ತಾಯಿಯ ಗರ್ಭದಲ್ಲಿರುವ ಭ್ರೂಣವೊಂದು ಹಿಂದಿನ ಜನ್ಮದಲ್ಲಿ ತಾನು ಮಾಡಿದ ತಪ್ಪುಗಳನ್ನೆಲ್ಲ ನೆನಪಿಸಿಕೊಳ್ಳುತ್ತದೆ. ಮುಂದಿನ ಜನ್ಮದಲ್ಲಿ ಅಂತಹ ತಪ್ಪುಗಳನ್ನು ಖಂಡಿತಾ ಮಾಡುವುದಿಲ್ಲವೆಂದು ನಿಕ್ಕಿ ಮಾಡಿಕೊಳ್ಳುತ್ತದೆ. ಯಾವುದು ಆ ತಪ್ಪುಗಳು ಎಂದು ಸಿಂಹಾವಲೋಕನ ಮಾಡಿದರೆ -ಅವುಗಳೇ ಜೀವನದ ಹತ್ತು ಅವಸ್ಥೆಗಳು. ಗುರುಗ್ರಂಥದಲ್ಲಿರುವ ‘ಗುರುಬನಿ’ಯೊಂದನ್ನುಆಯ್ದುಕೊಂಡು ಪ್ರಸಿದ್ಧ ಭರತನಾಟ್ಯ ಕಲಾವಿದೆ ರಮಾವೈದ್ಯನಾಥನ್ ಅವರು ಅದನ್ನು ರಸಿಕವರ್ಗಕ್ಕೆ ಉಣಬಡಿಸಿದ ನೃತ್ಯರೂಪಕವೇ ಜೀವದಶಾವಸ್ಥಾ. ಈ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಲೇಖನವೊಂದು ಇಂದಿನ ಓದಿಗಾಗಿ.
ಏನೆಲ್ಲ ಪ್ರಯತ್ನಗಳನ್ನು ಮಾಡಿ ಈ ಜೀವನವನ್ನು ನಾವು ನಮಗೆ ಬೇಕಾದ ಹಾಗೆ ರೂಪಿಸಿಕೊಳ್ಳುತ್ತಿದ್ದರೂ, ಈ ಬದುಕೋ ತನ್ನದೇ ದಿಕ್ಕೊಂದನ್ನು ಹುಡುಕಿಕೊಂಡು ಸಾಗುವುದು. ಯಾರೋ, ಎಲ್ಲೋ ಮರೆಯಲ್ಲಿ ನಿಂತು ನಮ್ಮ ಬದುಕನ್ನು ನಿಯಂತ್ರಿಸುತ್ತಿದ್ದಾರೇನೋ ಎಂದು ಒಮ್ಮೊಮ್ಮೆ ಭ್ರಮೆಯಾಗಿಬಿಡುವುದು. ದೇವರು ನಡೆಸುವರು, ವಿಧಿ ನಡೆಸುವುದು, ಅದೃಷ್ಟದಾಟದ್ದೇ ಮೇಲುಗೈ ಎಂದೆಲ್ಲ ನಿಟ್ಟುಸಿರುಬಿಡುತ್ತ ತೀರ್ಪುಗಳನ್ನು ಕೊಟ್ಟುಕೊಂಡು ನಾವು ಮುಂದೆ ಸಾಗುತ್ತೇವೆ. ಆದರೆ ಇಂತಹ ಯೋಚನೆಗಳೇ ಅಧ್ಯಾತ್ಮದ ಜಿಜ್ಞಾಸೆಗಳಿಗೆ ಪ್ರೇರಣೆಯಾಗಿವೆಯೆನಿಸುತ್ತದೆ. ಆಸೆಗಳೇ ಎಲ್ಲ ದುಃಖಕ್ಕೂ ಕಾರಣವೆಂದು ನಂಬಿದವರು ಅನೇಕ ಸಾಧಕರು. ಅಂತಹ ಆಸೆಗಳನ್ನು ಮುಪ್ಪುರಿಗಟ್ಟಿ ಬದುಕನ್ನು ಸಂಭಾಳಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರಗಳನ್ನು ಹುಡುಕುವ ಪ್ರಯತ್ನವು ನಿರಂತರ ಸಾಗಿದೆ.
