Advertisement
ತಂತಿ ಮೇಲೆ ನಡೆದು ಮುಳ್ಳು ತೆಗೆದವರು: ಎಲ್.ಜಿ.ಮೀರಾ ಅಂಕಣ

ತಂತಿ ಮೇಲೆ ನಡೆದು ಮುಳ್ಳು ತೆಗೆದವರು: ಎಲ್.ಜಿ.ಮೀರಾ ಅಂಕಣ

ಮಾರನೆಯ ದಿನ ಬೆಳಿಗ್ಗೆ ಮಹೇಶ್ ನಾಯ್ಡು ಬಂದಾಗ ಅವನನ್ನು ಕಾಲೇಜಿನ ಮೈದಾನದ ದೂರದ ಒಂದು ಕಲ್ಲುಬೆಂಚಿಗೆ ಕರೆದುಕೊಂಡು ಹೋಗಿ ಆತ ಮಾಡಿದ ತಪ್ಪು ಕೆಲಸದ ಬಗ್ಗೆ ಮತ್ತು ಇದು ಇಡೀ ಕಾಲೇಜಿಗೆ ಗೊತ್ತಾದರೆ ತಾನು ಯಾವ ಪರಿಸ್ಥಿತಿಯಲ್ಲಿರಬಹುದು ಎಂದು ಊಹಿಸುವಂತೆ ಅವನಿಗೆ ಹೇಳಿದರು. ಮೊದಮೊದಲು ತಾನು ಏನೂ ತಪ್ಪು ಮಾಡಿಲ್ಲ ಎಂದು ವಾದಿಸಿದ ಆತ ನಂತರ ಕಾಂತಿ ಮೇಡಂರ ಗಂಭೀರ ಮುಖ ಮತ್ತು ತೂಕವಾದ ಮಾತುಗಳ ಮುಂದೆ ನಿರುತ್ತರನಾದ, ಮತ್ತು ತಾನು ಆ ಪದ ಬಳಸಿದ್ದು ತಪ್ಪು ಎಂದು ಒಪ್ಪಿಕೊಂಡ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿಮೂರನೆಯ ಬರಹ

“ಮ್ಯಾಮ್, ನಿಮ್ಗೆ ನಾನು ಒಂದು ವಿಷ್ಯ ಹೇಳ್ಬೇಕು”… ಧ್ವನಿ ಕೇಳಿ, ತನ್ನ ಕಾಲೇಜಿನ ಅಧ್ಯಾಪಕರ ಕೋಣೆಯಲ್ಲಿ ತನ್ನ ಸ್ಥಳದಲ್ಲಿ ಕುಳಿತು, ಪಾಠದ ಪೂರ್ವಸಿದ್ಧತೆ ಮಾಡುತ್ತಿದ್ದ ಕಾಂತಿ ಮೇಡಂ ತಲೆಯೆತ್ತಿ ನೋಡಿದರು. ಓಹ್, ತನ್ನ ತರಗತಿಯ ಗಂಭೀರ ಮುಖದ ವಿದ್ಯಾರ್ಥಿನಿ ಸಾರಿಕಾ ತನ್ನ ಮೇಜಿನ ಎದುರಲ್ಲಿ ನಿಂತಿದ್ದಾಳೆ. ಎರಡನೇ ವರ್ಷ ಬಿಎ ಓದುತ್ತಿರುವ ಹುಡುಗಿ ಅವಳು. ಮೊದಲೇ ಗಂಭೀರವಾಗಿರುವ ಅವಳ ಮುಖ ಈಗ ಮತ್ತಷ್ಟು ಬಿಗಿದುಕೊಂಡಂತಿದೆ. `ಹೇಳಮ್ಮ, ಏನು ವಿಷ್ಯ?’ ಅಂದರು ಮೇಡಂ. ಆ ಕ್ಷಣದಲ್ಲಿ ಸಮಾಜಶಾಸ್ತ್ರ ವಿಭಾಗದಲ್ಲಿ ಯಾರೂ ಇರದಿದ್ದರೂ ಸುತ್ತಮುತ್ತ ನೋಡಿದ ಸಾರಿಕಾ `ಇಲ್ಲಿ ಬೇಡ ಮ್ಯಾಮ್, ವಿಷ್ಯ ಸ್ವಲ್ಪ ಪರ್ಸನಲ್ಲು’ ಅಂದಳು. “ಸರಿ, ಬಾಮ್ಮ” ಎಂದು ಎದ್ದ ಮೇಡಂ ಸಾರಿಕಾಳನ್ನು ಕಾಲೇಜಿನ ಮೈದಾನದಲ್ಲಿದ್ದ ಕಲ್ಲುಬೆಂಚಿನ ಬಳಿ ಕರೆದೊಯ್ದರು. ತನ್ನ ಪಕ್ಕ ಕೂರಿಸಿಕೊಂಡು `ಹೇಳಮ್ಮ, ಏನು ವಿಷ್ಯ?ʼ ಎಂದು ಕೇಳಿದರು.

