ಮಾಸ್ಕೋದಲ್ಲಿ ಅನೇಕ ಆಫ್ರಿಕಾದ ಯುವಕರು ರಷ್ಯನ್ ಯುವತಿಯರನ್ನು ಮದುವೆಯಾಗಿದ್ದರು. ಅವರ ಮಕ್ಕಳು ಮಿಶ್ರವರ್ಣದವರಾಗಿದ್ದು ಕಪ್ಪು ಗುಂಗುರು ಕೂದಲು ಮತ್ತು ಬೆಳ್ಳನೆಯ ಮುಖದಿಂದ ಕಂಗೊಳಿಸುತ್ತಿದ್ದರು. ದಕ್ಷಿಣ ಆಫ್ರಿಕಾದ ಮಿಶ್ರವರ್ಣೀಯರ ಬಿಷಪ್ ಅಲೆನ್ ಬೊಸೆಕ್ “ವು ಆರ್ ದ ಫ್ಯೂಚರ್ ಆಫ್ ಸೌತ್ ಆಫ್ರಿಕಾ” ಎಂದು ಹೇಳಿದ್ದರು. ಮಿಶ್ರವರ್ಣೀಯರು ದಕ್ಷಿಣ ಆಫ್ರಿಕಾ ಅಷ್ಟೇ ಅಲ್ಲ ಇಡೀ ಜಗತ್ತಿನ ಭವಿಷ್ಯ ಎಂಬುದು ಸಾಬೀತಾಗುತ್ತಿದೆ. ಭಾರತದ ಎಲ್ಲ ಜಾತಿ ಮತ್ತು ಧರ್ಮಗಳಲ್ಲಿಆಫ್ರಿಕಾದ ಮೂಲ ನಿವಾಸಿಗಳು ಇದ್ದಾರೆ ಬೆಳ್ಳಗಿದ್ದವರೂ ಇದ್ದಾರೆ. ಆದರೂ ಜಾತಿ ಭ್ರಮೆ ಉಳಿದುಕೊಂಡಿದೆ. ಸೋವಿಯತ್ ದೇಶದ ಜನ ಕಪ್ಪು ಮತ್ತು ಕಂದು ಬಣ್ಣದವರ ಬಗ್ಗೆ ಯಾವುದೇ ತಾರತಮ್ಯ ತೋರಿಸುತ್ತಿರಲಿಲ್ಲ. ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ ೪೯ನೇ ಭಾಗ ಇಲ್ಲಿದೆ.
ಮಾಸ್ಕೋದಲ್ಲಿ ೧೯೮೩ರ ಈ ನಮ್ಮ ಇಸ್ಕಸ್ ಗುಡ್‌ವಿಲ್ ಡೆಲಿಗೇಷನ್‌ನಲ್ಲಿದ್ದ ಒಂಬತ್ತು ಜನ ದೇಶದ ವಿವಿಧ ಭಾಗಗಳಿಂದ ಬಂದವರಾಗಿದ್ದೆವು. ನಾನು ಮತ್ತು ಡಾ|| ಪಿ.ಎಸ್. ಶಂಕರ್ ಕರ್ನಾಟಕದವರಾಗಿದ್ದೆವು. ಮೂವರು ಮಹಾರಾಷ್ಟ್ರದವರು, ಒಬ್ಬರು ರಾಜಸ್ಥಾನದವರು, ಒಬ್ಬರು ಮಧ್ಯಪ್ರದೇಶದವರು ಮತ್ತು ಇನ್ನಿಬ್ಬರು ಬಿಹಾರದವರು ಇದ್ದರು.
ಸೋವಿಯತ್ ದೇಶದ ಸರ್ಕಾರ ಗುಡ್‌ವಿಲ್ ಡೆಲಿಗೇಷನ್ ಪ್ರತಿನಿಧಿಗಳಿಗೆ ಮಾಡಿದ ವ್ಯವಸ್ಥೆ ನೋಡಿ ಆಶ್ಚರ್ಯವೆನಿಸಿತು. ಪುಸ್ತಕ ಪ್ರಕಟಣಾ ವಿಭಾಗ, ಬಟಾನಿಕಲ್ ಗಾರ್ಡನ್, ವಾರ್ ಮ್ಯೂಜಿಯಂ, ಪಾರಂಪರಿಕ ಮ್ಯೂಜಿಯಂ, ಖ್ಯಾತ ಸಾಹಿತಿಗಳ ಸ್ಮಾರಕಗಳು, ಅವರಿದ್ದ ಮನೆಗಳು, ಯುದ್ಧದ ದುಷ್ಪರಿಣಾಮಗಳಿಂದಾದ ಅನಾಹುತ ಪ್ರದೇಶಗಳು, ಹಿಟ್ಲರನ ಸೈನ್ಯ ನಿರ್ಮಿಸಿದ ಯಾತನಾಶಿಬಿರಗಳು, ಐತಿಹಾಸಿಕ ತಾಣಗಳು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ರಂಗಮಂದಿರಗಳಿಗೆ ಕರೆದೊಯ್ಯುವ ವ್ಯವಸ್ಥೆ, ಸಾಯಂಕಾಲ ಇತಿಹಾಸ ತಜ್ಞರು, ಸಾಹಿತಿಗಳು ಮುಂತಾದವರ ಜೊತೆ ದುಂಡುಮೇಜಿನ ಚರ್ಚೆ ಮುಂತಾದವು ಒಂದು ನಿಮಿಷ ಕೂಡ ತಡವಾಗದ ರೀತಿಯಲ್ಲಿರುತ್ತಿದ್ದವು. ಹೀಗಾಗಿ ಕೇವಲ ೨೧ ದಿನಗಳಲ್ಲಿ ಭಾರತಕ್ಕಿಂತ ೧೭ ಪಟ್ಟು ದೊಡ್ಡದಾಗಿದ್ದ ಅಂದಿನ ಸೋವಿಯತ್ ದೇಶವನ್ನು ಒಂದು ಮೂಲೆಯ ತಾಷ್ಕೆಂಟ್‌ನಿಂದ ಇನ್ನೊಂದು ಮೂಲೆಯ ಮಿಸ್ಕ್ ವರೆಗೆ ಎಲ್ಲ ಪ್ರಮುಖ ಸ್ಥಳಗಳಿಗೆ ಭೇಟಿ ಕೊಡಲು ಸಾಧ್ಯವಾಯಿತು. ಜೊತೆಗೆ ನಮ್ಮ ಬಗ್ಗೆ ವಿಶೇಷ ಕಾಳಜಿ ಏನೆಂದರೆ ನಾವು ಭಾರತೀಯ ಮಿತ್ರರು (ಇಂಜೀಷ್ಕಿ ದ್ರುಜಿಯೆ) ಎಂಬುದು. ಅಂದಿನ ಸೋವಿಯತ್ ಜನರು ಭಾರತವನ್ನು ಪ್ರೀತಿಸಿದಷ್ಟು ಇನ್ನಾವ ದೇಶವನ್ನೂ ಪ್ರೀತಿಸಿಲ್ಲ ಎನಿಸಿತು. (ನಮ್ಮ ದೇಶದಿಂದ ಆರೇಳು ಸಾವಿರ ಕಿಲೊಮೀಟರ್ ದೂರದ ಜನರ ಮನಸ್ಸಿನಲ್ಲಿ ಭಾರತದ ಬಗ್ಗೆ ಇರುವ ಪ್ರೀತಿಯನ್ನು ನಾನು ನನ್ನ ನಂತರದ ಅನೇಕ ವಿದೇಶ ಪ್ರವಾಸಗಳಲ್ಲಿ ಎಲ್ಲಿಯೂ ಕಾಣಲಿಲ್ಲ. ಭಾರತದ ಜನರು, ನಟ ರಾಜಕಪೂರ್, ನಟಿ ನರ್ಗಿಸ್, ಹಾಡು ಆವಾರಾ, ಗಾಂಧೀಜಿಯ ಶಾಂತಿ, ನೆಹರೂ ರಾಜನೀತಿ, ರವಿಶಂಕರ ಸಿತಾರ್, ಬಿಸ್ಮಿಲ್ಲಾ ಖಾನ್ ಶಹನಾಯಿ ಹೀಗೆ ಅವರ ಹೃದಯದಲ್ಲೊಂದು ಭಾರತ ನಿರ್ಮಾಣವಾಗಿದ್ದರ ಅನುಭವವಾಯಿತು.)
