ಎಲ್ಸಿ ಜೊತೆ ನಾವು

ಎಲ್ಸಿ ಅಂದ್ರೆ ಎಲ್ಸಿ
ನಾವು ಅಂದರೆ ಹರೀಶ, ಅವನೊಡನೆ ಬೆರೆತ ನಾನು
ಮೂವರೊಳಗೊಬ್ಬರೊಬ್ಬರ ಮೊತ್ತ, ಒಂದೇ ಚಿತ್ತ.
ಇನ್ನೂ ವಿಸ್ತರಿಸಬಹುದು….
ಆಷಾಢದ ಪಿಸುಗಾಳಿ, ಸೂರ್ಯ ಅವನ ಮರೆಸುವ ಮೋಡ, ಮೊದಲೆರಡು ಮಳೆಗೆ
ಹದಗೊಂಡು ಹಸುರುಕ್ಕುವ ಭೂಮಿ
ಬಯಲು… ಬಾನು…
ಹಿಂಗೆ ನಾವೆಲ್ಲ ಅಣು ಉಪಾಣು ಬಂಧ.

ಎಲ್ಸಿಯದು ಅಂದುಕೊಳ್ಳುವ ತೋಟ,
ಅಲ್ಲಮನ ಒಲುಮೆಯಲ್ಲಿರುವ ಅದಕೆ ಇಲ್ಲ ಬೇಲಿ
ಕಾಸು ಕರಿಮಣಿಯ ವಹಿವಾಟಿಲ್ಲ
ಅನಂತದೊಡನೆ ಜೀರ್ಣವಾಗುತ್ತಿರುವ ಅವರ ಮನೆಗೆ ಬಾಗಿಲಿಲ್ಲ ಬಂಕವಿಲ್ಲ… ಮನಕ್ಕೂ

ಭೇಟಿಯಾಗಬೇಕು ಮನುಷ್ಯರು ನಾವೆಲ್ಲ ಆಗಾಗ
ಯಾಕೆ?
ಉಣ್ಣಲೋ ಉಣಿಸಲೋ
ಕಟ್ಟಲೋ ಕರಗಲೋ
ಮುಟ್ಟಲೋ ಮುದುಡಲೋ
ಮೌನಕ್ಕೆ ಮಾತು ತುಂಬಲೋ
ಮಾತಿಗೆ ಮೌನ ಹೊದಿಸಲೋ
ಗೊತ್ತಿಲ್ಲ?

ಉರುಳಿದೆವು ತೋಟಕೆ ಇಲ್ಲಿಂದ ಅಲ್ಲಿಗೆ
ಏನೋ ಒದ್ದು ಕುತ್ತಿಗೆ ಹಿಡಿದು ದಬಾರನೇ ತಳ್ಳಿದಂತೆ
ಉರುಳಿದೆವು ತೋಟಕೆ
ತೋಟ ಬೇಟದಲಿ ಹಿಡಿದು ಎತ್ತಿ ಸೆಳೆದು ಅಪ್ಪಿತು.

ಮೊದಲೇ ಹೇಳಿದೆನಲ್ಲ ನಾವು ಅಂದ್ರೆ ನಾವೆಲ್ಲ
ನೀವು ಇದ್ದೀರಿ… ಇಲ್ಲವೇ? ಇದ್ದೇ ಇದ್ದೀರಿ.
ನಾವು ನೀವು ಚರಾಚರ ಬೆರೆತ ಸಂಗವದಮಿತ.

ಕೂತೆವು… ನಿಂತೆವು… ಓಡಾಡಿದೆವು.. ಈಜಾಡಿದೆವು
ಹಗಲ ಚಂದ್ರನಂಥ ಎಲ್ಸಿ
ಕುಸಿಯುತ್ತಿರುವ ಮನೆ ಮಾಡು ತೊಲೆ ಕಮಾನು
ಬಸಿರು ಬಾಣಂತನಕ್ಕೆ ಮರೆಗೈಯ್ದ ಗೋಡೆ
ರಾಗಿ ಭತ್ತದ ವಾಡೆ
ತಾಯ ನೆನೆದು ಕೊಳೆಯಾಗಿ ದುಃಖಿತ ಮಕ್ಕಳಂಥ
ಕಂಚಿನ ತಾಮ್ರದ ಹಿತ್ತಾಳೆಯ ಅಂಡೆ ಗುಂಡಿಗಳು
ಹಳೆಯ ನೆಂಟರಂತೆ ಕೂತಿರುವ ಒಲೆ, ತಣುಗೆ ತಪ್ಪಲೆ ಸೌಟು ಸಟುಗ….. ಎಲ್ಲವೂ ಬೆರೆತೇ ಇದ್ದೆವು.

ಇದ್ದರೂ ಇವರೂ ನಮ್ಮೊಡನೆ…
ದೂರಾದ ಪ್ರೇಯಸಿಯಂಥ ಸಿಹಿ ಹುಳಿ ಒಗರಿನ
ಕೆಂಪಾನ ಕೆಂಪು ಚೆರ್ರಿ
ಮೂವತೈದು ಅಡಿ ಆಳದಿಂದ ಸಿಹಿ ನೀರ
ತುಳುಕಿಸುವ ಮುದಿ ಬಾವಿ
ಧುಮುಕಿದರೆ ಧುಮುಗುಡುವ, ಬಿಟ್ಟೆದ್ದರೆ ಸೆಳೆವ ಕನ್ನೆಯ ಸ್ನೇಹದಂಥ ತಿಳಿನೀರ ಸೆಳೆತ ಎಳೆತ
ಕಮ್ಮನೆ ಬಡಿವ ಮಣ್ಣಿನ ತೇವ… ಏನೇನು ಇದ್ದವು
ಲೆಕ್ಕವಿಲ್ಲ ಬುಕ್ಕವಿಲ್ಲ.

