ಸಾಹೇಬ್ರೆ, ಎಲ್ಲಾ ನಾಚಿಕೆ ಬಿಟ್ಟು, ಇರೋ ಸತ್ಯಾನೆಲ್ಲಾ ನಿಮಗೆ ಹೇಳುತ್ತೇನೆ. ನನ್ನ ಹತ್ತಿರ ಒಂದೇ ಒಂದು ಒಳಲಂಗ ಇದೆ. ಅದನ್ನು ನನ್ನ ಮದುವೆಯಲ್ಲಿ ಕೊಟ್ಟಿದ್ದರು. ಹರಿದು ಹೋಗಿದ್ದ ಅದನ್ನು ನಾನು ಅದೆಷ್ಟೋ ಸಾರಿ ಹೊಲಿದು ರಿಪೇರಿ ಮಾಡಿಕೊಂಡಿದ್ದೇನೆ. ಅದು ಮತ್ತೆ ಹೊಲಿಯಲಾರದಷ್ಟು ಚಿಂದಿ ಚಿಂದಿಯಾಗಿತ್ತು. ಅದಕ್ಕಾಗಿ ಸಾಹೇಬ್ರೆ…. ಈ ಬ್ಯಾನರ್ ಅನ್ನು ಕಿತ್ತುಕೊಂಡು ಅದರಿಂದ ಒಂದು ಒಳಲಂಗವನ್ನು ನಾನೇ ಹೊಲಿದುಕೊಂಡಿದ್ದೇನೆ. ಅಗೋ ಅಲ್ಲಿ ನೋಡಿ ಸಾಹೇಬ್ರೆ, ಹರಕು ಬಟ್ಟೆಗಳ ಸಾಲಿನಲ್ಲಿ ಅದು ಜೋತಾಡುತ್ತಿದೆ.
ಡಾ. ಬಸವರಾಜ ಸಾದರ ಅವರ ಅನುವಾದಿತ ಕತೆಗಳ ಸಂಕಲನ “ಚಿನಾರ್ ವೃಕ್ಷದ ಅಳು” ಪುಸ್ತಕದಿಂದ ಅಸ್ಸಾಮಿ ಕತೆ “ನಾಚಿಕೆ”

 

ಅಸ್ಸಾಮಿ: ಸಂಜೀವ್ ಪೋಳ್ ಡೇಕಾ
ಕನ್ನಡಾನುವಾದ : ಡಾ. ಬಸವರಾಜ ಸಾದರ  

ನಾರಾಯಣ ಕಾಕೋಟಿಯ ಗಂಟಲು ಒಣಗಿದಂತಾಯ್ತು. ಪೋಲೀಸಿನವರಿಗೆ ಅತ್ಯಂತ ಸಹಜವಾದ ಸಿಟ್ಟು ಅವನಲ್ಲಿ ನಿಧಾನವಾಗಿ ಏರತೊಡಗಿತು. ಆದರೆ ಅದನ್ನಾತ ತಕ್ಷಣ ಎಚ್ಚರದಿಂದ ನಿಯಂತ್ರಿಸಿಕೊಂಡ. ಅವನಾದರೂ ಯಾರ ಮೇಲೆ ಆ ಸಿಟ್ಟನ್ನು ತೀರಿಸಿಕೊಳ್ಳಲು ಸಾಧ್ಯ? ಅಷ್ಟಕ್ಕೂ, ಅಂಥ ಒಂದು ಸಣ್ಣ ಸ್ಥಳದಲ್ಲಿ ಇಂಥ ಘಟನೆ ಸಂಭವಿಸುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಹಾಗೆ ವಿಚಾರ ಮಾಡುತ್ತ ಹೋದರೆ, ಆ ಸಣ್ಣ ಹಳ್ಳಿಯಲ್ಲಿ ವಾಸಿಸುವ ಜನರೆಲ್ಲಾ ನಿರಕ್ಷರಿಗಳು. ಕಛೇರಿಯಲ್ಲಿ ಕೆಲಸ ಮಾಡುವ ಒಬ್ಬ ಕ್ಲರ್ಕ ಹಾಗೂ ಒಬ್ಬ ಹೈಸ್ಕೂಲ್ ಟೀಚರ್ ನನ್ನು ಬಿಟ್ಟರೆ ಉಳಿದ ಆ ಗ್ರಾಮವಾಸಿಗಳೆಲ್ಲಾ ದಿನಗೂಲಿ ದುಡಿಯುವವರೆ. ಅವರಲ್ಲಿ ಮೂವರು ಬಡಗಿಗಳು, ಇಬ್ಬರು ರಿಕ್ಷಾ ಎಳೆಯುವವರು ಹಾಗೂ ಕೆಲವರು ಚಕ್ಕಡಿ ಹೊಡೆಯುವವರೂ ಇದ್ದರು. ಈ ಜನರಲ್ಲಿ ಹೆಚ್ಚಿನವರು ಕೆಲಸ ಅರಸಿಕೊಂಡು ಹೊತ್ತು ಮೂಡುವ ಮೊದಲೇ ಮನೆ ಬಿಟ್ಟರೆ ಮತ್ತೆ ಅವರು ತಮ್ಮ ಗೂಡುಗಳನ್ನು ಸೇರುವುದು ಸೂರ್ಯ ಮುಳುಗಿದ ಮೇಲೆಯೇ.

ಇಂಥ ಒಂದು ಅನಿರೀಕ್ಷಿತವಾದ ಹಾಗೂ ವಿಚಿತ್ರವಾದ ಘಟನೆ ನಡೆದದ್ದನ್ನು ನಾರಾಯಣ ಕಾಕೋಟಿ ಕಂಡದ್ದು ಆತನ ಇಡೀ ಸೇವಾವಧಿಯಲ್ಲಿ ಅದೇ ಮೊದಲು. ಬಹುಶಃ ನಮ್ಮ ದೇಶದಲ್ಲಿ ಆ ಹಳ್ಳಿಯಷ್ಟು ಹಿಂದುಳಿದ ಪ್ರದೇಶ ಬೇರೆಲ್ಲೂ ಇರಲಾರದೆಂದೇ ಆತ ನಂಬಿದ್ದ. ಅಂಥ ಹಳ್ಳಿಯಲ್ಲಿ ನಡೆದಿದ್ದ ಆ ಪ್ರಕರಣ ನಿಜಕ್ಕೂ ಅವನಿಗೆ ವಿಚಿತ್ರ ಕುತೂಹಲ ಮೂಡಿಸಿತ್ತು. ಅಪರಾಧಿಯನ್ನು ಹಿಡಿದು ಕೇಸು ಹಾಕುವುದು ಈಗ ಮುಖ್ಯವಲ್ಲವೆಂದೇ ಕಾಕೋಟಿ ಬಲವಾಗಿ ನಂಬಿದ್ದ. ಅಷ್ಟೇ ಅಲ್ಲ; ಆ ಇಡೀ ಘಟನೆಯನ್ನು ಮರೆತುಬಿಡುವುದೇ ಸೂಕ್ತವೆಂದು ತೀರ್ಮಾನಿಸಿದ್ದ. ಆದರೆ ಯಾವಾಗ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಿಂದ ಅತ್ಯಂತ ಕಠಿಣವಾದ ಆದೇಶ ಬಂತೋ, ಆಗ ಅನಿವಾರ್ಯವಾಗಿ ಆತ ಮತ್ತೆ ಹಳ್ಳಿಗೆ ಬರಲೇಬೇಕಾಗಿತ್ತು.

