ಕಾಲಿನ ಹೆಬ್ಬೆರಳಲ್ಲಿ ರಕ್ತ ಒಸರುತ್ತಿದೆ. ಕನಕ, “ಅಯ್ಯೋ ಏನ್ರಿ ಇದು?” ಎಂದಳು. ಸೆಲ್ವಮ್, “ಏನೂ ಇಲ್ಲ. ಅಲ್ಲೊಂದು ಕಲ್ಲು ಹೊಡೆದುಬಿಟ್ಟಿತು. ಒಂದಷ್ಟು ಅರಿಶಿನ, ಒದ್ದೆಬಟ್ಟೆ ತೆಕೊಂಡು ಬಾ” ಎಂದ. ಕನಕ ಮನೆ ಒಳಕ್ಕೆ ಹೋಗಿ ಚೆಂಬಿನಲ್ಲಿ ನೀರು ತಂದು “ಸುಮತಿ ನೀರಾಕು ನಿಮ್ಮಪ್ಪ ಬೆರಳುಗಳನ್ನು ತೊಳೆದುಕೊಳ್ಳಲಿ. ನಾನು ಅರಿಶಿನ ಬಟ್ಟೆ ತರ್ತೀನಿ” ಎಂದು ಮತ್ತೆ ಮನೆ ಒಳಕ್ಕೆ ಹೋದಳು. ಸುಮತಿ ಕಾಲಿನ ಮೇಲೆ ನೀರಾಕುತ್ತಿದ್ದಂತೆ ಸೆಲ್ವಮ್ ಬೆರಳುಗಳ ಮೇಲಿದ್ದ ರಕ್ತವನ್ನು ತೊಳೆದಷ್ಟು ರಕ್ತ ಬರುತ್ತಲೇ ಇತ್ತು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಐದನೆಯ ಕಂತು ನಿಮ್ಮ ಓದಿಗೆ
ಅಧ್ಯಾಯ – 3
ಮತ್ತೊಂದು ಹೊಸ ವರ್ಷ ಪ್ರಾರಂಭವಾಗಿದೆ. ಕಾಲೇಜ್ ಪ್ರಾರಂಭವಾಗಿ ಎರಡುಮೂರು ದಿನಗಳಾಗಿವೆ. ಕಾಲೇಜ್ ಹತ್ತಿರ ಇರುವ ಜಿಮ್ಖಾನಾ ಫುಟ್ಬಾಲ್ ಮೈದಾನಕ್ಕೆ ಮಣಿಯನ್ನು 1ಂ ನಿಮಿಷ ಬಿಟ್ಟುಬರುವಂತೆ ಆದೇಶ ಮಾಡಿದ ಸೆಲ್ವಿ ಮತ್ತು ಆಕೆಯ ಗೆಳತಿಯರು ಮೊದಲೇ ಹೋಗಿ ಮೈದಾನದ ಸ್ಟೇಡಿಯಮ್ ಮೆಟ್ಟಿಲುಗಳನ್ನು ಹತ್ತಿ ಮೇಲೆ ಕುಳಿತುಕೊಂಡಿದ್ದಾರೆ. ಸಿನಿಮಾದಲ್ಲಿ ಬರುವ ಭಯಂಕರ ಬಾಸ್ ಎದುರಿಗೆ ಹೋಗುವಂತೆ ಮಣಿ ತನ್ನ ಗುಬ್ಬಚ್ಚಿ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಮೈದಾನದ ದಕ್ಷಿಣ ಬಾಗಿಲು ತಲುಪಿದ್ದೆ ಸ್ಟೇಡಿಯಮ್ ಕಡೆಗೆ ನೋಡಿದ. ಮೂವರೂ ಮೆಟ್ಟಿಲುಗಳ ಮೇಲೆ ಕುಳಿತುಕೊಂಡಿದ್ದಾರೆ. ಮಣಿ ನಿಧಾನವಾಗಿ ಒಂದೊಂದೆ ಮೆಟ್ಟಿಲತ್ತಿ ಅವರ ಹತ್ತಿರಕ್ಕೆ ಹೋದ.
ಸೆಲ್ವಿ ರಾಜಿ ಕಡೆಗೆ ನೋಡಿ, “ನಮಗೆ ಕಾಲೇಜ್ ಇದೆ. ಬೇಗನೇ ಬರುವುದಕ್ಕೆ ಆಗುವುದಿಲ್ಲವ. ಅದೇನು ಹಳೆ ಗೊಡ್ಡು ಹಸು ತರಹ ಬರ್ತಾ ಇದ್ದೀಯ?” ಎಂದಳು. ರಾಜಿ, ಪಾರ್ವತಿ ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ಕಣ್ಣುಬ್ಬುಗಳನ್ನು ಹಾರಿಸಿಕೊಂಡರು. ಮೊದಲಬಾರಿಗೆ ಸೆಲ್ವಿ ಮಣಿ ಕಡೆಗೆ ನೋಡಿ “ಬಾ ಇಲ್ಲಿ ಕುಳಿತುಕೊ” ಎಂದು ಸನ್ನೆ ಮಾಡಿದಳು. ಮಣಿ ಯಾರೋ ರಾಜನ ಆಸ್ಥಾನಕ್ಕೆ ಹೋಗಿ ರಾಜನ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಆಹ್ವಾನ ಪಡೆದಷ್ಟು ಸಂತೋಷದಿಂದ ಕುಳಿತುಕೊಳ್ಳಲೊ ಬೇಡವೊ ಎನ್ನುವಂತೆ ರಾಜಿ ಮತ್ತು ಪಾರ್ವತಿಯ ಕಡೆಗೆ ನೋಡಿದ. ಸೆಲ್ವಿ, “ಅವರನ್ನ ಏನು ನೋಡ್ತಿಯಾ ಬಾ ಕುಳಿತುಕೊ” ಎಂದಳು. ಮಣಿ ಮೂರಡಿ ಜಾಗ ಬಿಟ್ಟು ಕುಳಿತುಕೊಂಡ. ರಾಜಿ ಮತ್ತು ಪಾರ್ವತಿ, “ನಾವಿಬ್ಬರೂ ಕ್ಲಾಸ್ಗೋಗ್ತೀವಿ. ನೀವು ಮಾತನಾಡಿ” ಎಂದು ಎದ್ದು ನಿಂತರು. ಸೆಲ್ವಿ, “ನೀವು ಕ್ಲಾಸ್ಗೆ ಹೋಗುವುದೇನೂ ಬೇಡ. ಅಲ್ಲಿಗೋಗಿ ಮೆಟ್ಟಿಲು ಕೊನೆಯಲ್ಲಿ ಕುಳಿತುಕೊಂಡು ನಮ್ಮ ಕಡೆಗೆ ನೋಡ್ತಾ ಇರಿ” ಎಂದಳು. ಮೂವರೂ ಆಪ್ತ ಗೆಳತಿಯರಾದ ಕಾರಣ, ರಾಜಿ ಮತ್ತು ಪಾರ್ವತಿ ನಗುತ್ತಾ ಎದ್ದು ಹೋಗಿ ಸ್ಟೇಡಿಯಮ್ ಮೆಟ್ಟಿಲು ಕೊನೆಗೊಳ್ಳುವಲ್ಲಿ ಕುಳಿತುಕೊಂಡರು.
