ಟೆಸ್ಟ್ ಕ್ರಿಕೆಟ್ ಚೆನ್ನಾಗಿ ಆಡದಿದ್ದರೆ, ಬಿಸಿಸಿಐಅನ್ನು ಬಹಳ ಭಾರತೀಯರೇ ದೂರುತ್ತಾರೆ. ಒಂದು ರೀತಿಯಲ್ಲಿ ಇದು ಸಹಜ. ಭಾರತ ಟೆಸ್ಟ್ ಮ್ಯಾಚ್‌ಗಳನ್ನು ಚೆನ್ನಾಗಿ ಆಡುತ್ತಿಲ್ಲ ಅದಕ್ಕೆ ಹಣದ ವಾಸನೆ ಬಂದಿದೆ, ಅಲ್ಲಿ ಆಡುವವರೆಲ್ಲಾ ಹಣದಾಸೆಯಿಂದ ಟೆಸ್ಟ್ ಚೆನ್ನಾಗಿ ಆಡುತ್ತಿಲ್ಲ ಎಂಬ ಮಾತೂ ಈಗೀಗ ಕೇಳಿಬರುತ್ತಿದೆ. ಈ ಮಧ್ಯೆ ಭಾರತ ಯಾವ ಕಪ್ /ಟ್ರೋಫಿ, ಅದರಲ್ಲೂ ಐಸಿಸಿ ಟ್ರೋಫಿಯನ್ನು ಕಳೆದ 10 ವರ್ಷದಿಂದ ಗೆದ್ದಿಲ್ಲ. ಅದಕ್ಕೆ ಎಷ್ಟೋ ಅಭಿಮಾನಿಗಳೂ ಐಪಿಎಲ್‌ನ ಜರಿಯುತ್ತಾರೆ!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಆಟದ ಕುರಿತ ಬರಹ ನಿಮ್ಮ ಓದಿಗೆ

ಭಾರತದಲ್ಲಿ ಕ್ರಿಕೆಟ್ ಒಂದು ಆಟವೊಂದೇ ಅಲ್ಲ, ಅದರ ಆಟವನ್ನು ಸವಿದು ಮೆಲುಕು ಹಾಕುವರ ಸಂಖ್ಯೆ ಯಾವ ಧರ್ಮದ ಅನುಯಾಯಿಗಳಿಗೂ ಕಡಿಮೆ ಇಲ್ಲದಂತೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಈಗ ನಮ್ಮ ಜನ ಸಂಖ್ಯೆ 140 ಕೋಟಿಗೆ ಮೇಲಾಗಿದೆ. ಹಿಂದೂ ಧರ್ಮ ಆಗಿರಬಹುದು, ಮುಸ್ಲಿಮ್, ಕ್ರೈಸ್ತ, ಬೌದ್ಧ ಯಾವ ಧರ್ಮವೇ ಆಗಿರಲಿ – ಕ್ರಿಕೆಟ್‌ನ ಆಟದ ಎದುರು ಸರಿ ಸಾಟಿಯಾಗಿ ನಿಂತಿಲ್ಲ! ಸಣ್ಣ ಮಗುವಿನಿಂದ ಹಣ್ಣು ಮುದುಕ/ಮುದುಕಿಯವರೆಗೆ ಕ್ರಿಕೆಟ್ ಅನ್ನುವ ಪದ ಕೇಳಿದರೆ ತಕ್ಷಣವೇ ಅವರ ಕಿವಿ ನಿಮಿರುತ್ತೆ!

ಇದು ಎಷ್ಟರಮಟ್ಟಿಗೆ ಎಂದರೆ, ಇದು ತಮಾಶೆಯಾದರೂ ಇದರಲ್ಲಿ ಬಹಳ ಸತ್ಯಾಂಶವಿದೆ; ಯಾರಾದರೂ ವಿದೇಶಿಯ ಅಥವ ಬೇರೆ ಗ್ರಹದಿಂದಲೇ ಬಂದ ಎಂದುಕೊಳ್ಳಿ -ಆತ ಮುಂಬೈಗೆ ಬಂದು ‘ಸಚಿನ್ ಟೆಂಡೂಲ್ಕರ್ ಮನೆ ಎಲ್ಲಿದೆ’? ಎಂದು ಬೀದಿಯಲ್ಲಿ ಯಾರನ್ನಾದರೂ ಕೇಳಿದರೆ, ತಕ್ಷಣವೇ ಅವರನ್ನು ದರದರನೆ ಎಳೆದುಕೊಂಡು ಹೋಗಿ ಅವನ ಮನೆ ತೋರಿಸಿ, ಅದಕ್ಕೆ ಮುಂಚೆ ತನ್ನ ಮನೆಗೆ ಕರೆದುಕೊಂಡು ಹೋಗಿ ಸಚಿನ್‌ ಜೀವನ ಚರಿತ್ರೆ, ಸ್ಕೋರ್‌ಗಳು, ಅವನ ಹೆಂಡತಿ, ಮಗ/ಮಗಳ ವಿಷಯ ದೀರ್ಘವಾಗಿ ವಿವರಿಸಿ ಮತ್ತು ಸಚಿನ್‌ಗೆ ಪ್ರಿಯವಾದ ವಡಾ ಪಾವ್, ಕುಲ್ಫಿ ಮತ್ತು ಶ್ರೀಖಂಡನ್ನು ತಿನ್ನಿಸಿ ಆಮೇಲೇನೇ ಅವನನ್ನು ಸಚಿನ್ ಮನೆ ಎದುರಿಗೆ ಕರೆದುಕೊಂಡು ಹೋಗಿ ನಿಲ್ಲಿಸುವುದು ವಾಡಿಕೆಯಂತೆ! ಮುಂಬೈನಲ್ಲಿ ಹೀಗೆ ನಡೆದರೆ ಆಶ್ಚರ್ಯವೇನಿಲ್ಲ!