ಬೆಳಿಗ್ಗೆ ಸುಮಾರು 9.30ಯ ಸಮಯ. ಕಾಲೇಜಿನ ಸಾಮಾನ್ಯ ಕೆಲಸದ ದಿನ ಅದು. ಬೆಳಿಗ್ಗೆ ಬರುವವರು, ದೂರದೂರವಿದ್ದ ಕಲ್ಲುಬೆಂಚುಗಳ ಮೇಲೆ ಕುಳಿತು ಚಿಲಿಪಿಲಿ-ಚಿಲಿಪಿಲಿಯೆಂದು ಹಕ್ಕಿಗಳ ಹಾಗೆ ಕಲರವ ಮಾಡುತ್ತಿದ್ದ ವಿದ್ಯಾರ್ಥಿನಿಯರು, ಕಸ ಗುಡಿಸುತ್ತಿದ್ದ ಡ-ವರ್ಗದ(ಡಿ ಗ್ರೂಪ್) ನೌಕರರು, ಬೆಳಿಗ್ಗೆ ಮನೆಯಿಂದ ತಿಂಡಿ ತಿನ್ನದೆ ಬಂದು, ತಿಂಡಿಗಾಗಿ ಕ್ಯಾಂಟೀನಿಗೆ ದಾಪುಗಾಲಿಡುತ್ತಿದ್ದ ಕೆಲವು ಸಹೋದ್ಯೋಗಿಗಳು…. ಕಾಂತಿ ಮೇಡಂರ ಕಣ್ಣುಗಳ ಮುಂದೆ ಆ ಬೆಳಗು ವಿಧವಿಧ ಚಿತ್ರಗಳಲ್ಲಿ ಮೂಡಲಾರಂಭಿಸಿತು. ಆದರೆ ಸಾರಿಕಾ ಮಾತ್ರ ತನಗೂ, ಸುತ್ತ ನಡೆಯುತ್ತಿರುವುದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಕಂದಿದ ಮುಖಭಾವದಿಂದ ಎಲ್ಲೋ ನೋಡುತ್ತಿದ್ದಳು. ಅವಳ ಆ ಮುಖ ನೋಡಿದ ಕಾಂತಿ ಮೇಡಂಗೆ ಪಾಪ ಅನ್ನಿಸಿತು. “ಏನಾಯಿತು ಸಾರಿಕಾ, ತುಂಬ ಬೇಸರದಲ್ಲಿದ್ದ ಹಾಗಿದೆ ನೀನು. ಏನಾಯ್ತು ಹೇಳಮ್ಮ” ಅಂದರು.

“ನೆನ್ನೆ ನಿಮ್ಮ ವಿಭಾಗಕ್ಕೆ ಅಸೈನ್‌ಮೆಂಟ್ ಕೊಡಕ್ಕೆ ಬಂದಿದ್ದೆ ಮ್ಯಾಮ್. ನೀವಿರ‍್ಲಿಲ್ಲ, ಆಗ”…… ಹೇಳುತ್ತಿದ್ದ ಸಾರಿಕಾಳ ಮುಖ ಹಿಂಡಿಹೋಗಿದ್ದನ್ನು ಕಾಂತಿ ಮೇಡಂ ಗಮನಿಸಿದರು. ಮುಂದುವರಿಸಿದ ಸಾರಿಕಾ “ಅದ್ಯಾರೋ ಒಬ್ರು ದಪ್ಪ ಮೀಸೆ ಮೇಷ್ಟ್ರು ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ರು ಮೇಡಂ. ನಂಗೆ ತುಂಬ ಬೇಜಾರಾಗಿದೆ. ನೀವೇನಾದ್ರೂ ಮಾಡ್ಬೇಕು ಮೇಡಂ ಈಗ” ಅಂದಳು. “ಏನಂದ್ರಮ್ಮ? ಆ ಮೇಷ್ಟ್ರು ಹೆಸರು ಗೊತ್ತಾ ನಿಂಗೆ? ಬಿಡಿಸಿ ಹೇಳಮ್ಮ” ಅಂದರು ಕಾಂತಿ ಮೇಡಂ. “ಮೇಷ್ಟ್ರ ಹೆಸರು ಗೊತ್ತಿಲ್ಲ ಮ್ಯಾಮ್. ನೀವು ಕೂತ್ಕೋತೀರಲ್ಲ, ಆ ಕುರ್ಚಿಯ ಬಲಗಡೆ ಇರುವ ಕುರ್ಚಿಯಲ್ಲಿ ಕೂತ್ಕೊಂಡಿದ್ರು. ಕಪ್ಪು ಶರಟು ಹಾಕ್ಕೊಂಡಿದ್ರು. ನಾನು `ಸರ್, ಒಳಗೆ ಬರ್ಬಹುದಾ? ಕಾಂತಿ ಮೇಡಂ ಅವ್ರು ಕೊಟ್ಟಿದ್ದ ಅಸೈನ್‌ಮೆಂಟ್ ಕೊಡ್ಬೇಕಿತ್ತು” ಅಂದೆ. ಅದಕ್ಕೆ ಅವ್ರು `ಹೂಂ ಹೂಂ ಕೊಡ್ತೀರ ಕೊಡ್ತೀರ! ಎಷ್ಟು ಲೇಟಾಗಿ ಕೊಡ್ತೀರ. ಕಾಂತಿ ಮ್ಯಾಮ್ ಹತ್ರ ಬೈಸ್ಕೋತೀಯ ನೋಡು’ ಅಂದ್ರು. ನಾನು `ಹುಷಾರಿರ್ಲಿಲ್ಲ ಸರ್. ಅದಕ್ಕೆ ತಡ ಆಯ್ತು’ ಅಂದೆ. ಅದಕ್ಕೆ ಅವ್ರು `ಏನೋ ಒಂದು ನೆಪ ನಿಮ್ಗೆ. ಹಿಂಗೆ ಹೇಳ್ತಾ ಇರಿ, ಹುಷಾರಿರ್ಲಿಲ್ಲ, ಅಲ್ಲೋಗಿದ್ದೆ, ಇಲ್ಲೋಗಿದ್ದೆ, ನಂಗೆ ಮದ್ವೆ ಆಯ್ತು, ಶೋಬ್ನ ಆಯ್ತು, ಅದಕ್ಕೇ ತಡ ಆಯ್ತು’ ಅಂತ ಹೇಳಿ ಮೇಡಂ ಹತ್ರ. ಚೆನ್ನಾಗಿ ಬಯ್ಸ್ಕೋರ’ ಅಂದ್ರು. ನಂಗೆ ತುಂಬ ಬೇಜಾರಾಯ್ತು ಮ್ಯಾಮ್. ಅವ್ರು ಯಾಕೆ ಮೇಡಂ ಶೋಬ್ನದ ಮಾತಾಡ್ಬೇಕು? ನೀವು ಅವ್ರಿಗೆ ಶಿಕ್ಷೆ ಕೊಡಿಸಲೇಬೇಕು ಮ್ಯಾಮ್” ಅಂದಳು.

ಕೋಪ, ಅವಮಾನ, ಸಂಕಟಗಳಿಂದ ಕೆಂಪಾಗಿದ್ದ ಆ ಎಳೆಯ ಮುಖ ನೋಡುತ್ತಿದ್ದ ಕಾಂತಿ ಮೇಡಂಗೆ ತುಂಬ ಬೇಸರವಾಯಿತು. ಜೊತೆಗೆ ಇಂತಹ ಸನ್ನಿವೇಶ ಬರಲು ಕಾರಣವಾದ ಹಿನ್ನೆಲೆಯ ಘಟನೆಗಳು ನೆನಪಾದವು.

