ಮಹಿಳೆಯರ ಜೀವನದಲ್ಲಿ ಎರಡು ವಿಷಯಗಳು ಸತ್ಯ. ಅದೆಂದರೆ, ಹರಿವ ನದಿಯಂತೆ ಬದುಕುವುದು ಹಾಗೂ ಪುರುಷನಿಗಿಂತ ಹೆಚ್ಚು ಧೈರ್ಯವಾಗಿ ಬದುಕನ್ನು ಎದುರಿಸುವುದು. ಹುಟ್ಟಿದ ಮನೆಯನ್ನೇ ಬಿಟ್ಟು ಬರುವ ಮಹಿಳೆಯರಿಗೆ ಮತ್ತೊಂದು ಊರನ್ನು ಬಿಡುವುದು, ಬೇರೊಂದು ಊರಿನಲ್ಲಿ ನೆಲೆ ನಿಲ್ಲುವುದು ಹೆಚ್ಚು ಕಷ್ಟವಾಗುವುದಿಲ್ಲವೇನೋ. ಹೀಗಾಗಿಯೇ ಅವರು ಅಕ್ಷರಶಃ ಹರಿವ ನದಿಯಾಗುತ್ತಾರೆ. ‘ಹರಿವ ನದಿ’ ಕೃತಿಯು ಮೇಲ್ನೋಟಕ್ಕೆ ಮೀನಾಕ್ಷಿ ಭಟ್ಟರ ಕಥನ ಎನಿಸಿದರೂ, ಇದು ದಿಟ್ಟ ಮಹಿಳೆಯರ ಹೋರಾಟದ ಪ್ರತಿಮೆಯಂತೆ ನಿಲ್ಲುತ್ತದೆ. ತಾವು ಓದಿದ ಕೃತಿಯ ಕುರಿತು ಸುಮನಾ ಲಕ್ಷ್ಮೀಶ್ ಬರೆದ ಬರಹ  ಇಲ್ಲಿದೆ. 

 

“ಧೈರ್ಯಗೆಡದಿರು, ದೇವರು ಮುನ್ನಡೆಸುತ್ತಾನೆ…ʼ ಪತಿ ಜೀವ ಬಿಡುವ ಮುನ್ನ ಹೇಳಿದ ಈ ಮಾತನ್ನೇ ಊರುಗೋಲಾಗಿಸಿಕೊಂಡು ನಡೆದವರು ಇವರು. ಜೀವನಸಂಗಾತಿಯನ್ನು ಕಳೆದುಕೊಂಡ ಸಂದರ್ಭದಲ್ಲಿ ಪತಿಯ ಈ ಮಾತೇ,  ಪರಿಸ್ಥಿತಿಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವ ಧೈರ್ಯವನ್ನು ನೀಡಿತ್ತು. ಜತೆಗೆ, ಮಕ್ಕಳ ಕುರಿತಾದ ಕನಸೊಂದನ್ನು ಕಂಗಳಲ್ಲಿ ಜೀವಂತವಾಗಿಟ್ಟಿತ್ತು. ಧೈರ್ಯಗೂಡಿಸಿಕೊಂಡ ಪರಿಣಾಮವಾಗಿಯೇ ಜೀವನದಲ್ಲಿ ಎಲ್ಲವೂ ಸಾಧ್ಯವಾಯಿತು. ಇದು “ಹರಿವ ನದಿʼಯ ಮೂಲಕ ತಮ್ಮ ಆತ್ಮಕಥನವನ್ನು ತೆರೆದಿಟ್ಟ ಮೀನಾಕ್ಷಿ ಭಟ್ಟರ ಬದುಕು. ಮೇಲ್ನೋಟಕ್ಕೆ ಇದು ಮೀನಾಕ್ಷಿ ಭಟ್ಟರ ಕಥನ ಎನಿಸಿದರೂ ದಿಟ್ಟ ಮಹಿಳೆಯರ ಹೋರಾಟದ ಪ್ರತಿಮೆಯಂತೆ ನಿಲ್ಲುತ್ತದೆ.

