ಅರೆರೆ, ಇದೇನಪ್ಪಾ ಎಂದುಕೊಂಡು ಮರದ ಕಾಂಡದ ಕಡೆ ನೋಡಿದರೆ ಅಸ್ಪಷ್ಟವಾಗಿ ಓತಿಯ ಆಕಾರದ ಜೀವಿಯೊಂದು ಕಂಡಂತಾಯ್ತು. ನೋಡನೋಡುತ್ತಿದ್ದಂತೆಯೇ ಸರ ಸರನೆ ಮರವನ್ನೇರಿದ ಆ ಓತಿ ಕಣ್ಮುಚ್ಚಿ ತೆರೆಯುವುದರಲ್ಲಿ ಸರ್ರನೆ ತೇಲುತ್ತಾ ಅದರಾಚೆಗಿದ್ದ ಮತ್ತೊಂದು ತೆಂಗಿನ ಮರದ ಕಾಂಡವನ್ನು ಅಪ್ಪಿ ಕುಳಿತಿತು. ಹತ್ತು ಹನ್ನೆರಡು ವರ್ಷಗಳ ಹಿಂದೆ ಓದಿದ್ದ ಕರ್ವಾಲೋ ಕಾದಂಬರಿಯಲ್ಲಿ ತೇಜಸ್ವಿಯವರ ತಂಡ ಹಲವು ದಿನಗಳ ತಯಾರಿ ಮಾಡಿಕೊಂಡು, ಹತ್ತಾರು ಸಂಕಷ್ಟಗಳನ್ನು ಎದುರಿಸಿ ಕೊನೆಗೂ ನೋಡಿದ ‘ಹಾರುವ ಓತಿ’ ನನಗೆಮಾತ್ರ ಬಹಳ ಸುಲಭವಾಗಿ ತನ್ನ ದರ್ಶನ ಭಾಗ್ಯವನ್ನು ಕರುಣಿಸಿತ್ತು.
ಕೌಶಿಕ್ ಕುಕ್ಕೆಮನೆ ಬರಹ
ಒಮ್ಮೊಮ್ಮೆ ಜೀವನದಲ್ಲಿ ಅನಿರೀಕ್ಷಿತ ಮತ್ತು ವಿಚಿತ್ರ ಸಂಗತಿಗಳು ನಡೆದು ಬಿಡುತ್ತವೆ. ಎಂದೋ ಕೇಳಿದ ಕಥೆ, ನೋಡಿದ ಸಿನಿಮಾ, ಓದಿದ ಪುಸ್ತಕದ ಪಾತ್ರಧಾರಿಗಳು ಧುತ್ತನೆ ನಮ್ಮೆದುರು ಪ್ರತ್ಯಕ್ಷರಾಗುತ್ತಾರೆ. ನೋಡನೋಡುತ್ತಿದ್ದಂತೆಯೇ ಹಿಂದೆಂದೋ ಮನಸ್ಸಿನಲ್ಲೇ ರೂಪುಗೊಂಡಿದ್ದ ಕಾಲ್ಪನಿಕ ಸನ್ನಿವೇಶಗಳು ನಮ್ಮ ಕಣ್ಣೆದುರೇ ನಾಟಕೀಯವಾಗಿ ತೆರೆದುಕೊಂಡು ಚಕಿತಗೊಳಿಸಿಬಿಡುತ್ತವೆ. ಆ ಮೂಲಕ ಇಡೀ ಘಟನೆ ಸ್ಮೃತಿ ಪಟಲದಲ್ಲಿ ಶಾಶ್ವತವಾದ ಅಚ್ಚೊಂದನ್ನು ಒತ್ತಿ ಪದೇ ಪದೇ ಅವ್ಯಕ್ತವಾದ ಅನುಭೂತಿಯೊಂದು ತೇಲಿಬರುವ ಹಾಗಾಗುತ್ತದೆ. ಇದನ್ನೆಲ್ಲಾ ಬರೆಯುವಂತಹ ಅನುಭವ ಆಗಿದ್ದು ಇತ್ತೀಚೆಗೆ ಊರಿಗೆ ಹೋಗಿದ್ದಾಗ.
ಮಂಗಳೂರು, ಬೆಂಗಳೂರು, ಹೈದರಾಬಾದು ಎಂದು ಕೆಲ ವರ್ಷಗಳ ಹಿಂದೆ ಅಲೆಮಾರಿ ಜೀವನ ಆರಂಭಿಸಿದವನಿಗೆ ಆರು ತಿಂಗಳಿಗೊಮ್ಮೆಯೋ ವರ್ಷಕ್ಕೊಮ್ಮೆಯೋ ಊರಿಗೆ ಹೋದಾಗಲೆಲ್ಲ ಸಹಜವಾಗಿಯೇ ಜೀವನದಲ್ಲೊಂದು ನವ ಚೈತನ್ಯ ಮೂಡುತ್ತದೆ. ಮನುಷ್ಯರೂ ಸೇರಿದಂತೆ ಸಕಲ ಜೀವರಾಶಿಗಳು ತಾವು ಹುಟ್ಟಿ ಬೆಳೆದ ಪರಿಸರದಲ್ಲಿ ಬದುಕುವಷ್ಟು ಸ್ವಾಭಾವಿಕವಾಗಿ ಮತ್ತು ಸಂತೋಷವಾಗಿ ಮತ್ತೆಲ್ಲೂ ಬದುಕಲಾರವು ಎಂಬ ವೈಜ್ಞಾನಿಕ, ತಾರ್ಕಿಕ ಮತ್ತು ಆಧ್ಯಾತ್ಮಿಕ ಸತ್ಯದ ಸಾಕ್ಷಾತ್ಕಾರವು ಪರವೂರಿನಲ್ಲಿ ಪಡಿಪಾಟಲು ಪಟ್ಟು ವರ್ಷಾನಂತರ ಮನೆಗೆ ಹೋದಾಗಲೇ ಆಗುವಂಥಾದ್ದು.
