ವೇಶ್ಯಾವಟಿಕೆ ಎಂಬ ನೋವಿನ ಲೋಕದ ಕತೆಗಳನ್ನು ಹೇಳಿದಷ್ಟೂ ಮುಗಿಯದು. ಕಂಡಷ್ಟೂ ಮುಗಿಯದು. ಅಂತಹ ಲೋಕದಲ್ಲಿ ಒಂದಿಷ್ಟು ಸಂಚರಿಸಿ ದೀರ್ಘವಾದ ಕ್ಷೇತ್ರಕಾರ್ಯವನ್ನು ಮಾಡಿದ ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಇತ್ತೀಚೆಗೆ ಪ್ರಕಟಿಸಿದ ಪುಸ್ತಕ ‘ವೇಶ್ಯಾವಟಿಕೆಯ ಕಥೆ-ವ್ಯಥೆ’. ವೇಶ್ಯೆಯರ ಪರಿಸ್ಥಿತಿಗಳಿಗೆ ಕಾರಣವಾಗುವ ಪುರುಷವರ್ಗದೆಡೆಗೆ ಪ್ರಖರವಾದ ಸಿಟ್ಟನ್ನು ಒಡಲಿನಲ್ಲಿಟ್ಟುಕೊಂಡು ಅವರು ಈ ಪುಸ್ತಕವನ್ನು ಸಣ್ಣದೊಂದು ವಿಸ್ಮಯ ಮತ್ತು ತುಂಬಾ ಆತಂಕದೊಂದಿಗೆ ಬರೆದಿದ್ದಾರೆ. ಈ ಪುಸ್ತಕದ ಕುರಿತು ತಮ್ಮ ಅನಿಸಿಕೆಯನ್ನು ಇಲ್ಲಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

ಬೆಂಗಳೂರಿನ ಹೊರವಲಯದ ಬಿಡದಿ ಸಮೀಪದ ಊರೊಂದರಲ್ಲಿ ಒಮ್ಮೆ ಮನೆಯೊಂದರ ಮೇಲೆ ಪೊಲೀಸ್ ರೈಡ್ ಆಯಿತು. ಸೋಫಾ, ಮಂಚ, ಅಡುಗೆ ಪಾತ್ರೆ ಸಾಮಾನುಗಳಿದ್ದ ಮನೆಯಲ್ಲಿ ಯಾರೂ ಕಾಣಲಿಲ್ಲ.ಏನೋ ಪತ್ತೆದಾರಿಕೆ ಮಾಡಲು ಮನೆಯೊಳಗೆ ನುಗ್ಗಿದ ಪೊಲೀಸರಿಗೆ ಅಲ್ಲಿ ಯಾರೂ ಕಾಣದೇ ಇದ್ದುದರಿಂದ ಸುಮ್ಮನೇ ಹಿಂತಿರುಗಬೇಕೆಂದುಕೊಂಡಿದ್ದರು. ಅಷ್ಟರಲ್ಲಿ ಪೊಲೀಸ್ ಒಬ್ಬರು ಕಪಾಟುಗಳನ್ನು ತೆರೆದು ನೋಡಲು ಶುರು ಮಾಡಿದರು. ಸಜ್ಜೆಯ ಮೇಲಿದ್ದ ಸಾಲು ಸಾಲು ಕಪಾಟುಗಳ ತುಂಬ ಮಕ್ಕಳು ಮತ್ತು ಹುಡುಗಿಯರನ್ನು ತುಂಬಿಡಲಾಗಿತ್ತು. ಪೊಲೀಸರು ಬರುವ ವೇಳೆಗೆ ಉಸಿರುಬಿಗಿಹಿಡಿದು ಅದರೊಳಗೆ ಕುಳಿತಿದ್ದ ಹತ್ತುಮಂದಿಯನ್ನೂ ಪೊಲೀಸರು ಮುಸುಕು ಹಾಕಿಸಿಕೊಂಡು ಕರೆದೊಯ್ದರು.

