ನಾವು ಮೇಲೆ ಹೋದಂತೆಲ್ಲಾ ಮಗಿಲಿನೆತ್ತರಕ್ಕೆ ತೇಲಿ ಹೋದಂತೆ, ಈವರೆಗೂ ಕಂಡಿರದ ವಿಸ್ಮಯ ಲೋಕವೊಂದನ್ನು ಬೆನ್ನಟ್ಟಿ ಹೋಗುವಂತೆ ಅನ್ನಿಸುತ್ತಿತ್ತು. ಕಾಡಿನ ಎಳೆಬಿಸಿಲು ರಚ್ಚೆ ಹಿಡಿದ ಮಗುವಿನಂತೆ ಮೆತ್ತಗಾಗಿದ್ದರೂ, ಅದರ ಪ್ರಖರತೆಗೆ ಮೈಯೆಲ್ಲಾ ಆಗಲೇ ಬೆವರಾಗಿತ್ತು. ಕಾಡಿನ ಏರು ಏರಿಕೊಂಡು ಹೋದರೆ, ದೂರದಿಂದ ಕಾಣುತ್ತಿದ್ದ ಅಜ್ಜಿಕುಂಜ ಪರ್ವತದ ಸೆರಗು, ಬಾಹುಬಲಿ ಬೆಟ್ಟದ ಅಸ್ಪಷ್ಟ ದೃಶ್ಯಗಳು ಜಿಗ್ ಅಂತ ಕಂಡು, ಕೊನೆಗೆ ಮೋಡದಲ್ಲಿ ಮರೆಯಾಗಿ ಹೋಯ್ತು.ಅಲ್ಲೊಂದು ಮರದ ನೆರಳಿನಲ್ಲಿ ಕೂತು ಸುಸ್ತಿನ ನಿಟ್ಟುಸಿರು ಬಿಟ್ಟು, ಮಗಿಲಿನೆತ್ತರಕ್ಕೆ ನೋಡಿದೆವು.
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಹದಿಮೂರನೆಯ ಕಂತು.

 

ನಾವು ಮಾಳದ ಮುಂಜಾವಿನ ಮಂಜಿನಲ್ಲಿ ಚಹಾ ಹೀರಿ ಕುರಿಂಗಲ್ ಬೆಟ್ಟದ ದಾರಿ ಹಿಡಿದು ಹೊರಟಾಗ ಕಾಡಿನ ಘೋರ ಮೌನದಲ್ಲಿ ಸಿಳ್ಳಾರ ಹಕ್ಕಿ ಬಿಟ್ಟೂ ಬಿಡದೇ ಸಿಳ್ಳೆ ಹೊಡೆಯುತ್ತಿತ್ತು. ಒಮ್ಮೆಲೇ ಸಿಳ್ಳು ನಿಲ್ಲಿಸಿ ಒಂದು ವಿರಾಮ ಕೊಟ್ಟು, ಮತ್ತೆ ಸಿಳ್ಳೆ ಹೊಡೆಯಲು ಶುರು ಮಾಡುತ್ತಿತ್ತು. ಚಳಿಗಾಲದ ಇಂತಹ ರಮ್ಯ ಬೆಳಗಿನಲ್ಲಿ ಸಿಳ್ಳೆ ಹಕ್ಕಿಯ ದೀರ್ಘ ಸಿಳ್ಳೆ ಕೇಳುವ ಸುಖವಿದೆಯಲ್ಲವಾ, ಅದು ಬೇರೆ ಯಾವ ಸ್ವರ್ಗದಲ್ಲಿಯೂ ಕೇಳಲು ಸಾಧ್ಯವಿಲ್ಲ ಅನ್ನಿಸುತ್ತದೆ. ಕನ್ನಡದಲ್ಲಿ ಗೋಪಿ ಹಕ್ಕಿ, ಸಿಳ್ಳಾರ, ಇಂಗ್ಲೀಷ್ ನಲ್ಲಿ ವಿಸ್ಲಿಂಗ್ ಬರ್ಡ್, ಅಂತೆಲ್ಲಾ ಕರೆಯಲ್ಪಡುವ ಈ ಹಕ್ಕಿಯ ಇನ್ನೊಂದು ಹೆಸರು ವಿಸ್ಲಿಂಗ್ ಸ್ಕೂಲ್ ಬಾಯ್ ಅಂತ ಗೆಳೆಯರೊಬ್ಬರು ಹೇಳಿದ್ದು ನೆನಪಾಗಿ, ಕೂಡಲೇ ನಾನೂ ಶಾಲೆಯ ಹುಡುಗನಾದೆ. ಶಾಲೆಗೆ ಹೋಗುವಾಗ ಹುಡುಗನೊಬ್ಬ ಏಕಾಂತದಲ್ಲಿ ಸಿಳ್ಳೆ ಹಾಕಿ ಶಾಲೆಯ ದಾರಿ ಹಿಡಿಯುತ್ತಾನಲ್ವಾ? ಅದೇ ತರಹ ಈ ಹಕ್ಕಿಯೂ ಸಿಳ್ಳೆ ಹಾಕುತ್ತದೆ.

