ಕವಿ ತನ್ನೊಂದಿಗೆ ಎಲ್ಲ ಮಟ್ಟಗಳಲ್ಲಿಯೂ ನಿರ್ಭಿಡೆಯಿಂದ ಸಂವಾದಿಸುವುದು ಸಾಧ್ಯವಾದರೆ ಅಷ್ಟರ ಮಟ್ಟಿಗೆ ಅವೆಲ್ಲವೂ ಒಂದು ಅನುಸಂಧಾನವಿದ್ದಂತೆ – ಇಂತಹ ಅಪರೂಪದ ಪ್ರಕ್ರಿಯೆಗೆ ಶ್ರೀಮತಿ ಸಂಧ್ಯಾದೇವಿ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಮನೋಲ್ಲಾಸದ ಅಸಂಖ್ಯ ಸೂಕ್ಷ್ಮಭಾವಗಳನ್ನು ಮಂಡಿಸಲು ಕಾವ್ಯಕ್ರಿಯೆ ಅವರಿಗೆ ಸಹಜವೆಂಬಂತೆ ಇರುವುದಾದರೂ ಕೆಲವೊಮ್ಮೆ ನಿರ್ಣಯಗಳ ರೀತಿಯಲ್ಲಿ ಸ್ಪಷ್ಟಗೊಳಿಸುವ ಪ್ರಯತ್ನದಲ್ಲಿ ಸರಳಗೊಳಿಸುತ್ತಾರೆ. ಅನೂಹ್ಯ ಅನುಭೂತಿಗಳನ್ನು ಆಕೃತಿಗೊಳಿಸುವಾಗ ಸಂಧಿಗ್ಧತೆ ಸದಾ ಕಾಲ ಮೇಲುಗೈಯನ್ನು ಸಾಧಿಸುವಂತಿರಬೇಕು. ಇಂತಹ ಕಡೆ ಓದುಗನ ಮನೋನೃತ್ಯಕ್ಕೆ ಕವಿತೆ ಅವಕಾಶ ಕಲ್ಪಿಸಬೇಕು.
ಕಿ.ರಂ.ನಾಗರಾಜ

 

 

 

 

 

 

ಅಂದಿನಿಂದ

ಹಸಿದ ದಿನ
ಮಧ್ಯಾಹ್ನ ನೀನು
ನನ್ನ ಪಾಲಿನ ಅನ್ನವಾದೆ

ನಾನೀಗ
ಹಸಿವೆಯನ್ನೆ ಪ್ರೀತಿಸುತ್ತಿದ್ದೇನೆ
ನೀನು ಅನ್ನವಾದಂದಿನಿಂದ!

ಬಾಯಾರಿಕೆಗೆ
ನೀನು ನೀರು
ಸಾವಿಗೆ ಅಮೃತವು

ನಾನೀಗ
ಸಾವನ್ನೆ ಪ್ರೀತಿಸುತ್ತಿದ್ದೇನೆ
ನೀನು ಅಮೃತವಾದಂದಿನಿಂದ!

ಮೈ ಮನಸ್ಸು

ಸ್ವಲ್ಪ ಕಾಲ ಬೇಕು
ಕಾಯಬೇಕು

ತಾನಾಗಿಯೇ ಫಲ ಮಾಗಬೇಕು

ಒತ್ತಾಯದಲ್ಲಿ ಚೆಲುವಿಲ್ಲ
ಅರಳುವುದಿಲ್ಲ

ಅರಳಿಸುವ ಕೆಲಸ ನಮ್ಮದಲ್ಲ

ಅರಿಕೆ

ಪಾಳು ಬಿದ್ದ ಗುಡಿಯಲ್ಲಿ
ಪಾಚಿ ಕಟ್ಟಿದ ಶಿವ
ಲಿಂಗದಲ್ಲಿ ಕಾಲವೇ
ಕಲ್ಲಾಗಿದೆ

ತಾಂಡವ ನೃತ್ಯದಿಂದ ಗರ್ಭ
ಗೃಹ ಹುಡಿ ಹುಡಿಯಾಗಿದೆ
ಗುಡಿಯ ಮಾಡು
ಮುರಿದಿದೆ

ಗೋಡೆಯು ಮುಡಿದಿದೆ ಬಣ್ಣ
ಬಿಸಿಲು ಮಳೆ ನೆರಳು ಬೆಳಕು
ವಿಲಾಸದ ವಿಪರೀತ
ಗುರುತು

ನಾಗ ಸಂಪಿಗೆ ಹೂವಿನ ಪರಿಮಳ
ದಾರಿಗಡ್ಡವೆ ಇರಲಿ
ಅರಳಿರುವ ಪಾದೆಸಳು ಹೆಡೆಬಿಚ್ಚಿ
ನಾಗನ ಕಲ್ಲು ಕಟ್ಟೆ