ಮಹಾನಗರಗಳಲ್ಲಿ ಜನರ ಓಡಾಟ ತಪಾಸಣೆಯ ವ್ಯವಸ್ಥೆಗಳು ಹೆಚ್ಚಿರುವುದರಿಂದ, ಅಕ್ರಮ ಚಟುವಟಿಕೆಗಳೆಲ್ಲವನ್ನೂ ನಗರದ ಹೊರವಲಯಕ್ಕೆ ದಾಟಿಸುವುದು ಇತ್ತೀಚೆಗೆ ಕಾಣುತ್ತಿರುವ ಹೊಸ ಟ್ರೆಂಡ್. ಅದಲ್ಲದೇ, ಮಹಾನಗರಗಳಲ್ಲಿಯೇ ದುಡಿದು ಲಕ್ಷಗಟ್ಟಲೇ ಆದಾಯ ಗಳಿಸುವವರು ವಾರಾಂತ್ಯದಲ್ಲಿ ನಗರದ ಹೊರವಲಯಗಳಿಗೆ ತೆರಳಿ ವಿಶ್ರಾಂತಿ ಪಡೆಯುವುದು, ಅಥವಾ ಹಳ್ಳಿಗಳಿಗೆ ತೆರಳಿ ಅಲ್ಲಿನ ಜನಜೀವನದ ಸೊಗಸು ನೋಡುವುದು, ಹಸಿರು ಪ್ರಕೃತಿಯ ವಿವಿಧ ಶೈಲಿಯ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಅಂತರಂಗದ ಸಂತೃಪ್ತಿ ಪಡೆಯುವ ಫ್ಯಾಶನ್ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚುತ್ತಿದೆ. ಈ ಪೈಕಿ ಅನೇಕರು ಗ್ರಾಹಕರಾಗಿ ದೊರೆಯಬಹುದು ಎಂಬ ನಿರೀಕ್ಷೆಯಿಂದ ಮಧ್ಯವರ್ತಿಗಳು, ದಲ್ಲಾಳಿಗಳು ತಮ್ಮ ಅಕ್ರಮ ಚಟುವಟಿಕೆಗಳನ್ನು ನಗರದ ಹೊರವಲಯದಲ್ಲಿ ನಡೆಸುತ್ತಾರೆ. ಹಾಗಾಗಿ ಇದೀಗ ನಗರದಂಚಿನ ಹಳ್ಳಿಗಳ ಮೇಲೆ ಹದ್ದಿನಕಣ್ಣಿಡುವುದು ಅನಿವಾರ್ಯವಾಗಿದೆ ಎಂದು ನಗರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಹೇಳುತ್ತಾರೆ.

(ಬಿ.ಎಂ. ರೋಹಿಣಿ)