ದಕ್ಷಿಣ ಕನ್ನಡದ ಧರ್ಮಸ್ಥಳದ ಹತ್ತಿರ ಇರುವ ಒಂದು ಸಣ್ಣ ಹಳ್ಳಿಯ ಪರಿಸರದಲ್ಲಿ ನಮ್ಮ ಮನೆ ಇದ್ದು, ಪ್ರಸ್ತುತ ಇಂಥದ್ದೇ ಎಂಬ ಒಂದು ಹೆಸರಿಲ್ಲದ ಜಾಗವದು. ನೇತ್ರಾವತಿ ನದಿಯಿಂದ ಒಂದೆರಡು ಮೈಲಿ ದೂರದಲ್ಲೇ ಕಾಡಿನ ಮಧ್ಯೆ ಆರೆಂಟು ಮನೆಗಳಿರುವ ಈ ಪರಿಸರ ಅಡಿಕೆ, ತೆಂಗು, ಬಾಳೆ ತೋಟಗಳಿರುವ ಸ್ಥಳ. ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶದಲ್ಲಿರುವ ನಮ್ಮೂರು ಅತ್ತ ಮಲೆನಾಡಿಗೂ ಸೇರದೆ, ಇತ್ತ ಕರಾವಳಿಯೊಂದಿಗೂ ಪೂರ್ತಿ ಬೆರೆಯದೆ ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಒಂದಷ್ಟು ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿದೆಯಾದರೂ ಘಟ್ಟದ ಬಗ್ಗೆ ಒಂದು ಅನೂಹ್ಯ ಸೆಳೆತ ಯಾವತ್ತೂ ಇದ್ದಿದ್ದೇ.
ದಟ್ಟವಾದ ಅರಣ್ಯ ಮತ್ತು ಸಾವಿರಾರು ಜೀವ ಜಂತುಗಳ ಆವಾಸಸ್ಥಾನವಾಗಿರುವ ಪಶ್ಚಿಮ ಘಟ್ಟಗಳಲ್ಲಿ ಅಲ್ಲಿನ ಪರಿಸರಕ್ಕೆ ಮಾತ್ರ ಸೀಮಿತವಾದ ಅಪೂರ್ವ ಪ್ರಭೇದದ ಪ್ರಾಣಿ ಪಕ್ಷಿ ಸರಿಸೃಪಗಳೇ ಮೊದಲಾದ ನೂರಾರು ಜೀವಿಗಳಿವೆ. ಪೂರ್ಣಚಂದ್ರ ತೇಜಸ್ವಿ, ಕೃಪಾಕರ ಮತ್ತು ಸೇನಾನಿ ತಮ್ಮ ಬರಹಗಳ ಮೂಲಕ ಇಲ್ಲಿನ ಜೀವ ಜಗತ್ತಿನ ಅಚ್ಚರಿಗಳನ್ನು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಪಶ್ಚಿಮ ಘಟ್ಟ ಎಂದ ತಕ್ಷಣ ನಮ್ಮೂರಿನವರಿಗೆ ದೂರದ ಊರುಗಳಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ, ಶಿರಾಡಿ, ಬಿಸಿಲೆ, ಆಗುಂಬೆ ಎಂಬ ಮುಖ್ಯಘಾಟಿಗಳ ನೆನಪಾದರೂ ನಮಗೆ ಅತ್ಯಂತ ಹತ್ತಿರದ್ದು ಚಾರ್ಮಾಡಿ.
ಕನ್ಯಾಡಿ-ಉಜಿರೆ-ಮುಂಡಾಜೆ ಮಾರ್ಗವಾಗಿ ನಮ್ಮೂರಿಂದ ಕೇವಲ ಹತ್ತು ಹನ್ನೆರಡು ಮೈಲಿ ದೂರದಲ್ಲಿರುವ ಚಾರ್ಮಾಡಿ ಘಾಟಿ ಕೊನೆಗೊಳ್ಳುವುದು ಘಟ್ಟದ ಮೇಲಿನ ಕೊಟ್ಟಿಗೆಹಾರದಲ್ಲಿ. ಇಂತಿಪ್ಪ ಘಟ್ಟದ ಬುಡದಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ಜನರಿಗೆ ಕಡವೆ, ಕಾಡು ಹಂದಿ, ಕೋತಿಗಳು ಸೇರಿದಂತೆ ಮತ್ತಿನ್ನಿತರ ಸಣ್ಣ ಪುಟ್ಟ ಪ್ರಾಣಿಗಳು ತಮ್ಮ ತೋಟಗಳಿಗೆ ಲಗ್ಗೆಯಿಡುವುದು ಸರ್ವೇ ಸಾಮಾನ್ಯ ಸಂಗತಿ. ಆದರೆ ಇತ್ತೀಚಿಗೆ ನಾನು ಊರಿಗೆ ಹೋಗಿದ್ದಾಗ ಇವೇ ಅಡಿಕೆ ತೆಂಗಿನ ತೋಟಗಳಲ್ಲಿ ದರ್ಶನ ಕೊಟ್ಟ ಅಪೂರ್ವ ಜೀವಿಯೇ ಈ ಇಡೀ ಅನುಭವ ಕಥನದ ಕೇಂದ್ರ ಬಿಂದು.
ನೀವು ಪೂ.ಚಂ.ತೇ. ಯವರ ಕರ್ವಾಲೋ ಕಾದಂಬರಿಯನ್ನು ಓದಿರುತ್ತೀರಿ. ಕೃಷಿಕರಾದ ತೇಜಸ್ವಿ, ಅವರ ನಾಯಿ ಕಿವಿ, ವಿಜ್ಞಾನಿ ಕರ್ವಾಲೋ ಮತ್ತವರ ಶಿಷ್ಯ ಮಂದಣ್ಣ, ಫೋಟೋಗ್ರಾಫರ್ ಪ್ರಭಾಕರ, ಬಿರಿಯಾನಿ ಕರಿಯಪ್ಪ, ಹಾವಾಡಿಗ ಎಂಗ್ಟ ಎಲ್ಲಾ ಸೇರಿ ಅಪೂರ್ವವಾದ ಜೀವಿಯೊಂದರ ಹುಡುಕಾಟದಲ್ಲಿ ಕಾಡನ್ನು ಅನ್ವೇಷಿಸುತ್ತಾ ಘಟ್ಟದ ಮೇಲಿನ ಮಹಾಮಲೆಯ ಕಾಡಿಗೆ ಬರುತ್ತಾರೆ. ಅಚಾನಕ್ಕಾಗಿ ತೇಜಸ್ವಿಯವರಿಗೆ ಕಾಣಿಸಿಕೊಳ್ಳುವ ಆ ಜೀವಿಯನ್ನು ನೋಡುತ್ತಲೇ ಅವರ ಎದೆ ಬಡಿತ ತೀವ್ರವಾಗಿ, ತದೇಕ ಚಿತ್ತದಿಂದ ಅದನ್ನು ನೋಡುತ್ತಾ, ಉಳಿದವರೆಲ್ಲರಿಗೂ ಅದರ ಇರುವಿಕೆಯನ್ನು ಹೇಳುತ್ತಾ ಕೆಲಕಾಲ ಸ್ಥಂಭೀಭೂತರಾಗುತ್ತಾರೆ. ಇದೇ ಥೇಟು ಅನುಭವ ಮರುಕಳಿಸಿ, ಕ್ಷಣಗಳಲ್ಲಿ ನಾನು ಟೈಮ್ ಟ್ರಾವೆಲ್ ಮಾಡಿ ‘ಕರ್ವಾಲೋ’ ದ ಜಗತ್ತಿನೊಳಗೆ ನುಸುಳಿ, ಆ ಪಾತ್ರಗಳನ್ನು ಒಂದಷ್ಟುಹೊತ್ತು ಜೀವಿಸಿದ ಘಟನೆ ನಡೆದುಹೋಯ್ತು!
ನಡೆದಿದ್ದು ಇಷ್ಟು. ಅಂದು ಮಧ್ಯಾಹ್ನ ಅಣ್ಣನ ಪುಟ್ಟ ಮಗಳು ಮನ್ವಿತಾ ಜೊತೆ ಮನೆಯಂಗಳದಲ್ಲಿ ಹೂ, ಚಿಟ್ಟೆ, ಹಕ್ಕಿಗಳನ್ನು ನೋಡುತ್ತಾ, ಅವಳೊಂದಿಗೆ ಆಡುತ್ತಾ ಕಾಲ ಕಳೆಯುತ್ತಲಿದ್ದೆ. ಕ್ಷಣ ಮಾತ್ರದಲ್ಲಿ ಮರವೊಂದರಿಂದ ಸಣ್ಣ ಹಕ್ಕಿಯೊಂದು ಸುಯ್ಯನೆ ತೇಲಿ ಹೋಗಿ ತಗ್ಗಿನ ತೋಟದಲ್ಲಿದ್ದ ತೆಂಗಿನ ಮರವೊಂದರ ಬುಡಭಾಗದಲ್ಲಿ ಕುಳಿತಂತಾಯ್ತು. ಇದ್ಯಾವ ಹಕ್ಕಿಯಪ್ಪ ಎಂಬ ಕುತೂಹಲದಿಂದ ಅಂಗಳದ ಅಂಚಿಗೆ ಹೋಗಿ ಆ ತೆಂಗಿನ ಮರದ ಬುಡವನ್ನೇ ಗಮನಿಸಿದೆ. ಯಾವ ಹಕ್ಕಿಯೂ ಕಾಣಿಸಲಿಲ್ಲ. ಅರೆರೆ, ಇದೇನಪ್ಪಾ ಎಂದುಕೊಂಡು ಮರದ ಕಾಂಡದ ಕಡೆ ನೋಡಿದರೆ ಅಸ್ಪಷ್ಟವಾಗಿ ಓತಿಯ ಆಕಾರದ ಜೀವಿಯೊಂದು ಕಂಡಂತಾಯ್ತು. ನೋಡನೋಡುತ್ತಿದ್ದಂತೆಯೇ ಸರ ಸರನೆ ಮರವನ್ನೇರಿದ ಆ ಓತಿ ಕಣ್ಮುಚ್ಚಿ ತೆರೆಯುವುದರಲ್ಲಿ ಸರ್ರನೆ ತೇಲುತ್ತಾ ಅದರಾಚೆಗಿದ್ದ ಮತ್ತೊಂದು ತೆಂಗಿನ ಮರದ ಕಾಂಡವನ್ನು ಅಪ್ಪಿ ಕುಳಿತಿತು. ಆ ಕ್ಷಣ ಏಕಕಾಲದಲ್ಲೇ ನನ್ನೆದೆಯ ಢವಢವ ನನಗೇ ಕೇಳಿದಂತೆ ಅನಿಸಿದ್ದೂ ಹೌದು, ನನ್ನ ಕಣ್ಣುಗಳನ್ನು ನಾನೇ ನಂಬದಂತಾಗಿದ್ದೂ ಹೌದು. ಹತ್ತು ಹನ್ನೆರಡು ವರ್ಷಗಳ ಹಿಂದೆ ಓದಿದ್ದ ಕರ್ವಾಲೋ ಕಾದಂಬರಿಯಲ್ಲಿ ತೇಜಸ್ವಿಯವರ ತಂಡ ಹಲವು ದಿನಗಳ ತಯಾರಿ ಮಾಡಿಕೊಂಡು, ಹತ್ತಾರು ಸಂಕಷ್ಟಗಳನ್ನು ಎದುರಿಸಿ ಕೊನೆಗೂ ನೋಡಿದ ‘ಹಾರುವ ಓತಿ’ ನನಗೆಮಾತ್ರ ಬಹಳ ಸುಲಭವಾಗಿ ತನ್ನ ದರ್ಶನ ಭಾಗ್ಯವನ್ನು ಕರುಣಿಸಿತ್ತು.
ಅಣ್ಣನ ಮಗಳನ್ನು ಮನೆಯೊಳಗೆ ಬಿಟ್ಟು ತೋಟಕ್ಕೆ ಓಡಿದೆ. ಅದೇ ತೆಂಗಿನ ಮರದಿಂದ ಕೊಂಚ ದೂರದಲ್ಲಿ ನಿಂತು ಓತಿಗಾಗಿ ಹುಡುಕಿದೆ. ಅಲ್ಲೆಲ್ಲೂ ಅದರ ಸುಳಿವೇ ಇದ್ದಂತಿರಲಿಲ್ಲ! ಸುತ್ತಮುತ್ತ ಇದ್ದ ಅಡಿಕೆ ಮರಗಳಲ್ಲೂ ಅದರ ಪತ್ತೆಯಿಲ್ಲ. ನಂಗೇನು ಭ್ರಮೆಯಾಗಿತ್ತೋ ಎಂಬ ಅನುಮಾನ ಶುರುವಾಯಿತು. ಮರೀಚಿಕೆಯಂತೆ ಹತ್ತಿರ ಬರುತ್ತಲೇ ಮರೆಯಾದ ಇದರ ಮೋಸದಿಂದ ಪೆಚ್ಚಾಗತೊಡಗಿತ್ತು. ತಕ್ಷಣ ಓತಿಯ ಬಣ್ಣವನ್ನು ಮತ್ತೊಮ್ಮೆ ನೆನಪಿಸಿಕೊಂಡೆ. ಹೌದು,ಅದರ ಮೈಬಣ್ಣ ಥೇಟು ತೆಂಗಿನ ಮರದ್ದೋ ಅಡಿಕೆ ಮರದ್ದೋ ತೊಗಟೆಯ ಬಣ್ಣವೇ ಆಗಿತ್ತು. ಕರ್ವಾಲೋದಲ್ಲೂ ಹಾಗೇ, ತೇಜಸ್ವಿ ನೆಟ್ಟ ದೃಷ್ಟಿ ಸಡಿಲಿಸದೆ ಏಕಾಗ್ರ ಚಿತ್ತದಿಂದ ಓತಿಯನ್ನು ನೋಡುತ್ತಲಿರುತ್ತಾರೆ. ಒಂದು ಕ್ಷಣ ದೃಷ್ಟಿ ಅತ್ತಿತ್ತ ಸರಿದರೆ ಮುಗೀತು, ಓತಿಯನ್ನು ಕಳೆದುಕೊಂಡಂತೆಯೇ. ಮತ್ತೊಮ್ಮೆ ಅದೇ ತೆಂಗಿನ ಮರವನ್ನು ಬುಡದಿಂದ ತುದಿವರೆಗೆ ಇಂಚಿಂಚೂ ಬಿಡದೆ ಪರಿಶೀಲಿಸಿದೆ. ಅದೋ ಅಲ್ಲಿತ್ತು. ಎತ್ತರಕ್ಕೆ ಬೆಳೆದಿದ್ದ ಮರದ ಮಧ್ಯಕ್ಕಿಂತ ಸ್ವಲ್ಪಕೆಳಗೆ ಹಳದಿ ಕಡ್ಡಿಯಂತಹದ್ದೊಂದು ಕದಲಿದಂತಾಗುತ್ತಿತ್ತು. ದಿಟ್ಟಿಸಿ ನೋಡಿದಾಗ ಅದು ಓತಿಯೇ, ತನ್ನ ಕತ್ತಿನ ಕೆಳಭಾಗದ ಹಳದಿ ಚೀಲದಂತಹ ಅಂಗವನ್ನು ಆಗಾಗ ಹಿಗ್ಗಿಸಿ ಕುಗ್ಗಿಸುತ್ತಿತ್ತು. ನೋಡ ನೋಡುತ್ತಿದ್ದಂತೆಯೇ ಇನ್ನೊಂದಷ್ಟು ಮೇಲೇರಿದ ಓತಿ ನಾಲಿಗೆಯನ್ನು ಗಬಕ್ಕೆಂದು ಚಾಚಿ ಒಳಗೆಳೆದುಕೊಳ್ಳುತ್ತಲಿತ್ತು. ಇಲ್ಲ, ಇನ್ನು ತಡಮಾಡಲು ಸಾಧ್ಯವೇ ಇರಲಿಲ್ಲ. ಇದೇನು ಕನಸೋ ನಿಜವೋ ಒಂದೂ ತಿಳಿಯದೆ ಮತ್ತೆ ಮನೆಯ ಕಡೆ ಓಡಿ ನನ್ನಲ್ಲಿದ್ದ ಕ್ಯಾಮರಾವನ್ನು ತೆಗೆದುಕೊಂಡು ಬಂದೆ.
ಅಚಾನಕ್ಕಾಗಿ ತೇಜಸ್ವಿಯವರಿಗೆ ಕಾಣಿಸಿಕೊಳ್ಳುವ ಆ ಜೀವಿಯನ್ನು ನೋಡುತ್ತಲೇ ಅವರ ಎದೆ ಬಡಿತ ತೀವ್ರವಾಗಿ, ತದೇಕ ಚಿತ್ತದಿಂದ ಅದನ್ನು ನೋಡುತ್ತಾ, ಉಳಿದವರೆಲ್ಲರಿಗೂ ಅದರ ಇರುವಿಕೆಯನ್ನು ಹೇಳುತ್ತಾ ಕೆಲಕಾಲ ಸ್ಥಂಭೀಭೂತರಾಗುತ್ತಾರೆ.
ಊಹೂಂ, ನನ್ನಲ್ಲಿದ್ದ ಕ್ಯಾಮರದ ಲೆನ್ಸು ಅದಾಗಲೇ ಸಾಕಷ್ಟು ಎತ್ತರಕ್ಕೇರಿದ್ದ ಓತಿಯನ್ನುಸ್ಪಷ್ಟವಾಗಿ ಸೆರೆಹಿಡಿಯುವಷ್ಟು ಉತ್ತಮವಾಗಿರಲಿಲ್ಲ. ಇಷ್ಟೊತ್ತಿಗೆ ನನ್ನ ಓಡಾಟ, ಉದ್ವೇಗ, ಗಡಿಬಿಡಿಗಳನ್ನು ನೋಡಿ ಅಮ್ಮ, ಅತ್ತಿಗೆ ಮತ್ತು ಕಾವ್ಯ ಪುಟ್ಟ ಮನ್ವಿತಾಳನ್ನು ಎತ್ತಿಕೊಂಡು ಅಲ್ಲಿಗೇ ಬಂದರು. ಅವರಿಗೂ ಈ ಹಾರುವ ಓತಿಯ ಪರಿಚಯ ಹೇಳಿ, ಕಾವ್ಯಾಳ ಕೈಯಲ್ಲಿ ಕ್ಯಾಮರ ಕೊಟ್ಟು ಏಣಿ ತರಲು ಓಡಿದೆ. ಪಕ್ಕದ ಅಡಿಕೆ ಮರಕ್ಕೆ ಏಣಿ ಇಟ್ಟು ಮೇಲೆ ಹತ್ತಿ ಆದಷ್ಟು ಹತ್ತಿರದಿಂದ ಓತಿಯನ್ನು ನೋಡುವುದು ಮತ್ತದರ ಫೋಟೋ ತೆಗೆಯುವುದು ನನ್ನ ಯೋಚನೆಯಾಗಿತ್ತು. ಇಲ್ಲಿಮರ ಹತ್ತಲು ಕರಿಯಪ್ಪನೂ ಇರಲಿಲ್ಲ, ಎಂಗ್ಟನೂ ಇರಲಿಲ್ಲ. ನನ್ನ ಧಡೂತಿ ದೇಹಕ್ಕೆ ಮರಹತ್ತುವ ಪ್ರತಿಭೆಯಂತೂ ಮೊದಲೇ ಇರಲಿಲ್ಲ. ಅಷ್ಟೊತ್ತಿಗಾಗಲೇ ಮತ್ತೊಂದು ಓತಿ ಹಾರಿ ಬಂದು ಇನ್ನೊಂದು ಅಡಿಕೆ ಮರವನ್ನು ಏರತೊಡಗಿದ್ದನ್ನುಕಾವ್ಯ ಮತ್ತು ಅತ್ತಿಗೆ ನೋಡಿದ್ದರು. ಆಹಾ! ಒಂದಲ್ಲ, ಎರಡು ಹಾರುವ ಓತಿಗಳು! ನನ್ನ ಜನ್ಮ ಸಾರ್ಥಕ ಆದಂತೆ ಆ ಕ್ಷಣ ಅನಿಸಿದ್ದು ಸುಳ್ಳಲ್ಲ.ಏಣಿ ಏರಿ ಆದಷ್ಟು ಮೇಲಕ್ಕೆ ಹೋಗಿ ಓತಿಗಳನ್ನು ನೋಡತೊಡಗಿದೆ.
ಮತ್ತೆರಡು ಓತಿಗಳು ಇನ್ನೂ ಎತ್ತರದಲ್ಲಿದ್ದವು. ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳ ಅರಣ್ಯಗಳಿಗೆ ಸೀಮಿತವಾಗಿರುವ ಇವುಗಳದ್ದೊಂದು ಸಣ್ಣ ಗುಂಪೇ ಇತ್ತ ಕಡೆ ಬಂದಿರಬೇಕು ಅಂದುಕೊಂಡೆ. ಇದ್ದುದರಲ್ಲೇ ಕೆಳಮಟ್ಟದಲ್ಲಿದ್ದ ಒಂದು ಓತಿಯನ್ನು ಕೂಲಂಕುಶವಾಗಿ ಗಮನಿಸತೊಡಗಿದೆ. ಮುಂಗಾಲುಗಳನ್ನು ೪೫ ಡಿಗ್ರಿ ಕೋನದಲ್ಲಿ ಚಾಚಿ, ತಲೆಯೂ ಸೇರಿದಂತೆ ದೇಹದ ಮುಂಭಾಗವನ್ನು ಎತ್ತಿ ಹಿಡಿದು, ಹಿಂಗಾಲು ಮತ್ತು ಬಾಲವನ್ನು ಮರಕ್ಕೆ ಸಮಾನಾಂತರವಾಗಿ ಇಳಿಬಿಟ್ಟು ಅದೇನನ್ನೋ ಕುರಿತು ಧೇನಿಸುತ್ತಿರುವಂತೆ ನಿಶ್ಚಲವಾಗಿ ನಿಂತಿದ್ದ ಓತಿ, ಮರದ ಮೇಲಿಂದ ಕೆಳಮುಖವಾಗಿ ವಿರಳವಾದ ಸಾಲಿನಲ್ಲಿ ಬರುತ್ತಲಿದ್ದ ಸಣ್ಣನೆಯ ಕಪ್ಪಿರುವೆಗಳನ್ನು ಗಬಕ್ಕೆಂದು ತನ್ನ ನಾಲಗೆ ಚಾಚಿ ನುಂಗುತ್ತಲಿತ್ತು. ನುಂಗಿದ ಮರುಕ್ಷಣ ಈ ಓತಿಯ ಕತ್ತಿನ ಕೆಳಭಾಗದ ನಿಂಬೆ ಹಳದಿ ಬಣ್ಣದ ಚೀಲದಂತಹ ಆಕರ್ಷಕ ಅಂಗ, ಚೈನಾ ಬೀಸಣಿಕೆ ಬಿಚ್ಚಿದಂತೆ ಬಿಚ್ಚಿ ಮಡಚಿಕೊಳ್ಳುತ್ತಿತ್ತು.
ಗೋಸುಂಬೆಯಷ್ಟು ಅಲ್ಲದಿದ್ದರೂ ತನ್ನ ಚರ್ಮದ ಬಣ್ಣವನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಳ್ಳಬಲ್ಲ ಈ ಓತಿ, ತೆಂಗಿನ ಮರದಮೇಲಿದ್ದಾಗ ಆ ತೊಗಟೆಯ ಬಣ್ಣವನ್ನೂ, ಅಡಿಕೆ ಮರದತೊಗಟೆಯ ಮೇಲೆ ಅಲ್ಲಿನ ಬಣ್ಣವನ್ನೂ ತನ್ನ ಚರ್ಮಕ್ಕೆ ಎರವಲು ಪಡೆದಂತೆ ಅನಿಸುತ್ತಿತ್ತು. ಬೇರೆ ಸಾಮಾನ್ಯ ಓತಿಗಳಂತೆ ಸ್ವಲ್ಪವೂ ನಯ ನುಣುಪು ಇಲ್ಲವೇ ಇಲ್ಲದ ಇದರ ಮೈ ಚರ್ಮ ಮರದ ತೊಗಟೆಯಂತೆಯೇ ದೊರಗು ದೊರಗಾಗಿದ್ದು, ಮರದಲ್ಲಿನ ಇದರ ಇರುವಿಕೆ ಸುಲಭವಾಗಿ ಗೋಚರಿಸಲು ಸಾಧ್ಯವೇ ಇರಲಿಲ್ಲ. ಅಷ್ಟರಲ್ಲಿ ರೊಯ್ಯನೆ ಮತ್ತೊಂದು ಓತಿ ನನ್ನ ಕಣ್ಣೆದುರೇ ತೇಲಿ ಹೋಗಿ ಈ ಓತಿಗಳಿದ್ದ ಮರದ ಕಾಂಡವನ್ನು ತಲುಪಿತು. ಅಷ್ಟೂ ಹೊತ್ತು ಇವುಗಳ ಚಲನವಲನಗಳನ್ನು ನೋಡುತ್ತಲಿದ್ದರೂ ಇಂತಹಾ ಮೋಹಕ ದೃಶ್ಯ ಕಂಡಿರಲಿಲ್ಲ. ತನ್ನ ಮುಂಗಾಲು ಮತ್ತು ಹಿಂಗಾಲುಗಳ ಮಧ್ಯೆ ರೆಕ್ಕೆಯಂತಿರುವ ತೆಳುವಾದ ಚರ್ಮದ ಪದರವನ್ನು ಅಗಲವಾಗಿ ತೆರೆದು ಓತಿ ಹಾರಿ ಬರುತ್ತಿದ್ದರೆ, ಕೆಳಗಿನಿಂದ ನೋಡುವ ನಮಗೆ ಹಳದಿ ಬಣ್ಣದ ಮೇಲೆ ಕಪ್ಪು ಚುಕ್ಕೆಗಳ ಆಕರ್ಷಕ ರೆಕ್ಕೆಯ ಅದ್ಭುತ ಜೀವಿಯೊಂದು ಮಿಂಚಿ ಮರೆಯಾದಂತಿರುತ್ತದೆ.
ಮರದಿಂದ ಮರಕ್ಕೆ ಹಾರುವಾಗ ಮಾತ್ರ ತೆರೆದುಕೊಂಡಿರುತ್ತಿದ್ದ ರೆಕ್ಕೆಯನ್ನು ಓತಿ ತನ್ನ ಗುರಿ ತಲುಪಿದ ಮರುಕ್ಷಣದಲ್ಲೇ ಮರೆಮಾಚಿ ಬಿಡುತ್ತಿತ್ತು. ಅದಕ್ಕೊಂದು ರೆಕ್ಕೆ ಇರಬಹುದೆಂದು ಊಹಿಸಲೂ ಸಾಧ್ಯವಿರಲಿಲ್ಲ. ಹಾಗೆ ಹಾರಿ ಬಂದು ಕುಳಿತ ಓತಿ ಇದುವರೆಗೂ ನೋಡಿದ ಓತಿಗಳಿಗಿಂತ ಸ್ವಲ್ಪ ಭಿನ್ನವಾಗಿತ್ತು. ಗಾತ್ರದಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲದಿದ್ದರೂ ಕತ್ತಿನ ಕೆಳಗಿನ ಹಳದಿ ಚೀಲ ಮಾತ್ರ ಈ ಹಿಂದೆ ನೋಡಿದ ಓತಿಗಳಿಗೆ ಹೋಲಿಸಿದರೆ ಎರಡರಿಂದ ಮೂರು ಪಟ್ಟು ಉದ್ದವಾಗಿದ್ದು, ಪದೇ ಪದೇ ಕತ್ತಿನ ಕೆಳಗಿನಿಂದ ಮುಖದ ಮುಂಭಾಗದವರೆಗೆ ಚುರುಕಾಗಿ ಚಲಿಸಲ್ಪಡುತ್ತಿತ್ತು. ತಕ್ಷಣ ಅದು ಗಂಡು ಓತಿಯಾಗಿದ್ದು ತನ್ನ ಹೆಂಗೆಳೆಯರ ಸನಿಹಕ್ಕೋಸ್ಕರ ಹಾತೊರೆಯುತ್ತಿದೆ ಎಂಬುದು ಸ್ಪಷ್ಟವಾಗಿತ್ತು. ಆದರೆ ಈ ಗಂಡು ಓತಿ ಮೇಲೇರಿದಂತೆಲ್ಲಾ ಮೇಲಿದ್ದ ಹೆಣ್ಣು ಓತಿಗಳು ಇನ್ನಷ್ಟು ಮತ್ತಷ್ಟು ಎತ್ತರಕ್ಕೆ ಏರುತ್ತಾ ಹೋದವು. ಗಂಡು ಓತಿಯೂ ಕಪ್ಪಿರುವೆಗಳನ್ನು ಒಂದೊಂದಾಗಿ ಕಬಳಿಸುತ್ತಾ ಸಂಗಾತಿಯನ್ನು ಅರಸಿ ಅವುಗಳನ್ನೇ ಹಿಂಬಾಲಿಸತೊಡಗಿತು. ಅಷ್ಟೊತ್ತಿಗಾಗಲೇ ಸೂರ್ಯ ಮುಳುಗುವ ಹೊತ್ತಾಗಿ ಬೆಳಕು ಕಡಿಮೆಯಾಗಿದ್ದರಿಂದನಾನೂ ಮನೆ ಸೇರಿದೆ.
ಇನ್ನೂ ಅದರದೇ ಗುಂಗಿನಲ್ಲಿದ್ದುದರಿಂದ ಅಂತರ್ಜಾಲವನ್ನು ಒಂದಷ್ಟು ತಡಕಾಡಿದೆ. ಡ್ರ್ಯಾಕೋ ಡುಸ್ಸುಮಿರಿ (Draco dussumieri)ಎಂಬ ವೈಜ್ಞಾನಿಕ ಹೆಸರುಳ್ಳ ಈ ಹಾರುವ ಓತಿಗಳು ಮರಗಳನ್ನೇ ನೆಚ್ಚಿಕೊಂಡು ಬದುಕುತ್ತವೆ. ಮೊಟ್ಟೆ ಇಡುವ ಸಮಯದಲ್ಲಿ ಮಾತ್ರ ಹೆಣ್ಣು ಓತಿಗಳು ನೆಲಕ್ಕಿಳಿಯುತ್ತವೆ. ಬೆಳಗಿನ ಸೂರ್ಯನ ಬಿಸಿಲಿನ ಶಾಖಕ್ಕೆ ಮೈಯೊಡ್ಡಿ ಚುರುಕಾಗುವ ಇವುಗಳು‘ಹಾರುವ ಓತಿ’(Flying Lizard) ಎಂದು ಕರೆಸಿಕೊಂಡರೂ ಹಾರಲಾರವು. ಪೆಟಾಜಿಯಾ (Patagia)ಎಂಬ ರೆಕ್ಕೆಯಂತಹ ರಚನೆ ಇವುಗಳು ಎತ್ತರದಿಂದ ತಗ್ಗಿಗೆ ತೇಲಿ ಬರಲು ಸಹಾಯಕ. ಕತ್ತಿನ ಕೆಳಗಿನ ನಿಂಬೆ ಹಳದಿ ಬಣ್ಣದ ಡಿವ್ಲ್ಯಾಪ್(Dewlap) ಎಂಬ ಚೀಲದಂತಹ ರಚನೆಯನ್ನು ಈ ಓತಿಗಳು ಪ್ರದರ್ಶಿಸುತ್ತಾ ಇರುತ್ತವೆ. ಹೆಣ್ಣು ಓತಿಯನ್ನು ಆಕರ್ಷಿಸಲು ಗಂಡು ಓತಿಗಿರುವ ಮುಖ್ಯ ಸಾಧನ ಇದೇಅಂತೆ. ಇರುವೆಗಳನ್ನೇ ಪ್ರಮುಖ ಆಹಾರವನ್ನಾಗಿ ಸೇವಿಸುವ ಇವು ಮರದ ತೊಗಟೆಯ ಬಣ್ಣವನ್ನೇ ತಮ್ಮ ಮೈ ಬಣ್ಣವನ್ನಾಗಿಸಿ ತಮ್ಮಂತಹ ಓತಿಗಳನ್ನು ಬೇಟೆಯಾಡಿ ಬದುಕುವ ಹಲವಾರು ಪಕ್ಷಿಗಳಿಂದ ತಪ್ಪಿಸಿಕೊಳ್ಳುತ್ತವಂತೆ. ಈ ಎಲ್ಲಾ ವಿವರಗಳನ್ನು ಮನನ ಮಾಡುತ್ತಾ ನಿದ್ದೆಗೆ ಜಾರಿದ್ದೆ.
ಮರುದಿನ ಮಧ್ಯಾಹ್ನದ ಮುಂಚೆಯೇ ಮನೆ ಬಿಡಬೇಕಿದ್ದುದರಿಂದ ಮತ್ತೊಮ್ಮೆ ತೋಟಕ್ಕೆ ಹೋಗಿ ಹಿಂದಿನ ದಿನ ನೋಡಿದ ಅಡಿಕೆ ತೆಂಗಿನ ಮರಗಳನ್ನೇ ಮತ್ತೆ ನೋಡಿದೆ. ಎರಡ್ಮೂರು ಹೆಣ್ಣು ಓತಿಗಳು ತಮ್ಮ ಪಾಡಿಗೆ ತಮ್ಮ ದಿನಚರಿ ಆರಂಭಿಸಿದ್ದವು. ಯಾಕೋ ಅಂದು ಕರಿಯಪ್ಪನ ಕೈಗೆ ಸಿಕ್ಕೂ ನುಸುಳಿಕೊಂಡು ಪಾರಾದ ಓತಿಯ ನೆನಪಾಯಿತು. ಅವತ್ತು ಕೋಡುಗಲ್ಲಿನ ಅಂಚಿನಿಂದ ಚಿಮ್ಮಿ ಕಣ್ಮರೆಯಾದ ಓತಿಯ ಮರಿಮಕ್ಕಳೇ ಇವುಗಳಿರಬಹುದಲ್ಲವೇ ಎಂಬ ಆಲೋಚನೆ ಬಂದು ಏನೋ ಒಂದು ರೀತಿ ಪುಳಕವಾಯಿತು. ತೇಜಸ್ವಿಯವರ ಕಂಗಳಲ್ಲಿ ಅಂದು ಕರಿಯಪ್ಪ “ಕಾಲ ಪ್ರವಾಹದ ಅದಮ್ಯ ಗತಿಯನ್ನು ಈಜಿ ಯುಗಾಂತರಗಳ ಹಿಂದಿನ ಕುಣಿಕೆಯೊಂದನ್ನು ಹಿಡಿದು ಬಿಟ್ಟಿದ್ದ.” ನಾನು ಮಾತ್ರ ಬೆಚ್ಚಗೆ ಕರ್ವಾಲೋ ತೆಕ್ಕೆಯಲ್ಲೇ ಬಿದ್ದಿದ್ದೆ.
ಕೌಶಿಕ್ ಕುಕ್ಕೆಮನೆ ಧರ್ಮಸ್ಥಳದ ಹತ್ತಿರದ ಪುಟ್ಟದೊಂದು ಹಳ್ಳಿಯವರು. ವಿಜ್ಞಾನ, ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಅವರ ಆಸಕ್ತಿಯ ಕ್ಷೇತ್ರಗಳು. ಸದ್ಯ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದು ಜೈವಿಕ ಗಡಿಯಾರಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
Such a beautiful experience…it only inspires us to do two things…one is to read karvola…and two is to visit your lovely home…much of the beauty in your words will only portray how much we as in the citizens in urban jungle miss out in daily life..
Wish to read more and more of this…keep it coming!
Thank you so much for your encouraging words.
Nice Article, reminded me read again “Karvalo”
The prose of this piece is like a poem. The melody in the words draws deeply into the beauty of the vibrant Western Ghats and enthralls you, giving a deep sense of serenity. Draco, as listed, definitely is the kendra bindu.. but the lush and serene western ghat used as the canvas to narrate the play of events is beautifully refreshing.. superb! Keep writing kowshik.
Thank you Aleema.