ಈ ಕರೋನ ಇದಕಿಂತಲೂ ಭೀಕರವಾದ ಇಲ್ಲಿನ ಕ್ರಿಮಿಗಳು…
ಏನೇನೊ ದಿಗಿಲು, ಖುಷಿ, ವಿಷಾದ
ಮಾತು, ಮಾತು ಮಾತು ತುಂತುರು ಮಳೆಯಂತೆ
ಮೌನ ನಿರ್ಲಿಪ್ತ ಮೌನ
ಎಲ್ಸಿ ಫಳಾರನೆ ಹೊಳೆದರು…
ಸಭೆ ಮಿಂಚಿತು…
ಕುಲುಮೆಯಲಿ ಕಾಯ್ಸಿ ತಟ್ಟಿದ ಗುಳವನ್ನು ತಣ್ಣೀರಿಗಜ್ಜಿದಂತೆ ಕ್ಷಣ ತಣ್ಣಗೆ ಮಾತು ಸತ್ತಿತು.
ಆಗ ನವಿಲು ಕೂಗಿದ್ದು ಕೇಳಿಸಿತು
ಅದು ಹಸಿವೇ? ಅದು ಹಾಡೇ? ಅದು ಬೆದೆಯೇ?
ಅದು ಬಯಕೆಯೇ? ಅದೇನು?

ಕೈ ಜೋಡಿಸಿದ್ದವು ನಮ್ಮ ಜೊತೆಗೇ…
ಏನೇನೋ ಪದಾರ್ಥದಲಿ ಬೆಂದು ಮಿಂದೆದ್ದ
ಕೊರೆವ ಚಳಿಗೆ ಜಾಡಿಸಿ ಒದ್ದ ಚಿಕನ್ನಿ ತಾಜಾ ಖಾರ…
ತಲೆ ನೇವರಿಸಿ ಬರಸೆಳೆದುಕೊಂಡ After Dark

ನಮ್ಮ ಮನದ ಬಾವಿಗೆ ಎಷ್ಟು ಆಳ!
ನಾವು ತೆರೆದುಕೊಂಡವೇ?
ಮುಚ್ಚಿಕೊಂಡವೇ? ಮುಳುಗಿಸಿಕೊಂಡೆವೇ?
ಮನಸ್ಸು ಮುಟ್ಟುವುದು ಬಾವಿಗೆ ಡೈವ್ ಹೊಡೆದಂಥಲ್ಲ
ಅಲ್ಲವೇ?

ಇದಕ್ಕೆಲ್ಲ ಈಗ ಯಾರು ಸಾಕ್ಷಿ ?
ಎಲ್ಸಿಯೇ? ಹರೀಶನೇ? ನಾನೇ?
ಬಾವಿ ಸಂಧಿಯಲಿ ಮಲಗಿರುವ ಹಾವಿನ ಪೊರೆಯೇ?
ಹಂಚಿನ ಕಿಂಡಿಯಲಿ ಬೀಳುತ್ತಿದ್ದ ಬಿಸಿಲಕೋಲೆ?
ಶೀತಕ್ಕೆ ಹೊಸ್ತಿಲ ಸೆರಗಲ್ಲಿ ಹಬ್ಬಿದ್ದ ಪಾಚಿಯೇ?
ಕಳೆದ ಕಾಲವನ್ನೆಲ್ಲ ಬಿಗಿದಪ್ಪಿ ಬಿಮ್ಮನೇ ಕೂತಿರುವ
ಗಡಿಯಾರವೇ? ಎಷ್ಟೋ ನಗುವ ತೂಗಿ ಅಳುವ ತಾಗಿ ನಡುಮುರಿದು ತೊಟ್ಟಿಲೇ?
ಆ ಬಯಲೇ?

ನೆನಪಾಗುತ್ತದೆ ನನಗೆ ಸದಾ ಆ ಘಳಿಗೆ
ನೀವು ನಾವು ಅವರು ಇವರು ನಾನು ನೀನು ಎಂಬೆಲ್ಲ ಪಳೆಯುಳಿಕೆ ಮಾಯವಾಗಿ ಅನಂತದಲ್ಲಿ ಲೀನವಾದದ್ದು
ಎಲ್ಸಿಗೆ ಮತ್ತೆ ಮತ್ತೆ ನೆನಪಾಗುತ್ತಿದ್ದ
ತನ್ನ ಅವ್ವನ ಪ್ರೀತಿಯಂತೆ
ದಿನವಿಡೀ ಮನೆಯ ಸೂರಿನ ಸಂಧಿಯಲ್ಲಿ
ಕಾಯುತ್ತಾ ಕುಳಿತಲ್ಲೇ ಕುಳಿತು ಕಾಲವೇ ತಾನಾಗಿ ಹೋಗಿದ್ದ ಜೇಡದಂತೆ.

ಡಾ. ಜಯಶಂಕರ ಹಲಗೂರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರಿನವರು.
‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಕೋಮುವಾದದ ಪ್ರತಿನಿಧೀಕರಣ’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.
ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