ಪಾದಗಳ ನಂಬಿರಯ್ಯ…..
ಪಾದಗಳ ನಂಬಿರಯ್ಯ…
ರೆಕ್ಕೆ ಇದ್ದ ಹಕ್ಕಿಗಳು
ಹೀಗೆ ಹೇಳುತ್ತವೆ…
ಎಷ್ಟು ಎತ್ತರ ಹಾರಿ
ಅದೆಷ್ಟು ಸಮುದ್ರ ಲಂಘಿಸಿ..
ತಳ ಊರುವಾಗ
ಪಾದಗಳದ್ದೇ ಜರೂರು…
ಪಾದಗಳ ನಂಬಿರಯ್ಯ…
ಮೂರೇ ಮೂರು
ಪಾದದಳತೆಯಲಿ..
ಪ್ರಾಣ ಸಮೇತ ಕೈ ಚೆಲ್ಲಿದ
ಬಲಿ ಚಕ್ರವರ್ತಿಯನೊಮ್ಮೆ ಕೇಳಿ ನೋಡಿ..
ಯಕಃಶ್ಚಿತ ಪಾದಗಳೆಂದವನಿಗೆ….
ಪಾಪ ಎನ್ನದಿದ್ದರೆ ಕೇಳಿ…
ಪಾದಗಳ ನಂಬಿರಯ್ಯ…
ಪಾದಗಳು ಬಣ್ಣ ಬದಲಿಸಲಾರವು..
ಕಣ್ಣು ಕಳೆದುಕೊಳ್ಳಲಾರವು….
ರಾಮನ ಪಾದ ಸ್ಪರ್ಶದಿಂದಲೇ
ಜೀವ ಪಡೆದ ಅಹಲ್ಯೆ ಕೂಡ ನಕ್ಕೆ ಹೇಳುತ್ತಾಳೆ…
ಪಾದಗಳ ನಂಬಿರಯ್ಯ
ಎನ್ನುವಾಗಲೇ ನೀವೇ
ಮುತ್ತಿಟ್ಟ ಪಾದಗಳು ಬೆಳೆದು
ಎದೆಗೆ ಒದೆಯುವಾಗ
ಪಾದಗಳ ವಿಚಿತ್ರವನು
ನಂಬಿರಯ್ಯ….
ದೇವರಾಜ್ ಹುಣಸಿಕಟ್ಟಿ ರಾಣೇಬೆನ್ನೂರಿನವರು
ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ಇವರ ಪ್ರಕಟಿತ ಕೃತಿ
ಕವಿತೆಯ ಓದು, ಬರೆಯುವುದು ಇವರ ಹವ್ಯಾಸ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