ರೈಡ್ ಮಾಡುವುದು ಮತ್ತು ಅಲ್ಲಿ ಸಿಕ್ಕಿದ ಸಂತ್ರಸ್ತರನ್ನೇ ಆರೋಪಿಗಳಂತೆ ಠಾಣೆಗೆ ಕರೆದೊಯ್ದು ಅವರಿಂದ ಮಾಹಿತಿ ಪಡೆಯುವ ಪ್ರಕ್ರಿಯೆಗಳು ಒಂದು ರೂಢಿಯಂತೆ ಒಂದೇ ವಿಧಾನದಲ್ಲಿ ಎಷ್ಟೋಕಾಲದಿಂದ ನಡೆದು ಬಂದ ಪದ್ಧತಿ. ಆದರೆ ಈ ವೇಶ್ಯಾವಟಿಕೆಯ ಜಾಲದಲ್ಲಿ ಸಿಕ್ಕಿ ಹಾಕಿಕೊಂಡವರನ್ನು ಅಲ್ಲಿಂದ ಮುಕ್ತಗೊಳಿಸಲು ಎಷ್ಟೇ ಪ್ರಯತ್ನಪಟ್ಟರೂ ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಇರುವ ಯೋಜನೆಗಳು ಬಹಳವೇ ಕಡಿಮೆ. ಅವರನ್ನು ವೃತ್ತಿಯಿಂದ ಮುಕ್ತಗೊಳಿಸಿದ್ದೇವೆ ಎಂಬ ಷರಾದೊಂದಿಗೆ ನಿರ್ದಿಷ್ಟ ಕೇಸು ಕ್ಲೋಸಾಗುತ್ತದೆಯೇ ವಿನಃ, ಆ ಬಳಿಕ ಅವರು ಜೀವನಾದಾಯಕ್ಕೆ ಏನು ಮಾಡಬೇಕು ಎಂಬ ನಿಟ್ಟಿನಲ್ಲಿ ಭದ್ರ ವ್ಯವಸ್ಥೆಗಳು ರೂಪುಗೊಂಡಿಲ್ಲ. ಅದರಲ್ಲಿಯೂ ಎಷ್ಟೋ ಸಂದರ್ಭಗಳಲ್ಲಿ ಈ ಜಾಲದಿಂದ ಬಚಾವ್ ಆಗಿ ಬರುವ ಮಹಿಳೆಯರು ಹೊರರಾಜ್ಯದವರಾಗಿದ್ದಾಗ, ಅವರಿಗೆ ನೂರಾರು ರೀತಿಯ ಕಾನೂನು ತೊಡಕುಗಳೇ ಬೃಹತ್ ಬಂಡೆಯಾಗಿ ನಿಂತುಬಿಡುತ್ತವೆ. ಅವರ ಪುನರ್ವಸತಿಗೆ ದಾಖಲೆ ಪತ್ರಗಳನ್ನು ಹೊಂದಿಸುವುದೇ ಸವಾಲಾಗಿಬಿಡುತ್ತದೆ. ಕೊನೆಗೆ ಬದುಕು ಸಾಗಿಸುವುದಕ್ಕಾಗಿ ಅವರು ತಾವಾಗಿಯೇ ಈ ಜಾಲದೊಳಗೆ ಸೇರಿಕೊಂಡು ಬಿಡುತ್ತಾರೆ ಎಂದು ಈ ಕ್ಷೇತ್ರದ ಸಂತ್ರಸ್ತರ ಪರವಾಗಿ ದುಡಿಯುತ್ತಿರುವ ಕಾರ್ಯಕರ್ತರು ಹೇಳುತ್ತಾರೆ.

ಅಂದು ಬಿಡದಿ ಸಮೀಪ ಕಪಾಟಿನೊಳಗೆ ಬಂಧಿಯಾಗಿದ್ದವರಿಗೆ ಬಂಗಾಲಿ ಭಾಷೆಯಷ್ಟೇ ತಿಳಿದಿತ್ತು. ಅವರೆಲ್ಲರೂ ಪಶ್ಚಿಮ ಬಂಗಾಳ, ಅಥವಾ ಬಾಂಗ್ಲಾ ದೇಶದ ಮೂಲದವರಾಗಿರಬಹುದು. ಉದ್ಯೋಗ ಕೊಡಿಸುವುದಾಗಿ ನಂಬಿಸಿಯೇ ಅವರನ್ನು ಕರೆತಂದು, ಈ ದಂಧೆಗೆ ದೂಡಲಾಗಿತ್ತು. ಬೆಂಗಳೂರಿಗೆ ನೇರವಾಗಿ ಒರಿಸ್ಸಾ, ಪಶ್ಚಿಮ ಬಂಗಾಳ , ಜಾರ್ಖಂಡ್ ಮುಂತಾದ ರಾಜ್ಯಗಳ ಸಂಪರ್ಕ ಇರುವುದರಿಂದ ಎಷ್ಟೋ ಮಂದಿ ಮಕ್ಕಳು ಮತ್ತು ಮಹಿಳೆಯರು ರೈಲು ಹತ್ತಿ ಉದ್ಯೋಗ ಅರಸಿ ಮಹಾನಗರಕ್ಕೆ ಬರುತ್ತಾರೆ. ಆದರೆ ಅಂತಹ ಹುಡುಕಾಟವು ಎಲ್ಲರ ಪಾಲಿಗೆ ಸುಖಾಂತ್ಯವನ್ನು ಕೊಡುವುದಿಲ್ಲ.

