ಕೊಡಗಿನ ಅತಿ ಎತ್ತರದ ಶಿಖರ ತಡಿಯಂಡಮೋಳು ಪರ್ವತದ ತಪ್ಪಲಲ್ಲಿ `ಬಕ್ಕತಕೊಲ್ಲಿ’ ಎಂಬ ಬಾಣೆಯೊಂದಿದೆ. ಈ ಹುಲ್ಲುಗಾವಲು ಎಷ್ಟು ಚೆಂದವಿದೆ ಅಂದರೆ ಇದನ್ನು ನೀವು ದೇವತೆಗಳು ಭೂಮಿಯಲ್ಲಿ ನಡೆದಾಡಿಕೊಂಡಿರಲು ಆಯ್ದುಕೊಂಡಿರುವ ಜಾಗಗಳಲ್ಲಿ ಒಂದು ಜಾಗ ಎಂದು ಆರಾಮವಾಗಿ ಅಂದುಕೊಳ್ಳಬಹುದು. ಕೊಡಗಿನ ಬಹುತೇಕ ಬಾಣೆಗಳು, ಕಾಡುಗಳು, ಕೊಲ್ಲಿಗಳು, ಗದ್ದೆ ಬಯಲುಗಳು ಈಗಲೂ ದೇವಾನುದೇವತೆಗಳು ನಡೆದು ಹೋಗುವ ಜಾಗಗಳು ಎಂದೇ ಕರೆಯಲ್ಪಡುತ್ತವೆ. ಮನೆಕಟ್ಟುವಾಗ, ತೋಟಮಾಡುವಾಗ, ಕೆರೆ ತೋಡುವಾಗ ಈಗಲೂ ಮಲಯಾಳೀ ಮಂತ್ರವಾದಿಗಳು ಬಂದು ದೇವತೆಗಳು ನಡೆದುಹೋಗುವ ಜಾಗಗಳನ್ನು ತೋರಿಸಿಕೊಡುತ್ತಾರೆ. ದೇವತೆಗಳನ್ನು ಅವರ ಪಾಡಿಗೆ ನಡೆದು ಹೋಗಲು ಅನುವು ಮಾಡಿಕೊಟ್ಟು ಅವುಗಳ ಗಾಳಿ ತಾಗದ ಜಾಗಗಳಲ್ಲಿ ಮಾನವನ ವಾಸ್ತವ್ಯ ಮತ್ತು ಹೊಟ್ಟೆಪಾಡಿನ ಚಟುವಟಿಕೆಗಳು ನಡೆಯುತ್ತವೆ.
ಈ ‘ಬಕ್ಕತಕೊಲ್ಲಿ’ ಎಂಬ ಬಾಣೆಯಿಂದ ತಡಿಯಂಡಮೋಳು ಶಿಖರ ವರ್ಷದ ಬಹುತೇಕ ಸಮಯ ಕಾಣಿಸುವುದಿಲ್ಲ. ಮಳೆ, ಮೋಡ, ಮಂಜು ಇವುಗಳ ತೆರೆಯ ಹಿಂದೆ ಕಾಣಿಸದ ಹಾಗೆ ಇದ್ದುಬಿಡುತ್ತದೆ. ಕಾಣಿಸಿದಾಗ ಅದೊಂದು ಅಚ್ಚರಿ. ಒಂದು ರೀತಿಯ ಸಾಕ್ಷಾತ್ಕಾರ. ತಡಿಯಂಡಮೋಳು ಮಂಜು ಮೋಡಗಳ ಎಡೆಯಿಂದ ಇದ್ದಕ್ಕಿದ್ದಂತೆ ಕಾಣಿಸಿಕೊಂಡಾಗ ಇಷ್ಟುಹೊತ್ತು ಇಲ್ಲಿ ಪರ್ವತವೊಂದು ನಮಗೆ ಕಾಣಿಸದೆ ಇತ್ತು ಎಂದು ನಂಬಲಾಗುವುದೇ ಇಲ್ಲ. ಕಕ್ಕಬೆಯಿಂದ ಬಕ್ಕತಕೊಲ್ಲಿಯ ಮಲೆಯದಾರಿ ತೊಡಗುವಲ್ಲಿ ನಮ್ಮ ಕುಡಿಯರ ತಮ್ಮಯ್ಯನವರ ಬಿಡಾರ ಇದೆ.