ಹೊಟ್ಟೆ ತುಂಬುವಷ್ಟು ಅನ್ನ ಸಿಕ್ಕರದೆ ಐಭೋಗವೆಂದು ನಂಬಿದ್ದ ತಾಯಿ, ತನ್ನ ಮಗಳಿಗೆ ತನ್ನ ಗಂಡನಿಗಿಂತಲೂ ವಯಸ್ಸಾದ ಆ ಗ್ರಾಮದಲ್ಲೇ ಸಿರಿವಂತನೆನಿಸಿದ್ದ ಕಲಾಯಿ ವೃತ್ತಿ ಮಾಡುವ ಮುದುಕನಿಗೆ ಮಗಳನ್ನು ಮದುವೆ ಮಾಡಲು ಒಪ್ಪಿಕೊಳ್ಳುವಂತಹ ದೈನೇಸಿ ಸ್ಥಿತಿ. ಆದರೆ ಆ ಮಗಳು ನೆರೆಮನೆಯ ಅದೇ ಜನಾಂಗದ ಹುಡುಗನನ್ನು ಪ್ರೀತಿಸುವುದು ತಂದೆಗೆ ಗೊತ್ತಾಗುತ್ತದೆ. ಕಲಾಯಿಯವನೊಂದಿಗೆ ಮಗಳ ಮದುವೆ ತಪ್ಪಿಸಿ ನೆರೆಮನೆಯ ಹುಡುಗನೊಂದಿಗೆ ಮದುವೆ ಮಾಡಿಸಲು ಬಡೇಮಿಯಾ ಹೆಂಡತಿಯೊಂದಿಗೆ ನಾಟಕವಾಡುವ ಸನ್ನಿವೇಶದಲ್ಲಿ ಮೊದಲು ಗಂಭೀರವಾಗಿ ಕನಸ್ಸಿನ ಕಥೆ ಕಟ್ಟಿ, ಹೆಂಡತಿಯೊಳಗೆ ಭಯ ಹುಟ್ಟಿಸಿ ಅವಳಾಗಿಯೇ ಕಲಾಸಿ ಮುದುಕ ಬೇಡವೆನ್ನುವಂತೆ ಮಾಡುವಲ್ಲಿ ಯಶ ಕಾಣುತ್ತಾನೆ.
“ಜೊತೆಗಿರುವನು ಚಂದಿರ” ನಾಟಕದ ಕುರಿತು ಮೀನಾ ಮೈಸೂರು ಬರಹ
“ಸೋಲಿಸ ಬೇಡ ಗೆಲಿಸಯ್ಯ” ಕಾರಂತರು ಸದಾ ಹೇಳುತ್ತಿದ್ದ ಸಾಲುಗಳಲ್ಲಿ ಒಂದು.
ರಂಗಭೂಮಿಯಲ್ಲಿಂದು ಇದು ಅತ್ಯಂತ ಜನಪ್ರಿಯವಾದ ಹಾಡು. ಬಹುತೇಕ ರಂಗ ತಂಡಗಳು ಈ ಹಾಡನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಬಳಸಿಕೊಳ್ಳುತ್ತಾರೆ. “ನಾಟಕ ಗೆಲ್ಲಲಿ ಸೋಲಲಿ ನಿಮ್ಮೆಲ್ಲರ ಆಶಯ ಸೋಲಿಸ ಬೇಡ ಗೆಲಿಸಯ್ಯ ಆಗಿರಬೇಕು”
ಎನ್ನುತ್ತಿದ್ದರು. ರಿಹರ್ಸಲ್‌ನಲ್ಲಿ ಎಷ್ಟೇ ಬೈಯುತ್ತಿದ್ದರೂ ನಾಟಕ ಪ್ರದರ್ಶನದ ಪ್ರಾರಂಭಕ್ಕೆ ಮುನ್ನ ಧನಾತ್ಮಕವಾದ ಭಾವವನ್ನು ತುಂಬಿ “ಈಗ ನಾಟಕ ಚೆನ್ನಾಗಿ ಆಗುತ್ತದೆ, ನೀವೆಲ್ಲಾ ಚೆನ್ನಾಗಿಯೇ ಮಾಡುತ್ತೀರಿ” ಎಂದು ಹುರಿದುಂಬಿಸುತ್ತಿದ್ದರು. ಆ ಕ್ಷಣ ನಮ್ಮೊಂದಿಗೆ ಅವರೂ ಭಾವುಕರಾಗುತ್ತಿದ್ದ ರೀತಿ ಮರೆಯಲು ಸಾಧ್ಯವೇ ಇಲ್ಲ. ಕಾರಂತರ ಗರಡಿಯ ರಂಗಾಯಣದಲ್ಲಿ ಪಳಗಿ, ಅವರ ಪ್ರತಿಭೆಯ ಅನೇಕ ಅಂಶಗಳನ್ನು ಆವಾಹಿಸಿಕೊಂಡಿರುವ ಅವರ ಶಿಷ್ಯರನೇಕರು ತಮ್ಮದೇ ಆದ ಹಾದಿಯಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದ್ದಾರೆ. ಶಿಷ್ಯ ಪರಂಪರೆಯಿಂದ ಕಾರಂತರಿಗೆ ಸಂದ ಗೌರವವದು.