ಭಾರತ ಜೂನ್ 2023 ವರೆಗೆ 570 ಟೆಸ್ಟ್ ಮ್ಯಾಚುಗಳನ್ನಾಡಿ, ಅದರಲ್ಲಿ 172ರಲ್ಲಿ ಗೆದ್ದು, 176ರಲ್ಲಿ ಸೋತು, 221 ರಲ್ಲಿ ಸೋಲು/ಗೆಲುವಿಲ್ಲದೆ ಡ್ರಾ ಆಗಿ ಒಂದು ಪಂದ್ಯ ಟೈನಲ್ಲಿ ಮುಕ್ತಾಯಗೊಂಡಿತು. ಭಾರತದ ಗೆಲುವಿನ ಶೇಕಡ 30.17%. ಆಸ್ಟ್ರೇಲಿಯ ತಂಡದ ಗೆಲುವಿನ ಶೇಕಡ 47.54%. ಆ ದೇಶ 406 ಟೆಸ್ಟ್ ಪಂದ್ಯಗಳಲ್ಲಿ ವಿಜಯವನ್ನು ಸಾಧಿಸಿದೆ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಬಹಳ ವರ್ಷದ ಹಿಂದಿನಿಂದ ಟೆಸ್ಟ್ ಮ್ಯಾಚ್‌ಗಳನ್ನು ಆಡುತ್ತಿದ್ದಾರೆ. ಇಂಗ್ಲೆಂಡ್ ಇಲ್ಲಿಯವರೆಗೆ ಅತಿ ಹೆಚ್ಚು- 1061 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಅವರು 389ರಲ್ಲಿ ಗೆದ್ದು, 319ರಲ್ಲಿ ಸೋತು, 354 ಡ್ರಾದಲ್ಲಿ ಮುಕ್ತಾಯಗೊಂಡಿತು. ಡ್ರಾಗೆ ಮುಖ್ಯ ಕಾರಣ ಅಲ್ಲಿನ ಹವಾಮಾನ. ಮುಕ್ಕಾಲು ಪಾಲು ಪಂದ್ಯಗಳಲ್ಲಿ ಇಂಗ್ಲೆಂಡಿನಲ್ಲಿ ಮಳೆ ಬರುವ ಸಾಧ್ಯತೆ ಹೆಚ್ಚಿರುತ್ತೆ. ಆದ್ದರಿಂದ ಅನೇಕ ಪಂದ್ಯಗಳು ಅಲ್ಲಿ ಡ್ರಾನಲ್ಲಿ ಮುಕ್ತಾಯಗೊಳ್ಳುತ್ತದೆ.

ಭಾರತ ಟೆಸ್ಟ್ ಪಂದ್ಯಗಳನ್ನು ಆಡಲು 1932ರಲ್ಲಿ ಶುರುಮಾಡಿತು. ಅದಕ್ಕಿಂತ 55 ವರ್ಷ ಮುಂಚೆಯೇ ಅಂದರೆ 1877ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಟೆಸ್ಟ್ ಆಡುವುದಕ್ಕೆ ಶುರು ಮಾಡಿದರು. ಈಗ ಕ್ರಿಕೆಟ್ ಆಡುವ ದೇಶಗಳು ಕೇವಲ 12. ಎಲ್ಲಾ ಟೀಮ್‌ಗಳೂ ಒಬ್ಬರ ಜೊತೆ ಇನ್ನೊಬ್ಬರು ಎರಡು ವರ್ಷದಲ್ಲಿ ಟೆಸ್ಟ್ ಪಂದ್ಯ ಒಮ್ಮೆಯಾದರೂ ಆಡಬೇಕು.

ಬಿಳಿ ಬಾಲ್‌ನಲ್ಲಿ ಆಡುವ ಓಡಿಐ ಮತ್ತು ಟ20 ಆಟಗಳಿಗೆ 4 ವರ್ಷಕ್ಕೊಮ್ಮೆ ವಿಶ್ವಕಪ್ ಟೂರ್ನಮೆಂಟ್‌ಗಳಿವೆ. ಓಡಿಐ ಒಂದು ದಿನದ ಆಟವಾದರೆ, ಟಿ20 ಕೇವಲ 3 ಘಂಟೆಯ ಪಂದ್ಯ. ನಾಲ್ಕು ವರ್ಷಕ್ಕೊಮ್ಮೆ ಎಲ್ಲಾ ದೇಶಗಳು ಒಂದು ದೇಶದಲ್ಲಿ ಸೇರಿ ಓಡಿಐ, ಮತ್ತು ಟಿ20 ಟೂರ್ನಮೆಂಟನ್ನು ಆಡುತ್ತವೆ. ಇದು ಸುಮಾರು ಮೂರು ವಾರದಲ್ಲಿ ಮುಕ್ತಾಯಗೊಳ್ಳುತ್ತೆ. ಆದರೆ ಟೆಸ್ಟ್ ಮ್ಯಾಚ್‌ಗಳು ಹಾಗಲ್ಲ. ಒಂದೊಂದು ಪಂದ್ಯವೂ ಐದು ದಿನಗಳು ನಡೆಯುತ್ತವೆ. ಆದ್ದರಿಂದ ಎಲ್ಲಾ ಟೀಮುಗಳು ಒಂದು ಕಡೆ ಸೇರಿ ಟೆಸ್ಟ್ ಟೂರ್ನಮೆಂಟ್ ಆಡುವುದು ಸಾಧ್ಯವಿಲ್ಲ. ಇದರಿಂದ ಟೆಸ್ಟ್ ಪಂದ್ಯಗಳಲ್ಲಿ ಯಾವ ದೇಶ ಚಾಂಪಿಯನ್ ಎಂದು ನಿರ್ಧರಿಸಲು ಕಷ್ಟವಾಯಿತು.