ಚಳಿಗಾಲದ ನಸುಕಿನಲ್ಲಿ ನಮ್ಮೂರಿನ ಯಾವ ಕಾಡ ದಾರಿಗೆ ಹೋಗಿ ಕಿವಿಕೊಟ್ಟರೂ ಸಿಳ್ಳಾರ ಹಕ್ಕಿಯ ಸಿಳ್ಳೆ ಕೇಳಿ ಕಿವಿ ನಿಮಿರುತ್ತದೆ. ಮನಸ್ಸು ವಿಚಿತ್ರ ಆನಂದ ಪಡುತ್ತದೆ. ಆ ಬೆಳಗ್ಗೆ ಸುತ್ತಲೂ ಒಂಥರಾ ವಿಚಿತ್ರ ಚಳಿಯಿದ್ದುದರಿಂದ ಮತ್ತು ಕಾಡಿನಲ್ಲಿ ಚಳಿಗಾಲದಲ್ಲಷ್ಟೇ ಆಗುವ ಆವರ್ತನಗಳು, ಸದ್ದುಗಳು ಆಗುತ್ತಿದ್ದುದರಿಂದ ಸಿಳ್ಳಾರ ಹಕ್ಕಿ ಆ ಪರಿಸರಕ್ಕೆ ತಕ್ಕುದಾಗಿ ತನ್ನ ಸಿಳ್ಳೆಯ ಶ್ರುತಿಯನ್ನು ಏರಿಸುತ್ತಾ, ಇಳಿಯುತ್ತಾ, ಕೊನೆಗೆ ಹೊಸದಾಗಿ ರಾಗ ಸಂಯೋಜಿಸುತ್ತಾ, ಇಡೀ ಮಾಳದ ಕಾಡಿನ ನಸುಕಿನಲ್ಲಿ ತನ್ನ ಉದಯರಾಗದ ಕಚೇರಿ ಶುರುಮಾಡಿಬಿಟ್ಟಿತ್ತು. ನಾವು ಮಾಳದ ಒಂದಷ್ಟು ಚಾರಣಾಸಕ್ತರು ಆ ಬೆಳಗ್ಗೆ ಕಾಡಿನ ಗಾಢವಾದ ದಾರಿಯನ್ನು ಬಳಸಿ ಕುರಿಂಗಲ್ಲು ಬೆಟ್ಟಕ್ಕೆ ಹೋಗುವುದೆಂದೂ, ಬೆಟ್ಟದ ತಪ್ಪಲಿಗೆ ಕರೆದೊಯ್ಯುವ ಈ ಸುತ್ತು ಬಳಸು ದಾರಿಯಲ್ಲಿ ಸಾಗುವುದು ತುಂಬಾ ತ್ರಾಸವಾದರೂ ಈ ದಾರಿಯಲ್ಲಿ ಸಾಗುವುದು ಒಂಥರಾ ಮಜವೆಂದೂ ನಿರ್ಧರಿಸಿ, ಆ ದುರ್ಗಮ ಕಾಡಿನ ದಾರಿಯನ್ನು ಹಿಡಿದು ಏರುತ್ತಾ ಸಾಗಿದೆವು. ನಮ್ಮ ಎಲ್ಲಾ ಮಾಳದ ಕಥಾನಕಗಳಿಗೆ ದಾರಿಯಾಗುತ್ತ, ಮಾಳ ಕಾಡಿನ ವ್ಯಥೆಗಳನ್ನು, ಅಲ್ಲಿ ನೆಲೆಸಿರುವ ಒಂಟಿ ಮನೆಗಳ ಕಥೆಗಳನ್ನು ಆಗಾಗ ಹೇಳುತ್ತಿದ್ದ ರಾದಾಕೃಷ್ಣ ಜೋಶಿಯವರೂ ಸೇರಿದಂತೆ, ಒಂದಷ್ಟು ಕಾಡನ್ನು ಪ್ರೀತಿಸುವ ಮನಸ್ಸುಗಳ ಜೊತೆ ಕುರಿಂಗಲ್ಲು ಏರುವ ಕನಸು ಇನ್ನಷ್ಟು ವಿಸ್ತರಿಸತೊಡಗಿತು.

ಮಾಳ ಜಲಪಾತ, ಕಾಡಿನಲ್ಲಿ ಧಾರೆ ಧಾರೆಯಾಗಿ ಬೀಳುತ್ತಿರುವ ಸದ್ದು, ಎಷ್ಟೋ ದೂರದಲ್ಲಿ ಗಾಳಿಯೊಂದು ಸುಯ್ಯನೇ ಬೀಸಿ ನಮಗೆ ಹತ್ತಿರತ್ತಿರವಾಗುತ್ತಿರುವ ಸದ್ದು, ಒಂದಷ್ಟು ಜಾತಿಯ ಹಕ್ಕಿಗಳೆಲ್ಲವೂ ನಮ್ಮ ಹೆಜ್ಜೆ ಸಪ್ಪಳ ಕೇಳುತ್ತ ಗಾಭರಿಯಾಗಿ ಹಾರಿ ದೂರದಿಗಂತದಲ್ಲಿ ತೇಲಿ ಹೋದ ಸದ್ದು, ಎಲ್ಲವೂ ಕೇಳುತ್ತ ಕೇಳುತ್ತ, ನಮಗೆ ಮುತ್ತು ಕೊಡುವಂತೆ ಹಾರಿಹೋಗುವ ಪಾತರಗಿತ್ತಿಗಳನ್ನು, ಬೆಳಗಾತ ಮಂಜಿನ ಮುದ್ದೆಯ ನಡುವೆ ಬಲೆ ಹೆಣೆಯುತ್ತಿರುವ ಜೇಡದ ಸಂಸಾರವನ್ನು, “ನನ್ನನ್ನು ಹುಡುಕಲು ನಿಮಗೆ ಖಂಡಿತ ಸಾಧ್ಯವಿಲ್ಲ, ಈಗ ಹುಡುಕಿ ನೋಡುವ” ಅಂತ ಕಣ್ಣಾಮುಚ್ಚಾಲೆಯಾಡುತ್ತ ತನ್ನದೇ ಬಣ್ಣದ ಹುಲ್ಲಿನ ರಾಶಿಯಲ್ಲಿ ಮರೆಯಾಗುತ್ತಿರುವ ಹಸಿರುಹಾವು, ಹಸುರು ಮಿಡತೆಗಳನ್ನು ನೋಡುತ್ತ ಸಾಗಿದರೆ, ಕಾಡು ಅದೆಷ್ಟು ದೊಡ್ಡ ಜೀವಂತಿಕೆಯ ಜಗತ್ತು ಅನ್ನಿಸಿಬಿಡುತ್ತದೆ. ಸುಮ್ಮನೇ ನೋಡಿದರೆ, ಕಿವಿಗೊಟ್ಟು ಆಲಿಸಿದರೆ, ಹೆಜ್ಜೆ ಇಟ್ಟು ನಡೆದರೆ, ಕತ್ತೆತ್ತಿ ಇಣುಕಿದರೆ ಕಾಡಿಗಿಂತ ದೊಡ್ಡ ಶಿಕ್ಷಣ ಬೇರೆಲ್ಲಿಯೂ ಸಿಗಲಾರದು, ಇಲ್ಲಿನ ಪ್ರತೀ ಹೆಜ್ಜೆಗಳಲ್ಲಿಯೂ ಕಲಿಯೋದು ಸಾಕಷ್ಟಿದೆ.

ನಾವೀಗ ಒಂದಷ್ಟು ಪೊದೆಗಳನ್ನು ದಾಟಿ, ಮಾಳ ಕಥಾನಕದಲ್ಲಿ ಈಗಾಗಲೇ ಬಂದ ಕೆಲವು ಮನೆಗಳನ್ನು ದಾಟಿ ಬರ್ವೆ ಅವರ ಹೆಂಚಿನ ಮನೆ ದಾರಿಗೆ ತಲುಪಿದೆವು. ಆ ಮನೆಯ ಹಿನ್ನೆಲೆಯಲ್ಲಿ ಕುರಿಂಗಲ್ಲು ಬೆಟ್ಟ ದೊಡ್ಡಾಗಿ ನಿಂತಿತ್ತು. ಅಲ್ಲಿ ಆ ಬೆಳಗ್ಗೆ ಒಂದಷ್ಟು ಮಂಜು ಹೆಪ್ಪುಗಟ್ಟಿ, ಆಗ ತಾನೇ ಕಡಿದ ಕೆನೆ ಮೊಸರಿನಂತೆ ಕಾಣುತ್ತಿತ್ತು. ಒಂದಷ್ಟು ಮುಂದೆ ಸಾಗಿದ ಮೇಲೆ, ಮುದಿ ಸರಕಾರಿ ಶಾಲೆಯೊಂದು ಕಾಡಿನ ಹೊಸ ಹಗಲಿನಲ್ಲಿ ತನ್ನೆಲ್ಲಾ ಹುಳುಕುಗಳನ್ನು ತೋರಿಸುತ್ತ ನಿಂತಿತ್ತು. ಮುಂದೆ ಗುಂಪಿನಲ್ಲಿ ಸಾಗುತ್ತಿದ್ದ ಜೋಶಿಯವರು, ಈಗ ಒಮ್ಮೆಲೇ ನಿಂತು, “ನೋಡಿ ನಾನು ಡ್ಯೂಟಿ ಮಾಡಿದ ಶಾಲೆ ಇದು, ಇಡೀ ಶಾಲೆಯಲ್ಲಿ ಇದ್ದಿದ್ದೇ ೧೦-೧೫ ಮಕ್ಕಳು, ಅದೂ ಬಂದರೆ ಬಂದ್ರು ಇಲ್ಲದಿದ್ದರೆ ಇಲ್ಲ, ಪಾಠ ಮಾಡಲು ಬರುವಾಗ ಮನೆಯಿಂದ ಒಂದಷ್ಟು ತಿಂಡಿಗಳನ್ನು, ಚಾಕ್ಲೇಟ್ ಗಳನ್ನು ತರ್ತಿದ್ದೆ, ಆ ಮಕ್ಕಳು ಖುಷಿಯಿಂದ ತಿನ್ನುತ್ತಿದ್ದರು. ಆದರೆ ಮಳೆಗಾಲದಲ್ಲಿ ಈ ಶಾಲೆಯ ಪರಿಸ್ಥಿತಿ ಭಯಾನಕವಾಗಿರುತ್ತಿತ್ತು.


ಸುತ್ತಲೂ ರೌದ್ರಾವತಾರದ ಮಳೆ, ಮಾಳ ಕಾಡಿನ ಮಳೆ ಅಂದ್ರೆ ಗೊತ್ತಲ್ವಾ? ಒಂದೇ ಸಮನೆ ಸುರಿಯುತ್ತಿರುತ್ತದೆ. ಗಾಳಿ, ಸಿಡಿಲು ಬಂದ್ರಂತೂ ಈ ಶಾಲೆಯಲ್ಲಿ ಮಕ್ಕಳ ಜೊತೆ ಜೀವ ಕೈಯಲ್ಲಿ ಹಿಡಿದು ಕೂರಬೇಕಿತ್ತು. ಹಂಚಿನ ಮರೆಯಿಂದ ಇಣುಕಿದರೆ ಇಡೀ ಕಾಡು, ಆ ಮಳೆಗೆ ಭಯಂಕರವಾಗಿಯೂ, ಸುಂದರವಾಗಿಯೂ ಕಾಣಿಸುತ್ತಿತ್ತು. ಅಬ್ಬಾ ಆ ದೃಶ್ಯ, ನಾನು ಈ ಶಾಲೆಯಲ್ಲಿ ಮಾಡಿದ ಮೊದಲ ಸರ್ವೀಸು ಈಗಲೂ ರೋಚಕ ನನಗೆ, ಮುಂದೆ ಮಕ್ಕಳಿಲ್ಲದೇ ಈ ಶಾಲೆ ಪೂರ್ತಿ ಮುಚ್ಚಿತು” ಅನ್ನುತ್ತಾ ಶಾಲೆ ತೋರಿಸಿದರು. ಆವತ್ತು ತನ್ನ ತೂತಾದ ಮೈಯ ಮರೆಯಿಂದ ಮಳೆ ಕಾಣಿಸುತ್ತಿದ್ದ ಹಂಚುಗಳು, ಇವತ್ತು ಉದುರಿಬಿದ್ದಿದ್ದವು. ಕನ್ನಡ ಶಾಲೆಯ ಭವ್ಯ ಗೋಡೆಗಳಲ್ಲಿ ಪೊದೆಗಳು ಹರಡಿದಿದ್ದವು. ಆವತ್ತು ಹತ್ತು ಜನರಿದ್ದರೂ ಪುಟ್ಟ ಮಕ್ಕಳ ಕಲರವದಿಂದ ತುಂಬಿಕೊಂಡಿರುತ್ತಿದ್ದ ತರಗತಿ ಕೋಣೆಯಲ್ಲಿ ಇವತ್ತು ಕಾಡಿನ ನಿಶ್ಚಿಲ ಮೌನ ಸುರಿದು ಇಡೀ ಶಾಲೆ ಒಂದು ಪ್ರಾಚೀನ ಅವಶೇಷದಂತೆ ಭಾಸವಾಗುತ್ತ, ಗತಕಾಲದ ಕನ್ನಡ ಶಾಲೆಯ ಸೊಗಸಿನ ಕತೆ ಹೇಳುತ್ತ ನಿಂತಿತ್ತು.