ಸೆಲ್ವಿ, ಈಗ ಮಣಿ ಕಡೆಗೆ ನೋಡುತ್ತ “ಈಗ ಹೇಳಿ ಮಣಿ ಸಾರ್. ನಾನು ಏನು ಮಾಡ್ಬೇಕು. ನೀವು ಏನು ಮಾಡ್ತೀರ” ಪ್ರಶ್ನಿಸಿದಳು. ಸ್ವಲ್ಪ ಕೋಪ ಸ್ವಲ್ಪ ನಗು ಬೆರೆತ ಅವಳ ಮುಖ ನೋಡಿದ ಮಣಿಗೆ ಒಳಗೊಳಗೆ ಸ್ವಲ್ಪ ಸಮಾಧಾನವಾಯಿತು. ನಮ್ಮಂತ ಕರಿಯರ ಕಾಲೋನಿಯಲ್ಲಿ ಇವಳು ಇಷ್ಟು ಸುಂದರವಾಗಿ ಹೇಗೆ ಹುಟ್ಟಿದಳು ಎಂಬ ಆಲೋಚನೆ ಅವನಿಗೆ ಬಂದಿತು. ಅವಳ ಮುಖದ ಬಣ್ಣ, ಸೌಂದರ್ಯ ಅವನನ್ನು ತಲ್ಲಣಗೊಳಿಸಿಬಿಟ್ಟಿತು. ಅವನ ಬಾಯಿಂದ ಮಾತೇ ಬರದೇ ಅವಳ ಮುಖವನ್ನೇ ನೋಡುತ್ತ ಹಾಗೆ ಇದ್ದುಬಿಟ್ಟ. ಸೆಲ್ವಿ, ಅವನ ಮುಖದ ಮುಂದೆ ಕೈಯಾಡಿಸಿ “ಹಲೋ ಸಾರ್. ನನಗೆ ಟೈಮ್ ಇಲ್ಲ. ಬೇಗನೇ ಕ್ಲಾಸ್ಗೋಗ್ಬೇಕು” ಎಂದಳು. ಅವನು ಏನೂ ಮಾತನಾಡಲಿಲ್ಲ. ಸೆಲ್ವಿ “ನೀನು ಮಾತನಾಡದೆ ಇದ್ದರೆ ನಾನು ಎದ್ದು ಹೊರಟೋಗ್ತೀನಿ” ಎಂದಳು. ಮಣಿ, “ನೀನೆ ತಾನೆ ಕರೆದಿದ್ದು” ಎಂದ. ಸೆಲ್ವಿ, “ಓ ಹೌದಾ!” ಎಂದಳು. ಮಣಿಯ ಮುಖವನ್ನು ದಿಟ್ಟಿಸಿ ನೋಡಿ, ನನ್ನ ಮಗ ಕಪ್ಪಾಗಿದ್ದರೂ ಚೆನ್ನಾಗಿಯೆ ಇದ್ದಾನೆ ಎಂದುಕೊಂಡಳು ಮನಸ್ಸಿನಲ್ಲಿ.
ಸೆಲ್ವಿ, “ನೋಡು ಮಣಿ, ನನಗೆ ಸುತ್ತಿಬಳಸಿ ಹೇಳುವುದಕ್ಕೆ ಬರುವುದಿಲ್ಲ. ಆಹೊತ್ತು ಯಾಕೊ ನಿನ್ನ ಕೆನ್ನೆಗೆ ಹೊಡೆದುಬಿಟ್ಟೆ. ನಾನು ಹೊಡೆಯಬಾರದಿತ್ತು. ಸಾರಿ” ಎಂದಳು. ಮಣಿ, “ನಾನೂ ಕೂಡ ನಿನ್ನ ಕೈ ಹಿಡಿದುಕೊಂಡಿದ್ದು ತಪ್ಪು. ಐ ಯಾಮ್ ವೆರಿ ಸಾರಿ” ಎಂದ. ಸಲ್ವಿ, “ಆಯಿತು ಇಬ್ಬರದ್ದೂ ತಪ್ಪಿದೆ. ಆದ್ದರಿಂದ ನಾವಿಬ್ಬರೂ ಆಗಿದ್ದನ್ನೆಲ್ಲ ಮರೆತು ಇವೊತ್ತಿಂದ ಒಳ್ಳೆ ಫ್ರೆಂಡ್ಸ್ ಆಗಿ ಇದ್ದುಬಿಡೋಣ” ಎಂದು ಕೈಚಾಚಿದಳು. ಮಣಿ ಕೈ ಚಾಚಲಿಲ್ಲ. ಅವಳ ಕಣ್ಣುಗಳಲ್ಲಿ ಕೋಪ ಹೊತ್ತಿಕೊಳ್ಳತೊಡಗಿತು. ಕೈ ಹಾಗೆ ಗಾಳಿಯಲ್ಲಿದ್ದು ಇನ್ನೇನು ಮಣಿ ಕೆನ್ನೆಗೆ ಇನ್ನೊಂದು ಏಟು ಬೀಳುವುದೇನೊ ಎನ್ನುವಷ್ಟರಲ್ಲಿ ಮಣಿ ಅವಳ ಅಂಗೈಯನ್ನು ಹಿಡಿದುಕೊಂಡು “ಬರೀ ಫ್ರೆಂಡ್ಸ್ ಅಷ್ಟೇ ಅಲ್ಲ. ಐ ಲವ್ ಯೂ. ನಾನು ನಿನ್ನನ್ನ ಮದುವೆ ಮಾಡಿಕೊಳ್ತೀನಿ” ಎಂದ. “ಯಾವಾಗ? ಈಗ್ಲೆ ಮದುವೆ ಮಾಡಿಕೊಂಡುಬಿಡೋಣವಾ?” ಎಂದಳು. “ಈಗಲ್ಲ. ಡಿಗ್ರಿ ಮುಗಿದು ಕೆಲಸಕ್ಕೆ ಸೇರಿಕೊಂಡ ಮೇಲೆ” ಎಂದ.
ಸೆಲ್ವಿ ಕೆಲವು ಕ್ಷಣಗಳು ಆಲೋಚಿಸಿ, ನಾನು ಯೋಚಿಸಿದಂತೆ ಹೇಳ್ತಾಇದ್ದಾನಲ್ಲ? ಎಂದುಕೊಂಡು “ಆಯಿತು. ನಾನು ನಿನ್ನನ್ನ ಲವ್ ಮಾಡ್ತೀನಿ ಅಂದಕೊ. ನಮ್ಮಪ್ಪ ಅಮ್ಮ ನೀನು ಕರ್ರಗಿದ್ದೀಯ ಅಂತ ಒಪ್ಪಲಿಲ್ಲ ಅಂದರೆ ಏನು ಮಾಡ್ತಿಯಾ?” ಎಂದಳು. ಮಣಿಯ ಹೃದಯದಲ್ಲಿ ತಣ್ಣನೆ ಅಲೆಗಳು ಕಾಣಿಸಿಕೊಂಡವು. ಮಣಿ, “ನಾನು ಅವರ ಕೈಯೋ ಕಾಲೋ ಹಿಡಿದುಕೊಂಡು ಬೇಡಿಕೊಳ್ತೀನಿ” ಎಂದ. ಕೋಪಿಸಿಕೊಂಡ ಸೆಲ್ವಿ, “ಅಯ್ಯೋ ಕಡವುಳೆ! ಯಾವಾಗಲೂ ಕೈಯಿ ಕಾಲು ಹಿಡಿದುಕೊಳ್ಳುವುದೇ ನಿನ್ನ ಕೆಲಸಾನ?” ಎಂದಳು. ಮಣಿಗೆ ಈಗ ದಿಢೀರನೆ ಸೆಲ್ವಿಯ ಕಾಲುಗಳನ್ನು ಹಿಡಿದುಕೊಂಡುಬಿಡೋಣ ಎನಿಸಿ ಸುತ್ತಲೂ ನೋಡಿದ. ರಾಜಿ ಮತ್ತು ಪಾರ್ವತಿ ಇವರ ಕಡೆಯೇ ನೋಡುತ್ತಿದ್ದು ಪಕ್ಕಕ್ಕೆ ತಿರುಗಿಕೊಂಡರು.