ಇಂತಹುದೇ ಪ್ರಶ್ನೆಗಳ ಜಾಡು ಹಿಡಿದು ಹೋದಾಗ, ಪ್ರಸಿದ್ಧ ಭರತನಾಟ್ಯ ಕಲಾವಿದೆ ರಮಾವೈದ್ಯನಾಥನ್ ಅವರಿಗೆ ಗುರುನಾನಕ್ ಅವರು ಬರೆದ ಕೀರ್ತನೆ ಮಾದರಿಯ ಪದ್ಯವೊಂದು ಗಮನ ಸೆಳೆಯಿತು. ಆತ್ಮವು ದೇಹವನ್ನು ಪ್ರವೇಶಿಸಿದ ಮೇಲೆ ಅದು ಆಸೆಗಳ ಸಾಂಗತ್ಯವನ್ನು ತೊರೆಯುವುದು ಸಾಧ್ಯವಾಗುವುದಿಲ್ಲವೇಕೆ ಎಂಬ ಜಿಜ್ಞಾಸೆಯನ್ನು ಸಿಖ್ ಪಂಥದ ಸಂಸ್ಥಾಪಕ ಗುರುನಾನಕ್ ಅವರೂ ಮಾಡಿದ್ದಾರೆ. ಈ ಜಿಜ್ಞಾಸೆಗೆ ಪ್ರೇರಣೆಯಾಗುವುದು ಇನ್ನು ಜನ್ಮತಳೆಯದೇ ತಾಯಿಯ ಗರ್ಭದಲ್ಲಿರುವ ಭ್ರೂಣದ ಆಲೋಚನೆಗಳು. ದೇಹದೊಡನೆ ಭೂಮಿಗೆ ಇನ್ನಷ್ಟೇ ಪ್ರವೇಶ ಪಡೆಯಬೇಕಾದ ಭ್ರೂಣಕ್ಕೆ ಅತ್ತ ಹಿಂದಿನ ಜನ್ಮದ ನೆನಪುಗಳು ಮಾಸಿಲ್ಲ. ಹಿಂದಿನ ಜನ್ಮದಲ್ಲಿ ತಾನು ಮಾಡಿದ ತಪ್ಪುಗಳನ್ನು ಅದು ತಾಯ ಗರ್ಭದಲ್ಲಿ ನೆನೆಯುತ್ತ, ಅಂತಹ ತಪ್ಪುಗಳನ್ನು ಮುಂದೆ ಖಂಡಿತಕ್ಕೂ ಮಾಡಲಾರೆ ಎಂದು ನಿಶ್ಚಯ ಮಾಡುತ್ತದೆ. ಹಾಗಿದ್ದರೆ ಹಿಂದೆ ನಾನು ಮಾಡಿದ ತಪ್ಪುಗಳೇನು ಎಂದು ಲೆಕ್ಕ ಹಾಕುತ್ತ ಸಿಂಹಾವಲೋಕನ ಶುರು ಮಾಡುತ್ತದೆ.
ಆಗ ನೆನಪಾಗುವುದು ಜೀವನದ ಹತ್ತು ಹಂತಗಳಲ್ಲಿ ತಾನು ಮಾಡಿದ್ದ ತಪ್ಪುಗಳು. ಆ ಹತ್ತು ಹಂತಗಳು ಅಂದರೆ ಜೀವನದ ಪ್ರಮುಖ ಅವಸ್ಥೆಗಳನ್ನು ವಿವರಿಸುವ ‘ಗುರುಬನಿ’ಯು ಸರಳವಾಗಿಯೂ ಸುಂದರವಾಗಿಯೂ ಇದೆ. ಅದು ನೃತ್ಯಗುರುವಾಗಿರುವ, ವಿದ್ವಾಂಸೆಯೂ ಆಗಿರುವ ರಮಾವೈದ್ಯನಾಥನ್ ಅವರ ಕಲಾಕೌಶಲದಲ್ಲಿ, ರಾಗಮಾಲಿಕೆಯಲ್ಲಿ ಸುಂದರ ನೃತ್ಯ ಪ್ರಸ್ತುತಿಯಾಗಿದೆ.
ಕೋವಿಡ್ ಜಾಗತಿಕ ಸೋಂಕು ಜಗತ್ತನ್ನು ಕಾಡುವ ಮುನ್ನವೇ ಅವರು ಸಿದ್ಧಪಡಿಸಿದ ಹೊಸ ಪರಿಕಲ್ಪನೆ ‘ಪ್ರತಿಬೋಧನಾ’ ದಲ್ಲಿ ಈ ನೃತ್ಯ ರೂಪಕವು ಸೇರಿದೆ. ಬದುಕಿನ ಜಿಜ್ಞಾಸೆಯನ್ನು ಪ್ರಸ್ತುತಪಡಿಸುವ ‘ಜೀವ ದಶಾವಸ್ಥಾ’ ಎಂಬ ಈ ಪ್ರಸ್ತುತಿಯು ಪ್ರತಿಬೋಧನಾ ನೃತ್ಯ ರೂಪಕದ ಮೂರನೇ ನೃತ್ಯವಾಗಿದ್ದು, ಅಮೋಘವಾಗಿ ಮೂಡಿ ಬಂದಿದೆ. ರಮಾವೈದ್ಯನಾಥನ್ ಅವರು ತಮ್ಮ ಅಪ್ರತಿಮ ಅಭಿನಯ ಚಾತುರ್ಯದೊಂದಿಗೆ ಏಕವ್ಯಕ್ತಿ ನೃತ್ಯ ಪ್ರಸ್ತುತಿ ನೀಡಿದ್ದಾರೆ. ಸಭಿಕರೊಂದಿಗೆ ಸಂವಹನ ನಡೆಸಿದಷ್ಟು ಮುಕ್ತವಾಗಿ ಅಭಿನಯ ಪ್ರಧಾನವಾಗಿ ಮೂಡಿ ಬಂದ ಈ ನೃತ್ಯ, ರಸಿಕರೆಲ್ಲರೂ ಏಕಾಗ್ರ ಚಿತ್ತದಿಂದ ಪ್ರದರ್ಶನವನ್ನು ನೋಡುತ್ತಲೇ ಅಂತರ್ಮುಖಿಗಳಾಗಿ ಯೋಚಿಸುವಂತೆ ಮಾಡುತ್ತದೆ.
