ಎಲ್ಲರ ಒಕ್ಕೊರಲ ಒತ್ತಾಯಕ್ಕೆ ಅಪ್ಪನೂ ಇಲ್ಲವೆನ್ನಲಾರದೇ ನಡುಅಂಗಳದಲ್ಲಿಯೇ ಚಾಪೆ ಹಾಸಿ, ಮದ್ದಲೆಯೊಂದಿಗೆ ಸಜ್ಜಾಗಿಯೇಬಿಟ್ಟರು. ಸುತ್ತ ಮುತ್ತಿದ ನೀರವ ಮೌನದ ನಡುವೆ ಅಪ್ಪ ಮದ್ದಲೆ ಬಡಿಯುತ್ತಾ, ದೊಡ್ಡ ದನಿಯಲ್ಲಿ “ವಿಘ್ನೇಶಾಯ ಸರಸ್ವತೈ ಪರ‍್ವತೈ ಗುರುವೇ ನಮಃ” ಎಂದು ಗಣಪತಿ ಪೂಜೆಯೊಂದಿಗೆ ಆರಂಭಿಸಿ, “ಸರಸಿಜಾಂಬಕಿಯರೇ ಕೇಳಿ” ಎಂಬ ಭೀಷ್ಮಪರ್ವದ ನಾಲ್ಕು ಹಾಡುಗಳನ್ನು ಹಾಡಿ ಇನ್ನು ಸಾಕು ಎಂಬಂತೆ ಕೈಸನ್ನೆ ಮಾಡಿದರು. ಇದನ್ನೇ ಕಾಯುತ್ತಿದ್ದ ಸಾಹೇಬರು ಟಕ್ ಎಂದು ರೆಕಾರ್ಡಿಂಗನ್ನು ಬಂದ್ ಮಾಡಿದರು.
ಟೇಪ್ ರೆಕಾರ್ಡೆರ್ ವಿಥ್ ರೇಡಿಯೋ ಕುರಿತ ಸುಧಾ ಆಡುಕಳ ಬರಹ ನಿಮ್ಮ ಓದಿಗೆ
ಪ್ರಾಥಮಿಕ ಶಾಲೆಯೆಂದು ಕರೆಯುವ, ಒಂದೇ ಕೋಣೆಯಿರುವ ಕಟ್ಟಡದಲ್ಲಿ ಶಿಕ್ಷಕರು ಬರಲಿಲ್ಲವೆಂದರೆ ನಾವು ಸುದ್ದಿಯ ಪೊಟ್ಟಣ ಬಿಚ್ಚಿ ಕುಳಿತುಕೊಳ್ಳುತ್ತಿದ್ದೆವು. ಹಾಗೆ ಕುಳಿತಾಗೊಮ್ಮೆ ನಮ್ಮೂರಿನ ಸ್ವಲ್ಪ ಅನುಕೂಲಸ್ಥರ ಮನೆಯ ಹುಡುಗನೊಬ್ಬ, “ಗುಜರಾತಿನಲ್ಲಿ ಎಂಥಾ ಬಿರುಗಾಳಿಯಂತೆ ಗೊತ್ತಾ?” ಎಂದ. ಆ ಕ್ಷಣದಲ್ಲಿ ನಾನು, ನನ್ನಂಥವರೆಲ್ಲ ಅಚ್ಚರಿಯ ಕಡಲಲ್ಲಿ ಮುಳುಗಿ, ಬಿಟ್ಟ ಬಾಯಿ ಬಿಟ್ಟುಕೊಂಡು ಅವನನ್ನು ನೋಡುತ್ತಾ, “ನಿನಗೆ ಯಾರು ಹೇಳಿದರು?” ಎಂದು ಕೇಳಿದೆವು. ಬಹುಶಃ ಗುಜರಾತಿನಲ್ಲಿರುವ ಯಾರೋ ಬಂಧುಗಳು ಅವನ ಮನೆಗೆ ಬಂದಿದ್ದಾರೆಂದು ನಮ್ಮ ಅನಿಸಿಕೆಯಾಗಿತ್ತು. ಅದಕ್ಕವನು ನಗುತ್ತಾ, “ಯಾರು ಯಾಕೆ ಹೇಳುತ್ತಾರೆ? ನಿನ್ನೆ ರಾತ್ರಿ ರೇಡಿಯೋ ವಾರ್ತೆಯಲ್ಲಿ ಹೇಳಿದರು.” ಎಂದ. ಆಗಲೇ ನಮಗೆ ರೇಡಿಯೋ ಎಂಬ ಒಂದು ಪೆಟ್ಟಿಗೆಯಿದೆ, ಅದರಲ್ಲಿ ಜಗದ ಎಲ್ಲ ಸುದ್ದಿಗಳೂ ಬರುತ್ತವೆ ಎಂದೆಲ್ಲ ತಿಳಿದದ್ದು. ಆ ವಾರವಿಡೀ ಬಿಡುವು ಸಿಕ್ಕಿದಾಗಲೆಲ್ಲ ನಾವು ಅವನ ಸುತ್ತಲೂ ಸುತ್ತುಗಟ್ಟಿ ಆ ಮಾಯಾಪೆಟ್ಟಿಗೆಯ ಬಗ್ಗೆ ಕೇಳಿದ್ದೇ ಕೇಳಿದ್ದು. ಅವನೂ ಇದೊಂದು ಸದವಕಾಶವೆಂದು ರೇಡಿಯೋದಲ್ಲಿ ಏನೆಲ್ಲ ಬರುತ್ತದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟು ನಮ್ಮೆದುರು ಹೀರೋವಾಗಿಬಿಟ್ಟಿದ್ದ. ಅದರಲ್ಲಿ ಬರುವ ಹಾಡು, ಚಿತ್ರಗೀತೆ, ರೈತರಿಗೆ ಸಲಹೆ, ವಾರ್ತೆ, ಪ್ರದೇಶ ಸಮಾಚಾರ, ಮಕ್ಕಳ ಕಾರ್ಯಕ್ರಮ ಹೀಗೆ ಅವನ ಪಟ್ಟಿ ಬೆಳೆಯುತ್ತಲೇ ಇತ್ತು. ಅದು ಹೇಗಿರುತ್ತದೆಯೆಂದು ಪದೇ ಪದೇ ಕೇಳಿದ ನಮ್ಮ ಕುತೂಹಲವನ್ನು ತಣಿಸಲು ತನ್ನ ಸ್ಲೇಟಿನ ಮೇಲೆ ದೊಡ್ಡದೊಂದು ಪೆಟ್ಟಿಗೆಯನ್ನು ಬಿಡಿಸಿ ತೋರಿಸಿದ. ಅದರಲ್ಲಿರುವ ಒಂದು ಬದಿಯನ್ನು ರೇಡಿಯೋ ಎಂದೂ, ಇನ್ನೊಂದು ಬದಿಯನ್ನು ಟೇಪ್‌ರೆಕಾರ್ಡರ್ ಎಂದೂ ಹೇಳಿದ. ಮುಂದಿನ ವಾರವಿಡೀ ಅವನು ನಮಗೆ ಟೇಪ್ ರೆಕಾರ್ಡರ್ ಹೇಗಿರುತ್ತದೆ ಎಂಬ ಬಗ್ಗೆ ಹೇಳಿದನೆಂಬುದು ಯಾರಿಗಾದರೂ ಅರ್ಥವಾದೀತು!
ಹೀಗೆ ಅವನ ವಿವರಣೆ ಕೇಳಿದ ನನಗೆ ಅವೆರಡನ್ನೂ ನೋಡಬೇಕೆಂಬ ಆಸೆಯಾಯಿತೆ ಹೊರತು ಮನೆಗೆ ತರಬೇಕೆಂಬ ಕನಸೂ ಬೀಳಲಿಲ್ಲ. ಸುತ್ತಮುತ್ತಲಿನವರ ಮನೆಗೆಲ್ಲ ವಿದ್ಯುತ್ ಸಂಪರ್ಕ ಬಂದಿದ್ದರೂ, ಗೋಡೆ ತುಂಬಾ ನೂರೆಂಟು ತೂತುಗಳು ಮತ್ತು ಸೋರುವ ಮಾಡಿರುವ ನಮ್ಮ ಮನೆಗೆ ವಿದ್ಯುತ್ ಬೇಡವೇ ಬೇಡವೆಂದು ಅಮ್ಮ ಹಠ ಹಿಡಿದಿದ್ದಳು. ಮನೆಯೊಳಗಿನ ವಿಕಾರಗಳೆಲ್ಲ ಆ ಪ್ರಖರ ಬೆಳಕಿನಲ್ಲಿ ಎದ್ದುಕಾಣುತ್ತವೆಯೆಂಬುದು ಅವಳ ವಾದ. ರೇಡಿಯೋ, ಟೇಪರೆಕಾರ್ಡರ್‌ಗಳಿಗೆ ಬ್ಯಾಟರಿ ಹಾಕಿದರೂ ಆದೀತು, ಆದರೆ ಅಂಥದೊಂದು ಲಕ್ಸುರಿಯನ್ನು ಅಮ್ಮ ಖಂಡಿತವಾಗಿಯೂ ಮನೆಯೊಳಕ್ಕೆ ಬಿಡಳು ಎಂಬುದು ಖಚಿತವಿತ್ತು. ಹೀಗೆ ಕಿರಿಯ ಪ್ರಾಥಮಿಕ ಶಾಲೆ ಮುಗಿದು ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದಾಗ ಇಂಗ್ಲಿಷ್ ಎಂಬ ಕಂಡು ಕೇಳರಿಯದ ಭಾಷೆಯೊಂದು ಪುಸ್ತಕವಾಗಿ ಬಂದಿತು. ಅದನ್ನು ಕಲಿಸುವ ಮಾಸ್ಟ್ರು ಚಂದ ಇಂಗ್ಲಿಷ್ ಮಾತಾಡಬೇಕು ಎಂದಾದರೆ ರೇಡಿಯೋದಲ್ಲಿ ಬರುವ ಇಂಗ್ಲಿಷ್ ವಾರ್ತೆಗಳನ್ನು ಕೇಳಬೇಕು ಎಂದು ಪದೇ, ಪದೇ ಹೇಳಿ ನಮ್ಮೊಳಗೆ ರೇಡಿಯೋ ಕನಸನ್ನು ಬರುವಂತೆ ನೋಡಿಕೊಂಡಿದ್ದರು. ಹೀಗಿರುವಾಗಲೇ ನಮ್ಮ ಕೇರಿಯಲ್ಲೊಂದು ಟೇಪ್ ರೆಕಾರ್ಡರ್ ಕ್ರಾಂತಿ ನಡೆದುಹೋಗಿತ್ತು.
