ಯಂತ್ರ-ವ್ಯಾಮೋಹದ ಅಪಾಯದ ಕುರಿತು ಶೆರ್ರಿ ಟರ್ಕಲ್ ಎಂಬ ತಂತ್ರಜ್ಞಾನ-ಸಮಾಜಶಾಸ್ತ್ರಜ್ಞೆ ಹೇಳುವುದೆಂದರೆ ಯಂತ್ರಗಳನ್ನು ಮಾನವೀಕರಿಸಿ ನೋಡುವ ಮನೋಭಾವ ಒಂದು ಹಂತದಲ್ಲಿ ನಮ್ಮೊಳಗಿನ ಮಾನವೀಯತೆಯನ್ನು ಕಡಿಮೆ ಮಾಡಬಹುದು. ಉದಾಹರಣೆಗೆ, ಜಪಾನಿನಲ್ಲಿ ಪ್ರಯತ್ನಿಸುತ್ತಿರುವಂತೆ, ವಯಸ್ಸಾದವರನ್ನು ರೋಬಾಟುಗಳ ಆರೈಕೆಯಲ್ಲಿ ನಾವು ಬಿಡುತ್ತೇವಾದರೆ, ರೋಬಾಟಿನ ಆರೈಕೆಯ ಕ್ರಮ ಅದರ ಮಾನವೀಯ ಮಗ್ಗುಲನ್ನು ತೋರಿದರೆ, ನಮ್ಮ ಪೋಷಕರನ್ನು ರೋಬಾಟುಗಳ ಆರೈಕೆಗೆ ಬಿಡುವ ನಮ್ಮಲ್ಲಿಯೂ ಮಾನವೀಯತೆ ಕಮ್ಮಿಯಾಗಿದೆ ಎಂದಲ್ಲವೇ? ಅಥವಾ, ಜೇರನ್ ಲೇನಿಯರ್ ಹೇಳುವಂತೆ, ಕಂಪ್ಯೂಟರುಗಳ ಜಾಣ್ಮೆಯನ್ನು ಎತ್ತಿತೋರಲು ನಮ್ಮನ್ನು ನಾವು ದಡ್ಡರಾಗಿಸಿಕೊಳ್ಳುತ್ತಿದ್ದೇವೆ.
ಕಮಲಾಕರ ಕಡವೆ ಬರೆಯುವ ಕಮಲಾಕರ ಕಡವೆ ಬರೆಯುವ ʼಬೆರಗು ಮತ್ತು ಭೀತಿʼ ಅಂಕಣ-2
ಯಂತ್ರ-ವಿರೋಧದ ಮೂರು ಮಗ್ಗಲುಗಳು
ಮನೆಯಲ್ಲಿ ಹೊಸದಾಗಿ ಟಿವಿ ಬಂದಿದೆ. ಈ ಟಿವಿಯೆಂಬ ಮಾಯಾವಿಯ ಮೋಡಿಗೆ ಮನೆಯವರೆಲ್ಲ ಒಳಗಾಗಿ ವಶೀಕರಣಗೊಂಡವರಂತೆ ಎಲ್ಲ ಹೊತ್ತಿಗೂ ಟಿವಿಯ ಮೇಲೆಯೇ ಗಮನ ಹಾಕಿ ಕೂತಿದ್ದಾರೆ. ಮನೆಯ ಚಿಣ್ಣನಿಗೋ ಇದೊಂದು ಆಘಾತ. ಆಟ, ಮುದ್ದು, ಒಡನಾಟಗಳೆಲ್ಲ ಕಮ್ಮಿಯಾಗಿ ಅವನೋ ಅಸ್ವಸ್ಥನಾಗುತ್ತಾನೆ. ಅದೇ ಕೋಪದಲ್ಲಿ ಟಿವಿಗೆ ಕಲ್ಲೆಸೆದು ಅದನ್ನು ಒಡೆದು ಹಾಕುತ್ತಾನೆ.
ಇದು ಕಾಲೇಜು ದಿನಗಳಲ್ಲಿ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದ್ದ ಸ್ನೇಹಿತ ಚಂದ್ರಶೇಖರ್ ಬೆಳಗೆರೆ ಅವರ ಕತೆಯ ತಿರುಳು, ನನಗೆ ನೆನಪಿರುವ ಹಾಗೆ. ಈ ಕತೆ ಅನಾವರಣಗೊಳಿಸುತ್ತಿರುವ ಮನೋಭಾವವನ್ನು ನಾವು ಯಂತ್ರ-ವಿರೋಧವೆಂದು ಅರ್ಥ ಮಾಡಿಕೊಳ್ಳಬಹುದು. ಯಂತ್ರ-ವಿರೋಧಕ್ಕೆ ಕಾರಣ ಭಾವನಾತ್ಮಕವಿರಬಹುದು, ತಾತ್ವಿಕವಿರಬಹುದು, ವ್ಯಾವಹಾರಿಕವಿರಬಹುದು, ಆದರೆ ಯಂತ್ರ-ವಿರೋಧದಲ್ಲಿಯೂ ಹಲವು ಬಗೆಗಳಿವೆ. ಈ ಕತೆ ತೋರಿಸುವಂತೆ ಯಂತ್ರವನ್ನು ನಾಶ ಮಾಡಬೇಕು ಎನ್ನುವ ಭಾವೋದ್ರೇಕ ಇರುವ ಈ ಬಗೆಯ ವಿರೋಧೀ ಮನೋಭಾವವವನ್ನು ಯಂತ್ರ-ದ್ವೇಷ ಎನ್ನಬಹುದು. ಇದು ಹೆಚ್ಚಾಗಿ, ಭಾವನಾತ್ಮಕ/ವೈಯಕ್ತಿಕ ನೆಲೆಯಲ್ಲಿ ಅಭಿವ್ಯಕ್ತಿಗೊಳ್ಳುವ ಮನೋಭಾವವಾಗಿದೆ.
ಇನ್ನೊಂದು ಬಗೆಯ ಯಂತ್ರ-ವಿರೋಧ ವ್ಯಾವಹಾರಿಕ ವಿವೇಚನೆಯನ್ನು ಆಧರಿಸಿ, ನಿರ್ದಿಷ್ಟ ಕಾರಣಕ್ಕಾಗಿ, ನಿರ್ದಿಷ್ಟ ಉದ್ದೇಶ ಸಾಧನೆಗಾಗಿ ಇರುವಂತದ್ದು. ಇದನ್ನು ನಾವು ಯಂತ್ರ-ನಿರಾಕಣೆಯೆನ್ನಬಹುದು. ಇದಕ್ಕೆ ಒಳ್ಳೆಯ ಉದಾಹರಣೆ, ಎಲ್ಲರಿಗೂ ತಿಳಿದಿರುವಂತೆ, ಗಾಂಧೀಜಿಯವರ ಚರಕ ಸಿದ್ಧಾಂತ. ಈ ಕುರಿತು ಒಳನೋಟ ಕೊಡುವ, ಸಾಕಷ್ಟು ಸುಪರಿಚಿತವಾದ, ಒಂದು ಘಟನೆಯನ್ನು ಸ್ಮರಿಸೋಣ. ಲ್ಯಾಂಕಶೈರ ಇಂಗ್ಲೆಂಡಿನ ಒಂದು ಬಟ್ಟೆಗಿರಣಿಗಳ ಪಟ್ಟಣವಾಗಿತ್ತು. ಗಾಂಧೀಜಿ ವಿದೇಶಿ ಬಟ್ಟೆಗಳನ್ನು ತ್ಯಜಿಸಲು ಕೊಟ್ಟ ಕರೆಯಿಂದಾಗಿ, ಈ ಪಟ್ಟಣದ ಬಟ್ಟೆಗಿರಣಿಗಳ ಕಾರ್ಮಿಕರು ನಿರುದ್ಯೋಗಿಗಳಾಗಬೇಕಾದ ಪ್ರಸಂಗ ಬಂತು.
