ಒಮ್ಮೆ ನಮ್ಮಜ್ಜಿ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನವೊಂದು ಕಳವಾಯಿತಂತೆ. ಎಲ್ಲಿ ಹುಡುಕಿದರೂ ಪತ್ತೆ ಇಲ್ಲ. ಮುತ್ತಜ್ಜಿಯ ಧ್ವನಿ ಗುರುತಿಸಿ ಬರುತ್ತಿದ್ದ ದನ ಎಷ್ಟು ಕರೆದರೂ ಬಾರಲೇ ಇಲ್ಲವಂತೆ. ಕೊನೆಗೆ ಆಗ ಸಣ್ಣವರಿದ್ದ ನನ್ನಜ್ಜಿಯನ್ನು ಕೈಲಿ ಹಿಡಿದುಕೊಂಡು ಮುತ್ತಜ್ಜಿ ಹುಡುಕಲೆಂದು ಹೊರಟರಂತೆ. ಅದು ಸಂಜೆಯ ಹೊತ್ತು, ಮುತ್ತಜ್ಜಿ ಮೊದಲಡಿ ಬಳಿಗೆ “ದಾ ದಾ” ಎಂದು ಕರೆಯಬೇಕಾದರೆ ಭೀಮಾಕಾರದ ಉಬ್ಬಿದ ಗೂಳಿನಾಕೃತಿಯ ಆ ಹೊಳೆಯುವ ಕಣ್ಣುಗಳ ಹುಲಿಯೊಂದು ಮೊದಲಡಿಯ ಆ ಬದಿಗೆ ಕಲ್ಲಿನ ಸಂದುಗಳಲ್ಲಿ ಎದ್ದು ಹೊರಟಿತಂತೆ. ಅದರ ಠೀವಿಗೆ ಮತ್ತಜ್ಜಿಯ ಬಾಯಿ ಕಟ್ಟಿತಂತೆ.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರ ಕಥನ
ಈಗ್ಗೆ ಪತ್ರಿಕೆಯೊಂದಕ್ಕೆ ಒಂದು ಊರಿನ ಕಥೆ ಬರೆದಿದ್ದೆ. ಅದನ್ನು ಓದಿದ ಆ ಊರಿನ ಒಂದಿಬ್ಬರು, ಪತ್ರಿಕಾ ಸಂಸ್ಥೆಗೆ ಫೋನ್ ಮಾಡಿ ಕಥೆಯು ನಿಜವಾಗಿಯೂ ನಡೆದಿದೆಯೇ ಎಂದು ಕೇಳಿದ್ದರಂತೆ. ಆ ಬಳಿಕ ನನಗೂ ಫೋನ್ ಮಾಡಿ ಕೇಳಿದ್ದರು. ಅವರಿಗೆ ಅದು ಕಾಲ್ಪನಿಕ ಕಥೆ ಎಂದು ಹೇಳಿ ಅರ್ಥ ಮಾಡುವಾಗ ನನಗೆ ಸಾಕುಸಾಕಾಗಿತ್ತು. ಹೀಗೊಂದು ತಲೆ ಬರಹ ಕೊಟ್ಟರೆ ಊರಿನವರು ಖಂಡಿತಾ ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುತ್ತಾರೆಂದು ಗೊತ್ತು. ಆದರೂ ಕಥೆ ಹೇಳದೆ ವಿಧಿಯಿಲ್ಲ.
ರಾತ್ರಿ ಮಸೀದಿಗೆ ಪ್ರಾರ್ಥನೆಗೆ ಬರುವ ಕಡವಿನ ಬಾಗಿಲಿನವರೊಬ್ಬರು “ಮಾನೊಂದು ರಸ್ತೆ ದಾಟುತ್ತಿತ್ತು” ಅಂದರಂತೆ. “ಮಾನ್” ಅಂದರೆ ಮಲಯಾಳಂನಲ್ಲಿ ಜಿಂಕೆ. ಅದು ಮಲಯಾಳಂ ಭಾಷೆಯಿಂದ ಮೂಲಕ್ಕೆ ಯಾವುದೆ ತಕಾರಾರು ಬರದೆ ನಮ್ಮ ಬ್ಯಾರಿ ಬಾಷೆಯಲ್ಲಿ ಸೇರಿಕೊಂಡದ್ದರ ಫಲವಾಗಿ ಈಗಲೂ ನಾವು ಜಿಂಕೆಯನ್ನು ಆಡು ಬಾಷೆಯಲ್ಲಿ “ಮಾನ್” ಅಂತಲೇ ಕರೆಯುವುದು.