ಸೆಲ್ವಿ, “ಬಾ ಇಲ್ಲಿ” ಎಂದು ಅವನನ್ನ ಇನ್ನಷ್ಟು ಹತ್ತಿರಕ್ಕೆ ಕರೆದಳು. ಒಂದಷ್ಟು ಗೊಂದಲದಿಂದಲೇ ಮಣಿ ಅವಳ ಹತ್ತಿರಕ್ಕೆ ಹೋಗಿ ಕುಳಿತುಕೊಂಡು ಹೆಣ್ಣು ಮಕ್ಕಳ ಮಡಿಲೇರುವ ನಾಯಿ ಮರಿಯಂತೆ ಮುಖ ಕೆಳಕ್ಕೆ ಹಾಕಿಕೊಂಡ. ಸೆಲ್ವಿಗೆ ಪಾಪ ಎನಿಸಿ ಅವನ ಕೈ ಹಿಡಿದುಕೊಂಡು “ನಮ್ಮ ಲೈನ್ಗೆ ಬಂದು ಯಾಕೆ ಸುಮ್ಮನೆ ಏಟು ತಿಂದೆ” ಎಂದಳು. ಮಣಿ, “ಎಲ್ಲಾ ನಿನಗಾಗಿ” ಎಂದ. ಸೆಲ್ವಿ, “ನಿಜವಾಗಿಯೂ ನನ್ನನ್ನ ಅಷ್ಟು ಪ್ರೀತಿಸ್ತಿಯಾ?” ಎಂದಳು. ಮಣಿ, “ನನಗೆ ಗೊತ್ತಿಲ್ಲ” ಎಂದ. ಸೆಲ್ವಿ, “ನಾನು ನಿನ್ನನ್ನ ಲವ್ ಮಾಡುವುದಿಲ್ಲ ಅಂದರೆ ಏನು ಮಾಡ್ತಿಯಾ?” ಎಂದಳು. ಮಣಿ ಅವಳನ್ನೇ ದಿಟ್ಟಿಸಿ ನೋಡಿದ. ಅವನ ಕಣ್ಣುಗಳಲ್ಲಿ ಭಯ ತುಂಬಿಕೊಂಡಿರುವಂತೆ ಕಾಣಿಸಿತು. ಸೆಲ್ವಿ ಮುಖ ಗಂಟಿಕ್ಕಿಕೊಂಡಿದ್ದರೂ ಅವಳ ಮುಖದಲ್ಲಿ ಎಲ್ಲೋ ಒಂದು ರೀತಿಯ ತುಂಟತನ ಅಡಗಿಕೊಂಡಿತ್ತು. ಮತ್ತೆ “ಹತ್ತಿರಕ್ಕೆ ಬಾ” ಎಂದು ಕರೆದಳು.
ಮಣಿ ಇನ್ನಷ್ಟು ಹತ್ತಿರಕ್ಕೆ ಸರಿದು ಕುಳಿತುಕೊಂಡ. ಅವನ ಕೆನ್ನೆ ಮತ್ತು ಮೂಗನ್ನು ನೋಡಿದಳು. ಅಲ್ಲೆಲ್ಲೂ ಏಟುಗಳು ತಿಂದ ಯಾವ ಚಿನ್ಹೆಗಳೂ ಇರಲಿಲ್ಲ. ಮಣಿ ಅವಳ ಮುಂದೆ ಒಂದು ಮಗುವಿನಂತೆ ನಡೆದುಕೊಳ್ಳುತ್ತಿರುವುದು ನೋಡಿದ ಸೆಲ್ವಿ ಅವನ ಮುಖವನ್ನು ಜೋರಾಗಿ ತಿವಿದು ತನ್ನ ಮುಖದ ಹತ್ತಿಕ್ಕೆ ಎಳೆದುಕೊಂಡು ಕೆನ್ನೆಯನ್ನು ಜೋರಾಗಿ ಕಚ್ಚಿ ಒಂದು ಮುತ್ತು ಕೊಟ್ಟು “ಅಂತೂ ಕೊನೆಗೆ ನಾನೇ ನಿನ್ನನ್ನು ಲವ್ ಮಾಡುವಂತೆ ಮಾಡಿಬಿಟ್ಟೆ. ಐ ಲವ್ ಯೂ ಡಾ ನನ್ನ ಮಗನೆ” ಎಂದು ಅವನ ಮುಖವನ್ನು ತನ್ನ ಮಡಿಲಲ್ಲಿ ಜೋರಾಗಿ ಅದುಮಿ ಹಿಡಿದುಕೊಂಡಳು. ಅವಳ ಮಡಿಲಲ್ಲಿ ಅದೇನೊ ಒಂದು ರೀತಿಯ ಮತ್ತೇರಿಸುವ ವಾಸನೆ. ಎಂತಹ ಅನುಭವ! ಕೆಲವೇ ಕ್ಷಣಗಳಲ್ಲಿ ಮಣಿ ಭೂಮಿಯಿಂದ ಸ್ವರ್ಗಕ್ಕೆ ಹಾರಿಹೋಗಿದ್ದನು. ರಾಜಿ ಮತ್ತು ಪಾರ್ವತಿ ಇಬ್ಬರೂ ಇವರನ್ನು ನೋಡಿ ಹೌಹಾರಿಹೋದರು. ಸೆಲ್ವಿ ಮತ್ತು ಮಣಿ ಸುಮಾರು ಹೊತ್ತು ಹಾಗೇ ಕುಳಿತಿದ್ದರು.
ರಾಜಿ, “ಪಾರ್ವತಿ ಇವರನ್ನು ಬಿಟ್ಟರೆ ರಾತ್ರಿಯವರೆಗೂ ಹೀಗೇ ಕುಳಿತರ್ತಾರೆ. ನಡಿ ಹೋಗೋಣ” ಎಂದಳು. ರಾಜಿ ಮತ್ತು ಪಾರ್ವತಿ ಇಬ್ಬರೂ ಎದ್ದು ಬರುವುದನ್ನು ನೋಡಿದ ಸೆಲ್ವಿ ಮತ್ತು ಮಣಿ ಸರಿಯಾಗಿ ಕುಳಿತುಕೊಂಡರು. ಹತ್ತಿರಕ್ಕೆ ಬಂದ ರಾಜಿ, “ಏನಾಯಿತು ಇಂಡಿಯಾ ಪಾಕಿಸ್ತಾನ ಯುದ್ಧ ಮುಗಿದು ಶಾಂತಿ ಸ್ಥಾಪನೆ ಆಯಿತಾ?” ಎಂದಳು. ಪಾರ್ವತಿ, “ನೋಡಿದರೆ ಗೊತ್ತಾಗಲಿಲ್ಲವ?” ಎಂದಳು. ಆಗಲೇ ಸಾಯಂಕಾಲ ಐದು ಗಂಟೆಯಾಗಿದ್ದು, ಪಾರ್ವತಿ, “ಈ ದಿನ ಮೂರು ತರಗತಿಗಳು ಹೋದವು. ಮನೇಗಾದರೂ ಸರಿಯಾದ ಸಮಯಕ್ಕೆ ಹೋಗೋಣ ನಡೆಯಿರಿ” ಎಂದಳು. ಎಲ್ಲರೂ ಎದ್ದು ಮೆಟ್ಟಿಲುಗಳನ್ನು ಇಳಿದುಕೊಂಡು ಮೈದಾನ ದಾಟಿ ರಸ್ತೆಗೆ ಬಂದರು. ಸೆಲ್ವಿಗೆ ಮನಸ್ಸು ಸಮಾಧಾನವಾಗಿದ್ದರೂ ಏನೊ ತಪ್ಪು ನಡೆಯುತ್ತಿದೆ ಎನ್ನುವ ಭಯ ತುಂಬಿಕೊಂಡಿತು. ಕೊನೆಗೆ ಪೋಸ್ಟ್ ಆಫೀಸ್ ಮುಂದೆ ಬಲಕ್ಕೆ ತಿರುಗಿಕೊಂಡು ಶ್ರೀ ಕೃಷ್ಣರಾಜ ವಾಡೆಯರ್ ರಸ್ತೆ ಹಿಡಿದುಕೊಂಡು ಹೊರಟರು. ಆದರೆ ಯಾಕೊ ಮೊದಲಿನಂತೆ ಯಾರೂ ಖುಷಿಯಿಂದ ಮಾತನಾಡಿಕೊಳ್ಳಲು ಆಗಲಿಲ್ಲ. ಪ್ರೀತಿ ಅಂದರೆ ಹಾಗೇನೆ ಅದಕ್ಕೆ ಹತ್ತಾರು ಮುಖಗಳಿರುತ್ತವೆ.
