ಆಚಾರ ಕೆಟ್ಟರೂ ಆಕಾರ ಕೆಡಬಾರದು ಅನ್ನುವ ಗಾದೆಯನ್ನು ನಾನು ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಸಂಸ್ಕೃತಿ ಅನ್ನುತ್ತೇವಲ್ಲ ಅದರ ಆಕಾರ, ವ್ಯವಸ್ಥೆಗೆ ಇರುವ ಆಕಾರ ಇವು ಕೆಡದೆ ಮುಂದುವರೆಯಬೇಕು, ವರ್ತನೆ ಕೆಟ್ಟರೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಬೇಕು ಅನ್ನುವ ಮನೋಧರ್ಮವೇ ನಮ್ಮನ್ನು ‘ದಾರಿ ತಪ್ಪಿಸುವ ಗಿಡʼ ಆಗಿರಬಹುದು. ಈ ಆಕಾರವನ್ನು ಕಾಪಾಡಿಕೊಳ್ಳುವ ಒತ್ತಡವೇ ವ್ಯಕ್ತಿಗಳನ್ನು ದುರ್ಬಲರನ್ನಾಗಿಸಿ ರಾಜಿಗೆ ಒಲಿಯುವಂತೆ ಮಾಡುತ್ತದೆ ಅನಿಸುತ್ತದೆ. ಹಾಗೆ ನೋಡಿದರೆ ಆಳು ಕೂಗಿನ ಹಕ್ಕಿಗಿಂತ ದಾರಿ ತಪ್ಪಿಸುವ ಗಿಡ ಹೆಚ್ಚು ಅರ್ಥವ್ಯಾಪ್ತಿ ಇರುವ ರೂಪಕ.
ಕತೆಗಾರ ಸ್ವಾಮಿ ಪೊನ್ನಾಚಿ ಹೊಸ ಕಥಾ ಸಂಕಲನ “ದಾರಿ ತಪ್ಪಿಸುವ ಗಿಡ”ಕ್ಕೆ ಓ ಎಲ್ ನಾಗಭೂಷಣ ಸ್ವಾಮಿ ಬರೆದ ಮುನ್ನುಡಿ
ಪ್ರಿಯ ಸ್ವಾಮಿ ಪೊನ್ನಾಚಿ,
ನಿಮ್ಮ ಮೊದಲ ಕಥಾ ಸಂಕಲನ ‘ಧೂಪದ ಮಕ್ಕಳುʼ ಸಕಾರಣವಾಗಿಯೇ ಓದುಗರನ್ನು ಸೆಳೆಯಿತು. ಈ ಎರಡನೆಯ ಸಂಕಲನದ ಕಥೆಗಳನ್ನು ಓದುತ್ತ ಕಥೆಗಾರಿಕೆಯ ಕಸುಬಿನ ಕೌಶಲಗಳನ್ನು ನೀವು ರೂಢಿಸಿಕೊಳ್ಳುತ್ತಿರುವ ರೀತಿಯ ಬಗ್ಗೆ ನನಗೆ ಕುತೂಹಲ ಹುಟ್ಟಿತು. ಇಂದು ಬರೆಯುತ್ತಿರುವ ಕನ್ನಡದ ಕಥೆಗಾರರು ಕನ್ನಡದ ಕವಿತೆ ಬರೆಯುವವರಿಗಿಂತ ಹೆಚ್ಚು ಪ್ರಯೋಗಶೀಲರಾಗಿ, ಒಬ್ಬೊಬ್ಬರೂ ತಮ್ಮದೇ ದಾರಿಗಳನ್ನು ನಿರ್ಮಿಸಿಕೊಳ್ಳುವುದರಲ್ಲಿ ಮಗ್ನರಾದವರ ಹಾಗೆ ಕಾಣುತ್ತಾರೆ. ನಮ್ಮ ಬಹಳಷ್ಟು ಕವಿಗಳು ದೇಶಕಾಲಗಳಿಗೆ ಅತೀತವಾದ ಭಾವ, ಅನುಭಾವಗಳ ಲೋಕದಲ್ಲಿ ಮೈ ಮರೆತು ಸಂಚರಿಸುತ್ತಿರುವಾಗ ಕಥೆಗಾರರು ಕರ್ನಾಟಕದ ಬೇರೆಬೇರೆ ಪ್ರದೇಶಗಳ ಬದುಕಿನ ನುಡಿ-ಭಾವ-ಚಿತ್ರಗಳನ್ನು ರಚಿಸುತ್ತಿದ್ದಾರೆ. ಈಗಿನ ಚಾಮರಾಜನಗರ ಜಿಲ್ಲೆ ಹಲವು ಜನಸಮುದಾಯಗಳ ಬದುಕಿನ ರೀತಿ, ನುಡಿ ವೈವಿಧ್ಯ, ಆಚಾರ, ನಂಬಿಕೆಗಳ ಲೋಕ, ಆಧುನಿಕತೆಯನ್ನು ಒಳಗುಮಾಡಿಕೊಳ್ಳುತ್ತ ಮನಸಿನಲ್ಲಿ ಬೇರೂರಿರುವ ಬದುಕಿನ ರೀತಿಯನ್ನು ಬಿಡಲಾಗದ ತೊಳಲಾಟ ಇಂಥವೆಲ್ಲ ಇನ್ನೂ ಹೆಚ್ಚು ದಟ್ಟವಾಗಿ ಭಾಷೆಯಲ್ಲಿ ಮೈ ಪಡೆಯಬೇಕಾಗಿದೆ. ಅಂಥ ಒಂದು ಕೆಲಸವನ್ನು ನಿಮ್ಮ ಕಥೆಗಳು ನಿರ್ವಹಿಸುತ್ತಿವೆ ಅನ್ನಿಸಿತು.
