1968ರಲ್ಲಿ ಒಬ್ಬ ದಕ್ಷಿಣ ಆಫ್ರಿಕಾದ ಆಟಗಾರ ಬಾಸಿಲ್ ಡಾಲಿವೀರ, ಇಂಗ್ಲೆಂಡಿನಲ್ಲಿ ಚೆನ್ನಾಗಿ ಆಡಿ ಅವರ ಪರಿಶ್ರಮದಿಂದ ಮುಂದೆ ಬಂದಾಗ ಇಂಗ್ಲೆಂಡ್ ಅವರನ್ನು ದಕ್ಷಿಣ ಆಫ್ರಿಕಾದ ಪ್ರವಾಸಕ್ಕೆ ಆಯ್ಕೆ ಮಾಡಿದರು. ಅವರನ್ನು ಆಯ್ಕೆ ಮಾಡಿದರೆ ಪ್ರವಾಸವನ್ನೇ ರದ್ದು ಮಾಡುವುದಾಗಿ ದಕ್ಷಿಣ ಆಫ್ರಿಕ ಬೆದರಿಕೆ ಹಾಕಿತು. ಅದಕ್ಕೆ ಸೊಪ್ಪುಹಾಕದೆ ಇಂಗ್ಲೆಂಡ್ ಡಾಲಿವೀರನನ್ನು ಟೀಮಿನಲ್ಲಿ ಉಳಿಸಿಕೊಂಡಿತು. ಆ ಕಾರಣದಿಂದ ಪ್ರವಾಸ ರದ್ದಾಯಿತು. ಇದಕ್ಕೆ ದಕ್ಷಿಣ ಆಫ್ರಿಕ ಬಹಳ ದೊಡ್ಡ ಪ್ರಮಾಣದಲ್ಲಿ ಬೆಲೆ ಕೊಡಬೇಕಾಯಿತು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಕುರಿತ ಬರಹ ನಿಮ್ಮ ಓದಿಗೆ
ಒಂದು ಕಾಲದಲ್ಲಿ ದಕ್ಷಿಣ ಆಫ್ರಿಕ ಕ್ರಿಕೆಟ್ ಆಟದಲ್ಲಿ ಪ್ರಬಲವಾದ ದೇಶವಾಗಿತ್ತು. ಬರೀ ಬಿಳಿಯ ಜನರೇ ಆಡುತ್ತಿದ್ದ ಆ ದೇಶದಲ್ಲಿ ಒಳ್ಳೊಳ್ಳೆಯ ಆಟಗಾರರು ಅವರ ಬ್ಯಾಟಿಂಗ್ ಮತ್ತು ಬೋಲಿಂಗ್ ಪ್ರಸಿದ್ಧಿಯಾಗಿದ್ದರು. ಆ ಕಾಲದಲ್ಲಿ, ಅಂದರೆ ಸುಮಾರು 1960ವರೆಗೆ, ಯಾವ ದೇಶಗಳಲ್ಲಿ ಬರೀ ಬಿಳಿಯ ಆಟಗಾರರಿದ್ದ ಟೀಮ್‌ಗಳಿದ್ದವೋ ಅ ದೇಶಗಳ ಜೊತೆ ಮಾತ್ರ ಕ್ರಿಕೆಟ್ ಆಟ ಆಡುತ್ತಿದ್ದರು. ಆಗಿನ ಕಾಲದಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ದೇಶಗಳಲ್ಲಿ ಬಿಳಿ ಜನರೇ ಅವರ ದೇಶವನ್ನು ಪ್ರತಿನಿಧಿಸುತ್ತಿದ್ದರು.
ಕ್ರಮೇಣ ಸಂಯುಕ್ತ ರಾಷ್ಟ್ರಗಳ ಸಂಸ್ಥೆ ಇದನ್ನು ವರ್ಣಭೇದ ನೀತಿಯೆಂದು ಘೋಷಿಸಿತು. ವರ್ಣಭೇದ ಧೋರಣೆಯನ್ನು ಅನೇಕ ರಾಷ್ಟ್ರಗಳು ತಿರಸ್ಕರಿಸಿತು. ಇದು ಮಾನವ ಕುಲಕ್ಕೆ ವರ್ಣದಿಂದ ಆಗುವ ತಾರತಮ್ಯವೆಂದು ಭಾವಿಸಲಾಯಿತು. ಬೇರೆ ಬೇರೆ ದೇಶಗಳಲ್ಲಿ ಮಿಶ್ರಿತ ಆಟಗಾರರು ತಮ್ಮ ಪರಿಶ್ರಮದಿಂದ ಕ್ರಿಕೆಟ್ ಆಟದಲ್ಲಿ ಮುಂದೆ ಬರುತ್ತಿದ್ದರು.