ಜೀವನದ ಹತ್ತು ಹಂತಗಳಲ್ಲಿ ಆಸೆಯೇ ಹೇಗೆ ಮೇಲುಗೈ ಸಾಧಿಸುತ್ತದೆ ಎಂಬುದನ್ನು ನೆನಪಿಸಿಕೊಳ್ಳುವ ಭ್ರೂಣವು ಗರ್ಭದಲ್ಲಿರುವ ಸ್ಥಿತಿಯಲ್ಲಿ ವೇದಿಕೆಯಲ್ಲಿ ಕಲಾವಿದೆ ಕಾಣಿಸಿಕೊಳ್ಳುತ್ತಾರೆ. ನಿಧಾನಗತಿಯಲ್ಲಿ ಸಭೆಯ ಗಮನವನ್ನು ಸೆಳೆಯುತ್ತ, ಸಂವಹನದತ್ತ ಸಾಗುವ ಅವರು, ಸಂಚಾರಿಯಲ್ಲಿ ಇಡೀ ವೇದಿಕೆಯನ್ನು ಆವರಿಸಿಕೊಳ್ಳುತ್ತಾರೆ.
ಮೊದಲನೆಯ ಅವಸ್ಥೆಯಲ್ಲಿ ಮಗುವೊಂದು ಹುಟ್ಟಿದ ಕೂಡಲೆ ತಾಯಿಯ ಎದೆಹಾಲಿಗಾಗಿ ತವಕಿಸುತ್ತದೆ. ಎರಡನೇ ಹಂತದಲ್ಲಿ ಅಪ್ಪ ಅಮ್ಮನ ಗಮನ ಸೆಳೆಯಲು ಬಯಸತ್ತದೆ. ಅಪ್ಪನು ತನ್ನನ್ನು ಪರಿಗಣಿಸಿ ಮನ್ನಣೆ ಮಾಡಬೇಕೆಂದು ಮನಸ್ಸು ಹಾತೊರೆಯುತ್ತದೆ. ಮೂರನೆಯ ಹಂತದಲ್ಲಿ ಇನ್ನೇನು ಸ್ನೇಹಿತರೊಡನೆ ಒಡನಾಡುವ ವೇಳೆಗೆ ಅವರಲ್ಲಿರುವ ಆಟದ ವಸ್ತು ತನಗೆ ಬೇಕೆಂದು ಆಸೆಪಡುವ ಮನಸ್ಸು ಹಠ ಹಿಡಿಯುತ್ತದೆ. ಸರಿ,ಸರಿ,ಅಲ್ಲಿಗೇ ನಿಲ್ಲುವುದೇ ಆಸೆಯ ಪಯಣ? ಇಲ್ಲ, ತುಸು ದೊಡ್ಡವರಾದ ಕೂಡಲೇ ಸ್ನೇಹವಲಯದಲ್ಲಿ ಗುರುತಿಸಿಕೊಳ್ಳುವ ತವಕ ನಾಲ್ಕನೆಯದ್ದು. ಅದಾಗಿ ಪ್ರೌಢರಾಗುವ ಹಂತದಲ್ಲಿ ಒಳ್ಳೆಯ ಆಹಾರ ಸೇವಿಸುವ ಆತುರ. ಆರನೆಯ ಆಸೆ ಪ್ರೌಢಾವಸ್ಥೆಯಲ್ಲಿ ಸಾಂಗತ್ಯಕ್ಕಾಗಿ ಹಾತೊರೆಯುವ ಹೃದಯ. ತನ್ನ ಆಗ್ರಹಗಳು ಅಲ್ಲಿ ವಿಫಲವಾದರೆ ಖಿನ್ನವಾಗುವ ಮನಸ್ಸು.
