ಸಿಕ್ಕಾಗ
ಸಿಕ್ಕಿಕೊಂಡಾಗ
ಮಾತು ಅವಮಾನ ಬೆಳಕಿನ ಅಡಕತ್ತರಿಗಳಲ್ಲಿ
ಸಿಕ್ಕು ಸಿಕ್ಕು ಸಿಕ್ಕಾದಾಗ
ಅವನು
ತಡಕಾಡುತ್ತಾನೆ ಪದಗಳಿಗಾಗಿ
ಕುಣಿಯುತ್ತಾನೆ ಶಬ್ದಗಳಿಗಾಗಿ
ತಡವರಿಸುತ್ತಾನೆ ಭಾಷೆಯಿಲ್ಲದೆ
ಜಾರಿಕೊಳ್ಳುತ್ತಾನೆ ಸೋತರೆ ಕೊನೆಗೆ
ಮೌನದ ಚಿಪ್ಪಿನೊಳಕ್ಕೆ
ಚಿಪ್ಪಿನಂತೆ ಕಾಣುವುದು
ಬಾವಿಯ ಆಳಕ್ಕೆ ಜಾರುತ್ತದೆ
ಆಳದ ಒಡಲಲ್ಲಿ ಕತ್ತಲು
ಕತ್ತಲ ಸುಳಿಯಲ್ಲಿ
ಕಳೆದೇ ಹೋಗಿಬಿಡುವ ಕಪ್ಪುರಂಧ್ರ
ಕಳೆದು ಹೋಗುವುದೇನು?
ಬೇಜವಾಬುದಾರಿಯೊ?
ಮರೆವೋ?
ಸಂಘರ್ಷಗಳ ತುಣುಕೊ?
ಅಹಂಕಾರದ ಪರ್ವತವೋ?
ಕಡೆಗೆ ಅವನೋ?
ಅವನ ಆತ್ಮದ ಚೂರೋ?
ಏನದೇನದೇನು?
ಯಾಕೆ ಹೀಗೆ ಸುತ್ತಣ ನಿಧಿಯ ವಿಧಿ
ಅವನೊಂದಿಗೆ ಆಟವಾಡುತ್ತದೆ
ಹುಡುಕ ಹಚ್ಚುತ್ತದೆ
ವಾಕ್ಯಗಳ ಪದಗಳನ್ನು
ಪದಗಳ ಅಕ್ಷರಗಳನ್ನು
ಅಕ್ಷರಗಳ ಅಕ್ಕರೆಯನ್ನು
ಅಕ್ಕರೆಯೊಳಗಿನ ಬದುಕನ್ನು
ಬಂಗಾರ ಹುಡುಕಿದ ಹಾಗೆ!!
ಅದರ ಸೊಲ್ಲಿನ ಪಿಸುಮಾತಿಗೆ!!!
ಏನೇ ಅನ್ನಿ
ಬಹಳ ದುರಾಸೆ ಅವನಿಗೆ!!!
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