ಎಂತಹ ಮಹಾನ್ ಕುಲದಲ್ಲಿ ಹುಟ್ಟಲಿ, ಯಾರ ಮಕ್ಕಳಾಗಲಿ, ಯಾರ ಪತ್ನಿಯಾಗಲಿ ಮಹಿಳೆಯರ ಜೀವನದಲ್ಲಿ ಎರಡು ವಿಷಯಗಳು ಸತ್ಯ. ಅದೆಂದರೆ, ಹರಿವ ನದಿಯಂತೆ ಬದುಕುವುದು ಹಾಗೂ ಪುರುಷನಿಗಿಂತ ಹೆಚ್ಚು ಧೈರ್ಯವಾಗಿ ಬದುಕನ್ನು ಎದುರಿಸುವುದು. ಹುಟ್ಟಿದ ಮನೆಯನ್ನೇ ಬಿಟ್ಟು ಬರುವ ಮಹಿಳೆಯರಿಗೆ ಮತ್ತೊಂದು ಊರನ್ನು ಬಿಡುವುದು, ಬೇರೊಂದು ಊರಿನಲ್ಲಿ ನೆಲೆ ನಿಲ್ಲುವುದು ಹೆಚ್ಚು ಕಷ್ಟವಾಗುವುದಿಲ್ಲವೇನೋ. ಹೀಗಾಗಿಯೇ ಅವರು ಅಕ್ಷರಶಃ ಹರಿವ ನದಿಯಾಗುತ್ತಾರೆ. ಬದುಕು ನಡೆಸಿದಂತೆ ಮುನ್ನಡೆಯುತ್ತಾರೆ. ಅವರ ಹೋರಾಟದಿಂದಲೇ ಮಕ್ಕಳು ಬದುಕು ಹಸನಾಗುತ್ತದೆ. ಮೀನಾಕ್ಷಿ ಭಟ್ಟರ ಆತ್ಮಕಥನ “ಹರಿವ ನದಿʼ ಹೇಳುವುದೂ ಇದನ್ನೇ.

ಈಗಲೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಯಾವುದೇ ಹಳ್ಳಿಗಳಿಗೆ ಹೋಗಿ ಐನಕೈ ಶಾಸ್ತ್ರಿಗಳ ಬಗ್ಗೆ ಕೇಳಿದರೆ ಅವರ ಬಗ್ಗೆ ಗೊತ್ತಿಲ್ಲದವರಿಲ್ಲ. ಎಲ್ಲರೂ ಸಮಾನವಾಗಿ ಹೇಳುವ ಮಾತೆಂದರೆ, “ಅವರು ಜಾತಕ (ಕುಂಡಲಿ)ಯನ್ನು ಬಹಳ ಚೆನ್ನಾಗಿ ನೋಡುತ್ತಿದ್ದರು. ಅವರು ಹೇಳಿದ ಮೇಲೆ ಮುಗಿಯಿತು, ಚೌಡಿ, ನಾಗ ದೇವರಿಗೆ ಕುರಿತಾಗಿ ಸಮಸ್ಯೆ ಬಗೆಹರಿಸಿದರೆಂದರೆ ಆಯಿತು, ಮತ್ಯಾರೂ ಮಾತನಾಡುವಂತಿರಲಿಲ್ಲʼ…. ಹೀಗೆ ಅನೇಕ ಉದ್ಗಾರಗಳು ಕೇಳಿಬರುತ್ತವೆ. 80ರ ದಶಕದಲ್ಲಿಯೇ ಅವರು ಗಳಿಸಿದ್ದ ಜನಪ್ರಿಯತೆಗೆ ಸಾಟಿಯಿರಲಿಲ್ಲ. ಸಿದ್ದಾಪುರ ಪ್ರಾಂತ್ಯದಲ್ಲಿ ಶಾಸ್ತ್ರಿಗಳೊಂದಿಗೆ ಒಡನಾಟವಿಲ್ಲದಿದ್ದ ಯಾವುದೇ ಹಿರಿಯರಿರಲಿಲ್ಲ. ಅವರ ವಿದ್ವತ್ತು, ಪಾಂಡಿತ್ಯ, ವಾಗ್ಝರಿ ಈ ಭಾಗದಲ್ಲಿ ಇಂದಿಗೂ ಮನೆಮಾತಾಗಿದೆ. ಅಂಥವರ ಸೌಂದರ್ಯವತಿ ಪತ್ನಿ ಮೀನಾಕ್ಷಿ ಭಟ್ಟ.