ಗಾಂಧೀಜಿ ೧೯೩೧ರಲ್ಲಿ, ಲ್ಯಾಂಕಶೈರಿಗೆ ಭೇಟಿ ಕೊಟ್ಟಾಗ ಈ ಕಾರ್ಮಿಕರು ಅವರಿಗೆ ತಮ್ಮ ಈ ನಿಲುವನ್ನು ಹಿಂತೆಗೆಯಲು ವಿನಂತಿಸುತ್ತಾರೆ. ಆಗ ಗಾಂಧೀಜಿ ಹೇಳುವ ಮಾತೆಂದರೆ: “ನೀವು ನಿರುದ್ಯೋಗಿಗಳಾಗಿದ್ದಕ್ಕೆ ನನಗೆ ದುಃಖವಾಗುತ್ತಿದೆ. ಆದರೆ, ಭಾರತದ ಜನರ ಪರಿಸ್ಥಿತಿ ನಿರುದ್ಯೋಗಕ್ಕಿಂತ ಭೀಕರವಾಗಿದೆ, ಯಾಕೆಂದರೆ ನಿರುದ್ಯೋಗದ ಜೊತೆ ಹಸಿವು ಕೂಡ ಇದೆ. ಈ ಪರಿಸ್ಥಿತಿಯಲ್ಲಿ ಅವರ ಅನ್ನವನ್ನು ಕಸಿಯುತ್ತಿರುವ ಯಂತ್ರನಿರ್ಮಿತ ಬಟ್ಟೆಯನ್ನು ತ್ಯಜಿಸಿ, ಅವರ ಕೈಯಲ್ಲಿ ಹಿಡಿಅನ್ನ ಬರುವಂತೆ ಮಾಡಲೇಬೇಕಾದ ಅಗತ್ಯವಿದೆ. ದೊಡ್ಡ ಬಂಡವಾಳವಿಲ್ಲದೆಯೂ ಅವರು ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳಬಹುದಾದ ವ್ಯವಸ್ಥೆ ಅಗತ್ಯವಾಗಿದೆ.” ಈ ಮುಖಾಮುಖಿ ಗಾಂಧೀಜಿಯವರ ಯಂತ್ರ-ವಿರೋಧದ ಕಾರ್ಯಸಾಧು (strategic) ತತ್ವವನ್ನು ದರ್ಶಿಸುತ್ತದೆ. ಇದು ಸಾಧಾರಣವಾಗಿ ಸಾಮಾಜಿಕ/ಸೈದ್ಧಾಂತಿಕ ನೆಲೆಯುಳ್ಳ ಮನೋಭಾವವಾಗಿರುತ್ತದೆ.
ಯಂತ್ರ-ವಿರೋಧದ ಇನ್ನೊಂದು ಮುಖ ಯಂತ್ರ-ಭೀತಿಗೆ ಸಂಬಂಧಿಸಿದೆ. ಸುಮಾರು ಹತ್ತು ವರ್ಷಗಳಿಂದ ನನ್ನ ಬಾಳಸಂಗಾತಿ ಸ್ಮಾರ್ಟ್ ಫೋನನ್ನು ಬಳಸುತ್ತಿದ್ದಾಳೆ, ನನ್ನಂತೆಯೇ. ಈ ಲಾಕ್ ಡೌನ್ ಆದ ನಂತರ ಅವಳ ಶಾಲೆಯವರು ಪಾಠದ ವಿಡಿಯೋಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವ ವ್ಯವಸ್ಥೆಯನ್ನು ಶುರು ಮಾಡಿದರು. ಸ್ಮಾರ್ಟ್ ಫೋನನ್ನು ಉಪಯೋಗಿಸಿ ಈ ವಿಡಿಯೋಗಳನ್ನು ಮಾಡಬೇಕಾಗಿತ್ತು. ಹತ್ತು ವರ್ಷಗಳಿಂದ ಸ್ಮಾರ್ಟ್ ಫೋನು ಬಳಸುತ್ತಿರುವ ನನ್ನಾಕೆ, ಮತ್ತು ನಾನು ಇದಕ್ಕಾಗಿ ನಮ್ಮ ಮಗಳನ್ನು ಅವಲಂಬಿಸಬೇಕಾಯಿತು. ಇದರ ಹಿಂದಿರುವ ಕಾರಣ ಅಜ್ಞಾನವೇ ಆದರೂ, ಇದೊಂದು ವಿಶಿಷ್ಟ ಬಗೆಯ ಅಜ್ಞಾನ. ಮನೆಯಲ್ಲಿ ವಿದ್ಯುತ್ ಸ್ವಿಚ್ಚೊಂದು ಹಾಳಾದರೆ ಇಲೆಕ್ಟ್ರೀಶಿಯನ್ನನ ಅವಲಂಬಿಸುವಂತೆಯೇ ಇದೂ ಸಹ ಆತಂಕ ಮಿಶ್ರಿತ ಅಜ್ಞಾನ. ಈ ತಂತ್ರಜ್ಞಾನದ ಗೋಜಿಗೆ ಹೋದರೆ ಏನಾಗಿಬಿಡುತ್ತದೆಯೋ ಎನ್ನುವ ಆತಂಕದಿಂದ ಮೊದಲಾಗುವ ಈ ಯಂತ್ರ-ಭೀತಿ ಕೂಡ ಯಂತ್ರ-ವಿರೋಧಿ ಮನೋಭಾವವಾಗಿ ಮಾರ್ಪಾಟಾಗಬಹುದು. ಈ ಮನೋಭಾವ ವೈಯಕ್ತಿಕ/ಸಾಮಾಜಿಕ ಎರಡೂ ನೆಲೆಗಳಲ್ಲಿ ಆಗಬಹುದು.
ಯಂತ್ರ-ಭೀತಿ ಸಾಮಾಜಿಕ ಪರಿಸ್ಥಿತಿಯೂ ಹೌದು. ಎಷ್ಟೋ ಜನರಿಗೆ ತಂತ್ರಜ್ಞಾನವೆಂದರೆ ಏನೋ ನಿಗೂಢ, ಏನೋ ದಿಗಿಲು. ಹಾಗಾಗಿ, ಯಾರೋ ನಿಷ್ಣಾತರ ಮೇಲೆ ಭರವಸೆ ಹೊರಿಸಿ ತಮ್ಮ ಜವಾಬ್ದಾರಿ ಮತ್ತು ಹತೋಟಿ ಎರಡನ್ನೂ ಬಿಟ್ಟಿರುತ್ತಾರೆ, ತಮ್ಮದೇ ಜೀವನದ ಮೇಲಿನ ಹತೋಟಿಯೂ ಇದರಲ್ಲಿದೆ ಎಂಬ ಅರಿವು ಇದ್ದರೂ ಕೂಡ. ಇದೇ ನಿರಾಶೆ, ಆತಂಕ ಮತ್ತು ಏನೋ ನಷ್ಟವಾಗುತ್ತಿದೆ ಎಂಬ ಅಸ್ಪಷ್ಟ ಭಯ ಮತ್ತು ಅಸಮಾಧಾನದಲ್ಲಿ ಜೀವಿಸುತ್ತಾರೆ. ಹಾಗಾಗಿಯೇ ಜನರಲ್ಲಿ ಯಂತ್ರ-ಭೀತಿ ನಿವಾರಿಸಲು ಸರಕಾರಗಳು ಯೋಜನೆಗಳನ್ನು ಹಮ್ಮಿಕೊಳ್ಳುವುದಿದೆ, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ, ಜನಪ್ರಿಯ ಸಮೂಹ ಮಾಧ್ಯಮಗಳ ಮೂಲಕ ತಂತ್ರಜ್ಞಾನದ ಕುರಿತಾಗಿ ಅರಿವು ಮೂಡಿಸುವ ಪ್ರಯತ್ನ ಮಾಡುವುದಿದೆ.