ಇಬ್ಬಿಬ್ಬರೇ ಆಡುವ ಪಂದ್ಯಗಳಲ್ಲಿ -ಬೈಲಾಟರಲ್ಸ್ – ಗೆದ್ದವರಿಗೆ ಆ ದೇಶದ ಪ್ರಮುಖ ಆಟಗಾರರ ಇಟ್ಟು ಟ್ರೋಫಿ/ ಕಪ್ಪನ್ನು ಕೊಡುತ್ತಿದ್ದರು. ಉದಾಹರಣೆಗೆ, ಭಾರತ ಮತ್ತು ಆಸ್ಟ್ರೇಲಿಯ ಪಂದ್ಯಗಳಿಗೆ ಉಭಯ ರಾಷ್ಟ್ರಗಳು ಸೇರಿ ಅವರ ಪಂದ್ಯ ಗೆದ್ದ ತಂಡಕ್ಕೆ ಕೊಡುವ ಕಪ್‌ಗೆ ‘ಬಾರ್ಡರ್-ಗವಾಸ್ಕರ್’ ಕಪ್ ಎಂದು ಹೆಸರನ್ನಿಟ್ಟಿದ್ದಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಕಪ್‌ಗೆ ಮೊದಲಿನಿಂದ ‘ಆಶೆಸ್’ ಎಂದು ನಾಮಕರಣವಾಗಿದೆ.

ಭಾರತ ಮತ್ತು ಇಂಗ್ಲೆಂಡ್ ಟೀಮ್ ಇಂಗ್ಲೆಂಡಿನಲ್ಲಿ ಆಡಿದಾಗ ಅದರ ಹೆಸರು ಭಾರತದ ನಾಯಕ ದಿವಂಗತ ನವಾಬ್ ಮನ್ಸೂರ್ ಆಲಿ ಪಟೌಡಿ ಹೆಸರಿನಲ್ಲಿ ಇಡಲಾಗಿದೆ. ಅದನ್ನು ಪಟೌಡಿ ‘ಟ್ರೋಫಿ’ ಯೆಂದು ಕರೆಯಲಾಗಿದೆ. ಭಾರತದಲ್ಲಿ ಆಗುವ ಪಂದ್ಯಗಳಲ್ಲಿ ಆಡಿ ಸರಣಿ ಗೆದ್ದವರ ಕಪ್ಪನ್ನು ‘ಆಂಥೊನಿ ಡಿ ಮೇಲ್ಲೊ’ ಟ್ರೋಫಿ ಎಂದು ಕರೆಯಲಾಗಿದೆ. ಡಿ ಮೆಲ್ಲೊ ಭಾರತದ ಕ್ರಿಕೆಟ್‌ನ ಸಂಸ್ಥೆಯ ಮೊದಲನೇ ಅಧ್ಯಕ್ಷರಾಗಿದ್ದರು.

ಯಾರು ಟೆಸ್ಟ್‌ನ ಚಾಂಪಿಯನ್ ಎಂದು ಕರೆಯಲಾಗದ ನ್ಯೂನತೆಯನ್ನು ಸರಿಪಡಿಸಲು 2019ರಲ್ಲಿ ‘ವರ್ಲ್ಡ್ ಟೆಸ್ಟ್ ಚಾಂಪಿಯನ್ಷಿಪ್’ (ಡಬ್ಲೂ ಟಿ ಸಿ) ಅನ್ನು ಐಸಿಸಿ ಶುರುಮಾಡಿತು. ಎರಡು ವರ್ಷ ಟೆಸ್ಟ್ ಮ್ಯಾಚುಗಳನ್ನು ಆಡಿದ ಮೇಲೇ ಅದಕ್ಕೆ ಅಂಕಗಳನ್ನು ಕೊಟ್ಟು ಆ ಎರಡು ವರ್ಷದಲ್ಲಿ ಯಾವ ಎರಡು ದೇಶಗಳು ಹೆಚ್ಚು ಅಂಕ ಪಡೆದಿರುತ್ತಾರೋ ಅವರಿಬ್ಬರಿಬ್ಬರಲ್ಲಿ ಒಂದು ಪಂದ್ಯವನ್ನು ಆಡಿಸಿ ಅದರಲ್ಲಿ ಗೆದ್ದವರಿಗೆ ಟೆಸ್ಟ್ ಚಾಂಪಿಯನ್ ಎಂದು ಘೋಷಿಸಲಾಗುವುದೆಂದು ತೀರ್ಮಾನವಾಯಿತು.