ಅಂದಿನ ಕಾಲದಲ್ಲೇ ಪ್ರೀತಿಸಿ ಮದುವೆಯಾಗಿ ಕ್ರಾಂತಿ ಮೂಡಿಸಿದ್ದರು ಎಂದರೆ ಅಚ್ಚರಿಯಾಗುತ್ತದೆ. ಹೆಣ್ಣುಮಗಳೊಬ್ಬಳು ಪ್ರೀತಿಸಿ ಮದುವೆಯಾಗಿ, ತಮ್ಮ ನೆಲದಲ್ಲೇ ಸಂಸಾರ ನಡೆಸಿ ‘ಸೈ’ ಎನಿಸಿಕೊಳ್ಳುವುದು ಅಂದಿನ ಕಾಲಕ್ಕೆ ಅಸಾಧ್ಯ ಎನ್ನುವಂತಿತ್ತು. ಅಂಥದ್ದರಲ್ಲಿ ಪತಿಯೊಂದಿಗೆ ೨೦ ವರ್ಷಗಳ ಕಾಲ ಸಿದ್ದಾಪುರ ತಾಲೂಕಿನ ವಿವಿಧೆಡೆ ಬದುಕು ನಡೆಸಿದ್ದ ಗಟ್ಟಿಗಿತ್ತಿ ಅವರು. ಆರ್ಥಿಕ ಕಷ್ಟದಲ್ಲೂ, ಹಣಕಾಸು ಸ್ಥಿತಿ ಚೆನ್ನಾಗಿದ್ದ ಕಾಲದಲ್ಲೂ ಪತಿಯೊಂದಿಗೆ ಅವರು ನಡೆಸಿದ ಸಾಮರಸ್ಯದ ಬದುಕು ಆಳವಾಗಿ ಮನಸ್ಸನ್ನು ತಟ್ಟುತ್ತದೆ. ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ಹೇಳಿಕೊಂಡು ಹಗುರವಾಗುವ ದಂಪತಿಗಳಿಗೆ ಎಂದಿಗೂ ದಾಂಪತ್ಯವೆನ್ನುವುದು ಭಾರವಾಗುವುದಿಲ್ಲ. ಹಾಗೆಯೇ ಇವರದ್ದೂ ಆಗಿತ್ತು.

ಹುಟ್ಟಿದ ಮನೆಯನ್ನೇ ಬಿಟ್ಟು ಬರುವ ಮಹಿಳೆಯರಿಗೆ ಮತ್ತೊಂದು ಊರನ್ನು ಬಿಡುವುದು, ಬೇರೊಂದು ಊರಿನಲ್ಲಿ ನೆಲೆ ನಿಲ್ಲುವುದು ಹೆಚ್ಚು ಕಷ್ಟವಾಗುವುದಿಲ್ಲವೇನೋ. ಹೀಗಾಗಿಯೇ ಅವರು ಅಕ್ಷರಶಃ ಹರಿವ ನದಿಯಾಗುತ್ತಾರೆ. ಬದುಕು ನಡೆಸಿದಂತೆ ಮುನ್ನಡೆಯುತ್ತಾರೆ.