ನಮ್ಮೂರಿನಿಂದ ಆರುಮೈಲಿಯಾಚೆಗೆ ಒಂದು ಮುಸ್ಲಿಂಮರ ಕೇರಿಯಿದ್ದು, ಅಲ್ಲಿನ ಕೆಲವರು ದುಡಿಯಲೆಂದು ದುಬಾಯಿಗೆ ಹೋಗುತ್ತಿದ್ದರು. ಅವರಲ್ಲಿ ಇಬ್ಬರು, ಒಬ್ಬರು ದೊಡ್ಡ ಸಾಹೇಬರು ಮತ್ತು ಇನ್ನೊಬ್ಬರು ಸಣ್ಣ ಸಾಹೇಬರು ನಮ್ಮೂರಿನ ಎಲ್ಲರಿಗೂ ಆತ್ಮೀಯರಾಗಿದ್ದರು. ಹಾಗೆ ಅವರು ಊರಿಗೆ ಬಂದಾಗಲೆಲ್ಲ ನಮ್ಮ ಕೇರಿಗೂ ಬಂದು ನಾಲ್ಕಾರು ದಿನ ಉಳಿದು, ಊರ ಪಕ್ಕದಲ್ಲಿರುವ ಕಾಡಿನಲ್ಲಿ ಶಿಕಾರಿ ಮಾಡಿ ಹೋಗುವುದು ವಾಡಿಕೆಯಾಗಿತ್ತು. ಹೀಗೆ ಬರುವಾಗ ಅವರು ದುಬಾಯಿಯಿಂದ ತಂದ ಚಂದಚಂದದ ವಸ್ತುಗಳನ್ನು ಜನರಿಗೆ ತೋರಿಸಲೆಂದು ಅವರು ತರುತ್ತಿದ್ದರು. ಕೇರಿಯ ನಡುವಿರುವ ಮನೆಯ ಅಂಗಳದಲ್ಲಿ ಇವುಗಳನ್ನೆಲ್ಲ ತೆಗೆದು ತೋರಿಸುತ್ತಿದ್ದರೆ, ಜನರೆಲ್ಲಾ ಸುತ್ತಲೂ ನಿಂತು ಜಾದೂ ನೋಡುವಂತೆ ನೋಡುತ್ತಿದ್ದರು. ಆಟಿಗೆಯೆಂದರೆ ಜಾತ್ರೆಯಲ್ಲಿ ಸಿಗುವ ಪುಗ್ಗೆ ಮಾತ್ರವೇ ಎಂದು ತಿಳಿದಿದ್ದ ನಮಗೆಲ್ಲಾ ಅವರು ತರುವ ಆಟಿಗೆಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಬಾಯಲ್ಲಿರುವ ನಿಪ್ಪಲ್ ತೆಗೆದರೆ ಸಾಕು, ಉಂಙೆ ಎಂದು ಕೂಗುವ ಮಗು, ಕೀ ಕೊಟ್ಟರೆ ತನ್ನ ಮುಂದಿರುವ ಡೋಲನ್ನು ಬಡಿಯುವ ಮಂಗ, ತಡೆ ಸಿಕ್ಕಿದೊಡನೇ ತಾನೇ ತಾನಾಗಿ ದಿಕ್ಕು ಬದಲಾಯಿಸಿ ಓಡುವ ಕಾರು, ನಾಣ್ಯವಿಟ್ಟರೆ ಟಕ್ಕನೆ ಹೊರಬಂದು ಕೈಚಾಚಿ ಒಳಗೆಳೆದುಕೊಳ್ಳುವ ನಾಯಿ ಹೀಗೆ ಅಚ್ಚರಿಯ ಲೋಕವೊಂದನ್ನು ನಮ್ಮೆದುರು ತೆರೆದಿಡುತ್ತಿದ್ದರು.
ಇಂತಿಪ್ಪ ಸಾಹೇಬರಿಬ್ಬರು ಈ ಸಲ ಬರುವಾಗ ಅದೇನು ಸೋಜಿಗವೋ? ಟೇಪ್ ರೆಕಾರ್ಡರ್ ಎಂಬ ಮಾಯಾಪೆಟ್ಟಿಗೆಯನ್ನು ತಂದಿದ್ದರು. ಅದರೊಂದಿಗೆ ಒಂದು ಖಾಲಿ ಕ್ಯಾಸೆಟ್ ಕೂಡ ತಂದು ಎಲ್ಲರಲ್ಲಿಯೂ ಮಾತಾಡಲು ಹೇಳಿ, ಅವರ ಮಾತನ್ನು ಅವರಿಗೇ ಕೇಳುವಂತೆ ಮಾಡಿದರು. ಒಮ್ಮೆ ತಮ್ಮ ಮಾತು ಪೆಟ್ಟಿಗೆಯಿಂದ ಮತ್ತೆ ಕೇಳಿದ್ದೇ ತಡ, ಎಲ್ಲರೂ ತಮ್ಮನ್ನೇ ಪೆಟ್ಟಿಗೆಯೊಳಗೆ ತುಂಬಿದ್ದಾರೋ ಎಂಬಂತೆ ಸ್ತಬ್ಧರಾಗಿ ನಿಂತುಬಿಟ್ಟರು. ಹೀಗಿರುವ ಹೊತ್ತಿನಲ್ಲಿಯೇ ಮಂಜು ಎಂಬ ನಮ್ಮೂರ ಪ್ರಳಯಾಂತಕನಿಗೆ ಈ ಟೇಪಿನಲ್ಲಿ ನನ್ನ ಅಪ್ಪನ ಯಕ್ಷಗಾನದ ಹಾಡುಗಳನ್ನು ಹಾಡಿಸಬೇಕೆಂಬ ಯೋಜನೆ ಹೊಳೆಯಿತು. ಅವನು ಹೇಳಿದೊಡನೇ ಎಲ್ಲರ ಒಕ್ಕೊರಲ ಒತ್ತಾಯಕ್ಕೆ ಅಪ್ಪನೂ ಇಲ್ಲವೆನ್ನಲಾರದೇ ನಡುಅಂಗಳದಲ್ಲಿಯೇ ಚಾಪೆ ಹಾಸಿ, ಮದ್ದಲೆಯೊಂದಿಗೆ ಸಜ್ಜಾಗಿಯೇಬಿಟ್ಟರು. ಸುತ್ತ ಮುತ್ತಿದ ನೀರವ ಮೌನದ ನಡುವೆ ಅಪ್ಪ ಮದ್ದಲೆ ಬಡಿಯುತ್ತಾ, ದೊಡ್ಡ ದನಿಯಲ್ಲಿ “ವಿಘ್ನೇಶಾಯ ಸರಸ್ವತೈ ಪರ‍್ವತೈ ಗುರುವೇ ನಮಃ” ಎಂದು ಗಣಪತಿ ಪೂಜೆಯೊಂದಿಗೆ ಆರಂಭಿಸಿ, “ಸರಸಿಜಾಂಬಕಿಯರೇ ಕೇಳಿ” ಎಂಬ ಭೀಷ್ಮಪರ್ವದ ನಾಲ್ಕು ಹಾಡುಗಳನ್ನು ಹಾಡಿ ಇನ್ನು ಸಾಕು ಎಂಬಂತೆ ಕೈಸನ್ನೆ ಮಾಡಿದರು. ಇದನ್ನೇ ಕಾಯುತ್ತಿದ್ದ ಸಾಹೇಬರು ಟಕ್ ಎಂದು ರೆಕಾರ್ಡಿಂಗನ್ನು ಬಂದ್ ಮಾಡಿದರು. ಟೇಪ್ ರೆಕಾರ್ಡರಿನಲ್ಲಿ ಅಪ್ಪನ ಹಾಡು ಕೇಳಿಸಿದಾಗ ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಈ ನಡುವೆ ತಾನೂ ಹಾಡುವೆನೆಂದು ಹಠಹಿಡಿದ ಅಕ್ಕ ತಾನು ಹೊಸದಾಗಿ ಶಾಲೆಯಲ್ಲಿ ಕಲಿತ ‘ಕನಕನಿಗೊಲಿದಾ ಗೋವಿಂದ, ನಮ್ಮನು ಕಾಯೋ ಮುಕುಂದ’ ಎಂಬ ಹಾಡನ್ನು ಹಾಡಿ ಸಾಬರ ಟೇಪಿನೊಳಗೆ ಕನಕನಿಗೊಲಿದ ಗೋವಿಂದನನ್ನು ತುರುಕಿಬಿಟ್ಟಳು.
ರೇಡಿಯೋ, ಟೇಪರೆಕಾರ್ಡರ್‌ಗಳಿಗೆ ಬ್ಯಾಟರಿ ಹಾಕಿದರೂ ಆದೀತು, ಆದರೆ ಅಂಥದೊಂದು ಲಕ್ಸುರಿಯನ್ನು ಅಮ್ಮ ಖಂಡಿತವಾಗಿಯೂ ಮನೆಯೊಳಕ್ಕೆ ಬಿಡಳು ಎಂಬುದು ಖಚಿತವಿತ್ತು. ಹೀಗೆ ಕಿರಿಯ ಪ್ರಾಥಮಿಕ ಶಾಲೆ ಮುಗಿದು ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದಾಗ ಇಂಗ್ಲಿಷ್ ಎಂಬ ಕಂಡು ಕೇಳರಿಯದ ಭಾಷೆಯೊಂದು ಪುಸ್ತಕವಾಗಿ ಬಂದಿತು. ಅದನ್ನು ಕಲಿಸುವ ಮಾಸ್ಟ್ರು ಚಂದ ಇಂಗ್ಲಿಷ್ ಮಾತಾಡಬೇಕು ಎಂದಾದರೆ ರೇಡಿಯೋದಲ್ಲಿ ಬರುವ ಇಂಗ್ಲಿಷ್ ವಾರ್ತೆಗಳನ್ನು ಕೇಳಬೇಕು ಎಂದು ಪದೇ, ಪದೇ ಹೇಳಿ ನಮ್ಮೊಳಗೆ ರೇಡಿಯೋ ಕನಸನ್ನು ಬರುವಂತೆ ನೋಡಿಕೊಂಡಿದ್ದರು.
