ಅಣೆಕಟ್ಟಿನಿಂದಾಗಿ ನಮ್ಮೂರಿಗೆ ಆದ ಲಾಭಕ್ಕಿಂತ ನಷ್ಟವೇ ಹೆಚ್ಚು. ಮಾದರಿ ಗ್ರಾಮವಾಗಿದ್ದ ಊರು ಈಗ ಶೀತಪೀಡಿತ ಪ್ರದೇಶವಾಗಿದೆ. ಅಸ್ತಮಾ ಪೀಡಿತರ ಜೊತೆಗೆ ಮಲೇರಿಯಾ ಡೆಂಗಿ ಕಾಯಿಲೆಗಳು ಆಗಾಗ ಕಾಡುತ್ತಿರುತ್ತವೆ. ಕೆಲವು ವರ್ಷಗಳ ಹಿಂದೆ ಹಳೆಯ ಊರನ್ನು ಕೂಡ ಮುಳುಗಡೆ ವ್ಯಾಪ್ತಿಗೆ ತರಲಾಗಿದೆ. ಹೀಗಾಗಿ ಮನೆಯನ್ನು ಹೆಚ್ಚು ನವೀಕರಿಸದೆ ವಾಸ ಮಾಡುತ್ತಿದ್ದಾರೆ. ಸಂಜೆಯಾದೊಡನೆ ಹಳೆಯ ಊರಿನಲ್ಲಿ ಜನಸಂಚಾರ ಇಲ್ಲವೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಕ್ಷೀಣಿಸಿರುತ್ತದೆ.
ಗೊರೂರು ಶಿವೇಶ್ ಬರೆದ ಪ್ರಬಂಧ ನಿಮ್ಮ ಓದಿಗೆ
ಹೇಮಾವತಿ ನದಿಗೆ ಗೊರೂರು ಸಮೀಪ ನಿರ್ಮಿಸಲಾಗಿರುವ ಅಣೆಕಟ್ಟಿನ ಯೋಜನೆ 1962ರ ಸುಮಾರಿಗೆ ಪ್ರಾರಂಭವಾಗಿ 1980ಕ್ಕೆ ಮುಕ್ತಾಯವಾಗಿ 82 ರಲ್ಲಿ ಉದ್ಘಾಟನೆಗೊಂಡಿತು. ಹೇಮಾವತಿ ಜಲಾಶಯದ ಹೊರಗಿನ ವಿಶಾಲ ಜಾಗದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಆಗಿನ ಮುಖ್ಯಮಂತ್ರಿ ಶ್ರೀ ಗುಂಡುರಾವ್, ವಿರೋಧಪಕ್ಷದ ನಾಯಕರಾಗಿದ್ದ ದೇವೇಗೌಡರು, ಪ್ರಸಿದ್ಧ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯಪೂರ್ವ ನದಿಯ ಪೂಜೆ. ನಂತರ ಬಾಗಿನ ಸಮರ್ಪಣಾ ಕಾರ್ಯಕ್ರಮ. ಉಸ್ತುವಾರಿ ಹೊತ್ತಿದ್ದ ಉತ್ಸಾಹಿ ಇಂಜಿನಿಯರ್ ದೊಡ್ಡ ಕಾರ್ಯಕ್ರಮವೆಂದು ಹೆಂಡತಿಯ ಮನವೊಲಿಸಿ ಬೆಳ್ಳಿ ತಟ್ಟೆಗಳನ್ನು ತಂದು ಬೆಳ್ಳಿ ತಟ್ಟೆಯಲ್ಲಿ ಫಲ ತಾಂಬೂಲಗಳನ್ನು ಇಟ್ಟು ಬಾಗಿನ ನೀಡಲು ಸಿದ್ಧತೆ ಮಾಡಿಕೊಂಡಿದ್ದರು. ಬಾಗಿನ ನೀಡುವ ಜಾಗವಾದರೂ ಹೊಳೆಗೆ ಚಾಚಿದಂತಿದ್ದು ಕಿರಿದಾದ ಜಾಗ. ನಾಲ್ಕೈದು ಜನರಿಗಿಂತ ಹೆಚ್ಚು ಜನ ನಿಲ್ಲುವಾಗಿರಲಿಲ್ಲ. ಇನ್ನೊಂದು ಬದಿಯಲ್ಲಿ ಛಾಯಾಗ್ರಾಹಕರು. ಜೋಯಿಸರು ವಿಧಿ ವಿಧಾನಗಳನ್ನು ಮುಗಿಸಿ ಬಾಗಿನ ಬಿಡಿ ಎಂದೊಡನೆ ಅತಿಥಿಗಳು ತಮ್ಮ ಕೈಯಲ್ಲಿ ಹಿಡಿದಿದ್ದ ತಟ್ಟೆ ಸಮೇತ ಬಾಗಿನವನ್ನು ನದಿಗೆ ವಿಸರ್ಜಿಸಿದರು. ಕಾರ್ಯಕ್ರಮಕ್ಕೆ ಬೆಳ್ಳಿಯ ತಟ್ಟೆ ನೀಡಿದ್ದ ಇಂಜಿನಿಯರ್ ಹೌಹಾರಿದರು. ಮನೆಯಲ್ಲಿ ಎದುರಿಸಬೇಕಾದ ಪರಿಸ್ಥಿತಿಯನ್ನು ನೆನೆದು ಅದುವರೆಗೂ ಉತ್ಸಾಹದಲ್ಲಿದ್ದ ಅವರ ಮುಖ ಕಳೆಗುಂದಿತು.
*****
ನಂತರ ಅಣೆಕಟ್ಟೆಯ ಬಾಗಿಲ ತೆಗೆದ ನೀರು ಹರಿಸುವ ಕಾರ್ಯಕ್ರಮ. ನಾವೆಲ್ಲ ನೀರು ಹೊರ ದುಮ್ಮಿಕ್ಕುವುದನ್ನು ನೋಡಲು ಕಾಯುತ್ತಿದ್ದೆವು. ಗೇಟ್ ತೆಗೆದ ಒಡನೆ ನೀರು ರಭಸದಿಂದ ಮುನ್ನುಗ್ಗಿ ಅಣೆಕಟ್ಟೆಯ ಮುಂದಿನ ಸ್ವಲ್ಪ ಆಳದ ಪ್ರದೇಶವಾದ ಬಕೆಟ್‌ಗೆ ಬಡಿದು ಮೇಲೆ ನೀರು ಚಿಮ್ಮಿತು. ನೀರು ಒಮ್ಮೆಲೇ ಅಣೆಕಟ್ಟೆಯ ಪಕ್ಕದ ಕಲ್ಲಿನ ಪೊಟರೆಯ ಒಳಗೆ ನುಗ್ಗಿತು. ಪೊಟರೆಯೊಳಗೆ ಇದ್ದ ನೂರಾರು ಹಾವುಗಳು ಧಿಡೀರನೆ ನುಗ್ಗಿದ ನೀರಿನ ಆಘಾತಕ್ಕೊಳಗಾಗಿ ಹೊರಬಂದವು. ಕೆಲವು ನೀರಿನಲ್ಲಿ ತೇಲಿ ಹೋದರೆ ಉಳಿದ ಹಾವುಗಳು ಪಕ್ಕದ ಬಂಡೆಗಳನ್ನೇರಿ ನಾವು ನಿಂತಿದ್ದ ಜಾಗದಡೆಗೆ ಹತ್ತಲು ಆರಂಭಿಸಿದವು. ನೀರು ಬಿಡುವುದನ್ನು ನೋಡಲು ನಿಂತಿದ್ದ ಜನರಿಗೆ ಒಮ್ಮೆಲೆ ಹೀಗೆ ನೂರಾರು ಹಾವುಗಳನ್ನು ಕಂಡು ಅಚ್ಚರಿ, ಗಾಬರಿ. ತಕ್ಷಣವೇ ಸುತ್ತಮುತ್ತ ಕಲ್ಲುಗಳನ್ನು ಹುಡುಕಿ ತೂರಲಾರಂಭಿಸಿದರು. ಅತ್ತ ನೀರು ಇತ್ತ ಕಲ್ಲುಗಳ ಆಘಾತಕ್ಕೆ ಸಿಕ್ಕ ಹಾವುಗಳಲ್ಲಿ ಕೆಲವು ಅಲ್ಲಿಯೇ ಧರಾಶಾಯಿಯಾದರೆ ಕೆಲವು ಮತ್ತೆ ನೀರಿನಲ್ಲಿ ತೇಲುತ್ತಾ ಸಾಗಿದವು.
