ಬಾಲ್ಯದ ಯುಗಾದಿ

ಶತಶತಮಾನದ
ಪಾತ್ರೆ.. ಪಗಡಾ…
ಫಳ ಫಳ ಗುಟ್ಟುತಾ
ಜಗುಲಿಯ ಮೇಲೆ
ಬೋರಲು ಬಿದ್ದಿರಲು,
ಹಪ್ಪಳ ಸಂಡಿಗೆಯನು
ಕಚ್ಚಿಕೊಂಡ ರಂಗಿನ
ಕಾಟನ್ ಸೀರೆಯು
ತಂತಿಯ ಮೇಲೆ
ಹಾರಾಡುತಿರಲು,
ಮಸಿಧೂಳು ಮೆತ್ತಿದ
ಮೋಟು ಗೋಡೆಗಳು
ಸುಣ್ಣ-ಬಣ್ಣವು ಕುಡಿದು
ಸಿಂಗಾರಗೊಂಡಿರಲು
ಥಟ್ಟನೆ ಹೊಳೆಯಿತು
ಯುಗಾದಿ ಬಂತೆಂದು!

ಬಾಲ್ಯದ ಯುಗಾದಿಯ
ನೆನೆವುದೆ ಚೆಂದ!
ಸ್ವಾಗತ ಕೋರುವ
ಮಾವಿನ ತೋರಣ
ಮೈಮನ ತಂಪಾಗಿಸುವ
ಅಭ್ಯಂಜನ ಸ್ನಾನ
ಸಿಹಿಕಹಿ ಮಿಶ್ರಿತ
ಬೇವೂ ಬೆಲ್ಲ!
ಘಮಘಮಗುಟ್ಟುವ
ಹೋಳಿಗೆ ತುಪ್ಪ!
ಆಹಾ! ನೆನೆದರೆ ಸಾಕು
ಈಗಲೂ…
ಬಾಯಲಿ ನೀರು!

ಜಾತಿಯ ಮರೆತು
ಸೌಹಾರ್ದದಿ ಬೆರೆತು
ಅಮಿನಾ ಒಳಹೋಗು
ನಾಗರಾಜ ಮಾಮ
ಬಂದಾ…………..
ಜಯಕ್ಕ ಹೊರಗಡೆ
ಬರಬೇಡ………….
ಮುಸ್ತಫಾಮಾಮಾ
ಬಾಗಿಲಲಿಹನೆನುತಾ…..
ಸುಳಿವನು ನೀಡಲು
ಕೇಕೆಯ ಹಾಕಿ
ನಕ್ಕು ನಲಿದಾ….
ಅತ್ತೆ ಸೊಸೆ ಮಾವರ
ಸಂತಸದ ಯುಗಾದಿಯ
ನೀರೆರಚಾಟವನು
ಮರೆಯುವುದುಂಟೆ?

ನವ ವಸ್ತ್ರವ ತೊಟ್ಟ
ಗಂಡೈಕ್ಳೆಲ್ಲಾ …..
ಊರಮುಂದಿನ
ಗುಡಿಕಟ್ಟೆಯ ಮೇಲೆ!
ಸರಿಯೋ..ತಪ್ಪೋ….
ಯಕ್ಕಾ ರಾಜ ರಾಣಿ
ಆಟವನಾಡದೆ
ಹಳ್ಳಿಯ ಯುಗಾದಿ
ಮುಗಿವುದೇ ಇಲ್ಲ!
ಸೋತವರಿಗೆ ಗೆಲ್ಲುವಾಸೆ
ಗೆದ್ದವರಿಗೆ ಮತ್ತಷ್ಟು
ಗಳಿಸುವ ಅತಿಯಾಸೆ!
ಆಸೆ-ಅತಿಯಾಸೆಯ
ಒದ್ದಾಟದಲಿ ಸಿಲುಕಿದವರ
ಸೂರ್ಯೋದಯವು ಅಲ್ಲೆ!
ಚಂದ್ರೋದಯವೂ ಅಲ್ಲೆ!

ಇತ್ತ ಹಬ್ಬದ ದಿನದ
ಇಳಿ ಸಂಜೆಯಲಿ
ಅನುದಿನ ಬಿಸಿಲ
ದಗೆಯಲಿ ನೊಂದು
ಬೆಂದ ಹೆಣ್ಣೈಕ್ಳೆಲ್ಲಾ
ತಂಪು ತಂಪಿನ
ಬೇವಿನ ಕೊಂಬೆಗೆ
ಹಗ್ಗವನೆಸೆದು
ಉಯ್ಯಾಲೆ ಕಟ್ಟಿ
ನಾಲ್ಕೈದು ಜನ
ಒಟ್ಟಿಗೆ ನಿಂತು
ಆಕಾಶವ ಮುಟ್ಟೇ
ತೀರುವೆವೆಂಬ
ತುಂಬು ಭರವಸೆಯಲಿ
ತೂಗಾಡುತಿರಲು…..
ಹೆಂಗಳೆಯರ ಮೊಗದಲಿ
ನಗುವ ತರಿಸಲು
ಬಾಡಿದ ಹೂಗಳಿಗೆ
ನವಚೈತನ್ಯ ತುಂಬಲು
ಬಂದಿರಬಹುದೇ
ಈ ಯುಗಾದಿ!

ಬಾಲ್ಯದ ಯುಗಾದಿ
ನೆನೆವುದೆ ಚೆಂದ!
ನೆನೆದರೆ ಆಗುವುದು
ಮಹಾದಾನಂದ!

ಡಿ. ಶಬ್ರಿನಾ ಮಹಮದ್ ಅಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವರು