ಅಂತರ್ಜಾಲ ಮಾಧ್ಯಮ ಅನ್ವೇಷಣೆ ಪ್ರವೃತ್ತಿಯುಳ್ಳ ಯುವಬರಹಗಾರರ ಭವಿಷ್ಯದ ಮಾಧ್ಯಮವಾಗಿದೆ. ಆದರೆ ಅದು ಸಮಾಜದ ಆಗುಹೋಗುಗಳ ಕುರಿತು ವಾಸ್ತವಿಕ ಪ್ರಜ್ಞೆಗೆ ವಿಮುಖವಾಗದೇ, ರಾಜಕೀಯ ಹಾಗೂ ವೈಚಾರಿಕ ಪ್ರಜ್ಞೆಯ ತಳಹದಿಯ ಮೇಲೆ ಬೆಳೆಯಬೇಕೆಂಬ ಮುನ್ನೋಟವನ್ನು ಮಂಜುಳಾ ಗೋನಾಳ ಅವರು ತಮ್ಮ ಕೃತಿಯ ಮೂಲಕ ವ್ಯಕ್ತಪಡಿಸುತ್ತಾರೆ. ’ನುಡಿಯ ನೆರಳು’ ಕೃತಿಗೆ ಡಾ. ಗೀತಾ ವಸಂತ್ ಬರೆದ ಮುನ್ನುಡಿ ಇಲ್ಲಿದೆ.
ಮಂಜುಳಾ ಗೋನಾಳ ಅವರ ‘ನುಡಿಯ ನೆರಳು’ ಸಮಕಾಲೀನ ಓದಿನ ಕ್ರಮವೊಂದನ್ನು ನಮ್ಮ ಮುಂದಿರಿಸುವ ತಾಜಾತನದಿಂದಾಗಿ ಗಮನ ಸೆಳೆಯುತ್ತದೆ. ಸಾಹಿತ್ಯ ಪರಂಪರೆಯ ತಿಳುವು, ಆಯಾ ಕಾಲದ ಯುಗಧರ್ಮವನ್ನು ರೂಪಿಸುತ್ತ ಬಂದ ವೈಚಾರಿಕ ಆಕೃತಿಗಳ ಅರಿವು, ತೌಲನಿಕ ವಿವೇಚನೆಯ ಸೂಕ್ಷ್ಮ ಒಳನೋಟಗಳು ವಿಮರ್ಶೆಯನ್ನು, ಜಡಗೊಳಿಸದೇ ಜಾಗೃತವಾಗಿ ಉಳಿಸುತ್ತವೆ. ಮಂಜುಳ ಅವರು ವಿಮರ್ಶಾತ್ಮಕ ಪರಿಶೀಲನೆಗಾಗಿ ಆಯ್ದುಕೊಂಡ ಕೃತಿಗಳ ವೈವಿಧ್ಯ ಹಾಗೂ ವಿಸ್ತಾರಗಳೇ ಅವರ ಬಹುಮುಖೀ ಸಂವೇದನಾ ಶಕ್ತಿಯ ನಿದರ್ಶನವಾಗಿ ನಿಲ್ಲುತ್ತವೆ.
ಭಿನ್ನ ಓದುಗಳ ಮೂಲಕ ತಾವು ದಕ್ಕಿಸಿಕೊಂಡ ಅರಿವಿನ ದ್ರವ್ಯವನ್ನು ವಿಶ್ಲೇಷಣೆಯಲ್ಲಿ ಬಳಸಿಕೊಳ್ಳುತ್ತ ಹೋಗುವ ರೀತಿ ಅವರ ಬರವಣಿಗೆಯ ಕುರಿತು ಭರವಸೆ ಮೂಡಿಸುತ್ತದೆ. ವಿಶ್ವದ ಶ್ರೇಷ್ಠ ಕವಿಗಳ ಸಾಲಿಗೆ ಸೇರುವ ರೈನರ್ ಮರಿಯಾ ರಿಲ್ಕ್ ನ ಕಾವ್ಯದಿಂದ ಹಿಡಿದು ತನ್ನ ಸಮಕಾಲೀನ ಕವಿಗಳ ಕವಿತೆಯವರೆಗೂ ಅವರ ಬರಹ ಈ ಕೃತಿಯಲ್ಲಿ ವಿಸ್ತರಿಸಿಕೊಂಡಿದೆ. ರಾಮಧಾನ್ಯ ಚರಿತೆಯಲ್ಲಿ ಜಾತಿ ಪ್ರಶ್ನೆಯ ಆಯಾಮಗಳು, ತಲೆದಂಡ ಪಠ್ಯದಲ್ಲಿ ಸಾಂಸ್ಕೃತಿಕ ಮುಖಾಮುಖಿಯ ಚಹರೆಗಳು, ಇಂಥ ಗಂಭೀರ ಪರಿಕಲ್ಪನೆಗಳನ್ನು