ಅಣೆಕಟ್ಟೆಯ ನಿರ್ಮಾಣವಾಗಿ ಎಡ ಮತ್ತು ಬಲದಂಡೆಯ ಕಾಲುವೆಗಳಿಗೆ ನೀರು ಹರಿಸುವ ಪ್ರಕ್ರಿಯೆ 40 ವರ್ಷಗಳು ಕಳೆದಿವೆ. ಹೇಮಾವತಿಯ ದಂಡೆಯ ಮೇಲಿದ್ದರೂ ನಮ್ಮೂರಿನ ಜನ ಹೊಳೆಯ ನೀರು ಕುಡಿಯಲು ಸಾಧ್ಯವಾಗಿರಲಿಲ್ಲ. ದೀಪದ ಕೆಳಗೆ ಕತ್ತಲು ಎಂಬಂತೆ ಲಕ್ಷಾಂತರ ಎಕರೆಗೆ ನೀರುಣಿಸುವ ಈ ನದಿಯ ನೀರು ನಮ್ಮೂರಿನ ಜನರಿಗಿರಲಿಲ್ಲ. ಬದಲಿಗೆ ನಮ್ಮೂರಿನ ಜನ ಬೋರ್ವೆಲ್ ನೀರನ್ನು ಕುಡಿಯುತ್ತಿದ್ದರು. ಹೆಚ್ ಆರ್ ಪಿ ಪ್ರಾಜೆಕ್ಟ್‌ನ ಕಿಲೋಮೀಟರ್‌ಗಿಂತ ಹೆಚ್ಚಿದ್ದ ಉದ್ದನೆಯ ಕಾಂಪೌಂಡ್‌ನ ಎರಡು ಗೇಟ್‌ನ ಸಮೀಪ ನಮ್ಮೂರಿನ ರಥೋತ್ಸವ ಮತ್ತು ತೇರಿನ ಸಂದರ್ಭಕ್ಕೆ ಅನುಕೂಲವಾಗಲಿ ಎಂದು ಎರಡು ನಲ್ಲಿಗಳಲ್ಲಿ ಬರುತ್ತಿದ್ದ ಸಿಹಿ ನೀರನ್ನು ಜಗಳವಾಡಿಕೊಂಡು ತರುತ್ತಿದ್ದೆವು. ಮನೆಯ ಮುಂದೆ ಒಬ್ಬರಿಗಿಂತ ಒಬ್ಬರು ದೊಡ್ಡ ಗುಂಡಿಗಳನ್ನು ತೋಡಿ ಆ ಗುಂಡಿಗಳಲ್ಲಿ ದಿನ ಬಿಟ್ಟು ದಿನ ಪಂಚಾಯತಿಯವರು ಬಿಡುತ್ತಿದ್ದ ಬೋರ್‌ವೆಲ್ ನೀರನ್ನು ಹಿಡಿದು ತರುತ್ತಿದ್ದೆವು. ಅನೇಕರ ಪ್ರಯತ್ನ ಹಾಗೂ ಹೋರಾಟದ ಫಲವಾಗಿ ಈಗ ಕೆಲವು ವರ್ಷಗಳ ಹಿಂದೆಯಷ್ಟೇ ಊರಿನ ಜನ ನದಿಯ ನೀರು ಕುಡಿಯುತ್ತಿದ್ದಾರೆ.
