Advertisement
ಟ್ರಿನಿಡಾಡ್ ಎಂಡ್ ಟೊಬೇಗೊ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಟ್ರಿನಿಡಾಡ್ ಎಂಡ್ ಟೊಬೇಗೊ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಬೂಡೂ-ಫೋರ್ಚುನೆ ಅವರ ಸಾಲುಗಳು ಸರಳತೆ ಮತ್ತು ಕ್ರೂರತೆಗೆ ಸಮಾನವಾಗಿ ಆದ್ಯತೆ ನೀಡುತ್ತದೆ, ಮೀನುಗಾರರ ಅರ್ಧ ಮುಳುಗಿದ ಲೋಕಗಳನ್ನು, ಸಮಾಧಿ ಮಾಡಿದ ಮೂಳೆಗಳಲ್ಲಿ ಕಲಕುವ ಭರವಸೆಗಳನ್ನು, ಹೆಣ್ಣುಮಕ್ಕಳನ್ನು ಪ್ರೀತಿಸುವ ತಾಯಂದಿರ ಮತ್ತು ಎಲ್ಲಾ ರೀತಿಯ ತಿಳಿಯಲಾಗದ, ನಿಗೂಢ ಆತ್ಮಗಳನ್ನು ಹಿಡಿದಿಟ್ಟುಕೊಳ್ಳುತ್ತವೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಟ್ರಿನಿಡಾಡ್ ಎಂಡ್ ಟೊಬೇಗೊ (Trinidad and Tobago) ದೇಶದ ಯುವ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ-ರವರ (Danielle Boodoo-Fortuné, 1986) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

1986-ರಲ್ಲಿ ಕೆರಿಬಿಯನ್ ಪ್ರಾಂತದ ದ್ವಿ-ದ್ವೀಪ ರಾಷ್ಟ್ರವಾದ ಟ್ರಿನಿಡಾಡ್ ಎಂಡ್ ಟೊಬೇಗೊ-ದಲ್ಲಿ ಜನಿಸಿದ ಡಾನಿಯೇಲ್ ಬೂಡೂ-ಫೋರ್ಚುನೆ, ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದ ಸೇಂಟ್ ಆಗಸ್ಟೀನ್ ಕ್ಯಾಂಪಸ್‌ನಿಂದ ಇಂಗ್ಲಿಷ್‌ನಲ್ಲಿ ಸಾಹಿತ್ಯದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದಿದ್ದಾರೆ, ನಂತರ ಅವರು ಪ್ರಶಸ್ತಿ ವಿಜೇತ ಟ್ರಿನಿಡಾಡಿನ ಕವಿ ಜೆನಿಫರ್ ರಹೀಮ್ (Jennifer Rahim, 1963-2023) ಅವರ ಕಾವ್ಯದಲ್ಲಿ ಸೃಜನಾತ್ಮಕ ಬರವಣಿಗೆ ಕೋರ್ಸ್-ನ್ನು (Creative Writing Course in Poetry) ಪೂರ್ಣಗೊಳಿಸಿದರು.

ಡಾನಿಯೇಲ್ ಬೂಡೂ-ಫೋರ್ಚುನೆಯವರಿಗೆ ಸ್ಫೂರ್ತಿಯೆಂಬುದು ಅತಿ ವೈಯಕ್ತಿಕವಾದ ಸ್ಥಳದಿಂದ ಬರುತ್ತದೆ. ಗ್ರಾಮೀಣ ಟ್ರಿನಿಡಾಡ್‌ನಲ್ಲಿ ಬೆಳೆದ ಅವರು ಈ ಆರಂಭಿಕ ಹಂತವನ್ನು ತನ್ನ ಅಸ್ತಿತ್ವದ, ಇರುವಿಕೆಯ ಒಂದು ದೊಡ್ಡ ಭಾಗವಾಗಿದೆ ಎನ್ನುತ್ತಾರೆ. ಡಾನಿಯೇಲ್ ಬೂಡೂ-ಫೋರ್ಚುನೆಯವರನ್ನು ಅವರ ಇಬ್ಬರು ಅಜ್ಜಿಯಂದಿರು (ಅವರ ತಾಯಿಯ ತಾಯಿ ಭಾರತೀಯ ಮೂಲದವರು, ಹಾಗೂ ತಂದೆಯ ತಾಯಿ ಚೈನೀಸ್ ಮತ್ತು ಆಫ್ರಿಕನ್ ಮೂಲದವರು) ಬೆಳೆಸಿದರು ಹಾಗೂ ಅವರಿಬ್ಬರಿಂದ ಸ್ತ್ರೀ ಶಕ್ತಿಯ ಅರ್ಥ ಮತ್ತು ನಿಜವಾದ ಶಕ್ತಿ ಎಲ್ಲಿ ನೆಲೆಸಿರುತ್ತದೆ ಎಂಬುದನ್ನು ಕಲಿತರು. ಅವರ ಒಬ್ಬರು ಅಜ್ಜಿ ಮಾಧ್ಯಮಿಕ ಶಾಲಾ ಇಂಗ್ಲಿಷ್ ಶಿಕ್ಷಕಿಯಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಕವಿತೆ ಓದುವುದು ಮತ್ತು ಬರೆಯುವುದನ್ನು ಕವಿಗೆ ಪರಿಚಯಿಸಿದ್ದರು. ಅವರ ಕವನಗಳು ಅವರ ಬಹು-ಸಾಂಸ್ಕೃತಿಕ ಹಿನ್ನೆಲೆ ಮತ್ತು ಈ “ಅದ್ಭುತ ಮಹಿಳೆಯರು” ಸುಂದರ ಮತ್ತು ಮಾಂತ್ರಿಕ ರೀತಿಯಲ್ಲಿ ಹಂಚಿಕೊಂಡ ಅವಳ ಬಾಲ್ಯದ ಅನೇಕ ಕಥೆಗಳು ಮತ್ತು ನಿರೂಪಣೆಗಳನ್ನು ಅರ್ಥಪೂರ್ಣಗೊಳಿಸುತ್ತವೆ; ಅವರ ಕಾವ್ಯದ ಉದ್ದಕ್ಕೂ ಮತ್ತೆ ಮತ್ತೆ ಕಂಡುಬರುವ ಅಂಶಗಳು ಅವರಿಗೆ ಅರಿವಿಲ್ಲದೆ ಬರುವ ಚಿಹ್ನೆಗಳ ತನ್ನದೇ ಆದ ನಕ್ಷೆಯನ್ನು ಒಳಗೊಂಡಿವೆ. “ಈ ಕವನಗಳು ಬರೆದು ಮುಗಿಸುವವರೆಗೂ ಅವು ಏನನ್ನು ಪ್ರತಿನಿಧಿಸುತ್ತವೆ ಅಥವಾ ಅರ್ಥೈಸುತ್ತವೆ ಎಂದು ನನಗೆ ಸಾಮಾನ್ಯವಾಗಿ ತಿಳಿದಿರುವುದಿಲ್ಲ,” ಅಂತ ತನ್ನ ಕಾವ್ಯಸ್ಪೂರ್ತಿಗಳ ಬಗ್ಗೆ ಕವಿ ಹೇಳುತ್ತಾರೆ.