ಯಂತ್ರ-ಭೀತಿ ಶಾಶ್ವತ ಮನೋಭಾವವೇನೂ ಅಲ್ಲ. ಸಾಮಾನ್ಯವಾಗಿ ನಾವು ಮೊದಮೊದಲು ಯಾವ ತಂತ್ರಜ್ಞಾನದ ಬಳಕೆಯ ಬಗೆಗೆ ಆತಂಕವಿಟ್ಟುಕೊಂಡು ಪ್ರತಿರೋಧಿಸುತ್ತೇವೆಯೋ, ಕ್ರಮೇಣ ಅದರ ಬಳಕೆ ಸಹಜವೆಂಬಂತೆ ಮಾಡುತ್ತಿರುತ್ತೇವೆ. ವಾಹನಗಳ ಚಾಲನೆಯ ಕಲಿಕೆಯ ಸಂದರ್ಭದಲ್ಲಿ ಹಲವರಿಗೆ ಈ ಅನುಭವ ಆಗಿರುತ್ತದೆ. ಹೀಗೆ ಯಂತ್ರ-ಭೀತಿಯೇ ಕಾಲಾನುಕ್ರಮದಲ್ಲಿ ಯಂತ್ರ-ಮೋಹವೂ ಆಗಿ ಬದಲಾಗಲೂಬಹುದು ಎನ್ನುವ ಮಾತಿನಲ್ಲಿಯೇ ನಮಗೆ ಯಂತ್ರಗಳ ಕುರಿತು ಮಾನವರ ಪ್ರತಿಸ್ಪಂದನೆಯಲ್ಲಿರುವ ವಿರೋಧಾಭಾಸ ಕಾಣಸಿಗುತ್ತದೆ. ಅದೆಂದರೆ, ಯಂತ್ರ-ಭೀತಿ ಮತ್ತು ಯಂತ್ರ-ಮೋಹ, ಯಂತ್ರ-ವಿರೋಧ ಮತ್ತು ಯಂತ್ರಾವಲಂಬನೆ ಏಕಕಾಲಿಕವಾಗಿ ಇರುವುದು. ಈ ಗೋಜಲು ಯಾಕೆ ಎಂಬ ಪ್ರಶ್ನೆಗೆ ತಿರುಗುವ ಮುನ್ನ ಯಂತ್ರ-ಮೋಹದ ಕುರಿತು ಕೊಂಚ ವಿವರಣೆ.
ಯಂತ್ರ-ಮೋಹ ತುಂಬಾ ಗಂಭೀರವಾಗಿ ಯೋಚಿಸಿ ಬಂದ ತೀರ್ಮಾನ ಆಗಬೇಕಿಲ್ಲ; ಪ್ರಜ್ಞಾಪೂರ್ವಕವೂ ಆಗಿರಬೇಕಿಲ್ಲ. ಉದಾಹರಣೆಗೆ, ಎಲ್ಲಿ ಬೇಕಲ್ಲಿಗೆ ಹೋಗಲು ಸೈಕಲ್ಲನ್ನು ಬಳಸುವವ, ತಾನು ಒಂದು ಯಂತ್ರವನ್ನು ಬಳಸುತ್ತಿದ್ದೇನೆ ಎಂದು ಯೋಚಿಸುವುದಿಲ್ಲ. ಅದು ದೈನಂದಿನ ಜೀವನದ ಯಾವುದೇ ಯಂತ್ರ/ಸಲಕರಣೆಗಳಿರಬಹುದು – ರೆಡಿಯೋ, ಟಿವಿ, ಫೋನು, ಫ್ರಿಡ್ಜು, ಮೋಟರು, ಇತ್ಯಾದಿ. ಯಂತ್ರಗಳ ಮೇಲಿನ ಅಪ್ರಜ್ಞಾಪೂರ್ವಕ ಅವಲಂಬನೆಯೂ ಸಹ ಯಂತ್ರ-ಮೋಹವೇ ಸರಿ. ಒಂದು ದಿನ ಮೊಬೈಲು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋದವರಿಗೆ ಗೊತ್ತು ಈ ಅನಿಸಿಕೆ. ಅದು ಯಾಕೆ, ಒಂದು ಹತ್ತು ನಿಮಿಷ ಅಂತರ್ಜಾಲ ಸಂಪರ್ಕ ಸಿಗದಿದ್ದರೆ ಅಸ್ವಸ್ಥರಾಗುತ್ತೇವಲ್ಲವೇ!
ಪತ್ರಿಕೆಯಲ್ಲಿ ಎಂದೋ ಓದಿದ ಒಂದು ಘಟನೆ ಇದನ್ನು ಇನ್ನೂ ನಾಟಕೀಯವಾಗಿ ವಿವರಿಸುತ್ತದೆ. ಮಗಳು ದಿನವಿಡೀ ಅಂತರ್ಜಾಲದಲ್ಲಿರುತ್ತಾಳೆ ಎಂದು ಕಳವಳಗೊಂಡ ಪೋಷಕರು ಅವಳ ಈ “ದುಶ್ಚಟ”ವನ್ನು ಬಿಡಿಸಲು ಮೊಬೈಲು ಫೋನನ್ನು ಅವಳಿಂದ ಬಚ್ಚಿಡುತ್ತಾರೆ. ಅವಳು ಅತ್ತುಕರೆದರೂ ಕಟ್ಟುನಿಟ್ಟಾಗಿ ಮೊಬೈಲ್ ಬಳಕೆಯನ್ನು ಪ್ರತಿಬಂಧಿಸುತ್ತಾರೆ. ಒಂದೆರಡು ದಿನ ಅತ್ತುಕರೆದು, ಅಂತಿಮವಾಗಿ “ಸರಿದಾರಿ”ಗೆ ಬರುತ್ತಾಳೆ ಎಂದು ಪೋಷಕರ ತರ್ಕ. ಮಗಳಾದರೋ ಊಟ-ಮಾತು ಬಿಟ್ಟಿದ್ದಾಯಿತು. ಖಾಯಿಲೆ ಬಿದ್ದಿದ್ದಾಯಿತು. ಆಸ್ಪತ್ರೆಯಲ್ಲಿ ದಾಖಲು ಮಾಡಿಯೂ ಆಯಿತು. ಕೊನೆಗೂ, ಅವಳ ಅಂತರ್ಜಾಲ ಅವಲಂಬನೆಗೆ ಬೇರೆ ಮದ್ದಿಲ್ಲದೇ ಮೊಬೈಲನ್ನು ಹಿಂತಿರುಗಿಸುತ್ತಾರೆ.