****

ಕಾಲೇಜಿನಲ್ಲಿ ಅರ್ಧವರ್ಷಾಂತ್ಯದ ಪ್ರಧಾನ ಪರೀಕ್ಷೆಗಳು ಸಮೀಪಿಸುತ್ತಿದ್ದ ಸಮಯ ಅದು. ಐಎ (ಇಂಟರ್ನಲ್ ಅಸೆಸ್‌ಮೆಂಟ್) ಎಂದು ಕರೆಯಲಾಗುವ ಆಂತರಿಕ ಮೌಲ್ಯಮಾಪನ ಕಾರ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ನಿಯೋಜಿತ ಕಾರ್ಯ(ಅಸೈನ್‌ಮೆಂಟ್) ತೆಗೆದುಕೊಳ್ಳುವುದು, ಅವರಿಗೆ ಕಿರುಪರೀಕ್ಷೆ ಕೊಡುವುದು, ಬಂಡಿ ಬಂಡಿ ಉತ್ತರ ಪತ್ರಿಕೆ ತಿದ್ದುವುದು, ಅಂಕಗಳ ಪಟ್ಟಿ ತಯಾರಿಸುವುದು ….. ಓಹ್ … ಅಧ್ಯಾಪಕರು ಬಿಡುವಿಲ್ಲದೆ ಒಂದೇ ಸಮನೆ ದುಡಿಯುವ ಸಮಯ ಅದು. ಈ ಗಡಿಬಿಡಿ ಕೆಲಸದ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಿಯೋಜಿತ ಕಾರ್ಯಗಳನ್ನು ತಡವಾಗಿ ಸಲ್ಲಿಸಿದರೆ ಸಕಾಲದಲ್ಲಿ ವಿಶ್ವವಿದ್ಯಾಲಯಕ್ಕೆ ಆಂತರಿಕ ಅಂಕಗಳ ಪಟ್ಟಿ ಕೊಡುವುದು ತುಂಬ ಕಷ್ಟವಾಗುತ್ತಿತ್ತು, ಹೀಗಾಗಿ ಕಾಂತಿಮೇಡಂ ಒಂದು ನಿಯಮ ಮಾಡಿದ್ದರು. `ನಿಯೋಜಿತ ಕಾರ್ಯ ಕೊಡಲು ಕೊನೆ ದಿನಾಂಕವಾದ ಮೇಲೆ ತಡ ಮಾಡಿದರೆ ದಿನಕ್ಕೊಂದರಂತೆ ಒಂದು ಅಂಕ ಕಳೆಯಲಾಗುವುದು’ ಎಂಬ ನಿಯಮ ಅದು. ಈ ನಿಯಮವು ಮಕ್ಕಳಲ್ಲಿ ತುಸು ಎಚ್ಚರಿಕೆ ಹುಟ್ಟಿಸಿ, ತೊಂಬತ್ತು ಶೇಕಡ ಮಕ್ಕಳು ಸಮಯಕ್ಕೆ ಸರಿಯಾಗಿ ನಿಯೋಜಿತ ಕಾರ್ಯವನ್ನು ಬರೆದು ಕೊಡುತ್ತಿದ್ದರು. ಆದರೆ ಉಳಿದ ಹತ್ತು ಶೇಕಡ ಮಕ್ಕಳು `ಹುಷಾರಿಲ್ಲ, ಕಾಲೇಜಿಗೆ ಬಂದಿರಲಿಲ್ಲ, ನಮ್ಮನೇಲಿ ಸಮಾರಂಭ ಇತ್ತು, ಅಪ್ಪ ಆಸ್ಪತ್ರೆಯಲ್ಲಿದ್ರು, ಫ್ರೆಂಡ್ ಹತ್ರ ಅಸೈನ್‌ಮೆಂಟ್ ಕೊಟ್ಟಿದ್ದೆ ಮೇಡಂ, ಅವ್ಳು ನಿಮ್ಗೆ ಕೊಡಕ್ಕೆ ತಡ ಮಾಡಿದ್ಲು, ಸಾರಿ ಮೇಡಂ, ಪ್ಲೀಸ್ ಮೇಡಂ, ಅಂಕ ಕಳೀಬೇಡಿ, ಪ್ಲೀಸ್ ಮೇಡಂ, ಇನ್ನೊಂದು ಸಲ ತಡ ಮಾಡಲ್ಲ” ಅಂತ ವಿಭಾಗಕ್ಕೆ ಬಂದು ಗೋಗರೆಯುತ್ತಿದ್ದರು. ಕಾಂತಿ ಮೇಡಂ ಮೃದುವಾಗಿ ಆದರೆ ದೃಢವಾಗಿ `ಇಲ್ಲಮ್ಮ, ಎಲ್ರಿಗೂ ಒಂದೇ ನಿಯಮ. ತಡ ಮಾಡಿದ್ದಕ್ಕೆ ಅಂಕ ಕಳ್ಕೊಂಡೇ ಕಳ್ಕೋತೀರ. ಈ ವಿಷಯ ಬಿಟ್ಟು ಬರಿಯೋ ಎಕ್ಸಾಂನಲ್ಲಿ ಚೆನ್ನಾಗಿ ಬರೀರಿ” ಅಂತ ಹೇಳಿಬಿಡುತ್ತಿದ್ದರು.