ತನ್ನ ಮೊದಲ ಕವಿತೆಯಿಂದಲೇ ಡಾನಿಯೇಲ್ ಬೂಡೂ-ಫೋರ್ಚುನೆಯವರು ನಮ್ಮ ಕುಂದುಕೊರತೆಗಳ ಜಗತ್ತಿನಲ್ಲಿ ಮಹಿಳೆಯಾಗಿರುವುದರ ಕಠೋರ ವಾಸ್ತವಗಳಿಗೆ ಓದುಗರನ್ನು ಪರಿಚಯಿಸುತ್ತಾರೆ. ಈ ಜಗತ್ತು ಅಪಸಾಮಾನ್ಯ ಪ್ರೀತಿಯಿಂದ ತುಂಬಿರುತ್ತದೆ, ಅದು ಗಂಡು ಮತ್ತು ಹೆಣ್ಣು ಇಬ್ಬರನ್ನೂ ನಿರಾಶೆ, ಭಗ್ನತೆ ಮತ್ತು ದುಃಖದಿಂದ ಗಾಯಗೊಳಿಸುತ್ತದೆ. ಇದಲ್ಲದೆ, ಅವರ ಕಾವ್ಯಾತ್ಮಕ ದೃಷ್ಟಿಕೋನವು ಕನಸುಗಳು/ಆತ್ಮ ಮತ್ತು ವಾಸ್ತವ, ಮಾನವರು ಮತ್ತು ಮಾನವೇತರರ ನಡುವಿನ ಪರಸ್ಪರ ಸಂಪರ್ಕದ ಒಂದು ದೃಷ್ಟಿಕೋನವಾಗಿದೆ.

“ಕಾವ್ಯವು ನಮ್ಮ ಮೆದುಳು ಮತ್ತು ಆತ್ಮದ ಬಗ್ಗೆ ಮಾತ್ರವಲ್ಲ, ನಮ್ಮ ಹೊಟ್ಟೆ, ನಮ್ಮ ಮೂಳೆಗಳ ಬಗ್ಗೆಯೂ ಮಾತನಾಡುತ್ತದೆ” ಎಂದು ಅವರು 2010-ರಲ್ಲಿ ಕೆರಿಬಿಯನ್ ಲಿಟರರಿ ಸಲೋನ್‌ಗೆ (Caribbean Literary Salon) ನೀಡಿದ ಸಂದರ್ಶನದಲ್ಲಿ ಹೇಳಿದರು. “ಕಾವ್ಯದ ಬಗ್ಗೆ ನನಗೆ ತುಂಬಾ ಇಷ್ಟವಾದದ್ದು ಆ ನಗ್ನ ಸತ್ಯ ಮತ್ತು ತೀವ್ರತೆ… ಆ ಸರಳ ಪದಗಳ ಭೌತಿಕತೆ.”

ಅವರ ಕವನಗಳು ಮತ್ತು ಕಲಾಚರನೆಗಳು ಹಲವಾರು ದೇಶೀಯ ಮತ್ತು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಮತ್ತು ಅವರ ಮೊದಲ ಕವನ ಸಂಕಲನ, ‘ಡೋ ಸಾಂಗ್ಸ್’ (Doe Songs), 2018-ರಲ್ಲಿ ಪ್ರಕಟವಾಯಿತು. 2009-ರಲ್ಲಿ The Caribbean Writer ಪತ್ರಿಕೆಯ ಸಂಪಾದಕೀಯ ಮಂಡಳಿಯಿಂದ ಡಾನಿಯೇಲ್ ಬೂಡೂ ಫೋರ್ಚುನೆಯವರಿಗೆ The Charlotte and Isidor Paeiwonsky ಪ್ರಶಸ್ತಿಯನ್ನು ನೀಡಲಾಯಿತು. 2010-ರಲ್ಲಿ ಅವರನ್ನು ಪುಷ್‌ಕಾರ್ಟ್ ಪ್ರಶಸ್ತಿಗಾಗಿ (Pushcart Prize) ನೇಮಿಸಲಾಯಿತು ಹಾಗೂ 2012-ರಲ್ಲಿ ಅವರಿಗೆ ಸ್ಮಾಲ್ ಆಕ್ಸ್ ಪೊಯೆಟ್ರಿ ಪ್ರಶಸ್ತಿಯನ್ನು (Small Axe Poetry Prize) ನೀಡಲಾಯಿತು. 2015-ರಲ್ಲಿ ಅವರು ಹಾಲಿಕ್-ಅರ್ವೊನ್ ಕೆರಿಬಿಯನ್ ಬರಹಗಾರರ ಕಾವ್ಯ ಪ್ರಶಸ್ತಿಯನ್ನು (Hollick-Arvon Caribbean Writers’ Poetry Prize) ಹಾಗೂ 2016-ರಲ್ಲಿ ವಾಸಾಫಿರಿ ಹೊಸ ಬರವಣಿಗೆ ಪ್ರಶಸ್ತಿಯನ್ನು (Wasafiri New Writing Prize) ಗೆದ್ದರು. 2013, 2017, ಮತ್ತು 2020-ರಲ್ಲಿ ಅವರನ್ನು ಮಾಂಟ್ರಿಯಲ್ ಪೊಯೆಟ್ರಿ ಪ್ರಶಸ್ತಿಗೆ (Montreal Poetry Prize) ಅವರನ್ನು ಶಾರ್ಟ್‌ಲಿಸ್ಟ್ ಮಾಡಲಾಯಿತು. ‘ಡೋ ಸಾಂಗ್ಸ್,’ ಅವರ ಮೊದಲ ಸಂಕಲನಕ್ಕೆ 2019-ರಲ್ಲಿ ಕಾವ್ಯಕ್ಕಾಗಿರುವ OCM ಬೊಕಾಸ್ ಪ್ರಶಸ್ತಿಯನ್ನು ನೀಡಲಾಯಿತು (OCM Bocas Prize for Poetry).

