ದುಡಿವ ಹೆಣ್ಣು

ನಸುಕಿಗೆ ಏಳಬೇಕು
ಮನೆಯನ್ನು ಸಂಭಾಳಿಸಿ
ಸರಸರನೆ ತಿಂದು
ಬಿರಬಿರನೇ ನಡೆಯಬೇಕು
ಮತ್ತೊಮ್ಮೆ ಯೋಚಿಸು
ನೀನು ದುಡಿಯುವ ಹೆಣ್ಣು

ಅವರಿಗೆ ಇವರಿಗೆ ಮತ್ತು ನಿನಗೆ
ಡಬ್ಬಿ ಕಟ್ಟಬೇಕು
ನಿನಗೆಂದೂ ಇರುವುದಿಲ್ಲ
ಬಿಸಿಬಿಸಿ ಅಡುಗೆ
ಕಡೆದಿಟ್ಟ ಮಜ್ಜಿಗೆ, ವೀಳ್ಯ ತಾಂಬೂಲ
ಆಯಾಸ ಸರಿಸುವ ಸಣ್ಣನಿದ್ದೆ
ಮತ್ತೊಮ್ಮೆ ಯೋಚಿಸು
ನೀನು ದುಡಿಯುವ ಹೆಣ್ಣು

ವ್ಯಾನಿಟೀ ಬ್ಯಾಗಿನಲಿ
ಬಾಚಣಿಗೆ ತುಟಿಯರಂಗು ಕಪ್ಪುಕಾಡಿಗೆ
ಹಣೆಬೊಟ್ಟು ಕೈ ಗಡಿಯಾರ
ಪುಟ್ಟ ಕೈಗನ್ನಡಿಯಿರಲಿ
ಆಪತ್ತಿನ ಬಂಧು ಸ್ಯಾನಿಟರಿ ಪ್ಯಾಡುಗಳನು
ಮರೆಯಲೇಬೇಡ
ಮತ್ತೊಮ್ಮೆ ಯೋಚಿಸು
ನೀನು ದುಡಿಯುವ ಹೆಣ್ಣು

ಮರೆಯುವಂತಿಲ್ಲ
ಅಡುಗೆ ಬೇಯಿಸುವುದು
ಹಿರಿಯರನ್ನು ಗೌರವಿಸುವುದು
ಮಕ್ಕಳಿಗಾಗಿ
ಒಂದಷ್ಟು ಸುಸಮಯ ಕೊಡಲೇಬೇಕು
ತಪ್ಪಿಸುವಂತಿಲ್ಲ
ಇನಿಯನ ಜೊತೆಗಿನ ಸರಸ ಸಲ್ಲಾಪಗಳನು
ಮತ್ತೊಮ್ಮೆ ಯೋಚಿಸು
ನೀನು ದುಡಿಯುವ ಹೆಣ್ಣು

ಅರುಚಲೇ ಬಾರದು ಹಡೆದ ಮಕ್ಕಳೆದುರು
ಪ್ರಕಟಿಸಬಾರದು ಅಹಂ
ಲೋಕದೆದುರು ಎಂದಿಗೂ
ಸಭ್ಯವಾಗಿರಲೇಬೇಕು ಸಹುದ್ಯೋಗಿಗಳೊಂದಿಗೆ
ಮನೆಗೆ ಬರುವ ಅತಿಥಿಗಳಿಗೆ
ಬೇಡ ಎನ್ನುವಂತಿಲ್ಲ
ಅತ್ತೆ ಮಾವನಿಗೆ ಮಾರುತ್ತರ
ನೀಡುವ ಬಾಬತ್ತಿಲ್ಲ
ಮತ್ತೊಮ್ಮೆ ಯೋಚಿಸು
ನೀನು ದುಡಿವ ಹೆಣ್ಣು

ಮೇಲಿನ ಪಟ್ಟಿಯನ್ನು ಪಾಲಿಸಿದರೆ
ನೀನು ಅಪ್ಪಟ ಹೆಣ್ಣು
ಇಲ್ಲವೇ
ಶಿಸ್ತಿಲ್ಲದವಳು, ದುರಹಂಕಾರಿ, ಸ್ವಾರ್ಥಿ
ನಾಜೂಕಿಲ್ಲದವಳು, ಕೆಟ್ಟತಾಯಿ
ತೃಪ್ತಿಗೊಳಿಸಲಾಗದ ಹೆಂಡತಿ
ಇನ್ನೂ ಏನೇನು ಪಟ್ಟಕಟ್ಟಬಹುದು

ಮತ್ತೊಮ್ಮೆ ಯೋಚಿಸು
ದುಡಿವ ಹೆಣ್ಣು ನೀನು
ನಿನ್ನನ್ನು ಕುರಿತು
ಇನ್ನೂ, ಏನೆಲ್ಲಾ ಹೇಳಬಹುದು

 

ಸೌಮ್ಯ ರಾಜ್ ಮೂಲತಃ ಭದ್ರಾವತಿಯವರು.
ಸದ್ಯ ಬೆಂಗಳೂರಿನ ಕಾಲೇಜೊಂದರಲ್ಲಿ ಆಂಗ್ಲ ಭಾಷಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅನುವಾದ ಹಾಗೂ ಕಾವ್ಯ ರಚನೆ ಇವರ ಪ್ರವೃತ್ತಿ.