ಅರವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಮೊದಲು ಐದು ಜಾವಾ ಮೋಟಾರ್ ಸೈಕಲ್ ಇತ್ತು. ನಂತರ ನಿಧಾನಕ್ಕೆ tvs ಅದರ ಅಣ್ಣ ತಮ್ಮ ಬಂದವು. ಲಾಂಬ್ರೆಟ್ಟಾ ಗಾಡಿ ವಿದೇಶದಲ್ಲಿ ಹೆಂಗಸರು ಓಡಿಸುವ ಗಾಡಿ ಅಂತ ಕೆಲವರು ಲೇವಡಿ ಮಾಡುತ್ತಿದ್ದರು. ಎನ್ ಫೀಲ್ಡ್ ಸುಮಾರು ಇದೇ ಸಮಯ ಪ್ರವೇಶ. ಎಂಬತ್ತರ ದಶಕದ ನಡುವಿನಲ್ಲಿ ಚೇತಕ್ ಗಾಡಿ ಹೆಸರು ಓಡುತ್ತಿತ್ತು. ಅದೂ ಫಾರಿನ್ ಎಕ್ಸ್ಚೇಂಜ್ ಇದ್ದರೆ ಗಾಡಿ ಬೇಗ ಸಿಗುತ್ತೆ ಅಂತ. ಬೇಗ ಅಂದರೆ ಅದಕ್ಕೂ ಮಿನಿಮಮ್ ಮೂರು ವರ್ಷ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿಮೂರನೆಯ ಕಂತು ನಿಮ್ಮ ಓದಿಗೆ

ಕಳೆದ ಸಂಚಿಕೆಯಲ್ಲಿ ನಮ್ಮ ಎಂಟ್ರಿ ನಂತರದ ಈಟ್ ಔಟ್ಸ್ ಬಗ್ಗೆ ಹೇಳಿದೆ. ಕೇಸರಿ ಭಾತ್ ಅದೆಷ್ಟು ಟನ್ ತಿಂದಿದೀವೋ ಅಂದೆ ಮತ್ತು ಅದರ ಇತಿಹಾಸ ನೆನೆಸಿಕೊಂಡು ಬಾಯಲ್ಲಿ ಸಮುದ್ರ ಉಕ್ಕಿಸಿಕೊಂಡೆ. ಇಷ್ಟು ವರ್ಷಗಳ ನಂತರವೂ ಎಲ್ಲವೂ ಮರೆತಿರುವಾಗ ಅದು ಹೇಗೆ ಈ ವಿಷಯ ನಿನ್ನ ತಲೆಯಲ್ಲಿ ಇನ್ನೂ ಉಳಿದುಕೊಂಡಿದೆ ಎಂದು ನನ್ನ ಕವಿ ಮಿತ್ರ ಒಂದು(ಕದ್ದ )ಹಾಡು ಹಾಡಿದ.

ಎಲ್ಲಾ ಮರೆತಿರುವಾಗ
ನಿನ್ನ ನೆನಪು ಅದೆಲ್ಲೋ
ಮೆದುಳಿನ ಪಾತಾಳದಲ್ಲಿ
ಅಡಗಿ ಕುಳಿತು ಘಾಸಿ
ಗೊಳಿಸಿತೀ ಜೀವವ ….. ಅಂತೇನೋ ಉದ್ದ ಇತ್ತು.
ಹೇಳಿ ಕೇಳಿ ನಾನು ಕವಿ ಅಲ್ಲ
ಅದರಿಂದ ಅವನಿಗೆ ಗದ್ಯದಲ್ಲಿ ಉತ್ತರಿಸಿದೆ. ತಿಂದ ತಿಂಡಿಯ ಲೆಕ್ಕ ಕೇಳಿ ಯಮ ಧರ್ಮರಾಜ ಗಹಗಹಿಸಿ ನಕ್ಕ ಅಂತ. ಇದು ನಮ್ಮ ಕಾಲದ ಕವಿಗಳಿಗೆ ನನ್ಮಗ ಕಾಪೀ ಹೊಡೆದ ಅಂತ ಅನ್ಸುತ್ತೆ, ನನಗ್ಗೊತ್ತು. ಒರಿಜಿನಲ್ ಕವಿತೆ ಹೀಗೇನೋ ಏನೋ ಇದೆ.
ನಾ ಸುಟ್ಟ ಸಿಗರೇಟಿನ ಲೆಕ್ಕ ಕೇಳಿ ಯಮ ಬಿದ್ದು ಬಿದ್ದು ನಕ್ಕ….

ಇದು ಹಾಗಿರಲಿ ಬಿಡಿ. ಹೋಟೆಲ್ ವಿಷಯ ಬಂತು, ಐಸ್‌ಕ್ರೀಮ್ ಸುದ್ದಿ ಬಂತು. ಐಸ್ ಕ್ರೀಮ್ ಅಂಗಡಿ ಹೆಸರು ಮರೆತಿದ್ದೀನಿ ಅಂತ ಹೇಳಿದ್ದೆ ಅಲ್ಲವೇ? ಮೊನ್ನೆ ಬೆಳಗಿನ ಜಾವ ಧಡಕ್ಕನೆ ಎಚ್ಚರ ಆಯಿತು ಮತ್ತು ಅದೇನು ಆಶ್ಚರ್ಯ ಅಂತೀರಿ. ಆ ಐಸ್ ಕ್ರೀಮ್ ಅಂಗಡಿ ಹೆಸರು ನೆನಪಾಯಿತು. ಲೇಕ್ ವ್ಯೂ ಅಂತ ಅದರ ಹೆಸರು! ಮರೆತ ಎಷ್ಟೋ ಹೆಸರು, ಪ್ರಸಂಗಗಳು ಹೀಗೆ ನಿದ್ರೆಯಿಂದ ಒದ್ದು ಎಬ್ಬಿಸಿ ಮೆದುಳಿಗೆ ನುಗ್ಗುವುದು ನನಗೆ ಅಭ್ಯಾಸ ಆಗಿದೆ. ಹಿಂದೊಮ್ಮೆ ಒಬ್ಬರು ಗೆಳೆಯರ ಹೆಸರು ಮರೆತೆ. ಆತ ಕ್ರಿಶ್ಚಿಯನ್. ಕ್ರಿಶ್ಚಿಯನ್ ಹೆಸರಿಗೆ ಲಿಂಕ್ ಇರಬಹುದಾದ ಸರ್ವಸ್ವವನ್ನೂ ನೆನೆದರೂ ಅವರ ಹೆಸರು ನೆನಪು ಆಗಲಿಲ್ಲ. ರಾತ್ರಿ ಮಲಗಿದಾಗ ಧಗ್ ಎಂದು ಅವರ ಹೆಸರು ನೆನಪಿಗೆ ಒದ್ದುಕೊಂಡು ಬಂತು. ಅವರ ಹೆಸರು ಏಸು ದಾಸ್ ಅಂತ. ನಾನು ಪಿಲಿಪ್ಸ್, ಮೈಕೆಲ್, ಸಿಂಸನ್…… ಇನ್ನೂ ಮುಂತಾದ ಹೆಸರಿನ ಹಿಂದೆ ಓಡಿ ತಲೆ ಕಲಾಸಿ ಪಾಳ್ಯ ಮಾಡಿಕೊಂಡಿದ್ದೆ. ಮಿಕ್ಕವರಿಗೆ ಹೀಗೆ ಆಗುತ್ತೋ ಇಲ್ಲವೋ ಕೇಳಿಲ್ಲ. ಕೇಳಿದರೆ ಇವನು ಮೊದಲೇ ಕ್ರಾಕ್, ಈಗ ಕ್ರಾಕು ಹೆಚ್ಚಿದೆ ಅಂತ ಅಂದುಕೊಂಡರೆ ಅನ್ನುವ ದಿಗಿಲು..! ಈಗ ಯಾರ ಹೆಸರು ಮರೆತರೂ ಚಿಂತೆ ಮಾಡೋಲ್ಲ, ಮಲಗಿದ್ದಾಗ ನನ್ನ ಸಬ್ ಕಾನ್ಷಿಯಸ್ ಮೈಂಡು ಹೆಲ್ಪಿಸುತ್ತೆ ಎನ್ನುವ ಖಾತ್ರಿ….!

