ಸೆರೆಮನೆಯಲ್ಲಿರುವ, ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ಖೈದಿಗಳಿಗೆ ಮನರಂಜನೆ ಇರಬೇಕು, ಅದಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂಬ ಮಾತನ್ನು ನಾನು ಇದುವರೆಗೆ ಎಲ್ಲೂ ಕೇಳಿಲ್ಲ. ಅವರ ಮನೋಧರ್ಮದಲ್ಲಿ ಏನಾದರೂ ಸುಧಾರಣೆ ಆಗಬೇಕು ಎನ್ನುವುದಾದರೆ, ಧಾರ್ಮಿಕ ಪ್ರವಚನಗಳನ್ನು ಏರ್ಪಡಿಸಲಿ, ಭಗವದ್ಗೀತೆ ಮೇಲೆ ಉಪನ್ಯಾಸ ನೀಡಲಿ, ಭಜನೆ ಇರಲಿ, ಹಾಡುಗಾರರನ್ನು ಕರೆಸಿ ದೇವರನಾಮ ಹೇಳಿಸಿ, ಪ್ರಾರ್ಥನೆ ಇರಲಿ. ಹೀಗೆಲ್ಲ ಮಾಡಿದರೆ ಮನಸ್ಸಿನಲ್ಲಿ, ದೇಹದಲ್ಲಿ ಸಾತ್ವಿಕ ಪ್ರವೃತ್ತಿ ಜಾಗೃತವಾಗುತ್ತದೆ.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಕೊನೆಯ ಬರಹ ನಿಮ್ಮ ಓದಿಗೆ
ಮಹಾನಗರದ ಕೇಂದ್ರ ಕಾರಾಗೃಹದ ಆಡಿಟ್ ವಿಭಾಗಕ್ಕೆ ನಿಯುಕ್ತನಾಗಿ ಹೋಗಿದ್ದಾಗ, ಅಡಿಟ್ ಕೆಲಸದ ಜೊತೆ ಜೊತೆಗೇ ಆಗಾಗ್ಗೆ ಆಡಳಿತದ ಜವಾಬ್ದಾರಿಯನ್ನು ಕೂಡ ನೋಡಿಕೊಳ್ಳಬೇಕಾಗಿ ಬರುತ್ತಿತ್ತು. ಆಡಳಿತದ ಜವಾಬ್ದಾರಿ, ಅತಿಥಿ ಅಭ್ಯಾಗತರನ್ನು ಆದರಿಸುವ, ನಿರ್ವಹಿಸುವ ಕೆಲಸವನ್ನು ನೋಡಿಕೊಳ್ಳುತಿದ್ದ ಉಪನಿರ್ದೇಶಕರ ಪತ್ನಿಗೆ ಮುಟ್ಟು ನಿಲ್ಲುವ ಸಮಯದಲ್ಲಿ ಉಂಟಾಗುವ ಖಿನ್ನತೆ ವಿಕೋಪಕ್ಕೆ ಹೋಗಿ ಮತ್ತೆ ಮತ್ತೆ ಮಾನಸಿಕ ಆಸ್ಪತ್ರೆಗೆ ಸೇರಬೇಕಾಗಿ ಬಂದು ಮಾನ್ಯರು ರಜಾ ಹೋಗಿಬಿಡುತ್ತಿದ್ದರು. ಆಗೆಲ್ಲ ಆಡಳಿತದ ಜವಾಬ್ದಾರಿಯೂ ಕೂಡ ನನ್ನದೇ.
