆ ಮೊದಲೇ ಅದೇ ರೀತಿ ತೆಗೆದುಕೊಂಡಿದ್ದ ಚಿನ್ನದ ಗಸಿ ಮತ್ತು ಮಣ್ಣನ್ನ ಬಿಸಿಲಿಗೆ ಒಣಗಲು ಇಟ್ಟು ಅಲ್ಲೇ ಕುಳಿತುಕೊಂಡು ತಿಂಡಿ ತಿನ್ನುತ್ತಾ ಕಾಲ ಕಳೆದರು.
ಈಗ ಒಣಗಿದ ಆ ಎಲ್ಲ ಚಿನ್ನದ ಧೂಳನ್ನು ಒಂದು ತಟ್ಟೆಗೆ ಹಾಕಿಕೊಂಡು ಅದಕ್ಕೆ ಪಾದರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿದರು. ಪಾದರಸ ಲಕ್ಷಾಂತರ ಗುಳ್ಳೆಗಳಾಗಿ ಒಡೆದುಹೋಗಿ ಚಿನ್ನದ ಕಣಗಳನ್ನು ಮಾತ್ರ ಆಕರ್ಷಿಸಿ ಸೆಳೆದುಕೊಂಡವು. ಈಗ ಚಿನ್ನದೊಂದಿಗಿನ ಪಾದರಸದ ಗುಳ್ಳೆಗಳನ್ನೆಲ್ಲ ಬೇರೊಂದು ತಟ್ಟೆಗೆ ವರ್ಗಾಯಿಸಲಾಯಿತು. ತಟ್ಟೆಯಲ್ಲಿ ಈಗ ಬರೀ ಮಣ್ಣು-ಧೂಳು ಮಾತ್ರ ಉಳಿದುಕೊಂಡಿತ್ತು. ಚಿನ್ನ ಇರುವ ಪಾದರಸವನ್ನು ಒಂದು ಹತ್ತಿ ಬಟ್ಟೆಗೆ ಸುರಿದುಕೊಂಡು ಬಟ್ಟೆಯನ್ನು ಮಡಚಿ ಜೋರಾಗಿ ಹಿಸಿಕಿದಾಗ ಪಾದರಸ ಬಟ್ಟೆಯ ತೂತುಗಳಲ್ಲಿ ಹೊರಕ್ಕೆ ಬಂದುಬಿಟ್ಟಿತು. ಚಿನ್ನದ ಧೂಳು ಮಾತ್ರ ಬಟ್ಟೆಯಲ್ಲಿ ಉಳಿದುಕೊಂಡು ಅದನ್ನು ಬೇರೆ ತಟ್ಟೆಯಲ್ಲಿ ಸಂಗ್ರಹ ಮಾಡಿಕೊಂಡರು. ಈಗ ಚಿನ್ನವನ್ನು ಡಿಜಿಟಲ್ ತೂಕದ ಯಂತ್ರದಲ್ಲಿ ತೂಕ ಮಾಡಿ ಸಣ್ಣಸಣ್ಣ ಪೊಟ್ಟಣಗಳಲ್ಲಿ ಮಡಿಚಿಟ್ಟರು.