ಸ್ವಾಮಿ, ಗಾಡ ಕತ್ತಲಿನಲ್ಲಿ ಒಂದಿಷ್ಟು ಬೆಳಕು ಬಿದ್ದು ಕಣ್ಣು ಹಿಡಿದಿಟ್ಟುಕೊಳ್ಳುವ ದೃಶ್ಯ, ಕತ್ತಲಲ್ಲೂ ಕಿವಿ ಚುರುಕಾಗಿ ಆಲಿಸುವ ಬಗೆಬಗೆಯ ಸದ್ದು ಇವು ಮುಖ್ಯವಾಗಿ, ಅರಿವಿಗೆ ಬರುವ ವಾಸನೆ, ರುಚಿ ಮತ್ತು ಸ್ಪರ್ಶಗಳನ್ನು ಗಮನಕ್ಕೆ ಬರುವಷ್ಟು ಮಟ್ಟಿಗೆ ನೀವು ಭಾಷೆಯಲ್ಲಿ ತಲುಪಿಸುವ ರೀತಿ. ಇದು ನನಗೆ ಬಹಳ ಇಷ್ಟವಾಯಿತು. ‘ಗೋಣಿ ಮರದ ಕೊಂಬೆʼಯಲ್ಲಿ ನಡುರಾತ್ರಿಯ ವೇಳೆ ಬಸ್ಸು ಇಳಿದು ಸುತ್ತಲ ವಿವರಗಳನ್ನು ನಿರೂಪಕ ಅರಿವಿಗೆ ತಂದುಕೊಳ್ಳುವ ಭಾಗ, ಇಡೀ ಕಥೆಯಲ್ಲಿ ಕತ್ತಲಿನ ಅನುಭವ ಇದಕ್ಕೆ ಉದಾಹರಣೆ. ಹಾಗೆಯೇ ‘ದಾರಿ ತಪ್ಪಿಸುವ ಗಿಡʼ ಕಥೆಯಲ್ಲೂ ರಾತ್ರಿಯ ಹೊತ್ತಿನಲ್ಲಿ ಹೊಲದ ಕಾವಲು ಕಾಯುತ್ತ ಕೂತಾಗ ಶಿವನಪ್ಪ ಅರಿವಿಗೆ ತಂದುಕೊಳ್ಳುವ ವಿವರಗಳೂ ಇವೆ. ಇಂದ್ರಿಯಗಳ ಅನುಭವದ ವಿವರಗಳನ್ನು ಈ ಎರಡು ಕಥೆಗಳಲ್ಲಿ ನೀವು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ. ಇಂಥ ಖಚಿತ ವಿವರಗಳು ಕಥೆಯ ವಾತಾವರಣ ಸೃಷ್ಟಿಗೆ, ಕಥನದ ಸಾಂದ್ರತೆಗೆ ಬಹಳ ಮುಖ್ಯವಾಗುತ್ತವೆ. ಬರಹಗಾರರು ನುಡಿಲೋಕವನ್ನು ಸೃಷ್ಟಿಸಲು ಇಂಥ ಖಚಿತ ವಿವರಗಳು ಬಹಳ ಸಹಾಯ ಮಾಡುತ್ತವೆ. ಈ ಎರಡೂ ಕಥೆಗಳು ಕಾಡಿನ ಅಂಚಿನಲ್ಲಿ, ಊರಿನಿಂದ ಬಹಳ ದೂರವೂ ಅಲ್ಲದ ಹತ್ತಿರವೂ ಅಲ್ಲದ ಸ್ಥಳಗಳಲ್ಲಿ ನಡೆಯುವ ಕಥೆಗಳು. ಆ ಕಥೆಗಳಲ್ಲಿ ಬರುವ ವಿವರಗಳಿಂದಲೇ ಚಾಮರಾಜ ನಗರದ ಪ್ರದೇಶದ ಬದುಕಿನ ಕಥನ ಇದು ಎಂಬ ವಿವರವೂ ತಿಳಿಯುತ್ತದೆ.
ಹೀಗೆಯೇ ‘ಇಟ್ಟರೆ ಸಗಣಿಯಾದೆ,ʼ ‘ಸಿದ್ದವ್ವ ಮತ್ತು ತಂಬೂರಿ ಮಾದʼ ಇಂಥ ಕಥೆಗಳಲ್ಲಿ ನೀವು ತಳವರ್ಗಕ್ಕೆ ಸೇರಿದ ಪಾತ್ರಗಳ ಮಾತನ್ನು ಬಳಸುವಾಗ ಆ ಪ್ರದೇಶದ ಮಾತಿನ ಜನರ ಕನ್ನಡದ ದನಿಯ ಬಾಗು, ಏರು, ಇಳಿತ, ಬಳುಕುಗಳೆಲ್ಲ ಮನಸಿನ ಕಿವಿಗೆ ಕೇಳುತ್ತವೆ. ಆದರೂ ನೀವು ನಿರೂಪಣೆಯನ್ನು ಹೆಚ್ಚಾಗಿ ಬಯಸುವ, ಸಂಭಾಷಣೆ ಅಷ್ಟು ಮುಖ್ಯವೆಂದು ಭಾವಿಸದ ಕಥೆಗಾರರು ಅನ್ನಿಸಿತು. ಶಿಷ್ಟವೆನಿಸುವ ಭಾಷೆಯ ನಿರೂಪಣೆ ಮತ್ತು ಪಾತ್ರದ ವಾಸ್ತವಕ್ಕೆ ನಿಷ್ಠವಾದ ಆಡು ಮಾತಿನ ಬಳಕೆ ಇವನ್ನು ಸಮತೋಲನದಲ್ಲಿ ಲಯ ತಪ್ಪದೆ ನಿರ್ವಹಿಸುವುದು ಬಹಳ ಕಷ್ಟದ ಕೆಲಸ. ಹೀಗೇ ಎಂದು ಯಾರೂ ದಾರಿ ತೋರಲಾರರು, ನೀವೇ, ನೀವು ಮಾತ್ರವಲ್ಲ ಒಬ್ಬೊಬ್ಬ ಕಥೆಗಾರರೂ ತಮಗೆ ತಕ್ಕ ಸಮತೋಲನ ಕಂಡುಕೊಳ್ಳಬೇಕು. ಕುವೆಂಪು ಅವರ ಕಾದಂಬರಿಗಳು ನುಡಿ ಬಳಕೆಯ ವೈವಿಧ್ಯವನ್ನು ಒಳಗೊಂಡಿರುವ ರೀತಿ ಇದೆಯಲ್ಲ, ಅದು ಕನ್ನಡದ ಬಹಳ ದೊಡ್ಡ ಸಾಧನೆ.