ಕಡವಿನ ಬಾಗಿಲು ಅಂದರೆ ಜೋಗಿಬೆಟ್ಟುವಿಗೆ ಕೂಗಳತೆಯ ದೂರ. ಕಡವೆಗಳು ಹೆಚ್ಚಾಗಿ ಬರುತ್ತಿದ್ದರಿಂದ ಅಲ್ಲಿಗೆ “ಕಡವಿನ ಬಾಗಿಲು” ಅಂತ ಹೆಸರು ಬಂತೆಂದು ಉಮ್ಮ ಹೇಳಿದ ನೆನಪು. ನನಗೆ ಜಿಂಕೆ ಅಂದಾಗಲೇ ನಮ್ಮೂರ ಕಾಡನ್ನು ಎತ್ತಿ ಕೊಂಡಾಡಬೇಕಾದಷ್ಟು ಹೆಮ್ಮೆ ಬಂದು ಬಿಟ್ಟಿತ್ತು. ನಗರೀಕರಣದ ಬಿರುಗಾಳಿಗೆ ಸಿಕ್ಕು ನನ್ನೂರು ನಲುಗಿ ಪ್ರಾಣಿ ಸಂಪತ್ತಿಗೆ ದೊಡ್ಡ ಹೊಡೆತ ಬಿದ್ದಿಲ್ಲವೆನ್ನುವ ಖುಷಿ. ಅವರು ಜಿಂಕೆಯ ವಿಷಯ ಹೇಳಿದ ನಂತರ, ನಾನು ಆ ರಾತ್ರಿ ಇಡೀ, ಜಿಂಕೆಯನ್ನು ನೋಡುವ ಖುಷಿಯಲ್ಲೇ ಕಳೆದೆ. ನನ್ನ ಸುಷುಪ್ತಿಯೊಂದು ಇಲ್ಲಿ ಜಿಂಕೆಯಿದ್ದರೆ ಅದನ್ನು ಹಿಡಿದು ತಿನ್ನುವ ಹುಲಿ ಅಥವಾ ಚಿರತೆಯಂತಹ ದೊಡ್ಡ ಬೇಟೆ ಪ್ರಾಣಿಯೂ ಇರಲೇಬೇಕೆಂದು ಎಣಿಕೆ ಹಾಕುತ್ತಲೇ ಇತ್ತು. ಹುಲಿಗಳಿರುವ ಕಾಡಾದರೆ ನಮ್ಮ ಕಾಡು ನಿಜಕ್ಕೂ ಸಂಪದ್ಭರಿತ ಎಂಬುದು ನನ್ನ ಲೆಕ್ಕಾಚಾರ.