ಈ ಕಪಾಟುಗಳ ಕತೆಯು ಕೇವಲ ಮನೆಯೊಳಗಿನ ವಿಚಾರಕ್ಕೆ ಸೀಮಿತವಾದುದೂ ಅಲ್ಲ. ಮನೆ ಬದಲಾಯಿಸುವ ಸಂದರ್ಭದಲ್ಲಿ ಮೇಜು ಕುರ್ಚಿ ಕಪಾಟು ಸಿಲಿಂಡರ್ ಗಳನ್ನು ಸಾಗಿಸುವ ವಾಹನವೊಂದರಲ್ಲಿ ಕಪಾಟಿನೊಳಗೆ ಮಕ್ಕಳು ಮತ್ತು ಹುಡುಗಿಯರು ಸಿಕ್ಕಿದ ಉದಾಹರಣೆಗಳೂ ಇವೆ. ಅಂದಮೇಲೆ ಈ ಜಾಲವು ಎಷ್ಟೊಂದು ಕಟುವಾಗಿ ಬಿಗಿಯಲ್ಪಟ್ಟಿದೆ ಎಂದು ಅರ್ಥವಾಗಬಹುದು.

ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಅವರು ಬರೆದ ‘ವೇಶ್ಯಾವಟಿಕೆಯ ಕಥೆ-ವ್ಯಥೆ’ ಎಂಬ ಪುಸ್ತಕವು ಕೂಡ ವೇಶ್ಯಾವಟಿಕೆಯ ಅನೇಕ ವಿಚಾರಗಳನ್ನು ಅನಾವರಣಗೊಳಿಸುವ ಕೃತಿ. ವೇಶ್ಯಾವಟಿಕೆ ಎಂಬ ವ್ಯವಸ್ಥೆಯು ಪುರುಷ ಪ್ರಧಾನ ಸಮಾಜವು ರೂಪಿಸಿದ ಒಂದು ಬಿಗಿಯಾದ ಜಾಲವೆಂದು ಪ್ರತಿಪಾದಿಸುವ ಈ ಪುಸ್ತಕದುದ್ದಕ್ಕೂ ಸಾತ್ವಿಕ ಸಿಟ್ಟೊಂದು ಪ್ರಖರವಾಗಿ ಪ್ರವಹಿಸಿದಂತಿದೆ. ಜೊತೆಗೆ ಈ ಲೋಕದ ಕತೆಗಳನ್ನು ಪ್ರಸ್ತುತಪಡಿಸುತ್ತಾ ವಿಸ್ಮಯಗೊಳ್ಳುತ್ತಾರೆ; ಇದೊಂದು ಸಮಸ್ಯೆಯನ್ನು ಯಾಕೋ ಮನುಕುಲವು ಬಗೆಹರಿಸಿಕೊಳ್ಳಲಾಗುತ್ತಿಲ್ಲವಲ್ಲಾ ಎಂದು ಹತಾಶೆಯಿಂದ ಬೇಸರಿಸಿಕೊಳ್ಳುತ್ತ ಬರವಣಿಗೆಯ ದಾಟಿಯು ಸಾಗುತ್ತದೆ.