ಚಾಮರಾಜನಗರದಂಥ ವೈವಿಧ್ಯ ತುಂಬಿದ ಪ್ರದೇಶದಲ್ಲಿ ಬದುಕುವ ನಿಮಗೆ ಕಥೆಗಾರಿಕೆಯಲ್ಲಿ ನುಡಿ ಬಳಕೆಯ ಹದ ಬಹಳ ಮುಖ್ಯವಾಗಬೇಕು.
ನಿಮ್ಮ ಈ ಸಂಕಲನದ ಕಥೆಗಳನ್ನು ಓದಿದ ಮೇಲೆ ಯೋಚನೆ ಮಾಡಿದರೆ- ತಾವು ಬದುಕುವ ಪರಿಸರ ಮತ್ತು ಹೊರಗಿನ ಆಧುನಿಕ ಅನ್ನಬಹುದಾದ ವ್ಯವಸ್ಥೆಗಳ ಲೋಕದ ಪ್ರಭಾವದಿಂದ ತಬ್ಬಿಬ್ಬಾಗುವ ಪಾತ್ರಗಳು ದುರ್ಬಲವಾಗಿ ಶರಣಾಗುವ, ಅಥವಾ ವಾಸ್ತವದೊಡನೆ ರಾಜಿಮಾಡಿಕೊಂಡು ಸಮಾಧಾನ ತಂದುಕೊಳ್ಳುವ, ಆಗೀಗ ವಿರೋಧಿಸುವ ಚಿತ್ರಣಗಳ ಸಂಕಲನ ಇದು ಅನ್ನಿಸಿತು. ವ್ಯಕ್ತಿಯ ಸಾಮರ್ಥ್ಯಕ್ಕಿಂತ ವ್ಯವಸ್ಥೆ ಮತ್ತು ಪರಿಸರಗಳದೇ ಮೇಲುಗೈಯಾಗಿದೆ ಅಂತಲೂ ಅನ್ನಿಸಿತು. ಮುಖ್ಯವಾದ ಮಾತೆಂದರೆ, ಸ್ವಾಮೀ, ಕಥೆಗಾರರಾಗಿ ನೀವು ಸರಿ ತಪ್ಪುಗಳ ನಿರ್ಣಯವನ್ನು ಹೇಳಲು ಹೋಗದೆ ‘ಈ ಪಾತ್ರದ ಬದುಕು ಹೀಗಿದೆ ನೋಡಿʼ ಎಂದು ಹೇಳುವ ಕೆಲಸವನ್ನು ಮಾಡಿದ್ದೀರಿ.
‘ಗೌರಿʼ ಹಾಗೂ ‘ನಿಂಬೆ ಮತ್ತು ದೂಳತದ ಪಾಕಿಟ್ಟುʼ ಎರಡೂ ಕಥೆಗಳು ಒಂದೇ ವಿಷಯದ ಎರಡು ಮಗ್ಗುಲುಗಳನ್ನು ತೋರುತ್ತವೆ. ‘ಗೌರಿʼ ಕಥೆಯಲ್ಲಿ ಹಸುವನ್ನು ಕಳೆದುಕೊಂಡ ಮಾದೇವ, ಅನಾದಿಕಾಲದಿಂದಲೂ ನಂಬಿಕೊಂಡಿದ್ದ ಪೂಜಾರಿಯ ಮೈಮೇಲೆ ಬರುವ ದೈವದ ಶಕ್ತಿಯ ಬಗ್ಗೆ ಇದ್ದ ನಂಬಿಕೆಯನ್ನು ಅನುಭವದ ವಾಸ್ತವದ ಕಾರಣದಿಂದ ನೀಗಿಕೊಳ್ಳುವ ಕಥೆಯಾದರೆ ‘ಧೂಳತʼ ಕಥೆಯ ಮಂತ್ರವಾದಿ ಕೂಡ ಇಂಥ ನಂಬಿಕೆಗಳ ವ್ಯವಸ್ಥೆಗೆ ಬಲಿಯಾಗಿ ಮೌಢ್ಯವನ್ನು ರಕ್ಷಿಸುವವನೇ ಆಗಿದ್ದಾನೆ. ‘ಧೂಳತʼ ಕಥೆಯಲ್ಲಿ ಮಂತ್ರವಾದಿ ಮತ್ತು ಕಥೆಯ ನಿರೂಪಕನಾದ ಅವನ ಗೆಳೆಯ ಇಬ್ಬರೂ ಮಠದಲ್ಲಿ ಓದಿದವರು, ಮಠದ ಸ್ವಾಮಿಯ ಕಪಟಕ್ಕೆ ಬಲಿಯಾದವರು. ಈ ಎರಡೂ ಕಥೆ ವ್ಯವಸ್ಥೆಯೊಂದು ನಂಬಿಕೆಯೆಂಬ ಉಪಕರಣದ ಮೂಲಕ ಬಲಿ ಪಡೆಯುವವರನ್ನೂ ಬಲಿಯಾಗುವವರನ್ನೂ ನಿಯಂತ್ರಿಸುವುದನ್ನೇ ತೋರುತ್ತದೆ. ಅಂದರೆ ಪಾತ್ರಗಳಿಗಿಂತ ಅವರ ನಂಬಿಕೆಗಳನ್ನು ರೂಢಿಸಿದ ಪರಿಸರ ಶಕ್ತಿವಂತ ಅನ್ನಿಸುತ್ತದೆ.