ಹೀಗೆ ಜವಾಬ್ದಾರಿ ವಹಿಸಿಕೊಂಡ ಒಂದು ವಾರ ಜೈಲಿಗೆ ಸಂದರ್ಶಕ ಗಣ್ಯ ಅತಿಥಿಯಾಗಿ ಬಂದವರು ನಮ್ಮ ಜಿಲ್ಲಾಧಿಕಾರಿಯಾಗಿ ಜನಪ್ರಿಯರಾಗಿದ್ದ ರಾಗಿಣಿಯವರು. ವಿಶಾಲಾಂಧ್ರದ ಗಣ್ಯರಾದ ಚೌಧುರಿ ಮನೆತನಕ್ಕೆ ಸೇರಿದವರು. ಚಿಕ್ಕ ವಯಸ್ಸಿನಲ್ಲೇ ಆಡಳಿತ ಸೇವೆಯ ಪರೀಕ್ಷೆ ಪಾಸು ಮಾಡಿಕೊಂಡಿದ್ದರು. ಮಿಡಲ್ ಸ್ಕೂಲಿನಿಂದ ಎಂಜಿನಿಯರಿಂಗ್ ಪದವಿ ತನಕ ಸಾಯಿ ಶಿಕ್ಷಣ ಸಂಸ್ಥೆಯ ಹಾಸ್ಟೆಲ್‌ನಲ್ಲಿ ಇದ್ದುಕೊಂಡೇ ಓದಿದ್ದರಿಂದ ನೈತಿಕತೆ, ನೇಮ ನಿಯಮಗಳ ಹಿನ್ನೆಲೆ ಕೂಡ ಚೆನ್ನಾಗಿತ್ತು. ಈ ಬರಹಕ್ಕೆ ಅಗತ್ಯವಿಲ್ಲದಿದ್ದರೂ ಸೇರಿಸಬಹುದಾದ ಒಂದು ಮಾತೆಂದರೆ, ನೋಡಲು ಕೂಡ ಕೆಂಪಗೆ ತುಂಬಾ ಲಕ್ಷಣವಾಗಿದ್ದರು. ಮುಖಭಾವದಲ್ಲಿ ಮಾದಕತೆಗಿಂತ ಪ್ರಶಾಂತ ಕಳೆಯೇ ಹೆಚ್ಚಾಗಿತ್ತು. ಮಾತನಾಡುವಾಗ ಅವರ ಕಣ್ಣುಗಳು, ಮುಂಗುರುಳು, ಹಿತಮಿತವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ ರೀತಿ, ಧ್ವನಿಯ ಸರಳತೆ, ಗಾಂಭೀರ್ಯ, ಒಂದು ಶೋಭೆಯನ್ನು ನೀಡಿತ್ತು. ಆಡಳಿತದ ಸಮಾರಂಭವಿರಲಿ, ದೇವಸ್ಥಾನಕ್ಕೆ ಹೋಗಲಿ, ಮದುವೆಗೆ ಬರಲಿ, ಶ್ಲೋಕಗಳನ್ನು ಅವರು ಸಹಜವಾಗಿ ಪಠಿಸುತ್ತಿದ್ದ ರೀತಿಯದೇ ಇನ್ನೊಂದು ಸೊಗಸು. ಮೂರು ವರ್ಷ ಗಮಕ ತರಗತಿಗಳಿಗೆ ಹೋಗಿದ್ದರಂತೆ. ಅಂಚೆ ಚೀಟಿ ಸಂಗ್ರಹದಿಂದ ಹಿಡಿದು, ಬಂಡೆ ಹತ್ತುವ ತರಬೇತಿ ಶಿಬಿರದ ಪ್ರಾರಂಭೋತ್ಸವದವರೆಗೆ ಎಲ್ಲ ಚಟುವಟಿಕೆಗಳಲ್ಲೂ ಗುರುತಿಸಿಕೊಳ್ಳುತ್ತಿದ್ದರು. ಇದೆಲ್ಲಕ್ಕಿಂತ ಮುಖ್ಯವಾಗಿ ರಾಗಿಣಿಯವರ ಪತಿಯು ನಮ್ಮ ಮಹಾನಗರದ ಮುಖ್ಯ ರಿಯಲ್ ಎಸ್ಟೇಟ್ ಏಂಜೆಂಟ್ ಆಗಿದ್ದರು. ಸಹಸ್ರಾರು ಎಕರೆಗಳ ವಾರ್ಷಿಕ ವಹಿವಾಟಿತ್ತು. ಮಂತ್ರಿ ಮಾಗಧರ, ಅನಿವಾಸಿ ಭಾರತೀಯರ, ನಾನಾ ಕೋಮಿನ ಜಗದ್ಗುರುಗಳ ಭೂಮಿ ಕಾಣಿಯನ್ನು ಅವರು ನೋಡಿಕೊಳ್ಳುತ್ತಾರೆ. ರಾಗಿಣಿ ಮೇಡಂ ಸಂಬಳಕ್ಕೆ ಕೆಲಸ ಮಾಡಬೇಕಾದ ಪೈಕಿಯಲ್ಲ ಎಂಬುದು ಕೂಡ ಡಿಸಿ ಮೇಡಂ ಬಗ್ಗೆ ನಮಗೆಲ್ಲ ಇದ್ದ ಇನ್ನೊಂದು ಆಕರ್ಷಣೆ. ಒಟ್ಟಿನಲ್ಲಿ ದೇವರು ಅವರಿಗೆ ಎಲ್ಲವನ್ನೂ ಸಪ್ರಮಾಣದಲ್ಲಿ, ಚಿಕ್ಕ ವಯಸ್ಸಿನಲ್ಲೇ ನೀಡಿದ್ದ. ದುಂದಿಲ್ಲದೆ, ಪ್ರದರ್ಶನದ ಚಪಲವಿಲ್ಲದೆ ಸಮಾರಂಭಗಳಿಗನುಗುಣವಾದ ಕೇಶ ವಿನ್ಯಾಸ, ಕೈ ಮಗ್ಗದ ಸೀರೆಯಿಂದ ಈಗಲೂ ಅವರು ನನ್ನ ನೆನಪಿನಲ್ಲಿದ್ದಾರೆ.