ನೀರಿನ ಸಂಕಷ್ಟಗಳ ನಡುವೆ ಖುಷಿ ನೀಡಿದ ಎರಡು ವಿಷಯಗಳೆಂದರೆ ಎಚ್ ಆರ್ ಪಿ ಪ್ರಾಜೆಕ್ಟ್‌ನ ಕಾರಣಕ್ಕಾಗಿ ಗ್ರಂಥಾಲಯ ಬಂದದ್ದು, ಪ್ರಾಜೆಕ್ಟ್‌ನ ಕಾರಣಕ್ಕಾಗಿ ನಿರ್ಮಿಸಲಾಗಿದ್ದ ಕ್ವಾರ್ಟರ್ಸ್‌ಗಳ ಸುತ್ತ ಇದ್ದ ಸಣ್ಣ ಸಣ್ಣ ಉದ್ಯಾನವನಗಳು ನಿರ್ಮಾಣವಾಗಿದ್ದು. ಹಾಗೆಂದು ನಮ್ಮೂರಿನಲ್ಲಿ ವಾಯು ವಿಹಾರದ ತಾಣಗಳೇನು ಕಡಿಮೆ ಇಲ್ಲ. ಸಂಜೆ ಕಚೇರಿ ಮುಗಿದೊಡನೆ ಈಗಿನ ಬಸ್‌ಸ್ಟ್ಯಾಂಡ್ ಎದುರುಗಿನ ಗೇಟಿನ ಬಳಿ ಸೇರುತ್ತಿದ್ದ ವಾಯು ವಿಹಾರಿಗಳಲ್ಲಿ ಕೆಲವರು ದಕ್ಷಿಣಾಭಿಮುಖವಾಗಿ ಚಲಿಸಿ ಡ್ಯಾಮ್‌ನ ಮುಖ್ಯ ಗೇಟ್‌ನ ದಾಟಿ ಒಳಸಾಗಿ ಡ್ಯಾಮ್‌ನ ಪಕ್ಕಕ್ಕೆ ಸಮಾಂತರವಾಗಿ ಇದ್ದ ರೋಡ್‌ನಲ್ಲಿ ಮುಂದುವರೆದು ರಾಮಚಂದ್ರರಾವ್ ನಾಳೆಯ ಪಕ್ಕಕ್ಕೆ ಇದ್ದ ಏರಿಯ ಮೇಲೆ ಸಾಗಿ ಹಾಸನ ರಸ್ತೆಯ ಬಳಿ ಸೇರಿ ಊರಿಗೆ ಬಂದರೆ ಸರಿಸುಮಾರು ನಾಲ್ಕು ಕಿಲೋಮೀಟರ್ ಯಾನ. ಎಂಥ ಚಳಿ ಮಳೆ ಗಾಳಿಯಲ್ಲೂ ಅಲ್ಲಿ ಕಾಣಸಿಗುತ್ತಿದ್ದವರು ಎಚ್ ಆರ್ ಪಿ ಪ್ರಾಜೆಕ್ಟ್ ಹಾಗೂ ನಮ್ಮೂರಿನ ಪ್ರಾಥಮಿಕ ಶಾಲೆಯಲ್ಲಿ ಬಹಳಷ್ಟು ವರ್ಷಗಳ ಕಾಲ ಶಿಕ್ಷಕರಾಗಿ ಸೇವಸೇವೆ ಸಲ್ಲಿಸಿದ್ದ ಬಿಟಿ ಎಂದು ಖ್ಯಾತರಾಗಿದ್ದ 40 ವರ್ಷಗಳ ಹಿಂದೆ ಹೇಗಿದ್ದರೂ ಈಗಲೂ ಹಾಗೆ ಇರುವ ಬಿ ತಮ್ಮಣ್ಣಯ್ಯ. ಪ್ರಾಜೆಕ್ಟ್ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿದ್ದ ತಿಮ್ಮ ನಾಯಕ್ ಮತ್ತು ಪ್ರಾಜೆಕ್ಟ್‌ನಲ್ಲಿ ಆಡಿಟರ್ ಆಗಿದ್ದ ನಮಗೆ ಕೆಲ ದಿನಗಳ ಕಾಲ ಅಕೌಂಟ್ ಹೈಯರ್ ಹೇಳಿಕೊಟ್ಟ ರಾಜಶೇಖರ್. ಅವರ ಜೊತೆ ಏಳೆಂಟು ಜನಗಳ ತಂಡ ಡ್ಯಾಮ್ ಸುತ್ತ ಸುತ್ತುತ್ತಿತ್ತು.
ನನಗೆ ಈ ವಾಯು ವಿಹಾರದ ರುಚಿ ಹತ್ತಿಸಿದ್ದು ರಂಗಣ್ಣಿ. ಪ್ರೌಢಶಾಲೆ ಎಲ್ಲಿ ನನಗಿಂತ ಒಂದು ವರ್ಷ ಮುಂದಿದ್ದವ. ನನ್ನ ಹರಟೆಯ ಸಂಗಾತಿ. ಆರಂಭದಲ್ಲಿ ನಮ್ಮೂರಿನ ಉತ್ತರಕ್ಕೆ ಒಂದುವರೆ ಕಿಲೋಮೀಟರ್ ದೂರದಲ್ಲಿದ್ದ ಅರಳಿ ಕಟ್ಟೆಯ ಬಳಿ ಬನ್ನಿಮಂಟಪ. ಅಲ್ಲಿಗೆ ಹೋಗಿ ಮಂಟಪದಲ್ಲಿ ಕುಳಿತು ಕತ್ತಲಾಗುವವರೆಗೂ ಹರಟೆ ಹೊಡೆದು ಬರುತ್ತಿದ್ದೆವು (ಈಗ ಸಮೀಪಕ್ಕೆ ಪ್ರಥಮ ದರ್ಜೆ ಕಾಲೇಜು ಬಂದಿದೆ).
ನಾನು ಅಧ್ಯಾಪಕ ವೃತ್ತಿಗಾಗಿ ನಮ್ಮೂರಿಗೆ ಬಂದಾಗ ರಂಗಣ್ಣಿ ಮತ್ತೊಂದು ವಾಕಿಂಗ್ ಮಾರ್ಗವನ್ನು ಅನ್ವೇಷಿಸಿದ. ಅದುವೇ ಡ್ಯಾಮ್‌ಅನ್ನು ಹತ್ತಿ ಇಳಿಯುವುದು. ಆತನ ಬೆಳಗಿನ ವಾಕಿಂಗ್‌ಗೆ ನಾನು ಜೊತೆಯಾದ ನಂತರ ಅಣೆಕಟ್ಟಿನ ಪಕ್ಕಕ್ಕಿದ್ದ ನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಇಳಿಯುವ ವ್ಯಾಯಾಮ. ನಾನಾದರೂ ಮೇಲೆರುವಷ್ಟರಲ್ಲಿ ನಾಲ್ಕು ಬಾರಿಯಾದರೂ ನಿಂತು ಸುಧಾರಿಸಿಕೊಳ್ಳುತ್ತಿದ್ದೆ. ಕೊನೆಯ ಮೆಟ್ಟಿಲು ಏರುವಷ್ಟರಲ್ಲಿ ತೊಡೆಗಳಲ್ಲಿ ಸೆಳೆತ. ಆದರೆ ರಂಗಣ್ಣ ಸರಾಗವಾಗಿ ಒಂದೇ ಲಯದಲ್ಲಿ ಹತ್ತಿ ಕಟ್ಟೆಯ ಹಿಂಭಾಗ ಕಾಣುತ್ತಿದ್ದ ವಿಶಾಲವಾದ ನದಿ ನೋಡುತ್ತಾ ಕೂರುತಿದ್ದ… ಮಳೆಗಾಲದ ಸಮಯದಲ್ಲಿ ಸಮುದ್ರದ ರೀತಿ ಕಾಣುತ್ತಿದ್ದ ನದಿಯ ನೀರನ್ನು ನೋಡುತ್ತಾ ಸ್ವಲ್ಪ ಹೊತ್ತು ಕುಳಿತು ಡ್ಯಾಮ್ ಮೇಲೆ ಸಾಗಿ ರಾಮಚಂದ್ರರಾವ್ ಚಾನಲ್‌ನ ಪಕ್ಕಕ್ಕಿದ್ದ ಮೆಟ್ಟಿಲುಗಳನ್ನು ಹಿಡಿದು ಮನೆ ಸೇರುತ್ತಿದ್ದವು. ನಂತರ ಗತಿ ಬದಲಿಸಿ ಮೆಟ್ಟಲು ಕಡಿಮೆ ಇದ್ದ ಮತ್ತು ಸರಾಗವಾಗಿ ಹತ್ತಬಹುದಾದ ರಾಮಚಂದ್ರರಾವ್ ಚಾನಲ್ ಕಡೆಯಿಂದ ಹತ್ತಿ ಅಣೆಕಟ್ಟೆಯ ಪಕ್ಕದ ಮೆಟ್ಟಿಲನ್ನು ಇಳಿದು ಬರುವಾಗ ಆ ಕಾಲಕ್ಕೆ ಪ್ರಚಲಿತದಲ್ಲಿದ್ದ ರವಿ ಬೆಳಗೆರೆ ರವರ “ಪಾಪಿಗಳ ಲೋಕದಲ್ಲಿ” ಅಪರಾಧ ಪ್ರಕರಣಗಳನ್ನು ಆತ ರೋಚಕವಾಗಿ ವಿವರಿಸುತ್ತಿದ್ದ.
ಮುಂದೆ ಡ್ಯಾಮ್‌ನ ಪಕ್ಕಕ್ಕಿದ್ದ ವಿಶಾಲವಾದ ಬಯಲಿನಲ್ಲಿ ತೋಟಗಾರಿಕೆ ಇಲಾಖೆಯವರು ಸೀಬೆ ಸಪೋಟ ಮುಂತಾದ ಬೆಳೆಗಳನ್ನು ಬೆಳೆಯಲು ಆರಂಭಿಸಿದರು. ಅದನ್ನು ಪ್ರತಿವರ್ಷ ಹರಾಜ್ ಹಾಕುತ್ತಿದ್ದರಾದರೂ ಊರಿನ ಹಾಗೂ ಪ್ರಾಜೆಕ್ಟ್‌ನ ಹುಡುಗರು ಸಮಯ ಸಂದರ್ಭ ಅತ್ತ ವಾಕ್ ಮಾಡುತ್ತಿದ್ದವರೆಲ್ಲರೂ ಒಳ ನುಗ್ಗಿ ವಾಕಿಂಗ್ ಜೊತೆಗೆ ಸೀಬೆ ಸಪೋಟವನ್ನು ತರಿದು ವಾಕಿಂಗ್‌ನಲ್ಲಿ ಲಾಸ್ ಆಗಿದ್ದ ಕ್ಯಾಲೋರಿಯನ್ನು ಗೇನ್ ಮಾಡುತ್ತಿದ್ದರು.