ಹುಡುಗನಾಗಿದ್ದಾಗ ಮನುಷ್ಯರನ್ನು ಕಂಡು ಮರಗಳ ಮರೆಯಲ್ಲಿ ಅಡಗಿಕೊಳ್ಳುತ್ತಿದ್ದ ತಮ್ಮಯ್ಯನವರಿಗೆ ಈಗ ಅರವತ್ತು ದಾಟಿದೆ. ತಮ್ಮಯ್ಯನವರ ಹೆಂಡತಿ ಜಾನಕಿ ಕಕ್ಕಬೆ ಮಂಡಲ ಪಂಚಾಯಿತಿ ಸದಸ್ಯೆ ಆಗಿದ್ದವರು.ಕಾಡಿನ ಸೆರಗಿನ ಬಡವರ ಗುಡಿಸಿಲಿನಂತಹ ಇವರ ಬಿಡಾರ ತಡಿಯಂಡಮೋಳು ಪರ್ವತವನ್ನು ಹತ್ತಿ ಇಳಿಯುವ ಚಾರಣಿಗರಲ್ಲಿ ಬಲು ಜನಪ್ರಿಯವಾಗಿದೆ.
ತಮ್ಮಯ್ಯ ಹುಟ್ಟಿದ್ದು ತಡಿಯಂಡಮೋಳು ಶಿಖರದ ಆಚೆ ಬದಿಯ ‘ಕೋಲೇಂದುಮಲೆ’ಯಲ್ಲಿ. ಈ ಕೋಲೇಂದು ಮಲೆಯಲ್ಲಿ ಬೈನೆಮರದ ಸೇಂದಿ ಮಾರಿ, ಬೈನೆಮರದ ಹಿಟ್ಟಿನಿಂದ ಮಾಡಿದ ರೊಟ್ಟಿ ತಿಂದು, ಅದು ಇಲ್ಲದಾಗ ಬಿದಿರಿನ ಅಕ್ಕಿಯ ಗಂಜಿ ಕುಡಿದು, ಅದೂ ಇಲ್ಲದಾಗ ಸಣ್ಣ ಪುಟ್ಟ ಪ್ರಾಣಿಗಳನ್ನು ಬಲೆಬೀಸಿ ಹಿಡಿದು ತಂದು, ಜಮ್ಮಾಮಲೆಗಳಲ್ಲಿ, ಏಲಕ್ಕಿ ತೋಟಗಳಲ್ಲಿ ದುಡಿದು, ಕಾಡುಗೆಣಸು ಅಗೆದು ತಿಂದು ಬದುಕುತ್ತಿದ್ದ ತಮ್ಮಯ್ಯ ತನ್ನ ಸಣ್ಣ ವಯಸ್ಸಿನಲ್ಲಿ ಮಲೆಯನ್ನು ಬಿಟ್ಟು ಊರಿಗೆ ಬಂದರು. `ಬೈನೆ ಮರ ಹತ್ತಬೇಡಿ, ವಿದ್ಯಾಭ್ಯಾಸ ಮಾಡಿ’ ಎಂಬ ಸರಕಾರದ ಯೋಜನೆಯಿಂದಾಗಿ ಕಾಡಲ್ಲಿ ಬದುಕುತ್ತಿದ್ದ ತಮ್ಮಯ್ಯ ಎಂಬ ಈ ಬಾಲಕನ ಕುಟುಂಬ ಊರಿನ ಸೆರಗಿಗೆ ಬರಬೇಕಾಯಿತು. ಊರಿಗೆ ಬಂದು ಶಾಲೆ ಕಲಿಯಬೇಕಾಯಿತು. ಆಮೇಲೆ ಅವರಿವರ ಬಳಿ ಕೂಲಿ ಕೆಲಸ ಮಾಡಬೇಕಾಯಿತು. ಆಮೇಲೆ ಸರಕಾರದವರು ಇವರನ್ನೇ ಕಾಡಿನ ಅಳತೆ ಮಾಡಲು, ಬೆಂಕಿ ಆರಿಸಲು ಬಳಸಿಕೊಂಡರು.
ತನ್ನ ತಮ್ಮ ತಂಗಿಯರ ಮದುವೆ, ಹೆತ್ತವರ ಕಾಯಿಲೆ ಅಂತೆಲ್ಲಾ ಬಹುಕಾಲ ಕಳೆದ ತಮ್ಮಯ್ಯನಿಗೆ ಮದುವೆ ಆಗಲು ಸಾಧ್ಯ ಆಗಿದ್ದು ತನ್ನ ನಲವತ್ತನೇ ವರ್ಷದಲ್ಲಿ. ತಮ್ಮಯ್ಯ ಕನ್ನಡದ ಒಂದೊಂದೇ ಅಕ್ಷರಗಳನ್ನು ನೆನಪುಮಾಡಿಕೊಂಡು ಓದಲು ಕಲಿತಿದ್ದಾರೆ. ಮಗಳ ಕೈಯಿಂದ ಮನೆಯ ಮುಂದೆ ತಮ್ಮ ಹೆಸರಿರುವ ಬೋರ್ಡನ್ನು ಬರೆಸಿದ್ದಾರೆ. ತನ್ನ ಗುಡಿಸಲಿನಂತಹ ಬಿಡಾರದಲ್ಲಿ ದೇಶವಿದೇಶಗಳ ಚಾರಣಿಗರಿಗೆ ಮಲಗಲು ಜಾಗ ಕೊಡುತ್ತಾರೆ. ಮನೆಯ ಮುಂದಿನ ಹಸಿರು ಬಯಲಿನಲ್ಲಿ ಚಳಿಗೆ ಬೆಂಕಿ ಹಾಕಿ ಕೊಡುತ್ತಾರೆ. ಸಸ್ಯಾಹಾರಿ, ಮಾಂಸಾಹಾರಿ ಏನು ಬೇಕೋ ಅದನ್ನು ಮಾಡಿಕೊಡುತ್ತಾರೆ. ದರದ ಪಟ್ಟಿ ಕೇಳಿದರೆ ನೀವೇ ಯೋಚನೆ ಮಾಡಿಕೊಡಿ ಅನ್ನುತ್ತಾರೆ. ಕೊಟ್ಟದ್ದನ್ನು ಇಸಿದುಕೊಳ್ಳುತ್ತಾರೆ. ದೊಡ್ಡದಾಗಿ ನಗುತ್ತಾರೆ. ಮಾಡಿದ್ದು, ಬಡಿಸಿದ್ದು, ಹಾಸಿದ್ದು ಇತ್ಯಾದಿ ಸರಿಯಾಗಿದೆಯೋ ಇಲ್ಲವೋ ಎಂದು ಆತಂಕಪಡುತ್ತಾರೆ. ತಮ್ಮಯ್ಯನವರಿಗೆ ಸದಾ ಒಂದು ಹೆದರಿಕೆ ಜೊತೆಯಲ್ಲಿ ಇರುತ್ತದೆ.
‘ಸಾರ್ ದಿನಾ ನೂರಾರು ಜನ ತಡಿಯಂಡಮೋಳು ಪರ್ವತ ಹತ್ತುತ್ತಾರೆ. ಇಳಿಯುತ್ತಾರೆ. ಇವರಲ್ಲಿ ಒಳ್ಳೆಯವರು ಯಾರು ಕೆಟ್ಟವರು ಯಾರು ಎಂದು ಗೊತ್ತಾಗುವುದು ಹೇಗೆ ಸಾರ್ ಯಾರಾದರೂ ಕೆಟ್ಟವರು ಅಲ್ಲೇ ಉಳಿದುಕೊಂಡರೆ ಏನು ಮಾಡುವುದು ಸಾರ್’ – ಎಂದು ನಮ್ಮನ್ನೇ ಕೇಳುತ್ತಾರೆ. ‘ಕೆಟ್ಟವರು ಅಂದರೆ ಯಾರು ತಮ್ಮಯ್ಯನವರೇ’ ಎಂದು ನಾವು ಅಮಾಯಕರಂತೆ ಕೇಳಿದರೆ, ‘ಅದೇ ಸಾರ್ ರೇಡಿಯೋದಲ್ಲಿ ಹೇಳ್ತಾ ಇರ್ತಾರಲ್ಲ ಟೆರರಿಸ್ಟ್ ಗಳು ಅಂತಾರಲ್ಲ ಅವರು ಬಂದರೆ ಏನು ಮಾಡುವುದು ಸಾರ್.’ ತಮ್ಮಯ್ಯ ಅರ್ಧ ಹೆದರಿಕೆಯಲ್ಲಿ ಅರ್ಧ ಕುತೂಹಲದಲ್ಲಿ ಪುನಃ ಕೇಳುತ್ತಾರೆ.
“ಟೆರರಿಸ್ಟುಗಳು ಅಂದರೆ ಏನು ತಮ್ಮಯ್ಯನವರೇ” ಎಂದು ಕೇಳಿದರೆ, “ಅದೇ ಸಾರ್.. ಭಯೋತ್ಪಾದಕರು ಅಂತಾರಲ್ಲಾ ಸಾರ್. ಅವರ ಮುಖ ಹೇಗಿರುತ್ತದೆ ಸಾರ್?” ಅಂತ ಪದಗಳಿಗೆ ಹುಡುಕುತ್ತಾ ಕೇಳುತ್ತಾರೆ. ‘ಅವರ ಮುಖವೂ, ಕಣ್ಣೂ, ಮೂಗೂ, ಎಲ್ಲವೂ ನಮ್ಮ ಹಾಗೆಯೇ ಇರುತ್ತವೆ. ಆದರೆ ಅವರ ಮಿದುಳೊಳಗೆ ಬೇರೆ ಬೇರೆ ತರಹದ ಕೆಟ್ಟ ಯೋಚನೆಗಳೂ, ಯೋಜನೆಗಳೂ ಇರುತ್ತವೆ ತಮ್ಮಯ್ಯನವರೇ. ಹೆದರಬೇಡಿ. ಬೆಟ್ಟದ ಮೇಲೆ ಇಗ್ಗುತಪ್ಪ ದೇವರಿದ್ದಾನೆ. ಆತನೇ ನಮ್ಮೆಲ್ಲರನ್ನೂ ಕಾಪಾಡುತ್ತಾನೆ” ಎಂದು ದೈರ್ಯ ಹೇಳುತ್ತೇನೆ. ತಡಿಯಂಡಮೋಳು ತಪ್ಪಲಿನಲ್ಲಿ ಕೊಡಗಿನ ಅರಸರ ಅರಮನೆಯೊಂದಿದೆ. ಕೊಡಗಿನ ಅರಸ ದೊಡ್ಡ ವೀರರಾಜ ವೈರಿಗಳಿಂದ ಅಡಗಿಕೊಳ್ಳಲು ಅರಮನೆಯನ್ನು ಬಳಸಿಕೊಳ್ಳುತ್ತಿದ್ದನಂತೆ. ಅರಮನೆಯನ್ನು ಕಾಯಲು, ವೈರಿಗಳ ತಲೆ ಕಡಿಯಲು ಈತ ಕೇರಳದ ಕಡೆಯ ಕಾಪಾಳರು ಎಂಬ ಕಾಡು ಜನಾಂಗದ ಎರಡು ಕುಟುಂಬವನ್ನು ಇಲ್ಲಿ ಕರೆ ತಂದ. ಅವರಿಗೆ ಅರಮನೆಯ ಪಕ್ಕದಲ್ಲೇ ಭೂಮಿಯನ್ನೂ ನೀಡಿದ. ಈ ಕಾಪಾಳರು ಈಗ ಮೈಮೇಲೆ ದೇವರು ಬಂದಾಗ ಮಾತ್ರ ಮಲಯಾಳದಲ್ಲಿ ಮಾತನಾಡುತ್ತಾರೆ. ಉಳಿದಂತೆ ಅವರಿಗೆ ಯಾವುದೇ ನೆನಪುಗಳಿಲ್ಲ.