ಟ್ರಿನಿಡಾಡ್ ದೇಶದ ಖ್ಯಾತ ಕವಿ ಹಾಗೂ ವಿಮರ್ಶಕರಾದ ಶಿವಾನೀ ರಾಮ್‌ಲೋಚನ್-ರವರು (Shivanee Ramlochan) ಅವರ ಸಹ-ಕವಿ ಡಾನಿಯೇಲ್ ಬೂಡೂ-ಫೋರ್ಚುನೆಯವರ ಕಾವ್ಯದ ಬಗ್ಗೆ ಹೀಗನ್ನುತ್ತಾರೆ: “ಡಾನಿಯೇಲ್ ಬೂಡೂ-ಫೋರ್ಚುನೆಯವರು ನಿರ್ದಿಷ್ಟವಾದ ಖಚಿತತೆಗಿಂತ ಸಾಧ್ಯತೆಯ ಹರವುಗಳಲ್ಲಿ ವಾಸಿಸಲು ಬಯಸುತ್ತಾರಾದರೂ, ಅವರ ಪ್ರತಿಭೆಯ ಬಗ್ಗೆ ಈ ಮಾತಂತೂ ನೂರಕ್ಕೆ ನೂರು ನಿಜ: ಅವರ ಪ್ರತಿಭೆ ಬಹಳಷ್ಟು ಹೇಳುತ್ತದೆ. ಅವರ ಕವಿತೆಗಳು ಮೂಲಭೂತವಾದ ಅರಣ್ಯಭಾವವನ್ನು ಬಯಲುಪಡಿಸುತ್ತದೆ. ಬೂಡೂ-ಫೋರ್ಚುನೆ ಅವರ ಸಾಲುಗಳು ಸರಳತೆ ಮತ್ತು ಕ್ರೂರತೆಗೆ ಸಮಾನವಾಗಿ ಆದ್ಯತೆ ನೀಡುತ್ತದೆ, ಮೀನುಗಾರರ ಅರ್ಧ ಮುಳುಗಿದ ಲೋಕಗಳನ್ನು, ಸಮಾಧಿ ಮಾಡಿದ ಮೂಳೆಗಳಲ್ಲಿ ಕಲಕುವ ಭರವಸೆಗಳನ್ನು, ಹೆಣ್ಣುಮಕ್ಕಳನ್ನು ಪ್ರೀತಿಸುವ ತಾಯಂದಿರ ಮತ್ತು ಎಲ್ಲಾ ರೀತಿಯ ತಿಳಿಯಲಾಗದ, ನಿಗೂಢ ಆತ್ಮಗಳನ್ನು ಹಿಡಿದಿಟ್ಟುಕೊಳ್ಳುತ್ತವೆ.”


ನೀರು ನುಗ್ಗುತ್ತದೆ ನೆನಪಿನ ಹಾಗೆ
ಮೂಲ: Water Rushes Like Memory

ಸಾಯಂಕಾಲದ ಸ್ವರಗಳು
ಹೊಯಿಗೆಯ ಮೇಲೆ ಹಾಡನುಡಿಸುತ್ತವೆ,
ಮರಗಳ ಮೇಲಿಂದ
ಬತ್ತಿದ ನಕ್ಷತ್ರಗಳನ್ನು ಚದುರಿಸುತ್ತವೆ.

ಇವೆ ನನ್ನೊಳು
ಕವನಗಳು, ಅಲಿಖಿತ.
ನನ್ನ ಕರಣಗಳು ಮೌನವಾಗಿವೆ,
ಪದಗಳು ಕಲ್ಲುಗಳಂತೆ ಮುಳುಗುತ್ತವೆ.

ಮೇಲೆ ಆಕಾಶದಲ್ಲಿ, ಧ್ವನಿಯಿಂದ ಬಿಗಿಯಾದ
ಕಡಲಹಕ್ಕಿಗಳು ಕಿರುಚುತ್ತವೆ,
ಕಿರುಚುವುದು ಅನಿವಾರ್ಯವಾದ್ದರಿಂದ.

ಒದ್ದೆ ಬಂಡೆಗಳ ಮಧ್ಯೆ ಸೀಟಿಯಂತೆ
ತೂರಿ ಬರುತ್ತಿದೆ ಗಾಳಿ,
ದೂರದ ಕಡಲತೀರದಲ್ಲಿ ಸೂರ್ಯ ಕದಲುತ್ತಿದ್ದಾನೆ.

ಈ ಕವನವನ್ನು ಬರೆಯುತ್ತಿದ್ದೇನೆ ನಾನು
ಬರೆಯುವುದು ಅನಿವಾರ್ಯವಾದ್ದರಿಂದ.

ನನ್ನ ಮೂಳೆಗಳಲ್ಲಿ ಅಲೆಗಳು ಅಪ್ಪಳಿಸುತ್ತವೆ,
ನನ್ನ ಗಂಟಲಿನಲ್ಲಿ
ಅಲೆಗಳು ಏರಿಳಿಯುತ್ತವೆ.
ಒಂದು ಕೂಗು, ಕರಗಿ ಹೋಗುತ್ತೆ,
ತೊಳೆದು ಹೋಗುತ್ತದೆ.

ನೀರು ನುಗ್ಗುತ್ತದೆ ನೆನಪಿನ ಹಾಗೆ,
ನನ್ನೊಡಲಲ್ಲಿ ತನ್ನ ಮಾರುಲಿಯನ್ನು ಕಂಡುಕೊಳ್ಳುತ್ತದೆ.

ಮತ್ತೆ ಮೊದಲಿನಿಂದ ಮಾತನಾಡಲು ಕಲಿಯುವೆನು.

ನೆಲದ ಈ ಅಂಚಿನಲ್ಲಿ
ನಾನು ಬೆಳಕಿನ ಕಡೆ ವಾಲುವೆ,
ನನ್ನ ಧ್ವನಿಯನ್ನು
ಬಲೆಯ ಹಾಗೆ
ಸಮುದ್ರದೊಳಗೆ ಬೀಸುವೆ.