ಎಲ್ಲ ಕಡೆ ಗೈಡ್‌ಗಳು ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪರಿಣತರಾಗಿದ್ದರು. ಅವರು ವಿವರಿಸುವ ರೀತಿ ಆಪ್ಯಾಯಮಾನವಾಗಿತ್ತು. ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿದ್ದವು. ನನಗೋ ಎಲ್ಲಿಲ್ಲದ ಕುತೂಹಲ. ದುಡಿಯುವ ವರ್ಗದಿಂದ ರೂಪುಗೊಂಡ ದೇಶವೊಂದು ಬಂಡವಾಳಶಾಹಿ ಅಮೆರಿಕಕ್ಕೆ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಸ್ಪರ್ಧಿಯಾಗಿ ನಿಂತದ್ದು ಹೆಮ್ಮೆಯ ವಿಚಾರವಾಗಿತ್ತು. ಮಾಸ್ಕೋದ ನಮ್ಮ ಗೈಡ್ ಹೆಸರು ಮರೆತಿದ್ದೇನೆ. ಮಿತಭಾಷಿ ಮತ್ತು ಮಂದಸ್ಮಿತಳಾಗಿದ್ದ ಆಕೆ ಮಧ್ಯ ವಯಸ್ಸಿನ ಪ್ರಬುದ್ಧ ಮಹಿಳೆಯಾಗಿದ್ದಳು. ಹೀಗೆ ನಮಗೆ ಒಂದು ಪ್ರದೇಶದಲ್ಲಿ ನಾವು ಇರುವವರೆಗೆ ನಮ್ಮ ಜೊತೆ ಒಬ್ಬ ಗೈಡ್ ಇರುತ್ತಿದ್ದರು. ಇನ್ನು ಯಾವ ಯಾವ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದೆವೊ ಅಲ್ಲಿ ಆ ಸ್ಥಳದ ಮಹತ್ವವನ್ನು ವಿವರಿಸುವ ಗೈಡ್‌ಗಳು ಇರುತ್ತಿದ್ದರು.
ನಾವು ಮಾಸ್ಕೋಗೆ ಹೋದ ಸ್ವಲ್ಪದಿನಗಳ ಮೊದಲು ಅಲ್ಲಿ ಅವಿವಾಹಿತ ತಾಯಂದಿರ ಸಮ್ಮೇಳನ ಜರುಗಿತ್ತು. ಲಕ್ಷಾಂತರ ಜನ ಸೇರಿದ್ದರು ಎಂದು ನಮ್ಮ ಗೈಡ್ ತಿಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಷ್ಯನ್ ಡಿಪ್ಲೋಮಾ ಮಾಡುವಾಗ ನನ್ನ ಶಿಕ್ಷಕಿಯರಲ್ಲಿ ಒಬ್ಬರಾದ ಗಲಿನಾ ಶಿರ್‌ಗೇವ್ನಾ ಅವಿವಾಹಿತ ತಾಯಿಯ ಮಗಳಾಗಿದ್ದರು. ಶಿರ್‌ಗೇವ್ನಾ ಎಂದು ತಾಯಿಯ ಹೆಸರೇಕೆ ಇಟ್ಟಿಕೊಂಡಿದ್ದೀರಿ ಎಂದು ಕೇಳಿದಾಗ, ನನ್ನ ತಂದೆ ಯಾರು ಎಂಬುದು ಗೊತ್ತಿಲ್ಲ. ನಾನು ಅವಿವಾಹಿತ ತಾಯಿಯ ಮಗಳು ಎಂದು ಸಹಜವಾಗಿ ಹೇಳಿದ್ದರು.
ಹಿಟ್ಲರ್‌ನ ಕ್ರೌರ್ಯದಿಂದಾಗಿ ಎರಡನೆಯ ಮಹಾಯುದ್ಧದಲ್ಲಿ ೫ ಕೋಟಿಗೂ ಹೆಚ್ಚು ಜನ ಸತ್ತರು. ಸತ್ತವರಲ್ಲಿ ೨ ಕೋಟಿಗೂ ಹೆಚ್ಚು ಮಂದಿ ಸೋವಿಯತ್ ದೇಶದ ಯುವಕರು ಸೇರಿದ್ದರು. ಹೀಗಾಗಿ ಹೆಣ್ಣು ಗಂಡಿನ ಸಮತೋಲನ ತಪ್ಪಿತು. ಯುವಕರ ಸಂಖ್ಯೆಗಿಂತ ಯುವತಿಯರ ಸಂಖ್ಯೆ ೨ ಕೋಟಿ ಹೆಚ್ಚಾಯಿತು. ಮದುವೆಯಾಗದ ಯುವತಿಯರು ಮತ್ತು ಮದುವೆಯಾದ ಯುವಕರ ಮಧ್ಯೆ ಪ್ರೇಮ ಪ್ರಕರಣಗಳು ಹೆಚ್ಚಾದವು. ಈ ಸಮಸ್ಯೆಯಿಂದಾಗಿ ವಿವಾಹ ವಿಚ್ಛೇದನಗಳು ಹೆಚ್ಚಾಗತೊಡಗಿದವು. ಎಲ್ಲರಿಗೂ ಉದ್ಯೋಗ ಹಕ್ಕು ಅವರ ಸಂವಿಧಾನಬದ್ಧವಾಗಿರುವುದರಿಂದ ಮಹಿಳೆಯರಿಗೆ ಅಂಥ ಸಮಸ್ಯೆ ಎನಿಸಲಿಲ್ಲ. ಅವರು ಕೌಟುಂಬಿಕ ಕಲಹಗಳಿಂದ ಮುಕ್ತರಾಗಿ ಬದುಕುವುದನ್ನು ಇಷ್ಟಪಡತೊಡಗಿದರು. ಆಗ ‘ಲಿವ್ ಇನ್ ಟುಗೆದರ್’ ಪದ್ಧತಿ ಬೆಳೆಯತೊಡಗಿತು. ಆಗ ಪುರುಷರ ಕೌಟುಂಬಿಕ ಮಹತ್ವ ಕಡಿಮೆಯಾಯಿತು. ಬಹಳಷ್ಟು ಕುಟುಂಬಗಳು ಸಿಂಗಲ್ ಪೇರೆಂಟ್ ಕುಟುಂಬಗಳಾದವು. ಇಂಥ ಅವಿವಾಹಿತ ತಾಯಂದಿರ ಸಂಘಟನೆಗಳು ಸಾಕಷ್ಟಿವೆ. ಯುದ್ಧಕ್ರೌರ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಹಿನ್ನೆಲೆಯಲ್ಲಿ ಬದಲಾವಣೆಗೆ ಒಳಗಾಗುತ್ತಿರುವ ಸಮಾಜ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿನ ಬದಲಾವಣೆಯಿಂದಾಗಿ ಐಹಿಕ ಜಗತ್ತಿನಲ್ಲೆ ಬದಲಾವಣೆಯಾಗುವ ಮೂಲಕ ಮಾನವನ ವ್ಯಕ್ತಿತ್ವದಲ್ಲಿ ಮತ್ತು ಚಿಂತನಾ ಕ್ರಮದಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ.