ಬೆಳಕು ಹರಿಯುವ ಮೊದಲೇ ಮನೆಯವರೆಲ್ಲಾ ಎದ್ದು ಒಂದು ಗ್ಲಾಸು ಚಹಾ ಕುಡಿಯದಿದ್ದರೆ ದಿನವೇ ಆರಂಭವಾಗದು ಎಂದು ನಮ್ಮ ಪರಂಪರೆಗೆ ಯಾರೋ ಹಿರಿಯರು ಶಾಪ ನೀಡಿರಬೇಕು. ನನಗೆ ಈ ಚಹಾ ಇದ್ದರೂ, ಇಲ್ಲದಿದ್ದರೂ ಆದೀತು. ಮನೆಯವರೆಲ್ಲಾ ಜೊತೆಯಾಗಿ ಕುಡಿಯುವಾಗ ನಾನೇಕೆ ಉಳಿಯಬೇಕೆಂದು ನಾನು ಕುಡಿಯುವುದು. ನನ್ನ ಪುಣ್ಯಕ್ಕೆ ಅದು ಚಟವಾಗಿ ಬೆಳೆದಿಲ್ಲ. ಎಲ್ಲರೂ ಒಂದೊಂದು ಗುಟುಕು ಕುಡಿಯತೊಡಗಿದಷ್ಟರಲ್ಲೇ ನಾನು ಉಮ್ಮನಲ್ಲಿ ಕೇಳಿದೆ. “ಉಮ್ಮ, ನೀವು ಹುಲಿಯನ್ನು ನೋಡಿದ್ದೀರ?” ಅಂತ. ಉಮ್ಮ ಕೆಲವೊಮ್ಮೆ ನಮ್ಮ ಕುತೂಹಲವನ್ನು ತಣಿಸುವ ಉತ್ತರ ನೀಡುತ್ತಾರೆ.
“ಇಲ್ಲ, ನಾನು ನೋಡಿಲ್ಲ, ನಮ್ಮಮ್ಮ ಮತ್ತು ಅಜ್ಜಿ ನೋಡಿದ್ದರಂತೆ” ಅಂದರು. ಉಮ್ಮ ಅಷ್ಟಕ್ಕೆ ನಿಲ್ಲಿಸುವವರಲ್ಲ.
“ಒಮ್ಮೆ ನಮ್ಮಜ್ಜಿ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನವೊಂದು ಕಳವಾಯಿತಂತೆ. ಎಲ್ಲಿ ಹುಡುಕಿದರೂ ಪತ್ತೆ ಇಲ್ಲ. ಮುತ್ತಜ್ಜಿಯ ಧ್ವನಿ ಗುರುತಿಸಿ ಬರುತ್ತಿದ್ದ ದನ ಎಷ್ಟು ಕರೆದರೂ ಬಾರಲೇ ಇಲ್ಲವಂತೆ. ಕೊನೆಗೆ ಆಗ ಸಣ್ಣವರಿದ್ದ ನನ್ನಜ್ಜಿಯನ್ನು ಕೈಲಿ ಹಿಡಿದುಕೊಂಡು ಮುತ್ತಜ್ಜಿ ಹುಡುಕಲೆಂದು ಹೊರಟರಂತೆ. ಅದು ಸಂಜೆಯ ಹೊತ್ತು, ಮುತ್ತಜ್ಜಿ ಮೊದಲಡಿ ಬಳಿಗೆ “ದಾ ದಾ” ಎಂದು ಕರೆಯಬೇಕಾದರೆ ಭೀಮಾಕಾರದ ಉಬ್ಬಿದ ಗೂಳಿನಾಕೃತಿಯ ಆ ಹೊಳೆಯುವ ಕಣ್ಣುಗಳ ಹುಲಿಯೊಂದು ಮೊದಲಡಿಯ ಆ ಬದಿಗೆ ಕಲ್ಲಿನ ಸಂದುಗಳಲ್ಲಿ ಎದ್ದು ಹೊರಟಿತಂತೆ. ಅದರ ಠೀವಿಗೆ ಮತ್ತಜ್ಜಿಯ ಬಾಯಿ ಕಟ್ಟಿತಂತೆ. ಬಹುಶಃ ಕೊಂಡು ಹೋಗಿದ್ದ ದನ ತಿಂದು ಮುಗಿಸಿದ್ದರ ಫಲವಾಗಿ ಅದರ ಹೊಟ್ಟೆ ತುಂಬಿದ್ದಿರಬೇಕು. ಅದು ಏನೇನೂ ಪ್ರತಿಕ್ರಿಯಿಸದೆ ಕಾಡ ಮರೆಗೆ ಸರಿಯಿತಂತೆ. ಮುತ್ತಜ್ಜಿ ಆದಷ್ಟು ಬೇಗ ಮನೆಗೆ ಹಿಂತಿರುಗುವಾಗಲೇ ದಾರಿಯಲ್ಲಿ ಸಿಕ್ಕ ಈಚಲು ಕಳ್ಳು ತೆಗೆಯಲು ಬಂದಿದ್ದ ಪೂಜಾರಿಯರೊಬ್ಬರಲ್ಲಿ ನಡೆದದ್ದು ವಿವರಿಸಿದರಂತೆ.
