Advertisement
ತ್ಯಾಗದಿಂದ ಹುಟ್ಟಿಕೊಂಡಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ತ್ಯಾಗದಿಂದ ಹುಟ್ಟಿಕೊಂಡಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ನಾನು ಬರೆಯುವೆ ಕಣ್ಮರೆಯಾಗಲು, ಇದರಿಂದ ಜೀವನವು ನನಗೆ ಬಹಿರಂಗವಾಗುತ್ತೆ, ನಾನಿಲ್ಲದೆನೇ, ಅಂತ್ಯದಲ್ಲಿ ನನ್ನ ಮುಖವು ಕಾಗದದ ಬಿಳಿ ಬಣ್ಣಕ್ಕಿಂತ ಹೆಚ್ಚು ಮಸುಕಾಗಿರುತ್ತೆ, ಪ್ರತಿಬಿಂಬವಿಲ್ಲದೆನೇ. ತನ್ನನ್ನು ತಾನು ಮರೆಯಬಹುದಾದಂತಹ ಜಗತ್ತು. ಕನ್ನಡಿಯಾಗಲ್ಲ, ಒಂದು ಕಲ್ಲಾಗಿ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಇಟಲಿ ದೇಶದ ಹೆಸರಾಂತ ಕವಿ ಆ್ಯಂಟೊನೆಲಾ ಅನೆಡಾ-ರವರ (Antonella Anedda, 1955) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಸಮಕಾಲೀನ ಇಟ್ಯಾಲಿಯನ್ ಕಾವ್ಯದಲ್ಲಿ ಅತ್ಯಂತ ಅಧಿಕಾರಯುತ ಮತ್ತು ಮಹತ್ವದ ಧ್ವನಿಗಳಲ್ಲಿ ಒಂದಾದ ಆ್ಯಂಟೊನೆಲಾ ಅನೆಡಾ-ರ ಕಾವ್ಯವು ಸಮಕಾಲೀನ ಮನುಷ್ಯನ ಬಲವಾದ ಮತ್ತು ಮಾನವನ ಸಂಕಟ, ದುರಂತದ ಪ್ರಜ್ಞೆ, ಯುದ್ಧ, ಕಾಲದ ಬಗ್ಗೆ ಧ್ಯಾನ, ನಮ್ಮ ಪ್ರಪಂಚದ ವಿಧಿ – ಇಂತಹ ಅಗತ್ಯವಾದ ವಿಷಯಗಳಿಗೆ ಮತ್ತೆ ಮರಳುವ ಮೂಲಕ ಗುರುತಿಸಲ್ಪಟ್ಟಿದೆ. ಅವರ ಕಾವ್ಯದ ತೀವ್ರತೆಯು ಈ ವಿಷಯಗಳಿಂದ ಹುಟ್ಟಿಕೊಂಡಿದೆ ಮತ್ತು ಅದು ಅವರ ಬರವಣಿಗೆಯ ನೈತಿಕ ಒತ್ತಡಕ್ಕೆ ಆಳವಾದ ಸಂಬಂಧ ಹೊಂದಿದೆ, ಹಾಗೂ ಅಲ್ಲಿ ಕಾವ್ಯಾತ್ಮಕ ಮನೋಭಾವ ಮತ್ತು ತಾತ್ವಿಕ ಪ್ರಶ್ನೆಗಳು ಹೆಣೆದುಕೊಂಡಿವೆ. ಆದರೆ ಈ ಆಳವು ಲಘುತೆಯೊಂದಿಗೆ ಕೂಡ ಸಮನ್ವಯಗೊಳ್ಳುತ್ತದೆ; ದುರಂತವನ್ನು ಸಂತೋಷದೊಂದಿಗೆ, ವಿವರಗಳ ಅವಗಾಹನೆಯನ್ನು ಅತ್ಯಂತ ತೀವ್ರವಾದ ಆತ್ಮಾವಲೋಕನದೊಂದಿಗೆ, ನೋವನ್ನು ಎಲ್ಲಾ ದುಃಖಗಳ ಅದ್ಭುತ ಅಮಾನತುಗೊಳಿಸುವಿಕೆಯೊಂದಿಗೆ ಸಂಯೋಜಿಸುವ ಕಾವ್ಯದಲ್ಲಿ ಸಮನ್ವಯಗೊಳ್ಳುತ್ತದೆ. ಮತ್ತು ಸೌಂದರ್ಯವು ಜೀವನದ ಕತ್ತಲೆಯ ಮೂಲಕ್ಕೆ ಹತ್ತಿರವಾದಷ್ಟೂ ಹೆಚ್ಚು ತೀವ್ರ ಮತ್ತು ಪ್ರಕಾಶಮಾನವಾಗಿರುತ್ತದೆ.