ಐಸ್ ಕ್ರೀಮ್ ಪ್ರಸಂಗ ಬಂದಾಗ ಅದರಲ್ಲಿ ಒಬ್ಬ ಗೆಳೆಯನ ಹೆಸರು (ಪ್ರಸನ್ನ, ಇನ್ನೂ ಸುಮಾರು ಹೇಳಬೇಕು ಇವರ ಬಗ್ಗೆ) ಹೇಳಿದ್ದೆ. ಹಾಗೆ ನೋಡಿದರೆ ಈಗ ನಾನು ಹೀಗೆ ವಕ್ರ ವಕ್ರವಾಗಿ ಬಿಹೇವ್ ಮಾಡ್ತೀನೋ ಅವೆಲ್ಲದರ ಹಿಂದೆ ನನ್ನ ಅಸಂಖ್ಯಾತ ಗೆಳೆಯರು, ನಂಟರು ಇಷ್ಟರು ಇದ್ದಾರೆ. ಪ್ರಸಂಗ ಬರಲಿ, ಅವರೂ ಪ್ರತ್ಯಕ್ಷ ಆಗೇ ಆಗ್ತಾರೆ. ನನ್ನನ್ನು ಇವರೆಲ್ಲರೂ ಪ್ರೀತಿ ವಿಶ್ವಾಸದಿಂದ ಕಂಡಿದ್ದಾರೆ ಮತ್ತು ಎಷ್ಟೇ ತೊಂದರೆ ಕೊಟ್ಟರೂ ಪ್ರೀತಿ ವಿಶ್ವಾಸ ಹೆಚ್ಚಿಸಿದ್ದಾರೆ.

ಸರಿಸುಮಾರು ಬೆಂಗಳೂರಿನ ಎಲ್ಲಾ ಪ್ರದೇಶದಲ್ಲೂ ಅರವತ್ತು ಎಪ್ಪತ್ತರ ದಶಕದಲ್ಲಿ ಬೋಂಡಾ ಅಂಗಡಿಗಳು ಇದ್ದವು. ಕೆಲವು ತಮ್ಮ ವ್ಯವಹಾರ ಮುಂದುವರೆಸಿದರೆ ಮತ್ತೆ ಕೆಲವು ಅದಕ್ಕೆ ಸಂಬಂಧಪಟ್ಟ ಮಿಕ್ಕ ವೃತ್ತಿ ಹಿಡಿದವು ಮತ್ತು ಅಗಾಧವಾಗಿ ಬೆಳೆದವು. ಈಗಲೂ ಅಂತಹ ಅಂಗಡಿಗಳು ಹರಡಿಕೊಂಡು ಒಳ್ಳೆಯ ಬಿಸಿನೆಸ್ ಮಾಡುತ್ತಿವೆ.

ನಾನ್ ವೆಜ್ ತಳ್ಳುಗಾಡಿಯಲ್ಲಿ ವ್ಯಾಪಾರ ಬೇಗ, ಅದರ ತೇಜಿ ಕಂಡುಕೊಳ್ಳಲು ಆಗಲಿಲ್ಲ. ಅದೇ ರೀತಿ ಸೀ ಫುಡ್‌ಗಳು ವ್ಯಾಪಕವಾಗಿ ಈಗಲೂ ರಸ್ತೆಗೆ ಬಂದಿಲ್ಲ. ಎಲ್ಲೋ ಒಂದು ಕಡೆ ಮೀನು ಮಾಡುತ್ತಿರುವುದು ನೋಡಿದೆ. ಕಬ್ಬನ್ ಪಾರ್ಕ್‌ನಲ್ಲಿ ಒಂದು ಮೀನಿನ ಹೋಟೆಲ್ ಇದೆ. ಅಲ್ಲಿಗೆ ಈಗ ಒಂದು ಆರು ತಿಂಗಳ ಹಿಂದೆ ನನ್ನ ಸ್ನೇಹಿತರು ಸೂರಿ ಶ್ರೀಧರ ಜತೆ ಹೋಗಿದ್ದೆ. ಆಗ ತಾನೇ ಊಟ ಆಗಿತ್ತು. ಏನೂ ಬೇಡ ಅಂದೆ. ಎಲ್ಲರೂ ಹಾಗೇ ವಾಪಸ್ ಬಂದೆವು!

ಬಹುಶಃ ನನಗೆ ಇದರ ಅಂದರೆ ಸೀ ಫುಡ್ ಅಭ್ಯಾಸ ಇಲ್ಲವಾದ್ದರಿಂದ ನನ್ನ ಗಮನಕ್ಕೆ ಅವು ರಸ್ತೆಯಲ್ಲಿ ಬೋಂಡಾ ಅಂಗಡಿಯ ರೀತಿಯಲ್ಲಿ ವ್ಯಾಪಾರಕ್ಕೆ ಬಂದಿರುವ ಸಾಧ್ಯತೆ ಕಡಿಮೆ ಇರಬಹುದೇನೋ….! ತಿಳಿಯದು. ಆಸಕ್ತಿ ಇಲ್ಲದ ಸಂಗತಿಗಳಿಗೆ ಮನಸ್ಸು ನೆಲೆ ಒದಗಿಸದು ಎಂದೇನೋ ಹೇಳುತ್ತಾರೆ. ಅದು ಎಷ್ಟರ ಮಟ್ಟಿಗೆ ನಿಜ ಅಂತ ತಿಳಿಯದು, ಕಾರಣ ನನ್ನ ತಲೆ ತುಂಬಾ ಬೇಡದೆ ಇರೋ ಕಸವೇ ತುಂಬಿದೆಯಂತೆ. ಇದು ಯಾರು ಹೇಳಿದರು ಅನ್ನೋದು ಇಲ್ಲಿ ಪ್ರಸ್ತುತ ಅಲ್ಲ, ಆದರೆ ಇದು ಸತ್ಯ ಇರಬಹುದೇನೋ…! ನಾಡಹಬ್ಬದ ಉಸ್ತುವಾರಿ ಶ್ರೀ ಶ್ರೀಹರಿ ಮತ್ತು ಕಿರ್ಲೋಸ್ಕರ್ ಸಂಸ್ಥೆಯ ಉನ್ನತ ಅಧಿಕಾರಿ ಶ್ರೀ ಮುಂಡೆವಾಡಿ ಅವರದ್ದು ಎಂದು ನನ್ನ ಮಿತ್ರ ಗೋಪಾಲಸ್ವಾಮಿ ನೆನೆದರು.