(ಡಾ. ಬಸವರಾಜ ಸಾದರ)

ಹಳ್ಳಿಗೆ ಬಂದ ಕಾಕೋಟಿಯ ತಪಾಸಣಾ ತಂಡ ದೂರದ ಹೊಲವೊಂದರ ಮೂಲೆಯಲ್ಲಿದ್ದ ಮಹಿರಾಯನ ಮನೆಗೆ ಭೆಟ್ಟಿ ಕೊಟ್ಟು, ಅನಂತರ ತಿರುಗಿ ಬಂದು ತರಗೆಲೆ ಮತ್ತು ಮುರಿದುಬಿದ್ದ ಟೊಂಗೆಗಳಿಂದ ಅಸ್ತವ್ಯಸ್ತವಾಗಿದ್ದ ಮಾವಿನ ಮರದ ಕೆಳಗೆ ನಿಂತಿತು. ಹಾಗೆ ನಿಂತುಕೊಂಡ ಅವರೆಲ್ಲ ಬಿಸಿಲಲ್ಲಿ ತಿರುಗಾಡಿ ಬಂದ ಕಾರಣಕ್ಕಾಗಿ ಒಸರುತ್ತಿದ್ದ ತಮ್ಮ ಮುಖದ ಮೇಲಿನ ಬೆವರನ್ನು ಒರೆಸಿಕೊಂಡರು. ದಣಿವಾರಿಸಿಕೊಳ್ಳುತ್ತ ಟಿಸಿಲೊಡೆದ ಮಾವಿನ ಮರದ ಟೊಂಗೆಯೊಂದರ ಕಡೆಗೆ ಕೈ ಮಾಡಿದ ಕಾನ್ಸ್ಟೇಬಲ್ ಬಿಮಲ್ ಹೀಗೆಂದನು-

“ಸರ್, ಎಲ್ಲ ತೊಂದರೆಗೂ ಈ ಮಾವಿನ ಮರವೇ ಕಾರಣ ನೋಡಿ!! ಈ ಮಾವಿನ ಮರ ಇಲ್ಲಿ ಇರದೇ ಹೋಗಿದ್ದರೆ ಇಂಥ ಪ್ರಕರಣ ನಡೆಯುತ್ತಲೇ ಇರಲಿಲ್ಲ. ಇದನ್ನು ನೀವು ಒಪ್ಪುತ್ತೀರಲ್ಲವೆ?”

“ನಿಜ ಬಿಮಲ್, ನೀನಂದದ್ದು ಖಂಡಿತ ನಿಜ”-ಎಂದು ತಲೆಹಾಕುತ್ತ ಒಪ್ಪಿಕೊಂಡ ಕಾಕೋಟಿ, “ನೋಡು, ಬಿಮಲ್ ನಮ್ಮ ಜೀವನದಲ್ಲಿ ಯಾವುದೊಂದು ಕ್ರಿಯೆಯೂ ಪರಿಪೂರ್ಣವಲ್ಲ. ಅಷ್ಟೇ ಅಲ್ಲ; ಇಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಖಂಡಿತವಾಗಿ ಮತ್ತೊಂದರೊಡನೆ ತಳುಕು ಹಾಕಿಕೊಂಡೇ ಇರುತ್ತದೆ. ವೈಜ್ಞಾನಿಕ ಪರಿಭಾಷೆಯಲ್ಲಿ ನಾವು ಇದನ್ನೇ ಸಾಪೇಕ್ಷ ಸಂಬಂಧ ಎನ್ನುತ್ತೇವೆ. ನೀನೇ ಯೋಚಿಸಿ ನೋಡು, ಈ ಗಿಡ ಈಗ ನಡೆದ ಕಳವಿಗೆ ಸಂಬಂಧಿಸಿದೆ. ಮತ್ತೆ ಈ ಪ್ರಕರಣ ಪೋಲೀಸರಿಗೆ ಸಂಬಂಧಿಸಿದೆ, ಅಂದರೆ ನಮಗೆ ಗಂಟುಬಿದ್ದಿದೆ……” ಎಂದ.

ತಾನು ಇದೀಗ ಹೇಳಿದ್ದೆಲ್ಲ ಖಂಡಿತವಾಗಿ ಬಿಮಲ್ ನ ತಲೆಯ ಮೇಲೆಯೇ ಹಾಯ್ದು ಹೋಯಿತೆಂಬುದು ಕಾಕೋಟಿಗೆ ಸ್ಪಷ್ಟವಾಗಿ ಅರ್ಥವಾಯಿತು. ಕಾಕೋಟಿಯು ಆಗಾಗ ಇದೇ ರೀತಿ ಬಿಮಲ್ ಹಾಗೂ ಅವನ ಸಹೋದ್ಯೋಗಿಗಳ ಜೀವನಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿದ್ದುದೇನೂ ಸುಳ್ಳಲ್ಲ. ಕಾಲೇಜಿನಲ್ಲಿ ಆತ ಭೌತಶಾಸ್ತ್ರವನ್ನು ಓದಿದ್ದ. ಕವಿತೆಗಳನ್ನೂ ಬರೆದಿದ್ದ. ಆತ ಯಾವಾಗಲೂ ತನ್ನ ವಿಚಾರಗಳನ್ನು ಮತ್ತೊಬ್ಬರಿಗೆ ಹೇಳುವುದರಲ್ಲಿಯೇ ತೃಪ್ತಿಪಡುತ್ತಿದ್ದ. ಯಾವಾಗಲೂ ಟಿ.ವಿ. ಪೆಟ್ಟಿಗೆಯೊಂದಿಗೆ ಅಂಟಿಕೊಂಡೇ ಇರುತ್ತಿದ್ದ ಕಾಕೋಟಿಯ ಹೆಂಡತಿ ಅವನ ಮಾತುಗಳಿಗೇನೂ ಹೆಚ್ಚು ಕಿವಿಗೊಡುತ್ತಿರಲಿಲ್ಲ. ಹಾಗಾಗಿಯೇ ಆತ ಬಿಮಲ್ ಮತ್ತು ಅವನಂಥ ಇತರ ಕಾನ್ಸ್ಟೇಬಲ್ ಗಳಿಗೆ ಭಾಷಣ ಬಿಗಿಯುತ್ತಲೇ ಇರುತ್ತಿದ್ದ. ಅವೆಲ್ಲ ವಿಚಾರಗಳು ಅವರಿಗೆ ತಿಳಿಯುತ್ತಲೂ ಇರಲಿಲ್ಲ. ಆದರೆ ಹಾಗೆ ಹೇಳಿಕೊಂಡಾಗ ಮಾತ್ರ ಕಾಕೋಟಿಯ ಹೃದಯ ಹಗುರವಾಗುತ್ತಿತ್ತು.

-2-

ಒಂದು ಕ್ಷಣದಲ್ಲಿ ಮತ್ತೆ ಕಾಕೋಟಿ ವಾಸ್ತವಕ್ಕೆ ಹಿಂದಿರುಗಿದ. “ಹೌದು, ಬಿಮಲ್ ಹೇಳಿದ್ದು ಸರಿಯಾಗೇ ಇದೆ. ಈ ಹಾಳಾದ ಪಂಚಾಯತಿ ಕೆಲಸಗಾರರು ಎಲ್ಲ ಜಾಗೆ ಬಿಟ್ಟು ಈ ಗಿಡದ ಮೇಲೆಯೇ ತಮ್ಮ ಬ್ಯಾನರ್ ಅನ್ನು ತೂಗು ಹಾಕಲು ಯಾಕೆ ಮುಂದಾದರೊ? ಅವರಿಗೆ ಈ ಗಿಡದಲ್ಲೇನು ಮಹಾ ಸ್ವರ್ಗ ಕಂಡಿತೋ! ಅಷ್ಟಕ್ಕೂ ನಿರಕ್ಷರಿಗಳಾಗಿರುವ ಈ ಊರಿನ ಜನರೆಲ್ಲ ಆ ಬ್ಯಾನರ್ ನಲ್ಲಿ ಏನು ಬರೆದಿದೆ ಎಂಬುದನ್ನು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಹೇಗೆ ಸಾಧ್ಯ? ಸದ್ಯದ ಸರಕಾರ ಯಶಸ್ವೀ ನಾಲ್ಕು ವರ್ಷ ಪೂರೈಸಿದ್ದನ್ನು ಕಟ್ಟಿಕೊಂಡು ಅವರಿಗೇನಾಗಬೇಕಾಗಿದೆ? ಆ ಬ್ಯಾನರ್ ನಲ್ಲಿ ಏನು ಬರೆದಿದ್ದಾರೆಂಬುದನ್ನು ತಿಳಿಯಲಾರದೆ, ಯಾರೋ ಒಬ್ಬರು ಅದನ್ನು ಕಿತ್ತುಕೊಂಡು ಹೋಗಿ, ಯಾವುದೋ ಒಂದು ಕೆಲಸಕ್ಕೆ ಉಪಯೋಗಿಸಿಕೊಂಡಿರಬೇಕು. ಇದೆಂಥ ಮಹಾ ಗುನ್ಹೆ? ಪೋಲೀಸರಿಂದ ತನಿಖೆ ಮಾಡಿಸುವಷ್ಟು ಘೋರ ಅಪರಾಧವೆ ಇದು?” ಹೀಗೆ ಆತ ತನ್ನಷ್ಟಕ್ಕೆ ತಾನೇ ಯೋಚಿಸಿದ.

ಕಾಕೋಟಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು. ‘ಹಳ್ಳಿಯ ಸಾಮಾನ್ಯ ಜನರು ಇಂಥ ಸಣ್ಣ ಸಣ್ಣ ತಪ್ಪುಗಳನ್ನು ಮಾಡಿದಾಗ ಈ ಅಧಿಕಾರಶಾಹಿಯು ತಾನೆಷ್ಟು ಶಕ್ತಿಶಾಲಿಯೆಂಬುದನ್ನು ತೋರಿಸಿಕೊಳ್ಳಲು ಹೀಗೆ ತನ್ನ ಕೈಗಳನ್ನು ಪ್ರಯೋಗಿಸುತ್ತದೆ. ಆದರೆ ದೊಡ್ಡ ದೊಡ್ಡ ದರೋಡೆಗಳಾದಾಗ ಮತ್ತು ಕಿಮ್ಮತ್ತಿನ ಸಾರ್ವಜನಿಕ ಸ್ವತ್ತು ಹಾಳಾದಾಗ ಅದಕ್ಕೆ ಕಾರಣರಾದ ಅಪರಾಧಿಗಳನ್ನು ಹಿಡಿಯುವಲ್ಲಿ ಅದು ಖಂಡಿತ ಮುಂದೆ ಬರುವುದಿಲ್ಲ. ತೆರಿಗೆದಾರರು ಕೊಡುವ ಕೋಟಿಗಟ್ಟಲೆಯ ತೆರಿಗೆ ಹಣವನ್ನು ಗುಳುಂ ಮಾಡುವ ಖದೀಮರನ್ನು ಪತ್ತೆ ಹಚ್ಚಿ ಶಿಕ್ಷಿಸುವಲ್ಲಿ ಅದು ಸೋಲುತ್ತದೆ. ಪ್ರತಿಭಾವಂತರನ್ನು ಹಿಂದೆ ಸರಿಸಿ ಅಯೋಗ್ಯರಿಗೆ ಮತ್ತು ಅನರ್ಹರಿಗೆ ಶಿಕ್ಷಕ ವೃತ್ತಿಗಳನ್ನು ಹರಿವಾಣದಲ್ಲಿಟ್ಟು ಮಾರಿ, ಅದಕ್ಕೆ ಪ್ರತಿಯಾಗಿ ಅಪಾರ ಲಂಚ ತಿನ್ನುತ್ತದೆ. ನಿರಂತರ ಅಪರಾಧ ಕೃತ್ಯಗಳಲ್ಲಿ ತೊಡಗಿರುವವರಿಗೆ ಯಾವ ಶಿಕ್ಷೆಯಾಗಿದೆ? ಇಂಥ ಎಲ್ಲ ಕುಕೃತ್ಯಗಳಿಗೂ ಅಧಿಕಾರಶಾಹಿಯು ಕುರುಡಾಗಿರುತ್ತದೆ. ಇದೆಲ್ಲ ಹೀಗೇಕೆ? ಯಾಕೆ ಈ ಅನ್ಯಾಯ?’ – ಆತ ಒಳಗೊಳಗೇ ಕುದಿಯತೊಡಗಿದ.

ಅಪರಾಧಿಗಳನ್ನು ಹಿಡಿಯುವುದು ಕಾಕೋಟಿಗೇನೂ ದೊಡ್ಡ ಸಮಸ್ಯೆಯಾಗಿರಲಿಲ್ಲ. ಆದರೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯು ಕೊಟ್ಟಿದ್ದ ಕಠಿಣ ಆದೇಶ ಅವನ ಮನಸ್ಸಿನಲ್ಲಿ ಹಲವಾರು ಸಂದೇಹಗಳನ್ನು ಹುಟ್ಟಿಸಿತ್ತು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅವನಿಗೆ ಹೀಗೆ ಹೇಳಿದ್ದ- “ನೋಡು ಕಾಕೋಟಿ, ಈ ಇಡೀ ಪ್ರಕರಣವನ್ನು ನೀನು ತೀರ ಹಗುರವಾಗಿ ತೆಗೆದುಕೊಂಡಂತೆ ಕಾಣಿಸುತ್ತಿದೆ. ಬಡವರು ಮತ್ತು ಅನಕ್ಷರಸ್ಥರ ಬಗ್ಗೆ ನಿನಗೆ ಅಪಾರ ಕನಿಕರವಿದೆಯೆಂಬುದು ನನಗೆ ಚೆನ್ನಾಗಿ ಗೊತ್ತು. ಆದರೆ, ಈ ಅಪರಾಧ ಮಾಡಿದ ವ್ಯಕ್ತಿ ಆ ಜನರಲ್ಲಿಯೇ ಒಬ್ಬನಾಗಿದ್ದಾನೆಂಬುದನ್ನು ನೀನು ಸರಿಯಾಗಿ ನೆನಪಿಟ್ಟುಕೋ. ಇದು ಪಕ್ಕಾ ಸರಕಾರೀ ಕೇಸು. ನೀನು ಎರಡು ಮೂರು ದಿನಗಳಲ್ಲಿ ಅಪರಾಧಿಯನ್ನು ಹಿಡಿಯದಿದ್ದರೆ ಅದು ನಿನಗೆ ಮತ್ತು ನನಗೆ ಇಬ್ಬರಿಗೂ ಅಪಕೀರ್ತಿ. ಸಾಲದ್ದಕ್ಕೆ ಈ ಸಂಬಂಧವಾಗಿ ಮೇಲಿನವರಿಂದ ಮತ್ತೆ ಮತ್ತೆ ಫೋನ್ ಕರೆಗಳು ಬರ್ತಾ ಇವೆ ಬೇರೆ!!”

“ಸರ್, ಏನು ಯೋಚಿಸ್ತಿದ್ದೀರಿ?”- ಬಿಮಲ್ ನ ಪ್ರಶ್ನೆ ಕಾಕೋಟಿಯನ್ನು ವಾಸ್ತವಕ್ಕೆ ಕರೆತಂದಿತ್ತು.