ಆ್ಯಂಟೊನೆಲಾ ಅನೆಡಾ ರವರು 1955-ರಲ್ಲಿ ರೋಮ್‌ ನಗರದಲ್ಲಿ ಜನಿಸಿದರು. ಅವರು ರೋಮ್ ಮತ್ತು ವೆನಿಸ್‌ ನಗರಗಳಲ್ಲಿ ವಿದ್ಯಾಭ್ಯಾಸ ಮಾಡಿದರು ಮತ್ತು ಆಧುನಿಕ ಕಲೆಯ ಇತಿಹಾಸದಲ್ಲಿ ತಮ್ಮ ಸ್ನಾತಕ ಪದವಿಯನ್ನು ಪಡೆದರು. ಅನೆಡಾ ಅವರು ಕವನಗಳು, ಪ್ರಬಂಧಗಳು ಮತ್ತು ಅನುವಾದಗಳನ್ನು ಪ್ರಕಟಿಸಿದ್ದು, ಆರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ – Residenze invernali (Winter residences, 1992), Notti di pace occidentale (Nights of Western Peace, 1999), Il catalogo della gioia (The catalogue of joy, 2003), Dal balcone del corpo (From the Body’s Balcony, 2007), Salva con nome, (Save as, 2012) ಹಾಗೂ ಅವರ ಇತ್ತೀಚಿನ ಕಾವ್ಯ ಸಂಕಲನ Historiae (2018). ಅವರ ಅನೇಕ ಗದ್ಯ ಪುಸ್ತಕಗಳಲ್ಲಿ ಕಲಾಕೃತಿಗಳಲ್ಲಿನ ವಿವರಗಳ ಅಧ್ಯಯನ, La vita dei dettagli (The life of details, 2009), ಮತ್ತು ಅವರ ಕುಟುಂಬದ ಸ್ಥಳೀಯ ಪ್ರದೇಶವಾದ ಸಾರ್ಡಿನಿಯಾದ La Maddalena-ದ ಇತಿಹಾಸ ಮತ್ತು ಭೂವಿವರಣೆಯ ಸಮೀಕ್ಷೆಯ ಪುಸ್ತಕ Isolatria (2013) ಸೇರಿವೆ. ಅವರು ಮುಖ್ಯವಾಗಿ ಓವಿಡ್, ಸೇಂಟ್ ಜಾನ್ ಪರ್ಸೆ, ಫಿಲಿಪ್ ಜಾಕೊಟೆಟ್, ಜೇಮೀ ಮೆಕೆಂಡ್ರಿಕ್‌ ಸೇರಿದಂತೆ ಬಹಳಷ್ಟು ಕವಿಗಳ ಕವನಗಳನ್ನು ಅನುವಾದಿಸಿದ್ದಾರೆ. ಅವರ ಬರಹಗಳು ಹಲವಾರು ಇಟಾಲಿಯನ್ ಮತ್ತು ವಿದೇಶಿ ಸಂಕಲನಗಳಲ್ಲಿ ಪ್ರಕಟವಾಗಿವೆ.

ಅವರು ತಮ್ಮ ಕಾವ್ಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು, ಸನ್ಮಾನಗಳನ್ನು ಪಡೆದಿದ್ದಾರೆ, ಅವುಗಳಲ್ಲಿ Sinisgalli Prize, Diego Valeri Prize, Tratti Poetry Prize, Montale Prize, Pascoli Award, Alghero Donna Award, Viareggio-Rèpaci Literary Award, ಹಾಗೂ Puškin Prize ಮುಖ್ಯವಾದ ಪ್ರಶಸ್ತಿಗಳು. 2019-ರಲ್ಲಿ ಸೊರ್ಬೊನ್ ವಿಶ್ವವಿದ್ಯಲಯವು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿತು.

ಇಟ್ಯಾಲಿಯನ್ ಭಾಷೆಯ ಖ್ಯಾತ ಕವಿ ರೊಬೆರ್ತೊ ಬರೊಂಟಿ ಮಾರ್ಚಿಯೊ-ರವರು (Roberto Baronti Marchiò) ಆ್ಯಂಟೊನೆಲಾ ಅನೆಡಾ-ರವರ ಕಾವ್ಯವನ್ನು ವಿಶ್ಲೇಷಿಸುತ್ತಾ, ಹೀಗನ್ನುತ್ತಾರೆ: “ಅಹಂಕಾರದ ಸ್ವಯಂ-ಆಚರಿಸುವ ಸ್ವಾರ್ಥಭಾವಕ್ಕೆ ಬದಲಾಗಿ, ಆ್ಯಂಟೊನೆಲಾ ಅನೆಡಾ-ರ ಕಾವ್ಯವು ತೆಗೆದುಹಾಕುವಿಕೆಯ ಕ್ರಿಯೆಯಿಂದ, ಬಹುಮಟ್ಟಿಗೆ ತ್ಯಾಗದಿಂದ ಹುಟ್ಟಿಕೊಂಡಂತೆ ತೋರುತ್ತದೆ. “ನಾನು ಬರೆಯುವಾಗ, ನಾನು ಹಿಂದೆ ಸರಿಯುತ್ತೇನೆ” ಎಂದು ಅನೆಡಾ ಬರೆಯುತ್ತಾರೆ ಮತ್ತು “ನಾನು ಸ್ವಯಂನ ಒಳನುಗ್ಗುವಿಕೆ ಇಲ್ಲದೆ ಸ್ವಯಂ-ನ್ನು ವ್ಯಕ್ತಪಡಿಸುವ ಸಾಮರ್ಥ್ಯವಿರುವ ಭಾಷೆಯ ಕನಸು ಕಾಣುತ್ತೇನೆ. ಒಂದು ನೋಟದ ಸಾಮರ್ಥ್ಯವಿರುವ, ಕೇಳುವ ಸಾಮರ್ಥ್ಯವಿರುವ ಆದರೆ ತನ್ನದೇ ಆದ ನೋಟ, ಕಿವಿ ಮತ್ತು ತನ್ನದೇ ಆದ ಪ್ರಭಾವಶಾಲಿ ಧ್ವನಿಯನ್ನು ಪಕ್ಕಕ್ಕೆ ಇರಿಸಿ, ತ್ಯಜಿಸಿದ ಸ್ವಯಂ-ನ್ನು ವ್ಯಕ್ತಪಡಿಸುವ ಭಾಷೆಯ ಕನಸನ್ನು ಕಾಣುತ್ತೇನೆ.”

