ಸಂಜೆ ಬಿಸಿಲು ಇನ್ನೂ ಚುರುಗುಟ್ಟುತ್ತಿರುವಾಗಲೇ ಸಣ್ಣಗೆ ಹನಿಯತೊಡಗಿದ ಮಳೆಯಿತ್ತು. ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿ, ಲೈಟುಗಳಿಲ್ಲದೆ ಮನೆಯೊಳಗೆ ಮಬ್ಬು ಬೆಳಕು. ಹೊರಗಿನ ಬೆಳಕು ಬರಲಿ ಅಂತ ತೆಗೆದಿಟ್ಟ ಕಿಟಕಿಗಳಿಂದ ಮಳೆಯಲ್ಲಿ ನೆಂದು ತಂಪಾಗಿ ಸೂಸುತ್ತಿದ್ದ ಗಾಳಿ. ಅಲ್ಲಿ ಬೆತ್ತದ ಕುರ್ಚಿಯಲ್ಲಿ ಅಮ್ಮನಂತಹ ಮಗಳು ಕೂತುಕೊಂಡು ಗತಿಸಿದ ಅಪ್ಪನ ನೆನಪುಗಳನ್ನ ಒಂದೊಂದಾಗಿ ಬಿಚ್ಚಿಡುತ್ತಿದ್ದರೆ ಮಳೆ ಒಂದೆರಡು ಕ್ಷಣ ಸುಮ್ಮನೆ ನಿಂತು, ಮತ್ತೆ ಜೋರಾಗಿ ಸುರಿಯತೊಡಗಿತು.
ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಹುಟ್ಟಿ ಇಂದಿಗೆ ಸರಿಯಾಗಿ ೧೦೩ ವರ್ಷಗಳು. ಅವರೊಡನೆ ತಾವು ಕಳೆದ ಬಾಲ್ಯದ ದಿನಗಳನ್ನ, ಕವಿ ಹೃದಯದ ವಿಶೇಷ ಒಲವು ನಲಿವುಗಳನ್ನ, ಮನೆಯೆಲ್ಲ ತುಂಬಿ ಕರುನಾಡಿನೆಲ್ಲೆಡೆ ಹಾಡಾಗಿ ಹರಿದ ಗೀತಸರಿತದ ಉಗಮವನ್ನ, ಹಂಚಿಕೊಳ್ಳಲು ಕುಳಿತ ಅಮ್ಮನಂತಹ ಪ್ರೀತಿ ಸುರಿವ ಪು.ತಿ.ನ ಅವರ ಮಗಳು ಶಾಂತಾ ರಂಗಾಚಾರ್ ಅವರ ನೆನಪಿನ ಹನಿಗಳಿವೆ ಈ ಪುಟ್ಟ ಬೊಗಸೆಯಲ್ಲಿ.
ನಾವು ಸಪ್ತಕನ್ನಿಕೆಯರು ಮತ್ತು ಒಬ್ಬ ಮಗ ಅಪ್ಪ ಅಮ್ಮನಿಗೆ. ತುಂಬಿದ ಮನೆ ಯಾವಾಗಲೂ ತುಂಬಿಕೊಂಡೇ ಇದ್ದಿದ್ದು ಅಪ್ಪನಿಂದಾಗಿ, ಅವರ ಸಹೃದಯ ಗೆಳೆಯರ ಗುಂಪಿನಿಂದಾಗಿ,ನಾವು ಮಕ್ಕಳ ಚಿಲಿಪಿಲಿಯಿಂದಾಗಿ, ಮನೆ ಮಕ್ಕಳನ್ನು ನಿಭಾಯಿಸಿಕೊಂಡು ಹೋದ ಅಮ್ಮನಿಂದಾಗಿ, ಅಣ್ಣನ ಕಾವ್ಯದ ಅಕ್ಷರ ಅಕ್ಷರದಲ್ಲೂ ಹನಿದು ಸುತ್ತೆಲ್ಲವೂ ಸುಳಿಯುತ್ತಿದ್ದ ಅಪಾರ ಜೀವನಪ್ರೀತಿಯಿಂದಾಗಿ. ಮೊದಲಿಗೆ ಮಿಲಿಟರಿಯಲ್ಲಿ ಸ್ಟೋರ್ಸ್ ನಿರ್ವಹಣೆ ಮಾಡಿಕೊಂಡಿದ್ದ ಅಣ್ಣ, ಸಂಜೆ ಮನೆಗೆ ಬಂದವರು ಹೊರಟುಬಿಡುತ್ತಿದ್ದರು ಚಾಮರಾಜಪೇಟೆಗೆ ಗೆಳೆಯರ ಒಡನಾಟಕ್ಕೆ. ಅಲ್ಲಿ ಜೊತೆಗೂಡುತ್ತಿದ್ದವರು ತೀನಂಶ್ರೀ, ಮಾಸ್ತಿ, ಮತ್ತಿತರರು. ಎಲ್ಲ ಮಾತುಕತೆ ಮುಗಿದು ಅವರು ಹೊರಡುವಾಗ ರಾತ್ರಿ ಸಾಕಷ್ಟಾಗಿರುತ್ತಿತ್ತು. ಬಸ್ಸಿರುತ್ತಿರಲಿಲ್ಲ. ನಡುರಾತ್ರಿಯ ನಡಿಗೆಯಲ್ಲಿ ಕೃಷ್ಣನ ನೆನೆಯುತ್ತ ಮನೆಗೆ ಬರುವ ಅಣ್ಣನ ಕೈಯಲ್ಲಿ ನಾವು ಮಕ್ಕಳಿಗೆಂದು ಯಾವಾಗಲೂ ಕರ್ಚೀಫಿನಲ್ಲಿ ಕಟ್ಟಿ ತಂದ ಪೆಪ್ಪರ್ ಮಿಂಟು, ಬರ್ಫಿಗಳಿರುತ್ತಿದ್ದವು. ಮನೆಯಲ್ಲಿ ಯಾರು ಬಾಗಿಲು ತೆಗೆಯುತ್ತಾರೋ ಅವರಿಗೊಂದು ಬೋನಸ್ ಬರ್ಫಿ, ಅಥವಾ ಪೆಪ್ಪರ್ ಮಿಂಟ್. ಹಾಗಾಗಿ ನಿದ್ದೆಗಣ್ಣಲ್ಲೂ ನಮಗೆ ಪೈಪೋಟಿ ಬಾಗಿಲು ತೆರೆಯಲು. ನಿದ್ದೆಯಲ್ಲಿದ್ದವರಿಗೆ ಬೆಳಿಗ್ಗೆ ಎದ್ದ ಮೇಲೆ ಸಿಗುತ್ತಿತ್ತು.
ಸಂಗೀತವನ್ನ ಶಾಸ್ತ್ರೀಯವಾಗೇನೂ ಕಲಿತಿರದ ಅಣ್ಣ ರಾಗಪ್ರಿಯ. ಅವರು ಬರೆದ ಬಹುಪಾಲು ಹಾಡುಗಳಿಗೆ ಮೊದಲು ರಾಗವನ್ನು ಆರಿಸಿ, ಸಂಯೋಜಿಸಿ, ಆಮೇಲೆ ಗೀತೆಯನ್ನು ಬರೆದಿದ್ದಾರೆ. ಮತ್ತು ಅವರಿಗೆ ಆಯಾ ಹಾಡುಗಳನ್ನು ಅವರು ಆರಿಸಿ ಬರೆದ ರಾಗದಲ್ಲೆ ಹಾಡಿಸುವುದೆಂದರೆ ಅಚ್ಚು ಮೆಚ್ಚು. ಸಾಮಾನ್ಯವಾಗಿ ಅವರು ಬರೆಯುತ್ತಿದ್ದಾಗ ಅಮ್ಮ ನಮ್ಮನ್ನು ಅವರ ರೂಮಿನ ಬಳಿ ಹೋಗಗೊಡುತ್ತಿರಲಿಲ್ಲ. ಅಣ್ಣನಿಗೆ ತೊಂದರೆ ಕೊಡಬಾರದು, ಹೊರಗೆ ದೂರದಲ್ಲಿ ಆಡಿಕೊಳ್ಳಿ, ಗಲಾಟೆ ಮಾಡಬೇಡಿ ಎಂದು ಅವರ ಬರವಣಿಗೆಗೆ ಸದಾ ಅನುಕೂಲಕರ ವಾತಾವರಣ ಕಲ್ಪಿಸುತ್ತಿದ್ದರು ಅಮ್ಮ ಶೇಷಮ್ಮ. ಮನೆಯ ಕೆಲಸ, ಮಕ್ಕಳ ಪಾಲನೆ, ಅಣ್ಣನ ಲಾಲನೆ, ಅತಿಥಿಗಳ ಸತ್ಕಾರ ಎಲ್ಲವನ್ನು ಅಣ್ಣ ಭಲೇ ಎನ್ನುವಂತೆ, ಮೆಚ್ಚುವಂತೆ ನಡೆಸಿ ಅನುಸರಿಸಿಕೊಂಡು ಹೋದವರು ಅಮ್ಮ. ಈ ಸಹಕಾರಕ್ಕೆ ಕೃತಜ್ಞತೆಯಾಗಿ “ಹಂಸದಮನಿಕೆ” ಕೃತಿಯನ್ನ ಅಮ್ಮನಿಗೆ ಅರ್ಪಿಸಿದ್ದು ಹೀಗೆ – ಹಾಡೆಲ್ಲ ನಿನಗಿರಲಿ, ಪಾಡೆಲ್ಲ ನನಗಿರಲಿ, ಎಂದ ನನ್ನ ಬೀಡಿನೊಡತಿಗೆ.. – ಇಷ್ಟು ಸಾಕು ಅವರಿಬ್ಬರ ಅನ್ಯೋನ್ಯ ದಾಂಪತ್ಯದ ಚೆಲುವನ್ನ ವಿವರಿಸಲಿಕ್ಕೆ. ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹೋದಾಗ ತಾವು ಸಭೆಯನ್ನಲಂಕರಿಸುವ ಸಮಯಕ್ಕೆ ಅಮ್ಮನನ್ನೂ ಕೈಹಿಡಿದು ಸಭೆಯಲ್ಲಿ ಕರೆದುಕೊಂಡು ಹೋಗಿ ಜೊತೆಗೆ ಕೂರಿಸಿಕೊಂಡು ಹೊಸಸಂಪ್ರದಾಯಕ್ಕೆ ನಾಂದಿ ಹಾಡಿದವರು ಅವರು. ಕವಿಚೇತನವೊಂದು ಪಲ್ಲವಿಸಿ ಹೂಬಿಡಲು ಅದಕ್ಕೆ ಇಂಬಾಗಿ ನಿಂತ ಬಳ್ಳಿಯಂತ ಮನೆಯೊಡತಿ ಕಾರಣ ಎನ್ನುವುದು ಅವರ ನಿಲುವು.