“ಬಿಮಲ್, ಎರಡು ದಿನಗಳಲ್ಲಿ ನಾವು ಅಪರಾಧಿಯನ್ನು ಪತ್ತೆ ಹಚ್ಚಲೇಬೇಕು. ಈ ರೀತಿ ಹಿಂದೆ-ಮುಂದೆ ನೋಡುವುದನ್ನು ನಾವೀಗ ನಿಲ್ಲಿಸಲೇಬೇಕು…… ತಿಳಿಯಿತೆ? ಏನು, ನಾನು ಹೇಳಿದ್ದು ಅರ್ಥವಾಯಿತೆ?” -ಹೀಗೆನ್ನುತ್ತ ಕಾಕೋಟಿಯು ಗಿಡದಲ್ಲಿಯ ಮುರಿದ ಟಿಸಿಲಿನ ಕಡೆಗೆ ನೋಡಿದ. ಒಂದು ಕ್ಷಣದಲ್ಲಿ ಅವನ ಪಿತ್ತ ನೆತ್ತಿಗೇರಿತು. ಈ ಸರಕಾರ ತಾನು ನಾಲ್ಕು ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಬರೆಸಿದ ಬ್ಯಾನರ್ ಅನ್ನು ಈ ಜಾಗೆಯಲ್ಲಿಯೇ ಹಾಕಬೇಕಿತ್ತೆ? ಇದನ್ನು ತೂಗು ಹಾಕಲು ಅದಕ್ಕೆ ಬೇರೆ ಜಾಗೆ ಸಿಗಲೇ ಇಲ್ಲವೆ? ಬ್ಯಾನರ್ ಹಾಕಿದ ಒಂದೆರಡೇ ದಿನಗಳಲ್ಲಿ ಅದು ಇಲ್ಲಿಂದ ಮಾಯವಾಗಿದೆ. ಅದು ಹಾಗೆ ಮಾಯವಾದುದನ್ನು ಮೊದಲು ಯಾರು ಗಮನಿಸಿದರೋ, ಅದೂ ಗೊತ್ತಿಲ್ಲ. ಆದರೆ ಸ್ವಲ್ಪ ಸಮಯದಲ್ಲೇ ಈ ಮಾಹಿತಿ ಮುಖ್ಯಮಂತ್ರಿಗಳಿಗೆ ತಲುಪಿದೆ. ಅವರ ಗಮನಕ್ಕೆ ಬಂದದ್ದೊಂದೇ ತಡ, ಆಗ ಸುರುವಾಗಿದೆ ನಿಜವಾದ ಕೋಲಾಹಲ!! ಬ್ಯಾನರ್ ಕಳುವಾಗಿದ್ದ ಕ್ಷೇತ್ರದ ಶಾಸಕನನ್ನು ಕರೆಸಿದ ಮುಖ್ಯಮಂತ್ರಿಗಳು- “ಏನಯ್ಯಾ, ನಿನ್ನ ಕ್ಷೇತ್ರದಲ್ಲಿ ಏನೇನು ನಡೆದಿದೆ ಎಂಬ ಅರಿವು ನಿನಗಿದೆಯೇ? ನಮ್ಮನ್ನು ಈ ಪರಿಯಲ್ಲಿ ಅವಹೇಳನ ಮಾಡುವುದೆ? ಹಾಂ….. ಏನಿದೆಲ್ಲ?” – ಎಂದು ದಬಾಯಿಸಿದ್ದಾರೆ. ಅನಂತರ ಪೋಲೀಸ್ ವರಿಷ್ಠಾಧಿಕಾರಿಯನ್ನು ಕರೆದು ಆದಷ್ಟು ಶೀಘ್ರದಲ್ಲಿಯೇ ಅಪರಾಧಿಯನ್ನು ಹಿಡಿಯಲು ಆದೇಶ ಕೊಟ್ಟಿದ್ದಾರೆ.

-3-

ಇಷ್ಟು ನಡೆಯುವುದರೊಳಗೆ ಈ ಘಟನೆಯ ಬಗ್ಗೆ- “ಸರಕಾರದ ಸಾಧನೆಗಳ ಬ್ಯಾನರ್ ಕಳವು-ನಿರಕ್ಷರಿಗಳ ವಾಸಸ್ಥಳದಲ್ಲಿ ರಾಜಕೀಯ ದೊಂಬರಾಟ”- ಎಂದು ದಿನಪತ್ರಿಕೆಗಳ ಮುಖಪುಟಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಸುತ್ತ-ಮುತ್ತಲಿನ ಹಳ್ಳಿಗಳ ಪುಡಿ ರಾಜಕಾರಣಿಗಳು ಈ ಘಟನೆಯಲ್ಲಿ ಭಾಗಿಯಾಗಿರದಿದ್ದರೆ ಆ ಘಟನೆ ಇಂಥದೊಂದು ತಿರುವನ್ನು ಪಡೆಯುತ್ತಲೇ ಇರಲಿಲ್ಲ. ಈ ಕೃತ್ಯದಲ್ಲಿ ವಿರೋಧ ಪಕ್ಷದವರ ಕೈವಾಡವಿದೆಯೆಂದು ಅವರು ಪುಕಾರು ಹಬ್ಬಿಸಿದರು. ಮೇಲಿನವರಿಗೆ ಅಷ್ಟೇ ಸಾಕಾಗಿತ್ತು, ಅವರೂ ಇದು ನಿಜವೆಂದೇ ಭಾವಿಸಿದರು.

“ನಡೆಯಿರಿ, ನಡೆಯಿರಿ. ನಾವು ಇಲ್ಲೇ ಗಿರಕಿ ಹೊಡೆಯುವುದರಲ್ಲಿ ಅರ್ಥವಿಲ್ಲ. ಒಬ್ಬೊಬ್ಬರೂ ಆಸು-ಪಾಸಿನ ಮನೆಮನೆಗಳನ್ನು ಹೊಕ್ಕು ತಪಾಸಣೆ ಮಾಡೋಣ” -ನಿರಾಶೆಯೊಂದಿಗೆ ಕಾಕೋಟಿಯು ಪೋಲೀಸ್ ಪೇದೆಗಳನ್ನುದ್ದೇಶಿಸಿ ಸೂಚನೆ ನೀಡಿದನು.

ಅವರೆಲ್ಲ ತ್ವರಿತವಾಗಿ ಶಾಲಾ ಶಿಕ್ಷಕನ ಮನೆಗೆ ನಡೆದರು. ಹಳ್ಳಿಯ ಜನರು ಆ ಶಿಕ್ಷಕನನ್ನು ‘ಲಕ್ಕೀ ಮಾಸ್ತರ್’ ಎಂದೇ ಕರೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕಾಕೋಟಿಯು ಅವನ ಮನೆಗೆ ಮತ್ತೆ ಮತ್ತೆ ಭೆಟ್ಟಿ ಕೊಡುತ್ತಿದ್ದ ಕಾರಣಕ್ಕಾಗಿ ‘ಲಕ್ಕೀ ಮಾಸ್ತರ್’ ಅವನಿಗೆ ತುಂಬ ಪರಿಚಿತನಾಗಿದ್ದ. ಕಾಕೋಟಿಯು ಬಂದದ್ದನ್ನು ನೋಡಿ ಅವನಿಗೆ ಕುಳಿತುಕೊಳ್ಳಲು ಸೂಚಿಸಿದ.

“ಹಾಂ, ಈಗ ಇದೆಲ್ಲ ಶಿಷ್ಟಾಚಾರ ಬೇಡ”-ಎನ್ನುತ್ತ ನಾರಾಯಣ ಕಾಕೋಟಿಯು “ಡೇಕಾ, ಇದು ನಿನಗೆ ಗೊತ್ತಲ್ಲ, ಈ ಹುಡುಕಾಟ ನಮಗೆ ನಿತ್ಯದ ಗೋಳಾಗಿದೆ. ಹಗಲೂ-ರಾತ್ರಿ ಇದೇ ಪುರಾಣವಾಗಿದೆ. ಜೀವನದಲ್ಲಿ ಯಾವುದೇ ಆಸಕ್ತಿಯಾಗಲಿ, ಸಂತೋಷವಾಗಲಿ ಉಳಿದಿಲ್ಲ”- ಎಂದು ಜಿಗುಪ್ಸೆ ವ್ಯಕ್ತಪಡಿಸಿದ. ಇಷ್ಟು ಅನ್ನುವುದರೊಳಗಾಗಿಯೇ ಬಿಮಲ್ ಮತ್ತು ಇತರ ಪೋಲೀಸ್ ಪೇದೆಗಳು ಆ ಮನೆಯ ಒಳಗೆ ಹೊಕ್ಕರು. ಕಾಕೋಟಿ ಮಾತ್ರ ಹೊರಗೆ ಆವರಣದಲ್ಲಿ ಕುಳಿತಿದ್ದ. ಒಂದೆರಡು ದಿನಗಳ ಹಿಂದೆ ಇದೇ ಜಾಗೆಯಲ್ಲಿ ಆ ಹಳ್ಳಿಯವರೆಲ್ಲ ಒಟ್ಟುಗೂಡಿದ್ದರು. ಈ ಕಳುವಿನಿಂದಾಗಿ ಉಂಟಾದ ಸಮಸ್ಯೆಯ ತೀವ್ರತೆ ಎಂಥದೆಂಬುದನ್ನು ಆ ಸಭೆಯಲ್ಲಿ ಚರ್ಚಿಸಲಾಗಿತ್ತು. ಶಾಲಾ ಮಾಸ್ತರ ಕೂಡಾ ಆ ವಿಷಯದಲ್ಲಿ ಪೋಲೀಸರಿಗೆ ನೆರವಾಗಿದ್ದ. ಹೀಗೆ ಸಭೆ ಸೇರಿಸಿ ಅಪರಾಧಿಯನ್ನು ಪತ್ತೆ ಹಚ್ಚುವ ರೀತಿಯನ್ನು ಕಾಕೋಟಿಯು ಹಿಂದೆಂದೂ ಕಂಡಿರಲಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆ ಹಳ್ಳಿಯ ಸಾಮಾನ್ಯ ಜನರಿಗೆ ವಸ್ತುಸ್ಥಿತಿಯನ್ನು ವಿವರಿಸುವುದು ಅಗತ್ಯವೆಂಬುದು ಅವನ ವಿಚಾರವಾಗಿತ್ತು.