1968ರಲ್ಲಿ ಒಬ್ಬ ದಕ್ಷಿಣ ಆಫ್ರಿಕಾದ ಆಟಗಾರ ಬಾಸಿಲ್ ಡಿಆಲಿವೇರ, ಇಂಗ್ಲೆಂಡಿನಲ್ಲಿ ಚೆನ್ನಾಗಿ ಆಡಿ ಅವರ ಪರಿಶ್ರಮದಿಂದ ಮುಂದೆ ಬಂದಾಗ ಇಂಗ್ಲೆಂಡ್ ಅವರನ್ನು ದಕ್ಷಿಣ ಆಫ್ರಿಕಾದ ಪ್ರವಾಸಕ್ಕೆ ಆಯ್ಕೆ ಮಾಡಿದರು. ಅವರನ್ನು ಆಯ್ಕೆ ಮಾಡಿದರೆ ಪ್ರವಾಸವನ್ನೇ ರದ್ದು ಮಾಡುವುದಾಗಿ ದಕ್ಷಿಣ ಆಫ್ರಿಕ ಬೆದರಿಕೆ ಹಾಕಿತು. ಅದಕ್ಕೆ ಸೊಪ್ಪುಹಾಕದೆ ಇಂಗ್ಲೆಂಡ್ ಡಾಲಿವೀರನನ್ನು ಟೀಮಿನಲ್ಲಿ ಉಳಿಸಿಕೊಂಡಿತು. ಆ ಕಾರಣದಿಂದ ಪ್ರವಾಸ ರದ್ದಾಯಿತು. ಇದಕ್ಕೆ ದಕ್ಷಿಣ ಆಫ್ರಿಕ ಬಹಳ ದೊಡ್ಡ ಪ್ರಮಾಣದಲ್ಲಿ ಬೆಲೆ ಕೊಡಬೇಕಾಯಿತು.
ಸಂಯುಕ್ತ ರಾಷ್ಟ್ರಗಳ ಸಂಸ್ಥೆ ದಕ್ಷಿಣ ಆಫ್ರಿಕಾವನ್ನು ರಾಜಕಾರಣ, ಆರ್ಥಿಕ, ಕ್ರೀಡಾ ಮತ್ತು ಸಂಸ್ಕೃತಿ ಚಟುವಟಿಕೆಗಳಿಂದ ಬಹಿಷ್ಕಾರ ಮಾಡಿದರು. ಸುಮಾರು 20 ವರ್ಷಗಳು ಈ ಬಹಿಷ್ಕಾರ ಜಾರಿಯಲ್ಲಿತ್ತು. ಇದರ ವಿರುದ್ಧ ಹೋರಾಡಿದ ನೆಲ್ಸನ್ ಮಂಡೇಲ ಅವರನ್ನು ಬಹಳ ವರ್ಷಗಳ ಕಾಲ ಬಂಧನದಲ್ಲಿಡಲಾಗಿತ್ತು.
ಕೊನೆಗೆ 27 ವರ್ಷ ಜೈಲಿನಲ್ಲಿದ್ದ ನೆಲ್ಸನ್ ಮಂಡೇಲ ಅವರನ್ನು 11 ಫೆಬ್ರವರಿಯಲ್ಲಿ 1990 ಬಿಡುಗಡೆ ಮಾಡಿದರು. ಇದರ ಜೊತೆಗೆ ವರ್ಣಭೇದ ನೀತಿಯನ್ನು ದಕ್ಷಿಣ ಆಫ್ರಿಕ ಮುಕ್ತಾಯ ಮಾಡಿತು. ಮಂಡೇಲ ಅವರ ನೇತೃತ್ವದಲ್ಲಿ ವರ್ಣ ಮಿಶ್ರಿತ ಸರ್ಕಾರವನ್ನು ರಚಿಸಲಾಯಿತು.