ನನಗೆ ಎಂಟೋ ಒಂಬತ್ತೋ ವರ್ಷವಿರಬೇಕು. ಆಗ ಅಣ್ಣ ಗೋಕುಲ ನಿರ್ಗಮನ ಬರೆಯುತ್ತಾ ಇದ್ದರು. ಸ್ನೇಹಿತರ ಗುಂಪು ಆಗಾಗ ಮನೆಗೆ ಬರುತ್ತಿದ್ದರು. ಆಗೆಲ್ಲ ಅಣ್ಣ ಮತ್ತು ಅವರ ಗೆಳೆಯರು ಅಲ್ಲಿದ್ದ ದೊಡ್ಡ ರೂಮೊಂದರೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡುಬಿಡುತ್ತಿದ್ದರು. ಅವರಿಗೆಲ್ಲ ತಿಂಡಿ ಕಾಫಿ ಕೊಡುತ್ತಿದ್ದರು ಅಮ್ಮ. ನಾವು ಮಕ್ಕಳು ಈ ಸಹೃದಯ ಕವಿಗೋಷ್ಟಿಯನ್ನ ಪೊಂಗಲ್ ಪುಳಿಯೋಗರೆ ಗೋಷ್ಟಿ ಎಂದು ಕರೆಯುತ್ತಿದ್ದ ನೆನಪು. ಆದರೂ ನಮಗೆಲ್ಲ ಆ ಮುಚ್ಚಿದ ಬಾಗಿಲಿನ ಹಿಂದೆ ಏನು ನಡೆಯುತ್ತಿದೆ ಎಂದು ನೋಡುವ ಕುತೂಹಲ. ಬಾಗಿಲಿಗೆ ಕಿವಿಯಾನಿಸಿ ಕೇಳಿದರೆ ಒಳಗೆ ಸದ್ದೇ ಇರುತ್ತಿರಲಿಲ್ಲ. ಒಮ್ಮೆ ನಾನು ಕುತೂಹಲ ತಡೆಯಲಾರದೆ ಬಾಗಿಲು ದೂಡಿ ಒಳಹೋಗಿಬಿಟ್ಟೆ. ಹತ್ತಿರದಲ್ಲೇ ಕೂತಿದ್ದ ತೀನಂಶ್ರೀಯವರು ನನ್ನ ಕರೆದು ತೊಡೆಯ ಮೇಲೆ ಕೂರಿಸಿಕೊಂಡರು. ನೋಡಿದರೆ ಅಣ್ಣ ಮೆತ್ತಗಿನ ದನಿಯಲ್ಲಿ ಹಾಡುತ್ತಿದ್ದಾರೆ. ಉಳಿದೆಲ್ಲರೂ ಉಸಿರು ಕೂಡ ಕೇಳಿಸದ ಹಾಗೆ ಸುಮ್ಮನೆ ಕುಳಿತು ಆಲಿಸುತ್ತಿದ್ದಾರೆ. ನಾನೂ ಕಿವಿಗೊಟ್ಟೆ. ಕಣ್ಣ ಮುಂದೆ ಗೋಕುಲ,ಗೋವು, ಯಮುನೆ, ನಕ್ಕು ನಲಿವ ಗೋಪಿಯರು, ಚುರುಕಾಗಿ ತಿರುಗುವ ಗೊಲ್ಲರು, ನವಿಲುಗರಿಯ ಸಿಕ್ಕಿಸಿ ಬಿದಿರತುಂಡನೂದುತ ಜಗ ಮರೆಸುವ ಗೋಪಾಲ, ಮಮತೆಯ ಯಶೋದೆ, ಪ್ರೀತಿಯ ರಾಧೆ, ತುಂಟ ಗೊಲ್ಲನ ಕೊಳಲ ಕೇಳುತ ತಲೆಬಾಗುವ ಮರಗಿಡ, ಕಂಪು ಸೂಸುವ ಗಾಳಿ, ಬೆಳದಿಂಗಳು, ನದೀತೀರ, ಎಲ್ಲ ಕಣ್ಮುಂದೆ ಮೂಡಿದವು. ಇವತ್ತಿಗೂ ಹಾಗೇ ಇದೆ ಆ ಮೆತ್ತನೆ ದನಿ ಕಣ್ ಮುಂದೆ ಸೃಷ್ಟಿಸಿದ ಮಾಯಾಲೋಕ. ಅಂದಿನಿಂದ ನಾನು ಕೃಷ್ಣಭಕ್ತೆ.
