ಸುಮ್ಮನೇ ತಟ್ಟೆಯ ಮುಂದೆ ಕುಳಿತು ಸಮಯ ಉರುಳದಂತೆ, ಈ ತುತ್ತು ಮತ್ತಾರದೋ ಚೀಲ ಸೇರಲಿ ಎಂದಷ್ಟೇ ಪ್ರಾರ್ಥಿಸುತ್ತಾ… ಇಷ್ಟೇ ಅಲ್ಲವಾ ಈ ಬದುಕು ಎನ್ನುವ ಅಂತಿಮ ಸತ್ಯದ ದರ್ಶನವಾದಾಗ ಯಾವುದೆಲ್ಲವನ್ನು ಬೇಕು ಎಂದುಕೊಳ್ಳುತ್ತಿದ್ದೇವೋ ಅದಾವುದೂ ನಮ್ಮ ಆತ್ಯಂತಿಕ ಜರೂರತ್ತಿನ ಪಟ್ಟಿಯಲ್ಲಿ ಇರಲೇ ಇಲ್ಲ ಎನ್ನುವುದನ್ನು ಪ್ರಯಾಸದಿಂದ ಮನಗಾಣುತ್ತಾ… ಯಾವುದೂ ಪೂರ್ಣವಲ್ಲ ಇಲ್ಲಿ… ಈ ರೈಲು ಬಂಡಿ, ನಾವು ಹತ್ತುವ ಮುಂಚೆಯೇ ಪಯಣ ಆರಂಭಿಸಿತ್ತು ಮತ್ತು ನಾವು ಇಳಿದ ನಂತರವೂ ಪಯಣಿಸುತ್ತಲೇ ಇರುತ್ತದೆ ಎಂದು ನಮ್ಮ ಮಿಥ್ಯ ಅಹಮ್ಮಿನ ಕುಡಿಕೆಯನ್ನು ಒಡೆದು ಹಾಕುವುದು ಎಂಥ ಅರ್ಥಪೂರ್ಣ ಕ್ರಿಯೆ…
ಆಶಾ ಜಗದೀಶ್ ಅಂಕಣ “ಆಶಾ ಲಹರಿ”ಯಲ್ಲಿ ಹೊಸ ಬರಹ
ಇಲ್ಲಿ ಯಾರನ್ನೂ ದೂರುವ ಉದ್ದೇಶವಿಲ್ಲ. ದೂರುವ ಮನಸ್ಸೂ ಇಲ್ಲ. ನಮ್ಮವರನ್ನು ದೂರುವುದು ಎಂದರೆ ಆಕಾಶಕ್ಕೆ ಉಗಿದ ಹಾಗೇ ತಾನೇ… ಅದು ಮರಳಿ ನಮ್ಮ ಮೇಲೆಯೇ ಬೀಳುತ್ತದೆ. ಆದರೂ ಸುಮ್ಮನಿರಲು ಬರುವುದಿಲ್ಲ ನಮಗೆ. ಮಾತನಾಡುತ್ತೇವೆ. ಅಶ್ಯಕತೆ ಇದ್ದದ್ದೂ ಇಲ್ಲದ್ದೂ ಎಲ್ಲವನ್ನೂ ಮಾತನಾಡುತ್ತೇವೆ. ಆದರೆ ಹೇಳಲೇಬೇಕಾದ ಒಂದು ಅತಿ ಸಣ್ಣ ಪದವಿರುತ್ತದೆ. ಅದನ್ನು ಮಾತ್ರ ಹೇಳದೇ ಎದೆಯೊಳಗೆ ಬಚ್ಚಿಟ್ಟುಕೊಂಡುಬಿಡುತ್ತೇವೆ. ಅದರ ಪರಿಣಾಮ ಅತಿ ಘೋರ. ನಮಗೆ ಏನೇ ಇರಲಿ ಅದು ಮೂರ್ತವಾಗಿ ಕಾಣಿಸಬೇಕು. ಪ್ರೀತಿಯೂ ಸಹ… ಕಾಣಿಸದ ಯಾವುದನ್ನೂ ನಂಬಲು ನಾವು ತಯಾರೇ ಇರುವುದಿಲ್ಲ! ನಿಜ ಎಂದರೆ ನಾಶವಾಗುವ ಈ ಮರ್ತ್ಯದ ಕಣ್ಣುಗಳಿಗಿಂತ ದಿವ್ಯ ಶಕ್ತಿಯ ಒಳಗಣ್ಣಿಗೆ ಗೋಚರಿಸುವುದೇ ನಿಜವಾದ ಬೆಳಕು. ಸರಳಾರ್ಥದಲ್ಲಿ ಪ್ರೀತಿಯೇ ಜಗದ ಬೆಳಕು. ಅದು ಅದಕು, ಇದಕು, ಎದಕೂ ಆಗಿ ದಾರಿ ತೋರಿಸುತ್ತದೆ. ಕೈ ಹಿಡಿದು ನಡೆಸುತ್ತದೆ. ಮತ್ತೆ ನಡೆಯುವಾಗ ಜೊತೆಯೇ ಇದ್ದು ಎಚ್ಚರದ ಅರಿವಾಗಿರುತ್ತದೆ. ಆದರೆ…
