ದೂರದ ಊರಲ್ಲಿ ಕೂತು ಇಂಡಿಯದ ಚುನಾವಣೆಯಲ್ಲಿ ಏನಾಯ್ತೂಂತ ಕಾತರಿಸ್ತೀವಿ. ಈ ಸಲ ರಿಸಲ್ಟ್ ಗೊತ್ತಾಗ್ತಾ ಇದ್ದಂಗೆ ಗೆಳೆಯರಿಗೆ ಫೋನ್ ಮಾಡಿದೆ. ಕೆಲವರು ಸಂತಸದಲ್ಲಿ ಬೀಗ್ತಿದ್ದರೆ ಇನ್ನು ಕೆಲವರು ಗೋಳುಕರೀತಿದ್ದರು. ಸರೀನೆ ಅನ್ಕೊಂಡೆ. ಬೀಗ್ತಿದ್ದವರಿಗೆ ಡೆಮಾಕ್ರಸಿ, ನಮ್ಮ ಜನ, ನಮ್ಮ ನಾಡು ಅಂದರೆ ಇಲ್ಲದ ಹೆಮ್ಮೆ ಸಂಭ್ರಮ. ಗೋಳಿನವರಿಗೆ ಇದ್ದಕ್ಕಿದ್ದ ಹಾಗೆ ಚುನಾವಣೇನೆ ಒಂದು ದೊಡ್ಡ ಮೋಸ, ಜನರಿಗೆ ಬುದ್ಧಿಯಿಲ್ಲ, ಗೆಲ್ಲಬಾರದವರು ಓಟು ಕೊಂಡ್ಕೊಂಡು ಗೆದ್ದಿದ್ದಾರೆ ಅಂತ ಸಂಕಟ. ಇವೆಲ್ಲಾ ಹೊಸದಾಗಿ ಹುಟ್ಟಿಕೊಂಡ ವೈರಿಗಳಂತೆ ಕಂಗೊಳಿಸುವ ಅವರ ಮಾತಿನಲ್ಲಿ ಚಾಕುವಿನಂತ ಹರಿತ ಇರುತ್ತದೆ.
ಐದು ವರ್ಷದ ಹಿಂದಿನ ಮಾತು. ಆಗಿನ ಚುನಾವಣೆ ಸ್ವಲ್ಪ ಮುಂಚೆ ಬೆಂಗಳೂರಿನಲ್ಲಿದ್ದೆ. ಬೆಂಗಳೂರಿನ ಗೆಳೆಯರೆಲ್ಲಾ ಈ ಸಲ ಎನ್‌ಡಿಯೇನೆ ಖಂಡಿತವಾಗಿ ಗೆಲ್ಲತ್ತೆ. ಪೇಪರು, ಟೀವಿ ರೇಡಿಯೋನಲ್ಲಿ ಹೇಳೋದು ಸ್ವಲ್ಪ ಕೇಳು. ತಲೆಯೆಲ್ಲಾ ಹರಟ ಬೇಡ ಎಂದು ಪ್ರೀತಿ ಮತ್ತು ಅಸಹನೆಯಿಂದ ಗದರಿದ್ದರು. ಸಾವಿರಾರು ರೈತರ ಆತ್ಮಹತ್ಯೆ ನಡುವೆ ‘ಇಂಡಿಯಾ ಶೈನಿಂಗ್’ ಅನ್ನೋದು ಸ್ವಲ್ಪ ಅತಿಯಾಯಿತಲ್ವ ಅಂತ ಕೇಳಿದರೆ, ಮುಗ್ಧತೆ ಕಳಕೊಂಡ ನಿನ್ನಂತಹರಿಂದ ಈ ದೇಶ ಉದ್ಧಾರ ಆಗಲ್ಲ ಅಂತ ಛೀಮಾರಿ ಹಾಕಿ ಬೀಳ್ಕೊಟ್ಟಿದ್ದರು. ನಾನು ಭೇಟಿಯಾದ ಕೆಲವು ಬಡ ಹಳ್ಳಿಗರು ದಿವ್ಯ ಮೌನದಲ್ಲಿ ಯಾರಿಗ್ಗೊತ್ತು ಬಿಡಿ ಎಂದು ಏನೂ ಹೇಳದೆ ಕಿರುನಗೆ ನಕ್ಕಿದ್ದರು. ಆಗ ಅದರ ಅರ್ಥ ನನಗೆ ಆಗಿರಲಿಲ್ಲ.