*****
ಸಾಯಂಕಾಲ ಇಬ್ಬರು ದಾಂಡಿಗರಿರುವ ಒಂದು ದ್ವಿಚಕ್ರ ವಾಹನ ರಾಬರ್ಟ್ಸನ್‌ಪೇಟೆಯ ಒಂದು ಜನನಿಬಿಡ ಮನೆ ಮುಂದೆ ನಿಂತುಕೊಂಡಿತು. ಇಬ್ಬರಲ್ಲಿ ಒಬ್ಬ ಬಾಗಿಲು ಮೇಲೆ ಸಣ್ಣದಾಗಿ ಕುಟ್ಟಿ ಬಾಗಿಲು ತೆರೆದುಕೊಂಡಿದ್ದೆ ಇಬ್ಬರು ದಾಂಡಿಗರು ಮನೆ ಒಳಕ್ಕೆ ಹೋದರು. ಬಾಗಿಲು ತೆರೆದವನು ಬಾಗಿಲು ಮುಚ್ಚಿ ಬೀಗಹಾಕಿ ಅವರನ್ನು ಒಳಕ್ಕೆ ಕರೆದುಕೊಂಡು ಹೋದ. ಅಲ್ಲೊಂದು ಕೋಣೆಯಲ್ಲಿ ಒಬ್ಬ ಬಿಳಿ ಬಣ್ಣದ ಸೇಟ್ ಕುಳಿತಿದ್ದನು. ಅವನ ತಲೆ ಮೇಲೆ ಮಂದವಾದ ದ್ವೀಪ ಉರಿಯುತ್ತಿದ್ದು ಅವನ ಮುಖ ಸರಿಯಾಗಿ ಕಾಣಿಸಲಿಲ್ಲ. ಸಾಲದ್ದಕ್ಕೆ ತಲೆಗೆ ಟೋಪಿ ಬೇರೆ ಹಾಕಿಕೊಂಡಿದ್ದನು. ಇಬ್ಬರು ದಾಂಡಿಗರಲ್ಲಿ ಒಬ್ಬ ಕೈಯಲ್ಲಿದ್ದ ಪೊಟ್ಟಣವನ್ನು ಮೇಜಿನ ಮೇಲೆ ಇಟ್ಟಿದ್ದೆ ಸೇಟ್ ಪೊಟ್ಟಣವನ್ನು ಕೈಗೆ ತೆಗೆದುಕೊಂಡು ಬಿಚ್ಚಿ ಅದರಲ್ಲಿ ಹತ್ತು ಸಣ್ಣಸಣ್ಣ ಪೊಟ್ಟಣಗಳಿದ್ದು ಮೊದಲಿಗೆ ಒಂದನ್ನು ತೆರೆದು ನೋಡಿದ. ವಿದ್ಯುತ್ ದೀಪದ ಕೆಳಗೆ ಚಿನ್ನದ ಪುಡಿ ಪಳಪಳನೆ ಹೊಳೆಯಿತು. ಸೇಟ್ ಹತ್ತೂ ಪಾಕೆಟ್‌ಗಳನ್ನು ಬಿಚ್ಚಿ ಮೇಜಿನ ಮೇಲಿದ್ದ ಸಣ್ಣ ಡಿಜಿಟಲ್ ಯಂತ್ರದ ಮೇಲೆ ಇಟ್ಟು ತೂಕ ಮಾಡಿದ. ಪ್ರತಿಯೊಂದು ಪಾಕೆಟ್ ಸರಿಯಾಗಿ ಹನ್ನೊಂದು ಗ್ರಾಮ್ ತೂಕ ತೋರಿಸುತ್ತಿತ್ತು. ಹನ್ನೊಂದು ಗ್ರಾಮ್ ತೂಕದ ಪೊಟ್ಟಣದಲ್ಲಿ ಒಂದು ಗ್ರಾಮ್ ಮಡಚಿದ ಕಾಗದಕ್ಕೆ ಮೈನಸ್ ಮಾಡಿಕೊಂಡು ಹತ್ತು ಗ್ರಾಮ್ ಎಂದು ಲೆಕ್ಕ ಹಾಕಿಕೊಳ್ಳಲಾಯಿತು. ಅಂದರೆ ಒಟ್ಟು ೧೦೦ ಗ್ರಾಮ್ ತೂಕದ ಚಿನ್ನಕ್ಕೆ ಹಣ ಪಡೆದುಕೊಂಡ ದಾಂಡಿಗರು “ಬರ್ತೀವಿ ಸೇಟ್” ಎಂದು ಹೊರಕ್ಕೆ ಬಂದು ವಾಹನ ಏರಿ ಹೊರಟುಹೋದರು. ಹಿಂದೆಯೇ ಬಾಗಿಲುವರೆಗೂ ಬಂದವನು ಬಾಗಿಲು ಮುಚ್ಚಿ ಒಳಗಡೆ ಬೀಗ ಹಾಕಿಕೊಂಡ.