ಈ ಜಿಜ್ಞಾಸೆಗೆ ಪ್ರೇರಣೆಯಾಗುವುದು ಇನ್ನು ಜನ್ಮತಳೆಯದೇ ತಾಯಿಯ ಗರ್ಭದಲ್ಲಿರುವ ಭ್ರೂಣದ ಆಲೋಚನೆಗಳು. ದೇಹದೊಡನೆ ಭೂಮಿಗೆ ಇನ್ನಷ್ಟೇ ಪ್ರವೇಶ ಪಡೆಯಬೇಕಾದ ಭ್ರೂಣಕ್ಕೆ ಅತ್ತ ಹಿಂದಿನ ಜನ್ಮದ ನೆನಪುಗಳು ಮಾಸಿಲ್ಲ. ಹಿಂದಿನ ಜನ್ಮದಲ್ಲಿ ತಾನು ಮಾಡಿದ ತಪ್ಪುಗಳನ್ನು ಅದು ತಾಯ ಗರ್ಭದಲ್ಲಿ ನೆನೆಯುತ್ತ, ಅಂತಹ ತಪ್ಪುಗಳನ್ನು ಮುಂದೆ ಖಂಡಿತಕ್ಕೂ ಮಾಡಲಾರೆ ಎಂದು ನಿಶ್ಚಯ ಮಾಡುತ್ತದೆ.
ಪ್ರೇಮವನ್ನೂ, ಸಾಂಗತ್ಯವನ್ನೂ ಪಡೆದರೆ ಸಾಕೇ, ಸಾಮಾಜಿಕ ಪ್ರತಿಷ್ಠೆಗಾಗಿ ಸಂಪತ್ತು ಸಂಗ್ರಹ ಮಾಡಬೇಕೆಂಬ ಆಸೆ. ಬದುಕಿನಲ್ಲಿ ಹೀಗೆ ಭರ್ಜರಿಯಾಗಿ ಕೂಡಿಟ್ಟು ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಶ್ರಮಪಡುತ್ತಿರುವಾಗ ಏಳನೇಯ ಅವಸ್ಥೆಯಲ್ಲಿ ಇರುವಾಗಲೇ ಮಧ್ಯವಯಸ್ಸು ತಲುಪಿರುತ್ತದೆ. ಎಂಟನೇ ಅವಸ್ಥೆಯಲ್ಲಿ ಮನುಷ್ಯನಿಗೆ ನೆಮ್ಮದಿಯ ನಿದ್ದೆ ಬೇಕೆನಿಸುತ್ತದೆ. ಆದರೇನು ಮಾಡೋಣ, ಕೂಡಿಟ್ಟ ಸಂಪತ್ತನ್ನು ಕಾಯುವಚಿಂತೆ.ಬದುಕಿನಲ್ಲಿಏನೆಲ್ಲ ಪಡೆದುಕೊಂಡೆನೋ ಅದೆಲ್ಲವೂ ಕಳೆದು ಹೋಗುತ್ತದೆ ಎಂಬ ಚಿಂತೆಯಿರುವಾಗ, ಮನಸ್ಸು ನೆಮ್ಮದಿಗಾಗಿ ಆಸೆಪಡುತ್ತದೆ. ಈ ಆಸೆಯು ಕೈಗೂಡುವುದೋ ಇಲ್ಲವೋ ಕಾಲವಂತೂ ನಿಲ್ಲುವುದಿಲ್ಲವಲ್ಲ. ಕನ್ನಡಿಯು ಮುಖದ ಸುಕ್ಕುಗಳನ್ನು ತೋರಿಸುತ್ತದೆ, ವಯಸ್ಸು ಮುಂದುವರೆಯದಂತೆ ತಡೆಯಬೇಕೆಂದು ಮನಸ್ಸು ಬಯಸುತ್ತದೆ. ಯೌವ್ವನದಲ್ಲಿ ಚಿಗರೆಯಂತೆ ಓಡಾಡಿದ್ದು ನೆನಪಾಗಿ ಅದನ್ನೇ ಮರಳಿ ಪಡೆಯಬೇಕೆಂಬ ತವಕ ಮೂಡುತ್ತದೆ. ಎಲ್ಲವೂ ಸಾಧ್ಯವೇ… ಅಷ್ಟರಲ್ಲಿ ಈ ದೇಹದಿಂದ ಉಸಿರು ಹೊರನಡೆಯುವ ಸಮಯ ಬಂದಿರುತ್ತದೆ. ಇಲ್ಲ… ಈ ಉಸಿರು ದೇಹದಲ್ಲಿಯೇ ಉಳಿಯಬೇಕು ಎಂದು ರೊಚ್ಚುಹಿಡಿಯುವ ಮನಸ್ಸೋ…ಸಾವನ್ನೇ ನಿಲ್ಲಿಸಬಯಸುತ್ತದೆ.
ಹೀಗೆ ಜೀವನದುದ್ದಕ್ಕೂ ಆಸೆಯದ್ದೇ ಪಾರಮ್ಯ. ಇದನ್ನೆಲ್ಲ ನಿಯಂತ್ರಿಸಬೇಕೆಂದು, ಆಸೆಯ ಬಲೆಗೆ ಬೀಳಬಾರದೆಂದು ಭ್ರೂಣವು ನಿರ್ಣಯಗಳನ್ನು ಮಾಡುವುದಾದರೂ ಈ ದೇಹವೆಂಬುದು ಆಸೆಯ ಜೊತೆಗೇ ತಳುಕು ಹಾಕಿಕೊಂಡಿರುತ್ತದಲ್ಲ. ಒಟ್ಟಿನಲ್ಲಿ ಆಸೆಯ ಪಾರಮ್ಯವನ್ನು ಪರೋಕ್ಷವಾಗಿ ವಿಷದಪಡಿಸುವ ಈ ಜೀವದಶಾವಸ್ಥೆಯನ್ನು ರಮಾವೈದ್ಯನಾಥನ್ ಅವರು ತಮ್ಮ ಅಭಿನಯ ಚಾತುರ್ಯದ ಮೂಲಕ ಪ್ರೇಕ್ಷಕರ ಮನಸ್ಸು ತಲುಪುವಂತೆ ಮಾಡುತ್ತಾರೆ. ಸೂಜಿಗಲ್ಲಿನಂತೆ ಪ್ರೇಕ್ಷಕರ ಗಮನವನ್ನು ಸೆರೆಹಿಡಿದು, ಈ ಜಿಜ್ಞಾಸೆಯ ಕತೆಯನ್ನು ಪ್ರಸ್ತುತಪಡಿಸುತ್ತಾರೆ.
ಜೀವನದ ಪ್ರತೀ ಹಂತವನ್ನು ನೆನೆಯುತ್ತ, ಮುಂದಿನ ಜನ್ಮದಲ್ಲಿ ಖಂಡಿತಾ ಈ ತಪ್ಪನ್ನು ಮಾಡಲಾರೆ ಎಂದು ಪ್ರತಿಜ್ಞೆ ಮಾಡುವ ಭ್ರೂಣದ ಯೋಚನಾಧಾಟಿಯಲ್ಲಿ ಪ್ರೇಕ್ಷಕರ ಯೋಚನೆಗಳೂ ಸಾಗುತ್ತವೆ. ನೃತ್ಯವು ಅಧ್ಯಾತ್ಮದ ವಿಚಾರವೆಂದಾಗಲೀ, ಬೋಧನೆಯಂತಾಗಲೀ ಎಲ್ಲಿಯೂ ರಸಹೀನವಾಗಿ ತೋರದೇ, ಭಾವ-ರಸದ ಸಮಾಗಮದೊಂದಿಗೆ ಚಲಿಸುತ್ತದೆ. ನೃತ್ತದ ಸೊಬಗು ಮನಸ್ಸನ್ನು ಉಲ್ಲಸಿತವಾಗಿರಿಸುತ್ತದೆ. ಉಸಿರನ್ನು ಎಂದಿಗೂ ಬಿಡಲೊಲ್ಲೆ ಎನ್ನುವ ಮನಸ್ಸಿನ ಹಠವು, ನಂತರದ ಬಿರುಸಿನ ಹೆಜ್ಜೆಗಾರಿಕೆಯು, ಚುರುಕು ನಡೆಯ ಸಂವಹನ ರಸಿಕರನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತದೆ.
ಇದಕ್ಕೂ ಮುನ್ನ ‘ಕಾಶಿ’ ಯ ಕುರಿತು ಮೂಡಿ ಬಂದ ನೃತ್ಯ ಪ್ರಸ್ತುತಿಯು ಮೋಕ್ಷವನ್ನುಹುಡುಕುವ ಭಕ್ತರ ಮನಸ್ಥಿತಿಯನ್ನು ವಿವರಿಸಿತು. ಲಯಕರ್ತನಾದ ಶಿವ ಮತ್ತು ಜೀವದಾಯಿನಿಯಾಗಿರುವ ಗಂಗೆಯ ದರ್ಶನವನ್ನು ಬಯಸುವ ಭಕ್ತ ಕಾಶಿಗೆ ಭೇಟಿ ನೀಡಲು ಭೌತಿಕವಾಗಿ ತೆರಳಿದರೆ ಸಾಲದು, ‘ವಿಶ್ವೇಶ್ವರ ದರ್ಶನ ಕರ ಚಲ್ ಮನ್ ತುಮ್ ಕಾಶಿ..’ ಎನ್ನುತ್ತ ಮನಸ್ಸನ್ನೂ ಸಿದ್ಧಗೊಳಿಸಬೇಕು. ವಿಶ್ವಕ್ಕೆ ಅಧಿಪತಿಯಾದ ಶಿವನ ದರ್ಶನಕ್ಕೆ ಮನಸ್ಸನ್ನು ಎಷ್ಟು ಮುಕ್ತಗೊಳಿಸಿಕೊಂಡರೂ ಸಾಲದು ಎನ್ನುವ ಸಾಲುಗಳು ‘ಪ್ರತಿಬೋಧನಾ’ ರೂಪಕದ ಪ್ರಧಾನ ಪ್ರಸ್ತುತಿಯಂತಿತ್ತು. ಸೃಷ್ಟಿ ಮತ್ತು ಲಯದ ಪರಿಕಲ್ಪನೆಯನ್ನು ವಿಷದೀಕರಿಸುವ ‘ಕಾಶಿ’ ಎಂಬ ‘ರೂಪಕ’ದಲ್ಲಿ ಗಂಡು ಹೆಣ್ಣೆಂಬ ಲಿಂಗಭೇದವು ಮಾಯವಾಗುವುದು. ಅರ್ಧನಾರೀಶ್ವರನಾಗಿ ಶಿವನ ರೂಪವು ಬದುಕಿನಲ್ಲಿ ರೂಢಿಸಿಕೊಂಡ ಎಲ್ಲ ಪೂರ್ವಗ್ರಹಗಳನ್ನು ಕಳಚಿಕೊಳ್ಳಲು ಪ್ರೇರಣೆಯಾಗುವುದು ಎನ್ನುವ ನೃತ್ಯವನ್ನು ರಮಾವೈದ್ಯನಾಥನ್ ಮತ್ತು ಅವರ ತಂಡದವರು ಪ್ರಸ್ತುತಪಡಿಸಿದರು.
ಇದರ ಮುಂದುವರೆದ ಹಂತವೇನೋ ಎಂಬಂತೆ ಸ್ಕಂದಪುರಾಣದಿಂದ ಆಯ್ದ, ಶಿವೋಹಂ ಎಂಬ ನೃತ್ಯವನ್ನು ತಂಡವು ಪ್ರಸ್ತುತಪಡಿಸಿತು. ‘ಜೀವಃ ಶಿವಃ ಶಿವೋ ಜೀವಃ’ ಎಂಬ ನೃತ್ಯವು ‘ಅಹಂ ಬ್ರಹ್ಮಾಸ್ಮಿ’ ಎಂಬ ಅದ್ವೈತದ ಸಂದೇಶದಂತೆ ತೋರುತ್ತದೆ. ನೃತ್ಯಕಲಾವಿದರು ನೃತ್ಯದಲ್ಲಿ ಒಂದಾಗುವ, ಪ್ರತಿ ಚಲನೆಯೂ, ಪ್ರತಿ ಲಯವೂ ಶಿವನೊಂದಿಗೆ ಅಂದರೆ ಅಂತಿಮ ಸತ್ಯದೊಂದಿಗೆ ಲೀನವಾಗುವ ಪ್ರಯತ್ನಗಳನ್ನು ವಿವರಿಸುತ್ತದೆ. ಹಾಗೂ ಪ್ರೇಕ್ಷಕರಲ್ಲಿ ದೀರ್ಘ ರೂಪಕವನ್ನು ಆನಂದಿಸಿದ, ಸಮಾರೋಪದ ಸಂತೃಪ್ತ ಮನೋಭಾವವೊಂದನ್ನು ಮೂಡಿಸುತ್ತದೆ. ಎರಡು ಗಂಟೆಗಳ ನೃತ್ಯ ರಸದೌತಣ ಮುಗಿಯುತ್ತದೆ. ಆದರೆ ಗುಂಗು ಮಾತ್ರ ಹಾಗೆಯೇ ಉಳಿಯುತ್ತದೆ.
ಸಹಕಲಾವಿದೆಯರಾಗಿ ಕಾವ್ಯಾ ಗಣೇಶ್ , ರೆಶಿಕಾ ಶಿವಕುಮಾರ್, ಸಯಾನಿ ಚಕ್ರಬೊರ್ತಿ, ವೈಷ್ಣವಿ ದೊರೆ ಇದ್ದರು. ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗಣ್ ಸಂಸ್ಥೆಗಳು ಜಂಟಿಯಾಗಿ ಮಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಹೀಗೆ ವಿಭಿನ್ನ ಆಶಯದ ‘ಪ್ರತಿಬೋಧನಾ’ ನೃತ್ಯ ರೂಪಕ ಪ್ರಸ್ತುತಗೊಂಡಿತು. ನವರಸಗಳಲ್ಲಿ ಶೃಂಗಾರವೇ ಪ್ರಧಾನವೆಂಬ ಸಾಮಾನ್ಯ ನಂಬಿಕೆಯನ್ನು ಸುಳ್ಳು ಮಾಡುವಂತಿದ್ದ ನೃತ್ಯ ಪ್ರದರ್ಶನದಲ್ಲಿ ಅಧ್ಯಾತ್ಮದ ಹೊಳಹುಗಳೂ ಸೇರಿಕೊಂಡು, ಹೊಸ ಅನುಭೂತಿಯನ್ನು ನೀಡಿತು.
ಪರಂಪರೆಯ ಕೃತಿಗಳಿಗಷ್ಟೇ ಭರತನಾಟ್ಯವನ್ನು ಸೀಮಿತಗೊಳಿಸದೇ ಹೊಸ ಕೃತಿಗಳನ್ನು ಅನ್ವೇಷಿಸುವ ಸ್ವಭಾವದಿಂದಾಗಿ ರಮಾವೈದ್ಯನಾಥನ್ ಭರತನಾಟ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಸ್ಥಳೀಯ ಭಾಷೆಗಳ ಕೃತಿಗಳಲ್ಲಿರುವ ತತ್ವಜ್ಞಾನವನ್ನು, ಅರ್ಥವನ್ನು ಶೋಧಿಸುವುದು ಅವರ ಪ್ರವೃತ್ತಿ. ಆಧುನಿಕತೆಯ ಭರಾಟೆಯಲ್ಲಿ ಜನರ ಮನಸ್ಸಿನಿಂದ ಮರೆತು ಹೋದ ನಿರ್ಲಕ್ಷ್ಯಕ್ಕೊಳಗಾದ ಹೋದ ವಿಚಾರಗಳನ್ನು ವೇದಿಕೆಯಲ್ಲಿ ಪ್ರಚುರಪಡಿಸುವ ಆಶಯದೊಂದಿಗೆ ಅವರು ಕೆಲಸ ಮಾಡುತ್ತಿದ್ದಾರೆ. ದೇಶದ ಅನೇಕ ಮತ ಪಂಥಗಳಲ್ಲಿ, ಭಾಷೆಗಳಲ್ಲಿರುವ ಕತೆಗಳನ್ನು ಅವರು ಆಸಕ್ತಿಯಿಂದ ಗಮನಿಸಿ, ಅಂತರಾರ್ಥವನ್ನು ಶೋಧಿಸುವ ಪ್ರಯತ್ನ ಮಾಡುತ್ತಾರೆ.
ಆದರೆ ಭರತನಾಟ್ಯಪರಂಪರೆಯ ಹಾದಿಯನ್ನು ಬಿಟ್ಟು ತೆರಳಿದವರಲ್ಲ. ‘ಈ ‘ಮಾರ್ಗ’ದಲ್ಲಿ ನನಗೇನೂ ಕಟ್ಟಿಹಾಕಿದ ಅನುಭವವಾಗುತ್ತಿಲ್ಲ. ಇದೇ ವ್ಯಾಪ್ತಿಯಲ್ಲಿ ನನಗೆ ಅಮಿತವಾದ ಸಾಧ್ಯತೆಗಳು, ಕಲ್ಪನೆಗಳು ಹೊಳೆಯುತ್ತವೆ. ವೈಯಕ್ತಿಕವಾಗಿ ನಾನು ಪ್ರಶಾಂತ ಸ್ವಭಾವದವಳಾದರೂ, ಕಲೆಯ ವಿಚಾರಕ್ಕೆ ಬಂದಾಗ ಮನದೊಳಗೆ ಅಪರಿಮಿತ ಹುಮ್ಮಸ್ಸು ತುಂಬುತ್ತದೆ’ ಎನ್ನುತ್ತಾರೆ.
ಆದ್ದರಿಂದಲೇ ಇರಬೇಕು, ಅವರಿಗೆ ಅನೇಕ ಸಮಕಾಲೀನ ಕೃತಿಗಳನ್ನು, ಆಶಯಗಳನ್ನು ಭರತನಾಟ್ಯದ ವ್ಯಾಪ್ತಿಗೆ ತರುವುದು ಸಾಧ್ಯವಾಗಿದೆ. ಉದಾಹರಣೆಗೆ ಠುಮ್ರೀ ಮತ್ತು ಅಭಂಗ್ ಗಳನ್ನು ಆಧರಿಸಿ ಅವರು ಪದಮ್ ಅನ್ನು ಪ್ರಸ್ತುತಪಡಿಸಿದ್ದುಂಟು. ಮಹಾರಾಷ್ಟ್ರದ ಜಾನಾಭಾಯಿ, ಕಾಶ್ಮೀರದ ಲಲ್ಲೇಶ್ವರಿಯ ಜೀವನ ಚಿತ್ರವನ್ನು ಅವರು ನೃತ್ಯರೂಪಕವಾಗಿಸಿದ್ದಾರೆ.