ಇವೆಲ್ಲವೂ ಮುಗಿದು ಸಾಬರು ಊರಿನಿಂದ ಮತ್ತೆ ದುಬೈಗೆ ಹೊರಟರೂ ಅಪ್ಪನ ತಲೆಯೊಳಗೆ ಅವರ ಟೇಪು ಮಾತ್ರ ಹಾಡುತ್ತಲೇ ಇತ್ತು. ಅಮ್ಮ ಖುಶಿಯಿಂದಿರುವ ಸಂಜೆಯಲ್ಲಿ ಮೆಲ್ಲಗೆ ಟೇಪು ತೆಗೆದುಕೊಳ್ಳುವ ವಿಷಯವನ್ನು ಪ್ರಸ್ತಾಪಿಸಿ ಉಗಿಸಿಕೊಂಡಿದ್ದರು. ಯಕ್ಷಗಾನದ ಪರಮಪ್ರಿಯನಾದ ಅಪ್ಪ ಕೃಷಿ ಕೆಲಸವೆಲ್ಲಾ ಮುಗಿದ ಸಂಜೆ ಬೇಸರವಾದರೆ ಮನೆಯಿಂದ ಆರುಮೈಲಿ ದೂರವಿರುವ ಮಾವಜ್ಜನ ಮನೆಗೆ ಹೋಗಿ ಅವರ ಮನೆಯ ಟೇಪಿನಲ್ಲಿ ಆಟ ಕೇಳಿ ಅಲ್ಲಿಯೇ ಉಳಿದು ಮರುದಿನ ಬರುತ್ತಿದ್ದುದುಂಟು. ಇಲ್ಲಿಂದ ಅಲ್ಲಿಗೆ ಹೋಗಿ, ಅವರ ಮರ್ಜಿಗೆ ಕಾದು ಯಕ್ಷಗಾನ ಕೇಳಿ ಬರುವುದೆಲ್ಲ ಬರಿಯ ರಗಳೆ ಎಂದು ಅಪ್ಪನಿಗೆ ತೀವ್ರವಾಗಿ ಅನಿಸಿ, ಟೇಪ್ ರಿಕಾರ್ಡರ್ ಇಡಲೆಂದೇ ಪೆಟ್ಟಿಗೆಯೊಂದನ್ನು ಮಣ್ಣಿನ ಗೋಡೆಗೆ ಕಷ್ಟಪಟ್ಟು ಕೂಡಿಸಿ, ಟೇಪರೆಕಾರ್ಡರ್ ಬರುವ ಭರವಸೆಯನ್ನು ನಮ್ಮೊಳಗೆ ಮೂಡಿಸಿಬಿಟ್ಟರು. ಹೊಸದು ಕೊಳ್ಳಲು ಹೋದರೆ ದುಬಾರಿಯೆಂದು ಹಳೆಯ ಟೇಪಿನ ಬೇಟೆಯಲ್ಲಿ ತೊಡಗಿದರು. ಇದರೊಂದಿಗೆ ಮಕ್ಕಳಾದ ನಮ್ಮ ಕನಸಿನ ಹಕ್ಕಿಗೂ ರೆಕ್ಕೆಬಲಿದು ಟೇಪಿನೊಂದಿಗೆ ರೇಡಿಯೋ ಕೂಡ ಇರಬೇಕು ಎಂಬ ನಿಬಂಧನೆಯನ್ನು ಸೇರಿಸಿದೆವು. ಕೆಲವೇ ದಿನಗಳಲ್ಲಿ ದೂರದ ಸಂಬಂಧಿಯೊಬ್ಬರ ಮನೆಯಿಂದ ಹಳೆಯ ಟೇಪ್ ರೆಕಾರ್ಡರ್ ವಿಥ್ ರೇಡಿಯೋ ನಮ್ಮ ಮನೆಯನ್ನು ಸೇರಿತು. ಅದರೊಂದಿಗೆ ಒಂದಿಷ್ಟು ಯಕ್ಷಗಾನದ ಕ್ಯಾಸೆಟ್ಟುಗಳೂ ಬಂದವು.
ಬೆಳಿಗ್ಗೆ ಟೇಪಿನ ಎದುರು ಆಸೀನರಾದ ನಾವು ಸಂಜೆಯವರೆಗೆ ಅಲ್ಲಿಯೇ ಕುಳಿತು ಒಂದರಮೇಲೊಂದರಂತೆ ಆರು ಕ್ಯಾಸೆಟ್ಟಗಳನ್ನು ಕೇಳಿ ಮುಗಿಸಿದ್ದೆವು. ಅಂದು ಸ್ನಾನವನ್ನೂ ಮಾಡದೇ ಆ ಪೆಟ್ಟಿಗೆಯೆದುರೇ ಊಟ ಮಾಡಲು ಅಪ್ಪ ಅನುಮತಿಯನ್ನು ಕೊಟ್ಟಿದ್ದರು. ಇವೆಲ್ಲವನ್ನೂ ನೋಡಿದ ಅಮ್ಮ ಇನ್ನು ನಮಗೆಲ್ಲ ಹುಚ್ಚೇ ಹಿಡಿಯುತ್ತದೆಯೆಂಬ ತೀರ್ಮಾನವನ್ನು ಪ್ರಕಟಿಸಿದ್ದರು. ಅಪ್ಪ ಮಾತ್ರ ನಮ್ಮೆಲ್ಲರ ಆಸಕ್ತಿಯನ್ನು ಪ್ರೀತಿಯಿಂದ ಗೌರವಿಸಿ, ಪುಟ್ಟ ಮನೆ ತುಂಬಿಹೋಗುವಷ್ಟು ಬಗೆಬಗೆಯ ಕ್ಯಾಸೆಟ್ಟುಗಳನ್ನು ತಂದು ತುಂಬಿಸಿದರು.
