Advertisement
ತುಂಬಾ ಕುಡಿದರೂ ತಲೆಗೇರದ `ತುಂಬಾ’:  ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ತುಂಬಾ ಕುಡಿದರೂ ತಲೆಗೇರದ `ತುಂಬಾ’: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

`ಮೇಘಾಲಯದ ವಾಕೆನ್ ಹಳ್ಳಿಯೊಂದರಲ್ಲಿ ನಡೆಯುವ ಬುಡಕಟ್ಟು ಉತ್ಸವದಲ್ಲಿ ಇದೇ ರೀತಿಯ ಪೇಯ ನೀಡುತ್ತಾರೆʼ ಎಂದು ಮೇಘಾಲಯದ ಗೆಳೆಯನೊಬ್ಬ ಅರುಹಿದ್ದ. ಇಲ್ಲಿನ ನಿರ್ಮಲ ಬುಡಕಟ್ಟು ಯಾವುದೇ ಪಂಗಡಕ್ಕೆ ಸೇರಿದವರಲ್ಲ. ದೇವರ ಹೆಸರು ಲಿಂಗ್‌ದಾ. ನೀವು ಕೇಳಿಲ್ಲ ಬಿಡಿ. ಭಕ್ತರು ತಮ್ಮ ಹೊಸ ಬೆಳೆಯನ್ನು ದೇವರಿಗೆ ಸಮರ್ಪಿಸುತ್ತಾರೆ. ಅಕ್ಕಿಯಿಂದ ತಯಾರಿಸಿದ ಬಿಯರೇ ಇಲ್ಲಿನ ದೇವರಿಗೆ ನೈವೇದ್ಯ. ಅದನ್ನೇ ಬಂದವರಿಗೆಲ್ಲಾ ತೀರ್ಥವಾಗಿ ಹಂಚುತ್ತಾರೆ! ಹಾಗಾಗಿ ಸರ್ವಾಂತರಯಾಮಿ ಈ ಪೇಯ! ಜಗದಗಲ ಹಬ್ಬಿದ ಈ ಸಂಪ್ರದಾಯಗಳ ತಾಯಿ ಬೇರೊಂದೆ ಅತಿಥಿ ಸತ್ಕಾರ ಮತ್ತು ಆರೋಗ್ಯ.
ಶ್ರೀಧರ್‌
ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಹೊಸ ಬರಹ

          ನಿಮಗೂ ಸ್ವಲ್ಪ ಮತ್ತೇರಿಸುವ ಉದ್ದೇಶದಿಂದಲೇ ಈ ಲೇಖನ ಬರೆಯುತ್ತಿದ್ದೇನೆ. ಒಮ್ಮೆಯಾದರೂ ಕಣ್ಮುಚ್ಚಿ ಕುಡಿದು ಬಿಡಿ!! ನಿಮ್ಮ ಒಳಗೂ ಹೊರಗೂ ಒಂದಾಗಿ ನೀವೇ ದೇವರಾಗಿ ಬಿಡಬಹುದು! ಅದ್ವೈತಿಯಾಗಬಹುದು. ನಿಮ್ಮನ್ನಾರೂ ಕುಡುಕ ಎನ್ನಲಾರದು. ರೋಚಕತೆಗಾದರೂ ಒಮ್ಮೊಮ್ಮೆ ಸುಂದರ ತಪ್ಪುಗಳನ್ನು ಮಾಡಿಬಿಡಿ! ಬದುಕಿಡಿ ಆ ನೆನಪುಗಳ ಆಸರೆ ಪಡೆದು ಬದುಕಿಬಿಡಬಹುದು! ಏಕಾಂತದಲ್ಲಿ ನೆನಪಿಸಿಕೊಂಡು ಖುಷಿಪಡಬಹುದು!

ನಾನು ಮೇಲೆ ಹೇಳಿದ್ದೆಲ್ಲಾ ಸುಮ್ಮನೆ ತಮಾಷೆಗೆ ಆಯಿತಾ! ಗಂಭೀರವಾಗಿ ತೆಗೆದುಕೊಳ್ಳಬೇಡಿ!! ಅಯ್ಯೋ ಪೀಠಿಕೆಯೇ ದೀರ್ಘವಾದಂತಿದೆಯೇ. ಇಷ್ಟೂ ಹೇಳದೆ ಇದ್ದರೆ ಹೇಗೆ? ಭಾರತವೇ ಒಂದು ಅಚ್ಚರಿಗಳ ನಾಡು. ಇಲ್ಲಿ ದುರ್ಯೋಧನನ್ನೂ ಪೂಜಿಸುತ್ತಾರೆ! ಬೃಹನ್ನಳೆಯನ್ನೂ, ರಾವಣನನ್ನೂ ಸಮಾನವಾಗಿ ಪೂಜಿಸಲಾಗುತ್ತದೆ! ಕರ್ಣನಿಗೂ ಒಂದು ದೇವಾಲಯವಿದೆ!

ಊರೂರ ಅಸ್ಮಿತೆಯನ್ನು ಅರಸುತ್ತಾ

ಪ್ರತೀ ರಾಜ್ಯಕ್ಕೂ ವಿಶಿಷ್ಟವಾದ ಅಸ್ಮಿತೆಯೊಂದು ಅಂಟಿಕೊಂಡೇ ಇರುತ್ತೆ. ಕೇರಳ, ಕರ್ನಾಟಕದಲ್ಲಿ `ನೀರಾ’ ಅತ್ಯಂತ ಪ್ರಿಯ ಪೇಯ ಜೊತೆಗೆ ಏಳನೀರು. ಆಯಾ ರಾಜ್ಯದ ಜನತೆ ಅದನ್ನು ನಿಷ್ಠೆಯಿಂದ ಕಾಪಾಡಿಕೊಂಡು ಬಂದಿರುತ್ತಾರೆ. ನಮ್ಮಲ್ಲಿ ನೀರಾ ಇಳಿಸಲೇ ಕೆಲ ಜನಾಂಗಗಳಿವೆ! ಅವರ ಮೂಲ ಕಾಯಕವೇ ನೀರಾ ಇಳಿಸೋದು!

ಮನೆಗೆ ಬಂದ ಅತಿಥಿಗಳ ಸತ್ಕಾರಕ್ಕೆ ಅದಿರಲೇಬೇಕು. ಇಂದಿನ ಯುಗದ ಪೇಯ ಚಹ ಅಥವಾ ಕಾಫಿಯಂತೆ. ಕೆಲವು ದೇಶಗಳಲ್ಲಿ ಪುನುಗು ಬೆಕ್ಕಿನ(Civet) ಕಕ್ಕದ ಕಾಫಿ ಮಾಡಿ ಮಾರುತ್ತಾರೆ. ಇದನ್ನು ಲೂವಾಕ್‌ ಕಾಫಿ ಎನ್ನುತ್ತಾರೆ. ನಮ್ಮ ಕೊಡಗಿನಲ್ಲೂ ಈ ಲೂವಾಕ್‌ ಕಾಫಿ ಅಲ್ಲಲ್ಲಿ ಸಿಗುತಲಿದೆ.  ಮಹಾರಾಷ್ಟ್ರದ ಹಳ್ಳಿಗಳಲ್ಲಿ ಈಗಲೂ ಬಂದವರಿಗೆ ಲಸ್ಸಿ ನೀಡುತ್ತಾರೆ. ಮೊದಲು ನಮ್ಮಲ್ಲೂ ಆರೋಗ್ಯಕರವಾದ ಕಡೆದ ಮಜ್ಜಿಗೆಯ ಸತ್ಕಾರ ನಡೆಯುತ್ತಿತ್ತು. ಅದೀಗ ಕಣ್ಮರೆಯಾಗಿ ಮರೆವಿಗೆ ಸಂದಿದೆ.