ಕೃಷ್ಣ ಕುಚೇಲ ಬರೆದ ಮೇಲೆ ಅದನ್ನ ರಂಗದ ಮೇಲೆ ಪ್ರಸ್ತುತಿಪಡಿಸಿದ್ದರು. ಅದರ ರೆಕಾರ್ಡ್ ಇಟ್ಟುಕೊಂಡು ನಾವು ಮಕ್ಕಳು ಬರುವುದನ್ನು ಕಾಯುತ್ತಾ ಇರುತ್ತಿದ್ದರು ಅಣ್ಣ. ಆಗೆಲ್ಲ ನಾವೆಲ್ಲ ಮದುವೆಯಾಗಿ ಬೇರೆ ಬೇರೆ ದೂರದೂರಿನಲ್ಲಿ ಇದ್ದೆವು. ನಾನು ಮನೆಗೆ ಬಂದರೆ ಮುಂದೆಲ್ಲೂ ಹೋಗಲು ಬಿಡದೆ ಇದನ್ನು ಕೇಳಿಕೊಂಡೇ ಹೋಗಬೇಕೆಂದು ಮುಚ್ಚಟೆ ಮಾಡಿ ಕೇಳಿಸಿದ್ದರು. ಅದರ ಹಾಡು ಇಂಪು ಉಲಿಗಳಾಗಿ ಬರುತ್ತಿದ್ದರೆ ಭಲೇ ಭಲೇ, ಭೇಷ್, ತುಂಬ ಚೆನ್ನಾಗಿ ಬಂದಿದೆ ಅನ್ನುತ್ತಾ ಅದರ ಸಾಲು ಸಾಲನ್ನೂ ಅವರು ಸವಿಯುವುದನ್ನ ನೋಡುವುದೇ ಒಂದು ಚಂದ. ಅಷ್ಟಲ್ಲದೆ ಬರೆದರೆ ಅವರು – ಮಾಡುವವನದಲ್ಲ ಹಾಡು, ಹಾಡುವವನದು – ಅಂತ! ಪ್ರತಿಯೊಂದನ್ನೂ ಸವಿದು ನೋಡುವ ಸಹೃದಯತೆ ಮತ್ತು ರಸಪ್ರಜ್ಞೆ ಅಣ್ಣನ ಗುಣವಿಶೇಷ. ಅಚ್ಚುಕಟ್ಟಾದ ಊಟವಿರಲಿ, ಒಂದು ಗರಿಗರಿಯಾದ ಶುಚಿಯಾದ ವಸ್ತ್ರವಿರಲಿ, ವ್ಯಾಕರಣವಿರಲಿ, ಕಾವ್ಯದ ಸಾಲುಗಳಿರಲಿ, ಹಾಡಿರಲಿ ಯಾವುದೇ ಇರಲಿ, ಅದರ ಅಂತರಾಳಕ್ಕೆ ಇಳಿದು ಇಡಿಯಾಗಿ ತಮ್ಮನ್ನು ತೊಡಗಿಸಿಕೊಂಡು, ತಾವುಂಡ ಸವಿಯನ್ನ ಸುತ್ತ ನಾಕು ಜನಕ್ಕೆ ಹಂಚುವ ಅಂತಃಕರಣ ಅವರದ್ದು.