ತಾತ್ವಿಕವಾಗಿ ಕಟ್ಟಿಕೊಡುವ ಸಾಹಸಕ್ಕೆ ಮಂಜುಳ ಮನಸ್ಸು ಮಾಡುತ್ತಾರೆ. ಅವರು ಅದನ್ನು ನಿಭಾಯಿಸಿದ ರೀತಿ ಹೇಗೆಯೇ ಇರಲಿ, ಅಂಥ ಕೃತಿಗಳ ಆಳವನ್ನು ತಟ್ಟಿ ನೋಡಬೇಕೆಂಬ ಅವರ ಸಂಕಲ್ಪವೇ ಹಿರಿದು. ಸಂಶೋಧನಾ ವಿದ್ಯಾರ್ಥಿಯೂ ಆಗಿರುವ ಮಂಜುಳ ಹಿರಿದಾದ್ದನ್ನು ತೆಕ್ಕೆಯಲ್ಲಿ ಹಿಡಿಯಬೇಕೆಂಬ ಮಹತ್ವಾಕಾಂಕ್ಷೆಯ ಹುಡುಗಿಯೆಂಬುದು ಅವರ ನುಡಿಗಳಲ್ಲಿ ಢಾಳಾಗಿ ಕಾಣಿಸುತ್ತದೆ. ಅದಕ್ಕಾಗಿ ಅವರಿನ್ನೂ ಶ್ರಮಿಸಬೇಕಿದೆ.
ಮಂಜುಳ ಅವರ ಬರವಣಿಗೆಯ ಮೂಲಗುಣ ಜಿಜ್ಞಾಸೆ. ಅದು ಚಿಂತನಾ ಸರಣಿಗಳನ್ನು ರೂಪಿಸುತ್ತ ಆಳವನ್ನು ಶೋಧಿಸುತ್ತ, ತನ್ನ ಭಾವಶಕ್ತಿಯನ್ನು ತಾನೇ ಹಿಗ್ಗಿಸಿಕೊಳ್ಳುತ್ತ ನಡೆಯುವ ಪರಿ ಆಸಕ್ತಿದಾಯಕವಾಗಿ ಕಾಣಿಸುತ್ತದೆ. ಬದುಕು: ಪ್ರೀತಿ, ಕಾವ್ಯದ ಸೊಲ್ಲು, ಇಂಥ ಲೇಖನಗಳಲ್ಲಿ ಇದು ಸ್ಪಷ್ಟವಾಗಿದೆ. ಮಂಜುಳ ಅವರೇ ಹೇಳುವಂತೆ “ಪ್ರತಿ ಲೇಖಕನಲ್ಲೂ ತಾತ್ವಿಕ ನಿಲುವು ಭಿನ್ನವಾಗಿರುತ್ತದೆ. ಆದರೂ ಪ್ರತಿಯೊಬ್ಬ ಲೇಖಕನೂ ತನ್ನ ಕೃತಿಯಲ್ಲಿ ಜೀವನ ಸತ್ವದ ಹುಡುಕಾಟ ಮಾಡುತ್ತಾನೆ.” ಮಂಜುಳ ಅವರ ಬರಹಗಳಲ್ಲೂ ಈ ಹೊರಳು ಇದೆ. ಕೃತಿಯೊಂದರ ಮೂಲಕ ಪ್ರವೇಶಿಸಿ ತಮ್ಮ ಜೀವನ ಸತ್ವವನ್ನು ಅವರು ಶೋಧಿಸಿಕೊಳ್ಳುತ್ತ ನಡೆದಂತೆ ಅನ್ನಿಸುತ್ತದೆ. ವಿಮರ್ಶೆಗೆ ಸೃಜನ ಶೀಲ ಆಯಾಮ ಪ್ರಾಪ್ತಿಯಾಗುವುದೇ ಹೀಗೆ. ಇದು ಸದ್ದಿಲ್ಲದೇ ಆಗುವ ವಿಕಾಸ. ಕಾವ್ಯದ ರೂಪಕಗಳ ಕುರಿತು ಮಾತನಾಡುತ್ತ ಅವು ಕೃತಕವಾಗಿ ಕಟ್ಟುವುದಲ್ಲ, ಪ್ರಕೃತಿಯ ಆಂತರಿಕವಾದ ಸೂಕ್ಷ್ಮ ಸಾಮರಸ್ಯದ ತತ್ವಗಳು ಕ್ರಿಯಾಶೀಲವಾದಾಗ ಅಲ್ಲಿಂದಲೇ ರೂಪಕಗಳು ಹುಟ್ಟುತ್ತವೆ ಅನ್ನುತ್ತಾರೆ. ಅದಕ್ಕೆ ಸಮಕಾಲೀನ ಕವಿತೆಗಳಿಂದ ಉದಾಹರಣೆಯನ್ನು ಮುಂದಿರಿಸುತ್ತಾರೆ.