ಸಂಚಿಕೆ ಹನ್ನೊಂದರ ನನ್ನ ಆತ್ಮೀಯ ಮಿತ್ರ ಶ್ರೀ ಆನಂದರಾಮರಾವ್ ಅವರು ಕೆಲ ಮಾಹಿತಿ ನೀಡಿದ್ದಾರೆ…
ಹರಿಕಥೆ ಎನ್ನುವ ಕಲೆ ಇಂದು ಜನ ಸಾಮಾನ್ಯರಲ್ಲಿ ಅಪರಿಚಿತವಾಗಿರುವ ಸಂದರ್ಭದಲ್ಲಿ ಹಳೆ ಬೆಂಗಳೂರು ಕಥೆಗಳ ಸರಣಿಯ ಹನ್ನೊಂದನೆಯ ಕಂತಿನಲ್ಲಿ ಅದರ ಬಗ್ಗೆ ನೀವು ಬರೆದಿರುವ ಲೇಖನವನ್ನು ಓದಿದಾಗ ನಾನು ಹಲವಾರು ವರ್ಷಗಳ ಹಿಂದೆ ಕೇಳಿದ ಹರಿಕಥೆಗಳ ಹಾಗೂ ದಾಸರುಗಳ ನೆನಪು ನನ್ನ ಮನದಲ್ಲಿ ಹಾಗೆಯೇ ಸುಳಿಯಿತು. ನನ್ನ ತಾಯಿಯವರ ಸೋದರ ಮಾವ, ಸುಂದರ ರಾವ್, ಎಂಬುವರು ಸರ್ಕಾರೀ ಕೆಲಸದಲ್ಲಿ ಅಧಿಕಾರಿಗಳಾಗಿದ್ದರು. ಶ್ರೀರಾಮನ ಅನನ್ಯ ಭಕ್ತರು ಅವರು. ಹರಿಕಥೆ ಮಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದರು. ಯಾವುದೇ ಪ್ರತಿಫಲಕ್ಕೂ ಅಪೇಕ್ಷೆ ಪಡದೆ ಶ್ರೀರಾಮನ ಸೇವೆಯೆಂದು ಅವರು ಈ ಕಾರ್ಯವನ್ನು ಕೈಗೊಳ್ಳುತ್ತಿದ್ದರು. ಮಲ್ಲೇಶ್ವರದ 15ನೇ ಕ್ರಾಸ್‌ನಲ್ಲಿದ್ದ ಸಿದ್ಧರೂಢಾಶ್ರಮ( ಇರಬಹುದು) ಬಳೇಪೇಟೆಯ ಲಾಲ್ ದಾಸ್ ವೆಂಕಟರಮಣ ಸ್ವಾಮಿಗುಡಿ ಮುಂತಾದ ಕಡೆ ಅವರ ಕಾರ್ಯಕ್ರಮವನ್ನು ಯೋಜಿಸುತ್ತಿದ್ದರು. ನೀವು ತಿಳಿಸಿದ ಹಾಗೆ ಹಂಡೆ ವೇದವ್ಯಾಸದಾಸರು, ಕರಿಗಿರಿದಾಸರು, ಗೋಪೀನಾಥ ದಾಸರು, ಭದ್ರಗಿರಿ ಅಚ್ಯುತ ದಾಸರು, ಭದ್ರಗಿರಿ ಕೇಶವದಾಸರು ಗುರುರಾಜಲು ನಾಯ್ಡುರವರು ಮುಂತಾದವರು ಪ್ರಮುಖರಾಗಿದ್ದರು. ಭದ್ರಗಿರಿ ಕೇಶವದಾಸರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹರಿಕಥೆಗಳನ್ನು ನಡೆಸಿಕೊಡುತ್ತಿದ್ದರು. ಭದ್ರಗಿರಿ ಅಚ್ಯುತದಾಸರು ಕನ್ನಡ, ಇಂಗ್ಲೀಷ್ ಹಾಗೂ ಮರಾಠಿ ಭಾಷೆಗಳಲ್ಲಿಯೂ ನಡೆಸಿಕೊಡುತ್ತಿದ್ದರು. ಸುಮಾರು ತೊಂಬತ್ತರ ದಶಕದಲ್ಲಿ ಭಾರತೀಯ ವಿದ್ಯಾಭವನದಲ್ಲಿ ಅಚ್ಯುತದಾಸರು ಒಂದು ವಾರ ಕಾಲ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಾನು ಫ್ಯಾಕ್ಟರಿಯಿಂದ ನೇರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ. ಅಷ್ಟರಮಟ್ಟಿಗೆ ಆಕರ್ಷಿತನಾಗಿದ್ದೆ. ಹರಿಕಥೆಯ ಮಧ್ಯೆ ಮಧ್ಯೆ ಉಪಕಥೆಗಳು, ಭಗವನ್ನಾಮ ಸ್ಮರಣೆ, ಸಭಿಕರೂ ಅದರಲ್ಲಿ ಭಾಗವಹಿಸುವಂತೆ ಮಾಡಿ ಇಡೀ ಸಭಾಂಗಣದಲ್ಲಿ ಭಕ್ತಿ ಪರವಶತೆಯನ್ನುಂಟು ಮಾಡುತ್ತಿದ್ದರು. ಗುರುರಾಜುಲು ನಾಯ್ಡುರವರು, ಮಾಲೂರು ಸೊಣ್ಣಪ್ಪನವರು ಮುಂತಾದವರೂ ಸಹ ಜನಪ್ರಿಯರಾಗಿದ್ದ ರು. HAL ನಲ್ಲಿ ಉದ್ಯೋಗ ಮಾಡುತ್ತಿದ್ದ ಗುರುರಾಜುಲು ನಾಯ್ಡುರವರು ಕೆಲಸಕ್ಕೆ ರಾಜೀನಾಮೆ ನೀಡಿ, ಸಿನಿಮಾ ನಟನಾಗಿ (ಅರುಣ್ ಕುಮಾರ್) ಹಾಗೂ ಹರಿಕಥೆ ಕಾಲಕ್ಷೇಪದಲ್ಲಿಯೂ ಅತ್ಯಂತ ಜನಪ್ರಿಯರಾದರು. ಅವರ ಕಾರ್ಯ ಕ್ರಮಗಳಿಗೆ ಎಷ್ಟು ಬೇಡಿಕೆ ಇತ್ತೆಂದರೆ ಒಂದೇ ದಿನದಲ್ಲಿ ಎರಡು ಮೂರು ಕಡೆ ಕಾರ್ಯಕ್ರಮವಿರುತ್ತಿತ್ತು. ಎಷ್ಟೇ ಹೊತ್ತಾದರೂ ಜನ ಕಾಯುತ್ತಿದ್ದರು. ವಿಷಾದವೆಂದರೆ ಮಂಡ್ಯದಲ್ಲಿ ಕಾರ್ಯಕ್ರಮ ನಡೆಸುತ್ತಿರುವಾಗಲೇ ವೇದಿಕೆಲ್ಲಿಯೇ ಕಣ್ಣುಮುಚ್ಚಿದರು. ಇವರ ಹೆಣ್ಣು ಮಕ್ಕಳು ಹರಿಕಥೆ ಹೇಳುವುದರಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಮತ್ತೊಬ್ಬ ಹರಿಕಥಾ ದಾಸರೆಂದರೆ ವೇಣುಗೋಪಾಲ ದಾಸರು. ಇವರು ಟಿ.ವಿ. ಗೋಪೀನಾಥ ದಾಸರ ಸಂಬಂಧಿ. ಚಾಮರಾಜಪೇಟೆಯಲ್ಲಿ ನಾನು ವಾಸಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮ ಮನೆಯ ಸಮೀಪದಲ್ಲಿಯೇ ಇದ್ದರು. ಇವರು ಸಹ ಪ್ರಸಿದ್ಧರಾಗಿದ್ದರು. ಅನೇಕ ಹೆಂಗಸರು ಸಹ ಈ ಕಲೆಯಲ್ಲಿ ತೊಡಗಿಕೊಂಡಿದ್ದರು. ಪ್ರಮುಖವಾಗಿ ಹೆಸರಿಬಹುದಾದರೆ ಬಿ.ಪಿ. ರಾಜಮ್ಮ, ಸಿ.ಕೆ ರಮ. ಗುರುರಾಜಲು ನಾಯ್ಡುರವರ ಮಕ್ಕಳಾದ ಶೋಭಾ ನಾಯ್ಡು ಶೀಲಾ ನಾಯ್ಡು ಮುಂತಾದವರು. ಪ್ರಸಿದ್ಧ ನಟಿ ಪಂಡರೀಬಾಯಿಯವರು ಸಹ ಪಾಂಡುರಂಗನ ಪರಮ ಭಕ್ತೆಯಾಗಿದ್ದು ಹರಿಕಥೆ ಮಾಡುವುದರಲ್ಲಿಯೂ ಹೆಸರುವಾಸಿಯಾಗಿದ್ದರು.

(ನನ್ನ ಟಿಪ್ಪಣಿ: ಹದಿನೈದನೇ ಕ್ರಾಸಿನಲ್ಲಿ ಸಿದ್ಧರೂಢಾಶ್ರಮ ಅನ್ನುವ ಫಲಕ ಒಂದು ರಸ್ತೆ ಅಂಚಿಗೆ ಕಾಣಿಸುತ್ತದೆ. ಹರಿಕಥೆ ದಾಸರ ಕುರಿತಾಗಿಯೇ ಒಂದು ನಾಲ್ಕುನೂರು ಐದುನೂರು ಪುಟಗಳ ಒಂದು ಪುಸ್ತಕ ನನ್ನಲ್ಲಿತ್ತು. ಐವತ್ತರ ದಶಕದಲ್ಲಿ ಪ್ರಕಟವಾದ ಪುಸ್ತಕ. ಸುಮಾರು ಹಿಂದಿನ ಹಾಗೂ ಪುಸ್ತಕ ಪ್ರಕಟ ಆದಾಗ ಇದ್ದ ದಾಸರ ಪರಿಚಯ ಅದರಲ್ಲಿ ಓದಿದ್ದೆ. ಹಿಂದಿನ ಖ್ಯಾತನಾಮರು ಅಲ್ಲದೇ ಆಗತಾನೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಹರಿಕಥಾ ವಿದ್ವಾಂಸರ ಪರಿಚಯ ಆ ಪುಸ್ತಕದಲ್ಲಿ ಇತ್ತು. ಲೇಖಕ ಮತ್ತು ಪ್ರಕಾಶಕರ ಹೆಸರು ನೆನಪಿನಿಂದ ಮಾಸಿದೆ.

ಶ್ರೀ ಪ್ರಭು ಶಂಕರ ಅವರ ಒಂದು ಪುಸ್ತಕದಲ್ಲಿ (“ಜನ ಮನ” ಇರಬೇಕು) ಒಬ್ಬರು ದಾಸರ ಪರಿಚಯ ತುಂಬಾ ಆತ್ಮೀಯವಾಗಿದೆ. ಹರಿಕತೆಗಳು ಆಗ ಜನಾಕರ್ಷಣೆಯ ದೊಡ್ಡ ಸಾಧನ ಮತ್ತು ಕೊನೆತನಕ ಜನ ಕೂತು ಆನಂದಿಸುತ್ತಿದ್ದರು. ಕಾಲ ಸರಿದಂತೆ ಬರೆ ನೆನಪಾಗಿ ಬಿಟ್ಟವು.
ತಮ್ಮ ನೆನಪುಗಳಿಗೆ ಕೃತಜ್ಞ.

ಅಂದಹಾಗೆ bel ಕಾರ್ಖಾನೆಯ ನಿವೃತ್ತ ಉದ್ಯೋಗಿ ಶ್ರೀಮತಿ ಗಾಯತ್ರಿ ಕೃಷ್ಣಮೂರ್ತಿ ಅವರೂ ಸಹ ಒಬ್ಬ ಹರಿಕಥಾ ವಾಗ್ಮಿ. ಸುಮಾರು ಸಾವಿರಕ್ಕೂ ಮೀರಿ ಹರಿಕಥೆ ಮಾಡಿರುವೆ ಎನ್ನುವ ಅವರ ವೀಡಿಯೊ ಈಚೆಗೆ ನೋಡಿದೆ.

ಇನ್ನೂ ಮುಂದೆ..

ಬೆಂಗಳೂರಿನ ಅತ್ಯಂತ ವಿಶಿಷ್ಟವಾದ ಸಂಗತಿ ಒಂದನ್ನು ನಮ್ಮ ಗೆಳೆಯರು ಆಗಾಗ ಹೇಳುತ್ತಾ ಇರುತ್ತಾರೆ. ಅದೆಂದರೆ ಇಲ್ಲಿ ದೂರವನ್ನು ಕಿಮೀ ಅಥವಾ ಮೈಲಿ ಲೆಕ್ಕದಲ್ಲಿ ಯಾರೂ ಹೇಳುವುದಿಲ್ಲ ವಂತೆ. ಬದಲಿಗೆ ಇಷ್ಟು ಗಂಟೆ ಅಥವಾ ನಿಮಿಷ ಅಂತ ಹೇಳುತ್ತಾರೆ. ಜಯನಗರದದಿಂದ ಮಲ್ಲೇಶ್ವರ ಎಷ್ಟು ದೂರ ಅಂದರೆ ಸಂಜೆ ಆದರೆ ಒಂದೂವರೆ ಗಂಟೆ, ಮಧ್ಯಾಹ್ನ ಆದರೆ ಒಂದು ಗಂಟೆ… ಹೀಗೆ!

ಈ ಉತ್ತರ ಕೇಳಿದವರಿಗೆ ದೂರ ದೊಡ್ಡದು ಆಗುತ್ತಾ ಬಿಸಿಲು ಇಳಿದ ಹಾಗೆ ಅಂತ ಬೆಂಗಳೂರಿಗ ಅಲ್ಲದವರಿಗೆ ಆಶ್ಚರ್ಯ ಕಾಡಬಹುದು. ಕಾಡಬಹುದು ಏನು ಚೆನ್ನಾಗೇ ಕಾಡಿದೆ ಮತ್ತು ಕೆಲವರು ಇದನ್ನು ಫೇಸ್ ಬುಕ್‌ನಲ್ಲಿ ಹಾಕಿ ತಮ್ಮ ಖುಷಿಯನ್ನು ಹಂಚಿದ್ದಾರೆ. ಆದರೆ ಸಂಜೆ ಆದರೆ ಟ್ರಾಫಿಕ್ ಹೆಚ್ಚುತ್ತೆ, ವಾಹನ ಸಲೀಸಾಗಿ ಹೋಗದು.. ಅದರಿಂದ ಸಮಯ ಜಾಸ್ತಿ ಬೇಕು! ಇದು ಅಂದರೆ ದೂರವನ್ನು ಸಮಯದಲ್ಲಿ ಅಳೆಯುವ ಗುಣ ಮೂಲ ಬೆಂಗಳೂರಿಗರು ಎಲ್ಲರಿಗೂ ರಕ್ತದಲ್ಲೇ ಬಂದಿದೆ. ಇದು ನನಗೆ ಒಂದು ತಮಾಷೆ ವಸ್ತು ಆಗಿ ಒಮ್ಮೆ ಕಂಡಿತ್ತು. ಗೆಳೆಯರ ಸಂಗಡ ಟ್ರಿಪ್ ಹೋಗಿದ್ದೆ. ಮೇಕೆದಾಟಿಗೆ ಒಂದು ಕಡೆಯಿಂದ ನಡಿಬಹುದು, ಎರಡು ಮೈಲಿ ಅಂತ ಒಬ್ಬ, ನಮ್ಮ ಶಂಕರ ನಾರಾಯಣ (ನನ್ನ ಆಪ್ತರಲ್ಲಿ ಒಬ್ಬ. ಕಳೆದ ಕೋವಿಡ್ ಸಮಯದಲ್ಲಿ ದೇವರನ್ನು ಸೇರಿದ) ಹೇಳಿದ. ಅದೇ ಊರಿನವನು. ಸರಿ ಅಂತ ನಡೆಯಲು ಶುರು ಮಾಡಿದರೆ ಎರಡು ಮೈಲಿ ದೂರದ ಮೇಕೆದಾಟು ಎಷ್ಟು ದೂರ ನಡೆದರೂ ಸಿಗಬೇಡವೆ. ಏನೋ ಶಂಕರಿ ಎರಡೇ ಮೈಲಿ ಅಂದ್ಯಲ್ಲೋ ಅಂತ ಹಿಡ್ಕಂಡು ದಬಾಯಿಸಿ ಕೇಳಿದರೆ, ನಾನು ಚಿಕ್ಕವನಿದ್ದಾಗ ಅದು ಎರಡೇ ಇದ್ದದ್ದು. ಈಗ ದೊಡ್ಡದಾಗಿದೆ….. ಅಂದ! ಅವತ್ತಿಂದ ಶಂಕರು ನಮಗೆ ಒಂದು ರೀತಿ ಒತ್ತಡ ನಿವಾರಕ ಆದ. ಹೇಗೆ ಅಂದರೆ ಶಂಕರೂ ನೀನು ಚಿಕ್ಕವನಿದ್ದಾಗ ಪ್ರೈಮರಿ ಶಾಲೆ ಎಷ್ಟು ವರ್ಷ ಓದ್ತಾ ಇದ್ದರು….? ನೀನು ಚಿಕ್ಕವನಿದ್ದಾಗ ಒಬ್ಬ ಎಷ್ಟು ಎತ್ತರ ಇರುತ್ತಿದ್ದ… ಹೀಗೆ. ಆತನ ಉತ್ತರ ಬಂದ ನಂತರ ಅದಕ್ಕೆ ಸಪ್ಲಿಮೆಂಟರಿ ಪ್ರಶ್ನೆ.. ಹೀಗೆ ಸರಪಳಿ ಮುಂದುವರೆದು ಅವನು ರೇಗುವವರೆಗೆ ಮುಂದುವರಿತಿತ್ತು. ಈಗ ಅವನಿಲ್ಲ, ಆದರೆ ನೆನಪು ಇದೆ.

ಆಗ ಅರವತ್ತು ಎಪ್ಪತ್ತರ ದಶಕ. ಬೆಂಗಳೂರಿನಲ್ಲಿ ಯಾರಿಗೂ one way ಗೊತ್ತೇ ಇರಲಿಲ್ಲ. ಕೆಂಪೇಗೌಡ ರಸ್ತೆ ಆಗಲಿ, ಅವೆನ್ಯೂ ರಸ್ತೆ ಆಗಲಿ, ಮಲ್ಲೇಶ್ವರದ ಸಂಪಿಗೆ ರಸ್ತೆ ಅಥವಾ ಮಾರ್ಗೊಸ ರಸ್ತೆ.. ಯಾವುದೇ ರಸ್ತೆ ಇರಲಿ ಎಲ್ಲವೂ ಟೂ ವೆ ಸಂಚಾರದವು. ರಸ್ತೆ ಎಷ್ಟೇ ಕಿರಿದಾಗಿದ್ದು ಹೋಗಲೇಬೇಕಿದ್ದ ತುರ್ತು ಇದ್ದರೂ ಜನ ಸಂಯಮದಿಂದ ಹೋಗುತ್ತಿದ್ದರು. ಮೊದಲನೇ one way ಆಗಿದ್ದು ನನ್ನ ನೆನಪಿನ ಪ್ರಕಾರ ಅವೆನ್ಯೂ ರಸ್ತೆ. ಈಗಿನ ಮೈಸೂರು ಬ್ಯಾಂಕ್ ಸರ್ಕಲ್‌ನಿಂದಾ ಆಕಡೆಯ ಮಾರ್ಕೆಟ್‌ವರೆಗೆ one way ಆಯಿತು. ಮಾರ್ಕೆಟ್‌ಗೆ ಹೋಗಬೇಕಾದರೆ ಮೆಜೆಸ್ಟಿಕ್ ರಸ್ತೆ ಉದ್ದಕ್ಕೂ ಬಂದು ಟೌನ್ ಹಾಲ್ ಎದುರು ಬಲಕ್ಕೆ ತಿರುಗಿ ನರಸಿಂಹ ರಾಜ ರಸ್ತೆಯಲ್ಲಿ ಮುಂದುವರೆದು ಮಾರ್ಕೆಟ್ ತಲುಪಬೇಕು. ಕೊಂಚ ಹೆಚ್ಚು ಸಮಯ ಹಿಡಿಯುತ್ತಿತ್ತು. ಕೆಲವರು ಕೊಸ ಕೊಸ ಅಂದರೂ ಈಗಿನ ಹಾಗೆ ಸರ್ಕಾರದ ಯಾವುದೇ ಜನೋಪಯೋಗಿ ಕ್ರಮಕ್ಕೆ ವಿರೋಧ ಮಾಡುವ ಚಾನೆಲ್‌ಗಳು ಮತ್ತು ಸುದ್ದಿ ಮೀಡಿಯಾಗಳು ಇಲ್ಲದ ಕಾಲ ಅದು. ಗೊಣಗಿದವರು ಕೆಲದಿನಗಳ ನಂತರ ತೆಪ್ಪಗಾದರು. ಹೀಗೆ one way ಯುಗ ಶುರು ಆಯ್ತು ನೋಡಿ, ಇದು ಒಂದು ರೀತಿ ಹಬ್ಬದ ಹಾಗೆ ಆಗಿ ಬಿಡ್ತು.

ಬೆಂಗಳೂರಿನ ಉದ್ದಗಲಕ್ಕೆ ಎಲ್ಲೆಲ್ಲೋ ಯಾವಾಗ ಯಾವಾಗಲೋ ರಾತ್ರೋ ರಾತ್ರಿ one way ಗಳು ಜನ್ಮ ತಳೆದುಬಿಟ್ಟವು! ಬೆಳಿಗ್ಗೆ ಹೋಗಬೇಕಾದರೆ ಟೂ ವೆ ಇರುತ್ತಿದ್ದ ರಸ್ತೆ ಸಂಜೇ ವಾಪಸ್‌ ಆಗುವಾಗ one way ಆಗಿ ಬಿಟ್ಟಿರುತ್ತಿತ್ತು. ಒಂದು ಕತ್ತಲೆ ಮೂಲೆಯಲ್ಲಿ ಪೋಲೀಸರು ಕಾದಿದ್ದು ಒನ್ ವೆ ಕಾನೂನು ಭಂಗ ಮಾಡಿದವರನ್ನು ಹಿಡಿದು ಫೈನ್ ಹಾಕುತ್ತಿದ್ದರು! ಪೊಲೀಸರಿಗೆ ಶಪಿಸಿ ಸುಮಾರು ಜನ ಫೈನ್ ಕಟ್ಟಿ ಬಂದರೆ ಕೆಲವರು ವಾಗ್ವಾದಕ್ಕೆ ನಿಲ್ಲುವರು. ಗಾಡಿ ಸೀಜ್ ಮಾಡುತ್ತೇನೆ ಎಂಬ ಹೆದರಿಕೆ ನಂತರ ಬಾಲ ಮುದುರಿ ಫೈನ್ ಕಟ್ಟುತ್ತಿದ್ದರು. ಇದು ಅಂದಿನ ಸುಮಾರು ವಾಹನ ಚಾಲಕರ ದಾಖಲಾಗಿಲ್ಲದ ಅನುಭವ!

ಈಗ ಕೆಂಪೇಗೌಡ ರಸ್ತೆಯಲ್ಲಿ ಎರಡೂ ಮುಖವಾಗಿ ಚಲಿಸುವ ವಾಹನಗಳನ್ನು ನೆನೆಸಿಕೊಳ್ಳಲೂ ಸಹ ಆಗದು. ಅದೇ ರೀತಿ ಮಿಕ್ಕ ರಸ್ತೆಗಳೂ ಸಹ. ಅವೆನ್ಯೂ ರಸ್ತೆ ಕಾಟನ್ ಪೇಟೆ ರಸ್ತೆ ಇಲ್ಲಿ one ವೇಗೆ ಮೊದಲು ಸಂಚಾರ ಹೇಗಿದ್ದಿರಬಹುದು ಅಂತ ಕಲ್ಪಿಸಲೂ ಆಗದಷ್ಟು ಹೊಸ ವ್ಯವಸ್ಥೆಗಳಿಗೆ ನಾವು ಹೊಂದಿಕೊಂಡುಬಿಟ್ಟೆವು.

ಮಾರ್ಕೆಟ್‌ಗೆ ಹೋಗಬೇಕಾದರೆ ಮೆಜೆಸ್ಟಿಕ್ ರಸ್ತೆ ಉದ್ದಕ್ಕೂ ಬಂದು ಟೌನ್ ಹಾಲ್ ಎದುರು ಬಲಕ್ಕೆ ತಿರುಗಿ ನರಸಿಂಹ ರಾಜ ರಸ್ತೆಯಲ್ಲಿ ಮುಂದುವರೆದು ಮಾರ್ಕೆಟ್ ತಲುಪಬೇಕು. ಕೊಂಚ ಹೆಚ್ಚು ಸಮಯ ಹಿಡಿಯುತ್ತಿತ್ತು. ಕೆಲವರು ಕೊಸ ಕೊಸ ಅಂದರೂ ಈಗಿನ ಹಾಗೆ ಸರ್ಕಾರದ ಯಾವುದೇ ಜನೋಪಯೋಗಿ ಕ್ರಮಕ್ಕೆ ವಿರೋಧ ಮಾಡುವ ಚಾನೆಲ್‌ಗಳು ಮತ್ತು ಸುದ್ದಿ ಮೀಡಿಯಾಗಳು ಇಲ್ಲದ ಕಾಲ ಅದು. ಗೊಣಗಿದವರು ಕೆಲದಿನಗಳ ನಂತರ ತೆಪ್ಪಗಾದರು.