ಹಿಮಾಲಯದ ಕುರಿತು ನೃತ್ಯರೂಪಕದ ಪರಿಕಲ್ಪನೆಯನ್ನು ವೇದಿಕೆಗೆ ತಂದ ಅವರು, ‘ ಸದಾ ಕಲೆಗೆ ನಿಷ್ಠವಾಗಿದ್ದುಕೊಂಡು, ಸ್ಫೂರ್ತಿಯೊಂದು ನಮ್ಮೊಳಗೆ ಚಿಲುಮೆಯಂತಿದ್ದರೆ, ಶಾಸ್ತ್ರೀಯ ನೃತ್ಯದ ವಿಸ್ತಾರವು ನಮಗೆ ಗೋಚರಿಸುತ್ತದೆ’ ಎನ್ನುತ್ತಾರೆ.
‘ಅಯ್ಯೊ ಈ ಶಿವತಾಂಡವ, ರಾಧಾಕೃಷ್ಣರ ಕತೆಗಳು, ದೇವಿಯ ಕತೆಗಳನ್ನೆಲ್ಲ ಈ 21ನೇ ಶತಮಾನದಲ್ಲಿಯೂ ಯಾಕೆ ಬೇಕು’ ಎಂದು ಅನೇಕರು ಕೇಳುವ ಪ್ರಶ್ನೆಗಳಿಗೆ ರಮಾವೈದ್ಯನಾಥನ್ ಉತ್ತರಿಸುವುದು ಹೀಗೆ: ಎಲ್ಲವನ್ನೂ ವಾಚ್ಯವಾಗಿಯಷ್ಟೇ ನೋಡುವ ಸಂದರ್ಭದಲ್ಲಿ ಸಾಂಕೇತಿಕತೆ, ರೂಪಕಗಳನ್ನು ಅರ್ಥ ಮಾಡಿಕೊಳ್ಳಲು ಇಂತಹ ಕಲಾಪ್ರಸ್ತುತಿಗಳು ಹೊಸತಲೆಮಾರಿಗೆ ಎಷ್ಟೊಂದು ಸಹಕಾರಿ ಆಗಬಲ್ಲವು. ಮನುಷ್ಯನು ನಿರಂತರವಾಗಿ ಅಗೋಚರ ಶಕ್ತಿಯ ಕುರಿತು ಯೋಚಿಸುತ್ತಾ, ಅದನ್ನು ಅರಿಯುವ ಆಸಕ್ತಿ ತೋರುವುದನ್ನು ಕಾಣುತ್ತೇವೆ. ಅಂತಹ ದೈವೀಶಕ್ತಿಯೆಡೆಗೆ ಒಲಿಯುವ ರಾಧೆಯ ರೂಪಕ ನಮ್ಮನ್ನು ಶತಶತಮಾನಗಳಿಂದ ನಡೆಸಿಕೊಂಡು ಬಂದಿದೆಯಲ್ಲವೇ..ಒಂದು ಕೈಯ್ಯಲ್ಲಿ ಡಮರು, ಮತ್ತೊಂದು ಕೈಯಲ್ಲಿ ಅಗ್ನಿಯನ್ನು ಹಿಡಿದಿರುವ ಶಿವನ ಚಿತ್ರವು ಸೃಷ್ಟಿ ಮತ್ತು ಲಯವನ್ನು ಸಂಕೇತಿಸುತ್ತ, ಸಮತೋಲದ ಸಂದೇಶ ನೀಡುವುದಿಲ್ಲವೇ’ ಎಂದು ಪ್ರಶ್ನಿಸುತ್ತಾರೆ.
(ಚಿತ್ರಗಳು: ಜಗನ್ನಾಥ್ ಶೆಟ್ಟಿ, ಅಂಬಾ ಸ್ಟುಡಿಯೋ)
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.
ನಿಮ್ಮ ಅನುಭವದ ಅನಿಸಿಕೆಯನ್ನು ಓದಿ ನಾನೇ ಸ್ವತಃ ವೇದಿಕೆಯ ಕೆಳಗೆ ಕೂತು ನೃತ್ಯವನ್ನು ವೀಕ್ಷಿಸಿದಂತಾಯಿತು ?ಬರವಣಿಗೆ ಮನಮುಟ್ಟುವಂತಿದೆ ?
ಒಂದು ಒಳ್ಳೆಯ ಕಲಾ ವಿಮರ್ಶೆ.. ಓದಿ ಸಂತೋಷವಾಯಿತು. ಹೊಸ ಆಲೋಚನೆಯ ಪ್ರಸ್ತುತಿ ನಾಟ್ಯ ಲೋಕಕ್ಕೆ ಇಂದು ಅಗತ್ಯ. ಧನ್ಯವಾದಗಳು ರಾಜಲಕ್ಷ್ಮಿ ಯವರಿಗೆ..