‘ನಾವು ಯಾವಾಗಲೂ ಹಾಗೆಯೇ ಅಲ್ಲವಾ? ನಮಗೆ ಗೊತ್ತಿರುವ ಯಾವುದೋ ಎಳೆ, ಬೇರೆಯವರ ಮಾತುಗಳಲ್ಲಿ ಬಂದಾಗ ಮಾತ್ರ ಅವರ ಮೇಲಿನ ವಿಶ್ವಾಸಾರ್ಹತೆ ಮತ್ತು ನಂಬಿಕೆ ಹೆಚ್ಚುತ್ತದೆ. ಅಲ್ಲೂ ಹೀಗೆ ಆಯಿತು’ ಎನ್ನುತ್ತ ಪೀಜಿ ಹಾಸ್ಟೆಲ್ ರೂಮ್ ನಲ್ಲಿ ನಡೆದ ಭೇಟಿಯೊಂದರ ಕುರಿತು ಬರೆದಿದ್ದಾರೆ ಹೊಸ ತಲೆಮಾರಿನ ಕಥೆಗಾರ ದಾದಾಪೀರ್ ಜೈಮನ್. ತಮ್ಮ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಯ ಸಂದರ್ಭದಲ್ಲಿ ಹೀಗೆ ಭೇಟಿಯಾದ ವ್ಯಕ್ತಿಗಳ ಕುರಿತು, ಸನ್ನಿವೇಶಗಳ ಕುರಿತು ಅವರು ತಮ್ಮ ಹೊಸ ಅಂಕಣ’ಜಂಕ್ಷನ್ ಪಾಯಿಂಟ್’ ನಲ್ಲಿ ಹದಿನೈದು ದಿನಗಳಿಗೊಮ್ಮೆ ಬರೆಯಲಿದ್ದಾರೆ. ಕಾವ್ಯ ಜುಗಲ್ ಬಂದಿಗೆ ಸಾಥ್ ನೀಡಿದ ಸ್ನೇಹಿತರ ಪ್ರಥಮ ಭೇಟಿಯ ಕುರಿತ ಬರಹ ಇಲ್ಲಿದೆ.
ರೂಮಿನ ಬಾಗಿಲು ಬಡಿದ ಸದ್ದಾಯಿತು. ನಿದ್ದೆಗಣ್ಣಿನಲ್ಲಿಯೇ ಫೋನಿನ ಪರದೆಯನ್ನು ತೆರೆದರೆ ಸಮಯ ಬೆಳಗಿನ ಹತ್ತೂವರೆಯೆಂದು ತೋರಿಸಿತು. ರೂಮ್ ಕ್ಲೀನಿಂಗ್ ಆಯಾ ಬಂದಿರಬಹುದೆಂದು ಊಹಿಸಿ ‘ರೂಮ್ ಕ್ಲೀನಿದೆ ಆಂಟಿ. ನಾಳೆ ಬನ್ನಿ’ ಎಂದು ಕೂಗಿ ಮತ್ತೆ ಬ್ಲಾಂಕೆಟ್ ಹೊದ್ದು ಮಲಗಿದೆ. ಒಂದು ನಿಮಿಷದ ಅಂತರದಲ್ಲಿ ಬಾಗಿಲು ಧಡ್ ಧಡ್ ಎಂದು ಬಡಿದ ಸದ್ದು. ಭಾನುವಾರದ ಮುಂಜಾನೆಯ ಸವಿನಿದ್ರೆಯನ್ನು ಭಂಗಗೊಳಿಸಿದ ಆ ಬಾಗಿಲಾಚೆ ಇರುವವನನ್ನು ಬೈದುಕೊಳ್ಳುತ್ತಾ ಹೋಗಿ ಬಾಗಿಲು ತೆರೆದೆ. ತೆರೆಯುತ್ತಲೇ ಅತ್ತರಿನ ಗಾಢ ವಾಸನೆ ಮೂಗಿಗೆ ರಪ್ಪೆಂದು ಬಡಿಯಿತು. ಆ ಗಾಢತೆಗೆ ನಿದ್ರೆಯೆ ಹಾರಿಹೋಗಿತ್ತು. ಕಣ್ಣುಗಳು ಎದುರು ನಿಂತಿದ್ದ ಆಕೃತಿಯನ್ನು ನೋಡುತ್ತಲೇ ಬೆಚ್ಚಿಬಿದ್ದಿದ್ದವು. ಮದರಸಾಗಳಲ್ಲಿರುತ್ತಿದ್ದ ಮೌಲಾನಗಳ ಗಡ್ಡದಂತಹ ಉದ್ದ ಗಡ್ಡ ಇತ್ತು. ಪ್ಯಾಂಟು ಹಳೆಯಕಾಲದ ಬೆಲ್ ಬಾಟಮ್ ಹೋಲುತ್ತಿತ್ತು. ಹೊಟ್ಟೆಯ ಮೇಲೆ ಬೆಲ್ಟು ಸರಿಯಾಗಿ ಬಿಗಿದಿತ್ತು. ಬಾದಾಮಿ ಬಣ್ಣದ ತುಂಬು ತೋಳಿನ ಅಂಗಿಯನ್ನು ಮೊಣಕೈಯವರೆಗೂ ಮಡಚಿದ್ದರು. ಎಡಗೈಯಲ್ಲಿ ಒಂದು ಬಂಗಾರದ ವಾಚು ಮತ್ತು ಬಲಗೈಯಲ್ಲಿ ಒಂದು ಬಂಗಾರದ ಉಂಗುರವಿತ್ತು. ಕೂದಲು ಕೆಂಪು ಕೆಂಪಾಗಿತ್ತು. ಬಹುಶಃ ಅವರು ಹಿತ್ತಲ ಗಿಡದ ಮೆಹಂದಿ ಹಚ್ಚಿರಬೇಕು ಎಂದು ಊಹಿಸಿದೆ. ಇವಿಷ್ಟು ಮೊದಲ ನೋಟಕ್ಕೆ ಕಂಡ ವಿವರಗಳು. ನನ್ನ ನೋಡಿದ ಕೂಡಲೇ ಅವರು ಹಸ್ತಲಾಘವ ಮಾಡಲು ಕೈಮುಂದೆ ಚಾಚಿ ‘ಅಸ್ಸಲಾಮ್ ಅಲೈಕುಂ. ಮೇರಾ ನಾಮ್ ಇಮ್ರಾನ್’ ಎಂದು ತಡವರಿಸುತ್ತಾ ಪರಿಚಯಿಸಿಕೊಂಡರು. ನಾನು ಒಂದು ಭಯಮಿಶ್ರಿತ ಮುಗುಳ್ನಗೆಯನ್ನು ನನ್ನ ಮೇಲೆ ಆರೋಪಿಸಿಕೊಂಡು ನನ್ನನ್ನು ಪರಿಚಯಿಸಿಕೊಂಡೆ. ಕೂಡಲೇ ನನ್ನ ದೃಷ್ಟಿ ಅವರ ಲಗೇಜಿನ ಕಡೆಗೆ ಹರಿಯಿತು. ಕೆಳಗೆ ನೋಡಿದರೆ ಎರಡು ಬ್ಯಾಗು, ವಾಲ್ ಟೀವಿಯನ್ನು ಹೋಲುವ ಒಂದು ಕಂಪ್ಯೂಟರ್ ಮತ್ತು ಅದಕ್ಕೆ ಬೇಕಾಗುವ ಒಂದು ಕೀಬೋರ್ಡ್ ಕೂಡ ತಂದಿದ್ದರು. ಮೊದಲ ನೋಟದಲ್ಲಿಯೇ ಮನುಷ್ಯ ಸ್ವಲ್ಪ ವಿಚಿತ್ರ ಎಂದು ಯಾರಿಗಾದರೂ ಅನಿಸುವ ಹಾಗೆ ಇದ್ದರು. ನಾನು ಚೂರು ಹೆಚ್ಚೇ ಗಮನಿಸುತ್ತಿದ್ದೇನೆ ಮತ್ತು ನಾನು ಹಾಗೆ ಕೆಕ್ಕರಿಸುವುದನ್ನು ಅವರು ಗಮನಿಸುತ್ತಿದ್ದಾರೆ ಎನಿಸಿ ಅವರಿಗೆ ಒಳಗೆ ಬರಲು ಜಾಗಮಾಡಿಕೊಟ್ಟು ಹವಾಯಿ ಚಪ್ಪಲಿ ಮೆಟ್ಟಿಕೊಂಡು ಮೆಟ್ಟಿಲಿಳಿದು ಸೀದಾ ಕೆಳಗಿನ ಮಹಡಿಯಲ್ಲಿರುತ್ತಿದ್ದ ಪೀಜಿ ಮ್ಯಾನೇಜರ್ ಸತೀಶನ ಬಳಿ ಧುಮು ಧುಮು ಹೆಜ್ಜೆ ಹಾಕುತ್ತಾ ಕೋಪದಿಂದಲೇ ಹೊರಟೆ.