ಆಗ ಅಂದರೆ ಅರವತ್ತು ಎಪ್ಪತ್ತರ ದಶಕದಲ್ಲಿ ನಮ್ಮ ಬಹುತೇಕ ಯುವಕರ ಮುಖ್ಯ ಸಾರಿಗೆ ಎಂದರೆ bts ಬಸ್ಸು ಹಾಗೂ ಬೈಸಿಕಲ್. ತಂದೆ ತಾಯಿಗಳು ಜಟಕಾ ಪ್ರಯಾಣ(ಜಟಕಾ ಓಡಿಸುತ್ತಿದ್ದವರು) ಮತ್ತು ಉಳ್ಳವರು (ಇವರು ಯಾವಾಗಲೂ ಅಲ್ಪ ಸಂಖ್ಯಾತರು) ಆಗಿನ ಟ್ಯಾಕ್ಸಿ ಅಂಬಾಸೆಡರ್ ಉಪಯೋಗಿಸುತ್ತಾ ಇದ್ದರು. ಸೈಕಲ್ ಗಳಲ್ಲಿ ಹರ್ಕ್ಯುಲಸ್ ತುಂಬಾ ಕಾಮನ್. Raleigh ಗೆ ಕೊಂಚ ಕಾಸು ಜಾಸ್ತಿ. ಹಠ ಹಿಡಿದು ಅದನ್ನೂ ಕೆಲವರು ತೆಗೆದುಕೊಳ್ಳುತ್ತಿದ್ದರು. ಇನ್ನಿತರ ಬ್ರಾಂಡ್ ಸಹ ಇದ್ದವು. ಎಲ್ಲಾ ಬ್ರಾಂಡು ಕರಿಯ ಬಣ್ಣದವು. ಸೈಕಲ್ ಗೆ ಹಸಿರು ಬಣ್ಣ ಇರಲಿ ಅಂದರೆ ಅದು Raleigh ಗೆ ಮಾತ್ರ! ಈಗಿನ ಹಾಗೆ ನಿಮಗೆ ಬಣ್ಣದ ಚಾಯ್ಸ್ ಇಲ್ಲ. ಕೆಲವರು ಅಪ್ಪನ ಸ್ಕೂಟರ್ ಓಡಿಸುತ್ತಿದ್ದರು, ಅಪ್ಪ ಸ್ಕೂಟರ್ ಇಟ್ಟಿದ್ದರೆ. ಅದೂ ಲಾಂಬ್ರೆಟ್ಟಾ ಗಾಡಿ. ಸುಮಾರು ಇದೇ ಸಮಯಕ್ಕೆ ಲೂನಾ ಬಂದಿತು. ಅದಕ್ಕೆ ಮುನ್ನ ಕುಟ ಕುಟ ಮೋಟಾರ್ ಸೈಕಲ್ ಬಂತು. ಕುಟ ಕುಟ ಅನ್ನುವ ಹೆಸರು ಯಾಕೆ ಅಂದರೆ ಅದು ಓಡುವಾಗ ಕುಟ ಕುಟ ಶಬ್ದ ಮಾಡುತ್ತಿತ್ತು! ಅರವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಮೊದಲು ಐದು ಜಾವಾ ಮೋಟಾರ್ ಸೈಕಲ್ ಇತ್ತು, ಅದರಲ್ಲಿ ನನ್ನದೂ ಒಂದು ಎಂದು ನನ್ನ ಗೆಳೆಯರು ಒಮ್ಮೆ ಹೇಳಿದ್ದರು! ನಂತರ ನಿಧಾನಕ್ಕೆ tvs ಅದರ ಅಣ್ಣ ತಮ್ಮ ಬಂದವು. ಲಾಂಬ್ರೆಟ್ಟಾ ಗಾಡಿ ವಿದೇಶದಲ್ಲಿ ಹೆಂಗಸರು ಓಡಿಸುವ ಗಾಡಿ ಅಂತ ಕೆಲವರು ಲೇವಡಿ ಮಾಡುತ್ತಿದ್ದರು. ಎನ್ ಫೀಲ್ಡ್ ಸುಮಾರು ಇದೇ ಸಮಯ ಪ್ರವೇಶ. ಎಂಬತ್ತರ ದಶಕದ ನಡುವಿನಲ್ಲಿ ಚೇತಕ್ ಗಾಡಿ ಹೆಸರು ಓಡುತ್ತಿತ್ತು. ಅದೂ ಫಾರಿನ್ ಎಕ್ಸ್ಚೇಂಜ್ ಇದ್ದರೆ ಗಾಡಿ ಬೇಗ ಸಿಗುತ್ತೆ ಅಂತ. ಬೇಗ ಅಂದರೆ ಅದಕ್ಕೂ ಮಿನಿಮಮ್ ಮೂರು ವರ್ಷ! ಸೆಕೆಂಡ್ ಹ್ಯಾಂಡ್ ಚೇತಕ್ ಗಾಡಿ ಇಟ್ಟುಕೊಳ್ಳುವುದು ಸಹ ಒಂದು ಪ್ರತಿಷ್ಠೆ ಸಂಕೇತ ಆಗ. ಈಗಿನ ಹಾಗೆ ಶೋ ರೂಂ ಗೆ ಹೋಗಿ ಕಾರ್ಡು ಉಜ್ಜಿ ಗಾಡಿ ಓಡಿಸಿಕೊಂಡು ಬರುವುದನ್ನು ನಾವು ಕಲ್ಪನೆ ಸಹ ಮಾಡಿರಲಿಲ್ಲ! ಇನ್ನೂ ಏನೇನೋ ನಾವು ಕಲ್ಪಿಸಲೂ ಸಹ ಆಗದ್ದು ಈಗ ನಮ್ಮ ಮನೆಯಲ್ಲಿ ಜೇಬಿನಲ್ಲಿ ಇವೆ ಎಂದರೆ ಒಂದು ಸಂಪೂರ್ಣ ವೈಜ್ಞಾನಿಕ ಕ್ರಾಂತಿಗೆ ನಮ್ಮ ಪೀಳಿಗೆ ಸಾಕ್ಷಿಯಾಗಿದೆ. ಸಾವಿರಕ್ಕೂ ಮೀರಿದ ಮಾಡಲ್‌ನ ಎರಡು ಚಕ್ರ, ಐನೂರರಷ್ಟು ನಾಲ್ಕು ಚಕ್ರವಾಹನಗಳು… ಇನ್ನೂ ಏನೇನೋ.
ಇದರ ಬಗ್ಗೆ ಒಂದು ದೀರ್ಘ ಲೇಖನ ಇಷ್ಟರಲ್ಲೇ ನಿಮ್ಮ ಮುಂದೆ ಬರಲಿದೆ.

ನಮ್ಮ ಮುಖ್ಯ ಕನ್ವೆಯನ್ಸ್ ಸೈಕಲ್ಲು ಮತ್ತು ಬಿಟಿಎಸ್ ಅಂದೆ. ರಾಜಾಜಿನಗರದ ನಾಲ್ಕನೇ ಬ್ಲಾಕಿನಿಂದ ಆನಂದ ರಾವ್ ಸರ್ಕಲ್‌ಗೆ ಸೈಕಲ್‌ನಲ್ಲಿ ಹನ್ನೊಂದು ನಿಮಿಷ ದೂರ ಆಗ! ಅದೂ ಈಗಿನ ರಾಮಚಂದ್ರಪುರ ಇನ್ನೂ ಹಳ್ಳದಲ್ಲಿದ್ದಾಗ. ಉಬ್ಬಸ ಪಟ್ಟುಕೊಂಡು ಸೈಕಲ್ ತುಳಿಯುವುದು ಒಳ್ಳೇ ಕಸರತ್ತು ಆಗ. ನಡೆಯುವಾಗಲೂ ಸಹ ಉಬ್ಬಸ ಪಡುವ ಅನುಭವ ಮೊನ್ನೆ ಆಯಿತು. ತಿರುವನಂತಪುರದಲ್ಲಿ ಬಂಧುವೊಬ್ಬರ ಮನೆಗೆ ಹೋಗಿದ್ದೆ. ಅವರ ಮನೆ ಸುಮಾರು ಎತ್ತರದಲ್ಲಿದೆ. ಕಡಿದಾದ ರಸ್ತೆ. ಬೆಳಿಗ್ಗೆ ವಾಕಿಂಗ್ ಹೋದಾಗ ಇಳಿಜಾರು ರಸ್ತೆ ವಾಪಸ್ಸು ಮನೆಗೆ ಬರುವಾಗ ತುಂಬಾ ಕಡಿದು ಆಗಬೇಕೇ. ಉಬ್ಬಸ ಪಡುತ್ತಾ ಎರಡು ಮೂರು ಕಡೆ ನಿಂತು ಉಸಿರು ಹದಕ್ಕೆ ತಂದುಕೊಂಡು ಸುಧಾರಿಸಿಕೊಂಡು ಮನೆ ಸೇರಿದೆ. ಹೃದಯ ಡಬ ಡಬಾ ಹೊಡೆಯೋದು ಕೇಳಿಸುತ್ತಿತ್ತು. ಮಾರನೇ ದಿವಸ ಹಿಂದಿನ ದಿನದ ಅನುಭವ ಮತ್ತೆ ಬೇಕು ಅನಿಸಿತು. ಮೂರು ವಾರದಲ್ಲಿ ಉಬ್ಬಸ ನಿಂತು ಎರಡು ಸುತ್ತು ಮೂರು ಸುತ್ತು ಸುತ್ತಬೇಕು ಅನಿಸೋ ಹಾಗಾಯಿತು….!

ರಾಮಚಂದ್ರಪುರ ಹೇಗೆ ಎಷ್ಟು ಹಳ್ಳದಲ್ಲಿತ್ತು ಅಂತ ನಿಮಗೆ ಹೇಳಿದ ನೆನಪಿದೆ. ಮರೆತಿದ್ದರೆ ಹೇಳಿ. ಅದರ ಕತೆ ವಿವರಿಸುತ್ತೇನೆ. ಚಾಮರಾಜ ಪೇಟೆಯ ಅಂಗಡಿ ಬೀದಿಗೆ ಬ್ರಿಯಾಂಡ್ ಸ್ಕ್ವೇರ್ ಕಡೆಯಿಂದ ಹದಿನೇಳು ನಿಮಿಷ, ಎಂ ಜಿ ರಸ್ತೆಗೆ ಇಪ್ಪತ್ತೆಂಟು ನಿಮಿಷ, ನಂತರ ಬಂದ ಲಿಡೋ ಥಿಯೇಟರ್‌ಗೆ ಮೂವತ್ತೆರಡು ನಿಮಿಷ… ಇದು ನಮ್ಮ ಡಿಸ್ಟೆನ್ಸ್ ಗೇಜು ಆಗ. ಬಹುಶಃ ನಮ್ಮ ಆಗಿನ ಈ ರೀತಿಯ ಯೋಚನಾ ಲಹರಿ ಇನ್ನೂ ಜೀವಂತ ಅನಿಸುತ್ತೆ, ಈಗಿನವರು ದೂರವನ್ನು ಕಾಲದಲ್ಲಿ ಹೇಳುವಾಗ! ಅಂದರೆ ನಮ್ಮ ಜೀನ್ಸ್ ಅನ್ನು ಕಾಪಾಡಿಕೊಂಡು ಬಂದಿದ್ದೇವೆ!

