ಒಮ್ಮೆಯಾದ್ರೂ
ಬೇಷರಮ್ ಆಗಿ ನೋಡಿ…

ಅದೆಂತ ಸುಖ
ಬೇಷರಮ್ ಆಗುವುದರಲ್ಲಿ…!
ಜೊತೆ ಸಾಗುವಾಗ ಕೈ
ಬೆರಳು ಹಿಡಿದು ಒತ್ತುವುದರಲ್ಲಿ….!
ಕಿರು ನಗೆಯ ಚೆಲ್ಲಿ….!

ಮುಂಜಾನೆ ಅವಳು
ಕೊಸರುವಾಗಲೇ ನಿದ್ದೆಗಣ್ಣಲ್ಲಿ
ಮುತ್ತೊಂದು ಕೊಡುವಲ್ಲಿ…!
ಅವಳು ತುಟಿ ಸ್ಪರ್ಶಿಸಿ ಬಿಟ್ಟ
ಚಹಾ ಮತ್ತೆ ಮತ್ತೆ ಕುಡಿಯುವಲ್ಲಿ…!

ಮನೆ ಮಂದಿಯ ಕಣ್ಣ್ ತಪ್ಪಿಸಿ
ಕಣ್ಣೊಡೆದು…
ಅಮಾಯಕನಂತೆ ನಕ್ಕು
ಮೀಸೆ ಮೇಲೆ ಬೆರಳಾಡಿಸುವಲ್ಲಿ….!

ಒಮ್ಮೆಯಾದ್ರೂ ಬೇಷರಮ್
ಆಗಿ ನೋಡಿ…

ಅದೆಂತ ಸುಖ
ಬೇಷರಮ್ ಆಗುವುದರಲ್ಲಿ…
ಅವಳ ಕೈಗಳಿಗೆ
ಮೆಹಂದಿ ಹಚ್ಚಿ…..
ಮಲಗಿರುವಾಗ ನಿದ್ದೆ
ಅಮಲಿಗೆ ಸದ್ದಿಲ್ಲದೇ ಕೆನ್ನೆ ಮೈ
ಕೈಗೆ ಮೆತ್ತಿಸಿಕೊಳ್ಳುವಲ್ಲಿ….
ಮುಂಜಾನೆ ಅವಳು
ಕೇಳೋ ಸಾರೀ ಗೆ…
ಮತ್ತದೇ ಬೇಷರಮ್
ಕಿರು ನಗೆಯ ಚೆಲ್ಲಿ…
ಮುತ್ತಿನ ಮಳೆಗರೆಯುವಲ್ಲಿ….!!

ಅದೆಂತ ಸುಖ ಬೇಷರಮ್
ಆಗುವುದರಲ್ಲಿ…!!

ಸಭೆ ಸಮಾರಂಭಕೆ
ಹೊರಡುವಾಗ ಗಡಿಬಿಡಿಯಲ್ಲಿ
ಅವಳು ತೊಟ್ಟ ಸೀರೆಗೆ ನೆರಿಗೆ
ಹಿಡಿಯುವಲ್ಲಿ…!!
ಊಟದ ಕೊನೆಗೊಮ್ಮೆ
ಸೀರೆಯ ಸೆರಗನ್ನೇ ಕೈ
ವಸ್ತ್ರವಾಗಿಸುವಲ್ಲಿ….!!

ಮನೆಯಿಂದ ಹೊರಡುವಾಗ
ಅಕ್ಕಾ ಪಕ್ಕದ ಮನೆಯವರು
ನೋಡುತ್ತಿದ್ದರೂ ಆಗೊಮ್ಮೆ
ಈಗೊಮ್ಮೆ ಹೂವು ಮುತ್ತು
ಗಾಳಿಯಲಿ ಚೆಲ್ಲಿ….!
ಹೊರಡುವುದರಲ್ಲಿ..!

ಅದೆಂತ ಸುಖ ಹೀಗೆ
ಬೇಷರಮ್ ಆಗುವುದರಲ್ಲಿ…!!

ಚಲಿಸುವ ಬೈಕಲ್ಲಿ
ಕನ್ನಡಿಯ ನೋಡುತ್ತಾ….
ಮತ್ತಷ್ಟು ವೇಗ ಹೆಚ್ಚಿಸಿ
ನಿಧಾನ ಎನ್ನುವಾಗ
ಅವಳ ಮುಖ ನೋಡುವಲ್ಲಿ….!
ದುತ್ತೆಂದೂ ಆಚಾನಕ್
ಬ್ರೇಕ್ ಹಾಕಿವಲ್ಲಿ..!!

ಬೇಷರಮ್
ಆಗುವುದೆಂದರೆ
ಕನಸ ಬಳ್ಳಿ ನೂರೆಂಟು
ಹೂವ ಚೆಲ್ಲಿ…
ನೆಲ ಮುಗಿಲ
ಪರಿಮಳ ಹಬ್ಬಿಸಿ
ಬಿಡುವಂತೆ ಮನದಲ್ಲಿ….!!

ಬೇಷರಮ್ ಆಗುವುದು
ಸುಲಭವಲ್ಲ ಸ್ವಾಮಿ…!!
ಒಂದಷ್ಟು ತುಂಟತನ
ಮತ್ತಷ್ಟು ಭಂಡತನ
ಸಾಲದಕ್ಕೆ….
ವಯಸ್ಸು ಎಂಬತ್ತಾದರೂ
ಒಂದಿಷ್ಟು ಯೌವನ
ಇರಬೇಕು ಮೈ ಮನದಲ್ಲಿ…!!

ದೇವರಾಜ್‌ ಹುಣಸಿಕಟ್ಟಿ ರಾಣೇಬೆನ್ನೂರಿನವರು
ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ಇವರ ಪ್ರಕಟಿತ ಕೃತಿ
ಕವಿತೆಯ ಓದು, ಬರೆಯುವುದು ಇವರ ಹವ್ಯಾಸ