ಈ ದೆಸೆಯಲ್ಲಿ ನನ್ನ ಮೂವರು ಸ್ನೇಹಿತರನ್ನು ನೆನೆಪು ಮಾಡಿಕೊಳ್ಳುವ ಅವಕಾಶ ಸಿಕ್ಕಿದ್ದು, ಮೊನ್ನೆ ಮೊನ್ನೆ ನಟನದಲ್ಲಿ ಪ್ರದರ್ಶನಗೊಂಡ “ಜೊತೆಗಿರುವನು ಚಂದಿರ” ನಾಟಕದಿಂದ. ರಂಗಾಯಣವನ್ನು ಅರ್ಧಕ್ಕೇ ಬಿಟ್ಟು, ಹಿರಿ-ಕಿರು ತೆರೆಯಲ್ಲಿ ನಟಿಸುತ್ತಾ ಅಪಾರ ಅನುಭವ ಕೀರ್ತಿ ಜನಪ್ರಿಯತೆಯನ್ನು ಸಂಪಾದಿಸಿಕೊಂಡು ಮೈಸೂರಿಗೆ ಹಿಂದಿರುಗಿ ಬಂದು “ನಟನ” ಎಂಬ ನಾಟಕದ ಸಂಸ್ಥೆಯೊಂದನ್ನು ಕಟ್ಟಿ ರಂಗಭೂಮಿಗೆ ಕೊಡುಗೆ ನೀಡುತ್ತಿರುವ ಗೆಳೆಯ ಮಂಡ್ಯ ರಮೇಶ, “ಸಂಕಲ್ಪ” ತಂಡ ಕಟ್ಟಿ ಜೈಲಿನಲ್ಲಿ ಖೈದಿ ಎಂಬ ಹಣೆಪಟ್ಟಿಯಲ್ಲಿ ಮುದುಡಿ ಕುಳಿತಿರುವ ಜನರಿಗೆ ನಾಟಕ ಮಾಡಿಸುವುದರ ಮೂಲಕ ಅವರ ಬದುಕಿನಲ್ಲಿ ಭರವಸೆಯ ಬೆಳಕನ್ನು ಬೀರುತ್ತಿರುವ, ರಾಜ್ಯದಾದ್ಯಂತ ನಾಟಕಗಳನ್ನು ನಿರ್ದೇಶನ ಮಾಡುತ್ತಿರುವ ಪ್ರತಿಭಾವಂತ ನಟ, ನಿರ್ದೇಶಕ ಹುಲಗಪ್ಪ ಕಟ್ಟಿಮನಿ. ಹಾಗೆಯೇ ಎನ್ ಮಂಗಳಾ ತನ್ನ ಬಾಳಗೆಳೆಯ ರಂಗಾಯಣದ ರಘುವಿನೊಂದಿಗೆ ರಂಗಾಯಣದ ಯಾತ್ರೆಯನ್ನು ಮೊಟಕುಗೊಳಿಸಿ, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. “ಸಂಚಾರಿ” ಎಂಬ ನಾಟಕದ ತಂಡ ಕಟ್ಟಿಕೊಂಡಿರುವ ಮಂಗಳಾ ಕೂಡ ಅಪ್ಪಟ ಪ್ರತಿಭಾವಂತೆ, ಶ್ರೇಷ್ಠ ನಟಿ. ಮಕ್ಕಳ ರಂಗಭೂಮಿಗೂ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಈ ಮೂವರನ್ನೂ ಒಟ್ಟಿಗೆ ನಟನ ರಂಗಮಂಚದಲ್ಲಿ ಕಾಣುವ ಭೇಟಿಯಾಗುವ ಅಪೂರ್ವ ಅವಕಾಶ ಸಿಕ್ಕಿತ್ತು.
ಎಳವೆಯಿಂದಲೇ ನಮ್ಮ ಭಾವಕೋಶದಲ್ಲಿ ಅಚ್ಚಳಿಯದೆ ಸ್ಥಾಯಿಯಾಗಿರುವ ಚಂದ್ರನು ಈ ನಾಟಕದುದ್ದಕ್ಕೂ ಒಂದು ರೀತಿಯ ಸುಪ್ತ ಚೇತನದಂತೆ ತೋರುತ್ತಾನೆ. ಕತ್ತಲಲ್ಲೂ ಮಬ್ಬು ಬೆಳಕಿನಲ್ಲೇ ಹಾದಿ ತೋರಿಸುತ್ತಾನೆ, ಗುರಿ ತಲುಪಿಸುತ್ತಾನೆ, ಅವನನ್ನು ಕಂಡಾಗಲೆಲ್ಲಾ ಮನಕ್ಕೆ ಮುದನೀಡುತ್ತಾನೆ. ಚಂದ್ರ ಕನ್ನಡ ಸಾಹಿತ್ಯದಲ್ಲಿ ಪುರುಷನೆಂದು ಕರೆಸಿಕೊಂಡು ನಮಗೆಲ್ಲಾ ಮಾಮನಾದರೆ, ಇಂಗ್ಲೀಷ್ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ತದ್ ವಿರುದ್ಧವಾದ ಸ್ತ್ರೀ ಲಿಂಗವಾಗಿ ಗೋಚರಿಸುತ್ತಾನೆ. ಹೀಗೆ ತನ್ನನ್ನು ಕಾಣುವವರ ಮನದ ಭಾವಕ್ಕನುಗುಣವಾಗಿ ತಂಪೆರೆಯುವನು ಚಂದಿರ!