ಕಾಪಾಳರಿಗೆ ನೆನಪಿರುವ ಇನ್ನೊಂದು ಕತೆ ಇಲ್ಲಿರುವ ಜಲಪಾತವೊಂದರ ಕುರಿತು. ಈ ಜಲಪಾತವನ್ನು ಹಣದ ಜಲಪಾತ ಎನ್ನುತ್ತಾರೆ. ಕಾಫಿತೋಟವೊಂದರ ನಡುವೆ ಕಂಡೂ ಕಾಣಿಸದಂತಿರುವ ಈ ಜಲಪಾತದ ಮುಂದೆ ‘ಡ್ರಿಂಕಿಂಗ್ ವಾಟರ್’ ಎಂದು ಬರೆದಿರುವ ಮರದ ಹಲಗೆಯ ಫಲಕವೊಂದು ನೇತು ಬಿದ್ದಿದೆ. ಹಿಂದೆ ಕೊಡಗಿನ ಅರಸರು ವೈರಿಗಳ ಕೈಯಿಂದ ಚಿನ್ನ ಬಚ್ಚಿಟ್ಟುಕೊಳ್ಳಲು ಈ ಜಲಪಾತದ ತುದಿಯ ಬಂಡೆಯ ಬುಡವನ್ನು ಆಯ್ದುಕೊಂಡರಂತೆ. ಚಿನ್ನವನ್ನು ಹೊತ್ತು ಸಾಗಿಸಿ ಅಡಗಿಸಿಡಲು ಇಬ್ಬರು ಕಾಡು ಕಾಪಾಳರು ಸಹಾಯ ಮಾಡಿದರಂತೆ. ಅವರು ಚಿನ್ನವನ್ನು ಬಂಡೆಯ ಬುಡದಲ್ಲಿ ಅಡಗಿಸಿಟ್ಟು ಮೇಲೆ ಬರುತ್ತಿರುವಾಗ ಅರಸರು ಅವರ ತಲೆಯನ್ನು ಕಡಿದು ಜಲಪಾತದ ಮೇಲಿಂದ ಕೆಳಕ್ಕೆ ಉರುಳಿಸಿದರಂತೆ.
ಈ ಕತೆಯನ್ನು ಹೇಳಿದ ಕಾಪಾಳರ ಯುವಕನೊಬ್ಬ ಹಳೆಯ ಅರ್ಜಿಯೊಂದರ ನಕಲು ಪ್ರತಿಯನ್ನು ತೋರಿಸಿದ. ಮಸುಕು ಮಸುಕಾಗಿ ಹರಿಯುವಂತೆ ಇದ್ದ ಆ ಅರ್ಜಿಯಲ್ಲಿ ಆ ಕಾಪಾಳರ ಯುವಕ ತನ್ನ ಜನಾಂಗವನ್ನು ಒಂದೋ ಪರಿಶಿಷ್ಟ ಜಾತಿಗೆ ಇಲ್ಲವಾದರೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಬರೆದಿದ್ದ. ಈ ಕುರಿತು ಸರಕಾರವನ್ನು ದಯವಿಟ್ಟು ಒತ್ತಾಯಿಸಬೇಕು ಎಂದು ನಮ್ಮನ್ನು ಕೇಳಿಕೊಂಡ. ‘ನೀವು ಇರುವುದೇ ನಾನೂರು ಜನ. ಈ ಕಾಲದಲ್ಲಿ ನಾನೂರು ಜನರ ಗುಂಪೊಂದನ್ನು ಯಾವ ರಾಜಕಾರಣಿಯಾದರೂ ಪರಿಶಿಷ್ಚ ವರ್ಗಕ್ಕೆ ಸೇರಿಸುವುದುಂಟೇ?’ ಎಂದು ಹತ್ತಿರದಲ್ಲೇ ಇದ್ದ ಹಿಂದುಳಿದ ಜನಾಂಗದ ಇನ್ನೊಬ್ಬ ಯುವಕ ನಕ್ಕುಬಿಟ್ಟ.