ನಂದಿಯ ತಿರುವುಗಳಲ್ಲಿ, ಮಣ್ಣ ಮಡಿಕೆಗಳಲ್ಲಿ, ಸಸ್ಯ ರಾಶಿಯ ಸಂಪದ್ಭರಿಯ ಹಸಿರಿನಲ್ಲಿ ನನ್ನ ಉಸಿರಿನ ಒಂದು ಅಣು ಈಗಲೂ ರೂಪಾಂತರ ಹೊಂದುತ್ತಾ ಸಂಚರಿಸುತ್ತಿದೆ ಅನಿಸುತ್ತದೆ. ಪುನರ್ಜನ್ಮದ ವರ್ತುಲದಿಂದ ಮುಕ್ತಿ ಇಲ್ಲ ಅದಕ್ಕೆ. ನನ್ನ ಒಳಗಿನ ಎಲ್ಲ ಬಯೋ ಕೆಮಿಕಲ್ ಆಕ್ಷನ್ಸ್ ಮತ್ತು ರಿಯಾಕ್ಷನ್ಸ್‌ಗಳ ಬಗ್ಗೆಯೂ ಅದಕ್ಕೆ ಗೊತ್ತಿದೆ. ನಾನು ಸುಳ್ಳು ಹೇಳಬಹುದು ಅಥವಾ ಸತ್ಯವನ್ನು ಮರೆಮಾಚಬಹುದು. ಹಾಗೆಂದ ಮಾತ್ರಕ್ಕೆ ಸತ್ಯವೆನ್ನುವುದೇ ಸುಳ್ಳಲ್ಲವಲ್ಲ… ಪ್ರೀತಿ ಯಾವಾಗಲೂ ಸಾಪೇಕ್ಷವಾಗಿರುವುದಿಲ್ಲ. ಕೆಲವೊಮ್ಮೆ ಸಪೇಕ್ಷವಾಗಿ ಹುಟ್ಟಿ ನಿರಂತರವಾಗಿಬಿಡುತ್ತದೆ. ಅದಕ್ಕೊಂದು ಒಳಹರಿವಿರುತ್ತದೆ ಮತ್ತದು ಯಾರ ಕಣ್ಣಿಗೂ ಬೀಳದೆ ಗುಪ್ತಗಾಮಿನಿಯಂತೆ ಹರಿಯುತ್ತಲೇ ಇರುತ್ತದೆ ವಿನಾಕಾರಣ… ಕಾರಣವನ್ನು ಹುಡುಕ ಹೊರಡುವುದೂ ನಿರರ್ಥಕ. ಜಗತ್ತಿನಲ್ಲಿ ನೈಜಕತೆಗಳೆಷ್ಟೋ ಅಷ್ಟೇ ದಂತ ಕತೆಗಳೂ ಇವೆ. ಕತೆಗಳು ನಮ್ಮೊಂದಿಗೆ ಮಾತನಾಡುತ್ತವೆ. ನೈಜತೆ ರುಚಿಸದೆ ಹೋದಾಗ ರೋಚಕ ದಂತಕತೆಗಳಾಗಿ ಪ್ರತ್ಯಕ್ಷವಾಗುತ್ತವೆ. ಇದು ಒಂದು ರೀತಿಯಲ್ಲಿ ರೋಚಕತೆಯ ಸೋಲು. ನಾವು ರೋಚಕತೆಯನ್ನು ಬಯಸಿ ಬಂದವರಲ್ಲ. ರೋಚಕತೆಯಾದರೂ ಕ್ಷಣಿಕವೇ. ಪರಮ ಶಾಂತಿ ಮತ್ತು ನಿರ್ಲಿಪ್ತತೆಯೇ ಸ್ಥಾಯಿ ಭಾವ. ನೀರಿನಲ್ಲಿ ಎಷ್ಟೇ ಅಲೆಗಳೇಳಬಹುದು, ಕೊನೆಗಾದರೂ ಅವು ಶಾಂತವಾಗಲೇ ಬೇಕು ಅಲ್ಲವೇ. ಆದರೆ ನಾವು ಮಾರ್ಗ ಮಧ್ಯದಲ್ಲಿ ರೋಚಕತೆಗೆ ಜೋತುಬಿದ್ದು ಅದರಿಂದ ಕಳಚಿಕೊಳ್ಳಲಾಗದೆ ಮುಳುಗಿಬಿಡುತ್ತೇವೆ. ಎರೆಡು ಆಯಸ್ಕಾಂತಗಳ ಉಂಡೆಗಳ ನಡುವಿನ ಸಮುದ್ರವೊಂದರಲ್ಲಿ ಅಲೆಗಳನ್ನು ಎಬ್ಬಿಸಿ ಆಟ ನೋಡುತ್ತಿರುವ ಆಕರ್ಷಣೆಯೊಂದು ಸೆಳೆದುಕೊಳ್ಳುವುದನ್ನು ನಿಲ್ಲಿಸದಿರುವ ಪಣ ತೊಟ್ಟಿದೆ. ಹೀಗೇ ಪುನರಪಿ ಆಗುತ್ತಲೇ ಹೋಗುವುದು ಮಾತ್ರ ದುರಂತ. ಜಗತ್ತು ದುರಂತಗಳ ಸರಮಾಲೆಯನ್ನು ಪೋಣಿಸಿ ಇತಿಹಾಸ ಎನ್ನುವ ಹೆಸರಿಟ್ಟು ಮತ್ತೆ ಮತ್ತೆ ಓದಿಕೊಳ್ಳುತ್ತದೆ. ಸಂತೋಷದ ತಿಜೋರಿಯಿಂದ ತಪ್ಪಿಸಿಕೊಂಡ ಘಳಿಗೆಗಳನ್ನು ತಡವಿ ಮಾತಾಡಿಸದೆ…
ಒಂದು ಎಳೆ ಸಸ್ಯದ ಕಾಂಡವನ್ನು ಅಡ್ಡಲಾಗಿ ಕತ್ತರಿಸಿ ಅದರ ಟ್ರಾನ್ಸವರ್ಸ್ ಸೆಕ್ಷನ್‌ನನ್ನು ಸೂಕ್ಷ್ಮದರ್ಶಕದ ಕೆಳಗಿಟ್ಟು ನೋಡಿದಾಗ ಅದರ ಎಲ್ಲ ಭಾಗಗಳೂ ಎಷ್ಟು ಚಂದ ಕಾಣುತ್ತವೆ ಗೊತ್ತ. ಕ್ಸೈಲಂ, ಫ್ಲೋಯಂಗಳ ಮೂಲಕ ನೀರು-ಆಹಾರದ ಸಾಗಾಣಿಕೆ, ಪತ್ರರಂಧ್ರಗಳು ಮತ್ತು ಅದರ ಸುತ್ತ ನಡೆಯುವ ಅದೆಷ್ಟೋ ಅನಿಯಂತ್ರಿತ, ಅನೈಚ್ಛಿಕ, ಅಯಾಚಿತ ಕ್ರಿಯೆಗಳು. ನಮ್ಮ ಎದೆಯ ವರ್ಟಿಕಲ್ ಸೆಕ್ಷನ್ ಮಾಡುವಂತಿದ್ದಿದ್ದರೆ?! ಹನುಮ ಎದೆ ಸಿಗಿದು ರಾಮನನ್ನು ತೋರಿಸಿದ ಹಾಗೆ ಒಳಗಿರುವುದೆಲ್ಲವನ್ನೂ ತೋರಿಸಿಬಿಡಬಹುದಿತ್ತು. ಹನುಮನಾಗುವುದು! ಆಹಾ ಎಂತಹ ರೂಪಕವಿದು?! ಸಾಧ್ಯವಾ?! ಹಾಗೆ ಮನಸ್ಸನ್ನು ಕೇಂದ್ರೀಕರಿಸುವುದು? ಕಾಣದ ಗೋಡೆಗಳ ಅರಿವಿನ ನಡುವೆ ಕಣ್ಮುಚ್ಚಿ ರಾಮನನ್ನಷ್ಟೇ ನೆನೆಯುವುದು, ರಾಮನೆಂಬ ವಿಶ್ವವನ್ನು ಕಣ್ಣ ಹತ್ತಿರಕ್ಕೆ ತಂದುಕೊಳ್ಳುವುದು, ಹನುಮನಂತೆ ತಪೋಮಗ್ನಳಾಗಿಬಿಡುವುದು… ರಾಮನೊಂದು ನೆಪ ಮಾತ್ರ. ಬೇಕಾದರೆ ಅಲ್ಲಾ, ಜೀಸಸ್, ಬುದ್ಧ, ಜಿನ… ಇತ್ಯಾದಿಗಳಲ್ಲಿ ಯಾವ ನೆಪವನ್ನಾದರೂ ಆಯ್ದುಕೊಳ್ಳಬಹುದು. To