ಮೂರೂವರೆ ತಿಂಗಳ ಪ್ರಯಾಣದ ನಂತರ ಲೆ ಜೆ಼ಂಟಿ ಮನಿಲಾ ತಲುಪಿದ. ಅವನು ಮನಿಲಾ ತಲುಪಿದಾಗ, ಅಲ್ಲಿನ ಬಂದರಿನಲ್ಲಿ ಹಡಗೊಂದು ಹತ್ತಿರದ ಮರಿಯಾನಾ ದ್ವೀಪಗಳಿಗೆ ಪ್ರಯಾಣ ಮಾಡಲು ಸಿದ್ಧವಾಗಿತ್ತು. ಶುಕ್ರ ಸಂಚಾರಕ್ಕೆ ಇನ್ನೂ ಹಲವು ವರ್ಷಗಳೇ ಸಮಯ ಇದ್ದುದ್ದರಿಂದ, ಲೆ ಜೆ಼ಂಟಿ ಹಡಗಿನಲ್ಲಿ ಮರಿಯಾನ ದ್ವೀಪಗಳಿಗೆ ಹೋಗುವ ಯೋಚನೆ ಮಾಡಿದ. ಆದರೆ, ತಿಂಗಳು ಗಟ್ಟಲೆ ನೌಕಾ ಪ್ರಯಾಣ ಮಾಡಿದ್ದು ಸಾಕೆನಿಸಿ, ಆಲೋಚನೆಯನ್ನು ಕಡೆಯ ನಿಮಿಷದಲ್ಲಿ ಕೈ ಬಿಟ್ಟ. ಅವನ ಅದೃಷ್ಟ ಚೆನ್ನಾಗಿತ್ತು. ಮರಿಯಾನಾ ದ್ವೀಪಗಳಿಗೆ ಹೋಗುತ್ತಿದ್ದ ನೌಕೆ ಸಮುದ್ರದಲ್ಲಿ ಮುಳುಗಿ ಅದರಲ್ಲಿದ್ದವರು ಸಾವಿಗೀಡಾದರು. ವಿಷಯ ಲೆ ಜೆ಼ಂಟಿಗೆ ಗೊತ್ತಾದಾಗ, ಅವನು ತನ್ನ ಅದೃಷ್ಟದ ದಿಕ್ಕು ಕೊನೆಗೂ ಬದಲಿಸಿತೆಂದುಕೊಂಡ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ನಾನು ಈಗ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದೇನೆ. ಆಗಾಗ್ಗೆ, ಕೆಲವೊಂದು ಎಕ್ಸ್‌ಪೆರಿಮೆಂಟುಗಳನ್ನು ಮಾಡಿದರೂ, ನನ್ನ ಕೆಲಸ ಬಹು ಮಟ್ಟಿಗೆ ಈ ಕ್ಷೇತ್ರದಲ್ಲಿ ನುರಿತ ವಿಜ್ಞಾನಿಗಳು ಪ್ರಕಟಿಸುವ ರೀಸರ್ಚ್ ಪೇಪರುಗಳನ್ನು ಓದಿ ಅರ್ಥೈಸಿಕೊಳ್ಳುವುದೇ ಆಗಿದೆ. ಆ ಪೇಪರುಗಳು ಬಹು ಮಟ್ಟಿಗೆ ಗಣಿತ, ಕಾಂಪ್ಯೂಟೇಷನಲ್ ಲಿಂಗ್ವಿಸ್ಟಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್ ವಿಚಾರಗಳಿಂದಲೇ ತುಂಬಿರುತ್ತದೆ.

ಆಗೊಮ್ಮೆ, ಈಗೊಮ್ಮೆ ನಾನು ನನ್ನ ಕಾರ್ಯಕ್ಷೇತ್ರಕ್ಕೆ ಸಂಬಂಧಿಸದ, ಖಗೋಳ ಶಾಸ್ತ್ರ, ಕ್ವಾಂಟಮ್ ಮೆಕಾನಿಕ್ಸ್, ಜೆನೆಟಿಕ್ಸ್ ಮುಂತಾದ ವಿಷಯಗಳ ಸೈಂಟಿಫಿಕ್ ಜರ್ನಲ್‌ ಗಳನ್ನೂ ತಿರುವಿ ಹಾಕುತ್ತಿರುತ್ತೇನೆ. ಅವುಗಳಲ್ಲಿನ ಲೇಖನಗಳು ಕುತೂಹಲಕಾರಿಯಾದರೂ, ಸಹಜವಾಗಿಯೇ ಅವೂ ಸಹ ಬಹು ಮಟ್ಟಿಗೆ ಗಣಿತ ಮತ್ತು ವೈಜ್ಞಾನಿಕ ವಿಷಯಗಳಿಂದಲೇ ತುಂಬಿರುತ್ತವೆ.

ಆದರೆ, ಇಂತಹ ರೀಸರ್ಚ್ ಜರ್ನಲ್‌ ಗಳಲ್ಲಿ, ಒಮ್ಮೊಮ್ಮೆ ಅತ್ಯಂತ ರೋಮಾಂಚಕವೆನಿಸುವ ಸತ್ಯ ಕತೆಗಳನ್ನೂ ಕಾಣಬಹುದು. ಡಾ.ಹೆಲೆನ್ ಸಾಯರ್ ಹಾಗ್ ಎಂಬ ಟೊರಾಂಟೋ ವಿಶ್ವವಿದ್ಯಾಲಯದ ಖಗೋಳ ಶಾಸ್ತ್ರಜ್ಞೆ ಬರೆದಂತಹ ಲೇಖನ ಇದಕ್ಕೊಂದು ಉತ್ತಮ ಉದಾಹರಣೆ ಎನ್ನಬಹುದು. ಕೆನಡಾದ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯ ಜರ್ನಲ್ ನಲ್ಲಿ ನಾಲ್ಕು ಕಂತುಗಳಲ್ಲಿ ಪ್ರಕಟವಾದ ಈ ಲೇಖನ, ಭೂಮಿಯಿಂದ ಸೂರ್ಯ ಎಷ್ಟು ದೂರದಲ್ಲಿದ್ದಾನೆ ಎಂದು ಅರಿಯಲು, ಹಲವಾರು ವರ್ಷಗಳ ಕಾಲ, ಮಹಾ ಪರ್ಯಟನೆಯನ್ನೇ ಮಾಡಿದ ಫ್ರೆಂಚ್ ವಿಜ್ಞಾನಿಯೊಬ್ಬನ ಕತೆಯನ್ನು ವಿಷದವಾಗಿ ಹೇಳುತ್ತದೆ.

ನನ್ನ ದೃಷ್ಟಿಯಲ್ಲಂತೂ, ಯಾವುದೇ ಸಿನೆಮಾ ಕಥೆಯನ್ನೂ ಮೀರಿಸುವಂತಹ ಕತೆಯಿದು. ಇದು ಕಾಲಯಾನದ ಕತೆಯಲ್ಲದಿರಬಹುದು. ಆದರೆ, ದೂರವನ್ನು ಅಳೆಯಲು ವರ್ಷಗಳೇ ಸುತ್ತಿದ ವಿಜ್ಞಾನಿಯೊಬ್ಬನ ಈ ಕತೆ, ಇಲ್ಲಿ ಅಪ್ರಸ್ತುತವಲ್ಲವೆನಿಸುತ್ತದೆ.