ಮತ್ತೆ ಹಾಗೇ ಮುಂದುವರಿದರೆ ಮೊದಲು ಪೊದೆಪೊದೆಯಂತೆ ಕಾಣುತ್ತಿದ್ದ ದಾರಿ, ಕೊನೆಕೊನೆಗೆ ದಟ್ಟ ಕಾಡಿಗೆ ಕರೆದೊಯ್ಯುತ್ತಲೇ ಇತ್ತು. ಆಗಷ್ಟೇ ಚಳಿಯ ಹಾಸಿಗೆಯಿಂದ ಎದ್ದ ಸೂರ್ಯನ ಎಳೆ ಎಳೆ ಬಿಸಿಲು, ಕತ್ತಲ ಕಾಡಿನ ಮರಗಳೆಡೆಗಳಿಂದ ಒಂದೇ ಸಮನೆ ಇಣುಕುಲು ಶುರಮಾಡಿದವು. ಒಮ್ಮೆಲೇ ಮಬ್ಬು ಮಬ್ಬಾಗಿದ್ದ ಕಾಡಿನಲ್ಲಿ ನಾವು ನಡೆಯುತ್ತಲೇ ಸಾಗಿದಾಗ, ಜಿಗ್ ಅಂತ ಸೂರ್ಯನ ಬೆಳಕು ಮೂಡಿ, ದಾರಿಯಲ್ಲಿ ಹಾಸಿಗೆಯಂತೆ ಸುರಿದಿದ್ದ ಬಣ್ಣ ಬಣ್ಣ ತರಗೆಲೆಗಳ ಮೇಲೆ, ತೆಂಗಿನ ಗರಿಗಳ ಮೇಲೆ, ಅಪರೂಪದ ಮರದ ಗೆಲ್ಲುಗಳ ಮೇಲೆ, ನಮ್ಮ ಪಕ್ಕಕ್ಕೆ ಕೇರೆ ಹಾವಿನಂತೆ ನುಸುಳಿಕೊಂಡು ಅವಸರವಸರವಾಗಿ ಹಾಯುತ್ತಿದ್ದ ತೊರೆಯ ನೀರಿನ ಮೇಲೆ ಬಿದ್ದು, ಕಾಡೆಲ್ಲಾ ಜಿಗ್ ಅಂತ ಬೆಳಗಿತು. ಕಾಡಲ್ಲಿ ಬಿಸಿಲು ತನ್ನ ದಿನಚರಿ ಶುರುಮಾಡುವ ಹೊತ್ತಿದೆಯಲ್ವಾ, ಅದು ಸೂರ್ಯ ಕಾಡಿನ ಸಕಲ ಜೀವ ಸಂಕುಲಗಳನ್ನು ವರಿಸುವ ಅಮೂರ್ತ ಕ್ಷಣ.

ನಾವೀಗ ತುಂಬಾ ಮುಂದೆ ಬಂದಿದ್ದೆವು. ಒಂದಷ್ಟು ಕಾಡಿನ ಪುಟ್ಟ ಪುಟ್ಟ ಮನೆಗಳು, ನಾವು ನಡೆಯುತ್ತಾ ಹೋದಂತೆಲ್ಲಾ ದೂರ ದೂರವಾಯಿತು. ದಟ್ಟ ವೃಕ್ಷ ಸಮೂಹಗಳೇ ತುಂಬಿದ್ದ, ಕಾಡಿನ ಅಷ್ಟೂ ಹಕ್ಕಿಗಳಿಗೆ ನೆರಳು ನೀಡುತ್ತಿದ್ದ ದೊಡ್ಡ ಆಲದ ಮರಗಳು ಅರಳೀಮರಗಳು, ಹಲಸಿನ ಮರಗಳು,ಇನ್ನೂ ಯಾವುದ್ಯಾವುದೋ ಅಪೂರ್ವ ಜಾತಿಯ ಮರಗಳೆಲ್ಲಾ ಉದ್ದಕ್ಕೆ ತಮ್ಮ ಕತ್ತು ಹಿಗ್ಗಿಸಿಕೊಂಡು ಆಕಾಶದತ್ತ ಮಿಕಿ ಮಿಕಿ ನೋಡುತ್ತಿದ್ದವು. ನಾವು ಮೇಲೆ ಹೋದಂತೆಲ್ಲಾ ಮಗಿಲಿನೆತ್ತರಕ್ಕೆ ತೇಲಿ ಹೋದಂತೆ, ಈವರೆಗೂ ಕಂಡಿರದ ವಿಸ್ಮಯ ಲೋಕವೊಂದನ್ನು ಬೆನ್ನಟ್ಟಿ ಹೋಗುವಂತೆ ಅನ್ನಿಸುತ್ತಿತ್ತು. ಕಾಡಿನ ಎಳೆಬಿಸಿಲು ರಚ್ಚೆ ಹಿಡಿದ ಮಗುವಿನಂತೆ ಮೆತ್ತಗಾಗಿದ್ದರೂ, ಅದರ ಪ್ರಖರತೆಗೆ ಮೈಯೆಲ್ಲಾ ಆಗಲೇ ಬೆವರಾಗಿತ್ತು. ಕಿತ್ತಳೆ ಸ್ವಾದದ ಒಂದು ಚಾಕ್ ಲೇಟನ್ನು ಬಾಯಿಗಿಟ್ಟಿದ್ದೇ ಜೀವ ಹಾಯಾಯಿತು. ಮತ್ತೆ ಕಾಡಿನ ಏರು ಏರಿಕೊಂಡು ಹೋದರೆ, ದೂರದಿಂದ ಕಾಣುತ್ತಿದ್ದ ಅಜ್ಜಿಕುಂಜ ಪರ್ವತದ ಸೆರಗು, ಬಾಹುಬಲಿ ಬೆಟ್ಟದ ಅಸ್ಪಷ್ಟ ದೃಶ್ಯಗಳು ಜಿಗ್ ಅಂತ ಕಂಡು, ಕೊನೆಗೆ ಮೋಡದಲ್ಲಿ ಮರೆಯಾಗಿ ಹೋಯ್ತು. ಮತ್ತೆ ದಾರಿ ಸಾಗಿ ಕೊನೆಗೆ ತಲುಪಿದ್ದು ರಾಶಿ ರಾಶಿ ನೆಲ್ಲಿಕಾಯಿ ಮರಗಳಿಂದ ತುಂಬಿದ, ನೆಲವೆಲ್ಲ ದಪ್ಪಗಿನ ಹುಲ್ಲು ಹಾಸಿಕೊಂಡ ಕಾಡಿನ ಬಯಲು ಬಯಲಾದ ದಾರಿಗೆ. ಅಲ್ಲೊಂದು ಮರದ ನೆರಳಿನಲ್ಲಿ ಕೂತು ಸುಸ್ತಿನ ನಿಟ್ಟುಸಿರು ಬಿಟ್ಟು, ಮಗಿಲಿನೆತ್ತರಕ್ಕೆ ನೋಡಿದೆವು. ಅಬ್ಬಾ ಆಕಾಶಕ್ಕೆ ಇನ್ನೇನು ತಾಗಿತೇನೋ ಎನ್ನುವಂತೆ ನಿಂತ ಕುರಿಂಗೆಲ್ ಬೆಟ್ಟದ ದೊಡ್ಡ ದೊಡ್ಡ ಬಂಡೆಗಳು ಹಸಿರಿನ ಉಂಡೆಯಂತೆ ಅಸ್ಪಷ್ಟವಾಗಿ ಕಾಣುತ್ತಿದ್ದವು. ಅಲ್ಲೊಂದು ಬಂಡೆಗಳ ನಡುವೆ ಆತ ತಾನೇ ಹುಟ್ಟಿಕೊಂಡ ಪ್ರೀತಿಯಂತೆ ನಿಂತಿದ್ದ ಒಂಟಿ ಮರ ಕಂಡಿತು. ಆ ಜಾಗದಲ್ಲಿ ಎಷ್ಟೋ ಸಮಯದಿಂದ ನಿಂತುಕೊಂಡು ಎತ್ತರದ ಕನಸು ಕಾಣುತ್ತಿರುವ ಆ ಮರ ನೋಡುತ್ತಿದ್ದರೆ ನಾವೂ ಎಷ್ಟೋ ವರ್ಷಗಳ ಹಿಂದಕ್ಕೆ ಹೋದಂತೆ ಅನ್ನಿಸುತ್ತದೆ.