ಗೆಳೆಯರು ಮಾತು ನಿಜ ಇರಬಹುದು ಅನ್ಕೊಂಡೂ ಕೂಡ ಆಳದೊಲ್ಲೊಂದು ಚೂರು ಅನುಮಾನ ಇಟ್ಕೊಂಡು ವಾಪಸ್ಸು ಬಂದಿದ್ದೆ. ಸಿಡ್ನಿಗೆ ಬಂದು ಕೆಲವು ತಿಂಗಳಿಗೆ ಆ ಚುನಾವಣೆ ರಿಸಲ್ಟ್ ಬಂದಾಗ ಇಲ್ಲಿಯ ಕೆಲವರು ದಿಗ್ಭ್ರಾಂತರಾಗಿದ್ದರು. ದಿನ ಬೆಳಗಾದರೆ ಇಂಟರ್ನೆಟ್ಟಿನ ಪತ್ರಿಕೆಯ ಸೈಟುಗಳಲ್ಲಿ ಮೌಸಿನ ಮೂತಿ ಕುಕ್ಕಿ ಕುಕ್ಕಿ – ಓದಿ ಅರ್ಥ ಆದವರಂತೆ ತಲೆ ತೂಗುತಿದ್ದರು. ಇವರಿಗೆ ಆ ಚುನಾವಣೆ ಮುಂಚೇನೆ ರಿಸಲ್ಟ್ ಗೊತ್ತಿದ್ದಂತಿತ್ತು. ಆದರೆ ಅವರಿಗೆ ಗೊತ್ತಿದ್ದ ವರ್ಚುಯಲ್ ಲೋಕದ ಫಲಿತಾಂಶ ರಿಯಲ್ ಲೋಕದಲ್ಲಿ ಅವತರಿಸದೇ ಹೋದಾಗ ಸಿಟ್ಟು ಅಸಹನೆ ಸಹಜವಾಗಿ ಹೆಡೆಯೆತ್ತಿತ್ತು. ಇದ್ದಕ್ಕಿದ್ದ ಹಾಗೆ ರಿಯಲ್ ಲೋಕದ ಹುಳುಕುಗಳೆಲ್ಲಾ ಕಣ್ಮುಂದೆ ಹೊಳೆಯಲಾರಂಭಿಸಿದ್ದವು.
ನಮ್ಮ ಜನರಿಗೆ ಡೆಮಾಕ್ರಸಿ ಅರ್ಥಾನೇ ಗೊತ್ತಿಲ್ಲ ಬಿಡಿ. ಹೋಗೋಗಿ ಮತ್ತೆ ಕಾಂಗ್ರೆಸ್ಸಿಗೆ ಸರ್ಕಾರ ಸಿಕ್ಕೋ ಹಾಗೆ ಮಾಡಿದ್ದಾರಲ್ಲ ಅಂತ ಕೆಲವರು ಆಗ ಚಡಪಡಿಸುತಾ ಇದ್ದರು. ಇನ್ನು ಕೆಲವರು, ಕತ್ತಿ ಅಲಗಿನ ಮೇಲೆ ಸರ್ಕಾರಾನ ನಿಲ್ಲಸಿದರೆ ಹೇಗೆ ಆಗತ್ತೆ? ಅಧಿಕಾರಕ್ಕಾಗಿ ಒಲ್ಲದವರೂ ಒಗ್ಗಿದಂಗೆ ಆಡೋ ನಾಟಕ ಎಷ್ಟುದಿನ ನಡಿಯತ್ತೆ? ನೋಡಿ ಮತ್ತೆ ಮಧ್ಯಾವಧಿ ಚುನಾವಣೆ ಗ್ಯಾರಂಟಿ. ಇದಕ್ಕೆಲ್ಲಾ ಮೂಲ ಕಾರಣ ಏನು ಗೊತ್ತ ಎಂದು ಎಂತಹ ಅನಲಿಸ್ಟಗಳನ್ನೂ ನಾಚಿಸುವಂತೆ ತಿವಿಯುವ ಕಣ್ಣಿಂದ ನೋಡುತ್ತಿದ್ದರು. ಗೊತ್ತಿಲ್ಲ ಹೇಳಿ ಅಂದ ತಕ್ಷಣ ನೀನೆಂತಹ ಬೆಪ್ಪುತಕ್ಕಡಿ! ಕೇಳು, ಕಳ್ಳರು ಕೊಲೆಗಾರರು ಎಲೆಕ್ಷನ್‌ಗೆ ನಿಂತುಕೋತಾರೆ, ಎಜುಕೇಟಡ್ ಓಟು ಮಾಡಲ್ಲ ಅದಕ್ಕೆ ನಮ್ಮ ದೇಶಕ್ಕೆ ಈ ಗತಿ ಎಂದು ಫೈಸಲ್ ಮಾಡಿ ಕೈಕೊಡವಿ ಬಿಟ್ಟಿದ್ದರು. ಇಲ್ಲಿಯ ಇಂಡಿಯದವರ ರೇಡಿಯೋ ಪತ್ರಿಕೆಗಳಲ್ಲಿ ಬೀಜೇಪಿಗೆ ಸರ್ಕಾರ ಸಿಗದೇ ಇರೋದು ನಮ್ಮ ದೇಶದ ಅಧೋಗತಿಯ ಲಕ್ಷಣ ಹಾಗು ಇದಕ್ಕಿಂತ ಇನ್ನು ಕೆಳಗಿಳಿಯೋದು ಸಾಧ್ಯವಿಲ್ಲ. ಡೆವಲೆಪ್‌ಮೆಂಟಿಗೆ ಇನ್ನು ತಿಲಾಂಜಲಿ ಇಟ್ಟಹಾಗೆ. ಸುಮ್ಮನೆ ನಾವಿಲ್ಲಿ ಹಲುಬೋದಷ್ಟೆ. ಅಲ್ಲಿ ಯಾರಿಗೂ ಉದ್ಧಾರ ಆಗೋದು ಬೇಕಾಗಿಲ್ಲ ಎಂದು ಪರಿಪರಿಯಾಗಿ ಹಲುಬುತ್ತಲೇ ಇದ್ದರು.
ಈ ಸಲದ ಚುನಾವಣೆಗೆ ಮುಂಚೇನೇ ಬೀಜೇಪಿ ಸಕತ್ತಾಗಿ ಗೆಲ್ಲತ್ತೆ. ಮೊದಲು ಅಧ್ವಾನಿ, ಅವನಿಗೆ ಸುಸ್ತಾದ ಮೇಲೆ ಮೋದೀನೇ ನಮ್ಮ ಪ್ರೈಮಿನಿಸ್ಟರು – ಅನುಮಾನ ಬೇಡ ಅಂದು ಗುಡುಗುತ್ತಿದ್ದರು. ಕೂಡಲೆ ಏನೋ ಹೊಳೆದವರಂತೆ, ತುಸು ದನಿ ತಗ್ಗಿಸಿ – ಆದರೆ ಮತ್ತೆ ರಾಮಜನ್ಮಭೂಮಿ ಅಂತ ಹಳೇರಾಗ ಶುರುಮಾಡಿದಾರೆ ತಲೆ ಕೆಟ್ಟವರು ಎಂದು ತಮ್ಮ ತಲೆಯನ್ನೇ ಚಚ್ಚಿಕೊಳ್ಳುತ್ತಿದ್ದರು. ಇವರೆಲ್ಲಾ ಬೀಜೇಪಿ ಸರ್ಕಾರ ಇಲ್ಲದ ಇಂಡಿಯ ಅದೆಂಥಾ ಇಂಡಿಯಾ ಅಂತ ಬಲವಾಗಿ ನಂಬಿದವರು. ಹೇಗಾದರೂ ಅಯ್ಯೋಧೆ ವಿಷಯ, ಗೋದ್ರಾ ವಿಷಯ ಜನ ಮರೆತರೆ ಸಾಕು ಅಂತ ಸಹಸ್ರಾರ್ಚನೆ ಮಾಡಿಸೋರು. ದೆಹಲಿಯ ಸಿಖ್ ನರಮೇಧವನ್ನು ಸದಾ ಕೈಗೆಟಕುವಂತೆ ತಮ್ಮ ಬತ್ತಳಿಕೆಯಲ್ಲಿಟ್ಟುಕೊಂಡು ತಪ್ಪದೇ ಹೊರಗೆಳೆಯೋರು.