ಸಾಮಾನ್ಯವಾಗಿ ಮಲೆನಾಡಿನ ಹಳ್ಳಿಗಳ ಮಹಿಳೆಯರ ಬದುಕು ಎರಡು ಮನೆಗಳಲ್ಲಿ ಶಾಶ್ವತವಾಗಿ ಸ್ಥಿರವಾಗುತ್ತದೆ. ಒಂದು ಹುಟ್ಟಿದ ಮನೆ, ಮದುವೆಯಾದ ಬಳಿಕ ಪತಿ ಮನೆ. ಮೊದಲೆಲ್ಲ ಖಾಯಂ ವಿಳಾಸ ಬದಲಾಗುವುದು ಅತ್ಯಂತ ಕಡಿಮೆಯಾಗಿತ್ತು. ಆದರೆ, ಮೀನಾಕ್ಷಿ ಭಟ್ಟರ ಬದುಕು ಹಾಗಾಗಲಿಲ್ಲ. ಹುಟ್ಟಿದ ಮನೆಯಲ್ಲೂ ಸ್ಥಳಾಂತರ, ಮದುವೆಯಾದ ಬಳಿಕವಂತೂ ಹೆಚ್ಚು ಕಾಲ ಎಲ್ಲೂ ನೆಲೆ ನಿಲ್ಲಲು ಸಾಧ್ಯವಾಗದ ಓಟದ ಬದುಕು. ಕೊಳಚಗಾರು, ಬ್ಯಾಡರಕೊಪ್ಪ, ಕೌಲುಮನೆ, ಬಂಜಗಾರು, ಇಟಗಿ, ತಾರಗೋಡು, ಬಚ್ಚಗಾರು, ಸಿದ್ದಾಪುರಗಳ ನಂತರ ಬೆಂಗಳೂರು, ಮೈಸೂರಿನಂತಹ ದೊಡ್ಡ ನಗರಗಳಲ್ಲಿ ಬದುಕನ್ನು ನಡೆಸಿದ ಅನುಭವ ಸಾಮಾನ್ಯವಾದುದಲ್ಲ. ಅದನ್ನೆಲ್ಲ ಇಲ್ಲಿ ತುಂಬ ಆಪ್ತವಾಗಿ ಚಿತ್ರಿಸಿದ್ದಾರೆ.

ತಮ್ಮದೇ ಜೀವನವಾಗಿದ್ದರೂ ಒಂದು ಕ್ರಮದಲ್ಲಿ ಕಟ್ಟಿಕೊಡುವುದು ಸುಲಭವಲ್ಲ. ಅದರಲ್ಲೂ ಹತ್ತಾರು ಮಕ್ಕಳಿರುವ ದೊಡ್ಡಪ್ಪ, ಚಿಕ್ಕಪ್ಪಂದಿರ ಮನೆ, ಅವರ ಮಕ್ಕಳ ಹೆಸರುಗಳನ್ನೂ ನೆನಪಿಸಿಕೊಂಡು ಇಲ್ಲಿ ದಾಖಲಿಸಿರುವುದು ಅಪರೂಪವೆನಿಸುತ್ತದೆ. ಅವರ ನೆನಪಿನ ಶಕ್ತಿಗೆ ಸಾಟಿಯಿಲ್ಲ ಎನಿಸುತ್ತದೆ. ಇದು ಮಣ್ಣಿನೊಂದಿಗೆ ಬೆಸೆದ ಬಾಂಧವ್ಯ ಎನ್ನುವುದನ್ನು ತೋರಿಸುತ್ತದೆ.