ದಿನದಲ್ಲಿ ಆಗಾಗ ನಡೆಯುತ್ತಿದ್ದ ಈ ಗೋಳಾಟ-ಎಚ್ಚರಿಕೆಯ ಮೆಲುಪಾಠಗಳಿಗೆ ಆ ಅಧ್ಯಾಪಕರ ಕೊಠಡಿಯಲ್ಲಿನ ಕಾಂತಿ ಮೇಡಂ ಅವರ ಸಹೋದ್ಯೋಗಿಗಳು ಸಾಕ್ಷಿಯಾಗುತ್ತಿದ್ದರು. ತುಸು ಅಚ್ಚರಿ, ಮುಗುಳ್ನಗೆಗಳೊಂದಿಗೆ “ಕಾಂತಿ ಮೇಡಂ ಹತ್ರ ಇದ್ರೆ ಮಕ್ಳು ಶಿಸ್ತು ಕಲೀತಾರಪ್ಪ” ಎಂದು ಪರಸ್ಪರ ಮಾತಾಡಿಕೊಳ್ಳುತ್ತಿದ್ದರು. ಮಹೇಶ್ ನಾಯ್ಡು ಸಹ ಅವರೊಲ್ಲಬ್ಬ. ಆತ ಅರ್ಥಶಾಸ್ತ್ರ ವಿಭಾಗದಲ್ಲಿ ಪಾಠ ಮಾಡಲು ವಾರದಲ್ಲಿ ಮೂರು ದಿನವಷ್ಟೇ ಬರುತ್ತಿದ್ದ ಅತಿಥಿ ಉಪನ್ಯಾಸಕ. `ಅಯ್ಯೋ, ಏನ್ ಟೆಂಪರರಿ, ಏನ್ ಪರ್ಮನೆಂಟು … ಮೇಷ್ಟ್ರಂದ್ರೆ ಮೇಷ್ಟ್ರೇ’ ಎಂದು ಕಹಿಯಾಗಿ ಮಾತಾಡುತ್ತಾ ಸದಾ ಮೂಗು ಮೇಲೇರಿಸಿಕೊಂಡು ಓಡಾಡುತ್ತಿದ್ದ ವ್ಯಕ್ತಿ. ಕಾಂತಿ ಮೇಡಂಗೆ ಅವನೆಂದರೆ ಅಷ್ಟಕ್ಕಷ್ಟೆ. ಆದರೆ ಉದ್ಯೋಗ ಸ್ಥಳದಲ್ಲಿ ಸಹಜವಾಗಿ ಇರಬೇಕಾದ ಸಜ್ಜನಿಕೆ, ವೃತ್ತಿಪರತೆಗಳ ಕಾರಣದಿಂದಾಗಿ ಅವನ ಮಾತುಗಳಿಂದ ಒಮ್ಮೊಮ್ಮೆ ಇರಿಸುಮುರಿಸಾದರೂ ಏನೂ ತೋರಿಸಿಕೊಳ್ಳದೆ ಸುಮ್ಮನಿರುತ್ತಿದ್ದರು. ಜೊತೆಗೆ, ತುಂಬ ಕಡಿಮೆ ಸಂಬಳಕ್ಕೆ ದುಡಿಯುವ, ಯಾವುದೇ ಸೇವಾ ಭದ್ರತೆ ಇಲ್ಲದ ಅತಿಥಿ ಉಪನ್ಯಾಸಕರ ಬಗ್ಗೆ ಕಾಂತಿ ಮೇಡಂಗೆ ತುಂಬ ಸಹಾನುಭೂತಿ ಇದ್ದ ಕಾರಣ ಎಂದೂ ಅವರು ಮಹೇಶ್ ನಾಯ್ಡುವಿನ ಜೊತೆಗಾಗಲಿ, ಬೇರೆ ಅತಿಥಿ ಉಪನ್ಯಾಸಕರ ಜೊತೆಗಾಗಲಿ ಒರಟಾಗಿ ನಡೆದುಕೊಂಡದ್ದಿಲ್ಲ.

ಅದೆಲ್ಲ ಸರಿ, ಆದರೆ ಈ ರೀತಿಯಲ್ಲಿ ಸುಮಾರು 17-18ರ ಎಳೆ ವಯಸ್ಸಿನ ವಿದ್ಯಾರ್ಥಿನಿಯ ಜೊತೆಗೆ ನಲವತ್ತೈದು ವಯಸ್ಸು ಮೀರಿದ್ದ ನಾಯ್ಡು ಹೀಗೆ ಅನುಚಿತವಾಗಿ ಮಾತಾಡಿದ್ದು ಕಾಂತಿ ಮೇಡಂಗೆ ಬಹಳ ಅಸಮಾಧಾನ ತಂದಿತು. ಅದೂ ಅಲ್ಲದೆ ತಾನು ಆಕೆಗೆ ನ್ಯಾಯ ಒದಗಿಸುತ್ತೇನೆ ಎಂದು ನಂಬಿ ತನ್ನ ಬಳಿ ತನ್ನ ಕಹಿ ಅನುಭವವನ್ನು ಹೇಳಿಕೊಂಡಿದ್ದ ಪುಟ್ಟ ವಿದ್ಯಾರ್ಥಿನಿಗೆ ನಿರಾಸೆ ಮಾಡಬಾರದು ಎಂಬ ಇಚ್ಛೆ ಅವರಲ್ಲಿ ಪ್ರಬಲಗೊಳ್ಳತೊಡಗಿತು. ಅವರ ಮನಸ್ಸಿನಲ್ಲಿ ಯೋಜನೆಯೊಂದು ರೂಪುಗೊಂಡಿತು.

ಸರಿ. ಮಹೇಶ್ ನಾಯ್ಡು ಅನುಚಿತವಾಗಿ ಮಾತಾಡಿದ ದಿನ, ಸಮಯ ಹಾಗೂ ಆಗ ವಿಭಾಗದಲ್ಲಿ ಹಾಜರಿದ್ದ ಬೇರೆ ವ್ಯಕ್ತಿಗಳ ವಿವರ ಇವನ್ನೆಲ್ಲ ವಿಚಾರಿಸಿಕೊಂಡ ಮೇಡಂ, ಆಕೆಗೆ ಈ ವಿವರಗಳನ್ನೆಲ್ಲ ಸೇರಿಸಿ ಒಂದು ಪತ್ರ ಬರೆದುಕೊಡುವಂತೆ ಹೇಳಿದರು. ಅದರಂತೆಯೇ ಸಾರಿಕಾ ಬರೆದುಕೊಟ್ಟಳು.

****

ಕಾಂತಿ ಮೇಡಂರ ಮನಸ್ಸಿನಲ್ಲಿ ಚಿಂತೆಯ ಕಾರ್ಮೋಡ ಕವಿಯಿತು. ಸಾರಿಕಾ ಬರೆದ ಪತ್ರ ತೆಗೆದುಕೊಂಡು ಸೀದಾ, ಸಂಸ್ಥೆಯ ಮುಖ್ಯಸ್ಥರಾದ ಪ್ರಾಂಶುಪಾಲರ ಬಳಿ ಹೋಗುವುದು ಸರಳ ಮಾರ್ಗ. ಆದರೆ ಇದರ ಪರಿಣಾಮ ಏನಾಗುತ್ತದೋ ಹೇಳಲಾಗದು. ಪ್ರಾಂಶುಪಾಲರು ಕುಪಿತರಾಗಿ ಮಹೇಶ್ ನಾಯ್ಡುವನ್ನು ಕರೆಸಿ ವಿಚಾರಿಸಿ, ವಿಷಯ ಕಾಲೇಜಿನಲ್ಲೆಲ್ಲ ಊರಂಪವಾಗಿ, ಕಾಲೇಜು ಶಿಕ್ಷಣ ಇಲಾಖೆಗೆ ದೂರು ಹೋಗಿ, ಈ ನಾಯ್ಡು ಕೆಲಸ ಕಳೆದುಕೊಳ್ಳುವಂತಾದರೆ ಏನು ಗತಿ ಎಂಬ ಯೋಚನೆ ಒಂದು ಕಡೆ. ಕಾಲೇಜಿನ ಲೈಂಗಿಕ ಕಿರುಕುಳ ತಡೆ ಸಮಿತಿಯ ಮುಂದೆ ಈ ಹುಡುಗಿಯನ್ನು ಮತ್ತು ಮಹೇಶ್ ನಾಯ್ಡುವನ್ನು ಕರೆಸಿ ಆ ಸಮಿತಿಯ ಸದಸ್ಯರು ವಿಚಾರಣೆ ನಡೆಸುವ ಚಿತ್ರ ಅವರ ಮನಸ್ಸಿನಲ್ಲಿ ಮೂಡಿತು. `ಆಯ್ಕೊಂಡು ತಿನ್ನೋ ಕೋಳಿ ಕಾಲು ಮುರಿದ್ರಂತೆ’ ಎಂಬ ಗಾದೆಮಾತು ನೆನಪಾಗಿ ಏಕ ಸಂಬಳದ ಮಹೇಶ್ ನಾಯ್ಡುವಿನ ಮನೆ, ಮಕ್ಕಳ ಬಗ್ಗೆ ಬಹಳ ಆಲೋಚನೆ ಆಯಿತು. ಲೈಂಗಿಕ ಕಿರುಕುಳದ ಗಂಭೀರ ಆಪಾದನೆ ಹೊತ್ತು ಆ ವ್ಯಕ್ತಿ ಕೆಲಸ ಕಳೆದುಕೊಂಡು ನಿಲ್ಲುವ ದೃಶ್ಯ ಮನಸ್ಸಿಗೆ ಹಿಂಸೆ ನೀಡಿತು. ಹಾಗೆಂದು ಸಾರಿಕಾಳ ಮನಸ್ಸಿಗೆ ಆಗಿರುವ ನೋವನ್ನು ನಿರ್ಲಕ್ಷಿಸುವಂತಿರಲಿಲ್ಲ, ಮತ್ತು ಆ ಹುಡುಗಿಯ ಹೆಸರು ಗೊತ್ತಿರದ ಮಹೇಶ್ ನಾಯ್ಡುವಿನ ಮುಂದೆ ಆ ಹುಡುಗಿಯನ್ನು ಕರೆಸಿ ಅವನು ಆ ಮುಗ್ಧೆಯ ಮೇಲೆ ಜಿದ್ದು ಇಟ್ಟುಕೊಳ್ಳುವುದನ್ನು ತಪ್ಪಿಸಬೇಕಿತ್ತು.