“ಜೊತೆಗಿರುವನು ಚಂದಿರ” ನಾಟಕಕ್ಕೆ ಸಾಕಷ್ಟು ಒಳ್ಳೆಯ ಪ್ರಚಾರ ಸಿಕ್ಕಿತ್ತು. ಮುಂದಿನ ಸಾಲಿನಲ್ಲಿ ಕೂತು ನಾಟಕ ನೋಡುವ ಅವಕಾಶ ಒದಗಿತ್ತು. ಮುಂದಿನ ಸಾಲಿನ ಮುಂದೆ ಎರಡು ಸಾಲಿನ ಕುರ್ಚಿಗಳೂ ಬಂದವು. ರಂಗಮಂದಿರ ಕಿಕ್ಕಿರಿದು ತುಂಬಿತ್ತು…
ಪ್ರಪಂಚದಾದಂತ್ಯ ಹೆಸರು ಮಾಡಿದ್ದ ಶೋಲೋಮ್ ಅಲೈಖೆಮ್‌ನು 1905ರಲ್ಲಿ ಉಕ್ರೇನ್‌ನ ಹಳ್ಳಿಯೊಂದರಲ್ಲಿ ವಾಸವಿದ್ದ ಯಹೂದಿ ಜನಾಂಗಕ್ಕೆ ಸೇರಿದ ಕುಟುಂಬವೊಂದರ ಕಥೆಯನ್ನು ಬರೆದಿದ್ದನಂತೆ. ಆ ಕಥೆಯ ಹೆಸರು “ಟೇವ್ಯೆ ಮತ್ತು ಅವನ ಹೆಣ್ಣು ಮಕ್ಕಳು”. ಇದು ನಾಟಕ ರೂಪ ತಾಳುವ ಮುನ್ನ ಅವ ಇಹಲೋಕವಾಸಿಯಾಗಿ ಬಿಟ್ಟ.
ಈ ನಾಟಕವನ್ನು 1964ರಲ್ಲಿ ಮೊದಲ ಬಾರಿಗೆ ನ್ಯೂಯಾರ್ಕ್‌ನ ಬ್ರಾಡ್ವೇಯಲ್ಲಿ ಪ್ರದರ್ಶಿಸಲಾಯಿತು, ನಂತರ ಇದು 3242 ಸಲ ಪ್ರದರ್ಶನಗೊಂಡಿತು. ಹಾಗೆ ಲಂಡನ್‌ನಲ್ಲಿಯೂ 2000 ಪ್ರದರ್ಶನಗೊಂಡಿದ್ದಲ್ಲದೆ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾಗಳಲೆಲ್ಲಾ ಯಶಸ್ವೀ ಪ್ರದರ್ಶನ ಕಂಡು ಅತ್ಯಂತ ಜನಪ್ರಿಯ ನಾಟಕವೆನಿಸಿತ್ತು. ಆ ನಂತರ ಇದು ಚಲನಚಿತ್ರವಾಗಿಯೂ ಹೆಸರು ಮಾಡಿತು. 1971ರಲ್ಲಿ ಈ ಸಿನೆಮಾದ ಗಲ್ಲಾ ಪೆಟ್ಟಿಗೆ ತುಂಬಿ ತುಳುಕಿತು.
ಜೋಸೆಫ್ ಸ್ಟೀನ್ ಬರೆದ “ಫಿಡ್ಲರ್ ಆನ್ ದಿ ರೂಫ್” ಎಂಬ ನಾಟಕವು ಆ ಕಾಲದಶ್ರೇಷ್ಠ ಸಂಗೀತ ನಾಟಕವೆನಿಸಿತ್ತು. ರಷ್ಯಾದಲ್ಲಿ ಆ ಸಮಯದಲ್ಲಿ ಯುದ್ಧ, ದೇಶ ವಿಭಜನೆ, ಅಣೆಕಟ್ಟುಗಳ ಅಭಿವೃದ್ಧಿ ನೆಪಗಳಲ್ಲಿ ಜನರು ಗುಳೆ ಹೋಗಬೇಕಾಗುತ್ತಿತ್ತು, ಸ್ಥಾನ ಪಲ್ಲಟಗಳಾಗುತ್ತಿತ್ತು. ಈ ಹಿನ್ನಲೆಯಲ್ಲಿ ಕುಟುಂಬವೊಂದರ ಮೇಲಾಗುವ ಪ್ರತಿಕೂಲ ಪರಿಣಾಮ ಮತ್ತು ಸಾಮಾಜಿಕ ತಲ್ಲಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿತ್ತು.