the core ಎನಿಸುವಷ್ಟು ಆಳಕ್ಕೆ ಇಳಿಯುವುದಷ್ಟೇ ತಲುಪಬೇಕಿರುವ ಗಮ್ಯ. ಕ್ರೆಸ್ಟ್, ಮ್ಯಾಂಟಲ್ಲನ್ನು ದಾಟಿ ಸಾಗಬೇಕು. ಹೆಚ್ಚಾಗುತ್ತಲೇ ಹೋಗುವ ಒತ್ತಡ, ಶಾಖವನ್ನು ತಡೆದುಕೊಳ್ಳಬೇಕು. ಅಂತಹ ತೀವ್ರ ಒತ್ತಡ ಮತ್ತು ಶಾಖದಲ್ಲಿಯೇ ವಜ್ರವೊಂದು ಹುಟ್ಟುತ್ತದೆ. ಮತ್ತದು ಎಷ್ಟು ದೃಢವಿರುತ್ತದೆಂದರೆ ಅದನ್ನು ಅದರಿಂದಲೇ ಅಲ್ಲದೆ ಇನ್ನಾವುದರಿಂದಲೂ ಕತ್ತರಿಸುವುದು ಅಸಾಧ್ಯ. ಇನ್ನು ಕರಗಿಸಲು?! ಮತ್ತೂ ಆಳಕ್ಕೆ ಅಂದರೆ to the coreಗೇನೇ ಇಳಿಯಬೇಕು. ಆಗ ವಜ್ರವೂ ಕರಗುತ್ತದೆ ಮತ್ತು ಕರಗಲೇ ಬೇಕು ಕೂಡ. ಎಲ್ಲವೂ ಕೊನೆಗೊಂದು ದಿನ… ವಜ್ರವಾದರೂ ಈ ಪ್ರಕ್ರಿಯೆಗೆ ಹೊರತಲ್ಲ ನೋಡು. ನಮ್ಮೊಳಗಿನ ಕೋರ್‌ಗೆ ಇಳಿದರೆ ಹೇಗಿರಬಹುದು… ಕನಸು ಕಾಣಲು ಸಾಧ್ಯವಿಲ್ಲ. ಅದು ಹಾಗೆಲ್ಲಾ ಸುಲಭಕ್ಕೆ ದಕ್ಕುವ ಅನುಭವವೇ ಅಲ್ಲ. ಒಮ್ಮೆ ಇಳಿದುಬಿಟ್ಟರೆ ಜಗದ ಯಾವ ಐಷಾರಾಮಿ ವಸ್ತುವೂ ನಮ್ಮನ್ನು ಆಕರ್ಷಿಸಲಾರದು. ಆಕರ್ಷಿಸಬಾರದು ಕೂಡ. ಅಂತಹ ಒಂದು ಸ್ಥಿತಿಗೆ ತಲುಪಿ ಪ್ರೀತಿಸಬೇಕು. ಎಲ್ಲ ಬಗೆಯ ಮಿತಿಗಳ ಮೀರಿ…
ಪರಮ ಶಾಂತಿ ಮತ್ತು ನಿರ್ಲಿಪ್ತತೆಯೇ ಸ್ಥಾಯಿ ಭಾವ. ನೀರಿನಲ್ಲಿ ಎಷ್ಟೇ ಅಲೆಗಳೇಳಬಹುದು, ಕೊನೆಗಾದರೂ ಅವು ಶಾಂತವಾಗಲೇ ಬೇಕು ಅಲ್ಲವೇ. ಆದರೆ ನಾವು ಮಾರ್ಗ ಮಧ್ಯದಲ್ಲಿ ರೋಚಕತೆಗೆ ಜೋತುಬಿದ್ದು ಅದರಿಂದ ಕಳಚಿಕೊಳ್ಳಲಾಗದೆ ಮುಳುಗಿಬಿಡುತ್ತೇವೆ. ಎರೆಡು ಆಯಸ್ಕಾಂತಗಳ ಉಂಡೆಗಳ ನಡುವಿನ ಸಮುದ್ರವೊಂದರಲ್ಲಿ ಅಲೆಗಳನ್ನು ಎಬ್ಬಿಸಿ ಆಟ ನೋಡುತ್ತಿರುವ ಆಕರ್ಷಣೆಯೊಂದು ಸೆಳೆದುಕೊಳ್ಳುವುದನ್ನು ನಿಲ್ಲಿಸದಿರುವ ಪಣ ತೊಟ್ಟಿದೆ. ಹೀಗೇ ಪುನರಪಿ ಆಗುತ್ತಲೇ ಹೋಗುವುದು ಮಾತ್ರ ದುರಂತ.