ಈ ಹೊರಗಿಡುವಿಕೆ ಈಗಾಗಲೇ ಸಂಪೂರ್ಣವಾಗಿ ಮತ್ತು ವಾಕ್ಚಾತುರ್ಯದ ತೃಪ್ತಿಯಿಂದಾಗಿ ಅಸಾಧಾರಣವಾಗಿ ಮುಕ್ತವಾಗಿರುವ ಅವರ ಕಾವ್ಯಶೈಲಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಆಧ್ಯಾತ್ಮಿಕ ವ್ಯಾಯಾಮದಂತೆ ನಿಕಟವಾದ ಕಠಿಣತೆಯೊಂದಿಗೆ “ಅನಾಮಧೇಯ ಹಾಗೂ ನಿಖರವಾದ” ಭಾಷೆಯ ಅನ್ವೇಷಣೆಯಲ್ಲಿಯೂ ಇದು ಸ್ಪಷ್ಟವಾಗಿದೆ. ಇದು ಸೌಮ್ಯ ಮತ್ತು ಉತ್ಸಾಹಭರಿತವಾದ, ಜತೆಗೆ ಅತ್ಯಗತ್ಯವಾದ ಬರವಣಿಗೆಯೂ ಸಹ ಅಗಿರುವುದು. ಮತ್ತೊಬ್ಬ ಖ್ಯಾತ ಇಟ್ಯಾಲಿಯನ್ ಸಾಹಿತಿ ಫ್ರಾಂಕೊ ಲೋಯ್ ಬರೆದಂತೆ, “ಅನೆಡಾ-ರ ಕಾವ್ಯವು ಹುರುಪಿನಿಂದ, ಕರುಣೆಯಿಂದ ಕೂಡಿದೆ, ಆದರೆ ಅದೇ ಸಮಯದಲ್ಲಿ ಭೇದಿಸುವ ಮತ್ತು ಮನವೊಲಿಸುವ ಧ್ವನಿಯೂ ಆಗಿದೆ.”

ಅನೆಡಾ-ರ ಅಲಂಕಾರರಹಿತ ಪದಗಳ ಅಭಿವ್ಯಕ್ತಿಶೀಲ ನಿಖರತೆಯು ಆಯಾ ವಸ್ತುಗಳಿಗೆ ಅನುಗುಣವಾಗಿರುತ್ತದೆ. ಅವುಗಳ ನಿರಂತರ ಉಲ್ಲೇಖ ಬಿಂದುಗಳು ಬರಡು ವಾಸ್ತವ, ದೈನಂದಿನ ಜೀವನದ ಭೂದೃಶ್ಯಗಳು ಮತ್ತು ವಸ್ತುಗಳಾಗಿವೆ. ಏಕೆಂದರೆ ದೈನಂದಿನ ಜೀವನವು ಒಬ್ಬ ವ್ಯಕ್ತಿಯು ಅನುಭವಿಸಬಹುದಾದ ಏಕೈಕ ಆಯಾಮವಾಗಿದೆ, ಅದರಲ್ಲಿ ಆತ/ಆಕೆ ಅರ್ಥದ ಕುರುಹನ್ನು ಹುಡುಕಬಹುದು. ಅನೆಡಾ ಹೇಳುತ್ತಾರೆ: “ವಾಸ್ತವವು ಶಾಶ್ವತವಾದ ವಿಷಯವಲ್ಲ, ಅದಕ್ಕೆ ನಮ್ಮ ರಕ್ಷಣೆ ಬೇಕು. ಕಟ್ಟಡಗಳು ಕುಸಿಯುತ್ತವೆ, ಇಡೀ ಪ್ರಪಂಚಗಳು ಕಣ್ಮರೆಯಾಗುತ್ತವೆ. ಭಾಷೆ ಕಾಲಕಾಲಕ್ಕೆ ಆತಿಥ್ಯದ ಗುಂಡಿಯನ್ನು ಅಗೆಯಬಹುದು, ಅದರಲ್ಲಿ ಯಾವುದೂ ಅತಿರೇಕವಾಗಿರುವುದಿಲ್ಲ, ಅದು ವಸ್ತುಗಳು ಮತ್ತು ಜನರು ಅಕ್ಕಪಕ್ಕದಲ್ಲಿ ಉಸಿರಾಡಲು, ಬೆಳಕನ್ನು ಆನಂದಿಸಲು ಮತ್ತು ಬದುಕಲು ಬೇಲಿಯಿಂದ ಸುತ್ತುವರಿದ ಪರಿಧಿಯನ್ನು ಹಾಕಬಹುದು.” ರೊಬೆರ್ತೊ ಬರೊಂಟಿ ಮಾರ್ಚಿಯೊ ಹೇಳುತ್ತಾರೆ, “ನೋವಿನಿಂದ, ಜಗತ್ತಿನ ಹಿಂಸೆಯಿಂದ, ಪರಿತ್ಯಾಗದಿಂದ ಮತ್ತು ನಮ್ಮ ಅನಿಶ್ಚಿತ ವಾಸ್ತವ ಮತ್ತು ಮಾತನ್ನು ಕರಗಿಸಲು ನಿರಂತರವಾಗಿ ಬೆದರಿಕೆ ಹಾಕುವ ಮೌನದ ಕಪಟ ಅಪಾಯದಿಂದ ರಕ್ಷಣೆಯಾಗಿ ಕಾವ್ಯ ಬೇಕು.”