ಈ ನಾಟಕ ಮತ್ತು ಸಿನೆಮಾವನ್ನು ನೋಡಿದ ಜಯಂತ ಕಾಯ್ಕಿಣಿ 1999ರಲ್ಲಿ ಆಸ್ಕರ್ ಚಂದಾವರ್ಕರ್ ನಿರ್ದೇಶನದಲ್ಲಿ ನೀನಾಸಂ ತಿರುಗಾಟಕ್ಕಾಗಿ ಕನ್ನಡಕ್ಕೆ ರೂಪಾಂತರ ಮಾಡಿದ್ದಾರೆ. ಆದರೆ ಇದರಲ್ಲಿ ಕಾಯ್ಕಿಣಿಯವರ ಸ್ವಂತದ ಛಾಪು ಇದ್ದು, ಭಾಷೆಯಲ್ಲಿನ ಮಾರ್ದವತೆ, ನವಿರಾದ ಹಾಸ್ಯ, ಚುರುಕು ಸಂಭಾಷಣೆ, ಸ್ಥಳೀಯ ಪರಿಸರಕ್ಕೆ ಹೊಂದುವಂತೆ ಘಟನಾವಳಿಗಳನ್ನು ನಾಜೂಕಾಗಿ ಹೆಣೆದಿರುವ ರೀತಿಯಲ್ಲೆಲ್ಲಾ ಅವರು ಕಾಣುತ್ತಾರೆ. ಮೂಲದಲ್ಲಿ ಯಹೂದಿ ಸಂಸಾರವೊಂದರ ಕಥೆಯಾಗಿದ್ದರೆ ಇಲ್ಲಿ ಅದು ಮುಸ್ಲಿಂ ಸಂಸಾರವಾಗಿ ಬದಲಾವಣೆಗೊಂಡಿದೆ. ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಬಡೇಮಿಯಾ ಮತ್ತು ಮುನೀರ್ ಜಾನ್ ದಂಪತಿಗಳು ಮತ್ತವರ ಮೂವರು ಹೆಣ್ಣುಮಕ್ಕಳ ಸುತ್ತ ನಡೆಯುವ ಒಂದು ಸಾಂಸಾರಿಕ ಚಿತ್ರ. ಅದಕ್ಕೆ ಪೂರಕವಾಗಿ ಅಂದಿನ ಸಮಾಜ, ಅವರ ಆಚರಣೆ, ಸಂಪ್ರದಾಯ ರೀತಿ ರಿವಾಜುಗಳು ನಾಟಕದಲ್ಲಿ ಅರ್ಥಪೂರ್ಣವಾಗಿ ಅನಾವರಣಗೊಳ್ಳುತ್ತಾ ಹೋಗುತ್ತವೆ.
ಹೊಟ್ಟೆ ತುಂಬುವಷ್ಟು ಅನ್ನ ಸಿಕ್ಕರದೆ ಐಭೋಗವೆಂದು ನಂಬಿದ್ದ ತಾಯಿ, ತನ್ನ ಮಗಳಿಗೆ ತನ್ನ ಗಂಡನಿಗಿಂತಲೂ ವಯಸ್ಸಾದ ಆ ಗ್ರಾಮದಲ್ಲೇ ಸಿರಿವಂತನೆನಿಸಿದ್ದ ಕಲಾಯಿ ವೃತ್ತಿ ಮಾಡುವ ಮುದುಕನಿಗೆ ಮಗಳನ್ನು ಮದುವೆ ಮಾಡಲು ಒಪ್ಪಿಕೊಳ್ಳುವಂತಹ ದೈನೇಸಿ ಸ್ಥಿತಿ. ಆದರೆ ಆ ಮಗಳು ನೆರೆಮನೆಯ ಅದೇ ಜನಾಂಗದ ಹುಡುಗನನ್ನು ಪ್ರೀತಿಸುವುದು ತಂದೆಗೆ ಗೊತ್ತಾಗುತ್ತದೆ. ಕಲಾಯಿಯವನೊಂದಿಗೆ ಮಗಳ ಮದುವೆ ತಪ್ಪಿಸಿ ನೆರೆಮನೆಯ ಹುಡುಗನೊಂದಿಗೆ ಮದುವೆ ಮಾಡಿಸಲು ಬಡೇಮಿಯಾ ಹೆಂಡತಿಯೊಂದಿಗೆ ನಾಟಕವಾಡುವ ಸನ್ನಿವೇಶದಲ್ಲಿ ಮೊದಲು ಗಂಭೀರವಾಗಿ ಕನಸ್ಸಿನ ಕಥೆ ಕಟ್ಟಿ, ಹೆಂಡತಿಯೊಳಗೆ ಭಯ ಹುಟ್ಟಿಸಿ ಅವಳಾಗಿಯೇ ಕಲಾಸಿ ಮುದುಕ ಬೇಡವೆನ್ನುವಂತೆ ಮಾಡುವಲ್ಲಿ ಯಶ ಕಾಣುತ್ತಾನೆ. ರಂಗಮಂಚದ ಮೇಲೆ ಅರಚಾಟ ಕಿರುಚಾಟ ಭಯದ ವಾತಾವರಣವನ್ನು ಕನಸ್ಸಿನ ಮೂಲಕ ತರುವಲ್ಲಿನ ನಾಟಕೀಯ ಅಂಶ ನಿಜಕ್ಕೂ ಮೆಚ್ಚುವಂಥದ್ದು.