ಆ ಕಾಲದಲ್ಲಿ ಭಾರತದಂಥ ಸಾಂಪ್ರದಾಯಿಕ ಸಮಾಜಗಳಲ್ಲಿ ಇಂಥ ಕೌಟುಂಬಿಕ ಬದಲಾವಣೆಗಳು ಬೆಚ್ಚಿಬೀಳಿಸುವಂಥವುಗಳಾಗಿದ್ದವು. ಅದೆಷ್ಟೋ ವಿವಿಧ ದೇಶಗಳ ಪುರುಷರು ಸೋವಿಯತ್ ಯುವತಿಯರನ್ನು ಮದುವೆಯಾಗಿ ಅಲ್ಲೇ ನೆಲೆಸಿದ್ದರು. ಸೋವಿಯತ್ ದೇಶದ ಮಹಿಳೆಯರನ್ನು ಮದುವೆಯಾದ ಪುರುಷರಿಗೆ ಆ ದೇಶದ ನಾಗರಿಕನಾಗುವ ಸೌಲಭ್ಯವೂ ಇತ್ತು.
ಮಾಸ್ಕೋದಲ್ಲಿ ಅನೇಕ ಆಫ್ರಿಕಾದ ಯುವಕರು ರಷ್ಯನ್ ಯುವತಿಯರನ್ನು ಮದುವೆಯಾಗಿದ್ದರು. ಅವರ ಮಕ್ಕಳು ಮಿಶ್ರವರ್ಣದವರಾಗಿದ್ದು ಕಪ್ಪು ಗುಂಗುರು ಕೂದಲು ಮತ್ತು ಬೆಳ್ಳನೆಯ ಮುಖದಿಂದ ಕಂಗೊಳಿಸುತ್ತಿದ್ದರು. (ಜಗತ್ತಿನಲ್ಲಿ ಯಾವೊಂದು ವರ್ಣವೂ ಪರಿಶುದ್ಧವಾಗಿಲ್ಲ. ಅದೆಲ್ಲ ಭ್ರಮೆ. ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ಸರ್ಕಾರವಿದ್ದಾಗ ಈ ಕುರಿತು ನಡೆದ ಸಮೀಕ್ಷೆಯಲ್ಲಿ ಬಿಳಿಯರ ಪರಿಶುದ್ಧ ರಕ್ತದ ಬಗೆಗಿನ ಭ್ರಮೆ ನಗೆಪಾಟಲಾಯಿತು. ಆಫ್ರಿಕಾ ಮೂಲ ನಿವಾಸಿಗಳು ಮತ್ತು ಬಿಳಿಯರ ಸಂಸರ್ಗದಿಂದ ಹುಟ್ಟಿದ ಮಕ್ಕಳಿಗೆ ಕಲರ್‌ಡ್ಸ್ (ಮಿಶ್ರವರ್ಣೀಯರು) ಎಂದು ಕರೆಯುತ್ತಾರೆ. ದಕ್ಷಿಣ ಆಫ್ರಿಕಾದ ಮಿಶ್ರ ವರ್ಣೀಯರ ಬಿಷಪ್ ಅಲೆನ್ ಬೊಸೆಕ್ “ವು ಆರ್ ದ ಫ್ಯೂಚರ್ ಆಫ್ ಸೌತ್ ಆಫ್ರಿಕಾ” ಎಂದು ಹೇಳಿದ್ದರು. ಮಿಶ್ರವರ್ಣೀಯರು ದಕ್ಷಿಣ ಆಫ್ರಿಕಾ ಅಷ್ಟೇ ಅಲ್ಲ ಇಡೀ ಜಗತ್ತಿನ ಭವಿಷ್ಯ ಎಂಬುದು ಸಾಬೀತಾಗುತ್ತಿದೆ. ಭಾರತದ ಎಲ್ಲ ಜಾತಿ ಮತ್ತು ಧರ್ಮಗಳಲ್ಲಿಆಫ್ರಿಕಾದ ಮೂಲ ನಿವಾಸಿಗಳು ಇದ್ದಾರೆ ಬೆಳ್ಳಗಿದ್ದವರೂ ಇದ್ದಾರೆ. ಆದರೂ ಜಾತಿ ಭ್ರಮೆ ಉಳಿದುಕೊಂಡಿದೆ. ಸೋವಿಯತ್ ದೇಶದ ಜನ ಕಪ್ಪು ಮತ್ತು ಕಂದು ಬಣ್ಣದವರ ಬಗ್ಗೆ ಯಾವುದೇ ತಾರತಮ್ಯ ತೋರಿಸುತ್ತಿರಲಿಲ್ಲ. ಅಷ್ಟೇ ಅಲ್ಲ ಅವರು ಕನಿಷ್ಠಪಕ್ಷ ಕಂದು ಬಣ್ಣದಾವರಾಗಬೇಕೆಂಬ ಬಯಕಯುಳ್ಳವರು.)