ನಾಲ್ವರು ಯುವಕರು ಹಗಲೆಲ್ಲ ಕಮ್ಯೂನಿಟಿ ಹಾಲ್‌ನಲ್ಲಿ ನಿದ್ದೆ ಮಾಡುತ್ತಾ ಸಾಯಂಕಾಲ ಎದ್ದುಹೋಗಿ ಅಂಡ್ರಸನ್‌ಪೇಟೆಯ ಅಂಗಡಿಗಳಲ್ಲಿ ಶರಾಬು ಕುಡಿದು ಕಾರದ ಬೀಫ್ ಚಾಕ್ನಾ ಸವಿದರು. ರಾಬರ್ಟ್ಸನ್ ಪೇಟೆಯ ಸಿನಿಮಾ ಹಾಲ್‌ಗಳಲ್ಲಿ ಎರಡೆರಡು ನೈಟ್ ಷೋ ಸಿನಿಮಾಗಳನ್ನು ನೋಡಿದರು. ಅಂತೂ ಒಂದು ವಾರ ಮಜಾ ಮಾಡಿ ಎಲ್ಲಾ ಹಣವನ್ನು ಸೈನಾಟ್ ಧೂಳಿನಂತೆ ಉಡಾಯಿಸಿಬಿಟ್ಟರು. ಈಗ ಮತ್ತೆ ಅವರಿಗೆ ಹಣ ಬೇಕು.
ಮತ್ತೊಂದು ಕತ್ತಲ ರಾತ್ರಿ. ಮೂವರು ಯುವಕರು ಎಂದಿನಂತೆ ಅದೇ ಹಳೆ ಗಣಿಯ ಒಳಕ್ಕೆ ಹಗ್ಗಗಳ ಮೂಲಕ ಇಳಿದುಕೊಂಡರು. ಆಟೋದವನು ಎಂದಿನಂತೆ ಹಗ್ಗ ಬಿಚ್ಚಿಕೊಂಡು ಆಟೋದಲ್ಲಿ ಹಿಂದಕ್ಕೆ ಹೊರಟುಹೋದ. ದುರಾದೃಷ್ಟ ಮರುದಿನ ಬೆಳಿಗ್ಗೆ ದೊಡ್ಡ ರಾಕ್‌ಬರ್ಸ್ಟ್ ಆಗಿ ಗುಡಿಸಿಲಲ್ಲಿ ಮಲಗಿದ್ದ ಆಟೋದವನು ದಿಢೀರನೆ ಎದ್ದು ಕುಳಿತುಕೊಂಡ. ರಾಕ್‌ಬರ್ಸ್ಟ್ ಆಗಿದ್ದು ನಿಜವೊ ಕನಸೋ ಎಂದು ಸ್ವಲ್ಪ ಹೊತ್ತು ಗಲಿಬಿಲಿಗೊಂಡ. ರಾಕ್‌ಬರ್ಸ್ಟ್ ಆಗಿದ್ದು ನಿಜ ಎನ್ನುವುದು ಅವನಿಗೆ ಅರ್ಥವಾಯಿತು. ಈಗ ಅವನ ಚಡಪಡಿಕೆ ಜಾಸ್ತಿಯಾಯಿತು. ಏನು ಮಾಡುವುದು? ಏನೇನೊ ಆಲೋಚನೆಗಳ ಬರುತ್ತಿವೆ. ಗಣಿ ಹತ್ತಿರಕ್ಕೆ ಹೋಗಿ ನೋಡಲೆ ಎನ್ನುವ ಆಲೋಚನೆ ಬಂದಿತು? ಆದರೆ ಯಾರಾದರು ನೋಡಿ ಏನು ಇಲ್ಲಿದ್ದಿಯ ಎಂದು ಕೇಳಿದರೆ ಏನು ಹೇಳುವುದು? ದೇವರೆ ಯಾರಿಗೂ ಏನೂ ಆಗಬಾರದು ಎಂದು ಕೈಮುಗಿದು ಬೇಡಿಕೊಂಡ. ನಂತರ ನಿಧಾನವಾಗಿ ಗುಡಿಸಿಲಿನಿಂದ ಎದ್ದು ಹೊರಗೆ ಬಂದು ನೋಡಿದ. ಜನರು ಇದು ಬಹಳ ದೊಡ್ಡ ರಾಕ್‌ಬರ್ಸ್ಟ್ ಇದುವರೆಗೂ ಇಷ್ಟು ದೊಡ್ಡದನ್ನು ನಾವು ಕೇಳಿಯೇ ಇಲ್ಲ. ಎಷ್ಟು ಜನ ಸತ್ತರೋ ಏನೋ ಎಂದು ಮಾತನಾಡಿಕೊಳ್ಳುತ್ತಿದ್ದರು. ಗಣಿ ಕಾರ್ಮಿಕರ ಪತ್ನಿಯರು ತಮ್ಮ ಗಂಡಂದಿರು, ಮಕ್ಕಳು ತಮ್ಮ ಅಪ್ಪಂದಿರು, ತಂದೆ ತಾಯಿಯಂದಿರು ತಮ್ಮ ಮಕ್ಕಳು ಯಾವುದೇ ಅಪಾಯವಾಗದೆ ಕೆಲಸದಿಂದ ಹಿಂದಕ್ಕೆ ಬರಲಿ ಎಂದು ದೇವರಲ್ಲಿ ಬೇಡಿಕೊಂಡರು.
ಎಷ್ಟು ಜನ ಸತ್ತರೊ ಯಾವ ಗಣಿಯೋ ಎಂದು ಕೇಳಿಕೊಂಡು ಗಣಿಗಳ ಕಡೆಗೆ ಜನರು ಓಡಿತೊಡಗಿದರು. ಕೇಂದ್ರ ಆಡಳಿತ ಕಛೇರಿಗೂ ಯಾವ ಗಣಿಯಲ್ಲಿ ಶಿಲಾಸ್ಫೋಟವಾಯಿತು ಎನ್ನುವುದು ನಿಖರವಾಗಿ ಗೊತ್ತಾಗಲಿಲ್ಲ. ಎಲ್ಲಾ ಗಣಿಗಳಲ್ಲೂ ಸದ್ದು ಕೇಳಿದ ಕಾರ್ಮಿಕರು ರಕ್ಷಣಾ ಸ್ಥಳಗಳಿಗೆ ಓಡಿಹೋದ ವಿಷಯ ಎಲ್ಲಾ ಕಡೆಯಿಂದಲೂ ತಿಳಿದುಬಂದಿತು. ಆದರೆ ಶಿಲಾಸ್ಫೋಟವಾಗಿ ಎರಡು ಗಂಟೆಯಾದರೂ ಯಾವ ಗಣಿಯಿಂದಲೂ ಯಾವುದೇ ಸಾವುನೋವುಗಳ ಸುದ್ದಿ ಕೇಳಿಬರಲಿಲ್ಲ. ಕೊನೆಗೆ ಎಲ್ಲಾ ಗಣಿಗಳಿಂದಲೂ ಮಾಹಿತಿ ಪಡೆದುಕೊಂಡ ಕೇಂದ್ರ ಆಡಳಿತ ಕಛೇರಿ ಯಾವ ಗಣಿಯಲ್ಲೂ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಬಹುಶಃ ಮಾರಿಕುಪ್ಪಮ್ ದಕ್ಷಿಣಕ್ಕಿರುವ ಸ್ತಗಿತಗೊಂಡಿರುವ ಹಳೆ ಗಣಿಗಳಲ್ಲಿ ಶಿಲಾಸ್ಫೋಟ ಅಥವಾ ರಾಕ್‌ಬರ್ಸ್ಟ್ ಆಗಿರಬಹುದು ಎಂಬುದಾಗಿ ಸುದ್ದಿ ನೀಡಿತು.