ಈ ವೇಶ್ಯಾವಟಿಕೆಯ ಜಾಲದಲ್ಲಿ ಸಿಕ್ಕಿ ಹಾಕಿಕೊಂಡವರನ್ನು ಅಲ್ಲಿಂದ ಮುಕ್ತಗೊಳಿಸಲು ಎಷ್ಟೇ ಪ್ರಯತ್ನಪಟ್ಟರೂ ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಇರುವ ಯೋಜನೆಗಳು ಬಹಳವೇ ಕಡಿಮೆ. ಅವರನ್ನು ವೃತ್ತಿಯಿಂದ ಮುಕ್ತಗೊಳಿಸಿದ್ದೇವೆ ಎಂಬ ಷರಾದೊಂದಿಗೆ ನಿರ್ದಿಷ್ಟ ಕೇಸು ಕ್ಲೋಸಾಗುತ್ತದೆಯೇ ವಿನಃ, ಆ ಬಳಿಕ ಅವರು ಜೀವನಾದಾಯಕ್ಕೆ ಏನು ಮಾಡಬೇಕು ಎಂಬ ನಿಟ್ಟಿನಲ್ಲಿ ಭದ್ರ ವ್ಯವಸ್ಥೆಗಳು ರೂಪುಗೊಂಡಿಲ್ಲ.

ವೇಶ್ಯಾವಟಿಕೆಯ ಪ್ರಾಚೀನ ಇತಿಹಾಸವನ್ನು ಹೇಳುವ ಮೂಲಕ ಕೃತಿ ತೆರೆದುಕೊಳ್ಳುತ್ತದೆ. ಯುದ್ಧಕಾಲದಲ್ಲಿ ಸೈನಿಕರಿಗಾಗಿ ಸ್ತ್ರೀಯರ ಬಳಕೆ, ಜಪಾನಿನ ಗೀಶಾ ವೃತ್ತಿ, ಬ್ಯಾಬಿಲೋನಿಯಾದ ದೇವರ ಸೇವೆಯ ವೇಶ್ಯೆಯರು, ಸಿರಿಯಾ, ಲೆಬನಾನ್ , ಪಶ್ಚಿಮ ಆಫ್ರಿಕಾ ಮುಂತಾದ ಅನೇಕ ರಾಷ್ಟ್ರಗಳಲ್ಲಿ ವೇಶ್ಯಾವಟಿಕೆಯ ಹಿಂದಿರುವ ನಂಬಿಕೆಗಳು, ಕತೆಗಳನ್ನು ವಿವರಿಸುವ ಪುಸ್ತಕವು ಭಾರತದಲ್ಲಿ ಇದ್ದ ನಂಬಿಕೆಗಳ ಬಗ್ಗೆಯೂ ವಿವರಗಳನ್ನು ನೀಡುತ್ತದೆ.

ಶಾಸನಗಳಲ್ಲಿ ವೇಶ್ಯಾವಟಿಕೆಯ ಉಲ್ಲೇಖವನ್ನು ವಿವರಿಸುವ ಅಧ್ಯಾಯವು, ಈ ವೃತ್ತಿಯು ಎಷ್ಟು ಪುರಾತನ ಕಾಲದಿಂದ ಭದ್ರವಾಗಿ ಬೇರೂರಿದೆ ಎಂಬುದನ್ನೂ ಜೊತೆಗೆ ವೃತ್ತಿಗೆ ಸಲ್ಲುವ ಮರ್ಯಾದೆಗಳು ಕಾಲ ಕಾಲಕ್ಕೆ ಹೇಗೆ ಬದಲಾಗುತ್ತ ಸಾಗಿವೆ ಎಂಬುದನ್ನೂ ವಿವರಿಸುತ್ತವೆ. ಸಾಹಿತ್ಯ ಕೃತಿಗಳಲ್ಲಿ ವೇಶ್ಯಾವಟಿಕೆಯ ಉಲ್ಲೇಖ, ರಾಜಕೀಯ ಕ್ಷೇತ್ರದಲ್ಲಿ ವೇಶ್ಯೆಯರನ್ನು ಬಳಸಿಕೊಂಡ ಉದಾಹರಣೆಗಳನ್ನು ಉಲ್ಲೇಖಿಸಲಾಗಿದೆ.