ನಾವು ಎಂಟು ಮಕ್ಕಳಿಗೂ ಅಣ್ಣನೆಂದರೆ ತುಂಬ ಪ್ರೀತಿ. ಮತ್ತೆ ನಮಗೆಲ್ಲರಿಗೂ ಅಣ್ಣ ತನ್ನನ್ನೇ ಜಾಸ್ತಿ ಪ್ರೀತಿಸುವುದು ಎಂಬ ನಂಬಿಕೆ. ಯಾರಿಗೂ ಯಾವತ್ತಿಗೂ ಅಣ್ಣನಿಗೆ ತಾನೆಂದರೆ ಕಡಿಮೆ ಇಷ್ಟ ಅನ್ನಿಸಿದ್ದೇ ಇಲ್ಲ. ಎಲ್ಲರಲ್ಲೂ ಅವರದ್ದು ನಿರ್ವ್ಯಾಜ್ಯ ಪ್ರೀತಿ. ಯಾರೋ ಹೂವು ಮಾರುವ ಹುಡುಗಿಯೋ, ತರಕಾರಿಯ ಹೆಂಗುಸೋ, ಅಥವಾ ಇನ್ಯಾರೋ ಮೊಸರಿನವನೋ ಬಂದರೆ ಅಣ್ಣ ಅಮ್ಮನನ್ನು ಕರೆದು ಪಾಪ ಬಿಸಿಲಿನಲ್ಲಿ ತಿರುಗುತ್ತಾರೆ, ಏನು ಕಷ್ಟವೋ ಏನೋ ಏನಾದರೂ ಕುಡಿಯಲು ಕೊಡು ಎನ್ನುತ್ತಿದ್ದರು. ಇರುವವರಿಗೆ ಕೊಡುವುದೇನೂ ದೊಡ್ಡದಲ್ಲ. ಇಲ್ಲದಿರೋರಿಗೆ ಕೊಡಬೇಕು ಅನ್ನುತ್ತಿದ್ದರು. ಹಿಂಸೆ, ಅನುಮಾನ, ಬೇರೆಯವರೊಡನೆ ಕಿತ್ತಾಟವೆಂದರೆ ಅಣ್ಣನಿಗೆ ಆಗದು. ಎಲ್ಲರಲ್ಲೂ ಪ್ರೀತಿ ಅವರ ಒಲವು. ಓರಿಗೆಯ ಸಾಹಿತಿಗಳೆಲ್ಲರೊಡನೆ ಅವರ ನವಿರು ಸ್ನೇಹದ ಸಂಬಂಧವಿತ್ತು. ತೀನಂಶ್ರೀಯವರನ್ನು ನನ್ನ ಕವಿತೆಗಳ ಸಾಕುತಾಯಿ ಎಂದು ಕರೆದಿದ್ದಾರೆ.ಅಣ್ಣ ತನ್ನ ಬರಹದ ಬಗ್ಗೆ ತಾನೇ ಹೇಳಿಕೊಳ್ಳಲು ಸಂಕೋಚಪಡುತ್ತಿದ್ದರು. ತೀನಂಶ್ರೀಯವರು ಮುಂದೆ ನಿಂತು ಅಣ್ಣನ ಬರಹಗಳನ್ನ ಬೆಳಕಿಗೆ ತಂದವರು. ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು.
ಅಣ್ಣನಿಗೆ ಮೈಸೂರೆಂದರೆ ಇಷ್ಟ. ಅಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕೆಲಕಾಲ ವಿಶ್ವಕೋಶ ಮತ್ತು ಕನ್ನಡ ನಿಘಂಟಿಗೆ ಸಂಬಂಧ ಪಟ್ಟ ಕೆಲಸ ಮಾಡಿದ್ದರು. ಅಲ್ಲಿನ ಮಾನಸಗಂಗೋತ್ರಿಯಲ್ಲಿರುವ ದೊಡ್ಡದೊಂದು ಆಲದ ಮರವೆಂದರೆ ಅವರಿಗೆ ವಿಶೇಷ ಪ್ರೀತಿ. ನಾವೆಲ್ಲ ಮೈಸೂರಿಗೆ ಅವರನ್ನು ನೋಡಲು ಹೋದರೆ ಸಂಜೆ ಜಯಲಕ್ಷ್ಮೀಪುರದ ಮನೆಯಿಂದ ಅಲ್ಲಿಯವರೆಗೆ ವಾಕಿಂಗ್ ಕರೆದುಕೊಂಡು ಹೋಗಿ, ಮರದ ಕೆಳಗೆ ಕೂರಿಸಿ, ಸುಮ್ಮನೆ ಕೂತು ಕೇಳಿ ಅನ್ನುತ್ತಿದ್ದರು. ಅವರಿಗೆ ಅಲ್ಲಿ ಹರಿದ್ವಾರದಲ್ಲಿ ಗಂಗೆ ಹರಿಯುವ ಜುಳುಜುಳು ನಾದ ಕೇಳುತ್ತಿತ್ತಂತೆ ಆ ಮರದ ಕೆಳಗೆ!