ಈ ಘಟನೆಯಂತ ಹಲವಾರು ಕತೆಗಳನ್ನು ನಾವು ದಿನಂಪ್ರತಿ ಸಾಮಾಜಿಕ ಮಾಧ್ಯಮಗಳಲ್ಲಿ ಓದುತ್ತಿರುತ್ತೇವೆ. ಅವೆಲ್ಲ ಯಂತ್ರ-ಮೋಹದ ವಿವಿಧ ರೂಪಗಳು. ಯಂತ್ರ-ಮೋಹದ ಪರಿಣಾಮಕಾರಿ ಸಂಕೇತವೆಂದರೆ ಕಾರಿನ ಕುರಿತು ಜನರಿಗಿರುವ ವ್ಯಾಮೋಹ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಒಂದು ಜೋಕು ಹೀಗಿದೆ: ಹೆಂಡತಿಯನ್ನು ಕಳೆದುಕೊಂಡ ಗಂಡ ದೂರು ದಾಖಲಿಸಲು ಪೋಲೀಸ್ ಸ್ಟೇಷನ್ನಿಗೆ ಹೋಗುತ್ತಾನೆ. ಹೆಂಡತಿಯನ್ನು ವರ್ಣಿಸೆಂದು ಇನ್ಸಪೆಕ್ಟರ್ ಹೇಳಿದಾಗ, ಗಂಡನ ಉತ್ತರ – “ಸಾಮಾನ್ಯ ಎತ್ತರ, ಸಾಮಾನ್ಯ ಸೈಜು, ಕಣ್ಣಿನ ಬಣ್ಣ ಗೊತ್ತಿಲ್ಲ, ಏನು ತೊಟ್ಟಿದ್ದಳು ಗೊತ್ತಿಲ್ಲ, ಅವಳು ಚಲಿಸುತ್ತಿದ್ದ ವಾಹನ ಕೆಂಪು ಹೊಂಡಾ ಸಿವಿಕ್ ಗಾಡಿ, ೧೭೯೯ ಸಿಸಿ, ಆಟೋಮ್ಯಾಟಿಕ್, ೧.೬ ಲೀ ಐ-ಡಿಟಿಇಸಿ ಎಂಜಿನ್, ೧೧೮ ಬಿಎಚಪಿ@೪೦೦೦ಆರ್ ಪಿಎಮ್ ಪವರ್, ೪ ಸಿಲಿಂಡರ್, ಸಿಆರಡಿಆಯ್ ಫ್ಯೂಯೆಲ್ ಸಪ್ಲೈ, ೬ ಸ್ಪೀಡ್ ಗೇಯರು ಉಳ್ಳ ಗಾಡಿ”. ಇನ್ಸಪೆಕ್ಟರ್ ಹೇಳ್ತಾನೆ, ಅಳಲು ತೊಡಗಿರುವ ಗಂಡನ ಸಮಾಧಾನ ಮಾಡುತ್ತ, “ಆಯ್ತು, ಆಯ್ತು, ಹುಡುಕ್ತೇವೆ ಬಿಡಿ ನಿಮ್ಮ ಕಾರನ್ನು”.
ಈ ಜೋಕು ನಮಗೆ ಹೇಳುವ ಕಾರು-ಮೋಹದ (ಇದಕ್ಕೆ ಕಾರ್ಮೋಹ ಎಂಬ ಪದಬಳಕೆ ಮಾಡಿದರೆ, ಅದರ ಹಿಂದಿನ ಕರಾಳ ಮುಖವನ್ನು ಸೂಚಿಸಿದಂತಾಗುತ್ತದೆಯೇ?) ಕತೆಯನ್ನಿಟ್ಟುಕೊಂಡು ೧೯೭೩ರಲ್ಲಿ ಜೆ ಜಿ ಬಲ್ಲಾರ್ಡ್ ಎಂಬ ಕಾದಂಬರಿಕಾರ ಯಂತ್ರ-ವ್ಯಾಮೋಹದ ಮಾನಸಿಕತೆಯ ಕುರಿತಾದ “ಕ್ರ್ಯಾಷ್” ಎಂಬ ಕಾದಂಬರಿ ಬರೆದಿದ್ದಾನೆ. ಇದನ್ನೇ ಆಧರಿಸಿ ೧೯೯೬ರಲ್ಲಿ ಇದೇ ಹೆಸರಿನ ಸಿನೆಮಾ ಕೂಡ ಮಾಡಲಾಗಿದೆ. ಇವೆರಡೂ ಕೃತಿಗಳು ಮಾನವ ಯಂತ್ರದೊಂದಿಗೆ ಭಾವನಾತ್ಮಕವಾಗಿ ಒಂದಾಗುವುದರ ಕತೆ ಹೇಳುತ್ತವೆ. ಈ ವ್ಯಾಮೋಹ ತನ್ನ ಭಾವನೆ ಯಂತ್ರದ ಭಾವನೆ ಎಂಬ ಯಂತ್ರವನ್ನು ಮಾನವೀಕರಿಸುವ, ಸುಂದರಗೊಳಿಸಿ ನೋಡುವ ರೀತಿಯದಾಗಿದೆ.
ಯಂತ್ರ-ಭೀತಿಯೇ ಕಾಲಾನುಕ್ರಮದಲ್ಲಿ ಯಂತ್ರ-ಮೋಹವೂ ಆಗಿ ಬದಲಾಗಲೂಬಹುದು ಎನ್ನುವ ಮಾತಿನಲ್ಲಿಯೇ ನಮಗೆ ಯಂತ್ರಗಳ ಕುರಿತು ಮಾನವರ ಪ್ರತಿಸ್ಪಂದನೆಯಲ್ಲಿರುವ ವಿರೋಧಾಭಾಸ ಕಾಣಸಿಗುತ್ತದೆ.
ಇಂತಹ ಯಂತ್ರ-ವ್ಯಾಮೋಹದ ಅಪಾಯದ ಕುರಿತು ಶೆರ್ರಿ ಟರ್ಕಲ್ ಎಂಬ ತಂತ್ರಜ್ಞಾನ-ಸಮಾಜಶಾಸ್ತ್ರಜ್ಞೆ ಹೇಳುವುದೆಂದರೆ ಯಂತ್ರಗಳನ್ನು ಮಾನವೀಕರಿಸಿ ನೋಡುವ ಮನೋಭಾವ ಒಂದು ಹಂತದಲ್ಲಿ ನಮ್ಮೊಳಗಿನ ಮಾನವೀಯತೆಯನ್ನು ಕಡಿಮೆ ಮಾಡಬಹುದು. ಉದಾಹರಣೆಗೆ, ಜಪಾನಿನಲ್ಲಿ ಪ್ರಯತ್ನಿಸುತ್ತಿರುವಂತೆ, ವಯಸ್ಸಾದವರನ್ನು ರೋಬಾಟುಗಳ ಆರೈಕೆಯಲ್ಲಿ ನಾವು ಬಿಡುತ್ತೇವಾದರೆ, ರೋಬಾಟಿನ ಆರೈಕೆಯ ಕ್ರಮ ಅದರ ಮಾನವೀಯ ಮಗ್ಗುಲನ್ನು ತೋರಿದರೆ, ನಮ್ಮ ಪೋಷಕರನ್ನು ರೋಬಾಟುಗಳ ಆರೈಕೆಗೆ ಬಿಡುವ ನಮ್ಮಲ್ಲಿಯೂ ಮಾನವೀಯತೆ ಕಮ್ಮಿಯಾಗಿದೆ ಎಂದಲ್ಲವೇ? ಅಥವಾ, ಜೇರನ್ ಲೇನಿಯರ್ ಹೇಳುವಂತೆ, ಕಂಪ್ಯೂಟರುಗಳ ಜಾಣ್ಮೆಯನ್ನು ಎತ್ತಿತೋರಲು ನಮ್ಮನ್ನು ನಾವು ದಡ್ಡರಾಗಿಸಿಕೊಳ್ಳುತ್ತಿದ್ದೇವೆ. ಹಾಗಾಗಿ ಅಪಾಯ ಇರುವುದು ಕಂಪ್ಯೂಟರುಗಳು ಬುದ್ಧಿವಂತವಾಗುತ್ತಿರುವುದರಿಂದಲ್ಲ, ಮಾನವರು ದಡ್ಡರೂ ಮೂರ್ಖರೂ ಆಗುತ್ತಿರುವುದರಿಂದ. ಈ ಯಂತ್ರಾವಲಂಬನೆಯಿಂದ ನಾವೀಗಾಗಲೇ ನೆನಪಿನ ಶಕ್ತಿ ಮತ್ತು ಅದು ಸಾಧ್ಯವಾಗಿಸುತ್ತಿದ್ದ ಅನೇಕ ಕೌಶಲ್ಯಗಳನ್ನು ಕಳೆದುಕೊಂಡಿದ್ದೇವೆ; ಇನ್ನೂ ಏನೇನು ಮಾನವ-ಕೌಶಲ್ಯಗಳನ್ನು ನಾವು ಯಂತ್ರಗಳಿಗೆ ಬಿಟ್ಟುಕೊಡೋಣ?