ಗೆದ್ದ ಟೀಮಿಗೆ ಒಂದು ಗಧೆಯನ್ನು ಬಹುಮಾನವಾಗಿ ಕೊಡುತ್ತಾರೆ. ಒಂದು ಗೋಲಾಕಾರವುಳ್ಳ ಬಾಲ್‌ಗೆ ಚಿನ್ನದ ಲೇಪನ ಮಾಡಿ ಅದನ್ನು ಹಿಡಿದುಕೊಳ್ಳುವುದಕ್ಕೆ ಕೋಲು -ಅದು ಎಲ್ಲಾ ಸೇರಿ ಒಂದು ಗಧೆ- ಅದೇ ಗೆದ್ದ ಟೀಮಿಗೆ ಕೊಡುವ ಬಹುಮಾನ. ಇದರ ಜೊತೆಗೆ ಗೆದ್ದ ಟೀಮಿಗೆ 16 ಲಕ್ಷ $ ಮತ್ತು ಸೋತ ಟೀಮಿಗೆ 8 ಲಕ್ಷ $ ಕೊಡುತ್ತಾರೆ.

ಇದಕ್ಕೆ ಮುಂಚೆಯೇ ಯಾವ ಟೀಮ್ ಎಲ್ಲಾರಿಗಿಂತ ಹಚ್ಚು ಅಂಕ ಗಳಿಸುತ್ತೋ ಅವರು ಗೆದ್ದರೆಂದು ಅವರಿಗೆ ಪಾರಿತೋಷಕವಾಗಿ ಹಣವನ್ನು ಕೊಡಲಾಗುತ್ತಿತ್ತು. ಮಹೇಂದ್ರ ಸಿಂಗ್‌ ಧೋನಿ, ಮತ್ತು ವಿರಾಟ್ ಕೋಹ್ಲಿ ಅವರು ನಾಯಕರಾಗಿದ್ದಾಗ ಭಾರತ ಒಂದೆರೆಡು ಬಾರಿ ಅನಧಿಕೃತವಾಗಿ ಚಾಂಪಿಯನ್ ಆಗಿತ್ತು.

2019ರಿಂದ ತನ್ನ ಉತ್ತಮ ಪ್ರದರ್ಶನದಿಂದ ಭಾರತ ಎರಡೂ ಬಾರಿಯೂ ಹೆಚ್ಚು ಅಂಕ ಪಡೆದು ಫೈನಲ್ಸ್‌ಅನ್ನು ತಲುಪಿತು. ಇದೊಂದು ಅತ್ಯಂತ ಶ್ಲಾಘನೀಯ ಮತ್ತು ಪ್ರಶಂಸೆಗೆ ಅರ್ಹವಾದ ವಿಷಯ. ಭಾರತದಲ್ಲಿ ಐಪಿಎಲ್ ಶುರುವಾದಾಗನಿಂದ ಭಾರತದ ಮೇಲೆ ಹೊಟ್ಟೆ ಕಿಚ್ಚಿನಿಂದಲೋ ಮತ್ತೇನೋ ಭಾರತವನ್ನು ಬೈದವರೇ ಹೆಚ್ಚು! ತನ್ನ ಸಾಮರ್ಥ್ಯದಿಂದ ಐಪಿಎಲ್ ಟೂರ್ನಮೆಂಟನ್ನು ಅತ್ಯಂತ ದಕ್ಷತೆಯಿಂದ ಏರ್ಪಾಡು ಮಾಡಿ, ನಡೆಸಿ ಅದರ ಆರ್ಥಿಕ ಸ್ಥಿತಿಯನ್ನು ಮಜಭೂತಾಗಿ ಬೆಳೆಸಿ ಇವತ್ತು ಪ್ರಪಂಚದಲ್ಲೇ ಅದು ಮೇರು ಸ್ಥಾನವನ್ನು ಪಡೆದಿದೆ. ಇದರಲ್ಲಿ ಏನೂ ಸಂದೇಹವಿಲ್ಲ. ಪ್ರಪಂಚದ ಯಾವುದೇ ಶ್ರೇಷ್ಟ ಆಟಗಾರರಿರಲಿ ಅವರಿಗೆ ಐಪಿಎಲ್‌ಗೆ ಆಡುವುದೇ ಒಂದು ಘನತೆ ಎಂದು ಭಾವಿಸಿ ಇಲ್ಲಿ ಆಡಲು ಓಡೋಡಿ ಬರುತ್ತಾರೆ. ಇಲ್ಲಿ ಆಡುವವರೆಲ್ಲಾ ಮೇಲು ದರ್ಜೆಯ ಆಟಗಾರರು. ಅವರ ಆಟಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಐಪಿಎಲ್ ಹರಾಜಿನಲ್ಲಿ ಅಂಥವರನ್ನು ಹೆಚ್ಚು ಬೆಲೆಗೆ ಕೊಂಡುಕೊಳ್ಳುತ್ತಾರೆ. ಭಾರತದಲ್ಲಿ ಕ್ರಿಕೆಟ್‌ ಮ್ಯಾಚ್, ಅದರಲ್ಲೂ ಟಿ20 ಅಂತಹ ಮ್ಯಾಚ್ ನೋಡುವುದಕ್ಕೆ ಜನರು ಬಹಳ ಉತ್ಸುಕರಾಗಿರುತ್ತಾರೆ. ಟಿಕೆಟ್ ಕೊಡುವ ದಿನವೇ ಪೂರ್ತಿ ಮಾರಾಟವಾಗಿ ಆಟ ಶುರುವಾಗುವುದಕ್ಕೆ ಮೊದಲೇ ಸ್ಟೇಡಿಯಂಗಳು ಭರ್ತಿ ಆಗಿರುತ್ತೆ! ಐಪಿಎಲ್‌ನಿಂದ ಆಡಿ ಬಂದ ಗಳಿಕೆಯಿಂದ 40% ಐಸಿಸಿಯ ಕರ್ಚಿನ ಬಾಬ್ತು ಭಾರತದ ಬಿಸಿಸಿಐ ಸಂಸ್ಥೆ ಹೊರುತ್ತೆ! ಹೀಗಾಗಿ ಭಾರತದ ಮೇಲೆ ಹಲವಾರು ದೇಶಗಳ ಅಸೂಯೆಯ ಕ್ರೂರ ದೃಷ್ಟಿ ಬಿದ್ದಿದೆ ಎಂದು ತೋರುತ್ತೆ.