ನನಗೆ ಜಿಂಕೆ ಅಂದಾಗಲೇ ನಮ್ಮೂರ ಕಾಡನ್ನು ಎತ್ತಿ ಕೊಂಡಾಡಬೇಕಾದಷ್ಟು ಹೆಮ್ಮೆ ಬಂದು ಬಿಟ್ಟಿತ್ತು. ನಗರೀಕರಣದ ಬಿರುಗಾಳಿಗೆ ಸಿಕ್ಕು ನನ್ನೂರು ನಲುಗಿ ಪ್ರಾಣಿ ಸಂಪತ್ತಿಗೆ ದೊಡ್ಡ ಹೊಡೆತ ಬಿದ್ದಿಲ್ಲವೆನ್ನುವ ಖುಷಿ. ಅವರು ಜಿಂಕೆಯ ವಿಷಯ ಹೇಳಿದ ನಂತರ, ನಾನು ಆ ರಾತ್ರಿ ಇಡೀ, ಜಿಂಕೆಯನ್ನು ನೋಡುವ ಖುಷಿಯಲ್ಲೇ ಕಳೆದೆ.
“ನೀವೆಂಥ ಹೇಳುವುದು ಬ್ಯಾರ್ದಿ. ಅದು ಹುಲಿ, ಎಲ್ಲಾದರೂ ಘರ್ಜಿಸದೆ ಇದ್ದದ್ದು ನಿಮ್ಮ ಪುಣ್ಯ” ಅಂತ ಹೇಳಿ ಕಳುಹಿಸಿದರಂತೆ. ಕೇಳಿ ಸ್ಥಂಭೀಭೂತರಾದ ಮುತ್ತಜ್ಜಿ ಮೂರು ದಿನ ಭಯದ ಜ್ಚರ ಆವರಿಸಿ ಹಾಸಿಗೆಯಿಂದ ಏಳಲಿಲ್ಲವಂತೆ. ಕಥೆ ಕೇಳಿ ನಾನು ಇನ್ನಷ್ಟು ರೋಮಾಂಚನಗೊಂಡಿದ್ದೆ.
ಮೊನ್ನೆ ಅಜ್ಜನ ಮನೆಯ ಕಡೆಗೊಮ್ಮೆ ಭೇಟಿ ಕೊಟ್ಟಿದ್ದೆ. ಅಜ್ಜ ಬಿಟ್ಟು ಹೋದ ಬಳಿಕ ಜೀವಕಳೆ ಕಳೆದುಕೊಂಡಿದ್ದ ಆ ಜಾಗ ಈಗ ಕಾಡು ತುಂಬಿ ಗಮ್ಯವಾಗಿದೆ. ಪ್ರಕೃತಿಯನ್ನು ಸವಿಯುತ್ತಾ ಬರಬೇಕಾದರೆ ಐನಾತಿಯೊಬ್ಬ ಬುತ್ತಿ ಬಿಚ್ಚಿ ಊಟಕ್ಕೆ ಕುಳಿತಿದ್ದ. ನಾನು ಬಾಲ್ಯದ ಮೆಲುಕು ಹಾಕುತ್ತಾ, ಕೋಕೋ ಮರದ ಬಳಿ ಹಾದು ಬರುತ್ತಿದ್ದೆ. “ಹೋ, ಏನ್ಸಾರ್ ಈ ಕಡೆ ಬಂದಿದ್ದೀರಾ?” ಅಂತ ಪರಿಚಯ ಭಾವದಿಂದ ಮಾತಿಗಿಳಿದ. ಬಾಯಿಯಲ್ಲಿ ಆಹಾರವಿಟ್ಟು ಮಾತನಾಡುತ್ತಿದ್ದುದರಿಂದ ನನಗದು ಸ್ಪಷ್ಟವಾಗಿ ಕೇಳಲೂ ಇಲ್ಲ. ನನಗಿವನ ಪರಿಚಯವಿಲ್ಲ, ಇವನಿಗಾದರೂ ನನ್ನ ಪರಿಚಯ ಹೇಗಾಯಿತೆಂದು ನನಗೆ ದಿಗಿಲು. “ಹೀಗೆ ಸುತ್ತಾಡಿಕೊಂಡು ಬರೋಣ ಅಂತ ಆಯ್ತು ಅದ್ಕೇ ಬಂದೆ” ಅಂದೆ. “ಎಚ್ಚರವಿರಲಿ, ಮೊನ್ನೆ ನೈಪಿಲಿಯೊಂದು ನಮ್ಮ ನಾಯಿಯನ್ನು ಹಿಡ್ಕೊಂಡು ಹೋಗಿದೆ” ಎಚ್ಚರಿಸಿದ್ದ. “ಹೂಂ” ಅಂತ ತಲೆಯಾಡಿಸಿ ಬಂದವನಿಗೆ ಮತ್ತೆ ತಲೆತುಂಬ ನೈಪಿಲಿಗಳೇ.
