ಬಿಟ್ಟುಬಿಡಿ
ಇತ್ತೀಚಿಗೆ ಕನಸು ಬಿದ್ದ ಕನಸು ಬಿತ್ತು
ಯಾವಾಗ? ಎಲ್ಲಿ? ಹೇಗೆ ಬಿತ್ತು?
ಮತ್ತು
ಅಷ್ಟಕ್ಕೂ ಯಾವ ಮಹಾ ಕನಸು?
ಅವರದ್ದು ಬರಿ ಅಚ್ಚರಿ ಬೆರೆಸಿದ ಒಣ ಪ್ರಶ್ನೆಗಳು
ಸಿಹಿ ಕಹಿ ಬೆರಗು ಕೊಂಕು ನಗೆ ಹಗೆ
ಮೇಲೆ ರುಚಿಗೆ ತಕ್ಕಷ್ಟು ಕರುಣೆ
ಅವರವರ ಭಾವಾನುಸಾರ ಕೇಳಿಯೇ ಕೇಳಿದರು
ಬಿಟ್ಟುಬಿಡಿ… ನನಗದು ಮರೆತೆ ಹೋಯ್ತು ಎಂದೆ
ನಿಟ್ಟುಸಿರು ಬಿಟ್ಟರು!!!
ಈಗ ನೋಡಿ
ಮರೆತು ಹೋದದ್ದೂ ಮರೆತು ಹೋಗಿದೆ
ನೆನಪಿಲ್ಲ
ನೆನಪು ಮತ್ತು ಮರೆವು;
ಶಾಪ ಮತ್ತು ವರ
ಹಾಗೂ
ಅದರ ಅದಲು ಬದಲು
ಅವರೆನ್ನುತ್ತಾರೆ
ಎಲ್ಲವನ್ನೂ ನೆನಪಿಟ್ಟುಕೊಳ್ಳಬಾರದು
ಎಲ್ಲವನ್ನೂ ಮರೆಯಲೂಬಾರದು
ಹಾಗಾದರೆ
ಯಾವುದನ್ನು ಎಷ್ಟು ಮರೆತು ಎಷ್ಟು ನೆನಪಿಟ್ಟುಕೊಳ್ಳಬೇಕು?
ಇದೊಂದು ಯಾರಿಗೂ ಬಗೆಹರಿಯದ್ದು…
ಜನರ ಸಮಸ್ಯೆ ಅದಲ್ಲ
ಅವರು ಸಹಿಸದ ಒಂದೇ ಸಂಗತಿ ಎಂದರೆ
‘ಯಾರು ಏನು ಬೇಕಾದರೂ ಕನಸಬಹುದು’
ಅದಕ್ಕೆ
ನಮ್ಮಲ್ಲಿ ಕನಸಿನ ಸುತ್ತ ನನಸಿನ ಬಗ್ಗೆ ಅವರಿಗೆ
ಕೆಟ್ಟ ಕುತೂಹಲ ಮತ್ತು ಪುಟ್ಟ ಭಯ
ಅಥವಾ
ಇದೆಲ್ಲಾ ಬರಿ ನನ್ನ ಕನಸಿರಬಹುದು
ಊಹೆಯೂ ಇರಬಹುದು
ಹೌದು
ಇದನ್ನ ಇಷ್ಟಕ್ಕೆ
ಬಿಟ್ಟುಬಿಡಿ…
ದಾದಾಪೀರ್ ಜೈಮನ್ ಯುವ ಲೇಖಕ
ವೃತ್ತಿಯಿಂದ ಅಧ್ಯಾಪಕ
ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಆಸಕ್ತಿಯ ಕ್ಷೇತ್ರಗಳು
ಇವರ ಹಲವಾರು ಕತೆ ಮತ್ತು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