ಟೆಸ್ಟ್ ಕ್ರಿಕೆಟ್ ಚೆನ್ನಾಗಿ ಆಡದಿದ್ದರೆ, ಬಿಸಿಸಿಐಅನ್ನು ಬಹಳ ಭಾರತೀಯರೇ ದೂರುತ್ತಾರೆ. ಒಂದು ರೀತಿಯಲ್ಲಿ ಇದು ಸಹಜ. ಭಾರತ ಟೆಸ್ಟ್ ಮ್ಯಾಚ್‌ಗಳನ್ನು ಚೆನ್ನಾಗಿ ಆಡುತ್ತಿಲ್ಲ ಅದಕ್ಕೆ ಹಣದ ವಾಸನೆ ಬಂದಿದೆ, ಅಲ್ಲಿ ಆಡುವವರೆಲ್ಲಾ ಹಣದಾಸೆಯಿಂದ ಟೆಸ್ಟ್ ಚೆನ್ನಾಗಿ ಆಡುತ್ತಿಲ್ಲ ಎಂಬ ಮಾತೂ ಆಗೀಗ ಕೇಳಿಬರುತ್ತಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಯಾವಾಗಲೂ ತಮ್ಮ ದೇಶ ಎಲ್ಲಾ ದೇಶಗಳಿಗಿಂತ ಮುಂದಿರಬೇಕು, ಎಲ್ಲಾ ಟ್ರೋಫಿಯನ್ನು ಗೆಲ್ಲಬೇಕು ಎಂಬ ಹಿರಿದಾಸೆ ಇರುತ್ತೆ. ಈ ಮಧ್ಯೆ ಭಾರತ ಯಾವ ಕಪ್ /ಟ್ರೋಫಿ, ಅದರಲ್ಲೂ ಐಸಿಸಿ ಟ್ರೋಫಿಯನ್ನು ಕಳೆದ 10 ವರ್ಷದಿಂದ ಗೆದ್ದಿಲ್ಲ. ಅದಕ್ಕೆ ಎಷ್ಟೋ ಅಭಿಮಾನಿಗಳೂ ಐಪಿಎಲ್‌ನ ಜರಿಯುತ್ತಾರೆ!

ನಾವು ಶುರುವಿನಲ್ಲಿ ನೋಡಿದ ಹಾಗೆ ಭಾರತ ಟೆಸ್ಟ್‌ನಲ್ಲಿ ಶೇಖಡ 30 % ಮಾತ್ರ ಗೆದ್ದಿದೆ. ಓಡಿಐ ಮತ್ತು ಟಿ20 ಯಲ್ಲಿ ಕೂಡ ಭಾರತ ಟ್ರೋಫಿಯನ್ನು ಗೆದ್ದು 10 ವರ್ಷದ ಮೇಲಾಯಿತು.

*****

ಭಾರತ ವಿಶ್ವ ಕಪ್ ಟೆಸ್ಟ್ ಟೂರ್ನಮೆಂಟ್ ಶುರುಮಾಡಿದಾಗಿನಿಂದ ಸತತವಾಗಿ ಕೊನೆಯ ಹಂತ – ಫೈನಲ್ಸ್ ತಲುಪಿದೆ. ಹಾಗಿದ್ದರೂ ಎರಡೂ ಬಾರಿಯೂ ಫೈನಲ್ಸ್‌ನಲ್ಲಿ ಗೆಲ್ಲಲಾಗಿಲ್ಲ. ಮೊದಲ ಸರ್ತಿ ನ್ಯೂಝಿಲೆಂಡಿನ ಮೇಲೆ ಸೋಲನ್ನು ಅನುಭವಿಸಬೇಕಾಯಿತು. ಈ ವರ್ಷ ಆಸ್ಟ್ರೇಲಿಯ ವಿರುದ್ಧ ಮತ್ತೆ ಸೋತಿತು. ಈ ವರ್ಷವಾದರೂ ಭಾರತ ಗೆಲ್ಲಬಹುದೆಂದು ಇದ್ದ ಅಭಿಮಾನಿಗಳ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಯಿತು.

2020ರಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿಯಾಗಿದ್ದರು. ಈ ವರ್ಷ ರೋಹಿತ್ ಶರ್ಮ ನಾಯಕನಾದರೆ ರಾಹುಲ್ ಡ್ರಾವಿಡ್ ಕೋಚ್ ಆಗಿದ್ದಾರೆ.