ಅಣೆಕಟ್ಟು ಉದ್ಘಾಟನೆಯಾದ ನಂತರ ಇತಿಹಾಸದಲ್ಲಿ ಸಂಪೂರ್ಣವಾಗಿ ಎಂಟತ್ತು ಬಾರಿ ತುಂಬಿರಬಹುದು. ಉಳಿದಂತೆ 120 ಅಡಿ ಎತ್ತರದ ಅಣೆಕಟ್ಟಿನಲ್ಲಿ 110 -112 ಅಡಿಗೆ ಬಂದು ನಿಂತಿದ್ದೆ ಹೆಚ್ಚು ಕೆಲವೊಮ್ಮೆ ಜುಲೈ ತಿಂಗಳ ಸಂದರ್ಭದಲ್ಲಿ ಚಾನಲ್‌ಗಳಲ್ಲಿ ಮತ್ತು ನದಿಯಲ್ಲಿ ನೀರನ್ನು ಹರಿಯ ಬಿಡುತ್ತಿದ್ದರಿಂದ ಆಗಸ್ಟ್ ನಂತರ ಡ್ಯಾಮ್ ತುಂಬಿದ್ದು ಕಡಿಮೆ. ಜುಲೈ -ಆಗಸ್ಟ್ ತಿಂಗಳಲ್ಲಿ ಗದ್ದೆ ನಾಟಿ ಮಾಡುವ ಸಂದರ್ಭ ನದಿಗೆ ಹರಿಯ ಬಿಟ್ಟ ನೀರು ಬಕೆಟ್‌ಗೆ ಬಡೆದು ಮೇಲೆ ಚಿಮ್ಮುತ್ತಿದ್ದರಿಂದ ಆ ಚಿಮ್ಮುವಿಕೆಯ ನೀರು ಕಿಲೋ ಮೀಟರ್ ದಾಟಿ ಬರುತ್ತಿದ್ದ ಕಾರಣ ಗದ್ದೆ ನಾಟಿ ಮಾಡುತ್ತಿದ್ದವರಿಗೆ ತುಂತುರು ಮಳೆಯ ಅನುಭವ.
ಈಗ ತುಂಬಿದ ಅಣೆಕಟ್ಟನ್ನು ನೋಡಲು ಜನಸಾಗರವೇ ಹರಿದು ಬರುತ್ತದೆ. ನಾಲ್ಕೈದು ವರ್ಷಗಳ ಹಿಂದೆ ಇದೇ ರೀತಿ ಅಣೆಕಟ್ಟು ತುಂಬಿ ಹರಿಯುತ್ತಿದ್ದಾಗ ನೋಡಲೆಂದು ಹೋದರೆ ಜನವೊ ಜನ. ಮೇನ್ ಗೇಟ್‌ನ ಬಳಿ ನೂರಾರು ಜನ ಸಾಗುತ್ತಿದ್ದರೆ ಮತ್ತೆ ಕೆಲವರು ಅರಳಿ ಕಟ್ಟೆ ಬಳಿಯ ಒಳ ಹಾದಿಯನ್ನು ಹಿಡಿದು ಹೋಗಲು ಪ್ರಯತ್ನಿಸುತ್ತಿದ್ದರು. ಅದಕ್ಕೆ ಸಮೀಪದ ಕೋನಾಪುರದ ಬಳಿ ಗುಡ್ಡದ ಬಳಿ ದ್ವೀಪದ ರೀತಿ ನೀರು ತುಂಬಿರಲು ಹತ್ತಾರು ಕಾರುಗಳಲ್ಲಿ ಬಂದ ನೂರಾರು ಜನರು ಮೂರೆ ಮೂರು ಪೆಗ್ಗಿಗೆ ಹಾಡಿಗೆ ಕುಡಿದು ಕುಣಿದು ಕುಪ್ಪಳಿಸುತ್ತಿದ್ದರು. ನಮ್ಮೂರಿನ ಅನೇಕರು ಡ್ಯಾಮ್‌ನ ಗೇಟಿನ ಹೊರಬದಿಯಲ್ಲಿ ಪುರಿ-ಖಾರ, ಕಡ್ಲೆಕಾಯಿ, ಮಸಾಲೆ ಪುರಿ, ಬಜ್ಜಿ ಬೋಂಡ ಕಬಾಬ್ ಸೀಬೆಕಾಯಿ ಮಾರಾಟ ಮಾಡುತ್ತಿದ್ದರು.