ನಮ್ಮ ಗೈಡ್ ಮಾಸ್ಕೋದ ಪೀಪಲ್ಸ್ ಹೌಸ್ ಎಂಬ ಅರಮನೆಯಂಥ ಮನೆಯೊಂದಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಮ್ಮ ಸಭೆಯ ಏರ್ಪಾಡಾಗಿತ್ತು. ಆ ಸಂದರ್ಭದಲ್ಲಿ ಅಕ್ಟೋಬರ್ ಕ್ರಾಂತಿಯ ನಂತರ ನಡೆದ ಘಟನೆಯೊಂದರ ಕುರಿತು ಗೈಡ್ ವಿವರಿಸಿದರು. ಕ್ರಾಂತಿಗೆ ಮೊದಲು ಅದೊಂದು ದೊಡ್ಡʻಶ್ರೀಮಂತನ ಮನೆಯಾಗಿತ್ತು. ಕ್ರಾಂತಿಯ ನಂತರ ‘ಪೀಪಲ್ಸ್ ಹೌಸ್’ ಆಗಿ ಹೆಸರು ಪಡೆದಿತ್ತು. ಒಂದು ದಿನ ಆ ಶ್ರೀಮಂತ ಬಂದ. ಒಳ ಹೊರಗೆ ಇದ್ದ ಕ್ರಾಂತಿಕಾರಿಗಳನ್ನು ನೋಡಿ ‘ವೆಲ್ ಕಮ್ ಟು ಮಾಯ್ ಹೌಸ್’ ಎಂದ. ಆಗ ಅಲ್ಲಿದ್ದವರು ‘ವೆಲ್ ಕಮ್ ಟು ಪೀಪಲ್ಸ್ ಹೌಸ್’ ಎಂದರು!
ಮಾಸ್ಕೋದಲ್ಲಿ ಮತ್ತು ಉಳಿದೆಲ್ಲಕಡೆಗಳಲ್ಲಿ ಮಾರ್ಕ್ಸ್, ಲೆನಿನ್ ಅವರಂಥ ಕೆಲ ಮಹಾನ್ ನಾಯಕರನ್ನು ಬಿಟ್ಟರೆ ಎಲ್ಲೆಡೆ ಕವಿಗಳ, ಅಕ್ಟೋಬರ್ ಮಹಾಕ್ರಾಂತಿ ಮತ್ತು ಫ್ಯಾಸಿಸ್ಟರ ವಿರುದ್ಧದ ಹೋರಾಟದ ವೀರಪುರುಷರ ಮೂರ್ತಿಗಳೇ ಕಂಡು ಬರುತ್ತಿದ್ದವು. ಯುದ್ಧ ಸ್ಮಾರಕಗಳಲ್ಲಿ ಹಿಟ್ಲರನ ಸೈನ್ಯದ ವಿರುದ್ಧ ವಿಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುದ್ಧಟ್ಯಾಂಕ್ ಮತ್ತು ಹಡಗುಗಳು ಇದ್ದವು ಹೊರತಾಗಿ ವೈರಿಗಳಿಗೆ ಸಂಬಂಧಿಸಿದ ಯಾವುದೇ ಟ್ಯಾಂಕ್ ಮುಂತಾದ ವಸ್ತುಗಳು ಇದ್ದಿಲ್ಲ. ಇದು ಸೋವಿಯತ್ ಸಂವೇದನಾಶೀಲತೆ.
ಹೊಟೇಲ್ ಯುಕ್ರೇನ್‌ನಲ್ಲಿ ಊಟ ಮಾಡುವಾಗಿನ ಒಂದು ಘಟನೆ ನೆನಪಾಗುತ್ತಿದೆ. ನನ್ನ ಊಟ ಮುಗಿದ ಮೇಲೆ ಪ್ಲೇಟಿಗೆ ಹತ್ತಿದ ಚೂರುಪಾರನ್ನು ಒರೆಸಿ ತಿನ್ನುತ್ತಿದ್ದೆ. ಆಗ ವೇಟರ್ ಬಂದು ‘ಡು ಯು ವಾಂಟ್ ಮೋರ್’ ಎಂದು ಕೇಳಿದಳು. ‘ನೋ ಥ್ಯಾಂಕ್ಸ್’ ನಾನು ಪ್ಲೇಟ್ ಒರೆಸಿ ತಿನ್ನುವುದನ್ನು ಮುಂದುವರಿಸಿದೆ. ತಾನು ಹೇಳಿದ್ದು ನನಗೆ ಗೊತ್ತಾಗಲಿಲ್ಲ ಎಂದು ಭಾವಿಸಿದ ಆಕೆ ಮತ್ತೆ ಬಂದು ಕೇಳಿದಳು. ಆಗ ನಾನು ಆಹಾರದ ಮಹತ್ವವನ್ನು ವಿವರಿಸಿದೆ. ಆಹಾರ ಹಾಳು ಮಾಡಬಾರದು ಎಂದು ನಮ್ಮ ದಾರ್ಶನಿಕ ಬಸವಣ್ಣ ಹೇಳಿದ್ದನ್ನು ತಿಳಿಸಿದೆ. ಅವಳು ಬಹಳ ಸಂತೋಷಟ್ಟಳು. ಥ್ಯಾಂಕ್ಸ್ ಹೇಳಿ ಮತ್ತೆ ತನ್ನ ಕರ್ತವ್ಯನಿರತಳಾದಳು.
ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನ್ನಡ ಕಲಿಯಲು ಬಂದ ದಷ್ಕೋವ್ ಮತ್ತು ಮಾಸ್ಕೋ ರೇಡಿಯೋ ಉದ್ಘೋಷಕಿ ಎಲ್ಲಾನೋರಾ, ನನ್ನ ರಷ್ಯನ್ ಟೀಚರ್ ಆಗಿದ್ದ ನತಾಲಿಯಾ ಬಾಸಿಸ್, ಮಾಸ್ಕೊ ರೇಡಿಯೊದಲ್ಲಿದ್ದ ನಟರಾಜ್, ಭಾಷಾಂತರ ವಿಭಾಗದಲ್ಲಿದ್ದ ಕೆ.