ಮೋಹ-ದ್ವೇಷದ ವಿರೋಧಾಭಾಸ
ಈ ಪ್ರಶ್ನೆಯೊಂದಿಗೆ ವರ್ಣನೆಯಿಂದ ಚರ್ಚೆಯ ಕಡೆ ಹೊರಳಿಕೊಳ್ಳಬಹುದು. ಮುಂಜಾನೆ ಏಳಲು ಅಲಾರ್ಮಿನ ಸಹಾಯದಿಂದ ಮೊದಲಾಗುವ ನಮ್ಮ ಯಂತ್ರಾವಲಂಬನೆ ಸ್ನಾನ, ನಾಷ್ಟಾ, ಸಂಚಾರ ಮಾಧ್ಯಮ, ಸಂಪರ್ಕ ಮಾಧ್ಯಮ, ವಿರಾಮಕ್ಕಾಗಿ ಮನೋರಂಜನಾ ಮಾಧ್ಯಮ, ಹೀಗೆ ಹೆಜ್ಜೆಹೆಜ್ಜೆಯಲ್ಲಿಯೂ ತಂತ್ರಜ್ಞಾನವೇ ನಮ್ಮ ಜೀವನವನ್ನು ಸಾಧ್ಯವಾಗಿಸಿದೆ. ಅದೆಷ್ಟೇ ಯಂತ್ರಗಳನ್ನು ಬಿಚ್ಚಿದರೂ ತಂತ್ರಜ್ಞಾನವೇ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?
ಭಾರತದಲ್ಲಿ ತುಂಬಾ ಜನಪ್ರಿಯವಾದ ಹಾಲಿವುಡ್ ಸಿನೆಮಾಗಳಲ್ಲಿ ಒಂದಾದ ಟರ್ಮಿನೇಟರ್ ಮತ್ತು ಟರ್ಮಿನೇಟರ್ ೨ ನಮಗೆ ಒಂದು ವಿಷಯವನ್ನು ಸಾಂಕೇತಿಕವಾಗಿ ಸೂಚಿಸುತ್ತದೆ. ಈ ಸಿನೆಮಾದ ಮೊದಲ ಭಾಗ, ಭವಿಷ್ಯದಲ್ಲಿ ಮಾನವರ ಮುಂದಾಳು ಆಗಲಿರುವವನ ತಾಯಿಯನ್ನು ಕೊಂದು ಭವಿಷ್ಯದ ಮಾನವರ ನಾಶ ಮಾಡಲೆಂದು ಭವಿಷ್ಯದಿಂದ ಯಂತ್ರಗಳ ಪ್ರತಿನಿಧಿಯಾಗಿ ಟಿ-೧೦೦ ಅನ್ನು ಕಳಿಸಲಾಗುವ ಕತೆ ಹೇಳುತ್ತದೆ. ಎರಡನೇ ಭಾಗವಾದ ಟರ್ಮಿನೇಟರ್-೨ನಲ್ಲಿ ಟಿ-೧೦೦ ಅನ್ನು ಭವಿಷ್ಯದ ಮಾನವರ ಪ್ರತಿನಿಧಿಯಾಗಿ ಮಾನವ ಮುಂದಾಳುವಿನ ರಕ್ಷಣೆಗಾಗಿ ಕಳಿಸಲಾಗುವ ಕತೆ ಇದೆ. ಎರಡೂ ಯಂತ್ರಗಳೇ – ಎರಡೂ ಭವಿಷ್ಯದಿಂದಲೇ ಬಂದ ಯಂತ್ರಗಳು. ಈ ಸಿನೆಮಾ ಮಾನವ ಯಂತ್ರಗಳ ಸಂಘರ್ಷದ ಕತೆಯುಳ್ಳದ್ದಾದರೂ, ಎರಡೂ ಸಿನೆಮಾಗಳಲ್ಲಿ ಯಂತ್ರಗಳೇ ಮಾನವನ ಸ್ನೇಹಿಯೂ ಹೌದು, ವೈರಿಯೂ ಹೌದು. ಇದು, ಮೇಲೆ ನಮೂದಿಸಿದ, ಅನಿವಾರ್ಯ ಗೋಜಲು. ಅಲ್ಲದೇ, ತಂತ್ರಜ್ಞಾನದ ಬಗೆಗಿರುವ ಅತ್ಯಂತ ಸಾಮಾನ್ಯ ಪ್ರತಿಕ್ರಿಯೆಯಲ್ಲಿಯೂ ಈ ಮೋಹ-ದ್ವೇಷದ ವಿರೋಧಾಭಾಸ ಇರುವುದು ಕಾಣುತ್ತದೆ.
ಸೈಫೈ ಕಥನಗಳಲ್ಲಿ ಬಹುಕಾಲದಿಂದ ನಿರೀಕ್ಷಿಸಲಾಗಿರುವ ಮಾನವ-ಯಂತ್ರಗಳ ನಡುವಿನ ಯುದ್ಧ ಇನ್ನೂ ಆಗಿಲ್ಲದಿದ್ದರೂ, ಮಾನವರ ಜೀವನವು ಯಂತ್ರಾವಲಂಬಿಯಾಗಿಯೇ ಮುಂದುವರಿದಿದೆ. ಭಾವನಾತ್ಮಕ ಮತ್ತು ತಾತ್ವಿಕ ಸ್ತರಗಳಲ್ಲಿ ಮಾನವ ಈ ಮೋಹ ಮತ್ತು ದ್ವೇಷವನ್ನು ಜೊತೆಜೊತೆಗೆ ಇಟ್ಟುಕೊಂಡಿದ್ದಾನೆ. ಪ್ರಖ್ಯಾತ ಹಾಲಿವುಡ್ ಸಿನೆಮಾ “ಮೇಟ್ರಿಕ್ಸ್” ಮೂಲತಃ ಮಾನವ-ಯಂತ್ರ ಸಂಘರ್ಷದ ಕತೆ. ಹೇಗೆ ಮಾನವರ ಪ್ರತಿನಿಧಿ ನಿಯೋ ಯಂತ್ರಗಳನ್ನು ಸೋಲಿಸುವ ಶಕ್ತಿ ಹೊಂದಿದ್ದಾನೆ ಎನ್ನುವುದು ಕತೆಯ ತಿರುಳು. ಆದರೆ, ಇದೆಲ್ಲವೂ ಆಗುತ್ತಿರುವುದು ಭವಿಷ್ಯದಲ್ಲಿ, ಯಂತ್ರಗಳು ಮಾನವರನ್ನು ಆಗಲೇ ಸೋಲಿಸಿರುವ ಸ್ಥಿತಿಯಲ್ಲಿ. ಹೀಗೆ, ಮೇಟ್ರಿಕ್ಸ್ ನಲ್ಲಿಯೂ ಈ ರೀತಿಯ ದ್ವಿರೂಪಿ ಕತೆ ಇದೆ – ಯಂತ್ರಗಳ ಪ್ರಾಬಲ್ಯ-ಮಾನವರು ಯಂತ್ರಗಳನ್ನು ಹತೋಟಿಯಲ್ಲಿ ಇಡಬೇಕಾದ ಜರೂರಿ. ಇದೇ ವಿಷಯವುಳ್ಳ ಇನ್ನೊಂದು ಸೈಫೈ ಸಿನೆಮಾ ಎಂದರೆ “ಆಯ್ ರೋಬಾಟ್”.