ನಗರದಲ್ಲಿ ಇದ್ದವರಿಗೆ ಕಂಟ್ರೋಮೆಂಟ್ (ಇದು ಕಂಟೋನ್ಮೆಂಟ್ ಶಬ್ದದ ಅಪಭೃಂಶ. ಕಲಿತವರು ಸಹ ತಮಾಶೆಗೆ ಕಂಟ್ರೋಮೆಂಟ್… ಕಂಟ್ರೋಮೆಂಟ್ ಅಂತ ಹೇಳಿ ಅದೇ ಅಭ್ಯಾಸ ಆಗಿತ್ತು) ಸುತ್ತುವುದು, ಅಲ್ಲಿನ ಥಿಯೇಟರ್‌ನಲ್ಲಿ ಕೂತು ಇಂಗ್ಲಿಷ್ ಸಿನಿಮಾ ನೋಡುವುದು ಒಂದು ದೊಡ್ಡಸ್ತಿಕೆ ಸಂಗತಿ. ನೂರಕ್ಕೆ ತೊಂಬತ್ತು ಪ್ಲಸ್ ಹತ್ತು ಜನಕ್ಕೆ, ನಾನೂ ಇದರಲ್ಲಿ ಒಬ್ಬ, ಇಂಗ್ಲಿಷ್ ಸಿನಿಮಾಗಳ ಡಯಲಾಗ್ ಅರ್ಥ ಆಗ್ತಾ ಇರಲಿಲ್ಲ. ಆದರೆ ಅರ್ಥ ಆಗ್ತಿಲ್ಲ ಅಂತ ಹೇಳೋದು ಬುದ್ಧಿವಂತಿಕೆಗೆ ಕಡಿಮೆ. ಅದರಿಂದ ಅರ್ಥ ಆದವರ ಹಾಗೆ ನಟಿಸುತ್ತಾ ಇದ್ದೆವು. ಕೆಲವು ಸಲ ನಿದ್ದೆಗೆ ಜಾರುತ್ತಲೂ ಇದ್ದೆವು. ಸಾಮಾನ್ಯವಾಗಿ ಪಕ್ಕದಲ್ಲಿ ನಮ್ಮದೇ ಐ ಕ್ಯೂವಿನ ಸ್ನೇಹಿತರು ಕೂತಿರುತ್ತಿದ್ದರು. ಅಪರೂಪಕ್ಕೆ ಬೇರೆ ಅವರು ಪಕ್ಕದಲ್ಲಿದ್ದರೆ ಸಿನಿಮಾದ ಡಯಲಾಗಿಗೆ ಅವರು ನಕ್ಕಾಗ ನಾವೂ ನಕ್ಕು ಬಿಟ್ಟರೆ ಸರಿ. ಕೆಲವು ಸಲ ಪಕ್ಕದಲ್ಲಿ ನಮ್ಮ ಜತೆಯವರೆ ಕೂತು ನಾನು ನಕ್ಕಾಗ ಯಾಕೆ ನಕ್ಕೆ ಅಂತ ಕೇಳಿದ ಸಂದರ್ಭ ಸಹ ಇದೆ. ನನ್ನಾಕೆ ಸುಮಾರು ಸಲ ಈ ಪ್ರಶ್ನೆ ಹಾಕ್ತಾ ಇದ್ದಳು, ಅವಳ ಜತೆ ಇಂಗ್ಲಿಷ್ ಸಿನಿಮಾಗಳಿಗೆ ಹೋದಾಗ. ಒಂದೆರೆಡು ನಿಮಿಷದಲ್ಲಿ ಹೇಳುವುದನ್ನು ಅವಳ ಕಿವಿಯಲ್ಲಿ ಪಿಸು ಗುಟ್ಟುತ್ತಿದ್ದೆ. ದೀರ್ಘ ವಿವರಣೆ ಅಂದರೆ ಆಮೇಲೆ ಹೇಳ್ತೀನಿ ಅಂತ ಇದ್ದೆ. ಆಮೇಲೆ ಅವಳು ಮರೀತಿದ್ದಳು, ನನಗೆ ಸಲೀಸು ಆಗ್ತಾ ಇತ್ತು. ಹೀಗೆ ಕಂಟ್ರೋಮೆಂಟ್‌ ನಮ್ಮ ಜೀವನದ ಒಂದು ಭಾಗ ಆಗಿತ್ತು ಸುಮಾರು ವರ್ಷ. ಅಲ್ಲಿನ ಪ್ರತಿ ಥಿಯೇಟರ್‌ನಲ್ಲಿ ಯಾವ ಸಿನಿಮಾ ಅಂತ ಗೊತ್ತಿರುತ್ತಿತ್ತು ಮತ್ತು ಆ ಎಲ್ಲಾ ಸಿನಿಮಾ ನೋಡಿರುತ್ತಿದ್ದೆವು. ಸಿನಿಮಾ ನಂತರ ಇಂಡಿಯಾ ಕಾಫಿ ಹೌಸ್‌ನ ಕಾಫಿ ಸ್ನೇಹಿತರ ಜತೆ. ಹೆಂಡತಿ ಜತೆಯಲ್ಲಿದ್ದರೆ ಅಲ್ಲಿನ ಐಸ್ ಕ್ರೀಮ್ ಹೋಟೆಲ್ಲಿಗೆ ಅದರ ಹೆಸರು ಏನೋ ಇತ್ತು. ನೆನಪಿಗೆ ಬರ್ತಾ ಇಲ್ಲ.. ಮೊನ್ನೆ ರಾತ್ರಿ ನೆನಪಾಯಿತು ಅಂದೆನಲ್ಲಾ ಅದೇ ಇದು ಲೇಕ್ ವ್ಯೂ ಭೇಟಿ. ಕಂಟ್ರಾಮೆಂಟ್ ಸಿನಿಮಾಗಳು ಆಗ ಹೀಗಿತ್ತು.