‘ಸತೀಶಣ್ಣ, ಯಾರದು? ಭಯಾನಕವಾಗಿದ್ದಾನೆ. ಅವನನ್ನ ತಂದು ಯಾಕೆ ನನ್ನ ರೂಮಲ್ಲಿ ಹಾಕಿಟ್ಟಿದ್ಯ? ಹೋಗ್ಲಿ, ಐಡಿ ಪ್ರೂಫ್ ಏನಾದ್ರೂ ಇಸ್ಕಂಡ್ಯ ಇಲ್ವಾ? ಅಥವಾ ಸ್ವಲ್ಪ ಜಾಸ್ತಿ ದುಡ್ಡು ಪೀಕಿ ಹಂಗೆ ಒಳಗ್ ಸೇರಿಸ್ಕಂಡ್ಯ?’ ಎಂದು ಒಂದೇ ಉಸಿರಿನಲ್ಲಿ ಕೇಳಿದೆ.
ಅದಕ್ಕವನು ‘ಹಿಹಿಹಿ’ ಎಂದು ಹಲ್ಲುಕಿರಿಯುತ್ತಾ ‘ಅವರು ನಿಮ್ಮದೇ ಮುಸಲ್ಮಾನ್ ಜನ. ನಿಮಗೆ ಸರಿ ಹೊಂದಿಕೆಯಾಗ್ತಾರೆ ಅಂತ ನಿಮ್ಮ ರೂಮಿಗೆ ಕಳಿಸಿದೆ. ಯುಪಿ ಕಡೆಯವರು. ಕೆಲಸ ಹುಡುಕ್ಕೊಂಡು ಬಂದಿದಾರೆ. ಸಿಕ್ಕ ಮೇಲೆ ಕಂಪನಿಗೆ ಹತ್ರ ಆಗೋಕಡೆ ಹೋಗ್ತಾರಂತೆ.’ ಎನ್ನುವ ಸಮಜಾಯಿಷಿ ಕೊಟ್ಟ. ನನಗೆ ಅವನ ಉತ್ತರ ಸಮಾಧಾನ ತಂದಿರಲಿಲ್ಲ.
‘ಏನೋಪಾ, ಈ ತರಹ ಅನುಮಾನ ಬರೊ ತರ ಜನ ಅನಿಸಿದರೆ ನೀನು ಕನಿಷ್ಠ ಐಡಿ ಪ್ರೂಫ್ ಆದ್ರೂ ಇಸ್ಕೊಬೇಕು ಸತೀಶಣ್ಣ. ನಿಂಗೆ ದುಡ್ಡು ಕೊಟ್ರೆ ಸಾಕು…’ ಎಂದು ಗೊಣಗಿಕೊಳ್ಳುತ್ತಲೇ ಮೆಟ್ಟಿಲೇರತೊಡಗಿದೆ.
ಅದು ಹೇಗೆ ನಾನು ಅವರು ಉಡುವ ಬಟ್ಟೆಯ ಆಯ್ಕೆಯಿಂದ ಅವನು ಅನುಮಾಸ್ಪದ ಎಂಬ ನಿರ್ಧಾರಕ್ಕೆ ಬಂದೆ? ಹಾಗೆ ನನ್ನನ್ನು ಯೋಚನೆ ಮಾಡುವಂತೆ ಮಾಡಿದ್ದು ಯಾವುದು? ನಾನೂ ಮುಸಲ್ಮಾನನಾದರೂ ಚೂರು ಆಧುನಿಕತೆ ರೂಢಿಸಿಕೊಂಡು ನನ್ನದೇ ಸಮುದಾಯದ ಮೇಲೆ ಆ ಪೂರ್ವಗ್ರಹ ಇಟ್ಟುಕೊಂಡಿದ್ದೆನೆ ಎಂಬುದನ್ನು ಈಗ ನೆನೆಸಿಕೊಂಡರೆ ನಾಚಿಕೆಯೆನಿಸುತ್ತದೆ.