ಈ ಚರ್ಚೆಗಳು ಎತ್ತುವ ಜಿಜ್ಞಾಸೆಯೆಂದರೆ, ತಂತ್ರಜ್ಞಾನ ಒಳ್ಳೆಯದೋ, ಅಲ್ಲವೋ. ಹಳೆಯ ಕಾಲದ ಸೈಫೈಗಳು ಚರ್ಚಿಸುತ್ತಿದ್ದಂತೆ ದುರುಳನ ಕೈಯಲ್ಲಿ ತಂತ್ರಜ್ಞಾನ ಸಿಕ್ಕರೆ ಜಗತ್ತಿಗೇ ಮುಳುವಾಗಬಹುದು. ಅಥವಾ ಇತ್ತೀಚಿನ ಸೈಫೈಗಳು ಚರ್ಚಿಸುವಂತೆ ಯಂತ್ರಗಳ ಮೇಲಿನ ಮಾನವನ ಹತೋಟಿ ತಪ್ಪಿದರೆ ಮಾನವಕುಲವೇ ನಿರ್ನಾಮವಾದೀತು. ಅದೇ ಸಮಯದಲ್ಲಿ, ತಂತ್ರಜ್ಞಾನದ ಮೂಲಕ ಮಾನವರು ಅದೆಷ್ಟು ಬಗೆಯಲ್ಲಿ ತಮ್ಮ ಜೀವನದಲ್ಲಿ ನೋವು, ಯಾತನೆಗಳನ್ನು ನಿವಾರಿಸಿಕೊಂಡಿದ್ದಾರೆ; ಪರಸ್ಪರರ ಜೊತೆ ಸಂಪರ್ಕ ಹೆಚ್ಚಿಸಿಕೊಂಡು ಸಮಾಜ ಪ್ರಜ್ಞೆ ವಿಸ್ತರಿಸಿಕೊಂಡಿದ್ದಾರೆ; ರೋಗರುಜಿನಗಳ ಮೇಲೆ ಹತೋಟಿ ತಂದು, ಅಪಘಾತಗಳಾದಾಗ ಆಗುವ ದೈಹಿಕ ಊನಗಳಿಂದ ಬಿಡುಗಡೆ ಪಡೆವ ದಾರಿಕಂಡುಕೊಂಡು ಜೀವನದಲ್ಲಿ ನೆಮ್ಮದಿ, ವಿರಾಮ ಹೆಚ್ಚಿಸಿಕೊಂಡಿದ್ದಾರೆ. ಮೂಲತಃ ಪ್ರಶ್ನೆ ಏನೆಂದರೆ ತಂತ್ರಜ್ಞಾನ ಮತ್ತು ಅದರ ಉಪಯೋಗಗಳನ್ನು ನಾವು ಬೇರ್ಪಡಿಸಿ ನೋಡುವುದು ಸಾಧ್ಯವೇ? ಮೇಲೆ ನಮೂದಿಸಿದ ಗೋಜಲು – ಮೋಹ-ದ್ವೇಷದ ವಿರೋಧಾಭಾಸ – ಹುಟ್ಟಲು ಕಾರಣ ತಂತ್ರಜ್ಞಾನವನ್ನು ಅದನ್ನು ಉಪಯೋಗಿಸುವ ಮಾನವರಿಂದ ಪ್ರತ್ಯೇಕಿಸಿ ನೋಡುವ ಪ್ರವೃತ್ತಿ. ತಂತ್ರಜ್ಞಾನದ ಅಭಿವೃದ್ಧಿಯೇ ಮಾನವನ ಅನನ್ಯತೆ ಎನ್ನುವ ದೃಷ್ಟಿಕೋನವನ್ನು ಚರ್ಚಿಸೋಣ.
******
ಮಾನವಕುಲದ ವಿಕಾಸವಾಗಿದ್ದೇ ತಂತ್ರಜ್ಞಾನದ ಮೂಲಕ. ಮಾನವ ನಿರ್ಮಿತ ತಾಂತ್ರಿಕ ಸಾಧನಗಳ ಕುರಿತು ಮಾನವನಿಗೆ ಸದಾ ಮೆಚ್ಚುಗೆಯೇ. ಹಾಗಾಗಿಯೇ ಎಲ್ಲ ಪುರಾಣಗಳಲ್ಲಿ ತಂತ್ರಜ್ಞಾನಿಯ ಸಾಂಕೇತಿಕ ಕತೆಗಳಿವೆ. ಅದು ವಿಶ್ವಕರ್ಮ ಇರಬಹುದು, ಪ್ರಮೀಥಿಯಸ್ ಇರಬಹುದು. ತಾಂತ್ರಿಕ ಸಾಧನಗಳು ಅಥವಾ ಯಂತ್ರಗಳು ನಮ್ಮ ಅಂಗಗಳ ಸಾಧ್ಯತೆಗಳನ್ನು ವಿಸ್ತರಿಸುವ ಮೂಲಕ ನಮಗೆ, ಬಲ, ವಿರಾಮ, ಆರೋಗ್ಯ, ಸಂಪತ್ತುಗಳನ್ನು ದಯಪಾಲಿಸುತ್ತವೆ. ಹೃದಯದ ತೊಂದರೆ ಉಳ್ಳವರು ಪೇಸ್ ಮೇಕರ್ ಎಂಬ ಪುಟ್ಟ ಯಂತ್ರದ ಮೂಲಕ ವರ್ಷಾನುಗಟ್ಟಲೆ ಜೀವ ಉಳಿಸಿಕೊಳ್ಳುವುದು ಸಾಧ್ಯ. ಸ್ಲೋ ಮೋಷನ್, ಜೂಮ್ ಇನ್ ಕ್ಯಾಮೆರಾ ತಂತ್ರಜ್ಞಾನಗಳು ನಮ್ಮ ದೃಶ್ಯ ಸಾಧ್ಯತೆಯನ್ನು ವಿಸ್ತರಿಸುತ್ತವೆ. ಕನ್ನಡಕವೂ ತಾಂತ್ರಿಕ ಸಾಧನವೇ – ಯಂತ್ರವಲ್ಲದಿದ್ದರೂ. ಒಟ್ಟಾರೆ, ತಂತ್ರಜ್ಞಾನ/ಯಂತ್ರಗಳು ಮಾನವನ ಜೀವನವನ್ನು ಅಭಿವೃದ್ಧಿಗೊಳಿಸುತ್ತ ಬಂದಿವೆ. ಮಾನವನ ಇತಿಹಾಸವೇ ಒಂದು ರೀತಿಯಲ್ಲಿ ತಂತ್ರಜ್ಞಾನದ ವಿಕಸನದ ಕಥನ.
