Advertisement
ಸೀಮಾ ಹೆಗಡೆ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ

ಸೀಮಾ ಹೆಗಡೆ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ

(ನೆದರ್ಲ್ಯಾಂಡ್ ನಲ್ಲಿರುವ ಟಿಬೆಟಿಯನ್ನರ ಅಂಗಡಿ)

ಇನ್ನು ಕೆಲ ವರ್ಷಗಳ ನಂತರ ನಿವೃತ್ತನಾದ ನಂತರ ಭಾರತಕ್ಕೆ ಹೋಗಿ ನೆಲೆಸುತ್ತೇನೆ; ಈಗ ನಮಗೆ ಭಾರತಕ್ಕೆ ಹೋಗುವುದು, ಅಲ್ಲಿ ನೆಲೆಸುವುದು ಸುಲಭ. ಪ್ರಧಾನಿ ಮೋದಿಯವರು OCI ಕಾರ್ಡ್ ಸೌಲಭ್ಯ ಒದಗಿಸಿದ್ದಾರಲ್ಲ” ಎಂದು ಸಂತಸ ವ್ಯಕ್ತಪಡಿಸಿದ್ದರು. “ನಾವೂ ಅಷ್ಟರಲ್ಲಿ ಊರಿಗೆ ಹಿಂದಿರುಗುತ್ತೇವೆ, ನಮ್ಮಲ್ಲಿಗೆ ಭೇಟಿ ಕೊಡಿ” ಎಂದಿದ್ದೆವು. “ಖಂಡಿತ ಬರುತ್ತೇನೆ” ಎಂದಿದ್ದರು. ಎಲ್ಲವೂ ಕನಸಾಗಿಯೇ ಉಳಿಯಿತು, ಅನಿರುದ್ಧ ಅಕಾಲ ಮರಣಕ್ಕೆ ತುತ್ತಾದರು. ಸೀಮಾ ಎಸ್ ಹೆಗಡೆ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

 

ನಮ್ಮದು ಎಂದು ಹೇಳಿಕೊಳ್ಳಲು ಒಂದು ದೇಶವೇ ಇಲ್ಲದಿದ್ದರೆ ಹೇಗಿರಬಹುದು? ಅಥವಾ ನಾವು ಎಲ್ಲೂ ಸಲ್ಲದವರಂತೆ ಬದುಕಬೇಕಾದರೆ ಹೇಗನಿಸಬಹುದು? ನನಗಂತೂ ಯೋಚಿಸಲೂ ಕೂಡ ಸಾಧ್ಯವಾಗುತ್ತಿಲ್ಲ. ಆದರೆ ಆ ರೀತಿ ಬದುಕುತ್ತಿರುವ ಕೆಲವರನ್ನು ಆಗಾಗ ಭೇಟಿಯಾಗುತ್ತಲೇ ಇರುತ್ತೇನೆ.

ನಾನೀಗ ಸಧ್ಯದಲ್ಲಿ ವಾಸವಾಗಿರುವುದು ನೆದರ್ಲ್ಯಾಂಡ್ ನಲ್ಲಿ. ಇಲ್ಲಿ ಅನೇಕ ದೇಶಗಳಿಂದ ಬಂದು ವಾಸವಾಗಿರುವ ಜನರಿದ್ದಾರೆ, ಅವರು ಇಲ್ಲಿಯ ಭಾಷೆಯನ್ನು ಅಚ್ಚುಕಟ್ಟಾಗಿ ಮಾತನಾಡುತ್ತಾರೆ, ಇಲ್ಲಿಯವರಂತೆಯೇ ವ್ಯವಹರಿಸುತ್ತಾರೆ. ಇಲ್ಲಿ ಬಂದ ಮೊದಮೊದಲು ಅವರನ್ನೆಲ್ಲ ನೋಡಿದಾಗ ನನಗೆ ಹಲವಾರು ಬಾರಿ ಅನಿಸುತ್ತಿತ್ತು- ಬೇರೆ ಸಂಸ್ಕೃತಿಗೆ ಎಷ್ಟೊಂದು ಒಗ್ಗಿಹೋಗಿದ್ದಾರೆ ಎಂದು. ಆದರೆ ಇಲ್ಲಿ ಹಲವಾರು ವರುಷಗಳನ್ನು ಕಳೆದ ಮೇಲೆ ಅವರ ಇನ್ನೊಂದು ಮುಖದ ಪರಿಚಯವಾಗುತ್ತಿದೆ.

ಇಲ್ಲಿ ಕೆಲವು ಟಿಬೆಟನ್ ಅಂಗಡಿಗಳಿವೆ. ಟಿಬೆಟ್ ನಿಂದ ವಲಸೆ ಬಂದಿರುವ ಜನರು ಅದನ್ನು ನಡೆಸುತ್ತಿದ್ದಾರೆ. ಆ ಅಂಗಡಿಗಳಲ್ಲಿ ಅಲ್ಲಿ ಭಾರತವೂ ಸೇರಿದಂತೆ ನೇಪಾಳ, ಟಿಬೆಟ್ ಮೊದಲಾದ ಪ್ರದೇಶಗಳ ಹಲವಾರು ಬಗೆಯ ವಸ್ತುಗಳು, ಬಟ್ಟೆಗಳು ಸಿಗುತ್ತವೆ. ಅಂಥ ಅಂಗಡಿಗೊಮ್ಮೆ ಹೋಗಿದ್ದೆವು. ಯಾರಿಗೋ ಉಡುಗೊರೆಯಾಗಿ ಕೊಡಲು ಒಂದೆರಡು ವಸ್ತುಗಳನ್ನು ಕೊಳ್ಳಬೇಕಿತ್ತು. ಆ ಅಂಗಡಿಯ ಮಾಲೀಕ ಟಿಬೆಟ್ ನವರಂತೆ. ನಮ್ಮ ಬಳಿ ನಾವು ಎಲ್ಲಿಯವರು ಎಂದು ವಿಚಾರಿಸಿದರು. ನಾವು ಭಾರತದವರು ಎಂದು ಗೊತ್ತಾದ ತಕ್ಷಣ ನಾವು ಕೊಳ್ಳಲು ಹೊರಟ ವಸ್ತುಗಳ ಮೇಲೆ discount ಕೊಟ್ಟರು, ಮತ್ತು ಹೇಳಿದರು- “ಭಾರತ ಮತ್ತು ಭಾರತೀಯರು ನಮಗೆ ತುಂಬಾ ಉಪಕಾರ ಮಾಡಿದ್ದಾರೆ, ಅವರಿಗೆ ನಾವು ಯಾವತ್ತಿದ್ದರೂ ಋಣಿ. ಈ ರೀತಿ ಯಾರಾದರೂ ಭಾರತೀಯರು ನನ್ನ ಅಂಗಡಿಗೆ ಬಂದರೆ ನನ್ನ ಕೈಲಾಗಿದ್ದನ್ನು ಮಾಡುತ್ತೇನೆ, ನಾನು ಬೈಲುಕೊಪ್ಪೆಗೆ ಕೂಡ ಒಮ್ಮೆ ಹೋಗಿದ್ದೆ” ಅಂದರು. ಅಷ್ಟೇ ಅಲ್ಲದೆ ಮೂರು ಅಗರಬತ್ತಿಯ ಪೊಟ್ಟಣಗಳನ್ನು ತೆಗೆದು “ನಿಮ್ಮ ಪ್ರಾರ್ಥನೆಯ ಸಮಯದಲ್ಲಿ ಉಪಯೋಗಿಸುತ್ತೀರಲ್ಲ, ಇದನ್ನು ತೆಗೆದುಕೊಳ್ಳಿ” ಎಂದರು. ಅಂಗಡಿಯಿಂದ ಹೊರಬೀಳುವಾಗ ಏನೋ ಒಂಥರಾ ತಳಮಳವಾಯಿತು. ಟಿಬೆಟ್ ನ ಜನರು ಎಲ್ಲೆಲ್ಲೋ ಹಂಚಿ ಹೋಗಿದ್ದಾರೆ, ಅವರ ದೇಶ ಈಗ ಅವರದಲ್ಲ. ಅದರ ಬಗ್ಗೆ ಮಾತನಾಡಲೂ ಜಗತ್ತಿನಲ್ಲಿ ಯಾರಿಗೂ ಮನಸ್ಸಿಲ್ಲ. ಟಿಬೆಟ್ ನ ಹಲವಾರು ಜನರು ಭಾರತದಲ್ಲಿ ಅವರದೇ ಕಾಲೋನಿಗಳಲ್ಲಿ ಉಳಿದುಕೊಂಡಿದ್ದರೂ ಕೂಡ ಅವರ ದೇಶದ ನೆನಪು ಈಗಿನವರಿಗಲ್ಲದಿದ್ದರೂ ಹಳೆಯ ತಲೆಮಾರಿನವರಿಗಾದರೂ ಕಾಡದಿರುತ್ತದೆಯೇ?

(ಟಿಬೇಟ್ ನ ಸುಂದರ ಬೆಟ್ಟಗಳು)

ಸೂರಿನಾಮ್- ದಕ್ಷಿಣ ಅಮೆರಿಕಾದ ಈಶಾನ್ಯ ದಿಕ್ಕಿನಲ್ಲಿರುವ ಒಂದು ಪುಟ್ಟ ದೇಶ. ಒಂದು ಕಾಲಕ್ಕೆ ಡಚ್ ರ ಹಿಡಿತದಲ್ಲಿದ್ದು, ಅವರ ಕಾಲೋನಿಯಾಗಿದ್ದು, ಆನಂತರದಲ್ಲಿ ಸ್ವಾತಂತ್ರ್ಯ ಪಡೆಯಿತು. ಡಚ್ಚರು ಭಾರತ, ಇಂಡೋನೇಷಿಯಾಗಳಲ್ಲೆಲ್ಲ ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಂಡು, ತಮ್ಮ ಹಿಡಿತದಲ್ಲಿದ್ದ ಸುರಿನಾಮ್ ನಲ್ಲಿ ಕೆಲಸಮಾಡಲು ಭಾರತದಿಂದ ಜನರನ್ನು ಹಡಗಿನಲ್ಲಿ ತೆಗೆದುಕೊಂಡು ಹೋಗಿದ್ದರಂತೆ. ಆ ಪ್ರಯಾಣದ ಬಗ್ಗೆ, slave-trade ನ ಬಗ್ಗೆ ಬರೆದರೆ ಅದೇ ಉದ್ದದ ಕತೆಯಾದೀತು. ಅದೀಗ ಬೇಡ. ಭಾರತದಿಂದ ಕೆಲಸಕ್ಕೆಂದು ಹೋದ ಜನರಿಗೆ ತಮ್ಮ ಊರನ್ನು, ತಮ್ಮವರನ್ನು, ಮರಳಿ ನೋಡಲು ಸಾಧ್ಯವಾಗಲಿಲ್ಲ. ಆದರೂ ಅವರು ತಮ್ಮತನವನ್ನು ಇನ್ನೂ ಜೀವಂತವಾಗಿರಿಸಿಕೊಂಡಿದ್ದಾರೆ! ನಮ್ಮಷ್ಟೇ ಆಸ್ಥೆಯಿಂದ ನಮ್ಮ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಹಲವಾರು ಜನರು ಸುರಿನಾಮ್ ದೇಶದಿಂದ ನೆದರ್ಲ್ಯಾಂಡ್ ಗೆ ಬಂದು ಇಲ್ಲಿಯೇ ಉಳಿದವರಿದ್ದಾರೆ. ಡಚ್ ಮಾತನಾಡುತ್ತಾರೆ, ಇಂದಿಗೂ ಕೂಡ ಹಿಂದಿ ಮಾತನಾಡುತ್ತಾರೆ, ಇಂಗ್ಲಿಷ್ ಅಷ್ಟಾಗಿ ಬರುವುದಿಲ್ಲ. ಅವರೆಲ್ಲರೂ ನೋಡಲು ಭಾರತೀಯರಂತೆಯೇ ಕಾಣಿಸುತ್ತಾರೆ.

ಆ ಅಂಗಡಿಯ ಮಾಲೀಕ ಟಿಬೆಟ್ ನವರಂತೆ. ನಮ್ಮ ಬಳಿ ನಾವು ಎಲ್ಲಿಯವರು ಎಂದು ವಿಚಾರಿಸಿದರು. ನಾವು ಭಾರತದವರು ಎಂದು ಗೊತ್ತಾದ ತಕ್ಷಣ ನಾವು ಕೊಳ್ಳಲು ಹೊರಟ ವಸ್ತುಗಳ ಮೇಲೆ discount ಕೊಟ್ಟರು, ಮತ್ತು “ಭಾರತ ಮತ್ತು ಭಾರತೀಯರು ನಮಗೆ ತುಂಬಾ ಉಪಕಾರ ಮಾಡಿದ್ದಾರೆ, ಅವರಿಗೆ ನಾವು ಯಾವತ್ತಿದ್ದರೂ ಋಣಿ. ಈ ರೀತಿ ಯಾರಾದರೂ ಭಾರತೀಯರು ನನ್ನ ಅಂಗಡಿಗೆ ಬಂದರೆ ನನ್ನ ಕೈಲಾಗಿದ್ದನ್ನು ಮಾಡುತ್ತೇನೆ, ನಾನು ಬೈಲುಕೊಪ್ಪೆಗೆ ಕೂಡ ಒಮ್ಮೆ ಹೋಗಿದ್ದೆ” ಎಂದು ಹೇಳಿದರು. ಅಷ್ಟೇ ಅಲ್ಲದೆ ಮೂರು ಅಗರಬತ್ತಿಯ ಪೊಟ್ಟಣಗಳನ್ನು ತೆಗೆದು “ನಿಮ್ಮ ಪ್ರಾರ್ಥನೆಯ ಸಮಯದಲ್ಲಿ ಉಪಯೋಗಿಸುತ್ತೀರಲ್ಲ, ಇದನ್ನು ತೆಗೆದುಕೊಳ್ಳಿ” ಎಂದರು.

                                                                                                          (ಸುರಿನಾಮ್ ನ ಒಂದು ನದಿ)

ಹೀಗೆಯೇ ಒಮ್ಮೆ ಹೊರಗೆ ಹೋಗಿದ್ದಾಗ ಸುರಿನಾಮ್ ನಿಂದ ಇಲ್ಲಿಗೆ ಬಂದುಳಿದ ವ್ಯಕ್ತಿಯೊಬ್ಬರು ಭೇಟಿಯಾಗಿದ್ದರು. ನಾವು ಭಾರತೀಯರೆಂದು ನಮ್ಮ ಜೊತೆ ಮಾತಿಗಿಳಿದರು. ಅವರಿಗೆ ಭಾರತದ ಬಗ್ಗೆ ಏನೋ ಸೆಳೆತವಂತೆ. ಒಂದು ಕಾಲದಲ್ಲಿ ತಮ್ಮ ತಾತಂದಿರು ಸುರಿನಾಮ್ ಗೆ ಹೋಗಿರದಿದ್ದರೆ ತಾನು ಭಾರತೀಯನಾಗಿರುತ್ತಿದ್ದೆ ಎಂದರು. ಅವರೊಮ್ಮೆ ಭಾರತ ಹೇಗಿದೆ ಎಂದು ನೋಡಲು ವಾರಣಾಸಿಗೆ ಹೋಗಿದ್ದರಂತೆ. ತನಗೆ ತುಂಬಾ ಇಷ್ಟವಾಯಿತು, ಆದರೆ ದುರದೃಷ್ಟವೆಂದರೆ ನಮ್ಮ ಪೂರ್ವಜರು ಯಾವ ಊರಿನವರೆಂದೂ ಗೊತ್ತಿಲ್ಲ, ಈಗ ನನಗೆ ಭಾರತದಲ್ಲಿ ಪರಿಚಯದವರು ಯಾರೂ ಇಲ್ಲ ಎಂದು ಬೇಸರಪಟ್ಟುಕೊಂಡರು.

ಇದೇ ತರ ಪರಿಚಯವಾಗಿದ್ದು ಅನಿರುದ್ಧ. ಅವರೂ ಕೂಡ ತುಂಬಾ ವರ್ಷಗಳ ಮೊದಲೇ ಸುರಿನಾಮ್ ನಿಂದ ಇಲ್ಲಿಗೆ ಬಂದವರು. ಸುಂದರವಾಗಿ ಹಿಂದಿ ಮಾತನಾಡುವವರು. ನಮಗೆ ಇಲ್ಲಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಪರಿಚಯವಾದರು. ಅವರು ಶ್ರೀ ರಾಮಕೃಷ್ಣ ಪರಮಹಂಸರ ಭಕ್ತರು. ಸುರಿನಾಮ್ ಬಗ್ಗೆ ಎಷ್ಟೊಂದು ಕತೆಗಳನ್ನು ನಮ್ಮ ಬಳಿ ಹಂಚಿಕೊಂಡರು. ಹಲವಾರು ಬಾರಿ ಭಾರತಕ್ಕೆ ಹೋಗಿ ಬಂದಿದ್ದರಂತೆ. “ನಮ್ಮ ಪೂರ್ವಜರು ಯಾವ ಊರಿನವರೆಂದು ಗೊತ್ತಿಲ್ಲ, ಆದರೆ ಪಶ್ಚಿಮ ಬಂಗಾಳಕ್ಕೆ ಹೋದಾಗ ಯಾವುದೊ ಸಿಹಿತಿಂಡಿಯನ್ನು ನೋಡಿ, ನನ್ನ ತಾಯಿ ಮಾಡುತ್ತಿದ್ದ ಸಿಹಿತಿಂಡಿ ಅದೇ ಆಗಿದ್ದರಿಂದ ನಮ್ಮ ಪೂರ್ವಜರು ಇಲ್ಲಿಯವರೇ ಇದ್ದಿರಬಹುದು ಎಂದುಕೊಂಡೆ” ಎಂದಿದ್ದರು. “ಇನ್ನು ಕೆಲ ವರ್ಷಗಳ ನಂತರ ನಿವೃತ್ತನಾದ ನಂತರ ಭಾರತಕ್ಕೆ ಹೋಗಿ ನೆಲೆಸುತ್ತೇನೆ; ಈಗ ನಮಗೆ ಭಾರತಕ್ಕೆ ಹೋಗುವುದು, ಅಲ್ಲಿ ನೆಲೆಸುವುದು ಸುಲಭ. ಪ್ರಧಾನಿ ಮೋದಿಯವರು OCI ಕಾರ್ಡ್ ಸೌಲಭ್ಯ ಒದಗಿಸಿದ್ದಾರಲ್ಲ” ಎಂದು ಸಂತಸ ವ್ಯಕ್ತಪಡಿಸಿದ್ದರು. “ನಾವೂ ಅಷ್ಟರಲ್ಲಿ ಊರಿಗೆ ಹಿಂದಿರುಗುತ್ತೇವೆ, ನಮ್ಮಲ್ಲಿಗೆ ಭೇಟಿ ಕೊಡಿ” ಎಂದಿದ್ದೆವು. “ಖಂಡಿತ ಬರುತ್ತೇನೆ” ಎಂದಿದ್ದರು. ಎಲ್ಲವೂ ಕನಸಾಗಿಯೇ ಉಳಿಯಿತು, ಅನಿರುದ್ಧ ಅಕಾಲ ಮರಣಕ್ಕೆ ತುತ್ತಾದರು.

ಸುರಿನಾಮ್ ಗೆ ಭಾರತದಿಂದಲ್ಲದೇ ಇಂಡೋನೇಷಿಯಾ, ಚೀನಾ, ಆಫ್ರಿಕಾ ಮೊದಲಾದ ಕಡೆಯಿಂದ ಕೆಲಸಗಾರರನ್ನು ಕರೆದೊಯ್ದಿದ್ದರು. ಕಾಲಾನಂತರದಲ್ಲಿ ಅಲ್ಲಿ ಆ ಜನರೆಲ್ಲರೂ ಬೇರೆ ಬೇರೆ ಜನರ ಜೊತೆ ಬೆರೆತು ಮಿಶ್ರಣಗೊಂಡರು. ನಾನು ಇಲ್ಲಿ ಕೆಲಸಮಾಡುತ್ತಿದ್ದಾಗ ಆಫೀಸ್ ನಲ್ಲಿ  ಒಬ್ಬ ವ್ಯಕ್ತಿ ಇದ್ದರು. ಅವರು ಸುರಿನಾಮ್ ನವರಂತೆ. ನನಗೆ ಗೊತ್ತಿರಲಿಲ್ಲ. ನಾನು ಭಾರತೀಯಳೆಂದು ಗೊತ್ತಾದ ದಿನವೇ ಅವರು ನನ್ನ ರೂಮ್ ಗೆ ಬಂದು ಸುಮಾರು ಹೊತ್ತು ಮಾತನಾಡಿದ್ದರು. ಅವರ ತಂದೆ ಭಾರತ ಮೂಲದವರಂತೆ, ತಾಯಿ ಆಫ್ರಿಕಾದವರಂತೆ. “ನಾನು ಹುಟ್ಟಿದ್ದು, ಬೆಳೆದಿದ್ದು ಸುರಿನಾಮ್ ನಲ್ಲಿ. ಆದರೆ ನನಗೆ ನನ್ನ ತಂದೆಯ ದೇಶವನ್ನು ನೋಡಬೇಕೆನಿಸಿ ಒಮ್ಮೆ ಭಾರತಕ್ಕೆ ಹೋಗಿದ್ದೆ. ಯಾವುದೋ ಗುಡ್ಡದ ಮೇಲಿರುವ ಶಿವನ ದೇವಸ್ಥಾನಕ್ಕೆ ಹೋಗಿದ್ದೆ, ಅದು ಯಾವುದು ನಿನಗೆ ಗೊತ್ತಾ?” ಎಂದು ಕೇಳಿದ್ದರು! ಗುಡ್ಡದ ಮೇಲಿರುವ ಸಾವಿರಾರು ಶಿವನ ದೇವಸ್ಥಾನಗಳಲ್ಲಿ ಅವರು ಭೇಟಿಕೊಟ್ಟಿದ್ದು ಯಾವುದನ್ನು ಎಂದು ಅಂದಾಜಿಸಲು ನನಗೆ ಕೊನೆಗೂ ಸಾಧ್ಯವಾಗಲಿಲ್ಲ.

ಕೆಲಸಕ್ಕೆಂದು ಕೆಲ ವರ್ಷಗಳ ಕಾಲ ಹೊರದೇಶದಲ್ಲಿರುವಾಗಲೇ ತಾಯ್ನಾಡಿಗಾಗಿ ಎಷ್ಟು ಹಂಬಲಿಸುತ್ತೇವೆ. ಪ್ರತೀವರ್ಷ ರಜೆಗೆಂದು ದೇಶಕ್ಕೆ ಬರುವಾಗಿನ ಖುಷಿಯೇ ಬೇರೆ. ವಿಮಾನ ಇಳಿಯುತ್ತಿರುವಾಗ ಕಿಟಕಿಯಿಂದ ನಮ್ಮ ದೇಶವನ್ನು ನೋಡುವುದೇ ಆನಂದ. ಅದೇ ಹಿಂದಿರುಗಿ ಹೊರಟಾಗ ನೋಡಲು ಮನಸ್ಸಾಗುವುದಿಲ್ಲ, ಏಕೆಂದರೆ ಅಲ್ಲಿಂದ ದೂರವಾಗುತ್ತಿದ್ದೇನೆ ಎಂಬ ಬೇಸರ. ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಎಂಬ ಮಾತು ಎಷ್ಟು ನಿಜ. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಅಮ್ಮನ ಮನೆಯಿಂದ ಬೆಂಗಳೂರಿಗೆ ಹೊರಡುವಾಗಲೇ ಮನಸ್ಸು ಭಾರ. ಅಮ್ಮನಿಂದ ದೂರ ಎಂಬ ದುಃಖ ಒಂದು ಕಡೆಯಾದರೆ ಮಲೆನಾಡ ಪರಿಸರದ ಅನುಭವಕ್ಕೆ ಇನ್ನೊಂದು ವರ್ಷ ಕಾಯಬೇಕು ಎನ್ನುವ ಬೇಸರ. 

ಇನ್ನೊಂದು ಸಂದರ್ಭ- ಪ್ರಧಾನಿ ನರೇಂದ್ರ ಮೋದಿಯವರು ನೆದರ್ಲ್ಯಾಂಡ್ ಗೆ ಭೇಟಿಯಿತ್ತಾಗ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಎಷ್ಟೋ ಜನ ಸುರಿನಾಮ್ ನವರು ತಮ್ಮದೇ ಪ್ರಧಾನಮಂತ್ರಿ ಬಂದಿದ್ದಾರೇನೋ ಅನ್ನುವಷ್ಟು ಅಕ್ಕರೆಯಿಂದ ಬಂದಿದ್ದರು. ನಾನೂ ಕೂಡ ಹೋಗಿದ್ದೆ, ನನ್ನ ಪಕ್ಕದಲ್ಲಿ ಸುರಿನಾಮ್ ನ ಭಾರತೀಯ ಮೂಲದ ನಡುವಯಸ್ಸಿನ ವ್ಯಕ್ತಿಯೊಬ್ಬರು ಬಂದು ಕುಳಿತರು. ನನ್ನ ಜೊತೆ ಕೆಲವು ನಿಮಿಷ ಮಾತನಾಡಿದರು. ಮೋದಿಯವರು ಬಂದು ಮಾತಿಗೆ ತೊಡಗಿದರು. ಅಂದಿನ ಅವರ ಭಾಷಣದಲ್ಲಿ ಸುರಿನಾಮ್ ನ ಜನರ ಭಾರತದ ಬಗೆಗಿನ ಪ್ರೀತಿಯ ಬಗ್ಗೆ ಅವರು ವಿಶೇಷವಾಗಿ ಮಾತನಾಡಿದರು. “ಈಗಿನ ಕಾಲದ ಜನರು ದೇಶಬಿಟ್ಟು ಹೊರಗೆ ಹೋದ ನಂತರ ಒಂದೇ ಪೀಳಿಗೆಯಲ್ಲಿ ಭಾಷೆ ಬಿಟ್ಟು ಹೋಗುತ್ತದೆ, ನಂತರದಲ್ಲಿ ದೇಶದ ಜೊತೆಗಿನ ಸಂಪರ್ಕ ಕೂಡ. ಆದರೆ ಸಂಪರ್ಕ ಸಾಧನಗಳೂ ಇಲ್ಲದಿದ್ದ ಆಗಿನ ಕಾಲದಲ್ಲಿ ದೂರದ ಸುರಿನಾಮ್ ನಲ್ಲಿನ ಭಾರತೀಯರು ನಮ್ಮ ಭಾಷೆ, ಸಂಸ್ಕೃತಿಯನ್ನು ಜೀವಂತವಾಗಿರಿಸಿದ್ದಾರೆ. ಇನ್ನೂ ಕೂಡ ಭಾರತದ ಬಗ್ಗೆ ಪ್ರೀತಿಯನ್ನು ತೋರಿಸುತ್ತಾರೆ…” ಮೋದಿಯವರು ಈ ಮಾತನ್ನು ಹೇಳುತ್ತಿದ್ದಂತೆಯೇ ನನ್ನ ಪಕ್ಕದಲ್ಲಿನ ವ್ಯಕ್ತಿ ಕಣ್ಣೊರೆಸಿಕೊಳ್ಳುತ್ತಿದ್ದುದನ್ನು ನೋಡಿ ನನಗೂ ಕೂಡ ಕಣ್ಣು ಮಂಜಾಗಿತ್ತು.

                                                                                           (ನೆದರ್ಲ್ಯಾಂಡ್ ನ ಒಂದು ದೃಶ್ಯ)

ಈ ರೀತಿಯ ಹಲವಾರು ಅನುಭವಗಳಾಗಿವೆ, ಭಾರತ ಮೂಲದ ಕೀನ್ಯಾ ದೇಶದವರ ಒಂದಿಬ್ಬರ ಪರಿಚಯವೂ ನನಗಿದೆ. ಅವರ ಕಥೆ ಕೂಡ ಇದೆ ರೀತಿ. ಇತಿಹಾಸ ಅವರೆಲ್ಲರ ಪಾಲಿಗೆ ಕಠೋರವಾಗಿತ್ತು. ಅನಿರುದ್ಧನಂತೆ ಭಾರತಕ್ಕೆ ಹಂಬಲಿಸುವವರು ಎಷ್ಟೊಂದು ಜನರಿದ್ದಾರೆ. ಇಂಥ ಸಾವಿರ ಸಾವಿರ ಜನರು ಜಗತ್ತಿನ ತುಂಬೆಲ್ಲಾ ಕಾಣಸಿಗುತ್ತಾರೆ. ಅವರಲ್ಲಿ ಅನೇಕರಿಗೆ ಮನಸ್ಸಿನ ಮೂಲೆಯಲ್ಲೆಲ್ಲೋ ಇತಿಹಾಸ ಬೇರೆ  ರೀತಿ ಇರುತ್ತಿದ್ದರೆ ಭಾರತ ಇಂದು ತಮ್ಮ ದೇಶವಾಗಿರುತ್ತಿತ್ತು ಎಂಬ ಭಾವನೆ ಸದಾ ಇರುತ್ತದೆ. ಜಗತ್ತಿನ ಯಾವ್ಯಾವುದೋ ಮೂಲೆಯಲ್ಲಿದ್ದು ಅವರೆಲ್ಲ ಭಾರತವನ್ನು ತಮ್ಮ ತಾಯ್ನಾಡೆಂದು ಆರಾಧಿಸುತ್ತಾರೆ. ಅಲ್ಲಿಗೆ ಹೋಗಲು ಹಂಬಲಿಸುತ್ತಾರೆ. ತಮ್ಮ ಭಾರತೀಯತೆಯನ್ನು ಒಳಗಡೆಯೇ ಬಚ್ಚಿಟ್ಟುಕೊಂಡು, ಕಾನೂನು ಪ್ರಕಾರ ಬೇರೆ ದೇಶಗಳ ಪ್ರಜೆಗಳಾಗಿ, ಆದರೆ ಮನಃಪೂರ್ವಕವಾಗಿ ಅಲ್ಲಿಯವರಾಗದೇ, ಭಾರತಕ್ಕೂ ಬರಲಾಗದೇ ಗೊಂದಲದಲ್ಲಿಯೇ ಎಲ್ಲೂ ಸಲ್ಲದವರಾಗಿ ಜೀವನವನ್ನು ಕಳೆದುಬಿಡುತ್ತಾರೆ. 

ಕೆಲಸಕ್ಕೆಂದು ಕೆಲ ವರ್ಷಗಳ ಕಾಲ ಹೊರದೇಶದಲ್ಲಿರುವಾಗಲೇ ತಾಯ್ನಾಡಿಗಾಗಿ ಎಷ್ಟು ಹಂಬಲಿಸುತ್ತೇವೆ. ಪ್ರತೀವರ್ಷ ರಜೆಗೆಂದು ದೇಶಕ್ಕೆ ಬರುವಾಗಿನ ಖುಷಿಯೇ ಬೇರೆ. ವಿಮಾನ ಇಳಿಯುತ್ತಿರುವಾಗ ಕಿಟಕಿಯಿಂದ ನಮ್ಮ ದೇಶವನ್ನು ನೋಡುವುದೇ ಆನಂದ. ಅದೇ ಹಿಂದಿರುಗಿ ಹೊರಟಾಗ ನೋಡಲು ಮನಸ್ಸಾಗುವುದಿಲ್ಲ, ಏಕೆಂದರೆ ಅಲ್ಲಿಂದ ದೂರವಾಗುತ್ತಿದ್ದೇನೆ ಎಂಬ ಬೇಸರ. ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಎಂಬ ಮಾತು ಎಷ್ಟು ನಿಜ. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಅಮ್ಮನ ಮನೆಯಿಂದ ಬೆಂಗಳೂರಿಗೆ ಹೊರಡುವಾಗಲೇ ಮನಸ್ಸು ಭಾರ. ಅಮ್ಮನಿಂದ ದೂರ ಎಂಬ ದುಃಖ ಒಂದು ಕಡೆಯಾದರೆ ಮಲೆನಾಡ ಪರಿಸರದ ಅನುಭವಕ್ಕೆ ಇನ್ನೊಂದು ವರ್ಷ ಕಾಯಬೇಕು ಎನ್ನುವ ಬೇಸರ. ನಾವು ಹೊರಟಾಗ ಅಮ್ಮ ಸಣ್ಣ ಮುಖ ಮಾಡಿ ನಿಂತಿರುತ್ತಾಳೆ, ನಾನು ನನ್ನ ಭಾರವಾದ ಬ್ಯಾಗ್ ಗಳ ಜೊತೆಗೆ ಭಾರವಾದ ಮನಸ್ಸನ್ನೂ ಎಳೆದುಕೊಂಡು ಬಂದು ವಿಮಾನವನ್ನೇರುತ್ತೇನೆ.

 

About The Author

ಸೀಮಾ ಎಸ್ ಹೆಗಡೆ

ಹುಟ್ಟಿದ್ದು ಬೆಳೆದದ್ದು ಮಲೆನಾಡಿನ ಹಳ್ಳಿಯ ರೈತ ಕುಟುಂಬವೊಂದರಲ್ಲಿ. ಓದಿದ್ದು ಅರ್ಥಶಾಸ್ತ್ರ. ಈಗ ಇರುವುದು ನೆದರ್ಲ್ಯಾಂಡ್ಸ್ ನ ಆಮ್ಸ್ಟೆರ್ಡಾಮ್ ನಲ್ಲಿ.

11 Comments

  1. Deepti

    Super Seema mam, nimminda economics lecture keluvagale maimaretu keluttidde… Iga nimma baraha matte ade dinagalannu nenapisitu

    Reply
    • Seema

      ದೀಪ್ತಿ,
      ಅರ್ಥಶಾಸ್ತ್ರದ ಪಾಠಗಳನ್ನೂ ಮತ್ತು ಈ ಪುಟ್ಟ ಲೇಖನವನ್ನೂ ನೀನು ಮೆಚ್ಚಿಕೊಂಡಿದ್ದು ಮನಸ್ಸಿಗೆ ತುಂಬಾ ಮುದ ಕೊಟ್ಟಿತು. Comment ಮಾಡಿದ್ದಕ್ಕೆ ಧನ್ಯವಾದಗಳು.
      ಶುಭಾಶಯಗಳು,
      ಸೀಮಾ

      Reply
  2. Shrivatsa Desai

    ಸೀಮಾ ಅವರೆ,
    4 ದಶಕಗಳ ಮೇಲೆ ಯು ಕೆಯಲ್ಲಿ ವಾಸ ಮಾಡಿದ ನಾನು ನಿಮ್ಮ ಬರಹದಲ್ಲಿಯವರ ಮನಃಸ್ಥಿತಿಯನ್ನು ಚೆನ್ನಾಗೆ ಅರ್ಥ ಮಾಡಿಕೊಳ್ಲ ಬಲ್ಲೆ. ನೀವಂದಂತೆ ”ತಮ್ಮ ಭಾರತೀಯತೆಯನ್ನು ಒಳಗಡೆಯೇ ಬಚ್ಚಿಟ್ಟುಕೊಂಡು,….ಎಲ್ಲೂ ಸಲ್ಲದವರಾಗಿ ಜೀವನವನ್ನು ಕಳೆದುಬಿಡುತ್ತಾರೆ.”. ಸತ್ಯವೇ. ಇದು ಎಲ್ಲ ಅನಿವಾಸಿಗಳ ಪಾಡು ಸಹ, ’ಇಲ್ಲಿರುವದು ಸುಮ್ಮನೆ’ ಅನ್ನುತ್ತಾ ದಾಸರ ಪದಗಳನ್ನೋ, 60-70 ದಶಕಗಳ ಹಿಂದಿ ಫಿಲ್ಮೀ ಹಾಡುಗಳನ್ನೋ, ಕಿರಾನಾ ಘರಾನಾದ ಶಾಸ್ತ್ರೀಯ ಸಂಗೀತವೋ ಕೇಳುತ್ತಾ ಕಾಲ ಕಳೆಯುವದು ಅಪರೂಪವಲ್ಲ, ಇಲ್ಲಿ ಸಹ. ಇದನ್ನು ವಿಶ್ಲೇಷಿಸಿ ಸಾಕಷ್ಟು ಬರೆದಿದ್ದಾರೆ ಬಹು ಜನ. ಈ ತ್ರಿಶಂಕು ಸ್ವರ್ಗದಲ್ಲಿ ವಾಸಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆದರೂ ನಿಮ್ಮ ಲೇಖನದಲ್ಲೇನೋ ಆತ್ಮೀಯತೆ ಕಂಡಿತು.(ನನ್ನ ಭಾವನೂ ಸಿರ್ಸಿಯವರೇ!)- ಶ್ರೀವತ್ಸ

    Reply
    • seema

      ಶ್ರೀವತ್ಸ ಅವರೇ,
      ತುಂಬಾ ಧನ್ಯವಾದಗಳು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ, comment ಮಾಡಿದ್ದಕ್ಕೆ. ನಿಜ, ನೀವು ಹೇಳಿದಂತೆ ಭಾರತದಿಂದ ಹೊರಗಡೆ ತುಂಬಾ ವರ್ಷ ಕಳೆದರೂ ಹಳೆಯ ಹಿಂದಿ ಸಿನಿಮಾ ಹಾಡುಗಳ ನಂಟು ಬಿಡದವರನ್ನು ನಾನೂ ಸಹ ನೋಡಿದ್ದೇನೆ.

      Reply
  3. Arathi Ghatikar

    ಭಾರತಕ್ಕೆ ಹಿಂದುರುಗುವ ಕನಸು ಕಾಣುತ್ರಾ ಭಾರತೀಯರೆ ಆಗಿದ್ದವರ. ಮನಸ್ಥಿತಿ ಬಹಳ ಮನ ಮುಟ್ಟುವಂತೆ ಚಿತ್ತಿಸಿದ್ದೀರಿ.
    ನಾನು ಕೂಡಾ ದುಬೈಗೆ ವಾಪಸ್ಸಾಗುವಾಗ ನಿಮ್ಮಂತೆಯೆ ಭಾರವಾದ ಬ್ಯಾಗು ಹಾಗು ಅದರಕ್ಕಿಂತಾ ಭಾರವಾದನಸ್ಸಿನೊಂದಿಗೆಯೆ ಹಿಂದಿರುಗುತ್ತೆನೆ.

    Reply
    • SEEMA

      ಆರತಿ ಅವರೇ,
      ಲೇಖನವನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಹೊರದೇಶಗಳಲ್ಲಿರುವ ಬಹುತೇಕ ಎಲ್ಲರ ಭಾವನೆಗಳೂ ಸಹ ಅದೇ ರೀತಿಯವು.

      Reply
  4. Badarinarayan.

    Manamuttuva , aaptha baraha..
    ThanQ mamm.

    Reply
  5. Seema

    Thank you very much Badarinarayan!

    Reply
  6. Geeta hegde

    Seema very nice writing ,liked it

    Reply
  7. ಎಸ್ ಆರ್ ಸೊಂಡೂರು

    ಸೀಮಾ ಹೆಗಡೆ ಅವರೆ , ಅನಿವಾಸಿ ಭಾಭಾರತೀಯರ ಬಗ್ಗೆ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ . ನಿಮ್ಮ ವಿದೇಶಿ ಅನುಭವಗಳನ್ನು ಅಲ್ಲಿನ ಜನರ ನಡವಳಿಕೆ ಸಂಸ್ಕೃತಿ ಬಗ್ಗೆ ಬರೆಯಿರಿ

    Reply
  8. Bhaskar Shetty

    ನಾನೂ ತುಂಬ ಇಷ್ಟಪಟ್ಟ ದೇಶಗಲ್ಲಿ ನೆದರ್ಲ್ಯಾಂಡ್ ಸಹಾ ಒಂದು. ಸುಮಾರು ೭-೮ ಸಾರಿ ಬಂದಿದ್ದೆ. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