ನಾಲ್ಕುನಾಡಿನ ಕಕ್ಕಬೆಯ ಕಾಡು ಕಾಪಾಳರ ಕಾಲೋನಿಗೆ ಹೋಗುವ ದಾರಿಯಲ್ಲಿ ಅಲ್ಲಲ್ಲಿ ದೈವಗಳ, ಭೂತಗಳ ಕಲ್ಲುಗಳು ಕಾಡುಮರಗಳ ಬುಡದಲ್ಲಿ ಕಪ್ಪಗೆ ಪಾಚಿಗಟ್ಟಿಕೊಂಡು ತಣ್ಣಗೆ ಮಲಗಿರುತ್ತವೆ. ದಾರಿಯ ಅಕ್ಕ ಪಕ್ಕ ತರಗೆಲೆಗಳ ನಡುವೆ ಪ್ರವಾಸಿಗರು ಕುಡಿದು ಬಿಸಾಕಿದ ಬಾಟಲುಗಳು ಬಿದ್ದುಕೊಂಡಿರುತ್ತವೆ. ಮೊದಲಿನ ಹಾಗೆ ಕಾಡು ಕಾಪಾಳರ ಸಾಕು ನಾಯಿಗಳು ಪ್ರವಾಸಿಗಳನ್ನು ಕಂಡರೆ ಬೊಗಳುವುದಿಲ್ಲ. ಏಕೆಂದರೆ ಈ ಆದಿವಾಸಿ ಕಾಲೋನಿ ಕೂಡಾ ಈಗ ಒಂದು ಪ್ರವಾಸಿ ಆಕರ್ಷಣೆ. ಈ ಸರಹದ್ದಿನಲ್ಲಿರುವ ಯಾವುದೇ ಹೋಂಸ್ಟೇಯಲ್ಲಿ ನೀವು ಉಳಿದರೂ ಈ ಕಾಪಾಳರ ಕಾಲೋನಿಗೆ ಗೈಡೆಡ್ ಪ್ರವಾಸ ಹೋಗಬಹುದು.
ಕಳೆದ ವಾರ ಅಲ್ಲಿಗೆ ಹೋಗಿದ್ದಾಗ ಕಾಪಾಳರ ಕಾಲೋನಿಯ ಬೊಳ್ಳು ಎಂಬ ಮುದುಕನಿಗಾಗಿ ಹುಡುಕಾಡಿದೆ.ಆತ ತೀರಿ ಹೋಗಿ ಎಷ್ಟೋ ಕಾಲವಾಯಿತು ಎಂದು ಹೇಳಿದರು. ಆತ ಬದುಕಿದ್ದಾಗ ಬೊಳ್ಳಾಲ ಅರಂಗಾಟ ಎಂಬ ಊರಿನಿಂದ ಬಂದ ಅರಂಗಾಟ್ ಕುಂಞಿಬೊಳ್ತು ಎಂಬ ಮೂಲ ಪುರುಷನ ಕಥೆಯನ್ನು ಅಷ್ಟಿಷ್ಟು ಹೇಳಿದ್ದ. ಉಳಿದ ಕಥೆಯನ್ನು ನೆನೆಪು ಮಾಡಿಕೊಂಡು ಆಮೇಲೆ ಹೇಳುವೆ ಅಂದಿದ್ದ. ಈಗ ನೋಡಿದರೆ ತೀರಿಯೇ ಹೋಗಿಬಿಟ್ಟಿದ್ದ. ಆತನ ಪ್ರೀತಿಯ ನಾಯಿ ಸುಮ್ಮನೆ ಸೋಮಾರಿಯಂತೆ ಯಾರಿಗೂ ಕ್ಯಾರು ಮಾಡದೆ ಚಳಿಗೆ ಮುದುರಿಕೊಂಡು ಮಲಗಿತ್ತು. ತಲೆಯೆತ್ತಿ ನೋಡಿದರೆ ದೇವತೆಯೊಬ್ಬಳ ಭುಜದಂತೆ ಕಾಣಿಸುತ್ತಿರುವ ತಡಿಯಂಡ ಮೋಳು ಬೆಟ್ಟದ ಒಂದು ಸೆರಗು. ಇನ್ನೊಂದು ಕಡೆ ಹೊಳೆಯುತ್ತಿರುವ ಹಣದ ಜಲಪಾತ!
(ಫೋಟೋಗಳೂ ಲೇಖಕರವು)
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.