ಹೀಗೆ ತಮ್ಮದೇ ಅಸ್ಮಿತೆಗೆ ಅಂಟಿಕೊಂಡ ಊರುಗಳು ನೂರಾರು. ಒಂದು ರಾಜ್ಯ ಹಲವು ಜಗತ್ತನ್ನು ಹೊತ್ತ ಕರ್ನಾಟಕ ತನ್ನ ಪ್ರಾದೇಶಿಕ ಅಸ್ಮಿತೆಗೆ ಹೆಸರುವಾಸಿ. ಕಲಾಪ್ರಕಾರಗಳು, ಭಾಷೆ, ಆಹಾರ ಸಂಸ್ಕೃತಿ ಪ್ರತಿ 50 ಕಿಲೋ ಮೀಟರ್‌ಗೆ ವಿಭಿನ್ನ ಜಗತ್ತೊಂದು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ತೆರೆದು ನೋಡುವ ತವಕವಿರಬೇಕಷ್ಟೇ. ಬೀದರಿನ ಬಿದರಿ ಕಲೆ, ಕರಾವಳಿಗರ ತೆಂಕು ಮತ್ತು ಬಡಗು ಯಕ್ಷಗಾನ ಪ್ರಕಾರ, ದೊಡ್ಡಾಟ, ಗೊಂಬೆಯಾಟಗಳು, ಕಲಾ ಪ್ರಕಾರಗಳಾದರೆ ಹಲಸಿನೆಲೆ ಕಡಬು, ಪತ್ರೊಡೆ, ಗೋಳಿಬಜೆ, ಬನ್ಸ್‌, ತಟ್ಟೆ ಇಡ್ಲಿ, ಕಟ್ನಾ, ಕಡಕ್ ರೊಟ್ಟಿ, ಎಣಗಾಯಿ, ಬಸ್ಸಾರು ಮುದ್ದೆ ಆಹಾರ ಸಂಸ್ಕೃತಿಯ ರುಚಿಮೊಗ್ಗುಗಳು. ಪ್ರತಿ ಜಿಲ್ಲೆಯೂ ವಿಭಿನ್ನ ವಿಶಿಷ್ಟ ಸಂಪ್ರದಾಯಗಳಿಂದ ನಮ್ಮನ್ನು ಕಾಡುತ್ತದೆ. ಪ್ರತಿ ಊರಿನ ಸಂಸ್ಕೃತಿ, ಸಂಸ್ಕಾರಗಳು ಜನರ ಸಂಸರ್ಗದಿಂದ ಉದಿಸಿದವು. ಕರಾವಳಿ, ಮಲೆನಾಡು ಜನರು ಮನೆಗೆ ಬಂದವರಿಗೆ ವೀಳ್ಯ ನೀಡಿ ಸತ್ಕರಿಸುತ್ತಾರೆ.

ಭೂತಾನ್, ನಾಗಾಲ್ಯಾಂಡ್, ಸಿಕ್ಕಿಂ, ನೇಪಾಳಗಳಲ್ಲಿ ಒಂದು ವಿಶಿಷ್ಟ ಸಂಪ್ರದಾಯವಿದೆ. ಮನೆಗೆ ಅತಿಥಿಗಳು ಬಂದರೆ ಅವರಿಗೆ `ಸಿಕ್ಕಿಂ’ನಲ್ಲಿ ತುಂಬಾವೆಂಬ ವಿಶಿಷ್ಟ ಪೇಯದ ಮೂಲಕ ಸತ್ಕರಿಸುತ್ತಾರೆ.

ನಾಗಾಲ್ಯಾಂಡ್‌ಗೆ ಹೋದರೆ ಅಕ್ಕಿಯಿಂದ ಮಾಡಿದ ವಿಶಿಷ್ಟ ವೈನ್ ಅನ್ನು ಆಕರ್ಷಕ ಬಿದಿರಿನ ಲೋಟಗಳಲ್ಲಿ ನೀಡಿ ನಿಮ್ಮನ್ನು ಅಚ್ಚರಿಗೆ ಕೆಡವುತ್ತಾರೆ! ನಾಗಾಲ್ಯಾಂಡ್‌ನಲ್ಲಿ ನಡೆಯುವ ವಿಶಿಷ್ಟ ಹಬ್ಬ ಹಾರ್ನ್‌ ಬಿಲ್.‌ ಇಲ್ಲಿ ಅಕ್ಕಿಯಿಂದ ತಯಾರಿಸಿದ ಬಿಯರ್‌ ಅನ್ನು ಚಂದದ ಬಿದಿರ ಲೋಟಗಳಲ್ಲಿ ಲಲನೆಯರು ತಂದಿಡುತ್ತಾರೆ. ಇಲ್ಲಿ ವೈನ್‌ ಮತ್ತು ಬಿಯರ್‌ಗಳಿಗಾಗಿ ಪ್ರತ್ಯೇಕ ಮಾರಾಟದ ವ್ಯವಸ್ಥೆ ಇರುತ್ತದೆ. ಅಕ್ಕಿಯಿಂದ ಭೂತಾನಿಗರೂ ಸಹ ಪೇಯ ತಯಾರಿಸುತ್ತಾರೆ. ನಾವು ಭೇಟಿಕೊಟ್ಟ ಥಿಂಪುವಿನ ಸಣ್ಣ ಹಳ್ಳಿಯೊಂದರಲ್ಲಿ ಬ್ಯಾರಲ್‌ಗಟ್ಟಲೆ ಅಕ್ಕಿಯ ವೈನ್ (ಬಿಯರ್) ತಯಾರಿಸಿ ಅದೊಂದು ಬಲು ಅಪರೂಪದ ಪದಾರ್ಥವೆಂಬಂತೆ ತಮ್ಮ `ಮಟ್ಟೆ’ ಮೇಲೆ ಇಟ್ಟು ಸಾಗಿಸುತ್ತಿದ್ದರು! ಇಲ್ಲಿನವರ ಹೆಸರು ಮಾತ್ರ ತಿಳಿದಿಲ್ಲ.

`ಮೇಘಾಲಯದ ವಾಕೆನ್ ಹಳ್ಳಿಯೊಂದರಲ್ಲಿ ನಡೆಯುವ ಬುಡಕಟ್ಟು ಉತ್ಸವದಲ್ಲಿ ಇದೇ ರೀತಿಯ ಪೇಯ ನೀಡುತ್ತಾರೆʼ ಎಂದು ಮೇಘಾಲಯದ ಗೆಳೆಯನೊಬ್ಬ ಅರುಹಿದ್ದ. ಇಲ್ಲಿನ ನಿರ್ಮಲ ಬುಡಕಟ್ಟು ಯಾವುದೇ ಪಂಗಡಕ್ಕೆ ಸೇರಿದವರಲ್ಲ. ದೇವರ ಹೆಸರು ಲಿಂಗ್‌ದಾ. ನೀವು ಕೇಳಿಲ್ಲ ಬಿಡಿ. ಭಕ್ತರು ತಮ್ಮ ಹೊಸ ಬೆಳೆಯನ್ನು ದೇವರಿಗೆ ಸಮರ್ಪಿಸುತ್ತಾರೆ. ಅಕ್ಕಿಯಿಂದ ತಯಾರಿಸಿದ ಬಿಯರೇ ಇಲ್ಲಿನ ದೇವರಿಗೆ ನೈವೇದ್ಯ. ಅದನ್ನೇ ಬಂದವರಿಗೆಲ್ಲಾ ತೀರ್ಥವಾಗಿ ಹಂಚುತ್ತಾರೆ! ಹಾಗಾಗಿ ಸರ್ವಾಂತರಯಾಮಿ ಈ ಪೇಯ! ಜಗದಗಲ ಹಬ್ಬಿದ ಈ ಸಂಪ್ರದಾಯಗಳ ತಾಯಿ ಬೇರೊಂದೆ ಅತಿಥಿ ಸತ್ಕಾರ ಮತ್ತು ಆರೋಗ್ಯ.