ಭೂಮಿಯಿಂದ ಸೂರ್ಯ ಎಷ್ಟು ದೂರದಲ್ಲಿದ್ದಾನೆ?!
ಈ ಪ್ರಶ್ನೆ ಸಾವಿರಾರು ವರ್ಷಗಳಿಂದ ಖಗೋಳ ಶಾಸ್ತ್ರಜ್ಞರನ್ನು ಕಾಡಿದೆಯಾದರೂ, ಹದಿನೆಂಟನೆಯ ಶತಮಾನದವರೆಗೆ, ಖಚಿತವಾದ ಉತ್ತರವನ್ನು – ವೈಜ್ಞಾನಿಕ ಪುರಾವೆಗಳೊಂದಿಗೆ – ಯಾರೂ ನೀಡಿರಲಿಲ್ಲ.

ಈ ದೂರವನ್ನು ಕಂಡುಕೊಳ್ಳುವುದಾದರೂ ಹೇಗೆ?!
ನಾವು ಹೈ-ಸ್ಕೂಲು, ಪಿ.ಯು.ಸಿ. ಗಳಲ್ಲಿ ಕಲಿಯುವ ಸರಳ ಟ್ರಿಗನಾಮೆಟ್ರಿ ಸಹಾಯದಿಂದ ಇದನ್ನು ಮಾಡಬಹುದು. “ಪ್ಯಾರಲಾಕ್ಸ್ ವಿಧಾನ” ಎನ್ನುವ ಈ ವಿಧಾನಕ್ಕೆ ನಿಮಗೆ ಬೇಕಿರುವುದು, ಟ್ರಿಗನಾಮೆಟ್ರಿಯ ಜ್ಞಾನ ಮತ್ತು ಆಗೊಮ್ಮೆ-ಈಗೊಮ್ಮೆ ಆಕಾಶದಲ್ಲಿ ಕಾಣುವ ವಿಶೇಷ ವಿದ್ಯಮಾನಗಳು (Astronomical Event).

(ಮನಿಲಾ- 18ನೇ ಶತಮಾನ)

“ಟ್ರಾನ್ಸಿಟ್ ಆಫ್ ವೀನಸ್” ಎನ್ನುವುದು ಅಂತಹ ಒಂದು ವಿಶೇಷ ವಿದ್ಯಮಾನ. ಕನ್ನಡದಲ್ಲಿ ಇದನ್ನು “ಶುಕ್ರ ಸಂಚಾರ” ಎನ್ನಬಹುದು. ಭೂಮಿ, ಶುಕ್ರ ಮತ್ತು ಸೂರ್ಯ ಒಂದೇ ಸಾಲಿನಲ್ಲಿ ಬಂದು, ಭೂಮಿಯಿಂದ ನೋಡಿದಾಗ, ಶುಕ್ರನು ಸೂರ್ಯನ ಮುಖದ ಅಗಲಕ್ಕೂ ಸಂಚರಿಸುತ್ತಿರುವಂತೆ ಕಾಣಿಸುವ ಸಂಗತಿ ಅದು; ಬಹಳ ಅಪರೂಪದ್ದು ಸಹ. ಇದು ಇತ್ತೀಚೆಗೆ ಆಗಿದ್ದು, ೨೦೦೪ ಮತ್ತು ೨೦೧೨ರಲ್ಲಿ. ಮುಂದಿನದು ನೋಡಬೇಕೆಂದರೆ, ೨೧೧೭ ಮತ್ತು ೨೧೨೫ರ ವರೆಗೂ ಕಾಯಬೇಕು.

ಈ ಟ್ರಾನ್ಸಿಟ್ ಆಫ್ ವೀನಸ್ ಸುಮಾರು ನೂರು ವರ್ಷಕ್ಕೊಮ್ಮೆ ಆಗುವ ಒಂದು ಅವಳಿ ವಿದ್ಯಮಾನ. ಪ್ರತಿ ನೂರು ವರ್ಷಕ್ಕೊಮ್ಮೆ, ಮೊದಲೊಂದು ಸಾರಿ ಕಾಣಿಸುತ್ತದೆ. ಅದರ ನಂತರ ಎರಡನೆಯ ಬಾರಿ ಎಂಟು ವರ್ಷಗಳಲ್ಲಿ ಮತ್ತೊಮ್ಮೆ ಕಾಣುತ್ತದೆ. ಮುಂದಿನದನ್ನು ನೋಡಬೇಕೆಂದರೆ, ನೂರಕ್ಕೂ ಹೆಚ್ಚು ವರ್ಷ ಕಾಯಬೇಕು.

(ಹ್ಯಾಲಿ)

ಈ ಶುಕ್ರ ಸಂಚಾರದ ಮಹತ್ವವನ್ನು ಮೊದಲ ಬಾರಿಗೆ ಗುರುತಿಸಿದವನು ಹದಿನೇಳನೆಯ ಶತಮಾನದ ಜರ್ಮನ್ ಮಹಾನ್ ವಿಜ್ಞಾನಿ ಯೋಹಾನ್ ಕೆಪ್ಲರ್. ಅವನು ೧೬೨೭ರಲ್ಲಿ, ಇದರ ಕುರಿತು ಲೆಕ್ಕ ಹಾಕಿ, ೧೭೬೧ರಲ್ಲಿ ಇದನ್ನು ಕಾಣಬಹುದೆಂದು ಹೇಳಿದ. ಅವನ ನಂತರ, ಹದಿನೆಂಟನೆಯ ಶತಮಾನದ ಆದಿ ಭಾಗದಲ್ಲಿ ಇಂಗ್ಲಿಷ್ ಖಗೋಳ ಶಾಸ್ತ್ರಜ್ಞ ಎಡ್ಮಂಡ್ ಹ್ಯಾಲಿ, ಇನ್ನಷ್ಟು ಕರಾರುವಾಕ್ಕಾಗಿ ಲೆಕ್ಕಾಚಾರ ಮಾಡಿ, ಈ ಟ್ರಾನ್ಸಿಟ್ ಆಫ್ ವೀನಸ್ ಅನ್ನು ಜೂನ್ ೬, ೧೭೬೧ ಮತ್ತು ಜೂನ್ ೩, ೧೭೬೯ರಲ್ಲಿ ಭೂಮಿಯ ಕೆಲವಾರು ಜಾಗಗಳಿಂದ ಕಾಣಬಹುದೆಂದು ಹೇಳಿದ.

ಹ್ಯಾಲಿ ಇದನ್ನು ಹೇಳಿದಾಗ, ಅವನಿಗೆ, ವಯಸ್ಸಾಗಿತ್ತು. ಅವನು ೧೭೬೧ರ ವರೆಗೆ ಬದುಕಿರುವ ಯಾವುದೇ ಸಾಧ್ಯತೆ ಇರಲಿಲ್ಲ. ಆದರೆ, ಭೂಮಿಗೂ-ಸೂರ್ಯನಿಗೂ ಇರುವ ದೂರವನ್ನು ಅಳೆಯಲು ಸಿಕ್ಕಿರುವ ಈ ಅಪರೂಪದ ಅವಕಾಶವನ್ನು ಕೈ ಚೆಲ್ಲಬಾರದೆಂದು ಅವನಿಗೆ ಗೊತ್ತಿತ್ತು. ಈ ಅವಕಾಶವನ್ನು ಖಗೋಳ ಶಾಸ್ತ್ರಜ್ಞರು ಹೇಗೆ ಉಪಯೋಗಿಸಿಕೊಳ್ಳಬೇಕೆಂಬುದರ ಬಗೆಗೆ ಒಂದು ಪುಸ್ತಕವನ್ನೇ ಬರೆದ. ಆ ಪುಸ್ತಕ ಯುರೋಪಿನ ಎಲ್ಲ ವಿಜ್ಞಾನಿಗಳಿಗೂ ಓದಲು ಅನುಕೂಲವಾಗುವಂತೆ ಲ್ಯಾಟಿನ್ ಭಾಷೆಯಲ್ಲಿತ್ತು – ಹ್ಯಾಲಿ ಸ್ವತಃ ಇಂಗ್ಲೀಷಿನವನಾದರೂ.