“ಅನುಭವ ಜನ್ಯ ಕಲಾಕೃತಿ ಸರ್ವಕಾಲಕ್ಕೂ ಗಟ್ಟಿಯಾಗಿ ನಿಲ್ಲುತ್ತದೆ. ಹೇಗೆಂದರೆ ಅದು ಲೋಕಸತ್ವ ಮತ್ತು ಕಾವ್ಯಸತ್ವದಿಂದ ಮಾತ್ರ” ಎನ್ನುತ್ತಾರೆ. ತನ್ನ ಕಾಲದ ಕವಿತೆಯನ್ನು ಈ ಸೂಕ್ಷ್ಮಗಳ ಮೂಲಕ ಸಾಣೆ ಹಿಡಿಯುವ ನೋಟ ಅವರಿಗೆ ದಕ್ಕಿದೆ. ಕಲಾಕೃತಿಯಂತೇ ಬದುಕೂ ಕೂಡಾ ಅನುಭವಗಳ ಕುಲುಮೆಯಿಂದಲೇ ಆಕಾರ ಪಡೆಯುವಂತಹುದು. ಬದುಕಿನ ಮೀಮಾಂಸೆಯನ್ನು ಬರಹಗಳ ಮೂಲಕ ಕಟ್ಟಿಕೊಳ್ಳುವ ಉತ್ಸಾಹ ಮತ್ತು ಸೂಕ್ಷ್ಮತೆ ಅಲ್ಲಲ್ಲಿ ಹಣಕಿ ಹಾಕುತ್ತ ಅವರ ಬದುಕಿನ ಪ್ರೀತಿಯನ್ನು ದರ್ಶನ ಮಾಡಿಸುತ್ತವೆ.
‘ನುಡಿಯ ನೆರಳು’ ತನ್ನ ಬಾಹುಗಳನ್ನು ಭೂತದಿಂದ ವರ್ತಮಾನಕ್ಕೆ ಚಾಚುತ್ತ, ಭವಿಷ್ಯದತ್ತ ದಿಟ್ಟಿಸಿ ನೋಡುವ ಚಲನಶೀಲತೆಯಿಂದಾಗಿ ಜೀವಂತವಾಗಿದೆ. ವಸುಧೇಂದ್ರ, ಚೆನ್ನಪ್ಪ ಕಟ್ಟಿ, ಅಮರೇಶ ನುಗಡೋಣಿ, ಕೆ.ವೈ ನಾರಾಯಣಸ್ವಾಮಿ, ಪಿ. ಚಂದ್ರಿಕಾ ಮುಂತಾದವರ ಕೃತಿಗಳನ್ನು ಅವರ ಭಿನ್ನ ಓದಿನ ದಾರಿಗಳ ಮೂಲಕ ತಲುಪುವುದು ಹೇಗೆಂಬುದನ್ನು ಹೇಳುತ್ತಾರೆ. ಕೃತಿಯ ತಾತ್ವಿಕತೆಯನ್ನು ಕಾಣುವ ಹಾಗೂ ಕಟ್ಟುವ ದಿಟ್ಟತನವನ್ನು ಅವರು ರಚಿಸಿಕೊಳ್ಳುತ್ತಿರುವ ಬಗೆ ಚೇತೋಹಾರಿಯಾದುದು. ರಿಲ್ಕ್ ಕವಿತೆಗಳನ್ನು ಸ್ತ್ರೀವಾದಿ ನೋಟಕ್ರಮದಲ್ಲಿ ಕಟ್ಟುವ ಬರಹ ಹಾಗೂ ‘ಮೋದಾಳಿ’ ನಾಟಕದ ಮೂಲಕ ಸ್ತ್ರೀತ್ವದ ಮೀಮಾಂಸೆಯನ್ನು ಕಾಣುವ ಕ್ರಮವನ್ನು ಇಲ್ಲಿ ಉದಾಹರಿಸಬಹುದು. ‘ಅಂತರ್ಜಾಲ ಮಾಧ್ಯಮ ಮತ್ತು ಸಮಕಾಲೀನ ಕನ್ನಡ ಸಾಹಿತ್ಯ’ ಎಂಬ ಲೇಖನವು ಸಾಹಿತ್ಯದ ಪ್ರಸ್ತುತ ಟ್ರೆಂಡ್ ಗಳ ಬಗ್ಗೆ ಮಾತನಾಡುತ್ತಲೇ ಅದರ ಹಿಂದಿನ ಒತ್ತಡಗಳ ಕುರಿತು ಒಳನೋಟವನ್ನು ದಾಖಲಿಸುತ್ತದೆ.