ಇದಕ್ಕೆ ವಿರುದ್ಧವಾದ ಚಲನೆ ‘ಇಟ್ಟರೆ ಸಗಣಿಯಾದೆʼ ಕಥೆಯಲ್ಲಿದೆ. ಕ್ಯಾತನೆಂಬ ಹುಡುಗ ಗೌಡರ ಮನೆಯಲ್ಲಿ ಸತ್ತ ಹಸುವಿನ ಮಾಂಸದ ಪಾಲು ಸಿಕ್ಕೀತೆಂದು ಹಾತೊರೆದು ಆಸೆಪಡುತ್ತ ಶಾಲೆಯಲ್ಲಿ ಕೂತಿರುವಾಗ, ಮಕ್ಕಳೆಲ್ಲ ಮೆಚ್ಚುವ ರಮೇಶ್ ಮಾಸ್ತರು ‘ಇಟ್ಟರೆ ಸಗಣಿಯಾದೆʼ ಪದ್ಯದ ಪಾಠ ಮಾಡುತ್ತಾ ಮಾಂಸಾಹಾರ ಅಸಹ್ಯ ಎಂದು ಹೇಳುವುದು ಕೇಳಿ ತಬ್ಬಿಬ್ಬಾಗಿ, ಆಹಾರ ಮುಖ್ಯವೋ ಮೇಷ್ಟರ ಬೋಧನೆ ಮುಖ್ಯವೋ ಎಂದು ನಿರ್ಣಯಿಸಲಾಗದೆ ಊಟದ ಮುಂದೆ ಚಡಪಡಿಸುವುದಿದೆ. ಶಿಕ್ಷಣ ಕೂಡ ಎಳೆಯ ಮನಸುಗಳಲ್ಲಿ ಆಹಾರದ ಬಗ್ಗೆ ಸಂಶಯ, ಕೀಳರಿಮೆಗಳನ್ನು ಹುಟ್ಟಿಸುತ್ತದೆ. ಬೋಧನೆಯ ವ್ಯವಸ್ಥೆಯ ಎದುರಿಗೆ ಎಳೆಯ ಮನಸ್ಸು ದುರ್ಬಲವಾಗಿ ದಿಗ್ಭ್ರಮೆ ಅನುಭವಿಸುತ್ತದೆ. ಈ ಮೇಲಿನ ಮೂರೂ ಕಥೆಗಳಲ್ಲಿ ನೀವು ಮೂಢ ನಂಬಿಕೆ ಎಂಬ ನುಡಿಯನ್ನಾಗಲೀ ಆಹಾರ ರಾಜಕೀಯ ಅನ್ನುವ ನುಡಿಗಟ್ಟನ್ನಾಗಲೀ ಬಳಸದೆ ಕಥೆಯ ಮೂಲಕ ನಿಮ್ಮ ಆಶಯ ವ್ಯಕ್ತಪಡಿಸಿರುವ ರೀತಿ ಇಷ್ಟವಾಯಿತು.
ಕ್ಯಾತ ಪುಟ್ಟ ಹುಡುಗನಾಗಿ ದಿಕ್ಕುತಪ್ಪಿದವನಂತೆ ಚಡಪಡಿಸಿದರೆ ಸಿಟಿಂಗ್ ಎಂಎಲ್‌ಎ ಕರಿಯಪ್ಪ ಅನೇಕ ವರ್ಷಗಳ ನಂತರ ಗಂಗಾಡಿಯ ಗೌಡರ ಮನೆಗೆ ಊಟಕ್ಕೆ ಹೊರಟಾಗ ಅನುಭವಿಸುವ ದುಗುಡ, ಕಾತರ, ಉತ್ಸಾಹ, ಆತಂಕಗಳು ವ್ಯಕ್ತಿಯನ್ನೂ ಮೀರಿ ಪರಿಸರದಲ್ಲೆಲ್ಲ ವ್ಯಾಪಿಸಿರುವ ಜಾತಿವ್ಯವಸ್ಥೆ ಎಷ್ಟು ಪ್ರಬಲ, ಅಧಿಕಾರವನ್ನು ಪಡೆದರೂ ಮನಸಿನೊಳಗೆ ಇರುವ, ಜಾತಿಯ ಕಾರಣಕ್ಕೆ ಹುಟ್ಟುವ ದೈನ್ಯವನ್ನು, ಒಬ್ಬಂಟಿತನವನ್ನು ಮೀರುವುದು ಎಷ್ಟು ಕಷ್ಟ ಎಂಬುದನ್ನು ‘ಹದಿನಾರು ಕಂಬದ ಮನೆʼ ಸೂಚಿಸುತ್ತದೆ. ವ್ಯಕ್ತಿಗಿಂತ ಪರಿಸರವೇ ಪ್ರಬಲವಾಗುವ ಇನ್ನೊಂದು ಉದಾಹರಣೆ ಇದು. ಅಧಿಕಾರ ಸ್ಥಾನ ದೊರೆತರೆ ತಳವರ್ಗದವರಿಗೆ ಆತ್ಮಾಭಿಮಾನ ಮೂಡುತ್ತದೆ ಅನ್ನುವುದು ನಿಜ, ಹಾಗೆಯೇ ಮನಸ್ಸು ಕೂಡ ಜಾತಿಯ ಕೀಳ್ತನವನ್ನು ನೀಗಿಕೊಳ್ಳದಿದ್ದರೆ ದೊರೆತಂತೆ ಕಾಣುವ ಸಮಾನತೆ ಕೂಡ ತೋರಿಕೆಯದೇ ಇದ್ದೀತು ಅನ್ನುವ ಸೂಚನೆ ಈ ಕಥೆಯಲ್ಲಿ ಕಂಡಿತು. ಎರಡನೆಯ ಭಾಗದಿಂದ ಮೊದಲಾಗಿ, ಮೊದಲ ಭಾಗಕ್ಕೆ ಹೋಗಿ ಆಮೇಲೆ ಮೂರನೆಯ ಭಾಗವೆಂದು ಕಥೆಯನ್ನು ವಿಗಡಿಸಿರುವುದು ವರ್ತಮಾನ, ಭೂತಕಾಲ, ಮತ್ತು ನಾಳೆಯ ದಿನವು ಇಂದಿನ ದಿನವಾದಾಗ ನಡೆದ ಕಥೆ ಎಂದು ಮನದಟ್ಟು ಮಾಡಿ ಮನಸಿನಲ್ಲಿರುವ ಅಸಮಾನತೆಯ ಬೇರು ಎಷ್ಟು ಗಟ್ಟಿ ಅನ್ನುವುದನ್ನು ಸೂಚಿಸಲು ಸಹಾಯಮಾಡಿದೆ.