ಪ್ರಪಂಚದ ಯಾವುದೇ ಶ್ರೇಷ್ಟ ಆಟಗಾರರಿರಲಿ ಅವರಿಗೆ ಐಪಿಎಲ್‌ಗೆ ಆಡುವುದೇ ಒಂದು ಘನತೆ ಎಂದು ಭಾವಿಸಿ ಇಲ್ಲಿ ಆಡಲು ಓಡೋಡಿ ಬರುತ್ತಾರೆ. ಇಲ್ಲಿ ಆಡುವವರೆಲ್ಲಾ ಮೇಲು ದರ್ಜೆಯ ಆಟಗಾರರು. ಅವರ ಆಟಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಐಪಿಎಲ್ ಹರಾಜಿನಲ್ಲಿ ಅಂಥವರನ್ನು ಹೆಚ್ಚು ಬೆಲೆಗೆ ಕೊಂಡುಕೊಳ್ಳುತ್ತಾರೆ. 

ಯಾವ ಕಾರಣಕ್ಕೆ ಭಾರತ ಪದೇ ಪದೇ ಫೈನಲ್ಸ್‌ನಲ್ಲಿ ಸೋಲುತ್ತಿದೆ? ಇದಕ್ಕೆ ಹಲವು ಕಾರಣಗಳಿರಬಹುದು ಎಂದು ತೋರುತ್ತದೆ.

1. ಕುಶಲತೆ, ಪ್ರಯಾಸದಲ್ಲಿ ಭಾರತ ಯಾವ ರೀತಿಯಲ್ಲೂ, ಯಾವ ತಂಡಕ್ಕಿಂತ ಕಡಿಮೆಯಿಲ್ಲ.

ಯಾಕೆಂದರೆ ಎರಡು ಬಾರಿಯೂ ಗೆದ್ದು ಕೊನೆಯ ಹಂತಕ್ಕೆ ಬಂದಿರುವುದೇ ಸಾಕ್ಷಿ. ನಮ್ಮ ಬ್ಯಾಟರ್ಸ್‌ಗಳಾಗಲಿ, ಬೋಲರ್ಸ್‌ಗಳಾಗಲಿ ಅನೇಕ ವಿಶ್ವ ದಾಖಲೆಗಳನ್ನು ಮಾಡಿ ಎಲ್ಲಾ ಪಟ್ಟಿಯಲ್ಲಿ ಮುಂದಿದ್ದಾರೆ. ವಿರಾಟ್ ಕೊಹ್ಲಿ ಈ ಶತಮಾನದ ಪ್ರಸಿದ್ಧ ಆಟಗಾರರೆಂದು ಸಾಬೀತು ಮಾಡಿದ್ದಾರೆ. ಹಾಗಿದ್ದರೂ ಯಾಕೆ ನಾವು ಕೊನೆಯ ಹಂತದಲ್ಲಿ ಗೆಲ್ಲಲು ವಿಫಲರಾಗುತ್ತೇವೆ?

2. ಇದು ಒಬ್ಬ ವಿದ್ಯಾರ್ಥಿಯ ಮನೋಸ್ಥಿತಿಗೆ ಸ್ವಲ್ಪ ಮಟ್ಟಿಗೆ ಹೋಲಿಸಬಹುದು ಎಂದು ತೋರುತ್ತೆ. ಒಂದೊಂದು ಸಲ ಒಬ್ಬ ವಿದ್ಯಾರ್ಥಿ ಕ್ಲಾಸ್ ಪರೀಕ್ಷೆ, ಮೊದಲನೇ ಟರ್ಮ್‌ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದರೂ, ಪಬ್ಲಿಕ್ ಪರೀಕ್ಷೆ, ಬೋರ್ಡ್‌ ಪರೀಕ್ಷೆಯಲ್ಲಿ ವಿಪರೀತ ಮಾನಸಿಕ ಒತ್ತಡಕ್ಕೆ ಒಳಗಾಗಿ ತೇರ್ಗಡೆಯಾಗುವುದಿಲ್ಲ. ಆ ಒತ್ತಡದಿಂದ ಅನೇಕ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಾನೆ. ತಪ್ಪುಗಳಲ್ಲಿ ಕ್ರಿಕೆಟ್ ವಿಷಯದಲ್ಲಿ ಟಾಸ್ ಗೆದ್ದಾಗ ಬ್ಯಾಟಿಂಗ್ ಅಥವ ಬೋಲಿಂಗ್ ಮಾಡಬೇಕ ಎಂಬ ಆಯ್ಕೆ ಮಾಡುವುದರಲ್ಲಿ ತಪ್ಪುಗಳು ನಡೆಯುತ್ತವೆ.