ಎಡಗೈಯಲ್ಲಿ ಒಂದು ಬಂಗಾರದ ವಾಚು ಮತ್ತು ಬಲಗೈಯಲ್ಲಿ ಒಂದು ಬಂಗಾರದ ಉಂಗುರವಿತ್ತು. ಕೂದಲು ಕೆಂಪು ಕೆಂಪಾಗಿತ್ತು. ಬಹುಶಃ ಅವರು ಹಿತ್ತಲ ಗಿಡದ ಮೆಹಂದಿ ಹಚ್ಚಿರಬೇಕು ಎಂದು ಊಹಿಸಿದೆ. ಇವಿಷ್ಟು ಮೊದಲ ನೋಟಕ್ಕೆ ಕಂಡ ವಿವರಗಳು. ನನ್ನ ನೋಡಿದ ಕೂಡಲೇ ಅವರು ಹಸ್ತಲಾಘವ ಮಾಡಲು ಕೈಮುಂದೆ ಚಾಚಿ ‘ಅಸ್ಸಲಾಮ್ ಅಲೈಕುಂ. ಮೇರಾ ನಾಮ್ ಇಮ್ರಾನ್’ ಎಂದು ತಡವರಿಸುತ್ತಾ ಪರಿಚಯಿಸಿಕೊಂಡರು.
ಮುಂದಿನ ಕೆಲವು ದಿನಗಳಲ್ಲಿ ಅವರ ಮೇಲಿದ್ದ ನನ್ನ ಧೋರಣೆ ಬದಲಾಯಿತು. ಆದರೆ ಮೊದಲಿನ ಒಂದು ವಾರ ಅವರ ಬಳಿ ಎಷ್ಟು ಬೇಕೋ ಅಷ್ಟೇ ಮಾತು ಎನ್ನುವ ಹಾಗಿದ್ದೆ. ಸತೀಶಣ್ಣ ಹೇಳಿದ ಹಾಗೆ ಅವರು ಕೆಲಸ ಹುಡುಕಿಕೊಂಡು ಬಂದಿದ್ದರು. ಈ ಮಹಾನಗರವೇ ಅಂತಹುದು. ‘ಇಲ್ಲೇನೋ ಒಂದಾಗುತ್ತದೆ’ ಎಂದುಕೊಂಡು ಜನ ತಮ್ಮ ಬಟ್ಟೆ ಪ್ಯಾಕ್ ಮಾಡಿಕೊಂಡು ಶಹರದ ಮಡಿಲಿಗೆ ಬಂದು ಸೇರುತ್ತಾರೆ. ಇಲ್ಲಿ ಬಂದು ಕೆಲಸ ಹುಡುಕತೊಡಗುತ್ತಾರೆ. ಅವರ ವಯಸ್ಸು ಸುಮಾರು ೪೦ ರ ಆಸುಪಾಸಿನಲ್ಲಿದ್ದಿರಬೇಕು. ನಂತರದ ದಿನಗಳಲ್ಲಿ ನನಗೆ ಗೊತ್ತಾದ ಸತ್ಯವೆಂದರೆ ಇಲ್ಲಿಗೆ ಬಂದಾಗ ಅವರಿಗೆ ಮದುವೆಯಾಗಿ ಕೇವಲ ನಾಲ್ಕು ತಿಂಗಳು ಮಾತ್ರ ಆಗಿತ್ತು. ಅವರು ತಮ್ಮ ಊರಿನಲ್ಲಿ ಅಕ್ಕಪಕ್ಕದ ಮಕ್ಕಳಿಗೆ ಸಂಜೆ ಹೊತ್ತು ಮನೆಪಾಠ ಮಾಡುತ್ತಿದ್ದರು. ಅವರಿಗೆ ಒಬ್ಬ ಗಂಡ ಬಿಟ್ಟು ಹೋದ ತಾಯಿಯಿದ್ದರು.
‘ಊರಿನಲ್ಲಿಯೇ ಯಾವ ಕೆಲಸವೂ ಸಿಗಲೇ ಇಲ್ಲವೇ’ ಎಂದು ನಾನು ಹಲವು ಬಾರಿ ಯೋಚಿಸಿದ್ದಿದೆ. ಕೆಲಸ ಸಿಗದ್ದಕ್ಕೆ ಮುಖ್ಯ ಕಾರಣ; ಅವರ ಉಗ್ಗು. ಅವರು ಅಪರಿಚಿತ ವ್ಯಕ್ತಿಗಳ ಮುಂದೆ ಮಾತನಾಡುವಾಗ ಬಿಕ್ಕಳಿಸುತ್ತಿದ್ದರು. ಪ್ರತಿಬಾರಿ ಮಾತನಾಡುವಾಗಲೂ ಅವರ ಮುಂದೆ ಆ ಉಗ್ಗು ಬೆಟ್ಟದ ಹಾಗೆ ಬೆಳೆದುನಿಂತುಬಿಡುತ್ತಿತ್ತು. ಅದನ್ನು ದಾಟಲು ಅವರು ಹರಸಾಹಸ ಪಡಬೇಕಾಗುತ್ತಿತ್ತು. ನನ್ನೆದುರು ಮೊದಲ ಬಾರಿ ಪರಿಚಯಿಸಿಕೊಳ್ಳುವಾಗ ಅವರು ತಡವರಿಸಿದ್ದು ಕೂಡ ಅದೇ ಕಾರಣಕ್ಕಾಗಿತ್ತು. ಮನುಷ್ಯ ಮನುಷ್ಯರ ನಡುವಿನ ಸಹಜ ಸಂವಹನವೇ ಅಸಾಧ್ಯವಾಗಿ ಅವರು ತುಂಬಾ ಕಷ್ಟ ಪಡುತ್ತಿದ್ದರು. ಬಹುಶಃ ಅದೇ ಅವರನ್ನು ಕವಿಯಾಗಿಸಿರಲಿಕ್ಕೂ ಸಾಕು. ಅವರೇ ಸ್ವಯಂ ಪ್ರೇರಣೆಯಿಂದ ನನ್ನ ಸ್ನೇಹವನ್ನು ಗಳಿಸಲು ಮಾಡಿದ ಪ್ರಾಮಾಣಿಕ ಪ್ರಯತ್ನಕ್ಕೆ ಅದೂ ಕಾರಣವಿದ್ದಿರಬಹುದು. ನನ್ನ ಬೆಡ್ಡಿನ ಮೇಲೆ ಬಿದ್ದಿರುತ್ತಿದ್ದ ಕನ್ನಡ ಪುಸ್ತಕಗಳನ್ನು ನೋಡಿ, ಆಗಾಗ ನಾನು ಸ್ನೇಹಿತರೊಡನೆ ಫೋನಿನಲ್ಲಿ ಮಾತನಾಡುವಾಗ ಓದುವ ಕವಿತೆಗಳನ್ನು ಕೇಳಿಸಿಕೊಂಡ ಮೇಲೆ ತಾವೂ ಉರ್ದುವಿನಲ್ಲಿ ಶಾಯರಿಗಳನ್ನು ಬರೆಯುವುದಾಗಿಯೂ ಹೇಳಿಕೊಂಡರು. ಅದೇ ಕಾರಣಕ್ಕೆ ನನಗೆ ಅವರ ಮೇಲಿದ್ದ ಅಸಡ್ಡೆಯೆಲ್ಲಾ ಮಂಜಿನ ಬೆಟ್ಟದಂತೆ ಕರಗಿ ಹೋಯಿತು. ಅವರು ಹೆಸರಿಸಿದ ಒಂದೂ ಉರ್ದು ಕವಿಗಳ ಹೆಸರು ನನಗೆ ಗೊತ್ತಿರಲಿಲ್ಲ. ಕೊನೆಗೆ ಫೈಜ್ ಅಹಮದ್ ಫೈಜ್ ಮತ್ತು ಗುಲ್ಜಾರ್ ಹೆಸರು ಹೇಳಿ ಅವರ ಕವಿತೆಗಳು ನಾಲಗೆ ತುದಿಯಲ್ಲಿ ಇವೆಯೇನೋ ಎಂಬಂತೆ ಹೇಳಿದರು. ಆಗ ನನಗೆ ಅವರು ನಿಜ ಹೇಳುತ್ತಿದ್ದಾರೆ ಎನಿಸಿತು. ನಾವು ಯಾವಾಗಲೂ ಹಾಗೆಯೇ ಅಲ್ಲವಾ? ನಮಗೆ ಗೊತ್ತಿರುವ ಯಾವುದೋ ಎಳೆ, ಬೇರೆಯವರ ಮಾತುಗಳಲ್ಲಿ ಬಂದಾಗ ಮಾತ್ರ ಅವರ ಮೇಲಿನ ವಿಶ್ವಾಸಾರ್ಹತೆ ಮತ್ತು ನಂಬಿಕೆ ಹೆಚ್ಚುತ್ತದೆ. ಅಲ್ಲೂ ಹೀಗೆ ಆಯಿತು.