ಮಗಳ ಮದುವೆ ಸಮಯದಲ್ಲಿ ಕಲಾಸಿ ಮುದುಕ ಮೋಸಮಾಡಿದಿರೆಂದು ಜಗಳವಾಡುತ್ತಾನೆ. ಆ ಸಂದರ್ಭದಲ್ಲಿ ಊರವರು ವಿರೋಧಿಸುತ್ತಲೇ ಬಂದು ಮದು ಮಕ್ಕಳಿಗೆ ಒಳಿತನ್ನು ಹಾರೈಸುತ್ತಾರೆ. ಒಂದು ಝಗಮಗಿಸುವ ವೇಲ್‌ನ್ನು ಗಂಡುಹೆಣ್ಣುಗಳ ಮುಖದ ಮೇಲೆ ಇಳಿ ಬಿಡುವುದರ ಮೂಲಕ ಮದುವೆಯ ವಾತಾವರಣವು ಸಲೀಸಾಗಿ ಸೃಷ್ಠಿಯಾಗಿ ಬಿಡುತ್ತದೆ. ನಾಟಕದ ರಂಗ ವಿನ್ಯಾಸವು ಸರಳವೂ ಕಲಾತ್ಮಕವೂ ಆಗಿದೆ. ಟೀ ಅಂಗಡಿಯಲ್ಲಿ ಬಳಸುವ ಅಲ್ಯುಮಿನಿಯಂ ಟೀ ಕೆಟಲ್, ಟೀ ಕುಡಿಯಲು ಬರುವ ಗಿರಾಕಿಗಳು ಕೂರುವ ಜಾಗ, ಬಡೆಮೀಯಾನ ಅಡಿಗೆ ಮನೆ, ಕೂರಲು ಕಟ್ಟೆ….. ಈ ಸ್ಪೇಸ್‌ನ್ನು ಸದ್ ಬಳಕೆ ಮಾಡಿಕೊಂಡಿದ್ದಾರೆ. ಜೊತೆಗೆ ಮುಕ್ಕಾಲು ಪಾಲು ಪಾತ್ರಗಳ ಮೈ ಮೇಲಿನ ಬಟ್ಟೆಗೆ ತೇಪೆ ಹಾಕಿದ್ದು ಬಡತನವೆಂಬುದು ಅವರಲ್ಲಿ ತೀರಾ ಸಹಜವೆನಿಸುವಂತಿತ್ತು. ಅವರ ಮನೆ, ಮನೆಯೊಳಗಿನ ಚಿತ್ರಣ, ಅವರು ಧರಿಸಿದ್ದ ಬಟ್ಟೆ, ಬಳಸುತ್ತಿದ್ದ ರಂಗಪರಿಕರಗಳು ಅವರ ಬಡತನವನ್ನು ವೈಭವೀಕರಿಸುತ್ತಿದ್ದರೂ, ಅವರ ದೈನಂದಿನ ಬದುಕಲ್ಲಿ ಬಡತನದಲ್ಲಿ ನೊಂದು ಬೆಂದು ಹೋಗಿರ ಬಹುದಾದ ಪ್ರೇತಕಳೆ ಅಥವಾ ಅಸಹಾಯಕ ಸ್ಥಿತಿಯನ್ನು ಕಾಣಿಸುವುದಿಲ್ಲ. ಬಡತನದಲ್ಲೂ ಘನತೆಯ ಬದುಕನ್ನು ಕಟ್ಟಿಕೊಳ್ಳುವಂತಹ ಕಥಾಹಂದರವನ್ನು ಹೆಣೆದಿರುವುದು, ರಾಗ, ದ್ವೇಷ, ಜಗಳ, ಕುಹಕ, ವ್ಯಂಗ್ಯ, ಸಣ್ಣತನ, ಚಾಡಿ ಹೇಳುವುದು, ಪ್ರೀತಿಸುವುದು, ಕಾಳಜಿ ತೋರುವುದು, ಗ್ರಾಮೀಣ ಬದುಕಿನ ಎಲ್ಲಾ ಕ್ರಿಯೆಗಳನ್ನು ಭಾವಗಳನ್ನು ಸಮರ್ಥವಾಗಿ ರಂಗದ ಮೇಲೆ ಕಟ್ಟಿಕೊಟ್ಟಿರುವ ಬಗೆ, ಮತ್ತದನ್ನು ರಂಗದ ಮೇಲೆ ಕಲಾತ್ಮಕವಾಗಿ ಅಭಿವ್ಯಕ್ತಿಸಿರುವುದರಲ್ಲಿ ನಾಟಕಕಾರ ಮತ್ತು ನಿರ್ದೇಶಕರಿಬ್ಬರ ಮಹತ್ವದ ಪಾತ್ರವಿರುವುದನ್ನು ಕಾಣಬಹುದು.
ಇಡೀ ನಾಟಕದುದ್ದಕ್ಕೂ ಹಳೆಯ ಸುಮಧುರ ಹಿಂದಿ ಹಾಡುಗಳು ಮತ್ತು ರಂಗಸಂಗೀತವನ್ನು ಬಳಸಿಕೊಂಡು ಅದಕ್ಕೆ ತಕ್ಕಂತೆ ಹಗೂರಾದ ನೃತ್ಯದ ಹೆಜ್ಜೆಗಳು ಪ್ರೇಕ್ಷಕರೊಳಗೂ ಒಂದು ರೀತಿಯ ನವಿರಾದ ಲವಲವಿಕೆಯ ಭಾವ ಮೂಡುವಂತೆ ಮಾಡುತ್ತದೆ. ರಂಗ ಮಂಚದ ಹಿಂಭಾಗದ ಗೋಡೆ ಮೇಲೆ ಆಗಾಗ ಮೂಡಿ ಬರುತ್ತಿದ್ದ ಅರ್ಧ ಚಂದ್ರ. “ಜೊತೆಗಿರುವನು ಚಂದಿರ” ಶೀರ್ಷಿಕೆಗೆ ಅನ್ವರ್ಥವೆನಿಸುತ್ತಿತ್ತು.
ಬೆಳಕಿನ ಶಕ್ತಿಯ ಅಗಾಧತೆಯನ್ನು ಈ ನಾಟಕದಲ್ಲಿ ಕಾಣಬಹುದು, ಕಪ್ಪು ಕನ್ನಡಕಧಾರಿ ಪಾತ್ರವು ಕೋಲಿಡಿದು ನಿರ್ಗಮಿಸುವಾಗ ರಂಗಮಂಚದ ಮೇಲೆ ಅವನ ನೆರಳು ಮೂಡಿ, ಕೋಲಿಡಿದು ಸರಸರನೆ ಹೆಜ್ಜೆ ಹಾಕುವ ಗಾಂಧಿ ತಾತ ನಡೆದು ಹೋಗುತ್ತಿರುವಂತೆ, ದೃಶ್ಯ ಕಾವ್ಯವೊಂದು ಮೂಡಿದಂತೆ ಭಾಸವಾಗುತ್ತದೆ.
ತಂದೆ ತಾಯಿಯ ಪ್ರೀತಿಗೆ ಯಾವುದೂ ಸಮನಿಲ್ಲ, ಎಂತಹ ಸಮಯದಲ್ಲೂ ಮಕ್ಕಳ ಬಗೆಗೆ ತುಡಿಯುವ, ಅಂತಃಕರಣದ ಹೊಳೆಯನ್ನೇ ಹರಿಸುವ ಮನಸ್ಸು ಇಲ್ಲಿ ಅನಾವರಣಗೊಳ್ಳುವ ಪರಿ ಅದ್ಭುತ ಅನುಭವವನ್ನು ನೀಡುತ್ತದೆ. ಸಂಪ್ರದಾಯಸ್ಥ ತಂದೆ ತಾಯಿ, ಅದನ್ನು ಮೀರಬಯಸುವ ಮಕ್ಕಳ ನಡುವಿನ ತಲೆಮಾರಿನ ಸಂಘರ್ಷ ಸೂಕ್ಷ್ಮವಾಗಿ ಮೂಡಿಬಂದಿದೆ. ದೇಶ ವಿಭಜನೆಯ ಸಂಕಷ್ಟದಲ್ಲಿದೆ, ಅನಾದಿ ಕಾಲದಿಂದ ತಾವು ಬದುಕಿದ್ದ ಮನೆ ಮಠವನ್ನು ಬಿಟ್ಟು ಹೊರಡಬೇಕಾದ ಸಂಕಟದ ಜೊತೆಗೆ ಹೆಣ್ಣು ಮಕ್ಕಳಿಬ್ಬರು ಅನ್ಯ ಕೋಮಿನವನನ್ನು ಪ್ರೀತಿಸಿ ಮದುವೆಯಾದ ಸಂದರ್ಭ, ಮಗಳು ಕೊನೆಯ ವಿದಾಯ ಹೇಳಲು ಬರುತ್ತಾಳೆ, ಅಪ್ಪ ಅವಳು ಮನೆಯೊಳಗೆ ಬಾರದಂತೆ ಅಬ್ಬರಿಸುತ್ತಾನಾದರೂ ಸಂಕಟದಲ್ಲಿ ದುಃಖದಲ್ಲಿ ಕುಸಿಯುತ್ತಿರುವುದನ್ನು ತೋರ್ಪಡಿಸಿಕೊಳ್ಳದಿರಲು ಯತ್ನಿಸುತ್ತಾನೆ. ಕೊನೆಗೂ ಗೆಲ್ಲುವುದು ಮಗಳೆಂಬ ಪ್ರೀತಿಯ ಮಮಕಾರ, ಅಂತಃಕರಣ, ಕಳ್ಳುಬಳ್ಳಿಯ ಸಂಬಂಧ, ಸೋತು ಮಗಳನ್ನು ಅಪ್ಪಿಕೊಳ್ಳುತ್ತಾನೆ. ಪ್ರೇಕ್ಷಕರ ಕಣ್ಣಲ್ಲೂ ನೀರು, ಭಾವುಕತೆಯಿಂದ ಬಿಕ್ಕುವ ಸಣ್ಣಗಿನ ಸದ್ದು. ಈ ಸಂದರ್ಭದಲ್ಲಿ ತಾವು ಮನೆ ಬಿಟ್ಟು ಹೊರಡುತ್ತಾರೆ, ಸಾಮಾನುಗಳೊಂದಿಗೆ ಮುಂದಡಿಯಿಟ್ಟ ಮುನೀರ್ ಜಾನ್ ಏನೋ ಮರೆತವಳಂತೆ ಹಿಂದಕ್ಕೆ ಬಂದು ಮನೆ ಕಸಗುಡಿಸುತ್ತಾಳೆ. ತಲೆ ತಲಾಂತರದಿಂದ ಬಾಳಿ ಬದುಕಿದ್ದ ಮನೆಯನ್ನು ಹೀಗೆ ಏಕಾಏಕಿ ಬಿಟ್ಟು ಹೋಗಲೇ ಬೇಕಾದಂತಹ ಕರುಳು ಕಿತ್ತುಬರುವಂತಹ ಸನ್ನಿವೇಶದಲ್ಲೂ ಅವಳು ತೋರುವ ಸಾಂಪ್ರದಾಯಿಕ ಜವಾಬ್ದಾರಿಯುತ ನಡೆ ವಿಷಾದದ ಛಾಯೆಯನ್ನು ಮೂಡಿಸುತ್ತದೆ. ಸ್ವತಂತ್ರ ಪೂರ್ವದ ದೇಶವಿಭಜನೆ, ಧರ್ಮಾಂಧತೆ, ಅಸಹನೆಯ ಪರಾಕಾಷ್ಠತೆಯು ಮರುಕಳಿಸುತ್ತಿರುವ ಪ್ರಸ್ತುತ ಸಮಾಜದ ಸ್ಥಿತಿಗತಿಗೆ ಹಿಡಿದ ಕೈಗನ್ನಡಿಯಂತಿದೆ ಈ ನಾಟಕ.
