ಸಾಮೀಪ್ಯ

ಸಮುದ್ರ ದಡದಲಿ ಕೂತು ಈಜಲು ಹೋದವರ
ವಾಚು ಚಪ್ಪಲಿ ಬಟ್ಟೆ ಹಾಗೂ ಅದಕಂಟಿದ ಗುನುಗು ವಾಸನೆ
ಗಟ್ಟಿ ಹಿಡಿದು ಎದೆಗವಚಿಕೊಂಡು
ಅಲೆಗಳ ನೋಡುತ್ತಾ
ರೂಪಾಂತರಿಸಿಕೊಳ್ಳುತ್ತಾ
ನಿನ್ನನ್ನೇ ಹುಡುಕಿಕೊಳ್ಳುವ ಕೆಲಸ
ಅದೆಷ್ಟು
ಹೇಳತೀರದ ಹಿತವಾದ ಯಾತನೆ!

ಹತ್ತಾರು ದೇಶದ ನೂರಾರು ಮನೆಗಳ ಕಿಟಕಿಗಳ ಮುಂದೆ ನಿಂತು
ಎದುರಿಗಿರುವ ಮುಖವನೋದಿ
ತವರ ಹಿತ್ತಲಿಗೊಂದು ಅನೂಹ್ಯ ಕಿಟಕಿ ನೆಡುವವನೆ

ಪದ ಪದದ ಪಾದ ಹಿಡಿದು ಪ್ರೀತಿಯಿಂದ ತಡವಿ ತಬ್ಬಿ
ಕೈಯನಿಡಿದು
ದಾರಿ ತುಂಬಾ ಜತನ ಮಾಡಿ
ಎಡರು ತೊಡರುಗಳನೆಲ್ಲ ದಾಟಿ
ನಮ್ಮ ಮಾತಲ್ಲೆ ಭಾವಲೋಕ ಕಟ್ಟುವ ಮಾಂತ್ರಿಕನೆ

ಹೇಳು
ಯಾವ ಪುಟದ ಯಾವ ಪಂಕ್ತಿಯ
ನಿನ್ನ ದನಿಯಲ್ಲಿ ಉಲಿಯುವಾಗ
ಗಂಟಲಸೆರೆ ಉಬ್ಬಿಬಂದಿದ್ದವು?!
ಯಾವ ಸಾಲಿನ ಯಾವ ಶಬ್ದದ ಯಾವ ಅಕ್ಷರದೊಳಗೆ
ನೀನು ಬೆಚ್ಚಗೆ ಕೊಂಚ ಹೊತ್ತು ಅಡಗಿ ಕುಳಿತೆದ್ದು ಬಂದಿದ್ದೆ?!
ಇದ್ದುದನು ತೆಗೆಯಲು ಆಗದೆ ಹೊಸತನ್ನು ಸೇರಿಸಲೂ ಆಗದೆ
ನಿನ್ನತನದ ಮುದ್ರೆಯೊತ್ತಲು
ಅದೆಷ್ಟು ಒದ್ದಾಡಿದ್ದೆ?!
ಆಗದೆ ಅದೆಷ್ಟು ಕನಲಿಹೋಗಿದ್ದೆ?!

ಹತ್ತಾರು ದೇಶದ ನೂರಾರು ಭಾಷೆ ಬಲ್ಲವನೆ
ಶಬ್ದಸಾಗರದಲ್ಲಿ ಈಜಾಡಲು ಕಲಿತವನೆ
ಒಂದಾದರೂ ಸ್ವಂತ ಸಾಲು ಬರೆ ಗೆಳೆಯಾ
ಅನುವಾದದಲ್ಲೇ ಕಳೆದು ಹೋಗಬೇಡ…

ಎಲ್ಲಾ ಸಾಮೀಪ್ಯಗಳ ಸಂಗ ತೊರೆ
ಧೈರ್ಯವೇ ನೀನಾಗು
ಬರೆ… ಒಂದೇ ಒಂದು ಸಾಲು
ನಿನ್ನದೇ ಒಂದು ಸ್ವಂತ ಸಾಲು

ಭೇಟಿಯಾಗೋಣ
ಮುಂದಿನ ಬಾರಿ ಸಿಕ್ಕಾಗ
ನಾವಿಬ್ಬರೂ ವಿನಿಮಯ ಮಾಡಿಕೊಳ್ಳುವ
ಹಸ್ತಲಾಘವದ ಬಿಸುಪೆ ಹೇಳಲಿ
ನೀನು ಬರೆದ ನಿನ್ನದೇ ಸಾಲು