ಶಿಷ್ಟವೆನಿಸುವ ಭಾಷೆಯ ನಿರೂಪಣೆ ಮತ್ತು ಪಾತ್ರದ ವಾಸ್ತವಕ್ಕೆ ನಿಷ್ಠವಾದ ಆಡು ಮಾತಿನ ಬಳಕೆ ಇವನ್ನು ಸಮತೋಲನದಲ್ಲಿ ಲಯ ತಪ್ಪದೆ ನಿರ್ವಹಿಸುವುದು ಬಹಳ ಕಷ್ಟದ ಕೆಲಸ. ಹೀಗೇ ಎಂದು ಯಾರೂ ದಾರಿ ತೋರಲಾರರು, ನೀವೇ, ನೀವು ಮಾತ್ರವಲ್ಲ ಒಬ್ಬೊಬ್ಬ ಕಥೆಗಾರರೂ ತಮಗೆ ತಕ್ಕ ಸಮತೋಲನ ಕಂಡುಕೊಳ್ಳಬೇಕು. ಕುವೆಂಪು ಅವರ ಕಾದಂಬರಿಗಳು ನುಡಿ ಬಳಕೆಯ ವೈವಿಧ್ಯವನ್ನು ಒಳಗೊಂಡಿರುವ ರೀತಿ ಇದೆಯಲ್ಲ, ಅದು ಕನ್ನಡದ ಬಹಳ ದೊಡ್ಡ ಸಾಧನೆ.
‘ಕರೀಕಲ್ಲು ಕ್ವಾರಿʼ ನಿರೂಪಣೆಯೇ ಪ್ರಧಾನವಾದ ಕಥೆಯಾಗಿದ್ದರೂ ಹದಿನಾರು ಕಂಬದ ಮನೆಯ ಇನ್ನೊಂದು ಮಗ್ಗುಲು ಅನ್ನಿಸಿತು. ಯಾಕೆಂದರೆ ಇಲ್ಲಿ ಆಧುನಿಕ ಕಛೇರಿ, ಆಡಳಿತ ವ್ಯವಸ್ಥೆಗಳ ಪರಿಚಯವಿರದ, ಆದರೂ ಆಧುನಿಕ ಬದುಕಿನ ಸುಖ ಸೌಲಭ್ಯಗಳನ್ನು ಅನುಭವಿಸುವ ಆಸೆಯುಳ್ಳ ಜನ ನಗರಗಳ ಸುಂದರ ಮಹಲುಗಳ ಆಹಾರವಾಗಿ ಬಳಕೆಯಾಗುವ ಕರೀಕಲ್ಲು ಇರುವ ಜಮೀನನ್ನು ಮಾರುವ ಆಮಿಷಕ್ಕೆ ಗುರಿಯಾಗಿ ಗತಿ ಕೆಡುವ ನಿರೂಪಣೆ ಇಲ್ಲಿದೆ. ವೀರಪ್ಪಜ್ಜನ ಕಾಲದ ನೆಲದ ಸಂಬಂಧ, ವೀರಪ್ಪಜ್ಜನಂಥ ಮನೆಯ ಜನರ ಸಂಬಂಧ, ಊರಿನ ನೆಲಕ್ಕೂ ಭಾಷೆಗೂ ಇರುವ ಸಂಬಂಧ ಇವೆಲ್ಲವನ್ನೂ ನಿರ್ದಯೆಯಿಂದ ಒರೆಸಿ ಹಾಕಿ, ದುಡ್ಡಿನ ಲಾಭದ ಮೇಲೇ ಕಣ್ಣಿಟ್ಟಿರುವ ಪರ ಸೀಮೆಯ ಕರುಣಾಕರನ್‌ನಂಥ ಬಂಡವಾಳಗಾರ, ಅವನ ನೆರವಿಗೆ ಒದಗುವ ಅಥವ ಅಡ್ಡಿಪಡಿಸುವ ಅಡಳಿತ, ಜನರ ಮನಸಿನಲ್ಲಿ ಆಧುನಿಕತೆ ಬಿತ್ತಿರುವ ದುಡಿಯದೆ ಸುಖಪಡಬೇಕೆಂಬ ಅಪೇಕ್ಷೆ ಇವೆಲ್ಲವುಗಳ ಮಿನಿಯೇಚರ್ ಚಿತ್ರವಾಗಿದೆ ಕಥೆ. ಹಿಂದೆ ಬ್ರಿಟಿಷರು ಆಳಿದ್ದು ಕೂಡ ಸುಮಾರಾಗಿ ಹೀಗೇ ಅಲ್ಲವೇ? ಆಮಿಷಕ್ಕೋ ಭಯಕ್ಕೋ ವ್ಯವಸ್ಥೆಯ ಕಟ್ಟುಪಾಡಿಗೋ, ನೆಮ್ಮದಿ ಉಳಿಸಿಕೊಳ್ಳಬೇಕೆಂಬ ಆಸೆಗೋ ತಮ್ಮತನ ನೀಗಿಕೊಳ್ಳುತ್ತ ಇದೆಯಲ್ಲ ಸಮಾಜ ಅದರ ಚಿತ್ರಣ ಇಲ್ಲಿದೆ. ಆದರೂ ಸನ್ನಿವೇಶಗಳ ಸೃಷ್ಟಿಗಿಂತ ನಿರೂಪಣೆಯೇ ಮೇಲುಗೈಯಾಗಿರುವ ಕಥೆ ಇನ್ನಷ್ಟು ಸಮರ್ಥವಾದ ರೂಪ ಪಡೆಯಬಹುದಿತ್ತು ಅನ್ನಿಸಿತು. ಇಲ್ಲೂ ಬಂಡವಾಳ ಮತ್ತು ಆಡಳಿತ ವ್ಯವಸ್ಥೆಯ ಮನೋಧರ್ಮದ ಶಕ್ತಿಯ ಎದುರು ದುರ್ಬಲವಾದ ಪಾತ್ರಗಳೇ ಕಾಣುತ್ತವೆ.