ಅಂತರ್ಜಾಲ ಮಾಧ್ಯಮ ಅನ್ವೇಷಣೆ ಪ್ರವೃತ್ತಿಯುಳ್ಳ ಯುವಬರಹಗಾರರ ಭವಿಷ್ಯದ ಮಾಧ್ಯಮವಾಗಿದೆ. ಆದರೆ ಅದು ಸಮಾಜದ ಆಗುಹೋಗುಗಳ ಕುರಿತು ವಾಸ್ತವಿಕ ಪ್ರಜ್ಞೆಗೆ ವಿಮುಖವಾಗದೇ, ರಾಜಕೀಯ ಹಾಗೂ ವೈಚಾರಿಕ ಪ್ರಜ್ಞೆಯ ತಳಹದಿಯ ಮೇಲೆ ಬೆಳೆಯಬೇಕೆಂಬ ಮುನ್ನೋಟವನ್ನು ವ್ಯಕ್ತಪಡಿಸುತ್ತಾರೆ. ಸೋಶಿಯಲ್ ಮೀಡಿಯಾಗಳನ್ನು ಬಂಡವಾಳ ಶಾಹಿ ಪ್ರವೃತ್ತಿಯಿಂದ ಹೊರಬಂದು, ಸಾಹಿತ್ಯದ ಮೂಲ ಅನ್ವೇಷಣೆಯ ಪ್ರವೃತ್ತಿಯನ್ನು ಉಳಿಸಿಕೊಳ್ಳಬೇಕಾದ ತುರ್ತನ್ನು ಒತ್ತಿ ಹೇಳುತ್ತಾರೆ. ಇಲ್ಲೆಲ್ಲ ಆರೋಗ್ಯಕರ ಸಮತೋಲನವನ್ನು ಧಾವಿಸುವ ಯುವ ಮನಸ್ಸೊಂದು ಇಲ್ಲಿ ಮಿಡಿಯುತ್ತಿರುವುದು ಆಶಾದಾಯಕವೆನಿಸುತ್ತದೆ.
ನುಡಿಯ ಒಡನಾಟವೆಂಬುದು ಒಂದು ಧ್ಯಾನ. ಅದು ಒಳಗಿಳಿಯುತ್ತ ನಮ್ಮನ್ನು ಅರಳಿಸುತ್ತ ಹೊರಗೆ ತನ್ನ ಪ್ರಭೆಯನ್ನು ಚೆಲ್ಲುತ್ತದೆ. ಮಂಜುಳ ನುಡಿಯೊಂದಿಗೆ ನಡೆಸುತ್ತಿರುವ ಈ ಅನುಸಂಧಾನ ಇನ್ನಷ್ಟು ಸಾಂದ್ರವಾಗಲಿ. ತಮ್ಮ ಬಿಡಿಬಿಡಿ ವಿಚಾರಗಳನ್ನು ಅಂತರಿಕ ಸಮಗ್ರತೆಯಲ್ಲಿ ಸಂಯೋಜಿಸುವ ಹದ ಅವರಿಗೆ ಒದಗಲಿ ಎಂದು ಆಶಿಸುತ್ತೇನೆ. ಅವರು ನಡೆಯಬೇಕಾದ ದಾರಿ ದೀರ್ಘವಿದೆ. ನಡೆವ, ನುಡಿವ ಬೆರಗನ್ನು ಅವರು ಉಳಿಸಿಕೊಳ್ಳಲಿ ಎಂದು ಆಶಿಸುವೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಧನ್ಯವಾದಗಳು ಸಂಪಾದಕೀಯ ಬಳಗಕ್ಕೆ.