ಶಕ್ತಿಯ ಅಪ್ಪರ್ ಲಿಮಿಟ್ಟಿನಲ್ಲಿ ನಿಂತಾಗ ಜಗತ್ತು ತೀರಾ ಕುಬ್ಜ ಎಂಬ ಭ್ರಮೆಯುಂಟಾಗುತ್ತದೆ. ಎಲ್ಲವನ್ನೂ ಕುಬ್ಜವಾಗಿಸುತ್ತಾ ಬೆಳೆದೆವೆಂಬ ಭ್ರಮೆಯೂ… ಆದರೆ ಆ ಭ್ರಮೆ ಎಷ್ಟು ಕ್ಷಣಿಕ ಎನ್ನುವ ರಿಯಲೈಸೇಶನ್ ಸಹ ಹಿಂಬಾಲಿಸಿಕೊಂಡೇ ಬರುತ್ತದೆ. ಅದರ ನಡುವೆ ಖುಷಿಯ ಒಂದು ನವಿರಾದ ಸೆಳೆತದಂತೆ ಅಂದು ನೀನು ಹೇಳಿದ್ದ ಆ ಮಾತು ನೆನಪಾಗುತ್ತಲೇ ಇದೆ…
“ನನಗೆ ಈ ಕ್ಷಣ ನೀನು ಮುಖ್ಯ… ನೀನು ನನ್ನ ಬದುಕಿನ ಬಹುದೊಡ್ಡ ಅನುಭವ… ಯಾರ ಬದುಕೂ ಒಂದೇ ತೆರನಾಗಿರುವುದಿಲ್ಲ. ಒಬ್ಬರಿಗೆ ಕ್ಷುಲ್ಲಕ ಎನಿಸುವ ಅನುಭವವೊಂದು ಮತ್ತೊಬ್ಬರ ಬದುಕಿನಲ್ಲಿ ಒಯಾಸಿಸ್ ಅಂತನಿಸಿಬಿಡುತ್ತದೆ. ನೀನು ನನ್ನ ಉಚ್ವಾಸ ನಿಶ್ವಾಸಗಳನ್ನು ನಿಯಂತ್ರಿಸುವ ಶಕ್ತಿ… ನನ್ನ ಮುದುಡಿದ ತುಟಿಗಳ ಅರಳುವಿಕೆ… ಒಂದು ಬೆಳ್ಳಂ ಬೆಳಗಿನ ಲವಲವಿಕೆ… ಎಷ್ಟು ಚಂದ ಕಣೇ ನೀನು… ನೀನು ಸುಂದರಿ ಎಂದು ಸುಳ್ಳು ಹೇಳಲಾರೆ… ಆದರೆ ಯಾವ ಸುಂದರಿಯರೂ ಉಂಟುಮಾಡದ ಅನುಭೂತಿ ನೀನು… ನೀನಿದ್ದು ಬಿಡು ಸಾಕು… ನನ್ನೊಂದಿಗೆ…”
ಅಂದಿದ್ದೆ. ಬಹುಶಃ ನನ್ನ ಬದುಕಿನ ಬಹುದೊಡ್ಡ ಘಟನೆ ಅದು. ನನ್ನ ಹುಟ್ಟಿನ ಸಾರ್ಥಕತೆಯೇ ಈ ಮಾತುಗಳು ಅನಿಸುವಂತೆ ಮಾಡಿದ ಮಾತುಗಳವು… ಎಂಥ ಹೆಮ್ಮೆ ನನಗೆ ನನ್ನ ಬಗ್ಗೆ… ಬದುಕು ಏನೆಲ್ಲ ಅನುಭವಗಳನ್ನು ಉಣಬಡಿಸುತ್ತದೆ. ಬೇಡದೆಯು ಬಡಿಸುತ್ತಲೇ ಹೋಗುತ್ತದೆ. ಹೊಟ್ಟೆ ತುಂಬಿದ್ದರೂ ಬೇಡ ಎನ್ನುವ ಅವಕಾಶವಿಲ್ಲದೆ ಉಣ್ಣಲೂ ಆಗದೆ ಚೆಲ್ಲಲೂ ಮನಸು ಬರದೆ… ಸುಮ್ಮನೇ ತಟ್ಟೆಯ ಮುಂದೆ ಕುಳಿತು ಸಮಯ ಉರುಳದಂತೆ, ಈ ತುತ್ತು ಮತ್ತಾರದೋ ಚೀಲ ಸೇರಲಿ ಎಂದಷ್ಟೇ ಪ್ರಾರ್ಥಿಸುತ್ತಾ… ಇಷ್ಟೇ ಅಲ್ಲವಾ ಈ ಬದುಕು ಎನ್ನುವ ಅಂತಿಮ ಸತ್ಯದ ದರ್ಶನವಾದಾಗ ಯಾವುದೆಲ್ಲವನ್ನು ಬೇಕು ಎಂದುಕೊಳ್ಳುತ್ತಿದ್ದೇವೋ ಅದಾವುದೂ ನಮ್ಮ ಆತ್ಯಂತಿಕ ಜರೂರತ್ತಿನ ಪಟ್ಟಿಯಲ್ಲಿ ಇರಲೇ ಇಲ್ಲ ಎನ್ನುವುದನ್ನು ಪ್ರಯಾಸದಿಂದ ಮನಗಾಣುತ್ತಾ… ಯಾವುದೂ ಪೂರ್ಣವಲ್ಲ ಇಲ್ಲಿ… ಈ ರೈಲು ಬಂಡಿ, ನಾವು ಹತ್ತುವ ಮುಂಚೆಯೇ ಪಯಣ ಆರಂಭಿಸಿತ್ತು ಮತ್ತು ನಾವು ಇಳಿದ ನಂತರವೂ ಪಯಣಿಸುತ್ತಲೇ ಇರುತ್ತದೆ ಎಂದು ನಮ್ಮ ಮಿಥ್ಯ ಅಹಮ್ಮಿನ ಕುಡಿಕೆಯನ್ನು ಒಡೆದು ಹಾಕುವುದು ಎಂಥ ಅರ್ಥಪೂರ್ಣ ಕ್ರಿಯೆ…
ಈ ಸಾಲನ್ನು ಹೀಗೇ ಕಾಮಾ ಹಾಕಿ ಅರ್ಧಕ್ಕೇ ಬಿಟ್ಟುಬಿಡಬೇಕೆನಿಸುತ್ತಿದೆ. ನಿನ್ನ ತೋಳ ಮೇಲೆ ತಲೆಯಿಟ್ಟು ತಬ್ಬಿ ಮಲಗಿ ಅರೆ ನಿದ್ರೆಯಲ್ಲೊಂದು ಅರೆಗನಸು ಕಾಣುತ್ತಾ ನಸುನಗಬೇಕೆನಿಸುತ್ತಿದೆ ಕಣೋ…
ಅಲ್ಲ ಹೇಳು, ಕನಸೊಂದು ಹೇಗೆ ಬೀಳುತ್ತದೆ?! ಯಾವ ಪೂರ್ವ ತಯಾರಿಯೂ ಅದಕ್ಕೆ ಇರುವುದಿಲ್ಲವಾ? ಒಂದು ವಿಷಯ ಅಥವಾ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಎಚ್ಚರಿಕೆಯ ಸ್ಥಿತಿಯಲ್ಲಿ ಬುದ್ಧಿ ಮತ್ತು ಹೃದಯಕ್ಕೆ ತಿಳಿಯದೇ ಹೋದಾಗ ಸುಪ್ತಾವಸ್ಥೆಯಲ್ಲಿ ಕನಸೊಂದು ಯಾವ ಕಟ್ಟಳೆಗಳನ್ನೂ ಕೇರ್ ಮಾಡದೆ ಸಂವಹನ ಮಾಡಲು ಶುರು ಮಾಡಿಬಿಡುತ್ತದೆ. ನಾವು ಹೀಗೆಲ್ಲಾ ಯೋಚಿಸಲು ಸಾಧ್ಯವಾ?! ಎಂದು ನಮ್ಮನ್ನೇ ನಾವು ಅನುಮಾನಿಸುವಷ್ಟು ಅಚ್ಚರಿಗೊಳಸುವಂತಹ ಕನಸುಗಳು… ನಿನಗೆ ಗೊತ್ತಾ ನಾನು ಕನಸಿನಲ್ಲಿ ವಿಪರೀತ ನಗುತ್ತೇನೆ. ನಗುವಾಗ ನಾನು ಈ ಲೋಕದವಳಲ್ಲವೇ ಅಲ್ಲ. ಆ ಕ್ಷಣ ಎಷ್ಟು ಕ್ಷಣಿಕ! ಅದೆಷ್ಟು ಬಾರಿ ಎಚ್ಚರವಾದಾಗ ಛೇ.. ಯಾಕಾದರೂ ವಾಸ್ತವಕ್ಕೆ ಬಂದೆ ಎನಿಸಿಬಿಡುತ್ತದೆ. ಯಾವಾಗಲೂ ಕನಸಿನ ಆ ಪ್ರಪಂಚದಲ್ಲಿಯೇ ಇರುವಂತಿದ್ದಿದ್ದರೆ ಅಂತ ಪರಿತಪಿಸುತ್ತೇನೆ. ಆ ಸ್ವಚ್ಛಂದ ನಗು ಅದು ಯಾಕೆ ಹೇಗೆ ಎಲ್ಲಿಂದ ಮಿಂಚಿ ಮಾಯವಾಗುತ್ತದೆ ಎಂಬುದು ಈಗಲೂ ನನಗೊಂದು ಯಕ್ಷಪ್ರಶ್ನೆಯೇ… ಒಮ್ಮೆ ನಾನು ಕನಸಿನಲ್ಲಿ ಅದೆಷ್ಟು ಜೋರಾಗಿ ನಗುತ್ತಿದ್ದೆ ಎಂದರೆ ಆಕಾಶದಲ್ಲಿ ತೇಲುತ್ತಿದ್ದೆ. ಯಾರದೋ ಪಾಪ ನಿದ್ದೆ ಹಾಳಾಗಿ, ಎದ್ದು, ಮೋಹಿನಿಯೋ ಭ್ರಹ್ಮ ರಾಕ್ಷಸಿಯೋ ಅಂತೆಲ್ಲ ತಿಳಿದು ನನ್ನ ರೂಮಿನ ಬಳಿಗೆ ಓಡಿ ಬಂದು ಏಳಿಸಿದ್ದರು. ನನ್ನ ರಾತ್ರಿಯ ಕನಸಿನ ಉಪಟಳವೆಂದು ತಿಳಿದ ಮೇಲೆ ಒಂದಷ್ಟು ಬೈಯ್ದು ನಂತರ ನಕ್ಕೂ ನಕ್ಕೂ ಸುಸ್ತಾಗಿದ್ದರು. ಮತ್ತೆ ನನಗೆ, ನಾನು ಒಂದಷ್ಟು ದಿನಗಳ ಕಾಲ ಅವರ ನಗುವಿನ ವಸ್ತುವಾಗಿದ್ದು ಮೊದಮೊದಲು ಖುಷಿ ಎನಿಸಿದರೂ ಬರಬರುತ್ತಾ ಇರುಸುಮುರುಸಾಗತೊಡಗಿತ್ತು. ನಮಗೆ ಹಾಗೆಲ್ಲ ಅಪಹಾಸ್ಯದ ವಸ್ತುವಾಗುವುದು ಹೇಗಾದರೂ ಇಷ್ಟವಾಗುತ್ತದೆ ಹೇಳು... ಅದರಲ್ಲು ಈ ಕನಸು ಮತ್ತು ಕನಸಿನ ನಗು ನನ್ನ ಅತಿ ಖಾಸಗಿ ವಿಚಾರ. ಅದು ಯಾಕಾದರೂ ಬೇರೆಯವರಿಗೆ ತಿಳಿಯಬೇಕು…