ಅಣ್ಣನೊಡನೆ ವಾಕಿಂಗ್ ಹೋಗುವುದೇ ಒಂದು ಆಪ್ತ ಅನುಭವ. ಕತೆ, ಸುದ್ದಿ, ವಿಜ್ಞಾನ ವಿಶೇಷ, ರಾಗ ವಿಸ್ತಾರ, ಎಲ್ಲ ಕೂಡಿದ ಒಟ್ಟಂದ ಅವರ ಜತೆಗೆ ಹೋಗುವುದು. ಅವರು ಬೆಂಗಳೂರಿನ ಜಯನಗರದಲ್ಲಿ ಮನೆ ಮಾಡಿದ ಮೇಲೆ, ಸಂಜೆ ಸಾಕಷ್ಟು ದೂರ ವಾಕಿಂಗ್ ಹೋಗುತ್ತಿದ್ದರು. ಅಲ್ಲೊಂದು ಕಡೆ ನಿಂತರೆ ಕೋದಂಡರಾಮನ ದೇವಸ್ಥಾನದ ಗೋಪುರ ಕಾಣುತ್ತಿತ್ತು. ಗೋಕುಲನಿರ್ಗಮನದ ಕವಿ ಅಲ್ಲಿಂದಲೇ ಗೋಪುರನಮನ ಮಾಡುತ್ತಿದ್ದರು. ತೀರಾ ಕೊನೆಗೆ ಕಣ್ಣು ಅಷ್ಟು ಸರಿಯಾಗಿ ಕಾಣಿಸದಿದ್ದರೂ ಅವರಿಗೆ ಆ ಜಾಗಕ್ಕೆ ಬಂದೊಡನೆಯೇ ಗೋಪುರ ಕಾಣಿಸುತ್ತಿದೆ ಅಂತ ಗೊತ್ತಾಗಿಬಿಡುತ್ತಿತ್ತು. ಜತೆಯಲ್ಲಿದ್ದ ನಾವು ಯಾರನ್ನಾದರೂ ಕೇಳಿಕೊಂಡು ನಮಸ್ಕಾರ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ.
ಇವರ ಈ ದೈವಪ್ರೀತಿ, ಸಾಂಪ್ರದಾಯಿಕ ನಡವಳಿಕೆ, ವಸ್ತ್ರಾಲಂಕಾರಗಳು, ಹಳೆಯ ಕಥಾ ಸಾಗರದೆಡೆಗಿನ ಒಲವು ಇದನ್ನೆಲ್ಲ ನೋಡಿ, ಇವರು ಬರೀ ಸಾಂಪ್ರದಾಯಿಕ ಮನೋಭಾವದವರು ಎಂದು ಮಾತ್ರ ಭಾವಿಸಬಾರದು. ವೈಜ್ಞಾನಿಕ ಮನೋಭಾವನೆ, ಹೊಸ ಸಂಶೋಧನೆಗಳಲ್ಲಿ ಆಸಕ್ತಿ, ಕಾಲಕ್ಕೆ ತಕ್ಕಂತೆ ನಡೆಯಬೇಕಿರುವ ಸಾಮಾಜಿಕ ಬದಲಾವಣೆ ಎಲ್ಲದರ ಬಗೆಗೆ ತುಂಬ ಸಹಜ ಒಲವು ಇವರದು. ಒಮ್ಮೆ ಪೂನಾದಲ್ಲಿದ್ದ ನಮ್ಮನೆಗೆ ಬಂದಿದ್ದರು. ನಮ್ಮನೆಯವರಿಗೆ ಆಗ ತುಂಬ ಕೆಲಸವಿತ್ತು. ಮನೆಯಲ್ಲಿ ಪೂಜೆಗೆ ಇದ್ದಿದ್ದು ಸಾಲಿಗ್ರಾಮ. ನಾನು, ಹೆಣ್ಣುಮಕ್ಕಳು ಸಾಲಿಗ್ರಾಮ ಮುಟ್ಟಬಾರದು ಎಂದು ಸುಮ್ಮನಿದ್ದುಬಿಡುತ್ತಿದ್ದೆ. ಅವರಿಗೆ ಸಮಯವಿರುತ್ತಿರಲಿಲ್ಲ, ನಿತ್ಯ ಪೂಜೆ ನಡೆಯುತ್ತಿರಲಿಲ್ಲ. ಅಣ್ಣ ಬಂದವರು ಪೂಜೆಗೆ ಕೂತಾಗ ಧೂಳಾದ ಸಾಲಿಗ್ರಾಮ ನೋಡಿ ವಿಚಾರಿಸಿದರು. ನಾನು ವಿವರಿಸಿದಾಗ ನೊಂದುಕೊಂಡರು. ಎಂತಹ ಯೋಚನೆ ಇದು. ಎಲ್ಲ ಮೈಲಿಗೆಯನ್ನೂ ಕಳೆವ ದೇವರಿಗೆಂತಹ ಮೈಲಿಗೆ, ಎಲ್ಲವನ್ನು ಪುನೀತಗೊಳಿಸುವ ದೇವರನ್ನು ಅಪವಿತ್ರಗೊಳಿಸುವುದು ಯಾರು? ಮನೆಯನ್ನೂ ಮನವನ್ನೂ ಸದಾ ಶುಚಿಯಾಗಿಟ್ಟುಕೊಳ್ಳುವುದೇ ಪೂಜೆ. ಹೆಣ್ಣು ಎಂದು ಹಿಂದೆಗೆಯಬಾರದು ಎಂದು ಹೇಳಿದ್ದರು.