“ಬರವಣಿಗೆಯನ್ನು ನಾನು ಹೀಗೆ ಅರ್ಥಮಾಡಿಕೊಂಡಿರುವೆ: ನಾನು ಬರೆಯುವೆ ಕಣ್ಮರೆಯಾಗಲು, ಇದರಿಂದ ಜೀವನವು ನನಗೆ ಬಹಿರಂಗವಾಗುತ್ತೆ, ನಾನಿಲ್ಲದೆನೇ, ಅಂತ್ಯದಲ್ಲಿ ನನ್ನ ಮುಖವು ಕಾಗದದ ಬಿಳಿ ಬಣ್ಣಕ್ಕಿಂತ ಹೆಚ್ಚು ಮಸುಕಾಗಿರುತ್ತೆ, ಪ್ರತಿಬಿಂಬವಿಲ್ಲದೆನೇ. ತನ್ನನ್ನು ತಾನು ಮರೆಯಬಹುದಾದಂತಹ ಜಗತ್ತು. ಕನ್ನಡಿಯಾಗಲ್ಲ, ಒಂದು ಕಲ್ಲಾಗಿ.”

ನಾನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ಆ್ಯಂಟೊನೆಲಾ ಅನೆಡಾ-ರ ಏಳು ಕವನಗಳಲ್ಲಿ ನಾಲ್ಕನೆಯ ಕವನವನ್ನು ವಾಲಿಸ್ ವಾಯಿಲ್ಡ್-ಮೆನೊಜ಼್ಇ (Wallis Wilde-Menozzi) ಹಾಗೂ ಉಳಿದ ಆರು ಕವನಗಳನ್ನು ಜೇಯ್ಮೀ ಮೆಕ್‌ಕೆಂಡ್ರಿಕ್ (Jamie McKendrick) ಅವರು ಮೂಲ ಇಟ್ಯಾಲಿಯನ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿರುವರು.


ಈ ಭಾಷೆಗೆ ಮುಗ್ಧತೆಯೆಂಬುದೇ ಇಲ್ಲ
ಮೂಲ: This language has no innocence
From Notti di pace occidentale (Nights of Western Peace, 1999)

ಈ ಭಾಷೆಗೆ ಮುಗ್ಧತೆಯೆಂಬುದೇ ಇಲ್ಲ
– ಮಾತುಗಳು ಒಡೆದುಹೋಗುತ್ತಿರುವ ಪರಿಯನ್ನು ಒಮ್ಮೆ ಆಲಿಸಿ,
ಇಲ್ಲೂ ಯುದ್ಧವೊಂದು ನಡೆಯುತ್ತಿದೆಯೇನೋ ಎಂಬಂತೆ,
ಒಂದು ಬೇರೆಯೇ ಬಗೆಯ ಯುದ್ಧ, ಆದರೂ ಯುದ್ಧವೇ –
ಈ ಕ್ಷಾಮದ ಕಾಲದಲ್ಲಿ.

ಎಂದೇ ನಾನು ತುಸು ಹಿಂಜರಿಕೆಯಿಂದ ಬರೆಯುತ್ತೇನೆ
ವಾಕ್ಯಾಂಶಗಳ ಕೆಲವು ಒಣಗಿದ ಉಳಿಕೆಗಳನ್ನು ಬಳಸಿ.
ಅವುಗಳನ್ನು ಸಪ್ಪೆಭಾಷೆಯೊಂದರ ಪೆಟ್ಟಿಗೆಯೊಳಗೆ
ತೂರಿಸಿ ಜೋಡಿಸುವೆನು, ಅಲ್ಲಿಂದ ಕೂಗಿಕರೆಯುವೆನು,
ಘಂಟೆಗಳ ಬಾರಿಸುವ ಕತ್ತಲೆ ಕಾಣುವವರೆಗಿರುವ
ಆಳದೊಳಗೆ, ಅಲ್ಲಿ ಕೆಳಗೆ.
—–
ರಾತ್ರಿಯಲ್ಲೊಂದು ಕಿಟಕಿ ಕಾಣಿಸುತ್ತಿದೆ,
ಅದರೊಳಗೆ ಎರಡು ಕತ್ತಲ ಆಕಾರಗಳು ನಿದ್ರಿಸುತ್ತಿವೆ,
ಹಕ್ಕಿಗಳ ಹಾಗೆ ಕಂದುಬಣ್ಣದ ಆಕಾರಗಳು,
ಆ ದೇಹಗಳು ಆಕಾಶದಿಂದ ಹಿಂದೆ ಸರಿಯುತ್ತಿವೆ.

ನಾನು ತಾಳ್ಮೆಯಿಂದ ಬರೆಯುವೆ
ನನಗೆ ನಂಬಿಕೆಯಿಲ್ಲದ ಅನಂತವನ್ನುದ್ದೇಶಿಸಿ.
ನಿಧಾನತೆ ನನಗೆ ಬರುತ್ತದೆ ನಿಶ್ಶಬ್ದದಿಂದ
ಹಾಗೂ ಒಂದು ರೀತಿಯ ಅಗೋಚರ ಸ್ವಾತಂತ್ರ್ಯದಿಂದ –
ಇದು ಭೂಖಂಡಕ್ಕೆ ತಿಳಿದಿಲ್ಲ –
ದ್ವೀಪದಂತಹ ಒಂದು ಆಲೋಚನೆ
ನನ್ನನ್ನು ಪ್ರೇರಿಸುತ್ತದೆ
ಕಾಲವನ್ನು ಹಿಡಿದಿಡಲು,
ಅದಕ್ಕೆ ತೆರವು ಮಾಡಿಕೊಡಲು,
ಆ ಭಾಷೆಗೊಂದು ಮರಳುಗಾಡನ್ನು ಸೃಷ್ಟಿಸಲು.

ಶಬ್ದ ಮರದ ಹಾಗೆ ಸೀಳುತ್ತದೆ
ಒಂದು ಪಕ್ಕ ಬಿರುಕುಬಿಟ್ಟ ಮರದ ತುಂಡಿನಂತೆ
ಭಾಗಶಃ ಬೆಂಕಿಯ ಪರಿಣಾಮದಿಂದ
ಭಾಗಶಃ ನಿರ್ಲಕ್ಷ್ಯದಿಂದ.


ರಾತ್ರಿಯ ನಿಶ್ಶಬ್ದ …
ಮೂಲ: Night Silence …
From Il catalogo della gioia (Catalogue of Joy, 2003)

ರಾತ್ರಿಯ ನಿಶ್ಶಬ್ದ.
ಬೇಸಿಗೆಯ ರಾತ್ರಿಯಲ್ಲಿ ನಿನಗೆ ಎಚ್ಚರವಾದಾಗ
ತೆರೆದುಬಿದ್ದಿರುವ ಬಾಗಿಲಿನಾಚೆಯ ಗಾಳಿರಹಿತ ಹವೆಯಲ್ಲಿ
ಮರಗಳು ನೇತಾಡುತ್ತಿರುವಾಗ.
ಕೋಣೆಗಳು ನಿಧಾನವಾಗಿ ಉಸಿರಾಡುತ್ತಿರುವಾಗ
ಕಡಲು ಜೆರೇನಿಯಮ್ ಹೂಗಳ ಜತೆ ಬೆರೆಯುತ್ತಿರುವಾಗ.
ಕೆಂಪು ಹಾಗೂ ಕೊಬಾಲ್ಟ್ ನೀಲಿ,
ನಂತರ ಮತ್ತೊಮ್ಮೆ ಕೆಂಪು
ಬಂದರಿನ ಅಪಾಯ ಸೂಚಕ ದೀಪಗಳಿಂದ,
ಮಿನುಗುತ್ತಾ ಕಾಯುತ್ತಿರುವ ದೋಣಿಗಳಿಂದ.

ಬೆಳಗ್ಗಿನ ನಿಶ್ಶಬ್ದ.
ನೆಲಗಟ್ಟಿನ ಕಲ್ಲುಗಳ ಮೇಲೆ ಹೆಜ್ಜೆಸದ್ದುಗಳ
ಅನುರಣನ, ಧ್ವನಿಗಳಲ್ಲಿ.
ಅದು ಅಸ್ಪರ್ಶಿತ ಅಂಗಡಿಗಳ ಶಟರುಗಳನ್ನು ಏರಿಸುವ ಸದ್ದು –
ಶಾಂತಿಯ ಸಂಕೇತ:
ದೇಗುಲದ ದಿನದ ಕಹಳೆಯ ತಿಳಿಯಾದ ಮೊಳಗಿನಂತೆ.

ನಿಶ್ಶಬ್ದ ಸೂರ್ಯನ ಬೆಳಕು ಕಂಬಳಿಗಳ ಮೇಲೆ,
ನೆಲದ ಮೇಲೆ, ಚಹಾ ಕಪ್ಪುಗಳ ಹಾಗೂ
ಟ್ರೇಯ ಎನಾಮಲ್ಲಿನ ಮೇಲೆ.
ಹೌದು.
ಇಲ್ಲಿಯವರೆಗೆ ಅನಾರೋಗ್ಯವೇನೂ ತಟ್ಟದ,
ಇಲ್ಲಿಯವರೆಗೆ ಗುಲಾಮಗಿರಿಗೆ ಒಳಗಾಗದ
ಪ್ರತಿಯೊಂದು ಹೊಸ ಉಗಮಕ್ಕೆ
ಎಷ್ಟು ಅನುಗ್ರಹವಿದ್ದರೂ ಸಾಲದು.


ಪ್ರೇಮ ಮತ್ತು ಕಾಗೆ
ಮೂಲ: Love and the Crow
From Dal balcone del corpo (From the Body’s Balcony, 2007)

ಮೆಟ್ಟಿಲು ಸಾಲಿನ ಒಂದು ಮೆಟ್ಟಲಿನಿಂದ
ಇಳಿಯುತ್ತಿರುವ ಕಾಗೆಯೊಂದನ್ನು ಕಂಡೆ:
ಹೊಳೆಯುವ ಕಪ್ಪುಬಣ್ಣದ ದರ್ಶನವಾಗಿತ್ತು ಅದು,
ಬಿಳಿ ಕಲ್ಲಿನ ಮೇಲೆ ಶಾಯಿಯ
ಉದ್ದನೆಯ ಗರಿಗೆರೆಯೆಳೆದಂತಿತ್ತು.
ಆ ಪೂರ್ಣಾವರೋಹಣ – ನನ್ನ ಮತ್ತು ಆ ಕಾಗೆಯ –
ಬರ್ಚ್ ಮರಗಳು ಹಾಗೂ ಜೇನಿನ ಸುಗಂಧಗಳ ನೆನಪಿಗೆ ತಂದಿತು.
ನಮ್ಮ ದೇಹಗಳು – ಆ ಕಾಗೆಯ ಮತ್ತು ನನ್ನ –
ಕೃಶವಾಗಿದ್ದವು, ವಯಸ್ಸಾಗಿದ್ದವು.
ಅವನು ಚಲಿಸುವುದನ್ನು ನೋಡುತ್ತಾ ನಾನು ಗಮನಿಸಿದೆ
ಅವನ ಕರಿವರ್ಣದಲ್ಲಿ ಎಷ್ಟೊಂದು ಕಲೆಗಳಿದ್ದವು,
ಅವನ ನಡಾವಳಿ ಎಷ್ಟೊಂದು ಹಿಂಜರಿಕೆಯಿಂದ ತುಂಬಿದ್ದವು.
ನನ್ನ ಕಾಲುಗಳಲ್ಲಿ ಕೂಡ, ಇಳಿವಯಸ್ಸಿನಿಂದ,
ಬಿಸಿಲಿನಿಂದ, ಅಲ್ಲಲ್ಲಿ ಕಲೆಗಳಿದ್ದವು, ಸನ್ನೆಗಳಾಗಿದ್ದವು ಅವು,
ಆ ಕಾಗೆಗೆ ಅವನ ಕುರುಡು ಕುಪ್ಪಳಿಕೆಯಿದ್ದಂತೆ.
ಹೀಗಿದ್ದಾಗ್ಯೂ ನಾವಿಬ್ಬರೂ ಅನುರಾಗಿತರಾಗಿದ್ದೆವು:
ತನ್ನ ಉಳಿದ ಕೆಲವು ಹೊಳೆಯುವ ರೆಕ್ಕೆಗಳ ಜತೆ ಅವನು,
ನನ್ನ ಅಳಿದುಳಿದ ಲಾವಣ್ಯದ ಜತೆ ನಾನು:
ನನ್ನ ಕಾಲುಗಳು ನನ್ನ ಪಾದಗಳತ್ತ
ಸಪೂರವಾಗುತ್ತಾ ಹೋಗುವ ಪರಿ,
ನನ್ನ ಪಾದಗಳು ಸ್ವಲ್ಪ ಸೆಟೆದಿವೆ,
ಬಡಕಲಾಗಿವೆ (ಅವನ ಪಾದಗಳ ಹಾಗೆ)
ಕಡುಗೆಂಪು ನಖಗಳೊಂದಿಗೆ.
ಆಮೇಲೆ ನಾವು ಹಾರಿಹೋದೆವು,
ಅವನು ಆಕಾಶದತ್ತ,
ನಾನು ನನಗಾಗಿ ಕಾಯುತ್ತಿದ ಭೂಮಿಯತ್ತ,
ಅಲ್ಲಿ ಕೆಳಗೆ, ಮೆಟ್ಟಲುಗಳ ಅಡಿಯಲ್ಲಿ:
ಈಗಲೂ ನಿರ್ವರ್ಣವಾಗಿಯೇ ಇರುವ ಭೂಮಿಯ ಒಂದು ತುಂಡು,
ಆದರೆ ಅಲ್ಲಿ ಕಲ್ಲುಗಳಿವೆ, ಪಾಚಿ ಹರಡಿದೆ,
ಇನ್ನೂ ಯಾರ ಕಣ್ಣಿಗೂ ಬೀಳದ ಒಂದು ಭೂಖಂಡವಿದು.

ಇದೊಂದು ಅನಿರ್ಧಾರದಲ್ಲಿರುವ ಕೃಪೆ.