ಎಂ ಜಿ ರಸ್ತೆಯಿಂದ ಶುರು ಹಚ್ಚಿದರೆ ಪ್ಲಾಜಾ, ಬ್ಲೂಮೂನ್, ಬ್ಲೂ ಡೈಮಂಡ್(ಇವು ನಂತರ ಬಂದವು), ಬ್ರಿಗೇಡ್ ರಸ್ತೆಗೆ ಬಂದರೆ ರೆಕ್ಸ್, ಅದರ ಎದುರು ಅಪೇರ. ಇದು ಕೇರಳದವರ ನಾಲಿಗೆಗೆ ಸಿಕ್ಕು ಒಪೇರಾ ಆಗಿ ನಾವೂ ಸಹ ಅದನ್ನು ಒಪೇರಾ, ಒಪೆರಾ ಎಂದೇ ಕೂಗಿದೆವು. ಈ ಟಾಕಿಸಿನ ಮುಂದೆ ಒಬ್ಬ ವಯಸ್ಸಾದ ಹೆಂಗಸು ಹಣ್ಣು ಹಣ್ಣು ಅಜ್ಜಿ ಒಂದು ಕುರ್ಚಿ ಹಾಕಿಕೊಂಡು ಗಂಭೀರವಾಗಿ ಈಗಿನ ನೈಟಿ ರೀತಿಯ ಡ್ರೆಸ್(ಆಗ ಈ ರೀತಿಯ ಡ್ರೆಸ್ ಗೆ ನೈಟ್ ಗೌನ್ ಅನ್ನುತ್ತಿದ್ದರು. ಮೈಗೆ ಸುತ್ತಿಕೊಂಡು ಮುಂದೆ ಬಿಟ್ಟ ಬಟ್ಟೆ ಟೇಪ್‌ನಿಂದ ಸೈಡಿಗೆ ಗಂಟು ಹಾಕುತ್ತಿದ್ದರು. (ಮನೆಯಲ್ಲಿ ರಾತ್ರಿ ಹೊತ್ತು ಹಾಕುವ ಡ್ರೆಸ್ ಇದು, ಈ ಕಾರಣಕ್ಕೆ ನೈಟ್ ಡ್ರೆಸ್ ಹೆಸರಿಟ್ಟರು ಅಂತ ಕಾಣುತ್ತೆ) ಧರಿಸಿ ಕೂಡುತ್ತಿತ್ತು. ಆಯಮ್ಮ ಇದರ ಅಂದರೆ ಒಪೇರಾ ಥಿಯೇಟರ್ ಓನರ್ ಎಂದು ಸ್ನೇಹಿತರು ಹೇಳುತ್ತಿದ್ದರು. ಒಮ್ಮೆ ಅವರನ್ನು ಹಲೋ ಎಂದು ಮಾತು ಆಡಿಸಿದೆ. ಈ ಥಿಯೇಟರ್‌ಗೆ ಹೋದಾಗ ಆಕೆ ಗುರುತು ಹಿಡಿದು ನಕ್ಕು ಕೈಸೇ ಎನ್ನುತ್ತಿದ್ದರು. ಅಲ್ಲೇ ಎಡಕ್ಕೆ ತಿರುಗಿದರೆ ಗಾಲಾಕ್ಸಿ. ಅದನ್ನು ಹಾದು ಬಂದರೆ ಲಿಡೋ. (ಸುಮಾರು ಸಲ ಲಿಡೋ ಥಿಯೇಟರ್‌ನಲ್ಲಿ ಸಿನಿಮಾ ನೋಡಿದ ಮೇಲೆ ರಾಜಾಜಿನಗರದ ಮನೆಗೆ ನಡೆದು ಹೋಗಿದ್ದೇವೆ. ನನಗೆ ಹೀಗೆ ಕಂಪೆನಿ ಕೊಡುತ್ತಿದ್ದವರು ಶ್ರೀನಿವಾಸಮೂರ್ತಿ ಎನ್ನುವ ನನ್ನ ಸ್ನೇಹಿತ ಹಾಗೂ ಪ್ರಸನ್ನ ಎನ್ನುವ ಇನ್ನೊಬ್ಬ ಸ್ನೇಹಿತ, ಹಾಗೂ ನಟರಾಜ್ ಎನ್ನುವ ಇನ್ನೂ ಒಬ್ಬ ಸ್ನೇಹಿತ).ಇವೆರೆಡರ ಮಧ್ಯೆ ಕಾರ್ಪೋರೇಶನ್‌ನ ದೊಡ್ಡ ಕಟ್ಟಡ ತಲೆ ಎತ್ತಿತ್ತು. ಆಗ ಅದೇ ಅತಿ ಎತ್ತರದ ಬಹುಮಹಡಿ ಬಿಲ್ಡಿಂಗ್ ಅಂತ ಹೆಸರು ಮಾಡಿತ್ತು. ಅಲ್ಲೂ ಒಂದು ಥಿಯೇಟರ್ ಬಂತು. ಬಿಲ್ಡಿಂಗ್ ತುದಿಯಲ್ಲಿ ಒಂದು ರಿವಾಲ್ವಿಂಗ್ ರೆಸ್ಟೋರೆಂಟ್ ಇತ್ತು. ಲಿಡೋ ಇಂದ ಅಲಸೂರಿಗೆ ಬಂದರೆ ಅಲ್ಲಿ ನಾಗಾ ಥಿಯೇಟರ್. ನಾಗಾದಲ್ಲಿ ದೆವ್ವ ಇದೆ ಅಂತ ಪ್ರತೀತಿ ಇತ್ತು. ನಾವು ಅದನ್ನು ಅಂದರೆ ದೆವ್ವ ಹುಡುಕಿ ಹೋಗಿದ್ದೆವು, ಸಿಕ್ಕಲಿಲ್ಲ. ಒಪೇರಾ ಇಂದ ಮುಂದೆ ಬಂದರೆ ಅಲ್ಲೂ ಒಂದು ತುಂಬಾ ಹಳೆಯ ಟಾಕೀಸ್ ಇತ್ತು. ಅದರ ಹೆಸರು ಎಲ್ಗಿನ್ ಎಂದೋ ಏನೋ. ಅದರ ಪಕ್ಕದಲ್ಲಿ ಒಂದು ಬಾರ್ ಇತ್ತು. ಇದು ಯಾಕೆ ನೆನಪು ಅಂದರೆ ಅಲ್ಲಿ ಪಾರ್ಟಿ ಮಾಡಲು ಹೋಗಿದ್ದ ನನಗೆ ಗೊತ್ತಿದ್ದ ಒಬ್ಬರು ಮೆಟ್ಟಲು ಇಳಿಯುವಾಗ ಜಾರಿ ಬಿದ್ದು ಪರಲೋಕ ಸೇರಿದರು. ಅದರ ಮರುವಾರ ಅವರು ಅಮೆರಿಕಕ್ಕೆ ಹಾರಬೇಕಿತ್ತು.

ಬೆಂಗಳೂರು ನಗರದ ಕೆಂಪೇಗೌಡ ರಸ್ತೆಯ ಪ್ರದೇಶಕ್ಕೆ ಹೋಲಿಸಿದರೆ ಕಂಟೋನ್ಮೆಂಟ್‌ನಲ್ಲಿ ಥಿಯೇಟರ್ ಸಂಖ್ಯೆ ಕಮ್ಮಿ. ಇದ್ದ ಎಲ್ಲಾ ಥಿಯೇಟರ್‌ಗಳಲ್ಲಿ ಇಂಗ್ಲಿಷ್ ಸಿನಿಮಾಗಳು, ಒಂದೋ ಎರಡೋ ಅಪವಾದ ಬಿಟ್ಟು. ಕನ್ನಡ ಮಾತು ಯಾರೂ ಆಡುವುದಿಲ್ಲ. ಹೀಗೆ ನಮಗೆ ಅದು ಬೆಂಗಳೂರಿನ ಭಾಗ ಅಂತ ಮೊದಮೊದಲು ಅನಿಸುತ್ತಿರಲಿಲ್ಲ. ಕನ್ನಡದಲ್ಲಿ ಹಠ ಹಿಡಿದು ಮಾತಾಡಿ ಅಲ್ಲಿ ಕನ್ನಡ ಬೆಳೆಸಿದವರು ನಾವು! ಪ್ರೊ ಚಿದಾನಂದ ಮೂರ್ತಿ ಅವರಿಗೆ ಶಕ್ತಿ ಕೇಂದ್ರ ಕಟ್ಟಲು ಈ ಇಂಗ್ಲಿಷ್ ಥಿಯೇಟರ್ ಪ್ರೇರಣೆ ಅಂತ ಓದಿದ್ದೆ.

ಒಂದು ಪುಟ್ಟ ಪ್ರಸಂಗ ನೆನಪಿಗೆ ಬಂತು. ಲಿಡೋದಲ್ಲಿ ಸಿನಿಮಾಗೆ ಹೋಗಿದ್ದೆ. ಮಧ್ಯ ಭಾಗದಲ್ಲಿ ನನ್ನ ಸೀಟು. ಮುಂದೆ ಯಾರೋ ಬಾಗಿಲು ತೆಗೆದ, ಆಚೆ ಹೋದ, ಒಳಗೆ ಬಂದ. ಪ್ರತಿ ಸಲ ಬಾಗಿಲು ತೆರೆದಾಗ ಪರದೆ ಮೇಲೆ ಬೆಳಕು, ಸಿನಿಮಾ ನೋಡಲು ಅಡಚಣೆ. ಹೀಗೆ ಎರಡು ಮೂರು ಬಾರಿ ಆಯಿತು. ಇನ್ನೂ ಒಂದು ಸಲ ಯಾರೋ ಬಾಗಿಲು ತೆಗೆದ. ಪರದೆ ಮೇಲೆ ಬೆಳಕು ಬಿತ್ತು. ಪ್ರತಿ ಸಲ ಬಾಗಿಲು ತೆಗೆದಾಗ ಪರದೆ ಮೇಲೆ ಬೆಳಕು. ಈ ಸಲ ಮುಂದೆ ಕೂತಿದ್ದ ಯಾರೋ ಒಬ್ಬ ಯೇ ನಿನ್ನ….ನ್. ಯಾಕೋ ಅಂಗೆ ತೆಗ್ದು ಆಕ್ತಿಯಾ, ಮುಚ್ಕಂಡ್ ಕುತ್ಕಳೊ …ಅಂತ ಅಬ್ಬರಿಸಿದ…! ಗೊತ್ತಿರೋ ದನಿ ಇದು ಅನಿಸಿತು. ಇಂಟರ್ವಲ್‌ನಲ್ಲಿ ಹುಡುಕಿ ಹೋದೆ. ಸಾರ್ ಅಂತ ದನಿ ಬಂತು. ಫ್ಯಾಕ್ಟರಿಯಲ್ಲಿ ಜತೆ ಕೆಲಸ ಮಾಡುತ್ತಿದ್ದ ನಮ್ಮ ಜವರೆಗೌಡ. ಸಖತ್ತಾಗಿ ಕೂಗಿದೆ ಕಣೋ ಖುಷಿ ಆಯ್ತು ಅಂದೆ. ನನ್ಮಗ ಓತಾನೆ, ಬತ್ತಾನೆ, ಓತಾನೆ, ಬತ್ತಾನೆ.. ಕೂಗಿದ ಮೇಲೆ ತೆಪ್ಪಗಾದ ಅಂದ. ಜವರೆಗೌಡ ಅಂತೋರು ಅಲ್ಲಿ ಕನ್ನಡ ಬೆಳೆಸಿದೋ.. ಜವರೆ ಗೌಡರ ವಂಶ ಬೆಳೆಯಲಿ …!

(ಮುಂದುವರೆಯುವುದು….)