ರಾಗಿಣಿಯವರ ಕಾರ್ಯವ್ಯಾಪ್ತಿಯಲ್ಲಿ ಬರದೇ ಹೋದರೂ, ಸ್ಥಾನ ಗೌರವದಿಂದಾಗಿ ನಮ್ಮ ಕಾರಾಗೃಹಕ್ಕೂ ಒಮ್ಮೆ ಭೇಟಿ ನೀಡುವುದಾಗಿ, ಸಾಧ್ಯವಾದರೆ ಆಯ್ದ ಕೆಲವು ಖೈದಿಗಳ ಜೊತೆ ಸಂಭಾಷಣೆ ನಡೆಸುವುದಾಗಿ ಅವರೇ ಸೂಚನೆ ಕಳಿಸಿದರು. ನನಗೂ ಸಹೋದ್ಯೋಗಿಗಳಿಗೂ ಖುಷಿಯಾಯಿತು. ಖೈದಿಗಳಿಗೆ, ಅಪರಾಧಿಗಳಿಗೆ ಇದನ್ನು ತಿಳಿಸಿದರೂ ಅವರೇನೂ ಆಸಕ್ತಿ ತೋರಲಿಲ್ಲ. ನಾನೇ ಮೇಡಂ ಭೇಟಿಗೆ ಗೌರವವೆಂದು ಸುಣ್ಣ-ಬಣ್ಣ ಮಾಡಿಸಿದೆ. ವಿಶೇಷ ರೀತಿಯ ತಳಿರು ತೋರಣಕ್ಕೆ ವ್ಯವಸ್ಥೆ ಮಾಡಿದೆ. ಪೂರ್ಣಕುಂಭ ಸ್ವಾಗತದ ಸಮಯದಲ್ಲಿ ವೇದಘೋಷಕ್ಕೆ ತೆಲುಗು ಉಚ್ಚಾರಣೆ ಚೆನ್ನಾಗಿರುವ ಚಿಂತಾಮಣಿ ಸೀಮೆಯ ಶ್ರುತಿಕರನ್ನೇ ಗೊತ್ತುಮಾಡಿದೆ. ಸ್ಟಾರ್ ಹೋಟೆಲ್‌ಗೆ ಕೇಟರಿಂಗ್‌ಗೆ ಸೂಚನೆ ನೀಡಿದೆ. ರಂಗೋಲಿ ಕಲೆಯ ಬಗ್ಗೆ ಮೇಡಂಗೆ ಒಲವಿದೆಯೆಂದು ಸಂದರ್ಶನವೊಂದರಲ್ಲಿ ಓದಿದ್ದರಿಂದ, ಕಾರಾಗೃಹದ ಬೃಹತ್ ಹೆಬ್ಬಾಗಿಲ ಮುಂದೆ ಸುಂದರವಾದ ರಂಗೋಲಿ ವಿನ್ಯಾಸವನ್ನು ಕೂಡ ಹಾಕಿಸಿದೆ. ಉಡುಗೊರೆಯಾಗಿ ಕೊಡಲು ಪೆಂಗ್ವಿನ್ ಪ್ರಕಾಶನದ ಈಚಿನ ಪ್ರಕಟಣೆಗಳ ಒಂದು ಕಟ್ಟನ್ನು ತರಿಸಿದೆ.
ಇಷ್ಟೆಲ್ಲ ಮಾಡಿದ ನಾನೇ ಕೊನೆಗೆ ಪೇಚಿಗೆ ಸಿಕ್ಕಿಹಾಕಿಕೊಂಡೆ. ಪೇಚಿಗೆ ಸಿಕ್ಕಿಹಾಕಿಕೊಳ್ಳುವ ಸಂದರ್ಭವು ಜೈಲಿನ ಆವರಣದಲ್ಲೇ ಇತ್ತೆಂದು ಕೂಡ ನನಗೆ ಹೊಳೆದಿರಲಿಲ್ಲ. ಅಡಿಟ್ ವಿಭಾಗಕ್ಕೆ ಸೇರಿದ ನಾನಾದರೂ ಜೈಲಿನ ಸಕಲ ವಿವರಗಳನ್ನು ಏಕಾದರೂ ತಿಳಿದುಕೊಳ್ಳಲಿ?
