ಕುಂಭದ್ರೋಣ 

ಆ ಪೋರ ಬಿಟ್ಟ ದೋಣಿ
ತೇಲಿದ್ದಕ್ಕಿಂತ
ಮುಳುಗಿದ್ದೆಚ್ಚು.
ಅದೆಂತ ಹುಚ್ಚಿನ ಮಳೆ

ನಾಯಂಡಳ್ಳಿ ಫ್ಲೈ ಓವರ್
ಕೆಳಗೆ ನಿಂತವನು ಒದ್ದೆಯಾಗಿದ್ದ ಮುದ್ದೆಯಾಗಿದ್ದ
ಮದ್ವೆ ಮುಂಚೆ ಬ್ಲಾಕ್ ಮಾಡಿ ಹೋದವಳ
ಕೆಟ್ಟ ನೆನಪು ಬೇರೆ

ಆಗಷ್ಟೇ ಹಾಕಿದ್ದ ಟಾರು
ಮಳೆಯ ರಭಸಕ್ಕೆ ಕೊಚ್ಚಿ ಈಜುತ್ತಿತ್ತು
ದಾರಿಹೋಕರು ಕಣ್ ಕಣ್ ಬಿಡುತ್ತಿದ್ದರು
ರಸ್ತೆ ಕಂಟ್ರಾಕ್ಟರು ಮಾಡೆಲ್ ಜೊತೆ
ರೆಸಾರ್ಟ್ ಸೇರಿದ್ದ

ಇಂತ ಬಿಡದ ಮಳೆಗಳಲ್ಲಿ
ಬಿಡದೇ ಕಾಡಿದವಳ ಮಿಥುನದ ಕಾವು
ಹೊಂಗೆ ಮರದ ನೆರಳಲ್ಲಿ
ಹಣ್ಣು ಮುದುಕಿ ಬಿಡುತ್ತಿದ್ದ ಬೋಂಡದ ಹಬೆ

ಮನೆಯೇ ಕೊಚ್ಚಿಹೋದ
ಮನೆಗೆ ಕೊಚ್ಚಿಹೋದ ಮಳೆಯ
ವಿಡಿಯೋಗಳು ವೈರಲ್ಲುಗಳಾದರೆ
ಕೋಲಾರದಲ್ಲೊಂದು ಐದು ದಶಕವಾದರೂ
ತುಂಬದ ಬಾವಿಯಲ್ಲಿ ಕೋಡಿ ಹರಿದಿತ್ತು

ಜಯರಾಮಚಾರಿ ಮೂಲತಃ ಮೈಸೂರಿನವರು. ಬೆಳೆದದ್ದು ಬೆಂಗಳೂರು
ಸಧ್ಯ ನಮ್ಮ ಮೆಟ್ರೊದಲ್ಲಿ ಸ್ಟೇಷನ್ ಸೂಪರಿಡೆಂಟ್ ಆಗಿದ್ದಾರೆ
“ಕರಿಮುಗಿಲ ಕಾಡಿನಲಿ: ಕಥಾ ಸಂಕಲನ ಇವರ ಪ್ರಕಟಿತ ಪುಸ್ತಕ
ಓದು ಮತ್ತು ಸಿನಿಮಾ ಇವರ ಹವ್ಯಾಸವಾಗಿದ್ದು ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