ಆದರೆ, ಹದಿನೆಂಟನೆಯ ಶತಮಾನದ ಆದಿಯಲ್ಲಿ ಪ್ರಕಟವಾದ ಈ ಪುಸ್ತಕ, ಆ ಶತಮಾನದ ಮಧ್ಯ ಭಾಗದ ಹೊತ್ತಿಗೆ ಮೂಲೆಗೆ ಸೇರಿತ್ತು. ಶುಕ್ರ ಸಂಚಾರಕ್ಕೆ ಕೇವಲ ಹದಿನೆಂಟೇ ತಿಂಗಳು ಸಮಯವಿದ್ದಾಗ, ೧೭೬೦ರ ಆದಿಯಲ್ಲಿ, ಅದು ಹೇಗೋ ಕೆಲವಾರು ಫ್ರೆಂಚ್ ವಿಜ್ಞಾನಿಗಳ ಗಮನಕ್ಕೆ ಬಂದಿತು. ಅವರು, ಈ ಅವಕಾಶವನ್ನು ಹೇಗಾದರೂ ಮಾಡಿ ಬಳಸಿಯೇಕೊಳ್ಳಬೇಕೆಂದು ನಿರ್ಧರಿಸಿದರು. ಆದರೆ, ಅದೇನೂ ಅಂತಹ ಸುಲಭದ ಕೆಲಸವಾಗಿರಲಿಲ್ಲ.

(ಯೋಹಾನ್ ಕೆಪ್ಲರ್)

ಆ ಕಾಲದಲ್ಲಿ, ಯೂರೋಪಿನ ರಾಷ್ಟ್ರಗಳು ಒಂದರೊಡನಿನ್ನೊಂದು ಕದನದಲ್ಲಿ ನಿರತರಾಗಿದ್ದವು. ಒಂದು ದೇಶದ ಹಡಗನ್ನು ಇನ್ನೊಂದು ದೇಶದ ಹಡಗು ನಡು ಸಮುದ್ರದಲ್ಲಿ ಮುಳುಗಿಸುವುದು ಸಾಮಾನ್ಯವಾಗಿತ್ತು. ಇಂಗ್ಲೀಷರು, ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಸ್ಪೇನಿನವರು ಒಬ್ಬರಿನ್ನೊಬ್ಬರ ಕತ್ತುಗಳನ್ನು ಕತ್ತರಿಸುತ್ತಿದ್ದ ಕಾಲವದು. ಭೂಮಿಯಿಂದ ಸೂರ್ಯನ ದೂರವನ್ನು ಅಳೆಯಲು, ಈ ದೇಶಗಳವರು ತಮ್ಮೆಲ್ಲಾ ದ್ವೇಷ, ಅಂಧ ದೇಶಾಭಿಮಾನ, ಮತ್ಸರ, ವ್ಯವಹಾರಿಕ ಪೈಪೋಟಿ ಎಲ್ಲವನ್ನೂ ಮೀರಬೇಕಿತ್ತು. ಈ ಎಲ್ಲ ದೇಶಗಳ ವಿಜ್ಞಾನಿಗಳು ಭೂಮಿಯ ವಿವಿಧ ಭಾಗಗಳಿಂದ ಈ ಟ್ರಾನ್ಸಿಟ್ ಆಫ್ ವೀನಸ್ ಅನ್ನು ವೀಕ್ಷಿಸಿ, ಅದರ ವಿವರಗಳನ್ನು (ಲ್ಯಾಟಿಟ್ಯೂಡ್, ಲಾಂಗಿಟ್ಯೂಡ್, ಮತ್ತು ಸ್ಥಳೀಯ ಸಮಯ) ಕರಾರುವಾಕ್ಕಾಗಿ ದಾಖಲಿಸಿ ಒಬ್ಬರಿಗೊಬ್ಬರು ಅವುಗಳನ್ನು ಹಂಚಿಕೊಂಡರೆ ಮಾತ್ರ ಇದರಲ್ಲಿ ಯಶಸ್ಸು ಕಾಣಬಹುದಿತ್ತು.

ಇಂದು ಒಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು, ನಾವಿರುವ ಜಾಗದ ಲೋಕಲ್ ಟೈಮ್ ಮತ್ತು ಲ್ಯಾಟಿಟ್ಯೂಡ್/ಲಾಂಗಿಟ್ಯೂಡ್‌ ಗಳನ್ನು ಕ್ಷಣ ಮಾತ್ರದಲ್ಲಿ ಕಂಡುಕೊಳ್ಳಬಹುದು. ಆದರೆ, ಹದಿನೇಳನೆಯ ಶತಮಾನದಲ್ಲಿ ಅವು ಯಾವುವೂ ಇರಲಿಲ್ಲ. ವಿಜ್ಞಾನಿಗಳು ತಾವಿರುವ ಜಾಗದಲ್ಲಿ ಸೂರ್ಯ ಸಂಚಾರವನ್ನು ಸೂಕ್ಷ್ಮವಾಗಿ ಗಮನಿಸಿ ಆ ಜಾಗದ ಲೋಕಲ್ ಟೈಮ್ ಲೆಕ್ಕ ಹಾಕಿದ್ದರು. ಲ್ಯಾಟಿಟ್ಯೂಡ್/ಲಾಂಜಿಟ್ಯೂಡ್ ನಿಖರವಾಗಿ ನಿರ್ಧರಿಸುವುದೂ ಸುಲಭದ ಕೆಲಸವೇನಾಗಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಶುಕ್ರ ಸಂಚಾರವನ್ನು ವೀಕ್ಷಿಸಲು, ಜಗತ್ತಿನ ಯಾವುದೋ ಒಂದು ಮೂಲೆಗೆ ಹೋಗುವುದಾದರೂ ಹೇಗೆ? ಪ್ಲೇನುಗಳಿರಲಿ, ಬಸ್ಸು-ಕಾರುಗಳೂ ಇಲ್ಲದ ಆ ಕಾಲದಲ್ಲಿ?

ಆದರೂ, ಯುರೋಪಿನ ಹಲವು ದೇಶಗಳ ಖಗೋಳ ವಿಜ್ಞಾನಿಗಳು ಈ ಮಹಾನ್ ಯತ್ನವನ್ನು ಕೈಗೆತ್ತಿಕೊಂಡರು. ವಿವಿಧ ದೇಶಗಳ ಹಲವಾರು ತಂಡಗಳು, ತಮ್ಮ ಟೆಲೆಸ್ಕೋಪ್ ಮತ್ತಿತರ ಉಪಕರಣಗಳೊಂದಿಗೆ, ಕುದುರೆಗಾಡಿಯೋ-ಹಡಗೋ ಎನ್ನದೇ ವಿಶ್ವದ ಮೂಲೆ ಮೂಲೆಗಳಿಗೆ ಪ್ರಯಾಣ ಬೆಳೆಸಲು ಸನ್ನದ್ಧರಾದರು. ಇದರ ಮುಖ್ಯ ಕಾರಣಕರ್ತ, ಫ್ರೆಂಚ್ ವಿಜ್ಞಾನಿ ಜೋಸೆಫ್-ನಿಕಲಾಸ್ ಡಿಲೈಲ್. ಅವನು ಹಲವಾರು ವಿಜ್ಞಾನಿಗಳಿಗೆ, ಸರ್ಕಾರಗಳಿಗೆ, ಸಂಸ್ಥೆಗಳಿಗೆ ಮನವಿ ಪತ್ರಗಳನ್ನು ಬರೆದು ಅಪರೂಪದ ಈ ಶುಕ್ರ ಸಂಚಾರ ದೊರಕಿಸುವ ಅವಕಾಶವನ್ನು ಸದುಪಯೋಗ ಪಡೆಯಬೇಕೆಂದು ಕರೆ ನೀಡಿದ.

ಬ್ರಿಟನ್ನಿನ ರಾಯಲ್ ಸೊಸೈಟಿಯೂ ಸೇರಿದಂತೆ, ಹಲವು ವೈಜ್ಞಾನಿಕ ಸಂಘಟನೆಗಳು ಈ ಪ್ರಯತ್ನಕ್ಕೆ ಕೈ ಜೋಡಿಸಿದವು. ರಾಯಲ್ ಸೊಸೈಟಿ ತನ್ನ ಸರ್ಕಾರದಿಂದ ಕಾಡಿ ಬೇಡಿ ಸಹಾಯ ಧನವನ್ನೂ ಪಡೆಯಿತು. (ಸೊಸೈಟಿಯ ಸೆಕ್ರೆಟರಿ ಆ ಹಣವನ್ನು ತಾನೇ ತಿಂದದ್ದರಿಂದ, ರಾಯಲ್ ಸೊಸೈಟಿಗೆ ಮುಖಭಂಗವಾಗಿದ್ದು ಬೇರೊಂದು ಕತೆ)

******

(ಮಾರಿಷಸ್- 18ನೇ ಶತಮಾನ)

ಡಿಲೈಲ್‌ ನ ಕರೆಗೆ ಓಗೊಟ್ಟ ವಿಜ್ಞಾನಿಗಳಲ್ಲಿ, ಫ್ರಾನ್ಸ್ ದೇಶದ ಗ್ವಿಯಾಮೆ ಲೆ ಜೆ಼ಂಟಿ ಸಹ ಒಬ್ಬ. ಇದು ಅವನ ಕತೆ.

ಲೆ ಜೆ಼ಂಟಿ ಹುಟ್ಟಿದ್ದು ಕ್ರಿ.ಶ. ೧೭೨೫ರಲ್ಲಿ. ವಿದ್ಯಾಭ್ಯಾಸ ಮಾಡಿದ್ದು ಕ್ರಿಶ್ಚಿಯನ್ ಧರ್ಮಶಾಸ್ತ್ರದ ವಿಚಾರದ ಬಗೆಗೆ. ಆದರೆ ಅವನಿಗೆ ಖಗೋಳ ಶಾಸ್ತ್ರದ ಬಗೆಗೆ ಅಪಾರ ಆಸಕ್ತಿ ಇತ್ತು. ಹೀಗಾಗಿ ಪ್ರೊಫೆಸರ್ ಡಿಲೈಲ್ ಆಗಾಗ್ಗೆ ನೀಡುತ್ತಿದ್ದ ಉಪನ್ಯಾಸಗಳನ್ನು ಕೇಳುತ್ತಿದ್ದ. ಟೆಲಿಸ್ಕೋಪ್ ಸೇರಿದಂತೆ ಅಂದಿನ ಖಗೋಳ ಶಾಸ್ತ್ರಜ್ಞರು ಉಪಯೋಗಿಸುತ್ತಿದ್ದ ಉಪಕರಣಗಳನ್ನು ಉಪಯೋಗಿಸುವುದನ್ನು ತಿಳಿದುಕೊಂಡ. ಅಲ್ಲದೇ, ಖಗೋಳ ಶಾಸ್ತ್ರಕ್ಕೆ ಬೇಕಿದ್ದ ಗಣಿತದ ಕ್ಲಿಷ್ಟ ಲೆಕ್ಕಾಚಾರಗಳನ್ನು ಮಾಡುವುದರಲ್ಲಿಯೂ ಪರಿಣಿತನಾದ. ಅವನ ಈ ಪರಿಣಿತಿ, ಉತ್ಸಾಹ ಎಷ್ಟಿತ್ತೆಂದರೆ, ಅವನಿಗೆ ಮೂವತ್ತು ತುಂಬುವ ಮುನ್ನವೇ, ಪ್ಯಾರಿಸ್ಸಿನ ಪ್ರತಿಷ್ಠಿತ ರಾಯಲ್ ಅಕಾಡೆಮಿ ಆಫ್ ಸೈನ್ಸಸ್ ಅವನಿಗೆ ತನ್ನ ಬಾಗಿಲನ್ನು ತೆರೆಯಿತು.

೧೭೬೦ರಲ್ಲಿ ಪ್ರೊಫೆಸರ್ ಡಿಲೈಲ್, ಖಗೋಳ ಶಾಸ್ತ್ರಜ್ಞರಿಗೆ ವಿಶ್ವದ ಮೂಲೆ-ಮೂಲೆಗಳಿಗೆ ಪ್ರಯಾಣಮಾಡಿ ೧೭೬೧ರ ಶುಕ್ರ ಸಂಚಾರವನ್ನು ವೀಕ್ಷಿಸುವಂತೆ ಕರೆ ನೀಡಿದಾಗ, ಲೆ ಜೆ಼ಂಟಿ ತನ್ನ ಎಂದಿನ ಉತ್ಸಾಹದಲ್ಲಿ ಕೈ ಎತ್ತಿದ. ಶುಕ್ರ ಸಂಚಾರವನ್ನು ವೀಕ್ಷಿಸಲು ಅವನು ಆಯ್ಕೆ ಮಾಡಿಕೊಂಡ ಜಾಗ, ಪ್ಯಾರಿಸಿನಿಂದ ಹತ್ತಾರು ಸಾವಿರ ಮೈಲು ದೂರದಲ್ಲಿದ್ದ ಪಾಂಡಿಚೆರಿ.

ಪಾಂಡಿಚೆರಿ ಆಗ ಫ್ರೆಂಚರ ಸ್ವಾಧೀನದಲ್ಲಿತ್ತಾದರೂ, ಪ್ಯಾರಿಸ್ಸಿನಿಂದ ಅಲ್ಲಿಗೆ ಹೋಗುವುದು ಸುಲಭವಾಗಿರಲಿಲ್ಲ. ತಿಂಗಳಿಗೋ, ಎರಡು ತಿಂಗಳಿಗೋ ಒಂದು ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯ ಹಡುಗು ಅಲ್ಲಿಗೆ ಪ್ರಯಾಣ ಬೆಳೆಸುತ್ತಿತ್ತು. ಸೋಯುಝ್ ಕಾಲುವೆ ಇನ್ನೂ ಇರದಿದ್ದ ಆ ಕಾಲದಲ್ಲಿ, ಈ ಹಡುಗಗಳು ಆಫ್ರಿಕಾ ಖಂಡವನ್ನು ಸುತ್ತಿ, ಕೇಪ್ ಆಫ್ ಗುಡ್‌ ಹೋಪನ್ನು ಮುತ್ತಿಕ್ಕಿ ಭಾರತವನ್ನು ತಲುಪಬೇಕಿತ್ತು. ಈ ನೌಕಾಯಾನ ಹಲವಾರು ತಿಂಗಳುಗಳ ಕಾಲ ತೆಗೆದುಕೊಳ್ಳುತ್ತಿತ್ತು. ಯಾಂತ್ರಿಕೃತವಲ್ಲದ ಆ ಹಾಯಿ ದೋಣಿಗಳು, ಎಷ್ಟೋ ಬಾರಿ ವಾಯು ದೇವನ ಅವಕೃಪೆಗೊಳಗಾಗಿ ಗುರಿ ಮುಟ್ಟುತ್ತಲೆ ಇರಲಿಲ್ಲ.

(ಲೆ ಜೆ಼ಂಟಿ)

ಲೆ ಜೆ಼ಂಟಿ ತನ್ನ ಪ್ರಯಾಣಕ್ಕೆ ಸಿದ್ಧನಾದಾಗ, ಫ್ರಾನ್ಸಿನಿಂದ ನೇರವಾಗಿ ಪಾಂಡಿಚೆರಿಗೆ ತಲುಪುವ ಹಡುಗು ಯಾವುದೂ ಇರಲಿಲ್ಲ. ಕೊಂಚ ವಿಚಾರಿಸಿದಾಗ, ಮೊದಲು ಮಾರಿಷಸ್ ತಲುಪಿದರೆ ಅಲ್ಲಿಂದ ಪಾಂಡಿಚೆರಿಗೆ ಹೋಗುವ ಹಡಗುಗಳು ಸಿಗಬಹುದೆಂದು ಗೊತ್ತಾಯಿತು.

ಲೆ ಜೆ಼ಂಟಿ, ೧೭೬೦ ಮಾರ್ಚ್, ೨೬ರಂದು ತನ್ನ ಪ್ರಯಾಣ ಶುರು ಮಾಡಿದ. ಶುಕ್ರ ಸಂಚಾರಕ್ಕೆ ಇನ್ನೂ ಒಂದೂ ಕಾಲು ವರ್ಷ ಸಮಯವಿತ್ತು. ಆದಷ್ಟೂ ಬೇಗನೆ ಪಾಂಡಿಚೆರಿ ತಲುಪಿ ಅಲ್ಲೊಂದು ಉತ್ತಮ ಖಗೋಳ ವೀಕ್ಷಣಾಲಯವನ್ನು ನಿರ್ಮಿಸುವ ಆಲೋಚನೆ ಅವನ ಮನದಲ್ಲಿತ್ತು.

೧೭೬೦ರಲ್ಲಿ ಪ್ರೊಫೆಸರ್ ಡಿಲೈಲ್, ಖಗೋಳ ಶಾಸ್ತ್ರಜ್ಞರಿಗೆ ವಿಶ್ವದ ಮೂಲೆ-ಮೂಲೆಗಳಿಗೆ ಪ್ರಯಾಣಮಾಡಿ ೧೭೬೧ರ ಶುಕ್ರ ಸಂಚಾರವನ್ನು ವೀಕ್ಷಿಸುವಂತೆ ಕರೆ ನೀಡಿದಾಗ, ಲೆ ಜೆ಼ಂಟಿ ತನ್ನ ಎಂದಿನ ಉತ್ಸಾಹದಲ್ಲಿ ಕೈ ಎತ್ತಿದ.

ಸುಮಾರು ಮೂರುವರೆ ತಿಂಗಳ ನೌಕಾಯಾನದ ನಂತರ ೧೭೬೦ರ ಜುಲೈ ನಲ್ಲಿ, ಲೆ ಜೆ಼ಂಟಿ ಮಾರಿಷಸ್ ತಲುಪಿದ. ಅಷ್ಟರಲ್ಲಿ, ಕೆಟ್ಟ ಸಮಾಚಾರವೊಂದು ಅವನಿಗಾಗಿ ಕಾದಿತ್ತು; ಭಾರತದಲ್ಲಿ ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ಕದನ ಶುರುವಾಗಿತ್ತು; ಹೀಗಾಗಿ ಮಾರಿಷಸ್‌ ನಿಂದ ಪಾಂಡಿಚೆರಿಗೆ ಯಾವುದೇ ನೌಕೆಗಳು ಹೋಗುತ್ತಿರಲಿಲ್ಲ.

ಲೆ ಜೆ಼ಂಟಿ ಆರು ತಿಂಗಳು ಕಾಲ ಮಾರಿಷಸ್ಸಿನಲ್ಲಿಯೇ ಕಳೆದ. ಅಲ್ಲಿನ ಸಸ್ಯಗಳ ಬಗೆಗೆ, ಪಶು-ಪಕ್ಷಿಗಳ ಬಗೆಗೆ ಅಪಾರ ಮಾಹಿತಿಯನ್ನು ಕಲೆಹಾಕಿದ. ಆದರೂ ಅವನ ಮನಸ್ಸು ಶುಕ್ರ ಸಂಚಾರದ ಕಡೆಗೇ ಇತ್ತು. ಹೇಗಾದರೂ ಮಾಡಿ ಪಾಂಡಿಚೆರಿ ತಲುಪಬೇಕೆಂದು ಯೋಚಿಸುತ್ತಿದ್ದ.

೧೭೬೧ರ ಫೆಬ್ರವರಿಯಲ್ಲಿ ಫ್ರೆಂಚ್ ಯುದ್ಧ ನೌಕೆಯೊಂದು ಪಾಂಡಿಚೆರಿಗೆ ಹೋಗಲು ಸಿದ್ಧವಾಯಿತು. ಆ ನೌಕೆಯ ಕ್ಯಾಪ್ಟನ್ ಅನ್ನು ಕಾಡಿ-ಬೇಡಿ ಲೆ ಜೆ಼ಂಟಿ ಆ ನೌಕೆಯಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆದುಕೊಂಡ. ಶುಕ್ರ ಸಂಚಾರಕ್ಕೆ ಇನ್ನೂ ಮೂರು-ನಾಲ್ಕು ತಿಂಗಳುಗಳು ಇದ್ದವು. ಅಷ್ಟರಲ್ಲಿ, ಪಾಂಡಿಚೆರಿ ತಲುಪಿದರೆ ಸಾಕು ಎಂದು ಅವನ ಮನ ತುಡಿಯುತ್ತಿತ್ತು.

ಕೆಲವು ವಾರಗಳ ಕಾಲ ಅವನಿದ್ದ ಯುದ್ಧನೌಕೆ ಯಾವುದೇ ತೊಂದರೆ ಇಲ್ಲದೆ ಭಾರತದ ಪೂರ್ವ ಕಡಲ ತಡಿಯಲ್ಲಿರುವ ಪಾಂಡಿಚೆರಿಯ ಕಡೆಗೆ ಪಯಣಿಸುತ್ತಿತ್ತು. ಆದರೆ, ಏಪ್ರಿಲ್ ಮಧ್ಯದ ಹೊತ್ತಿಗೆ, ಗಾಳಿಯ ದಿಕ್ಕು ಬದಲಿಸಿತು. ನೌಕೆ ಭಾರತದ ಪೂರ್ವ ಕಡಲ ತಡಿಯ ಬದಲು ಪಶ್ಚಿಮಕ್ಕೆ ಹೋಗಲು ಆರಂಭಿಸಿತು. ಲೆ ಜೆ಼ಂಟಿಯ ಮನದಲ್ಲಿ ಹೊಸದೊಂದು ಆಲೋಚನೆ ಬಂತು: ಭಾರತದ ಪಶ್ಚಿಮ ತಡಿಯಲ್ಲಿದ್ದ ಇನ್ನೊಂದು ಫ್ರೆಂಚ್ ಕಾಲೋನಿಯಾದ ಮಾಹೆಯನ್ನು ತಲುಪಿ, ಅಲ್ಲಿಂದ ಹೇಗಾದರೂ ಭೂ ಮಾರ್ಗದಿಂದ ಪಾಂಡಿಚೆರಿಯನ್ನು ಸೇರಬಹುದೆಂದು ಅವನು ಯೋಚನೆ ಮಾಡಿದ. ಹಡಗಿನ ಕ್ಯಾಪ್ಟನ್‌ ಗೆ ಲೆ ಜ಼ೆಂಟಿ ಈ ಕುರಿತು ಮನವಿ ಮಾಡಿದ. ಕ್ಯಾಪ್ಟನ್ ಅದನ್ನು ಒಪ್ಪಿಯೂ ಕೊಂಡ.

ಆದರೆ, ಆ ನೌಕೆ ಮಾಹೆ ತಲುಪುವ ಹೊತ್ತಿಗೆ ಇನ್ನೊಂದು ಆಘಾತಕಾರಿ ಸುದ್ದಿಯೊಂದು ಹೊರಬಿತ್ತು. ಆ ಹೊತ್ತಿಗೆ, ಮಾಹೆ ಇಂಗ್ಲೀಷರ ಕೈ ವಶವಾಗಿತ್ತು. ಫ್ರೆಂಚ್ ಯುದ್ಧ ನೌಕೆಯ ಕ್ಯಾಪ್ಟನ್, ಬ್ರಿಟಿಷರ ಸ್ವಾಧೀನದ ಮಾಹೆಯಲ್ಲಿ ಲಂಗರು ಹಾಕಲು ಸಿದ್ಧನಿರಲಿಲ್ಲ. ಬದಲಿಗೆ, ನೌಕೆಯನ್ನು, ವಾಪಸು ಮಾರಿಷಸ್ ಕಡೆಗೆ ತಿರುಗಿಸಿದ.

ಕೊನೆಗೂ ೧೭೬೧ ಜೂನ್, ೬ ಬಂದೇ ಬಂತು. ಲೆ ಜೆ಼ಂಟಿ, ತಾನು ಪ್ರಯಾಣಿಸುತ್ತಿದ್ದ ಹಡಗಿನಿಂದಲೇ ಶುಕ್ರ ಸಂಚಾರವನ್ನು ವೀಕ್ಷಿಸಿದ. ಆದರೆ, ಹಡಗಿನಲ್ಲಿದ್ದದ್ದರಿಂದ ಯಾವುದನ್ನೂ ನಿಖರವಾಗಿ ದಾಖಲು ಮಾಡಿಕೊಳ್ಳಲಾಗಲಿಲ್ಲ. ಪಾಂಡಿಚೆರಿಯನ್ನು ಹೇಗಾದರೂ ತಲುಪಬೇಕೆಂಬ, ಒಂದು ವರ್ಷಕ್ಕೂ ಹೆಚ್ಚಿನ ಕಾಲದ, ಅವನ ಸಾಹಸ, ಪರಿಶ್ರಮಗಳು ಸಂಪೂರ್ಣ ವ್ಯರ್ಥವಾಗಿದ್ದವು.

(ಟ್ರಾನ್ಸಿಟ್ ಆಫ್ ವೀನಸ್)

ಮಾರಿಷಸ್ ತಲುಪಿದ ನಂತರವೂ ಅವನ ಮನಸ್ಸು ತನ್ನ ವ್ಯರ್ಥ ಪ್ರಯತ್ನದ ಬಗೆಗೇ ಹರಿಯುತ್ತಿತ್ತು. ಲೆ ಜೆ಼ಂಟಿ, ಖಿನ್ನತೆಗೆ ಒಳಗಾದ. ಆದರೆ, ಆ ಖಿನ್ನತೆ ಬಹಳ ಕಾಲ ಉಳಿಯಲಿಲ್ಲ. ಶತಮಾನಕ್ಕೊಮ್ಮೆ ಕಾಣುವ ಟ್ರಾನ್ಸಿಟ್ ಆಫ್ ವೀನಸ್ ಅವಳಿಗಳಲ್ಲಿ, ಒಂದು ಆಗಲೇ ಸಂಭವಿಸಿತ್ತಾದರೂ, ಇನ್ನು ಎಂಟೇ ವರ್ಷಗಳಲ್ಲಿ ಇನ್ನೊಂದನ್ನು ವೀಕ್ಷಿಸಲು ಇನ್ನೂ ಅವಕಾಶವಿತ್ತು. ಅವನು ಅದರ ಬಗೆಗೆ ಯೋಚಿಸತೊಡಗಿದ. ಅದನ್ನು ಪಾಂಡಿಚೆರಿಯಲ್ಲೂ ಕಾಣಬಹುದಿದ್ದರೂ, ಅಂದಿನ ವಿಜ್ಞಾನಿಗಳ ಲೆಕ್ಕಾಚಾರದ ಪ್ರಕಾರ, ಫಿಲಿಪ್ಪೀನ್ಸ್ ದೇಶದ ಮನಿಲಾ, ಪಾಂಡಿಚೆರಿಗಿಂತ ಉತ್ತಮ ಜಾಗವಾಗಿತ್ತು. ಆ ಎಂಟು ವರ್ಷಗಳಲ್ಲಿ ಅವನು ಮನಿಲಾ ತಲುಪಬೇಕಿತ್ತು.

ಲೆ ಜೆ಼ಂಟಿ, ಒಂದು ನಿರ್ಧಾರಕ್ಕೆ ಬಂದ. ಫ್ರಾನ್ಸಿಗೆ ವಾಪಸು ಹೋಗಿ, ಅಲ್ಲಿಂದ ಮನಿಲಾಕ್ಕೆ ಮುಂದೊಮ್ಮೆ ಹೋಗುವುದರ ಬದಲು, ಮಾರಿಷಸ್ಸಿನಲ್ಲಿಯೇ ಉಳಿದು, ಅಲ್ಲಿಂದಲೇ ಮನಿಲಾಕ್ಕೆ ಹೋಗುವುದು ಒಳಿತೆಂದು ಅವನಿಗೆ ಅನಿಸಿತು.

ಮುಂದಿನ ಕೆಲವು ವರ್ಷಗಳು, ಅವನು ಮಾರಿಷಸ್‌ ನಲ್ಲಿಯೇ ಕಳೆದ. ಅಲ್ಲಿನ ಸಸ್ಯ, ಪಶು, ಪಕ್ಷಿಗಳ ಬಗೆಗೆ ಮತ್ತಷ್ಟು ಮಾಹಿತಿ ಕಲೆ ಹಾಕಿದ. ಅವುಗಳ ಸ್ಯಾಂಪಲ್ಲುಗಳನ್ನು ಸಂಗ್ರಹಿಸಿದ. ಅಲ್ಲಿಂದ ಮಡಗಾಸ್ಕರ್ ದ್ವೀಪಕ್ಕೂ ಹೋಗಿ, ಅಲ್ಲಿಯೂ ಸಹ ಹಲವಾರು ವಿಷಯಗಳನ್ನು ಸಂಗ್ರಹಿಸಿದ. ಮಡಗಾಸ್ಕರ್ ನ ಪೂರ್ವ ಕಡಲ ತೀರದ ಭೂಪಟವೊಂದನ್ನೂ ಸಿದ್ಧಪಡಿಸಿದ. ಆದರೆ ಅವನ ಗುರಿ ಮಾತ್ರ, ಮನಿಲಾಗೆ ಹೋಗಿ, ಅಲ್ಲಿಂದ ೧೭೬೯ ಜೂನ್, ೩ರ ಶುಕ್ರ ಸಂಚಾರವನ್ನು ವೀಕ್ಷಿಸುವುದೇ ಆಗಿತ್ತು. ಅವನು, ತನ್ನ ಮನೆ-ಮಠ ಬಿಟ್ಟು ಎಂಟು ವರ್ಷಕ್ಕೂ ಹೆಚ್ಚು ಸಮಯವಾಗಿತ್ತು.