ಕಾಡಿನಲ್ಲಿ ಒಂದೇ ರಭಸದಲ್ಲಿ ನಡೆದು, ಬೆವರಾಗಿ, ಮೈಯೆಲ್ಲಾ ಜಢವಾಗಿ ಕೊನೆಗೆ ಯಾವುದೋ ಒಂದು ಮರದ ನೆರಳಲ್ಲಿ ಕೂತು, ಮತ್ತೆ ನಾವು ಬಂದ ದಾರಿಯನ್ನೇ ನೋಡುತ್ತೇವಲ್ಲಾ, ಆ ಕ್ಷಣ ನಿಜಕ್ಕೂ ರೋಚಕ. “ನೋಡಿ ದಣಿವಿನಲ್ಲಿ ಸುಖ ಕೊಡುವುದು ಕಾಡು ಮಾತ್ರ ಅನ್ನಿಸುತ್ತದೆ, ಮರ ಇದ್ದುದರಿಂದ ನಮ್ಮ ಆಯಾಸ ಪರಿಹಾರವಾಗಿದೆ, ಒಂದು ಮರ ಅದೆಷ್ಟು ನೆರಳು ಕೊಡುತ್ತದೆ, ಅದೆಷ್ಟು ಸಮಾಧಾನ ಕೊಡುತ್ತದೆ ಅಲ್ವಾ, ಆದ್ರೂ ನಾಡಿನಲ್ಲಿ ಈ ಸಮಾಧಾನವನ್ನೇ ಕಡಿಯುತ್ತಿದ್ದೇವೆ “ಎಂದು ಹಗುರನೇ ಜೋಶಿಯವರು ಹೇಳಿದಾಗ, ಪೇಪರ್ ನಷ್ಟು ತೆಳುವಾದ ಬೆಳ್ಳಗಿನ ಪೇಪರ್ ಚಿಟ್ಟೆಗಳು ನಮ್ಮ ಸುತ್ತ ಗಿರಕಿ ಹೊಡೆಯುತ್ತಾ ಕೊನೆಗೆಲ್ಲೋ ಮರೆಯಾಯ್ತು. ನಾವು ಮರದ ನೆರಳಿನಲ್ಲೇ ಕೂತು ತಂದಿದ್ದ ತಿಂಡಿಯನ್ನು ಹೊಟ್ಟೆಗಿಳಿಸುತ್ತ ಉಪಾಹಾರ ಮುಗಿಸಿದೆವು. ಮತ್ತೆ ಒಂದಷ್ಟು ನೆರಳಿನಲ್ಲಿ, ಬಿಸಿಲಿನಲ್ಲಿ, ಜಲಪಾತದ ನೀರಿನಲ್ಲಿ ನಮ್ಮ ಪಯಣ ಸಾಗುತ್ತಲೇ ಇತ್ತು. “ಇನ್ನೂ ಎಷ್ಟು ದೂರವಿದೆ ಕುರಿಂಗೆಲ್” ನಮ್ಮ ಗುಂಪಿನಲ್ಲೊಂದು ದಣಿವಿನ ದನಿ ಕೇಳಿಸಿತು.

“ಎಷ್ಟು ಅಂತ ಹೇಳೋದು ನಡೆದಷ್ಟು ದೂರ. ಕಿ.ಮೀ. ಗಿ.ಮೀ ಅಂದಾಜಾಗಲ್ಲ, ಬೆಟ್ಟದ ನೆತ್ತಿ ತುಂಬಾ ಹತ್ತಿರ ಕಂಡರೆ ಬಂತಂತ ಅರ್ಥ” ಎಂದಿತು ಮತ್ತೊಂದು ದ್ವನಿ. ನಮಗೆ ದಾರಿ ತೋರಿಸುವ ಮಲೆಕುಡಿಯ ಗಂಡಸು ಕಾಡಿನಲ್ಲಿ ಕತ್ತಿ ಹಿಡಿದು ದಾರಿ ಮಾಡುತ್ತ, ಮತ್ತಷ್ಟು ದುರ್ಗಮ ಕಾಡಿನಲ್ಲಿ ನಡೆಸಿದರು. ಅಕ್ಟೋಬರ್ ನಲ್ಲಿ ಸುರಿಯಬೇಕಾಗಿದ್ದ ಮಳೆ ಸುರಿಯದೇ ಕಾಡಿನ ಹಸಿರೆಲ್ಲಾ ಬತ್ತುತ್ತಿರುವಂತೆ ಕಂಡಿತು. ಅದರ ನಡುವೆ ಜೀವಬಿಟ್ಟುಕೊಂಡು ನಿಂತಿದ್ದ ಒಂದಷ್ಟು ಭಾರೀ ಮರ ಕಂಡು, ಈ ಮರ ಮನಷ್ಯನ ಕ್ರೂರ ದೃಷ್ಟಿಗೆ ಬೀಳಲು ಕೆಲವೇ ದಿನ ಸಾಕು, ಮರ ಅನ್ನೋದು ನಮಗೆ ಬರೀ ದುಡ್ಡಿನ ರಾಶಿಯಂತೆ ಯಾಕೆ ಕಾಣುತ್ತದೆ? ಉಸಿರು ಕೊಡುವ, ಬದುಕು ನೀಡುವ ಸಂಜೀವಿನಿಯಂತೆ ಯಾಕೆ ಕಾಣುವುದಿಲ್ಲ? ಕೆಲ ಮನುಷ್ಯರ ಕಣ್ಣು ಅದೆಷ್ಟು ಕ್ರೂರ ಅನ್ನಿಸಿ ಮರುಕವಾಯ್ತು.