ನಿಜವೇನೆಂದರೆ, ಮಾನವರು ತಮ್ಮ ಉಳಿವಿಗೆ ನಿಸರ್ಗವನ್ನು ಎಷ್ಟು ಅವಲಂಬಿಸಿದ್ದಾರೋ, ಅಷ್ಟೇ ತಂತ್ರಜ್ಞಾನವನ್ನು ಸಹ ಅವಲಂಬಿಸಿದ್ದಾರೆ. ಫ್ರೆಂಚ್ ತತ್ವಶಾಸ್ತ್ರಜ್ಞ ಬರ್ನಾರ್ಡ್ ಸ್ಟೀಗ್ಲರ್ ಅವರ ಪ್ರಕಾರ ನಾವು ಮಾನವರನ್ನು ತಂತ್ರಜ್ಞಾನದಿಂದ ಪ್ರತ್ಯೇಕಿಸಿ ನೋಡಲಾಗದು. ಮಾನವ ಕುಲವನ್ನು ವರ್ಣಿಸಲು ಇರುವ ದಾರಿಗಳಲ್ಲಿ ಒಂದು ಈ ತಾಂತ್ರಿಕತ್ವ (technicity). ತಾಂತ್ರಿಕತ್ವವು ಮಾನವನ ಉದಯದೊಂದಿಗೆ ತಳುಕುಹಾಕಿಕೊಂಡಿದೆ; ಸ್ಟೀಗ್ಲರ್ ಪ್ರಕಾರ ಮಾನವ-ತಂತ್ರಜ್ಞಾನದ ನಡುವೆ ಏನು-ಯಾರು ಸಂಬಂಧವಿದೆ. ಹಾಗಾಗಿಯೇ ಈ ಸಂಬಂಧ ಮೂಲಭೂತ ಮತ್ತು ಒಂದು ಇನ್ನೊಂದರ ಮೂಲವಾಗಿರುವಂತದ್ದು. ಮಾನವನಿಲ್ಲದೆ ತಂತ್ರಜ್ಞಾನವಿಲ್ಲ; ಆದರೆ ಅಷ್ಟೇ ಸತ್ಯ ಸಂಗತಿಯೆಂದರೆ ತಂತ್ರಜ್ಞಾನವಿಲ್ಲದೇ ಮಾನವಕುಲವೂ ಇಲ್ಲ. ಮಾನವನ ಪ್ರಜ್ಞೆ ಎನ್ನುವುದೇ ತನ್ನ ದೇಹದ ಮಿತಿಯನ್ನು ಮೀರಿ, ತನ್ನ ಅಂಗಾಂಗಳ ವಿಸ್ತಾರವಾಗಿ, ವಸ್ತುಗಳನ್ನು ಬಳಸುವ ವಿಶಿಷ್ಟ ಪ್ರಜ್ಞೆ.
ಮಾನವನ ಸಾಮಾಜಿಕ ಸಂರಚನೆ ಕೂಡ ತಂತ್ರಜ್ಞಾನವನ್ನು ಅವಲಂಬಿಸಿದೆ. ಸಾಮಾಜಿಕ ಅಸಮತೋಲನವನ್ನು ಈ ದೃಷ್ಟಿಯಿಂದ ವಿಶ್ಲೇಷಿಸುವ ಜಿ ಎನ್ ನಾಗರಾಜ್ ಅವರು ಸಾಮಾಜಿಕ ಅಸಮತೋಲನದ ಮೂಲವನ್ನು ಆಯುಧಗಳ ಆವಿಷ್ಕಾರದ ಜೊತೆ ಸಮೀಕರಿಸುತ್ತಾರೆ. ಯಾರು ಆಯುಧ ಉತ್ಪಾದನೆಯ ಮತ್ತು ಆಯುಧಕ್ಕೆ ಬೇಕಾದ ಕಚ್ಛಾಪದಾರ್ಥದ ಮೇಲೆ ಹಿಡಿತ ಸಾಧಿಸುತ್ತಾರೋ ಅವರು ಇತರರ ಮೇಲೆ ಅಧಿಕಾರ ಪಡೆಯುತ್ತಾರೆ. ತನ್ಮೂಲಕ ಸೃಷ್ಟಿಯಾಗುವ ವರ್ಗೀಕೃತ ಸಮಾಜದಲ್ಲಿ ತಂತ್ರಜ್ಞಾನ ಉಳ್ಳ-ಇಲ್ಲದ ವರ್ಗಗಳು ಮತ್ತು ವರ್ಗಾಧಾರಿತ ಆಳ್ವಿಕೆಯೂ ಶುರುವಾಗುತ್ತದೆ. ಪುರಾತನ ಕಾಲಖಂಡದಲ್ಲಿ ಬಗೆಬಗೆಯ ತಂತ್ರಜ್ಞಾನಗಳ ಆವಿಷ್ಕಾರವಾದಂತೆ ವಿಕಸಿತಗೊಳ್ಳುತ್ತ ಬಂದ ಸಮಾಜ ಸಂರಚನೆಯ ಒಂದು ತುಂಬಾ ಕರಡು ವಿವರಣೆ ಇದು.
ತಂತ್ರಜ್ಞಾನದ ಸಾಂಸ್ಥೀಕರಣವಾದಂತೆ, ತಂತ್ರಜ್ಞಾನದ ಮೇಲಿನ ಹತೋಟಿ ಪ್ರಭಾವೀ ವರ್ಗದ ಕೈಯಲ್ಲಿ ಉಳಿಯುವಂತೆ ನೋಡಿಕೊಳ್ಳಲಾಗಿದೆ. ಈ ಪ್ರಭಾವೀ ವರ್ಗದ ಅನುಕೂಲಕ್ಕೆ, ಹಿತಾಸಕ್ತಿಗೆ ಅನುಗುಣವಾಗಿಯೇ ತಂತ್ರಜ್ಞಾನದ ಆವಿಷ್ಕಾರವನ್ನು ಸಹ ಆಗಗೊಡಲಾಗಿದೆ. ತಂತ್ರಜ್ಞಾನ ಎನ್ನುವುದು ಸಮಾಜದಲ್ಲಿರುವ ಶಕ್ತಿ ಸಂರಚನೆಗಳನ್ನು ಎತ್ತಿ ಹಿಡಿಯುವ ಸಲುವಾಗಿ ಪ್ರಭಾವಿ ವ್ಯಕ್ತಿಗಳಿಗೆ ಸಾಧನಗಳನ್ನು ಮಾತ್ರ ಸರಬರಾಜು ಮಾಡುವುದಿಲ್ಲ; ಬದಲಿಗೆ ಸಾಮಾಜಿಕ ವ್ಯವಸ್ಥೆಯನ್ನು ತಂತ್ರಜ್ಞಾನವೆಂಬ ಸಂರಚನೆಯೂ ಪ್ರತಿಬಿಂಬಿಸುತ್ತದೆ; ತಂತ್ರಜ್ಞಾನ ರಾಜಕೀಯವಾಗಿ ನಿರಾಸಕ್ತವಾದದ್ದು ಎನ್ನುವ ವಾದವನ್ನು ಒಪ್ಪಲಾಗದು, ಯಾಕೆಂದರೆ ಸಮಾಜವೊಂದರಲ್ಲಿರುವ ಶಕ್ತಿಸಂರಚನೆ ಮತ್ತು ಆ ಸಮಾಜ ಸೃಷ್ಟಿಸಿಕೊಂಡಿರುವ ತಂತ್ರಜ್ಞಾನವನ್ನು ಪ್ರತ್ಯೇಕಿಸಲಾಗದು. ಭಾರತದ ಸಂದರ್ಭದಲ್ಲಿ ಈ ಮಾತಿಗೆ ಸರಳ ಪುರಾವೆಯೆಂದರೆ ಇಂದಿಗೂ ಮಾನವಚಾಲಿತ ಮಲಹೊರುವ ಪದ್ಧತಿ ಜಾರಿಯಲ್ಲಿರುವುದು.