ಗೌರಿ ಕಥೆಯಲ್ಲಿರುವಂಥ ಪಾತ್ರಗಳ ಬದುಕಿನ ಕಥೆ ‘ನಾಮ್ದರೆ ಜೇನುʼವಿನಲ್ಲಿ ನನಗೆ ಎದುರಾಯಿತು. ವ್ಯತ್ಯಾಸವೆಂದರೆ ಎದ್ದು ಕಾಣುವ ದುರಂತ ಮತ್ತು ಸ್ಪಷ್ಟವಾದ ನೈತಿಕ ಪ್ರಶ್ನೆ ಈ ಕಥೆಯಲ್ಲಿದೆ. ಕಾನೂನಿಗೆ ಅಂಜುವ, ಊರಿನ ಬದುಕು ಕಟ್ಟಿ ಕೊಟ್ಟಿರುವ ಭಯ ಭೀತಿಯ ನಂಬಿಕೆಗಳೇ ಸತ್ಯವೆಂದು ನಂಬಿರುವ ಮಧ್ಯಮ ಜಾತಿಯ ಮತ್ತು ಬುಡಕಟ್ಟಿನ ಸಮುದಾಯಗಳ ಪಾತ್ರಗಳಿವೆ ಇಲ್ಲಿ. ಕಾಡಿನಲ್ಲಿ ಫಾರೆಸ್ಟಿನವರ, ಟೆಂಡರ್‌ದಾರರ ಕಣ್ಣು ತಪ್ಪಿಸಿ ಜೇನು ಕೀಳಲು ಹೋಗುವ ತಂಡ, ಕಾಡನ್ನು, ಜೇನನ್ನು ಬಲ್ಲ ಮಲ್ಲೇಶ ಇಲ್ಲಿ ಮುಖ್ಯ ಪಾತ್ರ. ತನ್ನಕ್ಕನ ಸಾವಿಗೆ ಕಾರಣನಾದ ಶಂಕರಯ್ಯನನ್ನು ಕೊಲ್ಲುವ ಹುನ್ನಾರ ಮಾಡಿಯೂ ಸರಿ ತಪ್ಪುಗಳ ನೈತಿಕ ಪ್ರಶ್ನೆಯನ್ನು ಎದುರಿಸಲಾರದೆ, ತಪ್ಪು ಮಾಡಲು ಒಲ್ಲದೆ ಆಕಸ್ಮಿಕಕ್ಕೆ ತಾನೇ ಬಲಿಯಾಗುವ ಪಾತ್ರ ಮಲ್ಲೇಶನದು. ನಿಸರ್ಗದ ನಿಷ್ಕರುಣೆ, ಮನುಷ್ಯರು ಆಸೆ, ಎಲ್ಲೋ ಇರುವ ವ್ಯವಸ್ಥೆ ರೂಪಿಸಿರುವ ಕಟ್ಟುಪಾಡು, ಲೈಂಗಿಕತೆ, ಸೇಡಿನ ಆಸೆ, ಆತಂಕ, ಆಕಸ್ಮಿಕ ಎಲ್ಲವೂ ಬೆರೆತ ಈ ಕಥೆ ಬಹಳ ಮಟ್ಟಿಗೆ ನಿರೂಪಣೆಯಾಗಿಯೇ ಸಾಗುತ್ತದೆ. ಇನ್ನಷ್ಟು ವಿವರವಾಗಿ, ಸಾವಕಾಶವಾಗಿ ಪಾತ್ರಗಳ ಮನೋಧರ್ಮ ಮತ್ತು ನಿಸರ್ಗ, ಸಮಾಜಗಳ ಸಂಬಂಧದ ಅನ್ವೇಷಣೆಗೆ ಅವಕಾಶವಿತ್ತು ಅನ್ನಿಸುತ್ತದೆ.
‘ದೇವರ ಕನಸುʼ ಕಥೆ ಸದ್ಯದ ಗ್ರಾಮೀಣ ಭಾರತದ ಮೀನಿಯೇಚರ್ ಚಿತ್ರಣವಾಗಿ ಕಾಣುತ್ತದೆ. ದೇವನೂರು ಮಹದೇವ ಅವರ ‘ಒಡಲಾಳʼದ ಕಥೆಗಳ ನೆರಳು ಈ ಕಥೆಯ ಮೇಲೆ ದಟ್ಟವಾಗಿದೆ ಅನಿಸಿದರೂ ತಳ ಸಮುದಾಯದ ವ್ಯಕ್ತಿಗೆ ಮೂರು ದಿನ ಒಂದೇ ಕನಸು ಬಿದ್ದು, ಗುಡಿ ಕಟ್ಟಿಸಲು ಗೌಡನ ಕೇಳಿ, ಕೀಳು ಜಾತಿಯವನಿಗೆ ಕನಸು ಬೀಳುವುದುಂಟೇ ಎಂದು ಮೇಲುಜಾತಿಯವರು ಹೇಳಿ, ಪಕ್ಕದೂರಿನ ಗೌಡ ಜಾಗಕೊಟ್ಟು, ದೇವಸ್ಥಾನ ಕಟ್ಟಿದ ಮೇಲೆ ಮೂರು ಊರುಗಳ ಜಗಳವಾಗಿ ಬೆಳೆದು, ದೇವಸ್ಥಾನಕ್ಕೆ ಬೀಗಮುದ್ರೆ ಬೀಳುತ್ತದೆ ಎಂಬ ನಿರೂಪಣೆ ಕೇವಲ ಜಾತಿಯ, ಶೋಷಣೆಯ ಚಿತ್ರಣವಾಗಿ ಉಳಿಯದೆ ಊರು/ದೇಶದ ಸ್ಥಿತಿಯನ್ನೇ ಪ್ರಭಾವಿಸುವ ಸಂಗತಿ ಎಂಬುದನ್ನು ಸೂಚಿಸುವಂತೆ ಬೆಳೆಯುತ್ತದೆ.