ಹೆಜ್ಜೆಗಳು ಕಾಡಿನ ದುರ್ಗಮ ಹಾದಿಯನ್ನು ಸಾಗಿದ್ದಷ್ಟು ಸುಸ್ತೂ ಬೆಳೆಯುತ್ತಿತ್ತು ಬಿಟ್ಟರೆ, ಕುರಿಂಗೆಲ್ ನ ಮೂತಿಯ ಅರ್ಧ ಭಾಗವೂ ಈಗ ಕಾಣುತ್ತಿರಲಿಲ್ಲ. ನಡೆದಷ್ಟೂ ಕಾಡು, ಕಾಲು ನಡೆಯೋದನ್ನು ನಿಲ್ಲಿಸಬೇಕು ಬಿಟ್ಟರೆ, ಕಾಡು ಒಂದು ದಾರಿಗೆ ಕರೆದೊಯ್ದು, “ನೋಡು ಇದು ನಿನ್ನ ಜಾಗ” ಅಂತ ತಾನೇ ತಾನಾಗಿ ಅಷ್ಟು ಸುಲಭಕ್ಕೆ ನಿಲ್ಲಿಸಿಬಿಡುತ್ತದೆ ಎನ್ನುವುದು ಶುದ್ದ ಸುಳ್ಳು ಎನ್ನುವುದು ಸ್ಪಷ್ಟವಾಗುತ್ತ ಹೋಯ್ತು. ಹೀಗೆ ಸಾವಿರಾರು ಹೆಜ್ಜೆಗಳು ಸಾಗಿದವು. ದಾರಿಯಲ್ಲಿ ಸಿಕ್ಕ ಹುಲ್ಲೊಂದನ್ನು ತೋರಿಸಿ, ಈ ಹುಲ್ಲಿನಿಂದ ತಲೆದಿಂಬು ಮಾಡಬಹುದೆಂದೂ, ಅದು ಆರೋಗ್ಯಕ್ಕೆ ಭಾರೀ ಒಳ್ಳೆಯದೆಂದೂ ಜೋಶಿಯವರು ಹೇಳುತ್ತಿದ್ದರು. ಎಷ್ಟೋ ದೂರ ಸಾಗಿದ ನಂತರ ನಾವು ನಮ್ಮ ಕಾಲು ನೋಡುತ್ತೇವೆ. ಹಾಳಾದ ಇಂಬಳಗಳು ರಕ್ತವೆಲ್ಲಾ ಗಡ್ಡದ್ದಾಗಿ ಕುಡಿದು ಉದ್ದಗಿನ ತೇಗು ಬಿಡುತ್ತಿರುವಂತೆ ಕಂಡಿತು. “ಇರಲಿ ಬಿಡಿ, ಇಂಬಳ ರಕ್ತ ಕುಡಿದರೆ ಏನೂ ಆಗುವುದಿಲ್ಲ. ಅದನ್ನು ತೆಗೆಯಲು ಕೂತರೆ ಇಲ್ಲೇ ಬಾಕಿಯಾಗುತ್ತೇವೆ. ಅದು ಕುಡಿದು ಕುಡಿದು ಹೊಟ್ಟೆ ತುಂಬಿದ ಮೇಲೆ ಬಿದ್ದು ಹೋಗ್ತವೆ, ತಗೊಳ್ಳಿ ಬೇಕಿದ್ದರೆ ಹೊಗೆಸೊಪ್ಪು ಇದೆ ಹಚ್ಚಿ ಬಿಡಿ ಕಾಲಿಗೆ” ಎಂದ ಜೋಶಿಯವರು ಆಗಲೇ ದೂರ ಸಾಗಿಯಾಗಿತ್ತು. ಜೀವಮಾನದಲ್ಲಿ ಇಂಬಳ ನೋಡದವರು, ಈಗ ತಮ್ಮ ಕಾಲು ರಕ್ತಕಾರುತ್ತಿರುವುದನ್ನು ನೋಡಿ ಹೌಹಾರಿ, ಜೀವವೇ ಹೋದಂತೆ ಬೆಚ್ಚಿಬಿದ್ದು ಕಾಲುಬಡಿದುಕೊಳ್ಳುತ್ತಿದ್ದರು. ಅವರು ಹಳ್ಳದಲ್ಲಿ ಕಾಲೆಲ್ಲಾ ಮುಳುಗಿಸಿ ಅಭಿಷೇಕ ಮಾಡಿದರೂ ಇಂಬಳ ಅವರ ಕಾಲನ್ನು ಬಿಡಲಿಲ್ಲ. ಹಾಳಾದ ಇಂಬಳದಿಂದ ಬರ್ಕತ್ತ್ ಇಲ್ಲ ಅಂತವರು ತುಂಬಾ ಹೊತ್ತು ಗೊಣಗಿದರು. ಕೊನೆ ಕೊನೆಗೆ ಸುಸ್ತಾಗಿ ಗೊಣಗುವುದನ್ನೇ ನಿಲ್ಲಿಸಿಬಿಟ್ಟರು.