******

ಮನಿಲಾ, ಆ ಕಾಲದಲ್ಲಿ, ಸ್ಪೇನ್ ದೇಶದ ಸ್ವಾಧೀನದಲ್ಲಿತ್ತು. ಫ್ರಾನ್ಸ್ ಮತ್ತು ಸ್ಪೇನ್ ನಡುವೆ ವೈಷಮ್ಯ ಇದ್ದುದ್ದರಿಂದ, ಫ್ರೆಂಚ್ ನೌಕೆಗಳು ಅಲ್ಲಿಗೆ ಹೋಗುತ್ತಿರಲಿಲ್ಲ. ಪೋರ್ಚುಗೀಸ್ ನೌಕೆಯೊಂದರಲ್ಲಿ ೧೭೬೬ರ ಮೇ, ಒಂದರಂದು ಅವನು ಮನಿಲಾ ಕಡೆಗೆ ಪ್ರಯಾಣ ಬೆಳೆಸಿದ. ಟ್ರಾನ್ಸಿಟ್ ಆಫ್ ವೀನಸ್‌ ಗೆ ಇನ್ನೂ ಮೂರು ವರ್ಷ ಸಮಯ ಇತ್ತು.

ಮೂರೂವರೆ ತಿಂಗಳ ಪ್ರಯಾಣದ ನಂತರ ಲೆ ಜೆ಼ಂಟಿ ಮನಿಲಾ ತಲುಪಿದ. ಅವನು ಮನಿಲಾ ತಲುಪಿದಾಗ, ಅಲ್ಲಿನ ಬಂದರಿನಲ್ಲಿ ಹಡಗೊಂದು ಹತ್ತಿರದ ಮರಿಯಾನಾ ದ್ವೀಪಗಳಿಗೆ ಪ್ರಯಾಣ ಮಾಡಲು ಸಿದ್ಧವಾಗಿತ್ತು. ಶುಕ್ರ ಸಂಚಾರಕ್ಕೆ ಇನ್ನೂ ಹಲವು ವರ್ಷಗಳೇ ಸಮಯ ಇದ್ದುದ್ದರಿಂದ, ಲೆ ಜೆ಼ಂಟಿ ಆ ಹಡಗಿನಲ್ಲಿ ಮರಿಯಾನ ದ್ವೀಪಗಳಿಗೆ ಹೋಗುವ ಯೋಚನೆ ಮಾಡಿದ. ಆದರೆ, ತಿಂಗಳು ಗಟ್ಟಲೆ ನೌಕಾ ಪ್ರಯಾಣ ಮಾಡಿದ್ದು ಸಾಕೆನಿಸಿ, ಆ ಆಲೋಚನೆಯನ್ನು ಕಡೆಯ ನಿಮಿಷದಲ್ಲಿ ಕೈ ಬಿಟ್ಟ.

ಅವನ ಅದೃಷ್ಟ ಚೆನ್ನಾಗಿತ್ತು. ಮರಿಯಾನಾ ದ್ವೀಪಗಳಿಗೆ ಹೋಗುತ್ತಿದ್ದ ನೌಕೆ ಸಮುದ್ರದಲ್ಲಿ ಮುಳುಗಿ ಅದರಲ್ಲಿದ್ದವರು ಸಾವಿಗೀಡಾದರು. ಈ ವಿಷಯ ಲೆ ಜೆ಼ಂಟಿಗೆ ಗೊತ್ತಾದಾಗ, ಅವನು ತನ್ನ ಅದೃಷ್ಟದ ದಿಕ್ಕು ಕೊನೆಗೂ ಬದಲಿಸಿತೆಂದುಕೊಂಡ.

ಲೆ ಜ಼ೆಂಟಿ, ಮನಿಲಾದಲ್ಲಿ ಕಾಲಿಟ್ಟಿದ್ದು ೧೭೬೬ರ ಆಗಸ್ಟಿನಲ್ಲಿ. ಮುಂದಿನ ಒಂದು ವರ್ಷದ ಕಾಲ, ಟ್ರಾನ್ಸಿಟ್ ಆಫ್ ವೀನಸ್ ನೋಡಲು ಸೂಕ್ತ ಸ್ಥಳವೊಂದನ್ನು ಹುಡುಕಿ ತನ್ನ ಸಲಕರಣೆಗಳನ್ನು ಸಿದ್ಧತೆಗೊಳಿಸುವುದರಲ್ಲಿ ನಿರತನಾದ. ಆದರೆ ಅವನ ಕೆಲಸಕ್ಕೆ ಇನ್ನೂ ಒಂದು ಅಡಚಣೆ ಕಾದಿತ್ತು.

(ಪ್ಯಾರಿಸ್- 18ನೇ ಶತಮಾನ)

ಆ ಕಾಲದಲ್ಲಿ, ಫಿಲಿಪ್ಪೀನ್ಸ್ ಸ್ಪೇನಿನ ವಶದಲ್ಲಿದ್ದದ್ದರಿಂದ, ಅದರ ಆಡಳಿತವನ್ನು ನೋಡಿಕೊಳ್ಳುತ್ತಿದ್ದವನು ಮನಿಲಾದಲ್ಲಿ ನೆಲೆಸಿದ್ದ ಒಬ್ಬ ಸ್ಪಾನಿಶ್ ಗವರ್ನರ್. ಫ್ರಾನ್ಸ್ ಮತ್ತು ಸ್ಪೇನ್ ನಡುವೆ ವೈಷಮ್ಯವಿದ್ದಿದ್ದರಿಂದ, ಮನಿಲಾದಲ್ಲಿದ್ದ ಸ್ಪೇನ್‌ ನ ಗವರ್ನರ್‌ ಗೆ, ಲೆ ಜ಼ೆಂಟಿಯ ಕಾರ್ಯ ಚಟುವಟಿಕೆಗಳ ಮೇಲೆ ಸಂದೇಹ ಮೂಡಿತ್ತು. ಇಂತಹ ಅನುಮಾನಗಳು ಬರಬಹುದೆಂದು ಮೊದಲೇ ಆಲೋಚಿಸಿದ್ದ ಲೆ ಜ಼ೆಂಟಿ, ತಾನೊಬ್ಬ ವಿಜ್ಞಾನಿಯೆಂದು ನಿರೂಪಿಸಲು ಪ್ರಮಾಣ ಪತ್ರವೊಂದನ್ನು ಕೊಡುವಂತೆ ಸ್ಪೇನಿನ ವಿಜ್ಞಾನಿಗಳಿಗೆ ಮಾರಿಷಸ್‌ ನಿಂದಲೇ ಒಂದು ವಿನಂತಿಯನ್ನು ಕಳುಹಿಸಿದ್ದ.
ಆ ಪ್ರಮಾಣ ಪತ್ರ ಕೊನೆಗೂ ಅವನಿಗೆ, ಜುಲೈ ೧೭೬೭ರಲ್ಲಿ ತಲುಪಿತು. ಅದನ್ನು ಅವನು ಮನಿಲಾದ ಗವರ್ನರ್‌ ಗೆ ತೋರಿಸಿದಾಗ, ಲೆ ಜ಼ೆಂಟಿಗೆ ಆಘಾತವೊಂದು ಕಾದಿತ್ತು. ಗವರ್ನರ್ ಆ ಪ್ರಮಾಣ ಪತ್ರವನ್ನು ನಕಲಿ ಎಂದು ಆರೋಪಿಸಿದ! ಆ ಗವರ್ನರ್ ಪ್ರಕಾರ, ಒಂದು ವರ್ಷದಲ್ಲಿ ಯೂರೋಪಿನಿಂದ ಅಂತಹ ಪತ್ರವೊಂದನ್ನು ಪಡೆಯಲು ಸಾಧ್ಯವೇ ಇರಲಿಲ್ಲ!!