ಪಕ್ಕೆಲುಬುಗಳು
ಮೂಲ: Ribs

ಇದು ನನ್ನ ಧ್ವನಿಯ ಉಲಿಯ
ಕುರಿತ ಕವನವಲ್ಲ.

ಇದು ಪಕ್ಕೆಲುಬುಗಳ ಕುರಿತ ಕವನ,
ದೇಹವನ್ನು ಒಟ್ಟುಕೂಡಿಸಿ ಹಿಡಿದಿಟ್ಟುಕೊಳ್ಳುವುದು
ಎಷ್ಟು ಕಷ್ಟವಾಗಿರುತ್ತೆ ಎಂಬುದರ ಕುರಿತ ಕವನ.

ಇದು ನಿನ್ನ ಪೂರ್ವಜನ್ಮದ ಕುರಿತ ಕವನ,
ನೀನಾಗ ದೃಢವಾದ ಬಿಳಿ ಮರಗಳ
ಜತೆ ಜೀವಿಸುತ್ತಿದ್ದೆ,
ಕೈಗಳಿಂದ ಹೊಗೆ ಸೂಸುತ್ತಿರುವವನೊಬ್ಬ
ನಿನ್ನನ್ನು ಹಿಡಿದುಕೊಂಡಿದ್ದ,
ಇದೊಂದನ್ನು ಬಿಟ್ಟರೆ
ಇನ್ನು ಜನ್ಮಗಳಿಲ್ಲವೇನೋ ಎಂಬಂತೆ.
ನೆನಪಿನಲ್ಲಿಟ್ಟುಕೊ: ಈ ರಾತ್ರಿ
ನಿನ್ನನ್ನು ಬಿಟ್ಟು ಹೋಗಲಾರದು.
ಯಾವುದನ್ನೂ ಮೀರಿ ಬದುಕಲು
ಇಲ್ಲಿ ಏನೂ ಉಳಿದಿಲ್ಲ.

ಪ್ರತಿ ಸಲವೂ ನೀನು ನಿನ್ನ ಒದ್ದೆಯಾದ
ಹೃದಯದಿಂದ ಮಣ್ಣನ್ನು ಒರೆಸುವಾಗ,
ಈ ಕವನ ನಿನ್ನ ನಾಲಗೆಯಲ್ಲಿ
ಉಂಟಾಗುವುದನ್ನು ಕಾಣುವೆ,
ಬಿಸಿಬಿಸಿಯಾಗಿ, ಕಣಕಣವಾಗಿ, ಹೊಸದಾಗಿ.

ಏಕೆಂದರೆ ಕವನಗಳನ್ನು ನಿನ್ನ ಮೂಳೆಗಳ
ಮೇಲೆ ಹಕ್ಕು ಜಮಾಯಿಸುವುದನ್ನು ತಡೆಯುವುದು ಕಷ್ಟ,
ವಿಶೇಷವಾಗಿ ನಿನ್ನ ನೆನಪುಶಕ್ತಿಗೆ
ಅವಸರದ ಪ್ರವೃತ್ತಿಯಿರುವುದರಿಂದ.

ಕವನಗಳನ್ನು ನಿನ್ನ ಬೆನ್ನುಮೂಳೆಯ ಉದ್ದಕ್ಕೂ
ಸುರುಳುವುದನ್ನು ಅರಳುವುದನ್ನು ತಡೆಯುವುದು ಕಷ್ಟ,
ವಿಶೇಷವಾಗಿ ನಿನ್ನ ಕಿಟಕಿಯ ಆಚೆ ಇಟ್ಟಿಗೆಗಳು
ಹಾಗೂ ಬೆಳಗುವ ಗದ್ದಲವನ್ನು
ಬಿಟ್ಟರೆ ಬೇರೇನೂ ಇಲ್ಲದಿರುವ ಪರಿಸ್ಥಿತಿಯಲ್ಲಿ.

ಆದ್ದರಿಂದ ನಿನ್ನ ಜೀವಗಳನ್ನು
ಒಟ್ಟುಗೂಡಿಸಿ ಇಲ್ಲಿ ಇಡು:
ನಿನ್ನ ಎಡಬದಿಯ ಶ್ವಾಸಕೋಶಕ್ಕೆ ಒತ್ತಿಕೊ.

ಯಾಕೆಂದರೆ, ನೋಡು, ಇದು ಬಯಕೆಯ
ಕುರಿತ ಕವನ. ನನ್ನ ಧ್ವನಿಯ ಉಲಿಯ
ಬಗ್ಗೆಯಂತೂ ಅಲ್ಲವೇ ಅಲ್ಲ.

ಇದು ಪಕ್ಕೆಲುಬುಗಳ
ಕುರಿತ ಕವನ.


ಕರೆಸುವುದು
ಮೂಲ: Summoning

ಹಿಂದಕ್ಕೆ ಕರೆಯುವೆ ನನ್ನ ಆಲೋಚನೆಗಳನ್ನು
ಮುಚ್ಚಿದ ಮನೆಯಾದ ನನ್ನ ತಲೆಯೊಳಗೆ
ನಾನು ಮತ್ತೆ ಬದುಕಲು ಕಲಿಯಬಹುದೆಂದು

ಹಿಂದಕ್ಕೆ ಕರೆಯುವೆ ನನ್ನ ಕಣ್ಣೀರುಗಳನ್ನು
ನನ್ನ ಎಲ್ಲ ಉಪ್ಪನ್ನು, ನನ್ನ ಎಲ್ಲ ನೀರನ್ನು
ಈ ದೇಹದೊಳಗೆ ಮರಳಿ ಬರಲಿಯೆಂದು

ಕಿವಿರುಗಳನ್ನು ಬೆಳೆಸಿಕೊಂಡ
ಆದ್ಯ ಜಂತುವಿನಂತೆ

ಹಿಂದಕ್ಕೆ ಕರೆಯುವೆ ನನ್ನೆಲ್ಲ ಬಯಕೆಯನ್ನು
ನನ್ನ ಪಾದಗಳ ಬಾಗುಗಳಿಂದ, ನನ್ನ ಪಕ್ಕೆಲುಬುಗಳ ಮೂಲಕ,
ನನ್ನ ಎದೆಯೊಳಗೆ ಗಾಳಿಯಂತೆ ಮೇಲೆಕ್ಕೆಳೆದುಕೊಳ್ಳುವೆ ಅದನ್ನು