ಎಲ್. ಗೋಪಾಲಕೃಷ್ಣ ಮುಂತಾದವರನ್ನು ಭೇಟಿಯಾಗುವ ಅವಕಾಶ ನನಗೆ ಲಭಿಸಿತು. ನಾನು ಭಾರತದಲ್ಲಿ ಇದ್ದಾಗಲೇ ಇವರಿಗೆಲ್ಲ ನಾನು ಬರುವ ವಿಚಾರವನ್ನು ಹೇಗೆ ತಲುಪಿಸಿದೆನೊ ನೆನಪಾಗುತ್ತಿಲ್ಲ. ಇವರೆಲ್ಲ ಹೋಟೆಲ್ ಯುಕ್ರೇನ್‌ಗೆ ಬಂದು ಭೇಟಿಯಾಗಿದ್ದರು. ನತಾಲಿಯಾ ಬಾಸಿಸ್ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ‘ಮಾಯ್ ಸನ್’ ಎಂದು ಭಾವಪೂರ್ಣರಾದರು. ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ರಷ್ಯನ್ ಶಿಕ್ಷಕಿಯಾಗಿ ಹೊಸದಾಗಿ ಬಂದು ಸೇರ್ಪಡೆಯಾದ ದಿನವೇ ಅವರನ್ನು ಭೇಟಿಯಾಗಲು ಕ್ಯಾಂಪಸ್ಸಲ್ಲಿ ಇತರ ರಷ್ಯನ್ ಶಿಕ್ಷಕಿಯರಿದ್ದ ಮನೆಗೆ ಹೋಗಿದ್ದೆ. ಹಳೆ ಶಿಕ್ಷಕಿಯರು ಪರಿಚಯ ಮಾಡಿಸಿದರು. ನಾನು ಹಾಗೇ ಮಾತನಾಡುತ್ತ ನೆಲದ ಮೇಲೆ ಹಾಸಿದ್ದ ಜಮಖಾನೆಯ ಮೇಲೆ ಕುಳಿತೆ. ಪದ್ಮಾಸನದ ಹಾಗೆ ಕುಳಿತದ್ದನ್ನು ನೋಡಿ ಬಾಸಿಸ್ ಗಾಬರಿಯಾದರು. ತಮ್ಮ ದೇಶದಲ್ಲಿ ಯಾರಿಗೂ ಹಾಗೆ ಕೂಡಲು ಬರುವುದಿಲ್ಲ ಎಂದರು. ಮೈನಸ್ ೪೦ ಡಿಗ್ರಿ ಸೆಂಟಿಗ್ರೇಡ್ ವರೆಗೆ ಇಳಿಯುವ ವಾತಾವರಣದಲ್ಲಿ ಯಾರೂ ಕೆಳಗೆ ಕೂಡುವುದಿಲ್ಲ. ಮಕ್ಕಳಿದ್ದಾಗಿನಿಂದಲೂ ಅವರಿಗೆ ಆಸನದ ಮೇಲೆಯೆ ಕೂಡುವ ಅಭ್ಯಾಸ. ನತಾಲಿಯಾ ಎಲ್ಲ ಬಿಟ್ಟು ಹಾಗೆ ಕೂಡುವ ಪ್ರಯತ್ನ ಮಾಡತೊಡಗಿದರು. ದಿನವೂ ಹಾಗೆ ಕೂಡುವ ಪ್ರಯತ್ನ ಮುಂದುವರಿಸಿದರು. ಬಹಳ ದಿನಗಳ ನಂತರ ಕೆಳಗೆ ಕೂಡುವ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸಿದರು. ಅವರ ಇನ್ನೊಂದು ಆಶೆ ತಮ್ಮ ಹಾಲಿನಂಥ ಬಿಳಿ ಬಣ್ಣವನ್ನು ಕಂದು ಬಣ್ಣಕ್ಕೆ ತಿರುಗಿಸುವುದು. ಅದಕ್ಕಾಗಿ ಮನೆ ಮೇಲೆ ಹೋಗಿ ಬಿಸಿಲು ಕಾಯುವುದನ್ನು ಅಭ್ಯಾಸ ಮಾಡಿಕೊಂಡರು. ಅವರ ಬಣ್ಣ ಸ್ವಲ್ಪ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಾದಲೆಲ್ಲ ಖುಷಿಯಾಗುತ್ತಿದ್ದರು. ಆದರೆ ಈ ವಿಚಾರದಲ್ಲಿ ಅವರು ಅಷ್ಟೇನೂ ಯಶಸ್ಸು ಸಾಧಿಸಲಿಲ್ಲ.
ಹೋಟೆಲ್ ಯುಕೇನಿಯಾದಲ್ಲಿ ನಾತಾಲಿಯಾ ಬಾಸಿಸ್ ಭೇಟಿಯಾದಾಗ ಇದನ್ನೆಲ್ಲ ನೆನಪಿಸಿ ನಗಿಸಿದೆ.
ನಟರಾಜ್ ಅವರು ಅಲ್ಲಿ ನನ್ನ ಗೌರವಾರ್ಥ ಊಟದ ವ್ಯವಸ್ಥೆ ಮಾಡಿದ ನೆನಪು ನಾನು ಮತ್ತು ನನಗಾಗಿ ಬಂದ ಇತರರು ಸೇರಿ ರಾತ್ರಿ ಊಟ ಮಾಡಿದ ನೆನಪು.
ನಿಮಗೆ ದಷ್ಕೋವ್ ಬಗ್ಗೆ ಹೇಳಬೇಕು. ಅವರು ಸೋವಿಯತ್ ದೇಶದಲ್ಲಿ ಪೆಟ್ರೋಲಿಯಂ ಇಲಾಖೆಯದಲ್ಲಿದ್ದವರು. ಅದು ಹೇಗೆ ಕನ್ನಡದ ಬಗ್ಗೆ ಆಸಕ್ತಿವಹಿಸಿದರೋ ಗೊತ್ತಿಲ್ಲ. ಅಲ್ಲಿಂದ ಭಾಷಾಂತರ ಇಲಾಖೆಗೆ ಸೇರಿದರು. ಇದೊಂದು ಬಹುದೊಡ್ಡ ಇಲಾಖೆ. ಇಲ್ಲಿ ರಷ್ಯನ್ ಭಾಷೆಯ ಪುಸ್ತಕಗಳು ಮೊದಲಿಗೆ ಇಂಗ್ಲಿಷ್, ಫ್ರೆಂಚ್, ಜರ್ಮನಿ, ಚೈನೀಸ್ ಮುಂತಾದ ಭಾಷೆಗಳಿಗೆ ಅನುವಾದಗೊಂಡು ನಂತರ ಆಯಾ ಭಾಷೆಗಳು ಪ್ರಚಲಿತವಿರುವ ದೇಶಗಳಲ್ಲಿನ ಭಾಷೆಗಳಿಗೆ ಅನುವಾದಗೊಳ್ಳುತ್ತವೆ. ಭಾರತದ ಭಾಷೆಗಳಿಗೆ ಇಂಗ್ಲಿಷ್‌ನಿಂದ ಭಾಷಾಂತರಗೊಳ್ಳುತ್ತವೆ.
೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನ್ನಡ ಕಲಿಯಲು ಒಂದು ವರ್ಷದ ವರೆಗೆ ಬಂದಿದ್ದ ದಷ್ಕೋವ್, ಬರುವ ಮೊದಲೇ ಒಂದಿಷ್ಟು ಕನ್ನಡ ಕಲಿತಿದ್ದರು. ಭಾಷಾವಿಜ್ಞಾನದ ವಿದ್ಯಾರ್ಥಿಯೂ ಕಮ್ಯುನಿಸ್ಟ್ ವಿಚಾರಧಾರೆಯವನೂ ಆಗಿದ್ದ ನಾನು ಅವರಿಗೆ ಅವರ ಬಿಡುವಿನ ವೇಳೆಯಲ್ಲಿ ಕನ್ನಡದ ಹೇಳಿಕೊಡುತ್ತಿದ್ದೆ. ಆಗ ಅವರ ಜೊತೆ ಬಸವಣ್ಣನವರ ಕುರಿತು ಬಹಳ ಚರ್ಚಿಸುತ್ತಿದ್ದೆ. ಅದೇ ವರ್ಷ ನಾನು ಬಸವಣ್ಣನವರ ಕುರಿತು ಬರೆದ ‘ಸಾಹಿತಿಯ ಸಾಮಾಜಿಕ ಪ್ರಜ್ಞೆ’ ಲೇಖನ ಕರ್ನಾಟಕ ವಿಶ್ವವಿದ್ಯಾಲಯದ ‘ವಿದ್ಯಾರ್ಥಿ ಭಾರತಿ’ ಪತ್ರಿಕೆಯಲ್ಲಿ ಪ್ರಕಟವಾಗಿ ಮೆಚ್ಚುಗೆ ಗಳಿಸಿತ್ತು. ಆ ಲೇಖನವನ್ನು ಅವರ ಮುಂದೆ ಓದಿ ಹೇಳಿದೆ. ಅದು ಅವರಿಗೆ ಬಹಳ ಹಿಡಿಸಿತು. ಅದನ್ನು ರಷ್ಯನ್ ಭಾಷೆಗೆ ಅನುವಾದ ಮಾಡುವುದಾಗಿ ಹೇಳಿದರು (ಮುಂದೇನಾಯಿತೋ ನೆನಪಿಲ್ಲ.) ಅದೇ ವರ್ಷ ದಾವಣಗೆರೆಯಲ್ಲಿ ಪ್ರಗತಿಪಂಥ ಸಮ್ಮೇಳನದಲ್ಲಿ ನಾನು ಅದೇ ವಿಚಾರವಾಗಿ ಮಾತನಾಡಿದೆ. ಅದು ನಿರಂಜನರ ಸಂಪಾದಕತ್ವದಲ್ಲಿ ಸಮ್ಮೇಳನದ ನಂತರ ಪ್ರಕಟವಾದ ‘ಪ್ರಗತಿಪಂಥ’ ಗ್ರಂಥದಲ್ಲಿ ಸೇರಿತು. ಆ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ದಷ್ಕೋವ್ ಅವರನ್ನು ಕರೆಯಬೇಕೆಂದು ಕಾಮ್ರೇಡ್ ಪಂಪಾಪತಿಯವರಿಗೆ ಹೇಳಿದಾಗ ಅವರು ಖುಷಿಯಿಂದ ಒಪ್ಪಿದರು. ಆ ಸಮ್ಮೇಳನದ ಜವಾಬ್ದಾರಿಯನ್ನು ದಾವಣಗೆರೆಯ ಭಾರತ ಕಮ್ಯುನಿಸ್ಟ್ ಪಕ್ಷ ಹೊತ್ತಿತ್ತು. ಪಂಪಾಪತಿಯವರ ನೇತೃತ್ವದಲ್ಲಿ ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಅವರು ಸಮ್ಮೇಳನ ಯಶಸ್ವಿಯಾಗುವಂತೆ ಕಾರ್ಯನಿರ್ವಹಿಸಿದರು.
(ಈ ಪ್ರಗತಿಪಂಥ ೧೯೩೬ರಲ್ಲಿ ಲಖನೌದಲ್ಲಿ ಪ್ರಾರಂಭವಾಯಿತು. ಖ್ಯಾತ ಕಥೆ ಮತ್ತು ಕಾದಂಬರಿಕಾರ ಪ್ರೇಮಚಂದ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಎಡಪಂಥೀಯ ಸಾಹಿತಿಗಳ ಶಕ್ತಿಶಾಲಿ ಸಂಘಟನೆ ಅದಾಗಿತ್ತು. ಕಾಮ್ರೇಡ್ ಪಿ.ಸಿ. ಜೋಷಿ ಅವರ ಶ್ರಮ ಈ ಸಮ್ಮೇಳನದ ಹಿಂದೆ ಇತ್ತು.)
ದಾವಣಗೆರೆ ಸಮ್ಮೇಳನದ ಮೆರವಣಿಗೆಯಲ್ಲಿ ದಷ್ಕೋವ್ ಅವರನ್ನು ಪುಷ್ಪಾಲಂಕೃತ ವಾಹನದಲ್ಲಿ ಕೂಡಿಸಿದ್ದು ವಿಶೇಷವಾಗಿತ್ತು. ಈ ಮೆರವಣಿಗೆ ನೋಡಲು ದಾವಣಗೆರೆಯ ಜನ ಕಿಕ್ಕಿರಿದು ತುಂಬಿದ್ದರು.
ಮಸ್ಕೋದಲ್ಲಿ ಈ ದಷ್ಕೋವ್ ಅವರನ್ನು ಮತ್ತೆ ನೋಡುವ ಅವಕಾಶ ಲಭಿಸಿತು. ಆಗ ಅವರು ಭಾಷಾಂತರ ಇಲಾಖೆಯ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಭಾಷಾಂತರ ವಿಭಾಗಕ್ಕೆ ಸೇರುವ ಮನಸ್ಸಿದೆಯಾ ಎಂದು ಕೇಳಿದರು. ನಾನು ಆ ೧೯೮೩ರ ಆ ಸಂದರ್ಭದಲ್ಲಿ ಬೆಂಗಳೂರಲ್ಲಿ ಅನೇಕ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದೆ. ಅವುಗಳಲ್ಲಿ ‘ಬಂಡಾಯ’, ‘ದಲಿತ ಸಂಘರ್ಷ ಸಮಿತಿ’, ‘ಸಿ.ಪಿ.ಐ.’, ‘ಸಮುದಾಯ’ ಮುಂತಾದವುಗಳು ಮುಖ್ಯವಾಗಿದ್ದವು. ಹೀಗಾಗಿ ಉತ್ಸಾಹ ತೋರಿಸಲಿಲ್ಲ.
ಸೋವಿಯತ್ ದೇಶದ ಭಾರೀ ಕೈಗಾರಿಕೆಗಳ ಕಾರ್ಖಾನೆ ನಿರ್ಮಾಣ ಇಲಾಖೆಯ ಸಚಿವ ನಿಕೊಲಾಯ್ ಗೋಲ್ಡಿನ್ ಅವರನ್ನು ಮರುದಿನ ಭೇಟಿಯಾಗುವುದಿತ್ತು. ಅದು ಅವಿಸ್ಮರಣೀಯ ಭೇಟಿಯಾಗಿತ್ತು. ಗೋಲ್ಡಿನ್ ಪ್ರಸಿದ್ಧ ಎಂಜಿನಿಯರ್ ಕೂಡ ಆಗಿದ್ದರು. ಈಗ ಮಧ್ಯಪ್ರದೇಶದಿಂದ ಬೇರ್ಪಟ್ಟು ಛತ್ತೀಸಗಡ್ ರಾಜ್ಯವಾಗಿದೆ. ಛತ್ತೀಸಗಢ ರಾಜಧಾನಿ ರಾಯಪುರ ಬಳಿ ಇರುವ ಭಿಲಾಯಿ ಸ್ಟೀಲ್ ಪ್ಲಾಂಟ್ ನಿರ್ಮಾಣದ ಮುಖ್ಯ ಎಂಜಿನಿಯರ್ ಆಗಿ ಅವರು ಕಾರ್ಯನಿರ್ವಹಿಸಿದ್ದರಿಂದ ಅವರಿಗೆ ಭಾರತದ ಬಗ್ಗೆ ವಿಶೇಷ ಪ್ರೀತಿ ಇತ್ತು.
