ಅಂದವಾಗಿ ಬರೆಯುವ ಕಲೆಯಾದ ಕ್ಯಾಲಿಗ್ರಫಿ ಮತ್ತು ಚಿತ್ರಕಲೆಗಳ ಬಗ್ಗೆ ಚೀನಾದ ಜನರಿಗೆ ಅತೀವವಾದ ಆಸಕ್ತಿಯಿದೆ. ಚಿತ್ರಕಲೆ ಮತ್ತು ಕ್ಯಾಲಿಗ್ರಫಿ ಕಲೆಗಳು ಚೀನಾದಲ್ಲಿ ಒಂದಕ್ಕೊಂದು ಪೂರಕ ಎನ್ನುವಂತೆ ಬೆಳೆದುಕೊಂಡು ಬಂದಿವೆ. ವರ್ಣಚಿತ್ರವನ್ನು ರಚಿಸಿದ ಬಳಿಕ ಆ ವರ್ಣಚಿತ್ರಕ್ಕೆ ಸರಿಹೊಂದುವ ಕವಿತೆಯನ್ನು ಕಲಾತ್ಮಕವಾಗಿ ಬರೆಯಲಾಗುತ್ತಿತ್ತು. ಹೀಗೆ ಕ್ಯಾಲಿಗ್ರಫಿಯು ಚಿತ್ರಕಲೆಯ ಸೊಬಗನ್ನು ಹೆಚ್ಚಿಸುತ್ತಿತ್ತು. ಚಿತ್ರಕಲೆಗೆ ಅನುಗುಣವಾಗಿ ಕ್ಯಾಲಿಗ್ರಫಿ ಸ್ಪಂದಿಸುತ್ತಿತ್ತು. ಹಿಂದಿನ ಕಾಲದ ಚೀನೀಯರಿಗೆ ಅಕ್ಷರಗಳ ಬಗ್ಗೆ ವಿಪರೀತವೆನಿಸುವ ಮೋಹವಿತ್ತು. ಅಕ್ಷರಗಳನ್ನು, ಪದಗಳನ್ನು ಅತೀವವಾಗಿ ಇಷ್ಟಪಡುತ್ತಿದ್ದರು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಚೀನಾ ದೇಶದ ಕುರಿತ ಬರಹ ನಿಮ್ಮ ಓದಿಗೆ
ಕ್ರಿ.ಪೂ. 29ನೇ ಶತಮಾನದಿಂದ 17ನೇ ಶತಮಾನದ ಪ್ಯಾಲಿಯೋಲಿಥಿಕ್ ಕಾಲಘಟ್ಟಕ್ಕೆ ಸೇರಿದ ಕಲ್ಲಿನ ಉಪಕರಣಗಳು ಮತ್ತು ಅಸ್ಥಿಪಂಜರದ ಅವಶೇಷಗಳು ಚೀನಾದಲ್ಲಿ ಕಂಡುಬಂದಿವೆ. ನವಶಿಲಾಯುಗದ ಆರಂಭಿಕ ಕಾಲಘಟ್ಟದಲ್ಲಿ ಅಲಂಕರಿಸಿದ ಕಲಾಕೃತಿಗಳನ್ನು, ಮಡಕೆಗಳನ್ನು ಕಾಣಬಹುದು. ಕ್ರಿ.ಪೂ. 12ನೇ ಶತಮಾನದಿಂದ 2ನೇ ಶತಮಾನದ ಅವಧಿಯನ್ನು ಚೀನಾ ಇತಿಹಾಸದಲ್ಲಿ ನವಶಿಲಾಯುಗ ಎನ್ನಲಾಗುತ್ತದೆ. ಈ ಕಾಲಘಟ್ಟದಲ್ಲಿ ಕಂಡುಬಂದ ಕುಂಬಾರಿಕೆಯ ಕಲಾಕೃತಿಗಳನ್ನು ಎರಡು ವಿಧಗಳಾಗಿ ಗುರುತಿಸಿಕೊಳ್ಳಬಹುದು. ಯಾಂಗ್ಶಾವೊ ಮತ್ತು ಲಾಂಗ್ಶಾನ್ ಎನ್ನುವುದಾಗಿ ಇವುಗಳನ್ನು ಗುರುತಿಸಿಕೊಳ್ಳಲಾಗುತ್ತದೆ. ಇದರಲ್ಲಿ ಯಾಂಗ್ಶಾವೊ ಕಲಾಕೃತಿಗಳು ಮಧ್ಯ ಝೊಂಗ್ಶಾನ್ ಪ್ರದೇಶಕ್ಕೆ ಸೇರಿದ್ದರೆ, ಲಾಂಗ್ಶಾನ್ ಕಲಾಕೃತಿಗಳು ಸೇರಿರುವುದು ಈಶಾನ್ಯ ಭಾಗಕ್ಕೆ. ಬಣ್ಣಬಣ್ಣದ ಅಲಂಕಾರಗಳನ್ನು ಯಾಂಗ್ಶಾವೊ ಒಳಗೊಂಡಿದೆ. ಲಾಂಗ್ಶಾನ್ ಬಣ್ಣರಹಿತವಾಗಿದೆ.
ಸಂಗೀತ ಮತ್ತು ನೃತ್ಯ ಚೀನಾದ ಅತ್ಯಂತ ಹಳೆಯ ಕಲಾ ಪ್ರಕಾರಗಳಾಗಿವೆ. ಕ್ವಿಂಗ್ಹೈ ಪ್ರಾಂತ್ಯದಲ್ಲಿ ಐದು ಸಾವಿರ ವರ್ಷಗಳಷ್ಟು ಹಳೆಯ ಮಣ್ಣಿನ ಬಟ್ಟಲುಗಳು ಕಂಡುಬಂದಿವೆ. ಇವುಗಳಲ್ಲಿ ನೃತ್ಯಗಾರರು ಧರಿಸುವ ಅಲಂಕಾರಿಕ ವಸ್ತುಗಳ ಚಿತ್ರಣವಿದೆ.