ಹೋದ ಸಲದ ನಿರಾಶೆ ಈ ಬಾರಿ ಆಳದ ಮತ್ತೊಂದು ಮಟ್ಟಕ್ಕೆ ಇಳಿದ ಹಾಗೆ ಇವರಲ್ಲಿ ಹಲವರಿಗೆ ಅನಿಸಿದೆ. ಇನ್ನು ಬಿಡಿ ಟೆರರಿಸ್ಟ್‌ಗಳಿಗೆ ಆರಾಮಾಗಿ ಹೋಯ್ತು. ದಿನ ಬೆಳಗಾದರೆ ಬಾಂಬ್ ಸಿಡಿಯತ್ತೆ ಎಂದು ಹೆದರಿಸಿಕೊಂಡು ಓಡಾಡುತ್ತಿದ್ದಾರೆ. ವಯ್ಯಕ್ತಿಕವಾಗಿ ಸೋಲನುಭವಿಸಿ ಅದನ್ನು ಅರಗಿಸಿಕೊಳ್ಳಲು ಹೆಣಗುವವರಂತೆ – ಗೆದ್ದಿರುವುದು ಕಾಂಗ್ರೆಸ್ಸಲ್ಲ ಮನಮೋಹನ್ ಸಿಂಗ್. ಯಾಕೆಂದರೆ, ಆತ ಒಳ್ಳೆ ಮನುಷ್ಯ, ತುಂಬಾ ಚತುರ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಹಾಗೆ ಹೇಳುತ್ತಿರುವವರೇ ಚುನಾವಣೆಗೆ ಮುಂಚೆ ಅವನು ತುಂಬಾ ವೀಕು, ಸೋನಿಯಾ ಗಾಂಧಿ ಕೈಗೊಂಬೆ ಅಷ್ಟೆ ಅಂತ ಹೀಗಳೆದಿದ್ದು ನೆನಪಾಯ್ತು. ಸಾಮಾಧಾನ ಆಗೋದಾದರೆ ಹೇಳಿಕೊಳ್ಳಲಿ ಅಂತ ಅವರ ಮುಂಚಿನ ಮಾತು ನೆನಪಿಸದೆ ಸುಮ್ಮನಾದೆ.
ಇಂಡಿಯದ ಸಾವಿರಾರು ರಾಜಕೀಯ ಒಳಸುಳಿಗಳು, ಜಾತಿ-ವಿಜಾತಿಯ ಕರಾಳ ಹೊರಳಾಟಗಳು ದೂರದಲ್ಲಿ ಕೂತಾಗ ಮಸುಕಾಗುತ್ತದೆ. ವರ್ಷ ಉರುಳಿದಂತೆ ಎಲ್ಲಾ ನುಣ್ಣಗೆ ಕಾಣುತ್ತದೆ. ಒಳ್ಳೆಯವೂ ಕೆಟ್ಟವೂ ಎಲ್ಲಾ. ಯಾಕೆ ಎಲ್ಲಾರೂ ಚುನಾವಣೆ ದಿನ ಬೆಳಗೆದ್ದು ಹೋಗಿ ಓಟು ಹಾಕಲ್ಲ ಅಂತ ಅರ್ಥವಾಗದ ಮುಜುಗರ ಆವರಿಸುತ್ತದೆ. ಓಟು ಹಾಕಬೇಕೆಂಬ ನಿರ್ಧಾರದ ಹಿಂದೆ ಇರಬೇಕಾದ ಹಲವಾರು ಒತ್ತಡಗಳು ಮರೆತು ಹೋಗುತ್ತದೆ. “ಕಳ್ಳರು ಕೊಲೆಗಾರರು ತುಂಬಿಕೊಂಡ” ರಾಜಕೀಯದಲ್ಲಿ ಪಾಲ್ಗೊಳ್ಳದೆ ವಿರಾಗಿಗಳಂತೆ ಆಡುವ ಎಜುಕೇಟೆಡ್ ಮಿಡ್ಲ್ ಕ್ಲಾಸಿನ ಬಗ್ಗೆ ಅಪಾರ ಸಹಾನುಭೂತಿ ಇವರಿಗಿದೆ. ಕೆಲವು ಕಡೆ ಎಜುಕೇಟಡ್ ಜನರೇ ಚುನಾವಣೆಗೆ ನಿಂತಿದ್ದರೂ ಓಟು ಹಾಕಿಲ್ಲವಲ್ಲ ಅಂದರೆ ಒಬ್ಬರಿಬ್ಬರು ನಿಂತರೆ ಏನಾಗತ್ತೆ ಅವರೂ ಭ್ರಷ್ಟರಾಗಿಬಿಡ್ತಾರಷ್ಟೆ ಎಂದು ಗೊಣಗುತ್ತಾರೆ.