ಸೋವಿಯತ್ ಸಹಕಾರದಿಂದ ೧೯೫೯ರಲ್ಲಿ ಪ್ರಾರಂಭವಾದ ಈ ಉಕ್ಕಿನ ಕಾರ್ಖಾನೆ ಏಷ್ಯಾದಲ್ಲೇ ದೊಡ್ಡದು. ಇಂಥ ಒಂದು ಬೃಹತ್ ಯೋಜನೆಯನ್ನು ಅಂದಿನ ಸೋವಿಯತ್ ದೇಶ ಹೊರದೇಶದಲ್ಲಿ ಪ್ರಾರಂಭಿಸಿದ್ದು ಇದೇ ಮೊದಲು. ಗೋಲ್ಡಿನ್ ಎಂಥ ಅದ್ಭುತ ಎಂಜಿನಿಯರ್ ಅಂದರೆ, ಅವರು ಬೆಳಿಗ್ಗೆ ೧೦ ಗಂಟೆಗೆ ಪ್ಲಾಂಟ್ ಸ್ಥಳಕ್ಕೆ ಬಂದರೆ ಮಧ್ಯರಾತ್ರಿಯ ವರೆಗೂ ಕಾರ್ಯಮಗ್ನರಾಗಿರುತ್ತಿದ್ದರು. ಮೂರು ಪಾಳಿಗಳಲ್ಲಿ ಕೆಲಸಗಾರರು ಕೆಲಸ ನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಈ ನಿರ್ಮಾಣ ಕಾರ್ಯದಲ್ಲಿ ೬೭,೦೦೦ ಭಾರತೀಯರು ಮತ್ತು ೬೫೦ ಸೋವಿಯತ್ ತಜ್ಞರು ತೊಡಗಿದ್ದರು. ಆ ಕಾಲದಲ್ಲಿ ಇಷ್ಟೊಂದು ಜನ ಕೆಲಸಗಾರರನ್ನು ಮತ್ತು ತಜ್ಞರನ್ನು ಸಂಭಾಳಿಸಿದ ಈ ಮುಖ್ಯ ಎಂಜಿನಿಯರ್ ಗೋಲ್ಡಿನ್ ಅವರ ಸಂಬಳ ಕೇವಲ ೬೫೦ ರೂಪಾಯಿ ಇತ್ತು! ಅವರು ಈ ಕುರಿತು ಯೋಚನೆ ಮಾಡಲೇ ಇಲ್ಲ. ಅವರ ಕೈ ಕೆಳಗಿನ ಸೋವಿಯತ್ ತಜ್ಞ ಎಂಜಿನಿಯರುಗಳ ಸಂಬಳ ಇನ್ನೂ ಕಡಿಮೆ. ಅವರಿಗೆಲ್ಲ ಸಮಜಾಯಿಷಿ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದ ಅವರ ವಿಶಾಲ ಮನೋಭಾವ, ವಸಾಹತುಶಾಹಿಯಿಂದ ಬಿಡುಗಡೆಗೊಂಡ ಭಾರತದ ಬಗ್ಗೆ ಇರುವ ಪ್ರೀತಿಯನ್ನು ಸೂಚಿಸುತ್ತದೆ. ಅವರ ಕಾರ್ಯಕ್ಷಮತೆಯನ್ನು ಪ್ರಧಾನಿ ನೆಹರೂ ಬಹುವಾಗಿ ಮೆಚ್ಚಿಕೊಂಡಿದ್ದರು.
ಆರಂಭದಲ್ಲಿ ೧೦ ಲಕ್ಷ ಟನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಈಗ ಅದು ಪ್ರತಿವರ್ಷ ೩೦ ಲಕ್ಷ ಟನ್ ಉಕ್ಕು ಉತ್ಪಾದಿಸುತ್ತಿದೆ. ೩೦ ಸಾವಿರ ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ. ಭಾರತದ ಅಭಿವೃದ್ಧಿಯಲ್ಲಿ ಬಿಲಾಯಿ ಉಕ್ಕಿನ ಕಾರ್ಖಾನೆಯ ಪಾತ್ರ ಬಹಳ ಹಿರಿದಾಗಿದೆ. ಈ ಬೃಹತ್ ಉಕ್ಕಿನ ಕಾರ್ಖಾನೆ ನಿರ್ಮಾಣಕ್ಕೆ ಆಗಿನ ಸೋವಿಯತ್ ದೇಶದ ಮುಖ್ಯಸ್ಥರಾಗಿದ್ದ ಖ್ರುಶ್ಚೇವ್ ತೋರಿದ ಸಹಕಾರ ಅವಿಸ್ಮರಣೀಯವಾದದು. ಅವರು ಸ್ವತಃ ಭಿಲಾಯಿಗೆ ಬಂದು ನಿರ್ಮಾಣ ಹಂತದಲ್ಲಿದ್ದ ಈ ಬೃಹತ್ ಉಕ್ಕಿನ ಕಾರ್ಖಾನೆಯ ಪರಿವೀಕ್ಷಣೆ ಮಾಡಿದರು. ನೆಹರೂ ಅವರ ವ್ಯಕ್ತಿತ್ವವೂ ಈ ಸೋವಿಯತ್ ಸಹಕಾರಕ್ಕೆ ಕಾರಣವಾಗಿತ್ತು.
ಮಾಸ್ಕೋದಲ್ಲಿ ಗೋಲ್ಡಿನ್ ಭೇಟಿ ಸಮಯದಲ್ಲಿ ನಮ್ಮ ಜೊತೆ ಇದ್ದವಳು ಇತಿಹಾಸದ ಸಂಶೋಧನಾ ವಿದ್ಯಾರ್ಥಿನಿ. ಪ್ರತಿಭಾವಂತಳೂ ಸುಂದರಿಯೂ ಆಗಿದ್ದ ಅವಳಿಗೆ ಒಂದಿಷ್ಟು ತುಂಟಾಟದ ಸ್ವಭಾವವಿತ್ತು. ಅವಳು ನಮ್ಮನ್ನು ಗೋಲ್ಡಿನ್ ಬಳಿ ಕರೆದುಕೊಂಡು ಹೋದಳು. ಆ ವೇಳೆಗಾಗಲೇ ಅನೇಕ ದೇಶಗಳ ಡೆಲಿಗೇಷನ್ ಪ್ರತಿನಿದಿಗಳು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಆದರೆ ಭಾರತೀಯರಾದ ನಮಗೆ ವಿಶೇಷ ಅನುಮತಿ ಸಿಕ್ಕಿತು.