‘ಸಿದ್ದವ್ವ ಮತ್ತು ತಂಬೂರಿ ಮಾದʼ ಕಥೆಯ ಸಿದ್ದವ್ವನ ಪಾತ್ರ ಮತ್ತು ಅವಳ ಪ್ರತಿಪಾದಿಸುವ ನಿಲುವು ಬಹಳ ಗಮನ ಸೆಳೆಯಿತು. ಅವಳ ಪಾತ್ರ ನಿಮ್ಮ ಈ ಸಂಕಲನದ ಎಲ್ಲ ಪಾತ್ರಗಳ ತಾಕಲಾಟದ ಒಂದು ತುದಿಯನ್ನು ತೋರುತ್ತದೆ ಅನ್ನಿಸಿತು. ಗಟ್ಟಿ ಮಾತಿನ ತಾಯಿ ಮರುಕದ ಸಿದ್ದವ್ವನಿಗೆ ಇಬ್ಬರು ಮಕ್ಕಳು, ದೊಡ್ಡ ಮಗ ಶಿವನು ಅಪ್ಪನ ಹಾಗೇ ಮಡ್ಡ, ಲೋಕದ ಬಗ್ಗೆ ನದರು ಇಲ್ಲದವನು. ಮನೆಯ ಜವಾಬ್ದಾರಿ ಹೊತ್ತಿದ್ದವಳು ಸಿದ್ದವ್ವನೇ. ಕೈಲಾಗದ ಗಂಡ. ಸಿದ್ದವ್ವನ ದೊಡ್ಡ ಸೊಸೆ ಕೈಲಾಗದ ಗಂಡನ ಜೊತೆ ಬಾಳಲಾರದೆ ಗಂಡನ ಜೊತೆಗಾರನ ಜೊತೆ ಸಂಬಂಧ ಬೆಳೆಸಿ ಮಗುವನ್ನು ಬಿಟ್ಟು ಅವನೊಡನೆ ಓಡಿ ಹೋದವಳು. ಸಿದ್ದವ್ವ ಅದನ್ನು ನೆನೆಯುತ್ತ ತಾನೂ ಓಡಿ ಹೋಗಿದ್ದರೆ ಸಂಸಾರ ಉಳೀತಿತ್ತಾ, ಗಂಡನ ಕೈಯಲ್ಲಾಗದು ಅಂತ ಬೇರೆಯವರಿಂದ ಎರಡು ಮಕ್ಕಳ ಪಡೀಲಿಲ್ವೇ, ಸಂಸಾರದ ಗುಟ್ಟು, ಕುಟುಂಬದ ಅಚ್ಚುಕಟ್ಟು, ಮರ್ಯಾದೆ ಕಾಪಾಡಲಿಲ್ಲವೇ, ಸೊಸೆ ಯಾಕೆ ಓಡಿ ಹೋದಳು, ದೊಡ್ಡ ಮಗ ಯಾಕೆ ದೇಶಾಂತರ ಹೋದ ಎಂದು ಪೇಚಾಡುತ್ತಾಳೆ. ತೋರಿಕೆಯ ಮರ್ಯಾದೆ, ಕುಟುಂಬ ಎಂಬ ವ್ಯವಸ್ಥೆಯನ್ನು ಕಾಪಾಡುವ ಹೊಣೆ, ಅದಕ್ಕಾಗಿ ರಾಜಿ ಮಾಡಿಕೊಂಡರೂ ತಪ್ಪಿಲ್ಲ ಅನ್ನುವ ನಿಲುವು ಈ ಸಂಕಲನದ ಬಹಳಷ್ಟು ಪಾತ್ರಗಳ ಒಳತೋಟಿಗೂ ದೌರ್ಬಲ್ಯಕ್ಕೂ ಕಾರಣವಾಗಿದೆ ಅನ್ನಿಸುತ್ತದೆ.