ಅಣೆಕಟ್ಟಿನಿಂದಾಗಿ ನಮ್ಮೂರಿಗೆ ಆದ ಲಾಭಕ್ಕಿಂತ ನಷ್ಟವೇ ಹೆಚ್ಚು. ಮಾದರಿ ಗ್ರಾಮವಾಗಿದ್ದ ಊರು ಈಗ ಶೀತಪೀಡಿತ ಪ್ರದೇಶವಾಗಿದೆ. ಅಸ್ತಮಾ ಪೀಡಿತರ ಜೊತೆಗೆ ಮಲೇರಿಯಾ ಡೆಂಗಿ ಕಾಯಿಲೆಗಳು ಆಗಾಗ ಕಾಡುತ್ತಿರುತ್ತವೆ. ಕೆಲವು ವರ್ಷಗಳ ಹಿಂದೆ ಹಳೆಯ ಊರನ್ನು ಕೂಡ ಮುಳುಗಡೆ ವ್ಯಾಪ್ತಿಗೆ ತರಲಾಗಿದೆ. ಹೀಗಾಗಿ ಮನೆಯನ್ನು ಹೆಚ್ಚು ನವೀಕರಿಸದೆ ವಾಸ ಮಾಡುತ್ತಿದ್ದಾರೆ. ಸಂಜೆಯಾದೊಡನೆ ಹಳೆಯ ಊರಿನಲ್ಲಿ ಜನಸಂಚಾರ ಇಲ್ಲವೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಕ್ಷೀಣಿಸಿರುತ್ತದೆ. ವೃದ್ಧರೆ ತುಂಬಿರುವ ಊರಿನಲ್ಲಿ ಯುವಕರು ಆಗಾಗ್ಗೆ ಬಂಧು ಬಾಂಧವರನ್ನು ನೋಡಲು ಬಂದರೂ ಸಂಜೆ ಸಮೀಪಿಸುತ್ತಿರುವಂತೆ ಅಲ್ಲಿಂದ ಹೊರಡುತ್ತಾರೆ. ನನ್ನ ವಾಕಿಂಗ್‌ಮೇಟ್ ಆಗಿದ್ದ ರಂಗಣ್ಣಿಯೂ ಊರಿನ ನೆನಪುಗಳನ್ನು ನನ್ನಲ್ಲಿ ಉಳಿಸಿ ಕಾಲದ ಪರದೆಯ ಹಿಂದೆ ಸರಿದಿದ್ದಾನೆ.
ಗೊರೂರು ಶಿವೇಶ್, ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಎಂಟು ಕೃತಿಗಳು, ನಾಲ್ಕು ಲಲಿತ ಪ್ರಬಂಧಗಳ ಸಂಕಲನ, ಎರಡು ಹಾಸ್ಯ ಲೇಖನಗಳ ಸಂಗ್ರಹ ಹಾಗೂ ಎರಡು ಚಿಂತನ ಬರಹ ಪ್ರಟಕವಾಗಿವೆ. ಇವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಡಿಕೇರಿ ಸಾಹಿತ್ಯ ಸಮ್ಮೇಳನ ಹಾಗೂ ಜಿಲ್ಲಾ ಆಡಳಿತದಿಂದ ರಾಜ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪುರಸ್ಕಾರ ದೊರೆತಿವೆ.
ಲೇಖನ ನಮ್ಮೂರಿನ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು.