ಪ್ರೀತಿಗೆ ಹಲವು ಭಾಷೆ
ಒಲವಿನ ಬೆರಗ ಬೇನೆಯ
ಮೌನ ಮುರಿಯಲೆಂದೇ
ಮಲ್ಲಿಗೆ ಮಾತ ಹರಡಿದವಳ
ಕೆನ್ನೆಗಡರಿದ ಕೆಂಪ
ದೃಷ್ಟಿಸುತ್ತ ನಕ್ಕ ಅವನಿಗೆ
ಕಾಣದಿರಲೆಂದೇ ಬಚ್ಚಿಟ್ಟುಕೊಂಡ
ಕೈಗಳ ಬೆವರ ಬಿಸಿಗೆ
ಒಂದಾಗಿಸಿದ ಬೆರಳುಗಳಲಿ
ಬೇರೆಯಾಗದಿರಲೆಂಬಂತೆ ಬೆಸುಗೆ
ಹೇಳದಿದ್ದರೆ ತಿಳಿಯುವುದು ಹೇಗೆ?
ಎಂದು ಒಗಟುಗಳ ಎಸೆದು
ಉತ್ತರವ ಕಾದಳು ಪ್ರತಿಘಳಿಗೆ
ಇನ್ನೂ ಹೇಳಬೇಕೆ? ಎಂದವನು
ಹಾರಿಸಿದ ಹುಬ್ಬಿನ ಭಾಷೆಯ ಬಗ್ಗೆ
ದುಮ್ಮಾನ, ಅನುಮಾನ, ಅಭಿಮಾನ
ಕಂಡಷ್ಟೂ ಮತ್ತೆ ನೋಡುವಾಸೆ
ತಣಿಯಲಾರದು ಅವಳ ಬಾಯಾರಿಕೆ
ಸರಿ, ತಪ್ಪುಗಳ ನೆಪಮಾಡಿ
ಹಾರಿಬಿಡುವೆ ಕೈಗೆ ಸಿಗದ ಹಾಗೆ
ಎಂದೇನೋ ಹೇಳಿದವಳಿಗೆ
ಅಂತರ ಸಹಿಸಲಾಗದು
ಪೂರ್ಣ ತೆರೆದುಕೊಂಡರೆ ಕ್ರಮಿಸಲು
ದಾರಿ ಉಳಿಯಲಾರದು
ಎಂಬ ಹೊಸದೊಂದು ಕನಲಿಕೆ
ರಮ್ಯತೆಯ ರಮಿಸಬೇಕೆಂದರೆ
ಕನಸುಗಳು ಕದಲದಿರಲಿ
ವಿರಹ ಬಳಿಬಾರದೆ ಚಂಡಿಹಿಡಿಯಲಿ
ಎಂಬ ಅವಳಾಸೆ
ತಿಳಿಸಿ, ಸಂಕೀರ್ಣವಾಗಹೊರಟವಳ
ತುಟಿಯ ಮೇಲೆ ಬೆರಳಿರಿಸಿ
ಬರಸೆಳೆದು ತಬ್ಬಿ ಹೇಳಿದ
“ಆಗಲಿ, ಒಂದಾಗಿರೋಣ ಎಂದು ಹೀಗೇ
ಪ್ರೀತಿಗೆ ಹಲವು ಭಾಷೆ”
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.