ಯಾಕೊ ಏನೋ ನಮ್ಮೂರ ಎರಡು ಸಿನಿಮಾ ಟಾಕೀಸುಗಳು ನೆನಪಾಗುತ್ತಿವೆ. ಒಂದರ ಹೆಸರು ‘ವಿನಾಯಕ’. ಇನ್ನೊಂದರದ್ದು ‘ಭಾರತ್’. ಮೊದಲನೆಯದರಲ್ಲಿ ತಮಿಳು, ತೆಲುಗು, ಹಿಂದಿ ಸಿನಿಮಾ ಹೆಚ್ಚು. ಎರಡನೆಯದರಲ್ಲಿ ಕನ್ನಡ ಸಿನಿಮಾಗಳು.
ಅರ್ಧಶತಮಾನದಿಂದ ನಮ್ಮೂರು ಬಹಳ ಬೆಳೆದಿದೆ. ಆದರೆ ಟಾಕೀಸುಗಳ ಸಂಖ್ಯೆ ಬದಲಾಗಿಲ್ಲ. ಸಹಸ್ರಾರು ಜನ ತಮ್ಮ ದೈನಿಕ ಜಂಜಡಗಳಿಂದ ಕೆಲಹೊತ್ತಾದರೂ ಬಿಡುಗಡೆ ಪಡೆಯಲು ಕಾರಣವಾಗಿದ್ದ ಈ ಟಾಕೀಸುಗಳನ್ನು ನಮ್ಮ ಸೀಮೆಯ ಶ್ವಾಸಕೋಶಗಳು ಎನ್ನಬಹುದು. ಅವು ಜನರಲ್ಲಿದ್ದ ಹಲವು ನಮೂನೆಯ ಸೃಜನಶೀಲತೆಯನ್ನು ಬಡಿದೆಬ್ಬಿಸಿದವು. ಇದಕ್ಕೆ ಮೊದಲನೇ ಸಾಕ್ಷಿ ನನ್ನಮ್ಮ. ಆಕೆ ತಾನು ನೋಡಿದ ಸಿನಿಮಾ ಕಥೆಯನ್ನು ಕೇರಿಯ ಹೆಂಗಸರಿಗೆ ಅದ್ಭುತವಾಗಿ ಹೇಳಬಲ್ಲ ಕಲಾವಿದೆಯಾಗಿದ್ದಳು. ಜತೆಗೆ ಈ ಟಾಕೀಸುಗಳು ನಮ್ಮೂರಿನ ನೂರಾರು ಬಾಲಕರು ತಮ್ಮ ಶಾಲೆಗಳನ್ನು ದಿಟ್ಟತನದಿಂದ ತ್ಯಾಗಮಾಡಿ, ಪೋಲಿಗಳೂ ಅಪ್ರಾಪ್ತ ವಯಸ್ಕ ಪ್ರೇಮಿಗಳೂ ಸಾಹಸಿಗಳೂ ಕೆಲವೊಮ್ಮೆ ಸಣ್ಣಕಳ್ಳರೂ ಆಗಿ ರೂಪಾಂತರಗೊಳ್ಳಲು ಸಹ ಕಾರಣವಾದವು. ಇದಕ್ಕೆ ಪುರಾವೆ ನನ್ನೊಬ್ಬ ತಮ್ಮನೇ. ಸ್ಕೂಲಿಗೆ ಹೋಗುತ್ತೇನೆಂದು ಘೋಷಿಸಿ ಹೊರಡುತ್ತಿದ್ದ ಅವನು ನೇರವಾಗಿ ಈ ಟಾಕೀಸುಗಳತ್ತ ಬರುತ್ತಿದ್ದನು; ಆತ ಒಂದೇ ಸಿನಿಮಾದ ಎರಡು-ಮೂರು ಶೋವನ್ನು ನಿರಂತರವಾಗಿ ನೋಡಬಲ್ಲವನಾಗಿದ್ದನು. ಇದಕ್ಕೆ ತಕ್ಕಂತೆ ಮಾರ್ನಿಂಗ್ ಶೋನ ಬೆಲ್ಲೂ ಹಾಗೂ ಶಾಲೆಯ ಗಂಟೆಯೂ ಒಟ್ಟಿಗೇ ಬಾರಿಸುತ್ತಿದ್ದವು. ಮಧ್ಯಾಹ್ನದ ಕ್ಲಾಸು ಬಿಡುವ ಹೊತ್ತಿಗೆ ಮ್ಯಾಟ್ನಿಯೂ ಮುಗಿಯುತ್ತಿತ್ತು. ಶಾಲೆಗಳನ್ನು ಟಾಕೀಸಿನ ಎದುರಾ ಎದುರು ಕಟ್ಟಿಸಿದರೆ ನಾವಾದರೂ ಏನು ಮಾಡಬೇಕು? ನಮ್ಮನ್ನು ಎಂಗೇಜ್ ಮಾಡುವಲ್ಲಿ ಶಾಲೆಯ ಜತೆ ಸಿನಿಮಾ ಟಾಕೀಸುಗಳು ತೀವ್ರವಾಗಿ ಸ್ಪರ್ಧಿಸುತ್ತಿದ್ದವು.
ನಾವು ಶಾಲೆಗೆ ಕೊಂಚ ಮೊದಲೇ ಮನೆಬಿಟ್ಟು, ಟಾಕೀಸಿಗೆ ತಲುಪಿ ಸಿನಿಮಾ ಪೋಸ್ಟರುಗಳ ಮುಂದೆ ನಿಂತು ಅವುಗಳಲ್ಲಿರುವ ಚಿತ್ರಗಳನ್ನು ಕಣ್ತುಂಬ ತುಂಬಿಕೊಳ್ಳುತ್ತಿದ್ದೆವು; ಟಾಕೀಸಿನ ಕೊಲ್ಯಾಪ್ಸಬಲ್ ಗೇಟು ತೆರೆದೊಡನೆ, ಕಾರಿಡಾರಿನಲ್ಲಿ ಪ್ರದರ್ಶಿಸಿರುವ ಸಿನಿಮಾ ದೃಶ್ಯಗಳ ಫೋಟೊಗಳನ್ನು ನೋಡುತ್ತಿದ್ದೆವು. ಥಿಯೇಟರಿನ ಮುಂದಿದ್ದ ಬೀಡಾ ಅಂಗಡಿಯಲ್ಲಿ ನೇತುಹಾಕಿದ್ದ ಸಿನಿಮಾ ಗೀತೆಗಳ ಪುಸ್ತಿಕೆಗಳನ್ನು ಕೊಂಡುಕೊಳ್ಳುತ್ತಿದ್ದೆವು. ಶಾಲೆಯ ಬೆಲ್ಲಾದರೂ ಹೋಗದಿದ್ದಾಗ, ಬೆಳಗಿನ ಆಟಕ್ಕೆ ಬಂದಿದ್ದ ಕೆಲವು ಹಿರಿಯರು, ನಾಲಗೆಯನ್ನು ಉಂಡೆಕಟ್ಟಿ ಕಚ್ಚಿ, ನಮ್ಮ ಕುಂಡೆಗೆ ಎರಡು ಬಾರಿಸಿ, ‘ಪೋಲಿ ಲೌಡಿಗಂಡ್ರಾ! ಬೆಳಕ್ಹರಿಯದು ತಡಿಲ್ಲ, ಸಿನಿಮಾ ಹುಚ್ಚು ಇವಕ್ಕೆ’ ಎಂದು ಗದರಿಸಿ ಓಡಿಸುತ್ತಿದ್ದರು. ನಿರ್ವಾಹವಿಲ್ಲದೆ ಹೋಗಿ ಜನಗಣಮನಕ್ಕೆ ಹಿಂದಿನವರಾಗಿ ನಿಲ್ಲುತ್ತಿದ್ದೆವು.
ಉಳಿದಂತೆ, ನಾಲ್ಕಾಣೆ ಹೇಗೊ ಸಿಕ್ಕರೆ ಸಾಕು, ನಾವು ಅರ್ಧ ಟಿಕೀಟಿನ ಲೆಕ್ಕದಲ್ಲಿ ಸಿನಿಮಾಗಳಿಗೆ ನುಗ್ಗುತ್ತಿದ್ದೆವು. ಆ ನಾಲ್ಕಾಣೆಗಾಗಿ ಮನೆಯಲ್ಲಿರುವ ಸಣ್ಣಪುಟ್ಟ ವಸ್ತುಗಳನ್ನು ಗಾಯಬ್ ಮಾಡುವುದರಲ್ಲಿ ಪರಿಣತಿ ಪಡೆದಿದ್ದೆವು. ಅಮ್ಮನ ಎಲೆಡಿಕೆ ಚೀಲದಿಂದ ಚಿಲ್ಲರೆ ತೆಗೆಯುವುದು, ಡಬ್ಬಾಜೋಗಿಗಳಿಗೆ ದಪ್ಪ ತಗಡನ್ನು ಕೊಟ್ಟು ಅಕ್ಕ ಮಾಡಿಸಿದ್ದ ಗೋಲಕದ ಹುಂಡಿಯ ದೊಡ್ಡಖಾಜದಂತಹ ರಂಧ್ರದಿಂದ ದಬ್ಬಣದ ಮೂಲಕ ಅಂಚಿನಲ್ಲಿ ಕಚ್ಚಿನ ಗುರುತುಗಳಿದ್ದ ದುಂಡನೆಯ ನಾಣ್ಯಗಳನ್ನು ಹೊರತೆಗೆಯುವುದು; ಅಪ್ಪ ಬೀಡಿ ತರಲು ಹೇಳಿದಾಗ, ನೇತುಹಾಕಿದ ಅವನ ಅಂಗಿಜೇಬಿನಿಂದ ಕಾಸು ಎಗರಿಸುವುದು ಇತ್ಯಾದಿ ಮಾಡುತ್ತಿದ್ದೆವು. ಆದರೆ ತುಡುಗುತನಕ್ಕೂ ಸಮಾಜವಾದಿ ಆಯಾಮವಿತ್ತು. ಗೆಳೆಯರ ಗುಂಪಿನಲ್ಲಿ ಯಾರು ಮನೆಯಿಂದ ಕಾಸು ಸಂಪಾದಿಸುವರೋ ಅವರು ಉಳಿದವರಿಗೂ ಸಿನಿಮಾಕ್ಕೆ ಕರೆದೊಯ್ಯಬೇಕಾಗಿತ್ತು.
ಹೀಗಿರುತ್ತ ಒಂದು ದಿನ ಅಪ್ಪನಿಗೆ ಪರಿಚಯವಿದ್ದ ಹೆಡ್ಮಾಸ್ಟರು ‘ನಿಮ್ಮ ಮೂರನೇ ಮಗ ಸ್ಕೂಲಿಗೆ ಬರುತ್ತಿಲ್ಲ’ವೆಂಬ ಸಂದೇಶ ಕಳಿಸಿದರು. ಕುಲುಮೆಯಲ್ಲಿ ಬೆಂಕಿ ಮುಂದೆ ಕುಳಿತಿದ್ದ ಅಪ್ಪನಿಗೆ ಕೋಪವೂ ಆಶ್ಚರ್ಯವೂ ಏಕಕಾಲದಲ್ಲಿ ಹುಟ್ಟಿ ಶಾಲೆಗೆ ಬಂದನು. ‘ಸಾಹೇಬರೆ, ಅವನಿಗೆ ಯಾಕ್ರೀ ಸ್ಕೂಲು? ಕೋತಿ ತಾನು ಕೆಟ್ಟಿದ್ದಲ್ಲದೆ ವನವೆಲ್ಲ ಕೆಡಿಸಿತಂತೆ. ಸುಮ್ಮನೆ ಕಬ್ಬಿಣ ಚಚ್ಚೋಕೆ ಹಾಕ್ಕೊಳ್ಳಿ ಅವನ್ನ’ ಎಂದು ಹಿತವಾದ ಹೇಳಿದರು. ‘ಸ್ವಾಮಿ ಇದೊಂದ್ಸಲ ಅವಕಾಶ ಕೊಡ್ರಿ. ಆ ಸೂಳೆಮಗನಿಗೆ ಸರಿಯಾಗಿ ಬುದ್ಧಿ ಕಲಿಸಿ ಹಿಡ್ಕಂಡ್ ಬರ್ತೀನಿ’ ಎಂದು ಅಪ್ಪ ವಚನಕೊಟ್ಟನು. ಅವನು ಒಂದು ಗೂಢಚರ್ಯೆಯ ತಂಡ ರಚಿಸಿ ‘ವಿನಾಯಕ’ದ ಒಂದು ಗೇಟಿನಲ್ಲಿ ನನ್ನನ್ನು ಕಾವಲಿಟ್ಟು ಇನ್ನೊಂದರಲ್ಲಿ ತಾನು ಪಹರೆ ನಿಂತನು. ಮಾರ್ನಿಂಗ್ ಶೋ ಬಿಟ್ಟು, ಟಾಕೀಸಿನಿಂದ ಇರುವೆಗಳಂತೆ ಹೊರಬರುತ್ತಿದ್ದ ಜನರಲ್ಲಿ ಒಬ್ಬನಾದ ತಮ್ಮನು, ಸಿನಿಮಾದ ದೃಶ್ಯಗಳನ್ನು ನೆನೆಯುತ್ತ, ಹೊರಗಿನ ಬೆಳಕಿನ ಪ್ರಖರತೆಗೆ ಕಣ್ಣು ಹೊಂದಿಸಿಕೊಳ್ಳುತ್ತ, ಕ್ರೂರ ಜನರು ತುಂಬಿರುವ ಈ ಇಹಲೋಕಕ್ಕೆ ಬರಬೇಕಲ್ಲಾ ಎಂಬ ಬೇಸರದಿಂದ ಹೊರಬರುತ್ತಿದ್ದವನು, ಅಪ್ಪನ ಮೊಗ ಕಂಡವನೆ ಜಿಂಕೆಯಂತೆ ಚಂಗನೆ ನೆಗೆದು ಕಾಂಪೌಂಡು ಹಾರಲೆತ್ನಿಸಿದನು. ಅಪ್ಪ ಸಿನಿಮಾ ಫೈಟಿಂಗ್ ಮಾಡುವವರಂತೆ ಓಡಿಹೋಗಿ ಅವನ ಕೊಳಪಟ್ಟಿ ಹಿಡಿದನು. ತಮ್ಮನ ಬೆನ್ನಮೇಲೆ ಅಲ್ಲಿಂದಲೇ ಇಕ್ಕಡಿಸಿಕೊಂಡು ಮೆರವಣಿಗೆ ಹೊರಟನು. ಯಾರಾದರೂ ಪರಿಚಿತರು ‘ಸಾಹೇಬರೆ ಯಾಕ್ಹಂಗ್ ಹೊಡೀತೀರಿ ಮಗನ್ನ’ ಎಂದು ಕೇಳಿದರೆ “ನೋಡ್ರಿ ಸ್ವಾಮಿ ಈ ಸೂಳೆಮಗ..” ಎಂದು ಕತೆಯನ್ನೆಲ್ಲ ಹೇಳುತ್ತಿದ್ದನು. ಆ ದಿನ ಕಾಸಿಲ್ಲದೆ ಮ್ಯಾಟಿನಿ ತಪ್ಪಿಸಿಕೊಂಡಿದ್ದ ನನ್ನನ್ನು ತೋರಿಸಿ ‘ಇವನು ಪರ್ವಾಗಿಲ್ಲ ಸ್ವಾಮಿ’ ಎಂಬ ಶಹಬಾಸುಗಿರಿಯನ್ನು ಕೊಡುತ್ತಿದ್ದನು.
ಆದರೆ, ನನ್ನ ತಮ್ಮನು ಕೆಲವೊಮ್ಮೆ ಏಕಕಾಲದಲ್ಲಿ ಸ್ಕೂಲಿನಲ್ಲೂ ಟಾಕೀಸಿನಲ್ಲೂ ಕಾಣಸಿಗದೆ ಕಂಗಾಲು ಮಾಡುತ್ತಿದ್ದನು. ಆಗ ಅಪ್ಪ ಸೈಕಲ್ ಹಾಕಿಕೊಂಡು ರೈಲ್ವೆಸ್ಟೇಶನ್ನಲ್ಲಿ ದಿಮ್ಮಿಗಳನ್ನು ಆನೆಯ ಮೂಲಕ ಲೋಡ್ ಮಾಡಿಸುತ್ತಿದ್ದ ಗೂಡ್ಸ್ ಶೆಡ್, ಬಸ್ಸ್ಟ್ಯಾಂಡು, ಗಂಧದ ಕೋಠಿ, ನೇರಳೆ ಸಾಲುಮರ, ಸಂತೆಮೈದಾನ, ಮಾವಿನ ತೋಪು, ಚಿಕ್ಕೆರೆ, ಗಣಪತಿ ಪೆಂಡಾಲು- ಒಟ್ಟಿನಲ್ಲಿ ಮಕ್ಕಳು ಸ್ಕೂಲು ತಪ್ಪಿಸಿ ಬಾಲಪ್ರತಿಭೆ ಪ್ರಕಟಿಸುವ ಎಲ್ಲ ತಾಣಗಳಲ್ಲಿ ದಸ್ತಗಿರಿ ಮಾಡಲು ತಿರುಗುವನು. ತಮ್ಮನು ಸಿನಿಮಾಕ್ಕಾಗಿ ಚಿಕ್ಕವಯಸ್ಸಿನಲ್ಲೇ ದೇಹದಂಡಿಸುವ ಕಲೆಯನ್ನೂ ಹೊಂದಿದ್ದನು. ಅವನು ಗಾರೆವಡ್ಡರ ಜತೆ ಕಟ್ಟಡ ನಿರ್ಮಾಣದಲ್ಲೊ, ಹತ್ತಿರದ ಗುಡ್ಡಕ್ಕೆ ಹೋಗಿ ಸೌದೆ ತಂದು ಮಾರುವ ಕೆಲಸದಲ್ಲೊ, ಹಣ್ಣಿನಂಗಡಿಯ ಮಾಲನ್ನು ಬಸ್ಸುಗಳಲ್ಲಿ ಕುಳಿತವರಿಗೆ ಸರಬರಾಜು ಮಾಡುವ ಕೆಲಸದಲ್ಲೊ, ಕೆರೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವುದರಲ್ಲೊ ತೊಡಗುತ್ತಿದ್ದನು. ಒಮ್ಮೊಮ್ಮೆ ಸಿನಿಮಾ ಸಾಕಾದರೆ, ಕೆಮ್ಮಣ್ಣುಗುಂಡಿಗೆ ಬರುತ್ತಿದ್ದ ಶೂಟಿಂಗ್ ತಂಡದವರಿಗೆ ತನ್ನ ಸೇವೆಯನ್ನು ನೀಡಲು ವಾರಗಟ್ಟಲೆ ಕಣ್ಮರೆಯಾಗುತ್ತಿದ್ದನು.
ಒಟ್ಟಿನಲ್ಲಿ ಶಾಲಾ ವಿರೋಧಿಗಳಿಗೆ ನಮ್ಮೂರ ಟಾಕೀಸುಗಳು ಪರ್ಯಾಯಗಳನ್ನು ಹುಡುಕಿಕೊಳ್ಳಲು ಬೇಕಾದಷ್ಟು ಪ್ರೇರಣೆ ಕೊಡುತ್ತಿದ್ದವು. ಅವುಗಳಲ್ಲಿ ಪೋಸ್ಟರುಗಳನ್ನು ಎರಡೂ ಬದಿಗೆ ಕಟ್ಟಿಕೊಂಡು ಬೀದಿ ಸುತ್ತುವ ಒಂಟೆತ್ತಿನ ಕಮಾನು ಬಂಡಿಯೂ ಒಂದು. ಅದರೊಳಗೆ ಚೌರದ ಸುಂದರಣ್ಣನೂ ಅವನ ಮಗನೂ ನಾಗಸ್ವರ ನುಡಿಸುತ್ತ, ಡ್ರಂ ಬಾರಿಸುತ್ತ ಕುಳಿತಿರುತ್ತಿದ್ದರು. ಗಾಡಿಯಲ್ಲಿ ಕೊಡುವ ನಸುಗೆಂಪು ಹಳದಿ, ಹಸಿರು ಬಣ್ಣಗಳ ಕರಪತ್ರ ಸಂಗ್ರಹಿಸಲು ‘ಅಣಾ ಅಣಾ’ ಎಂದು ಅದರ ಹಿಂದೆ ಎಷ್ಟೋ ದೂರ ಹೋಗಿ ಗೋಗರೆದ ಬಳಿಕ, ಅವನು ಒಂದನ್ನು ತೆಗೆದು ಮುಖದ ಮೇಲೆ ಒಗೆಯುತ್ತಿದ್ದನು. ಅದರಲ್ಲಿ ಸಿನಿಮಾದ ಕತೆ ಇರುತ್ತಿತ್ತು. ಅದು ಕಥೆಯನ್ನು ಕುತೂಹಲಕರ ಘಟ್ಟಕ್ಕೆ ನಿಲ್ಲಿಸಿ ‘ಮುಂದಿನ ಕತೆಯನ್ನು ಬೆಳ್ಳಿಪರದೆಯ ಮೇಲೆ ನೋಡಿ ಆನಂದಿಸಿರಿ’ ಎಂದು ಮುಗಿದಿರುತ್ತಿತ್ತು. ಕೆಲವೊಮ್ಮೆ ನಾವು ನಡುರಾತ್ರಿ ಕಾದಿದ್ದು, ಆಗತಾನೆ ಹಚ್ಚಿಹೋದ ಹಸಿ ಪೋಸ್ಟರುಗಳನ್ನು ಬಿಡಿಸಿಕೊಂಡು ಬಂದು, ಮನೆಯ ಅಡಿಕೆದಬ್ಬೆ ಅಟ್ಟಕ್ಕೆ, ಕೆಳಭಾಗದಿಂದ ಅಂಟಿಸುತಿದ್ದೆವು. ‘ಒಂದೇ ಬಳ್ಳಿಯ ಹೂಗಳು’ ‘ಅನುಗ್ರಹ’ ‘ಗೋವಾದಲ್ಲಿ ಸಿಐಡಿ ೯೯೯’ ‘ಆರಾಧನ’ ಪೋಸ್ಟರುಗಳು ಅಂಗಾತ ಮಲಗಿದಾಗೆಲ್ಲ ಕಾಣುತ್ತಿದ್ದವು. ಅವನ್ನು ನೋಡುತ್ತ ನಾವು ನಿದ್ದೆಹೋಗುತ್ತಿದ್ದೆವು.
ಟಾಕೀಸುಗಳ ಮಾಯಾಜಾಲಕ್ಕೆ ವಶವಾದವರು ಕೇವಲ ಎಳೆಯರೇನಲ್ಲ. ಎಳೆಯವರಾಗಿದ್ದಾಗ ಸೂಕ್ತ ತರಬೇತಿ ಪಡೆದು ಈಗ ದೊಡ್ಡವರಾಗಿರುವ ಹಿರಿಯರೂ ಇದರಲ್ಲಿ ಸೇರಿದ್ದರು. ಅವರಲ್ಲಿ ನಮ್ಮ ಬೀದಿಯ ಅಜೀಜನೂ ಒಬ್ಬನು. ರಂಜಾನ್ ಹಬ್ಬದಲ್ಲಿ ಹಾಕುತ್ತಿದ್ದ ಏಣಿಕಟ್ಟಿದ ಜೋಕಾಲಿ ಆಟವನ್ನು ಚೆನ್ನಾಗಿ ಆಡುತ್ತಿದ್ದ, ಮೊಹರಂನಲ್ಲಿ ಗೇರುಕಳ್ಳನ ವೇಷ ಹಾಕುತ್ತಿದ್ದ ಅಜೀಜನು ಒಳ್ಳೆಯ ಕಲಾವಿದ. ಮನೆಗೆ ಸುಣ್ಣ ಬಳಿಯುವುದು, ಬಿದ್ದಗೋಡೆ ರಿಪೇರಿ ಮಾಡುವುದು, ಮನೆಯೊಳಗೆ ಬಂದ ಹಾವನ್ನು ಹಿಡಿಯುವುದು, ಎತ್ತರಕ್ಕೆ ಬೆಳೆದ ಮರಗಳಿಂದ ತೆಂಗಿನಕಾಯಿ ಇಳಿಸಿಕೊಡುವುದು, ಮನೆಹೆಂಚನ್ನು ಕೈಯಾಡಿಸುವುದು, ಸೌದೆಸೀಳುವುದೇ ಮೊದಲಾಗಿ ಬಹುರೂಪಿ ಕೆಲಸಗಳನ್ನು ಮಾಡುತ್ತಿದ್ದ ಅಜೀಜನು ಬಹಳ ಜನರಿಗೆ ಬೇಕಾಗಿದ್ದವನು. ಆದರೆ ತನ್ನ ಸಿನಿಮಾ ಚಟದಿಂದ ಅವನು ಕುಖ್ಯಾತನಾಗಿದ್ದನು. ಸದಾ ಸಿನಿಮಾ ನೋಡುತ್ತ, ಅವುಗಳ ಹಾಡು ಗುಣುಗುಣಿಸುತ್ತ ಇದ್ದ ಅವನಿಗೆ ಜನ ಸಿನಿಮಾ ಅಜೀಜ್ ಎಂದೇ ಕರೆಯುತ್ತಿದ್ದರು. ಅವನಿಂದ ಕೆಲಸ ಮಾಡಿಸುವವರು ಸಿನಿಮಾ ಟಾಕೀಸಿನ ಬಳಿ ಒಮ್ಮೆ ನೋಡಿ, ಅಲ್ಲಿಲ್ಲವಾದರೆ ಮನೆಗೆ ಬಂದು ಕಾಣುತ್ತಿದ್ದರು. ಕಳ್ಳನಾಟ ಹೊರಲು ಹೋಗುತ್ತಿದ್ದ ಅಜೀಜನು ಒಮ್ಮೆ ಗಿಡಕ್ಕೆ ಹೋಗಿಬಂದರೆ ಒಂದು ವಾರಕಾಲ ಸಿನಿಮಾಗಳಿಗೆ ಆಗುವಷ್ಟು ಸಂಪಾದಿಸುತ್ತಿದ್ದನು. ಮಲೆಯಾಳಿ ಕಾಕನ ಲಕ್ಕಿ ರೆಸ್ಟೊರೆಂಟಿನಲ್ಲಿ ಪುಟ್ ಮತ್ತು ಪರೋಟ ದಾಲ್ ತಿಂದು, ಸಿನಿಮಾ ನೋಡಿಕೊಂಡು ಸುಖವಾಗಿ ಇರುತ್ತಿದ್ದನು. ಗಿಡಕ್ಕೆ ಹೋಗಲು ಆಗದಿದ್ದಾಗ ಮನೆಯಲ್ಲಿದ್ದ ದವಸಗಳನ್ನು ಅಂಗಡಿಗೆ ಹಾಕಿಯೊ, ಹೆಂಡತಿಯ ಕೂಲಿ ಹಣವನ್ನು ಲಪಟಾಯಿಸಿಯೊ ಸಿನಿಮಾ ನೋಡುತ್ತಿದ್ದನು. ತಾಯಂದಿರು ಮಾತು ಕೇಳದ ಮಕ್ಕಳನ್ನು ಬೈಯುವಾಗ, ‘ಯಾಕ್ಹಂಗೆ ಉರಿದು ಉಪ್ಪು ಕಟ್ತೀರೊ, ಹಿಂಗೇ ಬಿಟ್ರೆ ನೀವು ಒಂದಿನ ಸಿನಿಮಾ ಅಜೀಜನ ತರಹ ಹಾಳಾಗಿ ಹೋಗ್ತೀರಿ’ ಎಂದು ಬೈಯುತ್ತಿದ್ದರು.
ಮಸೀದಿಗೆ ಬಾರದೆ ಟಾಕೀಸುಗಳ ಬಳಿ ಸುಳಿಯುತ್ತಿದ್ದ ನಮ್ಮನ್ನು ಮೌಲವಿಯವರು ‘ನೀವೆಲ್ಲ ನರಕಕ್ಕೆ ಹೋಗ್ತೀರಿ’ ಎಂದು ಎಚ್ಚರಿಸುತ್ತಿದ್ದರು. ಅವರಿಂದ ಬಹಳ ಬೈಸಿಕೊಳ್ಳುತ್ತಿದ್ದ ಅಜೀಜನು ಒಮ್ಮೆ ಅವರಿಗೆ ‘ಮೆಕ್ಕಾದ ಕಾಬಾ ತೋರಿಸುವ ಸಿನಿಮಾ ಬಂದಿದೆ’ ಎಂದು ಗುಟ್ಟಾಗಿ ಹೇಳಿದನು. ಈ ಸಿನಿಮಾಕ್ಕಾಗಿ ಇಡೀ ಟಾಕೀಸನ್ನು ತೊಳೆಯಲಾಗಿದೆಯೆಂದೂ, ಅದನ್ನು ನೋಡುವವರು ಸೈತ ಮೈತೊಳೆದುಕೊಂಡು ಶುದ್ಧವಾಗಿ ಹೋಗಬೇಕೆಂದೂ ಅಜೀಜನು ಹೇಳಿದ್ದನು. ಲಕ್ಷಾಂತರ ಖರ್ಚು ಮಾಡಿ ಹಜ್ ಮಾಡುವುದಂತೂ ಸಾಧ್ಯವಿಲ್ಲ. ಇಲ್ಲಾದರೂ ಕಾಬಾ ನೋಡೋಣ ಎಂದು ಮೌಲವಿಯವರು ಮುಸುಕು ಹಾಕಿಕೊಂಡು ಸೆಕೆಂಡ್ಶೂಗೆ ಹೋದರು. ಅದು ಮೀನಾಕುಮಾರಿ ನಟನೆಯ ‘ಪಾಕೀಜಾ’ ಸಿನಿಮಾ. ಮೌಲವಿಯವರು ಹೊರಳಿ ಬಂದವರು ಎಂಟು ದಿನಗಳ ಕಾಲ “ಆ ಹರಾಮಜಾದಾ ಎಲ್ಲಿಹೋದ? ಸೂಳೆಯರ ಸಿನಿಮಾಕ್ಕೆ ಕಳಿಸಿದವನು” ಎಂದು ಹುಡುಕಿಕೊಂಡು ಓಡಾಡುತ್ತಿದ್ದರು.
ನಮ್ಮೂರ ಟಾಕೀಸುಗಳಿಗೆ ಕೆಲವು ವಿಶೇಷತೆಗಳಿದ್ದವು. ಅವುಗಳಲ್ಲಿ ಒಂದು ಟಿಕೆಟಿಗಾಗಿ ಹೋರಾಟ. ಟಿಕೇಟ್ಗಾಗಿ ಕ್ಯೂ ನಿಲ್ಲುವುದು ನಮ್ಮೂರ ಜನರಿಗೆ ಅಷ್ಟೊಂದು ಪ್ರಿಯವಾದ ಕೆಲಸವಲ್ಲ. ಟಿಕೇಟು ಕೌಂಟರು ಒಬ್ಬರು ಮಾತ್ರ ಹೋಗುವಂತೆ ಗುಹೆತರಹ ಇಕ್ಕಟ್ಟಾಗಿದ್ದು, ನಮ್ಮೂರ ಗರಡಿ ಹುಡುಗರು, ಅಂಗಿ ಕಳಚಿ ಜತೆಯವರ ಕೈಗಿಟ್ಟು, ಕೌಂಟರಿನ ಕಮಾನಿನ ಮೇಲೆ ಹತ್ತಿ ಕೋತಿಯಂತೆ ಇಳಿಬಿದ್ದು. ಕೈಯನ್ನು ಟಿಕೇಟು ಗೂಡಿನೊಳಗೆ ತೂರಿಸುತ್ತಿದ್ದರು. ತೂತಿನೊಳಗೆ ನುಗ್ಗಿಬರುವ ಹಲವಾರು ಕೈಗಳನ್ನು ಟಿಕೇಟು ಕೊಡುವವನು ಹೇಗೆ ನಿಭಾಯಿಸುತ್ತಿದ್ದನೊ ತಿಳಿಯದು. ಸಿನಿಮಾಗಳಿಗೆ ಹಳ್ಳಿಯ ಜನ ಗಾಡಿಕಟ್ಟಿಕೊಂಡು ಬರುತ್ತಿದ್ದರು. ಗಾಡಿ ನಿಲ್ಲಿಸಲು, ಎತ್ತುಗಳನ್ನು ಕಾಯಲು ಟಾಕೀಸಿನವರು ಆಳಿನ ವ್ಯವಸ್ಥೆ ಮಾಡಿದ್ದರು. ಸಾಮಾನ್ಯವಾಗಿ ಸೆಕೆಂಡ್ ಶೋಗೆ ಹೋಗುತ್ತಿದ್ದ ನಾವು, ಊಟ ಮಾಡಿ ಹೊದಿಕೆಯನ್ನು ಮೈಗೆ ಸುತ್ತಿಕೊಂಡು, ಕುಕ್ಕುಲು ಓಟದಲ್ಲಿ ಟಾಕೀಸುಗಳಿಗೆ ಓಡುತ್ತಿದ್ದೆವು. ಸಾಮಾನ್ಯವಾಗಿ ಸಿನಿಮಾ ಶುರುವಾಗುವ ಮೊದಲು ಮೂರು ಹಾಡು ಹಾಕಲಾಗುತ್ತಿತ್ತು. ಒಂದು ‘ಶುಕ್ಲಾಂಬರಧರಂ ಶಶಿವರ್ಣಂ’. ಎರಡನೇ ಹಾಡು ‘ನಮೋ ವೆಂಕಟೇಶಾ ನಮೋ ತಿರುಮಲೇಶಾ’. ಮೂರನೆಯದು ಯಾವುದೊ ನೆನಪಿಲ್ಲ. ಅದು ಮುಗಿಯಿತು