ಜಿಲ್ಲಾಧಿಕಾರಿ ಬಂದರು, ಭಗವದ್ಗೀತೆ, ಮಂಕುತಿಮ್ಮನ ಕಗ್ಗವನ್ನೆಲ್ಲ ಉಲ್ಲೇಖಿಸುತ್ತಾ ಚೆನ್ನಾಗಿ ಭಾಷಣ ಮಾಡಿದರು. ಮೊಗಸಾಲೆಯಲ್ಲಿ ಕುಳಿತುಕೊಂಡು ಉಪಹಾರ ಸೇವಿಸುತ್ತಾ, ಜೈಲು ಆವರಣ ಇಷ್ಟೊಂದು ವಿಶಾಲವಾಗಿದೆ, ಒಂದು ಸುತ್ತು ಹೋಗಿ ಬರೋಣವೇ ಎಂದು ಉತ್ಸಾಹ ತೋರಿಸಿದರು. ಅವರ ನಾಯಕತ್ವದಲ್ಲಿ ಜೈಲು ಆವರಣದೊಳಗೆ ಒಂದು ರೀತಿಯ ವಾಯುವಿಹಾರ ಪ್ರಾರಂಭವಾಯಿತು. ಏನು ಬಿರುಸಿನ ನಡಿಗೆ, ಏನು ದಾಪುಗಾಲು? ಹಾಗೆ ನಡೆಯುವಾಗಲೂ ದೇಶದ, ಸಮಾಜದ ಸಮಸ್ಯೆಗಳ ಚರ್ಚೆ. ಆದರೆ ನನಗೆ ನಿಜಕ್ಕೂ ಗೊತ್ತಿರಲಿಲ್ಲ.
ಖೈದಿಗಳಲ್ಲೇ ಕೆಲವರು ಸ್ವಲ್ಪ ಅನುಕೂಲಸ್ಥ ಮನೆತನದಿಂದ ಬಂದವರು. ಒಂದು ವಿಶಾಲವಾದ ಹಾಲ್‌ನಲ್ಲಿ ಜಮಖಾನದ ಮೇಲೆ ಮಲಗಿಕೊಳ್ಳುತ್ತಿದ್ದರು. ಅವರ ಬಂಧುಗಳಿಂದ ವಂತಿಗೆ ಪಡೆದೇ ಹಾಲ್‌ನಲ್ಲಿ ಒಂದು ಟೆಲಿವಿಷನ್ ಇಡಲಾಗಿತ್ತು. ಕ್ರಿಕೆಟ್ ಪಂದ್ಯಗಳು, ಸಿನೆಮಾ ನೋಡುವುದು ಕೂಡ ಇತ್ತಂತೆ. ಜಮಖಾನದ ಒಂದು ತುದಿಯಲ್ಲಿ ಕಾಕಿ ಬಣ್ಣದ ಲೋಡುದಿಂಬುಗಳಿದ್ದವು. ಇನ್ನೊಂದು ಬದಿಯಲ್ಲ ನೀರಿನ ಹೂಜಿ, ಗ್ಲಾಸುಗಳನ್ನು ಇಟ್ಟಿದ್ದರು. ಟೆಲಿವಿಷನ್ ಪಕ್ಕದಲ್ಲಿದ್ದ ಸ್ಟೂಲಿನ ಮೇಲೆ ವೀಡಿಯೋ ಕ್ಯಾಸೆಟ್‌ಗಳನ್ನು ಕೂಡ ಇಟ್ಟಿದ್ದರು.
ನಾವು ಜಿಲ್ಲಾಧಿಕಾರಿ ಜೊತೆಗೆ ಬಂದಾಗ ಒಂದು ಹದಿನೈದು ಇಪ್ಪತ್ತು ಖೈದಿಗಳು ಟೆಲಿವಿಷನ್‌ನಲ್ಲಿ ಮೋಟಾರ್ ಸೈಕಲ್ ರೇಸಿಂಗ್ ನೋಡುತ್ತಿದ್ದರು. ಸ್ಪರ್ಧೆಗೆ ಸ್ಪಂದಿಸುತ್ತಾ, ಭಾಗವಹಿಸುತ್ತಾ ಸಂಭ್ರಮ, ಹರ್ಷೋದ್ಗಾರ ಕೂಡ ಕೇಳಿಬರುತ್ತಿತ್ತು. ಕೆಲವರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಜಿಲ್ಲಾಧಿಕಾರಿ ಬಂದದ್ದು ಅವರಿಗೆ ಗೊತ್ತಾಗಲೇ ಇಲ್ಲ.