ಆಕಾಶ ಕಾಗೆಯನ್ನು ಮುಚ್ಚಿಕೊಳ್ಳುತ್ತೆ.
ನನ್ನ ಹೆಜ್ಜೆಗಳಡಿಯಲ್ಲಿ ಕಲ್ಲುಗಳು ಕಿರುಗುಟ್ಟುತ್ತವೆ,
ಜಲ್ಲಿಕಲ್ಲುಗಳ ಮೇಳದ ಹಾಗೆ.
ನನ್ನ ಹಲವು ಅಂಗಗಳನ್ನು ನುಂಗುತ್ತದೆ.
ನನ್ನ ನಖಗಳನ್ನು ತೋಯಿಸುತ್ತದೆ.


ನಿಸರ್ಗದೃಶ್ಯ
ಮೂಲ: Landscape
From Dal balcone del corpo (From the Body’s Balcony, 2007)

ಹಿಮದಿಂದ ಭಾರವಾಗಿರುವ,
ಕಾಗೆಯೊಂದರ ಹಿಡಿತದಿಂದ ಬಾಗಿದ
ರೆಂಬೆಯ ಹತ್ತಿರ ಬಂದೆ ನಾನು.
ನಾನೇ ಆಗಿಬಿಟ್ಟೆ ಆ ಬೂದು-ಕರಿ ಬಣ್ಣದ ಓಲಾಡುವ ಕಾಗೆ.
ಅಸಹಜ ಹಸಿರುಬಣ್ಣವೊಂದು
(ಹಿಮ ಮತ್ತು ಸಾಲ್ವಿಯಾ ಬಣ್ಣ ಮಿಶ್ರಿತ)
ಮೋಡಗಳ ಮೇಲೆ ಗಾಯದ ಛಾಯೆಯಾಗಿ ಹರಡಿತು.
ನನ್ನನೇ ನಾನು ಕಂಡೆ ಆ ಪರ್ಗಟರಿಯ ಶುದ್ದಿಲೋಕದಲ್ಲಿ.
ಎಲ್ಲವೂ ಒಂದು ನಿಸರ್ಗದೃಶ್ಯವಾಗಿತ್ತು.
ಕೋಪ: ಒಂದು ಮೋಡ.
ರಾಶಿ ರಾಶಿ ಅನಿಶ್ಚಿತತೆ: ಒಂದು ಬೆಟ್ಟ.
ವೈಮನಸ್ಯ: ಕಂಪಿಸುವ ನೆರಳುಗಳ ಮರಗಳು.
“ಗಮನವಿಟ್ಟು ಕೇಳು,” ನನ್ನ ಪಕ್ಕದಲ್ಲಿದ್ದ ಪೊದೆಯ ಛಾಯೆ ಹೇಳಿತು,
“ಮಂಜು ನಿನ್ನ ನೋವನ್ನು ನುಂಗಿಬಿಡುತ್ತದೆ.
ಈ ಇಹಲೋಕದ ಜೀವನದಲ್ಲಿ ಕಲಿಯಬೇಕು ನೀನು,
ಕಲಿತರೆ ನೀನು ಸ್ವರ್ಗದ ಬಲುಹತ್ತಿರ ತಲುಪುವೆ.”
ಹೌದು, ಎಂದು ನಾನುತ್ತರಿಸಿದೆ,
ಬೆಳಕು ಬೆಳಗ್ಗಿನ ಉರಿಯನ್ನು ಸ್ವಲ್ಪ ತಂಪಾಗಿಸಿತು
ನನ್ನ ದೇಹವನ್ನು ಕೋಪದಿಂದ ಬೇರ್ಪಡಿಸಿತು
ನೆರಳುಗಳ ಬಾಯಿ ಮುಚ್ಚಿಸಿತು.
ಮತ್ತೆ, ಒಂದು ತೀಕ್ಷ್ಣವಾದ ನೀಲಿ ಬಣ್ಣ – ಇದೇ ಸ್ವರ್ಗವೇನು?
ನಿಸರ್ಗದೃಶ್ಯದ ಬದಲಾಗಿ ಹರಡಿತು, ಆ ಮೊದಲ ಮಾನವ.


ವಯಸ್ಸಾಗುತ್ತಿದೆ ನನಗೆ
ಮೂಲ: If I have to write poems now I’m growing old
From Salva con nome (Save As, 2012)

ವಯಸ್ಸಾಗುತ್ತಿದೆ ನನಗೆ,
ಈಗ ನಾನು ಕವನಗಳನ್ನು ಬರೆಯುವುದಾದರೆ
ಅವು ಹರಿದು ಹೋಗುವುದನ್ನು,
ಇತರ ದೇಹಗಳೊಳಗೆ ಕಳೆದು ಹೋಗುವುದನ್ನು
ನೋಡಲು ಬಯಸುವೆ,
ಅವು ಜೀವಂತವಾಗಿ ಜಿಗಿಯುವುದನ್ನು,
ಹತ್ತಿರವಿರುವ ವಸ್ತುಗಳ ಮೇಲೆ ಬೆಳಗುವುದನ್ನು
ನೋಡಲು ಬಯಸುವೆ,
ನನ್ನ ಜೊತೆಗೆ ಇರುತ್ತವೆ ಅವು
ಬೆಳಕಿನಲ್ಲಿ ಸುಲಿದ ಈರುಳ್ಳಿಗಳ ಹಾಗೆ,
ನಾನು ಸೂಪ್ ಕುದಿಸುವಾಗ
ಕನ್ನಡಕದ ಮೇಲೆ ಹಬೆಕವಿಯುತ್ತೆ,
ಕವಿತೆಯ ಸಾಲೊಂದನ್ನು ಕಾಗದದ ಮೇಲೆ ಬರೆಯುವೆ,
ಕೆಲವೊಮ್ಮೆ ನನ್ನನ್ನೇ ಕೊಯ್ದುಕೊಳ್ಳುವೆ
ಪೆನ್ನನ್ನು ಚಾಕುವೆಂದು ತಪ್ಪಾಗಿ ತಿಳಿದು.