ಆರಂಭಿಕ ಕಾಲಘಟ್ಟದ ಚೀನೀ ಆಚರಣೆಗಳಲ್ಲಿ ಸಂಗೀತಕ್ಕೆ ಪ್ರಾಶಸ್ತ್ಯವಿತ್ತು. ಹುಬೈ ಪ್ರಾಂತ್ಯಕ್ಕೆ ಸೇರಿದ ಪ್ರಾಚೀನ ರಾಜ್ಯವಾದ ಝೆಂಗ್‌ನ ಸಮಾಧಿಯಲ್ಲಿ ದೊರಕಿದ 64 ಕಂಚಿನ ಘಂಟೆಗಳು ಚೀನಾದ ಪ್ರಾಚೀನ ಜನರಿಗೆ ಸಂಗೀತದ ಬಗ್ಗೆ ಇದ್ದ ಒಲವನ್ನು ಹೇಳುತ್ತವೆ. ಪ್ರತಿಯೊಂದು ಘಂಟೆಯೂ ಎರಡು ವಿಭಿನ್ನವಾದ ಧ್ವನಿಗಳನ್ನು ಹೊರಡಿಸುತ್ತದೆ. ಆ ಮಾದರಿಯಲ್ಲಿ ಈ ಘಂಟೆಗಳನ್ನು ತಯಾರಿಸಲಾಗಿದೆ. ಇದು ಕ್ರಿ.ಪೂ. 430ರ ಕಾಲಘಟ್ಟಕ್ಕೆ ಸೇರಿದ್ದಾಗಿದೆ. ಇದೇ ಸಮಾಧಿಯೊಳಗಡೆ ನೂರಿಪ್ಪತ್ತಕ್ಕೂ ಹೆಚ್ಚು ವಾದ್ಯಗಳು ಕಂಡುಬಂದಿವೆ. ತಂತಿಯ ಜಿಥರ್‌ಗಳು, ಕೊಳಲುಗಳು, ಡ್ರಮ್‌ಗಳು, ಕಲ್ಲಿನ ಚೈಮ್‌ಗಳು ಇದರಲ್ಲಿವೆ. ಚೀನಾದಲ್ಲಿ ಒಂದು ಕಾಲಕ್ಕೆ ರಂಗಭೂಮಿಯು ಅತ್ಯಂತ ಜನಪ್ರಿಯ ಕಲಾ ಪ್ರಕಾರವಾಗಿತ್ತು. ಇಂತಹ ಜನಪ್ರಿಯತೆ ಕಳೆದುಹೋದದ್ದು ದೂರದರ್ಶನಗಳಿಂದಾಗಿ. ಚೈನೀಸ್ ರಂಗಭೂಮಿಯ ಉಗಮದ ಹಿಂದೆ ಧಾರ್ಮಿಕತೆಯ ಪಾತ್ರವಿದೆ. ಹಬ್ಬಗಳ ಸಂದರ್ಭದಲ್ಲಿ ರಾಕ್ಷಸರನ್ನು ನಾಶಪಡಿಸುವ, ಪೌರಾಣಿಕ ಘಟನೆಗಳನ್ನು ಮರುನಿರೂಪಿಸುವ ಅಭಿನಯ ಮಾಡಲಾಗುತ್ತಿತ್ತು. ನಾಟಕದ ಬೇರೆ ಬೇರೆ ಪ್ರಕಾರಗಳಿಗೆ ಸಾಂಗ್ ರಾಜವಂಶ ಪ್ರೋತ್ಸಾಹ ನೀಡಿದೆ. ಇದರಿಂದಾಗಿ ರಂಗಭೂಮಿಯು ಪ್ರಬುದ್ಧವಾಗಿ ಬೆಳವಣಿಗೆ ಕಂಡಿದೆ. ಯುವಾನ್ ರಾಜವಂಶದ ಅವಧಿಯಲ್ಲಿ ನಾಟಕಗಳು ಐತಿಹಾಸಿಕ ವಿಷಯಗಳ ಮೇಲೆ ಮತ್ತು ಸಮಕಾಲೀನ ವಿಚಾರಗಳ ಮೇಲೆ ಕೇಂದ್ರೀಕೃತವಾಗಿದ್ದವು. ನಾಟಕಗಳು ಅದ್ಧೂರಿ ರೂಪ ಪಡೆದದ್ದು ಇದೇ ಅವಧಿಯಲ್ಲಿ. ಆ ಬಳಿಕದ ಕಾಲಘಟ್ಟದಲ್ಲಿ ಪ್ರಸಿದ್ಧಿ ಪಡೆದ ಜಿಂಗ್ಸ್ಕಿ ನಾಟಕ ಪ್ರಕಾರದ ಮೇಲೆ ಯುವಾನ್ ಕಾಲಘಟ್ಟದ ನಾಟಕಗಳ ಪ್ರಭಾವವಿದೆ. ಆಕರ್ಷಕವಾದ ವೇಷಭೂಷಣಗಳು ಮತ್ತು ವೈಭವಯುತವಾದ ರಂಗ ಪರಿಕರಗಳು ರೂಪುಗೊಂಡದ್ದು ಈ ಪ್ರಭಾವದಿಂದಲೇ ಎನ್ನುವುದು ಸ್ಪಷ್ಟ. ಇದರ ಪ್ರೇರಣೆಯಿಂದಲೇ ಹಲವು ನಾಟಕೀಯ ರೂಪಗಳು ನಂತರದ ಕಾಲಘಟ್ಟದಲ್ಲಿ ಹುಟ್ಟಿಕೊಂಡವು.
ಚೀನಾದಲ್ಲಿ ಮೊದಲ ರಾಜವಂಶ ರೂಪುಗೊಂಡದ್ದು ಕಂಚಿನ ಯುಗದ ವೇಳೆಗೆ. ಈ ಸಮಯದಲ್ಲಿ ಆಳ್ವಿಕೆಗೆ ಬಂದ ಶಾಂಗ್ ರಾಜವಂಶವು ಚೀನಾದ ಮೊದಲ ರಾಜವಂಶ ಎನಿಸಿಕೊಂಡಿದೆ. ಇದರ ಆಡಳಿತಾವಧಿ ಕ್ರಿ.ಪೂ. 1600ರಿಂದ 1046ರವರೆಗೆ. ಈ ರಾಜವಂಶದ ಕೊನೆಯ ಅವಧಿಯಲ್ಲಿ ಯಿನ್ ಹೆಸರಿನ ಪ್ರದೇಶವು ರಾಜಧಾನಿಯಾಗಿತ್ತು. ಈ ಪ್ರದೇಶವನ್ನು ಈಗ ಅನ್ಯಾಂಗ್ ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ಒರಾಕಲ್ ಮೂಳೆಗಳು ಪತ್ತೆಯಾಗಿವೆ. ಇವುಗಳನ್ನು ಎತ್ತಿನ ಭುಜ ಮತ್ತು ಆಮೆಯ ಚಿಪ್ಪಿನಿಂದ ತಯಾರಿಸಲಾಗಿದೆ. ಪ್ರಾಚೀನ ಕಾಲಘಟ್ಟದಲ್ಲಿ ಭವಿಷ್ಯವನ್ನು ಹೇಳಲು ಈ ಮೂಳೆಗಳನ್ನು ಬಳಸಲಾಗುತ್ತಿತ್ತು. ಇವುಗಳ ಮೇಲೆ ಕೆಲವು ಅಕ್ಷರಗಳು ಕಂಡುಬಂದಿವೆ. ಇಲ್ಲಿ ಕಂಡುಬಂದಿರುವ ಲಿಪಿಯನ್ನು ಒರಾಕಲ್ ಬೋನ್ ಲಿಪಿ ಎಂದು ಕರೆಯಲಾಗುತ್ತದೆ. ಚೈನೀಸ್ ಬರವಣಿಗೆಯ ಮೂಲ ಇರುವುದು ಈ ಮೂಳೆಗಳಲ್ಲಿಯೇ.
ಚೀನೀ ಬರವಣಿಗೆಯ ಆರಂಭವನ್ನು ಇಲ್ಲಿಂದಲೇ ಗುರುತಿಸಲಾಗುತ್ತದೆ. ಲಿಖಿತ ಭಾಷೆಯು ಚೀನಾದ ಸಂಸ್ಕೃತಿಯ ಕೇಂದ್ರವಾಗಿದೆ. ಕ್ರಿ.ಪೂ. 4000ನೇ ಇಸವಿಯಲ್ಲಿಯೇ ಮಡಕೆಗಳ ಮೇಲೆ ಕಂಡುಬಂದಿರುವ ಕೆಲವು ಚಿಹ್ನೆಗಳು ವಿಚಾರಗಳನ್ನು ರವಾನಿಸಿವೆ. ಶಾಂಗ್ ಅವಧಿಯ ಕೊನೆಯಿಂದಲೂ ಸಹ ಚೈನೀಸ್ ಲಿಖಿತ ಭಾಷೆಯು ನಿರಂತರವಾಗಿ ಬೆಳವಣಿಗೆ ಕಾಣುತ್ತಿದೆ. ಚೀನಾದಲ್ಲಿ ಸಂಸ್ಕೃತಿ ಮತ್ತು ಸಾಕ್ಷರತೆಯ ಮಧ್ಯೆ ನಿಕಟ ಸಂಬಂಧ ಇದೆ. ಬರವಣಿಗೆಯು ಸಂಸ್ಕೃತಿಯನ್ನು ಸಂರಕ್ಷಿಸುತ್ತದೆ ಎಂಬ ನಂಬಿಕೆ ಚೀನೀಯರಲ್ಲಿ ಪ್ರಬಲವಾಗಿದೆ. ಚೀನೀ ಭಾಷೆಯಲ್ಲಿ ಸಂಸ್ಕೃತಿ ಎಂಬ ಪದವನ್ನು ಸೂಚಿಸಲು ವೆನ್ಹುವಾ ಎಂಬ ಪದವನ್ನು ಬಳಸಲಾಗುತ್ತದೆ. ಈ ಪದವು ಸಾಕ್ಷರರಾಗಲು ಎನ್ನುವ ಅರ್ಥವನ್ನು ಕೊಡುತ್ತದೆ. ಬರವಣಿಗೆಯು ಪ್ರಪಂಚದ ಉಳಿದವರಿಗಿಂತ ತಮ್ಮನ್ನು ಅನನ್ಯವಾಗಿಸುವ ಸಂಗತಿಯಾಗಿದೆ ಎನ್ನುವ ಭಾವನೆ ಚೀನೀಯರದ್ದು. ತಮ್ಮ ಸಂಸ್ಕೃತಿ ಬರವಣಿಗೆಯ ಮೂಲಕ ಜಗತ್ತಿನ ಕೇಂದ್ರವಾಗುತ್ತದೆ ಎಂಬ ಯೋಚನೆ ಅವರಲ್ಲಿದೆ. ಚೀನಾದ ಜನರ ಪ್ರಕಾರ ಬರವಣಿಗೆ ಇಲ್ಲದವರು ಅನಾಗರಿಕರು. ಕ್ರಿ.ಪೂ. 500ರಲ್ಲಿ ರಚನೆಯಾದ ದಿಶಿಜಿಂಗ್ ಕವನ ಸಂಕಲನವನ್ನು ಚೀನಾದ ಮೊದಲ ಸಾಹಿತ್ಯ ಕೃತಿಯಾಗಿ ಪರಿಗಣಿಸಲಾಗಿದೆ. ಈ ಕೃತಿಯನ್ನು ಶಾಸ್ತ್ರೀಯ ಶೈಲಿಯ ಕಾವ್ಯಸಂಗ್ರಹ ಎಂದು ಕರೆಯಬಹುದು. ಇದರಲ್ಲಿ ಸುಮಾರು ಮೂನ್ನೂರ ಐದು ಹಾಡುಗಳಿವೆ. ಈ ಹಾಡುಗಳು ಧರ್ಮಕ್ಕೆ ಸಂಬಂಧಪಟ್ಟಿವೆ. ಜಾನಪದ ವಸ್ತು ವಿಷಯಗಳನ್ನು ಒಳಗೊಂಡಿವೆ.
ಕ್ರಿ.ಶ. 618ರಿಂದ 917ನೇ ಶತಮಾನದಲ್ಲಿ ಚೀನಾವನ್ನು ಆಳುತ್ತಿದ್ದುದು ಟ್ಯಾಂಗ್ ರಾಜವಂಶ. ಈ ಅವಧಿಯನ್ನು ಚೀನೀ ಕಾವ್ಯದ ಸುವರ್ಣಯುಗ ಎಂದು ಕರೆಯಲಾಗಿದೆ. ರಾಜರು ತಮ್ಮ ಆಸ್ಥಾನದಲ್ಲಿ ಕವಿಗಳಿಗೆ ಆಶ್ರಯ ನೀಡುವ ಮೂಲಕ ಪಂಡಿತ ಪರಂಪರೆಯನ್ನು ಹುಟ್ಟುಹಾಕಿದರು. ಚೀನೀ ಸಾಹಿತ್ಯಕ್ಕೆ ರಾಜಮನ್ನಣೆ ದೊರಕಿದ ಕಾಲಘಟ್ಟವಿದು. ಈ ಸಂದರ್ಭದಲ್ಲಿ ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡವರು ಸುಶಿಕ್ಷಿತ ಜನರು. ಚೈನೀಸ್ ಭಾಷೆಯಲ್ಲಿ ಕಾವ್ಯವನ್ನು ರಚಿಸಿದ ಡು ಫೂ, ಲಿ ಬಾಯಿ ಮೊದಲಾದ ಕವಿಗಳು ಚೀನೀ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಗಮನಾರ್ಹ ಕೊಡುಗೆ ಸಲ್ಲಿಸಿದ್ದಾರೆ. ಚೀನಾದ ಸಾಹಿತ್ಯ ಕ್ಷೇತ್ರವು ಸಾಹಿತ್ಯಕ ಭಾಷೆಯನ್ನೇ ಆಧಾರವಾಗಿರಿಸಿಕೊಂಡಿತ್ತು. ಇದರಿಂದಾಗಿ ಜನಸಾಮಾನ್ಯರಿಗೆ ಸಾಹಿತ್ಯ ರಚಿಸುವ ಅವಕಾಶ ಇರಲಿಲ್ಲ. ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ ಆರಂಭವಾದ ಮೇ ನಾಲ್ಕನೇ ಚಳುವಳಿ ಇದರ ಕುರಿತಾಗಿ ಕಾಳಜಿ ಹೊಂದಿತ್ತು. ಪೀಕಿಂಗ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಾಹಿತ್ಯಕ ಭಾಷೆಯನ್ನು ತ್ಯಜಿಸಿದರು. ಆಡುಮಾತಿನಲ್ಲಿಯೇ ಕಾದಂಬರಿಗಳನ್ನು ಬರೆದರು. ಇದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿತು. ಸಾಹಿತ್ಯದಲ್ಲಿ ಭಾಷೆಯ ಬಳಕೆಗೆ ಸಂಬಂಧಪಟ್ಟಂತೆ ತೀವ್ರವಾದ ವಾಗ್ವಾದಗಳು ನಡೆದವು. ಮಾವೋ ತ್ಸೆ ತುಂಗ್ ಕಾಲದಲ್ಲಿ ಚೀನೀ ಸಾಹಿತ್ಯವು ಇನ್ನೊಂದು ಆಯಾಮವನ್ನು ಪಡೆದುಕೊಂಡಿತು. 1942ರಲ್ಲಿ ಯಾನ್ ಪ್ರದೇಶದಲ್ಲಿ ಭಾಷಣ ಮಾಡುತ್ತಾ ಮಾವೋ ಅವರು ಕಲೆಯ ಸೇವೆ ಸಲ್ಲಬೇಕಾದದ್ದು ರಾಜಕೀಯಕ್ಕೆ ಎಂಬರ್ಥದ ಮಾತುಗಳನ್ನಾಡಿದರು. ಸಾಹಿತ್ಯವು ಆಡಳಿತಗಾರರ ಬೆಳವಣಿಗೆಗೆ ಪೂರಕವಾಗಿರಬೇಕು ಎಂಬ ಮನೋಭಾವ ಇವರದ್ದಾಗಿತ್ತು. ಇವರ ಮನೋಭಾವಕ್ಕನುಸಾರವಾಗಿ ಸಾಹಿತ್ಯ ರಚಿಸಿದ ಬರಹಗಾರರು ಮೆಚ್ಚುಗೆ ಪಡೆದರೆ, ಸರ್ಕಾರ ವಿರೋಧಿ ಧೋರಣೆ ತೋರಿದವರು ಅಪಹಾಸ್ಯಕ್ಕೆ ಈಡಾದರು. ಮಾವೋ ಯುಗದ ನಂತರ ಚೀನೀ ಸಾಹಿತ್ಯವು ಮತ್ತೆ ಅರಳತೊಡಗಿತು. ಕಲೆಗಾಗಿ ಕಲೆ ಎಂಬ ಸಿದ್ಧಾಂತವನ್ನು ಅನುಸರಿಸಿಕೊಂಡ ಸಾಹಿತ್ಯ ಸೃಷ್ಟಿ ಸಾಧ್ಯವಾಯಿತು.
ಚೈನೀಸ್ ಸಂಸ್ಕೃತಿಯಲ್ಲಿ ಅಲ್ಲಿನ ಪಾಕಪದ್ಧತಿಗೆ ವಿಶಿಷ್ಟವಾದ ಮಹತ್ವವಿದೆ. ಬಿಸಿಯಾಗಿರುವ ಆಹಾರವಿದೆ. ತಂಪಾಗಿರುವ ಆಹಾರವೂ ಇದೆ. ಉಪ್ಪು ಹುಳಿ ಖಾರಗಳು ಕಡಿಮೆ ಪ್ರಮಾಣದಲ್ಲಿರುವ ಖಾದ್ಯಗಳಿವೆ. ಮಸಾಲೆಯುಕ್ತವಾದ ಭಕ್ಷ್ಯಗಳೂ ಇವೆ. ಚೀನಾದ ಜನರು ಆಹಾರ ಪ್ರಿಯರು. ಅದರಲ್ಲಿಯೂ ವಿಶೇಷವಾಗಿ ಮಾಂಸಾಹಾರ ಪ್ರೇಮಿಗಳು ಎನ್ನುವುದು ಇಡಿಯ ಜಗತ್ತಿಗೆ ಗೊತ್ತಿರುವ ವಿಚಾರ. ಸಿಹಿ, ಹುಳಿ, ಉಪ್ಪು, ಕಹಿ ಮತ್ತು ಖಾರ ಈ ಐದೂ ರುಚಿಗಳನ್ನು ತುಸು ಹೆಚ್ಚಾಗಿಯೇ ಬಳಸಲಾಗುತ್ತದೆ ಚೈನೀಸ್ ಅಡುಗೆಗಳಲ್ಲಿ. ಚೀನೀಯರು ಯಾವುದೇ ಜೀವಿಗಳನ್ನು ತಿನ್ನದೇ ಬಿಡುವವರಲ್ಲ. ಚೀನಾದಲ್ಲಿ ಆಹಾರ ಪದ್ಧತಿಯು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬದಲಾಗುತ್ತದೆ. ಮಧ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಆಹಾರಗಳಲ್ಲಿ ಖಾರವಾಗಿರುವ ಮೆಣಸುಗಳ ಬಳಕೆ ಇದ್ದೇ ಇರುತ್ತದೆ. ದೇಶದ ದಕ್ಷಿಣ ಭಾಗದಲ್ಲಿ ಹಸಿಯಾದ ಪದಾರ್ಥಗಳ ಬಳಕೆ ಹೆಚ್ಚು. ಬೇಯಿಸಿ, ತಣಿಸಿದ ಪದಾರ್ಥಗಳಿಗೆ ಇಲ್ಲಿ ಮಹತ್ವವಿಲ್ಲ. ಕ್ಯಾಂಟೋನೀಸ್ ಪಾಕಪದ್ಧತಿಯಲ್ಲಿ ಕೇವಲ ಬೇಯಿಸಿ ತಣಿಸಿದ ತರಕಾರಿಗಳು ಮತ್ತು ಬೇಯಿಸಿದ ಮಾಂಸದಿಂದ ಹೊರಹೊಮ್ಮುವ ಸುಗಂಧಕ್ಕೆ ಅಧಿಕ ಪ್ರಾಶಸ್ತ್ಯ. ಚೀನಾದ ಎಲ್ಲಾ ಪ್ರದೇಶಗಳಲ್ಲಿಯೂ ಅಕ್ಕಿಗೆ ಪ್ರಾಮುಖ್ಯತೆಯಿದೆ. ಎಗ್ ರೋಲ್ಸ್, ಡಿಮ್ ಸಮ್, ಚಾಪ್‌ಸ್ಟಿಕ್, ಚಾಪ್ ಸೂಯಿ, ಸ್ಟ್ರಿಂಗ್ ರೋಲ್ಸ್, ಐದು ಬಗೆಯ ರುಚಿಗಳನ್ನು ನೀಡುವ ಪ್ರಸಿದ್ಧ ಮಸಾಲೆ ಪುಡಿಗಳು ಬಂದಿರುವುದು ಚೀನಾ, ಪೂರ್ವ ಏಷ್ಯಾ ಮತ್ತು ಚೈನೀಸ್ ಅಮೇರಿಕನ್ ಮೂಲದಿಂದ. ಪೀಕಿಂಗ್ ಡಕ್, ಕ್ಯಾಂಟೋನೀಸ್ ಬೀಫ್ ಸೂಪ್, ಫ್ರೈಡ್ ರೈಸ್ ಮತ್ತು ಹಂದಿ ನೂಡಲ್ಸ್ ಇಲ್ಲಿ ಕಂಡುಬರುವ ಪ್ರಮುಖ ಖಾದ್ಯಗಳು.
ಚೀನಾದ ಮಹಾನಗರಗಳಲ್ಲಿ ಒಂದಾದ ಶಾಂಘೈ ನಗರವು ಪ್ಯಾರೀಸ್ ಆಫ್ ದಿ ಈಸ್ಟ್, ಕ್ವೀನ್ ಆಫ್ ದಿ ಓರಿಯಂಟ್ ಎಂಬ ಹೆಸರುಗಳನ್ನು ಗಳಿಸಿಕೊಂಡಿದೆ. ಕಣ್ಣಿಗೆ ಮುದ ನೀಡಬಲ್ಲ ಅನೇಕ ಆಕರ್ಷಕ ತಾಣಗಳನ್ನು ಇದು ಒಳಗೊಂಡಿದೆ. ಶಿಕುಮೆನ್ ಓಪನ್ ಹೌಸ್ ಮ್ಯೂಸಿಯಂ, ಯು ಗಾರ್ಡನ್, ಕ್ಸಿಂಟಿಯಾಂಡಿ ಸ್ಟ್ರೀಟ್ ಮೊದಲಾದ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ಇಲ್ಲಿನ ಜನರು ಶಾಂಘೈನೀಸ್ ಹೆಸರಿನ ಉಪಭಾಷೆಯಲ್ಲಿ ಮಾತನಾಡುತ್ತಾರೆ. ಚೀನಾದಲ್ಲಿರುವ ಫರ್ಬಿಡನ್ ಸಿಟಿಯು ಅಲ್ಲಿಯ ಪ್ರಸಿದ್ಧ ಅರಮನೆಯಾಗಿದೆ. ವಿಶ್ವದ ಅತೀ ದೊಡ್ಡ ಸಾಮ್ರಾಜ್ಯಶಾಹಿ ಅರಮನೆ ಎಂಬ ಹೆಗ್ಗಳಿಕೆ ಇದಕ್ಕಿದೆ. ಮಿಂಗ್ ರಾಜವಂಶದ ಅವಧಿಯಲ್ಲಿ ಚೀನೀ ಸಾಮ್ರಾಜ್ಯದ ಅರಮನೆಯಾಗಿ ರೂಪುಗೊಂಡ ಇದು ಸುಮಾರು ಐನೂರು ವರ್ಷಗಳ ಕಾಲ ಚಕ್ರವರ್ತಿಗಳ ಪಾಲಿನ ನೆಲೆಯಾಗಿತ್ತು. ಇದು ಈಗ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎನಿಸಿಕೊಂಡಿದೆ. ಈ ಅರಮನೆಯ ಮೂಲಕ ಮಿಂಗ್ ರಾಜವಂಶದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ. ಮಾವೋ ಝೆಡಾಂಗ್ ಅವರು ಮಾವೋ ತ್ಸೆ ತುಂಗ್ ಎಂದು ಪ್ರಸಿದ್ಧರು. ಕಮ್ಯುನಿಷ್ಟ್ ನಾಯಕರಾಗಿದ್ದ ಇವರು ಚೀನಾದ ರಾಷ್ಟ್ರೀಯತಾವಾದಿ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸ್ಥಾಪಕರು ಇವರು.
ಇವರು ಸ್ಥಾಪನೆಯ ಘೋಷಣೆ ಮಾಡಿದ್ದು 1949ರ ಅಕ್ಟೋಬರ್ 1ರಂದು, ಚೀನಾದ ಟಿಯಾನನ್ಮೆನ್ ಚೌಕದಲ್ಲಿ. ಇಲ್ಲಿಯೇ ಮಾವೋ ತ್ಸೆ ತುಂಗ್ ಅವರ ಸಮಾಧಿಯಿದೆ. ಜೊತೆಗೆ ಗ್ರೇಟ್ ಹಾಲ್ ಆಫ್ ದಿ ಪೀಪಲ್ ಮತ್ತು ಚೀನಾದ ರಾಷ್ಟ್ರೀಯ ವಸ್ತುಸಂಗ್ರಹಾಲಯವೂ ಸಹ ಇಲ್ಲಿಯೇ ಇದೆ. ದೈತ್ಯ ಪಾಂಡಾ ಚೀನಾದ ರಾಷ್ಟ್ರೀಯ ಪ್ರಾಣಿಯಾಗಿದೆ. ಚೀನಾದ ಚೆಂಗ್ಡು ಪ್ರದೇಶದಲ್ಲಿರುವ ದೈತ್ಯ ಪಾಂಡಾ ಸಾಕಣೆ ಕೇಂದ್ರವು ಪಾಂಡಾ ಪ್ರಿಯರ ನೆಚ್ಚಿನ ಪ್ರದೇಶವಾಗಿದೆ. ಯಾಂಗ್ಟ್ಜಿ ನದಿಯು ಏಷ್ಯಾದಲ್ಲಿಯೇ ಅತೀ ಉದ್ದದ ನದಿ ಎನಿಸಿಕೊಂಡಿದೆ. ಚೀನೀ ಭಾಷೆಯಲ್ಲಿ ಇದನ್ನು ಚಾಂಗ್ ಜಿಯಾಂಗ್ ಎಂದು ಕರೆಯಲಾಗುತ್ತದೆ. ಉದ್ದದ ನದಿ ಎನ್ನುವುದು ಈ ಪದದ ಅರ್ಥ. ವಿಶ್ವದ ಅತೀ ಉದ್ದದ ನದಿಗಳ ಪೈಕಿ ಈ ನದಿಗೆ ಮೂರನೇ ಸ್ಥಾನ. ಚೀನಾದ ಮಹಾಗೋಡೆ ಎನ್ನುವುದು ಸುದೀರ್ಘವಾದ ಒಂದೇ ಗೋಡೆಯನ್ನು ಹೊಂದಿದೆ ಎನ್ನುವುದು ಹಲವರ ನಂಬಿಕೆ. ಆದರೆ ವಾಸ್ತವವಾಗಿ ಅದನ್ನು ಗೋಡೆಗಳ ಜಾಲ ಎನ್ನಬಹುದು. ಹಲವಾರು ಗೋಡೆಗಳು ಒಂದಕ್ಕೊಂದು ಸೇರಿಕೊಂಡು ಈ ಮಹಾಗೋಡೆ ನಿರ್ಮಾಣವಾಗಿದೆ. ಸುಮಾರು ಇಪ್ಪತ್ತು ಸಾವಿರ ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ವ್ಯಾಪಿಸಿರುವ ಇದನ್ನು ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಏಕೀಕೃತ ಸಾಮ್ರಾಜ್ಯವನ್ನು ರಕ್ಷಿಸುವುದಕ್ಕಾಗಿ ಚಕ್ರವರ್ತಿ ಕಿನ್ ಇದನ್ನು ಕಟ್ಟಿಸಿದ್ದಾರೆ. ಇದರ ನಿರ್ಮಾಣದಲ್ಲಿರುವ ವಿಶೇಷತೆಯೆಂದರೆ, ನಿರ್ಮಾಣ ಕಾರ್ಮಿಕರು ಗೋಡೆಯನ್ನು ಜಿಗುಟಾಗಿಸುವುದಕ್ಕಾಗಿ ಗಾರೆಗೆ ಅಕ್ಕಿ ಹಿಟ್ಟಿನ ಅಚಿಟನ್ನು ಸೇರಿಸಿದ್ದಾರೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿರುವ ಇದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಅಂದವಾಗಿ ಬರೆಯುವ ಕಲೆಯಾದ ಕ್ಯಾಲಿಗ್ರಫಿ ಮತ್ತು ಚಿತ್ರಕಲೆಗಳ ಬಗ್ಗೆ ಚೀನಾದ ಜನರಿಗೆ ಅತೀವವಾದ ಆಸಕ್ತಿಯಿದೆ. ಚಿತ್ರಕಲೆ ಮತ್ತು ಕ್ಯಾಲಿಗ್ರಫಿ ಕಲೆಗಳು ಚೀನಾದಲ್ಲಿ ಒಂದಕ್ಕೊಂದು ಪೂರಕ ಎನ್ನುವಂತೆ ಬೆಳೆದುಕೊಂಡು ಬಂದಿವೆ. ವರ್ಣಚಿತ್ರವನ್ನು ರಚಿಸಿದ ಬಳಿಕ ಆ ವರ್ಣಚಿತ್ರಕ್ಕೆ ಸರಿಹೊಂದುವ ಕವಿತೆಯನ್ನು ಕಲಾತ್ಮಕವಾಗಿ ಬರೆಯಲಾಗುತ್ತಿತ್ತು. ಹೀಗೆ ಕ್ಯಾಲಿಗ್ರಫಿಯು ಚಿತ್ರಕಲೆಯ ಸೊಬಗನ್ನು ಹೆಚ್ಚಿಸುತ್ತಿತ್ತು. ಚಿತ್ರಕಲೆಗೆ ಅನುಗುಣವಾಗಿ ಕ್ಯಾಲಿಗ್ರಫಿ ಸ್ಪಂದಿಸುತ್ತಿತ್ತು. ಹಿಂದಿನ ಕಾಲದ ಚೀನೀಯರಿಗೆ ಅಕ್ಷರಗಳ ಬಗ್ಗೆ ವಿಪರೀತವೆನಿಸುವ ಮೋಹವಿತ್ತು. ಅಕ್ಷರಗಳನ್ನು, ಪದಗಳನ್ನು ಅತೀವವಾಗಿ ಇಷ್ಟಪಡುತ್ತಿದ್ದರು. ಕ್ಯಾಲಿಗ್ರಫಿಯಲ್ಲಿ ಅಕ್ಷರಗಳನ್ನು ನಿಖರವಾಗಿ, ಹೆಚ್ಚು ಶ್ರಮವಹಿಸಿ ಬರೆಯಲಾಗುತ್ತಿತ್ತು. ಅಕ್ಷರಗಳು ಅಬ್ಬರದಿಂದ ಕೂಡಿರುವಂತೆ ನಿಗಾ ವಹಿಸಲಾಗುತ್ತಿತ್ತು. ಇಂತಹ ಕಲೆಗಳನ್ನು ಬೆಳೆಸಿದವರು ಚೀನಾದ ಅವಿದ್ಯಾವಂತ ಜನರು. ಚೀನಾದ ಪ್ರಾಚೀನ ಸಮಾಧಿಗಳು ಮತ್ತು ಗುಹೆಗಳ ಗೋಡೆಗಳ ಮೇಲೆ ವರ್ಣಚಿತ್ರಗಳು ಕಂಡುಬಂದಿವೆ. ಇವುಗಳನ್ನು ರಚಿಸಿದವರು ಜಾನಪದರು. ಹಾನ್ ರಾಜವಂಶ ಕಲೆಯ ಬೆಳವಣಿಗೆಗೆ ಕೊಡುಗೆ ನೀಡಿದೆ. ಕ್ರಿ.ಶ. ಮೂರನೇ ಶತಮಾನದ ಆರಂಭದ ದಶಕಗಳಲ್ಲಿ ಚೀನೀ ಕಲಾಕ್ಷೇತ್ರವನ್ನು ಬೆಳೆಸಿದ ರಾಜವಂಶವಿದು. ಆರನೇ ಶತಮಾನದ ವೇಳೆಗಾಗಲೇ ಪ್ರಸಿದ್ಧಿ ಪಡೆದ ವರ್ಣಚಿತ್ರಕಾರರು ಚೀನಾದಲ್ಲಿದ್ದರು. ಕಾಗದ ಇಲ್ಲವೇ ರೇಷ್ಮೆ ವಸ್ತ್ರದ ಮೇಲೆ ಕಪ್ಪು ಮಸಿಯನ್ನು ಬಳಸಿ ಚಿತ್ರಗಳನ್ನು ರಚಿಸಲಾಗಿದೆ. ನಿಸರ್ಗದ ಚಿತ್ರಗಳು ಅದ್ಭುತವಾಗಿ ರಚನೆಯಾದದ್ದು ಮಿಂಗ್ ಮತ್ತು ಸಾಂಗ್ ರಾಜವಂಶಗಳ ಆಳ್ವಿಕೆಯ ಕಾಲಘಟ್ಟದಲ್ಲಿ. ಚಿತ್ರಕಲೆ ಹಲವಾರು ಬದಲಾವಣೆಗಳಿಗೆ ಒಳಗಾದದ್ದು ಇಪ್ಪತ್ತನೇ ಶತಮಾನದಲ್ಲಿ. ಅನೇಕ ಶೈಲಿಗಳು ಇದರಲ್ಲಿ ಕಂಡುಬಂದಿವೆ.
ಇಪ್ಪತ್ತನೇ ಶತಮಾನದ ಪೂರ್ವಾರ್ಧದ ಗಮನಾರ್ಹ ಚಿತ್ರಕಲಾವಿದರೆಂದರೆ ಕಿ ಬೈಶಿ ಅವರು. ಇವರಿಗೆ ಚೀನೀ ಸೌಂದರ್ಯಶಾಸ್ತ್ರದ ಅರಿವಿತ್ತು. ಅಂತಾರಾಷ್ಟ್ರೀಯ ಶೈಲಿಗಳ ಬಗೆಗೆ ತಿಳಿವಳಿಕೆಯಿತ್ತು. ಎರಡನ್ನೂ ಸಂಮ್ಮಿಶ್ರಗೊಳಿಸಿದ ಇವರು ಹೊಸ ಶೈಲಿಯನ್ನು ಅಭಿವೃದ್ಧಿಪಡಿಸಿ, ಅದಕ್ಕನುಗುಣವಾಗಿ ಚಿತ್ರಗಳನ್ನು ರಚಿಸಿದ್ದಾರೆ. ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಚೀನೀ ಚಿತ್ರಕಲೆಯು ಸಮಾಜವಾದವನ್ನು ಪ್ರಮುಖ ಕಾಳಜಿಯಾಗಿಸಿಕೊಂಡಿತು. ಕೃಷಿಕರ, ಕಾರ್ಮಿಕರ ಬದುಕಿನ ಚಿತ್ರಣ, ಕಾರ್ಖಾನೆಯ ದೃಶ್ಯಗಳು, ಗ್ರಾಮಗಳ ಪರಿಕಲ್ಪನೆ ಮೊದಲಾದವುಗಳ ಕಡೆಗೆ ಚಿತ್ರಕಲಾವಿದರು ಗಮನಹರಿಸಿದರು. ಹೀಗೆ ಸಮಾಜವಾದಿ ಪರಿಕಲ್ಪನೆ ರೂಪುಗೊಳ್ಳುವುದರ ಹಿಂದೆ ಮಾವೋವಾದದ ಪ್ರಭಾವ ಇತ್ತು ಎನ್ನುವುದು ಸ್ಪಷ್ಟ. ಚಿತ್ರಕಲಾಕ್ಷೇತ್ರ ಮತ್ತೆ ಉದಾರೀಕರಣಗೊಂಡದ್ದು ಮಾವೋ ಅವರ ಮರಣದ ನಂತರ.