ಈ ಮೊದಲು ನಾವು ಅನೇಕ ಕೀರ್ತನೆ, ಹಾಡು, ಯಕ್ಷಗಾನಗಳನ್ನು ದೂರದಿಂದ ಕೇಳಿಸಿಕೊಂಡಿದ್ದೆವಾದರೂ ಇಷ್ಟು ಹತ್ತಿರದಿಂದ ಅವುಗಳನ್ನು ಕೇಳುವುದೇ ನಮಗೆ ಸ್ವರ್ಗದಂತಿತ್ತು. ಊರಿನಲ್ಲಿ ಏನಾದರೂ ಸಮಾರಂಭವಿದ್ದರೆ ದೊಡ್ಡದಾಗಿ ಧ್ವನಿವರ್ಧಕ ಮೊಳಗಿಸುವುದು ಆ ಕಾಲದ ಫ್ಯಾಶನ್ನಾಗಿತ್ತು. ಅವರು ಮೊದಲು ಮೊಳಗಿಸುವ ಕ್ಯಾಸೆಟ್ ‘ಗಜಮುಖನೇ ಗಣಪತಿಯೇ ನಿನಗೆ ವಂದನೆ, ನಂಬಿದವರ ಬಾಳಿನಾ ಕಲ್ಪತರು ನೀನೆ’ ಎಂಬ ಹಾಡಿನದು, ಅದರಲ್ಲಿ ಮುಂದೆ ಬರುವ ಹಾಡೇ ಶ್ಯಮಂತಕ ಮಣಿಯ ಕಥೆ. ‘ಯಾದವ ಕುಲವನು ಪಾವನಗೊಳಿಸಿ ಉದಿಸಿದ ಮಾಧವ ಮಧುರೆಯಲಿ’ ಎಂದು ಪ್ರಾರಂಭವಾಗಿ ಇಡಿಯ ಕಥೆಯನ್ನು ಹಾಡಿನಲ್ಲಿಯೇ ಹೇಳಲಾಗುತ್ತಿತ್ತು. ನಾವೆಲ್ಲರೂ ಈ ಹಾಡು ಬರುವಾಗಲೇ ನಮ್ಮ ಮನೆಯ ಪಕ್ಕದಲ್ಲಿರುವ ಗುಡ್ಡವೇರಿ ಮುಂದೆ ಅವರು ಹಚ್ಚುವ ಗುರುರಾಜಲು ನಾಯ್ಡು ಅವರ ಕೀರ್ತನೆ ಕೇಳಲು ಕಾದು ಕುಳಿತುಕೊಳ್ಳುತ್ತಿದ್ದೆವು. ಅಪ್ಪಿ ತಪ್ಪಿ ಅವರೇನಾದರೂ ಹೊಸಚಿತ್ರಗೀತೆಗಳ ಕ್ಯಾಸೆಟ್ ಹಚ್ಚಿದರೆ ಬೈಯ್ಯುತ್ತಾ ಗುಡ್ಡವಿಳಿದು ಬರುತ್ತಿದ್ದೆವು. ಅಂಥದ್ದೇನೂ ಸಾಹಸ ಮಾಡದೇ ಮನೆಯಲ್ಲಿಯೇ ಕುಳಿತು ಬೇಕಾದ್ದನ್ನೆಲ್ಲ ಎಷ್ಟು ಸಲ ಬೇಕಾದರೂ ಕೇಳುವಂತಾದರೆ ಅದೆಂಥ ಸಂಭ್ರಮ!
ಮೊದಲೆಲ್ಲ ದುಸು, ದುಸು ಅನ್ನುತ್ತಿದ್ದ ಅಮ್ಮನೂ ನಿಧಾನವಾಗಿ ರೇಡಿಯೋದ ಸಮಯಕ್ಕೆ ತನ್ನ ದಿನಚರಿಯನ್ನು ಹೊಂದಿಸತೊಡಗಿದಳು. ರೇಡಿಯೋ ಕೂಗುವ ಮೊದಲು ಏಳಬೇಕು, ಇಂಗ್ಲಿಷ್ ವಾರ್ತೆ ಬರುವಾಗ ಕೊಟ್ಟಿಗೆಗೆ ದನ ಕರೆಯಲು ಹೊರಡಬೇಕು, ಬೆಳಗಿನ ಪ್ರದೇಶ ಸಮಾಚಾರದ ಹೊತ್ತಿಗೆ ತಿಂಡಿ ಮುಗಿದು ಪಾತ್ರೆ ತೊಳೆದಾಗಬೇಕು, ವಾರ್ತೆ ಬರುವಾಗ ಕೊಟ್ಟಿಗೆಯ ದನಗಳ ಕಣ್ಣಿ ಕಳಚಬೇಕು, ಹಿಂದಿ ವಾರ್ತೆ ಪ್ರಾರಂಭವಾಗುವಾಗ ತರಕಾರಿ ಹೆಚ್ಚಿ ಮುಗಿಯಬೇಕು. ಹೀಗೆ ಅಮ್ಮನ ದಿನಚರಿಯೂ ಆ ಮಾಯಾಪೆಟ್ಟಿಗೆಯ ಜಾಲಕ್ಕೆ ಸಿಲುಕಿಕೊಂಡಿತು. ನಮಗಂತೂ ಇನ್ನು ಗುಜರಾತ್ ಅಷ್ಟೇ ಯಾಕೆ? ಅಮೇರಿಕಾದ ಸುದ್ದಿಯನ್ನೂ ತಿಳಿಯಬಹುದೆಂಬ ಸಮಾಧಾನ, ಇಂಗ್ಲಿಷ್ ವಾರ್ತೆಗಳನ್ನು ಕೇಳಿ ಇಂಗ್ಲಿಷ್ ಕಲಿಯಬಹುದೆಂಬ ಖುಶಿ. ಜೊತೆಯಲ್ಲಿ ರೇಡಿಯೋದಲ್ಲಿ ಬರುವ ಕ್ವಿಜ್ ಕಾರ್ಯಕ್ರಮದ ಪ್ರಶ್ನೆಗಳನ್ನೆಲ್ಲ ಬರೆದಿಟ್ಟುಕೊಳ್ಳುವ ಉತ್ಸಾಹ. ಅದಕ್ಕೆಂದೇ ನೋಟಬುಕ್ಕೊಂದು ರೇಡಿಯೋ ಇಡುವ ಪೆಟ್ಟಿಗೆಯಲ್ಲಿ ಜಾಗ ಪಡೆದುಕೊಂಡಿತು. ಕೋರಿಕೆಯ ಚಿತ್ರಗೀತೆಗಳೆಲ್ಲ ಬಾಯಿಪಾಠವಾಗತೊಡಗಿದವು. ಮನೆಗೆ ಯಾರಾದರೂ ನೆಂಟರು ಬಂದರೆ ಸಾಕು, ಕ್ಯಾಸೆಟ್ಟುಗಳನ್ನು ಒಂದಾದನಂತರ ಒಂದರಂತೆ ಹಚ್ಚಿ ಅವರಿಗೆ (ಅ)ಹಿಂಸೆ ಮಾಡುತ್ತಿದ್ದೆವು. ಮನೆಯಲ್ಲಿ ಯಾರಿಲ್ಲದ ಸಮಯ ನೋಡಿ ನಮ್ಮದೇ ಹಾಡುಗಳನ್ನು ನಾವೇ ರೆಕಾರ್ಡ ಮಾಡಿಕೊಂಡು ಕೇಳಿ ಆನಂದಿಸುತ್ತಿದ್ದೆವು. ಜನಪ್ರಿಯ ಸಿನೆಮಾದ ಧ್ವನಿಮುದ್ರಿಕೆಗಳೂ ಮನೆಗೆ ಬರತೊಡಗಿದವು.
ಸಂಗೀತಾ ಕಟ್ಟಿಯೆಂಬ ಹದಿನೈದರ ಹರೆಯದ ಬಾಲೆಯ ಗಾಯನ, ವಿದ್ಯಾಭೂಷಣರ ದಾಸರ ಪದಗಳು, ಅಚ್ಯುತದಾಸರ ಕೀರ್ತನೆಗಳು, ಕಾಳಿಂಗ ನಾವುಡರ ಭಾಗವತಿಕೆ, ಶೇಣಿಯವರ ಅರ್ಥಗಾರಿಕೆ, ಬಲಿಪರ ಕಂಚಿನ ಕಂಠ ಎಲ್ಲವೂ ನಮ್ಮ ಮನೆಯೊಳಗೆ ಮೊಳಗುತ್ತಿದ್ದವು. ಇವೆಲ್ಲದರ ನಡುವೆ ಅಪ್ಪ ವಾದ್ಯ ಸಂಗೀತವಿರುವ ಕ್ಯಾಸೆಟ್ಟೊಂದನ್ನು ತಂದು ಯಾರಿಗೆಲ್ಲ ತಮ್ಮ ಮನೆಯ ಕಾರ್ಯಗಳಲ್ಲಿ ವಾದ್ಯದವರನ್ನು ಕರೆಯುವಷ್ಟು ಅನುಕೂಲವಿಲ್ಲವೋ ಅವರ ಮನೆಗೆಲ್ಲ ಟೇಪರೆಕಾರ್ಡರನೊಂದಿಗೆ ಹಾಜರಾಗಿ ವಾದ್ಯಗಾರರೂ ಆಗಿಟ್ಟಿದ್ದರು.
ಕಾಲಪಲ್ಲಟದ ದಾರಿಯಲ್ಲಿ ನಮ್ಮ ಮನೆಯ ಆ ಟೇಪರಿಕಾರ್ಡರ್ ಅದು ಹೇಗೆ ಹಿನ್ನೆಲೆಗೆ ಸರಿಯಿತೆಂದು ನೆನಪೇ ಆಗುತ್ತಿಲ್ಲ. ಹಳ್ಳಿಯ ಮನೆಬಿಟ್ಟು ಕೆಟ್ಟು ಪಟ್ಟಣ ಸೇರಿದ ನಮ್ಮೆಲ್ಲರ ಮನೆಯಲ್ಲಿ ಟಿ.ವಿ.ಯೆಂಬ ಮಾಯಾಪೆಟ್ಟಿಗೆ ಬಂದಮೇಲೆ ಕೇವಲ ಕಿವಿಯನ್ನು ಮಾತ್ರವೇ ತಣಿಸುತ್ತಿದ್ದ ಶ್ರವ್ಯಕಾವ್ಯಗಳನ್ನು ಟಿ.ವಿ. ಪರದೆಯ ಮೇಲೆ ಬಿತ್ತರಗೊಳ್ಳುವ ದೃಶ್ಯಕಾವ್ಯಗಳು ಸುಲಭವಾಗಿ ಪಲ್ಲಟಗೊಳಿಸಿಬಿಟ್ಟವು ಅನಿಸುತ್ತದೆ. ಆದರೂ ಅಷ್ಟೊಂದು ಆಸ್ಥೆಯಿಂದ ಸಂಗ್ರಹಿಸಿದ ಕ್ಯಾಸೆಟ್ಟುಗಳು ಮಾತ್ರ ಮನೆಯಂತಿದ್ದ ಕ್ಯಾಸೆಟ್ ಸ್ಟಾಂಡುಗಳಲ್ಲಿ ಕುಳಿತು ಬಹಳ ವರ್ಷ ಬಾಡಿಗೆ ಮನೆಯಿಂದ ಮನೆಗೆ ಚಲಿಸುತ್ತಲೇ ಇದ್ದವು. ತೀರ ಇತ್ತೀಚೆಗೆ ಇನ್ನಿದರ ಉಪಯೋಗ ಏನೂ ಇಲ್ಲವೆನಿಸಿ ಕಸದ ಡಬ್ಬಿಗೆ ಸೇರಿದವು. ಆದರೂ ರೇಡಿಯೋವೆಂಬ ಪೆಟ್ಟಿಗೆ ಮಾತ್ರ ಇಂದಿಗೂ ಅಡುಗೆ ಮನೆಯಲ್ಲಿ ಕುಳಿತು ಇಂತಿಷ್ಟು ಹೊತ್ತಿಗೆ ಇದನ್ನೆಲ್ಲ ಮಾಡು ಎಂದು ಆಜ್ಞಾಪಿಸುತ್ತಲೇ ಇದೆ.