ಖೈದಿಗಳ ಸಂಭ್ರಮ, ಹರ್ಷೋದ್ಗಾರ ಕಂಡ ಜಿಲ್ಲಾಧಿಕಾರಿಗಳು ಆಶ್ಚರ್ಯಚಕಿತರಾದರು. ಸೇರಿದ್ದವರೆಲ್ಲ ಖೈದಿಗಳು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಇವರೆಲ್ಲ ನಿಮ್ಮ ಸಿಬ್ಬಂದಿ ವರ್ಗದವರೇ, ಇಷ್ಟೊಂದು ಜನ ಸಿಬ್ಬಂದಿ ಇದ್ದಾರಾ ಎಂಬ ಪ್ರಶ್ನೆಯೊಡನೆ ಮುಂದಿನದೆಲ್ಲ ಪ್ರಾರಂಭವಾದದ್ದು.
ಖೈದಿಗಳು ಯೂನಿಫಾರಂನಲ್ಲಿರಲಿಲ್ಲ. ಕೆಲವರು ಅಂಗಿ, ಪಂಚೆ ಹಾಕಿಕೊಂಡಿದ್ದರೆ, ಇನ್ನು ಕೆಲವರು ಟೀಷರ್ಟ್, ಪೈಜಾಮದಲ್ಲಿದ್ದರು. ಕೆಲವರು ಬರ್ಮುಡಾ ಹಾಕಿಕೊಂಡಿದ್ದರು. ಕೆಲವರ ಕೈಲಿ ಮೊಬೈಲ್ ಫೋನ್ ಇತ್ತು.
ಇಲ್ಲ ಮೇಡಂ, ಇವರೆಲ್ಲ ಖೈದಿಗಳು ಎಂದ ತಕ್ಷಣವೇ ಮೇಡಂಗೆ ರೇಗಿಹೋಯಿತು. ಏನಿದು, ಇವರೆಲ್ಲ ಹೀಗೆ ಮೋಜು ಮಾಡ್ತಾ ಕೂತಿದ್ದಾರೆ. ಇದಕ್ಕೆಲ್ಲ ಇಲ್ಲಿ ಅವಕಾಶವಿದೆಯೇನು? ಶಿಕ್ಷೆ ಅನುಭವಿಸಬೇಕಾದ ಕಾಲಾವಧಿಯಲ್ಲಿ ಈ ರೀತಿಯ ಮನರಂಜನೆಯೇ? ಏನಿದು? ಈ ಜಮಖಾನ, ಲೋಡುದಿಂಬು, ವೀಡಿಯೋ ಕ್ಯಾಸೆಟ್‌ಗಳು? ನೋಡಲು ಕೂಡ ಯಾರೂ ಖೈದಿಗಳ ರೀತಿ ಕಾಣುತ್ತಿಲ್ಲ. ಎಲ್ಲರೂ ಕಳಕಳಿಯಾಗಿದ್ದಾರೆ. ಯಾವುದೋ ಪ್ರವಾಸಕ್ಕೆ ಹೊರಟಂತೆ ಉತ್ಸಾಹದಿಂದ್ದಾರೆ!
ನಮ್ಮಲ್ಲೇ ಹಿರಿಯರಾದ ಶ್ರೀಪ್ರಸನ್ನರು ವಿವರಣೆ ನೀಡಲು ಮುಂದಾದರು. ಮೇಡಂ ಇವರೆಲ್ಲ ಸೀನಿಯರ್ ಖೈದಿಗಳು. ಒಳ್ಳೊಳ್ಳೆಯ ಮನೆತನದಿಂದ ಬಂದವರು. ಸನ್ನಡತೆಯ ಆಧಾರದ ಮೇಲೆ ಶಿಕ್ಷೆಯ ಕಾಲಾವಧಿ ಮುಗಿಯುವ ಮುನ್ನ ಬಿಡುಗಡೆ ಕೂಡ ಆಗಬಹುದು. ಅವರ ಕುಟುಂಬದ ಕಡೆಯಿಂದಲೇ ಇದಕ್ಕೆಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಲ್ಲಿ ನಮ್ಮದೇನು ಪಾತ್ರವಿಲ್ಲ. ದಿನಕ್ಕೆ ಒಂದು ಮೂರು-ನಾಲ್ಕು ಘಂಟೆ ಅಷ್ಟೇ ಈ ಹಾಲಿನಲ್ಲಿ ಸೇರುತ್ತಾರೆ. ಕಷ್ಟ-ಸುಖ ಮಾತನಾಡಿಕೊಳ್ಳುತ್ತಾರೆ. ಈ ಹಾಲ್ ಕಡೆ ಮಾತ್ರ ಮೊಬೈಲ್ ಸಿಗ್ನಲ್ ಸಿಗುತ್ತದೆ. ಕುಟುಂಬದವರ ಜೊತೆ ಒಂದೆರಡು ಮಾತನಾಡುತ್ತಾರೆ. ಮಗಳ ಮದುವೆ, ಮಗನ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿಕೊಳ್ತಾರೆ. ಆಮೇಲೆ ಅವರವರ ನಿಗದಿತ ಕೋಣೆಗಳಿಗೆ, ಬ್ಯಾರಕ್‌ಗೆ ಹೋಗ್ತಾರೆ. ಎಲ್ಲರೂ ದೇಸಾಯಿ, ಗೌಡರ, ಶ್ರೇಷ್ಠಿಗಳ ಮನೆತನದವರು. ಇದೆಲ್ಲ ತುಂಬಾ ದಿನ ನಡೆದುಕೊಂಡು ಬಂದಿದೆ. ಎಲ್ಲ ಸಂಗತಿಗಳೂ ಮೇಲಧಿಕಾರಿಗಳಿಗೆ ಗೊತ್ತಿದೆ. ಯಾರೂ ವಿರೋಧ ಮಾಡೋಲ್ಲ, ತಪ್ಪು ತಿಳಿಯೋಲ್ಲ.