ಕೇಳಿಸುತ್ತಿಲ್ಲ ನನಗೆ ನಿನ್ನ ಮಾತುಗಳು
ಮೂಲ: I can’t hear you
From Salva con nome (Save As, 2012)

… ವರುಷಗಳು, ಎಷ್ಟೊಂದು ವರುಷಗಳು.
ಅವುಗಳ ಕೆತ್ತಿದ ಹೆಸರುಗಳ ಮೇಲೆ ಮಳೆಹನಿ ತನ್ನ ನೇಗಿಲು ಹೊಡೆಯುತ್ತಿದೆ.
– ಥಾಮಸ್ ಹಾರ್ಡಿ

ಕೇಳಿಸುತ್ತಿಲ್ಲ ನನಗೆ ನಿನ್ನ ಮಾತುಗಳು –
ಕಬ್ಬಿಣ ಹೇರಿದ ಲಾರಿ ಉರುಳಿಕೊಂಡು ಹೋಗುತ್ತಿದೆ,
ಕಬ್ಬಿಣದ ಸಲಾಕೆಗಳು ಎಲ್ಲ ಶಬ್ದಗಳನ್ನು ಅಡಗಿಸಿವೆ,
ಎರಕಶಾಲೆಯ ಆರ್ಭಟ, ಕಬ್ಬಿಣದ ಖಣಖಣ
ಎಲ್ಲ ಹೆಸರುಗಳನ್ನು ಅಳಿಸಿವೆ,
ಹಿಂಗಾಲ, ಮುಂಗಾಲವಿಲ್ಲದ ಮಳೆಯಡಿಯಲ್ಲಿ
ಹೊಳೆಯುತ್ತಿದೆ ಕಪ್ಪು ಕಬ್ಬಿಣ.
ಆಸೆಯೆನ್ನುವುದು ಬೆಳಕಿನ ಅರಮನೆಯ
ಗಾಜಿನೊಳಗೆ ಇಣುಕಿ ನೋಡುತ್ತಿರುವ
ಹಸಿದ ಜೀವವಾಗಿರುವುದಿಲ್ಲ ಇನ್ನೆಂದೂ.


ಚೇತನವೆಂಬುದು – ಎಕ್ಹಾರ್ಟ್-ನ ಪ್ರಕಾರ
ಮೂಲ: The spirit – according to Eckhart
From Salva con nome (Save As, 2012)

ಚೇತನವೆಂಬುದು – ಎಕ್ಹಾರ್ಟ್-ನ ಪ್ರಕಾರ –
ಮಂದ ಗಾಳಿಯ ಅರಿವೇ ಇಲ್ಲದ ಒಂದು ಸೀಸದ ಪರ್ವತ.
ಆ ಗಾಳಿ ಇಷ್ಟ ನನಗೆ. ಆ ಪರ್ವತವಲ್ಲ ನಾನು.
ಸಂಜೆಯಾಗುತ್ತಿದ್ದ ಹಾಗೆ ಇದ್ದಕ್ಕಿದ್ದಂತೆ ಚಿಂತನ ತಿಳಿಯಾಗುತ್ತೆ.
ಸೀಸವಲ್ಲ, ಅದು ನದಿಯ ಮೇಲಿನ ಹವಾ.
ಪಾರದರ್ಶಕ ಕಲ್ಲುಗಳು,
ತನ್ನ ಗತಿಯನ್ನು ನಿಧಾನಿಸುತ್ತಾ ಬರುವ,
ಎಲ್ಲವನ್ನು ವಾಸಿಮಾಡುವ ಬೆಳಕು.
ಎಲ್ಲಿಂದಲೋ ಬರುವ, ಆದರೆ ಅಸಲಾಗಿರುವ, ನೆಮ್ಮದಿ.
ಅಲ್ಲೆಲ್ಲೋ ಒಂದು ಕಲಕಾಟ, ಎಲೆಗಳ ಮರ್ಮರ,
ಹೌದು, ಅಂತೂ ಕೊನೆಗೂ –
ನೆನಪಿನ ತೊಯ್ಯಿಸುವ ಮೇಘಸ್ಫೋಟ
ಎಲ್ಲ ದಾರಿಗಳನ್ನು ಮುಚ್ಚಿಸುತ್ತದೆ,
ಮುಖಗಳನ್ನು, ಅಂಗಸನ್ನೆಗಳನ್ನು ಬೆಚ್ಚಳಿಸುತ್ತದೆ.

About The Author

ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