ಹಿಂದಕ್ಕೆ ಕರೆಯುವೆ ನನ್ನ ಕ್ರೋಧವನ್ನು
ನನ್ನ ಕೈಗಳೊಳಗೆ, ನನ್ನ ಹಲ್ಲುಗಳೊಳಗೆ
ನನ್ನ ಶತಮಾನಗಳ ಮೌನದೊಳಗೆ

ನಾನು ಸಂಪೂರ್ಣವಾಗಲೆಂದು
ನಾನು ನನ್ನಂತೆ ಈ ಲೋಕದಲ್ಲಿ ನಡೆಯಲೆಂದು

ಮತ್ತೆ, ಮತ್ತೆಲ್ಲವೂ ನನ್ನೊಳು ಹಿಂದಿರುಗಿದ ನಂತರ,
ನನ್ನ ಧ್ವನಿಯ ಉಲಿಯನ್ನು ಹಿಂದಕ್ಕೆ ಕರೆಯುವೆ, ಕಾಯುವೆ,
ಗಾಳಿಯ ಹಾಗೆ, ನನ್ನನ್ನೇ ನಾನು ಕರೆಯುವುದ ಕೇಳಲೆಂದು.


ಈ ಕವನ ಆಗಲೇ …
ಮೂಲ: the poem is already …

ನೀನಿದನ್ನು ಓದುತ್ತಿರುವಂತೆ
ಈ ಕವನ ಆಗಲೇ
ನನ್ನ ಗಂಟಲಿನೊಳಗೆ ಅರ್ಧ ಇಳಿದುಬಿಟ್ಟಿದೆ

ಅಲ್ಲಿರುವ ತೇವದಿಂದ ಮತ್ತು
ನನ್ನೊಳಿರುವ ಎಲ್ಲ ಆರ್ತನಾದಗಳಿಂದ ವಶಿಸಲ್ಪಟ್ಟಿದೆ

ನನ್ನ ಕೋಣೆಗಳು ಖಾಲಿಯಾಗಿವೆ

ಎಲ್ಲರೂ ಹೊರಗಿದ್ದಾರೆ
ಹಳದಿ ನಕ್ಷತ್ರಗಳನ್ನು ಬಲೆಗೆ ಬೀಳಿಸುತ್ತಿದ್ದಾರೆ

ಇಲ್ಲಿ ಯಾರೂ ಉಳಿದಿಲ್ಲ
ನಾನು ನೀಲಿಯಲ್ಲಿ,
ರೆಕ್ಕೆಗಳಲ್ಲಿ
ಮುಳುಗುವುದನ್ನು ಕೇಳಲು

ನೀನಿದನ್ನು ಓದುತ್ತಿರುವಂತೆ
ಈ ಕವನ ಆಗಲೇ
ನನ್ನ ಹೃದಯದ ಮೃದುಚರ್ಮವನ್ನು ಉಣ್ಣುತ್ತಿದೆ …


ಸ್ಮಾರಕವನ್ನು ಕೆಡವಿದೆವು
ಮೂಲ: Tearing Down the Monument

ನೀವು ಆ ದ್ವೀಪವನ್ನು ಕೇಳಿದರೆ
ತನ್ನ ಹೆಸರನ್ನು ಅದು ನಿಮಗೆ
ಸಾವಿರ ವಿಧದಲ್ಲಿ ಹೇಳುತ್ತೆ
ಇನ್ನು ಕೇಳುವ ಅಗತ್ಯವಿಲ್ಲ ಎನ್ನುವವರೆಗೂ,
ಏಕೆಂದರೆ ಅದು ಆಗಲೇ ನಿನ್ನಲ್ಲಿ ಬೇರೂರಿಯಾಗಿದೆ

ಕೆಂಪು ಕಂಡಲೆಯ ಹಾಗೆ, ಖಸ್ ಖಸ್ ಹುಲ್ಲಿನ ಹಾಗೆ,
ನಿನ್ನದೇ ಮೂಳೆಗಳ ಹಾಗೆ. ಆ ದ್ವೀಪ ತನ್ನನ್ನು ತಾನೇ
ಹೆಸರಿಸಿಕೊಂಡಿದೆ ಮೇಲಿಂದ ಮೇಲೆ,
ಕಾಲಾರಂಭದಿಂದಲೂ,
ಸುಣ್ಣದಕಲ್ಲು ಕಡಲಿನ ಕಡೆಗೆ
ಮೊದಲ ಬಾರಿ ವಾಲಿದಾಗಿನಿಂದಲೂ.

ಈಗಲೂ ಆ ದ್ವೀಪ ತನ್ನನ್ನು ಹೆಸರಿಸಿಕೊಳ್ಳುತ್ತೆ,
ದಿನಾ ಬೆಳಗ್ಗೆ, ಮತ್ತೆ ಹೊಸದಾಗಿ,
ಹಡಗುಗಳು ದಡಮುಟ್ಟಿದ ಆ ದಿನದ ಹಾಗೆ,
ಮನುಜರಿಂದ ಎಂದಿಗೂ ಸರಿಯಾಗಿ
ಅರ್ಥಮಾಡಿಕೊಳ್ಳಲು ಸಾಧ್ಯವಾಗದ ನುಡಿಗಳಲ್ಲಿ.

ಮೊದಲನೆಯದಾಗಿ, ಯಾವುದಕ್ಕೆ ನೋವುಂಟುಮಾಡಿರುವೆ,
ಯಾವುದನ್ನು ಕದ್ದಿರುವೆ, ಯಾವುದನ್ನು ನಿಜವಾಗಿಯೂ
ನೀನು ನೋಡಿಯೇ ಇಲ್ಲವೆಂದು
ನಿನ್ನಿಂದ ಕಂಡುಹಿಡಿಯಲಾಗದು.
ಏಕೆಂದರೆ ಜೌಗುನೆಲ ತನ್ನನ್ನು ಕ್ರೌಂಚಪಕ್ಷಿಯಲ್ಲಿ,
ಹಾಗೂ ತೈಲಪಕ್ಷಿ* ತನ್ನನ್ನು ಬೆಟ್ಟದ ಮುಖದಲ್ಲಿ ಕಾಣುತ್ತೆ.
ಯಾವುದನ್ನಾದರೂ ಕಾಣಬೇಕೆಂದರೆ,
ಅದರ ಮುಖಾಂತರ ನಡೆಯುವಾಗ
ನಿನ್ನ ಹೆಜ್ಜೆಯ ಜಾಡಿನಲ್ಲಿ ಹಾನಿ ಹಾಗೂ ಹುಳುಕನ್ನು
ಹಿಂಬಿಡದೆ ಹೋಗುವುದಾದರೆ
ಅದಕ್ಕೆ ಹೆಸರಿಡಬೇಕೆಂಬ ಅಗತ್ಯವಿಲ್ಲ,

ಆ ದ್ವೀಪ ತನಗೇ ತಾನೇ ಸೇರಿದ್ದು.
ಅದನ್ನು ಕೇಳಿದರೆ,
ಅವರು ನಂಬಲು ಬಯಸಿದ ವಸ್ತುವೊಂದರ
ಆಕಾರಕ್ಕೆ ಅವರೊಂದು ಹೆಸರಿಟ್ಟಿರುವರು ಅಷ್ಟೇ,
ಅಂತ ಹೇಳುತ್ತೆ ಅದು.