ಈ ನಾಟಕದ ವಿಶೇಷವೆಂದರೆ ಸಂಕಲ್ಪ ತಂಡದ ಹುಲಿಗಪ್ಪ ಕಟ್ಟಿಮನಿ ಅವರು ಈ ನಾಟಕವನ್ನು ಜೈಲು ಹಕ್ಕಿಗಳಿಂದ ಅನೇಕ ಸಲ ಮಾಡಿಸಿದ್ದಾರೆ. ಆ ಕುರಿತು ಜಯಂತ ಕಾಯ್ಕಿಣಿ “ಜೈಲಿನ ಖೈದಿಗಳನ್ನಿಟ್ಟುಕೊಂಡು ಅವರಿಗಾಗಿ, ಅವರ ಮನಃಪರಿವರ್ತನೆಗಾಗಿ ಒಂದು ಭೂಮಿಕೆ ತರ ಮಾಡಿಕೊಂಡು ಹಲವಾರು ಸಲ ಪ್ರದರ್ಶನ ಮಾಡಿದ್ದಾರೆ…… ನಾಟಕ ಮುಗಿದ ನಂತರ ಕರ್ಟನ್ ಕಾಲ್‌ನಲ್ಲಿ ಇಡೀ ಸಮಾಜದ ಜನ ಬಂದು ಕರತಾಡನ ಮಾಡುವಾಗ ಇವರೆಲ್ಲರು, ಯಾರು ಸಮಾಜದಿಂದ ತಪ್ಪಿತಸ್ಥರೆಂಬ ಮಸೂರದಿಂದ ನೋಡಲ್ಪಡುತ್ತಿದ್ದರೋ ಅವರು ಬಂದು ವೇದಿಕೆ ಮೇಲೆ ನಿಂತು ಎಲ್ಲರೆದುರು ಆ ಕರತಾಡನವನ್ನು ಸ್ವೀಕರಿಸುವ ಕ್ಷಣಯಿದೆಯಲ್ಲ ಅದು ಬಹಳ ಆಧ್ಯಾತ್ಮಕವಾದ ಕ್ಷಣ ಅನಿಸಿತ್ತು. ಅದು ಬಹಳ ಮಹತ್ವದ್ದಾಗಿತು. ಅಂತಹ ಮಹತ್ವದ ಕ್ಷಣಗಳನ್ನು ಈ ನಾಟಕದ ಮೂಲಕ ರೂಪಿಸಿದ್ದಾರೆ,” ಎನ್ನುತ್ತಾರೆ.
ಈ ಕಾಲದ ನಾಟಕಗಳಿಗೆ ಹೋಲಿಸಿದರೆ ಇದು ಸ್ವಲ್ಪ ದೀರ್ಘ ನಾಟಕವೆನಿಸುತ್ತದೆ. ಆದರೆ ಯಾವ ಕ್ಷಣದಲ್ಲೂ ನಾಟಕ ಬೋರ್ ಹೊಡೆಸುವುದಾಗಲಿ, ಸಾಕಪ್ಪ ಎನಿಸುವುದಾಗಲಿ ಇಲ್ಲವೇ ಇಲ್ಲ. ಹಾಡು, ಚುರುಕು ಸಂಭಾಷಣೆ, ನೃತ್ಯ, ಹಾಸ್ಯ, ಲವಲವಿಕೆಯ ನಡಿಗೆ, ನಮ್ಮ ಮನೆಯ ಅಂಗಳದಲ್ಲೇ ನಡೆಯುತ್ತಿರುವ ಘಟನೆಗಳೋ ಎಂಬಷ್ಟು ಸಹಜವಾಗಿ, ಸಲೀಸಾಗಿ ಪ್ರೇಕ್ಷರನ್ನು ಒಳಗೊಳ್ಳುತ್ತಾ ಸಾಗಿಬಿಡುತ್ತದೆ. ನಾವು ಪ್ರೇಕ್ಷಕರಾಗಿ, ಮೂಕ ವಿಸ್ಮಿತರಾಗಿ ಬರಿದೆ ನೋಡುತ್ತಿರುವುದಿಲ್ಲ. ರಂಗ ಮಂಚದ ಮೇಲಿನ ಪಾತ್ರಗಳೊಂದಿಗೆ ನಾವು ಒಬ್ಬರಾಗಿ ಬಿಟ್ಟಿರುತ್ತೇವೆ. ಅಂತಹ ತಾದ್ಯಾತ್ಮತೆಯ ಅನುಭೂತಿಯನ್ನು ಉಂಟುಮಾಡುವುದರಲ್ಲಿ ನಾಟಕ ಯಶಸ್ವಿಯಾಗಿದೆ. ಒಟ್ಟಾರೆ ಇದೊಂದು ಅದ್ಭುತ ಪ್ರಯೋಗ, ರೂಪಾಂತರಗೊಂಡ ರಂಗಕೃತಿ ಸಶಕ್ತವಾಗಿದ್ದು, ಸಾಮಾಜಿಕ ಸ್ಪಂದನವನ್ನು ಒಳಗೊಂಡಿದ್ದು ಒಳ್ಳೆಯ ನಾಟಕವನ್ನು ನೋಡಿದ ಧನ್ಯತೆಯ ಭಾವ ನನ್ನದಾಗಿತ್ತು.