ಇಂತಹ ಬಿಸಿ ಬಿಸಿ ಹೊತ್ತಲ್ಲಿ ತಂಪೇರಿಸುವ ತುಂಬಾನ ಕುರಿತು ಓದಿಕೊಂಡು ನೇಪಾಳ, ಸಿಕ್ಕಿಂ, ಭೂತಾನ್, ಮೇಘಾಲಯ ಸುತ್ತಿ ಬಂದು ತುಂಬಾ ನೋಡಿ ತಂಪಾಗಿರೋಣ! ನೀವೇನಂತಿರಿ?

ಸಿಕ್ಕಿಂನ ತುಂಬಾ

ತೀಸ್ತಾ ನದಿಗುಂಟ ಹರವಿ ಕುಳಿತಂಥ ಊರುಗಳಾದ ಸಿಕ್ಕಿಂನ ಹಳ್ಳಿಗಳಲ್ಲಿ `ತುಂಬಾ’ ಬಲು ಜನಪ್ರಿಯ ಪೇಯ. ಉಚ್ಚಾರವಂತೂ ಇನ್ನೂ ತಿಳಿಯಾಗಿಲ್ಲ. ನಾಗಾಲ್ಯಾಂಡ್‌ನಲ್ಲೂ ಇಂತಹದೇ ಪೇಯವನ್ನು ಅಕ್ಕಿಯಿಂದ ತಯಾರಿಸುತ್ತಾರೆ. ಅಲ್ಲಿ ಮಾತ್ರ ಕುಡಿಯುವ ಧೈರ್ಯವಾಗಲೇ ಇಲ್ಲ. ಅದನ್ನವರು ರೈಸ್ ಬಿಯರ್ ಎನ್ನುತ್ತಾರೆ. `ಬಿಯರ್’ ಇಲ್ಲಿ ಎಲ್ಲರಿಗೂ ಡಿಯರ್. ನಾಗಾಲ್ಯಾಂಡ್ ಅತಿ ವಿಶಿಷ್ಟ ಜನ ಸಂಸ್ಕೃತಿ ಹೊಂದಿದ ರಾಜ್ಯ. 30ಕ್ಕೂ ಹೆಚ್ಚು ಬುಡಕಟ್ಟುಗಳು, ಅವರ ವೇಷ ಭೂಷಣಗಳು, ಭಾಷೆ ಎಲ್ಲವೂ ಭಿನ್ನ! ಎತ್ತರದ ನಿಲುವು ಉಳ್ಳ `ಚಾಂಗ್’ ಬುಡಕಟ್ಟು ಸಹ ಒಂದು. ಮಧ್ಯಂ ಹೃದ್ಯಂ! ಇಲ್ಲಿನವರ ಮದುವೆಯೂ ಅತ್ಯಂತ ವಿಶಿಷ್ಟ ಹಾಗೂ ಸುಧಾರಿತ. ಹುಟ್ಟಿದ ಮಕ್ಕಳೆಲ್ಲಾ ಒಂದಿಡಿ ಜನ ಸಮುದಾಯಕ್ಕೆ ಸೇರಿದವರು!