ನಾವು ಮತ್ತೊಮ್ಮೆ ನೋಡಲು ಕಲಿಯುತ್ತಿರುವಾಗ,
ನಮ್ಮನ್ನು ಅಳಿಸಲು ಕಟ್ಟಿದ್ದ ಸ್ಮಾರಕವನ್ನು ಕೆಡವುತ್ತಿರುವಾಗ,
ಚೀರುತ್ತಿರುವ ಪ್ರತಿಯೊಂದು ಪಕ್ಷಿಯ ಎದೆಯಲ್ಲಿ
ಹಾಗೂ ಅಪ್ಪಳಿಸುತ್ತಿರುವ ಪ್ರತಿಯೊಂದು ಅಲೆಯ ಭಾಷೆಯಲ್ಲಿ
ಈ ನೆಲ ತನ್ನದೇ ನಿಜನಾಮವನ್ನು ಉಸಿರಿಸುತ್ತಿರುತ್ತೆ.

* ತೈಲಪಕ್ಷಿ: ದಕ್ಷಿಣ ಅಮೇರಿಕಾ ಖಂಡದ ಉತ್ತರ ಭಾಗದಲ್ಲಿ ಹಾಗೂ ಟ್ರಿನಿಡಾಡ್ ದ್ವೀಪದಲ್ಲಿ ಕಂಡು ಬರುವ ‘ಗ್ವಾಚರೋ’ ಎಂಬ ಪಕ್ಷಿ. ಈ ಪಕ್ಷಿಯ ಮರಿಗಳು ದಪ್ಪವಾಗಿದ್ದು ಹಿಂದೊಮ್ಮೆ ಇವುಗಳನ್ನು ಕೊಂದು ಬೇಯಿಸಿ ಎಣ್ಣೆ ಮಾಡುತ್ತಿದ್ದರಾದ್ದರಿಂದ ಈ ಪಕ್ಷಿಗೆ ‘ಆಯಿಲ್‌ಬರ್ಡ್’ ಎಂಬ ಹೆಸರು ಬಂತು.


ಮತ್ತದೇ ಕತ್ತಲು
ಮೂಲ: The Same Dark

ಮತ್ತದೇ ಕೋಣೆಯ ಬೇಸರ
ಅದೇ ಹಳದಿಗಿಳಿಯುತ್ತಿರುವ ಬೆಳಕು
ಚಹಾಕಪ್ಪುಗಳಲ್ಲಿ ಕಣಕಣಿಸುವ ಅದೇ ಚಮಚಗಳು
ತುಂಬಿಸಿಕೊಳ್ಳಲು ಕಾಯುತ್ತಿರುವ ಅದೇ ಖಾಲಿ ಬಟ್ಟಲುಗಳು
ಅದೇ ಬಿರುಕಿದ ಬಾಣಲೆಯಲ್ಲಿ ಮರಳುತ್ತಿರುವ
ಮತ್ತದೇ ಬಯಕೆ
ಅದೇ ರೊಟ್ಟಿಯ ಚೂರುಗಳು,
ಅದೇ ಇರುವೆಗಳ ಸಾಲು
ಮೇಜಿನ ಮೇಲೆ
ಅದೇ ಸಾಮಾನುಗಳ ಪಟ್ಟಿ
ಅದೇ ತಾನು ಅದೇ ಕನ್ನಡಿ ಅದೇ ತಾನು
ಮತ್ತೊಮ್ಮೆ ಮೊದಲಿನಿಂದ ದಿನವನ್ನು ಪ್ರಾರಂಭಿಸುವೆ ನಾನು
ಅದೇ ಪರದೆಗಳ ಎಳೆಯುವೆ
ಮತ್ತದೇ ಕತ್ತಲೆಯೊಳಗೆ ಜಾರಿ ಹೋಗುವೆ


ಇರುಳುಗಳ ಪುಸ್ತಕ
ಮೂಲ: Book of Nights


ತೆರೆ ನೀನು ನಿನ್ನ ಇರುಳುಗಳ ಪುಸ್ತಕವನ್ನು,
ಓದಲಸಾಧ್ಯವಾದ, ಮಾಸಿದ ಪುಸ್ತಕವನ್ನು.

ಹಾಳೆಗಳು ಒದ್ದೆಯಾಗಿವೆ,
ಉಬ್ಬಿಹೋಗಿದೆ ನಿನ್ನ ನಿದ್ರೆ
ಮಳೆಯಿಂದ, ಮತ್ತದೇ ಕನಸಿನಿಂದ,
ಅಲ್ಲಿ ನೀನು ಕಿಟಕಿಯ ಬಳಿ ನಿಂತಿರುವೆ ಚೂರುಚೂರಾಗಿ,
ನಿನ್ನ ತೊಯ್ದ ಬಾಯಿಂದ
ಗಾಜಿನ ನಕ್ಷತ್ರಗಳನ್ನು ಹೆಕ್ಕಿ ತೆಗೆಯುತ್ತಿರುವೆ.
ಅವನದ್ದು ಅಂತ ಏನೂ ನೀನು ಉಳಿಸಿಕೊಂಡಿಲ್ಲ
ನಂಬಲು ಬಯಸದ ಮಕ್ಕಳು ಹಾಗೂ
ಕದಲುತ್ತಿರುವ ಮೂಳೆಗಳ
ಒಂದು ಮಸುಕಾದ ನೆನಪಿನ ಹೊರತಾಗಿ.
ಆದರೆ ಕೆಲ ರಾತ್ರಿಗಳಲ್ಲಿ,
ಚಂದಿರನ ಕಠಿಣ ಕಣ್ಣುಗಳು ನಿನ್ನನ್ನು ಅಪ್ಪಿಕೊಳ್ಳುತ್ತೆ
ನಿನ್ನ ದೇಹ ಸಹಿಸಲಾರದಷ್ಟು
ಒತ್ತಾಗಿ, ಬಿಗಿಯಾಗಿ.