ಇದನ್ನು ಕೇಳಿದ ಆಟೋದವನಿಗೆ ಇನ್ನೂ ಗಾಬರಿಯಾಯಿತು. ಯಾಕೆಂದರೆ ನಿನ್ನೆ ರಾತ್ರಿ ಮೂವರು ಚಿನ್ನದ ಅದಿರನ್ನು ಕಳ್ಳತನ ಮಾಡಲು ಇಳಿದುಕೊಂಡ ಹಳೆ ಗಣಿಗಳಿರುವುದು ಮಾರಿಕುಪ್ಪಮ್ ಮತ್ತು ಬಿಸಾನತ್ತಮ್ ಮಧ್ಯೆ ಇರುವ ಪ್ರದೇಶದಲ್ಲಿ. ಆಟೋದವನು ತನ್ನ ಮೂವರೂ ಗೆಳೆಯರಿಗೆ ಯಾವುದೇ ಅಪಾಯ ಆಗಬಾರದು ಎಂಬುದಾಗಿ ಮತ್ತೆಮತ್ತೆ ಉದ್ದಂಡಮ್ಮಾಳ್ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡ. ತನಗೆ ಏನು ಮಾಡಬೇಕೊ ಅರ್ಥವಾಗದೆ ಚಡಪಡಿಸುತ್ತ ಸರಾಯಿ ಅಂಗಡಿ ತಲುಪಿದ. ಅಲ್ಲಿ ಸಾರಾಯಿ ಕುಡಿದು ಬಂದು ಕಮ್ಯೂನಿಟಿ ಹಾಲ್‌ನ ಜಗಲಿ ಮೇಲೆ ಕುಳಿತುಕೊಂಡು ಅಳತೊಡಗಿದ. ಅವನ ಇಡೀ ದೇಹ ಭಯದಿಂದ ತತ್ತರಿಸಿಹೋಗಿ ತಲೆ ಸಿಡಿದುಹೋಗುವಂತ್ತಿತ್ತು.
ಕಮ್ಯೂನಿಟಿ ಹಾಲ್ ಮುಂದೆ ಕುಳಿತಿದ್ದ ಅವನಿಗೆ ಭಯ ಗಾಬರಿ ಹೆಚ್ಚಾಗಿ ಒತ್ತಡ ತಡೆದುಕೊಳ್ಳಲಾರದೆ ಮತ್ತೆ ಎದ್ದು ಸಾರಾಯಿ ಅಂಗಡಿಯ ಕಡೆಗೆ ಹೋಗಿ ಎರಡು ಸಾರಾಯಿ ಬಾಟಲ್ ತೆಗೆದುಕೊಂಡು ಒಮ್ಮೆಲೆ ಗಟಗಟನೆ ಕುಡಿದ. ಸಾರಾಯಿ ಅಂಗಡಿಯವನು ಇವನೇನು ಇವೊತ್ತು ಬೆಳಿಗ್ಗೇನೆ ಇಷ್ಟೊಂದು ಕುಡಿತಾ ಇದ್ದಾನಲ್ಲ ಎಂದು ಆತಂಕಕ್ಕೆ ಒಳಗಾದ. ಎಲ್ಲಾದರು ಸತ್ತುಬಿದ್ದರೆ ನನ್ನ ತಲೆಗೆ ಸುತ್ತಿಕೊಳ್ಳುತ್ತದೆ ಎನ್ನುವುದು ಅವನ ಆತಂಕ. ಕುಡಿದವನು ತೂರಾಡುತ್ತ ಕಮ್ಯೂನಿಟಿ ಹಾಲ್ ಕಡೆಗೆ ನಡೆದು ಬರುತ್ತಾ ಕಮ್ಯೂನಿಟಿ ಹಾಲ್ ಮುಂದೆ ಮೈದಾನದಲ್ಲಿ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ. ನೋಡಿದವರಿಬ್ಬರು ಸತ್ತ ಕುರಿಯನ್ನು ಹಿಡಿದು ಸಾಗಿಸುವಂತೆ ಎರಡು ಕಾಲು, ಎರಡು ಕೈಗಳನ್ನು ಹಿಡಿದುಕೊಂಡು ಬಂದು ಕಮ್ಯೂನಿಟಿ ಹಾಲ್ ಪಡಸಾಲೆಯಲ್ಲಿ ಬಿಸಾಕಿದರು. ಬಂದವರೆಲ್ಲ ಇವನಿಗೆ ಏನಾಯಿತು ಬೆಳಿಗ್ಗೇನೆ ಎಂದು ಅವನ ಸುತ್ತಲೂ ನಿಂತುಕೊಂಡು ನೋಡತೊಡಗಿದರು.