ಪುರಾತನ ಗುಡಿಯ
ಕೆಡವದಂತೆ ಕಾಯಲಿ

 

 

 

 

 

 

ಗಂಧದ ಯೋಚನೆ

ಒಂದು ಶೀಶೆಯೊಳಗೆ ಅತ್ತರಿತ್ತು
ಒಂದು ಶೀರ್ಷಿಕೆಯೊಳಗೆ ಒಂದು ಕವಿತೆಯಿತ್ತು

ಅತ್ತರನ್ನು ಚೆಲ್ಲಿದೆ
ಕದ್ದು ಕವಿತೆಯನ್ನು ಕರೆದೆ

ಪೂರ್ವದಲ್ಲಿ ಆ ಕವಿತೆ
ಅತ್ತರಿನಲ್ಲಿ ಅತ್ತು ಹೊರಳಾಡಿತ್ತು

ಪುಟ ಪುಟ ದಾಟಿತು
ಎಷ್ಟೊಂದು ಅಪೂರ್ವ ಅರ್ಥ

ಹೀಗೆ ಕಾಲ ಚಕ್ರದಲ್ಲಿ
ಕವಿತೆ
ಎಷ್ಟು ಯೋಜನೆ ಮುಂದೆ ಬಂದರೂ

ಅದರ ಮನಸ್ಸಿನಲ್ಲಿ
ಹಿಂದಿನಿಂದ
ಗಂಧದ ಯೋಚನೆ ಅಂಟಿಕೊಂಡಿರುವುದು!

ನನ್ನ ಮುಂದೆ

ಖರ್ಜೂರದ ಹಣ್ಣಿನ ಬಣ್ಣದ
ಬಟ್ಟೆ ತೊಟ್ಟು ನಿಂತೆ
ಮರುಭೂಮಿಯಲ್ಲೊಂದು ಹಣ್ಣಿನ ತೋಟ
ನನ್ನ ಮುಂದೆ

ನೀರೊಡೆದ ನೆನಪು ಗುಳ್ಳೆ
ತೇಲಿ ಬರುವುದು ಇಲ್ಲೇ…

ಮಣ್ಣನ್ನೇ ಕೊಚ್ಚಿ ಕೊಂಡೊಯ್ಯುವ ನೆರೆ
ಕೆಂಪಿರುವುದು ಸುಳ್ಳೇ…

ಒಂದು ಹಸಿವೆಗೆ
ಯಾವುದೊಂದು ಮೆಚ್ಚದ
ಹಟವಿರುವುದೇಕೆ?

ಮರುಭೂಮಿಯ ಮೈದಾನದಲ್ಲಿ
ಮುಖ ಮುಚ್ಚಿರುವುದು
ಈ ನೀರಡಿಕೆ!

ಲಾಸ್ಯ ಲಯ

ನಿಮಿಷದ ಮುಳ್ಳಿನ ಜೊತೆಗೆ
ನೀನು ನಡೆಯುತ್ತಿ
ನನ್ನ ದೇಹದ ಮೇಲೆ
ಹೆಜ್ಜೆ ಒತ್ತಿ ಒತ್ತಿ

ನೋವಾಗುವುದಿಲ್ಲ ನನಗೆ
ನೋಡುತ್ತೇನೆ ನಿನ್ನ ನಡೆ
ನಾಟ್ಯದ ಹಾಗೆ ಚಂದ
ಲಾಸ್ಯ ಲಯ

ಅನುಭವವಾಗುತ್ತದೆ ಸ್ಪರ್ಶಕ್ಕೆ
ಸುರಿಯುವ ಸಮಯ!

ನೀನು ಮಾತ್ರ ಸುಮ್ಮನೆ
ಸರಿಯುವ ಛಾಯೆ!

 

(ಮುಖಪುಟ ಚಿತ್ರ: ರೂಪಶ್ರೀ)