***
ಒಂದು ದಿನ ಕಾಲೇಜ್ ಕ್ಯಾಂಪಸ್ ಒಳಗೆ ಸೆಲ್ವಿ ಮತ್ತು ಹುಡುಗಿಯರ ಗುಂಪೊಂದು ಮರದ ಕೆಳಗೆ ನಿಂತುಕೊಂಡು ಮಾತನಾಡುತ್ತಿತ್ತು. ಅದೇ ರೀತಿ ಹುಡುಗರ ಇನ್ನೊಂದು ಗುಂಪು ಇನ್ನೊಂದು ಮರದ ಕೆಳಗೆ ನಿಂತುಕೊಂಡು ಹುಡುಗಿಯರ ಕಡೆಗೆ ನೋಡಿಕೊಂಡು ಚೇಷ್ಟೆ ಮಾಡುತ್ತಿತ್ತು. ಮಧ್ಯದಲ್ಲಿದ್ದ ಸ್ವಾಮಿ, “ಏ ಯಾರೊ ಅವನು? ದಿನಾಗಲೂ ನಮ್ಮ ತರಗತಿ ಸೆಲ್ವಿ ಜೊತೆ ಮಾತಾಡ್ತಾ ಇರ್ತಾನೆ?” ಎಂದ. ಪಕ್ಕದಲ್ಲಿದ್ದ ಮಹೇಂದ್ರ, “ಅಯ್ಯೊ ಈ ನನ್ನ ಮಗ ಸ್ವಾಮಿ ಕಾಲೇಜ್ನಲ್ಲಿ ಇರೂದೂ ಒಂದೇ ಇಲ್ಲದೇ ಇರೂದೂ ಒಂದೇ. ಸೆಲ್ವಿ ಲವರ್ ಕಣೋ ಅವನು. ಕ್ವಾರಂಟೈನ್ ಲೈನ್ ಮಣಿ. ಪಿಯುಸಿ ಪಲ್ಟಿ ಹೊಡೆದವನೆ” ಎಂದ. ಇನ್ನೊಬ್ಬ, “ಪಲ್ಟಿ ಹೊಡೆದರೂ ಕಾಲೇಜ್ಗೆ ಬರ್ತಾನಲ್ಲ ನನ್ನ ಮಗ ಇವನು?” ಎಂದ.
ಸ್ವಾಮಿ, “ಓ!. ಹಾಗಾ ವಿಷಯ? ಸೆಲ್ವಿನಾ ನಮ್ಮ ಲಿಸ್ಟ್ನಿಂದ ಹೊಡೆದಾಕರೊ” ಎಂದ. “ನಾವು ಯಾವೊತ್ತೋ ಹೊಡೆದಾಕಿದ್ದೀವಿ ಬಿಡೊ” ಹೀಗೆ ಮಾತು ಸಾಗುತ್ತಿದ್ದಂತೆ, ಇವರ ಹತ್ತಿರಕ್ಕೆ ಬಂದ ಮಣಿ, ಎಲ್ಲರ ಕೈಕುಲಿಕಿ “ನೀವೆಲ್ಲ ಸೆಲ್ವಿ ಕ್ಲಾಸ್ ಅಂತೆ, ಸೆಲ್ವಿನಾ ನೀವೆಲ್ಲರೂ ತಂಗಿಯಂತೆ ಭದ್ರವಾಗಿ ನೋಡಿಕೊಳ್ಳಿರಪ್ಪ. ನಾನೇ ಅವಳ ಭಾವಿಗಂಡ. ಸರೀನಾ… ನಾನು ಇನ್ನು ಬರ್ತೀನಿ” ಎಂದು ಹಿಂದಕ್ಕೆ ನೋಡುತ್ತಾ ಕಣ್ಣು ಮಿಟಿಕಿಸುತ್ತಾ ಹೊರಟುಹೋದ. ಎಲ್ಲರೂ ಅವನನ್ನೇ ನೋಡುತ್ತಿದ್ದರೆ, ಸ್ವಾಮಿ, “ಭಲೆ ನನ್ನಮಗಾ ಇದ್ದಾನೆ ಕಣೋ ಇವನು! ಅದೋಗಲಿ. ಅದೇನೊ ಕ್ವಾರಂಟೈನ್ ಲೈನ್ ಅಂದಿಯಲ್ಲ ಅದೆಲ್ಲಿದೆ?” ಕೋರಮಂಡಲದ ಹತ್ತಿರ ಇರುವ ಗಣಿ ಕ್ಯಾಂಪ್ನಿಂದ ಬರುವ ಮಹೆಂದ್ರ, “ಸ್ವಾಮಿ, ಬ್ರಿಟಿಷರ ಕಾಲದಲ್ಲಿ ಕಾಲರಾ ಬಂದು ನೂರಾರು ಜನ ಸತ್ತೋದರಂತೆ. ಆಗ ಕಾಲರಾ ಬಂದವರನ್ನೆಲ್ಲ ಈಗಿನ ಮಾರಿಕುಪ್ಪಮ್ ಲೈನ್ ಇರುವ ಕಡೆ ಗುಡಿಸಿಲುಗಳಲ್ಲಿ ತಂದಾಕಿದ್ದರಂತೆ. ಕಾಲರಾ ನಿಂತೋದ ಮೇಲೆ ಜನರು ಅಲ್ಲೇ ನೆಲೆಸಿ ಅದಕ್ಕೆ ಈಗಲೂ ಕ್ವಾರಂಟೈನ್ ಲೈನ್ ಅಂತ ಕರಿಯ್ತಾರೆ” ಎಂದ. ಸ್ವಾಮಿ, “ಓ ಅವನು ಮತ್ತೆ ನಮ್ಮ ಹತ್ತಿರಕ್ಕೆ ಬಂದರೆ ಸ್ವಲ್ಪ ದೂರು ಇರುವುದು ಒಳ್ಳೇದು” ಎಂದ. ಎಲ್ಲರೂ ನಕ್ಕರು.
***
ಕನಕ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಒಲೆ ಮುಂದೆ ಕುಳಿತು ದೋಸೆ ಸುಡುತ್ತಿದ್ದಾಳೆ. ಸೆಲ್ವಮ್ ಯುನಿಪಾರ್ಮ್ ಬಟ್ಟೆ ಹಾಕಿಕೊಳ್ಳುತ್ತಾ “ಕನಕ ಬೇಗನೆ, ಏಳು ಗಂಟೆ ಒಳಗೆ ಗಣಿ ಕೇಜ್ ಮುಂದಿರಬೇಕು” ಎಂದ. ಕನಕ, “ಯಾಕೋ ಏನೋ ಬೆಳಿಗ್ಗೆ ಎದ್ದಾಗಿಂದ ಮನಸ್ಸೆ ಚೆನ್ನಾಗಿಲ್ಲ” ಎಂದಳು. ಸೆಲ್ವಮ್, “ಯಾಕೆ ಏನಾಯಿತು?” ಎಂದ. ಕನಕ ತಟ್ಟೆಗೆ ದೋಸೆ ಹಾಕಿ ಚಟ್ನಿ ಹಾಕುತ್ತಿದ್ದಾಗ ಚಟ್ನಿ ಸ್ವಲ್ಪ ಕೆಳಕ್ಕೆ ಬಿದ್ದು, ಸೆಲ್ವಮ್ ಕನಕಳನ್ನೇ ನೋಡುತ್ತಾ “ಮಣಿ ಎಲ್ಲಿ?” ಎಂದ. “ಇನ್ನೇನು ಬರ್ತಾನೆ. ಅವನೂ ನಿಮ್ಮಂತೆ ಆ ಪಬ್ಲಿಕ್ ಟಾಯ್ಲೆಟ್ಗೆ ಹೋಗುವುದಿಲ್ಲ. ಸೈನಾಟ್ ಕಡೆಗೆ ಹೋಗಿರಬೇಕು” ಎಂದಳು. ಸೆಲ್ವಮ್, “ಅವನು ಈ ಸಲಾನಾದ್ರೂ ಪಾಸ್ ಆಗ್ತಾನೊ ಇಲ್ಲವೊ? ವಲಸೆ ಬಂದ ನಮಗೆ ಗಣಿ ಕೆಲಸ ಬಿಟ್ಟರೆ ಏನಿದೆ? ಅವನು ಬೇಗನೆ ಓದಿ ಕೆಲಸಕ್ಕೆ ಹೋಗಬೇಕು. ಅವನು ಬಂದ ಮೇಲೆ ಹೇಳು” ಎನ್ನುತ್ತಿದ್ದಂತೆ ಮಣಿ ಎದುರಿಗೆ ಬಂದು ನಿಂತುಕೊಂಡ. ಕನಕ, “ನೀವೇ ಹೇಳಿ. ಬಂದನಲ್ಲ ನಿಮ್ಮ ಮಗ” ಎಂದಳು. ಸೆಲ್ವಮ್, “ಮಗ ದೊಡ್ಡವನಾಗಿಬಿಟ್ಟನಲ್ಲ? ನಾನು ಏನು ಹೇಳುವುದು?” ಎಂದು ಸೈಕಲ್ ತುಳಿದುಕೊಂಡು ಗಣಿಯ ಕಡೆಗೆ ಹೊರಟ.
ಮಣಿ ಅಪ್ಪನ ಕಡೆಗೆ ನೋಡುತ್ತಾ “ಅಪ್ಪ.. ನಮ್ಮಪ್ಪ..?” ಎಂದು ನಕ್ಕ. ಕನಕ, ಸೆಲ್ವಮ್ ಹೋಗುವುದನ್ನೇ ಹಿಂದಿನಿಂದ ನೋಡುತ್ತಾ ನಿಂತುಕೊಂಡಳು. ಯಾಕೋ ಕನಕಳಿಗೆ ಸೆಲ್ವಮ್ನನ್ನು ಈ ದಿನ ಕೆಲಸಕ್ಕೆ ಹೋಗದಂತೆ ತಡೆಯಬೇಕು ಎನಿಸಿತು. ಆದರೆ ಹಾಗೆ ಮಾಡಲಿಲ್ಲ. ಸೆಲ್ವಮ್ ಸ್ವಲ್ಪ ದೂರ ಹೋದ ಮೇಲೆ ಕನಕ ಕೂಗಿಕೊಂಡಳು. ಸೆಲ್ವಮ್ಗೆ ಕೇಳಿಸದೆ ಹೊರಟುಹೋದ. ಮಣಿ, “ಯಾಕಮ್ಮ?” ಕೇಳಿದ. “ಹೋಗಿ ನಿಮ್ಮಪ್ಪನ್ನ ವಾಪಸ್ ಕರ್ಕೊಂಡು ಬಾ” ಎಂದಳು. ಮಣಿ, “ಯಾಕಮ್ಮ?” ಎಂದ. “ಯಾಕೊ ಗೊತ್ತಿಲ್ಲ. ಬೆಳಿಗ್ಗೆಯಿಂದ ನನಗೆ ಮನಸ್ಸೆ ಸರಿಯಾಗಿಲ್ಲ. ನೀನು ಸುಮ್ಮನೆ ಹೋಗಿ ಕರ್ಕೊಂಡು ಬಾ” ಎಂದಳು. ಮಣಿ, ಸೆಲ್ವಮ್ ಹಿಂದುಗಡೆ ಓಡಿದ. ಸೆಲ್ವಮ್ ನಿಧಾನವಾಗಿ ತಿರುವುಗಳಲ್ಲಿ ಸೈಕಲ್ ತುಳಿಯುತ್ತಾ ಹೋಗುತ್ತಿದ್ದು ಮಣಿ ಓಡಿಹೋಗಿ ಸೆಲ್ವಮ್ನನ್ನು ನಿಲ್ಲಿಸಿ ಹಿಂದಕ್ಕೆ ಕರೆದುಕೊಂಡು ಬಂದ.
ಹಿಂದಕ್ಕೆ ಬಂದ ಸೆಲ್ವಮ್, “ಕನಕಾ ಯಾಕೆ? ಕೆಲಸಕ್ಕೆ ಹೋಗುವಾಗ ಹಿಂದಕ್ಕೆ ಕರೆದಿದ್ದು?” ಎಂದ. ಕನಕ, “ಅದೇನೊ ನನಗೆ ಗೊತ್ತಿಲ್ಲ. ಈಹೊತ್ತು ನೀವು ಕೆಲಸಕ್ಕೆ ಹೋಗುವುದು ಬೇಡ ಅನಿಸುತ್ತೆ. ಮನೆಯಲ್ಲೇ ಇರಿ” ಎಂದಳು. ಸೆಲ್ವಮ್, “ಆಯಿತು ಬಿಡು” ಎಂದು ಮನೆ ಹೊರಗಡೆ ಕಲ್ಲುಬಂಡೆ ಮೇಲೆ ಕುಳಿತುಕೊಂಡು ಬೀಡಿ ಹೊತ್ತಿಸಿದ. ಅದೇ ಸಮಯಕ್ಕೆ ಗೋವಿಂದ ತರಕಾರಿ ಗಾಡಿಯನ್ನು ತಳ್ಳಿಕೊಂಡು ಬಂದು, “ಸೆಲ್ವಮ್ ಯಾಕೆ ಕೆಲಸಕ್ಕೆ ಹೋಗಲಿಲ್ಲವ? ಕೆಲಸ ಇರುವವರು ಕೆಲಸಕ್ಕೆ ಹೋಗುವುದಿಲ್ಲ. ಕೆಲಸ ಇಲ್ಲದವರು ನಾವು ನೋಡು. ದಿನಾ ಏನಾದರು ಒಂದು ಕೆಲಸ ಮಾಡಲೇಬೇಕು. ಇಲ್ಲ ಅಂದರೆ ಸಾಯಂಕಾಲ ಸಾಪಾಡು ಇರುವುದಿಲ್ಲ. ನೀನು ನೋಡು ಕೆಲಸಕ್ಕೆ ಹೋದರೂ ಸಂಬಳ. ಹೋಗದೇ ಇದ್ದರೂ ಸಂಬಳ. ಕತ್ತೆ ಮೇಯಿಸಿದರೂ ಕಂಪನಿಯಲ್ಲಿ ಮೇಯಿಸಬೇಕು ನೋಡು” ಎಂದ.