ಕುಡಿದ ಮತ್ತಿನಲ್ಲಿ “ಅಯ್ಯೋ.. ಅಯ್ಯೋ.. ನನ್ನ ಗೆಳೆಯರು.. ಗಣಿ ಒಳಗೆ.. ರಾಕ್‌ಬರ್ಸ್ಟ್.. ಮೇಲಕ್ಕೆ ಬಂದರಾ..?” ಹೀಗೆ ಏನೇನೋ ಬಡಿಬಡಿಸುತ್ತಿದ್ದನು. ಒಬ್ಬ ಯುವಕ ಪಕ್ಕದ ಮನೆಯಿಂದ ಒಂದು ಕೊಡದಲ್ಲಿ ನೀರು ತಂದು ಅವನ ಮೇಲೆ ಸುರಿದುಬಿಟ್ಟ. ಗಾಬರಿಯಾಗಿ ಎದ್ದು ಕುಳಿತ ಆತ ಸುತ್ತಲೂ ನೋಡಿದ? ಮೊದಲಿಗೆ ಏನೂ ಕಾಣಲಿಲ್ಲ. ನಂತರ ನಿಧಾನವಾಗಿ ತನ್ನ ಸುತ್ತಲೂ ಮಕ್ಕಳು, ಯುವಕರು ಮತ್ತು ಮಹಿಳೆಯರು ನಿಂತುಕೊಂಡಿರುವುದು ಕಾಣಿಸತೊಡಗಿತು. ಮತ್ತೆ ಅದೇ ರೀತಿ “ಅಯ್ಯೋ.. ಅಯ್ಯೋ.. ನನ್ನ ಗೆಳೆಯರು.. ಗಣಿ ಒಳಗೆ.. ರಾಕ್‌ಬರ್ಸ್ಟ್.. ಮೇಲಕ್ಕೆ ಬಂದರಾ..?” ಎಂದ. ಯಾರಿಗೂ ಏನೂ ಅರ್ಥವಾಗಲಿಲ್ಲ. ಸುತ್ತಲಿದ್ದ ಯುವಕರು “ಯಾಕೋ ಏನಾಯಿತು?” ಎಂದು ಕೇಳಿ, “ಏನೂ ಇಲ್ಲ” ಎಂದು ಬಾಯಿ ಮುಚ್ಚಿಕೊಂಡು ಅಳತೊಡಗಿದ. “ಜಾಸ್ತಿ ಕುಡಿದು ತಲೆಗೆ ಹತ್ತಿರಬೇಕು? ಅವನನ್ನು ಸ್ವಲ್ಪ ಹೊತ್ತು ಹಾಗೇ ಸುಮ್ಮನೇ ಬಿಟ್ಟುಬಿಡಿ” ಎಂದು ಸುಮ್ಮನಾದರು. ಅವನು ಮಾತ್ರ ಹುಚ್ಚನಂತೆ ಬಡಿಬಡಿಸುತ್ತ ಮತ್ತೆ ಪ್ರಜ್ಞೆ ತಪ್ಪಿದವನಂತೆ ಬಿದ್ದುಕೊಂಡ.
(ಹಿಂದಿನ ಕಂತು: ಕನಸಿನಲ್ಲೂ ಬಯಸದ ಒಂದು ಭೀಕರ ಅಪಘಾತ)

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.