ಎಂದರೆ ಸಿನಿಮಾ ಶುರು. ಸಿನಿಮಾ ಶುರುವಾಗಿದ್ದರೆ, ‘ಅಣಾ, ಶುರುವಾಗಿ ಎಷ್ಟೊತ್ಹಾತಣ್ಣ’ ಎಂದು ಕಾತರದಿಂದ ಕೇಳಿ, ‘ಈಗಿನ್ನೂ ನಂಬರ್ ತೋರಿಸ್ತಿದಾನೆ ’ಎಂದು ಉತ್ತರ ಪಡೆದು ಸಮಾಧಾನದಿಂದ ಕತ್ತಲಿನಲ್ಲಿ ಕಣ್ಣುಕೆಕ್ಕರಿಸಿಕೊಂಡು ಒಳಗೆ ಹೋಗುತ್ತಿದ್ದೆವು. ಇಂಡಿಯನ್ ನ್ಯೂಸ್ರಿವ್ಯೂದಲ್ಲಿ ದಪ್ಪಸ್ವರದ ಒಬ್ಬನು ಇಂದಿರಾಗಾಂಧಿಯವರು ಸೈನ್ಯದ ಹಡಗನ್ನು ಚಾಲನೆಗೊಳಿಸಿದ ದೃಶ್ಯಗಳನ್ನು ವಿವರಿಸುತ್ತಿದ್ದನು. ‘ಲೈಫ್ಬಾಯ್ ಎಲ್ಲಿದೆಯೊ ಅಲ್ಲಿದೇ ಆರೋಗ್ಯ’ ಎಂಬ ಹಾಡಿನ ಜಾಹಿರಾತಂತೂ ಎಷ್ಟು ನೋಡಿದರೂ ಬೇಜಾರಾಗುತ್ತಿರಲಿಲ್ಲ. ಸಿನಿಮಾ ಮುಗಿದ ಬಳಿಕ ಕಡ್ಡಾಯವಾಗಿ ‘ಜನಗಣಮನ’ ಇರುತ್ತಿತ್ತು. ಬಹುತೇಕ ಜನರು ಎದ್ದು ಮೈಮುರಿಯುತ್ತ ಹೊರಗೆ ಹೋಗುತ್ತಿದ್ದರು. ಕೆಲವಾದರೂ ದೇಶಭಕ್ತರು ಪಟಪಟ ಹಾರುವ ಬಾವುಟವನ್ನು ನೋಡುತ್ತ ನೆಟ್ಟಗೆ ನಿಂತು ಗೌರವ ಸಲ್ಲಿಸುತ್ತಿದ್ದರು.
ನಮಗೆ ವರ್ಷಕ್ಕೆ ಎರಡು ಸಲ, ಬಕ್ರೀದ್ ಮತ್ತು ರಂಜಾನ್ ಹಬ್ಬಗಳಲ್ಲಿ, ಸಿನಿಮಾ ನೋಡಲು ಮುಕ್ತ ಅವಕಾಶವಿರುತ್ತಿತ್ತು. ಆಗ ನಮ್ಮೂರ ಟಾಕೀಸುಗಳು ‘ಮೊಗಲೆ ಆಜಂ’, ‘ದಯಾರೆ ಮದೀನ’ ‘ಹಾತಿಂ ತಾಯ್ ‘ಮೇರೇ ಮೆಹಬೂಬ್’ ಮುಂತಾದ ‘ಸಾಬರ’ ಸಿನಿಮಾಗಳನ್ನು ಹಾಕುತ್ತಿದ್ದವು. ಇಡೀ ಟಾಕೀಸು ಹಬ್ಬದ ಹೊಸಬಟ್ಟೆಯ ಸರಸರದಿಂದಲೂ ಅತ್ತರಿನ ವಾಸನೆಯಿಂದಲೂ ತುಂಬಿಹೋಗುತ್ತಿತ್ತು. ನಾವು ದೊಡ್ಡವರಿಂದ ಕಾಡಿಬೇಡಿ ವಸೂಲಿ ಮಾಡಿದ ಹಬ್ಬದ ಕಾಣಿಕೆಯನ್ನು ಸಿನಿಮಾಗಳಿಗೆ ಸುರಿದು, ಹಾಕಿದ್ದ ಎಲ್ಲ ಶೋಗಳನ್ನು ನೋಡುತ್ತಿದ್ದೆವು. ಜಾಗವಿಲ್ಲದಾಗ ಪರದೆ ಮುಂದೆ ಇರುವ ಜಗಲಿಯಂತಹ ಜಾಗದಲ್ಲಿ ಅಂಗಾತ ಮಲಗಿ ಸಿನಿಮಾ ನೋಡುತ್ತಿದ್ದೆವು. ಕೆಲವೊಮ್ಮೆ ಅಮ್ಮನ ಜತೆ ಹೆಂಗಸರ ಕಡೆ ಹೋಗುತ್ತಿದ್ದುದೂ ಉಂಟು. ಟಿಕೇಟಿಲ್ಲದೆ ಸಿನಿಮಾಕ್ಕೆ ಹೋಗಲು ಹೆಂಗಸರ ವಿಭಾಗವು ಪ್ರಶಸ್ತವಾಗಿತ್ತು. ಗೇಟ್ ಕೀಪರನಿಗೆ ‘ಅಣ್ಣಾ, ಅಮ್ಮನ್ನ ಅರ್ಜೆಂಟ್ ಕರಕೊಂಡು ಬರೋಕೆ ಅಪ್ಪ ಕಳಸಿದಾನಣ್ಣಾ’ ಎಂದು ಕಾತರದಿಂದ ಕೇಳುತ್ತಿದ್ದೆವು. ಅವನು ‘ಕರ್ಕೊಂಡು ಹೋಗು’ ಎಂದರೆ, ‘ಅಮ್ಮಾ! ಎಲ್ಲಿದೀಯಮ್ಮಾ? ಅಪ್ಪ ಕರೀತಾನಮ್ಮಾ’ ಎಂದು ಕೂಗುತ್ತ ಕೂಗುತ್ತ ನಿಧಾನವಾಗಿ ಟಾಕೀಸಿನೊಳಗೆ ನುಸುಳಿ ಒಳಗಿನ ಪಾರ್ಟಿಶನ್ ಗೋಡೆಗಳನ್ನು ಹಾದು ಕಣ್ಮರೆಯಾಗುತ್ತಿದ್ದೆವು.