ಗೋಲ್ಡಿನ್ ಚೇಂಬರಲ್ಲಿ ಹೋದ ಕೂಡಲೆ ಅವರು ಎದ್ದು ನಿಂತು ನಮ್ಮನ್ನು ಸ್ವಾಗತಿಸಿದರು. ‘ಮೈ ಆವಾರ ಹ್ಞೂ’ ಹಾಡು ಹೇಳಿದರು. ನಾವೆಲ್ಲ ಚಪ್ಪಾಳೆ ತಟ್ಟಿದೆವು. ಆ ಸಂದರ್ಭದಲ್ಲಿ ಅವರು ಅಂಡರ್ ಗ್ರೌಂಡ್ ನಗರವೊಂದರ ನಿರ್ಮಾಣ ಯೋಜನೆಯಲ್ಲಿ ತೊಡಗಿದ್ದರು. ಆ ಅವಿಶ್ರಾಂತ ಮನುಷ್ಯ ನಮ್ಮ ಜೊತೆ ಖುಷಿಯಿಂದ ಕಳೆದ ಕ್ಷಣಗಳು ಎಂದೂ ಮರೆಯಲಾರದಂಥವು.
ಗೋಲ್ಡಿನ್ ಅವರು ಭಿಲಾಯಿಯಲ್ಲಿ ಸ್ಟೀಲ್ ಪ್ಲಾಂಟ್ ನಿರ್ಮಾಣ ಸಮಯದಲ್ಲಿ ನಡೆದ ಒಂದು ಘಟನೆಯನ್ನು ಹೇಳಿದರು. ಮುಖ್ಯ ಯಂತ್ರಕ್ಕೆ ದೊಡ್ಡದಾದ ಚಕ್ರವನ್ನು ಕೂಡಿಸಬೇಕಿತ್ತು. ರಷ್ಯದ ಮತ್ತು ಭಾರತದ ಎಲ್ಲ ಎಂಜಿನಿಯರ್‌ಗಳು ದಿನವಿಡೀ ಪ್ರಯತ್ನ ಮಾಡಿದರೂ ಆಗಲಿಲ್ಲ. ಕೆಲಸಗಾರರು ನಮಗೂ ಒಂದು ಛಾನ್ಸ್ ಕೊಡಿ ಎಂದು ಕೇಳಿದರು. ಇಷ್ಟೊಂದು ನುರಿತ ಎಂಜಿನಿಯರುಗಳಿಗೇ ಆಗಲಿಲ್ಲ. ನಿಮಗೆ ಹೇಗೆ ಸಾಧ್ಯ ಎಂದು ಕೇಳಿದೆ. ಅವರು ಮತ್ತೆ ಮನವಿ ಮಾಡಿದರು. ಆಯ್ತು ಎಂದೆ. ಅವರು ಆ ದೈತ್ಯ ಚಕ್ರವನ್ನು ಕೂಡಿಸಿದರು. ನನಗೆ ಆಶ್ಚರ್ಯವೆನಿಸಿತು. ಅವರಿಗೆ ‘ಅದು ಹೇಗೆ ಕೂಡಿಸಿದಿರಿ’ ಎಂದು ಕೇಳಿದೆ. ಎಂಜಿನಿಯರುಗಳು ಮಾಡಿದ ಎಲ್ಲ ಪ್ರಯತ್ನಗಳನ್ನು ಬಿಟ್ಟು ಬೇರೊಂದು ರೀತಿಯಲ್ಲಿ ಚಿಂತಿಸಿ ನಿರ್ಧಾರ ಕೈಗೊಂಡೆವು ಎಂದು ಅವರು ಹೇಳಿದರು. ಕಾರ್ಮಿಕರ ಅನುಭವ ಜ್ಞಾನ ಬಹಳ ಮಹತ್ವದ್ದು ಎಂದರು. ಆ ನಿರಕ್ಷರಿ ಕೆಲಸಗಾರರು ರಷ್ಯನ್ ಎಂಜಿನಿಯರುಗಳ ಜೊತೆ ನಿರಂತರವಾಗಿ ಕೆಲಸ ಮಾಡುವ ಮೂಲಕ ಸರಾಗವಾಗಿ ರಷ್ಯನ್ ಭಾಷೆಯಲ್ಲೇ ವ್ಯವಹರಿಸುತ್ತಿದ್ದರು ಎಂಬುದನ್ನೂ ಅವರು ತಿಳಿಸಿದರು.
೧೯೦೮ರಲ್ಲಿ ಬೆಲ್ಜಿಯಮ್‌ನ ವಸಾಹತು ದೇಶವಾಗಿದ್ದ ಆಫ್ರಿಕಾ ಖಂಡದ ಕಾಂಗೊ ೧೯೬೦ರಲ್ಲಿ ಸ್ವತಂತ್ರöವಾಯಿತು. ಸ್ವಾತಂತ್ರ್ಯ ಹೋರಾಟಗಾರ ಪ್ಯಾಟ್ರಿಕ್ ಲುಮುಂಬಾ (೩೫) ಮೊದಲ ಪ್ರಧಾನಿಯಾದರು. ಆದರೆ ೧೯೬೧ರಲ್ಲಿ ದುಷ್ಕರ್ಮಿಗಳು ಅವರ ಕೊಲೆ ಮಾಡಿದರು. ಸೋವಿಯತ್ ಸರ್ಕಾರ ಪ್ಯಾಟ್ರಿಕ್ ಲುಮುಂಬಾ ವಿಶ್ವವಿದ್ಯಾಲಯ ಆರಂಭಿಸಿತು. ಜಗತ್ತಿನಾದ್ಯಂತ ಸ್ವತಂತ್ರಗೊಂಡ ವಸಾಹತುಶಾಹಿ ಮತ್ತು ಇತರೆ ಬಡದೇಶಗಳ ಯುವಜನಾಂಗಕ್ಕೆ ಈ ವಿಶ್ವವಿದ್ಯಾಲಯದಲ್ಲಿ ಉಚಿತ ಶಿಕ್ಷಣ ಕೊಡುವ ವ್ಯವಸ್ಥೆಯಾಯಿತು. ಕಮ್ಯುನಿಸ್ಟ್ ಪಕ್ಷದ ಹೋರಾಟಗಾರರ ಮಕ್ಕಳಿಗೂ ಇಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಯಿತು. ಭಾರತದ ಸಹಸ್ರ ಸಹಸ್ರ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದ ಪ್ರಯೋಜನ ಪಡೆದಿದ್ದಾರೆ. (ಆ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಮುಂದೆ ಸಂಶೋಧನಾ ವಿದ್ಯಾರ್ಥಿಯಾಗಿ ಬಸವಣ್ಣನವರ ಕುರಿತು ಸಂಶೋಧನೆ ಮಾಡುತ್ತಿದ್ದ ಎಂದು ನನಗಿಂತ ಮೊದಲೇ ಇಸ್ಕಸ್ ಗುಡ್‌ವಿಲ್ ಡೆಲಿಗೇಷನ್‌ನಲ್ಲಿ ಸೋವಿಯತ್ ದೇಶಕ್ಕೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ನನಗೆ ತಿಳಿಸಿದ್ದರು.)
(ಮುಂದುವರಿಯುವುದು)
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.