ಖೈದಿಗಳಲ್ಲೇ ಕೆಲವರು ಸ್ವಲ್ಪ ಅನುಕೂಲಸ್ಥ ಮನೆತನದಿಂದ ಬಂದವರು. ಒಂದು ವಿಶಾಲವಾದ ಹಾಲ್‌ನಲ್ಲಿ ಜಮಖಾನದ ಮೇಲೆ ಮಲಗಿಕೊಳ್ಳುತ್ತಿದ್ದರು. ಅವರ ಬಂಧುಗಳಿಂದ ವಂತಿಗೆ ಪಡೆದೇ ಹಾಲ್‌ನಲ್ಲಿ ಒಂದು ಟೆಲಿವಿಷನ್ ಇಡಲಾಗಿತ್ತು. ಕ್ರಿಕೆಟ್ ಪಂದ್ಯಗಳು, ಸಿನೆಮಾ ನೋಡುವುದು ಕೂಡ ಇತ್ತಂತೆ. ಜಮಖಾನದ ಒಂದು ತುದಿಯಲ್ಲಿ ಕಾಕಿ ಬಣ್ಣದ ಲೋಡುದಿಂಬುಗಳಿದ್ದವು.
ಈ ವಿವರಣೆಯಿಂದ ಮೇಡಂಗೆ ಇನ್ನೂ ಕೋಪ ಬಂತು. ಈಗ ನಿಜಕ್ಕೂ ಎಗರಾಡಿದರು, ಹಾರಾಡಿದರು. ಝಾನ್ಸಿರಾಣಿ ಲಕ್ಷ್ಮೀಬಾಯಿ ಶೈಲಿಯಲ್ಲಿ ಸೆರಗು ಕಟ್ಟಿಕೊಂಡು ಕೂಗಾಡಿದರು.
ಸೆರೆಮನೆಯಲ್ಲಿರುವ, ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ಖೈದಿಗಳಿಗೆ ಮನರಂಜನೆ ಇರಬೇಕು, ಅದಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂಬ ಮಾತನ್ನು ನಾನು ಇದುವರೆಗೆ ಎಲ್ಲೂ ಕೇಳಿಲ್ಲ. ಅವರ ಮನೋಧರ್ಮದಲ್ಲಿ ಏನಾದರೂ ಸುಧಾರಣೆ ಆಗಬೇಕು ಎನ್ನುವುದಾದರೆ, ಧಾರ್ಮಿಕ ಪ್ರವಚನಗಳನ್ನು ಏರ್ಪಡಿಸಲಿ, ಭಗವದ್ಗೀತೆ ಮೇಲೆ ಉಪನ್ಯಾಸ ನೀಡಲಿ, ಭಜನೆ ಇರಲಿ, ಹಾಡುಗಾರರನ್ನು ಕರೆಸಿ ದೇವರನಾಮ ಹೇಳಿಸಿ, ಪ್ರಾರ್ಥನೆ ಇರಲಿ. ಹೀಗೆಲ್ಲ ಮಾಡಿದರೆ ಮನಸ್ಸಿನಲ್ಲಿ, ದೇಹದಲ್ಲಿ ಸಾತ್ವಿಕ ಪ್ರವೃತ್ತಿ ಜಾಗೃತವಾಗುತ್ತದೆ.