ಪ್ರಾಕೃತಿಕವಾಗಿ ಅತಿ ಶ್ರೀಮಂತ ರಾಜ್ಯವ ಸಿಕ್ಕಿಂ. ದಾರಿಗೊಂದರಂತೆ ಜಲಪಾತಗಳು ಸಿಕ್ಕಿಂನಾದ್ಯಂತ ಕಾಣಸಿಗುತ್ತದೆ. ಜೊತೆಗೆ ಬಿಸಿನೀರ ಬುಗ್ಗೆಗಳು ಸಹ. ಒಂದೊಂದು ಜಾಗಗಳಲ್ಲಿ ನಾಲ್ಕೈದು ಬಿಸಿ ನೀರ ಬುಗ್ಗೆಗಳು. ನಾವು ಇವೆಲ್ಲದರ ಲೆಕ್ಕವಿಟ್ಟು ಸೋತೆವು. ಇವೆಲ್ಲವು ಸಡಿಲ ಮಣ್ಣಿನ ಬೆಟ್ಟಗಳು ಮತ್ತು ಇವು ಹೆಚ್ಚು ಮಣ್ಣಿನಿಂದಲೇ ಆಗಿವೆ ಎನ್ನುವುದಕ್ಕೆ ಕೊಟ್ಟ ಸೂಚನೆಗಳು. ಹಿಮ ಹೊದ್ದ ಶಿಖರಗಳು, ಎತ್ತರದ ಶಿಖರಗಳು ಹೀಗೆ ಪಟ್ಟಿ ಬೆಳೆಯುತ್ತದೆ.

ಗ್ಯಾಂಗ್ ಟಾಕ್‌ನಿಂದ ಉತ್ತರದ ಹಳ್ಳಿಗೆ ಬಂದಾಗ ಈ `ತುಂಬಾ’ ನಮ್ಮನ್ನು ತುಂಬಾ ಆಕರ್ಷಿಸಿತು. ನಮ್ಮ ಜೀಪ್ ಡ್ರೈವರ್ ಸಹ `ತುಂಬಾ’ ವನ್ನು ತುಂಬಾ ಹೊಗಳುತ್ತಿದ್ದ. ಇದರ ಗುಣಗ್ರಾಹಿತ್ವ ಅರಹುವ ಮಹಾನುಭಾವ. ಗ್ಯಾಂಗ್‌ ಟಾಕ್‌ನಿಂದ ಲಾಚೆನ್‌ಗೆ ಹೊರಟಾಗ ಇಲ್ಲೇ ಬೆಳೆದ ಸೊಪ್ಪು ಬಳಸಿ ಮಾಡಿದಡುಗೆ ಉಂಡು ಹೊರಟಾಗ ತುಂಬಾ ಬಗ್ಗೆ ತಿಳಿದು ಒಂದು ಕೈ ನೋಡೇ ಬಿಡೋಣವೆಂದುಕೊಂಡೆವು.

ತಯಾರಿಕೆ

ಶುದ್ಧೀಕರಿಸಿದ ರಾಗಿಯನ್ನು ದೊಡ್ಡ ದೊಡ್ಡ ಡ್ರಮ್‌ಗಳಲ್ಲಿ ಹಾಕಿ ಹುದುಗು ಬರಿಸಲಾಗುತ್ತದೆ. ಈ ಹುದುಗನ್ನು ಮತ್ತು ರಾಗಿ ಕಾಳನ್ನು ಚಂದದ ಬಿದಿರ ಲೋಟಗಳಿಗೆ ಸುರಿಯಲಾಗುತ್ತದೆ. ಅದಕ್ಕೊಂದು ಚಂದ ಬಿದಿರ ನಳಿಕೆಯಂತಹ ಸ್ಟ್ರಾ. ಸ್ಥಳೀಯರು ಇದನ್ನು ಲೋಕಲ್ ಬಿಯರ್ ಎನ್ನುತ್ತಾರೆ. ಹೆಚ್ಚಿನ ಮನೆಗಳಲ್ಲಿ ಇದನ್ನು ತಯಾರಿಸುತ್ತಾರೆ. ತಣ್ಣಗಿನ ವಾತಾವರಣಕ್ಕೆ ಬೆಚ್ಚಗಿನ ತುಂಬಾ.