ಹಳ್ಳಿಗೆ ಬಂದ ಕಾಕೋಟಿಯ ತಪಾಸಣಾ ತಂಡ ದೂರದ ಹೊಲವೊಂದರ ಮೂಲೆಯಲ್ಲಿದ್ದ ಮಹಿರಾಯನ ಮನೆಗೆ ಭೆಟ್ಟಿ ಕೊಟ್ಟು, ಅನಂತರ ತಿರುಗಿ ಬಂದು ತರಗೆಲೆ ಮತ್ತು ಮುರಿದುಬಿದ್ದ ಟೊಂಗೆಗಳಿಂದ ಅಸ್ತವ್ಯಸ್ತವಾಗಿದ್ದ ಮಾವಿನ ಮರದ ಕೆಳಗೆ ನಿಂತಿತು. ಹಾಗೆ ನಿಂತುಕೊಂಡ ಅವರೆಲ್ಲ ಬಿಸಿಲಲ್ಲಿ ತಿರುಗಾಡಿ ಬಂದ ಕಾರಣಕ್ಕಾಗಿ ಒಸರುತ್ತಿದ್ದ ತಮ್ಮ ಮುಖದ ಮೇಲಿನ ಬೆವರನ್ನು ಒರೆಸಿಕೊಂಡರು.

ಶಾಲಾ ಮಾಸ್ತರನೂ ಊರಿನ ಜನರನ್ನೆಲ್ಲ ಸಭೆ ಸೇರಿಸುವಲ್ಲಿ ಸಹಾಯ ಮಾಡಿದ್ದ. ಆ ಜನರಾದರೋ ತಮ್ಮ ವಿವಿಧ ಅವತಾರಗಳಲ್ಲೇ ಗುಂಪು-ಗುಂಪಾಗಿ ಬಂದಿದ್ದರು. ಕೆಲವರು ಸೊಂಟಕ್ಕೆ ಮಾತ್ರ ಬಟ್ಟೆಯೊಂದನ್ನು ಸುತ್ತಿಕೊಂಡು, ಉಳಿದಂತೆ ಬರಿಮೈಯಲ್ಲೇ ಬಂದಿದ್ದರು. ಮತ್ತೆ ಕೆಲವು ಹೆಣ್ಣುಮಕ್ಕಳು ತಮ್ಮ ಅರೆಬರೆ ಬಟ್ಟೆಯಲ್ಲೇ ಬಂದಿದ್ದರು. ಜೊತೆಗೆ ಬತ್ತಲೆಯಲ್ಲಿದ್ದ ಅವರ ಮಕ್ಕಳೂ ಕಂಕುಳಲ್ಲಿದ್ದವು. ಆ ಮಕ್ಕಳ ಮೈಮೇಲೆ ಬಿಸಿಲಿನ ತಾಪದಿಂದಾಗಿ ಬೆವರುಸಾಲೆ ಎದ್ದಿದ್ದವು. ಎಲ್ಲರ ಮುಖಗಳ ಮೇಲೂ ಭಯದ ಛಾಯೆ ಆವರಿಸಿತ್ತು. ಕಾಕೋಟಿಯು ಅವರನ್ನೆಲ್ಲ ಉದ್ದೇಶಿಸಿ ಸೌಮ್ಯರೀತಿಯಲ್ಲಿಯೇ ಮಾತಾಡಿದ.

“ನೋಡಿ, ನೀವೆಲ್ಲ ಇಲ್ಲಿ ಸೇರಿರುವುದರ ಕಾರಣ ಏನೆಂಬುದು ಬಹುಶಃ ನಿಮಗೆಲ್ಲ ಗೊತ್ತಿರಬಹುದು. ಕಳೆದ ವಾರವಿಡೀ ನಾನು ಇಲ್ಲಿಯ ಜನರ ಮನೆ ಮನೆಯೊಳಗೆ ಹೊಕ್ಕು, ಕಳೆದು ಹೋಗಿರುವ ಬ್ಯಾನರ್ ನ ವಿಷಯವಾಗಿ ವಿಚಾರಣೆ ನಡೆಸಿದ್ದನ್ನು ನೀವೇ ನೋಡಿದ್ದೀರಿ. ಆ ಬ್ಯಾನರ್ ನ ಮೇಲೆ ಸರಕಾರದ ನಾಲ್ಕು ವರ್ಷಗಳ ಸಾಧನೆಗಳನ್ನು ಬರೆಸಿದ್ದರು. ನಿಮ್ಮಂಥ ಎಲ್ಲ ಬಡವರಿಗೆ ಮತ್ತು ಅಗತ್ಯವಿರುವವರಿಗೆ ಸರಕಾರ ಯಾವ ಯಾವ ಸಹಾಯ ಮಾಡಿದೆ ಎಂಬುದನ್ನು ಅದರಲ್ಲಿ ವಿವರಿಸಿದ್ದರು. ಆದರೆ ಆಶ್ಚರ್ಯವೆಂಬಂತೆ ಒಮ್ಮಿಂದೊಮ್ಮಲೇ ನೀವೆಲ್ಲ ಆ ಬ್ಯಾನರ್ ಅನ್ನು ಈ ಮಾವಿನ ಮರದಿಂದ ಕಾಣದಂತೆ ಮಾಡಿದ್ದೀರಿ. ನೋಡಿ. ನೀವೆಲ್ಲ ಸಾಮಾನ್ಯ ಹಾಗೂ ಮುಗ್ಧ ಹಳ್ಳಿಗರು. ನೀವು ಹಾಗೇ ಇರಬೇಕೆಂದು ನಾವು ಬಯಸುತ್ತೇವೆ. ಒಂದು ವಿಚಾರ ನಿಮ್ಮ ಗಮನದಲ್ಲಿರಲಿ, ನಿಮ್ಮಲ್ಲಿ ಯಾರಾದರೂ ಈ ಅಪರಾಧ ಮಾಡಲು ಬೇರೆಯವರು ಹೆಣೆದ ಬಲೆಯಲ್ಲಿ ಬಿದ್ದಿದ್ದರೆ, ಅಂಥವರಿಗೆ ಅತ್ಯಂತ ಕಠೋರ ಶಿಕ್ಷೆಯಾಗುತ್ತದೆ. ಇದನ್ನು ನೀವು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಇನ್ನೂ ಸಮಯವಿದೆ, ಯಾರೇ ಆಗಲಿ, ಈ ಅಪರಾಧ ಮಾಡಿದವರು ಇಲ್ಲಿದ್ದರೆ ದಯವಿಟ್ಟು ನೀವಾಗಿಯೇ ಒಪ್ಪಕೊಂಡುಬಿಡಿ.

ಆ ಜನಸಮೂಹವೆಲ್ಲ ಮೌನದಿಂದಿತ್ತು. ಪೋಲೀಸರೆದುರು ಬಾಯಿಬಿಚ್ಚಿ ಮಾತಾಡಲು ಅವರಲ್ಲಿ ಯಾರಿಗೂ ಧೈರ್ಯವಿರಲಿಲ್ಲ.