ಮೇಡಂ ಹಾರಾಡಿಕೊಂಡು, ಏರಾಡಿಕೊಂಡು ಸುಮ್ಮನಾಗಲಿಲ್ಲ. ಜಮಖಾನ, ಲೋಡ್‌ದಿಂಬು, ವೀಡಿಯೋ ಕ್ಯಾಸೆಟ್, ಟೆಲಿವಿಷನ್ ಎಲ್ಲವನ್ನೂ ಜಪ್ತಿ ಮಾಡಿ, ಅವರ ಜೊತೆಯಲ್ಲಿ ಬಂದಿದ್ದ ಸಹಾಯಕ ಕಮೀಷನರ್ ಗ್ರೇಡಿನ ಅಮಲ್ದಾರ್ ಜೀಪಿಗೆ ಹಾಕಿಕೊಂಡು ಕೆರಳಿದ ಸಿಂಹದ ರೀತಿಯಲ್ಲಿ ಬುಸುಗುಡುತ್ತಾ ಹೊರಟುಹೋದರು. ಅವರಿಗೆ ಉಡುಗೊರೆ ಕೊಡಲೆಂದು ತಂದಿದ್ದ ಪೆಂಗ್ವಿನ್ ಪ್ರಕಾಶನದ ಪುಸ್ತಕಗಳ ಕಟ್ಟು ಜೈಲಿನ ಸ್ಟೇಷನರಿ ಸಾಮಾನುಗಳ ಜೊತೆ ತನ್ನ ವಾಸ ಪ್ರಾರಂಭಿಸಿತು.
ಮೇಡಂದು ಬಿಸಿ ರಕ್ತ. ಅನುಭವ ಸಾಲದು. ಲೋಕಜ್ಞಾನವೂ ಇಲ್ಲ ಎಂದು ನಮ್ಮ ನಮ್ಮಲ್ಲೇ ಮಾತನಾಡಿಕೊಂಡೆವು. ಸನ್ನಡತೆಗೆ ಹೆಸರಾಗಿದ್ದ, ಒಳ್ಳೆಯ ಮನೆತನಗಳಿಂದ ಬಂದಿದ್ದ ಸೀನಿಯರ್ ಖೈದಿಗಳು ಕೂಡ ದಂಗಾದರು. ಜೈಲು ಅಧಿಕಾರಿಗಳ ಮೂಲಕ ಅವರವರ ಕುಟುಂಬಗಳಿಗೆ ಸುದ್ದಿ ತಿಳಿಸಿದರು. ಬಂಧುಗಳು ತಕ್ಷಣವೇ ಬದಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಜೈಲು ಅಧಿಕಾರಿಗಳೇ ತಮಗೆ ಪರಿಚತವಿರುವ ಅಂಗಡಿಗಳಿಂದ ಎಲ್ಲ ಸಾಮಾನುಗಳನ್ನು ಕೊಳ್ಳಬಹುದೆಂದು, ಸದರಿ ಅಂಗಡಿಗಳಿಗೆ ತಾವೇ ನೇರವಾಗಿ ಹಣ ಕಳಿಸುವುದಾಗಿ ಹೇಳಿದರು. ಒಂದೆರಡು ವಾರದಲ್ಲಿ ಎಲ್ಲವೂ ಹಿಂದಿನಂತಾಯಿತು.
ನಾವು ಹಾಗೆಂದುಕೊಂಡದ್ದು ತಪ್ಪಾಯಿತು. ಆದರೆ ಮೇಡಂ ಅಷ್ಟಕ್ಕೇ ಬಿಡುವರೇ? ಗೃಹ ಮಂತ್ರಿಗಳನ್ನು, ಕಾನೂನು ಸಚಿವರನ್ನು ಸಂಪರ್ಕಿಸಿದರು. ಮಾಧ್ಯಮದವರಿಗೆ ಹೇಳಿದರು. ಮಾಧ್ಯಮದ ತಂಡಗಳು ಜೈಲಿಗೆ ಭೇಟಿ ನೀಡಿ, ವಿಶೇಷ ಲೇಖನ ಮಾಲೆ ಬರೆದವು. “ಜೈಲಿನಲ್ಲಿ ನೈತಿಕತೆಯ ಅಭಾವ” ಎಂಬುದು ಎಲ್ಲ ಲೇಖನಗಳ ಸಾರಾಂಶವಾಗಿತ್ತು. ಒಂದೆರಡು ಪತ್ರಿಕೆಯವರು ನನ್ನನ್ನು ಕೂಡ ಸಂದರ್ಶಿಸಲು ಬಯಸಿದರು. ನಾನು ಇನ್‌ಛಾರ್ಜ್ ಆಡಳಿತಾಧಿಕಾರಿ, ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ನೆಪ ಹೇಳಿ ಕೈ ತೊಳೆದುಕೊಂಡೆ.