ಜೊತೆಗೆ ಮಹೇಶ್ ನಾಯ್ಡುವಿಗೆ ಇನ್ನೆಂದೂ ಹೀಗೆ ಮಾಡದಂತೆ ಒಂದು ಪಾಠವನ್ನೂ ಕಲಿಸಬೇಕಿತ್ತು. ಏನು ಮಾಡುವುದು ……. ಏನು ಮಾಡುವುದು…..

ಕಾಂತಿ ಮೇಡಂ ತನಗಿಂತ ವಯಸ್ಸಿನಲ್ಲಿ ಹಿರಿಯರೂ ತಮ್ಮ ವಿಭಾಗದ ಮುಖ್ಯಸ್ಥರೂ ಆದ ರಾಧಿಕಾ ಶೆಟ್ಟಿ ಅವರ ಬಳಿ ಸೂಕ್ಷ್ಮವಾಗಿ ಈ ವಿಷಯದ ಬಗ್ಗೆ ಚರ್ಚಿಸಿದರು. ಆಕೆ `ಪ್ರಾಂಶುಪಾಲರಿಗೆ ಹೇಳಿ ಮೇಡಂ, ಅವ್ರು ಏನು ಮಾಡ್ತಾರೋ ಮಾಡಲಿ’ ಎಂದು ನುಣುಚಿಕೊಂಡಾಗ ಇಡೀ ಘಟನೆಯನ್ನು ಊರರಂಪವಾಗದಂತೆ ನಿರ್ವಹಿಸುವ ಜವಾಬ್ದಾರಿ ತನ್ನೊಬ್ಬಳ ಮೇಲೆ ಬಿತ್ತು ಎಂಬುದು ಕಾಂತಿ ಮೇಡಂಗೆ ಗೊತ್ತಾಯಿತು.

ಒಂದು ಕಡೆ ಸಾರಿಕಾಗೆ ತನ್ನ ಕೈಲಾದ ನ್ಯಾಯ ಒದಗಿಸುವ ಜವಾಬ್ದಾರಿ, ಇನ್ನೊಂದು ಕಡೆ ತೀರಾ ಕಟುವಾಗದಂತೆ ಆದರೆ ಸೂಕ್ತ ಪಾಠ ಕಲಿಯುವಂತೆ ಮಹೇಶ್ ನಾಯ್ಡುವನ್ನು ತಿದ್ದುವುದು. ಎರಡು ಮೂರು ದಿನ ಆಳವಾಗಿ ಯೋಚಿಸಿದ ನಂತರ ಮೇಡಂಗೆ ಒಂದು ವಿಧಾನ ಹೊಳೆಯಿತು.