ನಾನು ಮತ್ತು ನನ್ನ ಸ್ನೇಹಿತ ಹಳ್ಳಿ ಮನೆಯ ಚಾವಡಿಯಲ್ಲಿ ಕುಳಿತು `ತುಂಬಾ’ ಹೀರ ತೊಡಗಿದೆವು. ರುಚಿಯಲ್ಲಿ ತೀವ್ರ ಒಗರು. ಹಾಲಿನಂತೆ ತೆಳ್ಳಗೆ. ಸ್ವಲ್ಪ ಸಿಹಿ. ರಾಗಿಯ ಈ ಹುದುಗಿಗೆ ಮತ್ತೆ ನೀರು ಸುರಿಯುತ್ತಾರೆ. ಸುರಿಯುತ್ತಾ ಹೋದಂತೆ ರಾಗಿ ಕಾಳಿನಲ್ಲಿ ಅಡಗಿರುವ ಅಂಶ ಹೊರ ಬಿಟ್ಟುಕೊಡುತ್ತಾ ಬರುತ್ತದೆ. ಟೈಂ ಟೆಸ್ಟೆಡ್ ಮೆಥಡ್. ತಂಪಿನ ವಾತಾವರಣದಲ್ಲಿ ಬಿಸಿ ಬಿಸಿ ತುಂಬಾ ಹೀರುವುದು ಅಪ್ಯಾಯಮಾನ. ಲಿಂಬು, ರೈ ಸಮುದಾಯಗಳ ಮದುವೆ, ಹಬ್ಬ ಹರಿದಿನಗಳಲ್ಲಿ ಅಗತ್ಯವಾಗಿ ಇದನ್ನು ನೀಡಬೇಕಾದುದು ಸಂಪ್ರದಾಯ. ಇವರ ಮದುವೆಗಳ ವಧುವರರು `ತುಂಬಾ’ ಕುಡಿಯಲೇ ಬೇಕು! ಜಪಾನಿನ ಸಾಕೆ (Sake) ಸಮನಾದ ಪೇಯ ಎಂದೂ ಸಹ ಇದನ್ನು ಬಣ್ಣಿಸಿದ್ದಾರೆ! ಈ `ಸಾಕೆ’ಯ ರುಚಿ ನೋಡಿಲ್ಲ. ತುಂಬಾ ನೀಡದ ಆತಿಥ್ಯ ಅಪೂರ್ಣ. ಊಟ ಹಾಕದೆ ಇದ್ದರೂ ಪರವಾಗಿಲ್ಲ. ಆದರೆ ‘ತುಂಬಾತಿಥ್ಯʼ ತುಂಬಾನೇ ಮಾಡಲೇಬೇಕು.

ಗುಣಗ್ರಾಹಿ ತುಂಬಾ

ಜೀವಶಾಸ್ತ್ರೀಯವಾಗಿ ಅಪಾರ ಲಾಭಗಳನ್ನು ಹೊಂದಿದ ಪೇಯ ಈ “ತುಂಬಾ”. ಹೇರಳವಾಗಿ ಆ್ಯಂಟಿ ಆಕ್ಸಿಡೆಂಟ್, ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಕಾಯಿಲೆ ತಡೆಯುವ ಗುಣ ಹೊಂದಿದೆ ಈ ತುಂಬಾ. ಜೊತೆಗೆ ನಿಮ್ಮ ಸಣ್ಣ ಕರುಳಿನ ಶಕ್ತಿ ವರ್ಧಕವಂತೆ. ಪಚನಾಗ್ರಹಿ.

ಎರಡು ಲೀಟರ್ ತುಂಬಾ ಮೋರಿದ ಗೆಳೆಯ ಮೋರಿಗೆ ಬೀಳದೆ ನೆಟ್ಟಗೆ ನೆಡೆದಿದ್ದ! ಹೆಚ್ಚು ನನ್ನ ನೋಡ್ಬೇಡಿ ದೃಷ್ಟಿ ಆಯಿತದೆ ಎಂದು ತುಂಟ ನಗೆ ನಕ್ಕ! ಸಂಜೆ ಹೊತ್ತಿಗೆ ತುಂಬಾದ ನಿರುಪದ್ರವಿ ಗುಣಗಳ ಬಗ್ಗೆ ತಿಳಿದು ಮನವು ಮತ್ತಷ್ಟು ತಿಳಿಯಾಯಿತು.