-4-

ನಾರಾಯಣ ಕಾಕೋಟಿಯ ವಿನಂತಿಯ ಮೇರೆಗೆ ಶಾಲಾ ಮಾಸ್ತರನೂ ಆ ಹಳ್ಳಿಯ ಜನರನ್ನುದ್ದೇಶಿಸಿ ಮಾತನಾಡಿದನು. “ನೋಡ್ರಿ, ನಾವೆಲ್ಲಾ ಇಲ್ಲಿ ಹೆಚ್ಚೂ-ಕಡಿಮೆ ಅಣ್ಣ-ತಮ್ಮಂದಿರಂತೆ ಹತ್ತಿರದ ಸಂಬಂಧಿಗಳಾಗಿಯೇ ಬದುಕುತ್ತಿದ್ದೇವೆ. ಪೋಲೀಸರೂ ಅತ್ಯಂತ ಸಭ್ಯ ರೀತಿಯಲ್ಲಿಯೇ ಮಾತಾಡಿದ್ದನ್ನು ನೀವೆಲ್ಲ ಕೇಳಿಸಿಕೊಂಡಿದ್ದೀರಿ. ನಾವೆಲ್ಲಾ ಇಲ್ಲಿ ದಿನಗೂಲಿ ಮಾಡಿಯೇ ಜೀವನ ಮಾಡುವವರು. ಅಷ್ಟೇ ಅಲ್ಲ; ಜೀವನಪೂರ್ತಿ ಇದನ್ನೇ ಮಾಡಿಕೊಂಡು ಹೋಗಬೇಕಾದವರು. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ನಮ್ಮ ದುಃಖಗಳನ್ನು ದೂರ ಮಾಡುವವರು ಯಾರೂ ಇಲ್ಲ. ನಮ್ಮ ಚಿಕ್ಕ ಹಳ್ಳಿಯಲ್ಲಿ ನಡೆದ ಈ ಘಟನೆ ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗುವುದು ನಮಗೆಲ್ಲ ನಾಚಿಕೆಯನ್ನು ಉಂಟು ಮಾಡಿದೆ. ಪೋಲೀಸರು ನಮ್ಮ ಈ ಊರನ್ನು ಕಳ್ಳರ ಹಳ್ಳಿಯೆಂದು ಕರೆಯಲಾರಂಭಿಸಿದ್ದಾರೆ. ಅದಕ್ಕಾಗಿ ನಾನು ನಿಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ – ಈ ಕಳ್ಳತನವನ್ನು ಯಾರು ಮಾಡಿದ್ದೀರಿ? ದಯವಿಟ್ಟು ಒಪ್ಪಿಕೊಳ್ಳಿರಿ”

(ಸಂಜೀವ್ ಪೋಳ್ ಡೇಕಾ)

ಏನೊಂದೂ ಸದ್ದಿಲ್ಲ!! ಸಭೆ ಸೇರಿಸಿದ್ದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಹೆಣ್ಣಾಗಲಿ, ಗಂಡಾಗಲಿ ಯಾರಿದ್ದರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಬಹುದೆಂದು ಕಾಕೋಟಿಯು ನಿರೀಕ್ಷೆಯಲ್ಲಿದ್ದ. ಆದರೆ, ಅವನ ನಿರೀಕ್ಷೆ ನಿಜವಾಗಲಿಲ್ಲ. ಒಂದು ಹಳ್ಳಿಯ ಸಾಮಾನ್ಯ ಜನರೂ ಈ ಪರಿಯಲ್ಲಿ ಸಮಸ್ಯಾತ್ಮಕವಾದದ್ದನ್ನು ಕಾಕೋಟಿಯು ಅದೇ ಮೊದಲ ಸಲ ಕಾಣುತ್ತಿದ್ದ. ಅವನಿಗೆ ಇದು ಬಹಳ ಅಚ್ಚರಿಯನ್ನುಂಟು ಮಾಡಿತು.

ಬಿಮಲ್ ಮತ್ತು ಆತನ ಸಹಪೋಲೀಸರು ಮಾಸ್ತರನ ಮನೆಯಿಂದ ಹೊರಗೆ ಬಂದರು. ವಸ್ತುಸ್ಥಿತಿಯನ್ನರಿತ ಕಾಕೋಟಿಯು ಶಾಲಾ ಮಾಸ್ತರನಲ್ಲಿ- “ ನನ್ನದು ತಪ್ಪಾಯಿತು. ನಿಮಗೆ ನಾನು ಬಹಳ ತೊಂದರೆ ಕೊಟ್ಟೆ. ದಯವಿಟ್ಟು ನನ್ನನ್ನು ಕ್ಷಮಿಸಿರಿ”-ಎಂದು ಕ್ಷಮೆ ಕೇಳಿದನು.

“ಅದೇನೂ ತಪ್ಪಲ್ಲ. ನೀವು ನಿಮ್ಮ ಕರ್ತವ್ಯವನ್ನು ಮಾಡುತ್ತಿದ್ದೀರಿ” – ಎನ್ನುತ್ತ ಶಾಲಾ ಮಾಸ್ತರನು ಹೊರಬಂದು, ನಾರಾಯಣ ಕಾಕೋಟಿಯನ್ನು ರಸ್ತೆಯ ಅಂಚಿನವರೆಗೆ ಬಿಟ್ಟು ಬಂದನು. ಅದೇ ಸ್ಥಳದಲ್ಲಿ ಒಂದಕ್ಕೊಂದು ಒತ್ತೊತ್ತಾಗಿ ತಾಕಿಕೊಂಡಿದ್ದ ಮೂರು ಮನೆಗಳಿದ್ದವು. ಬಿಮಲ್ ಮತ್ತು ಆತನ ಸಹಪೋಲೀಸರು ಆ ಮೂರೂ ಮನೆಗಳಲ್ಲಿ ಮೊದಲನೆಯದರಲ್ಲಿ ಒಳಹೊಕ್ಕರು.

ಆ ಮನೆಯು ನೆಲಕ್ಕಂಟಿಕೊಂಡಂತಿದ್ದ ಎರಡು ಇಳಿಜಾರುಗಳುಳ್ಳ ಜೋಪಡಿಯಾಗಿತ್ತು. ಅದರಲ್ಲಿ ಒಂದು ಕಡೆಯ ಮಾಳಿಗೆಗೆ ಹುಲ್ಲು, ತೆಂಗಿನಗರಿ ಮತ್ತು ಎಲೆಗಳನ್ನು ಹೊದಿಸಲಾಗಿತ್ತು. ಮತ್ತೊಂದು ಕಡೆಯ ಇಳಿಜಾರು ಸಹ ಅದಕ್ಕಿಂತ ಭಿನ್ನವಾಗಿರಲಿಲ್ಲ. ಮಳೆಗಾಲದಲ್ಲಿ ಆ ಎರಡೂ ಇಳಿಜಾರುಗಳು ಸಾಕಷ್ಟು ಸೋರಿದ್ದವೆಂಬುದನ್ನು ಯಾರಾದರೂ ಸುಲಭವಾಗಿ ಊಹಿಸಬಹುದಾಗಿತ್ತು.

ನಾರಾಯಣ ಕಾಕೋಟಿಯು ಈ ಜೋಪಡಿಗೆ ಮೊದಲು ಭೆಟ್ಟಿಕೊಟ್ಟಿರಲಿಲ್ಲ. ಬಿಮಲ್ ಹಾಗೂ ಅವನ ಸಹೋದ್ಯೋಗಿಗಳು ಆ ಗುಡಿಸಲಿನೊಳಗಿಂದ ನಿರಾಶೆಯೊಂದಿಗೆ ಹೊರಬಂದರು. ಇಂಥ ಜೋಪಡಿಯೊಳಗೆ ತಪಾಸಣೆಗೆಂದು ಹೋದುದರ ಬಗ್ಗೆ ಪ್ರತಿಯೊಬ್ಬ ಪೋಲೀಸನ ಮುಖದಲ್ಲೂ ಆತಂಕ ಹಾಗೂ ನಾಚಿಕೆಯ ಭಾವಗಳಿದ್ದುದನ್ನು ಕಾಕೋಟಿಯು ಗುರುತಿಸಿದ. ಅವರಲ್ಲಿ ಕೆಲವರು ಜಿಗುಪ್ಸೆಯಿಂದ ಹಲ್ಲು ಕಿರಿಯುತ್ತ- “ಸರ್, ಇಲ್ನೋಡಿ, ಇವು ಅವರ ಬಟ್ಟೆಗಳು. ಇದರಲ್ಲಿ ಮೇಲಿನದು ಅವರ ಸಣ್ಣ ಮಗುವಿನ ಉಚ್ಚೆಯಿಂದ ಒದ್ದೆಯಾದದ್ದು. ಬಹುಶಃ ಇಂಥ ಕೊಳಕು ಬಟ್ಟೆಗಳನ್ನು ನೀವು ಈ ಮೊದಲು ಎಲ್ಲಿಯೂ ನೋಡಿರಲಿಕ್ಕಿಲ್ಲ”- ಎಂದು ಆ ಕೊಳಕು ಬಟ್ಟೆಗಳನ್ನು ತೋರಿಸಿದರು.