ವರ್ಣಭೇಧ ನೀತಿ ಲಾಗೂ ಮಾಡುವುದಕ್ಕೆ ಮುಂಚೆ ದಕ್ಷಿಣ ಆಫ್ರಿಕದ ಕ್ರಿಕೆಟ್ ಟೀಂ ಬಹಳ ಉನ್ನತ ಸ್ಥಾನದಲ್ಲಿತ್ತು. ಅವರಲ್ಲಿ ಪ್ರಸಿದ್ಧರಾದ ಆಟಗಾರರಾದ ಗ್ರೇಮ್ ಪೊಲ್ಲಾಕ್, ಪೀಟರ್ ಪೊಲ್ಲಾಕ್, ಹಿಲ್ಟನ್ ಆರ‍್ಮನ್, ಮೈಕ ಪ್ರೊಕ್ಟರ್, ಎಡ್ವರ್ಡ್ ಬರ‍್ಲೊ, ಬ್ಯಾರಿ ರಿಚರ್ಡ್ಸ್ ಅವರನ್ನು ಅತ್ಯುತ್ತಮ ಬ್ಯಾಟರ್ ಎಂದು ಪರಿಗಣಿಸಲಾಗಿತ್ತು.
ಹ್ಯು ಟಯ್ಫೀಲ್ಡ್ ದಕ್ಷಿಣ ಆಫ್ರಿಕದ ಆಫ್ ಸ್ಪಿನರ್ ಆಗಿದ್ದರು. ಅವರು 37 ಪಂದ್ಯಗಳನ್ನಾಡಿ 61 ಇನಿಂಗ್ಸಿನಲ್ಲಿ 25.9ರ ಸರಾಸರಿಯಲ್ಲಿ 170 ವಿಕೆಟ್ ತೆಗೆದರು. ಅವರ ಒಮ್ಮೆ ಮಾಡಿದ 9/113 ಅವರ ಬೋಲಿಂಗ್ನ ಅತ್ಯುತ್ತಮ ಪ್ರದವಾಗಿತ್ತು.
ಅಲನ್ ಡೊನಾಲ್ಡ್ ಅವರ ವೇಗದ ಬೋಲಿಂಗ್ ಆಡುವುದಕ್ಕೆ ಅನೇಕ ಬ್ಯಾಟ್ಸಮನ್‌ಗಳು ಹೆದರುತ್ತಿದ್ದರು. ‘ವೈಟ್ ಲೈಟನಿಂಗ್’ ಎಂದು ಕರೆಯಲ್ಪಡುತ್ತಿದ್ದ ಡೊನಾಲ್ಟ್‌ರ ಬೋಲಿಂಗ್ ಸಾರಾಂಶ ಹೀಗಿತ್ತು. 72 ಟೆಸ್ಟ್ ಆಡಿ 129 ಇನಿಂಗ್ಸ್‌ನಲ್ಲಿ ಅವರು ಸರಾಸರಿ 22.25ರಲ್ಲಿ 330 ವಿಕೆಟ್ ಗಳಿಸಿದರು. ಅವರ ಅತ್ಯುತ್ತಮ ಪ್ರದರ್ಶನ 8/71 ರನ್ ಆಗಿತ್ತು.
ಜಾಕ್ ಕಾಲಿಸ್ ದಕ್ಷಿಣ ಆಫ್ರಿಕಾದ ಅತ್ಯುತ್ತಮ ಆಲ್ ರೌಂಡರ್ ಆಗಿದ್ದರು. 166 ಮ್ಯಾಚ್‌ಗಳಲ್ಲಿ ಅವರು 55.4 ಸರಾಸರಿಯಿಂದ ಅವರು 13289 ರನ್ ಹೊಡೆದರು. ಅವರು 292 ವಿಕೆಟ್‌ಗಳನ್ನು ತೆಗೆದು ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಆಲ್- ರೌಂಡರ್ ಎನಿಸಿಕೊಂಡರು.
ಇತ್ತೀಚೆಗೆ ಆಡಿದ ಆಟಗಾರರಲ್ಲಿ ಗ್ರೇಮ್ ಸ್ಮಿತ್, ಜಾಂಟಿ ರೋಡ್ಸ್, ಎ.ಬಿ. ಡಿವಿಲಿಯರ್ಸ್ ಮುಂತಾದವರು ಭಾರತಕ್ಕೆ ಬಂದು ಟೆಸ್ಟ್ ಮ್ಯಾಚ್‌ಗಳನ್ನು ಆಡಿದ್ದಾರೆ. ಈಗೀಗ ಐಪಿಎಲ್ ಕಪ್ ಮ್ಯಾಚುಗಳಿಗೂ ಬಂದು ಆಡಿದ್ದಾರೆ.