ನಮ್ಮ ಮನೆಯಲ್ಲಿ ಅಪ್ಪ ಸಿನಿಮಾ ವಿರೋಧಿಯಾದರೆ, ಅಮ್ಮ ಸಿನಿಮಾ ಪ್ರಿಯೆ. ಆಕೆಗೆ ಚೌಕಾಬಾರಾ ಆಡುವುದು ಮತ್ತು ಸಿನಿಮಾ ನೋಡುವುದು ಬಹಳ ಇಷ್ಟವಾದ ಕಾಯಕಗಳಾಗಿದ್ದವು. ಅವಳು ಪಟ್ಟಮ್ಮಾಳ್, ಕುಪ್ಪಮ್ಮ ಮುಂತಾದ ಗೆಳತಿಯರನ್ನು ಕೂಡಿಕೊಂಡು ತಮಿಳು ಸಿನಿಮಾಗಳಿಗೂ ಹೋಗುತ್ತಿದ್ದಳು. ಸಿನಿಮಾಕ್ಕೆ ಹೋಗಿಬಂದ ಬಳಿಕ, ಮಧ್ಯಾಹ್ನ ಮನೆಯಲ್ಲಿ ಬೀದಿಯ ಹೆಂಗಸರನ್ನೆಲ್ಲ ಕೂಡಿಸಿಕೊಂಡು ಸಿನಿಮಾ ಕಥೆ ಹೇಳುತ್ತಿದ್ದಳು. ಬೀದಿಯ ಶೋತೃಗಳು ಸಾಕ್ಷಾತ್ ಸಿನಿಮಾ ನೋಡುತ್ತಿರುವವರಂತೆ ತನ್ಮಯವಾಗಿ ಅವಳ ಕಥನವನ್ನು ಕೇಳುತ್ತಿದ್ದರು. ಅನಿರೀಕ್ಷಿತವಾಗಿ ಅಪ್ಪ ಮನೆಗೆ ಬಂದರೆ ಹೆಂಗಸರೆಲ್ಲ ದುಡದುಡ ಮನೆ ಖಾಲಿ ಮಾಡುತಿದ್ದರು. ಆಗ ಅಪ್ಪ ‘ಲೇ, ಮನೇನ ಟಾಕೀಸು ಮಾಡಿದ್ದೀಯಲ್ಲೇ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ. ನಿನ್ನಿಂದಲೇ ಮಕ್ಕಳು ಹಾಳಾಗಿದ್ದು’ ಎಂದು ಕೂಗಾಡುತ್ತಿದ್ದನು.
ಸಾಮಾನ್ಯವಾಗಿ ಗಂಡಸರು ಕೆಲಸಕ್ಕೂ ಮತ್ತು ಮಕ್ಕಳು ಶಾಲೆಗೂ ಹೋದ ಹೊತ್ತಿನಲ್ಲಿ ನಡೆಯುತ್ತಿದ್ದ ಅಮ್ಮನ ಸಿನಿಮಾ ಸಭೆಗಳು ಕೆಲವೊಮ್ಮೆ ಗಂಭೀರ ವಿಷಯಗಳ ಚರ್ಚೆಯ ಗೋಷ್ಠಿಗಳಾಗಿ ಮಾರ್ಪಡುತ್ತಿದ್ದವು. ನಾವು ಅಕಸ್ಮಾತ್ ಮನೆಯಲ್ಲಿದ್ದರೆ ಈ ಚರ್ಚೆಯನ್ನು ಕದ್ದು ಕೇಳಿಸಿಕೊಳ್ಳುತ್ತಿದ್ದೆವು. ಅವರ ಚರ್ಚೆಗಳಲ್ಲಿ ಕೆಲವು ಸ್ವಾರಸ್ಯಕರ ಸಂಗತಿಗಳಿರುತ್ತಿದ್ದವು. ಉದಾಹರಣೆಗೆ, ಹೆಂಗಸರ ಗೇಟಿನಲ್ಲಿ ಟಿಕೇಟು ಹರಿದುಕೊಡಲು ನಿಂತಿರುತ್ತಿದ್ದ ಟಾಕೀಸಿನ ಮಾಲಿಕನು, ಬಾಗಿಲಿಗೆ ಕೈಯನ್ನು ಅಡ್ಡಹಿಡಿದು ನುಗ್ಗುವ ಹೆಂಗಸರ ಎದೆಯನ್ನು ಹೇಗೋ ಸ್ಪರ್ಶಿಸುತ್ತಿದ್ದುದು; ‘ನಿಲ್ಲಮ್ಮ ನುಗ್ಗಬ್ಯಾಡ’ ಎಂದು ಎದೆಗೆ ಕೈಹಾಕಿ ಹಿಂದೆ ತಳ್ಳುತ್ತಿದ್ದುದು. ಕೆಲವರು ಅವನ ಕೈಕೆಳಗೆ ನುಸುಳಿ ಹೋದೆನೆಂತಲೂ ಮತ್ತೆ ಕೆಲವರು ‘ತೆಗೆಯಪ್ಪ ಕೈಯ’ ಎಂದು ಜೋರು ಮಾಡಿದೆನೆಂತಲೂ ಕೊಚ್ಚಿಕೊಳ್ಳುತ್ತಿದ್ದರು. ಕುಪ್ಪಮ್ಮ ಮಾತ್ರ ‘ಥೂ ಅವನ ಕೈಗೆ ಹಾವು ಕಡಿಯಾ. ಕೈಗೆ ಗೆದ್ದಲು ಹತ್ತಾ. ಹಾಟ್ಗಳ್ಳ ನನಗೆ ಮುಟ್ಟಿಬಿಟ್ಟ’ ಎಂದು ಪಿಚ್ಚನೆ ಹಲ್ಲುಬಿಡುತ್ತ ಬೈಯುತ್ತಿದ್ದಳು.