ರಾಗಿಣಿ ಮೇಡಂಗೆ ಏನೇ ಆದರೂ ಪ್ರಭಾವ ಜಾಸ್ತಿ. ನೈತಿಕ ಪ್ರಜ್ಞೆ ಕೂಡ. ಸರ್ಕಾರದ ಬೇರೆ ಬೇರೆ ಇಲಾಖೆಗಳು ಗಂಭಿರವಾಗಿ ಸಮಾಲೋಚಿಸಿ ಒಂದು ವಿವರವಾದ ಸುತ್ತೋಲೆ, ಮಾರ್ಗದರ್ಶಕ ಸೂತ್ರಗಳು ಹೊರಬಿತ್ತು. ಧಾರ್ಮಿಕ ಮುಖಂಡರು, ಸಾಹಿತಿಗಳು, ನ್ಯಾಯಾಧೀಶರು, ಇಂಥವರನ್ನೆಲ್ಲ ಒಳಗೊಂಡ ಸಮಿತಿಯು ಆಯ್ಕೆ ಮಾಡಿದ ಸಮಾಜಸೇವಕರು, ಮನಶ್ಯಾಸ್ತ್ರಜ್ಞರು ಎಲ್ಲ ಜೈಲುಗಳಿಗೂ ನಿಯಮಿತವಾಗಿ ಭೇಟಿ ಕೊಡಬೇಕು, ನೈತಿಕ ಶಿಕ್ಷಣದ ತರಬೇತಿ ನೀಡಬೇಕು, ಈ ತರಬೇತಿಯ ಪರಿಣಾಮವು ಖೈದಿಗಳ ಮನಸ್ಸು, ವರ್ತನೆಗಳ ಮೇಲೆ ಬೀರುವ ಸತ್‌ಪರಿಣಾಮವನ್ನು ಕುರಿತು ಕಾಲದಿಂದ ಕಾಲಕ್ಕೆ ವರದಿ ಪಡೆದು ಪರಿಶೀಲಿಸಬೇಕು ಎಂದು ಶಿಫಾರಿಸ್ ಮಾಡಿತು. ನಗರದ ಎಲ್ಲ ಪುಣ್ಯಾಶ್ರಮಗಳೂ ಈ ನೈತಿಕ ಪರ್ವದಲ್ಲಿ ಹೃತ್ಪೂರ್ವಕವಾಗಿ ಕೈಗೂಡಿಸಿದವು.
ಸದ್ಯ ಕರುನಾಡಿನಲ್ಲಿ ಈ ಮಾದರಿಯ ನೈತಿಕ ಶಿಕ್ಷಣದ ಸ್ವರೂಪವೇ ಜಾಲ್ತಿಯಲ್ಲಿರುವುದು. ಬೇರೆ ರಾಜ್ಯಗಳ, ಭಾಷೆಗಳ ಧಾರ್ಮಿಕ ಮುಖಂಡರು ಕೂಡ ಕರುನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪರ್ವದ ಭಾಗವಾಗುತ್ತಾರೆ.
ಈ ಮಧ್ಯೆ ರಾಗಿಣಿಯವರಿಗೆ ಇನ್ನು ಕೆಲವು ವರ್ಷಗಳ ಹಿರಿತನ ಬಂದಿದೆ. ಅವರ ಇಬ್ಬರ ಮಕ್ಕಳೂ ಕೂಡ ರಾಮಕೃಷ್ಣ ಆಶ್ರಮದವರು ನಡೆಸುವ ವಸತಿ ಶಾಲೆಗಳಿಗೆ ಸೇರಿದ್ದಾರೆ. ವಾರಾಂತ್ಯದಲ್ಲಿ ಅವರನ್ನು ನೋಡಲು ಮಹಿಷಾಪುರಕ್ಕೆ ಹೋಗುವ ಮೇಡಂ ಮತ್ತು ಅವರ ಪತಿ ಇಬ್ಬರೂ ಆಶ್ರಮದಲ್ಲಿ ನಡೆಯುವ ಭಜನೆ, ಮಂಗಳಾರತಿಗೆ ಸೇರಿಕೊಳ್ಳುತ್ತಾರೆ.
ತಮ್ಮ ಬ್ಯಾಚಿನ ಸಹಪಾಠಿಗಳು ಬೇರೆ ಬೇರೆ ಸಂದರ್ಭಗಳಲ್ಲಿ ಮೇಡಂಗೆ ದೆಲ್ಲಿ, ಹೈದರಾಬಾದ್, ಬೋಸ್ಟನ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ತರಬೇತಿ ಶಿಬಿರಗಳಿಗೆ ಬಂದಾಗ ಸಿಗುತ್ತಾರೆ.
ಆವಾಗೆಲ್ಲ ರಾಗಿಣಿ ಮೇಡಂ, ಕರುನಾಡಿನ ಜೈಲುಗಳಲ್ಲಿ ತಾವು ಚಾಲ್ತಿಗೆ ತಂದ ನೈತಿಕ ಶಿಕ್ಷಣದ ಸ್ವರೂಪದ ಬಗ್ಗೆ ಸಾಕಷ್ಟು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.