ಹೃದಯದ ಶಸ್ತ್ರಚಿಕಿತ್ಸೆಯಿಂದ ಹಾಸಿಗೆ ಹಿಡಿದಿದ್ದ ಅಪ್ಪ ತಮ್ಮ ಕೊನೆಯ ಕಾಲದಲ್ಲಿ ಅದೇಕೋ ಟಿ.ವಿ. ನೋಡುವುದನ್ನು ಬಹಿಷ್ಕರಿಸಿಬಿಟ್ಟಿದ್ದರು. ರಾಜಕುಮಾರ ಚಿತ್ರಗಳ ಪರಮ ಅಭಿಮಾನಿಯಾದ ಅವರು ಅದನ್ನು ಹಚ್ಚಿಕೊಟ್ಟರೂ ನೋಡಲಾರೆನೆಂದು ಕಣ್ಮುಚ್ಚಿ ಮಲಗಿಬಿಡುತ್ತಿದ್ದರು. ಅಂತಹ ಅಪ್ಪ ಅದೊಂದು ಭಾನುವಾರ ರೇಡಿಯೋದಲ್ಲಿ ಬಂದ ಯಕ್ಷಗಾನ ಕಲಾವಿದರೊಬ್ಬರ ಸಂದರ್ಶನವನ್ನು ಒಂದು ಗಂಟೆಗಳ ಕಾಲ ಇಡಿಯಾಗಿ ಕೇಳಿ ಆನಂದಿಸಿದ್ದರು. ಇತ್ತೀಚೆಗೆ ಶಾಲಾ ಕಾಲೇಜುಗಳಲ್ಲಿ ಎಲ್ಲ ಮುಖ್ಯ ಪರೀಕ್ಷೆಗಳಲ್ಲೂ ಪ್ರಶ್ನೆಪತ್ರಿಕೆಯನ್ನು ಓದಲು ಹದಿನೈದು ನಿಮಿಷಗಳ ಅವಧಿಯನ್ನು ನೀಡುವುದು ವಾಡಿಕೆಯಾಗಿದೆ. ಹಾಗೆ ಪ್ರಶ್ನೆಗಳನ್ನು ಓದುತ್ತಾ ಹೋಗುವಾಗ ಯಾವುದಾದರೂ ಪ್ರಶ್ನೆಗೆ ಉತ್ತರ ನೆನಪಾಗದಿದ್ದರೆ ಒತ್ತಾಯವಾಗಿ ನೆನಪಿಸಿಕೊಳ್ಳಲು ಹೋಗಿ ನೆನಪಿನ ಸುರುಳಿಯನ್ನೇ ಸಿಕ್ಕಾಗಿಸಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳುವಾಗ ಕ್ಯಾಸೆಟ್‌ನ ಉದಾಹರಣೆಯನ್ನು ಈಗಲೂ ಹೇಳುತ್ತೇನೆ. ಮಧ್ಯದಲ್ಲಿ ಟೇಪಿನ ಹೆಡ್ಡಿಗೆ ಕ್ಯಾಸೆಟ್ಟಿನ ರೀಲುಗಳು ಸುತ್ತಿಕೊಂಡು ಸಿಕ್ಕಾದರೆ ಇಡಿಯ ಕ್ಯಾಸೆಟ್ ಹಾಳಾಗಿಹೋಗುತ್ತಿದ್ದ ನೆನಪು ಇವೆಲ್ಲವನ್ನು ಹೇಳಿಸುತ್ತದೆ. ಅವರ ಜನ್ಮದಲ್ಲಿ ಅಂಥದೊಂದು ವಸ್ತುವನ್ನು ನೋಡಿರದ ವಿದ್ಯಾರ್ಥಿಗಳು ಬಿಟ್ಟಬಾಯಿ ಬಿಟ್ಟು ನೋಡುತ್ತಿರುತ್ತಾರೆ.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ನಿಮ್ಮ ಬರಹ ನನ್ನ ಬಾಲ್ಯದ ದಿನಗಳನ್ನು, ರೇಡಿಯೋ ಹಾಗೂ ಟೇಪ್ ರೆಕಾರ್ಡರ್ ಜತೆ ಮಿಳಿತವಾಗಿದ್ದ ನಮ್ಮ ದಿನಚರಿಯನ್ನು ನೆನಪಿಸಿತು.ಗುರು ರಾಜುಲು ನಾಯ್ಡುರವರ ಬಹುತೇಕ ಹರಿಕಥೆ ಗಳನ್ನು ಕೇಳಲು ಇದ್ದುದು ಇದೊಂದೇ ಮಾಧ್ಯಮ.. ಅವರ ನಲ್ಲ ತಂಗಾ ದೇವಿ, ಭಕ್ತ ಸಿರಿಯಾಳ, ಕೃಷ್ಣ ಗಾರುಡಿ ಇಂತಹ ಹಲವಾರು ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ ಅವರ ಮಾತಿನ ಲಹರಿ ಇನ್ನೂ ಹಸಿರಾಗಿಯೇ ಇದೆ. ಬೆಳಗಿನ ಸಂಸ್ಕೃತ ವಾರ್ತೆ ,ಪ್ರದೇಶ ಸಮಾಚಾರ, ಚಿತ್ರಗೀತೆಗಳು ,ನಾಟಕಗಳು, ಯಕ್ಷಗಾನ ಇವೆಲ್ಲವೂ, ಜತೆಗೆ ಫೋನ್ ಇನ್ ಕಾರ್ಯಕ್ರಮ ಇವೆಲ್ಲವೂ ನಮಗೆ ಸಿಗುತ್ತಿದ್ದುದು ರೇಡಿಯೋ ಮೂಲಕವೇ..ಇಂದಿಗೂ ನಮ್ಮ ಮನೆಯಲ್ಲಿ ರೇಡಿಯೋ ಕ್ರಿಯಾ ಶೀಲವಾಗಿದ್ದು ಟಿವಿ ಇರದೆ ಇದ್ದುದು ವರವಾದಂತೇ ಆಗಿದೆ.
ನಿಮ್ಮ ಲೇಖನಕ್ಕೆ ತುಂಬು ಹೃದಯದ ಧನ್ಯವಾದಗಳು ಮೇಡಂ.