ಸೆಲ್ವಮ್, “ಇದ್ದ ಕೆಲಸಾನ ಕಳಕೊಂಡು ಈಗ ಮಾತನಾಡುವುದು ನೋಡು” ಎಂದ. ಗೋವಿಂದ ತಲೆ ಕೆರೆದುಕೊಳ್ಳುತ್ತ “ಆ ಕತೆ ಯಾಕೆ ಜ್ಞಾಪಿಸ್ತೀಯ ಬಿಡಪ್ಪ” ಎನ್ನುತ್ತಾ ತರಕಾರಿ ಬಂಡಿಯನ್ನು ಗೋಡೆಯ ಪಕ್ಕ ನೆರಳಿಗೆ ತಳ್ಳಿ ನಿಲ್ಲಿಸಿ ಸೆಲ್ವಮ್ ಪಕ್ಕದಲ್ಲಿ ಕುಳಿತುಕೊಂಡು ಮತ್ತೆ “ಯಾಕೆ ಕೆಲಸಕ್ಕೋಗಲಿಲ್ಲ?” ಎಂದ. ಸೆಲ್ವಮ್, “ಅದೇನೋ ನಿಮ್ಮ ಕನಕಕ್ಕನವರು ಹೋಗಬೇಡ ಅಂತ ಹಠ ಹಿಡಿದು ಕುಳಿತಿದ್ದಾರೆ ನೋಡು” ಎಂದ. ಗೋವಿಂದ, “ಹೌದಾ! ಯಾಕಂತೆ? ಹಾಗಾದರೆ ಮಟನ್ಗಿಟನ್ ತಂದುಕೊಡು” ಎಂದ. ಸೆಲ್ವಮ್, “ಕನಕಾ ಸ್ವಲ್ಪ ಟೀ ಮಾಡು. ನಿಮ್ಮಣ್ಣ ಗೋವಿಂದಾನೂ ಕುಡಿಯಲಿ” ಎನ್ನುತ್ತ ಒಂದು ಬೀಡಿಯನ್ನು ಜೇಬಿನಿಂದ ತೆಗೆದು ಗೋವಿಂದನಿಗೆ ಕೊಟ್ಟ.
ಗೋವಿಂದ ಮೊದಲಿಗೆ ಸೆಲ್ವಮ್ ಜೊತೆಯಲ್ಲೇ ಅಂಡರ್ಗ್ರೌಂಡ್ನಲ್ಲಿ ಚೆನ್ನಾಗಿಯೇ ಕೆಲಸ ಮಾಡಿಕೊಂಡಿದ್ದನು. ಒಂದು ದಿನ ಕೆಲಸ ಮುಗಿಸಿಕೊಂಡು ಕೇಜ್ ಮೂಲಕ ಮೇಲಕ್ಕೆ ಬಂದಾಗ ಸೆಕ್ಯೂರಿಟಿಗೆ ಏನೋ ಸಂದೇಹ ಬಂದು ಗೋವಿಂದನನ್ನು ಸೆಕ್ಯೂರಿಟಿ ಕೋಣೆ ಒಳಕ್ಕೆ ಕರೆದುಕೊಂಡೋಗಿ ಪ್ಯಾಂಟ್ ಬಿಚ್ಚಿ ಮಲಗಿಸಿ ಹಿಂದೆ ನೋಡಿದರು. ಹಿಂದೆ ಒಂದು ಬಿಳಿ ಬಟ್ಟೆಯ ಸಣ್ಣ ಉಂಡೆ ಕಾಣಿಸಿಕೊಂಡು ಅದನ್ನು ತೆಗೆದು ಬಿಚ್ಚಿ ನೋಡಿದಾಗ ಅದರಲ್ಲಿ ಚಿನ್ನದ ಅದಿರಿನ ಕಲ್ಲು ಪುಡಿ ಇದ್ದು ಗೋವಿಂದನನ್ನು ಕೆಲಸದಿಂದ ಒಂದೇ ಏಟಿಗೆ ತೆಗೆದುಹಾಕಿದ್ದರು. ಅಂದಿನಿಂದ ಗೋವಿಂದನ ಬದುಕು ಬೀದಿಗೆ ಬಿದ್ದ ತರಕಾರಿಯಂತೆ ಚೆಲ್ಲಾಪಿಲ್ಲೆಯಾಗಿ ಹೋಗಿತ್ತು.
ಅದೃಷ್ಟವೆಂದರೆ ಕ್ಯಾಂಪ್ ಮನೆಯಿಂದ ಖಾಲಿ ಮಾಡಿಸದೇ ಬಿಟ್ಟಿದ್ದರು. ಗೋವಿಂದ ಕಂಡಕಂಡ ಅಧಿಕಾರಿಗಳನ್ನೆಲ್ಲ ಬೇಡಿಕೊಳ್ಳುತ್ತಿದ್ದರೂ ಅವನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ. ಕೋಪ ಬಂದಾಗ, “ನಾವೇನೊ ಬಡವರು ಕಂಪನಿ ಕೊಡೊ ಸಂಬಳ ಸಾಲದೇ ಹೇ… ತಿನ್ನೊ ಕೆಲಸ ಮಾಡ್ತೀವಿ. ಅಧಿಕಾರಿಗಳು ಬಂಗಾರದ ಘಟ್ಟಿಗಳನ್ನೇ ಕಳ್ಳತನ ಮಾಡಿಕೊಂಡು ಹೋಗ್ತಾರೆ. ಅವರನ್ನು ಯಾರೂ ಕೇಳುವುದಿಲ್ಲ. ಎಲ್ಲಾ ಕಷ್ಟಗಳೂ ಬಡವರಿಗೆ ಮಾತ್ರ ಬರತವೆ ನೋಡು” ಎಂದು ಆಗಾಗ ಉದ್ದಂಡಮ್ಮಾಳ್ ದೇವಿಯ ಎದುರಿಗೆ ನಿಂತು ಕೇಳುತ್ತಾನೆ. ಆದರೆ ಉದ್ದಂಡಮ್ಮಾಳ್ ಇವನ ಮಾತುಗಳನ್ನು ಕೇಳಿದರೆ ತಾನೆ? ಅಂತೂ ಒಂದು ದಿನ ನನ್ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಿಂದಲೇ ಬದುಕುತಿದ್ದಾನೆ.
ಕನಕ ಟೀ ಮಾಡಿಕೊಟ್ಟ ಮೇಲೆ ಇಬ್ಬರೂ ಗಣೇಶ್ ಬೀಡಿ ಸೇದುತ್ತ ಟೀ ಕುಡಿದರು. ಗೋವಿಂದ, “ನಾನು ಇನ್ನ ಬರ್ತೀನಿ” ಎಂದು ತರಕಾರಿ ಬಂಡಿಯನ್ನು ತಳ್ಳಿಕೊಂಡು ಹೊರಟ. ಸೆಲ್ವಮ್ ಮನೆ ಒಳಕ್ಕೆ ಹೋಗಿ ಯೂನಿಫಾರ್ಮ್ ಬಟ್ಟೆಗಳನ್ನು ಬಿಚ್ಚಿ ಸಿವಿಲ್ ಬಟ್ಟೆಗಳನ್ನು ಧರಿಸಿ ಮತ್ತೆ ಮನೆ ಹೊರಕ್ಕೆ ಬಂದು “ಹಾಗೇ ಟೌನ್ (ರಾಬರ್ಟ್ಸನ್ಪೇಟೆ) ಕಡೆ ಹೋಗಿ ಸುತ್ತಿಕೊಂಡು ಬರ್ತೀನಿ” ಎಂದು ಸೈಕಲ್ನಲ್ಲಿ ಹೊರಟುಹೋದ. ಕನಕ, ಸುಮತಿ ಕಡೆಗೆ ನೋಡಿ “ನಿಮ್ಮಪ್ಪನಿಗೆ ಐದು ನಿಮಿಷ ಮನೆಯಲ್ಲಿ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ ನೋಡು” ಎಂದಳು. ಸುಮತಿ, “ಅಮ್ಮ, ಅಪ್ಪ ಪಾಪ! ಹೋಗಿಬರಲಿ ಬಿಡಮ್ಮ” ಎಂದಳು. ಕನಕ ಮತ್ತು ಸುಮತಿ ಮನೆ ಒಳಕ್ಕೆ ಬಂದು ಐದು ನಿಮಿಷಗಳಾಗಿರಬೇಕು ಅಷ್ಟರಲ್ಲಿ ಸೈಕಲ್ ಸದ್ದಾಗಿ ಕನಕ, “ಸುಮತಿ, ನಿಮ್ಮಪ್ಪ ಬಂದಂತಿದೆ ನೋಡು” ಎಂದಳು. ಹೌದು! ಸೆಲ್ವಮ್ ಹಿಂದಕ್ಕೆ ಬಂದು ಸೈಕಲ್ಅನ್ನು ಗೋಡೆಯ ಪಕ್ಕದಲ್ಲಿ ನಿಲ್ಲಿಸಿ ಕಲ್ಲಿನ ಮೇಲೆ ಕುಳಿತುಕೊಂಡ.