ಆದರೆ ಈ ದಂಧೆ ನಡೆಸುವವರು ಸುಖದ ಸುಪ್ಪತ್ತಿಗೆಯಲ್ಲಿದ್ದರೆ, ಅದಕ್ಕಾಗಿ ಜೀವ ತೇಯುವವರು ಎಲ್ಲಿಯೂ ಸಲ್ಲದೆ ಅರ್ಧದಾರಿಯಲ್ಲಿಯೇ ಜೀವನ ಮುಗಿಸುತ್ತಾರೆ ಎಂಬ ವಿಚಾರಗಳನ್ನು ಲೇಖಕಿ ಅತ್ಯಂತ ನೋವಿನಿಂದ ಮತ್ತೆ ಮತ್ತೆ ಹೇಳುತ್ತಾರೆ. ಪಾತರದವರು, ದೇವದಾಸಿಯರು, ವಾರಾಂಗನೆಯರು, ಬಾರ್ ಬಾಲೆಯರ ಕುರಿತು ವಿವರವಾದ ಅನೇಕ ಅಧ್ಯಾಯಗಳಿವೆ. ಕಾನೂನು ಅಧ್ಯಯನ, ಸಾಂಪ್ರದಾಯಿಕ ಸಮ್ಮತಿಯ ಕುರಿತೂ ಕೆಲವು ಅಧ್ಯಾಯಗಳಲ್ಲಿ ಚರ್ಚೆ ನಡೆದಿದೆ. ಕೆಲವೊಮ್ಮೆ ಕೃತಿಯಲ್ಲಿ ಮಾಹಿತಿಯ ದಟ್ಟಣೆಯ ನಡುವೆ, ವಿಷಯಧಾರಿತ ಚರ್ಚೆಯು ಮುಂದುವರೆದರೆ ಚೆನ್ನಾಗಿತ್ತು ಎಂದು ಓದುವ ಮನಸ್ಸು ಬಯಸುತ್ತದೆ. ಅಧ್ಯಾಯಗಳಲ್ಲಿ ಕೆಲವೊಮ್ಮೆ ಆಯ್ದುಕೊಂಡ ವಿಷಯದ ಕುರಿತು ಚರ್ಚೆಯು ಇನ್ನಷ್ಟು ದೃಷ್ಟಿಕೋನದಲ್ಲಿ ಸಾಗಬೇಕಿತ್ತು ಅನಿಸಿ, ಮಾಹಿತಿ ದಟ್ಟಣೆಯಾದಂತೆ ಭಾಸವಾಗುತ್ತದೆ.

ಮಕ್ಕಳನ್ನು ಪಡೆಯಬೇಕೆಂಬ ಅದಮ್ಯ ಅಸೆಯಿದ್ದರೂ ಈ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಅದಕ್ಕಾಗಿ ಅವಕಾಶವಿಲ್ಲ. “ಬಸಿರು ಬಾಣಂತನಗಳು ಸಂಪಾದನೆಗೆ ತೊಡಕಾಗಿಬಿಡುತ್ತಿದ್ದವು. ಗರ್ಭಪಾತ ಮಾಡಿಸಲು ಬೇಕಾಗುಷ್ಟು ಹಣ ಹೊಂದಿಸಲು ಅಥವಾ ಸಮಯ ಹೊಂದಿಸಲು ಸಾಧ್ಯವಾಗದೇ ಕೆಲವಮ್ಮೆ ಬಸಿರು ಬೆಳೆಯುವುದುಂಟು. ಕಾಂಡೋಮ್ ಗಳನ್ನು ನಿರಾಕರಿಸುವ ಪುರುಷರೊಂದಿಗೆ ವ್ಯವಹರಿಸುವಾಗ ಬಸಿರು ಸಹಜವಾಗಿಯೇ ಬೆಳೆಯುತ್ತಿತ್ತು. ಕೆಲವರ್ಷಗಳ ಹಿಂದೆ ಪುರುಷರು ಕಾಂಡೊಮ್ ಬಳಕೆಯನ್ನು ನಿರಾಕರಿಸುತ್ತಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿದ್ದರಿಂದ ಕಾಂಡೋಮ್ ಬಳಕೆ ಮಾಡಲು ಒಪ್ಪುತ್ತಿದ್ದಾರೆ’’ ಎಂದು ಬರೆಯುವ ಲೇಖಕಿ, ಈ ದಂಧೆಯಲ್ಲಿದ್ದುಕೊಂಡು ಅಮ್ಮನಾದವಳ ಮತ್ತೊಂದು ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತಾರೆ.