ಈವತ್ತಿನ ನಮ್ಮ ಡೆಮಾಕ್ರಸಿನಲ್ಲಿ ಈ “ಎಜುಕೇಟಡ್ ಮಿಡ್ಲ್ ಕ್ಲಾಸ್”ಗೆ ಹಲವು ಸಾಧನ ಸವಲತ್ತುಗಳಿವೆ. ಯಾರೇ ಅಧಿಕಾರಕ್ಕೆ ಬಂದರೂ ಅವು ತುಸು ಅತ್ತಿತ್ತ ಆಗಬಹುದಷ್ಟೆ. ಆದರೆ ಅವರು ಅತಂತ್ರರಂತೂ ಆಗುವುದಿಲ್ಲ. ನಿಜವಾಗಿಯೂ ಅತಂತ್ರರಾದವರು ತಪ್ಪದೇ ಓಟು ಮಾಡುತ್ತಾರೆ. ತಾವು ಕಳಕೊಂಡ ಅಥವಾ ದಕ್ಕಿಲ್ಲದ ಸಾಧನ ಸವಲತ್ತುಗಳನ್ನು ಕೇಳಲು ಅವರಿಗೆ ಇರುವುದು ಈ ಓಟೊಂದೇ. ಅದೇ ದಾರಿ, ಅದೇ ತಂತ್ರ. ಹಣ-ಹೆಂಡ ಎಂದು ಬಯ್ಯುತ್ತಲೇ ಮಿಡ್ಲ್ ಕ್ಲಾಸಿನವರು ಹೇಳುವ “ದೇಶ ಕೆಟ್ಟಿದೆ” ಅನ್ನುವುದು ನಿಜವಾದರೂ ಅದು ಗೊಣಗಾಟದಲ್ಲೇ ಮುಗಿಯುತ್ತದೆ, ಅವರನ್ನು ಕ್ರಿಯೆಗೆ ದೂಡುವ ಆಳದಿಂದ ಅದು ಬಂದಿದೆಯೆ ಎಂದು ಕೇಳಿದರೆ ನನಗೆ ತಲೆಕೆಟ್ಟಿದೆ ಎನ್ನುವಂತೆ ನೋಡುತ್ತಾರೆ. ಯಾವ ಕ್ಷೇತ್ರ ಯಾವ ಜಾತಿಯವರದು, ಯಾವ ರಾಜಕಾರಣಿಯದು ಯಾವ ಜಾತಿ, ಯಾವ ರಾಜಕಾರಣಿ ಯಾವಯಾವ ಪಕ್ಷದಲ್ಲಿದ್ದವನು, ಯಾವ ಕಾರಣಕ್ಕೆ ಪಕ್ಷಾಂತರ ಮಾಡಿದ್ದಾನೆ ಇಂತಹ ಸಾವಿರಾರು ಸಂಗತಿಗಳು ಗೊತ್ತಿಲ್ಲದೆ ರಾಜಕೀಯ ಮಾತಾಡಕೂಡದು ಎಂದು ಅಪ್ಪಣೆಕೊಟ್ಟು ಬಾಯಿ ಮುಚ್ಚಿಸುತ್ತಾರೆ. ಇವರ ಮಾತಿಗೂ ನನ್ನ ಮಾತಿಗೂ ಎಷ್ಟು ಹುಡುಕಿದರೂ ಕೊಂಡಿಯೇ ಸಿಗುತ್ತಿಲ್ಲವಲ್ಲ ಎಂದು ಅಚ್ಚರಿಯಾಗಿ ಸುಮ್ಮನಾಗುತ್ತೇನೆ.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.