ನಾಡಿಗೆ ಬೆಳಕು ಕೊಟ್ಟ ಶರಾವತಿ ಕಣಿವೆಯ ಸುತ್ತಮುತ್ತಲಿನ ಅದೆಷ್ಟೋ ಜನರ ಬದುಕು ಕತ್ತಲೆಯ ಕೂಪಕ್ಕೆ ಸರಿಯಿತು. ಇಂದಿಗೂ ಹಲವರ ಸಂಕಷ್ಟ ಕೊನೆಗೊಂಡಿಲ್ಲ. ಮೀನಾಕ್ಷಿ ಭಟ್ಟರ ತವರೂ ಸಹ ಜೋಗದ ಈ ಪ್ರಭಾವಳಿಯ ಕಾರಣದಿಂದಲೇ ವಿಪತ್ತಿಗೆ ಗುರಿಯಾಯಿತು. ಕೌಲುಮನೆ, ಕೊಳಚಗಾರುಗಳಲ್ಲಿ ಬಾಲ್ಯ ಕಳೆದು, ಬ್ಯಾಡರಕೊಪ್ಪಕ್ಕೆ ಸೇರಿದ ಅಂದಿನ ಸನ್ನಿವೇಶ, ಮದುವೆಯ ಸಂದರ್ಭ, ಅಂದಿನ ಒತ್ತಡ, ಪತಿ ಗಜಾನನ ಶಾಸ್ತ್ರಿಗಳು ಹಾಗೂ ಅವರ ತಂದೆಯ ನಡುವೆ ಯಾವುದೇ ಬಾಂಧವ್ಯ ಇಲ್ಲದಿರುವುದು, ಅಕ್ಕನ ಮನೆ ವಾಸ್ತವ್ಯ, ಸಿದ್ದಾಪುರಕ್ಕೆ ಬಂದಿದ್ದುದು, ಶಾಸ್ತ್ರಿಗಳ ಜನಪ್ರಿಯತೆ, ಜಮೀನು ಕಳೆದುಕೊಂಡಿದ್ದುದು, ಪತಿಯ ಅನಾರೋಗ್ಯ, ಸಾವು, ಬಳಿಕ ಎದುರಿಸಿದ ಏಕಾಂಗಿ ಬದುಕು, ತಾಯಿ-ಮಗಳು ಇಬ್ಬರೇ ಕಾಡಿನ ಮನೆಯಲ್ಲಿ ವಾಸ ಮಾಡಿದ್ದುದು, ಯುವ ವಿಧವೆ ಎದುರಿಸಬೇಕಾದ ಪರಿಸ್ಥಿತಿ ಎಲ್ಲವನ್ನೂ ಮನಮುಟ್ಟುವಂತೆ, ಕಣ್ಣಿಗೆ ಕಟ್ಟುವಂತೆ ತಿಳಿಸಿಕೊಟ್ಟಿದ್ದಾರೆ.

ಅಬ್ಬರವಿಲ್ಲದೆ ತಣ್ಣಗೆ ಹರಿಯುವ ನದಿಯಂತೆಯೇ ಮೀನಾಕ್ಷಿ ಭಟ್ಟರೂ ಸಹ ಹಿಂದಿನ ಬದುಕಿನ ಕಡೆಗೆ ತಟಸ್ಥ ನೋಟವೊಂದನ್ನು ಬೀರಿ ಅದನ್ನು ಹಾಗೆಯೇ ಓದುಗರೆದುರು ಇಟ್ಟಿದ್ದಾರೆ ಎನಿಸುತ್ತದೆ. ಅಂತಃಶಕ್ತಿಯಿಂದ, ದಿಟ್ಟ ಮನೋಭಾವದಿಂದ ಅವರು ಇಟ್ಟ ಹೆಜ್ಜೆಗಳು ಖಂಡಿತವಾಗಿ ಎಲ್ಲ ಮಹಿಳೆಯರಿಗೂ ಸ್ಫೂರ್ತಿಯಾಗಬಲ್ಲವು. ಯಾವುದೇ ಕತ್ತಲೆಯಲ್ಲೂ ಬೆಳಕಿನ ದೀವಿಗೆಯಾಗಬಲ್ಲವು. ಅಂಥದ್ದೇ ಆಶಯ ಹೊತ್ತಿರುವ “ಹರಿವ ನದಿʼ ಎಲ್ಲರೂ ಒಮ್ಮೆ ಓದಲೇಬೇಕಾದ ಕೃತಿ. ಹಿರಿಯ ಪತ್ರಕರ್ತೆ ಭಾರತಿ ಹೆಗಡೆಯವರ ನಿರೂಪಣೆ ನವಿರಾಗಿ, ಎಲ್ಲಿಯೂ ಹದ ತಪ್ಪದಂತೆ, ಭಾವೋದ್ವೇಗಕ್ಕೆ ಎಡೆಮಾಡದಂತೆ ಮೂಡಿದೆ.