ಶಿಲ್ಪಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಿಗೆ ಚೀನಾದ ಝೌ ರಾಜವಂಶವು ಕೊಡುಗೆ ನೀಡಿದೆ. ಇವರ ಕಾಲಘಟ್ಟಕ್ಕೆ ಸೇರಿದ ಸಮಾಧಿಗಳು ಚೀನಾದ ಪ್ರಾಚೀನ ವಾಸ್ತುಶಿಲ್ಪದ ಉತ್ತಮ ನಿರ್ಮಿತಿಗಳಾಗಿವೆ. ಈ ಸಮಾಧಿಗಳಲ್ಲಿ ಗೊಂಬೆಗಳು ಕಂಡುಬಂದಿವೆ. ನಿರ್ದಿಷ್ಟ ಸಂಪ್ರದಾಯವನ್ನು ಪಾಲಿಸಲು ಮನುಷ್ಯರನ್ನು ಬಲಿಕೊಡುವ ಬದಲಿಗೆ ಗೊಂಬೆಗಳನ್ನು ಸಮಾಧಿ ಮಾಡಲಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ಜೇಡ್ ಕೆತ್ತನೆಗಳೂ ಸಹ ಸಮಾಧಿಗೆ ಸಂಬಂಧಿಸಿವೆ. ಚೀನಾಕ್ಕೆ ಬೌದ್ಧಧರ್ಮ ಪರಿಚಯವಾದ ಬಳಿಕ ಶಿಲ್ಪಕಲೆ ಹೆಚ್ಚು ಉತ್ತೇಜನ ಗಳಿಸಿಕೊಂಡಿತು. ಇದರ ಹಿನ್ನೆಲೆಯಲ್ಲಿ ಹಾನ್, ಟ್ಯಾಂಗ್ ಮೊದಲಾದ ರಾಜವಂಶಗಳ ಪಾತ್ರ ಮಹತ್ವದ್ದಾಗಿದೆ. ಬುದ್ಧನ ಪ್ರತಿಮೆಗಳು ನಿರ್ಮಾಣಗೊಂಡವು. ಬೋಧಿಸತ್ವರ ವಿಗ್ರಹಗಳು ರೂಪುಗೊಂಡವು. ಉಬ್ಬುಶಿಲ್ಪದ ಮಾದರಿಯನ್ನು ಅನುಸರಿಸಿಕೊಂಡು ಇಂತಹ ವಿಗ್ರಹಗಳು ಸೃಷ್ಟಿಗೊಂಡವು. ಗನ್ಸು ಪ್ರಾಂತ್ಯದ ಡನ್‌ಹುವಾಂಗ್ ಬಳಿಯ ಮೊಗಾವೊ ಗುಹೆಗಳ ಸಂಕೀರ್ಣವು ಸಾವಿರ ಬುದ್ಧರ ಗುಹೆಗಳು ಎಂದು ಖ್ಯಾತವಾಗಿದೆ. ಇದು ರಚನೆಯಾದದ್ದು ಕ್ರಿ.ಶ. 366ರಲ್ಲಿ. 492 ಗುಹೆಗಳು ಈ ಸಂಕೀರ್ಣದಲ್ಲಿವೆ. ಬೌದ್ಧಧರ್ಮಕ್ಕೆ ಸಂಬಂಧಿಸಿದ ಮೂರು ಸಾವಿರಕ್ಕೂ ಹೆಚ್ಚು ಶಿಲ್ಪಗಳು ಇಲ್ಲಿದ್ದು, ಗೋಡೆಯ ಒಟ್ಟು ಉದ್ದ ಸುಮಾರು ಇಪ್ಪತ್ತೈದು ಸಾವಿರ ಚದರ ಮೀಟರ್‌ಗಳಾಗಿವೆ. 1987ರಲ್ಲಿ ಈ ಗುಹೆಗಳ ಸಂಕೀರ್ಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಗಿದೆ.
ಚೀನಾದ ಸಂಸ್ಕೃತಿಗೆ ಬಲವಾದ ಏಟು ಬಿದ್ದದ್ದು ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ. 1966ರಲ್ಲಿ ಮಾವೋ ತ್ಸೆ ತುಂಗ್ ಅವರು ಸಾಂಸ್ಕೃತಿಕ ಕ್ರಾಂತಿಯ ಘೋಷಣೆ ಮಾಡಿದರು. ಇದರಿಂದಾಗಿ ಅಪಾರ ಸಂಖ್ಯೆಯ ಸಾಂಸ್ಕೃತಿಕ ಸಂಪತ್ತುಗಳು ಹಾನಿಗೊಳಗಾದವು. ಕೆಲವು ಸಂಪೂರ್ಣವಾಗಿ ನಾಶ ಹೊಂದಿದವು. ಅನೇಕ ಕರಕುಶಲ ಕಲೆಗಳು ನಿಷೇಧಕ್ಕೊಳಗಾದವು. 1976ರಲ್ಲಿ ಮಾವೋ ನಿಧನರಾಗುವವರೆಗೂ ಈ ಸಾಂಸ್ಕೃತಿಕ ಕ್ರಾಂತಿ ಮುಂದುವರಿಯಿತು. ಆ ಬಳಿಕದ ಕಾಲಘಟ್ಟದಲ್ಲಿ ಸಂಸ್ಕೃತಿಯ ಮೇಲಿನ ನಿರ್ಬಂಧ ಸಡಿಲಗೊಂಡಿತು. ಚೀನಾದ ಸಂಸ್ಕೃತಿಯನ್ನು ಮತ್ತೆ ಸ್ಥಾಪಿಸುವ ಪ್ರಯತ್ನ ನಡೆಯಿತು. ಹಲವು ಕಲಾ ಪ್ರಕಾರಗಳು ಮತ್ತೆ ಜೀವ ಪಡೆದವು.
ಚೀನೀಯರು ದೇಹವನ್ನು ದಂಡಿಸಿ, ಶಕ್ತಿ ಗಳಿಸಿಕೊಳ್ಳುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅವರ ಕೆಲವು ಪ್ರಮುಖ ಸಮರಕಲೆಗಳು ಮತ್ತು ನೃತ್ಯಗಳು ಈ ಮಾದರಿಯಲ್ಲಿ ರೂಪುಗೊಂಡಿವೆ. ಚೀನಾದ ಸಮರಕಲೆಗಳ ಇತಿಹಾಸ ಎರಡು ಸಾವಿರ ವರ್ಷಗಳಷ್ಟು ಹಿಂದಿನದು. ದರೋಡೆಕೋರರು ಮತ್ತು ವಿದೇಶೀ ಆಕ್ರಮಣಕಾರರಿಂದ ರಕ್ಷಣೆ ಪಡೆಯುವುದಕ್ಕೆ ಚೀನೀಯರಿಗಿದ್ದ ಒಂದೇ ಒಂದು ಮಾರ್ಗವೆಂದರೆ ಅದು ಸಮರಕಲೆಗಳು. ಜನರು ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಆಡಳಿತ ವ್ಯವಸ್ಥೆ ಅವಕಾಶ ನೀಡದ ಕಾರಣ ಸಮರಕಲೆಗಳನ್ನು ರೂಪಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ತೈ ಚಿ ಚುವಾನ್ ಎನ್ನುವುದು ಈ ಮಾದರಿಯ ಚೀನೀ ಸಮರಕಲೆಯಾಗಿದೆ. ಇದಕ್ಕೆ ತೈಜಿಕ್ವಾನ್ ಎನ್ನುವ ಹೆಸರೂ ಇದೆ. ಇದರಲ್ಲಿ ಆಕರ್ಷಕವಾದ ಬ್ಯಾಲೆಯ ಜೊತೆಗೆ ಕತ್ತಿಗಳನ್ನು ತಿರುಗಿಸುತ್ತಾ ಮೋಹಕವಾದ ಪ್ರದರ್ಶನ ಇರುತ್ತದೆ. ಮಹಿಳೆಯರು ಪ್ರದರ್ಶಿಸುವ ಕೆಲವು ನೃತ್ಯಗಳಲ್ಲಿ ದೈಹಿಕ ಕಸರತ್ತು ಇರುತ್ತದೆ. 1950ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ಅಕ್ರೋಬ್ಯಾಟಿಕ್ ಟ್ರೂಪ್ ರೂಪುಗೊಂಡಿತು. ಇದರಿಂದಾಗಿ ಹೆಚ್ಚಿನ ಜನರು ಇದರ ಕಡೆಗೆ ಆಕರ್ಷಿತರಾದರು. ಶಾಂಘೈ, ಶೆನ್ಯಾಂಗ್, ವುಹಾನ್, ಡೇಲಿಯನ್, ಚಾಂಗ್ಕಿಂಗ್ ಮೊದಲಾದ ಪ್ರದೇಶಗಳಲ್ಲಿಯೂ ಇದೇ ಮಾದರಿಯ ಟ್ರೂಪ್‌ಗಳು ಹುಟ್ಟಿಕೊಂಡವು.