ಅವನಿಗೆ ಮೊದಲೇ ಎಚ್ಚರಿಸಲಾಗಿತ್ತು
ಅವಳ ಹರಿತವಾದ ಬಿಳಿ ಹಲ್ಲುಗಳ ಬಗ್ಗೆ,
ಒಳಉಡುಪುಗಳ ಮಧ್ಯೆ ಬಚ್ಚಿಟ್ಟಿರುವ
ಬೆನ್ನೆಲುಬುಗಳ ಕಂಠಹಾರದ ಬಗ್ಗೆ.

ಅವಳ ಬಾಯ್ತೆರೆದ ಚುಂಬನಗಳು
ಅವನ ಬಾಯಲ್ಲಿ ಗಾಯ ಮಾಡುತ್ತಿತ್ತು,
ಅವನ ಗಂಟಲಿನಲ್ಲಿ ಉಪ್ಪು ಹಚ್ಚಿದಂತನಿಸುತ್ತಿತ್ತು.

ಅತಿ ಹಸಿವಿನವಳಾದ್ದರಿಂದ ಅವಳನ್ನು ನಂಬುವುದು ಕಷ್ಟ.
ಈ ರಾತ್ರಿ, ಅವಳು ನಿದ್ದೆಮಾಡುತ್ತಿರುವಾಗ,
ತನ್ನ ಹೃದಯವನ್ನು ಅವನು ಕಲ್ಲುಗಳಿಂದ ತುಂಬಿಸಿ,
ಆಳಕ್ಕೆ ಮುಳುಗಿಸುವನು.


ಈಗೀಗ ನಿದ್ದೆ ಮರೆವೆನಿಸುತ್ತಿಲ್ಲ ಹಿಂದಿನಂತೆ.

ಕೆಟಲ್ಲಿನಲ್ಲಿ ನೀರು ಕುದಿಯಲಿಕ್ಕೆ ಇಡುವೆ,
ಮುಖ ತೊಳೆದುಕೊಳ್ಳುವೆ,
ಬೆಳಕು ಹರಿಯುವವರೆಗೂ ಸೀಲಿಂಗಿನ ಮೇಲೆ
ಮಿಣುಕುಹುಳಗಳು ಹರಿದಾಡುವುದನ್ನು ನೋಡುವೆ.
ಪ್ರೇಮ ನಿನ್ನನ್ನು ಈ ದೇಹದೊಳಗೆ ಬಂಧಿಸಿಟ್ಟಿದೆ,
ನಿನ್ನ ರೆಕ್ಕೆಗಳನ್ನು ತೆರೆದು ಬಿದ್ದ,
ದಣಿದ ಕೈಗಳನ್ನಾಗಿ ರೂಪಿಸಿದೆ, ಯಾಚಿಸುವಂತೆ,
ಅವನ ಎದೆಯ ಮೇಲೆ ಬಿದ್ದಿರುವ ಸತ್ತ ಜೇಡರಹುಳಗಳಂತೆ.


ಧೂಮ ದರ್ಪಣಗಳಿಂದ ರಚಿಸಲಾದ
ಐಂದ್ರಜಾಲಿಕನ ಮಂದಹಾಸ ನನ್ನದು,
ಕೆಂಪು ಮೇಣದ ಗೀಚು, ದೃಷ್ಟಿಯ ಚಳಕವಿದು.

ರಾತ್ರಿಯಲ್ಲಿ, ನನ್ನ ಚರ್ಮ ಬರಿದಾದಾಗ,
ಬರೀ ಒಂದು ಪ್ರಶ್ನೆಗಿಂತ ತುಸು ಹೆಚ್ಚೇ ಆಗಿರುವೆ.
ಅಲುಗಾಡದೇ ಮಲಗಿರುವೆ,
ನನ್ನ ನಿಜಮುಖದ ಎದುರು ಪ್ರಕಟವಾಗುವವರಿಗಾಗಿ ಕಾಯುತ್ತಾ.

ನನ್ನನ್ನು ಅತಿನಯವಾಗಿ ನೇವರಿಸಿದಾಗ,
ಮರಗಳಿಗೆ ಮಾತ್ರ ಅರ್ಥವಾಗುವ
ಮಾತುಗಳನ್ನಾಡುವೆ.


ಊಸರವಳ್ಳಿ ಯೋಚನೆಗಳು
ಮೂಲ: Chameleon Thoughts


ನನ್ನನ್ನು ನಾನು ಬದಲಾಗದಂತೆ ನೋಡಿಕೊಳ್ಳಲು
ಈ ಊಸರವಳ್ಳಿಯನ್ನು ನನ್ನ ಕೊರಳಲ್ಲಿ ಧರಿಸುವೆ.
ನಾನು ಬೆಂಕಿಯಿಂದ ಬೆಂಕಿಗೆ ನೆಗೆಯುವೆ
ಪ್ರತಿಸಲ ಹೊಸ ತೊಗಲಿನೊಂದಿಗೆ,
ಶಕುನಗಳ ನೂಲಿಸುವೆ,
ಸ್ವಪ್ನದರ್ಶನಗಳ ಸ್ರವಿಸುವೆ,
ಮತ್ತೆ ನನ್ನ ಮುಖವ ಕಳಚುವೆ
ಚಂದಿರನ ಆವರ್ತನದೊಂದಿಗೆ.
ಈ ಕೊನೆಯ ಅವತಾರ
ನನ್ನನ್ನು ಕೊಲ್ಲಬಾರದು ಅಷ್ಟೇ.
ನನ್ನಲ್ಲಿ ಅದೃಷ್ಟ ಇನ್ನೂ ಸ್ವಲ್ಪ ಉಳಿದಿದೆ.


