ಬೆಂಕಿಯ ಹಂಚಿಕೊಂಡು ಉಂಡವರ ನಡುವೆ…!
ಪ್ರೀತಿಯ ವ್ಯಾಖ್ಯಾನ
ಬದಲಿಸಿ ಬಿಡಿ…
ಪ್ರೀತಿಯಲಿ ವಿಷ ಉಣ್ಣುವುದಲ್ಲ
ವಿಷ ವಿಕ್ಕುವುದೆಂದು….
ದೇಹಕೆ ಸುಕ್ಕಡರಿ ಮುಪ್ಪಡಿರಿ
ಖಡಕ್ ಖಂಡ ತುಂಡು ಮಾಂಸವು
ಜೋತು ಬಾವಲಿಯಾಗಿರಲು
ತುಟಿಗೆ ಮುತ್ತಿಟ್ಟು ಅಪ್ಪುವುದಲ್ಲ…..
ತುಟಿ ಕತ್ತರಿಸುವುದೆಂದು…
ಪ್ರೀತಿಯ ವ್ಯಾಖ್ಯಾನ
ಬದಲಿಸಿ ಬಿಡಿ…
ಕಾಡಿರುವುದು ಕೇವಲ ಹುಲಿ, ಚಿರತೆ
ಹಾವುಗಳಿಗಷ್ಟೇ…….
ಹಕ್ಕಿ ಜಿಂಕಿ ಮೊಲ ಇವೆಲ್ಲವ
ಹೊರಹಾಕಿ……
ಹುಲ್ಲು ಮಾಂಸ ಸೊಲ್ಲೆತ್ತದೆ
ಜೊತೆಗಿರುವ ಜಮಾನ ಈಗೀಗ ಕೊಚ್ಚಿ ಹೋಗಿದೆಯೆಂದು ….
ಹೆಣವ ಕುಕ್ಕಿ ತಿನ್ನುವ ಹದ್ದು
ಹಣ್ಣು ತಿನ್ನುವ ಗಿಳಿ ಕೂಡಿ ಜೊತೆಗಿರುವುದಲ್ಲವೆಂದು
ಪ್ರೀತಿಯ ವ್ಯಾಖ್ಯಾನ
ಬದಲಿಸಿ ಬಿಡಿ…..
ಪಸೆಯಾರದ ಕೊಳದಲ್ಲಿ
ಬರೀ ಮೊಸಳೆ ಹಾವು ಏಡಿಗಳಿರಲೂ ಮಾತ್ರ…
ನೈದಿಲೆ, ಮೀನು…
ದಂಡಯ ಬಳ್ಳಿಗೆ ಜೋತು ಬಿದ್ದ ಜೇನು..
ಈಗೀಗ ಇರಲಾಗುವುದಿಲ್ಲ ಜೊತೆಗೆಂದು….
ಒಬ್ಬರ ಒಲೆಯ ಕಿಚ್ಚಲಿ ಇನ್ನೊಬ್ಬರ ಒಲೆ ಕೂಡ ಉರಿಯುತ್ತಿತ್ತಂದು…!
ನಂಬಲಾಗುವುದಿಲ್ಲ ನೋಡು ಗೆಳೆಯ
ಬೆಂಕಿ ಕೂಡ ಹಂಚಿಕೊಂಡು ಉಣ್ಣುವ ವಸ್ತುವಾಗಿತ್ತೆಂದು….!!
ದೇವರಾಜ್ ಹುಣಸಿಕಟ್ಟಿ ರಾಣೇಬೆನ್ನೂರಿನವರು
ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ಇವರ ಪ್ರಕಟಿತ ಕೃತಿ
ಕವಿತೆಯ ಓದು, ಬರೆಯುವುದು ಇವರ ಹವ್ಯಾಸ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