ಕಾಲಿನಲ್ಲಿ ರಕ್ತ ಒಸರುತ್ತಿದೆ. ಸುಮತಿ, “ಅಮ್ಮ ಬಾ ಇಲ್ಲಿ” ಎಂದಳು. ಕನಕ ಓಡಿಬಂದು ನೋಡುತ್ತಾಳೆ. ಕಾಲಿನ ಹೆಬ್ಬೆರಳಲ್ಲಿ ರಕ್ತ ಒಸರುತ್ತಿದೆ. ಕನಕ, “ಅಯ್ಯೋ ಏನ್ರಿ ಇದು?” ಎಂದಳು. ಸೆಲ್ವಮ್, “ಏನೂ ಇಲ್ಲ. ಅಲ್ಲೊಂದು ಕಲ್ಲು ಹೊಡೆದುಬಿಟ್ಟಿತು. ಒಂದಷ್ಟು ಅರಿಶಿನ, ಒದ್ದೆಬಟ್ಟೆ ತೆಕೊಂಡು ಬಾ” ಎಂದ. ಕನಕ ಮನೆ ಒಳಕ್ಕೆ ಹೋಗಿ ಚೆಂಬಿನಲ್ಲಿ ನೀರು ತಂದು “ಸುಮತಿ ನೀರಾಕು ನಿಮ್ಮಪ್ಪ ಬೆರಳುಗಳನ್ನು ತೊಳೆದುಕೊಳ್ಳಲಿ. ನಾನು ಅರಿಶಿನ ಬಟ್ಟೆ ತರ್ತೀನಿ” ಎಂದು ಮತ್ತೆ ಮನೆ ಒಳಕ್ಕೆ ಹೋದಳು. ಸುಮತಿ ಕಾಲಿನ ಮೇಲೆ ನೀರಾಕುತ್ತಿದ್ದಂತೆ ಸೆಲ್ವಮ್ ಬೆರಳುಗಳ ಮೇಲಿದ್ದ ರಕ್ತವನ್ನು ತೊಳೆದಷ್ಟು ರಕ್ತ ಬರುತ್ತಲೇ ಇತ್ತು. ಕನಕ, “ನಾನು ಬೆಳಿಗ್ಗೆಯಿಂದ ಹೇಳ್ತಾನೆ ಇದ್ದೀನಿ. ನನಗ್ಯಾಕೊ ಮನಸ್ಸು ಸರಿ ಇಲ್ಲ ಅಂತ. ಸಧ್ಯ ಕೆಲಸಕ್ಕೆ ಹೋಗದೇ ಇದ್ದಿದ್ದು ಒಳ್ಳೇದಾಯಿತು” ಎಂದಳು. ಸೆಲ್ವಮ್, “ಹೋಗಲಿ ಸುಮ್ಮನೆ ಇರೆ, ಈಗೇನಾಯಿತು ಅಂತ ಬಡಕೊಳ್ತೀಯಾ” ಎಂದು ಗದರಿದ. ಕನಕ ಅರಿಶಿನ ಹಾಕಿದ ಒದ್ದೆಬಟ್ಟೆಯನ್ನು ತಂದು ಕಾಲಿಗೆ ಕಟ್ಟಲು ಸೆಲ್ವಮ್ ಮುಂದೆ ಕುಳಿತುಕೊಂಡಳು.

ಅಷ್ಟರಲ್ಲಿ ದಿಢೀರನೆ ದೊಡ್ಡ ಸದ್ದಾಗಿ ಭೂಮಿ ಕಂಪಿಸತೊಡಗಿತು. ಕನಕ ಕುಕ್ಕರುಕಾಲಿನಲ್ಲಿ ಕುಳಿತುಕೊಂಡಿದ್ದವಳು ಹಾಗೇ ಹಿಂದಕ್ಕೆ ಬೀಳುವುದರೊಂದಿಗೆ “ಅಯ್ಯೋ ತಾಯಿ ಉದ್ದಂಡಮ್ಮಾ” ಎಂದಳು. ಮನೆ ಒಳಗಿದ್ದ ಸುಮತಿ, “ಅಮ್ಮಾ” ಎಂದು ಮನೆ ಒಳಗಿಂದ ಓಡಿ ಹೊರಕ್ಕೆ ಬಂದಳು. ಮನೆಯಲ್ಲಿದ್ದ ಪಾತ್ರೆ ಪಗಡಿಗಳು ದಡಬಡ ಎಂದು ಸದ್ದು ಮಾಡತೊಡಗಿದವು. ಕೆಲವು ಸಣ್ಣಪುಟ್ಟ ಸಾಮಾನುಗಳು ನೆಲದ ಮೇಲೆಲ್ಲ ಉರುಳಾಡಿದವು. ಸೆಲ್ವಮ್ ಕನಕಳನ್ನು ಎತ್ತಿಕೂರಿಸಿ ಅವಳನ್ನೇ ನೋಡುತ್ತ ಕಣ್ಣುಗಳಲ್ಲೇ ಪ್ರಶ್ನೆ ಮಾಡಿಕೊಂಡು ನೋಡಿದ. ಕನಕ, “ಅಯ್ಯೋ ದೇವರೆ ಯಾರೂ ಸಾಯಬಾರದಪ್ಪ” ಎಂದು ಕೈಜೋಡಿಸಿದಳು. ಸೆಲ್ವಮ್, “ಯಾವ ಗಣಿಯಲ್ಲಿ ರಾಕ್ಬರ್ಸ್ಟ್ ಆಯಿತೊ ಗೊತ್ತಿಲ್ಲವಲ್ಲ? (ಕೈಯಲ್ಲಿದ್ದ ಗಡಿಯಾರ ನೋಡಿಕೊಳ್ಳುತ್ತಾ) ಸರಿಯಾಗಿ 11 ಗಂಟೆ. ಎಲ್ಲರೂ ಕೆಲಸದ ಮೇಲಿರ್ತಾರೆ” ಎಂದು, ಆತಂಕ ವ್ಯಕ್ತಪಡಿಸಿದ.