ನಮ್ಮೂರ ಟಾಕೀಸುಗಳು ಧೂಮಪಾನ ಮಾಡುವ ಅತ್ಯುತ್ತಮ ಜಾಗಗಳಾಗಿದ್ದವು. ಇಡೀ ಟಾಕೀಸುವ ಹೊಗೆಯಿಂದ ತುಂಬಿ ಹೋಗುತ್ತಿತ್ತು. ಚಿಳ್ಳೆಪಿಳ್ಳೆಗಳೂ ಕೊರೆಬೀಡಿ ಸೇದುವ ಪ್ರಯೋಗ ಮಾಡಲು ಅರೆಗತ್ತಲೆಯ ಟಾಕೀಸುಗಳು ಪ್ರಶಸ್ತ ಜಾಗಗಳಾಗಿದ್ದವು. ಕಡ್ಲೆಕಾಯಿ ಮಾರುವವನು ದುಡ್ಡನ್ನು ಅದರಂಚಿನ ಆಧಾರದಲ್ಲೇ ಗುರುತಿಸಿ, ಕಡ್ಲೆಕಾಯಿ ಕೊಡುತ್ತಿದ್ದನು. ಜನ ನಡೆಯದ ಸೀಸದ ನಾಣ್ಯಗಳನ್ನು ಅಲ್ಲಿ ದಾಟಿಸುತ್ತಿದ್ದರು; ಕಡ್ಲೆಕಾಯಿ ಕೆಟ್ಟಬೀಜ ತಿಂದು ಬಾಯಿ ಕಹಿಯಾದರೆ, ಜನ ಬಾಯಿಗೆ ಬಂದಂತೆ ಬೈಯುತ್ತಿದ್ದರು. ಬಹುಶಃ ಅತಿಹೆಚ್ಚು ಬೈಸಿಕೊಳ್ಳುತ್ತಿದ್ದವನು ಸಿನಿಮಾ ಆಪರೇಟರು. ಕರೆಂಟು ಹೋದಾಗಲೊ, ತಾಂತ್ರಿಕ ಕಾರಣದಿಂದಲೊ ಸಿನಿಮಾ ನಿಂತಾಗ ನಾವೆಲ್ಲ ಮನಸಾರೆ ಶಿಳ್ಳೆ ಹಾಕುತ್ತಿದ್ದೆವು. ಲಬೊಲಬೊ ಹೊಯ್ದುಕೊಳ್ಳುತ್ತಿದ್ದೆವು. ಕೆಲವು ಪ್ರಬುದ್ಧ ಪ್ರೇಕ್ಷಕರು ಮಾತ್ರ, ಸಿನಿಮಾ ಬಿಡುವ ಕಿಂಡಿಯತ್ತ ಕುತ್ತಿಗೆ ತಿರುಗಿಸಿ ‘ಬಿಡಲೊ, ನಿಂತಾಯಿನ, ನಿನ್ನಕ್ಕನಾ’ ಎಂದು ಆರಂಭವಾಗುವ ಅಪೂರ್ವ ಉಕ್ತಿಗಳನ್ನು, ಹೊರತೆಗೆದು ಬಳಸುತ್ತಿದ್ದರು. ಸಿನಿಮಾ ಆಪರೇಟರ್ ಆಗಿದ್ದ ಬಸಪ್ಪನವರು ನಮ್ಮ ಬೀದಿಯಲ್ಲಿದ್ದರು. ಅವರು ಅಪ್ಪನ ಜತೆ ಬೀಡಿ ಸೇದುತ್ತ, ಬೈಟು ಟೀಕುಡಿಯುತ್ತ ಮಾತಾಡುವಾಗ ‘ಸಾಹೇಬರೆ ಯಾರಿಗೆ ಬೇಕ್ರೀ ಈ ಬೇವಾರ್ಸಿ ಕೆಲಸ? ಹೆಂಡತಿ ಮಕ್ಕಳನ್ನ ಬೈಸೋದು? ನಿರ್ವಾ ಇಲ್ಲ ಅಂತ ಮಾಡ್ತಿದೀನಿ. ಸಿನಿಮಾ ಬಿಟ್ಟುಬಿಟ್ಟು ನನ್ನ ರಕ್ತವೆಲ್ಲ ಒಣಗಿಹೋಗಿದೆ’ ಎನ್ನುತ್ತಿದ್ದರು.
ನನ್ನ ಬಾಲ್ಯದ ಬದುಕನ್ನು ಹೀಗೆ ನಾನಾ ಬಗೆಯಲ್ಲಿ ವರ್ಣರಂಜಿತಗೊಳಿಸಿದ ಟಾಕೀಸುಗಳನ್ನು ಈಚೆಗೆ ಊರಿಗೆ ಹೋದಾಗ ನೋಡಿದೆ. ಯಾಕೊ ಅವು ಮಂಕಾಗಿ ನಿಂತಂತೆ ಭಾಸವಾಯಿತು. ರಸ್ತೆ ವಿಸ್ತರಣೆ ಮಾಡಲು ಕಾಂಪೌಂಡು ಗೋಡೆ ಒಡೆದು, ಅವುಗಳ ವಿಶಾಲ ಅಂಗಳಗಳನ್ನು ಕಬಳಿಸಲಾಗಿದೆ. ಬಹುಶಃ ಮನೆಮನೆಗೆ ಟೀವಿಗಳು ಬಂದು ಟಾಕೀಸುಗಳ ಚುಂಬಕ ಶಕ್ತಿ ಕಡಿಮೆಗೊಂಡಿರಲೂಬಹುದು. ಆದರೂ ಅವು ಶಾಲೆಗಳೆದುರು ನಿಂತು ಸೆಡ್ಡು ಹೊಡೆಯುತ್ತಲೇ ಇವೆ ಅನಿಸಿತು. ಇದಕ್ಕೆ ಸಾಕ್ಷಿ ಬೆಲ್ಲು ಹೊಡೆಯುವ ತನಕ ಪೋಸ್ಟರುಗಳನ್ನು ನೋಡುತ್ತ ಸುಳಿದಾಡುತ್ತಿರುವ ಹುಡುಗರು ಮತ್ತು ಅವರನ್ನು ಪತ್ತೆಹಚ್ಚಿ ಶಾಲೆಗೆ ದಬ್ಬಲೆಂದು ಪಹರೆ ಕಾಯುತ್ತಿರುವ ತಂದೆಯರು; ಅವರಲ್ಲಿ ತನ್ನ ಮಗನನ್ನು ಹುಡುಕುತ್ತಿರುವ ನನ್ನ ತಮ್ಮನೂ ಇರುವುದುಂಟು.
ಸತ್ಪರಂಪರೆಗಳು ಕ್ಷೀಣಗೊಳ್ಳಬಹುದು. ಆದರೆ ಹಾಗೆ ಸುಲಭಕ್ಕೆ ಕಣ್ಮರೆಯಾಗುವುದಿಲ್ಲ.
[ಚಿತ್ರಗಳು-ಲೇಖಕರದು]
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.
nivu omme phkiza film bagge barediddire , adu yava ankana entu tilisuvira?