ವಾಕಿಂಗಿನಲ್ಲಿ ಇಂದುಮತೀ ಪರಿಣಯದಂತಹ ರಮ್ಯ ಪುರಾಣ ಕತೆಗಳನ್ನು ಇನ್ನಷ್ಟು ರಮ್ಯ ವಿವರಣೆಗಳೊಂದಿಗೆ ಹೇಳಿ ಮನತಣಿಸುವ ಅಣ್ಣ, ಆಗಷ್ಟೇ ನಡೆದಿದ್ದ ಚಂದ್ರಯಾನವನ್ನೂ ವರ್ಣಿಸುತ್ತಿದ್ದರು. ಸಂಸ್ಕೃತಿ ಮತ್ತು ವಿಜ್ಞಾನ ಅವರ ಭಾವದ ಹೊಳೆಯಲ್ಲಿ ಮಿಂದು ಚೆಲುವಾಗಿ ಹೊಳೆಯುತ್ತಿದ್ದವು. ಇಂತಹ ಭಾವಸರಸ್ಸಿನಿಂದಲೇ ಮೂಡಿಬಂದಿದ್ದು – ಪಯಣಿಗರ ಹಾಡು – ಹೋಗೋಣ ಗುಡಿಯಾಚೆ ಗಡಿಯಾಚೆ.. ಎಲ್ಲ ದಾಟಿದ ಹಾದಿಯಲ್ಲಿ ಎಂಬಂತಹ ಕವಿತೆ.
ನಾನು ಚಿಕ್ಕವಳಿರುವಾಗ ಅಣ್ಣ ನನ್ನ ಹತ್ತಿರ ಸಚಿತ್ರ ಭಾಗವತದ ಕುಚೇಲೋಪಾಖ್ಯಾನವನ್ನ ಮತ್ತೆ ಮತ್ತೆ ಓದಿಸಿ ಕೇಳಿ ಖುಷಿ ಪಡುತ್ತಿದ್ದರು. ಆ ಭಾಗದಲ್ಲಿ ಮನೆಗೆ ಬಂದ ಕುಚೇಲನಿಗೆ ಕೃಷ್ಣ ಬಡಿಸುವ ಊಟದ ರುಚಿಯಾದ ವಿವರಗಳಿವೆ. ಎಲ್ಲ ಬಗೆಯ ಅಡುಗೆ, ವಿಶೇಷ ಖಾದ್ಯಗಳನ್ನು ಅಲ್ಲಿ ಪಟ್ಟಿ ಮಾಡಿದ್ದಾರೆ. ನಾನು ಓದುತ್ತಿದ್ದರೆ ಅಣ್ಣ ತಾವೇ ತಿನ್ನುತ್ತಿದ್ದಾರೋ ಎಂಬಂತೆ ಆಹಾಹ.. ಓಹೋಹೋ, ಭಲೆ ರುಚಿ ಎಂದೆಲ್ಲ ಉದ್ಗರಿಸುತ್ತಾ ಮತ್ತೆ ಮತ್ತೆ ಓದಿಸುತ್ತಿದ್ದರು. ಮುಂದೆ ಅಣ್ಣ ಬರೆದ ಕೃಷ್ಣ ಕುಚೇಲ ನೃತ್ಯರೂಪಕವನ್ನು ಇತ್ತೀಚೆಗೆ ನೋಡಿದಾಗ ಈ ನೆನಪು ತೀವ್ರವಾಗಿ ಬಂತು. ಅವರ ಮನಸ್ಸಿನಲ್ಲಿ ಅಂದು ಏಳುತ್ತಿದ್ದ ರಸಭಾವಗಳೇ ಮುಂದೆ ಹೀಗೆ ಅವರ ಕೃತಿಯಲ್ಲಿ ಮೂಡಿಬಂದ ಪರಿ ನನ್ನನ್ನು ಅಚ್ಚರಿಯ ಮೆಚ್ಚುಗೆಯಲ್ಲಿ ತೇಲಿಸಿತು.