ಅವರು;
‘ಔರ್ ಭೀ ದುಃಖ್ ಹೈ ಝಮಾನೇ ಮೇ ಮೊಹಬ್ಬತ್ ಕೆ ಸಿವಾ
ರಾಹತೇ ಔರ್ ಭೀ ಹೈ ವಸ್ಲ್ ಕಿ ರಾಹತ್ ಕೆ ಸಿವಾ’
ಎಂದು ಹೇಳಿದರೆ;
ನಾನು
‘ನಾನು ಬಡವಿ ಆತ ಬಡವ
ಒಲವೇ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು’
ಎಂದುಹೇಳುತ್ತಿದ್ದೆ.
ಪೀಜಿಯಲ್ಲಿ ಊಟವಾದ ನಂತರದ ಅದೆಷ್ಟೋ ರಾತ್ರಿಗಳು ಕವಿತೆಗಳ ಜುಗಲ್ಬಂದಿಯಿಂದ ಕಳೆದುಹೋಗುತ್ತಿದ್ದವು.
ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವು ಕವಿತೆಗಳು, ಕಥೆಗಳು ನಾಡಿನ ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ & ಪಾಲಿಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಛoದ ಪುಸ್ತಕ ಪ್ರಕಾಶನ ಅದನ್ನು ಹೊರತಂದಿದೆ. Dmitrij Gawrisch ಅವರ ‘ಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಪ್ರಕಟಿತ ಕಥಾಸಂಕಲನ.
ದಾದು ಲೇಖನ ಓದಿ ಫೀದಾ ಆದೆನಪ್ಪ.ಸಹಜ ಬದುಕಿನ ವಿವಿಧ ರೀತಿಯ ಆಯಾಮಗಳನ್ನು ಎಷ್ಟು ಚೆಂದ ಬಿಡಿಸುತ್ತಾ ಸಮಸ್ಯೆಯನ್ನು ವಿಶ್ಲೇಷಿಸುವೆಯೆಂದರೆ ಓದಿ ಖುಷಿಯಾಯಿತು
ನಮಸ್ಕಾರ ದಾದಪೀರ್ ಅವರೆ,
ಬಹಳ ಸೊಗಸಾಗಿ ಬರೆದಿದ್ದೀರ. ಮನಸ್ಸಿಗೆ ನಾಟಿದ್ದು ಗೊತ್ತಾಗಲಿಲ್ಲ, ಹಾಗೆಯೆ ಮರೆತುಹೋಗುವುದಿಲ್ಲ.
ನಿಮ್ಮ ಅಂಕಣಗಳಿಗೆ ಕಾಯುತ್ತಿರುತ್ತೇನೆ.
ಎಷ್ಟು ಸೂಕ್ಷ್ಮ ಆಲೋಚನೆಗಳು ದಾದಾ… ಒಳ್ಳೆಯ ಬರಹ… ಬಹಳವೇ ಇಷ್ಟವಾಯಿತು…