ತಂಡದ ಆಯ್ಕೆಯಲ್ಲೇ ಕೆಲವು ಸಲ ತಪ್ಪುಗಳಾಗುತ್ತಿದೆ. ಈ ವರ್ಷದ ಫೈನಲ್ಸ್‌ನಲ್ಲಿ ಮೋಡದ ವಾತಾವರಣಕ್ಕೆ ಹೆದರಿ ನಾವು ನಮ್ಮ ಅತ್ಯಂತ ಯಶಸ್ವಿ ಸ್ಪಿನ್ ಬೋಲರ್ ರವಿಚಂದ್ರನ್ ಆಶ್ವಿನ್ ಅವರನ್ನು ತಂಡದಲ್ಲಿ ತೆಗೆದುಕೊಳ್ಳಲಿಲ್ಲ. ಅದೊಂದು ದೊಡ್ಡ ತಪ್ಪಾಗಿ ಪರಿಣಮಿಸಿತು. ಮೋಡದ ವಾತಾವರಣ ನೋಡಿ ನಾವು ಬ್ಯಾಟಿಂಗ್ ಮಾಡದೆ ಫೀಲ್ಡಿಂಗ್ ಆಯ್ಕೆ ಮಾಡಿದೆವು. ಒಂದು ಘಂಟೆಯಲ್ಲಿ ಮೋಡ ಚದುರಿ, ಬ್ಯಾಟಿಂಗಿಗೆ ಅನುಕೂಲವಾಗಿ ಒಳ್ಳೆ ಪಿಚ್ ಆಯಿತು. ಫೀಲ್ಡಿಂಗ್ ಆಯ್ಕೆ ತಪ್ಪಾಗಿ, ನಮ್ಮ ವಿರುದ್ಧ ಆಡಿದ ಆಸ್ಟ್ರೇಲಿಯ ಅವರಿಗೆ ಕಟ್ಟಿಟ್ಟ ಬುತ್ತಿ ಸಿಕ್ಕಿದಂತಾಯಿತು. ಅವರು ಆ ಅದೃಷ್ಟವನ್ನು ಚೆನ್ನಾಗಿ ಉಪಯೋಗಿಸಿಕೊಂಡು ಭಾರೀ ಸ್ಕೋರನ್ನು ಹೊಡೆದರು. ಭಾರತ ಅದರಿಂದ ಚೇತರಿಸಿಕೊಳ್ಳಲೇ ಇಲ್ಲ. ಟಾಸ್ ಗೆದ್ದು ಬಂದ ಅನಿರೀಕ್ಷಿತ ಅನುಕೂಲವನ್ನು ನಾವು ಸದುಪಯೋಗಿಸಿಕೊಳ್ಳದೆ ಅದನ್ನು ಅವರ ಪಾಲಿಗೆ ಕೊಟ್ಟೆವು, ಅದರ ಫಲ, ಗಾದೆ ಹೇಳಿದಂತೆ ‘ಮಾಡಿದ್ದುಣ್ಣೋ ಮಾರಾಯ’ ಕಥೆಯಾಯಿತು! ಗಧೆ ಆಸ್ಟ್ರೇಲಿಯಾಗೆ ಹೋಯಿತು.

4. ಒಂದೇ ಒಂದು ಪಂದ್ಯದಲ್ಲಿ ಆಡುವಾಗ ಅದರಲ್ಲಿ ಗೆಲ್ಲಲೇ ಬೇಕು ಅನ್ನುವ ಸ್ಥಿತಿ ಬಂದಾಗ, ಸೆಮಿ-ಫೈನಲ್ಸ್ ಅಥವ ಫೈನಲ್ಸ್ – ಅದನ್ನು ಆಡುವ ಮನೋಬಲ ಬೇರೆನೇ ಬೇಕಾಗುತ್ತೆ. ಆ ಪಂದ್ಯದಲ್ಲಿ ಅನೇಕ ತಿರುವುಗಳು ಬರಬಹುದು. ನಾವು ಅಂದುಕೊಂಡ ಹಾಗೆ ಅನೇಕ ಸಲ ಆಟದ ದಾಟಿ ಸರಿಯಾಗಿ ಹೋಗುವುದಿಲ್ಲ. ಹಾಗಾದಾಗ, ಕುಗ್ಗದೆ ಅದನ್ನು ಎದುರಿಸಿ ಸತತ ಪ್ರಯತ್ನದಿಂದ ಆಟವನ್ನು ನಮ್ಮ ಗೆಲುವಿನ ಹಾದಿಯಲ್ಲಿ ತರಲು ಪ್ರಯತ್ನ ಮಾಡಬೇಕಾಗುತ್ತದೆ. ಇದಕ್ಕೆ ಆಗ ಏನು ಮಾಡಬೇಕು ಅನ್ನುವ ಸಮಯ ಪ್ರಜ್ಞೆ ಬೇಕಾಗುತ್ತೆ. ಈಚಿನ ವರ್ಷಗಳಲ್ಲಿ ನಮ್ಮ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಮನೋಬಲ ಹೀಗಿತ್ತು. ಅವರು ಸ್ಥಿತ ಪ್ರಜ್ಞನ ಹಾಗೆ ಸಂಯಮ ಕಳೆದುಕೊಳ್ಳದೆ ಆಟದ ಧಾಟಿಯನ್ನು ನಮಗೆ ಬೇಕಾದ ಹಾದಿಯಲ್ಲಿ ಹೋಗುವ ಹಾಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ಅವರು ತಪ್ಪುಗಳನ್ನು ಕಡಿಮೆ ಮಾಡುತ್ತಿದ್ದರು. ಹಾಗಾಗಿ ಅವರಿಗೆ ವಿಜಯಲಕ್ಷ್ಮಿ ಒಲಿಯುತ್ತಿದ್ದಳು. ನಾವು ಗೆದ್ದ ಮುಕ್ಕಾಲು ಪಾಲು ಸರ್ತಿ ಧೋನಿಯವರ ನಾಯಕತ್ವದಲ್ಲೇ ಎಂದು ಹೇಳಬಹುದು.