****

ಮಾರನೆಯ ದಿನ ಬೆಳಿಗ್ಗೆ ಮಹೇಶ್ ನಾಯ್ಡು ಬಂದಾಗ ಅವನನ್ನು ಕಾಲೇಜಿನ ಮೈದಾನದ ದೂರದ ಒಂದು ಕಲ್ಲುಬೆಂಚಿಗೆ ಕರೆದುಕೊಂಡು ಹೋಗಿ ಆತ ಮಾಡಿದ ತಪ್ಪು ಕೆಲಸದ ಬಗ್ಗೆ ಮತ್ತು ಇದು ಇಡೀ ಕಾಲೇಜಿಗೆ ಗೊತ್ತಾದರೆ ತಾನು ಯಾವ ಪರಿಸ್ಥಿತಿಯಲ್ಲಿರಬಹುದು ಎಂದು ಊಹಿಸುವಂತೆ ಅವನಿಗೆ ಹೇಳಿದರು. ಮೊದಮೊದಲು ತಾನು ಏನೂ ತಪ್ಪು ಮಾಡಿಲ್ಲ ಎಂದು ವಾದಿಸಿದ ಆತ ನಂತರ ಕಾಂತಿ ಮೇಡಂರ ಗಂಭೀರ ಮುಖ ಮತ್ತು ತೂಕವಾದ ಮಾತುಗಳ ಮುಂದೆ ನಿರುತ್ತರನಾದ, ಮತ್ತು ತಾನು ಆ ಪದ ಬಳಸಿದ್ದು ತಪ್ಪು ಎಂದು ಒಪ್ಪಿಕೊಂಡ. ಆಗ ಕಾಂತಿ ಮೇಡಂ ಒಂದು ಕ್ಷಮಾಪಣಾ ಪತ್ರ ಬರೆಯುವಂತೆ ಅವನಿಗೆ ಹೇಳಿದರು. “ಸರಿ ಮೇಡಂ. ನೀವು ಹೇಗೆ ಹೇಳಿದ್ರೆ ಹಾಗೆ ಬರೆದುಕೊಡ್ತೀನಿ” ಎಂದ ಮಹೇಶ್ ನಾಯ್ಡು “ಯಾವುದೇ ವಿದ್ಯಾರ್ಥಿನಿಗೆ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ಬಾಯಿತಪ್ಪಿ ಅಚಾತುರ್ಯವಾಗಿದೆ, ಒಂದು ತಪ್ಪು ಶಬ್ದ ನನ್ನ ಬಾಯಿಂದ ಬಂದಿದೆ. ಕ್ಷಮೆ ಇರಲಿ, ಇನ್ನು ಮುಂದೆಂದೂ ಹೀಗಾಗದಂತೆ ನಾನು ಜಾಗರೂಕನಾಗಿರುತ್ತೇನೆ” ಎಂದು ಬರೆದುಕೊಟ್ಟ.

ಕಾಂತಿ ಮೇಡಂ ಮಾರನೆಯ ದಿನ ಸಾರಿಕಾಳನ್ನು ಕರೆದು ನಾಯ್ಡು ಬರೆದಿದ್ದ ಆ ಕ್ಷಮಾಪಣಾ ಪತ್ರವನ್ನು ಅವಳಿಗೆ ಕೊಟ್ಟರು. ಓದಿದ ಸಾರಿಕಾಳ ಮುಖದಲ್ಲಿ ಸಮಾಧಾನದ ಕಿರಣವೊಂದು ಮೂಡಿದ್ದನ್ನು ನೋಡಿ ಅವರಿಗೆ ಬಿಡುಗಡೆಯ ಭಾವ ಬಂತು. ಉದ್ಯೋಗ ಕ್ಷೇತ್ರದಲ್ಲಿ ಲೈಂಗಿಕ ಕಿರುಕುಳಗಳಾದಾಗ ಅವುಗಳನ್ನು ಇತ್ಯರ್ಥ ಮಾಡುವುದೆಂದರೆ ಮುಳ್ಳ ಮೇಲೆ ಬಿದ್ದ ಬಟ್ಟೆಯನ್ನು ಬಿಡಿಸಿಕೊಂಡಂತೆ. ಕಳೆದ ಒಂದು ವಾರದಿಂದ ಸಾರಿಕಾಳ ನೊಂದ ಮುಖ ತನ್ನನ್ನು ಕಾಡುತ್ತಿದ್ದ ರೀತಿ, ಆ ನೋವನ್ನು ಕಡಿಮೆ ಮಾಡಲು ತಾನು ಮಾಡಬೇಕಾಗಿ ಬಂದ ತಂತಿ ಮೇಲಿನ ನಡಿಗೆ ನೆನೆದು ಕಾಂತಿ ಮೇಡಂ ಒಮ್ಮೆ ನಿಟ್ಟುಸಿರು ಬಿಟ್ಟರು.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

1 Comment

  1. Chandrashekar

    ಮಾನವೀಯ ನೆಲೆಯಲ್ಲಿ ಶಿಸ್ತು ಪಾಲಿಸಿದ ರೀತಿ ಉತ್ತಮ ಜೀವನ ಪಾಠ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