ಅಷ್ಟಕ್ಕೂ ನೈಪಿಲಿ ಅಂದರೆ ಏನು? ಹೇಗಿರುತ್ತೆ ಎಂಬಿತ್ಯಾದಿ ಪ್ರಶ್ನೆಗಳು ತಲೆತುಂಬಾ ಹರಿದಾಡಲಾರಂಭಿಸಿದವು. ಮನೆಗೆ ಬಂದವನೇ ಉಮ್ಮನಲ್ಲಿ ಕೇಳಿದೆ. “ಉಮ್ಮಾ, ಈ ನೈಪಿಲಿ ಅಂದರೆ ಏನು?”. “ಹೂಂ, ನಾನು ಹೇಳುವುದು ಕೇಳಿದ್ದೇನೆ, ಮೈ ತುಂಬಾ ಚುಕ್ಕಿ ಚುಕ್ಕಿಯಂತಿರುತ್ತದಂತೆ. ನಾಯಿಗಳನ್ನು ಹಿಡಿದು ಹೊತ್ತೊಯ್ಯೋದೇ ಜಾಸ್ತಿ ಅಂತೆ” ಅಂದರು. “ಬಹುಶಃ ಚಿರತೆ ಇರ್ಬೇಕೇನೋ?” ಅಂದಿದ್ದಕ್ಕೆ, “ಆಗಿರ್ಬಹುದು” ಎಂದು ಉಮ್ಮನೂ ಸಂಶಯ ವ್ಯಕ್ತಪಡಿಸಿದರು. ಅಷ್ಟರಲ್ಲೇ ಸಂತೆಗೆ ಹೋಗಿದ್ದ ಅಬ್ಬ ಚೀಲದ ತುಂಬಾ ತರಕಾರಿ ತಂದಿದ್ದರು. ಅವರು ಹೊಸ್ತಿಲು ದಾಟಲು ಕಾಯದೆ “ಅಬ್ಬ ನೈಪಿಲಿ ಅಂದರೇನು” ಎಂದು ಪ್ರಶ್ನಿಸಿದೆ. “ಅದು ನೈ ಪಿಲಿ ಅಲ್ಲ ಮಾರಾಯ, ನಾಯಿ ಪಿಲಿ, ನಾಯಿಗಳನ್ನು ಹಿಡಿಯುವುದರಿಂದಲೇ ಹಾಗೇ ಹೆಸರು ಬಂದಿದ್ದು” ಎಂದರು.
“ಚಿರತೆಯಾ?”
“ಅಲ್ಲ, ನಾಯಿಯಂತಿರುತ್ತದೆ. ನಾನೂ ನೋಡಿಲ್ಲ ಹೇಳುವುದು ಕೇಳಿದ್ದೆ.”
“ಕತ್ತೆ ಕಿರುಬವಾ…?”
“ಅದೂ ಅಲ್ಲ, ತೋಳದಂತಹ ಪ್ರಾಣಿಯಾಗಿರಬಹುದು” ಅಂದರು.
ಕುತೂಹಲ ತಾಳಲಾರದೆ ಗೂಗಲಣ್ಣನ ಮೊರೆ ಹೋದೆ. ಅಲ್ಲೆಲ್ಲೂ ನಾಯಿ ಹಿಡಿಯಲು ಬರುವುದು ಚಿರತೆ ಮಾತ್ರ ಅಂಥ ಗೊತ್ತಾಯಿತೇ ವಿನಃ ಕತ್ತೆ ಕಿರುಬವಾಗಲಿ, ತೋಳವಾಗಲಿ ಈ ಮಹಾ ಕೈಂಕರ್ಯಕ್ಕೆ ತೊಡಗುವುದಿಲ್ಲವೆಂದು ತಿಳಿಯಿತಷ್ಟೆ. ಅಬ್ಬನ ಮಾಹಿತಿ ತಪ್ಪಿರಬಹುದೇ, ಹಿರಿಯರು ತಪ್ಪಾಗಿ ಹೆಸರಿಟ್ಟಿರಬಹುದೇ ನನ್ನ ಜಿಜ್ಞಾಸೆಗೆ ಉತ್ತರವೇ ಸಿಗಲಿಲ್ಲ.
ಮೊನ್ನೆ ಅಕ್ಕನ ಮನೆಯಿಂದ ಫೋನ್ ಬಂತು. “ಇಲ್ಲೊಂದು ಚಿರತೆ ಬಂದಿದೆ. ಊರಿನ ಯಾರೋ ಒಬ್ಬರು ವಾಹನ ಚಲಾಯಿಸುತ್ತಾ ಹೋಗುತ್ತಿರಬೇಕಾದರೆ ಸಂಜೆ ಹೊತ್ತಿಗೆ ರಸ್ತೆ ದಾಟಿತಂತೆ”
ಅಲ್ಲಲ್ಲಿ ಚಿರತೆಗಳೇ ಇರುವುದರಿಂದ ನಮ್ಮ ಕಾಡಿನಲ್ಲಿ ಹುಲಿಗಳಿಲ್ಲವೆಂಬ ತೀರ್ಮಾನಕ್ಕೆ ಬಂದೆ. ಆ ಬಳಿಕ ಮೊನ್ನೆ ಮೊನ್ನೆ ಕಡವಿನ ಬಾಗಿಲಿನಲ್ಲಿ ಯಾರೋ ಚಿರತೆ ನೋಡಿದರೆಂದು ಸುದ್ದಿ ಬಂತು. ಗಂಟೆಗೆ ೬೦ ಕಿ.ಮೀ ಓಡಬಲ್ಲ ಚಿರತೆ, ನಮ್ಮೂರ ಸುತ್ತ ಮುತ್ತ ವ್ಯಾಪ್ತಿಯಲ್ಲಿ ಆ ಒಂಟಿ ಚಿರತೆ ಸುತ್ತುತ್ತಿರಬಹುದೆಂದು ಲೆಕ್ಕ ಹಾಕಿದೆ. ತನ್ನ ಮಕ್ಕಳು, ಮರಿ ಮಕ್ಕಳು ಇಲ್ಲದೆ ಅದು ಒಂಟಿಯಾಗಿರಲು ಸಾಧ್ಯವೇ ಎಂಬ ಸಂಶಯ ಆಗಾಗ ಮೂಡುತ್ತದೆ. ಮುಂದೊಂದು ದಿನ ನಮ್ಮದೇ ಕಾಡಿನಲ್ಲಿ ಚಿರತೆಯೊಂದು ಮುಖತಃ ಭೇಟಿಯಾಗಲಿ ಎಂದು ಕಾಯುತ್ತಿದ್ದೇನೆ. ಆ ಹೊತ್ತಿಗೆ ನಾನು ಕಥೆ ಹೇಳಲು ಬಾಕಿಯಿದ್ದರೆ, ನೀವು ಕಥೆ ಕೇಳಿಸಿಕೊಳ್ಳಬಹುದು.
ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..