-5-

ಕಾಕೋಟಿಗೆ ಆ ಬಟ್ಟೆಗಳನ್ನು ನೋಡಿ ತುಂಬ ಸಂಕಟ ಮತ್ತು ವ್ಯಥೆಯೆನಿಸಿತು. ತಂದೆ-ತಾಯಿ ಮತ್ತು ಮೂರು ಮಕ್ಕಳು ಸೇರಿ ಒಟ್ಟು ಐದು ಜನರಿದ್ದ ಆ ಕುಟುಂಬವೆಲ್ಲ ಆ ಒಂದೇ ಹಾಸಿಗೆಯ ಮೇಲೆ ಮಲಗುತ್ತಿತ್ತು. ಅದಾದರೂ ಎಂಥದ್ದು? ತೆಳ್ಳನೆಯ ಎರಡು ಪದರಿನ ಹರಿದ ಹಾಸಿಗೆ ಅದು!!
ಅದನ್ನೆಲ್ಲ ಗಮನಿಸುತ್ತ ಕಾಕೋಟಿಯು ಅಂಗಳದಲ್ಲಿ ನಿಂತಿರುವಾಗ ಒಮ್ಮೆಲೇ ಒಬ್ಬ ಹೆಣ್ಣುಮಗಳು ಓಡಿಬಂದವಳೇ ಅವನ ಕಾಲಿನ ಮೇಲೆ ದೊಪ್ಪೆಂದು ಬಿದ್ದು ರೋಧಿಸತೊಡಗಿದಳು.

“ಅರೆ! ಅಮ್ಮಾ ಏನಿದು? ಯಾಕೆ, ಏನಾಯ್ತು? ಹೀಗೇಕೆ ಅಳುತ್ತಿದ್ದೀ? ಮೇಲೇಳು.” – ಎಂದು ಕಾಕೋಟಿ ಅವಳನ್ನು ಸಮಾಧಾನಪಡಿಸತೊಡಗಿದ.
ಆ ಹೆಣ್ಣುಮಗಳು ಅಳುತ್ತಲೇ ಎದ್ದುನಿಂತಳು. ಬಿಕ್ಕುತ್ತ ಬಿಕ್ಕುತ್ತ- “ಸಾಹೇಬ್ರೆ, ನನ್ನನ್ನ ಶಿಕ್ಷಿಸಬೇಡಿ. ನನ್ನ ಸಣ್ಣ ಮಗುವಿನ ಮುಖ ನೋಡಿ. ನನ್ನನ್ನ ನೀವು ಹಿಡಿದುಕೊಂಡು ಹೋಗಿಬಿಟ್ರೆ ಈ ಕೂಸನ್ನ ಯಾರು ನೋಡಿಕೊಳ್ತಾರೆ ಸಾಹೇಬ್ರೆ? ಈ ಮಗು ದೊಡ್ಡದಾಗಿದ್ದಿದ್ರೆ ಆ ಮಾತು ಬೇರೆ ಆಗ್ತಿತ್ತು.”

“ಅಲ್ಲಮ್ಮಾ, ನಿನ್ನ ಸಮಸ್ಯೆಯಾದ್ರೂ ಏನು? ಅದನ್ಯಾಕೆ ಹೇಳುತ್ತಿಲ್ಲ ನೀನು?” – ಕಾಕೋಟಿಯು ಅವಳ ಬಾಯಿಂದ ಮುಂದೆ ಯಾವ ವಿಚಾರ ಹೊರಬರಲಿದೆಯೆಂಬುದನ್ನು ಊಹಿಸಿಯೇ ಪ್ರಶ್ನೆ ಕೇಳಿದ.

“ಸಾಹೇಬ್ರೆ, ನಿಜವಾಗಿಯೂ ಆ ಬ್ಯಾನರ್ ಅನ್ನು ನಾನು ತೊಗೊಂಡಿದ್ದೇನೆ. ಇಷ್ಟು ಸಣ್ಣ ವಿಷಯ ಈ ಪರಿ ದೊಡ್ಡ ಸಮಸ್ಯೆಗೆ ಕಾರಣ ಆಗ್ತದೆ ಅಂತ ನನಗೆ ಗೊತ್ತಾಗ್ಲೇ ಇಲ್ಲ” – ಎಂದು ಅವಳು ಹೆದರುತ್ತಲೇ ಬಡಬಡಿಸತೊಡಗಿದಳು.

“ಆಯ್ತು, ನೀನು ಇಲ್ಲಿಯವರೆಗೆ ಯಾಕೆ ಇದನ್ನೆಲ್ಲ ಹೇಳ್ಲಿಲ್ಲ? ಯಾಕೆ ಸುಮ್ಮನಿದ್ದೆ?” – ಕಾಕೋಟಿ ಪ್ರಶ್ನಿಸಿದ.

“ಸಾಹೇಬ್ರೆ, ನಾನು ಮೊನ್ನೆ ಮನೆಯಲ್ಲಿ ಇರಲಿಲ್ಲ. ನಿಮ್ಮ ಪೋಲೀಸರು ಅದಕ್ಕೂ ಮೊದಲೇ ಬಂದು ಹೋಗಿದ್ದರು. ಆದರೆ……”

“ಆಯ್ತಮ್ಮಾ, ತಾಯಿ. ಇದನ್ನು ನೀನು ಎಲ್ಲಿ ಬಚ್ಚಿಟ್ಟಿದ್ದೆ? ಅದಿರಲಿ, ನೀನು ಇದನ್ನು ಯಾಕೆ ಕಳವು ಮಾಡಿದೆ?”

“ಸಾಹೇಬ್ರೆ, ಏನು ಹೇಳ್ಲಿ ನಾನು!! ಈ ಕೂಸಿನ ತಂದೆ ಕಟ್ಟಿಗೆ ಕಡಿಯಲು ದಿನಾಲೂ ಅಡವಿಗೆ ಹೋಗುತ್ತಿದ್ದ. ಕಳೆದ ತಿಂಗಳು ಹಾಗೆ ಕಟ್ಟಿಗೆ ಕಡಿಯಲು ಹೋದಾಗ ಅವನು ಗಿಡದ ಮೇಲಿಂದ ಬಿದ್ದು ತೀರಿಹೋದ ಸಾಹೇಬ್ರೆ…… ಅವನು ಹೋದ ನಂತರ ನಮ್ಮಿಬ್ಬರ ಹೊಟ್ಟೆ ಹೊರೆಯಲು ಬೇರೆ ದಾರಿಯಿಲ್ಲದೆ ನಾನೇ ದಿನಗೂಲಿಗೆ ಹೋಗತೊಡಗಿದೆ. ಭತ್ತ ನಾಟಿ ಮಾಡಿದೆ, ಕಾಳನ್ನು ಹಸನು ಮಾಡಿಕೊಟ್ಟೆ. ಎಷ್ಟು ದುಡಿದರೂ, ಏನು ಮಾಡಿದರೂ ದಿನಗೂಲಿಯಿಂದ ಬಂದ ಹಣ ಜೀವನಕ್ಕೆ ಸಾಲದಾಯ್ತು. ನಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳೋದು ಸಾಧ್ಯವಾಗಲೇ ಇಲ್ಲ. ಅಂಥ ಸಂದರ್ಭದಲ್ಲಿ ನಾನು ಕುಟುಂಬದ ಪೆನ್ಶನ್ ಗಾಗಿ ಅರ್ಜಿ ಹಾಕಿ ಕಛೇರಿ ಕಛೇರಿ ಅಂತ ಇನ್ನಿಲ್ಲದ ಹಾಗೆ ಅಲೆದಾಡಿದೆ. ಆದರೆ ಅದರಿಂದ ಏನೂ ಫಲ ದೊರಕಲಿಲ್ಲ ಸಾಹೇಬ್ರೆ……..”
“ಆಯ್ತಮ್ಮಾ, ಅದಕ್ಕೂ ಇದಕ್ಕೂ ಏನು ಸಂಬಂಧ? ಈಗ ಹೇಳು, ಈ ಬ್ಯಾನರ್ ನ ಯಾಕೆ ಕದ್ದೆ ನೀನು?”- ಕಾಕೋಟಿ ಪ್ರಶ್ನಿಸಿದ.