ಈ ಊಸರವಳ್ಳಿಯ ಲೋಲಕವನ್ನು ‘ಸ್ಟೋರ್ ಬೇ’ಯ
ಒಬ್ಬ ಮಾರಾಳಿಯಿಂದ ಖರಿದಿಸಿದೆ,
ಇದು ನನಗೆ ಅದೃಷ್ಟ ತರುತ್ತದೆಂದು ಹೇಳಿದ ಆತ.
ನಾನು ಯಾರಾಗಬೇಕೆಂದು ಪ್ರಯತ್ನಿಸುತ್ತಿದ್ದೇನೆಂಬ
ಖಾತ್ರಿಯಿರದ ಒಂದು ದಿನ ಬೆಳಗ್ಗೆ ಖರೀದಿಸಿದೆ,
ಇದು ನನಗೆ ಒಂದು ದೊಡ್ಡದಾದ ಶಾರ್ಕ್‌ಮೀನಿನ
ದಂತದ ಅಡಿಯಲ್ಲಿ ಕಂಡಿತ್ತು,
ಅದು ಸರದಲ್ಲಿ ಪೋಣಿಸಿದ ಕಲ್ಲು ಲಿಂಗದಂತ್ತಿತ್ತು,
ಒರಟಾಗಿ ಮಾಡಿದ ಕಳಿಮಣ್ಣಿನ ಆಮೆಯ ಮೇಲೆ ಕೂತಂತಿತ್ತು.
ಕಂದುಬಣ್ಣದ ಚಟ್ಟೆ ಪದಕದಲ್ಲಿ ಸಿಕ್ಕಿಬಿದ್ದಿರುವ ಈ ಊಸರವಳ್ಳಿ,
ತನಗೆ ಬೇಕಾದ ಹಾಗೆ ತನ್ನನ್ನು ಬದಲಿಸಿಕೊಳ್ಳಲಾಗಲಿಲ್ಲ,
ಮತ್ತೆ, ಆ ಗಳಿಗೆಯಲ್ಲಿ
ನನ್ನಿಂದಲೂ ಆಗಲಿಲ್ಲ.


ನಮಗೆ ಊಸರವಳ್ಳಿಗಳ ಬಗ್ಗೆ ಭಯ ತುಸು ಹೆಚ್ಚೇನೆ,
ಇರುವ ಹಾಗೇ ಎಲ್ಲವೂ ಇರಬೇಕೆಂದು ಬಯಸುವವರು ನಾವು,
ನಾವು, ಅಪರಿಚಿತರಿಗೆ ಹೃದಯದ ಹಸಿ ಮಾಂಸವನ್ನು ಮಾರುವವರು,
ಸೇತುವೆಗಳನ್ನು ಸುಟ್ಟುಹಾಕುವವರು,
ದೇವರ ಹೆಸರನ್ನು ಅನುಮತಿಯಿಲ್ಲದೇ ಬಳಸುವವರು,
ನಮ್ಮ ಸಣ್ಣ ಡ್ರ್ಯಾಗನ್-ಗಳು ಹಸಿರಾಗಿ ಇರಬೇಕು,
ಜೇಬಲ್ಲಿಟ್ಟುಕೊಳ್ಳಬಲ್ಲ ಗಾತ್ರದ್ದಾಗಿರಬೇಕು,
ಶುದ್ಧಾಂತಃಕರಣದಿಂದ ಹಿಸುಕವಂತಾಗಿರಬೇಕು
ಎಂದು ಬಯಸುವವರು ನಾವು.


ಒಂದು ಉತ್ತಮ ಊಸರವಳ್ಳಿಯ ಹಾಗೆ,
ನನ್ನ ಚರ್ಮಕ್ಕೆ ಅಪಾಯದ ರುಚಿ ತಗುಲಿದಾಗ
ಬದಲಾಗುವೆನು ನಾನು.
ಆದರೆ ಈ ಕ್ಷಣ, ನೀನು ಬಯಸಿದ್ದು ನನ್ನನ್ನಲ್ಲ.
ನಾನು ಸ್ವಲ್ಪ ಭಿನ್ನವಾದವಳು,
ವಿಷವೃಕ್ಷಗಳನ್ನು ಹತ್ತುವೆನು,
ತೆರೆದ ಬಾಯನ್ನು ಗಾಳಿಯ ಕಡೆ ತಿರುಗಿಸುವೆನು.
ನೀನು ಮೊಟ್ಟೆಯಿಟ್ಟಾಗ ಆಶಿಸಿದ್ದು ನನ್ನಂತಹವಳನ್ನಲ್ಲ.
ಬಹುಶಃ ನಿನಗೆ ನನಗಿಂತ ಕೋಮಲವಾಗಿರುವ
ಜೀವ ಬೇಕಿತ್ತೋ ಏನೋ,
ಒಂದು ಕಿರುಕುದುರೆಯೋ ಅಥವಾ ಒಂದು ಚಿಟ್ಟೆಯೋ.
ಆದರೆ, ಇಲ್ಲಿರುವುದು ನಾನು:
ದುರ್ಬೀನು ದೃಷ್ಟಿಯನ್ನು, ಮತ್ತೆಲ್ಲವನ್ನೂ ಹೊತ್ತುಕೊಂಡು,
ಮರಗಳ ಎಲೆಬುಡದಲ್ಲಿ
ರೆಕ್ಕೆಗಳಿಗಾಗಿ ಕಾಯುತ್ತಿರುವ
ಒಂದು ಹಲ್ಲಿ.


ಈ ಲೋಲಕ ನೀರನ್ನು ತಡಕೊಳ್ಳಬಲ್ಲುದೋ
ಇಲ್ಲವೋ ಗೊತ್ತಿಲ್ಲ ನನಗೆ,
ಆದರೂ ಹೇಗಿದ್ದರೂ ನಾನು ಅದನ್ನು ಧರಿಸುವೆ.
ನನ್ನ ಕೊರಳೆಲುಬಿನ ಗುಂಡಿಯಲ್ಲಿ
ಅದು ವಿರಮಿಸುತ್ತಿದೆ,
ಬೆಚ್ಚನೆಯ ಕಂದುಬಣ್ಣದ ಕಲ್ಲು,
ಈ ಹೊತ್ತು
ಬದಲಾಗದೆ
ನನ್ನ ಹಾಗೆ,
ನಾನು ಮತ್ತೆ
ಬದಲಾಗಲು
ನಿರ್ಧರಿಸುವವರೆಗೂ.

Store Bay: ಟೊಬೇಗೊ ದ್ವೀಪದಲ್ಲಿರುವ ಒಂದು ಜನಪ್ರಿಯ ಕಡಲತೀರ; ‘ಬೀಚ್.’

About The Author

ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