5. ಕ್ರಿಕೆಟ್ ಒಂದು ತಂಡದ ಆಟ. ಟೀಮ್ ಗೇಮ್. ಎಲ್ಲರೂ ಪರಿಶ್ರಮ ಪಡಬೇಕಾಗುತ್ತೆ. ಅದರಲ್ಲಿ ‘ತಾನು ಮುಂದು, ಅವನು ಮುಂದು’ ಎನ್ನುವ ಧೋರಣೆಗೆ ಜಾಗವಿಲ್ಲ. ಒಂದು ಆರ್ಕೆಸ್ಟ್ರಾದಲ್ಲಿ ಪ್ರತಿಯೊಬ್ಬರೂ ಅವರವರ ವಾದ್ಯವನ್ನು ಚೆನ್ನಾಗಿ ನುಡಿಸಿದಾಗಲೇ ಅದರಿಂದ ಒಳ್ಳೆಯ ಹಾಡು, ಸಿಂಫೊನಿ ಬರಲು ಸಾಧ್ಯ! ಇಲ್ಲಿ ಯಾರು ಹೆಚ್ಚು, ಯಾರು ಕಡಿಮೆಯ ತಾರತಮ್ಯವಿರುವುದಿಲ್ಲ. ಭಾರತಕ್ಕೆ ಆಡುವ ಕೆಲವು ಆಟಗಾರರಿಗೆ ಮಣೆ ಹಾಕುವುದು ಜಾಸ್ತಿ ಎಂದು ಬಹಳ ಜನರ ಅನಿಸಿಕೆ. ಇದರಿಂದ ಟೀಮಿನಲ್ಲಿ ಅನೇಕ ಸಲ ಒಡಕು ಪರಿಸ್ಥಿತಿ ಉಂಟಾಗುತ್ತೆ. ಇದನ್ನು ಕೋಚ್ ಆಗಿರುವರು ಮನಸ್ಸಿನಲ್ಲಿ ಇಟ್ಟುಕೊಂಡು, ಏರುಪೇರು ಆಗದಂತೆ ತಂಡಕ್ಕೆ ಯಾವ ಹಾನಿಯೂ ಉಂಟಾಗದಂತೆ ನೋಡಿಕೊಳ್ಳಬೇಕು.

6. ಇತ್ತೀಚೆಗೆ, ಒಲಂಪಿಕ್ಸ್ ಆಟದಲ್ಲಿ ಮನಶಾಸ್ತ್ರಜ್ಞರನ್ನು ಟೀಮಿನ ಜೊತೆಗೆ ಕಳಿಸುತ್ತಾರೆ, ಜರ್ಮನಿಯ ಫುಟ್ಬಾಲ್ ಟೀಮ್ 2015ರಲ್ಲಿ ವಿಶ್ವ ವರ್ಲ್ಡ್ ಕಪ್ ಗೆದ್ದಾಗ ಅವರ ನಾಯಕ ಅದರ ಯಶಸ್ಸಿಗೆ ಅನೇಕ ಕಾರಣಗಳಲ್ಲಿ ಅವರ ಯೋಗ ಗುರುವಿಗೆ ಧನ್ಯವಾದವನ್ನು ಕೊಟ್ಟರು! ಪ್ಯಾಟ್ರಿಕ್ ಬ್ರೂಮರ್ ಅನ್ನುವ ಯೋಗ ಗುರು ಭಾರತದ ಬಿಕೆಎಸ್ ಐಯ್ಯಂಗಾರ್ ಅವರ ಯೋಗಾಭ್ಯಾಸವನ್ನು ತಂಡಕ್ಕೆ ಮಾಡಿಸಿದ್ದರು. ಅದರಿಂದ ಆಟಗಾರರು ಆಟದ ಆಗುಹೋಗುಗಳ ಮಧ್ಯೆ ವಿಚಲಿತರಾಗದೆ, ಧ್ಯೇಯವನ್ನು ಮರೆಯದೆ ಆಡುವುದಕ್ಕೆ ಯೋಗ ಸಹಾಯ ಮಾಡಿತು ಎಂದು ಅವರ ಕೋಚ್ ಜ್ಯೋಚಿಮ್ ಲೊ ಯೋಗ ಗುರು ಪ್ಯಾಟ್ರಿಕ್ ಅವರನ್ನು ಶ್ಲಾಘಿಸಿದರು. ಭಾರತದ ಕ್ರಿಕೆಟ್ ಸಂಸ್ಥೆ ಇದರ ಬಗ್ಗೆ ವಿಚಾರ ಮಾಡಿ ನಮ್ಮ ತಂಡ ಹೇಗೆ ಕೊನೆಯ ಹಂತದಲ್ಲಿ ಎದೆಗುಂದದೆ ಆಡುವ ಮನೋಭಾವ ಬೆಳಸಿಕೊಳ್ಳಬೇಕು ಎಂಬುದಕ್ಕೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಆಗಲೇ, ಯಾವ ಟೂರ್ನಮೆಂಟನ್ನು ಗೆಲ್ಲಲು ಸಾಧ್ಯ.

ಭಾರತ ಕ್ರಿಕೆಟ್‌ನ ಆರ್ಥಿಕ ಸ್ಥಿತಿಯನ್ನು ಐಪಿಎಲ್‌ನಿಂದ ಮಜುಬೂತಾಗಿ ಬೆಳಸಿ ವಿಶ್ವದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಅದರ ಜೊತೆ ಐಸಿಸಿಯ ಟೆಸ್ಟ್, ಓಡಿಐ, ಟಿ 20 ಪಂದ್ಯಗಳ ವಿಶ್ವ ಕಪ್‌ಗಳಲ್ಲೂ ಗೆದ್ದು ಕೀರ್ತಿ ಪತಾಕೆಯನ್ನು ಹಾರಿಸಬೇಕೆಂಬ ಲಕ್ಷಾಂತರ ಅಭಿಮಾನಿಗಳ ಹಾರೈಕೆಗೆ ಕ್ರಿಕೆಟಾಯ ನಮಹಃ ದಿಂದ ನಾವೂ ಧ್ವನಿಗೂಡಿಸುತ್ತೇವೆ.