ಕೆಜಿಎಫ್ ನಗರವೇ ಅಲ್ಲದೇ ಸುತ್ತಮುತ್ತಲಿನ ಹಳ್ಳಿಗಳಿಗೂ ಸದ್ದು ಕೇಳಿ ಎಲ್ಲರೂ ತಳ್ಳಣಗೊಳ್ಳುವುದರ ಜೊತೆಗೆ ಹತ್ತಾರು ಕ್ಷಣಗಳ ಕಾಲ ಭೂಮಿಯೇ ಆತಂಕಗೊಂಡಿತ್ತು. ಮನೆಗಳ ಒಳಗಿದ್ದ ಮಹಿಳೆಯರು, ಮಕ್ಕಳು ಹೊರಕ್ಕೆ ಓಡಿಬಂದರು. ಎರಡನೇ ಶಿಫ್ಟ್ ಕೆಲಸಕ್ಕೆ ಹೋಗಲು ಮನೆಗಳ ಒಳಗೆ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರು ಕೂಡ ಮನೆಗಳಿಂದ ಹೊರಗಡೆಗೆ ಎದ್ದು ಬಂದರು. ಗಣಿಗಳಲ್ಲಿ ಶಿಲಾಸ್ಫೋಟಗಳು ಸಾಮಾನ್ಯ. ಕನಕ ಸದ್ದು ನಿಂತೋದ ಮೇಲೆ ಮತ್ತೆ ಸರಿಯಾಗಿ ಕುಳಿತುಕೊಂಡು ರಕ್ತ ಒಸರುತ್ತಿದ್ದ ಸೆಲ್ವಮ್ ಬೆರಳಿಗೆ ಅರಿಶಿನ ಹಾಕಿದ ಬಟ್ಟೆಯನ್ನು ಕಟ್ಟಿದಳು. ಅವಳ ದೇಹ ಈಗಲೂ ಭೂಮಿಯಂತೆ ಕಂಪಿಸುತ್ತಿತ್ತು.
ಎದ್ದು ನಿಂತ ಸೆಲ್ವಮ್, “ಯಾವ ಗಣಿಯಲ್ಲಿ ರಾಕ್ಬರ್ಸ್ಟ್ ಆಯಿತೊ” ಎಂದು ಆತಂಕ ವ್ಯಕ್ತಪಡಿಸುತ್ತಿದ್ದಂತೆ ಕಾರ್ಮಿಕರು ಕೆಲವರು ರಸ್ತೆಗೆ ಬಂದು ಅವರವರೇ ಪ್ರಶ್ನೆಗಳನ್ನು ಕೇಳುತ್ತ ಉತ್ತರಗಳನ್ನೂ ಕೊಡುತ್ತಿದ್ದರು. ಎಲ್ಲಾ ಗಣಿ ಕಾಲೋನಿಗಳಲ್ಲಿ ಗುಂಪಗುಂಪಾಗಿ ಸೇರಿಕೊಂಡ ಕಾರ್ಮಿಕರು ಯಾವ ಗಣಿಯಲ್ಲಿ ರಾಕ್ಬರ್ಸ್ಟ್ ಆಯಿತೊ ಎಷ್ಟು ಕಾರ್ಮಿಕರು ಸತ್ತರೊ ಎಂದು ಮಾತನಾಡಿಕೊಳ್ಳತೊಡಗಿದರು. ಸೆಲ್ವಮ್ ಸೈಕಲ್ ತೆಗೆದುಕೊಂಡು ಯಾವ ಗಣಿಯಲ್ಲಿ ಶಿಲಾಸ್ಫೋಟ ಸಂಭವಿಸಿತೊ ಎಂದು ರಸ್ತೆಯಲ್ಲಿ ಅಡ್ಡ ಸಿಕ್ಕಿದ ಜನರನ್ನೆಲ್ಲ ಕೇಳುತ್ತಾ ಹೊರಟ. ಕೆಲವರು ಮೈಸೂರು ಮೈನ್ಸ್ ಕಡೆಯಿಂದಲೇ ಸದ್ದು ಬಂದಿದ್ದು ಎನ್ನುತ್ತಿದ್ದರು. ಅಂತೂ ಸೆಲ್ವಮ್ ಕೇಳುತ್ತಾ ಕೇಳುತ್ತಾ ತಾನು ಕೆಲಸ ಮಾಡುವ ಗಣಿಯ ಹತ್ತಿರಕ್ಕೆ ಹೋಗಿ ವಿಚಾರಿಸಿದ.
ಸೆಕ್ಯೂರಿಟಿ, “ಹೌದು! ನಮ್ಮ ಗಣಿಯಲ್ಲೇ ರಾಕ್ಬರ್ಸ್ಟ್ ಆಗಿರುವುದು” ಎಂದರು. ಇನ್ನೂ ಸ್ವಲ್ಪ ಹೊತ್ತಾದ ಮೇಲೆ 66ನೇ ಹಂತದ ಎಂಟನೇ ಸುರಂಗದಲ್ಲಿ ರಾಕ್ಬರ್ಸ್ಟ್ ಆಗಿ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಶಿಲೆಗಳು ಕುಸಿದಿವೆಯಂತೆ. ಅಲ್ಲಿದ್ದ ಎಲ್ಲಾ ಕಾರ್ಮಿಕರು ತಪ್ಪಿಸಿಕೊಂಡಿದ್ದಾರೆ. ಆದರೆ ಡ್ರಿಲ್ಲಿಂಗ್ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಶಿಲೆಗಳ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದಾರೆ ಎನ್ನುವ ಆತಂಕದ ವಿಷಯ ತಿಳಿಯಿತು. ಅದೇ ಸುರಂಗದಲ್ಲಿ ಸೆಲ್ವಮ್ ನಿನ್ನೆ ಕೂಡ ಕೆಲಸ ಮಾಡಿ ಬಂದಿದ್ದು, ವಿಷಯ ತಿಳಿದ ಕೂಡಲೇ ಸೆಲ್ವಮ್ ಅಲ್ಲೇ ಕುಸಿದು ಕುಳಿತುಬಿಟ್ಟ.

ಒಬ್ಬ ಸೆಕ್ಯೂರಿಟಿ, “ನೀನು ಕೂಡ ಅದೇ ಸುರಂಗದಲ್ಲಿ ತಾನೇ ಕೆಲಸ ಮಾಡುವುದು?” ಸೆಲ್ವಮ್ನನ್ನು ಕೇಳಿದ. ಸೆಲ್ವಮ್ “ಹೌದು! ಸಾಮಿ, ಅದೇ ಸುರಂಗದಲ್ಲಿ” ಎಂದ. ಸೆಕ್ಯೂರಿಟಿ, “ನಿನ್ನ ಅದೃಷ್ಟ ಯಾಕೋ ಚೆನ್ನಾಗಿದೆ. ಈ ದಿನ ಯಾಕೆ ಹೋಗಲಿಲ್ಲ?” ಎಂದು ಪ್ರಶ್ನಿಸಿದ. ಸೆಲ್ವಮ್ ಕಾಲು ತೋರಿಸಿ, “ಕಾಲಿಗೆ ಏಟಾಗಿತ್ತು ಅದಕ್ಕೆ ಹೋಗಲಿಲ್ಲ” ಎಂದ. ಸೆಲ್ವಮ್ಗೆ, ತನ್ನ ಪತ್ನಿ ಕನಕ ಈ ದಿನ ಬೆಳಿಗ್ಗೆ ತನ್ನನ್ನು ಕೆಲಸಕ್ಕೆ ಹೋಗದಂತೆ ಯಾಕಾದರು ತಡೆದಳು? ಆಲೋಚಿಸತೊಡಗಿದ. ಕೊನೆಗೆ ಉದ್ದಂಡಮ್ಮಾಳ್ ದೇವಿಯ ದೇವಸ್ಥಾನ ಇರುವ ದಿಕ್ಕಿಗೆ ತಿರುಗಿಕೊಂಡು ಕೈಜೋಡಿಸಿ ಬಾಯಲ್ಲಿ ಏನೋ ಹೇಳಿಕೊಂಡ. ಕನಕಳಿಗೆ ಏನಾದರು ದಿವ್ಯಶಕ್ತಿ ಇದೆಯೇ ಎನ್ನುವ ಆಲೋಚನೆ ಸೆಲ್ವಮ್ ತಲೆಯಲ್ಲಿ ಸುಳಿದಾಡಿತು.

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