ಆಚಾರ ಕೆಟ್ಟರೂ ಆಕಾರ ಕೆಡಬಾರದು ಅನ್ನುವ ಗಾದೆಯನ್ನು ನಾನು ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಸಂಸ್ಕೃತಿ ಅನ್ನುತ್ತೇವಲ್ಲ ಅದರ ಆಕಾರ, ವ್ಯವಸ್ಥೆಗೆ ಇರುವ ಆಕಾರ ಇವು ಕೆಡದೆ ಮುಂದುವರೆಯಬೇಕು, ವರ್ತನೆ ಕೆಟ್ಟರೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಬೇಕು ಅನ್ನುವ ಮನೋಧರ್ಮವೇ ನಮ್ಮನ್ನು ‘ದಾರಿ ತಪ್ಪಿಸುವ ಗಿಡʼ ಆಗಿರಬಹುದು. ಈ ಆಕಾರವನ್ನು ಕಾಪಾಡಿಕೊಳ್ಳುವ ಒತ್ತಡವೇ ವ್ಯಕ್ತಿಗಳನ್ನು ದುರ್ಬಲರನ್ನಾಗಿಸಿ ರಾಜಿಗೆ ಒಲಿಯುವಂತೆ ಮಾಡುತ್ತದೆ ಅನಿಸುತ್ತದೆ. ಹಾಗೆ ನೋಡಿದರೆ ಆಳು ಕೂಗಿನ ಹಕ್ಕಿಗಿಂತ ದಾರಿ ತಪ್ಪಿಸುವ ಗಿಡ ಹೆಚ್ಚು ಅರ್ಥವ್ಯಾಪ್ತಿ ಇರುವ ರೂಪಕ. ಪ್ರತಿಯೊಬ್ಬರೂ, ಎಂಎಲ್‌ಎ ಇರಬಹುದು, ಸ್ಕೂಲಿನ ಪಾಠ ಹೇಳುವ ರಮೇಶ ಇರಬಹುದು, ಮೈಮೇಲೆ ಬರುವ ಶನಿದೇವರೋ, ಮಠದ ಮಕ್ಕಳ ದಾರಿ ತಪ್ಪಿಸುವ ಸ್ವಾಮಿಯೋ, ಗುಡಿಯ ತಮ್ಮಡಿಗಳೋ, ಕ್ವಾರಿಯ ಸಾಹುಕಾರನೋ, ಅವನ ದಳ್ಳಾಳಿಯೋ ಎಲ್ಲರೂ ದಾರಿ ತಪ್ಪಿಸುವ ಗಿಡಗಳೇ. ದಾರಿ ತಪ್ಪಬಾರದೆಂಬ ಒತ್ತಡ ಬಹಳಷ್ಟು ಜನರನ್ನು ರಾಜಿಗೆ ಒಪ್ಪುವಂತೆ ಅಥವಾ ಬಲಿಯಾಗುವಂತೆ ಅಥವಾ ದಿಕ್ಕು ತಿಳಿಯದ ತೀರ್ಮಾನ ಮಾಡಲಾಗದ ಸ್ಥಿತಿಗೆ ಸಿಕ್ಕಿ ಬೀಳುವಂತೆ ಮಾಡುತ್ತದೆ. ಒಬ್ಬರು ಇನ್ನೊಬ್ಬರ ದಾರಿ ತಪ್ಪಿಸುವ ಗಿಡಗಳಾಗದೆ, ಧರೆ ಹೊತ್ತಿ ಉರಿಯಲಾಗದಂತೆ ಬದುಕುವುದು ಬೆಳೆಯುವುದು ಸಾಧ್ಯವಿಲ್ಲವೇ ಅನ್ನುವ ಪ್ರಶ್ನೆ ಮೂಡಿತು.
ಪ್ರಿಯ ಸ್ವಾಮೀ, ನೀವು ನಿರ್ಲಿಪ್ತವಾಗಿ ನಿರೂಪಣೆ ಮಾಡುವ ಶಕ್ತಿ ಇರುವ ಲೇಖಕರು. ಕಾಡಂಚಿನ ಊರು, ಜನಗಳ ಆಪ್ತ ಒಡನಾಟ ಇರುವವರು, ದೆವ್ವದ ಕಥೆಯಿಂದ ಹಿಡಿದು ಕಾಡಿನಲ್ಲಿ ಜೇನು ಕೀಳುವ ಕಸುಬು, ಕ್ವಾರಿ ವ್ಯವಹಾರ, ಸ್ಕೂಲು, ವಿವಿಧ ಸಮುದಾಯಗಳ ಜನರ ಬದುಕನ್ನು ಪ್ರೀತಿಯಿಂದ ಗಮನಿಸಿ ಕಾಣುತ್ತಿರುವವರು. ಹಾಗೆಯೇ ಇಂದ್ರಿಯಗಳ ಅನುಭವವನ್ನು ಸೂಕ್ಷ್ಮವಾಗಿ ಭಾಷೆಯಲ್ಲಿ ಹಿಡಿದಿಡುವ ಸಾಮರ್ಥ್ಯವೂ ನಿಮಗಿದೆ. ನಿಮ್ಮ ಬರವಣಿಗೆಗೆ ಸಮರ್ಪಕ ಅವಕಾಶ ಸಿಗಬೇಕೆಂದರೆ ಸಣ್ಣ ಕಥೆಯ ಸೀಮಿತ ವ್ಯಾಪ್ತಿಯನ್ನು ಮೀರಿ ಕಾದಂಬರಿಯ ಕಟ್ಟೋಣಕ್ಕೆ ಗಮನ ಕೊಡುವುದು ಒಳ್ಳೆಯದು. ಜನರ ಸಹಜ ಆಡುಮಾತು ಮತ್ತು ನಿರೂಪಣೆಯ ಶಿಷ್ಟ ಭಾಷೆಯ ಮಿಶ್ರಣದ ಹದ ಸಂಪಾದಿಸಿಕೊಂಡು, ಸನ್ನಿವೇಶ ಮತ್ತು ಕ್ರಿಯೆಗಳ ನಿರ್ಮಾಣದ ಮೂಲಕ ಪಾತ್ರಗಳು ಗಟ್ಟಿಗೊಳ್ಳುವಂತೆ ಮಾಡಿ ಮಹತ್ವದ ಕಾದಂಬರಿಯೊಂದನ್ನು ಬರೆಯುತ್ತೀರಿ ಎಂಬ ನಿರೀಕ್ಷೆ ಇದೆ, ಅದನ್ನು ನಿಜಗೊಳಿಸಿ.
(ಕೃತಿ: ದಾರಿ ತಪ್ಪಿಸುವ ಗಿಡ (ಕಥಾ ಸಂಕಲನ), ಲೇಖಕರು: ಸ್ವಾಮಿ ಪೊನ್ನಾಚಿ, ಪ್ರಕಾಶಕರು: ವೈಷ್ಣವಿ ಪ್ರಕಾಶನ, ಬೆಲೆ: 120/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಸೂಕ್ತ ಕೈಗನ್ನಡಿ ಮತ್ತು ಮಾರ್ಗದರ್ಶಿ. ಧನ್ಯವಾದ