ಅಣ್ಣನ ಚೈತನ್ಯದ ಬಗ್ಗೆ ಎಷ್ಟು ಹೇಳಿದರೂ ಸಾಲದೆನ್ನಿಸುತ್ತದೆ. ನಾವು ಎಲ್ಲ ಮಕ್ಕಳಿಗೂ ಅಣ್ಣನೆಂದರೆ ತುಂಬ ಅಭಿಮಾನ. ಇಂತಹವರ ಹೊಟ್ಟೆಯಲ್ಲಿ ಹುಟ್ಟಿ ಪಾವನರಾದೆವೆಂಬ ನಮ್ರ ಅಭಿಮಾನ. ಅವರ ಮಧುರ ಒಡನಾಟ ಮೆದ್ದ ವಿನೀತ ಸಂಭ್ರಮ. ನಿಲ್ಲಿಸದಿರು ವನಮಾಲೀ ಮಧುರ ಗಾನವಾ, ನಿಲ್ಲಿಸೆ ನೀ ಮರೆವುದೆಂತು ಭವಭೀತಿಯ ಕ್ಲೇಶವಾ! ಎಂದು ಬರೆದ ಅಣ್ಣನ ನೆನಪು ಮನದಲ್ಲಿ ಸದಾ ಅನುರಣಿಸುತ್ತಿರುತ್ತದೆ. ಇಂದು ಅವರ ಪ್ರೀತಿಯ ವೈರಮುಡಿ ಉತ್ಸವ ಮೇಲುಕೋಟೆಯಲ್ಲಿ. ಅವರ ಜನ್ಮದಿನಾಂಕ ಮತ್ತು ಜನ್ಮನಕ್ಷತ್ರ ಕೂಡಾ. ಈ ಬರಹ ಅವರ ದಿವ್ಯ ಚೇತನಕ್ಕೆ ನಾವು ಎಲ್ಲ ಮಕ್ಕಳ ಶ್ರದ್ಧಾಂಜಲಿ. ಕಣ್ಣ ಕೊನೆಗೆ ಹೊಳೆಯುತ್ತಿರುವ ಹನಿಯ ಬಾಷ್ಪಾಂಜಲಿ.
-ಮಳೆಯ ಸಂಜೆಯಲ್ಲಿ, ಬೆಚ್ಚಗೆ ಕರೆದು ಕೂರಿಸಿ, ಪುಟ್ಟ ದೀಪದ ಮಿನುಗಿನಲ್ಲಿ ತನ್ನ ಪ್ರೀತಿಯ ತಂದೆಯವರ ನೆನಪನ್ನು ಹಂಚಿಕೊಂಡ ಶಾಂತಾ ಮತ್ತು ಕುಟುಂಬದವರಿಗೆ ಕೆಂಡಸಂಪಿಗೆಯ ಕೃತಜ್ಞತೆ. ಶಾಂತಾ ಅವರು ಷಿಲಾಂಗ್ ನಲ್ಲಿ ೨೮ ವರ್ಷಗಳಿಂದ ಕನ್ನಡ ಸಂಘವನ್ನು ನಡೆಸಿಕೊಂಡು ಬಂದ ಅಪರೂಪದ ಕನ್ನಡತಿ. ಅಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದ ಎಲ್ಲ ಕನ್ನಡಿಗರ ಪ್ರೀತಿಯ ಅಮ್ಮ, ಸುತ್ತಲ ಸಮುದಾಯಕ್ಕೆ ಸಹಾಯ ಹಸ್ತ. ಇತ್ತೀಚೆಗೆ ಷಿಲಾಂಗ್ ಬಿಟ್ಟು ಕೆಲತಿಂಗಳಿನಿಂದ ಬೆಂಗಳೂರಿನಲ್ಲಿ ತನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಒಡನಾಟದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಚಟುವಟಿಕೆಯ ಆಪ್ತ ಜೀವವನ್ನು ನೋಡಿದರೆ ಪು.ತಿ.ನ. ಅವರೇ ಬರೆದ ಸ್ಥವಿರ ಗಿರಿಯ ಚಲನದಾಸೆ, ಮೂಕವನದ ಗೀತದಾಸೆಯಾದ ಹೊನಲರಾಣಿಯ ನೆನಪಾಗುತ್ತದೆ.
ಹುಟ್ಟಿದ್ದು ಶಿವಮೊಗ್ಗದ ಸಾಗರದಲ್ಲಿ. ವೆಬ್ ಡಿಸೈನಿಂಗ್ ಡಿಪ್ಲೊಮಾ ಮತ್ತು ಇಂಗ್ಲಿಷ್ ಎಂ.ಎ ಮಾಡಿ, ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ, ತರಬೇತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