ದಕ್ಷಿಣ ಆಫ್ರಿಕ 1991ರಲ್ಲಿ ವರ್ಣಭೇದ ನೀತಿ ಮುಕ್ತಾಯಗೊಳಿಸಿ ಕ್ರಿಕೆಟ್‌ನ ವನವಾಸ ಮುಗಿಸಿ ಮೊದಲ ಬಾರಿ ಕ್ರಿಕೆಟ್ ಆಟ ಮತ್ತೆ ಶುರುಮಾಡಿದಾಗ ಮೊಟ್ಟ ಮೊದಲು ಭಾರತಕ್ಕೆ ಬಂದು ಆಡಿದರು. ಇನ್ನೊಮ್ಮೆ ಅವರು ಪ್ರವಾಸಕ್ಕೆ ಬಂದಾಗ ಹ್ಯಾನ್ಸಿ ಕ್ರೋನ್ಯೆ ದಕ್ಷಿಣ ಆಫ್ರಿಕಾದ ನಾಯಕನಾಗಿದ್ದರು. ಆಗ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿ ಬಿದ್ದು ಅವರನ್ನು ಕ್ರಿಕೆಟ್ ಆಟದಿಂದ ಬಹಿಷ್ಕಾರ ಮಾಡಲಾಯಿತು. ಜೈಲಿನಿಂದ ಹೊರಬಂದ ಸ್ವಲ್ಪ ವರ್ಷಗಳಲ್ಲಿಯೇ ಒಂದು ವಿಮಾನದ ದುರ್ಘಟನೆಯಲ್ಲಿ ಕ್ರೋನ್ಯೆ ಕಾಲವಾದರು.
ದಕ್ಷಿಣ ಆಫ್ರಿಕ ಒಂದು ಕಾಲದಲ್ಲಿ ಕ್ರಿಕೆಟ್ ಆಟದಲ್ಲಿ ಪ್ರಬಲವಾಗಿತ್ತು. ಅವರ ದಾಖಲೆಯೂ ಬಹಳ ಚೆನ್ನಾಗಿತ್ತು. ಅವರ ವರ್ಣಭೇಧ ನೀತಿಯಿಂದ ಸುಮಾರು 20 ವರ್ಷಗಳು ಬಹಿಷ್ಕಾರವಾಗಿ 1991ರಲ್ಲಿ ಮತ್ತೆ ತನ್ನ ಕ್ರಿಕೆಟ್ ಪ್ರವಾಸವನ್ನು ಶುರುಮಾಡಿಕೊಂಡಿದೆ. ಆದರೆ ತನ್ನ ಮೊದಲ ಪ್ರಬಲವಾದ ಸ್ಥಾನಕ್ಕೆ ತಲುಪಲು ಇನ್ನೂ ಶ್ರಮ ಪಡಬೇಕಾಗುತ್ತೆ. ಆದರೆ ತನ್ನ ಬಣ್ಣದ ನೀತಿಯನ್ನು ಮುಕ್ತಾಯಗೊಳಿಸಿ ಬೇರೆ ರಾಷ್ಟ್ರಗಳ ಜೊತೆ ಸಂಬಂಧ ಬೆಳೆಸಿಕೊಂಡಿರುವುದು ಬಹಳ ಮಹತ್ತರವಾದದ್ದು. ಅದರ ಉಪಯೋಗ ಮುಂದಿನ ವರ್ಷಗಳಲ್ಲಿ ಕಾಣಿಸುತ್ತೆ. ಅದು ಖಚಿತ.
ಫಿಲಿಪ್ಸ್ ಕಂಪನಿಯಿಂದ ನಿವೃತ್ತರಾದ ನಂತರ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರು `ಶಂಕರ್ಸ್ ವೀಕ್ಲಿ’ಯಲ್ಲಿ ಹಾಸ್ಯ ಲೇಖನವನ್ನು ಬರೆಯುತ್ತಿದ್ದರು. ಈಗ ಅಪರಂಜಿ ಮಾಸಿಕ ಪತ್ರಿಕೆಗೆ ಹಾಸ್ಯ ಲೇಖನ ಬರೆಯುತ್ತಾರೆ. ಚುರುಮುರಿ, ಹಿಂದುಸ್ತಾನ್ ಟೈಮ್ಸ್, ಸಿಎನೆನ್ ಮತ್ತು ನ್ಯೂಸ್ ೧೮ ನಲ್ಲಿಯೂ ಅವರ ಲೇಖನಗಳು ಪ್ರಕಟವಾಗಿವೆ. ‘ಅಜ್ಜಿ ಮತ್ತು ಇತರ ಕತೆಗಳು’ ಅವರ ಪ್ರಕಟಿತ ಕೃತಿ.