ಸಂಸ್ಕೃತಿಯ ಅಂಗವಾಗಿ ತಂತ್ರಜ್ಞಾನ
ಮಾನವನ ವಿಕಾಸ, ಮಾನವ ಸಮಾಜದ ಸಂರಚನೆ, ಮಾನವನ ದೈನಂದಿನ ಬಾಳಿನಲ್ಲಿ ಅವಿಭಾಜ್ಯ ಪಾತ್ರ, ಇವೆಲ್ಲ ಗಮನಿಸಿದರೆ, ತಂತ್ರಜ್ಞಾನವು ಮಾನವ ಸಂಸ್ಕೃತಿಯ ಅಂಶವೆಂದು ಬಗೆಯುವುದರಲ್ಲಿ ಸಮಸ್ಯೆ ಕಾಣುವುದಿಲ್ಲ. ಸಾಧಾರಣವಾಗಿ ತಂತ್ರಜ್ಞಾನದಿಂದ ಮಾನವನಿಗೆ ಹಾನಿಯಾಗಿದೆ ಅಥವಾ ಒಳಿತಾಗಿದೆ ಎಂಬ ದ್ವಿರೂಪಿ (binary) ದೃಷ್ಟಿಕೋನಗಳು ಪ್ರಚಲಿತದಲ್ಲಿವೆ. ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತಾದ ಎಲ್ಲ ಚರ್ಚೆಗಳೂ ಒಳಿತು-ಕೆಡುಕುಗಳೆಂಬ ದ್ವಿರೂಪಿ ತರ್ಕದಲ್ಲಿ ಕಳೆದು ಹೋಗುವ ಸಂಭವವೇ ಹೆಚ್ಚು. ಅದು ಅಥವಾ ಇದು ಎಂದಾಗ ಸಮತೋಲನದ ದೃಷ್ಟಿ ಇರುವುದಿಲ್ಲ. ಒಪ್ಪಿ ಅಥವಾ ಬಿಡಿ ಎಂಬ ಜಾರ್ಜ್ ಬುಷ್ ತರದ ಇತ್ಯಾತ್ಮಕ ಮನೋಭಾವ ಈ ಚರ್ಚೆಯಲ್ಲಿ ಪದೇಪದೇ ಕಾಣಬರುತ್ತದೆ. ಬಹುಷಃ ನಮಗೆ ಬೇಕಾಗಿರುವುದು ಸಾಧ್ಯತೆಗಳನ್ನು ಮುಚ್ಚಿಬಿಡುವ ದ್ವಿರೂಪಿ ತರ್ಕಗಳ ಬದಲಿಗೆ ಸೂಕ್ಷ್ಮತೆ ಉಳಿಸಿಕೊಂಡಿರುವ ತೆರೆದ ಮನದ ಮನೋಭಾವ.
ಈ ಅಂಕಣದ ಮೊದಲ ಕಂತಿನ ಕೊನೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತಂತ್ರಜ್ಞಾನದ ಚಿತ್ರಣಗಳ ಕುರಿತು ಓದುಗರ ಪ್ರತಿಕ್ರಿಯೆಗೆ ಕೇಳಿಕೊಂಡಿದ್ದೆ. ಸ್ನೇಹಿತರಾದ ವಾಸುದೇವ ಶರ್ಮ ಪ್ರತಿಕ್ರಯಿಸಿ, ತಂತ್ರಜ್ಞಾನದ ಆವಿಷ್ಕಾರ ಸಾಚಾ ಮನೋಭಾವದಿಂದಲಾದರೂ, ಮಾನವನ ಲೋಭಿ, ಸ್ವಾರ್ಥಿ ಮನೋಭಾವ ಅದನ್ನು ದುರುಪಯೋಗ ಮಾಡಿಕೊಂಡು ತಂತ್ರಜ್ಞಾನದ ಆಪತ್ಕಾರಿ ಮಗ್ಗುಲನ್ನು ಹೊರಹಾಕುತ್ತದೆ ಎನ್ನುವ ಚಿತ್ರಣ ಎಮ್. ಎಸ್. ಕೆ. ಪ್ರಭು ಮತ್ತು ರಾಜಶೇಖರ ಭೂಸನೂರಮಠ ಅವರ ಕತೆಗಳಲ್ಲಿ ಕಂಡುಬರುವದನ್ನು ಸೂಚಿಸಿದ್ದಾರೆ.
ಕನ್ನಡ ಸಾಹಿತ್ಯ ತಂತ್ರಜ್ಞಾನವನ್ನು ಚಿತ್ರಿಸಿರುವ ರೀತಿಯ ಅಧ್ಯಯನವೂ ಆಸಕ್ತಿಕರ ಮತ್ತು ಮಹತ್ವದ ಹೊಳಹುಗಳನ್ನು ನೀಡುವಂತದ್ದು ಅನ್ನುವುದರಲ್ಲಿ ಸಂಶಯವಿಲ್ಲ. ಈ ಅಂಕಣದ ಕೊನೆಗೆ, ಕನ್ನಡ ಸಾಹಿತ್ಯದಲ್ಲಿ ಯಂತ್ರ-ಮೋಹ ಮತ್ತು ಯಂತ್ರ-ವಿರೋಧದ ಸಾಂಕೇತಿಕ ಚಿತ್ರಣಗಳು ಯಾವ ಕೃತಿಗಳಲ್ಲಿ ಕಾಣಬಹುದು ಎನ್ನುವ ಪ್ರತಿಕ್ರಿಯೆಯನ್ನು ನಿಮ್ಮಿಂದ ಆಹ್ವಾನಿಸುತ್ತಿದ್ದೇನೆ.
******
# tellkamalakar@gmail.com
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.
ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.
ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ
ಸರಳವಾಗಿ ವಿಷಯವನ್ನು ಒಳಹೊಗಿಸಿದೆ. ಭಾಷಾ ವಿದ್ಯಾರ್ಥಿಯಲ್ಲದ ನನಗೆ ಸುಲಭವಾಗಿ ಪರಿಕಲ್ಪನೆಗಳ ಪರಿಚಯ ಮಾಡಿಸಿದ್ದಕ್ಕಾಗಿ ವಂದನೆಗಳು. ನಿಜ. ತಂತ್ರಜ್ಞಾನವಿನ್ನೂ ಪೂರ್ತಿ ಸಿದ್ಧಿಸುವುದರೊಳಗೆ ಕೆಲವರು ಅವಸರ ಮಾಡಿಕೊಂಡು ಕೈ ಸುಟ್ಟುಕೊಳ್ಳುವುದು, ಇಲ್ಲವೇ ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುವುದು ಅದೆಷ್ಟು ನಿಜ. ಹೆರಿಗೆ ಮನೆ, ಅಡುಗೆ ಮನೆ, ಬಚ್ಚಲ ಮನೆಯಿಂದ ಹಿಡಿದು ಎಲ್ಲೆಡೆ ಎಲ್ಲದರಲ್ಲೂ ತಂತ್ರಜ್ಞಾನದೊಳಗೆ ನಾವೆಲ್ಲಾ ಸೇರಿಹೋಗಿದ್ದೇವೆ. ಈ ಓದಿಗೆ ನನ್ನನ್ನೂ ಒಳಸೆಳೆದ ನಿನಗೆ ವಂದನೆಗಳು.
ಧನ್ಯವಾದಗಳು ವಾಸು. ಹೌದು, ತುಂಬಾ ಆಸಕ್ತಿಕರ ಕ್ಷೇತ್ರ.