ನನ್ನ ಕನಸುಗಳು ಬರೀ ನಗಿಸುವುದಿಲ್ಲ. ಕೆಲವೊಮ್ಮೆ ವಿಪರೀತಿ ಭಯಪಡಿಸುತ್ತವೆ. ನಮ್ಮ ಹತ್ತಿರದ ಜನಗಳೇ ದೆವ್ವವಾಗಿ ಬಂದು ಹೆದರಿಸುವುದಂತೂ ನನಗೆ ಪರಮಾಶ್ಚರ್ಯ. ಅದು ಹೇಗೆ ಸಾಧ್ಯ ಇವರಿಗೆ… ಮತ್ತೆ ಎಷ್ಟು ಧೈರ್ಯ… ಮತ್ತೊಬ್ಬರ ಕನಸಲ್ಲಿ ದೆವ್ವವಾಗಿ ಬಂದು ಹೆದರಿಸಲು ಎಂದು… ಕನಸಿನಲ್ಲಿ ಹೀಗೆ ಬಂದು ಹೆದರಿಸುವುದಕ್ಕಾಗಿ ಕಂಪ್ಲೇಂಟ್ ಮಾಡಿ ಜೈಲಿಗೆ ಕಳಿಸುವಂತಿದ್ದಿದ್ದರೆ… ಇದು ನನ್ನ ಮನಸಿನ ವ್ಯಾಪಾರ, ಏನೂ ತಿಳಿಯದ ಅವರು, ಬರಿದೆ ಮನುಷ್ಯರು ಮಾತ್ರ ಎಂಬುದು ಕನಸುವ ಆ ಕ್ಷಣ ಅರಗಿಸಿಕೊಳ್ಳುವುದು ತುಸು ಕಷ್ಟವೇ.
ರಾತ್ರಿಯ ಕನಸುಗಳು ನಿದ್ರೆಗಳಿಗೆ ರಂಗು ತುಂಬುತ್ತವೆ. ಆದರೆ ನಂದಿಯ ಈ ಹಸಿರು ಹಾಸಿನ ಮೇಲೆ ನಾವು ಹರಡಿದ ಆ ಕನಸುಗಳು ಇಲ್ಲೇ ಎಲೆಯಾಗಿ, ಹೂವಾಗಿ, ಕಾಯಾಗಿ, ಹಣ್ಣಾಗಿ, ಬೀಜವಾಗಿ ಮತ್ತೆ ಮೊಳೆತು ಪುಟ್ಟ ಸಸಿಯಾಗಿ… ಮತ್ತೆ ಮತ್ತೆ ಚಕ್ರದಂತೆ ಸುತ್ತುತ್ತಲೇ ಇವೆ. ನಮ್ಮ ಹಾಗೆ ಅದೆಷ್ಟೋ ಜೋಡಿಗಳು ತಮ್ಮ ಕನಸುಗಳನ್ನು ನಿತ್ಯ ಈ ಹಸಿರು ತಪ್ಪಲಿಗೆ ತಂದು ಸುರಿಯುತ್ತಲೇ ಇದ್ದಾರೆ. ಎಷ್ಟು ಮುದ್ದಾದ ಹೂಗಳಿವು, ಎದೆಯಲ್ಲಿ ಗಾಢ ಪ್ರೇಮದ ತನಿರಸವನ್ನು ತುಂಬಿಕೊಂಡು, ಪ್ರೇಮದ ಗಂಧವನ್ನೇ ಸೂಸುತ್ತಿವೆ. ದುಂಬಿಗಳು ಅವುಗಳ ಎದೆಗೆ ಚುಚ್ಚಿ, ಆ ಮಧುರ ಮಧು ಬಟ್ಟಲಿಗೆ ತುಟಿಹಚ್ಚಿ ಹೀರುತ್ತವೆ… ಪ್ರೇಮದ ಅಮಲಲ್ಲಿ ಮೈಮರೆತು ಗುಂಯ್…. ಗುಂಯ್ ಗುಂಯ್… ಎಂದು ಅಲೌಕಿಕ ರಾಗದಲ್ಲಿ ಹಾಡತೊಡಗುತ್ತವೆ. ಮತ್ತಾ ರಾಗದ ಮತ್ತಿನಲ್ಲಿ ಲೋಲುಪ್ತ ಮನಸ್ಸು ಪ್ರೇಮ ಎನ್ನುವ ಸೂಫಿ ರಾಗವನ್ನು ಗುನುಗುತ್ತಿದೆ…
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”