“ಸಾಹೇಬ್ರೆ, ಎಲ್ಲಾ ನಾಚಿಕೆ ಬಿಟ್ಟು, ಇರೋ ಸತ್ಯಾನೆಲ್ಲಾ ನಿಮಗೆ ಹೇಳುತ್ತೇನೆ. ನನ್ನ ಹತ್ತಿರ ಒಂದೇ ಒಂದು ಒಳಲಂಗ ಇದೆ. ಅದನ್ನು ನನ್ನ ಮದುವೆಯಲ್ಲಿ ಕೊಟ್ಟಿದ್ದರು. ಹರಿದು ಹೋಗಿದ್ದ ಅದನ್ನು ನಾನು ಅದೆಷ್ಟೋ ಸಾರಿ ಹೊಲಿದು ರಿಪೇರಿ ಮಾಡಿಕೊಂಡಿದ್ದೇನೆ. ಅದು ಮತ್ತೆ ಹೊಲಿಯಲಾರದಷ್ಟು ಚಿಂದಿ ಚಿಂದಿಯಾಗಿತ್ತು. ಅದಕ್ಕಾಗಿ ಸಾಹೇಬ್ರೆ…. ಈ ಬ್ಯಾನರ್ ಅನ್ನು ಕಿತ್ತುಕೊಂಡು ಅದರಿಂದ ಒಂದು ಒಳಲಂಗವನ್ನು ನಾನೇ ಹೊಲಿದುಕೊಂಡಿದ್ದೇನೆ. ಅಗೋ ಅಲ್ಲಿ ನೋಡಿ ಸಾಹೇಬ್ರೆ, ಹರಕು ಬಟ್ಟೆಗಳ ಸಾಲಿನಲ್ಲಿ ಅದು ಜೋತಾಡುತ್ತಿದೆ. ದಯವಿಟ್ಟು ಸಾಹೇಬ್ರೆ ನನಗೆ ಏನೂ ಶಿಕ್ಷೆ ಕೊಡಬೇಡಿ. ನಿಮ್ಮ ದಮ್ಮಯ್ಯ ಅಂತೀನಿ. ಪೋಲೀಸ್ ಜನರು ತಪಾಸಣೆ ಮಾಡಲು ಬಂದಾಗ ನಾನು ಅದನ್ನು ತೊಟ್ಟುಕೊಂಡಿದ್ದೆ. ಹೀಗಾಗಿ ಅವರು ಅದನ್ನು ಪತ್ತೆ ಮಾಡಲಾಗಲಿಲ್ಲ. ದಯವಿಟ್ಟು ನನ್ನನ್ನು ಶಿಕ್ಷಿಸಬೇಡಿ….. ಸಾಹೇಬ್ರೆ…. ನನ್ನನ್ನ ಕ್ಷಮಿಸ್ರಿ…. ದಯಮಾಡಿ ಬಿಟ್ಟುಬಿಡ್ರಿ…” ಅವಳು ಗದ್ಗದಿತಳಾದಳು.

-6-

ಕಾಕೋಟಿಯ ಬಾಯಲ್ಲಿ ಶಬ್ದಗಳೇ ಬರುತ್ತಿಲ್ಲ. ಹೃದಯದ ಯಾವುದೋ ಮೂಲೆಯಲ್ಲಿ ಅವನಿಗೆ ಚುಚ್ಚುತ್ತಿರುವ ಅನುಭವವಾಗತೊಡಗಿತು. ಸಂಕಟ, ವೇದನೆ ಏನೇ ಇದ್ದರೂ ಕಾಕೋಟಿಯು ಆ ಬ್ಯಾನರ್ ಅನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಸುಪರ್ದಿಗೆ ಒಪ್ಪಿಸಲೇಬೇಕಾದದ್ದು ಕಡ್ಡಾಯವಾಗಿತ್ತು. ಆತ ಬಿಮಲ್ ಹಾಗೂ ಆತನ ಸಹಪೋಲೀಸರಿಗೆ ಒಳಲಂಗಕ್ಕೆ ಹಾಕಿದ್ದ ಹೊಲಿಗೆಗಳನ್ನು ಬಿಚ್ಚುವಂತೆ ಸೂಚಿಸಿದ. ಗಂಜಿ ಹಾಕಿದ್ದ ಆ ಬಟ್ಟೆಯನ್ನು ಒಗೆದಿದ್ದ ಕಾರಣಕ್ಕಾಗಿ ಅದು ಜಾಳು-ಜಾಳಾಗಿತ್ತು. ಹಾಗೆ ಜಾಳಾಗಿ ಹೋಗಿದ್ದ ಅದರ ಮೇಲೆ ಬರೆದಿದ್ದ ಅಕ್ಷರಗಳು ಮಸಕು ಮಸಕಾಗಿದ್ದವು. ಕಾಕೋಟಿ ಅವುಗಳನ್ನು ನಿಧಾನವಾಗಿ ಓದತೊಡಗಿದ. “ಇದು ಸಮಾಜವಾದಿ ಸರಕಾರದ ಅದ್ಭುತ ಯಶಸ್ಸು. ಬಡತನ ಮತ್ತು ಅನಕ್ಷರತೆಯನ್ನು ಹೊಡೆದೋಡಿಸುವಲ್ಲಿ ಸರಕಾರದ ಅಭೂತಪೂರ್ವ ಸಾಧನೆ.

ವಿಧವೆಯರು ಮತ್ತು ವಯಸ್ಸಾದವರಿಗೆ ಮಾಸಾಶನದ ಯೋಜನೆ……” ಕಾಕೋಟಿಗೆ ಅದನ್ನು ಮುಂದೆ ಓದುವ ಮನಸ್ಸಾಗಲಿಲ್ಲ. ಕರುಳು ಕಿತ್ತು ಬರುವಂತೆ ಅಳುತ್ತಿದ್ದ ಆ ಅಸಹಾಯಕ ಹೆಣ್ಣುಮಗಳ ಹತ್ತಿರ ಬಂದು ಆತನು ಹೀಗೆ ಹೇಳಿದ- “ಅಮ್ಮಾ ನೀನು ಹೆದರುವ ಕಾರಣವಿಲ್ಲ. ನಾವು ನಿನ್ನನ್ನು ಖಂಡಿತ ಬಂಧಿಸುವುದಿಲ್ಲ. ಇಗೋ ಈ ಐನೂರು ರೂಪಾಯಿಗಳನ್ನು ತೆಗೆದುಕೋ. ನೀನು ಈ ಹಣದಲ್ಲಿ ಒಂದು ಒಳಲಂಗವನ್ನು ಕೊಂಡುಕೋ, ಮಗುವಿನ ಹೊಟ್ಟೆಗೆ ಏನಾದರೂ ಕೊಡಿಸು……” ಎನ್ನುತ್ತ ನೋಟನ್ನು ಅವಳ ಕೈಗಿತ್ತ.

ಆ ಐನೂರು ರೂಪಾಯಿ ನೋಟಿನ ಮೇಲೆ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಹೊರಟಿದ್ದ ಚಿತ್ರವಿದ್ದುದನ್ನು ನೋಡಲು ಕಾಕೋಟಿಯ ಹೃದಯ ಒಪ್ಪಲಿಲ್ಲ. ಲಂಗದ ಹೊಲಿಗೆಯನ್ನು ಬಿಚ್ಚಿದ ಕಾರಣಕ್ಕಾಗಿ ತುಂಡು ತುಂಡಾಗಿದ್ದ ಬ್ಯಾನರ್ ನ ಆ ಬಟ್ಟೆಯನ್ನು ಎತ್ತಿಕೊಂಡು ಆತ ಜೀಪನ್ನು ಹತ್ತಿದ.