‘ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಯಿದ್ದರೂ ಅದನ್ನು ಅವರಿಂದ ಪೂರೈಸಲಾಗದ್ದೇ ಹೆಚ್ಚು. ವೃತ್ತಿ ನಿರತ ವೇಶ್ಯೆಯರಲ್ಲಿ ಅವರ ಮಕ್ಕಳ ಬಗ್ಗೆ ಕೇಳಿದರೆ ಸಾಕು, ಕರುಳಲ್ಲಿ ಕತ್ತಿಯಾಡಿಸಿದಂತಹ ನೋವಿನಿಂದ ಬೇಯುತ್ತಾರೆ. ಇಂತಹ ಸ್ಥಿತಿಯಲ್ಲಿದ್ದವಳೊಬ್ಬಳಲ್ಲಿ ಮಗುವನ್ನು ಯಾರಿಗಾದರೂ ಕೊಡು ಎಂದು ಪದೇ ಪದೇ ಹೇಳಿದರೂ ಕೇಳದೇ ನಿಧಿಯಂತೆ ತನ್ನ ಜೊತೆಯಲ್ಲಿಯೇ ಒಯ್ಯುತ್ತಿದ್ದಳು. ಆದರೆ ಒಂದು ದಿನ ವಿಪರೀತ ಕುಡಿದು ತೂರಾಡುತ್ತಿದ್ದ ಆಕೆಯ ಕೈಯ್ಯಿಂದ ಮಗು ಜಾರಿ ಬಸ್ಸಿನಡಿಗೆ ಬಿದ್ದು ಸತ್ತ ಬಳಿಕ ಆಕೆ ಮತಿವಿಕಲೆಯಾಗಿಬಿಟ್ಟಿದ್ದಳು.’’

*****

ಅಪಾರವಾದ ಕ್ಷೇತ್ರ ಕಾರ್ಯದ ಆಧಾರದಲ್ಲಿ ರೂಪುಗೊಂಡ ಈ ಕೃತಿಯಲ್ಲಿ ವೃತ್ತಿ ನಿರತರ ಸಂದರ್ಶನವನ್ನು ಆಧರಿಸಿ ಅನುಭವ ಕಥನಗಳನ್ನೂ ದಾಖಲಿಸಿದ್ದಾರೆ. ಆ ಕತೆಗಳಲ್ಲಿ ನಿರೂಪಕರ ಯಾವುದೇ ಅಭಿಪ್ರಾಯಗಳು ಸೇರಿಕೊಳ್ಳದೇ ನೇರವಾದ ದಾಖಲೀಕರಣವಾಗಿರುವುದರಿಂದ ,ಈ ಕ್ಷೇತ್ರಕ್ಕೆ ಬರುವವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಅಷ್ಟೇ ಅಲ್ಲ,  ಜೀವನದಲ್ಲಿ ಎಷ್ಟೋ ಸಂದರ್ಭಗಳಲ್ಲಿ ಮಾನಸಿಕವಾದ ಒತ್ತಡಗಳು ಎದುರಾದರೆ ಅಥವಾ ಬದುಕಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಇಕ್ಕಟ್ಟಿನ ಪರಿಸ್ಥಿತಿಗಳು ಎದುರಾದಾಗ, ಒಂದಿಷ್ಟು ಸಾಂತ್ವನ ಅಥವಾ ನೇವರಿಕೆ ಮಾತುಗಳು ಸಿಕ್ಕರೂ ಸಾಕು, ಅನೇಕರು ಈ ದಾರಿಯ ತುಳಿಯುವುದನ್ನು ತಪ್ಪಿಸಬಹುದೇನೋ. ಮಾರ್ಗದರ್ಶನದ ಕೆಲವು ನುಡಿಗಳು, ನಡೆಗಳು ಎಷ್ಟೋ ಮಂದಿ ಮಕ್ಕಳು, ಮಹಿಳೆಯರು ಈ ದಾರಿ ತುಳಿಯದಂತೆ ಕಾಪಾಡಬಹುದೇನೋ. ಮಹಿಳೆಯರೊಡನೆ ಒಂದು ಹಾರ್ದಿಕವಾದ ನುಡಿಯಿಲ್ಲದ ಒಣ ಸಂಬಂಧಗಳು, ಜೀವನಾವಶ್ಯಕವಾದ ವಿಚಾರಗಳಿಗೇ ತಡೆಯೊಡ್ಡುವ ಮನಸ್ಥಿತಿಗಳು ಕೂಡ ಅವರು ವೇಶ್ಯಾವಟಿಕೆಯತ್ತ ಹೆಜ್ಜೆ ಇಡುವಂತೆ ಮಾಡುವುದುಂಟು. ಆದರೆ ತಾವು ಬಾಣಲೆಯಿಂದ ಜಾರಿ ಬೆಂಕಿಗೆ ಬೀಳುತ್ತಿದ್ದೇವೆ ಎಂಬ ಅರಿವು   ಆ ಕ್ಷಣದಲ್ಲಿ ಅವರ ಅರಿವಿಗೆ ಬಂದಿರುವುದಿಲ್ಲವಷ್ಟೇ – ಎಂಬ ನೋಟವನ್ನು ಈ ಕತೆಗಳು ಹೇಳುತ್ತವೆ.

ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬರು ‘ವೇಶ್ಯಾವಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡ ಮಹಿಳೆಯರ ರಕ್ಷಣೆ ಪ್ರಮಾಣ ಹೆಚ್ಚಳವಾಗಿದೆ’ ಎಂದು ಹೇಳಿದ್ದು ವರದಿಯಾಗಿತ್ತು. ಆದರೆ ಇದು ಸಕಾರಾತ್ಮಕ ಸಂಗತಿಯೆಂದು ಖುಷಿಪಡಲು ಸಾಧ್ಯವಿಲ್ಲ. ಈ ಜಾಲದಿಂದ ರಕ್ಷಣೆಯಾದ ಬಳಿಕ ಅವರ ಬದುಕಿನ ಗತಿಯೇನು ಎಂಬುದನ್ನು ಗಮನಿಸಿದರೆ ಮತ್ತೆ ಬೇಸರವಾಗುತ್ತದೆ. ದೇಶದೊಳಗಿನ ಮಹಿಳೆಯರ ಪರಿಸ್ಥಿತಿ ಒಂದು ತೆರನಾಗಿದ್ದರೆ, ನೆರೆರಾಜ್ಯದಿಂದ ಕಳ್ಳಸಾಗಾಣಿಕೆಯ ಮೂಲಕ ಕರೆತಂದ ಮಹಿಳೆಯರ ಪರಿಸ್ಥಿತಿ ಇನ್ನೊಂದು ತರದ ದುಸ್ಥಿತಿ. ಅಲ್ಲದೆ ರಕ್ಷಣೆಯ ಪ್ರಮಾಣ ಹೆಚ್ಚಿದೆಯೆಂದರೆ, ಈ ಜಾಲದ ವಿಸ್ತಾರವೂ ಹೆಚ್ಚಿರಬಹುದೇ ಎಂಬ ಮತ್ತೊಂದು ಅನುಮಾನವೂ ಮೂಡುತ್ತದೆ.

ಈ ಕರಾಳ ಲೋಕದಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರವು ಸರಳವಾಗಿಲ್ಲ ಎಂಬುದನ್ನು ಪುಸ್ತಕ ಹೇಳುತ್ತದೆ.