ಊರೂರಿನ ಅಸ್ಮಿತೆಗಳೆಲ್ಲಾ ಅಳಿಸಿ ಒಂದೇ ಎರಕ ಆಗುತ್ತಿರುವ ಈ ಕಾಲಘಟ್ಟದಲ್ಲಿ ಅಲ್ಲೊಂದು ಇಲ್ಲೊಂದು ಇಂತಹ ಬೆಳ್ಳಿ ರೇಖೆಗಳು ಕಾಣಸಿಕ್ಕಾಗ ಮನಸ್ಸು ಪುಟಿದೇಳುತ್ತದೆ. ಮುದಗೊಳ್ಳುತ್ತದೆ.

ನೇಪಾಳದಲ್ಲೊಂದು ತುಂಬಾ (Tungba) ಎಂಬ ವೃತ್ತವೇ ಇದೆ ಎಂದು ತಿಳಿದು ಬಹಳ ಅಚ್ಚರಿಯೂ ಆಯಿತು. ಊರಿನ ಅಸ್ಮಿತೆಯನ್ನು ಅರಹುವ ಇಂತಹ ಬಿಡಿ ನೋಟಗಳು ಮುಂದಿನ ಜನಾಂಗಕ್ಕೆ ನಮ್ಮತನವನ್ನು ತೆರೆದಿಡುವ ವಿಶಿಷ್ಟ ಪರಿ. ಕೇವಲ ಮೊಬೈಲು ಲ್ಯಾಪುಟಾಪಿನೊಳಗೆ ನುಜ್ಜುಗುಜ್ಜಾಗುತ್ತಿರುವ ಇಂದಿನ ಯುವ ಜನತೆಯನ್ನು ನಮ್ಮ ಸಂಸ್ಕೃತಿ, ರೂಢಿ ಪದ್ಧತಿಗಳ ಪರಿಚಯ ಮಾಡುವವರಾರು? ಬಿದಿರ ಲೋಟ ಸ್ಟ್ರಾ ಮಾಡಿಟ್ಟಿದ್ದು ಕಂಡು ವಿಸ್ಮಯವೆನಿಸಿತು! ತಮ್ಮೆಲ್ಲಾ ಮಡಿವಂತಿಕೆಯನ್ನು ಬಿಟ್ಟು ಇಂತಹ ಗುಣಗ್ರಾಹಿ ಪೇಯಗಳನ್ನು ಮುನ್ನಲೆಗೆ ತರಬೇಕು ಎಂಬುದು ನನ್ನ ಸದಾಶಯ. ಜಾಗತೀಕರಣದ ಈ ಹುಚ್ಚು ಹೊಳೆಯಲ್ಲಿ ಇಂತಹ ವಿಶೇಷತೆಯನ್ನು ನಾವೆಂದು ಅನುಸರಿಸುವೆವೋ ನಾ ತಿಳಿಯೇ. ಅಪಾರ ಅನುಭವ ಮತ್ತು ಜೀವ ಶ್ರೀಮಂತಿಕೆಯ ಜನಾಂಗವೊಂದರ ಜ್ಞಾನ ವಿಸ್ಮೃತಿಗೆ ಸರಿಯುತ್ತಿರುವ ಈ ಹೊತ್ತಿನಲ್ಲಿ ಇವೆಲ್ಲಾ ಸಣ್ಣ ಬೆಳ್ಳಿ ರೇಖೆಯಾಗಿ ಗೋಚರಿಸುತ್ತಿದೆ. ನೀವೇನಂತೀರಿ? ಇಂತಿ ತುಂಬಾ ಪುರಾಣಂ!

(ಫೋಟೋಗಳು: ಲೇಖಕರವು)

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