ಚೀನಾದಲ್ಲಿ ಬಾಸ್ಕೆಟ್‌ಬಾಲ್, ಬೇಸ್‌ಬಾಲ್, ಫುಟ್‌ಬಾಲ್ ಕ್ರೀಡೆಗಳು ಹೆಚ್ಚು ಪ್ರಸಿದ್ಧ. ಈ ಯಾವ ಕ್ರೀಡೆಗಳೂ ಸಹ ಚೀನಾದಲ್ಲಿ ಹುಟ್ಟಿಕೊಂಡವುಗಳಲ್ಲ. ಬೇರೆ ದೇಶಗಳಿಂದ ಬಂದಂತಹ ಕ್ರೀಡೆಗಳು. ಕ್ರೀಡಾಕೂಟಗಳಾದಾಗ ಅದರಲ್ಲಿ ಅಧಿಕ ಸಂಖ್ಯೆಯ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಕ್ರೀಡಾಸಕ್ತರೂ ಸಹ ಪಾಲು ಪಡೆಯುತ್ತಾರೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಚೀನಾ ಹಲವು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. 2004ರ ಒಲಿಂಪಿಕ್ ಪಂದ್ಯಾವಳಿಯು ಚೀನಾದ ಕ್ರೀಡಾಪಟುಗಳ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟ ಕ್ರೀಡಾಕೂಟವಾಗಿದೆ. ಇದರಲ್ಲಿ ಚೀನಾದ ಆಟಗಾರರು ಅರುವತ್ತಮೂರು ಪದಕಗಳನ್ನು ಗೆದ್ದುಕೊಂಡರು. ಬ್ಯಾಡ್ಮಿಂಟನ್, ಡೈವಿಂಗ್, ವೇಟ್‌ಲಿಫ್ಟಿಂಗ್, ಟೇಬಲ್ ಟೆನ್ನಿಸ್ ಮೊದಲಾದ ಕ್ರೀಡೆಗಳಲ್ಲಿ ಚೀನಾದವರ ಪ್ರಾಬಲ್ಯ ಶ್ಲಾಘನಾರ್ಹವಾಗಿತ್ತು. 2008ರ ಒಲಿಂಪಿಕ್ ಕ್ರೀಡಾಕೂಟ ಆಯೋಜನೆಯಾದದ್ದು ಚೀನಾದಲ್ಲಿ. ಪ್ರಪಂಚದ ಬೇರೆಲ್ಲಾ ರಾಷ್ಟ್ರಗಳಿಗಿಂತಲೂ ದೊಡ್ಡದಾದ ಸೈನ್ಯ ಎಂಬ ಹೆಗ್ಗಳಿಕೆ ಚೀನಾ ಮಿಲಿಟರಿಯದ್ದಾಗಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ ಎನ್ನುವುದು ಚೀನಾ ಸೈನ್ಯದ ಹೆಸರು. ಇದು ಸ್ಥಾಪನೆಯಾದದ್ದು 1949ರಲ್ಲಿ. ರಚನೆಯಾದಾಗಿನಿಂದ ಇದುವರೆಗೂ ಈ ಸೈನ್ಯ ಒಂದೇ ಒಂದು ಯುದ್ಧವನ್ನು ಸೋತಿಲ್ಲ. ಈ ಕಾರಣದಿಂದಾಗಿ ಪ್ರಪಂಚದ ಬಲಿಷ್ಠ ಸೇನೆಗಳ ಪೈಕಿ ಮುಂಚೂಣಿಯಲ್ಲಿ ನಿಂತುಕೊಳ್ಳುತ್ತದೆ. ಇಪ್ಪತ್ತೊಂದು ಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸೈನಿಕರು ಚೀನಾದ ಸೇನೆಯಲ್ಲಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾದ ಸಾಧನೆ ಅಭಿವೃದ್ಧಿ ಹೊಂದಿದ ಇತರ ದೇಶಗಳಿಗೆ ಸವಾಲೊಡ್ಡುವಂತಿದೆ. ಚಂದ್ರನ ಡಾರ್ಕ್ ಸೈಡ್‌ನಲ್ಲಿ ಇಳಿದ ಏಕೈಕ ದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ ಚೀನಾ. ಚಂದ್ರನ ಡಾರ್ಕ್ ಸೈಡ್ ಎನ್ನುವುದು ಭೂಮಿಗೆ ಗೋಚರವಾಗದ ಚಂದ್ರನ ಬದಿಯಾಗಿದೆ. ಈ ಸಾಧನೆ ದಾಖಲಾದದ್ದು 2024ರ ಜೂನ್ 2ರಂದು. ಚಾಂಗ್ ಇ-6 ಹೆಸರಿನ ಚಂದ್ರ ಶೋಧಕವನ್ನು ಈ ಉದ್ದೇಶದಿಂದಲೇ ಚಂದ್ರನ ದಕ್ಷಿಣ ಧ್ರುವಕ್ಕೆ ಕಳುಹಿಸಿಕೊಡಲಾಗಿತ್ತು. ಮಂಗಳ ಗ್ರಹದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಪ್ರಪಂಚದ ಕೆಲವೇ ಕೆಲವು ದೇಶಗಳಲ್ಲಿ ಚೀನಾ ಕೂಡಾ ಒಂದು. ಬಾಹ್ಯಾಕಾಶ ಕಾರ್ಯಾಚರಣೆಯನ್ನು ಮತ್ತಷ್ಟು ಸುಗಮಗೊಳಿಸುವುದಕ್ಕಾಗಿ ಚೀನಾವು ಟಿಯಾಂಗಾಂಗ್ ಹೆಸರಿನ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುತ್ತಿದೆ. ಇದು 2028ರಲ್ಲಿ ಪೂರ್ಣಗೊಳ್ಳಬಹುದು ಎನ್ನುವ ನಿರೀಕ್ಷೆ ಚೀನಾದ ಬಾಹ್ಯಾಕಾಶ ವಿಜ್ಞಾನಿಗಳದ್ದಾಗಿದೆ.
ಚೀನೀ ಭಾಷೆಯಲ್ಲಿ ಚಿ ಎಂದರೆ ಉಸಿರು ಎಂಬ ಅರ್ಥವಿದೆ. ಇದೇ ಅಕ್ಷರವನ್ನು ದೀರ್ಘವಾಗಿಸಿ, ಮಹಾಪ್ರಾಣವಾಗಿಸಿದರೆ ಛೀ ಎಂಬ ರೂಪವನ್ನು ಪಡೆದುಕೊಳ್ಳುತ್ತದೆ. ಇದು ಕನ್ನಡ ಭಾಷೆಯಲ್ಲಿ ಇಷ್ಟವಾಗದ್ದನ್ನು, ಅಸಹ್ಯವಾದದ್ದನ್ನು ಸೂಚಿಸುವ ಅಕ್ಷರ. ಚೀನಾ ದೇಶವು ತನ್ನ ಹಿರಿಮೆಯನ್ನು ಬಳಸಿಕೊಂಡು ಜಗತ್ತಿಗೆ ಉಸಿರು ನೀಡುವ ರಾಷ್ಟ್ರವಾಗಬೇಕಿದೆ. ಪ್ರಪಂಚದ ಉಸಿರನ್ನೇ ಕಿತ್ತುಕೊಂಡು ಛೀ ಛೀ ಎನಿಸಿಕೊಳ್ಳುವ ಹೀನಬುದ್ಧಿಯನ್ನು ಕಳೆದುಕೊಳ್ಳಬೇಕಿದೆ.
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.