ನಾಟಕದುದ್ದಕ್ಕೂ ದೃಶ್ಯ ಮುಗಿಯುತಿದ್ದಂತೆ ಚಪ್ಪಾಳೆಯ ಸುರಿಮಳೆ. ನಾಟಕದ ಮುಖ್ಯ ಪಾತ್ರಧಾರಿ ಹಾಗು ನಾಟಕದ ನಿರ್ದೇಶಕ ಹುಲಿಗಪ್ಪ ಕಟ್ಟಿಮನಿ ಅದ್ಭುತವಾಗಿ ನಟಿಸಿದರು. ಎನ್. ಮಂಗಳಾ ಅಭಿನಯ ಕೂಡ ಅದ್ಭುತವಾಗಿತ್ತು, ಎಂದರೆ ಖಂಡಿತ ಅತಿಶಯೋಕ್ತಿಯಲ್ಲ. ಸಹ ನಟರ ನಟನೆಯು ಮೆಚ್ಚುವಂತಿತ್ತು. ಇತ್ತೀಚೆಗೆ ಮರೆಯಾದ ಚೀನಿ ಸರ್ (ಶ್ರೀನಿವಾಸ್ ಭಟ್) ಅವರ ರಂಗಸಂಗೀತ ಮುದಕೊಡುವಂತಿತ್ತು. ರಂಗವಿನ್ಯಾಸ, ರಂಗಪರಿಕರಗಳು, ಹಾಗೂ ಉಡುಪು ಸರಳವಾಗಿದ್ದು ಒಂದಕ್ಕೊಂದು ಪೂರಕವಾಗಿದ್ದವು. ಬೆಳಕಿನ ವಿನ್ಯಾಸ ಕೂಡ ಮುಖ್ಯ ಪಾತ್ರ ವಹಿಸಿತ್ತು. ನಟನ ಮೈಸೂರಿನಲ್ಲಿ ಮೇ 26ರ ಸಂಜೆ ಪ್ರದರ್ಶನಗೊಂಡ “ಜೊತೆಗಿರುವನು ಚಂದಿರ” ನಾಟಕಕ್ಕೆ ಪ್ರೇಕ್ಷಕರ ಮಹಾಪೂರವೇ ಹರಿದು ಬಂದಿತ್ತು. ಆಗಾಗ್ಗೆ ಮೆಚ್ಚುಗೆಯ ಚಪ್ಪಾಳೆ ನಾಟಕದ ಯಶಸ್ಸನ್ನು ಸಾರುತ್ತಿತ್ತು.
ಈ ನಾಟಕ ನೋಡಲು ಕಾರಂತರು ಇರಬೇಕಿತ್ತು, ಅವರ ಶಿಷ್ಯರಾದ ಕಟ್ಟಿಮನಿ ಮತ್ತು ಮಂಗಳಾರ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಗಬೇಕಿತ್ತು. ಅವರು ಸದಾ ಹೇಳುತ್ತಿದ್ದಂತೆ ಸೋಲಿಸದೆ, ಕಾರಂತರನ್ನು ಗೆಲಿಸಿದ ಪರಿಯ ಕಾಣಬೇಕಿತ್ತು.
ಮೀನಾ ಮೈಸೂರಿನವರು. ಭಾರತೀಯ ಸಮಾಚಾರ ಸೇವೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಸಾಹಿತ್ಯ ಮತ್ತು ನಾಟಕಗಳಲ್ಲಿ ಇವರಿಗೆ ಆಸಕ್ತಿ. “ಎತ್ತಣಿಂದೆತ್ತ” ಪ್ರವಾಸ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಚ. ಸರ್ವಮಂಗಳ ಅವರ ಕುರಿತು ಅಭಿನಂದನಾ ಗ್ರಂಥ ತಂದಿದ್ದಾರೆ. ಮಲಾಲ ಮತ್ತು ಎಮ್ಮಾ ಕೃತಿಗಳ ಅನುವಾದ. ಜೊತೆಗೆ ಎನ್.ಬಿ.ಟಿಯ ಹಲವು ಮಕ್ಕಳ ಪುಸ್ತಕಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ.
ಮೀನಾ ಮೈಸೂರು ಅವರ ಅದ್ಭುತ ನಿರೂಪಣೆ ಮತ್ತು ವಿಮರ್ಶೆ. ‘ಜೊತೆಗಿರುವನು ಚಂದಿರ’ ನಾಟಕ ನೋಡಿದಂತೆ ಅನಿಸಿತು.
ಮೇಡಮ್, ನಾಟಕದ ನಿಮ್ಮ ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ. ನಾಟಕ ನೋಡುವ ನಮ್ಮ ಆತುರ ಹೆಚ್ಚಿಸಿದೆ.