ಮನಿಲಾದ ಗವರ್ನರನ ಈ ಧೋರಣೆ, ಲೆ ಜ಼ೆಂಟಿಯ ಮನದಲ್ಲಿ ಆತಂಕವನ್ನು ಮೂಡಿಸಿತು. ಮಹಾ ಭ್ರಷ್ಟನೂ, ಸರ್ವಾಧಿಕಾರಿಯೂ ಆಗಿದ್ದ ಆ ಗವರ್ನರ್ ತನ್ನನ್ನು ಸೆರೆಮನೆಗೂ ಕಳುಹಿಸುವ ಸಂಭವವನ್ನು ಲೆ ಜ಼ೆಂಟಿ ಗ್ರಹಿಸಿದ. ಮನಿಲಾದ ಬದಲು ಫ್ರೆಂಚ್ ಆಡಳಿತ ಇರುವ ಪ್ರದೇಶವೊಂದಕ್ಕೆ ಹೋಗುವುದೇ ಲೇಸೆಂದು ಯೋಚಿಸಲಾರಂಭಿಸಿದ. ಕೊನೆಗೆ, ಪಾಂಡಿಚೆರಿಗೇ ಹೋಗುವುದೆಂದು ನಿಶ್ಚಯಿಸಿದ. ಆದರೆ, ಮನಿಲಾದಿಂದ ಆ ಸಮಯದಲ್ಲಿ ಭಾರತದ ಕಡೆಗೆ ಹೋಗುವ ಯಾವುದೇ ನೌಕೆಗಳು ಇರದಿದ್ದರಿಂದ ಹಲವು ತಿಂಗಳು ಅವನು ಮನಿಲಾದಲ್ಲೇ ಇರಬೇಕಾಯಿತು. ಕೊನೆಗೆ, ಮದ್ರಾಸಿನಿಂದ ಬಂದಿದ್ದ ಪೋರ್ಚುಗೀಸ್ ಹಡಗೊಂದು ಫೆಬ್ರವರಿ ೧೭೬೮ರಲ್ಲಿ, ಮದ್ರಾಸ್ ಕಡೆಗೆ ವಾಪಸು ಪ್ರಯಾಣ ಮಾಡುವ ವಿಷಯ ತಿಳಿಯಿತು. ಲೆ ಜ಼ೆಂಟಿ ಹಡಗಿನ ಕ್ಯಾಪ್ಟನ್‌ ನನ್ನು ಒಪ್ಪಿಸಿ ಅದರಲ್ಲಿ ಮದ್ರಾಸಿನೆಡೆಗೆ ಪ್ರಯಾಣ ಬೆಳೆಸಿದ. (ಲೆ ಜ಼ೆಂಟಿಗೆ ತೊಂದರೆ ನೀಡಿದ ಮನಿಲಾ ಗವರ್ನರ್‌ ನ ಭ್ರಷ್ಟಾಚಾರ, ಲೆ ಜ಼ೆಂಟಿ ಮನಿಲಾ ಬಿಟ್ಟ ಎರಡು ವರ್ಷಗಳ ನಂತರ ಬೆಳಕಿಗೆ ಬಂದು, ಸ್ಪೇನ್ ಸರ್ಕಾರ ಅವನನ್ನು ಸೆರೆಮನೆಗೆ ತಳ್ಳಿತು. ಅವನು ಸೆರೆಮನೆಯಲ್ಲೇ ಸತ್ತ)

ಲೆ ಜ಼ೆಂಟಿ ಹತ್ತಿದ ಆ ಹಡಗು, ಅವನ ಡೈರಿಯಲ್ಲಿ ಬರೆದಂತೆ ಸೂರತ್ತಿನಲ್ಲಿ, ಮರಾಠಿಗರೋ ಅಥವಾ ಮಲಬಾರಿಗರೋ ನಿರ್ಮಿಸಿದ “ಉತ್ತಮ ಗುಣಮಟ್ಟದ” ನೌಕೆ. ಆದರೆ, ನೌಕೆಯ ಗುಣಮಟ್ಟ ಉತ್ತಮವಿದ್ದರೂ, ಆ ನೌಕೆಯ ಕ್ಯಾಪ್ಟನ್ ಮತ್ತು ಸಹಾಯಕ ನಡುವೆ ಸಮನ್ವಯ ಇರಲಿಲ್ಲ. ಇಬ್ಬರೂ ಕಚ್ಚಾಡುತ್ತಿದ್ದರು. ಪ್ರಯಾಣ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಇವರಿಬ್ಬರ ನಡುವಿನ ಜಗಳ ತಾರಕಕ್ಕೇರಿ, ಹಡಗನ್ನು ಮುನ್ನಡೆಸುವುದನ್ನು ಬಿಟ್ಟು ಇಬ್ಬರೂ ತಮ್ಮ-ತಮ್ಮ ಕ್ಯಾಬಿನ್‌ ಗಳಲ್ಲಿ ಬಾಗಿಲು ಹಾಕಿಕೊಂಡು ಕುಳಿತರು. ನೌಕೆ, ಗಾಳಿ ಬಂದ ದಿಕ್ಕಿನಲ್ಲಿ ತೇಲಲಾರಂಭಿಸಿತು.

ಆ ಹಡಗಿನಲ್ಲಿ, ಲೆ ಜ಼ೆಂಟಿಯೊಂದಿಗೆ ಆರ್ಮೆನಿಯಾದ ವರ್ತಕರೂ ಇದ್ದರು. ಅವರು ಏಷ್ಯಾದಿಂದ ಯೂರೋಪಿಗೆ ಸಾಂಬಾರ ಪದಾರ್ಥಗಳನ್ನು ಕೊಂಡು ಹೋಗುತ್ತಿದ್ದರು. ನಡು ಸಮುದ್ರದಲ್ಲಿ ನಾವಿಕರು ಈ ರೀತಿ ಹಡುಗಿನ ಕೈ-ಬಿಟ್ಟದ್ದು ಅವರನ್ನು ರೊಚ್ಚಿಗೆಬ್ಬಿಸಿತು. ಲೆ ಜ಼ೆಂಟಿಯೇ ಕೊನೆಗೆ ಎಲ್ಲರನ್ನೂ ಸಂತೈಸಿ ನೌಕೆಯನ್ನು ಮತ್ತೊಮ್ಮೆ ಹಾದಿಗೆ ತರಬೇಕಾಯಿತು.

(ಮುಂದುವರೆಯುವುದು)