ಸೂರ್ಯ ನೆತ್ತಿಗೆ ಬಂದು, ಇಡೀ ಕಾಡು ಸೂರ್ಯನ ಪ್ರಖರತೆಗೆ ಬಳಲಿ ಬೆಂಡಾಗಿತ್ತು. ಕಾಡಿನಲ್ಲಿ ಮುಂಜಾವಿನಿಂದ ಎಷ್ಟೋ ದೂರ ನಡೆದಿದ್ದರೂ ಕುರಿಂಗೆಲ್ ಇನ್ನೂ ಹತ್ತಿರಾಗಲಿಲ್ಲ. ನಮಗೇ ಈ ಚಾರಣದ ಸುದ್ದಿಯೇ ಬೇಡಿತ್ತೆಂದೂ ಕೆಲವರು ಸಿಡುಕಿದರು. ಮಧ್ಯಾಹ್ನವಾದ್ದರಿಂದ ಊಟ ಮಾಡಿ ಹೊರಡುವುದು ಲೇಸೆಂದು, ಮತ್ತೆ ಮರದ ನೆರಳೊಂದಕ್ಕೆ ಶರಣಾಗಿ, ಕಟ್ಟಿದ್ದ ತಿಂಡಿ ಪೊಟ್ಟಣ ಬಿಚ್ಚಿ, ತಿನ್ನಲು ಶುರುಮಾಡಿದೆವು. ಗುಂಪಿನ ಇತರರೂ ಬಕ ಬಕ ಅಂತ ತಿನ್ನುತ್ತಿದ್ದರು. ಮತ್ತೆ ಉರಿ ಬಿಸಿಲಿನಲ್ಲಿ ಪಯಣ ಶುರುವಾಗಿ ಎಷ್ಟೋ ದೂರ ಸಾಗಿದ ಮೇಲೆ, ದೂರದಿಂದ ಕಾಣುತ್ತಿದ್ದ ಕುರಿಂಗೆಲ್ “ನೋಡಿ ನಾನು ಇಲ್ಲಿದ್ದೇನೆ” ಎನ್ನುತ್ತಾ, ತನ್ನ ಸಕಲ ಅಂಗಗಳನ್ನು ಪ್ರದರ್ಶಿಸುತ್ತಾ ನಿಂತಿತ್ತು. ಅಬ್ಬಾ ಎಂದು ಎಲ್ಲರಲ್ಲೂ ಈಗ ಜೀವಸಂಚಾರ, ಉಲ್ಲಾಸದ ಹೂಂಕಾರ. ಎಷ್ಟೋ ಮೈಲು ಮೈಲು ನಡೆದು ಕೊನೆಗೂ ಸಿಗಬೇಕಾಗಿದ್ದು ಸಿಕ್ಕಿ, ಕಾಣಬೇಕಾಗಿದ್ದನ್ನು ಕಾಣುವಾಗ ದೇಹದ ದಣಿವೆಲ್ಲಾ ಮಾಯವಾಗಿರುತ್ತದೆ. ಚಳಿಗಾಲದ ಮಧ್ಯಾಹ್ನದಲ್ಲಿ ಸೂರ್ಯನನ್ನು ಇನ್ನೇನು ಮುಟ್ಟೇ ಬಿಡುತ್ತೇನೆ ಎನ್ನುವಂತೆ ನಿಂತಿದ್ದ ಕುರಿಂಗೆಲ್ ನೋಡುತ್ತಾ ಅಷ್ಟೊತ್ತು ಹರಿದಿದ್ದ ಬೆವರೆಲ್ಲಾ, ದಣಿವೆಲ್ಲಾ ಪಾತಾಳಕ್ಕಿಳಿದು ಹೋಯ್ತು. ಭಾರೀ ಎತ್ತರದಲ್ಲಿ ನಿಂತಿದ್ದ ಕುರಿಂಗೆಲ್ ನ ತುತ್ತತುದಿಗೆ ಹೋಗುವ ದಾರಿ, ಮೊಣಕಾಲಿನೆತ್ತರದ ಹುಲ್ಲೆಲ್ಲಾ ತುಂಬಿ ಮೋಹಕವಾಗಿತ್ತು. ನಡೆದಂತೆಲ್ಲಾ ಗಾಳಿ ಜೋರಾಗುತ್ತಿತ್ತು. ಅಲ್ಲೇ ಯಾವ ಹಂಗೂ ಇಲ್ಲದೇ ಅರಳಿ ನಿಂತಿದ್ದ ಗುರಗಿ ಹೂವಿನ ಗುಂಪಿನಲ್ಲಿ ಚಿಟ್ಟೆಗಳು ಆಟವಾಡುತ್ತಿದ್ದವು. ಮೇಲಕ್ಕೆ ಹೋದಂತೆಲ್ಲಾ ಕಾಣುತ್ತಿದ್ದ ಕುದುರೆಮುಖದ ವಿಶಾಲ ಗಿರಿಶ್ರೇಣಿಗಳು ಹರಡಿನಿಂತಿದ್ದ ಚಂದವನ್ನು ಇಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಮಧ್ಯಾಹ್ನದ ಬಿಸಿಲಿಗೆ ಶೋಲಾ ಹುಲ್ಲುಗಾವಲು ಒಂದು ಕಡೆ ಬಿಸಿಲಿಂದ ಹೊಳೆಯುತ್ತಿದ್ದರೆ, ಮತ್ತೆ ಕೆಲವು ಕಡೆ ನೆರಳಿನಿಂದ ಸುತ್ತುವರೆದು, ತಿಳಿ ಹಸಿರಿನಿಂದ ಮಿನುಗುತ್ತಿತ್ತು.

ಬೆಟ್ಟದ ಮೇಲಿನಿಂದ ಕಾಣುತ್ತಿದ್ದ ಮಲೆನಾಡಿನ, ಕರಾವಳಿಯ, ನದಿ, ತೊರೆ, ಕಾಡು, ಬೆಟ್ಟಗಳಲ್ಲಿ ಇರುವಷ್ಟು ಸೌಂದರ್ಯ ಬೇರ್ಯಾವ ಸಂಗತಿಗಳಲ್ಲಿಯೂ ಇಲ್ಲ, ಅಂತ ಗಾಢವಾಗಿ ಅನ್ನಿಸಲು ಶುರುವಾಯಿತು. ಅಷ್ಟೊತ್ತಿಗೆ ಭಾರಿ ದೂರದ ಶೋಲಾ ಹುಲ್ಲುಗಾವಲಿನಲ್ಲಿ ಯಾವುದೋ ಪ್ರಾಣಿಗಳ ಗುಂಪೊಂದು ಸರಿದದ್ದು ನಮಗೆ ತೀರಾ ಅಸ್ಪಷ್ಟವಾಗಿ ಕಂಡಿತು. ಕಣ್ಣನ್ನು ಮತ್ತೆ ದೊಡ್ಡದು ಮಾಡಿಕೊಂಡು ನೋಡಿದರೆ, ಕಾಡುಕೋಣಗಳ ಗುಂಪೊಂದು ಕಾಡಿನಲ್ಲಿ ನಿರ್ಭಯವಾಗಿ ಓಡಾಡಿಕೊಂಡಿತ್ತು. ನಮ್ಮ ಗುಂಪಿಯಲ್ಲಿ ಯಾರೋ ಒಬ್ಬರು ಹೋ ಅಂತ ಬೊಬ್ಬೆ ಹಾಕಿದ್ದೇ, ಆ ಸದ್ದು ಆ ಕಾಡುಕೋಣಗಳಿಗೆ ಕೇಳಿಸಿ, ಅವು ಭಯದಿಂದ ಅಲ್ಲಿಂದ ಪಲಾಯನ ಮಾಡಿ, ಹುಲ್ಲುಗಾವಲಿನ ನಡುವೆ ಮರೆಯಾಗಿ ಹೋಯ್ತು. ಮನುಷ್ಯನ ಸದ್ದಿಗೇ ಪಾಪ ಇವು ಹೆದರಿಬಿಡುತ್ತವೆ, ಇನ್ನು ನಮ್ಮ ಕ್ರೌರ್ಯಕ್ಕೆ ಅದೆಷ್ಟು ಹೆದರಬಹುದು. ಕಾಡುಕೋಣಗಳನ್ನು ಬೇಟೆಯಾಡಿ ಅವುಗಳ ಬದುಕು ಕಸಿದುಕೊಳ್ಳುವ ನಮ್ಮ ದುರುಳತನ, ಆಸೆಬುರುಕತನ ಇನ್ನು ಕೆಲವೇ ಕಾಲದಲ್ಲಿ ಇಂತಹ ಅಪೂರ್ವ ಕಾಡುಗಳನ್ನು, ಪ್ರಾಣಿಗಳನ್ನೂ ನಾಶಮಾಡಿದರೂ ಅಚ್ಚರಿಯಿಲ್ಲ ಅನ್ನಿಸಿತು.

(ಚಿತ್ರಗಳು: ಪ್ರಸಾದ್ ಶೆಣೈ)

ಬೆಟ್ಟದ ಎತ್ತರದಲ್ಲಿ ಕನಸುಗಳು ಹತ್ತಿರವಾಗತೊಡಗಿದಂತೆ ಮನಸ್ಸು ಶಾಂತವಾಯಿತು. ದೂರದಿಂದ ಒಂದು ಕಾಲದಲ್ಲಿ ಕುದುರೆಮುಖದ ಕಾಡನ್ನೇ ನಾಶಮಾಡಲು ಹೊಂಚು ಹಾಕಿದ್ದ ಅದಿರು ಕಂಪೆನಿ, ಅದಿರು ಕೊರೆದ ಬೆಟ್ಟದ ನೆತ್ತಿ ಕಪ್ಪಗೇ ಹೊಳೆಯುತ್ತಿತ್ತು. ಇನ್ನೂ ಆ ಹಾಳಾದ ಕಂಪೆನಿ ಇದ್ದರೆ ಇಡೀ ಪಶ್ಚಿಮಘಟ್ಟವನ್ನೇ ನಾಶಮಾಡುತ್ತಿತ್ತು ಅನ್ನಿಸಿತು. ಈಗಾಗಲೇ ಈ ಕಾಡಿನಲ್ಲಿ ನಮಗೆ ಹಕ್ಕಿಗಳ ಚಲನವಲನ, ಸಹಜ ಕಾಡಿನ ಚಟುವಟಿಕೆ ಕೊಂಚ ಕೊಂಚವೇ ಮರೆಯಾಗಿದ್ದಂತೆ ಅನ್ನಿಸಿತು. ಈ ಕಾಡು ಹೀಗೇ ಉಳಿಯಲಿ, ಬೆಳೆಯಲಿ ಅಂತೆಲ್ಲಾ ನಾವು ಕಾಣದ ದೇವರಿಗೆ ಪ್ರಾರ್ಥಿಸುತ್ತ ಕುರಿಂಗೆಲ್ ನ ತುತ್ತತುದಿಯಲ್ಲಿ ಪ್ರಕೃತಿಯ ದೊಡ್ಡ ಮಾಯೆ ಎಂಬಂತೆ ನಿಂತಿದ್ದ ಬಂಡೆಗಲ್ಲನ್ನು ನೋಡುತ್ತ, ಮತ್ತೆ ಪ್ರಪಾತದಂತಿರುವ ದಾರಿ ಇಳಿಯುವಾಗ ಮಧ್ಯಾಹ್ನ ಸರಿದಿತ್ತು. ವಾಪಾಸ್ ಹೊರಡಲು ಭಗವತೀ ಹೊಳೆಯ ದಿಕ್ಕಿನಲ್ಲಿ ಸಾಗಿದಾಗ, ಗೆಳೆಯ ಅಮಿತ್ “ಅಪರೂಪದ ಮಲಬಾರ್ ಟ್ರೋಗನ್ ಹಕ್ಕಿಯ ಸ್ವರ ಕೇಳಿಸಿತು” ಅಂದ. ಅದು ಮನುಷ್ಯರ ಕಾಲಸಪ್ಪಳ ಕೇಳಿ, ಆಗಲೇ ದೂರ ಓಡಿತ್ತು. ಈಗ ಮುಂದಕ್ಕೆ ನಡೆಯುತ್ತಿದ್ದ ಜೋಶಿಯವರು ಹಾಗೂ ಅವರ ಮಗ ನಚಿಕೇತ ಅಲ್ಲೇ ನಿಂತು, ತರಗೆಲೆಗಳ ನಡುವೆ ಹೊಕ್ಕಿದ್ದ ಮುಳ್ಳೊಂದನ್ನು ಹಿಡಿದು “ಇದು ಮುಳ್ಳಂದಿಯ ಮುಳ್ಳು, ಎಷ್ಟು ಚೂಪಾಗಿದೆ ನೋಡಿ” ಎಂದರು.

ಭಗವತೀ ಹೊಳೆ ಸರಿದು, ನಮ್ಮ ಇಡೀ ಗುಂಪು ರಸ್ತೆಗೆ ಬಂದು ನಿಂತಾಗ ಜಲ್ಲಿ ಕಲ್ಲು ತುಂಬಿಸುವ ಖಾಲಿ ಟಿಪ್ಪರ್ ವೊಂದು ಹಗುರನೇ ಬರುತ್ತಿತ್ತು. ಗುಂಪಿನ ಯಾರೋ ಕೈ ತೋರಸಿದ್ದಕ್ಕೆ ಟಿಪ್ಪರ್ ನಿಂತಿತು. ನಾವೆಲ್ಲ ಟಿಪ್ಪರ್ ಗೆ ಹತ್ತಿ ನಿಂತೆವು. ಆಹಾ ವೇಗವಾಗಿ ಹೋಗುತ್ತಿದ್ದ ಆ ಟಿಪ್ಪರ್ ನಲ್ಲಿ ನಿಂತು, ಮತ್ತೆ ಕುದುರೆಮುಖ ಕಾಡಿನ ನೆತ್ತಿಯನ್ನು ನೋಡುವ ಅನುಭವವೇ ಇನ್ನೊಂಥರಾ ಸುಖ. ಟಿಪ್ಪರ್ ಮಾಳಕ್ಕೆ ಬಂದು ನಿಂತಾಗ, ಎಷ್ಟೋ ಮೈಲು ದೂರದಲ್ಲಿ ಕಾಣಿಸುತ್ತಿದ್ದ ಕುರಿಂಗೆಲ್ ಬೆಟ್ಟ, ನಾವಿವತ್ತು ಅಲ್ಲಿಗೆ ಹೋದದ್ದು, ನಕ್ಕಿದ್ದು, ಅದರ ಬೆನ್ನು ಸವರಿದ್ದು, ಅದನ್ನು ಪ್ರೀತಿ ಮಾಡಿದ್ದು ಇವ್ಯಾವುದೂ ಗೊತ್ತೇ ಇಲ್ಲ ಎನ್ನುವಂತೆ ದೀನವಾಗಿ ನಿಂತಿತ್ತು.